Friday, 10 April 2020

ಫಿಡೆಲ್ ಕ್ಯಾಸ್ಟ್ರೊ- ನಟರಾಜ ಹುಳಿಯಾರ್

ಮೊನ್ನೆ ಫಿಡೆಲ್ ಕ್ಯಾಸ್ಟ್ರೊನ ಚಿತಾಭಸ್ಮವನ್ನು ಅವನ ನೆಚ್ಚಿನ ಕ್ರಾಂತಿಕಾರಿ ಚಿಂತಕ ಜೋಸ್ ಮಾರ್ತಿಯ ಸಮಾಧಿಯ ಪಕ್ಕದಲ್ಲಿಟ್ಟ ದಿನ, ಹಿಂದೊಮ್ಮೆ ಮಾರ್ಕ್ವೆಜ್ ಜೊತೆ ಮಾತಾಡುತ್ತಾ, ‘ಮುಂದಿನ ಜನ್ಮದಲ್ಲಿ ಲೇಖಕನಾಗಿ ಹುಟ್ಟಬೇಕೆಂಬುದು ನನ್ನ ಆಸೆ’ ಎಂದು ಫಿಡೆಲ್ ಹೇಳಿದ್ದು ನೆನಪಾಯಿತು. 

ಜಗತ್ತಿನ ಶ್ರೇಷ್ಠ ಲೇಖಕರಲ್ಲೊಬ್ಬನಾದ ಕೊಲಂಬಿಯಾದ ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್ ತನ್ನ ಗೆಳೆಯ, ಕ್ರಾಂತಿಕಾರಿ ನಾಯಕ ಫಿಡೆಲ್ ಕ್ಯಾಸ್ಟ್ರೊ ಬಗ್ಗೆ ಸದಾ ಹೃದಯ ತುಂಬಿ ಮಾತಾಡುತ್ತಿದ್ದ. ‘ಫಿಡೆಲ್ ಬಗ್ಗೆ ಮಾತಾಡುವಾಗ ನಾನು ತೀರ್ಮಾನ ಕೊಡುವ ಸ್ಥಾನದಲ್ಲಿ ನಿಂತು ಮಾತಾಡಲಾರೆ; ಭಾವನೆಗಳ ಲೋಕದಿಂದ ಮಾತ್ರ ಮಾತಾಡಬಲ್ಲೆ’ ಎಂದ ಮಾರ್ಕ್ವೆಜ್,  ‘ಈ ಜಗತ್ತಿನಲ್ಲಿ ನಾನು ಅತ್ಯಂತ ಪ್ರೀತಿಸುವ ವ್ಯಕ್ತಿ ಫಿಡೆಲ್’ ಎಂದಿದ್ದ. ಕ್ಯಾಸ್ಟ್ರೊಗಿಂತ ಎರಡು ವರ್ಷ ಮೊದಲೇ ತೀರಿಕೊಂಡ ಮಾರ್ಕ್ವೆಜ್ ನಿಲುವು ಕೊನೆಯವರೆಗೂ ಹಾಗೇ ಇದ್ದಂತಿತ್ತು.

ಒಮ್ಮೆ ಮಾರ್ಕ್ವೆಜ್ ಬರಹಗಾರರ ಕಮ್ಮಟದಲ್ಲಿ ಮಾತಾಡುತ್ತಿರುವಾಗ, ಲೇಖಕನೊಬ್ಬ ‘ಕ್ಯಾಸ್ಟ್ರೊ ಒಬ್ಬ ಸರ್ವಾಧಿಕಾರಿ’ ಎಂದಾಗ, ಮಾರ್ಕ್ವೆಜ್ ಹೇಳಿದ: ‘ಚುನಾವಣೆ ನಡೆಸುವುದೊಂದೇ ಪ್ರಜಾಪ್ರಭುತ್ವವಾದಿಯಾಗಿರುವ ಮಾರ್ಗವಲ್ಲ.’ ಆದರೆ ಗೆಳೆಯ ಮಾಡಿದ್ದನ್ನೆಲ್ಲ ಮಾರ್ಕ್ವೆಜ್ ಒಪ್ಪುತ್ತಿದ್ದನೆಂದಲ್ಲ. ಜೆಕೊಸ್ಲೊವಾಕಿಯದಲ್ಲಿ ಸೋವಿಯತ್ ಯೂನಿಯನ್ ಹಸ್ತಕ್ಷೇಪ ಮಾಡಿದ್ದನ್ನು ಕ್ಯಾಸ್ಟ್ರೊ ಬೆಂಬಲಿಸಿದರೆ, ಮಾರ್ಕ್ವೆಜ್ ಅದನ್ನು ಪ್ರತಿಭಟಿಸಿದ್ದ.

ಅಧಿಕಾರ ‘ಮಾನವನ ಅತ್ಯುನ್ನತ ಮಹತ್ವಾಕಾಂಕ್ಷೆ ಹಾಗೂ ಇಚ್ಛಾಶಕ್ತಿಯ ರೂಪ’ ಎಂದು ಅರಿತಿದ್ದ ಮಾರ್ಕ್ವೆಜ್, ಪ್ರಖ್ಯಾತ ಲೇಖಕನಾದ ಮೇಲೆ ಹಲವು ದೇಶಗಳ ರಾಜಕೀಯ ನಾಯಕರನ್ನು ಹತ್ತಿರದಿಂದ ಬಲ್ಲವನಾಗಿದ್ದ. ಆದರೆ ಫಿಡೆಲ್ ಜೊತೆಗಿನ ಅವನ ಸ್ನೇಹ ಬೆಳೆದದ್ದು ಸಾಹಿತ್ಯದ ಮೂಲಕ. ಒಂದು ರಾತ್ರಿ ಮಾರ್ಕ್ವೆಜ್ ಹಾಗೂ ಫಿಡೆಲ್ ಮಾತಾಡುತ್ತಾ ಕೂತಿದ್ದರು.

ಇನ್ನೇನು ಬೆಳಗಿನ ಜಾವ ಆಗುತ್ತಿರುವಂತೆ, ಫಿಡೆಲ್ ‘ಇವತ್ತು ಓದಬೇಕಾಗಿರುವ ಪುಸ್ತಕಗಳು ನನಗಾಗಿ ಕಾಯುತ್ತಿವೆ’ ಎನ್ನುತ್ತಾ ಮೇಲೆದ್ದು, ‘ಇವನ್ನೆಲ್ಲ ಓದಬೇಕಾದದ್ದು ಅನಿವಾರ್ಯ; ಆದರೆ ಬೋರಿಂಗ್ ಹಾಗೂ ಶ್ರಮದಾಯಕ ಕೂಡ’ ಎಂದ. ಅದಕ್ಕೆ ಮಾರ್ಕ್ವೆಜ್ ‘ನಡುನಡುವೆ ಒಳ್ಳೆಯ, ಆದರೆ ಕೊಂಚ ಲೈಟ್ ಆದ ಪುಸ್ತಕಗಳನ್ನು ಓದುವುದು ಆ ಭಾರವನ್ನು ಕಳೆಯುವ ಉಪಾಯ’ ಎಂದು ಪುಸ್ತಕಗಳ ಪಟ್ಟಿ ನೀಡಿದರೆ, ಫಿಡೆಲ್ ಅವನ್ನೆಲ್ಲ ಓದಿಬಿಟ್ಟಿದ್ದ; ಅಷ್ಟೇ ಅಲ್ಲ, ಅವುಗಳ ಬಗ್ಗೆ ತನ್ನ ಅಭಿಪ್ರಾಯಗಳನ್ನೂ ಹೇಳತೊಡಗಿದ!

‘ಫಿಡೆಲ್ ಎಂಥ ದೈತ್ಯ ಓದುಗನೆಂಬುದು ಅನೇಕರಿಗೆ ಗೊತ್ತಿರಲಿಕ್ಕಿಲ್ಲ’ ಎನ್ನುವ ಮಾರ್ಕ್ವೆಜ್, ಅವತ್ತು ಬೆಳಗಿನ ಜಾವ ಫಿಡೆಲ್‌ಗೆ ತನ್ನ ‘ದಿ ಟೇಲ್ ಆಫ್ ಎ ಶಿಪ್ ರೆಕ್ಡ್ ಸೈಲರ್’ ಪುಸ್ತಕ ಕೊಟ್ಟ. ಮಾರನೆಯ ದಿನ ಹನ್ನೆರಡು ಗಂಟೆಯ ಹೊತ್ತಿಗೆ ಸಿಕ್ಕ ಫಿಡೆಲ್, ಆ ಪುಸ್ತಕದಲ್ಲಿದ್ದ ತಪ್ಪುಗಳನ್ನು ತೋರಿಸಿಕೊಟ್ಟ! ಫಿಡೆಲ್‌ಗೆ ಸಾಹಿತ್ಯಲೋಕ ಪ್ರಿಯವಾಗಿದ್ದುದನ್ನು ಕಂಡ ಮಾರ್ಕ್ವೆಜ್ ಅವನನ್ನು ಭೇಟಿಯಾಗುವಾಗಲೆಲ್ಲ ಹಲಬಗೆಯ ಪುಸ್ತಕಗಳನ್ನು ಒಯ್ಯತೊಡಗಿದ.

ಫಿಡೆಲ್ ಬರೆಯುವುದರ ಖುಷಿ ಕಂಡುಕೊಂಡಿದ್ದುದನ್ನೂ ಮಾರ್ಕ್ವೆಜ್ ಅರಿತ. ಫಿಡೆಲ್ ಕಾರಿನಲ್ಲಿ ಹೋಗುವಾಗ ನೋಟ್ ಬುಕ್ಕಿನಲ್ಲಿ ಬರೆಯುತ್ತಿದ್ದ. ಒಳ್ಳೆಯ ಲೇಖಕನಂತೆ ತಕ್ಕ ನುಡಿಗಟ್ಟಿಗಾಗಿ ತಡಕಾಡುತ್ತಿದ್ದ. ಬರೆದದ್ದನ್ನು ಹೊಡೆದುಹಾಕಿ ಮಾರ್ಜಿನ್ನಿನಲ್ಲಿ ಇನ್ನೇನೋ ಸೇರಿಸುತ್ತಿದ್ದ.  ಸರಿಯಾದ ಪದ ಸಿಕ್ಕುವ ತನಕ ಹಲವು ದಿನ ನಿಘಂಟುಗಳನ್ನು ಹುಡುಕುತ್ತಿದ್ದ; ಅವರಿವರನ್ನು ಕೇಳುತ್ತಿದ್ದ.

ಕ್ರಾಂತಿಕಾರಿ ಹೋರಾಟದ ಮೂಲಕ ಬಟಿಸ್ಟಾ ಸರ್ಕಾರವನ್ನು ಕಿತ್ತೊಗೆದ ಮೇಲೆ ಹವಾನಾದಲ್ಲಿ ಫಿಡೆಲ್ ಮಾಡಿದ ಏಳು ಗಂಟೆಯ ಭಾಷಣ ವಿಶ್ವದಾಖಲೆಯಿರಬಹುದು ಎನ್ನುವ ಮಾರ್ಕ್ವೆಜ್‌ಗೆ ಅವತ್ತು ಎಲ್ಲಿ ಹೋದರೂ ಫಿಡೆಲ್ ಭಾಷಣ ಕೇಳುತ್ತಲೇ ಇತ್ತು. ಅವನ ಮಾತಿನ, ವಾದದ ಮಾಂತ್ರಿಕ ಶಕ್ತಿ ಮಾರ್ಕ್ವೆಜ್‌ಗೆ ಅರಿವಾಗುತ್ತಾ ಹೋಯಿತು. ಫಿಡೆಲ್ ಒರಟು ದನಿ ಕೇಳಿದ ಡಾಕ್ಟರು ಇನ್ನು ಐದು ವರ್ಷಗಳಲ್ಲಿ ಅವನು ಮಾತು ಕಳೆದುಕೊಳ್ಳಲಿದ್ದಾನೆಂದು ಹೇಳಿದರು. 1962ರಲ್ಲೊಂದು ದಿನ ಫಿಡೆಲ್ ಮಾತು ನಿಂತು ಹೋಯಿತು; ಆದರೆ ಮರಳಿ ಬಂತು!   

ಚಿಂತನೆ, ಕ್ರಿಯೆ ಹಾಗೂ ಜನರ ಜೊತೆಗಿನ ಮಾತುಕತೆಯ ಮೂಲಕ ವಿಕಾಸಗೊಳ್ಳುತ್ತಿದ್ದ ಫಿಡೆಲ್ ಮಾತಿನ ವೈಶಿಷ್ಟ್ಯವನ್ನು ಮಾರ್ಕ್ವೆಜ್ ಮಾತಿನಲ್ಲೇ ಕೇಳಿ: ‘ಸಣ್ಣಗಿನ ದನಿಯಲ್ಲಿ, ಮಾತಾಡಲೋ ಬೇಡವೋ ಎಂಬ ಅನುಮಾನದಲ್ಲೇ ಫಿಡೆಲ್ ಮಾತು ಶುರುವಾಗುತ್ತಿತ್ತು. ಖಚಿತವಿರದ ದಿಕ್ಕಿನಲ್ಲಿ, ಮಂಜಿನಲ್ಲಿ ತಡವರಿಸುತ್ತಾ ಅವನ ಮಾತು ಮುಂದಡಿಯಿಡುತ್ತಿತ್ತು. ಅವನು ಇಂಚಿಂಚೇ ಬೇರು ಬಿಡುತ್ತಾ, ಹಟಾತ್ತನೊಮ್ಮೆ ದೊಡ್ಡ ಪಂಜದ ಹೊಡೆತದ ಮೂಲಕ ಜನರನ್ನು ಹಿಡಿದಿಟ್ಟುಕೊಳ್ಳಲಾರಂಭಿಸುತ್ತಿದ್ದ.

ಆಮೇಲೆ ಜನರ ಜೊತೆಗಿನ ಮಾತುಕತೆಯ ಮೂಲಕ ಅವರಿಂದ ಪಡೆಯುವುದೂ ಕೊಡುವುದೂ ಶುರುವಾಗುವುದು. ಇಂಥ ಉದ್ವಿಗ್ನತೆಯಲ್ಲಿ ಅವನ ಉತ್ತುಂಗ ಸ್ಥಿತಿ ಸೃಷ್ಟಿಯಾಗುವುದು. ಇದು ಅವನ ಸ್ಫೂರ್ತಿಯ ನೆಲೆ. ಈ ರಮ್ಯಘನತೆಯ ಉಜ್ವಲತೆಯನ್ನು ನೋಡದವರು, ಅನುಭವಿಸದವರು ಮಾತ್ರ ಅದನ್ನು ಅಲ್ಲಗಳೆಯಬಲ್ಲರು.’

ಮಾರ್ಕ್ವೆಜ್ ಕಂಡಂತೆ ಫಿಡೆಲ್ ಕಮ್ಯುನಿಸಮ್ಮಿನ ಕ್ಲೀಷೆಗಳನ್ನು, ವಾಸ್ತವದ ನಂಟು ಕಳಚಿಕೊಂಡ ಭಾಷೆಯನ್ನು ಬಳಸುವವನಲ್ಲ. ತನ್ನ ಪ್ರೀತಿಯ ಲೇಖಕ ಜೋಸ್ ಮಾರ್ತಿಯ ಮಾತುಗಳನ್ನು ಬಿಟ್ಟರೆ ಬೇರೆ ಲೇಖಕರನ್ನು ಅವನು ಹೆಚ್ಚು ಉಲ್ಲೇಖಿಸುವುದಿಲ್ಲ. ಜೋಸ್ ಮಾರ್ತಿಯ ಇಪ್ಪತ್ತೆಂಟು ಸಂಪುಟಗಳನ್ನೂ ಓದಿದ್ದ ಫಿಡೆಲ್, ಮಾರ್ತಿಯ ಚಿಂತನೆಯನ್ನು ಮಾರ್ಕ್ಸ್‌ವಾದಿ ಕ್ರಾಂತಿಯ ರಕ್ತನಾಳಗಳ ಜೊತೆ ಬೆರೆಯುವಂತೆ ಮಾಡಿದ. ಪ್ರತಿಕೂಲ ಸ್ಥಿತಿ ಎದುರಾದಾಗಲೆಲ್ಲ ಫಿಡೆಲ್ ತೀವ್ರವಾಗುತ್ತಾ ಹೋಗುತ್ತಿದ್ದ.

ಗೆಳೆಯನೊಬ್ಬ ಒಮ್ಮೆ ಫಿಡೆಲ್‌ಗೆ ಹೇಳಿದನಂತೆ: ‘ಪರಿಸ್ಥಿತಿ ತೀರಾ ಬಿಗಡಾಯಿಸಿರಬೇಕು; ಅದಕ್ಕೇ ಇಷ್ಟೊಂದು ಉಜ್ವಲವಾಗಿ ಕಾಣುತ್ತಿದ್ದೀಯ.’ ಮಾತಾಡುತ್ತಲೇ ಚಿಂತಿಸುವ, ಚಿಂತಿಸುತ್ತಲೇ ಮಾತಾಡಿ ಸ್ಪಷ್ಟತೆ ಪಡೆಯುವ ಫಿಡೆಲ್ ನಡುರಾತ್ರಿಯಲ್ಲಿ ಗೆಳೆಯನೊಬ್ಬನ ಮನೆಗೆ ಹೋಗಿ ‘ಐದು ನಿಮಿಷ ಮಾತ್ರ’ ಎಂದು ನಿಂತೇ ಮಾತಾಡತೊಡಗುತ್ತಾನೆ.

ಮಾತುಕತೆ ಉಕ್ಕಿಸಿದ ಎನರ್ಜಿಯಿಂದಾಗಿ ಗಂಟೆಗಟ್ಟಲೆ ಮಾತಾಡುತ್ತಾನೆ; ಕೊನೆಗೆ ಆರಾಮಕುರ್ಚಿಯಲ್ಲಿ ಕೂತು ‘ನಾನೀಗ ಹೊಸ ಮನುಷ್ಯನಾದೆ ಎನ್ನಿಸುತ್ತಿದೆ’ ಎನ್ನುತ್ತಾನೆ.

ಮಾರ್ಕ್ವೆಜ್ ಬರೆಯುತ್ತಾನೆ: ‘ಮಾತಾಡಿ ದಣಿದ ಫಿಡೆಲ್, ಮಾತಿನಲ್ಲೇ ದಣಿವಾರಿಸಿಕೊಳ್ಳುವುದು ಹೀಗೆ.’ ಮಾರ್ಕ್ವೆಜ್ ಪ್ರಕಾರ, ರಾಜಕಾರಣಿಯಾಗಿ ಫಿಡೆಲ್‌ನ ಅದ್ಭುತ ಶಕ್ತಿಯೆಂದರೆ ಒಂದು ಸಮಸ್ಯೆ ಎಲ್ಲಿ ಹುಟ್ಟಿ, ಹೇಗೆ ಬೆಳೆಯುತ್ತಿದೆ ಎಂಬುದನ್ನು ಆಳವಾಗಿ ಗ್ರಹಿಸುವುದು. ಅದು ಕೂಡ ಹಲಬಗೆಯ ಮಾತುಕತೆಗಳ ಮೂಲಕವೇ ಬೆಳೆಯುತ್ತಾ ಹೋಗುವುದು.

ಒಮ್ಮೆ ಹಲವು ತಿಂಗಳುಗಳ ಚಿಂತನೆ, ಮಾತುಕತೆಯ ಮೂಲಕ ಫಿಡೆಲ್, ಲ್ಯಾಟಿನ್ ಅಮೆರಿಕದ ದೇಶಗಳು ತೀರಿಸಬೇಕಾದ ಸಾಲ ಕುರಿತು ತರ್ಕಬದ್ಧವಾಗಿ ವಿವೇಚಿಸಿ, ‘ಆ ಸಾಲವನ್ನು ಲ್ಯಾಟಿನ್ ಅಮೆರಿಕನ್ ದೇಶಗಳು ತೀರಿಸಬೇಕಾಗಿಲ್ಲ’ ಎಂಬುದನ್ನು ತೋರಿಸಿದ.  ಇಂಥ ವಿವೇಚನೆಯ ಜೊತೆಗೆ ಫಿಡೆಲ್‌ಗಿದ್ದ ಅದ್ಭುತ ಶಕ್ತಿಯೆಂದರೆ ನೆನಪು.

ಬೆಳಗಾಗೆದ್ದು ಸುಮಾರು ಇನ್ನೂರು ಪುಟಗಳಷ್ಟು ಸುದ್ದಿಯೊಂದಿಗೆ ಫಿಡೆಲ್‌ನ ಬೆಳಗಿನ ಉಪಾಹಾರ; ಪ್ರತಿದಿನ ಓದಲೇಬೇಕಾದ ಕೊನೇಪಕ್ಷ ಐವತ್ತು ದಾಖಲೆಗಳು; ಜೊತೆಗೆ ಪುಸ್ತಕಗಳು. ಅವನ್ನು ಹೇಗೆ ನೆನಪಿಟ್ಟುಕೊಳ್ಳುತ್ತಾನೆ, ಓದಲು ಅವನಿಗೆ ಎಲ್ಲಿಂದ ಟೈಮ್ ಸಿಗುತ್ತದೆ, ಅವನ ಓದಿನ ಸ್ಪೀಡ್ ಹೇಗಿರಬಹುದು... ಊಹಿಸುವುದು ಕಷ್ಟ. ಅವನ ಕಾರಿನಲ್ಲಿ ಯಾವಾಗಲೂ ಓದಲು ಒಂದು ಲೈಟ್ ಇರುತ್ತಿತ್ತು.

ಎಷ್ಟೋ ಸಲ ಫಿಡೆಲ್ ಬೆಳಗಿನ ಜಾವ ಓದಲು ಒಯ್ದ ಪುಸ್ತಕದ ಬಗ್ಗೆ ಬೆಳಗ್ಗೆಗಾಗಲೇ ಮಾತಾಡಿದ್ದಿದೆ.  ಆರ್ಥಿಕತೆಯ, ಚರಿತ್ರೆಯ ಪುಸ್ತಕಗಳೆಂದರೆ ಅವನಿಗೆ ಇಷ್ಟ. ಹಾಗೆಯೇ ತೀವ್ರ ಮಾತುಕತೆಗಳು. ಈ ಎಲ್ಲದರ ಮೂಲಕ ಫಿಡೆಲ್ ಹಲವು ದೇಶಗಳನ್ನು ಬಲ್ಲವನಾಗಿದ್ದ. ಅದರಲ್ಲೂ ಅಮೆರಿಕದ ಜನ, ಅಲ್ಲಿನ ಅಧಿಕಾರ ರಚನೆಗಳು, ಅಮೆರಿಕನ್ ಸರ್ಕಾರಗಳು ಕ್ಯೂಬಾಕ್ಕೆ ಒಡ್ಡುವ ಅಡೆತಡೆಗಳು, ಅವನ್ನು ಎದುರಿಸುವ ಮಾರ್ಗಗಳು ಎಲ್ಲವನ್ನೂ ಗ್ರಹಿಸುತ್ತಿದ್ದ. ತನ್ನ ಅಧಿಕಾರಿಗಳು ಸತ್ಯ ಬಚ್ಚಿಟ್ಟರೂ ಅದು ಫಿಡೆಲ್‌ಗೆ ತಿಳಿಯುತ್ತಿತ್ತು...

ಜಗತ್ತಿನ ಬಹುದೊಡ್ಡ ಲೇಖಕರಲ್ಲೊಬ್ಬನಾದ ಮಾರ್ಕ್ವೆಜ್ ಕೊಟ್ಟಿರುವ ಈ ಆತ್ಮೀಯ, ಅಥೆಂಟಿಕ್ ಫಿಡೆಲ್ ಚಿತ್ರಗಳನ್ನು ನೋಡುತ್ತಿದ್ದರೆ ಫಿಡೆಲ್ ಥರದ ನಾಯಕರೊಳಗಿನ ಚಾಲಕಶಕ್ತಿ ಹಾಗೂ ಇಂದಿನ ಬಂಡವಾಳಶಾಹಿಯ ಕ್ರೌರ್ಯವನ್ನು ಎದುರಿಸಲು ಚಿಂತಕ-ನಾಯಕರು ಹುಡುಕಿಕೊಡುವ ಹಾದಿಗಳು ಸ್ಪಷ್ಟವಾಗಿ ಕಾಣತೊಡಗುತ್ತವೆ.
ಕೊನೆ ಟಿಪ್ಪಣಿ: ‘ಮಧ್ಯಮಜೀವಿ’ಗಳಿಗೆ ಫಿಡೆಲ್ ಪಾಠಗಳು

ಇವತ್ತಿನ ಅಂಕಣದಲ್ಲಿ ಕ್ಯಾಸ್ಟ್ರೊನ ಬೌದ್ಧಿಕ ಮುಖಗಳನ್ನು ಹೆಚ್ಚು ಬಿಂಬಿಸಲು ಕಾರಣವಿದೆ. ಇವತ್ತು ಎಡವೂ ಅಲ್ಲದ, ಬಲವೂ ಅಲ್ಲದ ಮಾರ್ಗವೊಂದಿದೆ ಎಂದು ಮುಗ್ಧವಾಗಿ ನಂಬುವವರಿರಬಹುದು. ಆದರೆ ಎಡಪಂಥೀಯ ಚಿಂತನೆಯಿಲ್ಲದಿದ್ದರೆ ಕಳೆದ ನೂರು ವರ್ಷಗಳಲ್ಲಿ ಅನೇಕ ದೇಶಗಳ ಜನಜೀವನವೇ ಬದಲಾಗುತ್ತಿರಲಿಲ್ಲ. ಇದು ಫಿಡೆಲ್ ಮಾತು- ಕ್ರಿಯೆಗಳನ್ನು ಕಂಡಾಗಲೂ ಹೊಳೆಯುತ್ತದೆ.

ಕಳೆದ ಇಪ್ಪತ್ತೈದು ವರ್ಷಗಳಲ್ಲಿ ಕ್ಯಾಪಿಟಲಿಸಮ್ಮಿನಿಂದಾಗಿ ಹೆಚ್ಚಿರುವ ಸಂಪತ್ತಿನ ಭಯಾನಕ ಕೇಂದ್ರೀಕರಣ, ಅದು ಸೃಷ್ಟಿಸುತ್ತಿರುವ ಕಂದರ ಕುರಿತು ಜವಾಬ್ದಾರಿಯುತ ಎಡಪಂಥೀಯ ಚಿಂತಕರು ಬರೆಯದಿದ್ದರೆ ಯಾರಿಗೂ ಈ ಭೀಕರ ಮುಖಗಳ ಬಗ್ಗೆ ಸ್ಪಷ್ಟತೆ ಇರುತ್ತಿರಲಿಲ್ಲ.

1999ರಲ್ಲಿ ವೆನಿಜುವೆಲಾ ವಿಶ್ವವಿದ್ಯಾಲಯದಲ್ಲಿ ಫಿಡೆಲ್ ಮಾಡಿದ ‘ಬ್ಯಾಟಲ್ ಆಫ್ ಐಡಿಯಾಸ್’ ಭಾಷಣ ಒಂದನ್ನಷ್ಟೇ ಮಧ್ಯಮವರ್ಗದ ‘ಮಧ್ಯಮಮಾರ್ಗ’ಗಳ ಸೋಮಾರಿವಲಯ ಓದಿದರೂ ಸಾಕು: ಇವತ್ತಿನ ನಿಜವಾದ ಸವಾಲುಗಳೆದುರು ತಮ್ಮ ಜಾಣನುಡಿಗಟ್ಟುಗಳು ಎಷ್ಟು ಬೋಗಸ್ ಎಂಬುದು ಹೊಳೆಯುತ್ತದೆ.

ಮಾರ್ಕ್ಸ್ ಚಿಂತನೆಗಳಿಲ್ಲದಿದ್ದರೆ  ಇಲ್ಲಿ ಸ್ತ್ರೀವಾದವಾಗಲೀ, ಇನ್ನಿತರ ಬಗೆಯ ಸಮಾಜವಾದಗಳಾಗಲೀ ಹುಟ್ಟುವುದು ಕಷ್ಟವಿತ್ತು. ಅಂಬೇಡ್ಕರ್ ಮಾರ್ಕ್‌್ಸವಾದವನ್ನು ಒಪ್ಪದವರಂತೆ ಕಂಡರೂ, ಅವರ ಲೇಬರ್ ಪಾರ್ಟಿ, ‘ಪ್ರಭುತ್ವ ಸಮಾಜವಾದ’ದ ಕಲ್ಪನೆ, ಭೂ ರಾಷ್ಟ್ರೀಕರಣ, ಬುದ್ಧ-ಮಾರ್ಕ್‌್ಸರನ್ನು ಹೋಲಿಸಿದ ರೀತಿಗಳಲ್ಲಿ ಮಾರ್ಕ್‌್ಸವಾದದ ಪ್ರೇರಣೆಯಿತ್ತು. ದಲಿತ ಚಳವಳಿ ತನ್ನ ಉಜ್ವಲ ಘಟ್ಟದಲ್ಲಿ ಮಾರ್ಕ್‌್ಸವಾದದಿಂದ ತಾತ್ವಿಕ, ಸಂಘಟನಾತ್ಮಕ ಪ್ರೇರಣೆಗಳನ್ನು ಪಡೆದಿದ್ದನ್ನು ಮರೆಯಬಾರದು.

ಎಲ್ಲ ಬಗೆಯ ಚಿಂತನೆಗಳಿಗೂ ಸ್ಥಗಿತತೆ ಬರಬಹುದು. ಆದರೆ ಕ್ಯಾಸ್ಟ್ರೊ  ರೀತಿ ತಂತಮ್ಮ ನಾಡುಗಳ ವಾಸ್ತವಗಳಿಗೆ ತಕ್ಕಂತೆ ಚಿಂತನೆಗಳನ್ನು ಮರುರೂಪಿಸಿಕೊಳ್ಳುವ ಬೌದ್ಧಿಕತೆ; ಚಿಂತನೆಗಳನ್ನು ಜಾರಿಗೆ ತರಬಲ್ಲ ಪ್ರಾಕ್ಟಿಕಲ್ ಮಾರ್ಗಗಳಿಂದ ಮಾರ್ಕ್‌್ಸವಾದಕ್ಕೆ ಸಮಕಾಲೀನತೆ ಬರುತ್ತದೆಯೇ ಹೊರತು, ಅದರ ಗಿಳಿಪಾಠದಿಂದಾಗಲೀ, ಅದನ್ನು ಗ್ರಹಿಸಲಾಗದ ಸಲೀಸು ಮಧ್ಯಮಮಾರ್ಗದಿಂದಾಗಲೀ ಅಲ್ಲ.

ಈ ಕಾಲದ ಶ್ರೇಷ್ಠ ವಿಮರ್ಶಕರಲ್ಲೊಬ್ಬನಾದ ಟೆರಿ ಈಗಲ್ಟನ್ ಇಪ್ಪತ್ತೊಂದನೆಯ ಶತಮಾನದ ವಾಸ್ತವದಲ್ಲಿ ಕಾಲೂರಿ ನಿಂತು ಬರೆದಿರುವ ‘ವೈ ಮಾರ್ಕ್ಸ್ ವಾಸ್ ರೈಟ್’ ಪುಸ್ತಕವನ್ನು ಮುಕ್ತವಾಗಿ ಓದಿದರೆ ನಮ್ಮ ಅನೇಕ ಬೌದ್ಧಿಕ ಗೊಂದಲಗಳು ಕಡಿಮೆಯಾಗಬಲ್ಲವು. ಈ ಪುಸ್ತಕವನ್ನು ‘ಕಾರ್ಪೊರೇಟ್ ಕಾಲದಲ್ಲೂ ಮಾರ್ಕ್‌್ಸವಾದ ಪ್ರಸ್ತುತ’ (ಚಿಂತನ ಪುಸ್ತಕ) ಎಂದು ಆರ್.ಕೆ.ಹುಡಗಿ ಅನುವಾದಿಸಿದ್ದಾರೆ.

ಸಾಹಿತ್ಯ ವಿಮರ್ಶೆಯಲ್ಲಿ ಸರಳ ಕಮ್ಯುನಿಸಮ್ಮಿನ ನಿರ್ದೇಶನಗಳಿಂದ ಹುಟ್ಟುವ ಸಮಸ್ಯೆಗಳ ಜೊತೆಗೆ ಇಡೀ ಮಾರ್ಕ್‌್ಸವಾದವನ್ನೇ ಸಮೀಕರಿಸಿ ಗೊಂದಲಗೊಂಡು, ಗೊಂದಲ ಹಂಚುವವರು ಈ ಯುಗದ ಮಹತ್ವದ ಪಠ್ಯಗಳಲ್ಲೊಂದಾದ ‘ಕಮ್ಯುನಿಸ್ಟ್ ಮ್ಯಾನಿಫೆಸ್ಟೊ’ ಹಾಗೂ ಇನ್ನಿತರ ಮಾರ್ಕ್‌್ಸವಾದಿ ಪಠ್ಯಗಳನ್ನು ಇವತ್ತಿನ ಕ್ಯಾಪಿಟಲಿಸಮ್ಮಿನ ಭೀಕರ ಕುಣಿತದ ಕಾಲದಲ್ಲಿ ಓದಿ ಸ್ಪಷ್ಟತೆ ಪಡೆಯುವುದು ಒಳ್ಳೆಯದು. ಹಾಗೆಯೇ, ಸಾಹಿತ್ಯ ಸೃಷ್ಟಿಯ ಸ್ವಾಯತ್ತತೆಯಲ್ಲಿ ಖಚಿತ ನಂಬಿಕೆಯಿಟ್ಟಿದ್ದ ಮಾರ್ಕ್ವೆಜ್, ಕಮ್ಯುನಿಸ್ಟನಾದ ಫಿಡೆಲ್‌ನನ್ನು ಯಾಕೆ ದೊಡ್ಡ ನಾಯಕನೆಂದು ಒಪ್ಪಿಕೊಂಡಿದ್ದ ಎಂಬುದರ ಬಗೆಗೂ ಮುಕ್ತವಾಗಿ ಯೋಚಿಸಬೇಕು.


ನಿನ್ನ ಜೊತೆ ನಾ ಕಳೆದ ಒಂದೊಂದು ನಿಮಿಷನೂ ನಾ

ನಿನ್ನ ಜೊತೆ ನಾ ಕಳೆದ ಒಂದೊಂದು ನಿಮಿಷನೂ ನಾ ಮರಣಶಯ್ಯೆಗೆ ಹೋಗೋವರೆಗೂ ನೆನಪಿರುತ್ತೆ.
ತೊಂಬತ್ತು ನಿಮಿಷಗಳ ಆ ಆಲಿಂಗನ,ಬಿಸಿಯಪ್ಪುಗೆ ಎಂಟು ನೂರು ವರ್ಷಗಳವರೆಗೂ ಹೃದಯದಲ್ಲಿ‌ ಭದ್ರವಾಗಿರುತ್ತೆ‌.
ಆ ನೋಟದಲ್ಲಿ ಕೆಲನಿಮಿಷ
ಭಯದಲ್ಲಿ‌ ಕೆಲನಿಮಿಷ
ಬಿಗಿದಪ್ಪಿಕೊಂಡಾಗ ಜಾರಿದ ಕಣ್ಣಹನಿಗಳ ಕೆಲನಿಮಿಷಗಳು 
ಯಾವುದೇ ಪರಿವಿಲ್ಲದೆ ಮುತ್ತಿನ ಮೋಹಕ್ಕೆ ಒಳಗಾದ ಆ ನಿಮಿಷಗಳು ನನ್ನ ಮರಣಶಯ್ಯೆಯಲ್ಲೂ ನೆನಪಿನಲ್ಲಿರತ್ತೆ ಕಣ್ಮಣಿ.
ಯಾವುದು ನ್ಯಾಯ ,ಯಾವುದು ಅನ್ಯಾಯ ಇಬ್ಬರಿಗೂ ಗೊತ್ತಾಗಿಲ್ಲ
ಹಗಲ?? ಇರುಳ?? ಇಬ್ಬರಿಗೂ ಅದರ ಪರಿವಿಲ್ಲ
ಯಾರು ಆರಂಭಿಸ್ತಾರೆ,ಯಾರು ಮುಗಿಸ್ತಾರೆ ಅನ್ನೊದರ ಬಗ್ಗೆ ಇಬ್ಬರಿಗೂ ಅರಿವಿರಲಿಲ್ಲ
ಇಬ್ಬರೂ ಆರಂಭಿಸಿದ್ದೆವೆ,ಇದರ ಬಗ್ಗೆ ಮುಂದೆ ಮಾತಿಲ್ಲ .
ನಾ ನಿನ್ನ ಭಯವನ್ನ ಹೋಗಲಾಡಿಸಿದೆ,ನೀ ನಿನ್ನ ಆಸೆಯನ್ನ ಬಿಚ್ಚಿಟ್ಟೆ
ನಾ ನಿನ್ನ ಬೆತ್ತಲೆಗೊಳಿಸಿದೆ,ನೀ ನಿನ್ನ ನಾಚಿಕೆಯನ್ನ ಕಳಚಿದೆ .
ಇವೆಲ್ಲವೂ ಮುಂದೆ ಕನಸಾಗಿ ಮರೆತುಹೋದ್ರು ,ಕೊನೆಯದಾಗಿ ನಿನ್ನ ಕಣ್ಣಿಂದ ಜಾರಿದ ಕಣ್ಣಿರಹನಿ‌ ನನ್ನ ಕೈಯಲ್ಲಿ ಇನ್ನು ಮೆತ್ತಿದೆ.ನಿನ್ನ ಜೊತೆ ಕಳೆದ ಒಂದೊಂದು ನಿಮಿಷವೂ ನನ್ನ
 ಮರಣಶಯ್ಯೆಯಲ್ಲೂ  ನೆನಪಲ್ಲಿರುತ್ತೆ ಕಣ್ಮಣಿ.

ಕನ್ನಡಕ್ಕೆ: ನಿವೇದಿತಾ💐

Saturday, 14 March 2020

ಶೂ ಕಂಡುಹಿಡಿದ ಕಥೆ -ಸುಧಾ ಆಡುಕಳ

ಮಕ್ಕಳ ರವೀಂದ್ರ ನಾಟಕಕ್ಕಾಗಿ ಗುರುದೇವ ರವೀಂದ್ರರ 
"ಶೂ ಕಂಡುಹಿಡಿದ ಕಥೆ" ಎಂಬ ಕವನವನ್ನು ಅಳವಡಿಸಿಕೊಂಡಿದ್ದೆವು. ಅದು ಅಲ್ಲಿ ಮಕ್ಕಳಿಗೆ ಹಿತವಾಗುವ ಹಾಸ್ಯದ ಶೈಲಿಯಲ್ಲಿ ದೃಶ್ಯೀಕರಣಗೊಂಡಿತ್ತು.  ಅದನ್ನು ಯಥಾವತ್ತಾಗಿ ಕವನವಾಗಿಸಲು ಮಾಡಿದ ವಿನಮ್ರ ಪ್ರಯತ್ನವಿದು. ಸುಖಾಂತ ಚೌಧರಿಯವರ ಇಂಗ್ಲಿಷ್ ಅನುವಾದದಿಂದ ಆಯ್ದುಕೊಂಡ ಸಾಲುಗಳು.

ಶೂ ಕಂಡುಹಿಡಿದ ಕಥೆ

"ಇದೇನಿದು ಗೋಬು" ಅಬ್ಬರಿಸಿದ ರಾಜ ಹೋಬು
"ನನ್ನ ಪಾದಗಳ್ಯಾಕೆ ಧೂಳಾಗಿವೆ?
ನಿನ್ನೆಯಿಂದ ಅದನ್ನೇ ಯೋಚಿಸಿದೆ
ಸಂಬಳ ಬೇಕು ನಿಮಗೆ ರಾಶಿ, ರಾಶಿ
ಕಾಳಜಿ ಬೇಡವೇನು ರಾಜನಿಗಾಗಿ?
ನನ್ನ ಭೂಮಿಯ ಧೂಳೇ ನನ್ನ ಕಾಲಿಗೆ ತಾಗಿ
ನಿದ್ದೆಗೆಡಿಸಿದೆ ನೋಡಿ ರಾತ್ರಿಯಿಡೀ
ರಾಜನ ಆಜ್ಞೆಯಿದು ಕೇಳಿ, ಪರಿಹಾರ ಮಾಡಿ
ಇಲ್ಲವಾದರೆ ಪ್ರಾಣ ಉಳಿಯಲಾರದು ನೋಡಿ'

ಗೋಬುವಿನ ಗಂಟಲಾರಿತು, 
ಮೈಯಿಡೀ ಬೆವರಿತು
ಪಂಡಿತರ ಮುಖ ಬಾಡಿತು
ಪ್ರಮುಖರ ನಿದ್ದೆ ಹಾರಿತು
ಅಡುಗೆಮನೆಯ ಬೆಂಕಿ ಆರಿತು
ಹಸಿವೆ ಇಲ್ಲದಾಯಿತು
ಒದ್ದೆಯಾದ ಬಿಳಿಯ ಗಡ್ಡ
ದುಃಖಬೆರೆತ ಕಣ್ಣ ನೋಟ
ಗೋಬು ಕೊನೆಗೂ ಹೇಳಿದ
" ಧೂಳು ನಿಮ್ಮ ಪಾದದಲ್ಲಿ ಇರಲಿ ದೊರೆ
ಪಾದಧೂಳಿ ಕರುಣಿಸಿ ನಮ್ಮನೆಲ್ಲಾ ಪೊರೆ"

ಗೋಬುವಿನ ಮಾತಿಗೆ ದೊರೆ ಭಾವಪರವಶ
ಮರುಕ್ಷಣವೇ ವಾಸ್ತವಕೆ ಇಳಿದು ಮತ್ತೆ ಹೇಳಿದ
"ಪಾದಕೆಲ್ಲ ಧೂಳು ತಾಗಿ ತುರಿಕೆ ಹತ್ತಿದೆ
ಮೊದಲು ಈ ಧೂಳಿನಿಂದ ಮುಕ್ತಿ ಬೇಕಿದೆ
ಧೂಳು ಮೊದಲು ನಿವಾರಿಸಿ, ಮತ್ತೆ ಬೇರೆ ಯೋಚಿಸಿ
ಎಲ್ಲಿ ಹೋದರು ನಮ್ಮ ಆಸ್ಥಾನ ವಿಜ್ಞಾನಿಗಳು?
ಹೆಸರಿಗಿಂತ ಉದ್ದ, ಉದ್ದ ಡಿಗ್ರೀ ಪಡೆದವರು
ಧೂಳಿನಿಂದ ಮುಕ್ತಿ ದೊರೆತರೇ ಸರಿ
ಇಲ್ಲವಾದರೆ ನಿಮ್ಮ ಸಂಬಳಕ್ಕೆ ಕತ್ತರಿ"

ಜ್ಣಾನಿ ವಿಜ್ಞಾನಿಗಳ ಸಮ್ಮೇಳನ
ಕನ್ನಡಕಧಾರಿಗಳ ವಿಚಾರ ಮಂಥನ
ಹತ್ತೊಂಭತ್ತು ನಶ್ಯ ಡಬ್ನ ಖಾಲಿಯಾಯಿತು
ಬರೆಯಲಿಟ್ಟ ಹಾಳೆ ಖಾಲಿಯುಳಿಯಿತು
ಚರ್ಚಿಸಿ, ಯೋಚಿಸಿ, ವಿಚಾರಿಸಿ....
ಬರೆದರೊಂದು ವಾಕ್ಯವ
"ಧೂಳಿಲ್ಲದಿದ್ದರೆ ಬೆಳೆಯೆಲ್ಲಿ?"
ರಾಜನದನು ಓದಿದ, ಕೋಪದಿಂದ ಕಿರುಚಿದ
"ಎಲ್ಲಿ ನಮ್ಮ ಪಂಡಿತರು? ಸರ್ವ ಶಾಸ್ತ್ರ ಕೋವಿದರು?"

ಪಂಡಿತರು ನಡುಗಿದರು, ಕಸಬರಿಗೆ ತರಿಸಿದರು
ಒಂದೆ , ಎರಡೆ, ಮೂರೆ? ಹದಿನೇಳುವರೆ ಸಾವಿರ
ಇಡಿಯ ರಾಕ್ಯ ಗುಡಿಸಿದರು, ಧೂಳ ಮೋಡ ಎಬ್ಬಿಸಿದರು
ಸೂರ್ಯ ಮೋಡದಲ್ಲಿ ಕರಗಿ, ಕಣ್ಣು ಬಿಡದೆ ಜನರು ಹೆದರಿ
ರಾಜನನೆಯವರೆಗೂ ಧೂಳು ತುಂಬಿತು
ಕೆಮ್ಮಿನ ಶಬ್ದ ಇಡಿಯ ನಾಡ ತುಂಬಿತು
ರಾಜ ಕೆಮ್ಮತ್ತ ನುಡಿದ, "ಮೂರ್ಖ ಜನಗಳೆ,
ಧೂಳು ತೊಲಗಿಸಿರೆಂದರೆ ಮತ್ತಿಷ್ಟು ತುಂಬಿಸಿದಿರಿ
ತಕ್ಷಣವೇ ಧೂಳು ಹೋಗಲಿಲ್ಲವೆಂದರೆ
ನಿಮ್ಮ ತಲೆಯು ಇದ್ದ ಜಾಗದಲ್ಲಿರದು ಖರೆ"

ಇಪ್ಪತ್ತೊಂದು ಲಕ್ಷ ಜನರ ಕರೆದು ತಂದರು
ಹಳ್ಳ, ಕೊಳ್ಳ, ನದಿಗಳಿಂದ ನೀರು ತಂದರು
ಕೆರೆ, ಬಾವಿ, ಸರೋವರಗಳಿಂದ ನೀರು ತಂದರು
ಬೀದಿ, ಬೀದಿಗಳನ್ನೆಲ್ಲ ತಿಕ್ಕಿ ತೊಳೆದರು
ನೀರ ಜೀವಿಗಳೆಲ್ಲ ತೆವಳತೊಡಗಿದವು
ಊರ ಜನರೆಲ್ಲ ಈಜತೊಡಗಿದರು
ಅಂಗಡಿ ಮುಂಗಟ್ಟುಗಳು ತೇಲಿ ಹೋದವು
ಅರಮನೆಯ ಅಂಗಳದಿ ನೆರೆಯು ಬಂದಿತು
ರಾಜ ಕ್ರೋಧದಿಂದ ಹೊರಗೆ ಬಂದು ಕೂಗಿದ
"ಧೂಳು ತೆಗೆಯಿರೆಂದರೆ ಕೆಸರು ತುಂಬಿಸಿದಿರಿ
ಸಮಸ್ಯೆ ಬಗೆಹರಿಯದಿರೆ ಶಿರವ ಕೊಡಲು ಸಿದ್ಧರಿರಿ"

ಎಲ್ಲಾ ಹತಾಶೆಯಲ್ಲಿ ಮತ್ತೆ ಸೇರಿದರು
ಜೀವವುಳಿಸಿಕೊಳ್ಳಲು ಉಪಾಯ ಯೋಚಿಸಿದರು
ನೆಲಕೆ ಹೊದಿಕೆ ಹೊದಿಸಿಬಿಡುವುದೊಂದೆ ದಾರಿ ಉಳಿದಿದೆ
ಚಮ್ಮಾರನೊಬ್ಬನ ಕೆಲಸದಲ್ಲಿ ನಮ್ಮ ಜೀವ ಅಡಗಿದೆ
ಹುಡುಕಲೆಂದು ಹೊರಟರು ಚಮ್ಮಾರರ ಬೀದಿಗೆ
ಎಲ್ಲ ಓಡಿಬಿಟ್ಟಿದ್ದರು ಇವರು ಬರುವ ಸುದ್ದಿಗೆ
ನಡೆಯಲಾರದ ಮುದಿಯ ಚಮ್ಮಾರರ ನಾಯಕ
ಕುಳಿತಲ್ಲೇ ಕೇಳಿದ, "ಏನು ನಿಮ್ಮ ಮಾಯಕ?"
ಹೊತ್ತು ತಂದರವನನು ರಾಜನಾಸ್ಥಾನಕೆ
ಇವನೆ ಸರಿ ಹೊದಿಸಲು ಚರ್ಮ ಇಡಿಯ ರಾಜ್ಯಕೆ

ರಾಜ ಅಜ್ಞಾಪಿಸಲು ಅಣಿಯಾಗಿ ನಿಂತ
ಚಮ್ಮಾರ ಕೈ ಮುಗಿದು ನಿಡಿದ ಮಾತ
"ಇಡಿಯ ರಾಜ್ಯಕ್ಯಾಕೆ ಹೊದಿಕೆ ನಿಮ್ಮ ಕಾಲ ಮುಚ್ಚಿಕೊಳ್ಳಿ"
ಮಂತ್ರಿ ಮುನಿದು ನುಡಿದ," ನಿನ್ನ ಬಾಯ ಮುಚ್ಚಿಕೋ.
ರಾಜ ತನ್ನ ಕಾಲ ಮುಚ್ಚಿಕೊಳ್ಳಬೇಕೆ ಮೂರ್ಖನೆ?"
ರಾಜ ತಡೆದ ಗೋಬುವನ್ನು ತನ್ನ ಕಾಲು ನೀಡಿದ
"ನೀನೆ ಮುಚ್ಚು ನೋಡಿಬಿಡುವ" ಎಂದು ಆಜ್ಞೆ ನೀಡಿದ
ಹತಿಯಾರ ತೆಗೆದ ಚಮ್ಮಾರ ಪಾದರಕ್ಷೆಯೊಂದ ಮಾಡಿದ
ಧರಿಸಿ ನಡೆದ ರಾಜ ಅವಗೆ ಉಡುಗೊರೆಯ ನೀಡಿದ
"ನಿಮ್ಮದೆಲ್ಲ ಎಂಥ ಜ್ಞಾನ? ನೋಡಿ ಈ ಜ್ಞಾನಿಯ
ಜೀವನದ ಜ್ಞಾನ ಅರೆದು ಕುಡಿದ ನಿಜ ಅನುಭಾವಿಯ"
ಇಡಿಯ ರಾಜ ಗಡಣ ತನ್ನ ತಲೆಯ ತಗ್ಗಿಸಿತು
ಚಮ್ಮಾರನಿಂದ ಒಂದು ಇಡಿಯ ರಾಜ್ಯ ಉಳಿಯಿತು

Thursday, 13 February 2020

ಪ್ರೀತಿ ಗೀತೆ

ಮೋಡ
ನೀನು

ಗುಡುಗು
ನೀನು

ಮಿಂಚು 
ನೀನು

ಸುರಿವ ಮಳೆ 
ನೀನು

ಕನಸ ಬೀಜ 
ನೆನೆ ಹಾಕಿದವನು
ನಾನು

ಮೊಳಕೆ
ನೀನು

ಚಿಗುರು
ನೀನು

ಹೂವು
ನೀನು

ಪರಿಮಳವ 
ಸೇವಿಸುವ 
ಖುಷಿ ನಾನು.

Friday, 7 February 2020

ಸಿನೆಮಾ : ಹೊಸ ತಲೆಮಾರು” ಕುರಿತು ಸಹಯಾನ ಸಾಹಿತ್ಯೋತ್ಸವ-೧೦





ಸಿನೆಮಾ : ಹೊಸ ತಲೆಮಾರು” ಕುರಿತು
ಸಹಯಾನ ಸಾಹಿತ್ಯೋತ್ಸವ-೧೦
೦೯ ಫೆಬ್ರುವರಿ, ೨೦೨೦, ರವಿವಾರ

೯-೨-೨೦೨೦ ರಂದು ರವಿವಾರ ರಾಜ್ಯ ಮಟ್ಟದ ಸಹಯಾನ ಸಾಹಿತ್ಯೋತ್ಸವವನ್ನು ಹೊನ್ನಾವರ ತಾಲೂಕಿನ ಕೆೆರೆಕೋಣದಲ್ಲಿ ಸಮುದಾಯ ಕರ್ನಾಟಕ, ಬೆಂಗಳೂರು, ಚಿಂತನ ಉತ್ತರ ಕನ್ನಡ ಇವರ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗುತ್ತಿದೆ. ಸಿನೆಮಾ : ಹೊಸ ತಲೆಮಾರು” ಎನ್ನುವ ವಿಷಯದ ಮೇಲೆ ೧೦ ನೇ ರಾಜ್ಯ ಮಟ್ಟದ ಸಾಹಿತ್ಯೋತ್ಸವ ನಡೆಯುತ್ತಿದ್ದು ಸಂಸ್ಕೃತಿ ಚಿಂತಕ ಕೆ. ಫಣಿರಾಜ ಅವರ ಸರ್ವಾಧ್ಯಕ್ಷತೆ ಯಲ್ಲಿ ನಡೆಯಲಿದೆ. ಹಿರಿಯ ಸಂಸ್ಕೃತಿ ಚಿಂತಕರಾದ ಪ್ರೊ. ಫಣಿರಾಜ ಅವರು ಸಧ್ಯ ಮಣಿಪಾಲದ ಎಂಐಟಿಯಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ಸಿನೆಮಾ ನೋಡುಗರಾದ ಇವರು ಕರ್ನಾಟಕದ ಕೆಲವೇ ಕೆಲವು ಸಿನೆಮಾ ವಿಮರ್ಶಕರಲ್ಲಿ ಪ್ರಮುಖರು. ಕರ್ನಾಟಕದ ಜನಪರ ಚಳುವಳಿಗಳಲ್ಲಿ ಪ್ರಾರಂಭದಿAದ ತೊಡಗಿಸಿಕೊಂಡಿರುವ ಇವರು ೧೦ ಕ್ಕೂ ಹೆಚ್ಚು ಪುಸ್ತಕ ಬರೆದಿದ್ದಾರೆ.


ಸಿನೆಮಾ : ಹೊಸ ತಲೆಮಾರು
ದಿನಾಂಕ: ೦೯ ಫೆಬ್ರುವರಿ, ೨೦೨೦ ರವಿವಾರ ಸ್ಥಳ: ಸಹಯಾನ, ಕೆರೆಕೋಣ
ಸರ್ವಾಧ್ಯಕ್ಷರು
ಪ್ರೊ. ಕೆ. ಫಣಿರಾಜ್, ಮಣಿಪಾಲ
ಉದ್ಘಾಟನೆ: ೧೦:೦೦         
ಉದ್ಘಾಟಕರು : ಎಂ. ಎಸ್. ಪ್ರಕಾಶ ಬಾಬು, ನಿರ್ದೇಶಕರು
ಅತಿಥಿಗಳು : ಅಮ್ಮೆಂಬಳ ಆನಂದ, ಪತ್ರಕರ್ತರು
ಆಶಯ : ಪ್ರದೀಪ ಶೆಟ್ಟಿ, ಬೈಂದೂರು, ಅಧ್ಯಾಪಕರು
ಆರ್. ವಿ. ಕುರಿತು : ಎಂ. ಜಿ. ಹೆಗಡೆ, ಕುಮಟ,ಅಧ್ಯಾಪಕರು
ಮೊದಲ ಸಂವಾದ : ೧೨:೩೦
ಸಿನೆಮಾ: ಸೌಂದರ್ಯ ಮೀಮಾಂಸೆಯ ಅಭಿವ್ಯಕ್ತಿ - ಅಭಯ ಸಿಂಹ ನಿರ್ದೇಶಕರು
ಎರಡನೇ ಸಂವಾದ : ೨:೦೦ ಗುಂಪು ಸಂವಾದ
ಸಿನಿಮಾ: ನೋಡುವ, ವಿಮರ್ಶಿಸುವ ಬಗೆ  -  ಟಿ. ಕೆ. ದಯಾನಂದ, ಕತೆಗಾರ
ಮೂರನೇ ಸಂವಾದ : ೩-೦೦
ಹೆಣ್ಣಿನ ನೆಲೆಯಲ್ಲಿ ಸಿನೆಮಾ- ಅನನ್ಯ ಕಾಸರವಳ್ಳಿ, ನಟಿ ನಿರ್ದೇಶಕಿ
ನಾಲ್ಕನೇ ಸಂವಾದ : ೪-೦೦

                  ಡಿಜಿಟಲ್ ಸಿನಿಮಾ ವೇದಿಕೆಯ ಹೊಸ ಸಾಧ್ಯತೆಗಳು - ವಿಶಾಖ, ದಾವಣಗೆ
       ಸಮಾರೋಪ : ೫-೦೦ ಅತಿಥಿಗಳು: ವಿನಯಾ ಒಕ್ಕುಂದ, ಕವಯತ್ರಿ
ಸಂವಾದದಲ್ಲಿ: ಮೋಹನ ಹಬ್ಬು, ಹನುಮಂತ ಹಾಲಗೇರಿ, ಕಿರಣ ನಾಯ್ಕ, ಸಿನೆಮಾ ನಟ, ಚಿನ್ಮಯ ಹೆಗಡೆ, ಗೋಪಾಲ ಹಳ್ಳೇರ, ಸಂತೋಷ ಸಂಕೊಳ್ಳಿ, ಯೋಗೀಶ ಬಂಕೇಶ್ವರ, ಎಂ ಎಚ್ ಗಣೇಶ, ಗೋವರ್ಧನ್ ನವಿಲೇಹಾಳ, ಶಂಕರ ಕೆಂಚನೂರು, ಪ್ರಿಯಾಂಕ ಮಾವಿನಕರ, ತಿಮ್ಮಪ್ಪ ಗುಲ್ವಾಡಿ
 
೬ ಗಂಟೆಯಿAದ : ಸಿನೆಮಾ ಪ್ರದರ್ಶನ


                                           



Saturday, 25 January 2020

ಪಡುವಣಿ ನಾರಾಯಣ ಗಾಂವಕಾರ

ಪಡುವಣಿ ನಾರಾಯಣ ಗಾಂವಕಾರ
                           ಗೌತಮ್ ಗಾಂವ್ಕರ, 
  ಬಡಾಬಡಗಿನ ಯಕ್ಷಗಾನ ಪರಂಪರೆಯಲ್ಲಿ ಡೇರೆಮೇಳಗಳ ಕಲಾವಿದರಷ್ಟೇ ಜನಪ್ರಿಯರಾದ ಅನೇಕ ಹವ್ಯಾಸಿ ಮತ್ತು ಬಯಲಾಟದ ಕಲಾವಿದರಿದ್ದಾರೆ. ಪಡುವಣಿಯ ನಾರಾಯಣ ಗಾಂವಕಾರರು ಅಂತಹ ಕಲಾವಿದರಲ್ಲೊಬ್ಬರು. ಅನಾರೋಗ್ಯದ ಕಾರಣದಿಂದಾಗಿ ತಮ್ಮ ಹವ್ಯಾಸವನ್ನು ಐವತ್ತೈದರ ಹರೆಯದಲ್ಲೇ ನಿಲ್ಲಿಸಿದರೂ ಅವರ ಎರಡು ದಶಕಗಳ ಕಾಲದ ಯಕ್ಷಗಾನದ ಸೇವೆ ಅನುಪಮವಾದದ್ದು. ತಮ್ಮ ಕಾಲದಲ್ಲಿ ಉತ್ತರ ಕನ್ನಡದ ಉದ್ದಗಲಗಳಲ್ಲಿ ವಿಶಿಷ್ಟ ಪಾತ್ರಾಭಿನಯ ಮತ್ತು ಅರ್ಥಗಾರಿಕೆಗಾಗಿ ಹೆಸರಾಗಿದ್ದ ನಾರಾಯಣ ಗಾಂವಕಾರರು ಮಾರುತಿ ಪ್ರತಾಪ ಪ್ರಸಂಗದ ಹನುಮಂತ, ಕಚದೇವಯಾನಿ ಪ್ರಸಂಗದ ಶುಕ್ರಾಚಾರ್ಯ ಪಾತ್ರಗಳ ಮಟ್ಟಿಗಂತೂ `ಇವರೇ ಸೈ’ ಎಂಬಷ್ಟು ಜನಪ್ರಿಯರು.

  ಉತ್ತರ ಕನ್ನಡದ ಕುಮಟಾ ತಾಲೂಕಿನ ಪಡುವಣಿ ಇವರ ಹುಟ್ಟೂರು. ಅನಂತ ಗಾಂವಕಾರ

ಮತ್ತು ಸಣ್ಣಮ್ಮ ಗಾಂವಕಾರರ ಮಗನಾಗಿ 1940 ರ ಮೇ 10 ನೇ ತಾರೀಕಿನಂದು ಜನಸಿದ ಗಾಂವಕಾರರು ಮೆಟ್ರಿಕ್ ವರೆಗಿನ ಶಿಕ್ಷಣವನ್ನು ಹೆಗೆಡೆಯಲ್ಲಿ ಪಡೆದವರು. ಯಕ್ಷಗಾನದ ಹುಚ್ಚು ಓದನ್ನು ಮುಂದುವರಿಸಲು ಅವಕಾಶವನ್ನೇ ನೀಡದಾಗ  ತನ್ನ ಹದಿನಾಲ್ಕನೇ ವಯಸ್ಸಿನಲ್ಲಿಯೇ ಗೆಜ್ಜೆ ಕಟ್ಟಿ ಅಭಿಮನ್ಯುವಿನ ಪಾತ್ರದ ಮೂಲಕ ರಂಗದ ಮೇಲೆ ಹೆಜ್ಜೆ ಹಾಕಿದರು. ಆಗಿನ ಹೆಸರಾಂತ ಭಾಗವತರಾದ ಬಾಡದ ಶಿವರಾಮ ಹೆಗಡೆಯವರು ಮತ್ತು ಪಡುವಣಿ ಪರಮಯ್ಯ ಪಟಗಾರರರನ್ನು ಇವರು ತನ್ನ ಯಕ್ಷಗುರುಗಳೆಂದು ನೆನಪುಮಾಡಿಕೊಳ್ಳುತ್ತಾರೆ. ಚಿಕ್ಕ ಪ್ರಾಯದಲ್ಲೇ ಯಕ್ಷಗಾನಕ್ಕೆ ಮನಸೋತು, ಎಲ್ಲ ಬಗೆಯ ಪಾತ್ರಗಳನ್ನು ಮಾಡುತ್ತಾ ಹಂತ-ಹಂತವಾಗಿ ಮೇಲೇರಿ, ಎರಡನೇ ವೇಷದಾರಿಯಾಗಿ ರಸಿಕರ ಮನದಲ್ಲಿ ಅಚ್ಚಳಿಯದೆ ಉಳಿದವರು. ರಂಗದಿಂದ ನಿವೃತ್ತಿ ಪಡೆದು  ಎರಡುದಶಕಗಳೇ ಕಳೆದರೂ ಊರೂರುಗಳಲ್ಲಿ ಇವರ ಪಾತ್ರವನ್ನು ಕಣ್ಣೆದರು ತಂದುಕೊಂಡು ಪರವಶರಾಗುವ ಅಭಿಮಾನಿಗಳಿದ್ದಾರೆ. ತನ್ನ ಪಾತ್ರವನ್ನು ರೂಪಿಸುತ್ತಾ ಒಂದು ಸಂಘಟಿತ ಆಖ್ಯಾನದ ಪ್ರದರ್ಶನಕ್ಕೆ ಪೋಷಣೆ ನೀಡುವುದು ಯಕ್ಷಗಾನಕ್ಕೇ ವಿಶಿಷ್ಟವಾದ ಪರಂಪರೆ. ನಾರಾಯಣ ಗಾಂವಕಾರರು ಈ ಅಲಿಖಿತ ನಿಯಮವನ್ನು ಮೀರಿದವರಲ್ಲ. ಹವ್ಯಾಸಿ ಮೇಳಗಳಲ್ಲಿಯೇ ತಮ್ಮ ಸೇವೆಯನ್ನು ಪೂರ್ಣಗೊಳಿದವರಾಗಿದ್ದರೂ ಪ್ರೇಕ್ಷಕ ವರ್ಗ ಯಾವುದೇ ಆಗಿದ್ದರೂ ಪ್ರಾಮಾಣಿಕ ಪ್ರದರ್ಶನ ನೀಡುವ ಶೃದ್ಧೆ ಮತ್ತು ಬದ್ಧತೆಯಲ್ಲಿ ಇವರದು ಪಕ್ಕಾ ವೃತ್ತಿಪರ ನಿಲುವು. ಚಿಕ್ಕ ಹಳ್ಳಿಗಳಲ್ಲಿಯೇ ಇರಲಿ ನಗರದ ದೊಡ್ಡ ಸಭಾಂಗಣಗಳವೇ ಆಗಿರಲಿ ನೂರಕ್ಕ ನೂರಷ್ಟು ತಮ್ಮ ಸಾಮರ್ಥ್ಯಕ್ಕೆ ತಕ್ಕಂತಹ ಪ್ರದರ್ಶನವನ್ನು ನೀಡುವುದಕ್ಕೆ ನಾರಾಯಣ ಗಾಂವಕಾರರು ಸದಾ ಬದ್ಧರಾಗಿದ್ದರು. ಪಾತ್ರ ಬೀಳಾಗದಂತೆ ಸದಾ ಎಚ್ಚರದಲ್ಲಿರುವವರು. ಇವರ ಪಾತ್ರಗಳಲ್ಲೇ `ಹನುಮಂತ’ ನ ಪಾತ್ರ ಅನನ್ಯವಾದದ್ದು. ತನ್ನ ಯಕ್ಷಸೇವೆಯ ಆರಂಭದ ದಿನಗಳಲ್ಲೇ ಇಂದ್ರಜೀತು ಕಾಳಗದಲ್ಲಿ ಮೂರೂರು ದೇವರು ಹೆಗಡೆಯವರ ಇಂದ್ರಜಿತುವಿನ ಎದುರು ಹನುಮಂತನಾಗಿ ಹತ್ತಾರು ಕಡೆ ಪಾತ್ರವಹಿಸಿ ಹನುಮಂತನ ಪಾತ್ರಕ್ಕೆ ಅನನ್ಯವಾದ ಆಯಾಮವನ್ನು ಒದಗಿಸಿದವರು. ಆನಂತರ, ಇವರು ನೂರಾರು ರಂಗಸ್ಥಳಗಳ ಮೇಲೆ ಹನುಮಂತನಾಗಿ ಮೆರೆದವರು. ವಾಚಿಕ, ಆಹಾರ್ಯ, ಆಂಗಿಕ ಹಾಗೂ ಸಾತ್ವಿಕ ಅಭಿನಯಗಳಲ್ಲಿ ಇವರು ಸಮಾನ ಸಿದ್ಧಿಯನ್ನು ಸಾಧಿಸಿದವರು. ಇವರ ಅಭಿನಯ ನಿಜವಾದ ರಸೋಲ್ಲಾಸವೇ ಆಗಿರುತಿತ್ತು. ಉತ್ತಮ ನಾಯ್ಕರ ಮೇಳವೆಂದೇ ಪ್ರಸಿದ್ಧವಾಗಿದ್ದ ಕುಮಟಾದ ಶಾಂತಿಕಾ ಪರಮೇಶ್ವರಿ ಯಕ್ಷಗಾನ ಮಂಡಳಿ ಇಬ್ಬರು ಶ್ರೇಷ್ಠ ಹನುಮಂತನ ಪಾತ್ರದಾರಿಗಳನ್ನು ಒಂದೇ ಕಾಲಗಟ್ಟದಲ್ಲಿ ನೀಡಿದೆ. ಒಬ್ಬರು ಕುಮಟಾ ಗೋವಿಂದ ನಾಯ್ಕರಾದರೆ ಇನ್ನೊಬ್ಬರು ಪಡುವಣಿ ನಾರಾಯಣ ಗಾಂವಕಾರರು. ವೇಷಕಟ್ಟಿಕೊಳ್ಳುವಲ್ಲಿ ತೋರುವ ಶ್ರದ್ಧೆ, ಮುಖವರ್ಣಿಕೆಯಲ್ಲಿನ ಅಚ್ಚುಕಟ್ಟುತನ ಮತ್ತು ಕಲಾತ್ಮಕತೆ ಮತ್ತು ಹನುಮಂತನ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡುವ ಕಾರಣಕ್ಕಾಗಿ ನಾರಾಯಣ ಗಾಂವಕಾರರು ಬಡಗುತಿಟ್ಟು ಯಕ್ಷಗಾನ ಪ್ರಪಂಚದ ಸಾರ್ವಕಾಲಿಕ ಶ್ರೇಷ್ಟ ಹನುಮಂತನ ಪಾತ್ರದಾರಿಗಳ ಸಾಲಿನಲ್ಲಿ ನಿಲ್ಲುವವರು. ಯಕ್ಷರಂಗದ ದಂತಕತೆ ಎಕ್ಟರ್ ಜೋಷಿಯವರ ಭೂಕೈಲಾಸದಲ್ಲಿ ರಾವಣನ ಪಾತ್ರ ಮಾಡುತ್ತಿದ್ದರೆ ನಾರಾಯಣ ಗಾಂವಕಾರರದು ಈಶ್ವರನ ಪಾತ್ರ. ಈ ಜೋಡಿಯ ಜನಪ್ರೀಯತೆ ಅವರನ್ನು ಗೋವಾ ಮತ್ತು ಮುಂಬೈಗಳಲ್ಲಿಯೂ ಪ್ರದರ್ಶನ ನೀಡುವ ಅವಕಾಶವನ್ನು ನೀಡಿತು. ಕೆರೆಮನೆ ಮಹಾಬಲ ಹೆಗೆಡೆಯವರ ಸುದನ್ವ ಪಾತ್ರಕ್ಕೆ ಎದುರಾಗಿ ಅರ್ಜುನನಾಗಿ, ಚಿಟ್ಟಾಣಿ ರಾಮಚಂದ್ರ ಹೆಗಡೆಯವರ ಭಸ್ಮಾಸುರನ ಪಾತ್ರಕ್ಕೆ ಎದುರಾಗಿ ರಾವಣನಾಗಿ ಹೀಗೆ ಆಗಿನ ಪ್ರಸಿದ್ಧ ಕಲಾವಿದರೊಂದಿಗೆ ಪಾತ್ರ ಮಾಡಿ ಮೆಚ್ಚುಗೆ ಗಳಿಸಿದವರು.

    ಕಚ-ದೇವಯಾನಿ ಪ್ರಸಂಗದಲ್ಲಿ ನಾರಾಯಣ ಗಾಂವಕಾರರು ಶುಕ್ರಾಚಾರ್ಯನಾಗಿ ಕಚನಾಗಿ ಧಾರೇಶ್ವರ ಮಾಸ್ತರರು ಮತ್ತು ದೇವಯಾನಿಯಾಗಿ ಪಾಲನಕರ ಮಾಸ್ತರರು ಇರಲೇಬೇಕೆಂಬ ಸಹೃದಯರ ಒತ್ತಾಯ ಆ ಕಾಲದ ಅಲಿಖಿತ ನಿಯಮವಾಗಿ ಚಾಲ್ತಿಯಲ್ಲಿದ್ದುದು ಅವರ ಜನಪ್ರಿಯತೆಗೆ ಸಾಕ್ಷಿ. ಅನಾರೋಗ್ಯದಿಂದಾಗಿ ತಮ್ಮ  ಐವತ್ತರ ಹರೆಯದಲ್ಲೇ ವೇಷ ಹಚ್ಚುವುದನ್ನು ನಿಲ್ಲಿಸಿ ತಾಳಮದ್ದಳೆಯಲ್ಲಿ ತಮ್ಮ ವ್ಯವಸಾಯವನ್ನು ಮುಂದುವರಿಸಿದರು.  ಅರ್ಥಗಾರಿಕೆಯಲ್ಲೂ ಇವರು ತಮ್ಮ ಛಾಪನ್ನು ಮೂಡಿಸಿದರು. ಕರ್ಕಿಯ ಹಾಸ್ಯಗಾರ ಮೇಳ, ಹಳದೀಪುರದ ಜೋಗನಕಟ್ಟೆ ಮೇಳ, ಕುಮಟಾದ ಶ್ರೀ ರಾಮನಾಥ ಯಕ್ಷಗಾನ ಮಂಡಳಿ, ಹೆಗಡೆಯ ಶ್ರೀ ಶಾಂತಿಕಾ ಪರಮೇಶ್ವರಿ ಯಕ್ಷಗಾನ ಮಂಡಳಿ ಮುಂತಾದ ಬಯಲಾಟದ ಮೇಳಗಳಲ್ಲಿ ಪಾತ್ರವಹಿಸಿ ಜಿಲ್ಲೆಯ ಹಿರಿ-ಕಿರಿಯ ಯಕ್ಷಗಾನ ಕಲಾವಿದರೊಂದಿಗೆ ಒಡನಾಟಹೊಂದಿದವರು. ಮೂರೂರು ದೇವರ ಹೆಗಡೆ, ಎಕ್ಟರ್ ಜೋಷಿ ಮತ್ತು ವೀರಭದ್ರನಾಯ್ಕರ ಪಾತ್ರಗಳಿಂದ ಪ್ರಭಾವಿತರಾಗಿದ್ದ ನಾರಾಯಣ ಗಾಂವಕಾರರು  ಕಡತೋಕ ಮಂಜು ಭಾಗವತರು, ಕೊಪ್ಪಲಮಕ್ಕಿ ಭಾಗವತರು, ಬಾಡದ ಶಿವರಾಮ ಹೆಗಡೆಯವರಂತಹ ಶ್ರೇಷ್ಟರ ತಾಳಕ್ಕೆ ಹೆಜ್ಜೆಹಾಕಿದವರು. ದೇವರು ಹೆಗಡೆಯವರು, ಕೊಂಡದಕುಳಿ ರಾಮ ಹೆಗಡೆ (ಸೀನಿಯರ್) ಅಗ್ರಗೋಣ ಎಂ. ಎಂ ನಾಯಕ, ಹಿರೇಗುತ್ತಿ ವೆಂಕಟ್ರಮಣ ನಾಯಕರಂತಹ ಮೇರುಕಲಾವಿದರ ಮಾರ್ಗದರ್ಶನ ಪಡೆದು ತನ್ನದೇ ದಾರಿಯನ್ನು ಗುರುತಿಸಿಕೊಂಡವರು. ಕುಮಟಾ ಉತ್ತಮ ನಾಯ್ಕ್, ಕುಮಟಾ ಗೋವಿಂದ ನಾಯ್ಕ್ , ಗೋಕರ್ಣ ಹೊನ್ನಪ್ಪ ಗುನಗಾ , ಶಿವಾನಂದ ಭಂಡಾರಿ, ಅನಂತ ಹೆಗಡೆ ಹಾವಗೋಡಿ ಮುಂತಾದವರ ಜೊತೆಯಲ್ಲಿಯೇ ಹವ್ಯಾಸಿ ಮೇಳವಾಗಿ  ಯಕ್ಷಗಾನವನ್ನು ಹಳ್ಳಿಗಳಲ್ಲಿ ಜೀವಂತವಾಗಿರಿಸಿದವರು. ನಾರಾಯಣ ಗಾಂವಕಾರರು ಯಾರನ್ನೂ ಅನುಸರಿಸಿದವರಲ್ಲ; ಅನುಕರಿಸಿದವರಲ್ಲ.

  ಯಕ್ಷಗಾನದ ನೈಜ ಪ್ರದರ್ಶನ ನೀಡಿದವರಲ್ಲಿ ಇವರೊಬ್ಬರು. ತಮ್ಮ ಪಾತ್ರಗಳ ಮೂಲಕ ಪ್ರೇಕ್ಷಕರಲ್ಲಿ ನಾರಾಯಣ ಗಾಂವಕಾರರು ಹೊಮ್ಮಿಸಿದ ರಸಾನುಭವ ಅನಿರ್ವಚನೀಯ.
ಅವರಿಗೆ ಸಹಯಾನದ ಶ್ರದ್ಧಾಂಜಲಿ
ಜನನ
ಮೇ 10, 1940
ನಿಧನ: 18 ಜನವರಿ 2020
ಹುಟ್ಟೂರು
ಪಡುವಣಿ, ಕುಮಟಾ ತಾಲೂಕು

ಮಕ್ಕಳು
ಉದಯ, ಮಾಲತಿ
ಪತ್ನಿ
ನಾಗಮ್ಮ

Sunday, 19 January 2020

ಕಾಮ್ರೆಡ್ ಮೇರಿದೇವಾಸಿಯಾ...ಎಂ.ಎ. ಖತೀಬ


ಸಂಘಟನೆ ಮತ್ತು ಹೋರಾಟದ ರಂಗದಲ್ಲಿ ಕಾಮ್ರೆಡ್ ಮೇರಿ ದೇವಾಸಿಯಾ ಒಂದು ಅಚ್ಚಳಿಯದ ನೆನಪು. ಚಳುವಳಿ ನಮ್ಮ ಸಮಾಜವನ್ನು ಕ್ರಿಯಾಶೀಲವಾಗಿಸುವ ಮತ್ತು ಪ್ರಜಾಪ್ರಭುತ್ವವನ್ನು ಇನ್ನಷ್ಟು ಗಟ್ಟಿಗೊಳಿಸುವ ಸಂಗತಿ ಎಂದು ತಿಳಿದಿದ್ದ ಮೇರಿ ದೇವಾಸಿಯಾ 1965 ರಲ್ಲಿ ನಡೆಸಿದ ಐತಿಹಾಸಿಕ ಹೋರಾಟವನ್ನು ಒಳಗೊಂಡಂತೆ ತನ್ನ ಬದುಕನ್ನು ಪೂರ್ತಿಯಾಗಿ ಸಂಘಟನೆ ಮತ್ತು ಹೋರಾಟ ಕ್ಕೆ ಮುಡಿಪಾಗಿಟ್ಟವರು. ಕರ್ನಾಟಕದಲ್ಲಿ ಇಂದು ವಿಸ್ತಾರವಾಗಿ ಬೆಳೆದಿರುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವನ್ನು ಪ್ರಾರಂಭಿಸಿದವರು ಅವರು. 
ಅಂದು ಓರ್ವ ಮಹಿಳೆ ನಾಯಕತ್ವಕ್ಕೆ ಬರುವುದೆಂದರೆ ಹುಬ್ಬೇರಿಸುವ ಕಾಲ. ಅದರಲ್ಲೂ ಪ್ರಭುತ್ವ ಮತ್ತು ಸರ್ಕಾರವನ್ನು ಎದುರಿಸಿ ಇಡೀ ದುಡಿಯುವ ವರ್ಗಕ್ಕೆ ಸಂಘಟನಾತ್ಮಕ ಹಕ್ಕುಗಳನ್ನು ಹಾಗೂ ನ್ಯಾಯ ಬದ್ದ ಸೌಲಭ್ಯಗಳನ್ನು ಒದಗಿಸಿ ಕೊಡಲು ಮುಂಚೂಣಿಯಲ್ಲಿದ್ದು ಯಶಸ್ವಿಯಾಗುವುದೆಂದರೆ ಸಾಧಾರಣ ಮಾತಲ್ಲ. ಇಂದು ಸಂವಿಧಾನ ಬದ್ಧವಾದ ಸೌಲತ್ತುಗಳನ್ನು, ಭದ್ರತೆಯನ್ನು ನೌಕರರು ಪಡೆಯುತ್ತಿದ್ದಾರೆ ಎಂದರೆ ಅದರಲ್ಲಿ ಕಾಮ್ರೆಡ್ ಮೇರಿ ದೇವಾಸಿಯಾರವರ ತ್ಯಾಗಪೂರ್ಣ ಕೊಡುಗೆ ಮಹತ್ವಪೂರ್ಣವಾದುದು.

ಇಂದಿನ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ, ವಿರೋಧ ಪಕ್ಷದ ಸ್ಥಾನದಲ್ಲಿ ನಿಂತು ಸ್ವಾಭಿಮಾನಿ ಹೋರಾಟ ನಡೆಸಬೇಕಾದ ಸಂಘಟನೆಗಳು ಆಳುವ ಪಕ್ಷಗಳ ಬಾಲಂಗೋಚಿ ಗಳಾಗುತ್ತಿರುವ ಕೆಲವು ಉದಾಹರಣೆಗಳು ನಮ್ಮೆದುರಿಗಿದೆ. ನೌಕರರ ಹಿತಾಸಕ್ತಿಗಾಗಿ ರಾಜಿ ರಹಿತ ಹೋರಾಟ ಮಾಡಬೇಕಾದ ಸಂದರ್ಭದಲ್ಲಿ ಸಂಘಟನೆಗಳನ್ನು ವ್ಯಕ್ತಿಕೇಂದ್ರಿತವಾಗಿ, ಯಾರದೋ ಹಿತಾಸಕ್ತಿಯ ರಕ್ಷಣೆಗಾಗಿ ಬಳಸಿಕೊಳ್ಳಲಾಗುತ್ತಿದೆಯೇ ಎನ್ನುವ ಅನುಮಾನ ಕೂಡ ಕಾಡುತ್ತಿದೆ. ಪಾರದರ್ಶಕತೆಯನ್ನು ಪ್ರಜಾಸತ್ತಾತ್ಮಕ ತೆಯನ್ನು ಕಳೆದುಕೊಳ್ಳುವ ಮೂಲಕ ಸಂಘಟನೆ, ಚಳುವಳಿ ದುರ್ಬಲಗೊಳ್ಳುತ್ತಿದೆ. ದೇಶ ಜಾಗತೀಕರಣ ಸುಳಿಯಲ್ಲಿ ಸಿಲುಕಿರುವ ಈ ಸಂದರ್ಭದಲ್ಲಿ ಆಳುವ ವರ್ಗ ಜಾತಿ, ಧರ್ಮ, ಹಣ, ಅಧಿಕಾರದ ಆಮೀಷ ಒಡ್ಡಿ ಚಳುವಳಿಯನ್ನು ಮುರಿಯಲು ಉತ್ಸುಕವಾಗಿರುವ ಕಾಲದಲ್ಲಿ ಕಾಮ್ರೆಡ್ ಮೇರಿ ದೇವಾಸಿಯಾರವರ ಬದ್ಧತೆ ಮತ್ತು ಹೋರಾಟದ ದಾರಿ ನಮಗೆ ಮಾರ್ಗದರ್ಶಿಯಾಗಿರಬೇಕಾಗಿದೆ. ಈ ಹಿನ್ನೆಲೆಯಲ್ಲಿ ಕಾರವಾರದ ಎಂ.ಎ. ಖತೀಬ್ ಅವರು ಬರೆದಿರುವ ಈ ಕಿರು ಪುಸ್ತಕವನ್ನು ಬಂಡಾಯ ಪ್ರಕಾಶನ ಪ್ರೀತಿಯಿಂದ ಪ್ರಕಟಿಸುತ್ತದೆ. ಎಂ.ಎ. ಖತೀಬರವರು ಮೂಲತಃ ಕಾರವಾರದ ಕಡವಾಡದವರು. ಅವರ ಕುಟುಂಬದ ಹಿರಿಯರು ಸ್ವಾತಂತ್ರ್ಯ ಹೋರಾಟ ಮತ್ತು ರೈತ ಚಳುವಳಿ ಯನ್ನು ಜಿಲ್ಲೆಯಲ್ಲಿ ಕಟ್ಟಿದ ಮೊದಲಿಗರು ಹೌದು. ಮುಜಾಫರ್ ಖತೀಬರವರು ಉಪ ತಹಶಿಲ್ದಾರರಾಗಿ ನಿವೃತ್ತರಾದವರು. ಈ ಹಿಂದೆ ಅವರ “ಎಚ್ಚರ ಇದ್ದ ಕಾಶಿ ಮತ್ತು ಬಾಳಸುನ ಔಷಧಿ” ಎನ್ನುವ ಕಿರು ಕತೆಗಳ ಪುಸ್ತಕವನ್ನು ಪ್ರಕಾಶನ ಪ್ರಕಟಿಸಿತು. ಇದು ಅವರ ಎರಡನೇ ಪುಸ್ತಕ, ಸರ್ಕಾರಿ ನೌಕರರಾಗಿರುವಾಗಲೂ ಮನೆ ಕೆಲಸ ಕ್ಕಿಂತಲೂ ಹೆಚ್ಚು ಮುತುವರ್ಜಿಯಿಂದ ತನ್ನ ಸರ್ಕಾರಿ ನೌಕರಿ ಮಾಡುವ ಮೂಲಕ ಜನಾನುರಾಗಿ ಯಾಗಿರುವ ಖತೀಬರಿಗೆ ಅನಂತ ಕೃತಜ್ಞತೆಗಳು. ಪುಸ್ತಕ ವಿನ್ಯಾಸಗೊಳಿಸಿದ ಎಂ ರಾಮು ಮತ್ತು ಮುದ್ರಿಸಿದ ಕ್ರಿಯಾ ಸಂಗಾತಿ ಗಳಿಗೆ ಕೃತಜ್ಞತೆಗಳು. ಎಂದಿನಂತೆ ಕೊಂಡು ಓದುವ ತಮಗೂ ವಂದನೆ.

ವಿಠ್ಠಲ ಭಂಡಾರಿ
 ಬಂಡಾಯ ಪ್ರಕಾಶನದ ಪರವಾಗಿ.