Saturday, 4 July 2020

ಏಕವಚನದ ಬೆರಗು- ವಿಠ್ಠಲ ಭಂಡಾರಿ, ಕೆರೆಕೋಣ


  ಒಂದು ದಿನ ಹೀಗಾಯ್ತು. ನಮ್ಮ ಮನೆಹೊಳ್ಳಿಯ ಆರಾಮಖುರ್ಚಿಯಲ್ಲಿ ಕುಳಿತು ಅಣ್ಣ (ಆರ್.ವಿ.ಭಂಡಾರಿ) ಯಾರೊಂದಿಗೋ ಮಾತನಾಡುತ್ತಿದ್ದ. ಒಳಗಿನಿಂದ ಅವರ ಮಾತು ಆಲಿಸುತ್ತಿದ್ದ ನನಗೆ ಆಶ್ಚರ್ಯ ಕಾದಿತ್ತು. ಅಣ್ಣನೆದುರು ಕುಳಿತವರು ಯಾರು? ಎಲ್ಲಿಯವರು?. ಯಾಕೆಂದರೆ ಇಬ್ಬರೂ ಏಕವಚನದಲ್ಲಿ ಮಾತನಾಡಿಕೊಳ್ಳುತ್ತಿದ್ದರು. ಸಾಮಾನ್ಯವಾಗಿ ತೀರಾ ಹತ್ತಿರದ ನೆಂಟರನ್ನು ಬಿಟ್ಟರೆ ಅಣ್ಣ ಯಾರಿಗೂ ಏಕವಚನ ಬಳಸುತ್ತಿರಲಿಲ್ಲ. ಶಾಲೆಕಾಲೇಜಿಗೆ ಹೋಗುವ ವಿದ್ಯಾರ್ಥಿಗಳಿಗೂ ಆತ ಏಕವಚನ ಬಳಸುತ್ತಿರಲಿಲ್ಲ. ಈಕಡೆಯಿಂದಲೂ ಹಾಗೆ, ತೀರಾ ಹತ್ತಿರದವರನ್ನು, ಬಾಲ್ಯದ ಒಡನಾಡಿಗಳನ್ನು ಬಿಟ್ಟರೆ ಸಾಮಾನ್ಯವಾಗಿ ಆತನಿಗೆ ಏಕವಚನ ಯಾರು ಬಳಸುತ್ತಿರಲಿಲ್ಲ. ಯಾಕೆಂದರೆ ಊರಲ್ಲಿ ಆತ ಮಾಸ್ತರ್. ಹೊರಗಡೆ ಹೋರಾಟಗಾರ, ಸಾಹಿತಿ ಎನ್ನುವ ಗೌರವ. ಆದರೆ ಹೊರಗಡೆ ಏಕವಚನದ ಲೋಕಾಭಿರಾಮದ ಮಾತುಗಳನ್ನು ಆಲಿಸುತ್ತಾ ಹೊರಬಂದು ನೋಡಿದರೆ ಅಪರಿಚಿತ ಮುಖ. “ಈತ ಜೈರಾಮ್ ಹೆಗಡೆ, ನನ್ನ ಸ್ನೇಹಿತ. ಒಳ್ಳೆಯ ಕವಿ ಮತ್ತು ಪತ್ರಕರ್ತ” ಎಂದು ಪರಿಚಯಿಸಿದ. ಅವರ ಸ್ನೇಹಶೀಲ ಮಾತು, ನಗು, ಸಣ್ಣ ತಮಾಷೆ ಖುಷಿಕೊಟ್ಟಿತು.  ಬಹುಬೇಗ ಅವರು ನನಗೂ ಆತ್ಮೀಯರಾದರು. ಅಣ್ಣ ಮತ್ತು ಜೈರಾಮ ಹೆಗಡೆಯವರು ಭೇಟಿಯಾಗಿ ಏಕವಚನದಲ್ಲಿ ಮಾತನಾಡಿಕೊಳ್ಳುವುದನ್ನು ನಾನು ಎಂದೂ ತಪ್ಪಿಸಿಕೊಳ್ಳುತ್ತಿರಲಿಲ್ಲ. ಅಣ್ಣನಿಗೆ ಏಕವಚನದಲ್ಲಿ ಮಾತನಾಡುವುದನ್ನು ಕೇಳಿಸಿಕೊಳ್ಳುವುದು ನನಗೆ ಯಾಕೋ ಯಾವತ್ತೂ ಖುಷಿಯ ಸಂಗತಿಯಾಗಿತ್ತು. -ಅಲ್ಲೊಂದು ಹುದ್ದೆ, ಅಂತಸ್ತಿನ ಯಾವ ಕಂದಕವೂ ಇಲ್ಲದ ಆತ್ಮೀಯ ವಾತಾವರಣ ನಿರ್ಮಾಣವಾಗುತ್ತದೆ ಎನ್ನುವ ಕಾರಣಕ್ಕಿರಬೇಕು. ಅವನಿಗೆ ಏಕವಚನದಲ್ಲಿ ಮಾತನಾಡುವ ಸಾಹಿತಿಗಳೆಂದರೆ ಜಯರಾಮ ಹೆಗಡೆಯವರೊಬ್ಬರೇ ಇರಬೇಕು ಎನ್ನುವುದು ನನ್ನ ನೆನಪು.
  ಜಯರಾಮ ಹೆಗಡೆಯವರು ಬಹುಶಃ ಒಂದೆರಡು ವರ್ಷ ನಾವೆಲ್ಲಾ  ಕಲಿತ ನಮ್ಮೂರಿನ ಎಸ್.ಕೆ.ಪಿ ಜೂನಿಯರ್ ಕಾಲೇಜಿನಲ್ಲಿ ಇಂಗ್ಲೀಷ್ ಅಧ್ಯಾಪಕರಾಗಿದ್ದರು. ಅದೊಂದು ಅನುದಾನಿತ ಖಾಸಗಿ ಕಾಲೇಜು. ‘ಸ್ವಲ್ಪ ಹೊಂದಾಣಿಕೆ ಮಾಡಿಕೊಂಡಿದ್ದರೆ ಆತ ಅಲ್ಲೇ ಇರಬಹುದಾಗಿತ್ತು’ ಎಂದು ಅಣ್ಣ ಹೇಳುತ್ತಿದ್ದ. ಅರೇಅಂಗಡಿ ಸಣ್ಣ ಊರಾಗಿರುವುದರಿಂದ ಅಲ್ಲಿರುವ ಬೆರಳೆಣಿಕೆಯಷ್ಟು ಸಾಹಿತ್ಯಾಸಕ್ತರು ಒಟ್ಟಾಗುವುದು ಸಹಜ. ಶಾಲೆ ಬಿಟ್ಟೊಡನೆ ಆ ಕಾಲದ ಪ್ರಸಿದ್ಧ ಅಧ್ಯಾಪಕ ಜಿ.ಆರ್ ಭಟ್ ಅವರ ರೂಮಿನಲ್ಲಿ ದಿನನಿತ್ಯ ಸಾಹಿತ್ಯ ಚರ್ಚೆ ಮತ್ತು ಕರ್ನಾಟಕ ಸಂಘದ ಕಾರ್ಯಕ್ರಮ, ತಾಳಮದ್ದಲೆ..ಇತ್ಯಾದಿÀ ರೂಪುರೇಷೆ ಸಿದ್ಧಗೊಳ್ಳುತ್ತಿತ್ತು. ಇದೂ ಒಂದು ರೀತಿಯಲ್ಲಿ ಧಾರವಾಡದಲ್ಲಿದ್ದಂತೆ ಸಣ್ಣ ಗೆಳೆಯರ ಬಳಗ. ಆ ಕಾಲದಿಂದಲೂ ಅವರು ನಮ್ಮ ಕುಟುಂಬದೊAದಿಗೆ ಆತ್ಮೀಯ ಸಂಬAಧ ಉಳಿಸಿಕೊಂಡು ಬಂದಿದ್ದರು.
  ನಾನು ಸಂಘಟನಾ ಕೆಲಸಕ್ಕೆ ಹಾಸನದ ಕಡೆ ಹೋದಾಗ ‘ಶಿರಸಿ’ ಅಥವಾ ‘ಉತ್ತರ ಕನ್ನಡ’ದ ಸುದ್ದಿ ಬರುತ್ತಿದ್ದಂತೆ ಹಲವು ಲೇಖಕರು, ಸಂಘಟನೆಯ ಮುಖಂಡರು ಜಯರಾವi ಹೆಗಡೆಯವರನ್ನು ವಿಚಾರಿಸುತ್ತಿದ್ದರು. ಅಲ್ಲಿ ಅವರು ರೈತ ಹೋರಾಟಗಾರರಾಗಿ, ಪತ್ರಿಕೆಯ ಸಂಪಾದಕರಾಗಿ ಒಳ್ಳೆಯ ಹೆಸರು ಸಂಪಾದಿಸಿದ್ದರು. ಇತ್ತೀಚೆಗೆ ಸಿರ್ಸಿಗೆ ಬಂದಾಗ ಭಾನು ಮುಷ್ತಾಕ್ ಅವರು ಹೆಗಡೆಯವರನ್ನು ಖುದ್ದಾಗಿ ಭೇಟಿಯಾಗಿ ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದನ್ನು ನೋಡಿದ್ದೇನೆ. ಅವರ ಪತ್ರಿಕಾ ವ್ಯವಸಾಯ ಅರ್ಥಪೂರ್ಣವಾಗಿ ಪ್ರಾರಂಭವಾಗಿದ್ದು ಅಲ್ಲೇ ಎಂದುಕೊಂಡಿದ್ದೇನೆ. ಅಲ್ಲಿಂದ ನಮ್ಮ ಜಿಲ್ಲೆಗೆ ಬಂದು ಅವರು ಜನಮಾಧ್ಯಮ ಪ್ರಾರಂಭಿಸಿ ಕಾಲು ಶತಮಾನಗಳು ಕಳೆದವು ಎನ್ನುವುದು ನಮಗೂ ಸಂಭ್ರಮದ ಸಂಗತಿ. ಮಾಧ್ಯಮ ಲೋಕದಲ್ಲಿ ಇದ್ದೆ ಅವರು ಅದರ ಮಿತಿಯನ್ನೂ ಅರಿತವರು ಮಾಧ್ಯಮಗಳು ವ್ಯಾಪಾರೀಕರಣಕ್ಕೆ ತೆರೆದುಕೊಂಡು ಕೆಟ್ಟ ಉದ್ಯಮದ ಸ್ವರೂಪ ಪಡೆದುಕೊಂಡಿರುವ (ಉದ್ಯಮ ಮತ್ತು ವ್ಯಾಪಾರೀಕರಣದಿಂದ ಬರುವ ಎಲ್ಲಾ ಅಪಮೌಲ್ಯಗಳಿಗೆ, ಅನೈತಿಕತೆಗೆ ಪಾಲುದಾರರಾಗುತ್ತಿರುವ) ಹೊತ್ತಿನಲ್ಲಿ ನಿಜವಾದ ಅರ್ಥದಲ್ಲಿ ಒಂದು ಜನಪರ, ಅಭಿವೃದ್ಧಿಶೀಲ ಪತ್ರಿಕಾ ವ್ಯವಸಾಯ ನಡೆಸಿದ ಜೈರಾಮ ಹೆಗಡೆಯವರನ್ನು ಅಭಿನಂದಿಸುವುದು ನನಗಂತೂ ಖುಷಿಯ ಸಂಗತಿ. ಆ ಮೂಲಕ ಪತ್ರಿಕಾ ವ್ಯವಸಾಯವನ್ನು ‘ಸೇವೆ’ ಅಂದುಕೊAಡಿರುವ ಕಾಲಘಟ್ಟದಿಂದ ‘ಉದ್ಯಮ’ ಎಂದುಕೊಳ್ಳುವ ಈವರೆಗಿನ ಒಟ್ಟೂ ಬೆಳವಣಿಗೆಯನ್ನು ಕಣ್ಮುಂದೆ ತಂದುಕೊಳ್ಳಲು ಸಾಧ್ಯ. ಜೈರಾಮ ಹೆಗಡೆಯವರ ‘ಆತ್ಮಕತೆ’ ಆಕಾಲ ಎದುರಿಸಿದ ಬಿಕ್ಕಟ್ಟುಗಳನ್ನು, ರೂಢಿಸಿಕೊಂಡ ರ‍್ಯಾಯಗಳನ್ನು ದಾಖಲಿಸುವ ಒಂದು ಚಾರಿತ್ರಿಕ ಬರಹ ಆಗಿರಬಹುದು.(ನಾನು ಬೇಗ ಓದಬೇಕು.) ಅವರ ಸಂಪಾದಕೀಯವನ್ನು ಒಟ್ಟಾಗಿ ನೋಡಿದರೂ ಈ ಹೊಳಹುಗಳನ್ನು ನೋಡಬಹುದು.
ತಾನೊಬ್ಬ ಪತ್ರಿಕೆಯ ಸಂಪಾದಕನೆನ್ನುವ ಯಾವ ಹಮ್ಮೂ ಇಲ್ಲದೆ ಹೆಗಡೆಯವರು ಶಿರಸಿಯಲ್ಲಿ ನಮ್ಮೆಲ್ಲ ಜನಪರ ಚಳುವಳಿಗಳ ಜೊತೆ ನಿಂತವರು. ಉತ್ತರ ಕನ್ನಡ ಜಿಲ್ಲೆಯಲ್ಲಿ ಕೋಮು ಸಂಘರ್ಷ, ಗಲಭೆ ಪ್ರಾರಂಭವಾದ ದಿನದಲ್ಲಿ ಒಂದು ಸೌಹಾರ್ದ ವಾತಾವರಣ ಸೃಷ್ಟಿಸುವ ಪ್ರಧಾನ ಕಾರಣಕ್ಕೆ ಹುಟ್ಟಿಕೊಂಡ ಲೇಖಕರು, ಪತ್ರಕರ್ತರು, ವಿವಿಧ ವಲಯದ ಚಿಂತಕರನ್ನು ಒಳಗೊಂಡ ಒದು ಸಾಂಸ್ಕೃತಿಕ ಸಂಘಟನೆಯಾದ  ‘ಚಿಂತನ ಉತ್ತರ ಕನ್ನಡ’ದ ಮೊದಲ ಸಮಾವೇಶದಲ್ಲಿ ಅವರು ಸಕ್ರಿಯವಾಗಿ ಪಾಲ್ಗೊಂಡಿದ್ದರು. ಚಿಂತನ ಕನ್ನಡ ಪುಸ್ತಕ ಮಳಿಗೆಯನ್ನು ಪಂಡಿತ್ ಗ್ರಂಥಾಲಯದ ಒಂದು ಭಾಗದಲ್ಲಿ ಪ್ರಾರಂಭಿಸಿದಾಗ, ಕಿರು ಪುಸ್ತಕ ಮಾಲೆಯನ್ನು ಪ್ರಾರಂಭಿಸಿದಾಗ  ಅವರು ಕಾರ್ಯಕರ್ತರಂತೆ ನಮ್ಮೊಂದಿಗೆ ಇದ್ದರು. ಸ್ವತಃ ಬಂದು ವರದಿ ಮಾಡಿದ್ದಿದೆ. ಜಯರಾವi ಹೆಗಡೆಯವರು ಸಂಘಟನೆ ಮುನ್ನೆಲೆಗೆ ತಂದ ವೈಚಾರಿಕತೆಯ ಜೊತೆಗೆ ಈವರೆಗೂ ನಿಂತರು. ಅವರೇ ಸಂಪಾದಕರಾಗಿರುವ ‘ಜನ ಮಾಧ್ಯಮ’ದಲ್ಲಿ ಪ್ರತಿ ಕಾರ್ಯಕ್ರಮಕ್ಕೂ ಅಂತಹ ದೊಡ್ಡ ಸ್ಥಳ ನೀಡಿದರು. ಜಿಲ್ಲೆಯಲ್ಲಿ ‘ಚಿಂತನ’ದ ಬೆಳವಣಿಗೆಯಲ್ಲಿ ಅವರ ಕೊಡುಗೆ ಕೂಡ ಮಹತ್ವದ್ದು. ಹಮ್ಮಿಕೊಂಡ ಕಾರ್ಯಕ್ರಮ ಮತ್ತು ಅದರ ಮಹತ್ವದ ಬಗ್ಗೆ ಸಂಪಾದಕೀಯ ಬರೆದು ಪ್ರೋತ್ಸಾಹಿಸಿದವರು. ಚಿಂತನದ ಮೊದಲ ಸಮಾವೇಶದಿಂದ ಮೊದಲ್ಗೊಂಡು ಮೊನ್ನೆ ಮೊನ್ನೆ ಶಿರಸಿಯಲ್ಲಿ ಸಂಘಟಿಸಿದ ‘ಸಂವಿಧಾನ ನಡೆ’ ಜಾಥಾ ಮತ್ತು ಸಮಾವೇಶದವರೆಗೆ ನಮ್ಮೊಂದಿಗಿದ್ದು ಅಗತ್ಯ ಸಲಹೆ ಸೂಚನೆ ನೀಡಿದವರು.
ಅಣ್ಣನೊಂದಿಗೆ ಅವರ ಪಯಣ ಅರೇಅಂಗಡಿಯ ಜೂನಿಯರ್ ಕಾಲೇಜಿನಿಂದ ಪ್ರಾರಂಭವಾಗಿ, ಅದು ಬಂಡಾಯ ಸಾಹಿತ್ಯ ಸಂಘಟನೆಯನ್ನು ಹಾಯ್ದು, ‘ಜನಮಾಧ್ಯಮ’ ಪತ್ರಿಕೆಯವರೆಗೂ ಪರಸ್ಪರ ಹೆಗಲ ಮೇಲೆ ಕೈ ಹಾಕಿಕೊಂಡೇ ಸಾಗಿತು. ಉತ್ತರ ಕನ್ನಡದಲ್ಲಿ ಬಂಡಾಯ ಸಾಹಿತ್ಯ ಸಂಘಟನೆಯನ್ನು ಕಟ್ಟುವಾಗ ಆರ್.ವಿ. ಭಂಡಾರಿ, ಜಿ.ಎಸ್. ಅವಧಾನಿ, ವಿ. ಜೆ. ನಾಯಕ, ಶಾಂತಾರಾಮ ನಾಯಕ, ವಿಷ್ಣು ನಾಯಕ, ವಿ. ಮುನಿವೆಂಕಟಪ್ಪ,  ಮಾಸ್ತಿ ಗೌಡ, ನಜೀರ್ ಚಂದಾವರ, ಕಶ್ಯಪ ಪರ್ಣಕುಟಿ, ಶಶಿಧರ್ ಭಟ್, ವಿಠ್ಠಲ ಪೇರುಮನೆ, ಬಿ.ಟಿ.ಶ್ರೀಪಾದ, ಸುಬ್ರಾಯ ಮತ್ತೀಹಳ್ಳಿ, ಪ್ರಕಾಶ ಕಡಮೆ, ಕೃಷ್ಣ ಹಿಚ್ಕಡ, ಮೋಹನ ಕುರುಡಗಿ, ಶಂಕರ..... ಮುಂತಾದವರೊಂದಿಗೆ ಜಯರಾಮ ಹೆಗಡೆಯವರೂ ಸಕ್ರಿಯರಾಗಿದ್ದರು. ಬಂಡಾಯ ಅನ್ನುವುದನ್ನು ಹೊಸತಲೆಮಾರಿನ ಬರಹಗಾರರ ಮನೋಧರ್ಮವಾಗಿಸಿದ ಶೇಯಸ್ಸು ಇವರೆಲ್ಲರಿಗೆ ಸೇರಬೇಕು. ಬೇರೆಬೇರೆ ಕಾರಣಕ್ಕೆ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುವ ಯಾವುದೇ ಸಂದರ್ಭವನ್ನು ಇವರು ಈಗಲೂ ಬಿಟ್ಟುಕೊಡುವವರಲ್ಲ. ಆಗ ಬಂಡಾಯ ಸಾಹಿತ್ಯ ಸಂಘಟಿಸುವ ಬಹುತೇಕ ಕವಿಗೋಷ್ಠಿಯಲ್ಲಿ (ಜಿಲ್ಲೆಯಲ್ಲಾದರೂ ಹಲವು ಬಾರಿ ಹೊರಜಿಲ್ಲೆಯಲ್ಲಾದರೂ) ಜಯರಾವi ಹೆಗಡೆಯವರ ಕವಿತೆ ಇರಲೇಬೇಕು. ಹಾಗಂತ ಹೆಸರಿಗಾಗಿ ಅವರೆಂದೂ ಹಪಹಪಿಸಿದವರಲ್ಲ. ಕರೆಯೋಲೆಯಲ್ಲಿ ಹೆಸರಿಲ್ಲದಿದ್ದರೂ ಕಾರ್ಯಕ್ರಮದಲ್ಲಿ ಇಡೀ ದಿನ ಹಾಜರಿದ್ದು ಎಲ್ಲರ ಮಾತು ಕೇಳುವ ಅಪರೂಪದ ಸಹೃದಯತೆ ಅವರದು. ಬಂಡಾಯ ಸಾಹಿತ್ಯ ಇಂದು ಸಂಘಟನಾ ರೂಪದಲ್ಲಿ ಶಿಥಿಲವಾಗಿದ್ದರೂ ಅದು ರೂಪಿಸಿದ ಆಲೋಚನಾ ಕ್ರಮ, ಜೀವಪರ ಕಾಳಜಿ ಈಎಲ್ಲಾ ಲೇಖಕರಲ್ಲಿ ಈಗಲೂ ಇರುವುದನ್ನು ಕಾಣುತ್ತೇವೆ. ಹಾಸನದಲ್ಲಿ ಪತ್ರಕರ್ತರಾಗಿ ರೂಢಿಸಿಕೊಂಡು ಬಂದ ಸಮಾಜವಾದಿ ಆಲೋಚನಾಕ್ರಮ ಬಂಡಾಯ ಚಳುವಳಿಯ ಜೊತೆ ಹೆಚ್ಚು ಗಟ್ಟಿಗೊಂಡಿತು. ಇದನ್ನು ಅವರ ಎಲ್ಲಾ ಕೃತಿಗಳಲ್ಲಿ, ಬರೆದ ಸಂಪಾದಕೀಯದಲ್ಲಿ ಸ್ಪಷ್ಟವಾಗಿಯೇ ಗುರುತಿಸಬಹುದು.
ನಾನು ವಿದ್ಯಾರ್ಥಿ ಸಂಘಟನೆಯಲ್ಲಿ (SFI) ಮತ್ತು ಯುವಜನ ಸಂಘಟನೆಯಲ್ಲಿ (DYFI) ಕೆಲಸ ಮಾಡುತ್ತಿದ್ದ ಕಾಲ. ಶಿರಸಿ ನಮ್ಮ ಕೇಂದ್ರಸ್ಥಾನ ಕೂಡ ಆಗಿತ್ತು. ಸಂಘಟನೆ ಹೆಚ್ಚು ಕ್ರಿಯಾಶೀಲವಾಗಿದ್ದು ಕೂಡ ಇಲ್ಲಿಯೇ. ಎಂಎಸ್ ಧಾರೇಶ್ವರ, ಮಂಜುನಾಥ ಪುಲ್ಕರ್, ಪಿ.ಜಿ. ಮಶಾಲ್ದಿ, ಬಂಗಾರೇಶ್ವರ ಗೌಡ......ಮುಂತಾದವರು ನಡೆಸಿದ ಹೋರಾಟಗಳಿಂದ ಈ ನೆಲ  ಎಡಪಂಥೀಯ ಆಲೋಚನೆಯ ಸಂಘಟನೆ ಕಟ್ಟಲು ಉಳಿದ ಪ್ರದೇಶಕ್ಕಿಂತ ಹೆಚ್ಚು ಪೂರಕವಾಗಿತ್ತು. ನಮ್ಮ ಜಿಲ್ಲಾ ಕೇಂದ್ರ ಕಾರವಾರವಾದರೂ ಒಂದು ರೀತಿಯಿಂದ ಶಿರಸಿಯೇ ಕೇಂದ್ರವಾಗಿತ್ತು. ಹಾಗಾಗಿಯೇ ಜಿಲ್ಲೆಯ ಅತಿ ಹೆಚ್ಚು ಪತ್ರಿಕೆಗಳು ನಡೆಯುತ್ತಿದ್ದುದು ಶಿರಸಿಯಲ್ಲಿಯೆ. ಆಗ ಜಯರಾಮ ಹೆಗಡೆಯವರೊಂದಿಗೆ ಹೆಚ್ಚು ಸಂಪರ್ಕ ಬಂತು. ಯಾವುದೇ ಕಾರ್ಯಕ್ರಮದ ಸುದ್ದಿ ನೀಡಲು, ಹೇಳಿಕೆ ನೀಡಲು ಜನಮಾಧ್ಯಮ ಮತ್ತು ಮುನ್ನಡೆ ಪತ್ರಿಕಾ ಕಚೇರಿಗೆ ಹೋಗುತ್ತಿದ್ದೆವು. ಕೆಲವು ಬಾರಿ ಪತ್ರಿಕಾ ಹೇಳಿಕೆಯನ್ನು ಬರೆಯುವುದು ಹೇಗೆ ಎಂದು ನಮಗೆ ಪಾಠ ಮಾಡಿದ ನೆನಪು ಇದೆ. ಹಾಗೆ ಸುದ್ದಿ ಬಂದ ಪತ್ರಿಕೆಯ ಒಂದೆರಡು ಪ್ರತಿ ಕೊಡುತ್ತಿದ್ದರು. ನಮಗೆ ಪತ್ರಿಕೆ ಮುದ್ರಣ ಗೊಳ್ಳುವ ಖಾಲಿ ಪೇಪರ್ ಮೇಲೆ ಕಣ್ಣು. ಪೋಸ್ಟರ್ ಬರೆಯಲು ಇದು ಉಪಯೋಗ.  ಅಂಗಡಿಯಿAದ ಹಣ ಕೊಟ್ಟು ಖರೀದಿ ಮಾಡುವಷ್ಟು ಸಾಮರ್ಥ್ಯ ಆಗ ಇರಲಿಲ್ಲ. ಸಂಜೆ ಬಂದಾಗ ಅವರೊಂದಿಗೆ ಮಾತನಾಡಿದ್ದು, ಅವರು ನನ್ನ ಅಪ್ಪನ ಬಗ್ಗೆ ವಿಚಾರಿಸಿದ್ದನ್ನು ನೋಡಿ ಈತ ಸಂಪಾದಕರಿಗೆ ಹತ್ತಿರದವನೆಂದುಕೊAಡು ಅಲ್ಲಿಯ ಕೆಲಸಗಾರರು ಪೇಪರ ಕೊಡುತ್ತಿದ್ದರು. ಹಾಗಾಗಿ ಸಂಪಾದಕರಿದ್ದರೆ ಸುದ್ದಿ ಕೊಡುತ್ತಿದ್ದೆವು. ಇಲ್ಲದಿದ್ದರೆ ಖಾಲಿ ಪೇಪರ್ ಎತ್ತಿಕೊಂಡು ಬರುತ್ತಿದ್ದೆವು. ಶಿರಸಿಯ ಉಳಿದೆರಡು ಪತ್ರಿಕೆಗಳು ಪ್ರತಿಗಾಮಿ ಆಲೋಚನೆಯನ್ನು ಹಾಸಿ ಹೊದೆದುಕೊಂಡಿರುವುದರಿAದ ನಾವು ಜನ ಮಾಧ್ಯಮದ ಕಟ್ಟಾ ಬೆಂಬಲಿಗರಾಗಿದ್ದೆವು. ನಮ್ಮ ಸುದ್ದಿ ಸರಿಯಾಗಿ ಬರದಿದ್ದಾಗ ಜಗಳವಾಡಿದ್ದೂ ಇದೆ. ಈ ಜಗಳ ನಮ್ಮ ನಡುವಿನ ವಿಶ್ವಾಸಕ್ಕೆ, ಪ್ರೀತಿಗೆ ಯಾವ ತಡೆಯನ್ನು ಒಡ್ಡಿಲ್ಲ. ಈ ಜಗಳ ತಾತ್ಕಾಲಿಕವಾಗಿತ್ತು.  ಅವರ ಆಲೋಚನೆ  ಪೂರ್ತಿ ಕೆಂಪಲ್ಲದಿದ್ದರೂ ಆಗಾಗ ಅವರು ಹಾಕುವ ಕೆಂಪಂಗಿ ಕೂಡ ಅವರನ್ನು ಹೆಚ್ಚು ಪ್ರೀತಿಸುವಂತೆ ಮಾಡಿರಬೇಕು.
  ಆಮೇಲೆ ನಾನು ಸಿದ್ದಾಪುರ ಕಾಲೇಜಿಗೆ ಉಪನ್ಯಾಸಕನಾಗಿ ಬಂದಮೇಲೆ ಸಂಘಟನೆಯ ಕೆಲಸಕ್ಕಾಗಿ ಹೆಚ್ಚೆಚ್ಚು ಶಿರಸಿ ಕಡೆಗೆ ಇರುತ್ತಿದ್ದೆ. ಅವರ ಕಚೇರಿಯಲ್ಲಿ ಭೇಟಿಯಾಗಿ ಮಾತುಕತೆ ನಡೆಸುತ್ತಿದ್ದೆ. ಸಾಮಾನ್ಯವಾಗಿ ಚರ್ಚೆ ರಾಜಕಾರಣದ ಸುತ್ತಲೇ ಇರುತ್ತಿತ್ತು. ‘ನಿಮ್ಮ ಪತ್ರಿಕೆಯನ್ನು ಸ್ವಲ್ಪ ಆಕರ್ಷಕವಾಗಿ ಮಾಡಿ, ಅದರ ಪ್ರಸರಣವೂ ಹೆಚ್ಚಿಸಬಾರದೇ?’ ಎಂದು ಹಲವು ಬಾರಿ ಕೇಳಿದ್ದೆ. ಮುಗುಳ್ನಕ್ಕಿದ್ದರು. “ಪತ್ರಿಕೆಗಳು ಈಗ ಬದುಕಿಕೊಳ್ಳಲು ಪತ್ರಿಕಾ ಧರ್ಮವನ್ನೂ ಅಲಕ್ಷಿಸಿ ತಮ,ಗೆ ಬದುಕಲು ಬೇಕಾದ ಮಾರ್ಗ ಹಿಡಿದಿವೆ; ಜಾಹಿರಾತಿಗಾಗಿ ಸತ್ಯ ಮರೆಮಾಚುವುದು, ರಾಜಕೀಯ ಪಕ್ಷಗಳಿಗೆ ತಮ್ಮ ಪತ್ರಿಕೆಯನ್ನು ಮುಖವಾಣಿಯನ್ನಾಗಿಸುವುದು ಅಥವಾ ರಾಜಕಾರಣಿಗಳಿಗೆ ಪತ್ರಿಕೆ ಮಾರಿ ತಾವು ಹೆಸರಿಗೆ ಮಾತ್ರ ಸಂಪಾದಕರಾಗಿ ರಾಜಕಾರಣಿಗಳ ಬಾಲಬಡುಕರಾಗುವುದು; ಹಣ ಮಾಡುವುದೇ ಪತ್ರಿಕೋದ್ಯಮದ ಮುಖ್ಯಗುರಿಯೇ ಹೊರತು ಸಮಾಜಸುಧಾರಣೆಯಲ್ಲವೆಂದು ಬಲವಾಗಿ ನಂಬಿರುವುದು; ಈ ವಿಷವೃತ್ತದಲ್ಲಿ ಪತ್ರಿಕೆಗಳಿರುವಾಗ ಯಾರಾದರೂ ಸಮಾಜದ ಓರೆಕೋರೆ ಸರಿಪಡಿಸುವ ಉದ್ದೇಶದ ಪತ್ರಕರ್ತನಿದ್ದರೆ ಆತ ಪತ್ರಿಕೆ ಮುಚ್ಚಬೇಕು ಅಥವಾ ಆತ್ಮ ಹತ್ಯೆ ಮಾಡಿಕೊಳ್ಳಬೇಕು ಇಂಥ ಪರಿಸ್ಥಿತಿ ಇದೆ.(೧೭-೨-೨೦೦೩ರಂದು ಬರೆದ ಸಂಪಾದಕೀಯದಿಂದ) ಆ ಮುಗುಳ್ನಗುವಿನಲ್ಲೂ ಹಣಕಾಸಿನ ಬಿಕ್ಕಟ್ಟಿನಿಂದ ಪತ್ರಿಕೆಯನ್ನು ಅಂದುಕೊಂಡಂತೆ ಬೆಳೆಸಲಾರದ ಅಸಹಾಯಕತೆಯೂ ತ್ತು ನೈತಿಕತೆಯನ್ನು ಕಳೆದುಕೊಳ್ಳುತ್ತಿರುವ ಈ ವೃತ್ತಿಯ ಜೊತೆ ಬಹುದಿನ ಏಗಲಾರದ ಮನೋಸ್ಥಿತಿಗೆ ಸವರು ಬಂದಿದ್ದರು ಎನ್ನುವುದು ಈ ಮೇಲಿನ ಅವರ ಮಾತು ಧ್ವನಿಸುತ್ತದೆ. ಹಲವು ಕನಸುಗಳೊಂದಿಗೆ ತಾನೇ ಆಯ್ಕೆ ಮಾಡಿಕೊಂಡು ಮುನ್ನಡೆಸಿದ, ಬದುಕಾಗಿಸಿಕೊಂಡ ಪತ್ರಿಕೆಯೊಂದರ ಮಾಲಿಕತ್ವವನ್ನು ಇಳಿ ವಯಸ್ಸಿನಲ್ಲಿ  ಬೇರೆಯವರಿಗೆ ಕೊಟ್ಟಾಗಲಂತೂ ನನಗೆ ತುಂಬಾ ಬೇಸರವಾಗಿತ್ತು. ಅದನ್ನು ಹಲವುಬಾರಿ ಅವರಲ್ಲಿ ತೋಡಿಕೊಂಡಿದ್ದೆ ಕೂಡ. ಆದರೆ ಅವರ ನೋವನ್ನು ಕೆದಕುವ ಮನಸ್ಸಾಗಿರಲಿಲ್ಲ.
  ಇತ್ತೀಚಿಗಂತೂ ಶಿರಸಿಯನ್ನು ಕೋಮುವಾದ ಮತ್ತು ಮೂಲಭೂತವಾದದ ಪ್ರಯೋಗಶಾಲೆಯನ್ನಾಗಿಸುವ ಕೆಲಸ ವ್ಯವಸ್ಥಿತವಾಗಿ ನಡೆಸುತ್ತಿರುವುದು ಪ್ರಜ್ಙಾವಂತರ ಗಮನಕ್ಕೆ ಬಂದಿರುತ್ತದೆ. ಇದರ ಹಿಂದೆ ಸಂಸ್ಕೃತಿಯ ಕುರಿತ ಪ್ರೀತಿ, ಅಭಿಮಾನಕ್ಕಿಂತ ಚುನಾವಣಾ ರಾಜಕೀಯದ ಹುನ್ನಾರವೇ ಹೆಚ್ಚಿರುವುದು. ಇಂದಿನ ಈ ಬೆಳವಣಿಗೆಗೆ ಹತ್ತಾರು ವರ್ಷದ ಇತಿಹಾಸವಿದೆ. ಇದಕ್ಕೆ ಶಿರಸಿಯ ಕೆಲವು ಪತ್ರಿಕೆಯ ಕೊಡುಗೆಯೂ ಇದೆ. ಜಿಲ್ಲೆಯ ಸೌಹಾರ್ದ ನೆಲೆಗೆ ಭಂಗ ತರುವ ಕೆಲಸ ನಡೆದಾಗಲೆಲ್ಲ ಜೈರಾಮ ಹೆಗಡೆಯವರು ಎಚ್ಚರಿಸುವ ಕೆಲಸ ಮಾಡುತ್ತಲೇ ಬಂದಿದ್ದಾರೆ. “ಕಾಲಕಾಲಕ್ಕೆ ಧರ್ಮಗ್ರಂಥಗಳ ಪುನರ್ ಮೌಲ್ಯೀಕರಣ ಕೂಡ ಆಗುತ್ತಲೇ ಹೋಗಬೇಕಾಗುತ್ತದೆ.......ವೈಜ್ಞಾನಿಕ ಬೆಳವಣಿಗೆಯ ಬೆಳಕಿನಲ್ಲಿ ಧರ್ಮಗ್ರಂಥಗಳ ಪುನರ್ ಮೌಲ್ಯೀಕರಣಕ್ಕೆ ತೊಡಗಬೇಕಾಗಿದೆ. ಯಾಕೆಂದರೆ ವಿಜ್ಞಾನ ಮನುಷ್ಯನಿಗೆ ವರವಾಗುವ ಜೊತೆಗೆ ಅನೇಕ ಹಾನಿ ಮಾಡಲು ಕಾರಣವಾಗಿದ್ದರೂ ಅದು ಸತ್ಯವಾಗಿದೆ....ಎಲ್ಲಾ ಧರ್ಮಗ್ರಂಥಗಳನ್ನು ರಚಿಸಿದವನು ಮನುಷ್ಯನೇ ವಿನಃ ದೇವರಲ್ಲ.”(ಆಯ್ದ ಸಂಪಾದಕೀಯಗಳು; ೨೦೧೬;ಪು.೨೦೭-೮) ಎನ್ನುವ ನಿಲುವಾಗಲೀ, “ಹಿಂದೂ ಧರ್ಮದ ಪ್ರತಿಪಾದಕರು ಬೇರೆ ಧರ್ಮಗಳ ಬಗ್ಗೆ ಅಸಹನೆ ತೋರುವ ಮೊದಲು ಹಿಂದೂ ಧರ್ಮದಲ್ಲಿರುವ ಜಾತಿಗಳಲ್ಲಿನ ಮೇಲು ಅಸಮಾನತೆ ಹೋಗಲಾಡಿಸಲು ಏನು ಕೆಲಸ ಮಾಡುತ್ತಿದ್ದಾರೆ? ಎಂಬ ಸಮಯದಲ್ಲಿ ಸಹಜವಾಗಿ ಏಳುತ್ತದೆ.”(ಅದೇ:೨೦೬) ಎನ್ನುವ ಮೂಲಭೂತ ಪ್ರಶ್ನೆ ಎತ್ತುವ ಅವರ ಸ್ವಭಾವವಾಗಲೀ “ ಹಿಂದೂ ಧರ್ಮದೊಳಗಿನ ದೋಷವನ್ನು ಮೊದಲು ಸರಿಪಡಿಸಿಕೊಳ್ಳುವ ಪ್ರಯತ್ನಕ್ಕಿಳಿಯಬೇಕು. ಮತಾಂತರ ವಿರುದ್ಧ ವೀರಾವೇಶ ಮಾತಾಡುವುದರ ಬದಲು ಹಿಂದೂ ಧರ್ಮದಲ್ಲಿ ಶತಶತಮಾನಗಳಿಂದ ನಡೆದುಕೊಂಡು ಬಂದಿರುವ ಜಾತಿಯ, ಮೇಲು, ಕೀಳು, ಅಸಮಾನತೆ, ಶೋಷಣೆ, ಬಡತನ ನಿವಾರಣೆಗೆ ಸಕ್ರಿಯವಾಗಿ ಕೆಲಸ ಮಾಡುವುದು ಅಪೇಕ್ಷಣೀಯ.ಮುಖ್ಯವಾಗಿ ಹಿಂದೂ ಧರ್ಮದಲ್ಲಿ ಪಂಚಮರ ಎಂದು ಕರೆಸಿಕೊಳ್ಳುವ ದಲಿತರ ಶೋಷಣೆ ಅವರ ಮೇಲಿನ ಹಲ್ಲೆ, ಕೀಳು ಭಾವನೆ ನಿಲ್ಲಿಸುವಂತೆ ನೋಡಿಕೊಳ್ಳಬೇಕಾಗಿದೆ.” (ಅದೇ:೧೮೩) ಎಂದು ಕೋಮುವಾದಿ ಶಕ್ತಿಗಳಿಗೆ ಹಾಕುವ ಎದುರೇಟಾಗಲೀ ಇದು ಜೈರಾಮ ಹೆಗಡೆಯವರು ಅನುದಿನ ಕಾಪಿಟ್ಟುಕೊಂಡ ಬಂದ ಸಾಮಾಜಿಕ ಎಚ್ಚರ. ಕೋಮುವಾದವನ್ನು ಮಾತ್ರವಲ್ಲ ಜಾತಿವಾದ, ಕಂದಾಚಾರ, ಭ್ರಷ್ಟಾಚಾರ, ಪ್ರಜಾಪ್ರಭುತ್ವ ವಿರೋಧಿ ನಡವಳಿಕೆ, ಸಂವಿಧಾನ ವಿರೋಧಿ ನಡವಳಿಕೆ, ಜಾಗತೀಕರಣ... ಹೀಗೆ ಅರ್ಥಪೂರ್ಣವಾಗಿ  ವಿರೋಧಿಸುತ್ತಲೇ ಬಂದವರು. ಸಾಮಾನ್ಯವಾಗಿ ಪತ್ರಿಕೆಯ ಸಂಪಾದಕರಾದ ಸಂದರ್ಭದಲ್ಲಿ ಕೆಲವರು ಹಣದ ಆಮಿಷಕ್ಕೆ, ಸ್ಥಾನದ ಮತ್ತು ಆಸ್ತಿಯ ಆಮಿಷಕ್ಕೆ ಬಲಿಯಾಗುತ್ತಾರೆ. ಆದರೆ ಜಯರಾಮ ಹೆಗಡೆಯವರ ಪತ್ರಿಕಾ ಕಛೇರಿ ಪ್ರಾರಂಭದಿಂದ ಕೊನೆಯವರೆಗೂ ಯಾವ ವೈಭವವಿಲ್ಲದೆ - ಹಣ ಮಾಡಿದ ಒಂದೇ ಒಂದು ಕುರುಹೂ ಇರದಂತೆ- ಹಾಗೇ ಇತ್ತು. ಬಡತನವೇ ರೂಪುತಳೆದಂತೆ. ಶ್ರೀಮಂತಿಕೆಗೆ ಸಡ್ಡು ಹೊಡೆದಂತೆ.
ವಿಠ್ಠಲ ಭಂಡಾರಿ, ಕೆರೆಕೋಣ

Friday, 15 May 2020

‘ಆತ್ಮ ನಿರ್ಭರ್ ಅಭಿಯಾನ್’* *ಮತ್ತು ಭಾಷೆ, ಅಧಿಕಾರ, ಹೆಜಮನಿ*

*‘ಆತ್ಮ ನಿರ್ಭರ್ ಅಭಿಯಾನ್’* *ಮತ್ತು  ಭಾಷೆ, ಅಧಿಕಾರ, ಹೆಜಮನಿ*
 
ದೇಶದಲ್ಲಿ ಕಳೆದೊಂದು ದಿನದಲ್ಲಿ, ಮಾಧ್ಯಮಗಳಲ್ಲಿ ಮತ್ತು ಜನರ ನಡುವೆ ಮುಂಚೂಣಿಗೆ ಬಂದ ಪದಗುಚ್ಚವೆಂದರೆ ‘ಆತ್ಮ ನಿರ್ಭರ ಅಭಿಯಾನ್’. ಪ್ರಧಾನ ಮಂತ್ರಿಗಳು ದೇಶವನ್ನು ಉದ್ದೇಶಿಸಿ ಮಾತನಾಡುತ್ತ ಬಳಸಿದ ಈ ಪದಗುಚ್ಚ ಕೇಳುಗರಲ್ಲಿ ಅಚ್ಚರಿ ಹುಟ್ಟಿಸಿತು. ಮಾಧ್ಯಮಗಳೂ ಕೂಡ ನಿಧಾನವಾಗಿ ಇದಕ್ಕೆ ಅರ್ಥ ಹೇಳತೊಡಗಿದವು. ಇನ್ನು ಪ್ರಧಾನಿಗಳ ನಡೆನುಡಿಗಳನ್ನು ನಿತ್ಯ ಹಿಂಬಾಲಿಸುವ ಜನರಲ್ಲಿಯೂ ಅದು ಗೊಂದಲು ಮೂಡಿಸಿತು. ಅವರನ್ನು ವಿರೋಧಿಸುವ ಮತ್ತು ಟೀಕಿಸುವವರಲ್ಲಿಯೂ ಗೊಂದಲ ಮೂಡಿಸಿತು. ಇದು ತಮಾಶೆಗಳಿಗೆ, ವ್ಯಂಗ್ಯಚಿತ್ರಗಳಿಗೆ ಅವಕಾಶ ಒದಗಿಸಿತು. 

ಇದು ಸಾಮಾಜಿಕ ಮಾಧ್ಯಮಗಳಲ್ಲಿ ವಿಪರೀತ ಚರ್ಚೆಯಾಗಿ ದೊಡ್ಡ ಸಂಚಲನ ಸೃಷ್ಟಿಸಿತು. ಇದು ದೇಶದ ಹಣಕಾಸು ಸಚಿವರಿಗೂ ತಲುಪಿ ಅವರೂ ಕೂಡ ಆರ್ಥಿಕ ನೆರವಿನ ಯೋಜನೆಗಳನ್ನು ಘೋಷಿಸಲು ನಡೆಸಿದ ಪತ್ರಿಕಾ ಗೋಷ್ಟಿಯಲ್ಲಿ ವಿವರಣೆ  ಕೊಟ್ಟರು. ತಾವು ದಕ್ಷಿಣ ಭಾರತದಿಂದ ಬಂದಿದ್ದು ದಕ್ಷಿಣ ಭಾರತದ ಭಾಷೆಗಳಾದ ಕನ್ನಡ ತೆಲುಗು ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಅದಕ್ಕಿರುವ ‘ಅರ್ಥ’ಗಳನ್ನು ವಿವರಿಸಿದರು. ಅಷ್ಟರಮಟ್ಟಿಗೆ ಅಪರಿಚಿತವಾದ ಪದಗುಚ್ಚ ಗೊಂದಲ ಹುಟ್ಟಿಸಿದ್ದು ನಿಜ ಎಂಬುದು ಸಾಬೀತಾಯಿತು. ಪ್ರಧಾನಿಗಳು ಏನು ಹೇಳಿದರೂ ಎಂಬುದಕ್ಕಿಂತ ಹೇಳಿದ್ದಕ್ಕೆ ಬಳಸಿದ ಪದಗಳ ಬಗೆಗೆ ಹೆಚ್ಚು ಚರ್ಚಿಸಿದ್ದು ವಿಚಿತ್ರ ಸಂಗತಿ.

ಈ ಪದಗುಚ್ಚದ ವಿಷಯದಲ್ಲಿ ಗೊಂದಲ ಮೂಡಲು ಕಾರಣವೇನು? ಇದಕ್ಕೆ ಕಾರಣವಿದೆ. ಅದೇನೆಂದರೆ, ಈ ಪದಗುಚ್ಚವು ಮೂಲತಃ ಸಂಸ್ಕøತದ್ದು. ಇದನ್ನು ಯಾವುದೇ ಭಾರತೀಯ ಭಾಷೆಗಳಲ್ಲಿ ಜನಸಾಮಾನ್ಯರು ಬಳಸುವಂತೆ ಕಾಣುತ್ತಿಲ್ಲ. ಸಂಸ್ಕøತ ಪದಕೋಶದಲ್ಲಿರುವ ಗ್ರಂಥಸ್ತವಾದ ಪದಗುಚ್ಚ ಇದು. ಪಂಡಿತರು ವೈಯಾಕರಣಿಗಳು ಬಳಸಬಹುದಾದ ಪದ. ಹಾಗಾಗಿ ಈ ಪದವನ್ನು ಪ್ರಧಾನಿಗಳು ಬಳಸಿದಾಗ ಜನರು ತಬ್ಬಿಬ್ಬಾದರು. ಸಂಸ್ಕøತ ಪದವಾದುದರಿಂದ ಕನ್ನಡ ನಿಘಂಟಿನಲ್ಲಿ ‘ಆತ್ಮ’ ‘ನಿರ್ಭರ’ ಪದಗಳಿಗೆ ಅರ್ಥ ಹುಡುಕಿದಾಗ ಅಲ್ಲಿ ನಿರ್ಭರ ಪದಕ್ಕೆ ‘ವೇಗ, ರಭಸ, ಕ್ರೌರ್ಯ, ಹೆಚ್ಚಾದ, ಪೂರ್ಣವಾದ, ತುಂಬಿದ, ಅಧಿಕ’ ಎಂಬ ಅರ್ಥಗಳು ಕಾಣಿಸಿದವು! ಇನ್ನು ಆತ್ಮ ಪದಕ್ಕೆ ನಾನಾರ್ಥಗಳಿದ್ದು ಅವು ಕೂಡ ಸರಿಹೊಂದಲಿಲ್ಲ. ಯಾವ ಅರ್ಥಗಳೂ ಪ್ರಧಾನಿಗಳು ಬಳಸಿದ ಅರ್ಥಕ್ಕೆ ಸಮವಾಗಿ ಕಾಣಿಸಲಿಲ್ಲ. ಕೊನೆಗೆ ಮಾಧ್ಯಮಗಳು ಸೆಲ್ಪ್ ರಿಲಯನ್ಸ್, ಸ್ವಾವಲಂಬಿ ಎಂದು ಬಳಸಲು ತೊಡಗಿದ ನಂತರವಷ್ಟೇ ‘ಆತ್ಮ ನಿರ್ಭರ್’ ಪದಗುಚ್ಚಕ್ಕೆ ಒಂದು ಅರ್ಥ ‘ಪ್ರಾಪ್ತ’ವಾಗತೊಡಗಿತು.

ಅಂದರೆ ಜನಸಾಮಾನ್ಯರಲ್ಲಿ ಜನಪ್ರಿಯವಾಗಿ ಬಳಕೆಯಲ್ಲಿ ಇಲ್ಲದ ಪದಗಳನ್ನು ಹುಡುಕಿ ಏಕಾಏಕಿ ಬಳಸಿದಾಗ ಆಗಬಹುದಾದ ಸಂವಹನದ ತೊಡಕುಗಳೇನು? ಎಂಬುದು ಇದರಿಂದ ತಿಳಿಯುತ್ತದೆ. ಹಾಗೆಯೇ ಇದೇ ಪದಗುಚ್ಚವನ್ನು ಪ್ರಧಾನಿಗಳಲ್ಲದೆ ಬೇರೆ ಯಾರೇ ಆಗಿದ್ದರೂ ಆ ಪದವನ್ನು ಬಳಸಿದ್ದರೆ ಇದರ ಬಗೆಗೆ ಇಷ್ಟೊಂದು ಚರ್ಚೆ ನಡೆಯುತ್ತಿತ್ತೇ? ಖಂಡಿತವಾಗಯೂ ಇಲ್ಲ. ಅಂದರೆ ಅಧಿಕಾರದಲ್ಲಿರುವವರು ಬಳಸುವ ಭಾಷೆ, ಅದರ ನುಡಿಗಟ್ಟುಗಳು ಹೇಗೆ ಜನರನ್ನು ಪ್ರಭಾವಿಸುತ್ತವೆ; ಅವರ ಮಾನಸಕ್ಕೆ ಇಳಿಯುತ್ತವೆ; ಅಲ್ಲಿ ಅವು ಸ್ಥಾನಪಡೆದು ಮನಸ್ಸನ್ನು ಆಳುತ್ತವೆ ಎಂಬುದು ಮುಖ್ಯ. ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ, ಇದು ಪ್ರಧಾನಿಗಳು ಪ್ರಾಸಂಗಿಕವಾಗಿ ಬಳಸಿದ ಪರಿಭಾಷೆಯಲ್ಲ. ಬದಲಿಗೆ ಬಹಳ ಉದ್ದೇಶಪೂರಕವಾಗಿ, ಪೂರ್ಣ ಸಿದ್ದತೆಯೊಂದಿಗೆ ಅದಕ್ಕೆ ರಾಜಕೀಯಾರ್ಥಿಕ ಅರ್ಥದ ಲೇಪನಗಳನ್ನು ಕೊಟ್ಟು ಖಚಿತ ಉದ್ದೇಶದೊಂದಿಗೆ ಬಳಸಿದ ಪದಗುಚ್ಚ. 

ಇಲ್ಲಿ ಅಧಿಕಾರಸ್ಥರು ತಾವು ಜನರಿಗೆ ಅರ್ಥವಾಗುವ ಭಾಷೆಯನ್ನು ಬಳಸಬೇಕು ಎಂಬುದಕ್ಕಿಂತ ತಾವೂ ಏನು ಹೇಳಬೇಕು ಎಂದು ಬಯಸುತ್ತಾರೆಯೋ ಅದನ್ನು ಮಾತ್ರವೇ ಬಳಸುತ್ತಾರೆ. ಅಧಿಕಾರದಲ್ಲಿರುವವರು ಹಾಗೆ ಬಳಸಿದ ಮತ್ತು ಚಿಂತಿಸಿದ ವಿಚಾರಗಳೇ ಜನರ ಮನದಲ್ಲಿ ಬಲವಾಗಿ ಬೇರೂರುತ್ತವೆ. ಜನರಿಗೆ ಅರ್ಥವಾಗಬೇಕು ಎಂಬುದಕ್ಕಿಂತ ತಾವು ಏನನ್ನು ಅರ್ಥಪಡಿಸಲು ಬಯಸುತ್ತಾರೆಯೋ ಅದನ್ನು ಹೇರುತ್ತಾರೆ ಎಂಬುದು ನಿಜ.

ಹಾಗೆ ಬೇರೂರುವ ಹೊತ್ತಿನಲ್ಲಿ ಅದು ಕೇವಲ ಪದವಾಗಿ ಬೇರೂರುವುದಿಲ್ಲ. ಬದಲಿಗೆ ಅದು ತಿಳುವಳಿಕೆಯಾಗಿ, ವಿಚಾರಧಾರೆಯಾಗಿ, ತತ್ವವಾಗಿ ಬೇರೂತ್ತದೆ. ಮತ್ತು ನಂತರ ಜನರ ಮನಸ್ಸನ್ನು ಆಳುತ್ತದೆ ಮತ್ತು ನಿಯಂತ್ರಿಸುತ್ತದೆ. ಜನರ ಭಾಷೆ ಅಧಿಕಾರಸ್ಥರ ಟಂಕಸಾಲೆಯಲ್ಲಿ ಹೇಗೆ ಟಂಕೀಕರಣಗೊಳ್ಳುತ್ತದೆ ಎಂಬುದಕ್ಕೆ ಕೂಡ ಇದು ಒಳ್ಳೆಯ ಎತ್ತುಗೆ. ಅಧಿಕಾರಸ್ಥರನ್ನು ನಂಬುವ ಮತ್ತು ಅನುಸರಿಸುವ ಜನರು ಇಂತಹ ಟಂಕಿತ ಪದಗುಚ್ಚಗಳನ್ನು ಉರುಹೊಡೆದು ಉಚ್ಚರಿಸುವುದೂ ಉಂಟು. ಆದರೆ ಈ ಬಗೆಗೆ ಅಧಿಕಾರಸ್ಥರನ್ನು ಅನುಸರಿಸುವ ಜನರಿಗೆ ಎಚ್ಚರವಿರುವುದಿಲ್ಲ. ಅವರನ್ನು ಕುರುಡಾಗಿ ನಂಬುತ್ತಿರುತ್ತಾರೆ. ಇಂತಹ ನಂಬಿಕೆಗಳನ್ನು ಹುಟ್ಟಿಸಲೆಂದೇ ಅಪರಿಚಿತವಾದ ಯಾರಿಗೂ ಸುಲಭಕ್ಕೆ ಅರ್ಥವಾಗದಂತಹ ಭಾಷೆಯನ್ನು ಪ್ರಭುತ್ವ ಬಳಸುತ್ತಲೇ ಇರುತ್ತದೆ. ಈಚೆಗೆ ಭಾರತೀಯ ಸಮಾಜದಲ್ಲಿ ಇಂತಹ ಪದಗುಚ್ಚಗಳನ್ನು ಒಂದರ ಮೇಲೆ ಒಂದು ಬಂಡೆಗಳನ್ನು ಮತ್ತೆ ಮತ್ತೆ ಎಸೆಯಲಾಗುತ್ತದೆ. ಹಾಗೆ ಎಸೆದ ಮೇಲೆ ಅವುಗಳಿಗೆ ಅರ್ಥದ ಬಣ್ಣ ಕಟ್ಟಲಾಗುತ್ತಿದೆ. ಇಂತಹ ಉರು ಹೊಡೆದ ಪಾಠಗಳು ಸಮಾಜವನ್ನು ನಿಡುಗಾಲದಲ್ಲಿ ಅಪಾಯಕ್ಕೆ ತಳ್ಳುತ್ತವೆ. 
 
ಮೇಲೆ ಹೇಳಿದಂತೆ ಇದೇ ರೀತಿಯಲ್ಲಿ ಒಬ್ಬ ಸಾಮಾನ್ಯ ವ್ಯಕ್ತಿ ಯಾವುದೇ ಒಂದು ಹೊಸ ಭಾಷೆ, ಪದ ಇಲ್ಲವೆ ಪದಗುಚ್ಚವನ್ನು ಬಳಸಿದರೆ ಅದು ವೇಗವಾಗಿ ಮುಂಚೂಣಿಗೆ ಬರಲು ಸಾಧ್ಯವೇ? ಅದಕ್ಕೆ ಜನಮಾನ್ಯತೆ ದೊರೆಯುವುದೇ? ಸಾಧ್ಯವೇ ಇಲ್ಲ. ಒಂದು ವೇಳೆ ಅಂತಹ ಪದಗುಚ್ಚವನ್ನು ಜನರು ಬಳಸಿದರೂ ಕೂಡ ಅದು ಚಲಾವಣೆಯಲ್ಲಿ ಉಳಿಯಲು ಸುದೀರ್ಘ ಕಾಲಬೇಕಾಗುತ್ತದೆ. ಅದು ಬೇಗ ಜನರಿಗೆ ಪರಿಚಯವಾಗಲು ಸಾಧ್ಯವಿಲ್ಲ. ಕೆಲವು ಬಾರಿ ಹೊಸಕಲ್ಪನೆಗಳನ್ನು ಪರಿಚಯಿಸಿದಾಗ ಜನರಿಗೆ ಅರ್ಥವಾಗದು ಎಂದು ವಾದಿಸಿ ಅದರ ಬಳಕೆಯನ್ನೇ ನಿಷೇಧಿಸಲಾಗುತ್ತದೆ. ಅಂದರೆ ಪ್ರಬಲರು, ಅಧಿಕಾರಸ್ಥರ ಭಾಷೆ ಬಹುಬೇಗ ಜನರನ್ನು ಪ್ರಭಾವಿಸಿದಂತೆ ದುರ್ಬಲರು, ಜನಸಾಮಾನ್ಯರು ಯಾವುದೇ ಹೊಸ ಪದ ಇಲ್ಲವೇ ಹೊಸ ವಿಚಾರವನ್ನು ಮಂಡಿಸಿದರೂ ಅದು ಜನರನ್ನು ಪ್ರಭಾವಿಸದು. ಅಂದರೆ ‘ಅಧಿಕಾರ, ಹೆಜಮನಿಗಳು’ ಇತರೆ ಹಲವು ಸಂಗತಿಗಳನ್ನು ನಿಯಂತ್ರಿಸಿದಂತೆ ಭಾಷೆಯನ್ನು ನಿಯಂತ್ರಿಸುವ ಪ್ರಭಾವಿಸುವ ಕೆಲಸ ಮಾಡುವುದನ್ನು ಈ ಸಂದರ್ಭದಲ್ಲಿ ಗಮನಿಸಬಹುದಾಗಿದೆ. ‘ಪ್ರಜಾಪ್ರಭುತ್ವ’ ವ್ಯವಸ್ಥೆ’ಯಿರುವ ದೇಶದಲ್ಲಿಯೇ ಈ ಬಗೆಯಾದರೆ ಇನ್ನು ಸರ್ವಾಧಿಕಾರ ವ್ಯವಸ್ಥೆಯಿರುವ ದೇಶಗಳಲ್ಲಿ ಭಾಷೆ ಹೇಗೆ ಟಂಕೀಕರಣಗೊಳ್ಳುತ್ತದೆ ಮತ್ತು ಅದು ಸಮುದಾಯಗಳ ಮೇಲೆ ಪ್ರಭಾವ ಬೀರಲಿದೆ ಎಂಬುದನ್ನು ಊಹಿಸುವುದು ಅಸಾಧ್ಯವೇನಲ್ಲ. ಅಂದರೆ ಭಾಷೆ ಕೂಡ ಯಾವುದೇ ಸಮಾಜದಲ್ಲಿ ಸ್ವಾಯತ್ತವಾಗಿ ಉಳಿದಿರದೆ ಅದು ಅಧಿಕಾರಸ್ಥರ ನಿಯಂತ್ರಣಕ್ಕೆ ಒಳಪಟ್ಟಿರುತ್ತದೆ ಎಂಬುದನ್ನು ಇಲ್ಲಿ ನೆನಪಿಡಬೇಕಾಗುತ್ತದೆ.  

ಹಾಗೆಯೇ ಪ್ರಭುತ್ವ ಹೊಸ ರಾಜಕೀಯ ಸಂಕಥನಗಳನ್ನು ಹುಟ್ಟಿಸಿ ಅಪರಿಚಿತ ಪರಿಭಾಷೆಗಳ ಮೂಲಕ ಜನರನ್ನು ತಬ್ಬಿಬ್ಬುಗೊಳಿಸಿ ಮೂಕರನ್ನಾಗಿಸುತ್ತದೆ. ಇಂತಹ ಹೊತ್ತಿನಲ್ಲಿ ಮಾರುಕಟ್ಟೆಯಲ್ಲಿ ಇತರ ಸರಕುಗಳು ಮಾರಾಟವಾದಂತೆ ಭಾಷೆ ಕೂಡ ಅತ್ಯಂತ ವೇಗವಾಗಿ ಮಾರಾಟವಾಗಿ ಜನರನ್ನು ತಲುಪುತ್ತದೆ. ಆದರೆ ಅದೇ ವೇಳೆ ದುರ್ಬಲ ಜನರ ವಿಚಾರಗಳು, ದುಃಖದುಮ್ಮಾನಗಳು ಮಾತ್ರ ಎಲ್ಲ ಕಾಲದಲ್ಲಿದ್ದಂತೆ ಈಗಲೂ ಅವು ಅಧಿಕಾರಸ್ಥರನ್ನು ತಲುಪಲಾರವು. ಇದು ಬಲವಿದ್ದವರ ಭಾಷೆ ಮೇಲುಗೈ ಸಾಧಿಸುವ ಮತ್ತು ಬಲವಿಲ್ಲದವರು ಶರಣಾಗುವ ಬಗೆಯನ್ನು ತಿಳಿಸುತ್ತದೆ. ಅಂದರೆ ಬಲವಿದ್ದವರು ಅಧಿಕಾರ ಬಲದಿಂದ ‘ಆತ್ಮ ನಿರ್ಭರ್ ಅರ್ಥಾತ್ ಸ್ವಾವಲಂಬನೆ’ ಸಾಧಿಸಿದರೆ, ದುರ್ಬಲರು ಯಾವತ್ತೂ ಪರಾವಲಂಬಿಗಳಾಗಿಯೇ ಉಳಿಯುತ್ತಾರೆ. ಆಗ ಇಂತಹ ಅಭಿಯಾನಗಳು ಸಬಲರನ್ನು ಇನ್ನಷ್ಟು ಸಬಲಗೊಳಿಸುತ್ತವೆ ಮತ್ತು ಅವರ ಆತ್ಮವನ್ನು ಮತ್ತಷ್ಟು ಬರ್ಬರಗೊಳಿಸುತ್ತವೆ ಎಂಬುದನ್ನು ಬೇರೆ ಹೇಳಬೇಕಿಲ್ಲ. ಈಗ ನಿಜವಾಗಿಯೂ ಸ್ವಾವಲಂಬನೆ ಸಾಧಿಸಬೇಕಿರುವುದು ಯಾರು?

*ರಂಗನಾಥ ಕಂಟನಕುಂಟೆ*

Sunday, 3 May 2020

ತಳಮಟ್ಟದಲ್ಲಿ ಅಪನಂಬಿಕೆಗಳಿಲ್ಲ....ಸೌಹಾರ್ದ ಪರಂಪರೆ ನಮ್ಮದು- ವಿಠ್ಠಲ ಭಂಡಾರಿ


ಕಾಕತಾಳೀಯವಾಗಿ ಸಂಭವಿಸುವ ಹಲವು ಸಂಗತಿಗಳನ್ನು ಧರ್ಮ ಜಾತಿಗೆ ಒತ್ತಾಯಪೂರ್ವಕವಾಗಿ ತಳಕುಹಾಕುವ ಹುನ್ನಾರ ಒಂದೆಡೆ ನಡೆಯುತ್ತಿದ್ದರೆ ಇನ್ನೊಂದೆಡೆ ಸಾಮಾನ್ಯ ಜನರ ದಿನನಿತ್ಯದ ನಡವಳಿಕೆಗಳು ರೋಗಗ್ರಸ್ಥ ಮನಸ್ಥಿತಿಯನ್ನು ಹಿಮ್ಮೆಟ್ಟಿಸುವ ನಿಟ್ಟಿನಲ್ಲಿ ಅಪ್ರಜ್ಞಾಪೂರ್ವಕವಾದ ಕೆಲಸ ಮಾಡುತ್ತಿದೆ ಎನ್ನುವುದು ಸಂತೋಷದ ಸಂಗತಿ. ಪೂರಕವಾದ ಒಂದೆರಡು ಭಿನ್ನ ಘಟನೆಗಳನ್ನು ನೆನಪಿಸುತ್ತಿದ್ದೇನೆ.
ಘಟನೆ:1- ಕೋವಿಡ್ 19 ವ್ಯಾಪಕ ಪ್ರಸರಣದ ಸಂದರ್ಭ, ಇಂದು ಒಂದು ರೀತಿಯ ಭೀತಿಯ ವಾತಾವರಣ ಸೃಷ್ಟಿಸಿದೆ. ರೋಗದ ಕುರಿತ ಮಾಹಿತಿಯ ಕೊರತೆ, ಹಲವು ಮಾಧ್ಯಮದ ಟಿಆರ್ಪಿ ಸಮರ, ಆಡಳಿತದ ನಿರ್ಲಕ್ಷ್ಯ, ಅಸಮರ್ಪಕ ನಿರ್ವಹಣೆ ಮತ್ತು ಮುಂದಾಲೋಚನೆಯ ಕೊರತೆಯಿಂದಾಗಿ ಸಾಮಾನ್ಯರ ಬದುಕು ಮೂರಾಬಟ್ಟೆ ಆಗುವ ಸಂದರ್ಭದಲ್ಲಿ ಹಲವು ಸಂಘಸಂಸ್ಥೆಗಳು, ವ್ಯಕ್ತಿಗಳು ಬಡ, ಸಂತ್ರಸ್ಥ ಕುಟುಂಬಗಳಿಗೆ ಸಹಾಯ ಹಸ್ತ(ಸಹಾಯ ನೀಡುವಲ್ಲಿ ಕೆಲವರಿಗೆ ಪ್ರತ್ಯೇಕ ಒಳ ಅಜೆಂಡಾ ಇದೆ ಅನ್ನುವುದು ಬೇರೆ ಸಂಗತಿ)ನೀಡುತ್ತಿವೆ.  ಒಂದೆರಡು ದಿನಗಳ ಹಿಂದೆ ನಮ್ಮ ಕಾಲೇಜಿನ ಅಧ್ಯಾಪಕರು ಸೇರಿ ಜನಗಳಿಗೆ ಒಂದಿಷ್ಟು ದಿನಸಿ ಕೊಡೋಣವೆಂದು ತೀರ್ಮಾನಿಸಿದೆವು; ಅದು ಸಣ್ಣ ಪ್ರಮಾಣದಲ್ಲಿ. ಲಾಕ್ ಡೌನ್ ಇರುವುದರಿಂದ ನಾವೇ ಹೋಗಿ ಫಲಾನುಭವಿಗಳನ್ನು ಆರಿಸುವಂತಿರಲಿಲ್ಲ. ಸಹಾಯದ ಅಗತ್ಯ ಇರುವ ಕುಟುಂಬಗಳ ಒಂದು ಯಾದಿ ತಯಾರಿಸಿ ಕೊಡಲು ಒಂದಿಬ್ಬರು ಪರಿಚಿತ ಅಂಗನವಾಡಿ ಕಾರ್ಯಕರ್ತೆಯರಿಗೆ ವಿನಂತಿಸಿದೆವು. ಅವರಿಬ್ಬರೂಹಿಂದೂಸಮುದಾಯದ ಅನುಯಾಯಿಗಳು.  ಎರಡು ದಿನದಲ್ಲಿ ಯಾದಿ ಬಂದು ತಲುಪಿತು. ಇನ್ನೊಬ್ಬ ಮುಸ್ಲಿಂ ಸಮುದಾಯದ ಅನುಯಾಯಿ ವ್ಯಕ್ತಿಗೆ ಹೇಳಲಾಗಿತ್ತು. ಅವರೂ ಒಂದು ಯಾದಿ ನೀಡಿದರು. ‘ತಮ್ಮತಮ್ಮ ಯಾದಿಯಲ್ಲಿ ಎಲ್ಲಾ ಜಾತಿ ಧರ್ಮದವರ ಹೆಸರೂ ಇರಬೇಕು, ನಿಮ್ಮ ನಿಮ್ಮ ಸಮುದಾಯದ ಹೆಸರು ಮಾತ್ರ ಇರದಿರಲಿಎಂದು ಹೇಳಬೇಕೆನ್ನಿಸಿದರೂ ಅವರಿಗೆ ಹಾಗೆ ಹೇಳಿರಲಿಲ್ಲ.
ಆದರೆ ಇಬ್ಬರೂ ಸಿದ್ಧಪಡಿಸಿದ ಯಾದಿಯಲ್ಲಿ ಮುಕ್ಕಾಲು ಪಾಲಿಗಿಂತÀ ಹೆಚ್ಚು ಜನ ಅವರು ಆಚರಿಸುವ ಧರ್ಮ ಮತ್ತು ಜಾತಿಯ ಆಚೆಯ ಕುಟುಂಬದ ಬಡವರ ಹೆಸರಿತ್ತು. ದಿನನಿತ್ಯ ಪತ್ರಿಕೆ, ಟಿವಿಗಳಲ್ಲಿ ಕರೋನಾದ ಆವಾಂತರಕ್ಕಿಂತ ಧರ್ಮವಾರು ಲೆಕ್ಕ, ಪರಸ್ಪರ ಅಪನಂಬಿಕೆ ಹುಟ್ಟಿಸುವ ಕೆಲಸ ಮತ್ತು ಸ್ಥಳೀಯವಾಗಿ ಪರಸ್ಪರರಲ್ಲಿ ಅಪನಂಬಿಕೆ ಹುಟ್ಟಿಸುವ ಕೆಲಸ ಗುಪ್ತವಾಗಿ ಇನ್ನೊಂದೆಡೆ ನಡೆಯುತ್ತಿರುವಾಗ ಕೆಳಹಂತದಲ್ಲಿ ಬಡವರು ಮತ್ತು ದುರ್ಬಲರನ್ನು ಗುರುತಿಸುವಾಗ ಕಿಂಚಿತ್ತೂ ದ್ವೇಷದ ಭಾವನೆ ಇರಲಿಲ್ಲ. ಪರಸ್ಪರ ಗೌರವ, ಪ್ರೀತಿ, ಸೌಹಾರ್ದತೆಯ ಭಾವಗಳು ತುಂಬಿದ್ದವು. ನೋವುಂಡವರಿಗೆ ಧರ್ಮದ ಬೇಲಿ ತೊಡಿಸಲು ಇವರ ಮನಸ್ಸು ಒಪ್ಪುತ್ತಿರಲಿಲ್ಲ. ಒಂದಿಷ್ಟು ದಿನಸಿ ಹಂಚಿ ಬರುವಾಗ ಒಬ್ಬ ಶಿಕ್ಷಣೋದ್ಯಮಿಗಳು ಸಿಕ್ಕರು. ‘ದಿನಸಿ ಹಂಚುತ್ತಿದ್ದೇವೆಅಂದೆ. ಒಳ್ಳೆಯದು, ‘ಇದು ಸಕಾಲ ಸಹಾಯ ಮಾಡುವುದಕ್ಕೆಅನ್ನುತ್ತಲೇಅವರಿಗೆ ಎಲ್ಲಿಂದಲೋ ತುಂಬಾ ಸಹಾಯ ಬರುತ್ತದೆ. ನೋಡಿಕೊಡಿಎಂದರು. ‘ಸರ್ಕಾರವೂ ತುಂಬಾ ಸಹಾಯ ಮಾಡುತ್ತಿದೆಎಂದು ಒಂದೆರಡು ನಂಜಿನ ಮಾತನ್ನಾಡಿದರು. ಆದರೆ ಒಂದು ಮನೆಗೆ ದಿನಸಿ ಕೊಟ್ಟಾಗತಮ್ಮ ಹಿಂಬದಿಯ ಮನೆಯ (ಬೇರೊಂದು ಧರ್ಮದ) ಬಡ ಕುಟುಂಬಕ್ಕೂ ಕೊಡಿ, ಅವರೂ ಬಡವರು. ಕಡಿಮೆ ಇದ್ದರೆ ಇದೇ ಹಂಚಿಕೊಳ್ಳುತ್ತೇವೆ ಬಿಡಿಎಂದು ಹೇಳುವ ಗುಣ ಭಾರತದ ನಿಜವಾದ ಅಂತಃಸ್ಸತ್ವ. ಭಾರತ ತನ್ನೊಳಗೆ ಪ್ರೀತಿಯ ಬೀಜವನ್ನೇ ಇಟ್ಟುಕೊಂಡಿದೆ. ಹೊರಗಿನ ಸುಡುಬೆಂಕಿ ಆರಿದ ಮೇಲೆ ಚಿಗುರುವುದು ಇದೇ ಬೀಜವೇ ಅಲ್ಲವೇ?
ಘಟನೆ:2 ನಮ್ಮಲ್ಲಿ ಅಂಬೇಡ್ಕರ್ ದಿನಾಚರಣೆ ಕಾರ್ಯಕ್ರಮವನ್ನು ಮೊದಲೇ ಹೇಳಿದಂತೆ ಸಂತ್ರಸ್ಥರಿಗೆ ದಿನಸಿ ಹಂಚುವ ಮೂಲಕ ಆಚರಿಸಲಾಯಿತು. ಇದರ ಭಾಗವಾಗಿ ದಿನೇಶ್ ಎನ್ನುವ ವ್ಯಕ್ತಿಗೆ ದಿನಸಿಗಳ ಪೊಟ್ಟಣ ನೀಡುವ ಮೂಲಕ ಉದ್ಘಾಟಿಸಲಾಯಿತು. ಆತ ಅಟೆಂಡರ್ ನೌಕರಿ ಮಾಡುವವನಾದರೂ ಬಡವನೆ. ಕಾರ್ಯಕ್ರಮ ಮುಗಿಸಿ ಹೊರಡುವಾಗ ಆತ ನನ್ನ ಬಳಿ ಬಂದ. ‘ನನಗೆ ಏನಿಲ್ಲವೆಂದರೂ ತಿಂಗಳ ಸಂಬಳ ಬರುತ್ತಿದೆ. ಹಾಗಾಗಿ ನೀವು ಕೊಟ್ಟ ದಿನಸಿಗಳನ್ನು ನಿಮಗೆ ವಾಪಸ್ ಮಾಡುತ್ತಿದ್ದೇನೆ. ನನಗಿಂತ ಬಡವರಿಗೆ ಕೊಡಿಎಂದು ಹೇಳಿದ. ‘ಇರಲಿ ಬಿಡು, ತೆಗೆದುಕೊಂಡು ಹೋಗು ಎಂದೆ- ಆತನ ಗುಣಕ್ಕೆ ಹೆಮ್ಮೆ ಪಟ್ಟು. ಆತ ಒಪ್ಪಿಕೊಂಡ. ‘ಇದನ್ನು ನಮ್ಮ ಸುತ್ತಲಿದ್ದವರಿಗೆ ಹಂಚಲು ಒಪ್ಪಿಗೆ ನೀಡಿದರೆ ಮಾತ್ರಎಂದ. ಹ್ಞೂಂ ಎಂದೆ. ಆತ ತನ್ನ ಓಣಿಗೆ ಹೋಗಿ ಅದನ್ನು ಹಂಚಿದ್ದು ಮಾತ್ರವಲ್ಲ ಆತನ ಮನೆಯಿರುವ ಪ್ರದೇಶವನ್ನು ಸುತ್ತಿ, ಊಟಕ್ಕೂ ತೊಂದರೆ ಇರುವ ತೀರಾ ಬಡ 10-15 ಕುಟುಂಬಗಳ ಹೆಸರು ಪಟ್ಟಿ ತಯಾರಿ ಮಾಡಿ ಕಳುಹಿಸಿದ. ‘ಸರ್, ಇವರಿಗೂ ನೀವು ಸಹಾಯ ಮಾಡಿದರೆ ಒಳ್ಳೆಯದು ಎಂದ.’ ಅಷ್ಟು ಮಾತ್ರವಲ್ಲ ನಮ್ಮ ಅಧ್ಯಾಪಕರ ವಾಟ್ಸ ಎಪ್ ಗುಂಪಿಗೆ ಹೋಗಿ ನೋಡಿದರೆಸರ್ ನೀವು ಬಡವರಿಗೆ ದಿನಸಿ ಹಂಚುತ್ತಿರುವುದು ಖುಷಿಯ ಸಂಗತಿ. ಕಾರ್ಯಕ್ಕೆ ನನ್ನ ದೇಣಿಗೆಯಾಗಿ 1000 ರೂ. ಕೊಡುತ್ತೇವೆ ಎಂದ; ನಂತರ ಭೇಟಿಯಾದಾಗ ಹಣವನ್ನು ನೀಡಿದ ಕೂಡ. ಆತ ಲಕ್ಷ ರೂಪಾಯಿ ಸಂಬಳ ಬರುವವನಲ್ಲ. ಸಿದ್ದಾಪುರದಲ್ಲಿ ಸ್ವಂತ ಮನೆ ಹೊಂದಿದವನೂ ಅಲ್ಲ. ಆದರೆ ಇನ್ನೊಬ್ಬರ ನೋವಿಗೆ ಮಣಿಯುವ ಮನಃಸ್ಥಿತಿ ಎಂತವರ ಕಣ್ಣನ್ನೂ ತೇವಗೊಳಿಸದೇ ಇರದು. ಹೃದಯದ ಕಣ್ಣಿದ್ದವರಿಗೆ ಇಂಥ ಸಾವಿರ ಘಟನೆಗಳು ನಮ್ಮ ಸುತ್ತಲೇ ಕಾಣುತ್ತವೆ.
ಆಗ ನೆನಪಾದದ್ದು ಭಾರತದೊಳಗಿನ ಸೌಹಾರ್ದ ಪರಂಪರೆ ಎಂದರೆ ಭೂಮಿಯೊಳಗೆ ಹುಗಿದು ಹೋದ ಬೀಜದಂತೆ. ಸಣ್ಣ ಮಳೆ ಹನಿಯ ಸಿಂಚನವಾದರೂ ಸಾಕು. ಅದು ಮೊಳಕೆಯೊಡೆದು ಮರುಭೂಮಿಯನ್ನೂ ಹಸಿರು ಮಾಡುವ ಶಕ್ತಿ ಹೊಂದಿದೆ. ನಮಗೆ ಮಳೆ ಆಗಲು ಸಾಧ್ಯವಿಲ್ಲದಿದ್ದರೂ ಸಣ್ಣ ಹನಿಯಾದರೂ ಆಗೋಣ.
-ವಿಠ್ಠಲ ಭಂಡಾರಿ








"ದಮನದ ಕೇಡಿನೆದುರು ಬುದ್ದನ ಕರುಣೆಯ ಬೆಳಕು"



ದೇಶವೆಂದರೆ ಮನುಷ್ಯರು. ಈ ದೇಶದ ಪ್ರಜ್ನೆಯಂತಿರುವ ಪ್ರಜೆಗಳ ಮೇಲೆ ಮತ್ತೆ ಮತ್ತೆ ಹಲ್ಲೆ, ದೌರ್ಜನ್ಯ ನಡೆದಾಗ ಅವರ ಪರವಾಗಿ ಅನೇಕ ಬುದ್ದಿಜೀವಿಗಳು, ಚಿಂತಕರು, ಲೇಖಕರು, ಮಾನವ ಹಕ್ಕುಗಳ ಹೋರಾಟಗಾರರು ದನಿಯೆತ್ತಿದ್ದಾರೆ. ಶೋಷಿತರ ಬೆಂಬಲಕ್ಕೆ ನಿಂತಿದ್ದಾರೆ.  ಆದರೆ ದಮನಿತರ ಹಕ್ಕುಗಳಿಗೆ ಹೋರಾಡಿದವರನ್ನೆ ದೇಶದ್ರೋಹಿಗಳೆಂದು ಕರೆದು ಅವರನ್ನು "ಯುಎಪಿಎ" (ಕಾನೂನುಬಾಹಿರ ಚಟುವಟಿಕೆಗಳ ನಿಗ್ರಹ ಕಾಯ್ದೆ) ಎನ್ನುವ ಕರಾಳ ಶಾಸನವನ್ನು ಬಳಸಿಕೊಂಡು ಬಂದಿಸಿರುವುದು ನಮಗೆಲ್ಲಾ ಅಘಾತ ತಂದಿದೆ. ಇದು ಕಟುಕನ ಕತ್ತಿ ದೇಶದ ಮನಸ್ಸಿನ ಮೇಲೆ ನಡೆಸಿದ ಹಲ್ಲೆಯಾಗಿದೆ.  ಕಟ್ಟಡದ ಹೊರಗಿನ ಮೇಲ್ಮೈಯನ್ನು ಬದ್ರವಾಗಿದೆ ಎಂದು ವಂಚಿಸುವುದರ ಮೂಲಕ ಒಳಗಿನ ರಚನೆಯನ್ನು ಸಂಪೂರ್ಣ  ಟೊಳ್ಳುಗೊಳಿಸಿ ದೇಶವೆನ್ನುವ ಇಡೀ ಕಟ್ಟಡವನ್ನು ಅಭದ್ರಗೊಳಿಸುವುದು ಇವರ ಹುನ್ನಾರವಾಗಿದೆ. ಈ ಮೇಲು ರಚನೆಯ ಅಗಾಧವಾದ ಕೊಂಬೆಗಳು ಪ್ರಜೆಗಳ ಮೇಲಿನ ಹಿಡಿತವನ್ನು ಮತ್ತಷ್ಟು ಗಟ್ಟಿಗೊಳಿಸಿ ಅವರ ಉಸಿರುಗಟ್ಟಿಸಿ ಪ್ರಭುತ್ವದ ಮುಂದೆ ಮಂಡಿಯೂರುವಂತೆ ಮಾಡಿವೆ. ಇಂತಹ ಸಂದರ್ಭದಲ್ಲಿ ದೇಶದ ಆತ್ಮಸಾಕ್ಷಿಯಂತೆ ವರ್ತಿಸಬೇಕಾದ ಸಾರ್ವಜನಿಕ ಸಂಸ್ಥೆಗಳು ಪ್ರಭುತ್ವದೊಂದಿಗೆ ಹೊಂದಾಣಿಕೆ ಮಾಡಿಕೊಂಡಿವೆ, ಪುರಾವೆಗಳಿಲ್ಲದ ಆರೋಪಗಳಿಗೆ ಬಲಿಯಾದ ಮಾನವ ಹಕ್ಕುಗಳ ಹೋರಾಟಗಾರರಿಗೆ ಜಾಮೀನು ಕೊಡಲು ಸಹ ನ್ಯಾಯಾಲಯಗಳು ನಿರಾಕರಿಸಿವೆ. ಎಲ್ಲ ಆಧಾರಸ್ತಂಬಗಳು ಕೈಕೊಟ್ಟಾಗ ಈ ದೇಶ ಪ್ರಜಾಪ್ರಭುತ್ವವನ್ನು ರಕ್ಷಿಸುವುದು ಅಲ್ಲಿನ ನಾಗರಿಕ ಜವಬ್ದಾರಿಯಾಗಿದೆ
ಕ್ರೂನಿ ಬಂಡವಾಳಶಾಹಿಗಳ ಈ ಕಾಲದಲ್ಲಿ ಜಾಗತಿಕವಾಗಿ ಅನೇಕ ದೇಶಗಳಲ್ಲಿ ನಿರಂಕುಶ ಪ್ರಬುತ್ವದ ಆಡಳಿತ ಕಂಡುಬರುತ್ತದೆ. ಕರೋನ ವೈರಾಣು ಈ ಸಂದರ್ಬವನ್ನು ಮತ್ತಷ್ಟು ಜಟಿಲಗೊಳಿಸಿದೆ. ಈ ಬಿಕ್ಕಟ್ಟಿನಲ್ಲಿ ಬಡಜನರು ಬೀದಿ ಪಾಲಾಗಿದ್ದಾರೆ ಮತ್ತು ಹಸಿವಿನಿಂದ ಬಳಲುತ್ತಿದ್ದಾರೆ, ಇವರ ಪರವಾಗಿ ದನಿ ಎತ್ತಿದವರು ಜೈಲು ಪಾಲಾಗಿದ್ದಾರೆ. ಈ ದೇಶವನ್ನು ಕಟ್ಟಿದ ಈ  ಜನರು ತುತ್ತು ಕೂಳಿಗೆ ಪರದಾಡುವಂತಹ ವಾತಾವರಣ ಸೃಷ್ಟಿಸಲಾಯಿತು. ಯಾವುದೇ ಪೂರ್ವ ತಯಾರಿ ಇಲ್ಲದೆ ದಿಗ್ಭಂದನ ಹೇರಿದ್ದರ ಪರಿಣಾಮವಾಗಿ ಲಕ್ಷಾಂತರ ವಲಸೆ ಕಾರ್ಮಿಕರು ಬೀದಿಗೆ ಬಂದರು ಮತ್ತು ಮಹಿಳೆಯರು, ಸಣ್ಣ ಸಣ್ಣ ಮಕ್ಕಳು ಸಾವಿರಾರು ಕಿ.ಮೀ. ತಮ್ಮ ಊರಿನ ಕಡೆಗೆ ಬರಿಗಾಲಿನಲ್ಲಿ ನಡೆಯುತ್ತಿರುವ ದೃಶ್ಯ ನೋಡಿದಾಗ ನಮ್ಮೆಲ್ಲರ ಎದೆ ಒಡೆಯುತ್ತದೆ. ಅನೇಕ ಕಡೆಗಳಲ್ಲಿ ಅವರನ್ನು ಪ್ರಾಣಿಗಳಂತೆ ಬಂದಿಸಿಡಲಾಗಿದೆ
ಈ ಎಲ್ಲಾ ಯಾತನಾಮಯ ದಿನಗಳ ನಡುವೆ ಅಂಬೇಡ್ಕರ್ ಜಯಂತಿಯಾದ ಎಪ್ರಿಲ್  14ರಂದು ಆನಂದ ತೇಲ್ತುಂಬ್ಡೆ ಮತ್ತು ಗೌತಮ್ ನವಲ್ಕ ಅವರನ್ನು ಸುಳ್ಳು ಆರೋಪಗಳನ್ನು ಹೊರೆಸಿ ’ಯುಎಪಿಎ’ ಅಡಿಯಲ್ಲಿ ಬಂದಿಸಿದ್ದಾರೆ. ಈ ಬಂದನದ ಇಡೀ ಪ್ರತಿಕ್ರಿಯೆ ಸೇಡಿನಿಂದ ಮತ್ತು ಕ್ರೌರ್ಯದಿಂದ ಕೂಡಿದೆ. ಎರಡು ವರ್ಷಗಳ ಹಿಂದೆ ಬಡಜನರ ಸಬಲೀಕರಣಕ್ಕಾಗಿ ತಮ್ಮ ಬದುಕನ್ನು ಮುಡಿಪಾಗಿಟ್ಟಿದ್ದ ಒಂಬತ್ತು ಮಾನವ ಹಕ್ಕುಗಳ ಹೋರಾಟಗಾರರು, ನ್ಯಾಯವಾದಿಗಳನ್ನು ಇದೇ ರೀತಿಯ ಸುಳ್ಳು ಆರೋಪಗಳ ಅಡಿಯಲ್ಲಿ ಅಕ್ರಮವಾಗಿ ಬಂದಿಸಿದ್ದರು. ಈಗ ತೇಲ್ತುಂಬ್ಡೆ ಮತ್ತು ನವಲ್ಕ ಅವರನ್ನು ಬಂದಿಸಿದ್ದಾರೆ. ಮೌನವಾಗಿದ್ದರೆ ಮುಂದಿನ ದಿನಗಳಲ್ಲಿ ಬಂದನಕ್ಕೊಳಗಾಗುವ ಸರದಿ ನಮ್ಮದಾಗುತ್ತದೆ. ಈ ಎಲ್ಲಾ ಬಂದನದ ಹಿಂದೆ ಬಡಜನರನ್ನು ಶೋಷಿಸುವುದು ಮತ್ತು ಅವರ ಪರವಾಗಿ ಹೋರಾಡುವವರನ್ನು ಬಂದಿಸುವ ಕಾರ್ಯಸೂಚಿ ಇದೆ
ಇಂತಹ ದುರಿತ, ಆತಂಕದ ದಿನಗಳಲ್ಲಿ ಬಂದಿಸಲ್ಪಟ್ಟ ಒಡನಾಡಿಗಳ ಪರವಾಗಿ ನಾವೆಲ್ಲಾ ಒಗ್ಗಟ್ಟಾಗಿ ಬೆಂಬಲಿಸಬೇಕಾಗಿದೆ.ಈ ಒಡನಾಡಿಗಳು ಏಕಾಂಗಿಗಳಲ್ಲ ಎಂದು ತೋರಿಸಿಕೊಡಬೇಕಾಗಿದೆ. ಅವರ ಪರವಾಗಿ ನಿಲ್ಲುವುದು ಈ ಕ್ಷಣದ ಅಗತ್ಯವಾಗಿದೆ. ಈ ಮೂಲಕ ಮಾನವ ಹಕ್ಕುಗಳನ್ನು ಮತ್ತು ಪ್ರಜಾಪ್ರಭುತ್ವವನ್ನು ಕಾಪಾಡಬೇಕಾಗಿದೆ. ಇದು ನಮ್ಮ ಕರ್ತವ್ಯ.
ನಾವೆಲ್ಲಾ ಭಾರತದ ಆತ್ಮವನ್ನು ರಕ್ಷಿಸಬೇಕಾಗಿದೆ
ಜೊತೆಯಾಗಿ ನಿಲ್ಲೋಣ, ಅಕ್ರಮ ಬಂದನವನ್ನು ವಿರೋದಿಸೋಣ
ಎಪ್ರಿಲ್ ೭ ಬುದ್ದ ಪೂರ್ಣಿಮೆ
ಅಂದು ಪ್ರಗತಿಪರ ಸಂಘಟನೆಗಳು, ಚಿಂತಕರು ಮುಮ್ತಾದವರು  ದಿಗ್ಬಂದನ ಸಡಿಲಗೊಳಿಸಿದ ಜಿಲ್ಲೆ, ತಾಲೂಕುಗಳಲ್ಲಿ ದೈಹಿಕ ಅಂತರ ಕಾಯ್ದುಕೊಂಡು ಸಾರ್ವಜನಿಕವಾಗಿ ಪ್ರತಿಭಟಿಸಬೇಕು. ಇದು ಸಾದ್ಯವಿಲ್ಲದವರು ತಮ್ಮ ತಮ್ಮ ಮನೆಗಳಲ್ಲಿ ಸಾಂಕೇತಿಕವಾಗಿ ಪ್ರತಿಭಟಿಸಬೇಕು
ನಮ್ಮ ಘೋಷಣೆಗಳು
ಬುದ್ದನ ಕರುಣೆಯ ಬೆಳಕನ್ನು ಹಿಡಿದುಕೊಂಡು ನಾವು ನ್ಯಾಯದ ಪರವಾಗಿ ನಿಂತಿದ್ದೇವೆ
ಸುಳ್ಳು ಆರೋಪದಡಿಯಲ್ಲಿ ಬಂದಿಸಲ್ಪಟ್ಟ ಎಲ್ಲಾ ಮಾನವ ಹಕ್ಕುಗಳ ಹೋರಾಟಗಾರರು, ನ್ಯಾಯವಾದಿಗಳು, ಲೇಖಕರನ್ನು ಕೂಡಲೆ ಬಿಡುಗಡೆಗೊಳಿಸಿ
ಕರಾಳ ಶಾಸನ "ಯುಎಪಿಎ" ಯನ್ನು ಹಿಂತೆಗೆದುಕೊಳ್ಳಿ
ಜೈಲಿನಲ್ಲಿರಬೇಕಾದ ಮತಾಂದರು, ಭ್ರಷ್ಟರು ಸಾರ್ವಜನಿಕವಾಗಿ ಅಡ್ಡಾಡಿಕೊಂಡಿದ್ದಾರೆ, ಜನರ ನಡುವೆ ಇರಬೇಕಾದ ಮಾನವೀಯ, ಜೀವಪರ ವ್ಯಕ್ತಿಗಳು ಬಂದನಕ್ಕೊಳಗಾಗಿದ್ದಾರೆ ಇದು ನಾಚಿಕೆಗೇಡು
ವಿ.ಸೂ. : ಈ ಮೇಲ್  ಜೊತೆ ಇಂಗ್ಲೀಷ್ ನಲ್ಲಿ ಬರೆದ ಒಂದು ಪತ್ರವನ್ನು ಲಗತ್ತಿಸಲಾಗಿದೆ. ಅದನ್ನು ಪ್ರತಿಯೊಬ್ಬರೂ ರಾಷ್ಟ್ರಪತಿ, ಪ್ರದಾನ ಮಂತ್ರಿ ಕಾರ್ಯಾಲಯ, ಗೃಹ ಇಲಾಖೆಗೆ ಕಳುಹಿಸಬೇಕು

presidentofindia@rb.nic.in ,  PMO, Home ministry 
--
"ಕರ್ನಾಟಕ ಪ್ರಗತಿಪರ ಸಂಘಟನೆಗಳ ಒಕ್ಕೂಟ"ದ ಪರವಾಗಿ

Friday, 10 April 2020

ಸರ್ವವ್ಯಾಪಿ ಬೇನೆಗಳೂ ಮಾನವನ ಪೂರ್ವಗ್ರಹಗಳೂ- ಅಮಿತಾಂಗ್ಷು ಆಚಾರ್ಯಅನುವಾದ : ನಾ ದಿವಾಕರ

 ಸರ್ವವ್ಯಾಪಿ ಬೇನೆಗಳೂ ಮಾನವನ ಪೂರ್ವಗ್ರಹಗಳೂ-  ಅಮಿತಾಂಗ್ಷು ಆಚಾರ್ಯಅನುವಾದ : ನಾ ದಿವಾಕರ


ಕ್ರಿಸ್ತಶಕ 1900ರ ಆಸುಪಾಸಿನ ಸನ್ನಿವೇಶ. ನ್ಯೂಯಾರ್ಕಿನ ಐಷಾರಾಮಿ ವಸತಿ ಸಮುಚ್ಚಯದಲ್ಲಿ ಒಂದು ವಿಚಿತ್ರ ಘಟನೆ ಸಂಭವಿಸಿತು. ಇಲ್ಲಿ ನೆಲೆಸಿದ್ದ ವಿದೇಶಿ ಮೂಲದ ನೆಲಸಿಗರಿಗೆ ನಿಗೂಢ ರೀತಿಯಲ್ಲಿ ಟೈಫಾಯ್ಡ್ ರೋಗ ಕಾಡಲಾರಂಭಿಸಿತು.  ಸಾಮಾನ್ಯವಾಗಿ ಕಡುಬಡತನ ಮತ್ತು ಅನೈರ್ಮಲ್ಯ ಹೆಚ್ಚಾಗಿರುವ ಪ್ರದೇಶಗಳಲ್ಲಿ ಕಾಣಿಸಿಕೊಳ್ಳುವ ಈ ಕಾಯಿಲೆ ಇಷ್ಟೊಂದು ಶ್ರೀಮಂತ, ಐಷಾರಾಮಿ ಬಡಾವಣೆಯಲ್ಲಿರುವ ಜನರಿಗೆ ಹೇಗೆ ತಗುಲಿದೆ ಎಂಬ ಪ್ರಶ್ನೆ ನ್ಯೂಯಾರ್ಕ್ ನಗರದ ವೈದ್ಯ ಲೋಕವನ್ನು ಕಾಡಲಾರಂಭಿಸಿತು. 
ಇದನ್ನು ಕಂಡುಹಿಡಿಯಲು ಜಾರ್ಜ್ ಸೋಪರ್ ಎಂಬ ಹೆಸರಿನ ಸ್ಯಾನಿಟರಿ ಇಂಜಿನಿಯರ್ ಒಬ್ಬರಿಂದ ತನಿಖೆ ನಡೆಸಲಾಯಿತು.  ಈ ತನಿಖೆಯಿಂದ, ಈ ವಸತಿ ಸಮುಚ್ಚಯದಲ್ಲಿ ಟೈಫಾಯ್ಡ್ ತಗುಲಿದ್ದ ಕನಿಷ್ಟ ಎಂಟು ಮನೆಗಳಲ್ಲಿ ಮೇರಿ ಮಲ್ಲೋನ್ ಹೆಸರಿನ ಐರಿಷ್ ವಲಸಿಗ ಮಹಿಳೆ ಅಡುಗೆ ಕೆಲಸ ಮಾಡುತ್ತಿದ್ದಳೆಂದು ತಿಳಿದುಬಂದಿತ್ತು. ಆದರೆ ಮಲ್ಲೋನ್ ಸ್ವತಃ ಆರೋಗ್ಯವಂತಳಾಗಿದ್ದಳು. ಆದಾಗ್ಯೂ ಪ್ರತಿಯೊಂದು ಮನೆಯವರಿಗೆ ಟೈಫಾಯ್ಡ್ ಸೋಂಕು ತಗುಲಿದಾಗಲೂ ಮಲ್ಲೋನ್ ಅಲ್ಲಿ ಕೆಲಸ ಬಿಟ್ಟು ಮತ್ತೊಂದು ಮನೆಯಲ್ಲಿ ನೌಕರಿ ಪಡೆಯಬೇಕಾಯಿತು. ಇದನ್ನು ಗಮನಿಸಿದ ಸೋಪರ್, ಮಲ್ಲೋನ್ ಕುರಿತು ಮಾಹಿತಿ ಸಂಗ್ರಹಿಸಲಾರಂಭಿಸಿದ.  ಆಕೆ ಎಲ್ಲಿ ವಾಸಿಸುತ್ತಾಳೆ ಎಂದು ಒತ್ತಾಯ ಮಾಡಿ ತಿಳಿದುಕೊಂಡ.  ಅಂತಿಮವಾಗಿ ಆಕೆಯಿಂದಲೇ ಟೈಫಾಯ್ಡ್ ಹರಡಿದೆ ಎಂದು ತೀರ್ಮಾನಕ್ಕೂ ಬಂದ.  ಆದರೆ ಮಲ್ಲೋನ್ ತನ್ನ ತಪಾಸಣೆಗೆ ಒಪ್ಪದೆ ಪ್ರತಿಭಟಿಸಿದಾಗ ಸೋಪರ್, ಪೊಲೀಸರ ಮನವೊಲಿಸಿ ಆಕೆಯನ್ನು ಬಂಧಿಸುವಂತೆ ಮಾಡಿದ್ದ. 
ಕೇವಲ ಊಹೆಗಳನ್ನೇ ಆಧರಿಸಿ ಬಂಧಿಸಲಾಗಿದ್ದ ಮಲ್ಲೋನ್ ಅವರ ರಕ್ತ, ಮೂತ್ರ ಮತ್ತು  ಮಲ ಪರೀಕ್ಷೆಯನ್ನು ಒತ್ತಾಯಪೂರ್ವಕವಾಗಿ ಮಾಡಲಾಯಿತು. ಇದರ ಫಲಿತಾಂಶ ಬಂದ ನಂತರ ಆಕೆಯ ರಕ್ತ, ಮಲ ಮೂತ್ರದಲ್ಲಿ ಟೈಫಾಯ್ಡ್ ಉಂಟುಮಾಡುವ ಸಲ್ಮೋನೆಲಾ ಟೈಫಿ ಬ್ಯಾಕ್ಟೀರಿಯಾ ಕಂಡುಬಂದಿತ್ತು. ಕೂಡಲೇ ಮಲ್ಲೋನ್ ಸಾರ್ವಜನಿಕರ ದೃಷ್ಟಿಯಲ್ಲಿ ಅಪರಾಧಿಯಾಗಿದ್ದಳು. ಆಕೆಯನ್ನು ಶಿಕ್ಷಿಸಲು ಆಗ್ರಹ ತೀವ್ರವಾಗತೊಡಗಿತು.  ತಾವು ಆರೋಗ್ಯವಾಗಿದ್ದರೂ ಮತ್ತೊಬ್ಬರಿಗೆ ರೋಗ ಹರಡುವ ರೋಗೋತ್ಪಾದಕ ಬ್ಯಾಕ್ಟೀರಿಯಾಗಳನ್ನು ಮನುಷ್ಯರು ಹೊಂದಿರಲು ಸಾಧ್ಯ ಎಂದು ಸೋಪರ್ ಕಂಡುಹಿಡಿದಿದ್ದ. ಆರೋಗ್ಯಕರ ರೋಗವಾಹಕರನ್ನು ಕಂಡುಹಿಡಿದ ಖ್ಯಾತಿ ಸೋಪರ್ ಗೆ ಲಭಿಸಿತ್ತು. ಮತ್ತೊಂದೆಡೆ ಮಲ್ಲೋನ್ ಅಪಖ್ಯಾತಿಗೆ ಒಳಗಾಗಿದ್ದೇ ಅಲ್ಲದೆ ಟೈಫಾಯ್ಡ್ ಮೇರಿ ಎಂದೇ ಕುಖ್ಯಾತಿ ಪಡೆದುಬಿಟ್ಟಳು. 
ದಶಕಗಳ ಕಾಲ ಟೈಫಾಯ್ಡ್ ಮೇರಿ ಎನ್ನುವ ಅಡ್ಡ ಹೆಸರನ್ನೇ ಬಳಸಿ ಆಕೆಯನ್ನು ಸತತವಾಗಿ ಅಪಮಾನಿಸಿದ್ದೇ ಅಲ್ಲದೆ , ರುಚಿಕರ ಅಡುಗೆ ಮಾಡುತ್ತಿದ್ದ , ಐರ್ಲೆಂಡಿನಿಂದ ವಲಸೆ ಬಂದಿದ್ದ, ಬಡತನದ ಬೇಗೆ ಅನುಭವಿಸಿದ್ದ, ಅನಕ್ಷರಸ್ಥೆ, ಮಲ್ಲೋನ್ ಸಾಕಷ್ಟು ಹಿಂಸೆ ಅನುಭವಿಸಬೇಕಾಯಿತು. ವೈದ್ಯಕೀಯ ಜಗತ್ತು ಮತ್ತು ಮಾಧ್ಯಮಗಳು ಮಲ್ಲೋನ್ ಅವರನ್ನು ರೋಗ ಹರಡುವ ಮಹಿಳೆ ಎಂದೇ ಕರೆಯುವ ಮೂಲಕ ಆಕೆಯನ್ನು ಸಾಮೂಹಿಕ ಹಂತಕಿಯಂತೆ ಚಿತ್ರಿಸಿದವು. ಮಲ್ಲೋನ್ ಜನಸಾಮಾನ್ಯರ ದೃಷ್ಟಿಯಲ್ಲಿ ರಕ್ಕಸಿಯಾಗಿಬಿಟ್ಟಳು. ಆಕೆಯಿಂದ ಒಟ್ಟು 51 ಜನರಿಗೆ ಟೈಫಾಯ್ಡ್ ತಗುಲಿದೆ ಎಂದು ಹೇಳಲಾಗಿತ್ತು. ಆದರೆ ನಿಖರವಾದ ಮಾಹಿತಿ ಎಲ್ಲಿಯೂ ಇರಲಿಲ್ಲ.
ಶತ್ರುವಿನ ಬೆನ್ನಟ್ಟಿ :
ನಾರ್ತ್ ಬ್ರದರ್ ದ್ವೀಪದಲ್ಲಿ ನದಿ ತೀರದಲ್ಲಿದ್ದ ಆಸ್ಪತ್ರೆಯೊಂದರಲ್ಲಿ 26 ವರ್ಷಗಳ ಕಾಲ ಪ್ರತ್ಯೇಕತೆಯನ್ನು ಅನುಭವಿಸಿದ ಮಲ್ಲೋನ್ ಏಕಾಂಗಿಯಾಗಿಯೇ ಬದುಕು ಸವೆಸಿ 1938ರಲ್ಲಿ ಮೃತಪಟ್ಟಿದ್ದಳು.  63 ವರ್ಷಗಳ ನಂತರ ಆಕೆಯನ್ನು ನಿರಪರಾಧಿ ಎಂದು ಘೋಷಿಸಿದ್ದು ಯಾವುದೇ ನ್ಯಾಯಾಲಯವಲ್ಲ, ಒಬ್ಬ ಲೇಖಕ ಮತ್ತು ಬಾಣಸಿಗ. ಮಲ್ಲೋನ್ ಜೊತೆಯಲ್ಲಿ ಅಡುಗೆ ಮಾಡುತ್ತಿದ್ದ ಆಂಟೊನಿ ಬೋರ್ಡೇನ್ 2001ರಲ್ಲಿ ಬರೆದ ಟೈಫಾಯ್ಡ್ ಮೇರಿ ; ಅನ್ ಅರ್ಬನ್ ಹಿಸ್ಟಾರಿಕಲ್ ಎಂಬ ಕೃತಿಯಲ್ಲಿ ಆಕೆಯನ್ನು ಕುರಿತು ಬಹಳ ಸಂವೇದನಾಶೀಲತೆಯಿಂದ ಹೀಗೆ ಹೇಳಿದ್ದರು : “ ಅಡುಗೆ ಕೆಲಸದವರು ಅಸ್ವಸ್ಥರಾಗಿದ್ದರೂ ಕೆಲಸ ಮಾಡುತ್ತಾರೆ. ಅವರು ಸದಾ ಹೀಗೆಯೇ ಮಾಡಿದ್ದಾರೆ. ಅನೇಕ ವೇಳೆ ನಿಮಗೆ ಕೆಲಸ ಮಾಡದಿದ್ದರೆ ಸಂಬಳ ದೊರೆಯುವುದಿಲ್ಲ. ನೀವು ಬೆಳಿಗ್ಗೆ ಏಳುತ್ತಲೇ ಸೀನುತ್ತಾ, ಮೂಗು ಸೋರುತ್ತಲೇ ಇದ್ದಂತೆ , ಗಂಟಲು ಕಿರಿಕಿರಿ ಇದ್ದಂತೆ ಏಳುತ್ತೀರಿ. ಆದರೂ ನೀವು ಕೆಲಸಕ್ಕೆ ಹಾಜರಾಗುತ್ತೀರಿ. ನಿಮ್ಮ ಇಡೀ ದಿನವನ್ನು ಕೆಲಸದಲ್ಲೇ ಕಳೆಯುತ್ತೀರಿ. ನಿಮ್ಮ ಕುತ್ತಿಗೆಗೆ ಒಂದು ಬಟ್ಟೆ ಸುತ್ತಿಕೊಂಡಿರುತ್ತೀರಿ. ನಿಮ್ಮ ಕೈಲಾದಷ್ಟು ಮಟ್ಟಿಗೆ ದಕ್ಷತೆಯಿಂದ ಕೆಲಸ ಮಾಡುತ್ತೀರಿ. ಅಸ್ವಸ್ಥತೆ ಮತ್ತು ನೋವು ಹೊತ್ತುಕೊಂಡೇ ಕೆಲಸ ಮಾಡುವುದು  ನಿಮಗೆ ಹೆಮ್ಮೆಯ ವಿಚಾರ ”. 
ನ್ಯೂಯಾರ್ಕ್ ನಗರಕ್ಕೆ ಟೈಫಾಯ್ಡ್ ಹೊಸತೇನೂ ಆಗಿರಲಿಲ್ಲ. ಅಪರೂಪವೂ ಆಗಿರಲಿಲ್ಲ. ಆದರೆ ಮಲ್ಲೋನ್ ಅವರನ್ನು ಸಾರ್ವಜನಿಕರ ಶತ್ರು ಎನ್ನುವಂತೆ ಚಿತ್ರಿಸಲಾಯಿತು. ಟೈಫಾಯ್ಡ್ ರೋಗಕ್ಕಿಂತಲೂ ಮಲ್ಲೋನ್ ಭೀಕರವಾಗಿ ಕಂಡುಬಿಟ್ಟಳು. ಆಕೆ ಮಾಡಿದ ಮಹಾಪರಾಧ ಎಂದರೆ, ಲಾಂಗ್ ಐಲ್ಯಾಂಡ್ ಮತ್ತು ಬ್ರಾಂಕ್ಸ್ ಪ್ರಾಂತ್ಯವನ್ನು ಪ್ರತ್ಯೇಕಿಸಿದ ವರ್ಗ ವಿಭಜನೆಯನ್ನು ಟೈಫಾಯ್ಡ್ ಹರಡುವ ರೋಗವಾಹಕ ಬ್ಯಾಕ್ಟೀರಿಯಾ ಲೆಕ್ಕಿಸುವುದಿಲ್ಲ ಎಂದು ನ್ಯೂಯಾರ್ಕ್ ನಗರದ ಶ್ರೀಮಂತ ಮತ್ತು ಪ್ರಬಲ ವರ್ಗಗಳಿಗೆ ನೆನಪಿಸಿದ್ದಳು.
ಮಾನವ ಮತ್ತು ರೋಗವಾಹಕ ಬ್ಯಾಕ್ಟೀರಿಯಾ ಮತ್ತಿತರ ವೈರಾಣುಗಳ ನಡುವೆ ವಿಶಿಷ್ಟವಾದ ಸಂಬಂಧವಿದೆ.  ರೋಗವಾಹಕಗಳು ಜೀವಿಸಿ, ವೃದ್ಧಿಸಲು ಬಯಸುತ್ತವೆ.  ಹಾಗಾಗಿ ಮನುಷ್ಯರನ್ನು ಕೊಲ್ಲುವುದು ಅವುಗಳ ದೃಷ್ಟಿಯಲ್ಲಿ ತಮ್ಮ ಅಸ್ತಿತ್ವಕ್ಕೇ ಧಕ್ಕೆ ಉಂಟುಮಾಡಿದಂತಾಗುತ್ತದೆ. ಹಾಗಾಗಿ ಮಾನವರು ಮತ್ತು ರೋಗವಾಹಕಗಳು ಪರಸ್ಪರ ಪೂರಕವಾಗಿ ಬದುಕಲಿಚ್ಚಿಸುವುದನ್ನು ಕಾಣಬಹುದು. ಕೆಲ ಕಾಲದ ನಂತರ ಎರಡೂ ಜೀವಿಗಳ ನಡುವೆ ಒಪ್ಪಂದ ಏರ್ಪಟ್ಟು ಮನುಷ್ಯ ಈ ರೋಗವಾಹಕಗಳ ಜೊತೆಯಲ್ಲೇ ಬದುಕುವುದನ್ನು ಕಲಿಯುತ್ತಾನೆ. ನಾವು ಹಿಂದೆಯೂ ಹೀಗೆ ಮಾಡಿದ್ದೇವೆ, ಈಗ ನೋವೆಲ್ ಕೊರೋನಾ ವೈರಾಣುವಿನೊಡನೆಯೂ ಹೀಗೆಯೇ ಬದುಕುತ್ತೇವೆ. 
ಕೊರೋನಾದಂತಹ ಸರ್ವವ್ಯಾಪಿ ರೋಗ ಹರಡಿದಾಗ ನಾವು ಕಾಣುವ ಮನುಷ್ಯ ಮತ್ತು ರೋಗವಾಹಕದ ಸಹಜೀವನ, ಇದರಿಂದ ಉಂಟಾಗುವ ಸಾಮಾಜಿಕ ಪರಿಣಾಮಗಳಿಗೆ ವ್ಯತಿರಿಕ್ತವಾಗಿರುತ್ತದೆ.  ರೋಗಗಳಿಗೆ ಸಾಮಾಜಿಕ ಆದ್ಯತೆಗಳಿರುವುದಿಲ್ಲ. ಹಾಗೆಯೇ ರೋಗವಾಹಕಗಳು ಜನಾಂಗ, ವರ್ಗ, ಮತಧರ್ಮ, ಲಿಂಗ ಅಥವಾ ಮತ್ತಾವುದೇ ಅಸ್ಮಿತೆಗಳನ್ನು ಪರಿಗಣಿಸುವುದಿಲ್ಲ. ಆದರೆ ಇತಿಹಾಸದೊಳಗೆ ಒಮ್ಮೆ ಇಣುಕಿ ನೋಡಿದಾಗ, ಪ್ರತಿಯೊಂದು ಬಾರಿ ಸರ್ವವ್ಯಾಪಿ ಸಾಂಕ್ರಾಮಿಕ ರೋಗಗಳು ಕಂಡುಬಂದಾಗಲೂ ಮಾನವ ಸಮಾಜದಲ್ಲಿ ಆಳವಾಗಿ ಬೇರೂರಿರುವ ಸಾಮಾಜಿಕ ಪೂರ್ವಗ್ರಹಗಳು ಮರುಕಳಿಸಿರುವುದನ್ನು ಗಮನಿಸಬಹುದು. ಇದರ ಪರಿಣಾಮಗಳೂ ಭೀಕರವಾಗಿರುವುದನ್ನೂ ಗಮನಿಸಬಹುದು. 
1348ರಲ್ಲಿ ಯೂರೋಪ್ ಖಂಡವನ್ನು ಅಲುಗಾಡಿಸಿದ ಬಬೋನಿಕ್ ಪ್ಲೇಗ್ ಸಂದರ್ಭದಲ್ಲಿ, ಕ್ಯಾಥೊಲಿಕ್ ಚರ್ಚ್ ಇದನ್ನು  ಕ್ರೈಸ್ತ ಧರ್ಮದ ವಿರುದ್ಧ ಯಹೂದಿಗಳ ಪಿತೂರಿ ಎಂದೇ ಬಣ್ಣಿಸಿತ್ತು. ಯಹೂದಿಗಳು ಈ ರೋಗವನ್ನು ಹರಡಲು ಬಾವಿಗಳಿಗೆ ವಿಷ ಬೆರೆಸಿದ್ದಾರೆ ಎಂದು ಆರೋಪಿಸಿದ ಕ್ಯಾಥೊಲಿಕ್ ಕ್ರೈಸ್ತರು, ಯಹೂದಿಯರ ಮೇಲೆ ತೀವ್ರ ದೌರ್ಜನ್ಯ ನಡೆಸಿ ಚಿತ್ರಹಿಂಸೆ ನೀಡಿದ್ದೇ ಅಲ್ಲದೆ, ಯಹೂದ್ಯರಿಂದ ಒತ್ತಾಯಪೂರ್ವಕವಾಗಿ ತಪ್ಪೊಪ್ಪಿಗೆಯನ್ನೂ ಪಡೆದಿದ್ದರು. ಇದಾದ ಕೆಲವೇ ದಿನಗಳಲ್ಲಿ ಸಾವಿರಾರು ಯಹೂದ್ಯರ ಸುಟ್ಟ ಮೃತದೇಹಗಳಿಂದ ವಿಷವಾಯು ಹರಡಲಾರಂಭಿಸಿ, ಯೂರೋಪಿನ ಸ್ಟ್ರಾಸ್‍ಬೋರ್ಗ್, ಕೊಲೋನ್, ಬೇಸಲ್ ಮತ್ತು ಮೈನ್ಜ್ ಪ್ರಾಂತ್ಯಗಳ ವಾತಾವರಣದಲ್ಲಿ ವ್ಯಾಪಿಸಿತ್ತು. 
ಯೂರೋಪ್‍ನ ರೋಮಾ ಸಮುದಾಯ ಇದೇ ರೀತಿಯ ದೌರ್ಜನ್ಯ ಎದುರಿಸಿತ್ತು. 1997ರಲ್ಲಿ ಪ್ರಕಟವಾದ ತಮ್ಮ “ ಸ್ಟೋರಿಯಾ ಡೆಗ್ಲಿ ಜಿಂಗಾರಿ ಇಟಾಲಿಯಾ” ಎಂಬ ಕೃತಿಯಲ್ಲಿ ಲೇಖಕ ಜಾರ್ಜಿಯೋ ವ್ಯಾಗಿಯೋ ದಾಖಲಿಸಿರುವಂತೆ, 1493 ರಿಂದ 1785ರ ಅವಧಿಯಲ್ಲಿ ಇಟಲಿಯ ಪ್ರಭುತ್ವ 121 ಶಾಸನಗಳನ್ನು ಜಾರಿಗೊಳಿಸಿದ್ದು, ಈ ಶಾಸನಗಳ ಮೂಲಕ ಜಿಂಗಾರಿಗಳ (ರೋಮಾ ಸಮುದಾಯವನ್ನು ಅಪಮಾನಗೊಳಿಸಲೆಂದೇ ಬಳಸಲಾಗುತ್ತಿದ್ದ ಪದ) ಚಲನೆಯನ್ನೇ ನಿರ್ಬಂಧಿಸಿತ್ತು. ರೋಮಾ ಸಮುದಾಯದ ಜನರೇ ಸಾಂಕ್ರಾಮಿಕ ಅಥವಾ ಸರ್ವವ್ಯಾಪಿ ರೋಗಗಳಿಗೆ ಕಾರಣ ಎನ್ನುವ ಪೂರ್ವಗ್ರಹವೇ ಇಂತಹ ಪ್ರಭುತ್ವ ಶಾಸನಗಳಿಗೆ ಕಾರಣವಾಗಿತ್ತು. 
ಮಧ್ಯ ಪ್ರಾಚೀನ ಯೂರೋಪ್‍ನಲ್ಲಿ ಪ್ಲೇಗ್ ರೋಗ ಕಾಡಿದಾಗಲೆಲ್ಲಾ, ಸಾಂಪ್ರದಾಯಿಕ ಔಷಧಿ ಬಳಸುವವರಿಂದಲೇ ಹರಡುತ್ತದೆ ಎಂದು ಆರೋಪಿಸಲಾಗುತ್ತಿತ್ತು. ಈ ಜನಸಮುದಾಯಗಳನ್ನು ಮಂತ್ರವಾದಿಗಳು ಎಂದು ಜರೆದು ದೌರ್ಜನ್ಯ ನಡೆಸಲಾಗುತ್ತಿತ್ತು. ಇತಿಹಾಸಕಾರ ಬ್ರಿಯಾನ್ ಲೇವಾಕ್ (2006) ಅವರ ಪ್ರಕಾರ ಯೂರೋಪ್‍ನಲ್ಲಿ  90000 ಸಾವಿರ ಜನರನ್ನು ಮಾಟಮಂತ್ರ ಮಾಡುವ ಆರೋಪದ ಮೇಲೆ ಶಿಕ್ಷೆಗೊಳಪಡಿಸಲಾಗಿತ್ತು. ನಿಖರವಾದ ಮಾಹಿತಿ ಇಲ್ಲವಾದರೂ, ಇವರ ಪೈಕಿ ಬಹುಪಾಲು ಮಹಿಳೆಯರೇ ಇದ್ದುದು ಸತ್ಯ.
ಜೀವಾಣು ಸೂತ್ರಗಳನ್ನು ಕಂಡುಹಿಡಿದ ನಂತರದಲ್ಲಿ ಮಧ್ಯಪ್ರಾಚೀನ ಯುಗದಲ್ಲಿ ಕಂಡುಬಂದಿದ್ದ ಪ್ಲೇಗ್ ಕುರಿತ ನಂಬಿಕೆಗಳು ಅಳಿಸಿಹೋಗಿದ್ದವು. ರೋಗಗಳನ್ನು ಹರಡುವುದು ಮನುಷ್ಯರಲ್ಲ, ಸೂಕ್ಷ್ಮ ಜೀವಾಣುಗಳು ಅಥವಾ ರೋಗವಾಹಕಗಳು ಎಂದು ಜನರಿಗೆ ಅರಿವಾಗಿತ್ತು. ಈ ರೋಗವಾಹಕಗಳು, ಜೀವಾಣುಗಳು ಮನುಷ್ಯ ಮನುಷ್ಯನ ನಡುವೆ, ಮನುಷ್ಯ ಮತ್ತು ಪ್ರಾಣಿಗಳ ನಡುವೆ ನೀರಿನ ಮೂಲಕ, ಆಹಾರದ ಮೂಲಕ, ದೈಹಿಕ ಸ್ಪರ್ಶದ ಮೂಲಕ ಹರಡುತ್ತವೆ ಎಂದು  ಜನರಿಗೆ ಅರ್ಥವಾಗತೊಡಗಿತ್ತು. ಈ ಜೀವಾಣುಗಳಿಗೆ ಸಾಮಾಜಿಕ ವರ್ಗೀಕರಣದ ಪರಿವೆ ಇರುವುದಿಲ್ಲ ಎನ್ನುವುದನ್ನೂ ನಾವು ಅರ್ಥಮಾಡಿಕೊಂಡೆವು. ರಾಜಕೀಯ ಸ್ಪರ್ಶವಿಲ್ಲದ, ಅನೈತಿಕತೆ ಇಲ್ಲದ ಈ ಜೀವಾಣುಗಳು ಸಾಂಕ್ರಾಮಿಕ ರೋಗಗಳಿಗೆ ಕಾರಣವಾಗುತ್ತವೆ, ಇವುಗಳನ್ನು ಸೂಕ್ಷ್ಮ ದರ್ಶಕ ಯಂತ್ರಗಳ ಮೂಲಕ ನೋಡಬಹುದೇ ಹೊರತು, ಪೂರ್ವಗ್ರಹಪೀಡಿತ ಮಸೂರಗಳ ಮೂಲಕ ನೋಡಲಾಗುವುದಿಲ್ಲ ಎಂದು ಮಾನವ ಸಮಾಜ ಅರ್ಥಮಾಡಿಕೊಂಡಿತ್ತು. 
ಆದರೆ ಸೂಕ್ಷ್ಮ ದರ್ಶಕ ಆ ಕಾಲಘಟ್ಟದ ಸಂಶೋಧನೆಯ ಉಪಕರಣ ಮಾತ್ರ ಆಗಿರಲಿಲ್ಲ. ಅದು ಸಾಮ್ರಾಜ್ಯದ ಅಸ್ತ್ರವಾಗಿತ್ತು. ಉಷ್ಣ ವಲಯದ ಪ್ರದೇಶಗಳಲ್ಲಿ ರೋಗಗಳು ತಾಂಡವಾಡುತ್ತಿದ್ದವು.  ಆಂಗ್ಲೋ ಯೂರೋಪಿಯನ್ ಆಡಳಿತಗಾರರ ಸ್ವಾಸ್ಥ್ಯ ಇದರಿಂದ ಹದಗೆಟ್ಟು ಹೋಗಿತ್ತು. ವಸಾಹತು ಪ್ರಜೆಗಳಿಗಿಂತಲೂ ಸೊಳ್ಳೆಗಳು ಇವರ ಪಾಲಿಗೆ ದಂಗೆಕೋರರಂತೆ ಕಂಡುಬಂದವು. ಈ ಸಂದರ್ಭದಲ್ಲಿ ವಸಾಹತುಶಾಹಿ ಸಾಮ್ರಾಜ್ಯಗಳು ಉಷ್ಣವಲಯದ ರೋಗಗಳು ಎಂಬ ವರ್ಗೀಕರಣಕ್ಕೆ ನಾಂದಿ ಹಾಡಲು ಸೂಕ್ಷ್ಮ ದರ್ಶಕ ಯಂತ್ರ ನೆರವಾಗಿತ್ತು. 1817ರಲ್ಲಿ ಕಾಲರಾ ಸ್ಫೋಟಿಸಿದಾಗ, ಇದನ್ನು ಏಷಿಯಾಟಿಕ್ ಕಾಲರಾ ಎಂದು ಹೆಸರಿಸಲಾಯಿತು. ಇದಕ್ಕೆ ಕಾರಣ ಎಂದರೆ ಇದು ಭಾರತದ ಗಂಗಾನದಿಯ ಪ್ರದೇಶದಲ್ಲಿ ಸ್ಥಳೀಯವಾಗಿ ಕಂಡುಬರುವ ವ್ಯಾಧಿ ಎಂದು ನಂಬಲಾಗಿತ್ತು. ಶೀಘ್ರಗತಿಯಲ್ಲಿ ಇದು ಯೂರೋಪ್‍ಗೆ ಹರಡಿತ್ತು. ವಸಾಹತುಗಳಲ್ಲಿ ಸೃಷ್ಟಿಯಾಗುವ ರೋಗಗಳು ವಸಾಹತುಶಾಹಿ ಸಾಮ್ರಾಜ್ಯಗಳನ್ನು ಆಕ್ರಮಿಸುತ್ತವೆ ಎಂಬ ಭೀತಿ ಸೃಷ್ಟಿಸಲಾಯಿತು. 
ಇದು ತೀವ್ರತೆರನಾದ, ಗಂಭೀರ ವೈಜ್ಞಾನಿಕ ಅಧ್ಯಯನ ಮತ್ತು ಸಂಶೋಧನೆಗೆ ನಾಂದಿ ಹಾಡಿತ್ತು. 19ನೆಯ ಶತಮಾನದ ವೈದ್ಯಕೀಯ ವಿಜ್ಞಾನ, ಎಲ್ಲ ರೋಗಗಳನ್ನೂ ಸ್ಥಳೀಯ ಸ್ಪರ್ಶದೊಂದಿಗೇ ನೋಡುವ ಪರಿಪಾಠ ಇದ್ದುದನ್ನು ಗಮನಿಸಿ ಈ ಕುರಿತು ವಿಸ್ತೃತವಾಗಿ ಬರೆದ ಇತಿಹಾಸಕಾರ ಪ್ರತೀಕ್ ಚಕ್ರವರ್ತಿ 2010ರ ತಮ್ಮ ಪ್ರಬಂಧವೊಂದರಲ್ಲಿ, ರಾಬರ್ಟ್ ಕೊಚ್ ಕಂಡುಹಿಡಿದ ಕಾಲರಾ ರೋಗವಾಹಕವನ್ನು, ‘ವಿಬ್ರಿಯೋ ಕಾಲರೇ’- ಅಲ್ಪ ವಿರಾಮ ಚಿಹ್ನೆಯಂತಿರುವ ರೋಗವಾಹಕ- ಹೇಗೆ ಉಷ್ಣವಲಯದ ವಾತಾವರಣಗಳಿಗೆ ಮತ್ತು ದೇಹಗಳಿಗೆ ಆರೋಪಿಸಲಾಯಿತು ಎಂದು ವಿವರಿಸಿದ್ದಾರೆ.  ವಿಶೇಷವಾಗಿ ವಸಾಹತುಗಳಲ್ಲಿ ನೆಲೆಸುವ ಜನರ ಕರುಳು ಮತ್ತು ಪಿತ್ತರಸ ನಾಳ ರೋಗವಾಹಕಗಳ ಮೂಲ ಎಂದು ಅಭಿಪ್ರಾಯ ಸೃಷ್ಟಿಸಲಾಯಿತು.
ನಂತರದಲ್ಲಿ ಜಗತ್ತನ್ನು ಕಾಡಿದ ಮಹಾ ಬೇನೆ ಎಂದರೆ ಕುಷ್ಟರೋಗ.  ಕುಷ್ಟರೋಗಿಗಳು ಸಾಮಾಜಿಕವಾಗಿ ಬಹಿಷ್ಕೃತರಾಗಿಬಿಟ್ಟರು. ಮನುಸ್ಮೃತಿಯಲ್ಲೂ ಸಹ ಕುಷ್ಟರೋಗಿಗಳನ್ನು ಪಾಪಿಷ್ಟರು ಎಂದು ಪರಿಗಣಿಸಿ ಬಹಿಷ್ಕರಿಸುವಂತೆ ಹೇಳಲಾಗಿದೆ. 1891ರಲ್ಲಿ ಪ್ರಕಟವಾದ ಕುಷ್ಟರೋಗ ಆಯೋಗ ತನ್ನ ವರದಿಯಲ್ಲಿ “ ಈ ರೋಗದಿಂದ ಉಂಟಾಗುವ ಸೋಂಕಿನ ಪ್ರಮಾಣ ಅತ್ಯಂತ ಕನಿಷ್ಟವಾಗಿದ್ದು ಅದನ್ನು ನಿರ್ಲಕ್ಷಿಸಬಹುದು ” ಎಂದು ಹೇಳಿದ್ದರೂ ಸಹ ಭಾರತ ಮತ್ತು ಯೂರೋಪ್‍ನಲ್ಲಿನ ಮೇಲ್ವರ್ಗದ ಜನರು ಕುಷ್ಟರೋಗಿಗಳನ್ನು ಸಾರ್ವಜನಿಕವಾಗಿ ನೋಡಕೂಡದು ಎಂದು ನಿರ್ಬಂಧ ವಿಧಿಸಿದರು. ಕುಷ್ಟರೋಗಿಗಳನ್ನು ನೋಡುವುದರಿಂದಲೇ ಹೇಸಿಗೆ ಹುಟ್ಟುತ್ತದೆ, ಜಿಗುಪ್ಸೆಯಾಗುತ್ತದೆ ಎಂದು ಪ್ರಚಾರ ಮಾಡಲಾರಂಭಿಸಿದರು. ಇದರ ಪರಿಣಾಮ 1898ರ ಕುಷ್ಟರೋಗ ಕಾಯ್ದೆ ಜಾರಿಗೆ ಬಂದಿತ್ತು. ಇದು ಕುಷ್ಟರೋಗಿಗಳನ್ನು ಸಾಂಸ್ಥೀಕರಣಗೊಳಿಸಿತ್ತು. ಸಂತಾನ ಪ್ರಕ್ರಿಯೆಯನ್ನು ತಡೆಗಟ್ಟಲು ಕುಷ್ಟರೋಗಿಗಳನ್ನೂ ಪ್ರತ್ಯೇಕಿಸಿ, ಪುರುಷ ಮಹಿಳೆಯರನ್ನು ಪ್ರತ್ಯೇಕವಾಗಿ ಇರಿಸಲಾಗುತ್ತಿತ್ತು. ಈ ಎಲ್ಲ ಕ್ರಮಗಳನ್ನೂ ಕೈಗೊಂಡಿದ್ದು ವಸಾಹತುಶಾಹಿ ಸಾಮ್ರಾಜ್ಯದ ಗಣ್ಯ ಸಮಾಜದವರನ್ನು ಓಲೈಸುವ ಉದ್ದೇಶದಿಂದ.
ವಸಾಹತುಶಾಹಿ ವಿಜ್ಞಾನ ಸಾಂಕ್ರಾಮಿಕ ರೋಗಗಳನ್ನು ಉಷ್ಣವಲಯಗಳಿಗೆ ಸಮೀಕರಿಸುವುದರಲ್ಲಿ ಯಶಸ್ವಿಯಾಗಿದ್ದರೆ , ಸಾಹಿತ್ಯ ಲೋಕ ಇದನ್ನು ಮತ್ತಷ್ಟು ಮೂರ್ತೀಕರಿಸಿತ್ತು.  ಥಾಮಸ್ ಮ್ಯಾನ್ ಅವರ ‘ಡೆತ್ ಇನ್ ವೆನಿಸ್’ ಕಾದಂಬರಿಯಲ್ಲಿ, ಕಾಲರಾ ಸಾಂಕ್ರಾಮಿಕ ರೋಗ  ನಗರದಲ್ಲಿ ಹರಡುವ ಕಥನವಿದ್ದು, ಇದರಲ್ಲಿ ಈ ರೋಗವನ್ನು ಭಾರತೀಯ ಕಾಲರಾ ಎಂದು ಬಣ್ಣಿಸಲಾಗಿದೆ. “ ಈ ಭಾರತೀಯ ಕಾಲರಾ ಗಂಗಾ ತೀರದ ಕೊಳೆಗೇರಿಗಳಲ್ಲಿ ಸೃಷ್ಟಿಯಾಗಿ, ಜನರು ಹತ್ತಿರ ಸುಳಿಯಲೂ ನಿರಾಕರಿಸುವ, ನಿರುಪಯುಕ್ತ ಭೂಮಿಯಿಂದ ಹೆಣಸುಟ್ಟ ಕಮಟು ವಾಸನೆಯೊಂದಿಗೆ ಹರಡುತ್ತದೆ,,, ” ಎಂದು ಕಾದಂಬರಿಕಾರ ಹೇಳುತ್ತಾನೆ.
ಸಾಂಕ್ರಾಮಿಕ ಪೌರಸ್ತ್ಯ:
ಈ ರೀತಿಯ ವಸಾಹತುಶಾಹಿ ರಾಚನಿಕತೆಯನ್ನು ಸಂಶೋಧಕ ಅಲೆಕ್ಸಾಂಡರ್ ವೈಟ್ ತನ್ನ 2018ರ ಪ್ರಬಂಧವೊಂದರಲ್ಲಿ “ ಸಾಂಕ್ರಾಮಿಕ ಪೌರಸ್ತ್ಯ ” ಎಂದು ಗುರುತಿಸುತ್ತಾನೆ.  ಈ ರಾಚನಿಕತೆಯ ಚೌಕಟ್ಟಿನಲ್ಲೇ ರೋಗಗಳನ್ನು ಗುರುತಿಸುವುದನ್ನೂ ಉಲ್ಲೇಖಿಸುತ್ತಾನೆ. ಉದಾಹರಣೆಗೆ,  1826ರ ಏಷಿಯಾಟಿಕ್ ಕಾಲರಾ, 1846ರ ಏಷಿಯಾಟಿಕ್ ಪ್ಲೇಗ್, 1956ರ ಏಷಿಯಾಟಿಕ್ ಫ್ಲೂ, 1900ರ ರಿಫ್ಟ್ ವ್ಯಾಲಿ ಜ್ವರ,  2012ರ ಮದ್ಯ ಪ್ರಾಚ್ಯ ಉಸಿರಾಟದ ತೊಂದರೆ,  1968ರ ಹಾಂಕಾಂಗ್ ಫ್ಲೂ, ಇತ್ಯಾದಿ.  ಈಗ ವಿಶ್ವ ಆರೋಗ್ಯ ಸಂಸ್ಥೆ ಹೊಸ ಸಂಹಿತೆಯನ್ನು ರೂಪಿಸಿದ್ದು, ಇದರ ಅನ್ವಯ ಸಾಂಕ್ರಾಮಿಕ ರೋಗಗಳನ್ನು ವೈದ್ಯಕೀಯ ಭಾಷೆಯಲ್ಲಿ ತಟಸ್ಥ ರೀತಿಯಲ್ಲಿ ಹೆಸರಿಸುವುದು ಕಡ್ಡಾಯವಾಗಿದೆ.
ಆದಾಗ್ಯೂ ಸಾಂಕ್ರಾಮಿಕ ಬೇನೆಗಳನ್ನು ಮತ್ತು ರೋಗಗಳನ್ನು ಸಾಮಾಜಿಕ ನೆಲೆಯಲ್ಲಿ  ಜನಾಂಗೀಯ, ಲಿಂಗಾಧಾರಿತ, ಲೈಂಗಿಕ ಆದ್ಯತೆಯ ಮತ್ತು ಭೌಗೋಳಿಕ ಭೂಮಿಕೆಯ ಮೇಲೆ ಗುರುತಿಸುವುದು ಇಂದಿಗೂ ಮುಂದುವರೆದಿದೆ. ಅಮೆರಿಕದ ಟ್ರಂಪ್ ಸರ್ಕಾರ ಕೋವಿದ್ 19ನನ್ನು ಚೀನಾ ವೈರಾಣು ಎಂದೇ ಉಲ್ಲೇಖಿಸುತ್ತಿದೆ.  ಕೆಲವರು ಇದನ್ನು ‘ಕುಂಗ್ ಫ್ಲೂ’ ಎಂದೂ ಕರೆಯುತ್ತಿದ್ದಾರೆ. ಈ ನಾಮಕರಣ ಪ್ರಕ್ರಿಯೆಯಲ್ಲೇ ಪೂರ್ವಗ್ರಹ ಎದ್ದು ಕಾಣುತ್ತದೆ. ಹೆಚ್‍ಐವಿ/ಏಡ್ಸ್ ಕಾಯಿಲೆ ಕಾಣಿಸಿಕೊಂಡ ಸಂದರ್ಭದಲ್ಲಿ ಅದನ್ನು “ Gay Related Immuno Deficiency ” (GRID)ಎಂದೇ ಹೆಸರಿಸಲಾಗಿತ್ತು. ಈ ಹೆಸರು ಅಲ್ಪ ಕಾಲವೇ ಪ್ರಚಲಿತವಾಗಿದ್ದರೂ, ಅಮೆರಿಕದಲ್ಲಿ ವಿದ್ಯುನ್ಮಾನ ಧರ್ಮ ಪ್ರಚಾರಕರು 1980ರ ದಶಕದಿಂದಲೇ ಈ ಕಾಯಿಲೆಯನ್ನು “ಗೇ ಪ್ಲೇಗ್” ಎಂದು ಹೇಳುತ್ತಿದ್ದುದನ್ನು ಇದು ಪುಷ್ಟೀಕರಿಸಿತ್ತು. ಇದು ದ್ವಿಲಿಂಗಿಗಳಿಗೆ ಲೈಂಗಿಕವಾಗಿ ಅಡ್ಡಹಾದಿ ಅನುಸರಿಸಿದ್ದಕ್ಕೆ ದೇವರು ನೀಡಿದ ಶಿಕ್ಷೆ ಎಂದೇ ಧರ್ಮ ಪ್ರಚಾರಕರು ದೂಷಿಸುತ್ತಿದ್ದರು. ಇಂದಿಗೂ ಸಹ ಹಲವು ದೇಶಗಳ ಶಾಸನಗಳಲ್ಲಿ ಹೆಚ್‍ಐವಿ/ಏಡ್ಸ್ ಕಾಯಿಲೆ ದ್ವಿಲಿಂಗಿಗಳಿಗೇ ಹೆಚ್ಚು ತಗುಲುತ್ತದೆ ಎಂದು ಉಲ್ಲೇಖಿಸಿರುವುದನ್ನು ಗಮನಿಸಬಹುದು. ಈ ದೇಶಗಳಲ್ಲಿ ದ್ವಿಲಿಂಗಿಗಳು ರಕ್ತದಾನ ಮಾಡುವ ಅವಕಾಶವನ್ನೂ ಹೊಂದಿರುವುದಿಲ್ಲ.
ಇತಿಹಾಸವನ್ನು ಗಮನಿಸಿದಾಗ ನಮಗೆ ಅರ್ಥವಾಗುವ ಒಂದು ಸಂಗತಿ ಎಂದರೆ, ಮಾನವ ಸಮಾಜ ರೋಗ ಉಂಟುಮಾಡುವ ರೋಗವಾಹಕಗಳನ್ನು ಉತ್ತಮವಾಗಿ ನಿರ್ವಹಿಸಿ ಎದುರಿಸಿದೆ, ಆದರೆ ಮಾನವ ಸಮಾಜದಲ್ಲಿನ ಪೂರ್ವಗ್ರಹಗಳನ್ನು ಸಮರ್ಥವಾಗಿ ಎದುರಿಸಲಾಗಿಲ್ಲ.  ಸರ್ವವ್ಯಾಪಿ ಬೇನೆಗಳು ದ್ವೇಷ ಹುಟ್ಟಿಸುವುದಿಲ್ಲ ಆದರೆ ದ್ವೇಷ ಹೆಚ್ಚಿಸಲು ನೆರವಾಗುತ್ತವೆ. ಚೀನಾ ಸರ್ಕಾರ ಕೋವಿದ್ 19 ಬೇನೆಯನ್ನು ಸಮರ್ಥವಾಗಿ ನಿಯಂತ್ರಿಸದೆ, ಎಲ್ಲೆಡೆ ವ್ಯಾಪಿಸುವಂತೆ ಮಾಡಿರುವುದರ ಹಿಂದೆ ಅಮೆರಿಕವನ್ನು ದುರ್ಬಲಗೊಳಿಸುವ ಪಿತೂರಿ ಅಡಗಿದೆ ಎಂದು ಟ್ರಂಪ್ ಆಡಳಿತ ಆರೋಪಿಸುತ್ತಿದೆ. ಕ್ರೈಸ್ತ ಧರ್ಮವನ್ನು ನಾಶಪಡಿಸಲು ಯಹೂದಿಗಳು ಪೈಶಾಚಿಕವಾಗಿ ರೋಗವನ್ನು ಸೃಷ್ಟಿಸಿದ್ದರು ಎಂದು ಕ್ಯಾಥೊಲಿಕ್ ಚರ್ಚ್ ಇದೇ ರೀತಿ ಆರೋಪಿಸಿದ್ದುದನ್ನು ಟ್ರಂಪ್ ನಿಲುವು ನೆನಪಿಸುತ್ತದೆ. ಹಾಗೆಯೇ ಯೂರೋಪಿನ ಲಿ ಪೆನ್ ಮತ್ತು ಸಾಲ್ವಿನಿ ಮುಂತಾದ ರಾಜಕಾರಣಿಗಳು ವಲಸೆ ಕಾರ್ಮಿಕರು ಮತ್ತು ನಿರಾಶ್ರಿತರೇ ಕೊರೋನಾ ವೈರಾಣುವನ್ನು ಹರಡುತ್ತಿದ್ದಾರೆ ಎಂಬ ಜನಾಂಗೀಯ ಆರೋಪ ಮಾಡಿರುವುದು ಟ್ರಂಪ್ ನಿಲುವನ್ನು ಸಮರ್ಥಿಸುವಂತೆ ಕಾಣುತ್ತದೆ.
ಮಧ್ಯಪ್ರಾಚೀನ ಯುಗದ ಯೂರೋಪ್‍ನ ನಾಯಕರು “ಪ್ಲೇಗ್ ಹರಡುವವರು” ಎಂದು ಕೆಲವು ಸಮುದಾಯಗಳನ್ನು ದೂಷಿಸುತ್ತಿದ್ದಂತೆಯೇ, ನಾಲ್ಕು ವರ್ಷಗಳ ಹಿಂದೆ ಅಮೆರಿಕದ ಅಧ್ಯಕ್ಷ ಚುನಾವಣೆಯ ಪ್ರಚಾರದಲ್ಲಿ ತೊಡಗಿದ್ದಾಗ ಟ್ರಂಪ್ “ ಗಡಿಯಾಚೆಗಿನ ದೇಶಗಳಿಂದ ಸೋಂಕು ರೋಗಗಳನ್ನು ಅಮೆರಿಕದಲ್ಲಿ ಹರಡುವ ಲಕ್ಷಣಗಳು ಕಾಣುತ್ತಿವೆ ” ಎಂದು ಹೇಳಿದ್ದನ್ನು ಸ್ಮರಿಸಬಹುದು. ಟ್ರಂಪ್ ಅವರ ಈ ಆರೋಪ ಮೆಕ್ಸಿಕೋದಿಂದ ಅಮೆರಿಕಕ್ಕೆ ಬರುತ್ತಿರುವ ವಲಸೆ ಕಾರ್ಮಿಕರನ್ನು ಕುರಿತಾಗಿತ್ತು. ವಿಡಂಬನೆ ಎಂದರೆ ಈಗ ಮೆಕ್ಸಿಕೋ ಸರ್ಕಾರ ಅಮೆರಿಕದಿಂದ ವಲಸೆ ಬರುತ್ತಿರುವರನ್ನು ತಡೆಗಟ್ಟುವ ಮೂಲಕ ಕೊರೋನಾ ವಿರುದ್ಧ ಹೋರಾಡುತ್ತಿದೆ. 
ಕೋವಿದ್ 19 ಹಿನ್ನೆಲೆಯಲ್ಲಿ ಭಾರತದಲ್ಲೂ ಸುಪ್ತವಾಗಿದ್ದ ಪೂರ್ವಗ್ರಹಗಳು ಮೇಲೇಳುತ್ತಿವೆ. ಕಟ್ಟಡಗಳ ಮಾಲಿಕರು ವೈದ್ಯಕೀಯ ಸಿಬ್ಬಂದಿಗೆ ಕಟ್ಟಡದೊಳಗೆ ಪ್ರವೇಶ ನಿರಾಕರಿಸುತ್ತಿದ್ದಾರೆ. ಜನರು ಜಾತಿ ಮತ್ತು ಅಸ್ಪøಶ್ಯತೆಯನ್ನು ಜೀವಂತವಾಗಿಡಲು ಸಾಮಾಜಿಕ ಅಂತರ ಎಂಬ ಪದವನ್ನು ಬಳಸುತ್ತಿದ್ದಾರೆ. ಈಶಾನ್ಯ ಭಾರತದ ಪ್ರಜೆಗಳು ಜನಾಂಗೀಯ ನಿಂದನೆ ಎದುರಿಸುತ್ತಿದ್ದು ಉಚ್ಚಾಟನೆಯ ಭೀತಿ ಎದುರಿಸುತ್ತಿದ್ದಾರೆ.  ವಿದೇಶಗಳಲ್ಲಿದ್ದ ಭಾರತೀಯರನ್ನು ಕರೆತರಲು ವಿಮಾನಗಳನ್ನು ಕಳುಹಿಸಿದ ಸರ್ಕಾರವೇ ಇಂದು ತನ್ನ ನೆಲದಲ್ಲಿರುವ ವಲಸೆ ಕಾರ್ಮಿಕರಿಗೆ ನೆಲೆ ಒದಗಿಸಲು ವಿಫಲವಾಗಿದೆ. ಅವರನ್ನು ಸುರಕ್ಷಿತವಾಗಿ ತವರಿಗೆ ಕಳುಹಿಸಲೂ ವಿಫಲವಾಗುತ್ತಿದೆ.  
ಕೇಂದ್ರ ಸರ್ಕಾರ ಘೋಷಿಸಿರುವ ಲಾಕ್ ಡೌನ್ ಹಿನ್ನೆಲೆಯಲ್ಲಿ ವಲಸೆ ಕಾರ್ಮಿಕರು ನೂರಾರು ಕಿಲೋಮೀಟರ್ ನಡಿಗೆಯ ಮೂಲಕ ತಮ್ಮ ಊರು ತಲುಪುತ್ತಿದ್ದಾರೆ.  ರಸ್ತೆಯಲ್ಲೇ ಮಲಗಿ, ಊಟವಿಲ್ಲದೆ, ಕುಡಿಯಲು ನೀರಿಲ್ಲದೆ ಬಳಲುತ್ತಿದ್ದಾರೆ.  20 ಕಾರ್ಮಿಕರು ಈಗಾಗಲೇ ಮೃತಪಟ್ಟಿದ್ದಾರೆ. ಈ ವೇಳೆಗಾಗಲೇ ಸರ್ಕಾರಗಳು ವಲಸೆ ಕಾರ್ಮಿಕರಿಗೆ ನಿರಾಶ್ರಿತ ಶಿಬಿರಗಳನ್ನು ನಿರ್ಮಿಸಲು ಕ್ರಮ ಕೈಗೊಂಡಿದ್ದು , ಊರಿಗೆ ಹೋಗುವವರಿಗೆ ಸಾರಿಗೆ ವ್ಯವಸ್ಥೆಯನ್ನೂ ಒದಗಿಸುತ್ತಿದೆ. ಉತ್ತರಪ್ರದೇಶದಲ್ಲಿ ವಲಸೆ ಕಾರ್ಮಿಕರ ಮೇಲೆ ಸಾಮೂಹಿಕವಾಗಿ ರಾಸಾಯನಿಕ ಔಷಧಿಯನ್ನು ಸಿಂಪಡಿಸಲಾಗುತ್ತಿದ್ದು ಅವರನ್ನು ರೋಗವಾಹಕರಂತೆ ಕಾಣಲಾಗಿದೆ.  ಇದು ಸಾಲದೆಂಬಂತೆ ಕೋಮುವಾದಿ ಪೂರ್ವಗ್ರಹಗಳು ಮುನ್ನೆಲೆಗೆ ಬಂದಿದ್ದು ವ್ಯಾಪಕವಾಗಿ ಹರಡುತ್ತಿದೆ. ನವದೆಹಲಿಯ ನಿಜಾಮುದ್ದಿನ್‍ನಲ್ಲಿ ನಡೆದ ತಬ್ಲೀಗಿ ಜಮಾತ್ ಸಮ್ಮೇಳನ ಈ ಪೂರ್ವಗ್ರಹ ಪೀಡಿತರಿಗೆ ಮತ್ತಷ್ಟು ಪುಷ್ಟಿ ನೀಡಿದೆ.
ಯಾವುದೇ ರೋಗವಾಹಕಗಳು ಜನಾಂಗ ಅಥವಾ ಪ್ರದೇಶವನ್ನು ಆಯ್ಕೆ ಮಾಡಿಕೊಳ್ಳುವುದಿಲ್ಲ,  ಅವುಗಳಿಗೆ ಬೆಚ್ಚಗಿರುವ ಮಾನವನ ದೇಹವೇ ಆಶ್ರಯತಾಣವಾಗುತ್ತದೆ,  ಪೌಷ್ಟಿಕತೆ ಹೆಚ್ಚಾಗಿರುವ ದೇಹವೇ ಉತ್ತಮ ಆಶ್ರಯವಾಗುತ್ತದೆ ಎನ್ನುವ ವಾಸ್ತವಗಳನ್ನು ನಿರೂಪಿಸುವ ಮೂಲಕ ವಿಜ್ಞಾನ ಜನರನ್ನು ಅವೈಚಾರಿಕ, ಅವೈಜ್ಞಾನಿಕ ಮೌಢ್ಯಗಳಿಂದ ಪಾರು ಮಾಡುತ್ತದೆ ಎಂದು ನಂಬಲಾಗಿತ್ತು.  ದುರದೃಷ್ಟವಶಾತ್  ಈ ರೋಗವಾಹಕಗಳ ವೈಜ್ಞಾನಿಕ ಗ್ರಹಿಕೆಯನ್ನೇ ದುರುಪಯೋಗಪಡಿಸಿಕೊಂಡು ಸಾಮಾಜಿಕ ಪೂರ್ವಗ್ರಹಗಳಿಗೆ ಪುಷ್ಟಿ ನೀಡಲಾಗುತ್ತಿದೆ.
ಯಾವುದೇ ಸರ್ವವ್ಯಾಪಿ ಬೇನೆಯ ಸಂದರ್ಭದಲ್ಲಿ ಅಂಟಿಕೊಳ್ಳುವ ಕಳಂಕ ದೀರ್ಘ ಕಾಲ ಇರುತ್ತದೆ. ಇದನ್ನು ಮೇರಿ ಮಲ್ಲೋನ್ ಅವರ ಕಹಿ ಅನುಭವದಲ್ಲಿ ಕಾಣಬಹುದು. ತನ್ನ ಜೀವನದ ಕಾಲು ಭಾಗವನ್ನು ಏಕಾಂತತೆಯಲ್ಲಿ ಪ್ರತ್ಯೇಕತೆಗೊಳಗಾಗಿಯೇ ಸವೆಸಿದ ಮೇರಿ ಮಲ್ಲೋನ್ ಇಂದಿಗೂ  ಆ ರೋಗದ ಸಂವಾದಿಯಾಗಿಯೇ ಉಳಿದಿದ್ದಾಳೆ. ಇಂದಿಗೂ ಸಹ ಸೋಂಕಿತರ ಮೇಲೆ ಇದೇ ರೀತಿಯ ಆಕ್ರಮಣ ನಡೆಯುತ್ತಿದೆ. ಕೊರೋನಾ ಹಿನ್ನೆಲೆಯಲ್ಲಿ ಸೋಂಕಿತರನ್ನು ಪ್ರತ್ಯೇಕವಾಗಿರಿಸುವ ಅನಿವಾರ್ಯತೆಯನ್ನು ಎದುರಿಸುತ್ತಿರುವ ಸರ್ಕಾರಗಳು, ಅವರ ಹೆಸರು ಮತ್ತು ವಿಳಾಸ ಪ್ರಕಟಿಸುವುದು, ಮನೆ ಬಾಗಿಲ ಮೇಲೆ ಚೀಟಿ ಅಂಟಿಸುವುದು,  ಅವರ ಚರ್ಮದ ಮೇಲೆ ನಮೂದಿಸುವುದು, ಅಳಿಸಲಾಗದ ಶಾಯಿ ಹಚ್ಚುವುದು ಇವೇ ಮುಂತಾದ ಕ್ರಮಗಳನ್ನು ಅನುಸರಿಸುತ್ತಿದ್ದು ಇದು ವೈದ್ಯಕೀಯ ನೈತಿಕ ಸಂಹಿತೆಯ ಉಲ್ಲಂಘನೆಯಾಗಿದೆ. ಇದರಿಂದ ಕೊರೋನಾ ಸೋಂಕಿತರು ಸಾಮಾಜಿಕ ಬಹಿಷ್ಕಾರ ಎದುರಿಸುವ ಸಾಧ್ಯತೆಗಳೂ ಹೆಚ್ಚಾಗುತ್ತವೆ.
20ನೆಯ ಶತಮಾನದ ಆರಂಭದಲ್ಲಿ ಓರ್ವ ವಲಸಿಗ ಮಹಿಳೆ ಸಮಾಜದ ಮುಂದೆ ಇಟ್ಟಿದ್ದ ಪ್ರಶ್ನೆಯನ್ನೇ ನಾವು 21ನೆಯ ಶತಮಾನದ ಮೂರನೆಯ ದಶಕದ ಹೊಸ್ತಿಲಲ್ಲಿ ಎದುರಿಸುತ್ತಿದ್ದೇವೆ.  ಮಾನವನ ಜೀವ ಉಳಿಸುವ ಯತ್ನದಲ್ಲಿ ಮಾನವತೆಯನ್ನು ಕೊಲ್ಲುವ ಅವಶ್ಯಕತೆ ಇದೆಯೇ ?
******

*ಟಿಪ್ಪಣಿ* : ಯುನೈಟೆಡ್ ಕಿಂಗ್‍ಡಮ್ ನಲ್ಲಿರುವ ಎಡಿನ್ ಬರ್ಗ್ ವಿಶ್ವವಿದ್ಯಾಲಯದಲ್ಲಿ ಲಿವರ್ ಹ್ಯೂಮ್ ಟ್ರಸ್ಟ್  ಪಿಹೆಚ್‍ಡಿ ವಿದ್ವಾಂಸರಾಗಿರುವ ಲೇಖಕರು ಆಸ್ಟ್ರಿಯಾದ ಕೊನ್ರಾಡ್ ಲಾರೆನ್ಸ್ ಸಂಸ್ಥೆಯ ಸದಸ್ಯರಾಗಿದ್ದಾರೆ. ಈ ಲೇಖನ ದ ಹಿಂದೂ ಪತ್ರಿಕೆಯ 05-04-20ರ ಭಾನುವಾರದ ಪುರವಣಿಯಲ್ಲಿ ಪ್ರಕಟವಾಗಿದೆ.
**
( ವಿಸೂ: ಕೊರೋನಾ ಮತ್ತು ಸಾಮಾಜಿಕ ಪೂರ್ವಗ್ರಹಗಳನ್ನು ಕುರಿತ ಒಂದು ಲೇಖನದಲ್ಲಿ ವಿದ್ಯುನ್-ಮಾನ ಸನ್ನಿಯೂ ಮಾಧ್ಯಮಗಳ ವ್ಯಸನವೂ)ನಾನು- ಜಗತ್ತಿನಲ್ಲಿ ಈ ಹಿಂದೆ ಸಂಭವಿಸಿದ ಇಂತಹ ಸಾಂಕ್ರಾಮಿಕ ರೋಗಗಳ ಸಂದರ್ಭದಲ್ಲಿ ರೋಗಗ್ರಸ್ತರನ್ನು ಮನುಷ್ಯರನ್ನಾಗಿ ನೋಡಲಾಗಿತ್ತು, ಯಾವುದೇ ಜನಾಂಗೀಯ-ಮತಧಾರ್ಮಿಕ ಅಸ್ಮಿತೆಗಳ ನೆಲೆಯಲ್ಲಿ ನೋಡಲಾಗಿರಲಿಲ್ಲ, ಭಾರತದಲ್ಲಿ ಈ ವಿದ್ಯಮಾನವನ್ನು ಕಾಣುತ್ತಿದ್ದೇವೆ ಎಂದು ಹೇಳಿದ್ದೆ. ಈ ಲೇಖನ ಓದಿದ ನಂತರ ನನ್ನ ಗ್ರಹಿಕೆ ತಪ್ಪು ಎಂದು ಅರಿವಾಯಿತು. ಗ್ರಹಿಕೆಯ ದೋಷ, ಅಧ್ಯಯನದ ಕೊರತೆ ಎರಡೂ ಈ ಲೋಪಕ್ಕೆ ಕಾರಣ ಎಂದು ಭಾವಿಸುತ್ತಲೇ ಓದುಗರ ಕ್ಷಮೆ ಕೋರುತ್ತೇನೆ.
-ನಾ ದಿವಾಕರ)

ಫಿಡೆಲ್ ಕ್ಯಾಸ್ಟ್ರೊ- ನಟರಾಜ ಹುಳಿಯಾರ್

ಮೊನ್ನೆ ಫಿಡೆಲ್ ಕ್ಯಾಸ್ಟ್ರೊನ ಚಿತಾಭಸ್ಮವನ್ನು ಅವನ ನೆಚ್ಚಿನ ಕ್ರಾಂತಿಕಾರಿ ಚಿಂತಕ ಜೋಸ್ ಮಾರ್ತಿಯ ಸಮಾಧಿಯ ಪಕ್ಕದಲ್ಲಿಟ್ಟ ದಿನ, ಹಿಂದೊಮ್ಮೆ ಮಾರ್ಕ್ವೆಜ್ ಜೊತೆ ಮಾತಾಡುತ್ತಾ, ‘ಮುಂದಿನ ಜನ್ಮದಲ್ಲಿ ಲೇಖಕನಾಗಿ ಹುಟ್ಟಬೇಕೆಂಬುದು ನನ್ನ ಆಸೆ’ ಎಂದು ಫಿಡೆಲ್ ಹೇಳಿದ್ದು ನೆನಪಾಯಿತು. 

ಜಗತ್ತಿನ ಶ್ರೇಷ್ಠ ಲೇಖಕರಲ್ಲೊಬ್ಬನಾದ ಕೊಲಂಬಿಯಾದ ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್ ತನ್ನ ಗೆಳೆಯ, ಕ್ರಾಂತಿಕಾರಿ ನಾಯಕ ಫಿಡೆಲ್ ಕ್ಯಾಸ್ಟ್ರೊ ಬಗ್ಗೆ ಸದಾ ಹೃದಯ ತುಂಬಿ ಮಾತಾಡುತ್ತಿದ್ದ. ‘ಫಿಡೆಲ್ ಬಗ್ಗೆ ಮಾತಾಡುವಾಗ ನಾನು ತೀರ್ಮಾನ ಕೊಡುವ ಸ್ಥಾನದಲ್ಲಿ ನಿಂತು ಮಾತಾಡಲಾರೆ; ಭಾವನೆಗಳ ಲೋಕದಿಂದ ಮಾತ್ರ ಮಾತಾಡಬಲ್ಲೆ’ ಎಂದ ಮಾರ್ಕ್ವೆಜ್,  ‘ಈ ಜಗತ್ತಿನಲ್ಲಿ ನಾನು ಅತ್ಯಂತ ಪ್ರೀತಿಸುವ ವ್ಯಕ್ತಿ ಫಿಡೆಲ್’ ಎಂದಿದ್ದ. ಕ್ಯಾಸ್ಟ್ರೊಗಿಂತ ಎರಡು ವರ್ಷ ಮೊದಲೇ ತೀರಿಕೊಂಡ ಮಾರ್ಕ್ವೆಜ್ ನಿಲುವು ಕೊನೆಯವರೆಗೂ ಹಾಗೇ ಇದ್ದಂತಿತ್ತು.

ಒಮ್ಮೆ ಮಾರ್ಕ್ವೆಜ್ ಬರಹಗಾರರ ಕಮ್ಮಟದಲ್ಲಿ ಮಾತಾಡುತ್ತಿರುವಾಗ, ಲೇಖಕನೊಬ್ಬ ‘ಕ್ಯಾಸ್ಟ್ರೊ ಒಬ್ಬ ಸರ್ವಾಧಿಕಾರಿ’ ಎಂದಾಗ, ಮಾರ್ಕ್ವೆಜ್ ಹೇಳಿದ: ‘ಚುನಾವಣೆ ನಡೆಸುವುದೊಂದೇ ಪ್ರಜಾಪ್ರಭುತ್ವವಾದಿಯಾಗಿರುವ ಮಾರ್ಗವಲ್ಲ.’ ಆದರೆ ಗೆಳೆಯ ಮಾಡಿದ್ದನ್ನೆಲ್ಲ ಮಾರ್ಕ್ವೆಜ್ ಒಪ್ಪುತ್ತಿದ್ದನೆಂದಲ್ಲ. ಜೆಕೊಸ್ಲೊವಾಕಿಯದಲ್ಲಿ ಸೋವಿಯತ್ ಯೂನಿಯನ್ ಹಸ್ತಕ್ಷೇಪ ಮಾಡಿದ್ದನ್ನು ಕ್ಯಾಸ್ಟ್ರೊ ಬೆಂಬಲಿಸಿದರೆ, ಮಾರ್ಕ್ವೆಜ್ ಅದನ್ನು ಪ್ರತಿಭಟಿಸಿದ್ದ.

ಅಧಿಕಾರ ‘ಮಾನವನ ಅತ್ಯುನ್ನತ ಮಹತ್ವಾಕಾಂಕ್ಷೆ ಹಾಗೂ ಇಚ್ಛಾಶಕ್ತಿಯ ರೂಪ’ ಎಂದು ಅರಿತಿದ್ದ ಮಾರ್ಕ್ವೆಜ್, ಪ್ರಖ್ಯಾತ ಲೇಖಕನಾದ ಮೇಲೆ ಹಲವು ದೇಶಗಳ ರಾಜಕೀಯ ನಾಯಕರನ್ನು ಹತ್ತಿರದಿಂದ ಬಲ್ಲವನಾಗಿದ್ದ. ಆದರೆ ಫಿಡೆಲ್ ಜೊತೆಗಿನ ಅವನ ಸ್ನೇಹ ಬೆಳೆದದ್ದು ಸಾಹಿತ್ಯದ ಮೂಲಕ. ಒಂದು ರಾತ್ರಿ ಮಾರ್ಕ್ವೆಜ್ ಹಾಗೂ ಫಿಡೆಲ್ ಮಾತಾಡುತ್ತಾ ಕೂತಿದ್ದರು.

ಇನ್ನೇನು ಬೆಳಗಿನ ಜಾವ ಆಗುತ್ತಿರುವಂತೆ, ಫಿಡೆಲ್ ‘ಇವತ್ತು ಓದಬೇಕಾಗಿರುವ ಪುಸ್ತಕಗಳು ನನಗಾಗಿ ಕಾಯುತ್ತಿವೆ’ ಎನ್ನುತ್ತಾ ಮೇಲೆದ್ದು, ‘ಇವನ್ನೆಲ್ಲ ಓದಬೇಕಾದದ್ದು ಅನಿವಾರ್ಯ; ಆದರೆ ಬೋರಿಂಗ್ ಹಾಗೂ ಶ್ರಮದಾಯಕ ಕೂಡ’ ಎಂದ. ಅದಕ್ಕೆ ಮಾರ್ಕ್ವೆಜ್ ‘ನಡುನಡುವೆ ಒಳ್ಳೆಯ, ಆದರೆ ಕೊಂಚ ಲೈಟ್ ಆದ ಪುಸ್ತಕಗಳನ್ನು ಓದುವುದು ಆ ಭಾರವನ್ನು ಕಳೆಯುವ ಉಪಾಯ’ ಎಂದು ಪುಸ್ತಕಗಳ ಪಟ್ಟಿ ನೀಡಿದರೆ, ಫಿಡೆಲ್ ಅವನ್ನೆಲ್ಲ ಓದಿಬಿಟ್ಟಿದ್ದ; ಅಷ್ಟೇ ಅಲ್ಲ, ಅವುಗಳ ಬಗ್ಗೆ ತನ್ನ ಅಭಿಪ್ರಾಯಗಳನ್ನೂ ಹೇಳತೊಡಗಿದ!

‘ಫಿಡೆಲ್ ಎಂಥ ದೈತ್ಯ ಓದುಗನೆಂಬುದು ಅನೇಕರಿಗೆ ಗೊತ್ತಿರಲಿಕ್ಕಿಲ್ಲ’ ಎನ್ನುವ ಮಾರ್ಕ್ವೆಜ್, ಅವತ್ತು ಬೆಳಗಿನ ಜಾವ ಫಿಡೆಲ್‌ಗೆ ತನ್ನ ‘ದಿ ಟೇಲ್ ಆಫ್ ಎ ಶಿಪ್ ರೆಕ್ಡ್ ಸೈಲರ್’ ಪುಸ್ತಕ ಕೊಟ್ಟ. ಮಾರನೆಯ ದಿನ ಹನ್ನೆರಡು ಗಂಟೆಯ ಹೊತ್ತಿಗೆ ಸಿಕ್ಕ ಫಿಡೆಲ್, ಆ ಪುಸ್ತಕದಲ್ಲಿದ್ದ ತಪ್ಪುಗಳನ್ನು ತೋರಿಸಿಕೊಟ್ಟ! ಫಿಡೆಲ್‌ಗೆ ಸಾಹಿತ್ಯಲೋಕ ಪ್ರಿಯವಾಗಿದ್ದುದನ್ನು ಕಂಡ ಮಾರ್ಕ್ವೆಜ್ ಅವನನ್ನು ಭೇಟಿಯಾಗುವಾಗಲೆಲ್ಲ ಹಲಬಗೆಯ ಪುಸ್ತಕಗಳನ್ನು ಒಯ್ಯತೊಡಗಿದ.

ಫಿಡೆಲ್ ಬರೆಯುವುದರ ಖುಷಿ ಕಂಡುಕೊಂಡಿದ್ದುದನ್ನೂ ಮಾರ್ಕ್ವೆಜ್ ಅರಿತ. ಫಿಡೆಲ್ ಕಾರಿನಲ್ಲಿ ಹೋಗುವಾಗ ನೋಟ್ ಬುಕ್ಕಿನಲ್ಲಿ ಬರೆಯುತ್ತಿದ್ದ. ಒಳ್ಳೆಯ ಲೇಖಕನಂತೆ ತಕ್ಕ ನುಡಿಗಟ್ಟಿಗಾಗಿ ತಡಕಾಡುತ್ತಿದ್ದ. ಬರೆದದ್ದನ್ನು ಹೊಡೆದುಹಾಕಿ ಮಾರ್ಜಿನ್ನಿನಲ್ಲಿ ಇನ್ನೇನೋ ಸೇರಿಸುತ್ತಿದ್ದ.  ಸರಿಯಾದ ಪದ ಸಿಕ್ಕುವ ತನಕ ಹಲವು ದಿನ ನಿಘಂಟುಗಳನ್ನು ಹುಡುಕುತ್ತಿದ್ದ; ಅವರಿವರನ್ನು ಕೇಳುತ್ತಿದ್ದ.

ಕ್ರಾಂತಿಕಾರಿ ಹೋರಾಟದ ಮೂಲಕ ಬಟಿಸ್ಟಾ ಸರ್ಕಾರವನ್ನು ಕಿತ್ತೊಗೆದ ಮೇಲೆ ಹವಾನಾದಲ್ಲಿ ಫಿಡೆಲ್ ಮಾಡಿದ ಏಳು ಗಂಟೆಯ ಭಾಷಣ ವಿಶ್ವದಾಖಲೆಯಿರಬಹುದು ಎನ್ನುವ ಮಾರ್ಕ್ವೆಜ್‌ಗೆ ಅವತ್ತು ಎಲ್ಲಿ ಹೋದರೂ ಫಿಡೆಲ್ ಭಾಷಣ ಕೇಳುತ್ತಲೇ ಇತ್ತು. ಅವನ ಮಾತಿನ, ವಾದದ ಮಾಂತ್ರಿಕ ಶಕ್ತಿ ಮಾರ್ಕ್ವೆಜ್‌ಗೆ ಅರಿವಾಗುತ್ತಾ ಹೋಯಿತು. ಫಿಡೆಲ್ ಒರಟು ದನಿ ಕೇಳಿದ ಡಾಕ್ಟರು ಇನ್ನು ಐದು ವರ್ಷಗಳಲ್ಲಿ ಅವನು ಮಾತು ಕಳೆದುಕೊಳ್ಳಲಿದ್ದಾನೆಂದು ಹೇಳಿದರು. 1962ರಲ್ಲೊಂದು ದಿನ ಫಿಡೆಲ್ ಮಾತು ನಿಂತು ಹೋಯಿತು; ಆದರೆ ಮರಳಿ ಬಂತು!   

ಚಿಂತನೆ, ಕ್ರಿಯೆ ಹಾಗೂ ಜನರ ಜೊತೆಗಿನ ಮಾತುಕತೆಯ ಮೂಲಕ ವಿಕಾಸಗೊಳ್ಳುತ್ತಿದ್ದ ಫಿಡೆಲ್ ಮಾತಿನ ವೈಶಿಷ್ಟ್ಯವನ್ನು ಮಾರ್ಕ್ವೆಜ್ ಮಾತಿನಲ್ಲೇ ಕೇಳಿ: ‘ಸಣ್ಣಗಿನ ದನಿಯಲ್ಲಿ, ಮಾತಾಡಲೋ ಬೇಡವೋ ಎಂಬ ಅನುಮಾನದಲ್ಲೇ ಫಿಡೆಲ್ ಮಾತು ಶುರುವಾಗುತ್ತಿತ್ತು. ಖಚಿತವಿರದ ದಿಕ್ಕಿನಲ್ಲಿ, ಮಂಜಿನಲ್ಲಿ ತಡವರಿಸುತ್ತಾ ಅವನ ಮಾತು ಮುಂದಡಿಯಿಡುತ್ತಿತ್ತು. ಅವನು ಇಂಚಿಂಚೇ ಬೇರು ಬಿಡುತ್ತಾ, ಹಟಾತ್ತನೊಮ್ಮೆ ದೊಡ್ಡ ಪಂಜದ ಹೊಡೆತದ ಮೂಲಕ ಜನರನ್ನು ಹಿಡಿದಿಟ್ಟುಕೊಳ್ಳಲಾರಂಭಿಸುತ್ತಿದ್ದ.

ಆಮೇಲೆ ಜನರ ಜೊತೆಗಿನ ಮಾತುಕತೆಯ ಮೂಲಕ ಅವರಿಂದ ಪಡೆಯುವುದೂ ಕೊಡುವುದೂ ಶುರುವಾಗುವುದು. ಇಂಥ ಉದ್ವಿಗ್ನತೆಯಲ್ಲಿ ಅವನ ಉತ್ತುಂಗ ಸ್ಥಿತಿ ಸೃಷ್ಟಿಯಾಗುವುದು. ಇದು ಅವನ ಸ್ಫೂರ್ತಿಯ ನೆಲೆ. ಈ ರಮ್ಯಘನತೆಯ ಉಜ್ವಲತೆಯನ್ನು ನೋಡದವರು, ಅನುಭವಿಸದವರು ಮಾತ್ರ ಅದನ್ನು ಅಲ್ಲಗಳೆಯಬಲ್ಲರು.’

ಮಾರ್ಕ್ವೆಜ್ ಕಂಡಂತೆ ಫಿಡೆಲ್ ಕಮ್ಯುನಿಸಮ್ಮಿನ ಕ್ಲೀಷೆಗಳನ್ನು, ವಾಸ್ತವದ ನಂಟು ಕಳಚಿಕೊಂಡ ಭಾಷೆಯನ್ನು ಬಳಸುವವನಲ್ಲ. ತನ್ನ ಪ್ರೀತಿಯ ಲೇಖಕ ಜೋಸ್ ಮಾರ್ತಿಯ ಮಾತುಗಳನ್ನು ಬಿಟ್ಟರೆ ಬೇರೆ ಲೇಖಕರನ್ನು ಅವನು ಹೆಚ್ಚು ಉಲ್ಲೇಖಿಸುವುದಿಲ್ಲ. ಜೋಸ್ ಮಾರ್ತಿಯ ಇಪ್ಪತ್ತೆಂಟು ಸಂಪುಟಗಳನ್ನೂ ಓದಿದ್ದ ಫಿಡೆಲ್, ಮಾರ್ತಿಯ ಚಿಂತನೆಯನ್ನು ಮಾರ್ಕ್ಸ್‌ವಾದಿ ಕ್ರಾಂತಿಯ ರಕ್ತನಾಳಗಳ ಜೊತೆ ಬೆರೆಯುವಂತೆ ಮಾಡಿದ. ಪ್ರತಿಕೂಲ ಸ್ಥಿತಿ ಎದುರಾದಾಗಲೆಲ್ಲ ಫಿಡೆಲ್ ತೀವ್ರವಾಗುತ್ತಾ ಹೋಗುತ್ತಿದ್ದ.

ಗೆಳೆಯನೊಬ್ಬ ಒಮ್ಮೆ ಫಿಡೆಲ್‌ಗೆ ಹೇಳಿದನಂತೆ: ‘ಪರಿಸ್ಥಿತಿ ತೀರಾ ಬಿಗಡಾಯಿಸಿರಬೇಕು; ಅದಕ್ಕೇ ಇಷ್ಟೊಂದು ಉಜ್ವಲವಾಗಿ ಕಾಣುತ್ತಿದ್ದೀಯ.’ ಮಾತಾಡುತ್ತಲೇ ಚಿಂತಿಸುವ, ಚಿಂತಿಸುತ್ತಲೇ ಮಾತಾಡಿ ಸ್ಪಷ್ಟತೆ ಪಡೆಯುವ ಫಿಡೆಲ್ ನಡುರಾತ್ರಿಯಲ್ಲಿ ಗೆಳೆಯನೊಬ್ಬನ ಮನೆಗೆ ಹೋಗಿ ‘ಐದು ನಿಮಿಷ ಮಾತ್ರ’ ಎಂದು ನಿಂತೇ ಮಾತಾಡತೊಡಗುತ್ತಾನೆ.

ಮಾತುಕತೆ ಉಕ್ಕಿಸಿದ ಎನರ್ಜಿಯಿಂದಾಗಿ ಗಂಟೆಗಟ್ಟಲೆ ಮಾತಾಡುತ್ತಾನೆ; ಕೊನೆಗೆ ಆರಾಮಕುರ್ಚಿಯಲ್ಲಿ ಕೂತು ‘ನಾನೀಗ ಹೊಸ ಮನುಷ್ಯನಾದೆ ಎನ್ನಿಸುತ್ತಿದೆ’ ಎನ್ನುತ್ತಾನೆ.

ಮಾರ್ಕ್ವೆಜ್ ಬರೆಯುತ್ತಾನೆ: ‘ಮಾತಾಡಿ ದಣಿದ ಫಿಡೆಲ್, ಮಾತಿನಲ್ಲೇ ದಣಿವಾರಿಸಿಕೊಳ್ಳುವುದು ಹೀಗೆ.’ ಮಾರ್ಕ್ವೆಜ್ ಪ್ರಕಾರ, ರಾಜಕಾರಣಿಯಾಗಿ ಫಿಡೆಲ್‌ನ ಅದ್ಭುತ ಶಕ್ತಿಯೆಂದರೆ ಒಂದು ಸಮಸ್ಯೆ ಎಲ್ಲಿ ಹುಟ್ಟಿ, ಹೇಗೆ ಬೆಳೆಯುತ್ತಿದೆ ಎಂಬುದನ್ನು ಆಳವಾಗಿ ಗ್ರಹಿಸುವುದು. ಅದು ಕೂಡ ಹಲಬಗೆಯ ಮಾತುಕತೆಗಳ ಮೂಲಕವೇ ಬೆಳೆಯುತ್ತಾ ಹೋಗುವುದು.

ಒಮ್ಮೆ ಹಲವು ತಿಂಗಳುಗಳ ಚಿಂತನೆ, ಮಾತುಕತೆಯ ಮೂಲಕ ಫಿಡೆಲ್, ಲ್ಯಾಟಿನ್ ಅಮೆರಿಕದ ದೇಶಗಳು ತೀರಿಸಬೇಕಾದ ಸಾಲ ಕುರಿತು ತರ್ಕಬದ್ಧವಾಗಿ ವಿವೇಚಿಸಿ, ‘ಆ ಸಾಲವನ್ನು ಲ್ಯಾಟಿನ್ ಅಮೆರಿಕನ್ ದೇಶಗಳು ತೀರಿಸಬೇಕಾಗಿಲ್ಲ’ ಎಂಬುದನ್ನು ತೋರಿಸಿದ.  ಇಂಥ ವಿವೇಚನೆಯ ಜೊತೆಗೆ ಫಿಡೆಲ್‌ಗಿದ್ದ ಅದ್ಭುತ ಶಕ್ತಿಯೆಂದರೆ ನೆನಪು.

ಬೆಳಗಾಗೆದ್ದು ಸುಮಾರು ಇನ್ನೂರು ಪುಟಗಳಷ್ಟು ಸುದ್ದಿಯೊಂದಿಗೆ ಫಿಡೆಲ್‌ನ ಬೆಳಗಿನ ಉಪಾಹಾರ; ಪ್ರತಿದಿನ ಓದಲೇಬೇಕಾದ ಕೊನೇಪಕ್ಷ ಐವತ್ತು ದಾಖಲೆಗಳು; ಜೊತೆಗೆ ಪುಸ್ತಕಗಳು. ಅವನ್ನು ಹೇಗೆ ನೆನಪಿಟ್ಟುಕೊಳ್ಳುತ್ತಾನೆ, ಓದಲು ಅವನಿಗೆ ಎಲ್ಲಿಂದ ಟೈಮ್ ಸಿಗುತ್ತದೆ, ಅವನ ಓದಿನ ಸ್ಪೀಡ್ ಹೇಗಿರಬಹುದು... ಊಹಿಸುವುದು ಕಷ್ಟ. ಅವನ ಕಾರಿನಲ್ಲಿ ಯಾವಾಗಲೂ ಓದಲು ಒಂದು ಲೈಟ್ ಇರುತ್ತಿತ್ತು.

ಎಷ್ಟೋ ಸಲ ಫಿಡೆಲ್ ಬೆಳಗಿನ ಜಾವ ಓದಲು ಒಯ್ದ ಪುಸ್ತಕದ ಬಗ್ಗೆ ಬೆಳಗ್ಗೆಗಾಗಲೇ ಮಾತಾಡಿದ್ದಿದೆ.  ಆರ್ಥಿಕತೆಯ, ಚರಿತ್ರೆಯ ಪುಸ್ತಕಗಳೆಂದರೆ ಅವನಿಗೆ ಇಷ್ಟ. ಹಾಗೆಯೇ ತೀವ್ರ ಮಾತುಕತೆಗಳು. ಈ ಎಲ್ಲದರ ಮೂಲಕ ಫಿಡೆಲ್ ಹಲವು ದೇಶಗಳನ್ನು ಬಲ್ಲವನಾಗಿದ್ದ. ಅದರಲ್ಲೂ ಅಮೆರಿಕದ ಜನ, ಅಲ್ಲಿನ ಅಧಿಕಾರ ರಚನೆಗಳು, ಅಮೆರಿಕನ್ ಸರ್ಕಾರಗಳು ಕ್ಯೂಬಾಕ್ಕೆ ಒಡ್ಡುವ ಅಡೆತಡೆಗಳು, ಅವನ್ನು ಎದುರಿಸುವ ಮಾರ್ಗಗಳು ಎಲ್ಲವನ್ನೂ ಗ್ರಹಿಸುತ್ತಿದ್ದ. ತನ್ನ ಅಧಿಕಾರಿಗಳು ಸತ್ಯ ಬಚ್ಚಿಟ್ಟರೂ ಅದು ಫಿಡೆಲ್‌ಗೆ ತಿಳಿಯುತ್ತಿತ್ತು...

ಜಗತ್ತಿನ ಬಹುದೊಡ್ಡ ಲೇಖಕರಲ್ಲೊಬ್ಬನಾದ ಮಾರ್ಕ್ವೆಜ್ ಕೊಟ್ಟಿರುವ ಈ ಆತ್ಮೀಯ, ಅಥೆಂಟಿಕ್ ಫಿಡೆಲ್ ಚಿತ್ರಗಳನ್ನು ನೋಡುತ್ತಿದ್ದರೆ ಫಿಡೆಲ್ ಥರದ ನಾಯಕರೊಳಗಿನ ಚಾಲಕಶಕ್ತಿ ಹಾಗೂ ಇಂದಿನ ಬಂಡವಾಳಶಾಹಿಯ ಕ್ರೌರ್ಯವನ್ನು ಎದುರಿಸಲು ಚಿಂತಕ-ನಾಯಕರು ಹುಡುಕಿಕೊಡುವ ಹಾದಿಗಳು ಸ್ಪಷ್ಟವಾಗಿ ಕಾಣತೊಡಗುತ್ತವೆ.
ಕೊನೆ ಟಿಪ್ಪಣಿ: ‘ಮಧ್ಯಮಜೀವಿ’ಗಳಿಗೆ ಫಿಡೆಲ್ ಪಾಠಗಳು

ಇವತ್ತಿನ ಅಂಕಣದಲ್ಲಿ ಕ್ಯಾಸ್ಟ್ರೊನ ಬೌದ್ಧಿಕ ಮುಖಗಳನ್ನು ಹೆಚ್ಚು ಬಿಂಬಿಸಲು ಕಾರಣವಿದೆ. ಇವತ್ತು ಎಡವೂ ಅಲ್ಲದ, ಬಲವೂ ಅಲ್ಲದ ಮಾರ್ಗವೊಂದಿದೆ ಎಂದು ಮುಗ್ಧವಾಗಿ ನಂಬುವವರಿರಬಹುದು. ಆದರೆ ಎಡಪಂಥೀಯ ಚಿಂತನೆಯಿಲ್ಲದಿದ್ದರೆ ಕಳೆದ ನೂರು ವರ್ಷಗಳಲ್ಲಿ ಅನೇಕ ದೇಶಗಳ ಜನಜೀವನವೇ ಬದಲಾಗುತ್ತಿರಲಿಲ್ಲ. ಇದು ಫಿಡೆಲ್ ಮಾತು- ಕ್ರಿಯೆಗಳನ್ನು ಕಂಡಾಗಲೂ ಹೊಳೆಯುತ್ತದೆ.

ಕಳೆದ ಇಪ್ಪತ್ತೈದು ವರ್ಷಗಳಲ್ಲಿ ಕ್ಯಾಪಿಟಲಿಸಮ್ಮಿನಿಂದಾಗಿ ಹೆಚ್ಚಿರುವ ಸಂಪತ್ತಿನ ಭಯಾನಕ ಕೇಂದ್ರೀಕರಣ, ಅದು ಸೃಷ್ಟಿಸುತ್ತಿರುವ ಕಂದರ ಕುರಿತು ಜವಾಬ್ದಾರಿಯುತ ಎಡಪಂಥೀಯ ಚಿಂತಕರು ಬರೆಯದಿದ್ದರೆ ಯಾರಿಗೂ ಈ ಭೀಕರ ಮುಖಗಳ ಬಗ್ಗೆ ಸ್ಪಷ್ಟತೆ ಇರುತ್ತಿರಲಿಲ್ಲ.

1999ರಲ್ಲಿ ವೆನಿಜುವೆಲಾ ವಿಶ್ವವಿದ್ಯಾಲಯದಲ್ಲಿ ಫಿಡೆಲ್ ಮಾಡಿದ ‘ಬ್ಯಾಟಲ್ ಆಫ್ ಐಡಿಯಾಸ್’ ಭಾಷಣ ಒಂದನ್ನಷ್ಟೇ ಮಧ್ಯಮವರ್ಗದ ‘ಮಧ್ಯಮಮಾರ್ಗ’ಗಳ ಸೋಮಾರಿವಲಯ ಓದಿದರೂ ಸಾಕು: ಇವತ್ತಿನ ನಿಜವಾದ ಸವಾಲುಗಳೆದುರು ತಮ್ಮ ಜಾಣನುಡಿಗಟ್ಟುಗಳು ಎಷ್ಟು ಬೋಗಸ್ ಎಂಬುದು ಹೊಳೆಯುತ್ತದೆ.

ಮಾರ್ಕ್ಸ್ ಚಿಂತನೆಗಳಿಲ್ಲದಿದ್ದರೆ  ಇಲ್ಲಿ ಸ್ತ್ರೀವಾದವಾಗಲೀ, ಇನ್ನಿತರ ಬಗೆಯ ಸಮಾಜವಾದಗಳಾಗಲೀ ಹುಟ್ಟುವುದು ಕಷ್ಟವಿತ್ತು. ಅಂಬೇಡ್ಕರ್ ಮಾರ್ಕ್‌್ಸವಾದವನ್ನು ಒಪ್ಪದವರಂತೆ ಕಂಡರೂ, ಅವರ ಲೇಬರ್ ಪಾರ್ಟಿ, ‘ಪ್ರಭುತ್ವ ಸಮಾಜವಾದ’ದ ಕಲ್ಪನೆ, ಭೂ ರಾಷ್ಟ್ರೀಕರಣ, ಬುದ್ಧ-ಮಾರ್ಕ್‌್ಸರನ್ನು ಹೋಲಿಸಿದ ರೀತಿಗಳಲ್ಲಿ ಮಾರ್ಕ್‌್ಸವಾದದ ಪ್ರೇರಣೆಯಿತ್ತು. ದಲಿತ ಚಳವಳಿ ತನ್ನ ಉಜ್ವಲ ಘಟ್ಟದಲ್ಲಿ ಮಾರ್ಕ್‌್ಸವಾದದಿಂದ ತಾತ್ವಿಕ, ಸಂಘಟನಾತ್ಮಕ ಪ್ರೇರಣೆಗಳನ್ನು ಪಡೆದಿದ್ದನ್ನು ಮರೆಯಬಾರದು.

ಎಲ್ಲ ಬಗೆಯ ಚಿಂತನೆಗಳಿಗೂ ಸ್ಥಗಿತತೆ ಬರಬಹುದು. ಆದರೆ ಕ್ಯಾಸ್ಟ್ರೊ  ರೀತಿ ತಂತಮ್ಮ ನಾಡುಗಳ ವಾಸ್ತವಗಳಿಗೆ ತಕ್ಕಂತೆ ಚಿಂತನೆಗಳನ್ನು ಮರುರೂಪಿಸಿಕೊಳ್ಳುವ ಬೌದ್ಧಿಕತೆ; ಚಿಂತನೆಗಳನ್ನು ಜಾರಿಗೆ ತರಬಲ್ಲ ಪ್ರಾಕ್ಟಿಕಲ್ ಮಾರ್ಗಗಳಿಂದ ಮಾರ್ಕ್‌್ಸವಾದಕ್ಕೆ ಸಮಕಾಲೀನತೆ ಬರುತ್ತದೆಯೇ ಹೊರತು, ಅದರ ಗಿಳಿಪಾಠದಿಂದಾಗಲೀ, ಅದನ್ನು ಗ್ರಹಿಸಲಾಗದ ಸಲೀಸು ಮಧ್ಯಮಮಾರ್ಗದಿಂದಾಗಲೀ ಅಲ್ಲ.

ಈ ಕಾಲದ ಶ್ರೇಷ್ಠ ವಿಮರ್ಶಕರಲ್ಲೊಬ್ಬನಾದ ಟೆರಿ ಈಗಲ್ಟನ್ ಇಪ್ಪತ್ತೊಂದನೆಯ ಶತಮಾನದ ವಾಸ್ತವದಲ್ಲಿ ಕಾಲೂರಿ ನಿಂತು ಬರೆದಿರುವ ‘ವೈ ಮಾರ್ಕ್ಸ್ ವಾಸ್ ರೈಟ್’ ಪುಸ್ತಕವನ್ನು ಮುಕ್ತವಾಗಿ ಓದಿದರೆ ನಮ್ಮ ಅನೇಕ ಬೌದ್ಧಿಕ ಗೊಂದಲಗಳು ಕಡಿಮೆಯಾಗಬಲ್ಲವು. ಈ ಪುಸ್ತಕವನ್ನು ‘ಕಾರ್ಪೊರೇಟ್ ಕಾಲದಲ್ಲೂ ಮಾರ್ಕ್‌್ಸವಾದ ಪ್ರಸ್ತುತ’ (ಚಿಂತನ ಪುಸ್ತಕ) ಎಂದು ಆರ್.ಕೆ.ಹುಡಗಿ ಅನುವಾದಿಸಿದ್ದಾರೆ.

ಸಾಹಿತ್ಯ ವಿಮರ್ಶೆಯಲ್ಲಿ ಸರಳ ಕಮ್ಯುನಿಸಮ್ಮಿನ ನಿರ್ದೇಶನಗಳಿಂದ ಹುಟ್ಟುವ ಸಮಸ್ಯೆಗಳ ಜೊತೆಗೆ ಇಡೀ ಮಾರ್ಕ್‌್ಸವಾದವನ್ನೇ ಸಮೀಕರಿಸಿ ಗೊಂದಲಗೊಂಡು, ಗೊಂದಲ ಹಂಚುವವರು ಈ ಯುಗದ ಮಹತ್ವದ ಪಠ್ಯಗಳಲ್ಲೊಂದಾದ ‘ಕಮ್ಯುನಿಸ್ಟ್ ಮ್ಯಾನಿಫೆಸ್ಟೊ’ ಹಾಗೂ ಇನ್ನಿತರ ಮಾರ್ಕ್‌್ಸವಾದಿ ಪಠ್ಯಗಳನ್ನು ಇವತ್ತಿನ ಕ್ಯಾಪಿಟಲಿಸಮ್ಮಿನ ಭೀಕರ ಕುಣಿತದ ಕಾಲದಲ್ಲಿ ಓದಿ ಸ್ಪಷ್ಟತೆ ಪಡೆಯುವುದು ಒಳ್ಳೆಯದು. ಹಾಗೆಯೇ, ಸಾಹಿತ್ಯ ಸೃಷ್ಟಿಯ ಸ್ವಾಯತ್ತತೆಯಲ್ಲಿ ಖಚಿತ ನಂಬಿಕೆಯಿಟ್ಟಿದ್ದ ಮಾರ್ಕ್ವೆಜ್, ಕಮ್ಯುನಿಸ್ಟನಾದ ಫಿಡೆಲ್‌ನನ್ನು ಯಾಕೆ ದೊಡ್ಡ ನಾಯಕನೆಂದು ಒಪ್ಪಿಕೊಂಡಿದ್ದ ಎಂಬುದರ ಬಗೆಗೂ ಮುಕ್ತವಾಗಿ ಯೋಚಿಸಬೇಕು.


ನಿನ್ನ ಜೊತೆ ನಾ ಕಳೆದ ಒಂದೊಂದು ನಿಮಿಷನೂ ನಾ

ನಿನ್ನ ಜೊತೆ ನಾ ಕಳೆದ ಒಂದೊಂದು ನಿಮಿಷನೂ ನಾ ಮರಣಶಯ್ಯೆಗೆ ಹೋಗೋವರೆಗೂ ನೆನಪಿರುತ್ತೆ.
ತೊಂಬತ್ತು ನಿಮಿಷಗಳ ಆ ಆಲಿಂಗನ,ಬಿಸಿಯಪ್ಪುಗೆ ಎಂಟು ನೂರು ವರ್ಷಗಳವರೆಗೂ ಹೃದಯದಲ್ಲಿ‌ ಭದ್ರವಾಗಿರುತ್ತೆ‌.
ಆ ನೋಟದಲ್ಲಿ ಕೆಲನಿಮಿಷ
ಭಯದಲ್ಲಿ‌ ಕೆಲನಿಮಿಷ
ಬಿಗಿದಪ್ಪಿಕೊಂಡಾಗ ಜಾರಿದ ಕಣ್ಣಹನಿಗಳ ಕೆಲನಿಮಿಷಗಳು 
ಯಾವುದೇ ಪರಿವಿಲ್ಲದೆ ಮುತ್ತಿನ ಮೋಹಕ್ಕೆ ಒಳಗಾದ ಆ ನಿಮಿಷಗಳು ನನ್ನ ಮರಣಶಯ್ಯೆಯಲ್ಲೂ ನೆನಪಿನಲ್ಲಿರತ್ತೆ ಕಣ್ಮಣಿ.
ಯಾವುದು ನ್ಯಾಯ ,ಯಾವುದು ಅನ್ಯಾಯ ಇಬ್ಬರಿಗೂ ಗೊತ್ತಾಗಿಲ್ಲ
ಹಗಲ?? ಇರುಳ?? ಇಬ್ಬರಿಗೂ ಅದರ ಪರಿವಿಲ್ಲ
ಯಾರು ಆರಂಭಿಸ್ತಾರೆ,ಯಾರು ಮುಗಿಸ್ತಾರೆ ಅನ್ನೊದರ ಬಗ್ಗೆ ಇಬ್ಬರಿಗೂ ಅರಿವಿರಲಿಲ್ಲ
ಇಬ್ಬರೂ ಆರಂಭಿಸಿದ್ದೆವೆ,ಇದರ ಬಗ್ಗೆ ಮುಂದೆ ಮಾತಿಲ್ಲ .
ನಾ ನಿನ್ನ ಭಯವನ್ನ ಹೋಗಲಾಡಿಸಿದೆ,ನೀ ನಿನ್ನ ಆಸೆಯನ್ನ ಬಿಚ್ಚಿಟ್ಟೆ
ನಾ ನಿನ್ನ ಬೆತ್ತಲೆಗೊಳಿಸಿದೆ,ನೀ ನಿನ್ನ ನಾಚಿಕೆಯನ್ನ ಕಳಚಿದೆ .
ಇವೆಲ್ಲವೂ ಮುಂದೆ ಕನಸಾಗಿ ಮರೆತುಹೋದ್ರು ,ಕೊನೆಯದಾಗಿ ನಿನ್ನ ಕಣ್ಣಿಂದ ಜಾರಿದ ಕಣ್ಣಿರಹನಿ‌ ನನ್ನ ಕೈಯಲ್ಲಿ ಇನ್ನು ಮೆತ್ತಿದೆ.ನಿನ್ನ ಜೊತೆ ಕಳೆದ ಒಂದೊಂದು ನಿಮಿಷವೂ ನನ್ನ
 ಮರಣಶಯ್ಯೆಯಲ್ಲೂ  ನೆನಪಲ್ಲಿರುತ್ತೆ ಕಣ್ಮಣಿ.

ಕನ್ನಡಕ್ಕೆ: ನಿವೇದಿತಾ💐