Tuesday, 18 June 2013

ವಿಠ್ಠಲ ಭಂಡಾರಿ ಸಂಪಾದಿಸಿರುವ 'ಒಡಲ ಬೆಂಕಿ' ಪುಸ್ತಕ ಪರಿಚಯ

                                                              ಪುಸ್ತಕ ಪರಿಚಯ
ಕವಿಗಳು ಕಂಡಂತೆ ಹಸಿವು

'ಹಸಿವು'-ಜಗತ್ತನ್ನು ಕಾಡುತ್ತಿರುವುದು ಮನವರಿಕೆಯಾದರೂ ಮನುಷ್ಯ ಅದರತ್ತ ಅಷ್ಟು ಗಮನ ಕೊಡದೆ ಆಸೆಯ ಹಸಿವು ನೀಗಿಸಿಕೊಳ್ಳಲು ಮುಂದಾಗಿ ಮತ್ತಷ್ಟು ಹಸಿವಿನ ಕೂಪದಲ್ಲಿ ಆಳಕ್ಕೆ ಕುಸಿಯುತ್ತಿದ್ದಾನೆ. ಇಂತಹ ಹಸಿವಿನ ಬಗ್ಗೆ ಎಷ್ಟೋ ಬರಹಗಳು ಈಗಾಗಲೇ ಬಂದು ಹಳತಾಗಿವೆ. ಹಾಳೂ ಆಗಿವೆ. ಆದರೂ ಮನುಷ್ಯ ಅವುಗಳಿಂದ ಕಲಿತದ್ದು ಮಾತ್ರ ಕಡಿಮೆ. ಆದರೂ ಹಸಿವಿನ ಸ್ಥಿತಿ ಕಂಡು ಮಿಡಿಯುವವರು ಬರೆಯುತ್ತಲೇ ಇದ್ದಾರೆ. ಅದು ಕವಿತೆಯಾದರೂ ಸರಿಯೇ, ಲೇಖನವಾದರೂ ಸರಿಯೇ. ಹಸಿವಿನ ಸ್ಥಿತಿಯ ವಾಸ್ತವತೆಯನ್ನು ತೆರೆದಿಡುತ್ತವೆ. ಹಾಗೆ ತೆರೆದಿಡುವ ಹಲವು ಕವಿತೆಗಳನ್ನು 'ಒಡಲ ಬೆಂಕಿ' ಎಂಬ ಪುಸ್ತಕದಲ್ಲಿ ಕಾಣಬಹುದು. ಕನ್ನಡ ಕವಿಗಳು ಕಂಡ ಹಸಿವು ಇಲ್ಲಿರುವ ಕವಿತೆಗಳಲ್ಲಿ ಅನಾವರಣಗೊಂಡಿದೆ.

ಇಲ್ಲಿರುವ ಕವಿತೆಗಳನ್ನು ಸಂಪಾದಿಸಿರುವ ವಿಠ್ಠಲ ಭಂಡಾರಿ. ಕವಿತೆಗಳನ್ನು ಓದುವುದಕ್ಕೂ ಮುನ್ನ ಓದುಗರಿಗೆ ಎಸ್. ಜಿ. ಸಿದ್ದರಾಮಯ್ಯನವರು ಬರೆದಿರುವ ಮುನ್ನುಡಿ ಕೃತಿಯ ಬಗ್ಗೆ ರುಚಿ ಹತ್ತಿಸುತ್ತದೆ. ಆನಂತರ ವಿಸ್ತಾರವಾಗಿರುವ ಸಂಪಾದಕರ ಮಾತು ಕವಿತೆಗಳನ್ನು ಓದುತ್ತಾ ಹೋದಂತೆ ಆಗಾಗ ಪ್ರಸ್ತುತವಾಗುತ್ತದೆ. ಎಲ್ಲಾ ಕವಿತೆಗಳ ಸಾರವನ್ನು ಸಂಪಾದಕರ ಮಾತುವಿನಲ್ಲಿ ವಿಠ್ಠಲ ಭಂಡಾರಿಯವರು ಹಿಡಿದಿಟ್ಟಿದ್ದಾರೆ. ತಮ್ಮ ಬಾಲ್ಯದ ದಿನಗಳನ್ನು ನೆನೆಸಿಕೊಂಡು ಮರುಗಿದ್ದಾರೆ.

ವಿಠ್ಠಲ ಭಂಡಾರಿ ಹಸಿವಿನ ಬಗ್ಗೆ ಇರುವ ಎಲ್ಲಾ ಕನ್ನಡ ಕವಿತೆಗಳನ್ನು ಇಲ್ಲಿ ಸೇರಿಸಿರುವಂತೆಯೇ ಕೆಲವು ಜನಪದ ಗೀತೆಗಳನ್ನು ಸಂಗ್ರಹಿಸಿದ್ದಾರೆ. ಹಸಿವನ್ನು ಜನಪದರು ಸ್ವತ: ಅನುಭವಿಸಿ ಹಾಡಿರುವ ಈ ಹಸಿ ಗೀತೆಗಳು ಹಸಿವಾಸ್ತವವನ್ನು ಹೊರಗಿಡುತ್ತವೆ.
                                      ಬಡವರು ಸತ್ತರೆ ಸುಡಲಿಕೆ ಸೌದಿಲ್ಲೋ,
                                   ಒಡಲ ಬೆಂಕಿಲಿ ಹೆಣ ಬೆಂದೋ ದೇವರೆ,
                                    ಬಡವರಿಗೆ ಸಾವ ಕೊಡಬ್ಯಾಡ

'ದೊಡ್ಡೋರ ಮಕ್ಳೋಗೆ ಬೆಲ್ಲ ಬಾಳೆಯ ಹಣ್ಣು
ಏನೂ ಇಲ್ಲದ ಬಡವೇಯ ಮಕ್ಳೋಗೆ
                  ಹೆತ್ತಬ್ಬೆ ಬತ್ತ ಮೊಲೆ ಹಾಲು'

              ಈ ಕವಿತೆಗಳು ಹಸಿವಿನಲ್ಲಿ ನರಳುತ್ತಿರುವವರೆಲ್ಲರ ಧ್ವನಿಯನ್ನು ಪ್ರತಿಧ್ವನಿಸುತ್ತದೆ. ಅಲ್ಲಮ ಪ್ರಭು, ಜೇಡರ ದಾಸಿಮಯ್ಯ, ಸರ್ವಜ್ಞ, ಬಸವಣ್ಣ, ಅಂಬಿಗರ ಚೌಡಯ್ಯ, ಕಡಕೋಳ ಮಡಿವಾಲಪ್ಪ, ರಂಶ್ರೀ ಮುಗಳಿ, ಬಿ.ಎಚ್. ಶ್ರೀಧರ, ದಿನಕರ ದೇಸಾಯಿ, ಕೆಯ್ಯಾರ ಕಿಂಞ್ಞಣ್ಣ ರೈ, ಎಂ. ವಿ. ಸೀತಾರಾಮಯ್ಯ, ವಿ.ಜಿ. ಭಟ್, ಸು.ರಂ. ಎಕ್ಕುಂಡಿ, ಜಿ.ಎಸ್. ಶಿವರುದ್ರಪ್ಪ, ಚನ್ನವೀರ ಕಣವಿ, ಡಾ. ಆರ್. ವಿ.ಭಂಡಾರಿ, ಡಾ. ಸಿದ್ದಲಿಂಗಯ್ಯ, ಪ್ರೊ. ಡಿ.ಬಿ. ಬಡಿಗೇರ, ಸಿ. ವೀರಣ್ಣ, ಅಶೋಕ ಶೆಟ್ಟರ್, ದೊಡ್ಡರಂಗೇಗೌಡ, ಶ್ಯಾಮಸುಂದರ ಬಿದರಕುಂದಿ, ಬರಗೂರು ರಾಮಚಂದ್ರಪ್ಪ, ಬೇಂದ್ರೆ, ಟಿ. ಮಲ್ಲಪ್ಪ, ಮುಂತಾದವರು ಬರೆದಿರುವ 56 ಕವಿತೆಗಳು ಓದುಗರಿಗೆ ಹಸಿವಿನ ದರ್ಶನ ಮಾಡಿಸುತ್ತದೆ. ಕನ್ನಡ ಸಾಹಿತ್ಯ ಎಷ್ಟರ ಮಟ್ಟಿಗೆ ಜನರ ಹಸಿವಿಗೆ ಸ್ಪಂದಿಸಿದೆ ಎಂಬುದು ಈ ಕವಿತೆಗಲ ಮೂಲಕ ತಿಳಿಯುತ್ತದೆ. ಕವಿತೆ ಮೂಲಕವೇ ಅಲ್ಲದೇ ಕಥಾ ರೂಪದಲ್ಲಿ ಜನರು ಹಸಿವಿಗೆ ಸ್ಪಂದಿಸಲಾಗಿದೆ.

           ಇಲ್ಲಿ ಬಳಸಿರುವ ಪದಗಳು ಹಸಿವಿನ ನೋವನ್ನು ಓದುಗನ ಮನಸಿಗೆ ತಾಗಿಸುತ್ತವೆ. ಹಸಿದವರ ಸ್ಥಿತಿಗೆ ಮರಗುವ ಮನಸ್ಸಿರುವ ಈ ಕವಿತೆಗಳಲ್ಲಿ ಶೋಷಿತರ ವಿರುದ್ಧ ಸಿಡಿಯುವ ರೋಷನೂ ಅರಿವಿಗೆ ಬರುತ್ತದೆ. ಇಲ್ಲಿರುವ ಕವಿತೆಗಳು ಬೇರೆಬೇರೆ ಸಂದರ್ಭಗಳಲ್ಲಿ ರಚಿತವಾದವುಗಳಾದರೂ ಅವು ಹಸಿವನ್ನು ಹೊಮ್ಮಿಸುವ ರೀತಿ ನೋಡಿದರೆ ಹಸಿವೆಂಬ ಕರಾಳತೆ ಜನರನ್ನೂ ಕಾಲದಿಂದ ಕಾಲಕ್ಕೆ ಬಿಡುವು ಕೊಡದೆ ಬಾಧಿಸುತ್ತಿರುವ ರೀತಿ ಕಣ್ಣಿಗೆ ಕಟ್ಟುತ್ತದೆ. ಎಲ್ಲಾ ಕವಿತೆಗಳೂ ಇದು ಹಾಡಲ್ಲ ಒಡಲ ಉರಿ ಎಂಬುದನ್ನು ವ್ಯಕ್ತಗೊಳಿಸುತ್ತವೆ.
                                                                                         
                                                                                                 -ಎನ್.ಎಸ್ ಗೌಡ
                                                                                          ಲಂಕೇಶ್ ಪತ್ರಿಕೆ /13 ಮೇ 2010

Friday, 14 June 2013

ಸುಬ್ಬಿ ಭಂಡಾರಿ ನೆನಪಿನಲ್ಲಿ ಪಟ್ಟಿ ಪುಸ್ತಕ ವಿತರಣೆ

              ಸುಬ್ಬಿ ಭಂಡಾರಿ ನೆನಪಿನಲ್ಲಿ ಪಟ್ಟಿ ಪುಸ್ತಕ ವಿತರಣೆ

             ಹಿರಿಯ ಲೇಖಕರು, ಶಿಕ್ಷಕರು ಆಗಿದ್ದ ದಿವಂಗತ ಆರ್.ವಿ. ಭಂಡಾರಿಯವರ ಮಡದಿ ಸುಬ್ಬಿ ಭಂಡಾರಿಯವರು ನಿಧನರಾಗಿ ಒಂದು ವರ್ಷವಾದ ನೆನಪಿಗೆ ಅವರ ಕುಟುಂಬದವರು ಕೆರೆಕೋಣದ ಎಚ್. ಪಿ. ಎಸ್. ಶಾಲೆಯಲ್ಲಿ ಪೆನ್ನು, ನೋಟ್ಸಬುಕ್ಸ್, ಮಕ್ಕಳಿಗಾಗಿ ವೈಚಾರಿಕ ಪುಸ್ತಕಗಳನ್ನು ವಿತರಿಸಿದರು.
             ಆರ್.ವಿ ಯವರ ಕುಟುಂಬದ ಪರವಾಗಿ ಪಟ್ಟಿ-ಪುಸ್ತಕ ಹಂಚಿ ಮಾತನಾಡಿದ ಮಾಧವಿ ಭಂಡಾರಿ, 'ಇಂದು ನಮ್ಮ ತಾಯಿ ನಮ್ಮನ್ನಗಲಿ ಒಂದು ವರ್ಷ. ಅವರ ನೆನಪಿನಲ್ಲಿ ಆಡಂಬರದ ಊಟೋಪಚಾರ ಮಾಡಿ, ಉಳ್ಳವರಿಗೆ ಊಟಕೊಟ್ಟು ಸಂತೋಷಪಡುವ ಬದಲು ಅವರು ಯಾವತ್ತೂ ಪ್ರೀತಿಸುವ ಮಕ್ಕಳಿಗೆ ಪಠ್ಯ-ಪುಸ್ತಕ ಹಂಚುವುದು, ಸಿಹಿ-ತಿಂಡಿ ಹಂಚುವುದು ಹೆಚ್ಚು ಅರ್ಥಪೂರ್ಣ ಎಂದುಕೊಂಡೆವು. ಅವರು ಮತ್ತು ನಮ್ಮ ಇಡೀ ಕುಟುಂಬ ಕಲಿತ ಶಾಲೆ ಇದು. ಪ್ರತಿವರ್ಷವೂ ಈ ಕಾರ್ಯಕ್ರಮವನ್ನು ಕುಟುಂಬದ ಪರವಾಗಿ ಮುಂದುವರೆಸುತ್ತೇವೆ. ತಂದೆ ತಾಯಿಯ ಆಶಯವೂ ಇದೇ ಆಗಿತ್ತು' ಎಂದರು.
                 ಪ್ರತಿವರ್ಷ ಮಕ್ಕಳಿಗೆ ಪಠ್ಯ ಸಾಮಗ್ರಿ ವಿತರಣೆಗೆ ಅನುಕುಲವಾಗುವಂತೆ ಸುಬ್ಬಿ ಭಂಡಾರಿಯವರ ನೆನಪಿಗಾಗಿ 5000ರೂ ದೇಣಿಗೆಯನ್ನು ಕುಟುಂಬದ ಪರವಾಗಿ ಇಂದಿರಾ ಭಂಡಾರಿಯವರು ಶಾಲೆಗೆ ನೀಡಿದರು. ಆರ್.ವಿಯವರು ಬರೆದ 'ಮಕ್ಕಳಿಗಾಗಿ ರಾಮಾಯಣ' ಪುಸ್ತಕವನ್ನು, ಎಲ್ಲಾ ಮಕ್ಕಳಿಗೂ ಹಂಚಲಾಯಿತು. ಸಭೆಯ ಅಧ್ಯಕ್ಷತೆಯನ್ನು ಗ್ರಾಮಪಂಚಾಯ್ತಿ ಅಧ್ಯಕ್ಷರಾದ ಸರಸ್ವತಿ ಶೆಟ್ಟಿ ವಹಿಸಿ ಮಾತನಾಡಿ ಇಂತಹ ಕಾರ್ಯಕ್ರಮ ನಡೆಸಿದ ಬಗ್ಗೆ ಸಂತೋಷ ವ್ಯಕ್ತಪಡಿಸಿದರು. ಸಭೆಯಲ್ಲಿ ವಿಠ್ಠಲ ಭಂಡಾರಿ, ಯಮುನಾ ಗಾಂವ್ಕರ್, ಗಣೇಶ ಭಂಡಾರಿ, ನಾಗರತ್ನ, ದಾಮೋದರ ನಾಯ್ಕ, ವಿದ್ಯಾಧರ ಕಡತೋಕ, ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ರಾಮ ಭಂಡಾರಿ, ಸುಧಾಕರ, ಸುಜಾತಾ, ಶ್ಯಾಮಲಾ ಶೆಟ್ಟಿ ಮುಂತಾದವರು ಹಾಜರಿದ್ದರು. ಶಾಲಾ ಶಿಕ್ಷಕರಾದ ವಿನಾಯಕ ಭಟ್ಟ ಸ್ವಾಗತಿಸಿದರು. ಮುಖ್ಯೋಪಾಧ್ಯಾಯರು ವಂದಿಸಿದರು.



Wednesday, 12 June 2013

'ಸಹಯಾನ ಸಾಹಿತ್ಯೋತ್ಸವ' - 2013 -- ಚಳುವಳಿಗಳ ಮುಂದಿರುವ ಯಕ್ಷಪ್ರಶ್ನೆ

'ಸಹಯಾನ ಸಾಹಿತ್ಯೋತ್ಸವ' - 2013
 ಚಳುವಳಿಗಳ ಮುಂದಿರುವ ಯಕ್ಷಪ್ರಶ್ನೆ
ಚಳುವಳಿಗಳು ಸತ್ವಹೀನವಾಗಿವೆ ಅಥವಾ ಇಲ್ಲವಾಗಿವೆ ಎಂದು ಕೆಲವರು ಹೇಳುತ್ತಿದ್ದಾರೆ. ಆದರೆ ಅದೇ ಸಮಯದಲ್ಲಿ - ವಿಷಯಾಧಾರಿತ, ಐಡೆಂಟಿಟಿ-ಆಧಾರಿತ, ಪ್ರತ್ಯೇಕ ದ್ವೀಪಗಳಾಗುತ್ತಿರುವ, ಯಾಜಮಾನ್ಯವನ್ನು ಆರೋಪಿಸಿ ಹಲವು ಸಂದರ್ಭಗಳಲ್ಲಿ ಪರಸ್ಪರ ವಿರೋಧಿಸುವ - ಹಲವು ದೊಡ್ಡ ಚಳುವಳಿಗಳೂ ಲಕ್ಷಾಂತರ ಸ್ಥಳೀಯ ಚಳುವಳಿಗಳೂ ನಡೆಯುತ್ತಿವೆ. ಹಾಗಾದರೆ ಎಲ್ಲಾ ರೀತಿಯ ಬಹುತ್ವ ಮತ್ತು ಐಡೆಂಟಿಟಿಗಳನ್ನು ಗೌರವಿಸುತ್ತಾ ಅವನ್ನು ಉಳಿಸಿಕೊಂಡು ಈ ಚಳುವಳಿಗಳ ದ್ವೀಪಗಳ ನಡುವೆ ಸೇತುವೆಯಾಗಬಲ್ಲ ಸಾರ್ವತ್ರಿಕ ಆಯಾಮವುಳ್ಳ ಸಾರ್ವತ್ರಿಕ ಚಳುವಳಿ ಸಾಧ್ಯವಿಲ್ಲವೇ ? ಅಂತಹ ಚಳುವಳಿ ಕಟ್ಟಿಕೊಳ್ಳುವುದು ಹೇಗೆ ? - ಎಂಬುದು ಇವತ್ತಿನ ಯಕ್ಷ ಪ್ರಶ್ನೆ. ಈ ಪ್ರಶ್ನೆಯನ್ನೇ ಆರ್.ವಿ.ಭಂಡಾರಿಯವರು ತಮ್ಮ 'ವರ್ಣದಿಂದ ವರ್ಗದೆಡೆಗೆ' ಪುಸ್ತಕದಲ್ಲಿ ಕೇಳಿದ್ದರು. ಇದು ಮೇ 26ರಂದು ಹೊನ್ನಾವರದ ಕೆರೆಕೋಣದಲ್ಲಿ ನಡೆದ ಈ ವರ್ಷದ ಸಹಯಾನ ಸಾಹಿತ್ಯೋತ್ಸವದಲ್ಲಿ ಪ್ರೊ.ಎಂ.ಜಿ. ಹೆಗಡೆಯವರ ಆಶಯ ನುಡಿಯ ಸಾರವಾಗಿತ್ತು.
ಆರ್.ವಿ.ಭಂಡಾರಿಯವರ ನಿಧನದ ನಂತರ ಅವರ ಆಶಯಗಳನ್ನು ಮುಂದೊಯ್ಯುವ ಉದ್ದೇಶದಿಂದ ಅವರ ಸ್ನೇಹಿತರು, ಸಹಚರರು, ವಿದ್ಯಾಥರ್ಿಗಳು, ಕುಟುಂಬದವರು ಆರಂಭಿಸಿದ ಸಂಸ್ಥೆ 'ಸಹಯಾನ'. ಕಳೆದ ಐದು ವರ್ಷಗಳಿಂದ ಅವರ ಹುಟ್ಟು ಹಬ್ಬದ ದಿನದಂದು (ಮೇ 5 - ಅದು ಮಾಕ್ರ್ಸ ಹುಟ್ಟುದಿನವೂ ಹೌದು) 'ಹೊಸ ತಲೆಮಾರು' ಎಂಬ ಸಾಮಾನ್ಯ ಥೀಮ್ ಮತ್ತು ಪ್ರತಿ ವರ್ಷ ಅದರಡಿಯಲ್ಲಿ ಒಂದು ನಿದರ್ಿಷ್ಟ ಥೀಮ್ನೊಂದಿಗೆ ಸಾಹಿತ್ಯೋತ್ಸವ ಹಮ್ಮಿಕೊಳ್ಳುತ್ತಿದೆ. ಈ ಬಾರಿಯ ಥೀಮ್ 'ಚಳುವಳಿ: ಹೊಸ ತಲೆಮಾರು'. ಈ ಬಾರಿ ಚುನಾವಣೆಗಳಿಂದಾಗಿ ಮೇ.26ರ ವರೆಗೆ ಮುಂದಕ್ಕೆ ಹೋಗಿತ್ತು. ಉದ್ಘಾಟನಾ ಭಾಷಣ ಮಾಡಿದ ಬರಗೂರು ರಾಮಚಂದ್ರಪ್ಪನವರು ವಿಷಯವನ್ನು ಇನ್ನಷ್ಟು ವಿಸ್ತಾರವಾಗಿ ವಿಷದಗೊಳಿಸಿದರು.

ಕಣ್ಣಿಗೆ ಕಾಣದ ಜಾಗತಿಕ ಯುದ್ಧ

'1970-80ರ ದಶಕದ ಚಳುವಳಿಯ ಹಿನ್ನೆಲೆ ಮತ್ತು ಸ್ವರೂಪ, ಮತ್ತು 1990ರ ದಶಕದ ನಂತರ ಬದಲಾದ ಸನ್ನಿವೇಶ ಮತ್ತು ಅದು ಚಳುವಳಿಗಳ ಮೇಲೆ ಬೀರಿದ ಪರಿಣಾಮಗಳನ್ನು ವಿಶ್ಲೇಷಿಸುತ್ತಾ 'ಚಳುವಳಿ:ಹೊಸ ತಲೆಮಾರು' ಎದುರಿಸುತ್ತಿರುವ ಸಮಸ್ಯೆಗಳನ್ನು ಬರಗೂರು ವಿಷದೀಕರಿಸಿದರು. ಮುಂಬರುವ ಮೂರನೆಯ ಜಾಗತಿಕ ಯುದ್ಧ ಕಣ್ಣಿಗೆ ಕಾಣಿಸದ ಶಬ್ದವಿಲ್ಲದ, ದುಷ್ಪರಿಣಾಮ ಗೊತ್ತೇ ಆಗದ ಯುದ್ಧ. ಅದು ವಿದೇಶಿ ಸಾಲದ ಯುದ್ಧ. ನಮ್ಮ ದೇಶ 1990ರ ದಶಕದಲ್ಲಿ ಕಂಡ ಭಾರೀ ಬದಲಾವಣೆಗಳನ್ನು 1980ರ ದಶಕದಲ್ಲೇ ಕಂಡ ಲ್ಯಾಟಿನ್ ಅಮೆರಿಕದ ಕಾಮರ್ಿಕ ನಾಯಕ ಲೂಯಿ ಸಿಲ್ವಾ 1985ರಲ್ಲಿ ಹೇಳಿದ ಈ ಅರ್ಥಗಭರ್ಿತ ಮಾತುಗಳಲ್ಲಿ ವಿವರಿಸಿದರು.
1970-80 ರ ದಶಕ ಸಾಮಾಜಿಕ ವಿವೇಕ, ಜಾತಿ ವಿನಾಶ, ಕೋಮು ಸೌಹಾರ್ದತೆ, ಸಂಘಟನೆ, ಸೈದ್ದಾಂತಿಕತೆಯ ಕಾಲವಾಗಿತ್ತು. 1990ರ ದಶಕದ ನಂತರದ ಕಾಲದಲ್ಲಿ 1970-80ರ ದಶಕದ ಮೌಲ್ಯಗಳ ಚಿಂತನಾಕ್ರಮ ಸ್ಥಳಾಂತರಗೊಂಡು ಆಥರ್ಿಕ ಅವಿವೇಕ, ಜಾತೀಯತೆ, ಕೋಮು ಸಂಘರ್ಷ, ವಿಘಟನೆ, ಧಾಮರ್ಿಕತೆಯ ಅಪವ್ಯಾಖ್ಯಾನ ಮುನ್ನೆಲೆಗೆ ಬಂದಿದೆ. ಸಾಮಾಜಿಕ-ಸಾಂಸ್ಕೃತಿಕ-ರಾಜಕೀಯ ನಾಯಕತ್ವದ ಬದಲು ಆಥರ್ಿಕ ನಾಯಕತ್ವ ಮುನ್ನೆಲೆಗೆ ಬಂದಿದೆ. ಸ್ವಾರ್ಥ ಮತ್ತು ಲಾಭಕೋರತನದ ಮಾರುಕಟ್ಟೆ ಮನೋಧರ್ಮ, ಜಾಹಿರಾತೀಕರಣದಿಂದಾಗಿ ವ್ಯಾಪಕವಾಗಿ ಹರಡಿದೆ. ಏಕ ಧರ್ಮ ಏಕ ಸಂಸ್ಕೃತಿ ಮತ್ತು ಏಕಮುಖ ಆಥರ್ಿಕತೆಯ ಪ್ರತಿಪಾದನೆ ಆಕ್ರಮಿಸಿಕೊಂಡಿದೆೆ.  ಮೋದಿಯಂತಹ 'ಏಕಮುಖ ಅಭಿವೃದ್ಧಿ'ಯ ನಾಯಕರನ್ನು ದೇಶದ ಮುಂದಿನ ನಾಯಕರಾಗಿ ಬಿಂಬಿಸಲಾಗುತ್ತಿದೆ.
ಹಲವರು ಚಳುವಳಿಗಳು ಸತ್ತಿವೆ ಎಂದು ಘೋಷಿಸಿದ್ದಾರೆ. ಅದು ಒಳ್ಳೆಯ ಬೆಳವಣಿಗೆ ಎಂದು ಹೇಳುತ್ತಾ ಅದರ ಶವಪರೀಕ್ಷೆಗೆ ಸಿದ್ಧರಾಗಿದ್ದಾರೆ. ಚಳುವಳಿಗಳ ನ್ಯೂನ್ಯತೆಗಳ ಬಗ್ಗೆ ಖಂಡಿತ ಆತ್ಮಾವಲೋಕನ ಮಾಡಬೇಕು. ಆದರೆ ಅದರ ಹೆಸರಲ್ಲಿ ಆತ್ಮಾಹುತಿ ಬೇಡ. ಬದಲಾಗುತ್ತಿರುವ ಸಮಾಜದಲ್ಲಿ ಯಾವಾಗಲೂ ಚಳುವಳಿಗಳು ಇರುತ್ತವೆ. ಚಳುವಳಿಗಳು ಇರದ ಸಮಾಜ ಆರೋಗ್ಯಕರ ಸಮಾಜ ಅಲ್ಲ. ಅದು ಪ್ರಜಾಪ್ರಭುತ್ವ ಇರುವ ಸಮಾಜವೂ ಅಲ್ಲ.  ಹೊಸ ತಲೆಮಾರಿನ ಚಳುವಳಿಗೆ ಮಾರಕವಾದ ಜಾಗತೀಕರಣ ಮತ್ತು ಜಾಹಿರಾತೀಕರಣ ನಿಮರ್ಿಸುವ ಮನೋಧರ್ಮದ ವಿರುದ್ಧ ಹೋರಾಡಬೇಕಾಗಿದೆ' ಎಂದರು ಬರಗೂರು.


 ಚಳುವಳಿಯ ನಿನ್ನೆ-ನಾಳೆಗಳು

'ಕನರ್ಾಟಕ ಕಂಡ ಚಳುವಳಿಗಳು - ನಿನ್ನೆ ಮತ್ತು ನಾಳೆ' ಗೋಷ್ಟಿಯಲ್ಲಿ ಡಾ.ಎಂ.ಡಿ.ಒಕ್ಕುಂದ 'ನಿನ್ನೆ'ಯ ಬಗ್ಗೆ ಮಾತನಾಡಿದರೆ ಡಾ.ಎಚ್.ಎಸ್.ಅನುಪಮ 'ನಾಳೆ'ಯ ಬಗ್ಗೆ ಮಾತನಾಡಿದರು. 'ನಿನ್ನೆ'ಯನ್ನು ಬೌದ್ಧ ಧರ್ಮದ ಕಾಲದ ವರೆಗೂ ವಿಸ್ತರಿಸಿದ ಒಕ್ಕುಂದ, 'ನಿನ್ನೆ'ಯ ನಾಲ್ಕು ಮಾದರಿಯ ಚಳುವಳಿಗಳಿಂದ ಏನು ಕಲಿಯಬಹುದು ಎಂಬುದರ ಬಗ್ಗೆ ಹೆಚ್ಚು ಒತ್ತು ಕೊಟ್ಟರು.  ಬೌದ್ಧ ಮತ್ತು ವೀರಶೈವದಂತಹ ಧಾಮರ್ಿಕ ಚಳುವಳಿಗಳು; ಊಳಿಗಮಾನ್ಯ ವ್ಯವಸ್ಥೆಯ ವಿರುದ್ಧ ಬಂಡೆದ್ದ ಕಬೀರ, ತುಕಾರಾಂ ಮುಂತಾದ ಅನುಭಾವಿ ಚಳುವಳಿಗಳು; ಟಿಪ್ಪು, ಕಿತ್ತೂರ ಚೆನ್ನಮ್ಮನಿಂದ ಗಾಂಧಿಯ ವರೆಗಿನ ವಸಾಹತುಶಾಹಿ ವಿರೋಧಿ ಚಳುವಳಿಗಳು; ವಸಾಹತೋತ್ತರ ಚಳುವಳಿಗಳು - ಅವರು ವಿಶ್ಲೇಷಿಸಿದ ನಾಲ್ಕು ಮಾದರಿಗಳು.
ಚಳುವಳಿ ಸಮಾಜದಲ್ಲಿ ಬದಲಾವಣೆಯ ಪ್ರಕ್ರಿಯೆಯ ಭಾಗ. ಚಳುವಳಿಯ ಸಫಲತೆ-ವಿಫಲತೆ, ಪರಿಭಾಷೆ-ವಿಧಾನಗಳ ಬಗ್ಗೆ ನಿಧರ್ಾರಕ್ಕೆ ಬರುವುದರ ಔಚಿತ್ಯವನ್ನು ಚಿನು ಅಚಿಬೆ ಅವರ ಆಫ್ರಿಕನ್ ಜಾನಪದ ಕತೆ, ಮತ್ತು ಸೊಫೊಕ್ಲಿಸನ ಗ್ರೀಕ್ ನಾಟಕದ ದೃಷ್ಟಾಂತದ ಮೂಲಕ ಪ್ರಶ್ನಿಸುತ್ತಾ, ಅನುಪಮ ನಾಳೆಯ ಚಳುವಳಿಗಳ ಬಗ್ಗೆ ತಮ್ಮ ಕೆಲವು ಪ್ರಸ್ತಾವಗಳನ್ನು ಮುಂದಿಟ್ಟರು. ನಾಳೆಯ ಚಳುವಳಿಗಳು ಜಾತಿ-ವರ್ಗ-ಲಿಂಗದ ವಿಷಯಗಳ ಬಗ್ಗೆ ಇರುತ್ತವೆ. ಪ್ರಜಾಸತ್ತಾತ್ಮಕ ಅವಕಾಶಗಳನ್ನೇ ಕಸಿಯುವುದರ ವಿರುದ್ದ, ಇದಕ್ಕಾಗಿ ಚುನಾವಣಾ ಸುಧಾರಣೆಗಳಿಗಾಗಿ ಚಳುವಳಿಗಳು ಬೇಕಾಗಿವೆ ಎಂದರು. ದಲಿತ-ಕಮ್ಯುನಿಸ್ಟ್, ಮಹಿಳೆ-ಪರಿಸರ-ಬುಡಕಟ್ಟು ಮುಂತಾದ ಚಳುವಳಿಗಳ ದ್ವೀಪಗಳ ನಡುವೆ ಸೇತುವೆಯಾಗಬೇಕು ಎಂಬ ತನ್ನ ಆಸೆ ವ್ಯಕ್ತಪಡಿಸಿದರು. ಎಲ್ಲಾ ಪ್ರಗತಿಪರ 'ವಾದಗಳ' ಮಿಶ್ರಣ (ಸಮ್ಮಿಶ್ರ ಲೋಹದಂತೆ) ಅಥವಾ ಅವುಗಳ ಸೃಜನಾತ್ಮಕ 'ನಾಶ'ದಿಂದ ಒಂದು ಹೊಸ ವಾದ ಹೊಮ್ಮಬಹುದು ಎಂಬ ಆಶಾಬಾವನೆ ವ್ಯಕ್ತಪಡಿಸಿದರು.
ಎಂ.ಜಿ.ಹೆಗಡೆ, ಬರಗೂರು, ಒಕ್ಕುಂದ ಮತ್ತು ಅನುಪಮ ಮಂಡಿಸಿದ ಈ ವಿಚಾರಗಳ ಮತ್ತು ವಿಷಯದ ಇತರ ಆಯಾಮಗಳ ಬಗ್ಗೆ ಊಟದ ವಿರಾಮದ ನಂತರ ನಡೆದ 'ಚಳುವಳಿ - ಹೊಸ ತಲೆಮಾರಿನ ಪ್ರಶ್ನೆಗಳು' ಸಂವಾದದಲ್ಲಿ, ಸಮಾರೋಪದಲ್ಲಿ, ಸಾಹಿತ್ಯೋತ್ಸವದಲ್ಲಿ ಪಾಲ್ಗೊಂಡ ಎಲ್ಲರ ಮಧ್ಯೆ ಚಚರ್ೆ ನಡೆಯಿತು. ಚಳುವಳಿಗಳು ಏಳು ಬೀಳುಗಳು ಕಂಡಿವೆ. ಆದರೆ ಕೆಲವರು ಹೇಳುವಂತೆ ಸತ್ತಿಲ್ಲ. ನಿರಂತರವಾಗಿ ನಡೆಯುತ್ತಲೇ ಇವೆ. ಚಳುವಳಿಗಳ ವರದಿಗಳ ಬಗ್ಗೆ ಮಾಧ್ಯಮಗಳ ಮೌನ-ಉಪೇಕ್ಷೆ, ಅವುಗಳನ್ನು ಸ್ಥಳೀಯ ವರದಿಗೆ ಸೀಮಿತವಾಗಿಸುವ ಪ್ರವೃತ್ತಿ, ಅವು ಅಮುಖ್ಯ ಎನ್ನುವ ಮನೋಧರ್ಮ ದೊಡ್ಡ ಚಳುವಳಿಗಳನ್ನೂ (ಉದಾ. ಫೆಬ್ರುವರಿಯಲ್ಲಿ ನಡೆದ ಸಾರ್ವತ್ರಿಕ ಮುಷ್ಕರ, ಪಾಲರ್ಿಮೆಮಂಟಿನ ಮುಂದೆ ಆಹಾರ ಹಕ್ಕಿಗಾಗಿ ನಡೆದ ಭಾರೀ ಪ್ರತಿಭಟನೆ) ಜನಮಾನಸದಿಂದ 'ಇಲ್ಲವಾಗಿಸುವ' ಹುನ್ನಾರದಲ್ಲಿ ತೊಡಗಿವೆ. ಇದು ಚಚರ್ೆಯಲ್ಲಿ ವ್ಯಾಪಕವಾಗಿ ವ್ಯಕ್ತವಾದ ಅಭಿಪ್ರಾಯ.


Tuesday, 11 June 2013

ಜಾನಪದಕ್ಕೆ ಮಾಸ್ತರರಾದ ಡಾ.ಎಲ್.ಆರ್.ಹಗಡೆ

        ಜಾನಪದಕ್ಕೆ ಮಾಸ್ತರರಾದ ಡಾ.ಎಲ್.ಆರ್.ಹಗಡೆ                                                                                       
                                                                                                          - ಡಾ.ವಿಠ್ಠಲ ಭಂಡಾರಿ.
           ದೊಗಲೆ ಪ್ಯಾಂಟು,ಉದ್ದ ತೋಳಿನ ಅಂಗಿ, ಅಂಗಿಗೆರಡು ಕಿಸೆ, ಹೆಗಲಿಗೆ ಒಂದು ಬಟ್ಟೆ, ಕಣ್ಣಿಗೆ ಕನ್ನಡಕ, ಕೈಯಲ್ಲೊಂದು ಕೊಡೆ ಹಿಡಿದು ಹೊಸೂರಿನಿಂದ ಸಿದ್ದಾಪುರಕ್ಕೆ ಹೊರಟರೆಂದರೆ,ಮಾಸ್ತಿಯವರ ಬಗ್ಗೆ ನಿಸ್ಸಾರ ಅಹಮದ್ ಬರೆದ
            ಕೂಗೂ ಹುಸಿಮುನಿಸುಗಳ ನಡುವೆ ತುಟಿಗಳ ಮೊಗ್ಗೆ
  ಬಿರಿಸಿ ನಕ್ಕಾಗಿವರು ಥೇಟ್ ಜುಲೈ ತಿಂಗಳ ಶಿವಮೊಗ್ಗೆ
  ಚಟಕಷ್ಟು ಚಳಿ ನೂಲು,ಒಂದಿಷ್ಟು ಹೂಬಿಸಿಲು.
  ಹೊರಗೆ ಕಚಪಿಚ ಕೆಸರು,ಒಳಗೆ ಬೆಚ್ಚನೆ ಸೂರು..."
     ಕವನ ನೆನಪಾಗುತ್ತದೆ.
        
 ಡಾ.ಎಲ್.ಆರ್.ಹೆಗಡೆಯವರು ಜಾನಪದ ಸಂಶೋಧಕ ವಿಮರ್ಶಕರಿಗೆ ವಿದ್ವಾಂಸರಾಗಿ ಗೌರವ ಪಡೆದಿದ್ದರೂ  ಜನಪದರ ಪಾಲಿಗೆ ಅವರೊಬ್ಬ ಮಾಸ್ತರರಾಗಿಯೇ ಪ್ರೀತಿಪಾತ್ರರಾಗಿದ್ದಾರೆ. ಸಂಶೋಧನೆಗಾಗಿ ಜನ ಸಮುದಾಯದ ನಡುವೆ ಬಂದ ಹೆಗಡೆಯವರು ಅವರ ಕಷ್ಟ-ಸುಖಗಳಿಗೆ ದಿನಗಟ್ಟಲೆ ಕಿವಿಗೊಟ್ಟರು. ಖಾಸಗಿ ಕೆಲಸಕ್ಕಾಗಿ ಹಳ್ಳಿಗಳಿಗೆ ಹೋದಾಗ ಜನರಿಂದ ಜಾನಪದ ಅಂಶಗಳನ್ನು ಕೆದಕಿ ಕೇಳುವ, ನೋಡುವ ಪ್ರವೃತ್ತಿ ಬೆಳೆಸಿಕೊಂಡರು. ಹಾಗಾಗಿ ಪ್ರತಿ ಸಮುದಾಯದ ಕುಟುಂಬದಲ್ಲಿ ಇನ್ನೊಬ್ಬ ಸದಸ್ಯರಾಗಿ ಬೆರೆಯುವ ಮಾನವೀಯ ಕಾಳಜಿ ಇರುವುದರಿಂದಲೇ ಹೆಗಡೆಯವರಿಗೆ ಜಾನಪದ ಅನ್ನುವುದು ಸಮುದಾಯವನ್ನು ಹೊರತಾಗಿಸಿದ ಪಠ್ಯವಲ್ಲ.ಅವರನ್ನು ಒಳಗೊಂಡ ಒಂದು ಜೀವನ ವಿಧಾನ.
 ಪ್ರಾಮಾಣಿಕತೆ ಮತ್ತು ಮುಗ್ದತೆ ಅವರ ವ್ಯಕ್ತಿತ್ವದ ಮುಖ್ಯ ಅಂಶಗಳು. ಒಮ್ಮೆ ನೀವು ಪರಿಚಯಿಸಿಕೊಂಡು ಮಾತನಾಡಿದಿರೆಂದರೆ ಸಂತೆ ಪೇಟೆಯಲ್ಲಿ ಕೂಡ ನಿಮ್ಮನ್ನು ಗುರುತಿಸಿ, ಮಾತನಾಡಿಸುವ ನೆನಪು ಅವರದು. ಮತ್ತು ವಿಷಯದಲ್ಲಿ ಆಸಕ್ತಿಯಿದೆಯೆಂದಾದರೆ ವಯಸ್ಸಿನ ಅಂತರವನ್ನೂ ಮರೆತು ನಿಮ್ಮೊಂದಿಗೆ ವಿಷಯ ಹಂಚಿಕೊಳ್ಳುವ ನಿರಹಂಕಾರಿ ಸ್ವಭಾವ ಅವರದು. ಯಾವುದಾದರೂ ರೋಗದ ಬಗ್ಗೆಯೋ, ಜಾನಪದ ಸಂಗ್ರಹದ ಬಗ್ಗೆಯೋ,ಅವರೇ ಪ್ರಕಟಿಸಿದ ಪುಸ್ತಕಗಳ ಬಗ್ಗೆಯೋ ದಾರಿಮಧ್ಯೆಯಲ್ಲಿ ಕೇಳಿದರೂ ಕೇಳುಗರ ಕುತೂಹಲವನ್ನು ತಣಿಸಿಯೇ ಮುಂದಕ್ಕೆ ಅಡಿ ಇಡುತ್ತಾರೆ. ಬಿಸಿಲು,ಗಾಳಿಗಳ ಪರಿವೆಯಿಲ್ಲದೇ, 80ರ ವಿದ್ವಾಂಸರಿಗೆ 20ರ ಹರೆಯದ ಉತ್ಸಾಹ ಎಲ್ಲಿಂದ ಬರುತ್ತದೆಯೋ?
 ತಟ್ಟನೆ ನೋಡಿದರೆ ವಿದ್ವಾಂಸರಂತೆ ಕಾಣುವುದಿಲ್ಲ. ಹೇಳಿದರೂ ನಂಬುವುದೂ ಕಷ್ಟ. ಆದರೆ ಮಾತನಾಡಿಸಿದರೆ ಮಾತ್ರ ಆಶ್ಚರ್ಯ ಆಗದೇ ಇರದು. ತೆಗೆದಷ್ಟೂ ಮತ್ತಷ್ಟು ತಂಬಿಕೊಂಡೇ ಇರುತ್ತದೆ. ಅಮೂಲ್ಯ ಸಂಪತ್ತು ಪಶ್ಚಿಮದ ಅರಬ್ಬಿಯಂತೆ ತೆರೆಯ ಹಿಂದೆ ತೆರೆಗಳ ಸಾಲು ಆದ ಬಗೆಯ, ಒಳಹೊಕ್ಕಿದರೆ ಅಮೂಲ್ಯ ಮುತ್ತು-ರತ್ನಗಳು; ಪೂರ್ವದ ಸಹ್ಯಾದ್ರಿಯಂತೆ ದಾರಿ ಕಂಡು ಒಳಹೊಕ್ಕಿದರೆ ಬೀಟೆ,ಗಂಧಗಳ ಅದ್ಭುತ ಗಣಿ.ಹಾಗೆ ನೋಡಿದರೆ ಇದೊಂದು ಜಾನಪದ ಅಕ್ಷಯಪಾತ್ರೆ.
 ಜಾನಪದ ಕಲೆ,ಸಂಸ್ಕೃತಿ, ಜೀವನ ವಿಧಾನದಲ್ಲಿ ಆದ ವರ್ತನೆಯನ್ನು ಸ್ವಾತಂತ್ರ್ಯ ಪೂರ್ವದಿಂದಲೇ ಅನುಭವಿಸಿದರು. ಕುಮಟಾ ತಾಲೂಕಿನ ಹೊಲನಗದ್ದೆಯಲ್ಲಿ ಜನವರಿ 1 1923ರಲ್ಲಿ ಜನಿಸಿದ,ಇವರ ಪ್ರಾಥಮಿಕ ಶಿಕ್ಷಣ ಕುಮಟಾದಲ್ಲಿಯೇ ನಡೆಯಿತು.1951ರಿಂದ 1981ರ ವರೆಗೆ ಕುಮಟಾದ ಕೆನರಾ ಕಾಲೇಜಿನಲ್ಲಿ ಉಪನ್ಯಾಸಕರಾಗಿ,ರೀಡರ್ ಆಗಿ, ಪ್ರೊಪೇಸರ್ ಆಗಿ ಸೇವೆ ಸಲ್ಲಿಸಿದರು. ಈಗ ತಮ್ಮ ನಿವೃತ್ತಿ ಜೀವನವನ್ನು ಉತ್ತರ ಕನ್ನಡದ ಸಿದ್ದಾಪುರದಲ್ಲಿ ಕಳೆಯುತ್ತಿದ್ದಾರೆ.
                                                                       2
                     ಇವರೊಬ್ಬ ಸೃಜನಶೀಲ ಲೇಖಕರು ಎನ್ನುವುದು ಅನೇಕರಿಗೆ ಗೊತ್ತಿಲ್ಲ. ಇವರ ಬರೆವ ಬದುಕು ಪ್ರಾರಂಭವಾಗಿದ್ದು ಹೈಸ್ಕೂಲು ದಿನಗಳಲ್ಲಿ.ಕತೆ ಬರೆಯುವ ಮೂಲಕ. ಇವರ ಒಂದು ಕವನ ಸಂಕಲನ 'ಬಾಳ ದೀಪಾವಳಿ' 1958ರಲ್ಲಿಯೂ,ಕಥಾ ಸಂಕಲನ 'ಹಕ್ಕಿ ನರಸಣ್ಣ' 1960ರಲ್ಲೂ 'ಘಾಟಿ ಮುದುಕಿ' ನಾಟಕ 1962ರಲ್ಲೂ ಪ್ರಕಟವಾಗಿವೆ. ಇದಲ್ಲದೇ 5-6 ಏಕಾಂಕ ನಾಟಕ ಹಲವಾರು ಬಿಡಿಕತೆಗಳು, ಹಲವಾರು ಕವಿತೆ,ಹನಿಕವನ,ರೂಪಕಗಳು,ಲಘು ಬರಹಗಳು, ಈಗಾಗಲೇ ನಾಡಿನ ಅನೇಕ ಪತ್ರಿಕೆಗಳಲ್ಲಿ, ವಿಶೇಷಾಂಕಗಳಲ್ಲಿ ಬೆಳಕು ಕಂಡಿವೆ. ಇದಲ್ಲದೇ ಅನುವಾದಿತ ಕೃತಿ,ವ್ಯಕ್ತಿಚಿತ್ರಗಳು ಬೆಳಕು ಕಂಡಿದೆ.
               
               ಎಲ್ಲಾರ್ ಹೆಗಡೆಯವರದು ಸಾಹಿತ್ಯ ವಿಮಶರ್ೆಯಲ್ಲೂ ಮುಖ್ಯ ಹೆಸರು. ನವೋದಯದ ಸ್ಪಷ್ಟ ದಾಟಿಯಲ್ಲಿಯೇ ಸಾಗುವ ಇವರ 5 ವಿಮಶರ್ಾ ಸಂಕಲನಗಳು ಪ್ರಕಟವಾಗಿವೆ. ಕಾವ್ಯ-ವ್ಯಾಸಂಗ 'ಕುಮಾರವ್ಯಾಸ' 'ಬತ್ತಲೇಶ್ವರ ರಾಮಾಯಣ' ಹಳಗನ್ನಡ ಕವನಗಳು' ಬಿಂಬ ಪ್ರತಿಬಿಂಬ' ಮುಖ್ಯವಾದದ್ದು.
                ಡಾ. ಹೆಗಡೆಯವರು ಪಿ.ಎಚ್.ಡಿ. ಅಧ್ಯಯನಕ್ಕೆ  ಆಯ್ಕೆ ಮಾಡಿಕೊಂಡ ವಿಷಯ ಜಾನಪದದ್ದಲ್ಲ. 'ಕುಮಾರವ್ಯಾಸನ ಪಾತ್ರ ಸೃಷ್ಟಿ' ಎನ್ನುವ ವಿಷಯದ ಮೇಲಿನ ಅಧ್ಯಯನಕ್ಕೆ ಪಿ.ಎಚ್.ಡಿ. ಸಿಕ್ಕಿದೆ.ಇದು ಕಾಲ್ಪನಿಕ ಮತ್ತು ಮನೋವೈಜ್ಞಾನಿಕ ಸೆಲೆಯ ಸಂಶೋಧನ ಮಹಾಪ್ರಬಂಧ.

                ಇದಲ್ಲದೇ 40-50 ಲೇಖನಗಳು ಬಿಡಿಬಿಡಿಯಾಗಿ ಪ್ರಕಟವಾಗಿದೆ. ಇವು ಪುಸ್ತಕರೂಪ ಪಡೆದುಕೊಳ್ಳಬೇಕಾಗಿದೆ. ಮುಖ್ಯವಾಗಿ ಇಲ್ಲೆಲ್ಲಾ ಅವರ ವಿಮಶರ್ಾ ಸಂಯಮ ಎದ್ದು ಕಾಣುತ್ತದೆ. ಸರಳವಾಗಿದ್ದನ್ನೂ ಸಂಕೀರ್ಣವಾಗಿ ಹೇಳುವ ಕ್ರಮ ಇವರದ್ದಲ್ಲ.ನಡೆ-ನುಡಿ ಎಷ್ಟು ಸರಳವೋ ಅವರ ವಿಮಶರ್ಾ ಲೇಖನದ ದಾಟಿ ಕೂಡ ಅಷ್ಟೇ ಸರಳ. ವಿಷಯ ವೈವಿಧ್ಯ ಕೂಡ ಸಾಕಷ್ಟಿದೆ.

                  ಡಾ. ಹೆಗಡೆಯವರು ಅತ್ಯತ್ತಮ ಹೋಮಿಯೋಪತಿ ವೈದ್ಯರು ಕೂಡ ಹೌದು. ನಾಡ ಔಷಧಿಯಲ್ಲಿಯೂ ಅವರಿಗೆ ಒಳ್ಳೆಯ ಗತಿ ಇದೆ. ಸುಮಾರು 15 ವೈದ್ಯ  ಗ್ರಂಥಗಳನ್ನು ಪ್ರಕಟಿಸಿದ್ದು,ಕೇವಲ ಅಲ್ಲಿ ಇಲ್ಲಿ ಕೇಳಿ ಸಂಗ್ರಹಿಸಿದ್ದಲ್ಲ.ಸ್ವತಃ ಅವರೇ ಅದನ್ನು ಪ್ರಯೋಗ ಮಾಡಿ ನೋಡಿದವರು. ಅವರಿಗೆ 'ಸೀನಿಯರ್ ಹೋಮಿಯೋಪತಿ' ಎಂಬ ಬಿರುದು ಕೂಡ ಬಂದಿದೆ. ಮದ್ದಿನ ಮೇಲೆ ಇಷ್ಟೊಂದು ಪುಸ್ತಕ ಪ್ರಕಟಿಸಿದವರಲ್ಲಿ ಇವರೇ ಮೊದಲಿಗರು ಎಂದು ವಿದ್ವಾಂಸರ ಅಭಿಪ್ರಾಯ. ಒಬ್ಬ ರೋಗಿಯನ್ನು ಎಷ್ಟೊಂದು ಪ್ರೀತಿಸುತ್ತಾರೆ ಎಂದರೆ ನಿಮ್ಮ ಆರೋಗ್ಯದ ಬಗ್ಗೆ ತಿಳಿದರೆ ಸಾಕು ಅದಕ್ಕೊಂದು ಔಷಧ ಹೇಳಿಯೇ ಉಳಿದ ಮಾತುಗಳು ಒಂದು ಪತ್ರ ಬರೆದರೆ ಸಾಕು 5-6 ಕಿ.ಮೀ. ನಡೆದೇ ಮನೆಗೆ ಬಂದು,ಔಷಧ ಕೊಟ್ಟು ಹೋಗುವ ವಿಶಿಷ್ಟ ವ್ಯಕ್ತಿ ಇವರು. ಜಾನಪದ ಕಥೆಯ ಸಂಗ್ರಹದಲ್ಲಿ ಇವರೇ ಪ್ರಥಮರು. ಬೇರೆಯವರ ಸಂಗ್ರಹ ಮೊದಲೇ ಪ್ರಕಟವಾಗಿದ್ದರೂ ಆ ದಿಶೆಯಲ್ಲಿ ದೊಡ್ಡ ಪ್ರಯತ್ನ ನಡೆದದ್ದು ಇವರಿಂದಲೇ ಈ ವರೆಗೆ ಸುಮಾರು 500ಕ್ಕೂ ಹೆಚ್ಚು ಕಥೆಗಳನ್ನು ಅವರು ಸಂಗ್ರಹಿಸಿದ್ದಾರೆ.(ಅದರ ಕೃತಿ ವಿವರ ಪ್ರತ್ಯೇಕವಾಗಿ ಕೊಡಲಾಗಿದೆ.) 
                    
                      ತೀರಾ ವೈವಿಧ್ಯತೆ ಇದೆ. ಬ್ರಾಹ್ಮಣ ಕುಟುಂಬದಿಂದ ಹಿಡಿದು ಮುಕರಿ ಮತ್ತು ಹೊಲೆಯರ ಜನಾಂಗದವರೆಗಿನ ಕಥೆಗಳನ್ನು ಅವರು ಸಂಗ್ರಹಿಸಿದ್ದಾರೆ. ಹಾಗೆ ನೋಡಿದರೆ ಅವರ ಕಥೆಗಳ ಸಮಗ್ರ ಅಧ್ಯಯನ ಉತ್ತರ ಕನ್ನಡದ ಎಲ್ಲಾ ವರ್ಗ,ಸಮುದಾಯದ ಸಮಗ್ರ ಅಧ್ಯಯನವೂ ಹೌದು ಎನ್ನುವಷ್ಟು ವ್ಯಾಪಕವಾದದ್ದು.
 ಯಾವುದೇ ಆಧುನಿಕ ಸಲಕರಣೆಗಳಿಲ್ಲದ ಆ ದಿನಗಳಲ್ಲಿಯೇ ಡಾ.ಹೆಗಡೆಯವರು ಸಂಶೋಧನೆಗೆ ತೊಡಗಿಕೊಂಡವರು. ನಡೆಯಲು ಕಾಲು,ಕೇಳಲು ಕಿವಿ,ಬರೆಯಲು ಪಟ್ಟಿ-ಪೆನ್ನು ಇವಿಷ್ಟೇ ಹೆಗಡೆಯವರ ಸಾಧನ.ಇವಿಷ್ಟರಿಂದಲೇ ಅದೆಷ್ಟು ಸಮರ್ಪಕವಾಗಿ ಅವರು ಸಂಗ್ರಹಿಸಿದ್ದಾರೆ ಎನ್ನುವುದೇ ಆಶ್ಚರ್ಯದ ಮಾತು.ಇದನ್ನೇ ಡಾ: ಬಿಳಿಮಲೆಯವರು 'ಅವರು ಕೆಲಸವನ್ನು ಪ್ರಾರಂಭಿಸಿದಾಗ ಉತ್ತರ ಕನ್ನಡದಂತಹ ಜಿಲ್ಲೆಯಲ್ಲಿ ಆಧುನಿಕ ಸಲಕರಣೆಗಳು ಇರಲು ಸಾಧ್ಯವಿರಲಿಲ್ಲ. ಆದರೆ ಅದನ್ನು ತೊಂದರೆ ಎಂದು ಭಾವಿಸದೇ ಹೆಗಡೆಯವರು ಅಪಾರ ಶ್ರಮ ವಹಿಸಿ ತಮ್ಮ ಪರಿಸರದಲ್ಲಿಲಭ್ಯವಿರುವ ಜಾನಪದ ಮಾಹಿತಿಗಳನ್ನು ಕಲೆ ಹಾಕಿದರು' ಎಂದು ಸರಿಯಾಗಿಯೇ ಅವರ ವಿಶಿಷ್ಟತೆಯನ್ನು ಗುರುತಿಸಿದ್ದಾರೆ.
  ಹಾಗಾಗಿ ಇಂದಿಗೂ ಅವರಿಗೆ ಅವರು ಸಂಗ್ರಹಿಸಿದ ಹಾಡಿನ ದಾಟಿ ತಿಳಿದಿದೆ. ಹಾಡ ಬಲ್ಲರೂ ಕೂಡ. ಅವರ ಸಂಕಲನದ ಒಂದು ಕಥೆಯ ಹೆಸರು ಹೇಳಿದರೆ 40 ವರ್ಷದ ಹಿಂದೆ ಅದನ್ನು ಯಾರು ಹೇಳಿದರು? ಅದರ ಎಲ್ಲಾ ವಿವರಗಳನ್ನು ಅವರು ಹೇಳಬಲ್ಲರು.
 ಪ್ರತಿಯೊಂದು ಸಂಗ್ರಹದ ಮುನ್ನುಡಿಯಂತೂ ಅತ್ಯಂತ ದೀರ್ಘವೂ ಮತ್ತು ಕತೆಯ 'ಓದಿಗೆ ಮಹತ್ವದ ಪೀಠಿಕೆಯೂ ಆಗಿದೆ. ಯಾವದೋ ಬುಡಕಟ್ಟಿನ ಕಥೆಯನ್ನು ಸಂಗ್ರಹಿಸಿದ್ದಾರೆ ಎಂದರೆ ಆ ಬುಡಕಟ್ಟಿನ ಜೀವನ ಕ್ರಮ-ಆಯಾಮಗಳ ದಾಖಲೆಯನ್ನು ಕೊಡುತ್ತಾರೆ.ಹಾಗಾಗಿ ಅನೇಕ ಸಂದರ್ಭದಲ್ಲಿ ಅದೇ ಒಂದು ಪುಸ್ತಕ ಆಗುವಷ್ಟು ಪರಿಪೂರ್ಣ ಮತ್ತು ಸ್ವತಂತ್ರ.ಇದರೊಂದಿಗೆ ಅಪರಿಚಿತ ಜನಾಂಗ ಒಂದು ಹಂತದಲ್ಲಿ ಪರಿಚಿತ ಲೋಕವಾಗಿಬಿಡುತ್ತದೆ.
 ಸದಾ ಇನ್ನೊಬ್ಬನ ಕಷ್ಟವನ್ನು ನೋಡಿ ಮರುಗುವ ಸ್ವಭಾವ ಎಲ್.ಆರ್.ಹೆಗಡೆಯವರದು.ಹಾಗಾಗಿ ಅವರು ಜನಪದ ಕಷ್ಟಗಳಿಗೆ ಸ್ಪಂದಿಸಿದ ಘಟನೆಗಳು ನೂರಾರು. ತೀರಾ ಅಸಹಾಯಕ ನಿಕೃಷ್ಟ ಬಾಳನ್ನು ಬದುಕುತ್ತಿರುವ ಅನೇಕರನ್ನು ಮೇಲೆತ್ತಲು ಸ್ವತಃ ಪ್ರಯತ್ನಿಸಿದವರು.ಉದಾಹರಣೆಗೆೆ ಉತ್ತರ ಕನ್ನಡದ ಮುಕರಿಗಳನ್ನು ಗುರುತಿಸಿ ಅವರಿಗೆ ಮೀಸಲಾತಿ(ವಿಶೇಷ ಸೌಲತ್ತು) ಕೊಡಿಸುವಲ್ಲಿ ಅವರು ಪಟ್ಟ ಶ್ರಮವನ್ನು ನಾವಾಗಿ ಕೇಳಿದರೆ ನೆನಪಿಸಿಕೊಳ್ಳುತ್ತಾರೆ. ಹಾಗಾಗಿ ಈ ಸಂಶೋಧಕನ ಮತ್ತು ಜನಪದ ಸಂಬಂಧ ಯಾಂತ್ರಿಕವಾದದ್ದಲ್ಲ. ರಕ್ತ ಮಾಂಸಗಳಿಂದೊಡಗೂಡಿದ ಮಾನವೀಯ ಸಂಬಂಧ. ಆಧುನಿಕ ಸಾಧನ ಸಲಕರಣೆಗಳ ಕಾಲದಲ್ಲಿ ಇದು ಮರೆಯಾಗುತ್ತಿರುವುದು ವಿಷಾದನೀಯ.
                                                                   4 ಸಂಶೋಧಕನಿಗಿರಬೇಕಾದ ಕಾಳಜಿಯ ಬಗ್ಗೆ ಕೇವಲ ಅವರಲ್ಲಿ ಇರುವ ಸಾಹಿತ್ಯವನ್ನು ತೆಗೆದುಕೊಂಡು ಬರುವುದಾಗಲಿ, ತಂದದ್ದನ್ನು ಯಾಂತ್ರಿಕವಾಗಿ ವಿಶ್ಲೇಷಿಸುವುದಾಗಲಿ ಸಂಶೋಧಕನ ಗುಣವಲ್ಲ. ಅವನಿಂದ ನಾವು ಪಡೆಯುವ ಸಾಹಿತ್ಯಕ್ಕಿಂತ ಅವನ ಬದುಕು, ಜೀವನ ಮುಖ್ಯ. ಲೋಕ ಬದುಕಿನಲ್ಲಿರುವ ಅನೇಕರಿಗೆ ಅವರ ಕಷ್ಟಗಳಿಗೆ ಸ್ಪಂಧಿಸಿ ಕೈಲಾದ ಸಹಾಯ ಮಾಡುವುದು ಜೀವನದ  ವಿದ್ವಾಂಸನ ಕರ್ತವ್ಯ ಎಂದು ಹೇಳುವ ಹೆಗಡೆಯವರ ಪ್ರಗತಿಪರ ಮನೋಭಾವವನ್ನು ತಿಳಿಸುತ್ತದೆ.
 ಡಾ.ಹೆಗಡೆಯವರು ಎಂದೂ ಪ್ರಶಸ್ತಿಗಳ, ಸನ್ಮಾನಗಳ ಹಿಂದೆ ಹೋಗದಿರುವ ನಾಚಿಕೆ ಸ್ವಭಾವವನ್ನು ಬೆಳೆಸಿಕೊಂಡಿದ್ದರು. ರಾಜ್ಯ ಮಟ್ಟದ ಅನೇಕ ಗೋಷ್ಠಿ ಪ್ರಬಂಧಕಾರರಾಗಿ, ಅಧ್ಯಕ್ಷರಾಗಿ ಭಾಗವಹಿಸಿದ್ದಾರೆ.(ಪ್ರಶಸ್ತಿ ಗೌರವಗಳ ವಿವರ ಪ್ರತ್ಯೇಕವಾಗಿ ಕೊಟ್ಟಿದೆ.)ಆದರೂ ಅವರಿಗೆ ಸಿಗಬೇಕಾದ ಸ್ಥಾನಮಾನ ಇನ್ನೂ ಸಿಗಲಿಲ್ಲ ಎಂದೇ ಹೇಳಬೇಕು. ಯಾಕೆಂದರೆ ಇವರ ಸಂಶೋಧನೆಗಳ ಮಧ್ಯೆ ಪ್ರಶಸ್ತಿ ಪಡೆಯಲು ಬೇಕಾದ ಲಾಬಿಯನ್ನು ಕಟ್ಟಿಕೊಳ್ಳುವುದನ್ನೇ ಇವರು ಮರೆತರು.
 ಒಬ್ಬ ಸಂಶೋಧಕರಿಗೆ ಬೇಕಾದ ಕುತೂಹಲ,ಆತ್ಮವಿಶ್ವಾಸ ಮತ್ತು ಶಿಸ್ತನ್ನು ಸಮನಾಗಿ ರೂಢಿಸಿಕೊಂಡ ಡಾ.ಎಲ್.ಆರ್.ಹೆಗಡೆ ಯವರು ಈ 80ರ ವಯಸ್ಸಿನಲ್ಲಿಯೂ ಸಂಗ್ರಹ ಕಾರ್ಯವನ್ನು ನಿಲ್ಲಿಸಿಲ್ಲ. ಇಂಥವರಿಗೆ ಹಾರತುರಾಯಿಗಳ ಮೂಲಕ ಸನ್ಮಾನಿಸುವುದು ತಕ್ಕವಲ್ಲವೆಂದು ತಿಳಿದು ಇತ್ತೀಚೆಗೆ ಉತ್ತರ ಕನ್ನಡದ ಗೆಳೆಯರು ಅವರ 5 ಪುಸ್ತಕಗಳನ್ನು ಮತ್ತು ಅವರ ಕೃತಿಸೂಚಿಯನ್ನು 1997 ರಲ್ಲಿ ಮತ್ತು 2000ರಲ್ಲಿ 4 ಪುಸ್ತಕಗಳನ್ನು ಮುದ್ರಿಸಿ ಅವರಿಗೆ ಅಪರ್ಿಸುವುದರ ಮೂಲಕ ವಿಶಿಷ್ಟವಾಗಿ ಸನ್ಮಾನಿಸಿದರು.
 ಅಂದು ಭಾಗವಹಿಸಿದ ಡಾ.ಎಚ್.ಜೆ.ಲಕ್ಕಪ್ಪ ಗೌಡರು ಜಾನಪದ ಸಾಹಿತ್ಯದ ಸಂದರ್ಭದಲ್ಲಿ ಎಲ್.ಆರ್.ಹೆಗಡೆಯವರು ಒಂದು ಮಾರ್ಗ 'ಜಾನಪದ ವಿದ್ವಾಂಸರಿಗೆ ಕೊಡಬಹುದಾದ ಒಂದು ಅತ್ಯುನ್ನತ ಪ್ರಶಸ್ತಿಯೇನಾದರೂ ಕನರ್ಾಟಕದಲ್ಲಿ ಸ್ಥಾಪನೆ ಆದರೆ ಅದು ಮೊದಲು ಸಲ್ಲಬೇಕಾದ್ದು ಡಾ.ಎಲ್.ಆರ್.ಹೆಗಡೆಯವರಿಗೆ'. ಹೇಳಿದ ಈ ಮಾತು ಎಲ್.ಆರ್.ಹೆಗಡೆಯವರ ಮಹತ್ವವನ್ನು ಸ್ವಲ್ಪವಾಗಿ ತಿಳಿಹೇಳುತ್ತೇವೆ.
           
                         (ಅವರು ಬದುಕಿರುವಾಗ ಬರೆದಿದ್ದು. ಈಗ ನಮ್ಮೊಂದಿಗೆ ಅವರಿಲ್ಲ)
****************

'ಪಾರ್ಥಿಸುಬ್ಬ'ದ ಗರಿ ಹೊತ್ತ ಮಂಜ ಭಾಗವತರಿಗೆ ನೆನಪಿನ ನುಡಿ ನಮನ

'ಪಾರ್ಥಿಸುಬ್ಬ'ದ ಗರಿ ಹೊತ್ತ ಮಂಜ ಭಾಗವತರಿಗೆ ನೆನಪಿನ ನುಡಿ ನಮನ
                                                                                                          -- ಡಾ.ವಿಠ್ಠಲ ಭಂಡಾರಿ.
          ಹಿರಿಯರಾದ ಮಂಜುನಾಥ ಭಾಗ್ವತರು ನಮ್ಮನ್ನಗಲಿ 10 ದಿನಗಳು ಕಳೆದವು. ಹಾಗೆ ನೋಡಿದರೆ ಯಕ್ಷಗಾನದ ಒಂದು ವರ್ಣರಂಜಿತ ಅದ್ಯಾಯ ಪೂರ್ಣಗೊಂಡಿತು. ಮಹಾ ನಿಷ್ಠುರ ನಿಲುವಿನ, ಸದಾ ಪ್ರಯೋಗಶೀಲ ಮನಸ್ಸಿನ ಭಾಗವತರು ಯಕ್ಷ ರಂಗದಲ್ಲಿ ಗಳಿಸಿದ ಖ್ಯಾತಿ, ಕೊಟ್ಟ ಕೊಡುಗೆ ಜನಮಾನಸದಲ್ಲಿ  ಎಂದೂ ಮಾಸದು. ತೀರಾ ಬಡತನದ ಸಾಂಪ್ರದಾಯಿಕ ಕುಟುಂಬದಲ್ಲಿ ಬೆಳೆದು ಬಂದ ಇವರು ಪ್ರಾರಂಭದ ದಿನಗಳಲ್ಲಿ ಶಿಕ್ಷಕರಾಗಿ ಕೆಲಸ ನಿರ್ವಹಿಸಿದರು. ಯಕ್ಷರಂಗ ಪ್ರವೇಶಕ್ಕೆ ಮನೆಯವರಿಂದಲೇ ಒದಗಿದ ವಿರೋಧವನ್ನೂ ಲೆಕ್ಕಿಸದೇ ಭಾಗವತರಾಗಿ ದಕ್ಷಿಣೋತ್ತರ ಕನ್ನಡದ ಅನಿವಾರ್ಯ ಕಲಾವಿದರಾಗಿ ಬೆಳೆದ ಬಗೆ ವಿಸ್ಮಯಕರವಾದುದು. ಪ್ರಸಂಗಕರ್ತರಾಗಿ, ಭಾಗವತರಾಗಿ, ಯಕ್ಷಗಾನ ಪತ್ರಿಕೆಯ ಸಂಪಾದಕರಾಗಿ, ಇದನ್ನೆಲ್ಲ ಮೀರುವ ರೀತಿಯಲ್ಲಿ ಒಬ್ಬ ಸಹೃದಯ, ಮಾನವೀಯ ವ್ಯಕ್ತಿಯಾಗಿ ನಮ್ಮೊಡನಿದ್ದರು.
ಅವರು ನಮ್ಮನ್ನಗಲಿದ ದುಃಖದ ಸಂದರ್ಭದಲ್ಲಿಯೂ ನಾವು ನೆನಪಿಸಿಕೊಳ್ಳಬೇಕಾದ ಸಂತೋಷದ ಸಂಗತಿಯೆಂದರೆ ಹಿರಿಯ ಕಲಾವಿದ ಮಂಜುನಾಥ ಭಾಗವತರಿಗೆ ಪಾಥರ್ಿಸುಬ್ಬ ಪ್ರಶಸ್ತಿ ಕೊಟ್ಟು ಗೌರವಿಸಿದ್ದು. ಆದರೆ ಅವರಿಗೆ ಪಾಥರ್ಿಸುಬ್ಬದಂತ ದೊಡ್ಡ ಪ್ರಶಸ್ತಿ ಬಂದಾಗ ನಡೆದಾಡುವಷ್ಟು ಶಕ್ತಿ ಇರಲಿಲ್ಲ. ಹರಟೆ ಹೊಡೆಯುವ ಕಸುವಿರಲಿಲ್ಲ. ನೆನಪು ಮಾಸಿತ್ತು. ಆದರೆ ಪಾತರ್ಿಸುಬ್ಬ ಮಾತ್ರ ಮಂಜುನಾಥ ಭಾಗವತರನ್ನು ಮರೆಯದಿದ್ದುದು ನನಗಂತೂ ತುಂಬಾ ಖುಷಿ ನೀಡಿದೆ.
ಈ ನಾಡಿನ ಬಹುಮುಖ್ಯ ಭಾಗವತರು ಇವರು. ಜನಪ್ರಿಯತೆಯಲ್ಲಿಯೂ, ವಿದ್ವತ್ತಿನಲ್ಲಿಯೂ, ಯಕ್ಷಗಾನದ ಕುರಿತು ಬದ್ಧತೆಯಿಂದಲೂ ಮಂಜುನಾಥ ಭಾಗವತರು ಅದ್ವಿತೀಯರು. ಕೆಲವು ದಶಕಗಳಕಾಲ ತನ್ನ ಕಂಠ ಸಿರಿಯಿಂದ, ಸಮಯ ಪ್ರಜ್ಞೆಯಿಂದ ಯಕ್ಷರಂಗವನ್ನು ಆಳಿದರು ಎನ್ನುವುದು ಬಹುಶಃ ಅತಿಶಯೋಕ್ತಿಯಾಗಲಾರದು.
10-15 ವರ್ಷಗಳಿಂದ ಮಂಜುನಾಥ ಭಾಗವತರ ಕುಂಬಾರಮಕ್ಕಿ ಮನೆಯೊಂದಿಗೆ ನನಗೆ ತುಂಬಾ ಆತ್ಮೀಯ ಸಂಬಂಧ. ಅವರ ಒಡನಾಟದ ಸವಿಯನ್ನು ನಾನೂ ಉಂಡಿದ್ದೇನೆ. ವ್ಯಂಗ್ಯ, ಹರಿತ ಭಾಷೆಗೆ ಹೆಸರುವಾಸಿ. ಸದಾ ಎದುರಿಗಿದ್ದವರನ್ನು ನಗಿಸುತ್ತಾ, ತಾವೂ ನಗುತ್ತಾ ತನ್ನ ಹಳೆಯ ಜಮಾನಾವನ್ನು ನೆನಪಿಸುತ್ತಿದ್ದರು. ರಂಗದಲ್ಲಿ ನಡೆಯುವ ಹಲವು ಆಭಾಸಗಳನ್ನು ಕತೆ ಕಟ್ಟಿ ಹೇಳುತ್ತಿದ್ದರು. ಧರ್ಮಸ್ಥಳ ಮೇಳದ ಕುಂಬಳ ಕಾಯಿ ಸಾರು, ಕಾಯಿ ಚಟ್ನಿಯ ರುಚಿ ಈ ಹೆಂಗಸರ ಅಡಿಗೆಗೆ ಎಂದೂ ಬರಲಾರದು ಎಂದು ಮನೆಯವರನ್ನು ರೇಗಿಸುತ್ತಿದ್ದರು. ರಾತ್ರಿ ಆಟ, ಹಗಲು ನಿದ್ದೆಯ ಖುಷಿಯೇ ಬೇರೆ ಎಂದು ತಮ್ಮ ತಿರುಗಾಟದ ಅನುಭವವನ್ನು ನಿಭರ್ಿಡೆಯಿಂದ ಬಿಚ್ಚಿಡುತ್ತಿದ್ದರು. ಬಾಲ್ಯದ ಬಡತನ, ಅನ್ನ ಕಂಡುಕೊಳ್ಳುವ ಬದುಕಿನ ಹೋರಾಟ, ಮೇಳಗಳ ಕಾಲೆಳೆಯುವ ಸ್ಪರ್ದೆಯನ್ನು ಜಯಿಸಿ ಮಂಜುನಾಥ ಭಾಗವತರು 'ಪಾರ್ಥಿ ಸುಬ್ಬ' ಪ್ರಶಸ್ತಿಯವರೆಗೆ ಬೆಳೆದ ಪರಿ ಮಾತ್ರ ರೋಚಕವಾದುದು.
            ಭಾಗವತರು ಒಬ್ಬ ಆಶು ಕವಿ ಕೂಡ. ಹಲವು ಸಂಧರ್ಭಗಳಲ್ಲಿ ಪ್ರಸಂಗ ಪಟ್ಟಿಯಿಲ್ಲದೆಯೇ ಆಕ್ಷಣದಲ್ಲಿ ಪದ್ಯ ರಚಿಸಿ ಹಾಡುತ್ತಾ ಮುಮ್ಮೇಳದವರಿಗೆ ತಿಳಿಯದಂತೆ ಅವರನ್ನು ಕುಣಿಸಿದ ದಾಖಲೆಯೂ ಇದೆ. ಆ ಕಾಲದಲ್ಲಿಯೇ ಯಕ್ಷಗಾನಕ್ಕೊಂದು ಪತ್ರಿಕೆ ಬೇಕೆಂದು ಪ್ರಾರಂಭಿಸುವ ಧೈರ್ಯಕ್ಕೆ ಯಾರಾದರೂ ಮೆಚ್ಚಲೇ ಬೇಕು. ಪತ್ರಿಕೆ ನಿಂತಿತು ಎನ್ನುವುದು ಬೇರೆ ಮಾತು. ಆದರೆ ಕನಸು ಮತ್ತು ಆಶಯ ಇತ್ತಲ್ಲ. ಅದನ್ನು ನಾವು ಮೆಚ್ಚಲೇ ಬೇಕು.
          ಅವರ ಇಡೀ ಕುಟುಂಬವೇ ಹಾಗೆ. ಅತಿಥಿ ಸತ್ಕಾರದಲ್ಲಿ ಎತ್ತಿದ ಕೈ. ಅವರ ಮನೆಯಲ್ಲಿ ಊಟ ಮಾಡುವಾಗ ಯಾರ ಜಾತಿಯನ್ನೂ ಅವರು ಕೇಳಿದ್ದಿಲ್ಲ. ಅವರೊಂದಿಗೆ ಊಟ-ತಿಂಡಿ ಹಲವು ಬಾರಿ ನಾವೇ ಬಡಿಸಿಕೊಂಡು ಉಂಡಿದ್ದೂ ಇದೆ. ಜಾತ್ಯತೀತ ಮನೋಭಾವ ಅವರ ಸ್ವಭಾವದಲ್ಲಿ ಬೆರೆತಿತ್ತು.
           ಅವರ ಮಡದಿಯವರನ್ನು ನಾನು ನೆನೆಯಲೇ ಬೇಕು, ಪಾತರ್ಿಸುಬ್ಬ ಪ್ರಶಸ್ತಿಯನ್ನು ಒಳಗೊಂಡಂತೆ ಮಂಜ ಭಾಗವತರ ಯಶಸ್ಸಿನಲ್ಲಿ ದೊಡ್ಡ ಪಾಲು ಇವರಿಗೆ ಇದೆ. ನಾವೆಲ್ಲಾ ಅವರಿಗೆ 'ಆಯಿ' ಎಂದೇ ಕರೆಯುತ್ತೇವೆ. ಇಡೀ ಸಂಸಾರವನ್ನು ನಿಭಾಯಿಸುತ್ತಿದ್ದುದು ಇವರೇ. ತೋಟ, ಮನೆ, ಮಕ್ಕಳು. . .ಎಲ್ಲರೂ ಇವರ ಕಾಳಜಿಯಲ್ಲಿಯೇ ಬೆಳೆದುವು. ಭಾಗವತರ ಅನಾರೋಗ್ಯದಲ್ಲಿ - ಎಕ್ಷಿಡೆಂಟ್ ಆದಾಗ, ಪಾಶ್ರ್ವವಾಯು ಆದಾಗ- ಮಗುವಂತೆ ಪೋಷಿಸಿದರು.
ಅವರ ಮನೆಯ ಹೊಳ್ಳಿಯಲ್ಲಿ ಮಂಜ ಭಾಗವತರು, ಆಯಿ, ಮಮತಾ, ಗೋಪಾಲ, ನಾನು, ಮೊಮ್ಮಗ ಮಂಜುನಾಥ . .  . ಎಲ್ಲಾ ಕವಳ ಜಗಿಯುತ್ತ (ಗೋಪಾಲ ಕವಳದಲ್ಲಿ ಶೂರನಾಗಿದ್ದ.) ಹರಟೆ ಹೊಡೆದ ದಿನಗಳ ನೆನಪು ಈಗಲೂ. . . ಈಗಲೂ ಹಸಿರಾಗಿದೆ. ತನಗೆ ನೆನಪಿನ ಶಕ್ತಿಯೇ ಇಲ್ಲ ಎಂದು ಹೇಳುತ್ತಲೇ ನೆನಪಿನಾಳವನ್ನು ಬಗೆದಿಡುತ್ತಿದ್ದರು. ಭಾಗವತರು ಸಂಜೆ ಆಗುತ್ತಿದ್ದಂತೆ ಒಂದು ಸಿಗರೇಟಿಗಾಗಿ ಅಗ್ರಹಾರದ ಕಡೆ ನಡೆಯುತ್ತಿದ್ದರು. ಸಿಗರೇಟು ಸೇದಿ ಬಂದಾಗ ಅವರನ್ನು ತಮಾಷೆ ಮಾಡುತ್ತಿದ್ದೆವು. ಆದರೆ ಈಗ ಹೋದವರು ಬರುವುದೇ ಇಲ್ಲಾ ಎಂದಾಗ ಮನಸ್ಸಿಗೆ ಬೇಸರವಾಗುತ್ತದೆ.  
ವಿಠ್ಠಲ ಭಂಡಾರಿ, ಕೆರೆಕೋಣ
(ಇಂದು ಸಂಜೆ ಭಾಗವತರ ಹುಟ್ಟೂರಾದ ಕಡತೋಕಾದಲ್ಲಿ ಶೃದ್ಧಾಂಜಲಿ ಸಭೆಯನ್ನು ಆಯೋಜಿಸಲಾಗಿದೆ. ಅವರ ನೆನಪಿನಲ್ಲಿ ಈ ನೆನಪಿನ ನುಡಿ.)
 11-11-2011 ರಂದು ಕರಾವಳಿ ಮುಂಜಾವಿನಲ್ಲಿ ಪ್ರಕಟವಾಗಿದೆ

kavyaranga

Tuesday, 4 June 2013

ಸಹಯಾನ ಸಾಹಿತ್ಯೋತ್ಸವ 2013.

                                         ಡಾ. ಬರಗೂರು ರಾಮಚಂದ್ರಪ್ಪ ಮಾತನಾಡುತ್ತಿರುವದು.


                                         ಡಾ.ವಿಠ್ಠಲ ಭಂಡಾರಿ ಮಾತನಾಡುತ್ತಿರುವುದು