Wednesday, 10 March 2021

ಬೇರೆಲ್ಲೂ ಸಿಗದ ನ್ಯಾಯ

ಬೇರೆಲ್ಲೂ ಸಿಗದ ನ್ಯಾಯ, ಇನ್ನೆಲ್ಲೂ ಸಿಗದ ಸಾಂತ್ವನ, ಮತ್ತೆಲ್ಲೂ ಸಿಗದ ಸಮಾಧಾನ, ನ್ಯಾಯಾಲಯದಲ್ಲಿ ಸಿಗುತ್ತದೆ ಎಂಬ ದೃಢ ನಂಬಿಕೆಯೇ ಪ್ರಜಾಪ್ರಭುತ್ವದ ಸ್ತಂಭಗಳಲ್ಲಿ ಒಂದೆನಿಸಿದೆ. `ನೀನು ಅತ್ಯಾಚಾರ ಮಾಡಿದ್ದೀಯ ಅಲ್ಲವಾ? ನೀನು ಶಿಕ್ಷೆಯಿಂದ ತಪ್ಪಿಸಿಕೊಳ್ಳಬೇಕಾದರೆ ನಿನ್ನ ದೌರ್ಜನ್ಯಕ್ಕೆ ಪಕ್ಕಾದ ಆ ಹುಡುಗಿಯನ್ನೇ ಮದುವೆಯಾಗಿಬಿಡು. ಆಗ ನಿನಗೆ ಜೈಲುವಾಸದಿಂದ ಬಿಡುಗಡೆ ಸಿಕ್ಕಿಬಿಡುತ್ತದೆ’ ಎನ್ನುವ ಅದ್ಭುತ ಆಘಾತಕಾರಿ ಸಲಹೆಯನ್ನು ನೀಡಿದವರು ಮತ್ತಾರೂ ಅಲ್ಲ, ಸ್ವತಃ ಮುಖ್ಯ ನ್ಯಾಯಾಧೀಶರೇ! ಬದುಕಿನಲ್ಲಿ ಇರುವ ನಂಬಿಕೆಯನ್ನೇ ಅಲುಗಾಡಿಸುವ ಇಂಥ ಮಾತು ದೇಶದ ಪ್ರಜ್ಞಾವಂತರನ್ನು ಬೆಚ್ಚಿಬೀಳಿಸಿದೆ.

ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದೂ ಅಲ್ಲದೇ ಆಕೆಯ ಪೋಷಕರಿಂದ ‘ತಮ್ಮದು’ ಒಪ್ಪಿತ ಲೈಂಗಿಕ ಸಂಪರ್ಕವೆಂದು 500 ರೂ. ಗಳ ಬಾಂಡ್ ಪೇಪರ್ ಮೇಲೆ ಸಹಿ ಮಾಡಿಸಿಕೊಳ್ಳುತ್ತಾನೆ ಆರೋಪಿ. ಪ್ರಕರಣ ದಾಖಲಾಗಿ ಬಂಧನ ತಪ್ಪಿಸಿಕೊಳ್ಳಲು ಸರ್ವೋಚ್ಛ ನ್ಯಾಯಾಲಯದ ಕಟ್ಟೆ ಏರುತ್ತಾನೆ. ಪೋಕ್ಸೋ ಕಾಯ್ದೆ –(ಅಪ್ರಾಪ್ತ ಮಕ್ಕಳ ಮೇಲೆಸಗುವ ಲೈಂಗಿಕ ಅಪರಾಧಗಳಿಂದ ರಕ್ಷಣೆ ಕಾನೂನು) ಯಡಿ ಕಠಿಣ ಶಿಕ್ಷೆಗ ಒಳಪಡಿಸಿ ಜೈಲಿಗೆ ತಳ್ಳುವ ಬದಲು ಸುಪ್ರೀಂ ನ್ಯಾಯಾಧೀಶರು `ಯುವತಿಯನ್ನು ಮದುವೆಯಾಗುತ್ತೀಯಾ, ಕೆಲಸ ಕಳೆದುಕೊಂಡು ಜೈಲಿಗೆ ಹೋಗುತ್ತೀಯಾ’ ಕೇಳುತ್ತಾರೆ. ಇದು ನೋಡಿ ನ್ಯಾಯದ ಪರಿಕಲ್ಪನೆ ಎಂದರೆ. . . .
ಅತ್ಯಾಚಾರದಂಥಹ ಹೀನ ಕೃತ್ಯವನ್ನು ಈ ಸಮಾಜ ಹೀಗೂ ಅರ್ಥೈಸುತ್ತದೆ ಎಂದರೆ… ಹೆಣ್ಣೊಬ್ಬಳ ದೇಹ ಗಂಡಿನ ಅತಿಕ್ರಮಕ್ಕಾಗಿಯೇ ಇರುವುದು. ಹಾಗಾಗಿ ಆಕೆಯ ಮೇಲೆ ಮೊದಲು ನಿಯಮ ಬಾಹಿರವಾಗಿ ಆಕ್ರಮಣ ನಡೆಸಿ ನಂತರ ಸಮಾಜದ ಬಹಿರಂಗ ಒಪ್ಪಿಗೆಯ ಮೂಲಕ ಅತಿಕ್ರಮಣಕ್ಕೆ ಅಂಗೀಕಾರ ಪಡೆಯುವುದು.

ಪ್ರಕರಣ: ಮಹರಾಷ್ಟ್ರದಲ್ಲಿ ಅಪ್ರಾಪ್ತ ಬಾಲಕಿಯೊಬ್ಬಳ ಮೇಲೆ ಯುವಕನೊಬ್ಬ ಹಲವಾರು ಬಾರಿ ಅತ್ಯಾಚಾರ ನಡೆಸುತ್ತಾನೆ. 9ನೇ ತರಗತಿಯಲ್ಲಿ ಓದುತ್ತಿದ್ದ ಬಾಲಕಿಯ ದೂರದ ಸಂಬಂಧಿಯಾದ ಯುವಕ ಆ ಕಾರಣದಿಂದ ಮನೆಗೇ ಬಂದೂ ಆಕೆಯ ಮೇಲೆ ಬಲಾತ್ಕಾರ ಮಾಡುತ್ತಾನೆ. ಆಕೆ ಅದನ್ನು ಯಾರಿಗೂ ತಿಳಿಸದಿರಲು ಮುಖದ ಮೇಲೆ ಆಸಿಡ್ ಎರಚುವುದಾಗಿ, ಪೆಟ್ರೋಲ್ ಸುರಿದು ಜೀವಂತ ಸುಡುವುದಾಗಿ, ಅವಳ ಸಹೋದರರನ್ನು ಕೊಲ್ಲುವುದಾಗಿ, ಹೆದರಿಸಲಾಗಿದೆ. ಆಕೆಯನ್ನು ಹಿಂಬಾಲಿಸುವ, ಮೂದಲಿಸುವ ಕೆಲಸಗಳೂ ನಡೆಯುತ್ತವೆ. ಬೆದರಿದ ಬಾಲಕಿಯ ಮೇಲಿನ ಅತ್ಯಾಚಾರದ ಪ್ರಕರಣ ಬೆಳಕಿಗೆ ಬಂದಿದ್ದೇ ಅಪ್ರಾಪ್ತ ಶಾಲೆಗೆ ಹೋಗುತ್ತಿದ್ದ ಮಗು ಆತ್ಮಹತ್ಯೆಗೆ ಪ್ರಯತ್ನಿಸಿದಾಗ. ಪ್ರಕರಣ ಹೊರಗೆ ಬಂತೆಂಬ ಕಾರಣಕ್ಕೆ ಯುವಕನ ಪೋಷಕರು ಬಾಲಕಿ ಪ್ರಾಪ್ತಳಾಗುವಾಗ ಅವಳನ್ನು ತಮ್ಮ ಮಗನಿಗೆ ಮದುವೆ ಮಾಡಿಕೊಳ್ಳುವುದಾಗಿ ಹೇಳಿದ್ದರು ಎಂದೂ ಮಾಧ್ಯಮಗಳು ವರದಿ ಮಾಡಿವೆ. ಎಷ್ಟು ಸುಲಭದ ದಾರಿ. ಮಗ ಮಾಡಿದ ಘನ ಕಾರ್ಯಕ್ಕೆ ಪೋಷಕರು ಕೊಡುವ ಬಹುಮಾನ. ಮತ್ತು ತನ್ನದಲ್ಲದ ತಪ್ಪಿಗೆ ಬದುಕಿನ ಪ್ರತಿ ಕ್ಷಣವೂ ನರಳುತ್ತಲೇ, ಸಾಯುತ್ತಲೇ ಆಕೆ ಬದುಕಬೇಕು. ಹೆಣ್ಣೆಂದರೆದೆಷ್ಟು ಕೇವಲ…ಛೀ. ಆದರೆ ಅದಕ್ಕೆ ಆಕೆ ಒಪ್ಪಿಗೆ ಕೊಡಲಿಲ್ಲ. ದೂರು ದಾಖಲಾಯಿತು.

ಇಂಥ ಪ್ರಕರಣದಲ್ಲಿ ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು ಸಮಾಜದ ಅಸ್ವಸ್ಥ ಮನೋಭಾವದ ಪ್ರತಿರೂಪವೆಂಬಂತೆ ಆರೋಪಿಗೆ ಸಂತ್ರಸ್ಥೆಯನ್ನು ಮದುವೆಯಾಗಲು ಸಿದ್ಧನಿದ್ದೀಯಾ ಎಂದು ಕೇಳುವುದೆಂದರೆ !? ಕಾನೂನುಬದ್ಧವಾಗಿ ಪ್ರತಿ ದಿನಾ, ಬೇಕೆಂದಾಗೆಲ್ಲ ಅವಳ ದೇಹದ ಮೇಲೆ ಮತ್ತು ಮನಸ್ಸಿನ ಮೇಲೆ ಅತಿಕ್ರಮಣ ಮಾಡುವ ಸುಪ್ರೀಂ ಲೈಸೆನ್ಸ್ ಕೊಟ್ಟ ಹಾಗಲ್ಲವೇ?

ದಾಖಲಾದ ದೂರಿಗೆ ಪ್ರತಿಯಾಗಿ ತನ್ನನ್ನು ಬಂಧಿಸಬಾರದೆಂದು ನ್ಯಾಯಾಲಯದ ಮೊರೆ ಹೋದ ಆರೋಪಿಗೆ ಕೆಳ ನ್ಯಾಯಾಲಯ ಕಣ್ಣು ಮುಚ್ಚಿ ಜಾಮೀನು ನೀಡಿದ ಈ ಪ್ರಕರಣದಲ್ಲಿ ಮುಂಬೈ ಹೈಕೋರ್ಟ್ ನ ಔರಂಗಾಬಾದ್ ಪೀಠ ಕೆಳ ನ್ಯಾಯಾಲಯದ ಆದೇಶವನ್ನು ‘ಅಟ್ರಾಷಿಯಸ್’-ಕ್ರೌರ್ಯದ ಪರಮಾವಧಿ ಎಂದು ಬಣ್ಣಿಸಿ ತಡೆ ನೀಡಿತ್ತು. ಆಗ ಉಚ್ಛ ನ್ಯಾಯಾಲಯ ಹೇಳಿದ ಮಾತು ‘ ಇಂಥ ಗಂಭೀರ ಪ್ರಕರಣಗಳಲ್ಲಿ ಘನತೆವೆತ್ತ ನ್ಯಾಯಾಧೀಶರ ಧೋರಣೆಯು, ಅವರ ಸಂವೇದನಾ ರಹಿತ ಮನೋಭಾವಕ್ಕೆ ಪುರಾವೆಯಾಗಿದೆ’ ಎಂದೂ ಹೇಳಿತ್ತು. ಮುಂಬೈ ಉಚ್ಛ ನ್ಯಾಯಾಲಯದ ಔರಂಗಾಬಾದ್ ಪೀಠವು ಆರೋಪಿ ಮತ್ತವನ ಕುಟುಂಬ ಪ್ರಭಾವಿಗಳಾಗಿದ್ದು ಸಂತ್ರಸ್ಥೆ ಮತ್ತು ಆಕೆಯ ಕುಟುಂಬದವರಿಂದ 500 ರೂ.ಗಳ ಛಾಪಾ ಕಾಗದದ ಮೇಲೆ ಅವರಿಬ್ಬರಿಗೂ ಸಮ್ಮತಿಯ ಲೈಂಗಿಕ ಸಂಬಂಧವಿತ್ತು ಎಂದು ಸಹಿ ಮಾಡಿಸಿಕೊಂಡಿದ್ದನಂತೆ ಎಂಬುದನ್ನು ಗುರುತಿಸಿದೆ. ಆದರೆ ಛಲ ಬಿಡದ ಆರೋಪಿ ಸರ್ವೋಚ್ಛ ನ್ಯಾಯಾಲಯದ ಮೊರೆ ಹೋದನಂತೆ!

ಹೆಣ್ಣಿನ ಕುರಿತು, ಮಹಿಳೆಯರ ಘನತೆಯ ಬದುಕಿನ ಕುರಿತು ಸಮಾಜವನ್ನು ಇಂದಿಗೂ ಗಾಢವಾಗಿ ಆವರಿಸಿರುವ ನೀಚ ಆಲೋಚನೆಯ ಬಿಂಬವೋ ಪ್ರತಿಬಿಂಬವೋ ಎಂಬಂತೆ ಈ ಪ್ರಕರಣದಲ್ಲಿ ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರ ಧೋರಣೆಯೂ ಅದಕ್ಕಿಂತ ಭಿನ್ನವಾಗಿ ತೋರ ದ ಕಾರಣ ಅದೇ ಮಾತ ಇಲ್ಲಿಗೂ ಅನ್ವಯವಾಗಬಹುದಲ್ಲವೇ?

ಹೆಣ್ಣಿನ ಮೇಲೆಸಗುವ ಕ್ರೌರ್ಯದ ಪರಮಾವಧಿಯ ಹೀನ ಕೃತ್ಯದ ನಿರ್ಮೂಲನೆಗಾಗಿ ತ್ವರಿತ ಇತ್ಯರ್ಥ ಮತ್ತು ಕಠಿಣ ಶಿಕ್ಷೆಯನ್ನು ಕೇಳುತ್ತಿರುವಾಗ, ಪೋಕ್ಸೋ ಅಡಿಯಲ್ಲಿ ದಾಖಲಾಗುವುದನ್ನು ಹೀನಾತಿಹೀನವೆಂದು ಪರಿಗಣಿಸುವ ಒತ್ತಾಯವಿರುವಾಗ ಅಂಥ ಕೆಲಸ ಮಾಡಿ ಅದನ್ನು ತಾನೇ 500 ರೂಪಾಯಿಗಳ ಬಾಂಡ್ ಕಾಗದದ ಮೇಲೆ ದೃಢೀಕರಿಸಿಕೊಂಡವನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಇನ್ನೂ ಬೇರೆ ಪುರಾವೆಗಳ ಅಗತ್ಯವಿತ್ತೇ ಸುಪ್ರೀಂ ನ್ಯಾಯದಂಡಕ್ಕೆ?

ಮುಚ್ಚಿದೆ ನ್ಯಾಯದ ಬಾಗಿಲು : ಅತ್ಯಾಚಾರಕ್ಕೆ ಮದುವೆಯೊಂದು ಪರಿಹಾರವೆಂದು ಸೂಚನೆ ನೀಡುವುದು ಎಂದರೆ ಸಂತ್ರಸ್ಥರಿಗೆ ನ್ಯಾಯದ ಬಾಗಿಲು ಮುಚ್ಚಿದೆ ಎಂದೇ ಅರ್ಥ. ಬಹಳ ನಾಜೂಕಾಗಿ ಸಂತ್ರಸ್ಥರು ತಮ್ಮ ಮೇಲಿನ ದುರಾಕ್ರಮಣಗಳನ್ನು ಬಾಯಿ ಮುಚ್ಚಿಕೊಂಡು ಸಹಿಸಿಕೊಳ್ಳಬೇಕು ಅಥವಾ ನ್ಯಾಯ ಕೇಳಿ ನ್ಯಾಯಾಲಯದ ಮಧ್ಯಸ್ಥಿಕೆಯಲ್ಲಿ ಅದೇ ದುರಾಕ್ರಮಿಯಿಂದ ಪ್ರತಿ ದಿನ ಅತ್ಯಾಚಾರಕ್ಕೆ ಒಳಗಾಗಬೇಕು ಎಂಬ ರಹದಾರಿ ಪತ್ರ ಕೊಡುವ ಹೇಳಿಕೆಗಳು ಅಸಹನೀಯ.

ಈ ಮೊದಲೂ ದೇಶದ ಹಲವಾರು ಕಡೆ ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ವಿಧಿಸಿ ನ್ಯಾಯದ ಕಾವಲು ಕಾಯುವ ಬದಲು ಸಂತ್ರಸ್ಥೆಯನ್ನು ಮದುವೆಯಾಗಲು ಕೇಳಿದ ಸಂದರ್ಭಗಳು ಹಲವು ಇವೆ. ಈ ನಿರ್ದಿಷ್ಟ ಪ್ರಕರಣದಲ್ಲಿ 10 ರಿಂದ 12 ಬಾರಿ ಅಪ್ರಾಪ್ತಳಾಗಿದ್ದ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದ ದುಷ್ಕರ್ಮಿ. ಇದನ್ನು ಯಾರಿಗೂ ಹೇಳದಂತೆ ಆಕೆಗೆ ಬೆದರಿಕೆ ಒಡ್ಡಿದ್ದ. ವರದಿಗಳ ಪ್ರಕಾರ ಅವಳನ್ನು ಕಟ್ಟಿ ಹಾಕಿ ಹೊಡೆದು ಬಡಿದು ಹೆದರಿಸಿದ್ದವನಿಗೆ ಮದುವೆಯಾಗು ಎಂಬ ಸಲಹೆ!! ಇಂಥ ಕಾರಣಗಳಿಗಾಗಿಯೇ ಔರಂಗಾಬಾದ್ ಪೀಠವು ಅತ್ಯಾಚಾರಿಯ ಕೃತ್ಯಗಳನ್ನು ಕ್ರೌರ್ಯದ ಪರಮಾವಧಿ ಎಂದು ಬಣ್ಣಿಸಿ ಆತನ ಜಾಮೀನು ಅರ್ಜಿಯನ್ನು ವಜಾಗೊಳಿಸಿತ್ತು. ಆದರೆ ಈ ಪ್ರಕರಣದಲ್ಲಿ ಸುಪ್ರಿಂ ಕೋರ್ಟ್ ಅತ್ಯಾಚಾರದ ಆರೋಪಿಗೆ ಸಂತ್ರಸ್ಥೆಯನ್ನು ವಿವಾಹವಾಗುತ್ತೀಯಾ, ಕೆಲಸ ಕಳೆದುಕೊಂಡು ಜೈಲಿಗೆ ಹೋಗುತ್ತೀಯಾ ಎಂಬ ಆಯ್ಕೆಯ ಅವಕಾಶ ನೀಡುತ್ತದೆ. ನಮ್ಮ ಸಂವಿಧಾನ ದೇಶದ ಜನರಿಗೆ ಆಯ್ಕೆ ಸ್ವಾತಂತ್ರವನ್ನು ನೀಡಿದೆ ಎಂದು ಸುಪ್ರೀಂ ಅದನ್ನು ಗೌರವಿಸಿರಬೇಕು!

ಆ ದುಷ್ಕರ್ಮಿ ಮಹಾರಾಷ್ಟ್ರ ಸರಕಾರದ ವಿದ್ಯುತ್ ಕಂಪನಿಯ ನೌಕರ ಈಗ. ತನಗೆ ಈಗಾಗಲೇ ಮದುವೆಯಾಗಿದೆ ಎಂದು ಉತ್ತರಿಸಿದನಂತೆ ಪಾಪ! ಮತ್ತು ಆತನ ಪರ ವಕೀಲರು ಜಾಮೀನು ನೀಡದಿದ್ದರೆ ಆತ ಕೆಲಸ ಕಳೆದುಕೊಳ್ಳುತ್ತಾನೆ, ಅವನ ಕುಟುಂಬ ನಿರಾಧಾರವಾಗುತ್ತದೆ ಎಂದು ವಾದಿಸಿದರಂತೆ. ಇದು ಪ್ರಚಲಿತ ನ್ಯಾಯದ ಪರಿಕಲ್ಪನೆ. ಸುಪ್ರಿಂ ಕೋರ್ಟ್ ಆತನ ಅರ್ಜಿಯನ್ನು ವಜಾಗೊಳಿಸಿ ನಿಯಮಿತ ಜಾಮಿನು ಕೋರಿ ಅರ್ಜಿ ನೀಡಲು ನಾಲ್ಕು ವಾರಗಳ ಕಾಲಾವಕಾಶ ನೀಡಿದೆ ಎಂಬ ವರದಿಗಳು ದೇಶದ ಪ್ರಗತಿಯ ಮಾದರಿಗಳನ್ನು ಕೇವಲ ಗಗನ ಚುಂಬಿ ಮಾಲ್, ಚತುಷ್ಪಥ, ಷಟ್ಪಥ ರಸ್ತೆಗಳಲ್ಲಿ, ಮತ್ತು ಭೀಕರ ಭಾಷಣಗಳಲ್ಲಿ, ಆಕರ್ಷಕ ಘೋಷಣೆಗಳಲ್ಲಿ ಮಾತ್ರ ಹುಡುಕಿ ಎಂದು ನಮಗೆ ಸೂಚನೆ ನೀಡುತ್ತಿವೆ ಎಂದು ಭಾವಿಸಿದರೆ ತಪ್ಪಾ? ನಿಜವೆಂದರೆ ಆತನೆಸಗಿದ ಹೀನ ಅತ್ಯಾಚಾರದ ಕೃತ್ಯಕ್ಕೆ, ಮತ್ತು ಔರಂಗಾಬಾದ್ ಪೀಠ ಯುವತಿಯ ಹೇಳಿಕೆಯ ಆಧಾರದಲ್ಲಿ ಗುರುತಿಸಿದಂತೆ ಆತ ಕೆಲವೊಮ್ಮೆ ಗರ್ಭ ನಿರೋಧಕಗಳನ್ನು ಬಳಸಿಯೂ ಅತ್ಯಾಚಾರವೆಸಗಿದ್ದವನು. ಹಾಗಾಗಿ ಆತನಿಗೆ ಕಾನೂನಾತ್ಮಕವಾಗಿ ಈ ದೇಶದಲ್ಲಿ ಆರೋಪಿಗಳಿಗಿರುವ ಸಮಯದ ಅವಕಾಶವನ್ನು ನಿರಾಕರಿಸಬೇಕಾಗಿತ್ತು. ನ್ಯಾಯದ ತಕ್ಕಡಿ ಅನ್ಯಾಯವಾದಾಗ ಸ್ಥಿರವಾಗಿರಬೇಕಲ್ಲವೇ?

ಮಾಧ್ಯಮಗಳಲ್ಲಿ ಕೆಲವೆಡೆ ಹುಡುಗಿಯ ಪೋಷಕರು, ಆತ ಮದುವೆಯಾಗುವುದಾಗಿ ಹೇಳಿದನೆಂಬ ಕಾರಣಕ್ಕೆ ಎಲ್ಲಿಯೂ ದೂರು ದಾಖಲಿಸಿರಲಿಲ್ಲ ಎಂದೂ ವರದಿ ಮಾಡಿವೆ. ಅತ್ಯಾಚಾರಿಗೆ ಸಂತ್ರಸ್ಥೆಯನ್ನು ಮದುವೆಯಾಗಲು ಅವಕಾಶ ಕೊಡುವುದು ಯಾವ ಕಾರಣಕ್ಕೂ ಸರಿಯಲ್ಲ. ಮದುವೆಯ ಮೂಲಕ ಆಕೆಯ ಮೇಲೆ ನಡೆದ ಹೀನ ಕೃತ್ಯವನ್ನು ಮರೆಮಾಚಲು ಸಾಧ್ಯವಿಲ್ಲ, ಅದು ಆಕೆಗೆ ಯಾವುದೇ ರೀತಿಯ ಸಾಂತ್ವನವನ್ನೂ ನೀಡಲಾರದು. ಈ ಸಮಾಜ ಅತ್ಯಾಚಾರವೆಂಬುದು ಹೆಣ್ಣಿಗೆ ಅವಮಾನದ ಸಂಗತಿ, ಆಕೆಯ ಘನತೆಗೆ ಕುಂದು ಆದ್ದರಿಂದ ಆತನನ್ನೇ ಮದುವೆಯಾಗಿ ಗೌರವವನ್ನು ಮರಳಿ ಪಡೆಯಲಿ ಎಂದು ಯೋಚಿಸುವ ಸಂದರ್ಭಗಳಿವೆ. ಇವು ಅತ್ಯಂತ ಕೀಳು ಅಭಿಪ್ರಾಯವೆಂದಷ್ಟೇ ಹೇಳಬಹುದು.

ಇನ್ನೂ ಒಂದು ಪ್ರಕರಣಕ್ಕೆ ಸಂಬಂಧಿಸಿ ಮುಖ್ಯ ನ್ಯಾಯಾಧೀಶರು ವೈವಾಹಿಕ ಸಂಬಂಧದಲ್ಲಿಯೂ ಅತ್ಯಾಚಾರ ನಡೆಯಲು ಸಾಧ್ಯವೇ ಎಂದು ಪ್ರಶ್ನಿಸಿದರೆಂದು ವರದಿಯಾಗಿದೆ. ಈ ದೇಶದ ನಿಜ ಪ್ರಗತಿಪರರು ದಶಕಗಳಿಂದ ಐ.ಪಿ.ಸಿ ಕಲಮಿನ 376ರ ಅಡಿಯಲ್ಲಿ ವಿವಾಹದೊಳಗಿನ ಅಸಮ್ಮತಿಯ ಲೈಂಗಿಕ ಸಂಬಂಧವನ್ನು ಅತ್ಯಾಚಾರವೆಂದು ಪರಿಗಣಿಸಲು ಕೇಳುತ್ತಲೇ ಇವೆ. ವಿವಾಹದೊಳಗಿನ ಅತ್ಯಾಚಾರಕ್ಕೆ ವಿನಾಯಿತಿ ನೀಡಬೇಕಿಲ್ಲ ಎಂಬ ದೊಡ್ಡ ಕೂಗೇ ಇದೆ. ಹೆಣ್ಣಿನ ದೇಹ ಗಂಡಿನ ಆಸ್ತಿ ಯಲ್ಲ, ಮತ್ತು ಅವಳ ಅನುಮತಿ ಇಲ್ಲದೇ ಅದನ್ನು ಬೇಕಾದ ಹಾಗೆ ಬಳಸುವುದು ಸಹಜವೆಂಬಂತೆ ಭಾವಿಸುವ ಕ್ರಮದಿಂದ ಸಮಾಜವೇ ಹೊರಬರಬೇಕು ಎನ್ನುವಾಗ ಕಾನೂನಿನ ಬೆಂಬಲವೂ ಬೇಕೆಂಬುದು ಈಗಿರುವ ಒತ್ತಾಯ. ವಿವಾಹ ಸಂಬಂಧದೊಳಗಿನ ಹಿಂಸೆ ಮತ್ತು ಲೈಂಗಿಕ ಅಪರಾಧಗಳನ್ನು ಒಪ್ಪಲಾಗದು. ನಮ್ಮ ಕಾನೂನಿನಲ್ಲಿ ಕೂಡ ಇದಕ್ಕೆ ಅರ್ಧ ಸಮ್ಮತಿ ದೊರೆತಿದೆ ಎಂಬುದಕ್ಕೆ 498 ಏ ಮತ್ತು ಕೌಟುಂಬಿಕ ದೌರ್ಜನ್ಯ ನಿಷೇಧ ಕಾನೂನುಗಳು ಜಾರಿಯಲ್ಲಿರುವುದೇ ಉದಾಹರಣೆಯಾಗಿದೆ.

ಹೆಣ್ಣೆಂದರೆ ರೋಬೋಟ್ ಎಂದು ಸುಪ್ರೀಂ ನ್ಯಾಯಾಲಯದ ಸುಪ್ರೀಂ ಸ್ಥಾನವನ್ನು ಅಲಂಕರಿಸಿದವರು ಭಾವಿಸಿದಂತಿದೆ. “ಯುವರ್ ಆನರ್… ನೋ … ನಾವು ನಮ್ಮ ಅಸ್ಮಿತೆ ಮತ್ತು ಅಸ್ತಿತ್ವದ ಘನತೆಯನ್ನು ಗೌರವಿಸುವವರು. ನೀವಂದಂತೆಲ್ಲ ಗೋಣುಹಾಕುವ ಯಂತ್ರಗಳಲ್ಲ. ಹಿಂತೆಗೆದುಕೊಳ್ಳಿ ನಿಮ್ಮ ಅಭಿಪ್ರಾಯವನ್ನು, ರದ್ದು ಮಾಡಿ ಆತನ ಜಾಮೀನು ಕೋರುವ ಹಕ್ಕನ್ನು” ಎಂಬ ಕೂಗು ಜೋರಾಗಿ ಕೇಳಿದರಷ್ಟೇ ಕಣ್ಣು ಕಟ್ಟಿಕೊಂಡಿರುವ ನ್ಯಾಯದ ತಕ್ಕಡಿಯ ಕಿವಿಯ ಮೇಲೆ ಶಬ್ದ ಬಿದ್ದೀತು.

ಪುರುಷಾಧಿಪತ್ಯದ ಅರಿವಳಿಕೆಯ ಚುಚ್ಚುಮದ್ದಿನ ಪ್ರಭಾವದಲ್ಲಿಯೇ ಇರುವವರಿಗೆ ಮಂಪರು ಹರಿದು ದೇಶದ ಸಂವಿಧಾನದ ಘನತೆ ಗೌರವ ಕೇವಲ ಪೀಠಿಕೆಯ ಅಥವಾ ಸಂವಿಧಾನದ ಪುಸ್ತಕದ ಒಳಗೆ ಮಾತ್ರವಲ್ಲ, ಮೆದುಳಿಗೆ ಇಳಿಯಬೇಕಾದ್ದು ಎಂಬುದನ್ನೂ ತಿಳಿಸಲೇ ಬೇಕು. ಲಿಂಗ ಸೂಕ್ಷ್ಮತೆಯ, ಮಾನವ ಸಂವೇದನೆಯ ಪಾಠಗಳು ಎಲ್ಲ ಹಂತಗಳಲ್ಲಿ ಜಾರಿಯಾಗಲೇ ಬೇಕು. ಯಾವ ಸ್ಥಳ ತನ್ನ ನಡೆ ನುಡಿ ಬದ್ಧತೆಗಳ ಮೂಲಕ ಸಂವಿಧಾನ ನೀಡಿರುವ ಘನತೆಯ ಬದುಕನ್ನು ಎತ್ತಿ ಹಿಡಿದು ಮಾದರಿಯಾಗಿ ನಿಲ್ಲಬೇಕೋ ಅಲ್ಲಿಯೇ ಸಂವಿಧಾನದ ಮೂಲ ತತ್ವಗಳಿಗೆ ತಿಲಾಂಜಲಿ ಇಟ್ಟಾಗ ಸಮಾಜ ಎದ್ದು ಪ್ರಶ್ನಿಸಬೇಕು. ನ್ಯಾಯದ ತಕ್ಕಡಿ ತುಕ್ಕು ಹಿಡಿಯದಂತೆ, ಅನ್ಯಾಯಕ್ಕೆ ಕುರುಡಾಗಿ ನ್ಯಾಯಕ್ಕೆ ಸಮಚಿತ್ತದ ದಾರಿದೀಪವಾಗಲು ಒತ್ತಾಯಿಸಬೇಕು. ಮಾತು ಅಲ್ಲ ಎಂದು

ವಿಮಲಾ.ಕೆ.ಎಸ್.

Tuesday, 9 March 2021

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ-ಪುರುಷೋತ್ತಮ ಬಿಳಿಮಲೆ.

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಶುಭಾಶಯಗಳು: 
ನಾನೂ ಸೇರಿದಂತೆ ಹಲವರು ಇವತ್ತು ನಮ್ಮ ತಾಯಿ, ತಂಗಿ, ಪತ್ನಿ,  ಅಕ್ಕ ಮೊದಲಾದವರನ್ನು ನೆನಪಿಸಿಕೊಂಡು ಭಾವುಕರಾಗಿದ್ದೇವೆ. ಅವರು ನಮಗಾಗಿ ಪಟ್ಟ, ಪಡುತ್ತಿರುವ ಕಷ್ಟಗಳಿಗೆ ಕೊನೆಯೇ ಇಲ್ಲವೇನೋ? 
ಇಷ್ಟಿದ್ದರೂ ಜಗತ್ತಿನ ಜನಸಂಖ್ಯೆಯ ಅರ್ಧದಷ್ಟಿರುವ  ಮಹಿಳೆಯರ ಸ್ಥಾನಮಾನ ಇನ್ನೂ ಎತ್ತರಕ್ಕೆ ಹೋಗಲು ಬಹಳ ಕಾಲ ಕಾಯಬೇಕಾದೀತು. ವಿಶ್ವ ಆರ್ಥಿಕ ವೇದಿಕೆಯು ಪ್ರಕಾರ (The World Economic Forum) ಉತ್ಪಾದನಾ ಕ್ಷೇತ್ರದಲ್ಲಿ ( ಕೈಗಾರಿಕೆಗಳು) ಮಹಿಳೆಯರ ಭಾಗವಹಿಸುವಿಕೆಯು ಶೇಕಡಾ ೧೬ನ್ನೂ ಮೀರಿಲ್ಲ.  ಅದರಲ್ಲೂ ಅತ್ಯುನ್ನತ ಸ್ಥಾನವೇರಿದವರು ಕೇವಲ ೧೦%. ಕಂಪೆನಿಗಳ ಬೋರ್ಡ್‌ ಆಫ್‌ ಡೈರೆಕ್ಟರ್ಸ್‌ನಲ್ಲಿ ೪೦ ಕ್ಕೆ ಒಬ್ಬ ಮಹಿಳೆಯರಿದ್ದಾರಂತೆ. ವಿಶ್ವದಾದ್ಯಂತ ಶೇಕಡಾ ೬೦ಕ್ಕೂ ಹೆಚ್ಚು ಮಹಿಳೆಯರು ತಮ್ಮ ಕೆಲಸದ ಜಾಗದಲ್ಲಿ ಒಂದಲ್ಲ ಒಂದು ರೀತಿಯ ಲೈಂಗಿಕ ಕಿರುಕುಳಗಳಿಗೆ ಒಳಗಾಗುತ್ತಿದ್ದಾರೆ. 
ಭಾರತದ ಪರಿಸ್ಥಿತಿಯೂ ಆಶಾದಾಯಕವಾಗಿಲ್ಲ. ಭಾರತೀಯ ಮಹಿಳೆಯರ ರಾಜಕೀಯ ಪ್ರಾತಿನಿಧ್ಯ ಶೇಕಡಾ ೧೨ನ್ನು ಮೀರಿಲ್ಲ. ಅಕ್ಕ ಮಹಾದೇವಿಯ ರಾಜ್ಯವಾದ ಕರ್ನಾಟಕವು ಇನ್ನೂ ಒಬ್ಬ ಮಹಿಳಾ ಮುಖ್ಯಮಂತ್ರಿಯನ್ನು ಕಂಡಿಲ್ಲ.  ೨೦೧೧ರ ಜನಗಣತಿಯ ಪ್ರಕಾರ ನಮ್ಮ ದೇಶದಲ್ಲಿ ಆರು  ವರ್ಷದೊಳಗಿನ ೧೦೦೦ ಗಂಡು ಮಕ್ಕಳಿಗೆ ೯೧೪ ಹೆಣ್ಣುಮಕ್ಕಳಿದ್ದಾರೆ. ಹುಟ್ಟುವ ಒಂದು ಕೋಟಿಯ ೨೦ ಲಕ್ಷ ಹೆಣ್ಣು ಮಕ್ಕಳಲ್ಲಿ ೩೦ ಲಕ್ಷ ಹೆಣ್ಣು ಮಕ್ಕಳು ತಮ್ಮ ೧೫ನೆಯ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ.  ೧೦ಲಕ್ಷ ಹೆಣ್ಣು ಮಕ್ಕಳು ಹುಟ್ಟಿದ ಮೊದಲ ವರ್ಷದೊಳಗೇ ಕಾಣೆಯಾಗುತ್ತಾರೆ. ಪ್ರತಿ ಆರನೇ ಹೆಣ್ಣು , ಅವಳು ಹೆಣ್ಣೆಂಬ ಕಾರಣಕ್ಕೆ ಕೊಲ್ಲಲ್ಪಡುತ್ತಾಳೆ. 
ವ್ಯವಸ್ಥಿತ ಭ್ರೂಣ ಹತ್ಯೆ, ಅನಕ್ಷರತೆ, ಕಿರುಕುಳ, ಲಿಂಗ ತಾರತಮ್ಯ, ಅವಮಾನ, ಅಗೌರವ, ಅತ್ಯಾಚಾರ ಮೊದಲಾದವುಗಳು ಇನ್ನೂ ಹತೋಟಿಗೆ ಬಂದಿಲ್ಲ.  ಅತ್ಯಾಚಾರಕ್ಕೀಡಾಗಿ ಕೊಲೆಯಾದ ಮಹಿಳೆಯರಿಗೆ  ನ್ಯಾಯ ದೊರಕುತ್ತಿಲ್ಲ. ಹೆಣ್ಮಕ್ಕಳು ನಿಗೂಢವಾಗಿ ಕಾಣೆಯಾದಾಗ, ಅಪಹರಣಕ್ಕೀಡಾದಾಗ,  ‘ಅವಳು ಯಾರೊಂದಿಗಾದರು ಹೋಗಿರಬಹುದು, ಎರಡು ದಿನ ಹುಡುಕಿʼ ಎಂದು ಬುದ್ದಿ ಹೇಳುವವರೇ ಜಾಸ್ತಿ. 
ಶೇ ೧೦ರಷ್ಟು ಅತ್ಯಾಚಾರ ಪ್ರಕರಣಗಳು ೧೪ಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣು ಮಕ್ಕಳ ಮೇಲೆ, ಶೇ ೧೬ರಷ್ಟು ಪ್ರಕರಣಗಳು  ೧೬ರಿಂದ  ೧೮ ವಯಸ್ಸಿನ ಬಾಲಕಿಯರ ಮೇಲೆ ಮತ್ತು ಶೇ ೫೭ರಷ್ಟು ಪ್ರಕರಣಗಳು ೧೮ರಿಂದ ೩೦ ವಯಸ್ಸಿನವರ ಮೇಲೆ ನಡೆದಿರುತ್ತವೆ ಎಂದು ಸರಕಾರದ ವರದಿಗಳೇ ತಿಳಿಸುತ್ತಿವೆ. ಯೂನಿಸೆಫ್ ಸಮೀಕ್ಷೆಯ ಪ್ರಕಾರ, ೧೯ರ ವಯಸ್ಸಿನ ಶೇ ೫೭ರಷ್ಟು ಯುವಕರು ಮತ್ತು ಶೇ ೫೫ರಷ್ಟು ಮಹಿಳೆಯರು ಹೆಂಡತಿಗೆ ಹೊಡೆಯುವುದು ಸಹಜ ಎನ್ನುತ್ತಾರೆ. ಜೊತೆಗೆ ಹೆಣ್ಣಿಗೆ ದತ್ತವಾಗಬೇಕಿರುವ ಹಕ್ಕುಗಳನ್ನು ಮೊಟಕುಗೊಳಿಸುವ ಪ್ರಯತ್ನ ನಡೆಯುತ್ತಲೇ ಇದೆ. ವಿಶ್ವಸಂಸ್ಥೆಯ ಸಮೀಕ್ಷಾ ವರದಿಯೊಂದರ ಪ್ರಕಾರ, ಭಾರತದಲ್ಲಿ ಚುನಾವಣೆ ಎದುರಿಸುವ ಶೇ 49ರಷ್ಟು ಮಹಿಳಾ ಅಭ್ಯರ್ಥಿಗಳು ಒಂದಲ್ಲ ಒಂದು ವಿಧದಲ್ಲಿ ಬೈಗುಳ, ನಿಂದನೆಗಳನ್ನು ಎದುರಿಸಿದ್ದಾರೆ. ದೆಹಲಿಯಲ್ಲಿ ಚುನಾವಣೆಗೆ ನಿಂತಿದ್ದ ಅತಿಶಿಯ ಬಗ್ಗೆ ಅಶ್ಲೀಲ ಕರಪತ್ರಗಳನ್ನು ಹಂಚಿ ಚಾರಿತ್ರ್ಯಹರಣ ಮಾಡಲಾಯಿತು.  
ಮಹಿಳೆಯರು ಈಗ ಎಚ್ಚೆತ್ತುಕೊಳ್ಳುತ್ತಿರುವಾಗಲೇ,  ಭಾರತೀಯ ಸಮಾಜವು ತನ್ನ  ಪಿತೃಪ್ರಧಾನ ಚಿಂತಾಕ್ರಮಗಳಿಂದ ಮತ್ತೆ ಹಿಂದಿರುಗುತ್ತಿದೆ. ಇದನ್ನು ಗಮನಿಸುತ್ತಿರುವ ಹೆಣ್ಣು ಮಕ್ಕಳು ಮದುವೆಯಾಗದಿರುವ ನಿರ್ಣಯಗಳಿಗೆ ತಲುಪುತ್ತಿದ್ದಾರೆ.  
ಸಾಗಬೇಕಾದ ಹಾದಿ ಬಹಳ ದೂರವಿದೆ.

Friday, 12 February 2021

ನಾವ್ಯಾಕೆ ಹೀಗಾಗಿದ್ದೇವೆ? - ಗಂಗಾರಾಮ ಚಾಂಡಾಲ

*💐ಪ್ರೀತಿಯ* SC/ST *ಭಂದುಗಳೇ💐* 

ನಾವ್ಯಾಕೆ ಹೀಗಾಗಿದ್ದೇವೆ? 

1.  *RSS* *ಬಿಜೆಪಿ* ಪ್ರಧಾನ ಮಂತ್ರಿ, ಕೇಂದ್ರ ಬಜೆಟ್ ನಲ್ಲಿ  ಪರಿಶಿಷ್ಟ ಜಾತಿ/ಪಂಗಡದವರ ಕಾರ್ಯಕ್ರಮಗಳಿಗೆ *50* %  ಕಡಿತಗೊಳಿಸಿದ. ನಮಗೆ ಕೋಪ ಬರುತ್ತಿಲ್ಲ; ಬೀದಿಗಿಳಿದು ಪ್ರತಿಭಟಿಸುತ್ತಿಲ್ಲ.

2. ವಿದ್ಯಾರ್ಥಿಗಳ *ಶಿಷ್ಯವೇತನ* ನಿಲ್ಲಿಸಿದ. ಕೋಪ ಬರುತ್ತಿಲ್ಲ.

3. ಮೀಸಲುನೀತಿಯನ್ನೇ ಬುಡುಮೇಲು ಮಾಡಿದ. ಕೋಪ ಬರುತ್ತಿಲ್ಲ. 

4. *ಗೋಮಾಂಸದ* ಹೆಸರಲ್ಲಿ ನಮ್ಮವರನ್ನು ಕೊಲ್ಲುವ ಹುನ್ನಾರ ಹೂಡಿದ. ಕೋಪ ಬರುತ್ತಿಲ್ಲ.

5. *ಭೀಮಾ ಕೋರೆಗಾಂವ್* ನಲ್ಲಿ ಶಾಂತಿಯುತ ವಿಜಯೋತ್ಸವ ಆಚರಿಸುವ *20000* *ದಲಿತರನ್ನು* ಜೈಲಿಗೆ ತಳ್ಳಿದ. ಕೋಪ ಬರುತ್ತಿಲ್ಲ.

6. ನಿರಪರಾಧಿ ಡಾ ಬಾಬಾಸಾಹೇಬ ಅಂಬೇಡಕರವರ ಮೊಮ್ಮಗ ಡಾ!! ಆನಂದ ತೇಲತುಮಡೆಯವರನ್ನು ಜೈಲಿಗೆ ತಳ್ಳಿದ. ನಮಗೆ ಕೋಪ ಬರುತ್ತಿಲ್ಲ.

7. ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದವರಿಗೆ *ಮೀಸಲಿಟ್ಟ19000 ಸಾವಿರ ಕೋಟಿ* ಹಣವನ್ನು ಬೇರೆಯವರ ಕಾರ್ಯಕ್ರಮಗಳಿಗೆ ವರ್ಗಾಯಿಸಿದ. ನಮಗೆ ಕೋಪ ಬರುತ್ತಿಲ್ಲ. 

8.  ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದವರ ಬಲ ವರ್ಧನೆಗೆ ಇದ್ದ ಎಲ್ಲ ಕಾರ್ಯಕ್ರಮಗಳನ್ನು ನಿಲ್ಲಿಸಿ ಬಿಟ್ಟ. ನಮಗೆ ಕೋಪ ಬರುತ್ತಿಲ್ಲ.

9. ಸರ್ಕಾರಿ ಸ್ವಾಮ್ಯದ *ರೈಲ್ವೆ* *ವಿಮಾನನಿಲ್ದಾಣ* , *ಆಯಿಲ್* ಕಂಪನಿಗಳು, *BSNL* ಖಾಸಗಿಯವರಿಗೆ ಮಾರಿ ನಮ್ಮ ಲಕ್ಷ ಲಕ್ಷ ಮೀಸಲು ಹುದ್ದೆಗಳಿಗೆ ಬಹಿರಂಗವಾಗಿಯೇ ಸಂಚಕಾರ ತಂದ : ನಮಗೆ ಕೋಪ ಬರುತ್ತಿಲ್ಲ.

10. ಇತ್ತೀಚೆಗೆ *61ಲಕ್ಷ ಪರಿಶಿಷ್ಟ* *ಜಾತಿ* *ಪರಿಶಿಷ್ಟ* *ಪಂಗಡ* ವಿದ್ಯಾರ್ಥಿಗಳಿಗೆ ಶಿಷ್ಯ ವೇತನ ನಿಲ್ಲಿಸಿದ. ನಮಗೆ ಕೋಪ ಬರುತ್ತಿಲ್ಲ.

11. ಹೊಸ ಶಿಕ್ಷಣ ನೀತಿ -2020 ತಂದು ಪರಿಶಿಷ್ಟ ಜಾತಿ/ಪಂಗಡದವರಿಗೆ " *ಶಿಕ್ಷಣದ ಹಕ್ಕ* " ನ್ನೇ ವಂಚನೆ ಮಾಡುತ್ತಿದ್ದಾನೆ. ನಮಗೆ ಕೋಪ ಬರುತ್ತಿಲ್ಲ.

12. ನಮಗೆ ಡಾ ಬಾಬಾಸಾಹೇಬ ಅಂಬೇಡ್ಕರ್ ರವರು ಹೋರಾಟ ಮಾಡಿ ಗಳಿಸಿಕೊಟ್ಟ ಎಲ್ಲ ಹಕ್ಕುಗಳನ್ನು ಧೈರ್ಯವಾಗಿ ಹಿಂಪಡೆ. ನಮಗೆ ಕೋಪ ಬರುತ್ತಿಲ್ಲ. 

ಯಾಕೆ ಹೀಗಾಗಿದ್ದೇವೆ? 
 *RSS,. BJP*  ಮಾಡುತ್ತಿರುವ ದಲಿತ ವಿರೋಧಿ ನೀತಿಗಳನ್ನು ನೋಡಿ ಸುಮ್ಮನಿದ್ಧರೆ ನಮ್ಮ ಮುಂದಿನ ಪೀಳಿಗೆ .
ಯೋಚಿಸಿ.

ನಿಮ್ಮನ್ನು ಹಿಂದೂ ಧರ್ಮ ಅತಿಶೂದ್ರನೆಂದು ಕರೆದು ಅಸ್ಪೃಶ್ಯತೆ ಆಚರಣೆ ಮಾಡಿತು. ನೀವು ಈಗ ಕ್ಷಣಿಕ ವಾಗಿ ಆರೆಸಸ್ ಎಸೆಯುವ ಎಂಜಲು ನೆಕ್ಕುತ್ತಿರಬಹುದು. ಆದರೆ ಮುಂದಿನ ಪೀಳಿಗೆ ಅದೇ ಎಂಜಲನ್ನು ನೀವು ಬಿಟ್ಟು ಹೋದ ತಟ್ಟೆಯನ್ನು ಹಿಡಿದು ಮೇಲ್ಜಾತಿ ಯವರು ಎಸೆಯುವ ಅಳಸಿದ ಅನ್ನಕ್ಕಾಗಿ ಮನೆ ಮನೆ ಅಲೆಯಬೇಕಾಗುತ್ತದೆ. RSS ನಲ್ಲಿ ದಲಿತರೇ ಬಹುಪಾಲು ಕಾಲಾಳುಗಳಾಗಿದ್ದಿರಿ ಎಚ್ಚರವಹಿಸಿ. ನಿಮ್ಮ ಹೆಣಕ್ಕೆ ನೀವೇ ಹಳ್ಳ ತೋಡಿಕೊಳ್ಳುವ ಮುನ್ನ ಎಚ್ಚರಗೊಳ್ಳಿ. *ಹಿಂದೂ ಧರ್ಮ ದಲಿತರಿಗೆ ಸ್ಮಶಾನದಾರಿ*

Tuesday, 9 February 2021

ʼಆಂದೋಲನ ಜೀವಿ....ವಾಟ್ಸೆಪ್ ನಿಂದ

ಸನ್ಮಾನ್ಯ ಪ್ರಧಾನಿಗಳು ತಮ್ಮ ಭಾಷಣದಲ್ಲಿ ʼಆಂದೋಲನ ಜೀವಿʼ ಎಂಬ ಪದವನ್ನು ವ್ಯಂಗ್ಯವಾಗಿ ಬಳಸಿದ್ದಾರೆ. ಭಾಷಣದ ಸಂದರ್ಭದಲ್ಲಿ ತುಂಬ ಹತಾಶರಾಗಿದ್ದಂತೆ ಕಾಣುತ್ತಿದ್ದ ಅವರಿಗೆ ತಾನು ಬೃಹತ್‌ ದೇಶವೊಂದನ್ನು ಪ್ರತಿನಿಧಿಸುತ್ತಿದ್ದೇನೆ ಎಂಬ ಬಗ್ಗೆ ತಿಳಿವಳಿಕೆ ಇದ್ದಂತೆ ಕಾಣಲಿಲ್ಲ. ಭಾರತದ ಸುದೀರ್ಘ ಚರಿತ್ರೆಯನ್ನೂ ಅವರು ಗಂಭೀರವಾಗಿ ಓದಿದಂತಿಲ್ಲ.  ಹೋಗಲಿ, ರಾಮಮಂದಿರಕ್ಕೆ ಜನಾಂದೋಲನ ನಡೆಯದೇ ಹೋಗಿದ್ದರೆ ಅವರಿಗೆ ಅಯೋಧ್ಯೆಯಲ್ಲಿ ರಾಮಮಂದಿರಕ್ಕೆ  ಶಿಲಾನ್ಯಾಸ ಮಾಡಲು ಸಾಧ್ಯವಾಗುತ್ತಿರಲಿಲ್ಲ ಎಂಬ ಪ್ರಜ್ಞೆಯಾದರೂ ಇರಬೇಕಿತ್ತು. 

ಭಾರತ ಮಾತ್ರವಲ್ಲ ವಿಶ್ವದಾದ್ಯಂತ ಕಾಲ ಕಾಲಕ್ಕೆ ಜನಾಂದೋಲನಗಳು ನಡೆಯುತ್ತಲೇ ಬಂದಿವೆ. ಅವು ಸರ್ವಾಧಿಕಾರಿಗಳನ್ನು ಅಧಿಕಾರದಿಂದ ಕಿತ್ತೊಗೆದಿವೆ. ಜನರಿಗೆ ವಿಮೋಚನೆಯ ಹಾದಿಗಳನ್ನು ತೋರಿಸಿವೆ. ಸರಕಾರದ ಕ್ರೂರ ಕಾನೂನುಗಳನ್ನು ಪ್ರಶ್ನಿಸಿವೆ. ಎಷ್ಟೋ ಬಾರಿ ಜನಾಂದೋಲನಗಳು ದೇಶದ ಜನರನ್ನು ಹತ್ತಿರ ತಂದು ಶಿಥಿಲವಾಗುತ್ತಿದ್ದ ರಾಷ್ಟ್ರೀಯ ಪ್ರಜ್ಞೆಯನ್ನು ಗಟ್ಟಿಗೊಳಿಸಿವೆ.  
ಮಧ್ಯಕಾಲೀನ ಭಾರತದ ಬಹುದೊಡ್ಡ ಆಂದೋಲನವೆಂದರೆ ಭಕ್ತಿ ಚಳುವಳಿ. ಕಲ್ಯಾಣದಲ್ಲಿ ನಡೆದ ವಚನ ಚಳುವಳಿಯು ಸಾವಿರ ವರ್ಷಗಳಾನಂತರವೂ ಜಾತಿ, ಧರ್ಮ, ಮಹಿಳೆ, ಮತ್ತು ಭಾಷೆಯ ಕುರಿತು ನಮ್ಮ ಅರಿವನ್ನು ವಿಸ್ತರಿಸುತ್ತಿದೆ. ಜನಾಂದೋಲನ ಕಟ್ಟಿದ ಆವತ್ತಿನ ಅನುಭವ ಮಂಟಪ ಇವತ್ತಿನ ಸಂಸತ್‌ ಭವನಕ್ಕಿಂತ ಹೆಚ್ಚು ಪ್ರೌಢವೂ ದಿಟ್ಟವೂ ಅಗಿತ್ತು. ದಾಸರು, ಸೂಫಿಗಳು ಮತ್ತು ಸಿಕ್ಖರು  ನಡೆಸಿದ ಆಂದೋಲನಗಳು ಭಾರತದ ಹಿಂದುಳಿದ ಜನವರ್ಗಕ್ಕೆ ವಿಮೋಚನೆಯ ಹಾದಿ ತೋರಿಸಿದುವು. ಸಂತ ಕಬೀರರು, ಚೈತನ್ಯ ಮಹಾಪ್ರಭುಗಳು, ನಾಮದೇವರು, ಸಂತ ತುಕಾರಾಮ ಮೊದಲಾದವರು ನಡೆಸಿದ ಭಕ್ತಿ ಆಂದೋಲನಗಳು ಭಾರತದ ಭವಿಷ್ಯವನ್ನು ರೂಪಿಸಿದ ಮಹಾ ಚಳುವಳಿಗಳು.  
ವಸಾಹತು ಕಾಲಘಟ್ಟದಲ್ಲಿ ಇಂಗ್ಲಿಷ್‌ ಕಲಿತ ಉದೀಯಮಾನ ವಿದ್ಯಾವಂತ ವರ್ಗವು ಬಗೆ ಬಗೆಯ ಆಂದೋಲನಗಳ ಮೂಲಕ ಆಧುನಿಕ ಭಾರತಕ್ಕೆ ಭದ್ರವಾದ ಬುನಾದಿಯನ್ನು ಹಾಕಿಕೊಟ್ಟವು. ಆ ಕಾಲದಲ್ಲಿ ಹುಟ್ಟಿಕೊಂಡ ಆರ್ಯ ಸಮಾಜ, ಬ್ರಹ್ಮ ಸಮಾಜ, ರಾಮಕೃಷ್ಣ ಮಿಶನ್‌ ಮೊದಲಾದ ಸಂಘಟನೆಗಳು ಹೊಸ ಭಾರತದ ಉದಯಕ್ಕೆ ನಾಂದಿ ಹಾಡಿದುವು, 
೧೯೦೫ರಲ್ಲಿ ಆರಂಭವಾದ ಸ್ವದೇಶೀ ಚಳುವಳಿಯು ( ಪ್ರಧಾನಿಗಳು ಹೇಳುವ ಆತ್ಮ ನಿರ್ಭರ ಅಲ್ಲ) ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಭದ್ರವಾದ ಬುನಾದಿಯನ್ನು ಒದಗಿಸಿತು. ಗಾಂಧೀಜಿಯ ನೇತೃತ್ವದಲ್ಲಿ ನಡೆದ ಅಹಿಂಸಾತ್ಮಕ  ಸತ್ಯಾಗ್ರಹ ಚಳುವಳಿಯು ಬಹುಶ: ಭಾರತ ದೇಶ ಕಂಡ ಬಹು ದೊಡ್ಡ ಜನಾಂದೋಲನ. ಇದು ʼಸೂರ್ಯಮುಳುಗದ ದೇಶʼ ಎಂಬ ಖ್ಯಾತಿಗೆ ಒಳಗಾಗಿದ್ದ ಬ್ರಿಟಿಷರನ್ನೇ ಮನೆಗೆ ಕಳಿಸಿತು. 
ಸ್ವಾತಂತ್ರ್ಯೋತ್ತರ ಕಾಲಘಟ್ಟದಲ್ಲಿ ನಡೆದ ಅನೇಕ ಆಂದೋಲನಗಳಿಗೆ ನಾನೇ ಸಾಕ್ಷಿಯಾಗಿದ್ದೇನೆ. ೧೯೭೩ರಲ್ಲಿ ಕೇರಳದಲ್ಲಿ ಆರಂಭವಾದ ಸೈಲೆಂಟ್‌ ವ್ಯಾಲೀ ಆಂದೋಲನ, ೧೯೭೦ರ ದಶಕದುದ್ದಕ್ಕೂ ನಡೆದ ಚಿಪ್ಕೋ ಚಳುವಳಿ, ೧೯೭೮ರಿಂದ ೧೯೯೪ರ ವರೆಗೆ ಮರಾಟ್ವಾಡಾ ವಿವಿಗೆ ಅಂಬೇಡ್ಕರ್‌ ಹೆಸರಿಡಲು ದಲಿತರ ನೇತೃತ್ವದಲ್ಲಿ ನಡೆದ ನಾಮಂತರಣ್‌ ಆಂದೋಲನ, ೧೯೮೦ರಲ್ಲಿ ಬಿಹಾರದಲ್ಲಿ ಅರಂಭವಾದ ಜಂಗಲ್‌ ಬಚಾವೋ ಆಂದೋಲನ, ೧೯೮೫ರಿಂದ ಆರಂಭವಾದ ನರ್ಮದಾ ಬಚಾವೋ ಆಂದೋಲನ, ೨೦೦೬ರ ಮೀಸಲಾತೀ ವಿರೋಧೀ ಚಳುವಳಿ, ೨೦೧೧ರಲ್ಲಿ ಅಣ್ಣಾ ಹಜಾರೆ ಅರಂಭಿಸಿದ ಜನ ಲೋಕ ಪಾಲ್‌ ಬಿಲ್‌ ( ಬ್ರಷ್ಟಾಚಾರ ವಿರೋಧಿ ಆಂದೋಲನ), ೨೦೧೨ರ ನಿರ್ಭಯಾ ಜನಾಂದೋಲನ, ೨೦೧೭ರ ಜಲ್ಲಿಕಟ್ಟು ಆಂದೋಲನ, ಮೀಟೂ ಚಳುವಳಿ ಮೊದಲಾದುವು ಭಾರತೀಯರ ಬದುಕಲ್ಲಿ ಹೊಸ ಭರವಸೆ ಮೂಡಿಸಿವೆ. ಪರಿಸರ ಚಳುವಳಿಗಳು, ಮತ್ತು ಮಹಿಳಾ ಚಳುವಳಿಗಳು ಇಲ್ಲದೇ ಹೋಗಿದ್ದರೆ ಇಂದಿನ ಭಾರತ ಇಂದಿನ ಹಾಗೆ ಇರುತ್ತಿರಲಿಲ್ಲ. 
ಈ ಜನಾಂದೋಲನಗಳಲ್ಲಿ ಭಾಗವಹಿಸಿದವರು ಕಾರ್ಪೊರೇಟ್‌ ಕಂಪೆನಿಯವರಲ್ಲ, ಬದಲು ಲಂಗೋಟಿ ತೊಟ್ಟ ಫಕೀರರು, ಬಡವರು. ಆಗಲೂ ಹಾಗೆ, ಈಗಲೂ ಹಾಗೆ. ಪ್ರಸ್ತುತ ರೈತರು ಚಳುವಳಿ ನಡೆಸುತ್ತಾ ಇಷ್ಟು ದಿನಗಳ ಕಾಲ ಬಲಿಷ್ಠ ಸರಕಾರದ ವಿರುದ್ಧ ಉಳಿದಿದ್ದಾರೆ. ಇದು ಆಂದೋಲನದ ಶಕ್ತಿ. 
ಆಂದೋಲನಕಾರರನ್ನು ಅಪಹಾಸ್ಯ ಮಾಡುವುದು ಅಪೇಕ್ಷಣೀಯವಲ್ಲ.

Friday, 5 February 2021

ಭಿನ್ನ ಧ್ವನಿಗೆ ಇಲ್ಲಿಲ್ಲವೇ ಜಾಗ?ಸರ್ಕಾರದ ಭಾಷೆಯೇ ಪ್ರಜೆಗಳ ಭಾಷೆಯಾಗಬೇಕೇ?.....

ಭಿನ್ನ ಧ್ವನಿಗೆ ಇಲ್ಲಿಲ್ಲವೇ ಜಾಗ?
ಸರ್ಕಾರದ ಭಾಷೆಯೇ ಪ್ರಜೆಗಳ ಭಾಷೆಯಾಗಬೇಕೇ?

ಕಲೆ: ಭಾವು ಪತ್ತಾರ್‌


ಪುರುಷೋತ್ತಮ ಬಿಳಿಮಲೆ

ವಿ ದ್ವಾಂಸರಾದ ಪ್ರೊ. ಹಂಪ ನಾಗರಾಜಯ್ಯ ಅವರನ್ನು ಪೊಲೀಸರು ಸ್ಟೇಶನ್ನಿಗೆ ಕರೆಯಿಸಿಕೊಂಡು, ಸ್ಪಷ್ಟೀಕರಣ ಕೇಳಿ ಕಳುಹಿಸಿಕೊಟ್ಟ ವಿಷಯ ಈಚಿನದು. ಹಂಪನಾ ಅವರನ್ನು ನಾನು ಕಳೆದ 40 ವರ್ಷಗಳಿಂದ ಬಲ್ಲೆ. ಅವರೆಂದೂ ವ್ಯವಸ್ಥೆಯ ವಿರುದ್ಧ ಧ್ವನಿ ಎತ್ತಿದವರಲ್ಲ, ಬದಲು ವ್ಯವಸ್ಥೆಯ ಪರವಾಗಿಯೇ ಇದ್ದವರು. ಅಂತ ಹಿರಿಯರು ಕಾರ್ಯಕ್ರಮವೊಂದರಲ್ಲಿ ರೈತರ ಮೇಲಿನ ಕಳಕಳಿಯಿಂದ ಹೇಳಿದ ಉಪಮೆಯೊಂದಕ್ಕೆ ವ್ಯವಸ್ಥೆ ಬೆಚ್ಚಿ ಬಿದ್ದಿದೆ ಎಂದರೆ ಈ ವ್ಯವಸ್ಥೆಯು ಯಾವ ಮಟ್ಟಿನ ಮನೋರೋಗದಿಂದ ನರಳುತ್ತಿದೆ ಎಂಬುದು ಸ್ಪಷ್ಟವಾಗುತ್ತದೆ.

ಹಂಪನಾ ಅವರನ್ನು ಸ್ಟೇಶನ್ನಿಗೆ ಬರ ಹೇಳಿದ ಪೊಲೀಸರಿಗೆ ಅವರ‍್ಯಾರೆಂದು ತಿಳಿದಿರಲಾರದು. ಎಂ.ಎಂ.ಕಲಬುರ್ಗಿಯವರಿಗೆ ಗುಂಡು ಹಾಕಿದವನಿಗೂ ಕಲಬುರ್ಗಿಯವರ ಯೋಗ್ಯತೆಯ ಬಗ್ಗೆ ಗೊತ್ತಿರುವುದು ಸಾಧ್ಯವಿಲ್ಲ. ಆದರೆ, ಇವರೆಲ್ಲರಿಗೂ ಸಾರ್ವಜನಿಕ ವಲಯದಲ್ಲಿ ಕೇಳಿ ಬರುವ ಮಾತುಗಳ ಮೂಲಕ, ಹೇಗೆ ಮಾಡಿದರೆ ಈ ಕಾಲಕ್ಕೆ ಉಚಿತವಾಗಬಹುದು ಎಂಬ ಒಂದು ಬಗೆಯ ತಿಳಿವಳಿಕೆ ಮೂಡಿರುತ್ತದೆ. ಟಿ.ವಿ. ಚಾನೆಲ್‌ಗಳ ಅರಚಾಟ, ವಾಟ್ಸ್‌ಆ್ಯಪ್, ಫೇಸ್‌ಬುಕ್‌ಗಳಂತಹ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುವ ಸುಳ್ಳು ಮಾಹಿತಿ, ಎಲ್ಲೆಂದರಲ್ಲಿ ಕೇಳಿ ಬರುತ್ತಿರುವ ದ್ವೇಷಪೂರಿತ ಭಾಷೆ, ರಾಜಕಾರಣಿಗಳು ಬಳಸುವ ಸೌಜನ್ಯರಹಿತ ನುಡಿಗಟ್ಟುಗಳು, ನಿರಂತರವಾಗಿ ನಡೆಯುತ್ತಿರುವ ಚಾರಿತ್ರ್ಯಹನನ ಇತ್ಯಾದಿಗಳು ನಮ್ಮ ನೆಲದ ಗುಣವನ್ನೇ ಬದಲಾಯಿಸಿವೆ. ಇಂಥ ಬೆಳವಣಿಗೆಗಳ ಕುರಿತು ಎಚ್ಚರ ಹುಟ್ಟಿಸುವ ಮಾನವಿಕಗಳನ್ನೇ  ‘ಅನುತ್ಪಾದಕ’ ಎಂದು ಘೋಷಿಸುವ ಮಟ್ಟಿಗೆ ಜನರು ಬದಲಾಗಿದ್ದಾರೆ. ಇಂಥಲ್ಲಿ ಪ್ರಶ್ನಿಸುವುದನ್ನು ಕಲಿಸುವ, ಇತಿಹಾಸವನ್ನು ಶೋಧಿಸುವ, ರಾಜಕೀಯ ವಿನ್ಯಾಸಗಳನ್ನು ವಿಶ್ಲೇಷಿಸುವ, ಮಾನವೀಯ ಸಂಬಂಧಗಳನ್ನು ಪರಿಶೋಧಿಸುವ ಲೇಖಕರಿಗೆ ಮಹತ್ವ ಕಡಿಮೆಯಾಗುತ್ತದೆ.

ಈ ನಡುವೆ, ನಾಡಿನ ಬಗೆಗೆ ತಿಳಿವಳಿಕೆಯನ್ನು ಹೆಚ್ಚಿಸಿ, ಮುಕ್ತಚಿಂತನೆಗೆ ಮತ್ತು ವಿಮರ್ಶೆಗೆ ಪೂರ್ಣ ಅವಕಾಶ ಮಾಡಿಕೊಡುವುದು ಪ್ರಜಾಪ್ರಭುತ್ವವಾದೀ ಸರ್ಕಾರಗಳ  ಅತಿ ದೊಡ್ಡ ಕರ್ತವ್ಯ ಎಂಬುದನ್ನು ಸರ್ಕಾರಗಳೇ  ಮರೆತಿವೆ, ಮಾತ್ರವಲ್ಲ ಜನರಿಂದಲೂ ಅದನ್ನು ಮರೆಸಲು ನೇರವಾಗಿ ಮತ್ತು ಪರೋಕ್ಷವಾಗಿ ಕೆಲವು ಕ್ರಮಗಳನ್ನು ಕೈಗೊಳ್ಳುತ್ತಿವೆ. ಈ ತಂತ್ರಗಳಿಗೆ ಬಲಿ ಬಿದ್ದ ಪ್ರಜೆಗಳೂ ಸರ್ಕಾರದ ಭಾಷೆಯನ್ನೇ ನಿಧಾನವಾಗಿ ಕಲಿಯಲು ಆರಂಭಿಸಿದ್ದಾರೆ. ಜನರ ನೈತಿಕತೆಯನ್ನು ಹೆಚ್ಚಿಸಲು, ಸಮಾಜದ ಸ್ವಾಸ್ಥ್ಯವನ್ನು ಕಾಪಾಡಲು, ಪ್ರಜಾಪ್ರಭುತ್ವದ ಬೇರುಗಳನ್ನು ಬಲಗೊಳಿಸಲು ಮತ್ತು ಜೊತೆಗಿರುವ ಜನರ ಯೋಚನಾ ಶಕ್ತಿಯನ್ನು ತೀಕ್ಷ್ಣಗೊಳಿಸಲು ಸರ್ಕಾರಗಳು ಬೌದ್ಧಿಕ ಸಂವಾದಗಳನ್ನು ಪ್ರೋತ್ಸಾಹಿಸುತ್ತಿರಬೇಕು. ಆದರೆ ವರ್ತಮಾನ ಕಾಲದಲ್ಲಿ ಸರ್ಕಾರಗಳೇ ಅಂಥ ಪ್ರಕ್ರಿಯೆಗಳಿಗೆ ವಿರುದ್ಧವಾಗಿವೆ.

ನಮ್ಮ ಸಂವಿಧಾನ ಮತ್ತು ಕಾನೂನುಗಳನ್ನು ಹೇಗೆ ಬೇಕಾದರೂ ತಿರುಚುವ ಕಲೆಗಾರಿಕೆಯನ್ನು ನಮ್ಮ ಪ್ರಸಿದ್ಧ ವಕೀಲರುಗಳೇ ನಮಗೆ ಹೇಳಿಕೊಡುತ್ತಿರುವುದರಿಂದ, ಹಣವಿದ್ದರೆ ನಾವೀಗ ಸುರಕ್ಷಿತ ಮತ್ತು ಹೇಗೆ ಬೇಕಾದರೂ ಮಾತಾಡಬಹುದು ಎಂಬ  ನಂಬುಗೆ ವೇಗವಾಗಿ ಬೆಳೆಯುತ್ತಿದೆ. ಸರ್ಕಾರದ ಕೃಪೆಯಿದ್ದರೆ ‘ಗೋಲಿ ಮಾರೋ’ ಎಂದು ಸಾರ್ವಜನಿಕವಾಗಿಯೇ ಹೇಳಬಹುದು. ಇಲ್ಲದಿದ್ದರೆ ಮುನಾವರ್ ಫಾರೂಕಿಯ ಒಂದು ಜೋಕ್ ಕೂಡಾ ಕೇಳುವಂತಿಲ್ಲ.  

ಇಂಡಿಯನ್ ಪೀನಲ್ ಕೋಡ್ (ಐಪಿಸಿ) 124ಎ ಪ್ರಕಾರ ನಮ್ಮ ದೇಶದಲ್ಲಿ ಸುಮಾರು 70 ಕೇಸುಗಳನ್ನು ‘ದೇಶದ್ರೋಹ’ದ ಆಪಾದನೆಯ ಮೇಲೆ ದಾಖಲಿಸಲಾಗಿದೆ. 1860ರ ಹೊತ್ತಿಗೆ ದೇಶದಾದ್ಯಂತ ದಂಗೆಯೇಳುತ್ತಿದ್ದ ಸಮುದಾಯಗಳನ್ನು ಸದೆ ಬಡೆಯಲು ಬ್ರಿಟಿಷರು ಚಾಲ್ತಿಗೆ ತಂದ ಕಾನೂನನ್ನು ಈಗ ದೇಶದ ಪ್ರಜೆಗಳ ಮೇಲೆಯೇ ನಿರ್ದಯವಾಗಿ ಜಾರಿಗೆ ತರಲಾಗುತ್ತಿದೆ.

ಈ ಲೇಖನ ಬರೆಯುವ ಹೊತ್ತಿಗೆ ದೆಹಲಿ ಗಡಿಭಾಗದಲ್ಲಿ ಚಳವಳಿ ನಡೆಸುತ್ತಿರುವ ಕೆಲವು ರೈತ ನಾಯಕರ ಮೇಲೂ ದೇಶದ್ರೋಹದ ಕೇಸು ದಾಖಲಾಗಿದೆ. ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ಪೌರರ ದಾಖಲಾತಿ ವಿರುದ್ಧ ಸಂವಿಧಾನಾತ್ಮಕವಾಗಿಯೇ ಹೋರಾಡಿದವರ ಮತ್ತು ಭೂ ಸಂಬಂಧಿ ವ್ಯಾಜ್ಯಗಳಲ್ಲಿ ತೊಡಗಿಸಿಕೊಂಡ ಸಾವಿರಾರು ನಾಗರಿಕರ ಮೇಲೆಯೂ ದೇಶದ್ರೋಹದ ಕೇಸುಗಳನ್ನು ಜಡಿಯಲಾಗಿದೆ ಎಂದು ವರದಿಗಳು ತಿಳಿಸಿವೆ. ಇವರಲ್ಲಿ ಹೆಚ್ಚಿನವರು ಸರ್ಕಾರದ ಕ್ರಮಗಳನ್ನು ವಿಮರ್ಶೆ ಮಾಡಿದ್ದಾರೆಯೇ ವಿನಾ ದೇಶದ್ರೋಹದ ಕೆಲಸವೇನೂ ಮಾಡಿದಂತಿಲ್ಲ. ಆದರೆ ಐದು ವರ್ಷಕ್ಕೊಮ್ಮೆ ಅಧಿಕಾರಕ್ಕೆ ಬರುವ ಸರ್ಕಾರವು ತನ್ನನ್ನೇ ದೇಶದೊಂದಿಗೆ ಸಮೀಕರಿಸಿಕೊಂಡು ಈ ಕೆಲಸಗಳನ್ನು ಮಾಡಲು ಹಿಂಜರಿಯಲಿಲ್ಲ.

ಐಪಿಸಿ ಸೆಕ್ಷನ್ 153ಎ – ಗುಂಪುಗಳ ನಡುವೆ ದ್ವೇಷ ಉಂಟು ಮಾಡುವಂಥ ಮಾತುಗಳನ್ನು ‘ಅಪರಾಧ’ ಎಂದು ಹೇಳುತ್ತದೆ. ಆದರೆ ದ್ವೇಷದ ಮಾತುಗಳನ್ನಾಡಿಯೇ ಅಧಿಕಾರಕ್ಕೆ ಬಂದ ಎಷ್ಟು ಜನರ ಮೇಲೆ ಇಂಥ ಕೇಸುಗಳು ದಾಖಲಾಗಿವೆ? ಇದು ನಮ್ಮ ನ್ಯಾಯ ವ್ಯವಸ್ಥೆಯ ದೌರ್ಬಲ್ಯದ ಬಗ್ಗೆಯೂ ಬೆಳಕು ಚೆಲ್ಲುತ್ತದೆ. ಭಿನ್ನ ಧ್ವನಿಗಳನ್ನು ಅಡಗಿಸುವ ಹುನ್ನಾರ ಪ್ರಜಾಪ್ರಭುತ್ವವನ್ನು ಸಾಯಿಸಿ ಸರ್ವಾಧಿಕಾರಕ್ಕೆ ಎಡೆ ಮಾಡಿಕೊಡುತ್ತದೆ.

ಹಂಪನಾ ಅವರಂಥ ಲೇಖಕರೇ ಸುಲಭವಾಗಿ ಇದಕ್ಕೆ ಬಲಿಯಾಗುತ್ತಿದ್ದಾರೆ. ಅಮಾಯಕ  ವಿದ್ಯಾರ್ಥಿಗಳು ಆನಂತರದ ಸಾಲಿನಲ್ಲಿರುತ್ತಾರೆ. ಈ ವಿಷಯದಲ್ಲಿ ರಾಜಕಾರಣಿಗಳಿಗೆ ಮಾತ್ರ ವಿನಾಯಿತಿ ನೀಡಲಾಗಿದೆ. ಉಳಿದವರೆಲ್ಲರೂ ಬಲಿಪಶುಗಳೇ. 1989ರಲ್ಲಿ ರಾಜೀವ್ ಗಾಂಧಿಯವರು ಮುಸ್ಲಿಮರ ಪ್ರತಿಭಟನೆಗೆ ಹೆದರಿ, ಸಲ್ಮಾನ್ ರಶ್ದಿಯವರ  ಸೆಟಾನಿಕ್ ವರ್ಸಸ್ ಅನ್ನು ನಿಷೇಧಿಸಿದರು.  1990 ಮತ್ತು 2000ರಲ್ಲಿ ಜಗತ್ಪ್ರಸಿದ್ಧ ಕಲಾವಿದ ಎಂ.ಎಫ್.ಹುಸೇನರ ಮೇಲೆ ಆಕ್ರಮಣ ಮಾಡಲಾಯಿತು. 2012ರಲ್ಲಿ ವ್ಯಂಗ್ಯ ಚಿತ್ರಕಾರ ಅಸೀಂ ತ್ರಿವೇದಿಯವರನ್ನು ಜೈಲಿಗೆ ತಳ್ಳಲಾಯಿತು. 2014ರಲ್ಲಿ ಗುಜರಾತಿನ ದೀನನಾಥ ಬಾತ್ರಾ ಎಂಬವರ ದೂರಿನ ಮೇಲೆ ವೆಂಡಿ ಡೋನಿಗರ್ ಅವರ ‘ದಿ ಹಿಂದೂಸ್’ ಪುಸ್ತಕವನ್ನು ಪೆಂಗ್ವಿನ್ ಹಿಂತೆಗೆದುಕೊಂಡಿತು.

2015ರಲ್ಲಿ ತಮಿಳು ಲೇಖಕ ಪೆರುಮಾಳ್ ಮುರುಗನ್ ಕೋಮುವಾದಿ ಶಕ್ತಿಗಳ ಉಪದ್ರವ ತಾಳಲಾರದೆ ‘ನಾನು ಸತ್ತಿದ್ದೇನೆ’ ಎಂದು ಘೋಷಿಸಿಕೊಂಡರು. ಅದು ಲೇಖಕನೊಬ್ಬನ ಆತ್ಮಹತ್ಯೆಗೆ ಸಮನಾಗಿತ್ತು. 2016ರಲ್ಲಿ ಮದ್ರಾಸ್ ಹೈಕೋರ್ಟು ಮುರುಗನ್ ಪರವಾಗಿ ತೀರ್ಪು ಕೊಟ್ಟರೂ ಅಷ್ಟು ಹೊತ್ತಿಗೆ ಲೇಖಕ ಅನುಭವಿಸಿದ ಹಿಂಸೆ ಅಷ್ಟಿಷ್ಟಲ್ಲ. ದೆಹಲಿ ವಿಶ್ವವಿದ್ಯಾಲಯದ ಪಠ್ಯಕ್ರಮದಿಂದ ಎ.ಕೆ. ರಾಮಾನುಜನ್ ರಾಮಾಯಣದ ಮೇಲೆ ಬರೆದ ಪ್ರಬುದ್ಧ ಲೇಖನವನ್ನು ತೆಗೆದು ಹಾಕಲಾಯಿತು. ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಇದೀಗ ಉನ್ನತ ಮಟ್ಟದ ಚರ್ಚೆಗಳೇ ನಡೆಯುತ್ತಿಲ್ಲ.

‘ಮಾನನಷ್ಟ’ ಮೊಕದ್ದಮೆಗಳೂ ಈಚಿನ ದಿನಗಳಲ್ಲಿ ಬರಹಗಾರರ ಬಾಯಿ ಕಟ್ಟಿಸಿದೆ. ಪೀನಲ್ ಕೋಡಿನ 499 ಮತ್ತು 500ರ ಪ್ರಕಾರ ನಿಮ್ಮ ಮೇಲೆ ಯಾರು ಬೇಕಾದರೂ ಮೊಕದ್ದಮೆ ದಾಖಲಿಸಬಹುದು. ‘ಆ ಲೇಖನದಿಂದ ನನ್ನ ಭಾವನೆಗಳಿಗೆ ನೋವಾಗಿದೆ’ ಎಂದರೆ ಸಾಕು, ಈ ದಿನಗಳಲ್ಲಿ ಏನು ಬೇಕಾದರೂ ಅಗಬಹುದು. ‘ನಾನು ಕಂಡದ್ದನ್ನು, ಅನುಭವಿಸಿದ್ದನ್ನು ಬರೆಯದಿದ್ದರೆ ನನ್ನ ಭಾವನೆಗಳಿಗೆ ನೋವಾಗುತ್ತದೆ’ ಎಂದು ಯಾರೂ ಹೇಳುವಂತಿಲ್ಲ. ವರ್ಷಾನುಗಟ್ಟಲೆ ನಡೆಯಬಹುದಾದ ಕೋರ್ಟು ವ್ಯವಹಾರಗಳಿಗೆ ಹೆದರಿ ಲೇಖಕರು ಬರೆಯುವುದನ್ನೇ ನಿಲ್ಲಿಸಿಬಿಡುತ್ತಾರೆ. ವ್ಯವಸ್ಥೆಗೆ ಬೇಕಾದ್ದೂ ಅದುವೇ.

ಪ್ರಸಿದ್ಧ ಲೇಖಕರಾದ ಪರೊಂಜಯ್ ಥಾಕುರ್ತಾ ಮತ್ತು ಜ್ಯೋತಿರ್ಮಯ ಚೌಧುರಿ ಅವರು ಬರೆದ ಪುಸ್ತಕವೊಂದರ ಮೇಲೆ ಮುಕೇಶ್ ಅಂಬಾನಿಯವರ ರಿಲಯನ್ಸ್ ಕಂಪನಿ 1.64 ಕೋಟಿ ಡಾಲರ್‌ಗಳ ಮಾನನಷ್ಟ ಮೊಕದ್ದಮೆಯನ್ನು ದಾಖಲಿಸಿತು. ಇದನ್ನು ಗಮನಿಸಿದ ಅನೇಕ ಲೇಖಕರು ಕಾರ್ಪೊರೇಟ್ ಕಂಪನಿಗಳ ವಿರುದ್ಧ ಬರೆಯುವುದನ್ನೇ ನಿಲ್ಲಿಸಿದರು. ಕಂಪನಿಗಳಿಗೆ ಬೇಕಾದದ್ದೂ ಅದುವೇ. ಪರಿಸರವಾದಿ ಪತ್ರಿಕೋದ್ಯಮಿ ಕೇಯ ಆಚಾರ್ಯರನ್ನೂ ಹೀಗೆಯೇ ಮಾಡಿ ಹೆದರಿಸಿ ಬಾಯಿ ಮುಚ್ಚಿಸಲಾಯಿತು. ಪರಿಣಾಮವಾಗಿ ಪರಿಸರ ನಾಶ ಸರಾಗವಾಯಿತು. ಇಂಥ ಬೆಳವಣಿಗೆಗಳ ನೇರ ಪರಿಣಾಮ ಜನರಿಗೆ ಸತ್ಯ ಹೇಳಬೇಕಾದ  ಪತ್ರಕರ್ತರ ಮೇಲಾಗಬೇಕಿತ್ತು. ಅದರೆ ಹೆಚ್ಚಿನ ಪತ್ರಕರ್ತರು ಸರ್ಕಾರದ ಪರವಾಗಿಯೇ ಮಾತಾಡುತ್ತಾ ಅಪಾಯದಿಂದ ಪಾರಾಗುತ್ತಿದ್ದಾರೆ.

ಚಾನೆಲ್ಲುಗಳಿಗೆ ದುಡ್ಡು ಹಾಕಿದವರು ಸರ್ಕಾರದಲ್ಲಿ ಶಾಮೀಲಾಗಿರುವುದರಿಂದ ಅವುಗಳಿಂದ ಹೆಚ್ಚಿನದನ್ನು ನಿರೀಕ್ಷಿಸುವುದೂ ತಪ್ಪು. ಜನಗಳಿಗೆ ಇವೆಲ್ಲ ಗೊತ್ತಿಲ್ಲವೆಂದಲ್ಲ. ಆದರೆ ಅವರಲ್ಲಿ ಹೆಚ್ಚಿನ ಪರ್ಯಾಯಗಳಿಲ್ಲ.  2020ರಲ್ಲಿ  ಜಗತ್ತಿನ 180 ದೇಶಗಳಲ್ಲಿ ನಮ್ಮ ದೇಶ ಪತ್ರಿಕಾ ಸ್ವಾತಂತ್ರ್ಯದ ದೃಷ್ಟಿಯಿಂದ 142ನೇ ಸ್ಥಾನದಲ್ಲಿ ನಿಂತಿರುವುದು ಆತಂಕಕಾರಿ ವಿಷಯವಾಗಿದೆ.

ಸರ್ಕಾರವನ್ನು ವಿಮರ್ಶೆ ಮಾಡಿದವರನ್ನೆಲ್ಲ ‘ರಾಷ್ಟ್ರದ್ರೋಹಿ’ ಎಂದು ಬಿಂಬಿಸಲು ನಮ್ಮಲ್ಲಿ ದೊಡ್ಡ ಪಡೆಯೇ ಕೆಲಸ ಮಾಡುತ್ತದೆ. ಇಂಟರ್ನೆಟ್‌ಗಳನ್ನು ಸರ್ಕಾರವೇ ಬೇಕೆಂದಾಗ ಸ್ಥಗಿತಗೊಳಿಸುತ್ತದೆ. ಜನರು ತಾವಾಗಿಯೇ ಬಾಯಿ ಮುಚ್ಚಿಕೊಳ್ಳುವಂತೆ ಮಾಡುವ ಹೊಸ ತಂತ್ರಗಾರಿಕೆಯನ್ನು ಭಾರತೀಯ ಸಮಾಜ ಕಂಡುಕೊಂಡಿದೆ. ಲೇಖಕ ಡಾ. ಆನಂದ್ ತೇಲ್ತುಂಬ್ಡೆ, ತೆಲುಗಿನ ಕವಿ, ವರವರ ರಾವ್, ಫರಿದಾಬಾದಿನ ಡಾ.ಸುಧಾ ಭಾರದ್ವಾಜ್, ನವದೆಹಲಿಯ ಗೌತಮ್ ನವ್‌ಲಖಾ, ಮುಂಬೈನ ವರ್ನಾನ್ ಗೋನ್ಸಾಲ್ವೆಸ್ ಹಾಗೂ ಅರುಣ್ ಫೆರೆರಾ, ರಾಂಚಿಯ 
ಸ್ಟ್ಯಾನ್ಲಿ ಸ್ವಾಮಿಯವರು ಈಗಾಗಲೇ ಜೈಲು ಸೇರಿದ್ದಾರೆ. ಅವರಿಗೆ ಜಾಮೀನು ಕೂಡಾ ಸಿಕ್ಕಿಲ್ಲ.

ಮಾನವ ಹಕ್ಕುಗಳ ಹೋರಾಟಗಾರರಾದ ಇವರ ಬಗ್ಗೆ ನ್ಯಾಯಾಲಯ ಏನು ಹೇಳುವುದೋ ಕಾದು ನೋಡಬೇಕಾಗಿದೆ. ಆದರೆ ಇವರ ಬಂಧನದಿಂದ, ಸರ್ಕಾರೀ  ಪ್ರಾಯೋಜಿತ ಲೇಖಕರು ಹೊರತುಪಡಿಸಿ ಉಳಿದ ಲೇಖಕರು ಬೆಚ್ಚಿಬಿದ್ದಿದ್ದಾರೆ. ಪ್ರೊ.ಅಮರ್ತ್ಯ ಸೇನ್, ನೋಮ್ ಚಾಮ್ಸ್ಕಿ, ಜೀನ್ ಡ್ರೆಜ್, ಬಿ.ಎಲ್. ಮುಂಗೇಕರ್, ರೋಮಿಲಾ ಥಾಪರ್ ಮೊದಲಾದ 5000ಕ್ಕೂ ಹೆಚ್ಚು ವಿದ್ವಾಂಸರು ಭಾರತದಲ್ಲಿ ನಡೆಯುತ್ತಿರುವ ಮಾನವ ಹಕ್ಕುಗಳ ದಮನದ ವಿರುದ್ಧ ಮಾತಾಡಿದ್ದಾರೆ. ಇಂಥವರ ಮಹತ್ವ ತಿಳಿಯದವರು ಅವರನ್ನೂ ಅರ್ಬನ್‌ ನಕ್ಸಲ್‌ಗಳು ಎಂದು ಕರೆದು ಅವಮಾನಿಸಿದರು. ಇದರಿಂದಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತದ ಘನತೆಗೆ ಬಲವಾದ ಪೆಟ್ಟು ಬಿದ್ದಿದೆ. 2020ರ ಮಾನವ ಹಕ್ಕುಗಳ ಸೂಚ್ಯಂಕದಲ್ಲಿ 162 ದೇಶಗಳಲ್ಲಿ ಭಾರತದ ಸ್ಥಾನ 111.

ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಲ್ಲಿ ಒಂದೆಡೆ ಹಾಗೆ ನಡೆಯುತ್ತಿದ್ದರೆ, ಇನ್ನೊಂದೆಡೆಯಲ್ಲಿ ಜನರ ನಡುವೆ ಪರಸ್ಪರ ಅಸಹನೆ ಹುಟ್ಟಿಸುವಂಥ ವ್ಯವಸ್ಥೆ ಗಟ್ಟಿಯಾಗಿ ಬೆಳೆಯುತ್ತಿದೆ. ಇದು ಅಧಿಕಾರ ರಾಜಕಾರಣಕ್ಕೆ ಪೂರಕವಾಗಿರುವುದರಿಂದ ಸರ್ಕಾರವೂ ಈ ಬಗ್ಗೆ ಮೌನ ತಾಳಿದೆ. ಆರ್ನಬ್ ಗೋಸ್ವಾಮಿ ಮತ್ತು ಅತನನ್ನು ಅನುಸರಿಸುವವರು ಟಿಆರ್‌ಪಿಗಾಗಿ ನಡೆಸುವ ಏಕಪಕ್ಷೀಯ ಟಿ.ವಿ ಚರ್ಚೆಗಳು ಭಾರತೀಯ ಸಮಾಜದ ಮೇಲೆ ಉಂಟು ಮಾಡಿದ ಪರಿಣಾಮಗಳ ಬಗ್ಗೆ ಇನ್ನಷ್ಟೇ ಅಧ್ಯಯನ ನಡೆಯಬೇಕಾಗಿದೆ. ಮೇಲ್ನೋಟಕ್ಕೆ ಅವು ಭಾರತೀಯ ಸಮಾಜವನ್ನು ಒಂದು ಬಗೆಯ ಉದ್ರೇಕಕ್ಕೆ ತಳ್ಳಿವೆ. ಅಸಹನೆಯನ್ನು ವ್ಯಾಪಕವಾಗಿ ಬೆಳೆಸಿವೆ. ಮುಸ್ಲಿಮರನ್ನು ಅತಂತ್ರಗೊಳಿಸಿವೆ. ರಾಜಕೀಯವು ನಮ್ಮ ಕುಟುಂಬಗಳ ಒಳಗೆ ಪ್ರವೇಶಿಸಿ, ಛಿದ್ರಗೊಳಿಸಿದೆ. ಜನರಿಗೆ ಎಲ್ಲಿ, ಏನನ್ನು ಎಷ್ಟು ಮಾತಾಡಬೇಕೆಂಬ ಪ್ರಜ್ಞೆಯೇ ಇಲ್ಲವೆಂಬ ಪರಿಸ್ಥಿತಿ ನಿರ್ಮಾಣವಾಗಿದೆ.

ಬಹುಶಃ ಸರ್ಕಾರಗಳು ಸಂವೇದನಾಶೀಲವಾಗಿ ವರ್ತಿಸುವ ಮೇಲ್ಪಂಕ್ತಿ ಹಾಕಿಕೊಟ್ಟಿದ್ದರೆ ಹಂಪನಾ ಅವರಂಥವರೂ ಪೊಲೀಸ್ ಸ್ಟೇಶನ್ನಿಗೆ ಹೋಗುವ ಪರಿಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲ. ಹಿರಿಯಕ್ಕನ ಚಾಳಿ ಮನೆಮಕ್ಕಳಿಗೆಲ್ಲ ಎಂಬಂತಾಗಿದೆ ಪರಿಸ್ಥಿತಿ. ಸರ್ಕಾರವು ತನ್ನ ಭಾಷೆಯನ್ನೇ ಪ್ರಜೆಗಳ ಭಾಷೆಯನ್ನಾಗಿ  ಪರಿವರ್ತಿಸಬಯಸಿದರೆ ಆಗ ಅಲ್ಲಿ ಸರ್ಕಾರ ಇರುತ್ತದೆ, ಪ್ರಜೆಗಳು ಇರುವುದಿಲ್ಲ. ಪ್ರಜೆಗಳೇ ಇಲ್ಲದ ಪ್ರಜಾಪ್ರಭುತ್ವವನ್ನು ನಾವೀಗ  ಕಟ್ಟಲು ಹೊರಟಿದ್ದೇವೆ.

v

Friday, 15 January 2021

ರಾಜಕೀಯ ಖೈದಿಗಳಿಗೆ ರೈತ ಹೋರಾಟಗಾರರ ಬೆಂಬಲ

ರಾಜಕೀಯ ಖೈದಿಗಳಿಗೆ ರೈತ ಹೋರಾಟಗಾರರ ಬೆಂಬಲ

“ನಾವು ಶೋಷಕನಾದ ಮಹಾರಾಜನಂತೆ ವರ್ತಿಸುತ್ತಿರುವ ಪ್ರಧಾನಮಂತ್ರಿಯನ್ನು ಮುಖಾಬಿಲೆಯಾಗುತ್ತಿದ್ದೇವೆ. ಈ ಎಲ್ಲಾ ಕಾರ್ಯಕರ್ತರು ಮತ್ತು ಮೇಧಾವಿಗಳನ್ನು ಅವರು ಬಡವರ ಪರಿಸ್ಥಿತಿಯನ್ನು ಎತ್ತಿ ತೋರಿಸಿದರು ಎಂಬ ಏಕೈಕ ಕಾರಣಕ್ಕಾಗಿ ಸುಳ್ಳು ಆರೋಪದ ಮೇಲೆ ಬಂಧಿಸಲಾಗಿದೆ.”

ಬಹದ್ದೂರ್ ಗರ್, (ಹರಿಯಾಣ) ಮೂರು ವಿವಾದಾತ್ಮಕ ಕೃಷಿ ಕಾನೂನುಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಮುಂದಿಟ್ಟ ವಿಸ್ತೃತ ಪ್ರಸ್ತಾವನೆಯನ್ನು ರೈತ ಸಂಘಟನೆಗಳು ತಿರಸ್ಕರಿಸಿದ ಒಂದು ದಿನದ ನಂತರ 32 ರೈತ  ಸಂಘಟನೆಗಳಲ್ಲೇ ದೊಡ್ಡ ಗುಂಪಾಗಿರುವ ಭಾರತೀಯ ಕಿಸಾನ್ ಯೂನಿಯನ್ (ಏಕತಾ ಉಗ್ರಹನ್) ಜೈಲಿನಲ್ಲಿರುವ ಹಲವಾರು ಪ್ರಜಾಪ್ರಭುತ್ವ ಹಕ್ಕುಗಳ ಕಾರ್ಯಕರ್ತರು ಮತ್ತು ಬುದ್ಧಿಜೀವಿಗಳನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ‘ಮಾನವ ಹಕ್ಕುಗಳ ದಿನ’ವನ್ನು ಆಚರಿಸಿದರು.



ಇನ್ನೂ ವಿಶಾಲವ್ಯಾಪ್ತಿಯ ಕಾರ್ಯಸೂಚಿಯನ್ನು ಸಮರ್ಥಿಸುವ ಮೂಲಕ ಬಿ ಕೆ ಯು(ಉಗ್ರಹನ್) ಕೇಂದ್ರದ ವಿರುದ್ಧದ ಪ್ರತಿಭಟನೆಯನ್ನು ತೀವ್ರಗೊಳಿಸುವ ಸೂಚನೆ ನೀಡಿತು. ದೆಹಲಿಯ ಟಿಕ್ರಿ ಗಡಿಯ ಬಳಿ ಬೀಡು ಬಿಟ್ಟಿರುವ ಅದು ಇತರ ಪ್ರಜಾಪ್ರಭುತ್ವವಾದಿ ಹಾಗೂ ಮಾನವ ಹಕ್ಕುಗಳ ಚಳುವಳಿಗಳ ಕಾರ್ಯಕರ್ತರಿಗೆ ಬೆಂಬಲ ಸೂಚಿಸುವ ಕಾರ್ಯಕ್ರಮವೊಂದನ್ನು ಆಯೋಜಿಸಿತು.

ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ “ಸರ್ವಾಧಿಕಾರಿ”ಕೇಂದ್ರ ಸರ್ಕಾರದ ಮೇಲಿನ ಪೂರ್ಣಪ್ರಮಾಣದ ದಾಳಿಯಲ್ಲಿ ರೈತ ಮುಖಂಡರು ದೇಶದ ವಿವಿಧ ಪ್ರಜಾಪ್ರಭುತ್ವ ಚಳುವಳಿಗಳೊಂದಿಗೆ ನಿಲ್ಲುವ ಸಮಯ ಈಗ ಸನ್ನಿಹಿತವಾಗಿದೆ ಎಂದು ಪ್ರತಿಪಾದಿಸಿದರು. ಏಕೆಂದರೆ ತಮ್ಮ ವಿಸ್ತೃತ ಹೋರಾಟವು ಕೇವಲ ವಿವಾದಾತ್ಮಕ ಕೃಷಿ ಕಾನೂನುಗಳ ವಿರುದ್ಧ ಮಾತ್ರವಾಗಿರದೆ ಭಾರತೀಯ ಕೃಷಿಯ ‘ಕಾರ್ಪೋಟೈಜೇಷನ್’ಗೊಳಿಸುವುದುರ ವಿರುದ್ಧವಾಗಿದೆ ಎಂದೂ ಅವರು ಪ್ರತಿಪಾದಿಸಿದರು.

“ನಾವು ಶೋಷಕ ಮಹಾರಾಜನಂತೆ ವರ್ತಿಸುತ್ತಿರುವ ಪ್ರಧಾನಮಂತ್ರಿಯನ್ನು ಎದುರಿಸುತ್ತಿದ್ದೇವೆ. ಈ ಎಲ್ಲ ಕಾರ್ಯಕರ್ತರು ಮತ್ತು ಬುದ್ಧಿಜೀವಿಗಳು ತಮ್ಮ ಸ್ವಂತ ಸುರಕ್ಷಿತತೆಯ ಬಗ್ಗೆ ತಲೆಕೆಡಿಸಿಕೊಳ್ಳದೆ ಬಡವರ ದುಃಸ್ಥಿತಿಯನ್ನು ಎತ್ತಿ ತೋರಿಸಿದರು ಎಂಬುದಕ್ಕಾಗಿ ಅವರನ್ನು ಸುಳ್ಳು ಆರೋಪದ ಮೇಲೆ ಬಂಧಿಸಲಾಗಿದೆ. ಈಗ ಅವರಿಗೆ ಬೆಂಬಲವನ್ನು ನೀಡುವುದು ನಮ್ಮ ಜವಾಬ್ದಾರಿಯಾಗಿದೆ. ಅದಕ್ಕಾಗಿಯೇ ಕೃಷಿ ಕಾನೂನುಗಳಿಗೆ ನಮ್ಮ ಪ್ರತಿರೋಧದ ಜೊತೆಗೆ ಈ ಎಲ್ಲ ಬುದ್ಧಿಜೀವಿಗಳು ಮತ್ತು ಕಾರ್ಯಕರ್ತರನ್ನು ಬಿಡುಗಡೆ ಮಾಡುವಂತೆ ನಾವು ಒತ್ತಾಯಿಸುತ್ತಿದ್ದೇವೆ”ಎಂದು ಬಿಕೆಯು ಏಕತಾ (ಉಗ್ರಹನ್) ಅಧ್ಯಕ್ಷ ಜೋಗಿಂದರ್ ಉಗ್ರಹನ್ ‘ದಿ ವೈರ್’ ಗೆ ತಿಳಿಸಿದರು.

“ಗೌತಮ್ ನವಲಖಾ ಅಥವಾ ಸುಧಾ ಭಾರದ್ವಾಜ್ ಅವರಂತಹ ಜನರು ಏನು ಮಾಡಿದರು? ದೂರದ ಪ್ರದೇಶಗಳಲ್ಲಿ ಬಡವರು ಹೀಗೆ ತೀವ್ರ ಒತ್ತಡದಲ್ಲಿದ್ದಾರೆ, ಹೇಗೆ ಬದುಕುತ್ತಿದ್ದಾರೆ, ಮತ್ತು ಸರ್ಕಾರಗಳು ಅವರನ್ನು ಹೇಗೆ ಅನ್ಯಾಯವಾಗಿ ನಡೆಸಿಕೊಳ್ಳುತ್ತಿವೆ ಎಂಬುದನ್ನು ಅವರು ತೋರಿಸಿದರು. ಕಾಶ್ಮೀರದ ಜನರು ಹೇಗೆ ಭದ್ರತಾಪಡೆಗಳ ಭಯಭೀತಿಯಲ್ಲಿ ಬದುಕುತ್ತಿದ್ದಾರೆ ಎಂಬುದನ್ನು ತೋರಿಸಿದ ಇತರರೂ ಇದ್ದಾರೆ. ಮೋದಿ ಸರ್ಕಾರ ಅವರೆಲ್ಲರನ್ನೂ ಮೌನಗೊಳಿಸುವುದಕ್ಕಾಗಿ ಮಾತ್ರ ಜೈಲಿಗೆ ಹಾಕಿದೆ ಎಂದು ನಾವು ನಂಬುತ್ತೇವೆ. ಈಗ ನಾಗರಿಕರ ಪರವಾಗಿ ಮಾತನಾಡುವುದು ನಮ್ಮ ಜವಾಬ್ದಾರಿಯಾಗಿದೆ” ಎಂದು ಅವರು ಹೇಳಿದರು.

ರೈತರ ಆಂದೋಲನವನ್ನು ದೇಶದ ವಿರಾಟ್ ರಾಜಕೀಯ ಬೆಳವಣಿಗೆಗಳಿಂದ ಪ್ರತ್ಯೇಕಿಸಲು ಸಾಧ್ಯವಿಲ್ಲ.

ಕಳೆದ ಕೆಲವು ವರ್ಷಗಳಿಂದ ಹೆಚ್ಚಿನ ಪ್ರತಿಭಟನೆಗಳು- ಅದು ಶಾಹಿನ್ ಬಾಗ್‍ನಲ್ಲಿರಲಿ (ಸಿ.ಎ.ಎ-ಎನ್.ಆರ್.ಸಿ ವಿರುದ್ಧವಾಗಿರಲಿ) ಅಥವಾ 370ನೇ ಪರಿಚ್ಛೇದವನ್ನು ತೆಗೆದು ಹಾಕುವುದರ ವಿರುದ್ಧವಾಗಿರಲಿ- ಈ ಕ್ರಮಗಳಿಂದಾಗಿ ಯಾರ ಮೇಲೆ ಪರಿಣಾಮವಾಗುತ್ತದೋ ಅವರನ್ನು ಸಂಪರ್ಕಿಸಲು ಸರ್ಕಾರ ತಲೆಕೆಡಿಸಿಕೊಳ್ಳದಿದ್ದ ಕಾರಣದಿಂದ ನಡೆಯುತ್ತಿವೆ. ಕೃಷಿ ಕಾನೂನುಗಳಲ್ಲೂ ಅದೇ ಸಂಭವಿಸಿದೆ. 5000 ಎಕರೆಗಿಂತ ಹೆಚ್ಚು ಭೂಮಿಯನ್ನು ಹೊಂದಿರುವ ಕೆಲವರನ್ನು ಮತ್ತು ಕಾರ್ಪೋರೇಟ್‍ಗಳನ್ನು ಮಾತ್ರ ವಿಶ್ವಾಸಕ್ಕೆ ತೆಗೆದುಕೊಳ್ಳಲಾಗಿದೆ. ಕೃಷಿ ಕಾನೂನುಗಳು ಶೇ. 85 ರಷ್ಟಿರುವ ಅತಿ ಚಿಕ್ಕ ಹಿಡುವಳಿದಾರರಾದ ಭಾರತೀಯ ರೈತರ ವಿರುದ್ಧವಾಗಿದೆ. ಈಗ ಸರ್ಕಾರವು ನಮಗೆ ಸುಳ್ಳು ಆಶ್ವಾಸನೆಗಳನ್ನು ನೀಡುವ ಮೂಲಕ ತನ್ನ ಪಾಪಗಳನ್ನು ಮುಚ್ಚಿಕೊಳ್ಳಲು ಪ್ರಯತ್ನಿಸುತ್ತಿದೆ.



“ಈ ಸರ್ಕಾರವನ್ನು ಬೆತ್ತಲೆಗೊಳಿಸಲು ಎಲ್ಲಾ ಪ್ರಜಾಪ್ರಭುತ್ವವಾದಿ ಚಳುವಳಿಗಳು ಒಟ್ಟಾಗಲು ಈಗ ಸಕಾಲ. ಅವರ ಉದ್ದೇಶಗಳು ಸರಿಯಾಗಿಲ್ಲ, ನಾವಂತೂ ಸತ್ಯವನ್ನೇ ಹೇಳಿದ್ದೇವೆ.” ಸಿ.ಎ.ಎ ಅಥವಾ 370 ಪರಿಚ್ಛೇದ ಅಥವಾ ಬುದ್ಧಿಜೀವಿಗಳ ಸೆರೆವಾಸ ಮುಂತಾದ ವಿಷಯಗಳ ಬಗ್ಗೆ ಮಾತನಾಡುವುದು ಕೃಷಿ ಕಾನೂನುಗಳ ಪ್ರಾಥಮಿಕ ಸಮಸ್ಯೆಯ ಪ್ರಶ್ನೆಯನ್ನು ದುರ್ಬಲಗೊಳಿಸಬಹುದು ಎಂಬ ಭಯವಿದ್ದರೂ “ಬಿಜೆಪಿಯು ಭಾರತೀಯ ಮತದಾರರನ್ನು ದೃವೀಕರಿಸಲು ಈ ಸಮಸ್ಯೆಗಳನ್ನು ಯಶಸ್ವಿಯಾಗಿ ಬಳಸಿದೆ. ರೈತ ಚಳುವಳಿಯನ್ನೂ ಹೀಗೆ ಮಾಡಲು ಬಳಸಬಹುದು. ಆದರೂ ನಾವು ಅಂಜುವುದಿಲ್ಲ. ಈ ಸರ್ಕಾರ ಹೇಗೆ ಬಡವರನ್ನು ದಮನಿಸುತ್ತಿದೆ ಎಂಬುದು ತಿಳಿದಿದೆ. ಇಂದು ನಾವು ರೈತರು ಅದರ ಏಕಪಕ್ಷೀಯ ಕಾರ್ಪೋರೇಟ್ ಪರ ವಿಧಾನದ ಬೆಂಕಿಯ ತೀವ್ರತೆಯನ್ನು ಅನುಭವಿಸುತ್ತಿದ್ದೇವೆ. ನಾಳೆ ಈ ನೋವನ್ನು ಬೇರೊಬ್ಬರು ಅನುಭವಿಸುತ್ತಾರೆ. ಹೀಗಾಗಿ ನಾವು ಒಬ್ಬರಿಗೊಬ್ಬರು ಬೆಂಬಲವಾಗುವ, ಮಾತನಾಡುವ ಸಮಯ ಇದು.” ನಮ್ಮ ಆಂದೋಲನವು ಕೃಷಿ ಕಾನೂನುಗಳಿಗೆ ವಿರುದ್ಧವಾಗಿದೆ ಎಂದು ನಾವು ಸ್ಪಷ್ಟಪಡಿಸಿದಾಗಲೂ ಸರ್ಕಾರ ಮತ್ತು ಪೀತ ಮಾಧ್ಯಮಗಳು ನಮ್ಮನ್ನು ಖಲಿಸ್ತಾನಿಗಳೆಂದು ಚಿತ್ರಿಸಿದವು. ಈಗ ಅವರು ನಮ್ಮನ್ನು ಅರ್ಬನ್ ನಕ್ಸಲ್ಸ್  ಎಂದು ಕರೆಯಬಹುದು. ಆದರೆ ಇವೆಲ್ಲವೂ ಸರಳ ಪ್ರಚಾರ ಎಂದು ರೈತರಿಗೆ ಬಡವರಿಗೆ ತಿಳಿದಿದೆ. ಆದ್ದರಿಂದ ನಾವು ಹೆದರುವುದಿಲ್ಲ.

ಕೃಷಿ ಕಾನೂನುಗಳು ಕೃಷಿಯನ್ನು ಕಾರ್ಪೋರೇಟ್ ಸ್ನೇಹಿಯಾಗಿಸುವ ಸರ್ಕಾರದ ವಿರಾಟ್ ಯೋಜನೆಯ ಪರಿಣಾಮವಾಗಿದೆ. ಈ ಆರ್ಥಿಕ ನೀತಿಯನ್ನು ಮೊದಲು ಅನುಸರಿಸಿದ್ದು ಕಾಂಗ್ರೆಸ್ ಉದಾರೀಕರಣ. ಬಿಜೆಪಿ ಈಗ ಅದನ್ನು ತೀವ್ರಗೊಳಿಸಿದೆ. ನಮ್ಮ ಚಳುವಳಿ ರಾಜಕೀಯವಲ್ಲ ಎಂದು ನಾವು ಹೇಳಿದಾಗ ಅದರರ್ಥ ನಾವು ಯಾವುದೇ ರಾಜಕೀಯ ಪಕ್ಷದೊಂದಿಗೆ ಸಂಬಂಧ ಹೊಂದಿಲ್ಲ ಎಂದು ಮಾತ್ರ. ಆದರೆ ನಾವು ಕೃಷಿಯ ಕಾರ್ಪೋರೇಟೀಕರಣವನ್ನು ವಿರೋಧಿಸುತ್ತೇವೆ ಎಂಬ ಅರ್ಥದಲ್ಲಿ ನಾವು ಖಂಡಿತವಾಗಿಯೂ “ರಾಜಕೀಯ” ಆಗಿದ್ದೇವೆ.

ಇದು ನಮ್ಮ ಭೂಮಿಯ ಪ್ರಶ್ನೆಯಾಗಿದೆ. ಕೃಷಿ ಕಾನೂನುಗಳು ಹೋಗಬೇಕೆಂದು ನಾವು ಬಯಸುತ್ತೇವೆ. ಅದೇ ಸಮಯದಲ್ಲಿ ಸಾರ್ವಜನಿಕ ವಿತರಣಾ ಯೋಜನೆ (ಪಿಡಿಎಸ್) ಹೆಚ್ಚಿನ ವ್ಯಾಪ್ತಿಯನ್ನು ಹೊಂದಬೇಕು ಎಂದೂ ನಾವು ಬಯಸುತ್ತೇವೆ. ಆ ನಿಟ್ಟಿನಲ್ಲಿ ನಾವು ಬಡವರಿಗೆ ನೋವುಂಟುಮಾಡುವ ಇಂತಹ ನೀತಿಗಳನ್ನು ವಿರೋಧಿಸುವ ಎಲ್ಲಾ ಪ್ರಜಾಪ್ರಭುತ್ವವಾದಿ ಗುಂಪುಗಳಿಗೆ ಬೆಂಬಲ ನೀಡುತ್ತೇವೆ ಮತ್ತು ಅವುಗಳ ಬೆಂಬಲವನ್ನು ಪಡೆಯುತ್ತೇವೆ.

ಸರ್ಕಾರವು ಭೂಮಿಯ ಮೇಲಿನ ಎಲ್ಲಾ ಕಾನೂನುಗಳನ್ನೂ ಬಡವರ ವಿರುದ್ಧ ಬಳಸುತ್ತಿದೆ ಎಂಬುದು ನಮಗೆ ಮನದಟ್ಟಾಗಿದೆ. ಯಾವುದೇ ಭಯವಿಲ್ಲದೇ ಎಲ್ಲಾ ನಿಯಮಗಳನ್ನು ಉಲ್ಲಂಘಿಸುತ್ತಿರುವ ಶ್ರೀಮಂತರ ವಿರುದ್ಧ ಅದೇ ಕಾನೂನುಗಳನ್ನು ಬಳಸುವುದಿಲ್ಲ. ತನ್ನನ್ನು ವಿಮರ್ಶಿಸುತ್ತಿರುವ ಜನರ ಬಾಯಿ ಮುಚ್ಚಿಸಲು “ಪಿತೂರಿ” ಆರೋಪ ಮಾಡುತ್ತಿರುವ ಈ ಸರ್ಕಾರವೇ ಪಿತೂರಿ ಮಾಡುತ್ತಿದೆ. ಜನಪರ ಬರಹಗಾರರು ಮತ್ತು ಮಾನವ ಹಕ್ಕುಗಳ ಕಾರ್ಯಕರ್ತರನ್ನು ದಮನಕಾರಿ ವಿಧಾನದಿಂದ ಮೌನವಾಗಿಸಲಾಗಿದೆ. ಅವರ ಪ್ರತಿಭಟನೆಗಳು ನಮ್ಮ ಪ್ರತಿಭಟನೆಯಂತೆಯೇ ಶಾಂತಿಯುತವಾಗಿತ್ತು ಆದರೂ ಅವರನ್ನು ಜೈಲಿಗಟ್ಟಲಾಗಿದೆ. ದೇಶದಲ್ಲಿ ತುರ್ತುಪರಿಸ್ಥಿತಿ ಇದೆ. “ಇಂದಿನ ರೈತರ ಹೋರಾಟ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರದ ಹಕ್ಕುಗಳನ್ನೂ ಬಲಪಡಿಸುತ್ತಿದೆ” ಎಂದರೂ ಜೋಗಿಂದರ್ ಉಗ್ರಹನ್ ಹೇಳಿದರು.
(ದಿ ವೈರ್ ಪತ್ರಿಕೆಯ ವರದಿ)


Wednesday, 4 November 2020

ತುರ್ತುಪರಿಸ್ಥಿತಿಯ ಛಾಯೆಯೂ ಅರ್ನಾಬ್ ಮಾಯೆಯೂನಾ ದಿವಾಕರ

ತುರ್ತುಪರಿಸ್ಥಿತಿಯ ಛಾಯೆಯೂ ಅರ್ನಾಬ್ ಮಾಯೆಯೂ

ನಾ ದಿವಾಕರ

“ಭೂತದ ಬಾಯಲ್ಲಿ ಭಗವದ್ಗೀತೆ,,,,” ಈ ಗಾದೆ ಮಾತಿಗೆ ಭಾರತವೇ ಜನ್ಮಭೂಮಿ. ಕರ್ಮಭೂಮಿಯೂ ಹೌದು. ಈ ಗಾದೆಯ ಅರ್ಥ ಏನು ಎಂದು ಕೇಳುವವರಿಗೆ ಭಾರತದ ರಾಜಕಾರಣಿಗಳ ಭಾಷಣ, ಹೇಳಿಕೆಗಳನ್ನು ಕೇಳುವಂತೆ ಸಲಹೆ ನೀಡಿದರೆ ಸಾಕು. ಅರ್ಥವಾಗಿಬಿಡುತ್ತದೆ. ಕಳೆದ ಆರು ವರ್ಷಗಳಲ್ಲಿ ಪ್ರಜಾತಂತ್ರ ಮೌಲ್ಯಗಳನ್ನು ಹಿಮಾಲಯದೆತ್ತರದಲ್ಲಿಟ್ಟು ವಿಶ್ವಮಾನ್ಯತೆ ಪಡೆದಿದ್ದ ಭಾರತದ ಆಡಳಿತ ವ್ಯವಸ್ಥೆ, ನ್ಯಾಯ ವ್ಯವಸ್ಥೆ ಮತ್ತು ಪ್ರಭುತ್ವಕ್ಕೆ ಇಂದು 1975ರ ಕರಾಳ ಛಾಯೆ ಆವರಿಸಿದಂತೆ ಕಾಣುತ್ತಿದೆ !!! ಈ ಹಿನ್ನೆಲೆಯಲ್ಲೇ ಮೇಲಿನ ಗಾದೆ ಮಾತು ಸಹ ನೆನಪಾಗುತ್ತಿದೆ.

ಜನಸಾಮಾನ್ಯರ ಪರಿಭಾಷೆಯಲ್ಲಿ ಬಚ್ಚಲುಬಾಯಿ ಎಂಬ ಪದವನ್ನು ಬಳಸುವುದನ್ನು ಕೇಳಿದ್ದೇವೆ. ಇತ್ತೀಚೆಗೆ ಈ ಬಚ್ಚಲು ಬಾಯಿ ಎಂಬ ಪದದ ಅರ್ಥವನ್ನೂ ನಮ್ಮ ರಾಜಕೀಯ ನಾಯಕರುಗಳು ಮನವರಿಕೆ ಮಾಡಿಕೊಟ್ಟಿದ್ದಾರೆ. ಭಾರತ ಸ್ವಚ್ಚವಾಗುತ್ತಿದೆ ಆದರೆ ಅಧಿಕಾರ ರಾಜಕಾರಣದ ವಾರಸುದಾರರ, ಜನಪ್ರತಿನಿಧಿಗಳ ಬಚ್ಚಲು ಬಾಯಿ ಸಂಸ್ಕøತಿಯಿಂದ ಸಮಸ್ತ ಭಾರತವೇ ಕೊಳಕು ಎನಿಸುತ್ತಿದೆ. ಬಹುಶಃ ಅಮೆರಿಕ ಅಧ್ಯಕ್ಷ ಟ್ರಂಪ್ ಭಾರತವನ್ನು ಕೊಳಕು ಎಂದಾಗ ಇದೂ ಅವರ ಮನಸಿನಲ್ಲಿದ್ದಿರಬಹುದು ಈ ಹೊಲಸು ರಾಜಕಾರಣದ ಆಂತರಿಕ ಮಾಲಿನ್ಯವನ್ನು, ಬಾಹ್ಯ ಸ್ವರೂಪದ ತ್ಯಾಜ್ಯವನ್ನು ಹೊರಹಾಕಿ, ಪ್ರಜೆಗಳಲ್ಲಿ ಪ್ರಜಾತಂತ್ರ ಮೌಲ್ಯಗಳ ಬಗ್ಗೆ ಸುಪ್ರಜ್ಞೆ ಮೂಡಿಸುವ ಗುರುತರ ಜವಾಬ್ದಾರಿ ಮಾಧ್ಯಮಗಳ ಮೇಲಿದೆ. ಡಿಜಿಟಲ್ ಯುಗದಲ್ಲಿ ಇದು ವಿದ್ಯುನ್ಮಾನ ಸುದ್ದಿಮನೆಗಳ ಆದ್ಯತೆಯೂ ಆಗಬೇಕಿದೆ.

ಇಂತಹ ಒಂದು ಪ್ರಯತ್ನಕ್ಕೆ ಅವಕಾಶವನ್ನೂ ನೀಡದಂತೆ ಮಾಧ್ಯಮ ಜಗತ್ತನ್ನೇ ಘನತ್ಯಾಜ್ಯ ಶಿಖರವನ್ನಾಗಿ ಮಾಡುವುದರಲ್ಲಿ ತಮ್ಮದೇ ಆದ ಕೊಡುಗೆ ಸಲ್ಲಿಸಿರುವ ಸುದ್ದಿವಾಹಿನಿಯ ಸಂಪಾದಕ ಅರ್ನಾಬ್ ಗೋಸ್ವಾಮಿ ಇಂದು ಮುಂಬೈ ಪೊಲೀಸರಿಂದ ಬಂಧನಕ್ಕೊಳಗಾಗಿದ್ದಾರೆ. ಮುಂಜಾನೆಯ ಹೊತ್ತಿನಲ್ಲಿ, ಯಾವುದೇ ಪೂರ್ವ ಸೂಚನೆ ಇಲ್ಲದೆ, ಏಕಾಏಕಿ ಮನೆಗೆ ನುಗ್ಗಿ, ಮೂರು ವರ್ಷದ ಹಿಂದಿನ ಆತ್ಮಹತ್ಯೆ ಪ್ರಕರಣವೊಂದರ ಹಿನ್ನೆಲೆಯಲ್ಲಿ ಅರ್ನಾಬ್ ಗೋಸ್ವಾಮಿಯನ್ನು ಬಂಧಿಸಿರುವ ರೀತಿ ಒಪ್ಪುವಂತಹುದಲ್ಲ.   
ಟಿ ಆರ್ ಪಿ  ಹಗರಣದಲ್ಲಿ ಗೋಸ್ವಾಮಿಯ ವಿರುದ್ಧ ಗುರುತರ ಆರೋಪಗಳು ಇರುವುದನ್ನೂ ಮರೆಯುವಂತಿಲ್ಲ. ಆದರೆ ಇಂದಿನ ಘಟನೆ ಮುಂಬೈ ಪೊಲೀಸರ ಉದ್ಧಟತನ, ಮಹಾರಾಷ್ಟ್ರ ಸರ್ಕಾರದ ಪ್ರಜಾತಂತ್ರ ವಿರೋಧಿ ಧೋರಣೆಯ ಸಂಕೇತ.

ನಿಜ, ಆದರೆ ಹೀಗೆ ಹೇಳುವ ನೈತಿಕ ಹಕ್ಕು ಮತ್ತು ಹೊಣೆಗಾರಿಕೆ ಇರುವ ರಾಜಕೀಯ ನಾಯಕರು ನಮ್ಮ ನಡುವೆ ಇದ್ದಾರೆಯೇ ? ಗೋಸ್ವಾಮಿಯ ಬಂಧನದ ನಂತರ ರಿಪಬ್ಲಿಕ್ ವಾಹಿನಿಯ ನಿರೂಪಕರು ವಾಕ್ ಸ್ವಾತಂತ್ರ್ಯದ ಬಗ್ಗೆ ಮಾತನಾಡುತ್ತಿದ್ದುದನ್ನು ( ಸುದ್ದಿಮನೆಯ ಕೂಗುಮಾರಿ ಪರಿಭಾಷೆಯಲ್ಲಿ ಅರಚುತ್ತಿದ್ದುದು ಎಂದು ಓದಿಕೊಳ್ಳಬಹುದು) ಕಂಡು “ ಭೂತದ,,,,,” ಗಾದೆ ನೆನಪಾಯಿತು. ಈ ಗಾದೆಯ ಬಗ್ಗೆಯೇ ಅಸಹ್ಯ ಬರುವಂತಾಗಿದ್ದು ಕೆಲವು ಕೇಂದ್ರ ಬಿಜೆಪಿ ಸಚಿವರ ಟ್ವಿಟರ್ ಸಂದೇಶಗಳನ್ನು ಕಂಡು. 

ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ “ ಹಿರಿಯ ಪತ್ರಕರ್ತ ಅರ್ನಾಬ್ ಗೋಸ್ವಾಮಿಯ ಬಂಧನ ಖಂಡನಾರ್ಹವಾಗಿದ್ದು, ಚಿಂತೆಗೀಡುಮಾಡುವ ವಿಚಾರವಾಗಿದೆ. ನಾವು 1975ರ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಪತ್ರಿಕಾ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದೆವು ”
ಕೇಂದ್ರ ಗೃಹ ಸಚಿವ ಅಮಿತ್‍ಶಾ “ ಅರ್ನಾಬ್ ಗೋಸ್ವಾಮಿಯನ್ನು ಬಂಧಿಸುವ ಮೂಲಕ ಕಾಂಗ್ರೆಸ್ ಮತ್ತು ಮಿತ್ರ ಪಕ್ಷಗಳು ಪ್ರಜಾತಂತ್ರಕ್ಕೆ ಅವಮಾನ ಮಾಡಿವೆ. ರಿಪಬ್ಲಿಕ್ ಟಿವಿ ವಿರುದ್ಧ ಅಧಿಕಾರ ದುರುಪಯೋಗ ಮಾಡಿದೆ. ವ್ಯಕ್ತಿಗತ ಸ್ವಾತಂತ್ರ್ಯ ಮತ್ತು ಪ್ರಜಾತಂತ್ರ ವ್ಯವಸ್ಥೆಯ ನಾಲ್ಕನೆಯ ಸ್ತಂಭದ ಮೇಲೆ ಆಕ್ರಮಣ ನಡೆಸುವ ಮೂಲಕ ತುರ್ತುಪರಿಸ್ಥಿತಿಯನ್ನು ನೆನಪಿಸಿದೆ ”.
ಕೇಂದ್ರ ಮಾಹಿತಿ ಮತ್ತು ಪ್ರಸರಣ ಸಚಿವ ಪ್ರಕಾಶ್ ಜಾವಢೇಕರ್ “ ಮಹಾರಾಷ್ಟ್ರದಲ್ಲಿ ಪತ್ರಿಕಾ ಸ್ವಾತಂತ್ರ್ಯದ ಮೇಲೆ ನಡೆದಿರುವ ಆಕ್ರಮಣವನ್ನು ನಾವು ಖಂಡಿಸುತ್ತೇವೆ. ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಇದೇ ರೀತಿ ನಡೆಯುತ್ತಿದ್ದುದನ್ನು ಇದು ನೆನಪಿಸುತ್ತದೆ.”

ಈ ಮೂರೂ ಅಣಿಮುತ್ತುಗಳನ್ನು ಕೇಳಿಸಿಕೊಳ್ಳುವ ಕಿವಿಗಳೇ ಧನ್ಯ ಅಲ್ಲವೇ ? ನಿಜ, ಮಹಾರಾಷ್ಟ್ರ ಪೊಲೀಸರ ನಡೆ ಅಕ್ಷಮ್ಯ, ಸರ್ಕಾರದ ಧೋರಣೆ ಖಂಡನಾರ್ಹ ಆದರೆ ಶಿವಸೇನೆ ಪಳಗಿರುವ ಗರಡಿಯಲ್ಲೇ ಈ ಮೂವರೂ ನಾಯಕರು ಪಳಗಿರುವುದಲ್ಲವೇ ? ಅರ್ನಾಬ್ ಗೋಸ್ವಾಮಿಯ ವಿರುದ್ಧ ಗಂಭೀರ ಆರೋಪಗಳು ಇದ್ದುದೇ ಆದಲ್ಲಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬಹುದಿತ್ತು. ಆದರೆ ಇದು ಶಿವಸೇನೆಯ ಸಂಸ್ಕೃತಿಗೆ ಹೊರತಾದದ್ದು ಎನ್ನುವುದನ್ನು ಬಿಜೆಪಿ ನಾಯಕರು ಮರೆತಿದ್ದಾರೆಯೇ ? ಇಂದು ಶಿವಸೇನೆ ಕಾಂಗ್ರೆಸ್ ಬಾಹುಗಳಲ್ಲಿದೆ. ಆದರೆ ಹುಟ್ಟಿದ ದಿನದಿಂದಲೂ ಬೆಳೆದಿದ್ದು ಸಂಘಪರಿವಾರದ ಮಡಿಲಲ್ಲೇ           ಅಲ್ಲವೇ ? 

ಈ ಗೋಸುಂಬೆಗಳನ್ನು ಬದಿಗಿಟ್ಟು ಭಾರತದ ಪ್ರಸ್ತುತ ಸನ್ನಿವೇಶವನ್ನು ಒಮ್ಮೆ ಗಮನಿಸೋಣ. ಇತ್ತೀಚೆಗೆ ತಾನೇ ಕರ್ನಾಟಕದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮಗನ ವಿರುದ್ಧ ಭ್ರಷ್ಟಾಚಾರದ ಆರೋಪ ಹೊರಿಸಿದ್ದ ಪವರ್ ಟಿವಿ ವಾಹಿನಿಯನ್ನು ಮಾನ್ಯ ಮುಖ್ಯಮಂತ್ರಿಯವರು ಮುಚ್ಚಿಸಿಬಿಟ್ಟರು. ಈಗ ಮತ್ತೊಂದು ಹೆಸರಿನಲ್ಲಿ ಆರಂಭವಾಗಿದ್ದರೂ ಬಾಯಿ ಮುಚ್ಚಿಸಿದಂತೆ ಕಾಣುತ್ತಿದೆ. ಮಾಧ್ಯಮ ಸ್ವಾತಂತ್ರ್ಯ, ವಾಕ್ ಸ್ವಾತಂತ್ರ್ಯ, ಪತ್ರಿಕಾ ಸ್ವಾತಂತ್ರ್ಯ ಇವೆಲ್ಲವನ್ನೂ ಗೌರವಿಸುತ್ತಲೇ ಅರ್ನಾಬ್ ಅವರನ್ನು ಬಂಧಿಸಿದ ರೀತಿಯನ್ನು ಖಂಡಿಸೋಣ. ಆದರೆ ದೇಶಾದ್ಯಂತ ಪತ್ರಕರ್ತರ ವಿರುದ್ಧ ರಣಬೇಟೆಯಾಡಿದ ಕೇಂದ್ರ ಸರ್ಕಾರದ ಕ್ರಮಗಳನ್ನು ಮೇಜು ಕುಟ್ಟಿ ಸ್ವಾಗತಿಸುತ್ತಾ ಭಟ್ಟಂಗಿಯಂತೆ ಪ್ರಭುತ್ವದ ಹೆಜ್ಜೆಗೆ ಗೆಜ್ಜೆಯಾಗಿ, ತಮ್ಮ ಪತ್ರಿಕಾ ವೃತ್ತಿಧರ್ಮವನ್ನೂ ಮರೆತು ವರ್ತಿಸಿದ ಅರ್ನಾಬ್ ಗೋಸ್ವಾಮಿಯಾಗಲೀ ಅಥವಾ ಇತರ ಬಿಜೆಪಿ ನಾಯಕರಾಗಲೀ ಈ ಪ್ರಕರಣದ ಬಗ್ಗೆ ಕನಿಷ್ಟ ಮಾತನಾಡುವ ನೈತಿಕತೆಯನ್ನು ಉಳಿಸಿಕೊಂಡಿದ್ದಾರೆಯೇ ? ನಮ್ಮನ್ನೇ ಪ್ರಶ್ನಿಸಿಕೊಳ್ಳೋಣ.

ಅರ್ನಾಬ್ ಗೋಸ್ವಾಮಿಯನ್ನು ಮೂರು ವರ್ಷದ ಹಿಂದಿನ ಆತ್ಮಹತ್ಯೆಯ ಪ್ರಕರಣದ ಹಿನ್ನೆಲೆಯಲ್ಲಿ ಬಂಧಿಸಿರುವುದೇ ಮಹಾರಾಷ್ಟ್ರ ಸರ್ಕಾರದ ಘೋರ ಅಪರಾಧ ಎಂದಾದರೆ, ಸುಮ್ಮನೆ ಗುಜರಾತ್‍ನ ಹಿರಿಯ ಅಧಿಕಾರಿ ಸಂಜೀವ್ ಭಟ್ ಅವರನ್ನು ನೆನೆಯಿರಿ. ಮೂವತ್ತು ವರ್ಷದ ಹಿಂದಿನ , ಮುಚ್ಚಿಹೋಗಿದ್ದ ಪ್ರಕರಣದ ಕಡತವನ್ನು ಹೆಕ್ಕಿ ತೆಗೆದು ಅವರನ್ನು ಬಂಧಿಸಿದಾಗ ಭಾರತದ ಎಷ್ಟು ಸುದ್ದಿಮನೆಗಳು ವಿರೋಧಿಸಿದ್ದವು ? ಮಾನ್ಯ ಗೋಸ್ವಾಮಿ ಎಲ್ಲಿದ್ದರು ಸ್ವಾಮಿ ? ಭಾರತದ ಜನಸಾಮಾನ್ಯರು ಮಾಸ್ಕ್ ಧರಿಸುತ್ತಿರುವುದು ಕೊರೋನಾ ಬಂದ ನಂತರ. ಭಾರತದ ಬಹುತೇಕ ಸುದ್ದಿಮಾಧ್ಯಮಗಳು 2014ರಿಂದಲೇ ಮಾಸ್ಕ್ ಧರಿಸಲಾರಂಭಿಸಿವೆ. 

ಸ್ವತಂತ್ರ ಭಾರತದ ಕಾನೂನು ವ್ಯವಸ್ಥೆಯಲ್ಲಿ ಎಫ್‍ಐಆರ್ ಎಂಬ ಪದ ಜನಸಾಮಾನ್ಯರ ಅರಿವಿಗೆ ನಿಲುಕದಷ್ಟು ಅಪರೂಪವಾಗಿತ್ತು. ಯಾವುದೋ ಗಂಭೀರ ಅಪರಾಧಗಳಲ್ಲಿ ಮಾತ್ರ ಈ ಪದ ಕೇಳಿಬರುತ್ತಿತ್ತು. ಆದರೆ ಕಳೆದ ಆರು ವರ್ಷಗಳಲ್ಲಿ ಎಫ್‍ಐಆರ್ ಎನ್ನುವುದು ಸಂತೆಯಲ್ಲಿನ ಸರಕಿನಂತೆ ಕಾಣುತ್ತಿದೆ. ದೇಶದ್ರೋಹದ ಆರೋಪ ಮತ್ತು ಎಫ್‍ಐಆರ್ ಅಧಿಕಾರಸ್ಥರ ಬತ್ತಳಿಕೆಯಲ್ಲಿರುವ ಸುಲಭ ಅಸ್ತ್ರಗಳಾಗಿರುವುದರಿಂದಲೇ ಕೊರೋನಾ ಸಂದರ್ಭದಲ್ಲೇ 55 ಪತ್ರಕರ್ತರ ವಿರುದ್ಧ 22 ಎಫ್‍ಐಆರ್ ದಾಖಲಿಸಲಾಗಿದೆ. ಮಾರ್ಚ್ 25 ರಿಂದ ಜೂನ್ 30ರ ಅವಧಿಯಲ್ಲಿ ಕೋವಿದ್19 ವರದಿಗಳಿಗೆ ಸಂಬಂಧಪಟ್ಟಂತೆ ಇಷ್ಟು ಎಫ್‍ಐಆರ್‍ ಗಳನ್ನು ಪತ್ರಕರ್ತರ ವಿರುದ್ಧ ದಾಖಲಿಸಲಾಗಿದೆ.

ದ ವೈರ್ ಪತ್ರಿಕೆಯ ಸಿದ್ಧಾರ್ಥ ವರದರಾಜನ್, ವಿನೋದ್ ದುವಾ, ಅಮ್ನೆಸ್ಟಿ ಇಂಟರ್‍ನ್ಯಾಷನಲ್ ಸಂಸ್ಥೆಯ ಮಾಜಿ ನಿರ್ದೇಶಕ ಮತ್ತು ಅಂಕಣಕಾರ ಆಕರ್ ಪಟೇಲ್, ಸ್ಕ್ರೋಲ್ ಪತ್ರಿಕೆಯ ಸುಪ್ರಿಯಾ ಶರ್ಮ ಇವರು ಕೇಂದ್ರ ಸರ್ಕಾರದ ಪ್ರಹಾರಕ್ಕೆ ಬಲಿಯಾಗುತ್ತಿದ್ದಾರೆ. ಸುಪ್ರಿಯಾ ಶರ್ಮ ಅವರ ಅಪರಾಧ ಏನು ಗೊತ್ತೇ ? ಪ್ರಧಾನಮಂತ್ರಿ ಮೋದಿ ಸಂಸದ್ ಆದರ್ಶ ಗ್ರಾಮ ಯೋಜನೆಯಡಿ ದತ್ತುಪಡೆದಿರುವ ವಾರಣಾಸಿಯ ದೊಹಾರಿ ಗ್ರಾಮದಲ್ಲಿನ ಜನಜೀವನವನ್ನು ತೆರೆದಿಟ್ಟಿದ್ದು. ಉತ್ತರಪ್ರದೇಶದಲ್ಲಿ ಮಧ್ಯಾಹ್ನದ ಬಿಸಿಯೂಟದಲ್ಲಿ ಕಳಪೆ ಆಹಾರ ನೀಡಲಾಗುತ್ತಿದೆ ಎಂದು ವರದಿ ಮಾಡಿದ್ದ ಪವನ್ ಕುಮಾರ್ ಜೈಸ್ವಾಲ್ ಮತ್ತೋರ್ವ ಎಫ್‍ಐಆರ್ ಬಲಿ. ಕೊರೋನಾ ಸಂದರ್ಭದಲ್ಲಿ ಮಹಾರಾಷ್ಟ್ರದ ವಲಸೆ ಕಾರ್ಮಿಕರ ಸಮಸ್ಯೆಗೆ ಕೋಮು ಬಣ್ಣ ನೀಡಿದ್ದ ಅರ್ನಾಬ್ ವಿರುದ್ಧ ದಾಖಲಿಸಿದ್ದ ಎಫ್‍ಐಆರ್ ಮುಂಬೈ ಹೈಕೋರ್ಟ್ ಕೃಪೆಯಿಂದ ರದ್ದಾಗಿದೆ. ಸೂಫಿ ಸಂತ ಮೊಯಿನುದ್ದಿನ್ ಕ್ರಿಸ್ಟಿಯನ್ನು ದರೋಡೆಕೋರ ಎಂದು ಅವಮಾನಿಸಿದ ಅಮೀಶ್ ದೇವಗನ್ ಸಹ ಕೋರ್ಟ್ ಕೃಪೆಗೆ ಪಾತ್ರರಾಗಿದ್ದಾರೆ. ಆದರೆ ತಮ್ಮ ಪತ್ರಿಕಾ ಧರ್ಮ ಪಾಲಿಸುತ್ತಾ ಜನಸಾಮಾನ್ಯರಿಗೆ ಸತ್ಯ ಹೇಳುವ ಆಕರ್ ಪಟೇಲ್, ವಿನೋದ್ ದುವಾ ಪೊಲೀಸ್ ಠಾಣೆಗೆ ಅಲೆಯುತ್ತಿದ್ದಾರೆ. 

ಅರ್ನಾಬ್ ಗೋಸ್ವಾಮಿ ಬಂಧನದ ವೈಖರಿಯನ್ನು ಖಂಡಿಸೋಣ. ಬಂಧನಕ್ಕೆ ಕಾರಣಗಳಿದ್ದರೆ ಬಿಡುಗಡೆಗೂ ಕಾರಣಗಳಿರುತ್ತವೆ. ಎಲ್ಲವೂ ಅಧಿಕಾರ ಪೀಠದ ಕೃಪೆಯನ್ನು ಆಧರಿಸಿರುತ್ತದೆ. ಯಾವುದೇ ಆರೋಪ ಇಲ್ಲದೆ, ವಾರಂಟ್ ಇಲ್ಲದೆ, ಏಕಾಏಕಿ ಬಂಧಿಸುವುದು ಘೋರ ಅಪರಾಧವೇನೋ ಹೌದು. ಇದು ಕಾನೂನು, ಸಂವಿಧಾನ, ಪೊಲೀಸ್ ನಿಯಮಾವಳಿ ಮತ್ತು ವಾಕ್ ಸ್ವಾತಂತ್ರ್ಯಕ್ಕೆ ಮಾನ್ಯತೆ ನೀಡುವವರಿಗೆ ಅನ್ವಯಿಸುವ ಮಾತು. ಭೀಮಾ ಕೊರೆಗಾಂವ್ ಪ್ರಕರಣದ ಹಿನ್ನೆಲೆಯಲ್ಲಿ ಆನಂದ್ ತೇಲ್ತುಂಬ್ಡೆಯವರನ್ನು ಬಂಧಿಸಿದ ರೀತಿ ಜಗಜ್ಜಾಹೀರಾಗಿದೆ. ಈ ಬಂಧನದ ಸಮಯದಲ್ಲಿ ಗೋಸ್ವಾಮಿಯವರ ಕೂಗುಮಾರಿ ಸುದ್ದಿವಾಚನವನ್ನು  ಪ್ರಜ್ಞೆ ಇರುವವರು ಮರೆತಿರಲಾರರು. ಇತ್ತೀಚೆಗೆ 83ರ ವೃದ್ಧ, ಸಾಮಾಜಿಕ ಕಾರ್ಯಕರ್ತರಾದ ಸ್ಟಾನ್ ಸ್ವಾಮಿಯವರನ್ನು ಬಂಧಿಸಿದಾಗ, ಸುಧಾ ಭರದ್ವಾಜ್, ವರಾವರರಾವ್, ಉಮರ್ ಖಲೀದ್, ಗರ್ಭಿಣಿ ಮಹಿಳೆ ಸಫೂರ ಜರ್ಗರ್ ಅವರನ್ನು ಬಂಧಿಸಿದಾಗ ಗೋಸ್ವಾಮಿಯಾಗಲೀ, ತುರ್ತುಪರಿಸ್ಥಿತಿಯಲ್ಲಿ ಹೋರಾಡಿದ, ಇಂದಿನ ಟ್ವಿಟರ್ ವೀರರಾಗಲೀ ಖಂಡಿಸಿದ್ದರೇ ? ಪ್ರಭುತ್ವ ಅಥವಾ ಆಡಳಿತ ವ್ಯವಸ್ಥೆಯ ಒಂದು ಅಂಗ ಯಾರನ್ನೋ ನಗರ ನಕ್ಸಲರು ಎಂದು ಹೇಳಿಬಿಟ್ಟರೆ ಅವರನ್ನು ಯಾವ ಹೊತ್ತಿನಲ್ಲಾದರೂ, ಯಾವ ರೀತಿಯಲ್ಲಾದರೂ ಬಂಧಿಸಬಹುದು ಎಂದು ಸಂವಿಧಾನದಲ್ಲಿ                 ಹೇಳಲಾಗಿದೆಯೇ ? 

ಇದು ವ್ಯಕ್ತಿ ಅಥವಾ ಸಂಸ್ಥೆಯ ಪ್ರಶ್ನೆಯಲ್ಲ. ಮೌಲ್ಯಗಳ ಪ್ರಶ್ನೆ. ಗೋಸ್ವಾಮಿ ಯಾವ ಮೌಲ್ಯಗಳನ್ನು ಪ್ರತಿನಿಧಿಸುತ್ತಾರೆ, ಪ್ರತಿನಿಧಿಸುತ್ತಿದ್ದಾರೆ ? ಇವರನ್ನೇ ಅನುಕರಿಸಿ, ಅನುಸರಿಸುವ ಕನ್ನಡದ ಕೂಗುಮಾರಿ ಸುದ್ದಿಮನೆಗಳು ಯಾವ ಸಂಸ್ಕೃತಿಯನ್ನು ಅನುಸರಿಸುತ್ತಿವೆ ? ತುರ್ತುಪರಿಸ್ಥಿತಿಯಲ್ಲಿ ತಾವು ಪ್ರಜಾತಂತ್ರದ ಉಳಿವಿಗಾಗಿ ನಡೆಸಿದ ಹೋರಾಟವನ್ನು ಹೆಮ್ಮೆಯಿಂದ ನೆನೆಯುವ ಸಚಿವರು, ರಾಜಕೀಯ ನಾಯಕರು ಯಾವ ಸಂಸ್ಕೃತಿ ಅನುಸರಿಸುತ್ತಿದ್ದಾರೆ ? ಓರ್ವ ಗೋಸ್ವಾಮಿಯ ಬಂಧನದಿಂದ ತುರ್ತುಪರಿಸ್ಥಿತಿಯ ಛಾಯೆ ಕವಿದಂತೆ ಭಾವಿಸುವ ಕೇಂದ್ರ ಸಚಿವರಿಗೆ ಒಂದು ವರ್ಷದ ಕಾಲ ಗೃಹಬಂಧನದಲ್ಲಿದ್ದ ಕಾಶ್ಮೀರದ ಸಮಸ್ತ ಜನತೆ ಹೇಗೆ ಕಂಡಿದ್ದರು ? ಯಾವುದೇ ಅಪರಾಧ ಮಾಡದಿದ್ದರೂ ಸೆರೆಮನೆಯಲ್ಲಿರುವ ಹೋರಾಟಗಾರರು, ಸಾಮಾಜಿಕ ಕಾರ್ಯಕರ್ತರು, ಪತ್ರಕರ್ತರು ಹೇಗೆ ಕಾಣುತ್ತಿದ್ದಾರೆ ? ನಡೆದಾಡುವ ಸ್ಥಿತಿಯಲ್ಲೂ ಇಲ್ಲದ ಸಾಯಿಬಾಬಾ ಅವರಂತಹ ವಿದ್ವಾಂಸರನ್ನು ಉಗ್ರಗಾಮಿ ಚಟುವಟಿಕೆಗಳ ಆರೋಪದ ಮೇಲೆ ಬಂಧಿಸಿ, ಜಾಮೀನು ಸಹ ನೀಡದೆ ಇರುವ ಆಡಳಿತ ವ್ಯವಸ್ಥೆಗೆ ಮತ್ತು ಅಧಿಕಾರಪೀಠದ ವಾರಸುದಾರರಿಗೆ ಗೋಸ್ವಾಮಿಯ ಬಂಧನ ತುರ್ತುಪರಿಸ್ಥಿತಿಯನ್ನು ನೆನಪಿಸುವುದೆಂದರೆ, ಭಾರತ ಮೌಲಿಕವಾಗಿ, ನೈತಿಕವಾಗಿ ಹಾದಿ ತಪ್ಪಿದೆ ಎಂದು ಒಪ್ಪಿಕೊಳ್ಳಲೇಬೇಕಾಗುತ್ತದೆ. 

“ ಬಂಧಿಸಲಿ ಬಿಡಿ, ತಪ್ಪು ಮಾಡದಿದ್ದರೆ ಬಿಡುಗಡೆಯಾಗುತ್ತಾರೆ,,,,,” ಮಧ್ಯಮ ವರ್ಗಗಳ ಹಿತವಲಯದಲ್ಲಿ, ಬೌದ್ಧಿಕ ವಲಯದಲ್ಲಿ, ಬುದ್ಧಿಜೀವಿಗಳಲ್ಲದವರಲ್ಲಿ ಮತ್ತು ವಂದಿಮಾಗಧ ಸುದ್ದಿಮನೆಗಳಲ್ಲಿ ಕೇಳಿಬರುವ ಈ ಹೇಳಿಕೆ ಅರ್ನಾಬ್ ಗೋಸ್ವಾಮಿಗೂ ಅನ್ವಯಿಸುತ್ತದೆ. ಅವರಿಗೆ ಪ್ರಭುತ್ವವೂ ನೆರವಾಗಬಹುದು, ನ್ಯಾಯಾಂಗವೂ ನೆರವಾಗಬಹುದು. ಇಂದಿನ ಭಾರತ ಕೇವಲ ಸಾಂವಿಧಾನಿಕ ಮೌಲ್ಯಗಳನ್ನು ಮಾತ್ರ ಕಳೆದುಕೊಳ್ಳುತ್ತಿಲ್ಲ, ಪ್ರಜಾತಂತ್ರ ಮೌಲ್ಯಗಳನ್ನೂ ಕಳೆದುಕೊಂಡಿದೆ. ಈ ಪ್ರಜ್ಞೆ ತಮ್ಮೊಳಗಿದ್ದು, ತಾವು ಪ್ರತಿನಿಧಿಸುವ  “ಪತ್ರಿಕೋದ್ಯಮ ಅಥವಾ ಮಾಧ್ಯಮ ” ಎನ್ನುವ ಮೌಲ್ಯಯುತ ಸ್ತಂಭಕ್ಕೆ ಬದ್ಧತೆಯಿಂದ ನಡೆದುಕೊಂಡಿದ್ದರೆ ಬಹುಶಃ ಅರ್ನಾಬ್ ಗೋಸ್ವಾಮಿ ಜನತೆಯ ಅನುಕಂಪಕ್ಕೆ ಅರ್ಹರಾಗುತ್ತಿದ್ದರೇನೋ !

ನೆನ್ನೆ ಬಿಜೆಪಿ-ಶಿವಸೇನೆ ಮಾಡಿರುವುದನ್ನೇ ಇಂದು ಶಿವಸೇನೆ-ಕಾಂಗ್ರೆಸ್ ಸರ್ಕಾರ ಮಾಡಿದೆ. ಇದು ಒಂದು ಸರ್ಕಾರ ಅಥವಾ ಒಬ್ಬ ಮುಖ್ಯಮಂತ್ರಿಯ ಪ್ರಶ್ನೆಯಲ್ಲ.. ಮೌಲ್ಯಗಳ ಪ್ರಶ್ನೆ. ಮೌಲ್ಯ ಎಂದರೇನು ? ಇದು ಇಂದಿನ ಸಂದರ್ಭದಲ್ಲಿ ಕಾಡಬೇಕಾದ ಗಹನವಾದ ಪ್ರಶ್ನೆ.
-0-0-0-