Thursday 24 August 2017

ಶಾಂತಾರಾಮ ನಾಯಕ ಹಿಚ್ಕಡ ಅವರ ‘ಕತೆಯಾದಳು ಗಂಗೆ

                                                                        ಪ್ರಕಾಶಕರ ಮಾತು

ಜಿಲ್ಲೆಯ ಸಾಂಸ್ಕøತಿಕ ಪ್ರಜ್ಞೆಯಾದಶಾಂತಾರಾಮ ನಾಯಕ ಹಿಚ್ಕಡ ಅವರ ‘ಕತೆಯಾದಳು ಗಂಗೆ’ ಕಥಾ ಸಂಕಲನವನ್ನು ಬಂಡಾಯ ಪ್ರಕಾಶನದ ಡಾ. ಆರ್.ವಿ. ಭಂಡಾರಿ ನೆನಪಿನ ಪುಸ್ತಕ ಮಾಲೆಯಲ್ಲಿ ತರುತ್ತಿರುವುದು ಪ್ರಕಾಶನಕ್ಕೆ ತುಂಬಾ ಖುಷಿಯ ಸಂಗತಿ; ಮಾತ್ರವಲ್ಲ ಅದೊಂದು ಧನ್ಯತೆಯ ಕ್ಷಣ ಎಂದು ಕೊಂಡಿದ್ದೇನೆ. ಅವರು ನನ್ನ ತಂದೆಯ ಸ್ನೇಹಗಣದವರು. ತಲೆಮಾರಿನ ಅಂತರವನ್ನು ಮೀರಿ ತೀರಾ ಸಣ್ಣವನಾದ ನನ್ನೊಂದಿಗೂ ವೈಚಾರಿಕ ಮತ್ತು ಭಾವನಾತ್ಮಕ ಸ್ನೇಹವನ್ನು ಉಳಿಸಿಕೊಂಡಿರುವ ಅವರ ಹೃದಯ ಶ್ರೀಮಂತಿಕೆಗೆ ಕೈಜೋಡಿಸಲೇ ಬೇಕು. 
ಶಿಕ್ಷಣ, ಸಹಕಾರ, ಸಾಹಿತ್ಯ ಹಾಗೂ ಪ್ರಕಾಶನ ಕ್ಷೇತ್ರಗಳಲ್ಲಿ ತಣ್ಣನೆ ತೊಡಗಿಸಿಕೊಂಡಿರುವ ಶಾಂತಾರಾಮ ನಾಯಕ ಎಂದೂ ಪದವಿಯ ಬೆನ್ನು ಹತ್ತಿದವರಲ್ಲ. ಸಾಹಿತ್ಯ ಸಮ್ಮೇಳನ ಅಧ್ಯಕ್ಷತೆ ವಹಿಸಿಕೊಳ್ಳುವಂತೆ ಕೇಳಿಕೊಂಡಾಗ (ಈಗ ತಾವೇ ಕೇಳಿ ಪಡೆಯುವ ಸ್ಥಿತಿ ಇದೆ.) ಕೂಡ ನಯವಾಗಿಯೇ ನಿರಾಕರಿಸಿ ಹೊಸ ತಲೆಮಾರಿನವರಿಗೆ ಅವಕಾಶ ಮಾಡಿಕೊಟ್ಟರು. ತಾವು ಕಟ್ಟ ಬಯಸಿದ ಸಮಾಜ ಇನ್ನೂ ರೂಪಿತ ಆಗದಿರುವ ಬಗ್ಗೆ ವಿಷಾದ ತುಂಬಿದ ಅವರ ಶಿಕ್ಷಕ ಮನಸ್ಸು ಈಗಲೂ ಬದಲಾವಣೆ ಬಯಸಿ ನಡೆವ ಚಳುವಳಿಯ ಸಹಯಾನಿಯಾಗುವ ಹುರುಪನ್ನು ಕಾಪಿಟ್ಟಿಕೊಂಡಿದೆ. ಕೆರೆಕೋಣದಲ್ಲಿ ಸಹಯಾನ (ಡಾ. ಆರ್.ವಿ.ಭಂಡಾರಿ ನೆನಪಿನ ಸಂಸ್ಕøತಿ ಅಧ್ಯಯನ ಕೇಂದ್ರ) ಪ್ರಾರಂಭಿಸುವ ಆಶಯದ ಬೆನ್ನೆಲುಬಾಗಿ ನಿಂತರು ಮಾತ್ರವಲ್ಲ ಸಹಯಾನ ಅಧ್ಯಕ್ಷರಾಗಿ ಕೂಡ ಮಾರ್ಗದರ್ಶನ ಮಾಡುತ್ತಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಕೆಲಸ ಮಾಡುವ ಖುಷಿ ನನ್ನದು. 
ಶಿಕ್ಷಕರಾಗಿ, ಕವಿಯಾಗಿ, ಸ್ವಾತಂತ್ರ್ಯ ಚಳುವಳಿಯ ಚರಿತ್ರೆಕಾರರಾಗಿ ಮುನ್ನೆಲೆಗೆ ಬಂದ ಶಾಂತಾರಾಮ ನಾಯಕರವರು ಇಷ್ಟೊಂದು ಕಥೆಗಳನ್ನು ಪ್ರಕಟಿಸಿದ್ದು ನನ್ನ ಗಮನಕ್ಕೆ ಬರಲಿಲ್ಲ. ಅವರು ಬರೆದ ಕಥೆಗಳಲ್ಲಿ ಒಟ್ಟು ಹನ್ನೊಂದು ಕಥೆಗಳನ್ನು ಆಯ್ದು ಈ ಸಂಕಲನ ‘ಕಥೆಯಾದಳು ಗಂಗೆ’ ನಿಮ್ಮ ನಮ್ಮ ಓದಿಗೆ ಒದಗಿ ಬಂದಿದೆ. ಕಥೆಗಳನ್ನೆಲ್ಲಾ ಓದಿ ಮುಗಿಸುವ ಹೊತ್ತಿಗೆ ಅಂಕೋಲೆಯ ಸಾಂಸ್ಕøತಿಕ ವೈವಿಧ್ಯತೆಯೂ ಮತ್ತು ಇಂದು ಅದು ತಲುಪುತ್ತಿರುವ ದುರಂತ ಚಿತ್ರಣವೂ ಏಕಕಾಲದಲ್ಲಿ ಮೂಡಿದರೆ ಆಶ್ಚರ್ಯವಿಲ್ಲ. ಶಾಂತಾರಾಮ ನಾಯಕರು ಅಂಕೋಲೆಯ ನೆಲದಲ್ಲಿ ನಡೆದ ಸ್ವಾತಂತ್ರ್ಯ ಚಳುವಳಿಯ ಮತ್ತು ದಿನಕರ ದೇಸಾಯಿಯವರ ನೇತೃತ್ವದ ರೈತ ಚಳುವಳಿಯನ್ನು ಬಹಳ ಹತ್ತಿರದಿಂದ ನೋಡಿದವರು ಮತ್ತು ಸ್ವತಃ ಪಾಲ್ಗೊಂಡವರು. ಸ್ವಾತಂತ್ರ್ಯ ಚಳುವಳಿ ಮತ್ತು ರೈತ ಚಳುವಳಿಗಳ ಆಶಯಗಳೆರಡೂ ಕತೆಯಲ್ಲಿ ಅಂತರ್ ವಾಹಿನಿಯಾಗಿ ಹರಿಯುತ್ತದೆ. ಅಥವಾ ಇಡೀ ಕತೆಯ ವೈಚಾರಿಕತೆಯನ್ನು ರೂಪಿಸಿದ್ದೇ ಈ ಚಳುವಳಿಗಳು ಎನ್ನುವುದೇ ಹೆಚ್ಚು ಸೂಕ್ತ ಅನ್ನಿಸುತ್ತದೆ. 
ಆದ್ದರಿಂದಲೇ ಸಾಮಾನ್ಯ ಜನರನ್ನು ಹಣ ಮತ್ತು ಅಧಿಕಾರ ಬಲದಿಂದ ವಂಚಿಸಿದರೆ (ಬಾಳೆಕೊನೆ ಮತ್ತು ಚಿಗರೆ ಕೋಡು) ಹೆಣ್ಣನ್ನು ಅವಳ ಶೀಲದ ಹೆಸರಿನಲ್ಲಿ ಅವಹೇಳನ ಮಾಡಿದರೆ (ಕತೆಯಾದಳು ಗಂಗೆ) ಹಣಬಲ, ಸ್ವಾರ್ಥ ಮತ್ತು ಜಾತಿಯ ಅಹಂ ನಿಂದ ಸಮಾಜಬಾಹಿರ ಕೆಲಸವನ್ನು ಮಾಡಿದರೆ (ಪ್ರಾಯಶ್ಚಿತ) ..... ಲೇಖಕರಿಗೆ ಸಹಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಅದರ ವಿರುದ್ಧ ಒಂದು ಸಣ್ಣ ದನಿ ಎತ್ತುತ್ತಾರೆ. ಇದರಾಚೆಯ ಒಂದು ಸ್ವಚ್ಛ ಸಮಾಜದ ಕನಸು ಕಾಣುವವರ ಮನಸ್ಸು ನಮಗೆ ಈ ಕಾಲದ ಜರೂರಾಗಿದೆ. ಮನೆಯಲ್ಲಿ ಸಾಕಿದ ರಾಣಿ ಬೆಕ್ಕಿನ ಮರಿಯನ್ನು ದೂರದಲ್ಲಿ ದೂರದಲ್ಲಿ ಬಿಟ್ಟು ಬಂದ ‘ರಾಣಿ ಮತ್ತು ಮರಿ ಬೆಕ್ಕಿನ’ ನಿರೂಪಕ “ಪಾಪ ಹಾಲು ತುಂಬಿದ ನೋವನ್ನು ಸಹಿಸಲಾರದೇ ಹಾಲು ತುಂಬಿದ ಮೊಲೆಗಳ ಹಾಲನ್ನು ಕುಡಿಯಲು ಮರಿಗಳಿಲ್ಲದೇ ಆ ನೋವಿನಿಂದಲೂ ಬೆಕ್ಕು ತನ್ನ ಮರಿಗಳಿಗಾಗಿ ರೋಧಿಸುತ್ತಿತ್ತು.... ರಾತ್ರಿ ಇಡೀ ಬೆಕ್ಕಿನ ಮರಿಗಳ ಆಕ್ರಂದನದ ನೆನಪು. ರಾತ್ರಿ ಬಾಗಿಲು ಹಾಕಿ ಮಲಗಿದರೂ ಕಾಲು ಕನಸಿನಲ್ಲಿ ತಾಯಿ ಬೆಕ್ಕು ನನ್ನ ಮೇಲೆ ಆಕ್ರಮಣ ಮಾಡಿ ತನ್ನ ಗಂಟಲನ್ನು ಕಚ್ಚಿ ಹಿಡಿದಂತೆ ಭಾಸವಾಗಿ ಚೀರಿ ಬಿಟ್ಟೆ!” ಎಂದು ಪಡುವ ತಳಮಳ, ನೋವು ಅಪರಾಧಿ ಪ್ರಜ್ಞೆ ಇಂದು ಜಾತಿ ಧರ್ಮ ಲಿಂಗ ಆಧಾರದಲ್ಲಿ ಮನುಷ್ಯನನ್ನು ಕೊಲ್ಲುವ ಹಿಂದಿಸುವ ಜನರಿಗೆ ಬರುವುದು ಯಾವಾಗ? ಎನ್ನುವ ಪ್ರಶ್ನೆ ಸಂಕಲನದುದ್ದಕ್ಕೂ ಹರಿಯುತ್ತದೆ ಮತ್ತು ಕತೆಯ ವ್ಯಾಪ್ತಿಯನ್ನು ಅಂಕೋಲೆಯೆಂಬ ಸಾಂಸ್ಕøತಿಕ ಮೇರೆ ಮೀರಿ ಈ ನಾಡಿನ ವ್ಯಥೆಯ ಚಿತ್ರವಾಗಿ ನಿಂತುಬಿಡುತ್ತದೆ. 
ಆಡುಭಾಷೆಯ ಯಥೇಚ್ಛ ಬಳಕೆ, ಸ್ವಾತಂತ್ರ್ಯ ಚಳುವಳಿಯಲ್ಲಿ ಪಾಲ್ಗೊಂಡವರ ಸಣ್ಣಸಣ್ಣ ಕಥನ, ತಲೆಮಾರುಗಳ ನಡುವೆ ಬದಲಾದ ಸಾಮಾಜಿಕ ಸಾಂಸ್ಕøತಿ ಪಲ್ಲಟಗಳ ಚಿತ್ರ, ಬದಲಾವಣೆಯ ಸಾಂಕೇತಿಕ ರೂಪ, ಸರಳತೆಯ ನಿರೂಪಣೆÀಗಳೆಲ್ಲವೂ ಶಾಂತಾರಾಮ ನಾಯಕದ ಕಥಾಜಗತ್ತಿನ ಅಪರೂಪದ ಕಥನವಾಗಿದೆ. ಇಂಥದ್ದೊಂದು ಪುಸ್ತಕವನ್ನು ಪ್ರಕಟಿಸುವ ಅವಕಾಶ ಮಾಡಿಕೊಟ್ಟ ಲೇಖಕರಿಗೆ, ಕೊಂಡು ಓದುವ ತಮಗೆ .................... ಅನಂತ ಕೃತಜ್ಞತೆ. 

  ವಿಠ್ಠಲ ಭಂಡಾರಿ,
ಪ್ರಕಾಶನದ ಪರವಾಗಿ

No comments:

Post a Comment