Friday, 3 January 2014

kappu-heppu ಕಪ್ಪು-ಹೆಪ್ಪು mandela nenapu ಮಂಡೇಲಾ ನೆನಪು - ಯಮುನಾ ಗಾಂವ್ಕರ್ Yamuna Gaonkar

ಕಪ್ಪು-ಹೆಪ್ಪು

ನಡುಗಡ್ಡೆಯ ಚಳಿಮಂಜಿನಲಿ ಕ
ಕಪ್ಪಾನೆ ಕಪ್ಪು ಚರ್ಯೆ ಕೆಂಪಾಗಿತ್ತು
ಶುಭ್ರ ಪಾರಿವಾಳ ಹಾರಾಡಿತ್ತು

ಮಾಬಶೆ ನದಿಗುಂಟ ಕುರಿ ಮೇಯಿಸಿದ
ಯುವರಾಜ ನೀನು
ಬಂಟುಸ್ಥಾನದ ಪಿಳಿಪಿಳಿ ಕಣ್ಣುಗಳ
ಎಚ್ಚರದ ಧ್ವನಿ ನೀನು
ಚಿನ್ನದ ಗಣಿಗಿಳಿದ ಎಲುಬಿನ ಗೂಡುಗಳ
ಹಸಿವಿನ  ಆಕ್ನೀರಂದನ ನೀನು
ವರ್ಗ-ವರ್ಣದ ಸಾರಥ್ಯಕ್ಕೆದುರಾದ
ಪ್ರೀತಿಯ ಬೇಡಿ ನೀನು
ಬಿಳಿಕರಿ ಜೈಲು ಬೇಲಿಗಳ ಛಿದ್ರಿಸಿದ
ರಾಬ್ಬೀನ್ ದ್ವೀಪದ ಬಿರುಗಾಳಿ ನೀನೇ!

ಅರಮನೆ ಕೂಸಿಗೆ ಬಂದೂಕು ಎದುರಾಳಿ
ಗುಂಗುರು ಗುಂಗುರು ಸುಳಿ ಕೂದಲಲಿ ಸಿಕ್ಕಿ
ಕರಿಯನ ಬೇಗುದಿ ಎದೆಗುದಿಗೆ
27 ವರ್ಷದ ಬೇಡಿ .  ..

ಪ್ರೀತಿಯ ಮಂಡೇಲಾ,
ನಿನ್ನ ಜನರ ಕಪ್ಪು
ಜಗದ ಗಟ್ಟಿ ಹೆಪ್ಪು!

ಮನದ ಮಲಿನ ವರ್ಣ ಬೇಧ
ಧನದ ಮದವೇ ವರ್ಗ ಬೇಧ
ಪ್ರತಿ ಉತ್ತರ ನಿನ್ನದು 'ಸ್ವಾತಂತ್ರ್ಯ ಘೋಷ'
ಜೈಲ ಬಾಗಿಲು ಮುರಿದ ಧ್ವನಿ ನಿನ್ನದೇ
ಥೇಂಬು, ಝುಲು ಝುಳು-ಝುಳು ನದಿನಾದ . . .

ನನ್ನೂರ ಕಾಳಾಪಾನಿ, ನಿನ್ನೂರ ರಾಬ್ಬೀನ್
ಎರಡಕ್ಕೂ ಇತಿಹಾಸವಿದೆ ಮಂಡೇಲಾ!
ನೀ ಮರೆಯಾದ ದಿನ, ನಿನ್ನದೇ ಧ್ವನಿ
ನನ್ನಲ್ಲೂ ಪ್ರತಿಧ್ವನಿಸಿದೆ ಮಂಡೇಲಾ . . .

ಯಮುನಾ ಗಾಂವ್ಕರ್, ಕಾರವಾರ