Saturday 25 January 2020

ಪಡುವಣಿ ನಾರಾಯಣ ಗಾಂವಕಾರ

ಪಡುವಣಿ ನಾರಾಯಣ ಗಾಂವಕಾರ
                           ಗೌತಮ್ ಗಾಂವ್ಕರ, 
  ಬಡಾಬಡಗಿನ ಯಕ್ಷಗಾನ ಪರಂಪರೆಯಲ್ಲಿ ಡೇರೆಮೇಳಗಳ ಕಲಾವಿದರಷ್ಟೇ ಜನಪ್ರಿಯರಾದ ಅನೇಕ ಹವ್ಯಾಸಿ ಮತ್ತು ಬಯಲಾಟದ ಕಲಾವಿದರಿದ್ದಾರೆ. ಪಡುವಣಿಯ ನಾರಾಯಣ ಗಾಂವಕಾರರು ಅಂತಹ ಕಲಾವಿದರಲ್ಲೊಬ್ಬರು. ಅನಾರೋಗ್ಯದ ಕಾರಣದಿಂದಾಗಿ ತಮ್ಮ ಹವ್ಯಾಸವನ್ನು ಐವತ್ತೈದರ ಹರೆಯದಲ್ಲೇ ನಿಲ್ಲಿಸಿದರೂ ಅವರ ಎರಡು ದಶಕಗಳ ಕಾಲದ ಯಕ್ಷಗಾನದ ಸೇವೆ ಅನುಪಮವಾದದ್ದು. ತಮ್ಮ ಕಾಲದಲ್ಲಿ ಉತ್ತರ ಕನ್ನಡದ ಉದ್ದಗಲಗಳಲ್ಲಿ ವಿಶಿಷ್ಟ ಪಾತ್ರಾಭಿನಯ ಮತ್ತು ಅರ್ಥಗಾರಿಕೆಗಾಗಿ ಹೆಸರಾಗಿದ್ದ ನಾರಾಯಣ ಗಾಂವಕಾರರು ಮಾರುತಿ ಪ್ರತಾಪ ಪ್ರಸಂಗದ ಹನುಮಂತ, ಕಚದೇವಯಾನಿ ಪ್ರಸಂಗದ ಶುಕ್ರಾಚಾರ್ಯ ಪಾತ್ರಗಳ ಮಟ್ಟಿಗಂತೂ `ಇವರೇ ಸೈ’ ಎಂಬಷ್ಟು ಜನಪ್ರಿಯರು.

  ಉತ್ತರ ಕನ್ನಡದ ಕುಮಟಾ ತಾಲೂಕಿನ ಪಡುವಣಿ ಇವರ ಹುಟ್ಟೂರು. ಅನಂತ ಗಾಂವಕಾರ

ಮತ್ತು ಸಣ್ಣಮ್ಮ ಗಾಂವಕಾರರ ಮಗನಾಗಿ 1940 ರ ಮೇ 10 ನೇ ತಾರೀಕಿನಂದು ಜನಸಿದ ಗಾಂವಕಾರರು ಮೆಟ್ರಿಕ್ ವರೆಗಿನ ಶಿಕ್ಷಣವನ್ನು ಹೆಗೆಡೆಯಲ್ಲಿ ಪಡೆದವರು. ಯಕ್ಷಗಾನದ ಹುಚ್ಚು ಓದನ್ನು ಮುಂದುವರಿಸಲು ಅವಕಾಶವನ್ನೇ ನೀಡದಾಗ  ತನ್ನ ಹದಿನಾಲ್ಕನೇ ವಯಸ್ಸಿನಲ್ಲಿಯೇ ಗೆಜ್ಜೆ ಕಟ್ಟಿ ಅಭಿಮನ್ಯುವಿನ ಪಾತ್ರದ ಮೂಲಕ ರಂಗದ ಮೇಲೆ ಹೆಜ್ಜೆ ಹಾಕಿದರು. ಆಗಿನ ಹೆಸರಾಂತ ಭಾಗವತರಾದ ಬಾಡದ ಶಿವರಾಮ ಹೆಗಡೆಯವರು ಮತ್ತು ಪಡುವಣಿ ಪರಮಯ್ಯ ಪಟಗಾರರರನ್ನು ಇವರು ತನ್ನ ಯಕ್ಷಗುರುಗಳೆಂದು ನೆನಪುಮಾಡಿಕೊಳ್ಳುತ್ತಾರೆ. ಚಿಕ್ಕ ಪ್ರಾಯದಲ್ಲೇ ಯಕ್ಷಗಾನಕ್ಕೆ ಮನಸೋತು, ಎಲ್ಲ ಬಗೆಯ ಪಾತ್ರಗಳನ್ನು ಮಾಡುತ್ತಾ ಹಂತ-ಹಂತವಾಗಿ ಮೇಲೇರಿ, ಎರಡನೇ ವೇಷದಾರಿಯಾಗಿ ರಸಿಕರ ಮನದಲ್ಲಿ ಅಚ್ಚಳಿಯದೆ ಉಳಿದವರು. ರಂಗದಿಂದ ನಿವೃತ್ತಿ ಪಡೆದು  ಎರಡುದಶಕಗಳೇ ಕಳೆದರೂ ಊರೂರುಗಳಲ್ಲಿ ಇವರ ಪಾತ್ರವನ್ನು ಕಣ್ಣೆದರು ತಂದುಕೊಂಡು ಪರವಶರಾಗುವ ಅಭಿಮಾನಿಗಳಿದ್ದಾರೆ. ತನ್ನ ಪಾತ್ರವನ್ನು ರೂಪಿಸುತ್ತಾ ಒಂದು ಸಂಘಟಿತ ಆಖ್ಯಾನದ ಪ್ರದರ್ಶನಕ್ಕೆ ಪೋಷಣೆ ನೀಡುವುದು ಯಕ್ಷಗಾನಕ್ಕೇ ವಿಶಿಷ್ಟವಾದ ಪರಂಪರೆ. ನಾರಾಯಣ ಗಾಂವಕಾರರು ಈ ಅಲಿಖಿತ ನಿಯಮವನ್ನು ಮೀರಿದವರಲ್ಲ. ಹವ್ಯಾಸಿ ಮೇಳಗಳಲ್ಲಿಯೇ ತಮ್ಮ ಸೇವೆಯನ್ನು ಪೂರ್ಣಗೊಳಿದವರಾಗಿದ್ದರೂ ಪ್ರೇಕ್ಷಕ ವರ್ಗ ಯಾವುದೇ ಆಗಿದ್ದರೂ ಪ್ರಾಮಾಣಿಕ ಪ್ರದರ್ಶನ ನೀಡುವ ಶೃದ್ಧೆ ಮತ್ತು ಬದ್ಧತೆಯಲ್ಲಿ ಇವರದು ಪಕ್ಕಾ ವೃತ್ತಿಪರ ನಿಲುವು. ಚಿಕ್ಕ ಹಳ್ಳಿಗಳಲ್ಲಿಯೇ ಇರಲಿ ನಗರದ ದೊಡ್ಡ ಸಭಾಂಗಣಗಳವೇ ಆಗಿರಲಿ ನೂರಕ್ಕ ನೂರಷ್ಟು ತಮ್ಮ ಸಾಮರ್ಥ್ಯಕ್ಕೆ ತಕ್ಕಂತಹ ಪ್ರದರ್ಶನವನ್ನು ನೀಡುವುದಕ್ಕೆ ನಾರಾಯಣ ಗಾಂವಕಾರರು ಸದಾ ಬದ್ಧರಾಗಿದ್ದರು. ಪಾತ್ರ ಬೀಳಾಗದಂತೆ ಸದಾ ಎಚ್ಚರದಲ್ಲಿರುವವರು. ಇವರ ಪಾತ್ರಗಳಲ್ಲೇ `ಹನುಮಂತ’ ನ ಪಾತ್ರ ಅನನ್ಯವಾದದ್ದು. ತನ್ನ ಯಕ್ಷಸೇವೆಯ ಆರಂಭದ ದಿನಗಳಲ್ಲೇ ಇಂದ್ರಜೀತು ಕಾಳಗದಲ್ಲಿ ಮೂರೂರು ದೇವರು ಹೆಗಡೆಯವರ ಇಂದ್ರಜಿತುವಿನ ಎದುರು ಹನುಮಂತನಾಗಿ ಹತ್ತಾರು ಕಡೆ ಪಾತ್ರವಹಿಸಿ ಹನುಮಂತನ ಪಾತ್ರಕ್ಕೆ ಅನನ್ಯವಾದ ಆಯಾಮವನ್ನು ಒದಗಿಸಿದವರು. ಆನಂತರ, ಇವರು ನೂರಾರು ರಂಗಸ್ಥಳಗಳ ಮೇಲೆ ಹನುಮಂತನಾಗಿ ಮೆರೆದವರು. ವಾಚಿಕ, ಆಹಾರ್ಯ, ಆಂಗಿಕ ಹಾಗೂ ಸಾತ್ವಿಕ ಅಭಿನಯಗಳಲ್ಲಿ ಇವರು ಸಮಾನ ಸಿದ್ಧಿಯನ್ನು ಸಾಧಿಸಿದವರು. ಇವರ ಅಭಿನಯ ನಿಜವಾದ ರಸೋಲ್ಲಾಸವೇ ಆಗಿರುತಿತ್ತು. ಉತ್ತಮ ನಾಯ್ಕರ ಮೇಳವೆಂದೇ ಪ್ರಸಿದ್ಧವಾಗಿದ್ದ ಕುಮಟಾದ ಶಾಂತಿಕಾ ಪರಮೇಶ್ವರಿ ಯಕ್ಷಗಾನ ಮಂಡಳಿ ಇಬ್ಬರು ಶ್ರೇಷ್ಠ ಹನುಮಂತನ ಪಾತ್ರದಾರಿಗಳನ್ನು ಒಂದೇ ಕಾಲಗಟ್ಟದಲ್ಲಿ ನೀಡಿದೆ. ಒಬ್ಬರು ಕುಮಟಾ ಗೋವಿಂದ ನಾಯ್ಕರಾದರೆ ಇನ್ನೊಬ್ಬರು ಪಡುವಣಿ ನಾರಾಯಣ ಗಾಂವಕಾರರು. ವೇಷಕಟ್ಟಿಕೊಳ್ಳುವಲ್ಲಿ ತೋರುವ ಶ್ರದ್ಧೆ, ಮುಖವರ್ಣಿಕೆಯಲ್ಲಿನ ಅಚ್ಚುಕಟ್ಟುತನ ಮತ್ತು ಕಲಾತ್ಮಕತೆ ಮತ್ತು ಹನುಮಂತನ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡುವ ಕಾರಣಕ್ಕಾಗಿ ನಾರಾಯಣ ಗಾಂವಕಾರರು ಬಡಗುತಿಟ್ಟು ಯಕ್ಷಗಾನ ಪ್ರಪಂಚದ ಸಾರ್ವಕಾಲಿಕ ಶ್ರೇಷ್ಟ ಹನುಮಂತನ ಪಾತ್ರದಾರಿಗಳ ಸಾಲಿನಲ್ಲಿ ನಿಲ್ಲುವವರು. ಯಕ್ಷರಂಗದ ದಂತಕತೆ ಎಕ್ಟರ್ ಜೋಷಿಯವರ ಭೂಕೈಲಾಸದಲ್ಲಿ ರಾವಣನ ಪಾತ್ರ ಮಾಡುತ್ತಿದ್ದರೆ ನಾರಾಯಣ ಗಾಂವಕಾರರದು ಈಶ್ವರನ ಪಾತ್ರ. ಈ ಜೋಡಿಯ ಜನಪ್ರೀಯತೆ ಅವರನ್ನು ಗೋವಾ ಮತ್ತು ಮುಂಬೈಗಳಲ್ಲಿಯೂ ಪ್ರದರ್ಶನ ನೀಡುವ ಅವಕಾಶವನ್ನು ನೀಡಿತು. ಕೆರೆಮನೆ ಮಹಾಬಲ ಹೆಗೆಡೆಯವರ ಸುದನ್ವ ಪಾತ್ರಕ್ಕೆ ಎದುರಾಗಿ ಅರ್ಜುನನಾಗಿ, ಚಿಟ್ಟಾಣಿ ರಾಮಚಂದ್ರ ಹೆಗಡೆಯವರ ಭಸ್ಮಾಸುರನ ಪಾತ್ರಕ್ಕೆ ಎದುರಾಗಿ ರಾವಣನಾಗಿ ಹೀಗೆ ಆಗಿನ ಪ್ರಸಿದ್ಧ ಕಲಾವಿದರೊಂದಿಗೆ ಪಾತ್ರ ಮಾಡಿ ಮೆಚ್ಚುಗೆ ಗಳಿಸಿದವರು.

    ಕಚ-ದೇವಯಾನಿ ಪ್ರಸಂಗದಲ್ಲಿ ನಾರಾಯಣ ಗಾಂವಕಾರರು ಶುಕ್ರಾಚಾರ್ಯನಾಗಿ ಕಚನಾಗಿ ಧಾರೇಶ್ವರ ಮಾಸ್ತರರು ಮತ್ತು ದೇವಯಾನಿಯಾಗಿ ಪಾಲನಕರ ಮಾಸ್ತರರು ಇರಲೇಬೇಕೆಂಬ ಸಹೃದಯರ ಒತ್ತಾಯ ಆ ಕಾಲದ ಅಲಿಖಿತ ನಿಯಮವಾಗಿ ಚಾಲ್ತಿಯಲ್ಲಿದ್ದುದು ಅವರ ಜನಪ್ರಿಯತೆಗೆ ಸಾಕ್ಷಿ. ಅನಾರೋಗ್ಯದಿಂದಾಗಿ ತಮ್ಮ  ಐವತ್ತರ ಹರೆಯದಲ್ಲೇ ವೇಷ ಹಚ್ಚುವುದನ್ನು ನಿಲ್ಲಿಸಿ ತಾಳಮದ್ದಳೆಯಲ್ಲಿ ತಮ್ಮ ವ್ಯವಸಾಯವನ್ನು ಮುಂದುವರಿಸಿದರು.  ಅರ್ಥಗಾರಿಕೆಯಲ್ಲೂ ಇವರು ತಮ್ಮ ಛಾಪನ್ನು ಮೂಡಿಸಿದರು. ಕರ್ಕಿಯ ಹಾಸ್ಯಗಾರ ಮೇಳ, ಹಳದೀಪುರದ ಜೋಗನಕಟ್ಟೆ ಮೇಳ, ಕುಮಟಾದ ಶ್ರೀ ರಾಮನಾಥ ಯಕ್ಷಗಾನ ಮಂಡಳಿ, ಹೆಗಡೆಯ ಶ್ರೀ ಶಾಂತಿಕಾ ಪರಮೇಶ್ವರಿ ಯಕ್ಷಗಾನ ಮಂಡಳಿ ಮುಂತಾದ ಬಯಲಾಟದ ಮೇಳಗಳಲ್ಲಿ ಪಾತ್ರವಹಿಸಿ ಜಿಲ್ಲೆಯ ಹಿರಿ-ಕಿರಿಯ ಯಕ್ಷಗಾನ ಕಲಾವಿದರೊಂದಿಗೆ ಒಡನಾಟಹೊಂದಿದವರು. ಮೂರೂರು ದೇವರ ಹೆಗಡೆ, ಎಕ್ಟರ್ ಜೋಷಿ ಮತ್ತು ವೀರಭದ್ರನಾಯ್ಕರ ಪಾತ್ರಗಳಿಂದ ಪ್ರಭಾವಿತರಾಗಿದ್ದ ನಾರಾಯಣ ಗಾಂವಕಾರರು  ಕಡತೋಕ ಮಂಜು ಭಾಗವತರು, ಕೊಪ್ಪಲಮಕ್ಕಿ ಭಾಗವತರು, ಬಾಡದ ಶಿವರಾಮ ಹೆಗಡೆಯವರಂತಹ ಶ್ರೇಷ್ಟರ ತಾಳಕ್ಕೆ ಹೆಜ್ಜೆಹಾಕಿದವರು. ದೇವರು ಹೆಗಡೆಯವರು, ಕೊಂಡದಕುಳಿ ರಾಮ ಹೆಗಡೆ (ಸೀನಿಯರ್) ಅಗ್ರಗೋಣ ಎಂ. ಎಂ ನಾಯಕ, ಹಿರೇಗುತ್ತಿ ವೆಂಕಟ್ರಮಣ ನಾಯಕರಂತಹ ಮೇರುಕಲಾವಿದರ ಮಾರ್ಗದರ್ಶನ ಪಡೆದು ತನ್ನದೇ ದಾರಿಯನ್ನು ಗುರುತಿಸಿಕೊಂಡವರು. ಕುಮಟಾ ಉತ್ತಮ ನಾಯ್ಕ್, ಕುಮಟಾ ಗೋವಿಂದ ನಾಯ್ಕ್ , ಗೋಕರ್ಣ ಹೊನ್ನಪ್ಪ ಗುನಗಾ , ಶಿವಾನಂದ ಭಂಡಾರಿ, ಅನಂತ ಹೆಗಡೆ ಹಾವಗೋಡಿ ಮುಂತಾದವರ ಜೊತೆಯಲ್ಲಿಯೇ ಹವ್ಯಾಸಿ ಮೇಳವಾಗಿ  ಯಕ್ಷಗಾನವನ್ನು ಹಳ್ಳಿಗಳಲ್ಲಿ ಜೀವಂತವಾಗಿರಿಸಿದವರು. ನಾರಾಯಣ ಗಾಂವಕಾರರು ಯಾರನ್ನೂ ಅನುಸರಿಸಿದವರಲ್ಲ; ಅನುಕರಿಸಿದವರಲ್ಲ.

  ಯಕ್ಷಗಾನದ ನೈಜ ಪ್ರದರ್ಶನ ನೀಡಿದವರಲ್ಲಿ ಇವರೊಬ್ಬರು. ತಮ್ಮ ಪಾತ್ರಗಳ ಮೂಲಕ ಪ್ರೇಕ್ಷಕರಲ್ಲಿ ನಾರಾಯಣ ಗಾಂವಕಾರರು ಹೊಮ್ಮಿಸಿದ ರಸಾನುಭವ ಅನಿರ್ವಚನೀಯ.
ಅವರಿಗೆ ಸಹಯಾನದ ಶ್ರದ್ಧಾಂಜಲಿ
ಜನನ
ಮೇ 10, 1940
ನಿಧನ: 18 ಜನವರಿ 2020
ಹುಟ್ಟೂರು
ಪಡುವಣಿ, ಕುಮಟಾ ತಾಲೂಕು

ಮಕ್ಕಳು
ಉದಯ, ಮಾಲತಿ
ಪತ್ನಿ
ನಾಗಮ್ಮ

Sunday 19 January 2020

ಕಾಮ್ರೆಡ್ ಮೇರಿದೇವಾಸಿಯಾ...ಎಂ.ಎ. ಖತೀಬ


ಸಂಘಟನೆ ಮತ್ತು ಹೋರಾಟದ ರಂಗದಲ್ಲಿ ಕಾಮ್ರೆಡ್ ಮೇರಿ ದೇವಾಸಿಯಾ ಒಂದು ಅಚ್ಚಳಿಯದ ನೆನಪು. ಚಳುವಳಿ ನಮ್ಮ ಸಮಾಜವನ್ನು ಕ್ರಿಯಾಶೀಲವಾಗಿಸುವ ಮತ್ತು ಪ್ರಜಾಪ್ರಭುತ್ವವನ್ನು ಇನ್ನಷ್ಟು ಗಟ್ಟಿಗೊಳಿಸುವ ಸಂಗತಿ ಎಂದು ತಿಳಿದಿದ್ದ ಮೇರಿ ದೇವಾಸಿಯಾ 1965 ರಲ್ಲಿ ನಡೆಸಿದ ಐತಿಹಾಸಿಕ ಹೋರಾಟವನ್ನು ಒಳಗೊಂಡಂತೆ ತನ್ನ ಬದುಕನ್ನು ಪೂರ್ತಿಯಾಗಿ ಸಂಘಟನೆ ಮತ್ತು ಹೋರಾಟ ಕ್ಕೆ ಮುಡಿಪಾಗಿಟ್ಟವರು. ಕರ್ನಾಟಕದಲ್ಲಿ ಇಂದು ವಿಸ್ತಾರವಾಗಿ ಬೆಳೆದಿರುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವನ್ನು ಪ್ರಾರಂಭಿಸಿದವರು ಅವರು. 
ಅಂದು ಓರ್ವ ಮಹಿಳೆ ನಾಯಕತ್ವಕ್ಕೆ ಬರುವುದೆಂದರೆ ಹುಬ್ಬೇರಿಸುವ ಕಾಲ. ಅದರಲ್ಲೂ ಪ್ರಭುತ್ವ ಮತ್ತು ಸರ್ಕಾರವನ್ನು ಎದುರಿಸಿ ಇಡೀ ದುಡಿಯುವ ವರ್ಗಕ್ಕೆ ಸಂಘಟನಾತ್ಮಕ ಹಕ್ಕುಗಳನ್ನು ಹಾಗೂ ನ್ಯಾಯ ಬದ್ದ ಸೌಲಭ್ಯಗಳನ್ನು ಒದಗಿಸಿ ಕೊಡಲು ಮುಂಚೂಣಿಯಲ್ಲಿದ್ದು ಯಶಸ್ವಿಯಾಗುವುದೆಂದರೆ ಸಾಧಾರಣ ಮಾತಲ್ಲ. ಇಂದು ಸಂವಿಧಾನ ಬದ್ಧವಾದ ಸೌಲತ್ತುಗಳನ್ನು, ಭದ್ರತೆಯನ್ನು ನೌಕರರು ಪಡೆಯುತ್ತಿದ್ದಾರೆ ಎಂದರೆ ಅದರಲ್ಲಿ ಕಾಮ್ರೆಡ್ ಮೇರಿ ದೇವಾಸಿಯಾರವರ ತ್ಯಾಗಪೂರ್ಣ ಕೊಡುಗೆ ಮಹತ್ವಪೂರ್ಣವಾದುದು.

ಇಂದಿನ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ, ವಿರೋಧ ಪಕ್ಷದ ಸ್ಥಾನದಲ್ಲಿ ನಿಂತು ಸ್ವಾಭಿಮಾನಿ ಹೋರಾಟ ನಡೆಸಬೇಕಾದ ಸಂಘಟನೆಗಳು ಆಳುವ ಪಕ್ಷಗಳ ಬಾಲಂಗೋಚಿ ಗಳಾಗುತ್ತಿರುವ ಕೆಲವು ಉದಾಹರಣೆಗಳು ನಮ್ಮೆದುರಿಗಿದೆ. ನೌಕರರ ಹಿತಾಸಕ್ತಿಗಾಗಿ ರಾಜಿ ರಹಿತ ಹೋರಾಟ ಮಾಡಬೇಕಾದ ಸಂದರ್ಭದಲ್ಲಿ ಸಂಘಟನೆಗಳನ್ನು ವ್ಯಕ್ತಿಕೇಂದ್ರಿತವಾಗಿ, ಯಾರದೋ ಹಿತಾಸಕ್ತಿಯ ರಕ್ಷಣೆಗಾಗಿ ಬಳಸಿಕೊಳ್ಳಲಾಗುತ್ತಿದೆಯೇ ಎನ್ನುವ ಅನುಮಾನ ಕೂಡ ಕಾಡುತ್ತಿದೆ. ಪಾರದರ್ಶಕತೆಯನ್ನು ಪ್ರಜಾಸತ್ತಾತ್ಮಕ ತೆಯನ್ನು ಕಳೆದುಕೊಳ್ಳುವ ಮೂಲಕ ಸಂಘಟನೆ, ಚಳುವಳಿ ದುರ್ಬಲಗೊಳ್ಳುತ್ತಿದೆ. ದೇಶ ಜಾಗತೀಕರಣ ಸುಳಿಯಲ್ಲಿ ಸಿಲುಕಿರುವ ಈ ಸಂದರ್ಭದಲ್ಲಿ ಆಳುವ ವರ್ಗ ಜಾತಿ, ಧರ್ಮ, ಹಣ, ಅಧಿಕಾರದ ಆಮೀಷ ಒಡ್ಡಿ ಚಳುವಳಿಯನ್ನು ಮುರಿಯಲು ಉತ್ಸುಕವಾಗಿರುವ ಕಾಲದಲ್ಲಿ ಕಾಮ್ರೆಡ್ ಮೇರಿ ದೇವಾಸಿಯಾರವರ ಬದ್ಧತೆ ಮತ್ತು ಹೋರಾಟದ ದಾರಿ ನಮಗೆ ಮಾರ್ಗದರ್ಶಿಯಾಗಿರಬೇಕಾಗಿದೆ. ಈ ಹಿನ್ನೆಲೆಯಲ್ಲಿ ಕಾರವಾರದ ಎಂ.ಎ. ಖತೀಬ್ ಅವರು ಬರೆದಿರುವ ಈ ಕಿರು ಪುಸ್ತಕವನ್ನು ಬಂಡಾಯ ಪ್ರಕಾಶನ ಪ್ರೀತಿಯಿಂದ ಪ್ರಕಟಿಸುತ್ತದೆ. ಎಂ.ಎ. ಖತೀಬರವರು ಮೂಲತಃ ಕಾರವಾರದ ಕಡವಾಡದವರು. ಅವರ ಕುಟುಂಬದ ಹಿರಿಯರು ಸ್ವಾತಂತ್ರ್ಯ ಹೋರಾಟ ಮತ್ತು ರೈತ ಚಳುವಳಿ ಯನ್ನು ಜಿಲ್ಲೆಯಲ್ಲಿ ಕಟ್ಟಿದ ಮೊದಲಿಗರು ಹೌದು. ಮುಜಾಫರ್ ಖತೀಬರವರು ಉಪ ತಹಶಿಲ್ದಾರರಾಗಿ ನಿವೃತ್ತರಾದವರು. ಈ ಹಿಂದೆ ಅವರ “ಎಚ್ಚರ ಇದ್ದ ಕಾಶಿ ಮತ್ತು ಬಾಳಸುನ ಔಷಧಿ” ಎನ್ನುವ ಕಿರು ಕತೆಗಳ ಪುಸ್ತಕವನ್ನು ಪ್ರಕಾಶನ ಪ್ರಕಟಿಸಿತು. ಇದು ಅವರ ಎರಡನೇ ಪುಸ್ತಕ, ಸರ್ಕಾರಿ ನೌಕರರಾಗಿರುವಾಗಲೂ ಮನೆ ಕೆಲಸ ಕ್ಕಿಂತಲೂ ಹೆಚ್ಚು ಮುತುವರ್ಜಿಯಿಂದ ತನ್ನ ಸರ್ಕಾರಿ ನೌಕರಿ ಮಾಡುವ ಮೂಲಕ ಜನಾನುರಾಗಿ ಯಾಗಿರುವ ಖತೀಬರಿಗೆ ಅನಂತ ಕೃತಜ್ಞತೆಗಳು. ಪುಸ್ತಕ ವಿನ್ಯಾಸಗೊಳಿಸಿದ ಎಂ ರಾಮು ಮತ್ತು ಮುದ್ರಿಸಿದ ಕ್ರಿಯಾ ಸಂಗಾತಿ ಗಳಿಗೆ ಕೃತಜ್ಞತೆಗಳು. ಎಂದಿನಂತೆ ಕೊಂಡು ಓದುವ ತಮಗೂ ವಂದನೆ.

ವಿಠ್ಠಲ ಭಂಡಾರಿ
 ಬಂಡಾಯ ಪ್ರಕಾಶನದ ಪರವಾಗಿ.



ದೇಶಕ್ಕಾಗಿ ದುಡಿದವರ ಪ್ರಾಮಾಣಿಕತೆಯನ್ನು ಧರ್ಮದ ಹಿನ್ನೆಲೆಯಲ್ಲಿ ಅನುಮಾನಿಸುವುದು ಅವಮಾನಕರ.

 
ಕನಸುಗಳಿಲ್ಲದ ಕಾಲವನ್ನು ಕಲ್ಪಿಸಿಕೊಳ್ಳುವುದೂ ಕಷ್ಟ. ಈ ಕಾಲವಂತೂ ನಾಡಿನ ಪ್ರಜೆಗಳ ಕನಸನ್ನೇ ನಾಶ ಮಾಡುತ್ತಿದೆ. ಕನಸು ಕಾಣುವವರನ್ನು ನಿರ್ಭಂಧಿಸುತ್ತಿದೆ. ಭಯ ಹುಟ್ಟಿಸುತ್ತಿದೆ. ಆದರೆ ಈ ದಾಳಿ ಹೆಚ್ಚಿದಂತೆ ಜನರ ಪ್ರತಿರೋಧವೂ ಬೆಳೆಯುತ್ತಾ ಹೋಗುತ್ತದೆ. 
ಅಧಿಕಾರ ಕೇಂದ್ರದ ಎದುರು ಜನ ಹೋರಾಟಗಳು ಸೆಟೆದು ನಿಲ್ಲುತ್ತದೆ. ಕಳೆದ ವರ್ಷವಿಡೀ ದೇಶದಲ್ಲಿ ಇಂತ ಹಲವು ಹೋರಾಟಗಳು ನಡೆದವು. ಅದರ ಮುಂದುವರಿಕೆಯಾಗಿ ಹೋರಾಟದ ಕಿಚ್ಚು ಈ ವರ್ಷಕ್ಕೂ ಮುಂದುವರಿದಿದೆ. ಹಾಗಾಗಿ ಸಂವಿಧಾನವನ್ನು ಅಪ್ರಸ್ತುತಗೊಳಿಸಲು ಹೊರಟ ಶಕ್ತಿಗಳ ಎದುರು ನಾವು ಇನ್ನಷ್ಟು ಗಟ್ಟಿಯಾಗಿ ನಿಲ್ಲಬೇಕಾಗಿದೆ. ಇಂದು ಶಾಸಕಾಂಗ ತನ್ನ ನೈತಿಕತೆಯನ್ನು ಕಳೆದುಕೊಳ್ಳುತ್ತಿದೆ, ಕಾರ್ಯಾಂಗ ಕ್ರೌರ್ಯವನ್ನು ರೂಢಿಸಿಕೊಳ್ಳುತ್ತಿದೆ, ನ್ಯಾಯಾಂಗ ಮೌನಿಯಾಗಿದೆ. ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ಹೊಸವರ್ಷಕ್ಕೆ ನಮ್ಮ ಆಧ್ಯತೆ ಮತ್ತು ಮಾರ್ಗವನ್ನು ನಾವೇ ರೂಪಿಸಿಕೊಳ್ಳಬೇಕಾಗಿದೆ. 
ಆಳುವವರಿಗೆ ಈ ದೇಶದ  ಎಲ್ಲರಿಗೆ ವಸತಿ, ಆಹಾರ, ಅಕ್ಷರ, ಆರೋಗ್ಯ ಮತ್ತು ಉದ್ಯೋಗವನ್ನೂ ಒಳಗೊಂಡಂತೆ ಹಲವು ಭೌತಿಕ ಸಂಗತಿಗಳನ್ನು ಒದಗಿಸುವುದು ಆದ್ಯತೆ ಆಗುವ ಬದಲು ತಮ್ಮ ವಿಫಲತೆಯನ್ನು ಮರೆಮಾಚಲು ಹುಸಿ ಭಾವನಾತ್ಮಕ ಸಂಗತಿಗಳನ್ನು ಆದ್ಯತೆಯೆಂದು ಬಿಂಬಿಸಲಾಗುತ್ತಿದೆ. ರಾತ್ರಿ ಬೆಳಗಾಗುವುದರೊಳನೆ ನಮ್ಮ ಮನೆಯಲ್ಲಿ ನಾವೇ ಅನ್ಯರಾಗುವ ದುರಂತದಲ್ಲಿ ನಾವಿದ್ದೇವೆ. ಇದರ ವಿರುದ್ಧ ನಾವು ಹಿಂದೆಂದಿಗಿಂತ ಹೆಚ್ಚು ಎಚ್ಚರದಿಂದಿರಬೇಕು. ಇಲ್ಲದಿದ್ದರೆ ನಮ್ಮ ಜೀವಾಳವಾದ ಬಹುತ್ವ ಭಾರತ ನಾಶವಾಗುವ ಸಂಭವ ಇದೆ” ಎಂದು ಕಾರವಾರದಲ್ಲಿ ಸೌಹಾರ್ದ ಸಂಕ್ರಾಂತಿಗೆ ಸೇರಿದ ನಾಡಿನ ಕವಿಗಳು ಚಿಂತಕರು ಮಾತುಗಳ ಮೂಲಕ, ಕವಿತೆಯ ಮೂಲಕ ಆತಂಕ ವ್ಯಕ್ತಪಡಿಸಿದರು.
ಕಾರವಾರದಲ್ಲಿ ನಡೆದ ಹೊಸ ವರ್ಷ ಸ್ವಾಗತ ಹಳೆಯ ವರ್ಷ ವಿದಾಯದ ನನಸು-ಕನಸು ಎನ್ನುವ ಕಾರ್ಯಕ್ರಮದಲ್ಲಿ ನಡೆದ ಒಂದಿಷ್ಟು ಕವಿತೆ, ಒಂದಿಷ್ಟು ಮಾತುಕತೆಯಲ್ಲಿ ಸಾಹಿತಿ ವಿಷ್ಣು ನಾಯ್ಕ ಅಂಕೋಲಾ ಅಧ್ಯಕ್ಷತೆ ವಹಿಸಿದ್ದರು. ಜೋರ್ಜ ಫರ್ನಾಂಡೀಸ್ ಶುಭಕೋರಿ ನಾಡಿನ ತಲ್ಲಣಗಳ ಬಗ್ಗೆ ಸಾಂದರ್ಭಿಕ ಮಾತನಾಡಿದರು., 
ವೀರಲಿಂಗನಗೌಡ, ಶ್ರೀದೇವಿ ಕೆರೆಮನೆ, ಹೇಮಂತ ರಾಮಡಗಿ, ಕೃಷ್ಣ ನಾಯಕ ಹಿಚ್ಕಡ, ಜಿ.ಡಿ.ಪಾಲೇಕರ್, ವಸಂತ ಬಾಂದೇಕರ್, ನಾಗೇಶ ಅಣ್ವೇಕರ್, ಕೃಷ್ಣಾನಂದ ಬಾಂದೇಕರ್, ವಿದ್ಯಾ ಭಾಗ್ವತ್, ವಿವೇಕಾನಂದ ನಾಯ್ಕ, ರತ್ನಾಕರ ನಾಯ್ಕ, ನಿವೇದಿತಾ ಕೋಳಂಬಕರ್, ಫ್ರಾನ್ಸಿಸ್ ಫರ್ನಾಂಡೀಸ್, ರಾಜೇಶ ಮರಾಠೆ, ಗಣೇಶ ರಾಠೋಡ, ಉದಯ ಅಣ್ವೇಕರ್, ಯಮುನಾ ಗಾಂವ್ಕರ್ ಕವನ ವಾಚಿಸಿದರು. ಶಿವಾನಂದ ಭಟ್ ಮತ್ತು ಸರಸ್ವತಿ ವಿದ್ಯಾಲಯದ ಮೀನಾಕ್ಷಿ ಚಳಿಗೌಡ ಹೊಸ ಆಶಯದ ಹಾಡುಗಳನ್ನು ಹಾಡಿದರು. ನಜೀರ್ ಯು ಶೇಖ್, ಮಹಾದೇವ ರಾಣೆ, ಜಿ.ಡಿ. ಮನೋಜೆ, ಶ್ಯಾಮಸುಂದರ, ಸಾವೆರ್, ಖೈರುನ್ನಿಸಾ, ಅಲ್ತಾಫ್, ಅಬ್ದುಲ್ಲ ಶೇಖ್ ಮುಂತಾದವರು ಶುಭಕೋರಿದರು. ಸಭೆಯಲ್ಲಿ ನೆರೆಹಾವಳಿ ಬಾಧಿತ ವಿದ್ಯಾಥಿಗಳಿಗೆ ಸಹಯಾನ, ಚಿಂತನ, ಬಂಡಾಯ ಸಾಹಿತ್ಯ ಮತ್ತು ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್.ಎಫ್.ಐ) ನಿಂದ ಧನ ಸಹಾಯವನ್ನು ನೀಡಲಾಯಿತು.
ಚಿಂತನ ಉತ್ತರ ಕನ್ನಡ ಸಂಚಾಲಕರಾದ ಡಾ. ವಿಠ್ಠಲ ಭಂಡಾರಿ ಪ್ರಾಸ್ತಾವಿಕ ಮಾತನಾಡಿದರು. ಬಾಬು ಶೇಖ್ ಸ್ವಾಗತಿಸಿದರು. ಪ್ರೊ. ಶ್ರೀಧರ ನಾಯ್ಕ ವಂದಿಸಿದರು. ಸಂಘಟಕರಾದ ರಾಮಾ ನಾಯ್ಕ, ರಮೇಶ ಭಂಡಾರಿ ಉಪಸ್ಥಿತರಿದ್ದರು. ಯಮುನಾ ಗಾಂವ್ಕರ್ ನಿರೂಪಿಸಿದರು.