ಕನಸುಗಳಿಲ್ಲದ ಕಾಲವನ್ನು ಕಲ್ಪಿಸಿಕೊಳ್ಳುವುದೂ ಕಷ್ಟ. ಈ ಕಾಲವಂತೂ ನಾಡಿನ ಪ್ರಜೆಗಳ ಕನಸನ್ನೇ ನಾಶ ಮಾಡುತ್ತಿದೆ. ಕನಸು ಕಾಣುವವರನ್ನು ನಿರ್ಭಂಧಿಸುತ್ತಿದೆ. ಭಯ ಹುಟ್ಟಿಸುತ್ತಿದೆ. ಆದರೆ ಈ ದಾಳಿ ಹೆಚ್ಚಿದಂತೆ ಜನರ ಪ್ರತಿರೋಧವೂ ಬೆಳೆಯುತ್ತಾ ಹೋಗುತ್ತದೆ.
ಅಧಿಕಾರ ಕೇಂದ್ರದ ಎದುರು ಜನ ಹೋರಾಟಗಳು ಸೆಟೆದು ನಿಲ್ಲುತ್ತದೆ. ಕಳೆದ ವರ್ಷವಿಡೀ ದೇಶದಲ್ಲಿ ಇಂತ ಹಲವು ಹೋರಾಟಗಳು ನಡೆದವು. ಅದರ ಮುಂದುವರಿಕೆಯಾಗಿ ಹೋರಾಟದ ಕಿಚ್ಚು ಈ ವರ್ಷಕ್ಕೂ ಮುಂದುವರಿದಿದೆ. ಹಾಗಾಗಿ ಸಂವಿಧಾನವನ್ನು ಅಪ್ರಸ್ತುತಗೊಳಿಸಲು ಹೊರಟ ಶಕ್ತಿಗಳ ಎದುರು ನಾವು ಇನ್ನಷ್ಟು ಗಟ್ಟಿಯಾಗಿ ನಿಲ್ಲಬೇಕಾಗಿದೆ. ಇಂದು ಶಾಸಕಾಂಗ ತನ್ನ ನೈತಿಕತೆಯನ್ನು ಕಳೆದುಕೊಳ್ಳುತ್ತಿದೆ, ಕಾರ್ಯಾಂಗ ಕ್ರೌರ್ಯವನ್ನು ರೂಢಿಸಿಕೊಳ್ಳುತ್ತಿದೆ, ನ್ಯಾಯಾಂಗ ಮೌನಿಯಾಗಿದೆ. ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ಹೊಸವರ್ಷಕ್ಕೆ ನಮ್ಮ ಆಧ್ಯತೆ ಮತ್ತು ಮಾರ್ಗವನ್ನು ನಾವೇ ರೂಪಿಸಿಕೊಳ್ಳಬೇಕಾಗಿದೆ.
ಆಳುವವರಿಗೆ ಈ ದೇಶದ ಎಲ್ಲರಿಗೆ ವಸತಿ, ಆಹಾರ, ಅಕ್ಷರ, ಆರೋಗ್ಯ ಮತ್ತು ಉದ್ಯೋಗವನ್ನೂ ಒಳಗೊಂಡಂತೆ ಹಲವು ಭೌತಿಕ ಸಂಗತಿಗಳನ್ನು ಒದಗಿಸುವುದು ಆದ್ಯತೆ ಆಗುವ ಬದಲು ತಮ್ಮ ವಿಫಲತೆಯನ್ನು ಮರೆಮಾಚಲು ಹುಸಿ ಭಾವನಾತ್ಮಕ ಸಂಗತಿಗಳನ್ನು ಆದ್ಯತೆಯೆಂದು ಬಿಂಬಿಸಲಾಗುತ್ತಿದೆ. ರಾತ್ರಿ ಬೆಳಗಾಗುವುದರೊಳನೆ ನಮ್ಮ ಮನೆಯಲ್ಲಿ ನಾವೇ ಅನ್ಯರಾಗುವ ದುರಂತದಲ್ಲಿ ನಾವಿದ್ದೇವೆ. ಇದರ ವಿರುದ್ಧ ನಾವು ಹಿಂದೆಂದಿಗಿಂತ ಹೆಚ್ಚು ಎಚ್ಚರದಿಂದಿರಬೇಕು. ಇಲ್ಲದಿದ್ದರೆ ನಮ್ಮ ಜೀವಾಳವಾದ ಬಹುತ್ವ ಭಾರತ ನಾಶವಾಗುವ ಸಂಭವ ಇದೆ” ಎಂದು ಕಾರವಾರದಲ್ಲಿ ಸೌಹಾರ್ದ ಸಂಕ್ರಾಂತಿಗೆ ಸೇರಿದ ನಾಡಿನ ಕವಿಗಳು ಚಿಂತಕರು ಮಾತುಗಳ ಮೂಲಕ, ಕವಿತೆಯ ಮೂಲಕ ಆತಂಕ ವ್ಯಕ್ತಪಡಿಸಿದರು.
ಕಾರವಾರದಲ್ಲಿ ನಡೆದ ಹೊಸ ವರ್ಷ ಸ್ವಾಗತ ಹಳೆಯ ವರ್ಷ ವಿದಾಯದ ನನಸು-ಕನಸು ಎನ್ನುವ ಕಾರ್ಯಕ್ರಮದಲ್ಲಿ ನಡೆದ ಒಂದಿಷ್ಟು ಕವಿತೆ, ಒಂದಿಷ್ಟು ಮಾತುಕತೆಯಲ್ಲಿ ಸಾಹಿತಿ ವಿಷ್ಣು ನಾಯ್ಕ ಅಂಕೋಲಾ ಅಧ್ಯಕ್ಷತೆ ವಹಿಸಿದ್ದರು. ಜೋರ್ಜ ಫರ್ನಾಂಡೀಸ್ ಶುಭಕೋರಿ ನಾಡಿನ ತಲ್ಲಣಗಳ ಬಗ್ಗೆ ಸಾಂದರ್ಭಿಕ ಮಾತನಾಡಿದರು.,
ವೀರಲಿಂಗನಗೌಡ, ಶ್ರೀದೇವಿ ಕೆರೆಮನೆ, ಹೇಮಂತ ರಾಮಡಗಿ, ಕೃಷ್ಣ ನಾಯಕ ಹಿಚ್ಕಡ, ಜಿ.ಡಿ.ಪಾಲೇಕರ್, ವಸಂತ ಬಾಂದೇಕರ್, ನಾಗೇಶ ಅಣ್ವೇಕರ್, ಕೃಷ್ಣಾನಂದ ಬಾಂದೇಕರ್, ವಿದ್ಯಾ ಭಾಗ್ವತ್, ವಿವೇಕಾನಂದ ನಾಯ್ಕ, ರತ್ನಾಕರ ನಾಯ್ಕ, ನಿವೇದಿತಾ ಕೋಳಂಬಕರ್, ಫ್ರಾನ್ಸಿಸ್ ಫರ್ನಾಂಡೀಸ್, ರಾಜೇಶ ಮರಾಠೆ, ಗಣೇಶ ರಾಠೋಡ, ಉದಯ ಅಣ್ವೇಕರ್, ಯಮುನಾ ಗಾಂವ್ಕರ್ ಕವನ ವಾಚಿಸಿದರು. ಶಿವಾನಂದ ಭಟ್ ಮತ್ತು ಸರಸ್ವತಿ ವಿದ್ಯಾಲಯದ ಮೀನಾಕ್ಷಿ ಚಳಿಗೌಡ ಹೊಸ ಆಶಯದ ಹಾಡುಗಳನ್ನು ಹಾಡಿದರು. ನಜೀರ್ ಯು ಶೇಖ್, ಮಹಾದೇವ ರಾಣೆ, ಜಿ.ಡಿ. ಮನೋಜೆ, ಶ್ಯಾಮಸುಂದರ, ಸಾವೆರ್, ಖೈರುನ್ನಿಸಾ, ಅಲ್ತಾಫ್, ಅಬ್ದುಲ್ಲ ಶೇಖ್ ಮುಂತಾದವರು ಶುಭಕೋರಿದರು. ಸಭೆಯಲ್ಲಿ ನೆರೆಹಾವಳಿ ಬಾಧಿತ ವಿದ್ಯಾಥಿಗಳಿಗೆ ಸಹಯಾನ, ಚಿಂತನ, ಬಂಡಾಯ ಸಾಹಿತ್ಯ ಮತ್ತು ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್.ಎಫ್.ಐ) ನಿಂದ ಧನ ಸಹಾಯವನ್ನು ನೀಡಲಾಯಿತು.
ಚಿಂತನ ಉತ್ತರ ಕನ್ನಡ ಸಂಚಾಲಕರಾದ ಡಾ. ವಿಠ್ಠಲ ಭಂಡಾರಿ ಪ್ರಾಸ್ತಾವಿಕ ಮಾತನಾಡಿದರು. ಬಾಬು ಶೇಖ್ ಸ್ವಾಗತಿಸಿದರು. ಪ್ರೊ. ಶ್ರೀಧರ ನಾಯ್ಕ ವಂದಿಸಿದರು. ಸಂಘಟಕರಾದ ರಾಮಾ ನಾಯ್ಕ, ರಮೇಶ ಭಂಡಾರಿ ಉಪಸ್ಥಿತರಿದ್ದರು. ಯಮುನಾ ಗಾಂವ್ಕರ್ ನಿರೂಪಿಸಿದರು.
No comments:
Post a Comment