Wednesday 8 May 2019

Annana nenapu -vittal Bhandari

http://avadhimag.com/?paged=2&cat=489http://avadhimag.com/?paged=2&cat=489

ಕಾರ್ಡ್ ಬರೆಯಲು ವಿಳಾಸ ಗೊತ್ತಿಲ್ಲದಿದ್ದರೇನಂತೆ..!

ಅಣ್ಣನ ನೆನಪು-39
“ಆರ್. ವಿ ಯವರು ಮೂರು ನೆಲೆಗಳಿಂದ ಮುಖ್ಯವಾಗುತ್ತಾರೆ. ಸಂಘಟನೆ, ಸಾಹಿತ್ಯ ಮತ್ತು ಸ್ನೇಹ – ಈ ಮೂರು ನೆಲೆಗಳ ಮೂಲಕ ರಾಜಧಾನಿಯಾಚೆಗೆ ಸೃಜನಶೀಲ ಬದ್ಧತೆಯಿಂದ ಬದುಕಿ ಸ್ಥಳೀಯ ಸಾಂಸ್ಕಸ್ಕೃತಿಕ ಕ್ರಿಯೆಯಿಂದ ನಾಡಿಗೆ ಸಾಂಸ್ಕೃತಿಕ ಕೊಡುಗೆ ಕೊಟ್ಟ ಭಂಡಾರಿಯಂತವರ ಮಹತ್ವವನ್ನು ನಾವು ಅರ್ಥ ಮಾಡಿಕೊಳ್ಳುವುದು ಅಗತ್ಯ. ಜಿಲ್ಲೆ, ತಾಲೂಕು ಮತ್ತು ಹಳ್ಳಿಗಳಲ್ಲಿ ನೆಲೆಸಿ ಸುದ್ದಿ ಮಾಧ್ಯಮಗಳಿಂದ ದೂರ ಉಳಿದು ಕಟ್ಟುವ ಕೆಲಸದಲ್ಲಿ ತೊಡಗಿದ ಎಷ್ಟೋ ಜನರು ನಮ್ಮಲ್ಲಿ ಇದ್ದಾರೆ. ಮುನ್ನೆಲೆಯಲ್ಲಿ ಪ್ರಸಿದ್ಧರಾದವರು, ಸಾಂಸ್ಕೃತಿಕ ಚರಿತ್ರೆಯ ಭಾಗವಾದಷ್ಟು ಪ್ರಮಾಣದಲ್ಲಿ ಈ ಸ್ಥಳೀಯ ಸಂಸ್ಕೃತಿಯ ಕ್ರಿಯಾಶೀಲರು ಆಗುವುದಿಲ್ಲ.” ಇದು ಅಣ್ಣ ತೀರಿಕೊಂಡಾಗ ಡಾ. ಬರಗೂರು ರಾಮಚಂದ್ರಪ್ಪನವರು ಉದಯವಾಣಿಯಲ್ಲಿ ಬರೆದ ಲೇಖನದ ಒಂದು ತುಣುಕು.
“ಬರಗೂರು ರಾಮಚಂದ್ರಪ್ಪ ಬಂಡಾಯದ ಮುಖ್ಯ ಲೇಖಕರಲ್ಲಿ ಒಬ್ಬರು. ಕಾದಂಬರಿಕಾರರಾಗಿ ಕೂಡ ಅಷ್ಟೇ ಪ್ರಮುಖರಾಗುತ್ತಾರೆ. ಮುಖ್ಯವಾಗಿ ಸಮಾಜವಾದಿ ವಾಸ್ತವವಾದಿ ಲೇಖಕರಾಗಿರುವುದರಿಂದ ಸಾಹಿತ್ಯದಲ್ಲಿ ಅವರು ಎತ್ತುವ ಸಮಸ್ಯೆ ಮತ್ತು ದಾಖಲೆ ಉಳಿದವರಿಗೆಲ್ಲಾ ದಿಕ್ಸೂಚಿಯಾಗುವಂತಾಗುವುದು. ..ಸೀತಕ್ಕನ ಹೊಟ್ಟೆಯಲ್ಲಿ ಹೊರೆಯುತ್ತಿರುವ ‘ಸೂರ್ಯ’ಪ್ಪನ ಹಾಗೆ ಬರಗೂರು ಸರ್ವಶಕ್ತಿಯನ್ನೂ ಹುರಿಗೂಡಿಸಿ ಹರಳುಗಟ್ಟಿ, ಬರುವ ಹೊಸ ಕಾದಂಬರಿಯ ಆಶೆಯನ್ನು ‘ಸೂರ್ಯ’ನ ಒಡಲಿನಲ್ಲಿ ಹೊತ್ತಿದೆ ಎಂಬುದು ನನ್ನ ನಿರೀಕ್ಷೆಯಾಗಿದೆ.” ಇದು ಅಣ್ಣ ಬರಗೂರ ಅವರ ಕಾದಂಬರಿಯ ಬಗ್ಗೆ ಬರೆಯುವಾಗ ಬಹುಹಿಂದೆ ವ್ಯಕ್ತಪಡಿಸಿದ ಅಭಿಪ್ರಾಯ ಹೌದು, ಡಾ. ಬರಗೂರು ಅವರ ಕುರಿತು ಅಣ್ಣನ ಬಾಯಲ್ಲಿ ಅಭಿಮಾನ, ಗೌರವ ಮತ್ತು ಪ್ರೀತಿಯ ಮಾತುಗಳನ್ನು ಹಲವು ಬಾರಿ ಕೇಳಿದ್ದಿದೆ. ಇದು ಆತನ ಕೊನೆಯ ದಿನದವರೆಗೂ ಮುಂದುವರಿದಿತ್ತು.
ಬಂಡಾಯ ಸಾಹಿತ್ಯ ಪ್ರಾರಂಭವಾದ ಮೊದಲ ದಿನಗಳಿಂದಲೇ ಇಬ್ಬರೂ ಸ್ನೇಹಿತರು. ಹೀಗೆ ಸ್ನೇಹ ಬೆಸೆಯುವಲ್ಲಿ ಸಂಘಟನೆಯ ಕುರಿತ ಇಬ್ಬರು ಬದ್ಧತೆಯೊಂದಿಗೆ ಇಬ್ಬರಲ್ಲಿಯೂ ಇರುವ ಸಮಾನ ಗುಣಗಳೂ ಕಾರಣವಾಗಿದ್ದವು.
ಒಮ್ಮೆ ಬರಗೂರು ಅವರನ್ನು ನಮ್ಮ ಮನೆಯ ಊಟಕ್ಕೆ ಕರೆಯಬೇಕು. ಅವರ ಕುರಿತು ಒಂದು ವಿಚಾರ ಸಂಕಿರಣ ಮಾಡಬೇಕೆಂದು ಕೊನೆಯ ದಿನದವರೆಗೂ ಹಂಬಲಿಸಿದ್ದ. ಅವರು ಬಂದಾಗ ಊಟಕ್ಕೆ ಏನೇನು ಮಾಡಬೇಕೆಂದೂ ಆತ ಹೇಳಿದ್ದು ಈಗ ನೆನಪು. ಆದರೆ ಆ ದಿನ ಕೊನೆಗೂ ಬರಲಿಲ್ಲ. ತುಂಬಾ ಸಲ ಈ ಕಾರ್ಯಕ್ರಮಕ್ಕೆ ಡಾ. ಬರಗೂರು ಅವರ ದಿನಾಂಕವನ್ನು ಕೇಳಿ ಪತ್ರ ಬರೆದೆವು. ಆದರೆ ಬರಗೂರು ಅವರ ಸಮಯ ಹೊಂದಾಣಿಕೆ ಆಗಿಲ್ಲ. ಮತ್ತು ಆ ಸಂದರ್ಭದಲ್ಲಿ ಅಣ್ಣನ ಅನಾರೋಗ್ಯವು ಉಲ್ಬಣಗೊಂಡಿತು.
ಒಮ್ಮೆ ಕಾರ್ಯಕ್ರಮಕ್ಕೆ ಬರುವಂತೆ ವಿನಂತಿಸಿ ಆರ್.ವಿ ಯವರ ಹಲವು ಪತ್ರಗಳು ಬಂದಿದ್ದವು. ‘ನನ್ನ ಕುರಿತು ಒಂದು ವಿಚಾರ ಸಂಕಿರಣ ನಡೆಸಿ ಅದರಲ್ಲಿ ನಾನು ಭಾಗವಹಿಸುವುದು ನನಗೆ ಮುಜುಗರವಾಯಿತು. ಹಾಗಾಗಿಯೂ ನಾನು ಬರಲು ಮನಸ್ಸು ಮಾಡಿಲ್ಲ’ ಎಂದು ಬರಗೂರು ಅವರು ನನ್ನೊಂದಿಗೆ ಒಮ್ಮೆ ಹೇಳಿದ್ದಿದೆ. ಹಾಗೆ ಅವರು ಅಣ್ಣನಿಗೆ ಒಂದು ಪತ್ರ ಬರೆದಿದ್ದರು
ಪ್ರಿಯರಾದ ಡಾ. ಆರ್.ವಿ. ಭಂಡಾರಿ ಅವರಿಗೆ
ನಮಸ್ಕಾರಗಳು.
ನಿಮ್ಮ ಪತ್ರ ತಲುಪಿದೆ. ನಾನು ಖಂಡಿತ ಅಕ್ಟೋಬರ್ ನಲ್ಲಿ ನಿಮ್ಮ ಕಡೆಗೆ ಬರುತ್ತೇನೆ. ಮೂರು ವರ್ಷಗಳಿಂದ ನಾನು ಸಮಾರಂಭಕ್ಕೆ ದಿನಾಂಕವನ್ನು ಕೊಟ್ಟಿಲ್ಲ ಎಂದಿದ್ದೀರಿ. ನಿಜ. ನನ್ನ ಸಂಕೋಚವನ್ನು ದಯವಿಟ್ಟು ಅರ್ಥ ಮಾಡಿಕೊಳ್ಳಿ. ನಾನು ಯಾವತ್ತೂ ನನ್ನ ಮತ್ತು ನನ್ನ ಕೃತಿಗಳ ಬಗ್ಗೆ ನಡೆಯುವ ಚರ್ಚೆಯ ಸಂದರ್ಭದಲ್ಲಿ ಖುದ್ದು ಹಾಜರಿರುವುದಿಲ್ಲ. ನಿಜಕ್ಕೂ ನನಗೆ ಈ ಬಗ್ಗೆ ಆಸಕ್ತಿಯಿಲ್ಲ. ಹೀಗಾಗಿ ದಿನಾಂಕ ಮುಂದೂಡುತ್ತಾ ಬಂದೆ. ಈಗಲೂ ನನ್ನ ಕೃತಿಯ ಅಥವಾ ನನ್ನ ಸಂಬಂಧದ ಸಭೆಗೆ ನನ್ನನ್ನು ಬಿಟ್ಟರೆ ತುಂಬಾ ಸಂತೋಷವಾಗುತ್ತದೆ.
ಆದರೂ ನಾನು ನಿಮ್ಮ ಪ್ರೀತಿ ವಿಶ್ವಾಸಗಳಿಗೆ ಮಣಿದು ನೀವು ಕರೆದಲ್ಲಿಗೆ ಬರುತ್ತೇನೆ. ಅಕ್ಟೋಬರ್ ನಲ್ಲಿ ಗ್ಯಾರಂಟಿ ಬರುವೆ. ನನ್ನ ಬಗ್ಗೆ ನನ್ನ ಎದುರೇ ವಿಚಾರಗೋಷ್ಠಿ ಬೇಡ ಅಂತ ಈಗಲೂ ನನ್ನ ಅನಿಸಿಕೆ. ಮೊದಲು ನೀವು ಹುಷಾರಾಗಿ. ನೂರ್ಕಾಲ ಬಾಳಿ. ಅದಕ್ಕಿಂತ ಬೇರೆ ಭಾಗ್ಯ ಯಾವುದಿದೆ.
ಇಂತು ವಿಶ್ವಾಸಿ
ಗ್ರಾಮೀಣ ಭಾಗದ ಪ್ರತಿಭೆಗಳನ್ನು, ಅಂಚಿನಲ್ಲಿ ಕೆಲಸ ಮಾಡುತ್ತಿರುವವರನ್ನೂ ಗುರುತಿಸುವಲ್ಲಿ ಯಾವಾಗಲೂ ಡಾ. ಬರಗೂರು ರಾಮಚಂದ್ರಪ್ಪನವರು ಮುಖ್ಯರಾಗುತ್ತಾರೆ. ಇದರ ಭಾಗವಾಗಿಯೇ ಅವರು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದಾಗ ಅಣ್ಣನನ್ನು ಅದರ ಸದಸ್ಯನನ್ನಾಗಿಸಿಕೊಂಡರು. ಒಂದು ವೇಳೆ ಬರಗೂರರವರು ಅಧ್ಯಕ್ಷರಾಗಿಲ್ಲದಿದ್ದರೆ ಅಣ್ಣ ಅಕಾಡೆಮಿಯ ಸದಸ್ಯನಾಗುತ್ತಿರಲಿಲ್ಲ. ಆತ ಹೇಳಿದ ಎಲ್ಲಾ ಕಾರ್ಯಕ್ರಮಗಳು ಆಗ ಉ.ಕ ದಲ್ಲಿ ನಡೆಯಿತು. ಹಿಂದೆ ನಾನು ಹೇಳಿದಂತೆ ಸಾಹಿತ್ಯ-ಸಾಂಸ್ಕೃತಿಕ ಕಾರ್ಯಕ್ರಮದ ದೃಷ್ಟಿಯಿಂದ ಉ.ಕ ಕ್ಕೆ ಇದೊಂದು ಮಹತ್ವದ ಕಾಲ.
ಅಣ್ಣ ನಮ್ಮನ್ನು ಅಗಲಿದ ನಂತರ ‘ಸಹಯಾನ’ (ಡಾ. ಆರ್.ವಿ. ಭಂಡಾರಿ ನೆನಪಿನ ಸಂಸ್ಕೃತಿ ಅಧ್ಯಯನ ಕೇಂದ್ರ) ಎನ್ನುವ ಟ್ರಸ್ಟ್ ಪ್ರಾರಂಭಿಸಿದಾಗ ಅದರ ಪದಾಧಿಕಾರಿಗಳನ್ನು ಆಯ್ಕೆ ಮಾಡಿಕೊಳ್ಳುವಾಗ ಅಂಕೋಲೆಯ ವಿಷ್ಣು ನಾಯ್ಕ ಅವರ ಮನೆಯಲ್ಲಿ ಸೇರಿದ್ದೆವು. ಅಲ್ಲಿಂದಲೇ ಬರಗೂರು ಅವರನ್ನು ದೂರವಾಣಿಯ ಮೂಲಕ ಸಹಯಾನದ ಗೌರವಾಧ್ಯಕ್ಷರಾಗಿರುವಂತೆ ವಿನಂತಿಸಿಕೊಂಡೆವು. ಅಣ್ಣನ ಹೆಸರಿನ ಟ್ರಸ್ಟ್ ಆಗಿರುವುದರಿಂದ ಒಪ್ಪೇಒಪ್ಪಿಕೊಳ್ಳುತ್ತಾರೆನ್ನುವ ವಿಶ್ವಾಸವೂ ಇತ್ತು.
“ಸಾಮಾನ್ಯವಾಗಿ ನಾನು ಯಾವುದೇ ಟ್ರಸ್ಟ್, ಇತ್ಯಾದಿ ಸಂಸ್ಥೆಯ ಜವಾಬ್ದಾರಿಯನ್ನು ಸ್ವೀಕರಿಸುವುದಿಲ್ಲ. ಆದರೆ ಭಂಡಾರಿಯವರ ಹೆಸರಿನ ಸಂಸ್ಥೆಯಲ್ಲಿ ಇರಬೇಕು ಎನ್ನುವ ನಿಮ್ಮ ಬೇಡಿಕೆಯನ್ನು ನಾನು ತಿರಸ್ಕರಿಸಲಾರೆ. ಅವರ ಮೇಲಿನ ಪ್ರೀತಿ ಮತ್ತು ಸ್ನೇಹದ ಭಾಗವಾಗಿ ಅದನ್ನು ಒಪ್ಪಿಕೊಳ್ಳುತ್ತೇನೆ.” ಎಂದು ಸಂಸ್ಥೆಗೆ ಸೂಕ್ತ ಮಾರ್ಗದರ್ಶನ ಮಾಡಿದರು. ಆಮೇಲೆ ಸಹಯಾನದಲ್ಲಿ ನಡೆದ ಸಹಯಾನ ಸಾಹಿತ್ಯೋತ್ಸವದಲ್ಲಿ ಕೂಡ (“ಚಳುವಳಿ: ಹೊಸ ತಲೆಮಾರು” ಎನ್ನುವ ವಿಷಯದ ಕುರಿತ ಉತ್ಸವದಲ್ಲಿ) ಪಾಲ್ಗೊಂಡು ಅಧ್ಯಕ್ಷತೆ ವಹಿಸಿಕೊಂಡರು. ಬಂದು ಹೋಗುವ ಪ್ರಯಾಣ ವೆಚ್ಚವನ್ನೂ ಸ್ವೀಕರಿಸಲಿಲ್ಲ.
ಸಂಘಟನೆಯ ಸಂದರ್ಭದಲ್ಲಿ ಮಾತ್ರವಲ್ಲ, ವೈಯಕ್ತಿಕವಾಗಿ ಯಾವುದಾದರೂ ತೀರ್ಮಾನ ತೆಗೆದುಕೊಳ್ಳುವ ಸಂದರ್ಭದಲ್ಲಿಯೂ ಪರಸ್ಪರರು ಅಭಿಪ್ರಾಯ ಹಂಚಿಕೊಳ್ಳುತ್ತಿದ್ದರು. ಅವರಿಗೆ ಸರ್ಕಾರದಡಿಯ ಯಾವುದೇ ಸಂಸ್ಥೆಯ ಮುಖ್ಯಸ್ಥರಾಗಲು, ಪ್ರತಿನಿಧಿಯಾಗಲು ಆಹ್ವಾನ ಬಂದಾಗಲೂ ಪರಸ್ಪರರ ನಡುವೆ ಪತ್ರ ವ್ಯವಹಾರ ಮತ್ತು ದೂರವಾಣಿ ಸಂಭಾಷಣೆ ನಡೆಯುತ್ತಿತ್ತು. ಅವರು ಬರೆದ ಮಹತ್ವದ ಪತ್ರವನ್ನು ನಮಗೂ ಓದಲು ಕೊಡುತ್ತಿದ್ದ ಅಣ್ಣ, ಅವರೊಂದಿಗೆ ನಡೆದ ದೂರವಾಣಿಯ ಸಂಭಾಷಣೆಯ ಮುಖ್ಯಾಂಶವನ್ನು ಹೇಳುತ್ತಿದ್ದ.
ಅಕಾಡೆಮಿಯ ಪ್ರತಿ ಸಭೆಗೆ ಹೋಗಿ ಬಂದ ಮೇಲೆ ಕೂಡ ಬರಗೂರು ಅವರ ಹೊಸ ಹೊಸ ಆಲೋಚನೆ ಮತ್ತು ಅವರು ಸೈದ್ಧಾಂತಿಕ ಸ್ಪಷ್ಟತೆಯ ಬಗ್ಗೆ, ಅಕಾಡೆಮಿಯಲ್ಲಿರುವ ಪ್ರಜಾಸತ್ತಾತ್ಮಕ ಕೆಲಸ ಮತ್ತು ಪಾರದರ್ಶಕತೆಯ ಬಗ್ಗೆ ಅಭಿಮಾನದಿಂದ ಹೇಳುತ್ತಿದ್ದ. ಹಾಗೆಂದು ಅವರಿಬ್ಬರೂ ಪರಸ್ಪರರನ್ನು ಗೌರವಿಸಿಕೊಳ್ಳುವುದರೊಂದಿಗೆ ಭಿನ್ನಾಭಿಪ್ರಾಯವನ್ನು ಆರೋಗ್ಯಪೂರ್ಣವಾಗಿ ಚರ್ಚಿಸಿಕೊಳ್ಳುತ್ತಿದ್ದರು. ಅದು ಸೈದ್ಧಾಂತಿಕ ಚೌಕಟ್ಟಿನಲ್ಲಿಯೇ ಇರುತ್ತಿತ್ತು.ಒಮ್ಮೆ ‘ಅಭಿಮಾನಿ’ ಪತ್ರಿಕೆಯಲ್ಲಿ ಬರಗೂರು ಅವರು ‘ಕನ್ನಡ ಕಾವಲು ಸಮಿತಿಯ ಅಧ್ಯಕ್ಷರಾಗಲು ಓಡಾಡುತ್ತಿದ್ದಾರೆ’ ಎಂದು ಟೀಕಿಸಿ ಲೇಖನ ಬಂದಿತ್ತು. ಬಹುಶಃ ಆಗ ಅಣ್ಣ ಆ ಕುರಿತು ಪತ್ರ ಬರೆದು ತನ್ನ ಅಸಮಾಧಾನವನ್ನು ಹೊರಹಾಕಿರಬೇಕು. (ಆ ಪತ್ರ ನನ್ನಲ್ಲಿ ಇಲ್ಲ) ಅದಕ್ಕೆ ತಕ್ಷಣ (1985 ರಲ್ಲಿ) ಬರಗೂರು ಸರ್ ಅವರು ಪತ್ರ ಬರೆದು “ನನ್ನ ಕುರಿತು ತಾವು ಅನುಮಾನಪಟ್ಟಿದ್ದು ಬೇಸರ ತಂದಿತು. ಅದಕ್ಕೆ ಪತ್ರಿಕೆಯಲ್ಲಿಯೇ ಉತ್ತರಿಸಿದ್ದೇನೆ. ನೋಡಿ ಬರೆಯಿರಿ’ ಎಂದು ಬರೆದರು ಮಾತ್ರವಲ್ಲ,
07-01-85
ಪ್ರಿಯ ಶ್ರೀ ಭಂಡಾರಿಯವರೆ,
ನಿಮ್ಮ ಪತ್ರ ಇದೇ ತಾನೆ ತಲುಪಿತು. ನಾನು ಹೆಚ್ಚು ಇಷ್ಟಪಡುವ ನೀವೇ ನನ್ನ ಬಗ್ಗೆ ಅನುಮಾನ ಪಟ್ಟಿರಬಹುದೆಂದು ಅನ್ನಿಸಿ ನಿಜಕ್ಕೂ ನೋವಾಯಿತು. ‘ಅಭಿಮಾನಿ’ಯಲ್ಲಿ ನನ್ನ ಬಗ್ಗೆ ಇರುವುದಾದರೂ ಏನು? ಮೊದಲಿನಷ್ಟು ನಾನು ಹರಿತವಾಗಿಲ್ಲ ಎಂದು. ನಾನು ಕಾವಲು ಸಮಿತಿ ಅಧ್ಯಕ್ಷತೆಗಾಗಿ ನನ್ನ ನಾಲಿಗೆಯನ್ನು ಮಾರಿಕೊಳ್ಳುತ್ತೇನೆಯೇ? ನೀವೇ ತೀರ್ಮಾನಿಸಿ. ಇಷ್ಟಕ್ಕೂ ‘ಅಭಿಮಾನಿ’ಯಲ್ಲಿ ನನ್ನ ಬಗ್ಗೆ ಬರೆಯುವಾಗ ಈಗಲೂ ಜನತಾ ಪಕ್ಷ ಸರ್ಕಾರವನ್ನು ಟೀಕಿಸುತ್ತಿದ್ದೇನೆ ಎಂಬುದನ್ನೂ ಹೇಳಿದ್ದಾರೆ. ಅಂದ ಮೇಲೆ ನನ್ನ ಬಗ್ಗೆ ಟೀಕಿಸುವುದು ಏನಿದೆ ಹೇಳಿ. ಜೊತೆಗೆ ಬರೆದವರ ಮನೋಧರ್ಮವನ್ನೂ ನೀವು ಯೋಚಿಸಬೇಕು.
ಒಂದೇ ಒಂದು ಮಾತು ಹೇಳಬಯಸುವೆ. ನನ್ನನ್ನು, ನನ್ನ ನಾಲಿಗೆ, ಲೇಖನಿಯನ್ನು ಯಾರೂ ಕೊಂಡುಕೊಳ್ಳಲು ಸಾಧ್ಯವಿಲ್ಲ.
ವಿಶ್ವಕನ್ನಡ ಮೇಳದ ಸಂಬಂಧದಲ್ಲಿ ನನಗೆ ಕೊಡ ಮಾಡಿದ ಒಂದು ಲಕ್ಷ ರೂ.ಗಳ ಸಾಕ್ಷ್ಯಚಿತ್ರ ಯೋಜನೆಯನ್ನೇ ನಿರಾಕರಿಸಿದ ನಾನು ಆಮಿಷಕ್ಕೆ ಒಳಗಾಗುತ್ತೇನೆಯೇ? ಅದೂ 75 ಸಾವಿರ ರೂ. ಸಾಲ ಹೊತ್ತಿರುವ ನಾನು ಇಂಥದನ್ನೂ ನಿರಾಕರಿಸಿದೆ – ಆದರೆ ಕಾಮಾಲೆ ಕಣ್ಣುಗಳಿಗೆ ಇದು ಕಾಣುವುದಿಲ್ಲ.”
ಅಲ್ಲೇ ಕೊನೆಗೆ “ಫೆಬ್ರವರಿ ಮೊದಲವಾರ ಬೆಂಗಳೂರಿನಲ್ಲಿ ‘ಬಂಡಾಯ ಸಂಸ್ಕಸ್ಕೃತಿ ವಾರ’ ಮಾಡುತ್ತೇವೆ, ವಿವರ ಕಳುಹಿಸುತ್ತೇವೆ’ ಎಂದು ಸಂಘಟನೆಯ ಸಂಬಂಧಿ ಹೇಳಿಕೆಯ ಮೂಲಕವೇ ಮುಕ್ತಾಯ ಮಾಡಿದ್ದರು. ಹೀಗೆ ವೈಯಕ್ತಿಕ ಚರ್ಚೆಯೂ ಸಂಘಟನೆಯ ವಿಷಯದಲ್ಲಿಯೇ ಮುಕ್ತಾಯ ಆಗುತ್ತಿತ್ತು.
1992 ರಲ್ಲಿ ಅವರು ಅಣ್ಣನಿಗೆ ಬರೆದ ಪತ್ರ ಹೀಗಿದೆ.
ಪ್ರಿಯ ಶ್ರೀ ಭಂಡಾರಿ ಅವರೆ –
ನಿಮ್ಮ ತುಂಬು ಮನಸ್ಸಿನ ಪತ್ರ ನೆನ್ನೆ ತಾನೆ ಬಂದಿದೆ. ನಿಮ್ಮ ಹೃದಯ ತುಂಬಿದ ಮಾತುಗಳಿಗೆ ಏನು ಹೇಳಲಿ? ನನ್ನಲ್ಲಿ ಸ್ನೇಹ ಮತ್ತು ಸಿದ್ಧಾಂತದ ಸ್ಥೈರ್ಯವನ್ನು ನಿಮ್ಮ ಪತ್ರ ಹೆಚ್ಚಿಸಿದೆ ಎಂದು ಮಾತ್ರ ಹೇಳಬಲ್ಲೆ.
ನಾನು ಹತ್ತು-ಹನ್ನೆರಡು ವರ್ಷಗಳಿಂದ ಸಾಲ ಶೂಲದಲ್ಲಿ ಸಿಕ್ಕಿ ಒದ್ದಾಡುತ್ತ ಬಂದಿದ್ದರೂ ಬಂಡಾಯ ಸಾಹಿತ್ಯ ಸಂಘಟನೆಯನ್ನು ಪ್ರೀತಿಸಿದೆ. ನಿಮ್ಮಂಥ ವಿರಳ ವ್ಯಕ್ತಿಗಳ ಸ್ನೇಹ ಪಡೆದೆ. ಇದಕ್ಕಿಂತ ಇನ್ನೇನು ಬೇಕು? ಎಷ್ಟೋ ದಿನ ನನ್ನ ಹೆಂಡತಿ-ಮಕ್ಕಳಿಗಷ್ಟೇ ಊಟವಾಗಿ ನಾನು ಸುಳ್ಳು ನೆಪದಲ್ಲಿ ಉಪವಾಸವಿದ್ದ ದಿನಗಳನ್ನು ಇಂಥ ಸ್ನೇಹ ಸಂಬಂಧಗಳು ಮರೆಸುತ್ತ ಬಂದಿವೆ.
ಈಗ ನನ್ನ ಸ್ಥಿತಿ ಸ್ವಲ್ಪ ಪರವಾಗಿಲ್ಲವಾದರೂ ನೆನಪುಗಳು ಸತ್ತಿಲ್ಲ.
ಹಾವುಗಳ ನಡುವೆ ಹೂವಾಗಬೇಕಾದ ಈ ಬದುಕು ನನಗೆ ಸಾಕಷ್ಟು ಕಲಿಸಿದೆ. ಅದಕ್ಕಾಗಿ ಬದುಕಿಗೆ-ಬಂಡಾಯಕ್ಕೆ ನಾನು ಬದ್ಧ – ಇದು ನಿಮ್ಮ ನೆಲೆಯೂ ಹೌದು.
ನಮ್ಮ ಸ್ನೇಹ ಬೆಳೆಯುತ್ತಲೇ ಇರಲಿ. ಆಕಾಶಕ್ಕೆ ಆತಂಕವಾಗಲಿ.
ತಮ್ಮ ವಿಶ್ವಾಸಿ
ಈ ಎರಡು ಪತ್ರವನ್ನು ಇಲ್ಲಿ ಕೊಟ್ಟಿದ್ದೇಕೆಂದರೆ ಪರಸ್ಪರ ವಿಮರ್ಶಾತ್ಮಕವಾಗಿ ಚರ್ಚಿಸುತ್ತಿದ್ದರು ಮತ್ತು ಈ ಚರ್ಚೆ ಅವರ ಸ್ನೇಹಕ್ಕೆ ಯಾವ ಅಡ್ಡಿಯೂ ಆಗಿರಲಿಲ್ಲ. ಬದಲಾಗಿ ಇನ್ನಷ್ಟು ಬೆಳೆಸಿದವು.
ಬಹುಶಃ ತಿಂಗಳಿಗೆ ಕನಿಷ್ಠ 4-5 ಪತ್ರವಾದರೂ ಅಣ್ಣನಿಂದ ಬರಗೂರು ಅವರಿಗೆ ಹೋಗುತ್ತಿತ್ತು…. ಇಂತಹ ಒಂದು ಆದರ್ಶದ ಸ್ನೇಹ ಅವರದು. ಪ್ರೊ. ಬರಗೂರು ಎಂದರೆ ಅವನಿಗೆ ಒಂದು ಧೈರ್ಯ ಕೂಡ ಆಗಿತ್ತು. ಏನೇ ಸಮಸ್ಯೆ ಬಂದರೂ, ಸಮಸ್ಯೆ ಹೇಳಿ ಇವನಲ್ಲಿ ಯಾರೇಬಂದರೂ, “ನಿಲ್ಲಿ, ಬರಗೂರು ಅವರಿಗೆ ಹೇಳೋಣ” ಎನ್ನುತ್ತಿದ್ದ, ಸಲಹೆ ಪಡೆಯುತ್ತಿದ್ದ. ಈಗಲೂ ಅಣ್ಣನ ಕುರಿತು ಅವರ ಭಾವ ಬದಲಾಗಿಲ್ಲ.
ಅವರ ಕಷ್ಟದ ಸಂದರ್ಭದಲ್ಲಿಯೂ ಅಣ್ಣ ಸಹಕರಿಸಿದ್ದ. ಅವರು ಮನೆ ಕಟ್ಟುವ ಸಂದರ್ಭದಲ್ಲಿ ತುಂಬಾ ತೊಂದರೆಯಲ್ಲಿದ್ದರು. ಆಗ ಅಣ್ಣ ನಿವೃತ್ತನಾಗಿದ್ದ. ಆ ನಿವೃತ್ತಿಯಿಂದ ಬಂದ ಹಣದಲ್ಲಿ ಸ್ವಲ್ಪ ಭಾಗವನ್ನು ತೆಗೆದುಕೊಂಡು ಹೋಗಿ ಡಾ. ಬರಗೂರು ಅವರಿಗೆ ನೀಡಿದ್ದ. ಎಲ್ಲರೂ ನಿವೃತ್ತಿಯ ನಂತರ ಬಂದ ಹಣವನ್ನು ಬ್ಯಾಂಕಿನಲ್ಲಿ ಇಟ್ಟರೆ ಅಣ್ಣ ತನ್ನ ಸ್ನೇಹಕ್ಕೆ ಅದನ್ನು ನೀಡಿದ್ದ. ಈ ಘಟನೆಯನ್ನು ಬರಗೂರು ಅವರು ಅವನ ನಿಧನಾನಂತರ ಬರೆದ ಲೇಖನಲ್ಲಿ ನೆನಪಿಸಿಕೊಂಡಿದ್ದು ಹೀಗೆ:
“ಎಲ್ಲ ಪ್ರಗತಿಪರ ಚಳುವಳಿಯ ಜೊತೆ ಸಂಬಂಧವಿಟ್ಟುಕೊಂಡು ಕ್ರಿಯಾತ್ಮಕ ಕೊಡುಗೆ ನೀಡಿದರು. ಸ್ವಾರ್ಥಕ್ಕಾಗಿ ಸೈದ್ಧಾಂತಿ ಆಶಯವನ್ನು ಆಪೋಷನ ಮಾಡುವವರ ಮಧ್ಯೆ ನಿಸ್ವಾರ್ಥ ಜೀವಿಯಾಗಿ ಉಳಿದರು. ಯಾವತ್ತೂ ತಮ್ಮ ಸೈದ್ಧಾಂತಿ ಬದ್ಧತೆಗೆ ಚ್ಯುತಿ ತಾರದೇ ಬೆಳಗಿದರು.
ಭಂಡಾರಿಯವರದ್ದು ಅಬ್ಬರದಲ್ಲಿ ಅನಾವರಣಗೊಳ್ಳುವ ಸ್ನೇಹವಲ್ಲ. ಅಂತರಂಗದ ಆಪ್ತಭಾವದ ಸ್ನೇಹ. ಒಂದು ಪ್ರಸಂಗವನ್ನು ಹೇಳಬಯಸುತ್ತೇನೆ. ನಾನು ಮನೆ ಕಟ್ಟಿಸುತ್ತಿದ್ದ ಸಂದರ್ಭ. ಭಂಡಾರಿಯವರು ನನ್ನನ್ನು ಕಾಣಲು ಬಂದರು. ನನ್ನ ನಿವೃತ್ತಿಯ ನಂತರ 60,000 ರೂಪಾಯಿ ಬಂದಿದೆ. ಅದರಲ್ಲಿ ನಿಮಗೆ 30,000 ರೂಪಾಯಿ ಕೊಡುತ್ತೇನೆ. ಅದನ್ನು ನನ್ನ ಮಗಳ ಮದುವೆಯ ಸಂಸರ್ಭದಲ್ಲಿ ವಾಪಸ್ ಕೊಟ್ಟರೆ ಸಾಕು. ಎಂದು ಮೂವತ್ತು ಸಾವಿರ ರೂಪಾಯಿ ಮುಂದಿಟ್ಟರು. ನನಗೆ ಮಾತೇ ಹೊರಡಲಿಲ್ಲ. ನಾನು ಕಷ್ಟದಲ್ಲಿದ್ದೇನೆಂದು ಅವರಿಗೆ ಗೊತ್ತಾಗಿತ್ತು. ಕೆಲ ಸ್ನೇಹಿತರನ್ನು ಕೇಳಿ ಸಾಲಪಡೆದಿದ್ದು ಅವರಿಗೆ ತಿಳಿದಿತ್ತು. ಹಾಗಾಗಿಯೇ ನಾನು ಕೇಳದೆಯೇ ಅವರು ಅವರು ಹಣ ತಂದುಕೊಟ್ಟರು. (ನಾನೂ ಸಕಾಲಕ್ಕೆ ಹಿಂತಿರುಗಿಸಿದೆ.) ಇದು ಅವರ ಸ್ನೇಹದ ಒಂದು ಉದಾಹರಣೆ”
ಬಹುಶಃ ಅವರಿಬ್ಬರ ನಡುವಿನ ಸ್ನೇಹಕ್ಕೆ ಇದೊಂದು ಘಟನೆ ಸಾಕು ಅಂದುಕೊಂಡಿದ್ದೇನೆ.
ಲೇಖನದ ಕೊನೆಗೆ ಅವರು ಬರೆಯುತ್ತಾರೆ.
“ಇನ್ನು ಕಾರ್ಡು ಬರುವುದಿಲ್ಲ. ಅವರಿಗೆ ಕಾರ್ಡ್ ಬರೆಯೋಣವೆಂದರೆ ವಿಳಾಸ ಗೊತ್ತಿಲ್ಲ..”
ಕಾರ್ಡ್ ಬರೆಯಲು ವಿಳಾಸ ಗೊತ್ತಿಲ್ಲದಿದ್ದರೇನಂತೆ, ತಮ್ಮಿಬ್ಬರ ಸ್ನೇಹಭಾವಕ್ಕೆ ಪ್ರತ್ಯೇಕ ವಿಳಾಸ ಬೇಕಾಗಿಲ್ಲ…