Thursday, 31 March 2016
Wednesday, 30 March 2016
'ಸಹಯಾನ'ದಲ್ಲಿ ಜಲವಳ್ಳಿ ವೆಂಕಟೇಶ ರಾವ್ ಅವರಿಗೆ ಜಿ ಎಸ್ ಭಟ್ಟ, ಧಾರೇಶ್ವರ ನೆನಪಿನ ಸಮ್ಮಾನ ಪ್ರದಾನ
'ಸಹಯಾನ'ದಲ್ಲಿ ಜಲವಳ್ಳಿ ವೆಂಕಟೇಶ ರಾವ್ ಅವರಿಗೆ
ಜಿ ಎಸ್ ಭಟ್ಟ, ಧಾರೇಶ್ವರ ನೆನಪಿನ ಸಮ್ಮಾನ ಪ್ರದಾನ
ಇತ್ತೀಚೆಗೆ ಕೆರೆಕೋಣದ ಸಹಯಾನದ ಅಂಗಳದಲ್ಲಿ ನಡೆದ ಸಮಾರಂಭದಲ್ಲಿ ಹಿರಿಯ ಯಕ್ಷಗಾನ ನಟ ಶ್ರೀ ಜಲವಳ್ಳಿ ವೆಂಕಟೇಶರಾವ್ ಅವರಿಗೆ ಶಿಕ್ಷಕ, ಯಕ್ಷಗಾನದ ಹಿರಿಯ ನಟ ದಿವಂಗತ ಜಿ ಎಸ್ ಭಟ್ಟ ಧಾರೇಶ್ವರ ಗೌರವ ಸನ್ಮಾನವನ್ನು ನೀಡಲಾಯಿತು. ದಿ. ಜಿ ಎಸ್ ಭಟ್ಟ ಅವರ ಪತ್ನಿ ತಾರಾ ಭಟ್ಟ ಮತ್ತು ಮಗ ಉದಯ ಭಟ್ಟ ಇವರೊಂದಿಗೆ ಅತಿಥಿಗಳು ಜಲವಳ್ಳಿಯವರನ್ನು ಸನ್ಮಾನಿಸಿದರು. ಪ್ರತಿ ವರ್ಷ ಕೂಡ ಒಬ್ಬ ಹಿರಿಯ ಕಲಾವಿದರಿಗೆ ನೀಡುವ ಈ ಸಮ್ಮಾನ ಶಾಲು, ನೆನಪಿನ ಕಾಣಿಕೆ, ಪ್ರಶಸ್ತಿಪತ್ರ ಮತ್ತು 5000 ರೂಗಳ ನಗದು ಮೊತ್ತವನ್ನು ಹೊಂದಿರುತ್ತದೆ.
ಸಮ್ಮಾನ ಕಾರ್ಯಕ್ರಮ ಮತ್ತು ಮಕ್ಕಳ ಯಕ್ಷಗಾನ ತರಬೇತಿಯನ್ನು ಮದ್ದಲೆ ಬಾರಿಸುವ ಮೂಲಕ ಉದ್ಘಾಟಿಸಿದ ಕುವೆಂಪು ವಿ ವಿ ಯ ಕನ್ನಡ ಅಧ್ಯಾಪಕ, ಯಕ್ಷಗಾನ ನಟ ಡಾ.ಕೇಶವ ಶರ್ಮ ಅವರು ಮಾತನಾಡಿ ಯಕ್ಷಗಾನ ದಕ್ಷಿಣೋತ್ತರ ಕನ್ನಡದಲ್ಲಿ ಉಳಿದಿರುವುದು ಒಂದು ಪಠ್ಯವನ್ನು ಕಲಾವಿದ ಪ್ರೇಕ್ಷಕರಿಗೆ ತಲುಪಿಸುವ ವಿಶಿಷ್ಟ ವಿಧಾನದಿಂದ. ಜಲವಳ್ಳಿಯವರು ಹೆಚ್ಚು ಕುಣಿಯದೆಯೇ ಮಾತಿನ ಏರಿಳಿತ, ಅರ್ಥಪೂರ್ಣ ಆಂಗಿಕ ಅಭಿನಯ,ಶ್ರತಿಬದ್ಧ ದನಿ, ಲಯಪೂರ್ಣ ಹೆಜ್ಜೆ ಮೂಲಕ ಒಂದು ಚಿತ್ರವನ್ನು ಪ್ರೇಕ್ಷಕರಲ್ಲಿ ರೂಪಿಸುವ ಶೈಲಿಯೇ ವಿಶಿಷ್ಟವಾದುದು. ಪುರಾಣ ಪ್ರಪಂಚದಲ್ಲಿ ಅತಿಸಾಮಾನ್ಯ ಎನ್ನಬಹುದಾದ ಹಲವು ಪಾತ್ರಗಳಿಗೆ ಜಲವಳ್ಳಿಯವರು ತಮ್ಮ ಭಾವಪೂರ್ಣ ಅಭಿನಯದ ಮೂಲಕ ಮಾನ್ಯತೆ ತಂದುಕೊಟ್ಟರು. ಶೇಣಿಯವರಂಥ ಅಪ್ರತಿಮ ಮಾತುಗಾರರ ಎದುರು ಹಲವರು ನಿಲ್ಲಲು ಹೆದರುವ ಕಾಲದಲ್ಲಿ ಜಲವಳ್ಳಿಯವರು ಅವರೆದುರು ಸಮರ್ಥವಾಗಿ ಪಾತ್ರಮಾಡಿದ್ದು ಮಾತ್ರವಲ್ಲ ಅವರೇ ಹುಬ್ಬೇರಿಸುವಂತೆ ಮಾಡಿದ್ದು ಸುಲಭದ ಮಾತಲ್ಲ. ತಮ್ಮ ಅಭಿನಯ ಮತ್ತು ಪಾತ್ರವನ್ನು ಭಿನ್ನವಾಗಿ ಕಟ್ಟುವ ಮೂಲಕ ಜಲವಳ್ಳಿ ಶೈಲಿ ಎನ್ನುವ ಒಂದು ಚರಿತ್ರೆಯನ್ನು ನಿಮರ್ಿಸಿದರು. ರಾಗಕ್ಕಿಂತ ಹೆಚ್ಚಾಗಿ ಭಾವದ ಕಡೆಗೆ ಗಮನಹರಿಸಿದರೆ ಕಲಾವಿದನಿಗೆ ತನ್ನ ಪಾತ್ರವನ್ನು ಹೆಚ್ಚೆಚ್ಚು ವಿಸ್ತರಿಸಲು ಸಾಧ್ಯ. ಜಲವಳ್ಳಿಯವರ ವಿಶಿಷ್ಟತೆಯಿರುವುದು ಇಲ್ಲಿ. ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಹೊಸ್ತೋಟ ಮಂಜುನಾಥ ಭಾಗ್ವತ ಅವರು ಯಕ್ಷಗಾನ ನಾಟಕವಲ್ಲ. ಆದರೆ ಅದರಲ್ಲಿ ನಾಟಕೀಯತೆ ಇರಬೇಕು. ಯಾವುದೇ ಒಂದು ವೇಷವನ್ನು ಭಾವಪೂರ್ಣ ಪಾತ್ರವಾಗಿಸುವಾಗ ನಾಟಕೀಯತೆ ಇರಬೇಕಾಗುತ್ತದೆ. ಅದನ್ನು ಜಲವಳ್ಳಿ ವೆಂಕಟೇಶರಾವ್ ಅವರು ಸಾಧಿಸಿದ್ದಾರೆ. 60-70 ರ ದಶಕದಲ್ಲಿ ಕೆಲವರು ಪ್ರಸಿದ್ದ ನಟರಾಗಿದ್ದ ಮೂರೂರು ದೇವರು ಹೆಗಡೆಯವರಂತೆ ಕೂದಲು ಬಿಡುವುದನ್ನು ಮತ್ತು ಶಿವರಾಮ ಹೆಗಡೆಯವರಂತೆ ಮೀಸೆ ಬಿಡುವುದನ್ನು ಮಾತ್ರ ಮಾಡುತ್ತಿದ್ದರು. ಆದರೆ ಜಲವಳ್ಳಿಯವರು ತೀರಾ ಬುದ್ಧಿವಂತ ನಟರಾಗಿದ್ದರು. ಅವರು ದೇವರು ಹೆಗಡೆಯವರಿಂದ ಮುಖದಲ್ಲಿ ನಾಟಕೀಯ ಭಾವ ತರುವುದನ್ನು ಮತ್ತು ಶಿವರಾಮ ಹೆಗಡೆಯವರಿಂದ ಯಕ್ಷಗಾನೀಯತೆಯನ್ನು- ಗತ್ತು, ಗಂಭೀರತೆ ಮತ್ತು ಅರ್ಥಗಾರಿಕೆಯ ಓಘ- ಪಡೆದುಕೊಂಡು ತಮ್ಮದೇ ಆದ ಒಂದು ವಿಶಿಷ್ಟ ಶೈಲಿಯನ್ನು ರೂಢಿಸಿಕೊಂಡರು. ಒಂದು ವೇಷ ಪಾತ್ರವಾಗುವಾಗ ಅಗತ್ಯವಾದ ಅಭಿನಯ ಬದ್ಧ ಮಾತು, ಮಾತಿನಲ್ಲಿ ಬಳಕೆಯಾಗುವ ಉದ್ಘಾರ, ಭಾವ ಪೂರ್ಣ ಅಭಿನಯಕ್ಕೆ ಬೇಕಾದ ಪದ, ಲಯ ಮತ್ತು ವೇಗ ಇವುಗಳನ್ನು ಜಲವಳ್ಳಿಯವರು ರೂಢಿಸಿಕೊಂಡರು. ಚಿಂತನಾ ಶೀಲ ಕಲಾವಿದನೊಬ್ಬ ತನ್ನ ಕಾಲದ ಒಳ್ಳೆಯ ಅಂಶಗಳನ್ನು ತೆಗೆದುಕೊಂಡು ಚೌಕಟ್ಟನ್ನು ಮುರಿಯುವ ಮೂಲಕ ಇನ್ನೊಂದು ಚೌಕಟ್ಟನ್ನು ರೂಪಿಸುತ್ತಾನೆ. ಜಲವಳ್ಳಿಯವರು ಹೀಗೆ ಮಾಡಿದರು. ಎಂದು ಹೇಳಿದರು.
ನಂತರದಲ್ಲಿ ಕೊಂಕಣಿ ಅಕಾಡೆಮಿಯ ಗೌರವ ರಾಜ್ಯ ಪ್ರಶಸ್ತಿ ಪಡೆದಿರುವ ಆಲು ಪಿಲ್ಲೂ ಮರಾಠಿಯವರನ್ನು ಮತ್ತು ಕೇಂದ್ರ ಸಂಗೀತ ಮತ್ತು ನಾಟಕ ಅಕಾಡೆಮಿಯ ರಾಷ್ಟ್ರಪ್ರಶಸ್ತಿ ಪುರಸ್ಕೃತ ಹೊಸ್ತೋಟ ಮಂಜುನಾಥ ಭಾಗ್ವತ್ ಅವರನ್ನು ಚಿಂತನ ಮತ್ತು ಸಹಯಾನದ ಪರವಾಗಿ ಶಾಲು ಹೊದೆಸಿ ಗೌರವಿಸಲಾಯಿತು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಕಾರದೊಂದಿಗೆ ಸಹಯಾನ ಕೆರೆಕೋಣ ಮತ್ತು ಚಿಂತನ ರಂಗ ಅಧ್ಯಯನ ಕೇಂದ್ರ ಸಂಯುಕ್ತವಾಗಿ ಸಂಘಟಿಸಿರುವ ವಿಶ್ವರಂಗಭೂಮಿ ದಿನಾಚರಣೆಯ ಭಾಗವಾಗಿ ನಡೆದ ಯಕ್ಷಗಾನ ಹಾಡುಗಾರಿಕೆಯ ಪ್ರಾತ್ಯಕ್ಷಿತೆಯನ್ನು ಹೊಸ್ತೋಟ ಮಂಜುನಾಥ ಭಾಗ್ವತ ಮತ್ತು ಕೃಷ್ಣ ಭಂಡಾರಿ ಗುಣವಂತೆ ಅವರು ನಡೆಸಿಕೊಟ್ಟರು. ಇವರೊಂದಿಗೆ ಉಮೇಶ ಮರಾಠಿ, ಪಿ. ಕೆ ಹೆಗಡೆ ಹರಿಕೆರೆಯವರು ಸಹಕರಿಸಿದರು. ಕಿರಣ ಭಟ್ ವಿಶ್ವರಂಗ ಭೂಮಿ ಸಂದೇಶ ಓದಿ ಸ್ವಾಗತಿಸಿದರು. ವಿದ್ಯಾಧರ ಕಡತೋಕ ಅವರು ನಿರೂಪಿಸಿದರು.ಮಾಸ್ತ ಗೌಡ ಸವರು ನೆನಪಿನ ಕಾಣಿಕೆ ವಿತರಿಸಿದರು. ವಿಠ್ಠಲ ಭಂಡಾರಿ ಕೊನೆಯಲ್ಲಿ ವಂದಿಸಿದರು.
Subscribe to:
Posts (Atom)