ಹೊನ್ನಾವರದ ಸಹಯಾನ ಬಳಗ ಅಯೋಜಿಸಿದ್ದ “ರಾಷ್ಟ್ರ ಹಾಗೂ ರಾಷ್ಟ್ರೀಯತೆಯ ವಾಗ್ವಾದ: ಅಂಬೇಡ್ಕರ್ ಚಿಂತನೆಯ ಬೆಳಕಿನಲ್ಲಿ
ಮರು ಪರಿಶೀಲನೆ” ಎಂಬ ವಿಷಯದ ಕುರಿತು ಮಾಡಿದ ಭಾಷಣದ ಬರಹ ರೂಪ. .
ಆದರೆ ನನಗೆ ಅನ್ನಿಸುವಂತೆ ಇಂದು ನಮ್ಮ ಬೌದ್ಧಿಕ ವಲಯ ಅಂಬೇಡ್ಕರ್ ಚಿಂತನೆಗಳನ್ನು ಒಳಗೊಳ್ಳುವುದಕ್ಕೆ ವ್ಯಯಿಸಬೇಕಾದ ಶ್ರಮದ ಏರಡರಷ್ಟು ಶ್ರಮವನ್ನು ಅಂಬೇಡ್ಕರ್ ಚಿಂತನೆಗಳನ್ನುಬೇರೆ ಬೇರೆ ಪಕ್ಷ, ಸಿದ್ಧಾಂತಗಳಿಂದ ಬಿಡಿಸುವುದಕ್ಕೆ ವ್ಯಯಿಸಬೇಕಿದೆ ಅನ್ನಿಸುತ್ತಿದೆ. ಇ ಅರ್ಥದಲ್ಲಿ ಇಂದು ನಮಗೆ ಅಂಬೇಡ್ಕರ್ ಚಿಂತನೆಗಳನ್ನು ಒಳಗೊಳ್ಳುವುದಕ್ಕಿಂತ ಅವುಗಳನ್ನು ಅಧಿಕಾರ/ಮತ ರಾಜಕಾರಣಕ್ಕಾಗಿ ಸಂಕುಚಿತವಾಗಿ ನಿರೂಪಿಸುತ್ತಿರುವ ಜನರಿಂದ, ಸಂಘಟನೆಗಳಿಂದ ವಿಮೋಚನೆಗೊಳಿಸುವುದು ಬೌದ್ದಿಕ ವಲಯದ ಮಹತ್ವದ ಮತ್ತು ಅದ್ಯತೆ ಮತ್ತುಜವಾಬ್ದಾರಿಯಾಗಿದೆ ಎನ್ನಿಸುತ್ತಿದೆ. . .
೨೧ನೇ ಶತಮಾನದ ಈ ದಿನಗಳಲ್ಲಿ ನಾವು ನಾಗರೀಕತೆ, ಪ್ರಜಾಪ್ರಭುತ್ವ, ದೇಶ, ಜಾಗತೀಕರಣ, ಯುದ್ಧ, ಅಭಿವೃದ್ಧಿ ಇತ್ಯಾದಿ ಇತ್ಯಾದಿ ನೂರಾರು ನುಡಿಗಟ್ಟುಗಳನ್ನು ಕಟ್ಟಿಕೊಂಡಿದ್ದೇವೆ ಒಂದು ಅರ್ಥದಲ್ಲಿ ಈ ಶತಮಾನದ ಬಹುಪಾಲು ಬೌದ್ದಿಕ ವಲಯ ಈ ಪ್ರಯತ್ನದಲ್ಲಿಯೇ ಮುಳುಗಿ ಹೋಗಿದೆ. ಜಗತ್ತಿನ ಎಲ್ಲಾ ವಿದ್ಯಮಾನಗಳನ್ನು ವಿವರಿಸುವ ಭಾಷೆ ಕಂಡುಕೊಂಡ ಬುದ್ದಿಜೀವಿಗಳು ನಮ್ಮ ನಡುವಿನ ಬಡವನ/ಶೋಷಿತನ ನೋವುಗಳನ್ನು ವಿವರಿಸುವ ಬಾಷೆಯೊಂದನ್ನು, ಅವರ ನೋವಿಗೆ ಧ್ವನಿಯಾಗುವ ನುಡಿಗಟ್ಟೂಂದನ್ನು ಕಟ್ಟುವಲ್ಲಿ ಸೋತಿದ್ದಾರೆ ಅಥವಾ ಅದು ನಮ್ಮ ಅದ್ಯತೆಯ ಪ್ರಶ್ನೆಯಾಗಿ ರೂಪುಗೊಂಡಿಲ್ಲ Where is the language of suffering? ಬಡವನ, ಶೋಷಿತನ ನೋವನ್ನು ವಿವರಿಸುವ ಭಾಷೆ ಎಲ್ಲಿದೆ? ಯಾವಾಗ ನಾವು ನಮ್ಮ ನಡುವಿನ ಜನರ ನೋವನ್ನು, ಹಿಂಸೆಯನ್ನು ವಿವರಿಸುವ ನುಡಿಗಟ್ಟೊಂದನ್ನು ಕಟ್ಟುವ ಕುರಿತು ತಿರ್ವವಾಗಿ ಅಲೋಚಿಸುತ್ತೇವೆಯೋ ಅಂದು ನಾವು ನಾಗರೀಕರಾಗುತ್ತೇವೆ ಎಂದು ಪ್ರಸಿದ್ಧ ಚಿಂತಕರೊಬ್ಬರು ಒಮ್ಮೆ ಗಟ್ಟಿಯಾಗಿ ಮಾತನಾಡಿದ್ದರು ಹಾಗೆ ಮಾತನಾಡುತ್ತಿದ್ದ ಅವರಿಗೆ ಭೂತ ಮತ್ತು ವರ್ತಮಾನಗಳ ಯಾರ ಪ್ರಯತ್ನಗಳ ಕುರಿತು ನೀರಿಕ್ಷೆಗಳು ಇದ್ದಂತೆ ಇರಲಿಲ್ಲ. . . .
ಅವರ ಮಾತುಗಳನ್ನು ಕೇಳುತ್ತಿದ್ದ ನನಗೆ ಆ ತಕ್ಷಣಕ್ಕೆ ಅಂಬೇಡ್ಕರ್ ನೆನಪಾಗಿದ್ದರು ಅರೆ! ಈ ದೇಶದ ನೊಂದವರಿಗೆ ಅವರ ನೋವನ್ನು ವ್ಯಕ್ತಪಡಿಸುವ ಭಾಷೆಯನ್ನು ಕಲಿಸುವ ಪ್ರಯತ್ನವೇ ಅವರಿಡಿ ಬದುಕಲ್ಲವೆ? ಈ ಸಮಾಜದಲ್ಲಿ ಮನುಷ್ಯನಾಗಿ ಬಾಳುವುದಕ್ಕೆ ನೀವು ಅನರ್ಹ ಎಂಬ ಅವಮಾನ, ಅಪಮಾನಗಳನ್ನು ಸಹಿಸಿಕೊಂಡು ಅವರು ನಡೆಸಿದ ಹೋರಾಟ ನೊಂದವರ ನೋವಿಗಾಗಿಯೇ ಅಲ್ಲವೆ ಎನ್ನಿಸಿತ್ತು! ಆದರೆ ಇಂದು ಅವರ ಪ್ರಯತ್ನವೆ ಅರ್ಥವಾಗದ ವಿಸ್ಮೃತಿಗೆ ನಾವು ಒಳಗಾಗಿದ್ದೇವೆ ಅನ್ನಿಸುತ್ತಿದೆ ಅವರು ಕಲಿಸಲು ಆರಂಭಿಸಿದ್ದ ಹಸಿದವನ, ತುಳಿತಕ್ಕೆ ಒಳಗಾದವನ ನೋವನ್ನು ವಿವರಿಸುವ ಭಾಷೆಯೊಂದರ ಪದಗಳನ್ನು ಕ್ಷುಲ್ಲಕ ಕಾರಣಗಳಿಗೆ ಮರೆಯುತ್ತಿದ್ದೇವೆ ಎಂಬ ಭಾವ ನಮ್ಮನ್ನು ಅವರಿಸುತ್ತಿದೆ ಹೀಗಿದ್ದರು ಭರವಸೆ ಬಿಡುವ ಹಾಗಿಲ್ಲ ಏಕೆಂದರೆ ನೊಂದವರು ಇನ್ನೂ ನಮ್ಮ ಸುತ್ತಲಿದ್ದಾರೆ ಅಂಬೇಡ್ಕರ್ ಅವರ ೧೨೪ನೇ ಜನ್ಮದಿನಾಚರಣೆಯನ್ನು ಆಚರಿಸುತ್ತಿರುವ ಈ ಹೊತ್ತಿನಲ್ಲಾದರು ನಾವು ಬಾಬಾಸಾಹೇಬರ ಕುರಿತು ಸಕಾರಾತ್ಮಕವಾಗಿ ಯೋಚಿಸಬೇಕಿದೆ ವಿಶ್ವಮಾನ್ಯವಾಗಬಹುದಾದ ಚಿಂತಕನನ್ನು ಜಾತಿಗೆ, ವರ್ಗಕ್ಕೆ ಸಿಮೀತಗೊಳಿಸಿ ಸಂಕುಚಿತವಾಗಿ ನೋಡುತ್ತಿರುವ ಮಾದರಿಗಳನ್ನು ಒಡೆಯಬೇಕಿದೆ ನಿಜ ಅರ್ಥದಲ್ಲಿ ನಾವು ಅಂಬೇಡ್ಕರ್ ಅವರ ಚಿಂತನೆಗಳನ್ನು ಪುನರ್ ನಿರ್ವಚಿಸಬೇಕಿದೆ.
ಹಾಗೆ ನೋಡುವುದಾದರೆ ಸ್ವಾತಂತ್ರ್ಯ ನಂತರದ ಭಾರತದ ರಾಜಕೀಯ, ಬೌದ್ಧಿಕ ಮತ್ತು ಸಾಸ್ಕೃತಿಕ ಜಗತ್ತು ಬಾಬಾ ಸಾಹೇಬರ ಕುರಿತು ಸಾಕಷ್ಟು ಚರ್ಚಿಸಿದೆ, ಅವರ ಚಿಂತನೆಗಳ ಕುರಿತು ಬಹಳಷ್ಟು ಪುಟಗಳ ಸಾಹಿತ್ಯ ರಚನೆಯಾಗಿದೆ, ಇಂದಿಗೂ ಹಲವು ಚಳುವಳಿಗಳು ಅವರ ಚಿಂತನೆಗಳನ್ನು ತಮ್ಮ ಹೋರಾಟದ ಬುನಾದಿ ಮಾಡಿಕೊಂಡಿವೆ. ಹೀಗಿದ್ದಾಗಿಯೂ ಈ ದೇಶದಲ್ಲಿ ಅತಿ ಹೆಚ್ಚಿನ ಚರ್ಚೆಗೆ, ವಿಮರ್ಶೆಗೆ, ಟೀಕೆಗೆ ಒಳಗಾದ ವ್ಯಕ್ತಿ ಮತ್ತು ಚಿಂತನೆಗಳು ಇದ್ದರೆ ಅವು ಅಂಬೇಡ್ಕರ್ ಚಿಂತನೆಗಳೆ ಅನ್ನಿಸುತ್ತದೆ. ಅರೆ! ಒಂದಿಡೀ ತಲೆಮಾರಿನ ಇತಿಹಾಸವನ್ನು ತಳಸಮುದಾಯಗಳ ನೆಲೆಯಿಂದ ನಿರೂಪಿಸಲು ಯತ್ನಿಸಿದ, ಆ ಕಾರಣಕ್ಕೆ ತಮ್ಮ ವಯಕ್ತಿಕ ಬದುಕನ್ನು ಮುಡಿಪಾಗಿಟ್ಟ ಪ್ರಾಮಾಣಿಕ ವ್ಯಕ್ತಿಯೊಬ್ಬರ ಚಿಂತನೆಗಳು ಏಕೆ ಇಷ್ಟೊಂದು ವಿಮರ್ಶೆಗೆ, ಟೀಕೆಗೆ ಒಳಗಾಗುತ್ತಿವೆ? ಏಕೆ ನಮ್ಮ ಸಮಾಜದ ಎಲ್ಲಾ ವರ್ಗಗಳು ಅಂಬೇಡ್ಕರ್ ಅವರನ್ನು ಮುಕ್ತವಾಗಿ ಒಳಗೊಳ್ಳಲು ಸಾಧ್ಯವಾಗುತ್ತಿಲ್ಲ? ಅದಕ್ಕಿರುವ ಅಡ್ಡಿಗಳೇನು? ಎಂಬ ಪ್ರಶ್ನೆಗಳನ್ನು ರೂಪಿಸಿಕೊಂಡು ಯೋಚಿಸಿದರೆ ಅಂಬೇಡ್ಕರ್ ಚಿಂತನೆಗಳನ್ನು ನಿರ್ವಹಿಸುತ್ತಿರುವ ನಮ್ಮ ಬೌದ್ಧಿಕ ವಲಯ ಸಮಾನ ಸಮಾಜದ ಕುರಿತ ಬಾಬಾ ಸಾಹೇಬರ ಖಾಳಜಿಯನ್ನು ಪೀಳಿಗೆಗಳಿಗೆ ಸಕಾರಾತ್ಮಕವಾಗಿ ಹಸ್ತಾಂತರಿಸುವಲ್ಲಿ ಎಲ್ಲೂ ಎಡವಿದೆ ಅನ್ನಿಸುತ್ತಿದೆ ಈ ಹಿನ್ನಲೆಯಲ್ಲಿ ಅವರ ಕುರಿತಾದ ಇದುವರೆಗಿನ ಚರ್ಚೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಭಿಮ್ ರಾವ್ ಅವರ ಕುರಿತ ನಮ್ಮ ಕಾಲದ ಬಹುಪಾಲು ಚರ್ಚೆಗಳು ಕೇಲವು ಸೀಮಿತ ಚೌಕಟ್ಟುಗಳಲ್ಲಿ ನಿರ್ವಹಿಸಲ್ಪಟ್ಟಿರುವುದನ್ನು ಗುರುತಿಸಬಹುದಾಗಿದೆ.
ಅದರಲ್ಲಿ ಮೊದಲನೇಯದು ಚಿಂತಕ ಅನಂದ್ ತೆಲ್ತುಮ್ಡೆ ಅವರು ವಿವರಿಸುವಂತೆ ನಮ್ಮ ನಡುವಿನ ವಿದ್ವಾಂಸರು ಇದುವರೆಗೂ ಚರ್ಚಿಸಿರುವ ಅಂಬೇಡ್ಕರರ ಚಿಂತನೆ ನಮಗೆ ಎರಡು ರೀತಿಯಾಗಿ ದಕ್ಕಿದೆ ಒಂದು ಅವರುಗಳು ಅಂಬೇಡ್ಕರ್ ಅಲೋಚನೆಗಳನ್ನು ನಮಗೆ ಬಹಳ ಪರಿಚಿತವಾಗಿರುವ ಇಂದು ಬಹಳ ಮೂಲಭೂತ ಪ್ರಶ್ನೆಗಳಿಗೆ ಒಳಗಾಗುತ್ತಿರುವ ಸಮಾಜ ವಿಜ್ಞಾನ ಶಾಖೆಗಳಾದ ಸಾಮಾಜಿಕ, ರಾಜಕೀಯ, ಧಾರ್ಮಿಕ ಎಂಬಿತ್ಯಾದಿ ಶಾಖೆಗಳಲ್ಲಿ ವಿಂಗಡಿಸಿ ವಿಶ್ಲೇಷಿಸಿದ್ದಾರೆ ಈ ವಿಧಾನದಲ್ಲಿರುವ ಸಮಸ್ಯೆಯೆಂದರೆ ಅದು ಅಂಬೇಡ್ಕರ್ರ ಒಟ್ಟುಚಿಂತನೆಯನ್ನು ಅಕೆಡೆಮಿಕ್ ಶಿಸ್ತುಗಳಲ್ಲಿ ನಮ್ಮದಲ್ಲದ ನೆಲೆಯಲ್ಲಿ ಕೃತಕವಾಗಿ ವಿವರಿಸುತ್ತದೆ. ಇನ್ನೊಂದು ವಿಧಾನ ಸಾಹಿತ್ಯಿಕ ವಿಧಾನ ಈ ವಿಧಾನ ಅಂಬೇಡ್ಕರ್ ಯೋಚನೆಗಳ ಕುರಿತಂತೆಯಾವುದೇ ವೈಜ್ಞಾನಿಕ ವಿಮರ್ಶೆ-ವಿಶ್ಲೇಷಣೆ ನಡೆಸದೆ ಒಂದು ಕಥನ ಮಾದರಿಯಲ್ಲಿ ವೈಭವೀಕರಣದ ನೆಲೆಯಲ್ಲಿ ಅವರನ್ನು ವಿಶ್ಲೇಷಿಸುತ್ತದೆ. ನಮ್ಮ ನಡುವೆ ಪ್ರಖ್ಯಾತವಾಗಿರುವ ಈ ಎರಡೂವಿಧಾನಗಳು ನಮ್ಮ ಸಮಾಜದ ಕುರಿತು ತರ್ಕಬದ್ಧವಾಗಿ ಅಂಬೇಡ್ಕರ್ ಒದಗಿಸ ಬಯಸಿದ್ದ ಪ್ರಬುದ್ಧ ಚಿಂತನಾ ಲೋಕದೃಷ್ಟಿಯನ್ನು ಯತಾವತ್ತಾಗಿ ರೂಪಿಸಿಕೊಡಲು ವಿಫಲವಾಗುತ್ತವೆ ಇದು ಅಂಬೇಡ್ಕರ್ ಚಿಂತನೆಗಳನ್ನು ಒಳಗೊಳ್ಳಲು ಇರುವ ಮೊದಲ ಮಿತಿ.
ಇನ್ನೂ ತೆಲ್ತುಮ್ಡೆ ಗುರುತಿಸುವ ಎರಡನೇಯ ಮಿತಿ, ಅಂಬೇಡ್ಕರರ ನಂತರದ ಅವರ ಚಿಂತನೆಗಳ ಕುರಿತಾದ ನಮ್ಮ ಚಳುವಳಿಗಳು ಮತ್ತು ಬೌದ್ದಿಕ ಚರ್ಚೆಗಳು ಮಾನವೀಯ ಸಮಾಜದ ಕನಸನ್ನು ಹೊತ್ತ ಅಂಬೇಡ್ಕರರ ಸುತ್ತ ಕೆಲವು ಪ್ರಜ್ಞಾಪೂರ್ವಕ ಪ್ರತಿಮೆಗಳನ್ನು ಕಟ್ಟಿಬಿಟ್ಟಿವೆ! ಈ ಪ್ರತಿಮೆಗಳು ಅಂಬೇಡ್ಕರರನ್ನು ಒಬ್ಬ ಸಂವಿಧಾನದ ಕರ್ತೃವೆಂದೂ, ಪ್ರಸ್ತುತ ವ್ಯವಸ್ಥೆಗೆ ಕಾರಣೀಭೂತರೆಂದೂ, ಒಬ್ಬ ದಲಿತರ ನಾಯಕನೆಂದೂ, ಒಬ್ಬ ದಲಿತ ರಕ್ಷಕನೆಂದೂ, ಒಬ್ಬ ಉದಾರವಾದಿ ಪ್ರಜಾಪ್ರಭುತ್ವವಾದಿಯೆಂದೂ ಬಣ್ಣಿಸುತ್ತವೆ. ಮೇಲ್ಮೋಟಕ್ಕೆ ಇವು ಅವರ ಕುರಿತು ಉದಾತ್ತವಾಗಿ ಮಾತನಾಡುತ್ತಿರುವಂತೆ ತೋರುತ್ತವೆ ಆದರೆ ವಾಸ್ತವದಲ್ಲಿ ಇವು ಅಂಬೇಡ್ಕರ್ ಅವರೊಳಗಿದ್ದ ಯಾವುದೇ ಬಗೆಯ ಶೋಷಣೆ, ಅನ್ಯಾಯ, ಕಪಟಗಳಿಲ್ಲದ ಮನುಷ್ಯನನ್ನು ಗುರುತಿಸಲು ಬಹಳ ದೊಡ್ಡ ತಡೆಗಳಾಗಿ ನಮ್ಮ ಮುಂದೆ ನಿಂತಿವೆ. ಬೇಸರದ ಸಂಗತಿ ಎಂದರೆ ಇಂದು ಇವೆ ಪ್ರತಿಮೆಗಳು ಅಂಬೇಡ್ಕರರನ್ನು ಜಾತಿವಾದಿಯೆಂದು, ಕೇವಲ ದಲಿತರ ನಾಯಕನೆಂದು, ಮೇಲ್ಜಾತಿ ವಿರೋಧಿ ಎಂದು ಟೀಕಿಸಲು ಬಳಕೆಯಾಗುತ್ತಿವೆ. ಅಂಬೇಡ್ಕರ್ ಕುರಿತ ಮೇಲಿನ ಪ್ರತಿಮೆಗಳನ್ನೆ ಅವರ ಪರ/ವಿರೊಧ ಗುಂಪುಗಳೆರಡು ಪರಸ್ಪರ ವಿರೋಧಕ್ಕಾಗಿ ಬಳಸಿಕೊಳ್ಳುತ್ತಿರುವುದರಿಂದ ಇವೆ ಇಂದು ಹೆಚ್ಚು ಚರ್ಚೆಗೆ ಬರುತ್ತಿವೆ ಮತ್ತು ನಕಾರಾತ್ಮಕವಾಗಿ ಜನಪ್ರಿಯಗೊಳ್ಳುತ್ತಿವೆ ಇದರ ಪರಿಣಾಮ ನಮಗೆ ವಾಸ್ತವದ ಅಂಬೇಡ್ಕರ್ ಮತ್ತು ಅವರ ಖಾಳಜಿ ಅರ್ಥವಾಗುತ್ತಿಲ್ಲ ಅಥವಾ ಆ ರೀತಿಯ ಪ್ರಯತ್ನಗಳಿಗೆ ಈ ಪ್ರತಿಮೆಗಳೆ ತಡೆಗಳಾಗಿವೆ ಇದು ಅಂಬೇಡ್ಕರ್ ಅವರನ್ನು ಒಳಗೊಳ್ಳಲು ಇರುವ ಎರಡನೇಯ ಸೀಮಿತ ಚೌಕಟ್ಟು.
ಇನ್ನೂ ಮೂರನೇಯದು ಮತ್ತು ಅತಿ ಮುಖ್ಯವಾದದು ನಮ್ಮ ನಡುವಿನ ವಿದ್ವತ್ ವಲಯದ ಬಹುಪಾಲು ಚಿಂತಕರು ಇಂದಿಗೂ ಒಂದು ನಿರ್ದಿಷ್ಟ ಮತ್ತು ಸಂಕುಚಿತ ರಾಜಕೀಯ ಕಾರಣಕ್ಕಾಗಿ ಡಾ. ಅಂಬೇಡ್ಕರ್ ಮತ್ತು ಮಹಾತ್ಮ ಗಾಂಧಿ ಇಬ್ಬರನ್ನು ವಿರುದ್ಧ ದಿಕ್ಕಿನಲ್ಲಿ ಕಲ್ಪಿಸಿಕೊಂಡು ಪರಸ್ಪರ ದೋಷಾರೋಪಣೆ ಮಾಡುವುದನ್ನೇ ಬಹಳ ದೊಡ್ಡ ಬೌದ್ಧಿಕ ಜಿಜ್ಞಾಸೆ ಎಂಬಂತೆ ಚರ್ಚಿಸುತ್ತಿರುವುದು. ಇದರ ಪರಿಣಾಮ ಇಂದು ಬಹುಪಾಲು ಯುವಕರಿಗೆ ವಾಸ್ತವದ ಅಂಬೇಡ್ಕರ್ಗಿಂತ ಗಾಂಧಿಯವರೊಂದಿಗೆ ಈ ಸಮಾಜದ ಕುರಿತು ತಾತ್ವಿಕ ವಿರೋಧವಿದ್ದ ಅಂಬೇಡ್ಕರ್ ಹೆಚ್ಚು ಪರಿಚಿತನಿದ್ದಾನೆ. ಒಂದು ನಿರ್ದಿಷ್ಟ ಐತಿಹಾಸಿಕ ಸಂದರ್ಭದಲ್ಲಿ ಜನಿಸಿದ ಈ ಪರಸ್ಪರ ವಿರೋಧದ ನೆಲೆಯ ಈ ಚಿಂತನೆ ಈ ಸಮಾಜಕ್ಕೆ ಆ ಮೇರು ವ್ಯಕ್ತಿತ್ವಗಳು ನೀಡಿದ ಕಾಣಿಕೆ ಮತ್ತು ಮಹತ್ವವನ್ನು ಸಂಕುಚಿತಗೊಳಿಸಿ ಅವರನ್ನು ಪರ-ವಿರೋಧ-ವೆಂಬ ಸಂಕುಚಿತ ಚೌಕಟ್ಟಿನಲ್ಲಿ ಗ್ರಹಿಸಿಸುತ್ತಿದೆ ಇದು ನಮ್ಮ ಕಾಲದ ದುರಂತ ಮತ್ತು ಅಂಬೇಡ್ಕರ್ ಅವರನ್ನು ಒಳಗೊಳ್ಳಲು ಇರುವ ಪ್ರಮುಖ ತಡೆ.
ಇಂದು ಇಲ್ಲಿ ಚರ್ಚೆಗೆ ಒಳಗಾಗುತ್ತಿರುವ ವಿಷಯವಾದ ರಾಷ್ಟ್ರ ಹಾಗೂ ರಾಷ್ಟ್ರೀಯತೆಯ ಕುರಿತ ಅಂಬೇಡ್ಕರ್ ನಿಲುವುಗಳು ಮೇಲೆ ಪ್ರಸ್ಥಾಪಿಸಿದ ಮಿತಿಗಳಿಂದ ಹೋರತಾಗಿಲ್ಲಎಂಬುದು ನನ್ನ ತಿಳುವಳಿಕೆ ಆ ಕಾರಣಕ್ಕೆ ಇಂದಿನ ಸಮಕಾಲೀನ ಸಂಧರ್ಭದಲ್ಲಿ ಅಂಬೇಡ್ಕರ್ ಅವರನ್ನು ಒಳಗೊಳ್ಳುವುದಕ್ಕಿಂತ ಅವರನ್ನು ಹಿಡಿದಿಟ್ಟಿರುವ 20ನೇ ಶತಮಾನದ ರಾಜಕೀಯ, ಸಾಂಸ್ಕೃತಿಕ ಶುಷ್ಕ ಪ್ರತಿಮೆಗಳಿಂದ ಅವರನ್ನು ಬಿಡಿಸಬೇಕಿರುವುದು ಅದ್ಯತೆಯ ಕೆಲಸವಾಗಿದೆ . . . .
ಬಾಬಾ ಸಾಹೇಬರ ರಾಷ್ಟ್ರ, ರಾಷ್ಟ್ರೀಯತೆಯ ಚಿಂತನೆಗಳನ್ನು ನೋಡುವುದಾದರೂ ಅಂಬೇಡ್ಕರ್ ಅವರು ತಮ್ಮ ಮಹತ್ವದ ಬರಹಗಳಾದ ಅನ್ಹೀಲೆಷನ್ ಆಫ್ ಕಾಸ್ಟ್, ರೆವ್ಯುಲೂಷನ್ &ಕೌಂಟರ್ ರೆವ್ಯುಲೂಷನ್, ಮತ್ತು A Nation Calling for Home. PART-I Muslim Case For Pakistan ಎಂಬ ಕೃತಿಗಳಲ್ಲಿ ರಾಷ್ಟ್ರ, ರಾಷ್ಟ್ರೀಯತೆ ಕುರಿತಂತೆ ವಿಸ್ತಾರವಾಗಿಚರ್ಚಿಸುತ್ತಾರೆ ಅವರ ಪ್ರಕಾರ. . .
ಮೇಲಿನ ಬರಹಗಳಲ್ಲಿ ಬಾಬಾ ಸಾಹೇಬರು ರಾಷ್ಟ್ರ, ರಾಷ್ಟ್ರೀಯತೆ ಎಂದರೆ ಏನು? ಎಂಬುದನ್ನು ವಿವರಿಸುತ್ತಾ ರಾಷ್ಟ್ರೀಯತೆ, ರಾಷ್ಟ್ರೀಯವಾದವಾಗಲು ಎರಡು ಮೂಲಭೂತಅಂಶಗಳು ಇರಬೇಕು ಮೊದಲನೆಯದು ಒಂದು ರಾಷ್ಟ್ರವಾಗಿ ಬದುಕುವ ಇಚ್ಚೆ ಅಲ್ಲಿನ ಜನರಲ್ಲಿ ಇರಬೇಕು, ರಾಷ್ಟ್ರೀಯತೆಯೆಂಬುದು ಆ ಇಚ್ಚೆಯ ಮೂರ್ತರೂಪ ಇನ್ನೂ ಎರಡನೇಯದುರಾಷ್ಟ್ರೀಯತೆಯ ಇಚ್ಚೆಯನ್ನು ಇಟ್ಟುಕೊಂಡು ಅದನ್ನೊಂದು ರಾಷ್ಟವಾಗಿಸುವ, ತಮ್ಮದೆ ಸಾಂಸ್ಕೃತಿಕ ನೆಲೆಯಾಗಿ ಒಂದು ದೇಶವಾಗಿ ಸ್ಥಾಪಿಸಿಕೊಳ್ಳಲು ಅಗತ್ಯವಾದ ಭೂ ಪ್ರದೇಶ ಇರಬೇಕು ಎಂಬ ವಾದವನ್ನು ಮುಂದಿಡುತ್ತಾರೆ. . .
ಮುಂದುವರಿದು ಭಾರತ ಸಮಾಜದಲ್ಲಿ ಒಂದು ರಾಷ್ಟ್ರವಾಗಲು ಬೇಕಾದ ಸಾಮೂಹಿಕ ಇಚ್ಚೆ (consciousness of kind) ಕಾಣಲು ಸಾಧ್ಯವಿಲ್ಲ ಇಲ್ಲಿನ ನಾಗರೀಕನಿಗೆ ಇಚ್ಚೆಎಂಬುದು ಇದ್ದರೆ ಅದು ತನ್ನ ಜಾತಿಯ ಕುರಿತಾದ ಇಚ್ಚೆ( Caste consciousness) ಆ ಕಾರಣಕ್ಕೆ ಹಿಂದೂಗಳು ಒಂದು ಸಮಾಜ ಹಾಗೂ ರಾಷ್ಟ್ರವನ್ನು ನಿರ್ಮಿಸಿಕೊಳ್ಳಲಾಗಿಲ್ಲ. ಆದರೆ ಇಲ್ಲಿನ ಬಹಳ ಜನ ನಾವು ಒಂದು ರಾಷ್ಟ್ರ ಅಲ್ಲ! ಬೇರೆ ಬೇರೆ ಗುಂಪಿಗೆ ಸೇರಿದ ಜನ ಸಮೂಹ ಎಂಬುದನ್ನು ಒಪ್ಪಲಾರರು ಅದಕ್ಕೆ ಬದಲಾಗಿ ಅವರು ಭಾರತದಲ್ಲಿನ ಜನ ಸಮೂಹದ ನಡುವೆಆಚರಣೆ, ಅಲೋಚನೆ ಮತ್ತು ನಂಬಿಕೆಗಳಲ್ಲಿ ಒಂದು ಸಾಮ್ಯತೆ ಇದೆ ಎಂಬ ವಾದವನ್ನು ಮುಂದಿಡುತ್ತಾರೆ. ಆದರೆ ಆಚರಣೆ, ಅಲೋಚನೆ ಮತ್ತು ನಂಬಿಕೆಗಳಲ್ಲಿ ಇರುವ ಸಾಮ್ಯತೆ ಇದ್ದ ಮಾತ್ರಕ್ಕೆ ನಾವು ಒಂದು ಸಮಾಜ ಮತ್ತು ರಾಷ್ಟ್ರವನ್ನು ಹೊಂದಿದ್ದೇವೆ ಎಂಬ ತಿರ್ಮಾನಕ್ಕೆ ಬರಲು ಸಾಧ್ಯವಿಲ್ಲ ಎಂಬ ವಾದವನ್ನು ಅಂಬೇಡ್ಕರ್ ಮುಂದಿಡುತ್ತಾರೆ. .
ಮುಂದುವರಿದು ಏಕೆ ಹಿಂದೂಯಿಸಂನಲ್ಲಿನ “ಜಾತಿ” ಹಿಂದೂಗಳು ಒಂದು ಸಮಾಜವಾಗಿ ರೂಪುಗೊಳ್ಳಲು ತಡೆಯಾಗಿದೆ, ಬೇರೆ ಧರ್ಮಗಳಲ್ಲಿ ಜಾತಿಗಳಿದ್ದರು ಅಲ್ಲಿ ಏಕೆ ಈರೀತಿಯ ತಡೆಗಳಿಲ್ಲ ಎಂಬುದನ್ನು ಸವಿಸ್ತಾರವಾಗಿ ವಿವರಿಸುತ್ತಾ ಪ್ರಜಾಪ್ರಭುತ್ಬದ ಮೂಲ ತತ್ವವಾದ ಸಮಾನತೆಯನ್ನು ಪೋಷಿಸುವ ಯಾವ ಲಕ್ಷಣಗಳು ಜಾತಿ ಆಧಾರಿತ ಹಿಂದೂಸಾಮಾಜಿಕ ವ್ಯವಸ್ಥೆಯಲ್ಲಿ ಇಲ್ಲವಾದ್ದರಿಂದ ಜಾತಿ ಮುಕ್ತ ಸಮಾಜವೊಂದೆ ಉತ್ತಮ ರಾಷ್ಟ ನಿರ್ಮಾಣಕ್ಕಿರುವ ರಹದಾರಿ ಎಂದು ಅಂಬೇಡ್ಕರ್ ಪ್ರತಿಪಾದಿಸುತ್ತಾರೆ. ಆ ಕಾರಣಕ್ಕೆ ಅವರಬರಹಗಳಲ್ಲಿ ವ್ಯಾಪಕವಾಗಿ ಸಾಮಾಜಿಕ ಸ್ವರಾಜ್ಯದ ಮಾತುಗಳು ಮತ್ತೆ ಮತ್ತೆ ವ್ಯಕ್ತವಾಗುತ್ತವೆ ಎಲ್ಲಿಯವರೆಗು ನಾವು ಈ ದೇಶದಲ್ಲಿನ ಜಾತಿ ಆಧಾರಿತ ಸಾಮಾಜಿಕ ವ್ಯವಸ್ಥೆಯನ್ನುನಾಶಗೊಳಿಸುವುದಿಲ್ಲವೂ ಅಲ್ಲಿಯವರೆಗೆ ಒಂದು ಸಮರ್ಥ ರಾಜಕೀಯ ಸಮಾಜದ ಮತ್ತು ರಾಷ್ಟ್ರದ ನಿರ್ಮಾಣ ಸಾಧ್ಯವಿಲ್ಲ ಎಂಬುದನ್ನು ಬಾಬಾ ಸಾಹೇಬರ ಸ್ಪಷ್ಟವಾಗಿ ಗುರುತಿಸುತ್ತಾರೆ. . .
ಹಾಗೆ ನೋಡುವುದಾದರೆ ಅವರ ಪ್ರಕಾರ ರಾಷ್ಟ್ರೀಯತೆ ಎಂಬುದು ಮಾನವೀಯತೆ. ಮನುಷ್ಯ ಗೌರವಗಳ ಇನ್ನೊಂದು ರೂಪವಾಗಿತ್ತು, ಆ ಕಾರಣಕ್ಕೆ ಅವರು ತಮ್ಮ ಬರಹಗಳಲ್ಲಿರಾಜಕೀಯ ಎಂಬುದನ್ನು ಮನುಷ್ಯ ಸಮಾನತೆಯನ್ನು ಪ್ರತಿಪಾಧಿಸುವ ಮತ್ತು ಅದನ್ನು ಸ್ಥಾಪಿಸಬಯಸುವ ಒಂದು ಸಾಮಾಜಿಕ ಪ್ರಜ್ಞೆಯಾಗಿ ವಿಶ್ಲೇಷಿಸಿದ್ದರು ಅವರ ಪ್ರಕಾರ ರಾಜಕೀಯಎಂಬುದು ಇಂದಿನ ದಿನಗಳಲ್ಲಿ ಚರ್ಚಿಸುತ್ತಿರುವ ಅಧಿಕಾರ/ಅಥವಾ ಮತ ರಾಜಕಾರಣವಾಗಿರಲಿಲ್ಲ ಬದಲಾಗಿ ಅದೊಂದು ಸಾಮಾಜಿಕ ಮೌಲ್ಯವಾಗಿ ಸಾಮಾನ್ಯ ಜ್ಞಾನವಾಗಿ ಶಿಕ್ಷಣ,ಸಂಘಟನೆ, ಹೋರಾಟಗಳಿಂದ ರೂಪಿಸಿಕೊಳ್ಳಬಹುದಾದ ಮಹತ್ವದ ಸಾಮಾಜಿಕ ಪ್ರಜ್ಞೆಯಾಗಿತ್ತು. . .
ಆದರೆ ನಮ್ಮ ಕಾಲದ ದುರಂತ ಇಂದು ಅಂಬೇಡ್ಕರ್ ಚಿಂತನೆಗಳನ್ನು ಬಳಸಿಕೊಂಡು ಪ್ರಜಾತಂತ್ರ ರಾಷ್ಟ್ರ ವ್ಯವಸ್ಥೆಯ ಆಧಾರವಾದ ಮನುಷ್ಯ ಸಮಾನತೆಯ ಪರಿಭಾಷೆಯನ್ನು ಮತ್ತಷ್ಟುಪರಿಣಾಕಾರಿಯಾಗಿ ವಿವರಿಸಿಕೊಳ್ಳಬೇಕಾದ ಈ ಹೊತ್ತಿನಲ್ಲಿ ಬಾಬಾ ಸಾಹೇಬರ ಅಲೋಚನೆಗಳನ್ನು ಇಂದಿನ ಪಕ್ಷ/ಅಧಿಕಾರ ಮತ್ತು ಧಾರ್ಮಿಕ ರಾಜಕಾರಣದ ಭಾಗವಾಗಿ ವಿವರಿಸಿಕೊಂಡುಸಂಕುಚಿತಗೊಳಿಸುತ್ತಿದ್ದೇವೆ ಇದು ನಿಜವಾಗಿಯೂ ಆ ಮಹಾನ್ ಚೇತನಕ್ಕೆ ನಾವು ಸಲ್ಲಿಸುವ ಅಗೌರವ. .
ಎಕೆಂದರೆ ಅಂಬೇಡ್ಕರ್ ಅವರ ರಾಷ್ಟ್ರೀಯತೆಯ ಚಿಂತನೆಗಳು ಎಂದಿಗೂ ಇಂದು ಮುಖ್ಯವಾಹಿನಿಯ ಚರ್ಚೆಯಲ್ಲಿರುವ ಧಾರ್ಮಿಕ ರಾಷ್ಟ್ರೀಯವಾದವನ್ನು ಒಪ್ಪಿರಲಿಲ್ಲ ಹಾಗೆನೋಡಿದರೆ ಭಾರತದ ಇತಿಹಾಸದಲ್ಲಿ ರಾಷ್ಟೀಯತೆಯ ಕಲ್ಪನೆಯ ಕುರಿತಂತೆ ಅಂಬೇಡ್ಕರ್ ಮತ್ತು ಬಲಪಂಥಿಯ ಚಿಂತನೆಗಳ ನಡುವೆ ಸೈಂಧಾಂತಿಕವಾಗಿಯೇ ಬಹಳ ದೊಡ್ಡ ಮಟ್ಟದವಿರೋಧಗಳಿದ್ದವು ಅಂಬೇಡ್ಕರ್ ಬಯಸಿದ್ದ ಭಾರತದ ರಾಷ್ಟ್ರೀಯತೆ ಜಾತ್ಯಾತೀಯ ಮತ್ತು ಸಾಮಾಜಿಕ ನ್ಯಾಯದ ಪರಿಕಲ್ಪನೆ ಮೇಲೆ ಆಧಾರವಾಗಿದ್ದರೆ, ಬಲಪಂಥಿಯ ಚಿಂತನೆಗಳುಮುಂದಿಡುತ್ತಿರುವ ರಾಷ್ಟ್ರೀಯತೆಯ ಕಲ್ಪನೆ ಬ್ರಾಹ್ಮಣವಾದಿ ನಿರೂಪಣೆಯನ್ನು ಆಧರಿಸಿದ ಹಿಂದೂಯಿಸಂ ಮತ್ತು ಹಿಂದೂ ರಾಷ್ಟ್ರ ಎಂಬ ಪರಿಕಲ್ಪನೆಯನ್ನು ಆಧರಿಸಿವೆ ಇವೆರಡೂಒಂದಕ್ಕೊಂದು ವಿರೋಧವಾಗಿರುವ ನೆಲೆಗಳು ಒಂದು ಅರ್ಥದಲ್ಲಿ ಬಾಬಾ ಸಾಹೇಬ್ ತಮ್ಮ ಬದುಕಿನಿದ್ದಕ್ಕೂ ಏನನ್ನು ವಿರೋಧಿಸುತ್ತಾ ಬಂದಿದ್ದರೂ ಅವೆ ಶಕ್ತಿಗಳು ಇಂದು ಅಂಬೇಡ್ಕರ್ನಮ್ಮ ಸಿದ್ಧಾಂತವನ್ನು ಒಪ್ಪಿದ್ದರು ಎಂದು ಪ್ರಚಾರ ಮಾಡುತ್ತಿವೆ(ನೋಡಿ Feb 15, 2015 ಸಂಘಪರಿವಾರದ ಮುಖ್ಯಸ್ಥ ಮೋಹನ್ ಭಾಗವತರ ಹೇಳಿಕೆ)
ಇದರ ಉದ್ದೇಶ ಇಂದು ಅಂಬೇಡ್ಕರ್ ಚಿಂತನೆಗಳನ್ನು ಅರಾಧಿಸುವ ದೊಡ್ಡ ಸಂಖ್ಯೆಯ ಜನರ ಒಪ್ಪಿಗೆಯನ್ನು ತನ್ನದಾಗಿಸಿಕೊಳ್ಳಬೇಕೆಂಬ ಸರಳ ರಾಜಕೀಯ ಆಶಯವೇ ಹೊರತುಅಂಬೇಡ್ಕರ್ ಪ್ರಸ್ತಾಪಿಸಿದ ಸಾಮಾಜಿಕ ಸ್ವಾರಾಜ್ಯ ಅಥವಾ ಸಾಮಾಜಿಕ ನ್ಯಾಯವನ್ನು ಆಧರಿಸಿದ ರಾಷ್ಟ್ರ ಕಟ್ಟುವುದಲ್ಲ ಆ ಕಾರಣಕ್ಕೆ ಬಲಪಂಥಿಯ ಪ್ರತಿಪಾದಕರು ಅಂಬೇಡ್ಕರ್ ನಮ್ಮಸಿದ್ಧಾಂತ ಒಪ್ಪಿದ್ದರು ಎಂಬ ತರ್ಕ ಮುಂದಿಡುತ್ತಿದ್ದಾರೆಯೇ ಹೊರತು ನಾವು ಅಂಬೇಡ್ಕರ್ ಬಯಸಿದ್ದ ಜಾತಿ/ಧರ್ಮ ರಹಿತ ಸಾಮಾಜಿಕ ಸ್ವಾರಾಜ್ಯದ ಬುನಾದಿಯ ಮೇಲಿನ ರಾಷ್ಟ್ರ ಮತ್ತುರಾಷ್ಟ್ರೀಯವಾದದ ಕನಸನ್ನು/ಸಿದ್ಧಾಂತವನ್ನು ಒಪ್ಪಿದ್ದೇವೆ ಎಂದಲ್ಲ! ಆ ಕಾರಣಕ್ಕೆ ಧಾರ್ಮಿಕ/ಸಾಂಸ್ಕೃತಿಕ ರಾಷ್ಟ್ರೀಯತೆಯ ವಾದಗಳನ್ನು ಗ್ರಹಿಸುವಾಗ ನಾವು ಬಹಳ ಎಚ್ಚರಿಕೆಯಿಂದಇರಬೇಕಿದೆ ಇಲ್ಲವಾದರೆ ಆ ವ್ಯೂಹ ಎಲ್ಲರನ್ನೂ ತಮ್ಮವರಾಗಿಸಿಕೊಳ್ಳುತ್ತಾ ಸಾಗಿ ತನ್ನ ಸಿದ್ಧಾಂತಕ್ಕೆ ಶಾಸನಬದ್ಧತೆ ಒದಗಿಸಿಕೊಳ್ಳುವ ಯತ್ನವನ್ನು ಮಾಡುತ್ತಲೇ ಇರುತ್ತದೆ . . .
ಇ ಹಿನ್ನಲೆಯಲ್ಲಿ ಅಂಬೇಡ್ಕರ್ ಚಿಂತನೆಗಳನ್ನು ಬಂಧಿಸಿರುವ ಚೌಕಟ್ಟುಗಳ ಆಚೆಗೆ ಅವರ ಚಿಂತನೆಗಳನ್ನು ಮರು ನಿರೂಪಿಸಬೇಕು ಎಂಬ ವಾದಗಳು ಪ್ರಭಾವಿಯಾಗುತ್ತಿರುವ ಈ ಹೊತ್ತಿನಲ್ಲಿ ಈ ಮೇಲಿನ ಎಲ್ಲಾ ಮಿತಿಗಳನ್ನು ಮೀರುವ ಪ್ರಾಮಾಣಿಕ ಪ್ರಯತ್ನ ನಡೆಯಬೇಕಿದೆ ಇನ್ನಾದರೂ ಭಾರತದ ಚಿಂತನಾಪರಂಪರೆಯ ಮುಂಚುಣಿ ನಾಯಕರು, ಹೋರಾಟಗಾರರು ಮಾನವಾತಾವಾದಿಯನ್ನು ಮತ್ತು ಅವರ ವಾದಗಳನ್ನು ರಕ್ಷಣಾತ್ಮಕವಾಗಿ ರಾಜಕೀಯ ಸರಿತನದ ಕಾರಣಕ್ಕೆಸಂಕುಚಿತವಾಗಿ ಬಳಸದೆ ವಿಶಾಲ ಅರ್ಥದಲ್ಲಿ ಒಳಗೊಳ್ಳಬೇಕಿದೆ ಮೇಲಾಗಿ ಮೇಲಿನ ಎಲ್ಲಾ ಮಿತಿಗಳ ಕುರಿತು ನಾವು ಮುಕ್ತವಾಗಿ ಚರ್ಚಿಸುವ ಅಂಬೇಡ್ಕರ್ ಬರಹ ಮತ್ತು ಬಾಷಣಗಳಲ್ಲಿ ಚರ್ಚಿತವಾಗಿರುವ ಅವರ ವಿಚಾರಗಳನ್ನು ಭಾರತೀಯ ಸಮಾಜ, ಸಂಸ್ಕೃತಿ, ಪರಂಪರೆ ಮತ್ತು ಆರ್ಥಿಕತೆಯನ್ನು ಸಮಾನ ಸಾಮುದಾಯಿಕ ನೆಲೆಯಲ್ಲಿ ವಿವರಿಸುವ ಸಿದ್ಧಾಂತವಾಗಿ ಓದುವ, ಬೆಳೆಸುವ ಕ್ರಮವನ್ನು ನಮ್ಮ ಬೌದ್ಧಿಕ ಪ್ರಪಂಚ ಮತ್ತು ವಿಶ್ವವಿದ್ಯಾನಿಲಯಗಳು ಮುಂದಿನ ಪೀಳಿಗೆಗಳಿಗೆರೂಪಿಸಿಕೋಡಬೇಕಿದೆ ಆ ಮೂಲಕ ಶಿಕ್ಷಣ, ಸಂಘಟನೆ, ಹೋರಾಟ ಎಂಬ ಮೂರು ಶಕ್ತಿಗಳನ್ನು ನಂಬಿಕೊಂಡು ಈ ದೇಶದ ಇತಿಹಾಸವನ್ನು ತಿದ್ದಲು ಪ್ರಯತ್ನಿಸಿದ ಒಬ್ಬ ಮೇಧಾವಿಯನ್ನು ನಾವು ಗೌರವಿಸಬೇಕಿದೆ. ನಮಗೆ ಬೇಕಿರುವುದು ನೊಂದವರ ನೋವನ್ನು ವಿವರಿಸಲು ಹಕ್ಕುಗಳು ಎಂಬ ಭಾಷೆಯನ್ನು ರೂಪಿಸಿಕೊಟ್ಟ ಸ್ವಾಭಿಮಾನಿ, ಮಾನವತಾವಾದಿ ಅಂಬೇಡ್ಕರ್ ಹೊರತು ಬೇರೆ ಯಾರೂ ಅಲ್ಲ ಆ ಕಾರಣಕ್ಕೆ ನಾವು ಅಂಬೇಡ್ಕರ್ ಅವರನ್ನು ಎಲ್ಲಾ ಶೋಷಿತರ ವಿಮೋಚಕನಾಗಿ ನೋಡಬೇಕಿದೆ.
ಡಾ.ಕಿರಣ್ ಎಂ ಗಾಜನೂರು