Wednesday 16 November 2016

“ಸಹಿಷ್ಣುತೆ ಎಂಬುದು ಗೆಲುವು”-ಶಿರಸಿಯಲ್ಲೊಂದು ಚಾರಿತ್ರಿಕ ಮಹಿಳಾ ಸಮಾವೇಶ







          “ಸಹಿಷ್ಣುತೆ ಎಂಬುದು ಗೆಲುವು” ಎಂಬುದು ಒಂದು ಮಹಿಳಾ ಸಮಾವೇಶದ ಹೆಸರಿದ್ದರೆ ನೀವು ಅಂತಹ ಸಮಾವೇಶದಿಂದ ಏನು  ನಿರೀಕ್ಷಿಸುತ್ತೀರಿ? ಬಹುಶಃ ಮಹಿಳೆಯರು ಪುರುಷರ ಬಗ್ಗೆ, ತಮ್ಮ ಮೇಲೆ ನಡೆಯುತ್ತಿರುವ ತಾರತಮ್ಯ, ಅನ್ಯಾಯ, ದೌರ್ಜನ್ಯಗಳ ಬಗ್ಗೆ ‘ಸಹಿಷ್ಣು’ಗಳಾಗಿರಬೇಕೆಂಬ ಉಪದೇಶ/ಅಜೆಂಡಾ ಇರಬಹುದು ಅಂತ. ಆದರೆ ಈ “ಮಹಿಳಾ ಕರ್ನಾಟಕ ಸಮಾವೇಶ”ದಲ್ಲಿ ನಡೆದದ್ದು ಬೇರೆನೇ.  “ಸಹಿಷ್ಣುತೆ’ ಮತ್ತು “ಗೆಲುವು”ಗಳಿಗೆ ಈ ಸಮಾವೇಶ ಬೇರೆನೇ ಫೆಮಿನಿಸ್ಟ್ ಭಾಷ್ಯ ಬರೆಯಿತು. ಹೆಸರು ಮಾತ್ರವಲ್ಲ ಈ ಸಮಾವೇಶದ ಪರಿಕಲ್ಪನೆಯೇ ವಿಶಿಷ್ಟವಾಗಿತ್ತು. ಮಹಿಳಾ ಸಾಹಿತಿಗಳು, ಚಿಂತಕರು, ಹೋರಾಟಗಾರರು ಹಾಗೂ ಇದ್ಯಾವುದೂ ಅಲ್ಲದ ಸಾಮಾನ್ಯ ಮಹಿಳೆಯರನ್ನು ಒಂದು ಕಡೆಗೆ ತಂದು ಅರ್ಥಪೂರ್ಣ ಸಂವಾದ ಸಾಧ್ಯವಾಗಿಸಿದ್ದು ಬಹುಶಃ ಹಿಂದೆಂದೂ ನಡೆಯದ್ದು. ಆ ಅರ್ಥದಲ್ಲಿ ನಿಜವಾಗಿಯೂ ಚಾರಿತ್ರಿಕ.
          ಈ ವಿಶಿಷ್ಟ ಮಹಿಳಾ ಸಮಾವೇಶದ ಗೋಷ್ಟಿಗಳೂ, ಗೋಷ್ಟಿಗಳ ಹೆಸರುಗಳೂ, ಅಲ್ಲಿ ನಡೆದದ್ದೂ ಅಷ್ಟೇ ವಿಶಿಷ್ಟವಾಗಿದ್ದವು. “ನಮ್ಮ ಲೋಕ ನಮ್ಮ ಬದುಕು” ನಲ್ಲಿ ಮಹಿಳೆಯರ ಅನುಭವ ಲೋಕ ತೆರೆದುಕೊಂಡಿತು. “ನಮ್ಮ ಅರಿವು ನಮ್ಮ ನಡೆ” ಮಹಿಳಾ ಚಿಂತಕರ ಚಾವಡಿಯಾಯಿತು. “ನಮ್ಮ ಭಾವ ನಮ್ಮ ರಾಗ”ದಲ್ಲಿ ಮಹಿಳೆಯರ ಕಾವ್ಯ ಓದು ಗಾಯನ ಕೇಳಿ ಬಂತು. “ನಮ್ಮ ನೋಟ ನಮ್ಮ ನುಡಿ” ಮಹಿಳಾ ಸಾಹಿತ್ಯದ ಚರ್ಚಾ ವೇದಿಕೆಯಾಯಿತು. “ನಮ್ಮ ಮಾತು ನಮ್ಮ ಹಕ್ಕು” ಮಹಿಳಾ ಚಳುವಳಿಯ ಬಗೆಗಾಗಿತ್ತು. ಜಿ.ಎಸ್.ಎಸ್. ಅವರ “ಸ್ತ್ರೀ ಅಂದರೆ ಅಷ್ಟೇ ಸಾಕೆ?” ‘ಕಾವ್ಯರಂಗ’ ಎಂಬ ವಿಶಿಷ್ಟ ಕಲಾಭಿವ್ಯಕ್ತಿಯಲ್ಲಿ ಮೂಡಿ ಬಂತು. ಸಮಾವೇಶದ ಹರವು, ಆಳ ಎಷ್ಟಿತ್ತೆಂದರೆ ಅದನ್ನು ವರದಿ ಮಾಡುವುದು ಕಷ್ಟ. ಕೆಲವು ನೆನಪಿನಲ್ಲಿ ಉಳಿದು ಹೋಗುವ ಕೆಲವರ ಮಾತುಗಳಿಂದಷ್ಟೇ ಅದರ ಅಂದಾಜು ಮಾಡಬಹುದು. ಅಂತಹ ಕೆಲವು ಮಾತುಗಳನ್ನು ಗೋಷ್ಟಿಯಲ್ಲಿ ಕೊಡಲಾಗಿದೆ.


ಸಮಾವೇಶದ  ಆಶಯ ಮಾತುಗಳನ್ನಾಡಿದ ಡಾ.ವಿನಯಾ ಒಕ್ಕುಂದ, ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳಲು ಸಾಧ್ಯವಿರದ ಪರಿಸ್ಥಿತಿ ಕುರಿತು ತಮ್ಮ ಅನುಭವಗಳನ್ನುಹಂಚಿಕೊಂಡರು. ರಾಘವೇಶ್ವರ ಸ್ವಾಮಿ ಅತ್ಯಾಚಾರ ಪ್ರಕರಣದ ಚರ್ಚೆ ಮತ್ತು ಪರಿಣಾಮ, ಬುರ್ಖಾ ಧರಿಸಿ ಬರುವ ವಿದ್ಯಾರ್ಥಿನಿಯರನ್ನು ವಿರೋಧಿಸಿ ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲು ಹೊದ್ದು ಬರುತ್ತಿರುವ ಬೆಳವಣಿಗೆಗಳ ಕುರಿತು ಆತಂಕ ವ್ಯಕ್ತಪಡಿಸಿದರು.


ಉದ್ಘಾಟನಾ ಭಾಷಣ ಮಾಡಿದ ಹಿರಿಯ ಲೇಖಕಿ ಬಾನು ಮುಷ್ತಾಕ್ ಮಾತನಾಡಿ, “ಇಂದು ಭಿನ್ನ ಅಭಿಪ್ರಾಯ ಹೊಂದಿರುವುದೇ ದೊಡ್ಡ ಅಪರಾಧವೆಂದೂ ಅದಕ್ಕೆ ಹಣೆಗೆ ಗುಂಡಿಕ್ಕುವುದೇ ಶಿಕ್ಷೆ ಎಂದೂ ಬಹಿರಂಗ ಹೇಳಿಕೆ ನೀಡುವವರ ಮತ್ತು ಅದನ್ನು ಮಾಡಿ ತೋರಿಸುವವರ ನಡುವೆ ನಾವಿದ್ದೇವೆ. ಇಂಥವರ ಅಸಹಿಷ್ಣುತೆಗೆ ಸಹಿಷ್ಣುತೆಯೇ ಮದ್ದು. ಭಿನ್ನಾಭಿಪ್ರಾಯ ಮಾರಕವಲ್ಲ. ಭಿನ್ನತೆಯ ನಡುವೆಯೂ ಸಂವಾದ ಸಾಧ್ಯ ಅನ್ನುವುದನ್ನು ನೆಚ್ಚಿಕೊಂಡವರು ನಾವು. ಭಿನ್ನಾಭಿಪ್ರಾಯಗಳನ್ನು ಗೌರವಿಸುವ, ಟೀಕೆ - ವಿಮರ್ಶೆಗಳನ್ನು ಆರೋಗ್ಯದಿಂದ ಸ್ವೀಕರಿಸುವ ಮನೋಭಾವವನ್ನು ಈ ರೀತಿಯ ಕಾರ್ಯಕ್ರಮಗಳ ಮೂಲಕ ರೂಢಿಗೊಳಿಸಬೇಕು” ಎಂದರು.


ಅತಿಥಿಗಳಾಗಿದ್ದ ಡಾ. ವಸುಂಧರಾ ಭೂಪತಿ ಅವರು ಮಾತನಾಡಿದರು. “ಎಲ್ಲಿ ಸಹಭಾಗಿತ್ವ ಇದೆಯೋ ಅಲ್ಲಿ ಹೆಣ್ಣನ್ನು ಕೀಳಾಗಿ ನೋಡಲು ಸಾಧ್ಯವೇ ಇಲ್ಲ. ಹೆಣ್ಣನ್ನು ಅಡುಗೆಮನೆಗೆ ಸೀಮಿತವಾಗಿಸಿದ ನಂತರದಿಂದ ಭೇದಭಾವ ಶುರುವಾಯ್ತು. ಕ್ರಮೇಣ ಸಾಮಾಜಿಕ ಉತ್ಪಾದನಾ ಕ್ಷೇತ್ರದಿಂದ ಆಕೆಯನ್ನು ಹೊರಗಿಡಲಾಯ್ತು.” ಎಂದು ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಕನ್ನಡ ಪುಸ್ತಕ ಪ್ರಾಧಿಕಾರದ ಡಾ. ಬಂಜಗೆರೆ ಜಯಪ್ರಕಾಶ ಮಾತನಾಡಿದರು..  ಉದ್ಘಾಟನಾ ಸಮಾರಂಭದಲ್ಲಿ ಸಿದ್ದಿ ಡಮಾಮಿ ನೃತ್ಯ ಪ್ರದರ್ಶಿಸಲಾಯಿತು. ಉದ್ಘಾಟನಾ ಸಮಾರಂಭದ ನಿರ್ವಹಣೆಯನ್ನು ದೀಪಾ ಹಿರೇಗುತ್ತಿಯವರು ಮಾಡಿದರು.


            “ನಮ್ಮ ಲೋಕ ನಮ್ಮ ಬದುಕು”  ಗೋಷ್ಟಿಯಲ್ಲಿ ಕರ್ನಾಟಕ ಸಿಐಟಿಯು ಅಧ್ಯಕ್ಷರಾದ ಎಸ್.ವರಲಕ್ಷ್ಮಿ ಅವರು ಅಂಗನವಾಡಿ, ಬಿಸಿಯೂಟ, ಆಶಾ ಕಾರ್ಯಕರ್ತೆಯರ ಮತ್ತಿತರ ಮಹಿಳಾ ಕಾರ್ಮಿಕರ ಹಾಗೂ ದುಡಿಯುವ ಮಹಿಳೆಯರ  ಸಾಮಾನ್ಯವಾಗಿ ಬೆಳಕಿಗೆ ಬಾರದ ಅನುಭವ ಲೋಕವನ್ನು ಬಿಚ್ಚಿಟ್ಟರು. ಎಲ್ಲಾ ದುಡಿಯುವ ಮಹಿಳೆಯರ ಡಬ್ಬಲ್ ದುಡಿಮೆಗಳ ದೈನಂದಿನ ಬವಣೆಗಳ, ಮತ್ತು ತಮ್ಮ ಬದುಕು ಉತ್ತಮ ಪಡಿಸಿಕೊಳ್ಳಲು ಹಕ್ಕು ಸಾಧಿಸಲು ನಡೆಸಿದ ಹೋರಾಟಗಳ ಏಳು-ಬೀಳುಗಳ ಲೋಕವನ್ನು ಹಂಚಿಕೊಂಡರು. ಭಾರತಿ ಹೆಗಡೆ ಪತ್ರಕರ್ತರ ಮತ್ತು ಅವರ ಅನುಭವಕ್ಕೆ ಬರುವ ಮಹಿಳೆಯರ ಲೋಕವನ್ನು ತೆರೆದಿಟ್ಟರು. ಎಲ್ಲರೂ ತಾತ್ಸಾರದಿಂದ ಅನುಮಾನದಿಂದ ಕಾಣುವ ತೃತೀಯ ಲಿಂಗಿಗಳ  ಬದುಕಿನ ಬಗ್ಗೆ ಡಾ. ಅಕ್ಕೈ ಪದ್ಮಶಾಲಿ ಮಾತನಾಡಿದರು. ಜ್ಯೂಲಿಯಾನ ಫೆರ್ನಾಂಡೀಸ್ ಸಿದ್ದಿ ಜನಾಂಗದ ಮಹಿಳೆಯರ ಅನುಭವ ಲೋಕವನ್ನು ಪರಿಚಯಿಸಿದರು. ಕೆ. ಷರೀಫಾ ಗೋಷ್ಟಿಯ ಅಧ್ಯಕ್ಷತೆ ವಹಿಸಿದ್ದರು. ಚಾಂದನಿ ಮತ್ತು ರೇಣುಕಾ ಹೆಳವರ ಕವಿತೆ ಓದಿದರು.ಸುಧಾ ಆಡುಕಳ ಗೋಷ್ಟಿಯನ್ನು ನಿರ್ವಹಿಸಿದರು.

          “ನಮ್ಮ ಅರಿವು ನಮ್ಮ ನಡೆ” ಗೋಷ್ಟಿ ಮಹಿಳಾ ಚಿಂತನೆಗೆ ಮುಡಿಪಾಗಿತ್ತು. ಡಾ. ಎಚ್.ಎಸ್. ಅನುಪಮಾ ಮತ್ತು ಡಾ. ಗೀತಾ ವಸಂತ ಮಹಿಳಾ ಸಾಹಿತ್ಯ ಮತ್ತು ಚಳುವಳಿಗೆ ಮೂಲವಾದ ಇಂದಿನ ಮಹಿಳಾ ಚಿಂತನೆಯ ದಿಕ್ಕು ದೆಸೆಗಳ ಪರಿಚಯ ಮಾಡಿದರು. ಡಾ. ಎಂ.ಎಸ್.ಆಶಾದೇವಿ ಅಧ್ಯಕ್ಷತೆ ವಹಿಸಿದ್ದರು. ಗಿರಿಜಾ ಹೆಗಡೆ ಮತ್ತು ಮಾನಸಾ ಹೆಗಡೆ ಕವಿತೆ ಓದಿದರು. ಶ್ರೀದೇವಿ ಕೆರೆಮನೆ ಗೋಷ್ಟಿಯನ್ನು ನಿರ್ವಹಿಸಿದರು.
          “ನಮ್ಮ ನೋಟ ನಮ್ಮ ನುಡಿ” ಗೋಷ್ಟಿ ಮಹಿಳಾ ಸಾಹಿತ್ಯದ ಇಂದಿನ ಚರ್ಚೆಗಳನ್ನು ಎತ್ತಿಕೊಂಡಿತು. ಅಧ್ಯಕ್ಷತೆ ವಹಿಸಿದ್ದ ಮಹಿಳಾ ವಿ.ವಿ.ಯ ಡಾ. ಸುನಂದಮ್ಮ ಆರ್., ಹಾಗೂ ಡಾ. ಸಬಿತಾ ಬನ್ನಾಡಿ, ಡಾ. ತಾರಿಣಿ ಶುಭದಾಯಿನಿ ಮಹಿಳಾ ಸಾಹಿತ್ಯದ ಬಗ್ಗೆ ಇಂದಿನ ಒಳನೋಟಗಳನ್ನು ಕೊಟ್ಟರು. ಪ್ರಜ್ಞಾ ಮತ್ತಿಹಳ್ಳಿ ಮತ್ತು ರೇಣುಕಾ ರಮಾನಂದ ಕವಿತೆ ಓದಿದರು. ಕಾವ್ಯ ನಾಯ್ಕ ಗೋಷ್ಟಿಯ ನಿರ್ವಹಣೆ ಮಾಡಿದರು.
          “ನಮ್ಮ ಮಾತು ನಮ್ಮ ಹಕ್ಕು” ಗೋಷ್ಟಿಯಲ್ಲಿ ಮಹಿಳಾ ಚಳುವಳಿಯ ಇಂದಿನ ಸ್ಥಿತಿ, ಸೋಲು-ಗೆಲುವು, ಸವಾಲು-ಸಾಧ‍್ಯತೆಗಳನ್ನು ತೆರೆದಿಟ್ಟವರು ಜನವಾದಿ ಮಹಿಳಾ ಸಂಘಟನೆಯ ಕೆ. ನೀಲಾ ಮತ್ತು ಡಾ. ಅನುಸೂಯಾ ಕಾಂಬ್ಳೆ. ಡಾ. ಎನ್. ಗಾಯತ್ರಿ ಅಧ್ಯಕ್ಷತೆ ವಹಿಸಿದ್ದರು. ಅಕ್ಷತಾ ಹುಂಚನಕಟ್ಟೆ  ಮತ್ತು ಅಂಜಲಿ ಬೆಳೆಗಲಿ ಅವರು ಕವಿತೆ ಓದಿದರು.ಯಮುನಾ ಗಾಂವ್ಕರ್ ಗೋಷ್ಟಿಯನ್ನು ನಿರ್ವಹಿಸಿದರು.
ಈ ಗೋಷ್ಟಿಗಳಲ್ಲದೆ ಸಮಾವೇಶದಲ್ಲಿ ಮಹಿಳಾ ಕಾವ್ಯಧಾರೆ ಹರಿಯಿತು. ಕಾವ್ಯ ಓದು-ಗಾಯನಕ್ಕೆ ಮೀಸಲಾಗಿದ್ದ “ನಮ್ಮ ಭಾವ ನಮ್ಮ ರಾಗ” ಗೋಷ್ಟಿಯಲ್ಲಿ ಡಾ. ಹೇಮಾ ಪಟ್ಟಣಸೆಟ್ಟಿ, ಭಾಗೀರಥಿ ಹೆಗಡೆ, ಡಾ. ಮಾಧವಿ ಎಸ್. ಭಂಡಾರಿ, ಸುನಂದಾ ಕಡಮೆ,  ಸುಧಾ ಚಿದಾನಂದಗೌಡ, ಚೇತನಾ ತೀರ್ಥಹಳ್ಳಿ, ತಮ್ಮ ಕವನ ಗಳನ್ನು ಓದಿದರು. ಡಾ. ಸುಕನ್ಯಾ ಮಾರುತಿ ಅದ್ಯಕ್ಷತೆ ವಹಿಸಿದ್ದರು. ಜಾನಪದ ಹಾಡುಗಾರ್ತಿ ನುಗ್ಗಿ ಗೌಡ ಅತಿಥಿಗಳಾಗಿದ್ದರು. ಇದಲ್ಲದೆ ಹಲವು ಕವನಗಳ ಗಾನ ಸ್ಪಂದನ ನಡೆಯಿತು. ಡಾ. ಶ್ರೀಪಾದ ಭಟ್ ಅವರ ಸಂಗೀತ ಸಂಯೋಜನೆಯಲ್ಲಿ ವಿದ್ವಾನ ವಿಶ್ವನಾಥ ಹಿರೇಮಠ, ದೇವಾನಂದ ಗಾಂವ್ಕರ್ ಮುಂತಾದವರು ಗಾಯನ ಮಾಡಿದರು. ಈ ಗೋಷ್ಟಿಯ ನಿರ್ವಹಣೆಯನ್ನು ಸಿಂಧು ಹೆಗಡೆ ಮಾಡಿದರು. ಈ ಗೋಷ್ಠಿಯನ್ನು ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಉತ್ತರ ಕನ್ನಡ ಆಯೋಜಿಸಿತ್ತು. ಕಾವ್ಯಕ್ಕೆ ಮೀಸಲಾಗಿದ್ದ ಗೋಷ್ಟಿಯಲ್ಲದೆ, ಪ್ರತಿ ಗೋಷ್ಟಿಯಲ್ಲೂ ಎರಡು ಕವಿಗಳ ಕಾವ್ಯಸ್ಪಂದನ ಇದ್ದಿದ್ದು ಸಮಾವೇಶದ ಇನ್ನೊಂದು ವಿಶಿಷ್ಟತೆಯಾಗಿತ್ತು.
ಮಹಿಳಾ ವಿ.ವಿ. ಕುಲಪತಿ ಡಾ. ಸಬಿಹಾ ಭೂಮಿಗೌಡ ಅವರು ಸಮಾರೋಪ ಮಾತುಗಳನ್ನಾಡುತ್ತಾ “ನಮ್ಮ ಅನುಭವ ವಿಸ್ತಾರಗೊಳ್ಳಬೇಕು ಅಂದರೆ ನಮ್ಮ ಮಾತು ಮತ್ತು ಬದುಕುಗಳು ಒಂದಾಗಬೇಕು. ಆಗಷ್ಟೇ ನಮ್ಮ ಬರಹ ಸೂಕ್ಷ್ಮಗೊಳ್ಳಲು, ಮೊನಚು ಪಡೆಯಲು ಸಾಧ್ಯ… .. ಈ ಎರಡು ದಿನಗಳ ಕಾಲ ಭಿನ್ನ ವೇದಿಕೆ, ಭಿನ್ನ ವೇದನೆಗಳ ದನಿಯನ್ನು ಇಲ್ಲಿ ಆಲಿಸಿದ್ದೇವೆ. ಅದಕ್ಕೆ ತಕ್ಕಂತೆ ಸಹಿಷ್ಣು – ಅಸಹಿಷ್ಣುತೆಯ ಬದಲಾವಣೆಗಳನ್ನು, ಭವಿಷ್ಯದ ನಡೆಯನ್ನು ರೂಪಿಸಿಕೊಳ್ಳುವುದಕ್ಕೆ ಇಂಬುಕೊಟ್ಟಿದೆ” ಎಂದು ಕಿವಿಮಾತು ಹೇಳಿದರು. “ಇತ್ತೀಚಿನ ವರ್ಷಗಳಲ್ಲಿ ಎಡಪಂಥೀಯರು ಎಲ್ಲೆಗಳನ್ನು ದಾಟಿ ಹೊಸ ಗುಂಪುಗಳನ್ನು ಒಳಗೊಳ್ಳುತ್ತ, ಹೊಸತಲೆಮಾರನ್ನು ತಲುಪುವ ಕೆಲಸ ಮಾಡುತ್ತಿದೆ. ಇದು ಒಳ್ಳೆಯ ಬೆಳವಣಿಗೆ. ವಿವಿಧ ಗುಂಪು – ಕ್ಷೇತ್ರಗಳ ಜೊತೆ ಸಂವಹನಕ್ಕೆ ಸಾಹಿತ್ಯ ಅತ್ಯಂತ ಪರಿಣಾಮಕಾರಿಯಾದ ಮಾಧ್ಯಮ. ಇದನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು” ಎಂದವರು ಹೇಳಿದರು. ಅತಿಥಿಗಳಾಗಿದ್ದ ಜನವಾದಿ ಮಹಿಳಾ ಸಂಘಟನೆಯ ಕೆ.ಎಸ್.ವಿಮಲಾ ಮತ್ತು ಅಧ್ಯಕ್ಷತೆ ವಹಿಸಿದ್ದ ಬಂಜಗೆರೆ ಜಯಪ್ರಕಾಶ ಮಾತನಾಡಿದರು. ವಿಠ್ಠಲ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು.









ಕಾರ್ಯಕ್ರಮದ ನಂತರ “ಬಹುಮುಖ” ಹುಣಸೂರು ಇವರು ಪ್ರಸ್ತುತ ಪಡಿಸಿದ :ಸ್ತ್ರೀ ಅಂದರೆ ಅಷ್ಟೇ ಸಾಕೇ?” ಎನ್ನುವ ಕಾವ್ಯ ರೂಪಕವನ್ನು ಸುಂದರವಾಗಿ ಪ್ರದರ್ಶಿಸಿದರು. ಸುಮಾರು 20 ಶಾಲಾ ವಿದ್ಯಾರ್ಥಿಗಳು ಚುರುಕಾಗಿ ಕನ್ನಡ ಸಾಹಿತ್ಯದ ಹಲವು ಭಾಗಗಳನ್ನು ಶಿಲ್ಪಾ ಎಸ್ ಅವರು ನಿರ್ದೇಶಿಸಿದರು. ಚಿಂತನ ರಂಗ ಅಧ್ಯಯನ ಕೇಂದ್ರ, ಉತ್ತರ ಕನ್ನಡ ಮತ್ತು ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಉತ್ತರ ಕನ್ನಡ ಿದನ್ನು ಆಯೋಜಿಸಿತ್ತು.
ಸಹಿಷ್ಣುತೆಯ ನುಡಿಗಳು
ಉದ್ಘಾಟನಾ ಗೋಷ್ಟಿಯಲ್ಲಿ
”ಏಕಸಂಸ್ಕೃತಿಗಿಲ್ಲಿ ಭವಿಷ್ಯವಿಲ್ಲ, ಅದರಲ್ಲಿ ಬದುಕಿಲ್ಲ. ಆದ್ದರಿಂದ ಮುಂದಿನ ಜನಾಂಗವನ್ನು ಬಹುತ್ವದ ವಾರಸುದಾರರನ್ನಾಗಿ ರೂಪಿಸುವುದು ಇಂದಿನ ತುರ್ತು..“ಮಹಿಳೆಯ ಅಸ್ಮಿತೆಯನ್ನೇ ಅಸಹಿಷ್ಣುತೆಯಿಂದ ನೋಡುವ ವರ್ತಮಾನದ ಜೊತೆ ಸಂವಾದ ಸಾಧ್ಯವಾಗಬೇಕು”
- ಬಾನು ಮುಷ್ತಾಕ್ 
* “
* “ದೇವರು ಮನುಷ್ಯರ ನಡುವೆ ದ್ವೇಷ ಹುಟ್ಟಿಸುವ ಸಾಧನವಾಗಿದೆಯಾ? ಧರ್ಮ ಅಂದರೆ ಹಿಂದೂ, ಮುಸ್ಲಿಮ್, ಕ್ರೈಸ್ತ ಮೊದಲಾದ ಮತಗಳಲ್ಲ. ಧರ್ಮ ಅಂದರೆ ನ್ಯಾಯ, ಧರ್ಮ ಅಂದರೆ ಮಹೋನ್ನತಿ ಕಾಯಕವೇ ಧರ್ಮ. ಪ್ರೀತಿ ಎಲ್ಲಕ್ಕಿಂತ ದೊಡ್ಡ ಧರ್ಮ. ಈ ಧರ್ಮವನ್ನು ಎಲ್ಲರೂ ಪಾಲಿಸಬೇಕು. ವ್ಯಕ್ತಿಯೊಬ್ಬನನ್ನು ನೋಡಿದಾಗ ಆತನ ಲಾಂಛನವೇ ಕಣ್ಮುಂದೆ ಬರುವುದಾದರೆ, ಅಂಥವರು ಮನುಷ್ಯರೇ ಅಲ್ಲ.”
* “ಬೇಟೆಯಾಡುವುದನ್ನು ವಿಜೃಂಭಿಸುವ ಯಾವ ಸಮಾಜವೂ ಸುರಕ್ಷಿತವಲ್ಲ. ಮನುಷ್ಯ ಪ್ರಾಣಿಸ್ವರೂಪನಾಗಿದ್ದಾಗ ಬೇಟೆಯಾಡುತ್ತಿದ್ದ. ಬುದ್ಧ, ಕ್ರಿಸ್ತ ಮೊದಲಾದವರನ್ನು ಕಂಡನಂತರವೂ ಬೇಟೆಯಾಡುತ್ತಾರೆಂದರೆ ಅಂಥವರನ್ನು ಮನುಷ್ಯತ್ವದಿಂದ ಹೊರಗಿಡಬೇಕಾಗುತ್ತದೆ”
- ಡಾ. ಬಂಜಗೆರೆ ಜಯಪ್ರಕಾಶ್;
---------------------------------------
ಇಂದು ಸಾಂಸ್ಕೃತಿಕ ಅಶ್ಲೀಲತೆ ಮೂಲಕ ಭಯೋತ್ಪಾದನೆ ಸೃಷ್ಟಿಸಲಾಗ್ತಿದೆ. ಅದನ್ನು ಎದುರಿಸುವ ನಿಟ್ಟಿನಲ್ಲಿ ಬೃಹತ್ ಚಳವಳಿ ರೂಪಿಸಬೇಕಾದ ಅಗತ್ಯವಿದೆ. ….ರಾಘವೇಶ್ವರ ಸ್ವಾಮಿ ಅತ್ಯಾಚಾರ ಪ್ರಕರಣದ ವಿರುದ್ಧ ರಾಜ್ಯದ ಮಹಿಳೆಯರು ಒಗ್ಗೂಡಿ ಪ್ರತಿಭಟಿಸದೆ ಹೋದದ್ದು ವಿಷಾದನೀಯ””
- ಡಾ.ವಸುಂಧರಾ ಭೂಪತಿ
ಸಮಾರೋಪದಲ್ಲಿ
-
 “ಸಹಿಷ್ಣುತೆ ಎಂಬುದು ಗೆಲುವು” ಎಂದು ಹೇಳುತ್ತಿರುವುದು ಅಸಹಿಷ್ಣುತೆಯನ್ನು ಗರಿಷ್ಠ ಪ್ರಮಾಣದಲ್ಲಿ ಹೊಂದಿರುವ ಮಹಿಳೆಯರಿಗಲ್ಲ, ಒಟ್ಟು ಸಮಾಜಕ್ಕೆ. ನಾವು ಮಹಿಳೆಯರು ಎಷ್ಟೋ ಸಲ ಸಹಿಷ್ಣುತೆಯನ್ನು ಅನಿವಾರ್ಉ ಎಂಬಂತೆ ಪಾಲಿಸಿಕೊಂಡು ಬಂದಿದ್ದೀವಿ. ಹಾಗೆ ಭಾವಿಸಿದ್ದರಿಂದಲೇ ಅದು ನಮಗೆ ಅಸಹಾಯಕತೆಯಂತೆ ಅನ್ನಿಸಿದೆ. ಆದರೆ ವಾಸ್ತವದಲ್ಲಿ ಸಹಿಷ್ಣುತೆಯ ಒಳಗೆ ಗೆಲುವಿನ ಆಶಾಕಿರಣವಿದೆ.. .. ..ಸಹಿಷ್ಣುತೆಯನ್ನು ಮೌಲ್ಯ ಎನ್ನುವುದಾದರೆ ಅದು ಗಂಡು ಹೆಣ್ಣುಗಳಿಬ್ಬರಿಗೂ ಮೌಲ್ಯವಾಗಬೇಕು. ಇಲ್ಲವಾದರೆ ಅದು ದೌರ್ಬಲ್ಯವಾಗಿಬಿಡುತ್ತದೆ. ಆ ಎಚ್ಚರ ಇರಬೇಕು”
- ಸಬಿಹಾ ಭೂಮಿಗೌಡ
----------------------------------
“ಸಮಾನತೆ ಅನ್ನುವುದು ಸಾಧನೆಯ ಸ್ಥಿತಿ ತಲುಪಿದಾಗ ಸಹಿಷ್ಣುತೆಯು ಗೆಲುವಾಗುತ್ತದೆ. ಅದನ್ನು ಸಾಧಿಸುವ ನಿಟ್ಟಿನಲ್ಲಿ ಸೇರುವ, ಕವಲೊಡೆಯುವ, ಮತ್ತೆ ಸೇರುವ, ಕೊನೆಗೊಮ್ಮೆ ಸಾಧನೆಯ ಸಾಗರ ಸೇರುವ ಪ್ರಕ್ರಿಯೆಯೇ ಸಹಿಷ್ಣುತೆಯನ್ನು ಸಾಧ್ಯವಾಗಿಸುತ್ತೆ”
- ಕೆ.ಎಸ್.ವಿಮಲಾ
-----------------------------------------------------

ಗೋಷ್ಟಿಗಳಲ್ಲಿ ಸಹಿಷ್ಣುತೆಯ ನುಡಿಗಳು
ಈವರೆಗೆ ನನಗೆ ಸಿಕ್ಕಿರೋ ಪ್ರಶಸ್ತಿಗಳು ಜೈಲುವಾಸ, ಗೋಲಿಬಾರ್, ವಿಚಾರಣೆ ಇವೇ ಎಲ್ಲ. ಈ ಬಗ್ಗೆ ನನಗೆ ದುಃಖವಿಲ್ಲ, ಬದಲಿಗೆ ಹೆಮ್ಮೆ ಇದೆ. ಈ ಎಲ್ಲ ಪ್ರಶಸ್ತಿಗಳು ಸಿಕ್ಕಿರೋದು ನನ್ನ ಹೋರಾಟಕ್ಕೆ.
~ ವರಲಕ್ಷ್ಮಿ, ಸಿಐಟಿಯು ರಾಜ್ಯಾಧ್ಯಕ್ಷೆ
------------------------------
ಸ್ತ್ರೀಲಿಂಗ, ಪುಲ್ಲಿಂಗ ಎರಡೂ ಅಲ್ಲದವರು ನಪುಂಸಕಲಿಂಗ ಹೇಗಾಗ್ತಾರೆ? ಮೇಜು, ಕುರ್ಚಿ ಇತ್ಯಾದಿಗಳು ನಪುಂಸಕ - ಅವು ಲಿಂಗವಿಲ್ಲದವು. ನಾವು ಮನುಷ್ಯರು. ಶಿಶ್ನ ಇದ್ದೋನೇ ಗಂಡು. ಯೋನಿ ಇದ್ದೋಳೇ ಹೆಣ್ಣು ಅಂತ ತೀರ್ಮಾನ ಮಾಡಿದವರು ಯಾರು?  ಯೋನಿಯಿಲ್ಲದ, ಗರ್ಭವಿಲ್ಲದ, ಮೊಲೆಯಿಲ್ಲದ ಹೆಣ್ಣುಗಳು ನಾವು.
~ ಅಕ್ಕೈ ಪದ್ಮಶಾಲಿ
ಒಬ್ಬರನ್ನೊಬ್ಬರು ದ್ವೇಷಿಸುವ ಮೂಲಕ ಯಾರೂ ದೊಡ್ಡವರಾಗಲು ಸಾಧ್ಯವಿಲ್ಲ.
~ ಕೆ.ಷರೀಫಾ
• ಬಾಂಬ್’ಗಳನ್ನು ತಯಾರಿಸುವುದೇ ದೇಶಭಕ್ತಿ ಎನ್ನುವಂತಾಗಿದೆ.    
• ಲಿಂಗ, ಜಾತಿ, ಧರ್ಮಗಳ ಮಾರುಕಟ್ಟೆಯಿಂದ ಅಸಹಿಷ್ಣುತೆ ಹೆಚ್ಚುತ್ತಿದೆ.     
• ಸ್ತ್ರೀವಾದ ಅಂದ್ರೆ ಪುರುಷವಿರೋಧ ಅಲ್ಲ. ಪುರುಷರಂತೆ ಆಗುವುದು ಕೂಡಾ ಅಲ್ಲ.
~ ಡಾ.ಎಚ್.ಎಸ್. ಅನುಪಮಾ
• ವ್ಯವಸ್ಥೆಯೊಳಗಿನ ಕೇಡುಗಳ ವಿರುದ್ಧ ಹೋಗಬೇಕಾದಾಗ ಹೆಣ್ಣು ಕೇಡನ್ನು ನಿರಾಕರಿಸ್ತಾಳೆ ಹೊರತು ವ್ಯವಸ್ಥೆಯನ್ನಲ್ಲ. ಹೆಣ್ಣು ವ್ಯವಸ್ಥೆಯ ಕ್ರೌರ್ಯಗಳನ್ನ ವಿರೋಧಿಸ್ತಾಳೆ ಹೊರತು ವ್ಯಕ್ತಿಯನ್ನಲ್ಲ. ಇದನ್ನು ಹೆಣ್ಣು ಖಚಿತ ನೆಲೆಯಲ್ಲಿ ಮಾಡುತ್ತ ಬಂದಿದ್ದಾಳೆ. ಆದರೆ ಅವಳ ಈ ದನಿಯನ್ನ ಅರ್ಥ ಮಾಡಿಕೊಳ್ಳೋದಕ್ಕೆ ಶತಮಾನಗಳು ಬೇಕಾಯ್ತು. ಹಾಗಿದ್ದೂ ಇನ್ನೂ ಕೆಲವರಿಗದು ಅರ್ಥವಾಗಿಲ್ಲ.
• ಗಂಡಸಿನ ಒಣಪ್ರತಿಷ್ಠೆಯನ್ನ ಮೌಲ್ಯ’ ಎಂಬಂತೆ ಬಿಂಬಿಸಿದರೆ, ಮುಂದೊಂದು ದಿನ ಹೆಣ್ಣು ಅದನ್ನು ಮೌಲ್ಯ ಅಂದುಕೊಂಡೇ ತನ್ನದಾಗಿಸಿಕೊಳ್ಳಬಹುದು. ಹಾಗೇನಾದರೂ ಆದರೆ, ಆ ದಿನ ಎಲ್ಲರೂ ‘ಅಸಹಿಷ್ಣುತೆಯ ಸೋಲು’ ಎದುರಿಸಬೇಕಾಗುತ್ತದೆ.
~ ಸಬಿತಾ ಬನ್ನಾಡಿ
------------------------------------
• ಇಂದಿನ ಸ್ತ್ರೀವಾದಿ ನೆಲೆ ಅತ್ಯಂತ ಮಾನವೀಯ ದೃಷ್ಟಿಯೊಳಗೆ ತನ್ನನ್ನು ತಾನು ಪ್ರಕಟಗೊಳಿಸ್ಕೊಳ್ಳೋದಕ್ಕೆ ಆರಂಭಿಸಿದೆ.
• ಗಾಂಧಿ ವಸಾಹತುಷಾಹಿಯನ್ನು ಎದುರಿಸಿದ್ದು ಸ್ತ್ರೀಪರಿಭಾಷೆಯ ನೆಲೆಯಲ್ಲಿ. ಉಪ್ಪು ಮಾಡಿದ್ದು, ಕಸಬರಿಕೆ ಹಿಡಿದು ಸ್ವಚ್ಛತೆಗೆ ಮುಂದಾಗಿದ್ದು ಇವೇ ಮೊದಲಾದ ಸ್ತ್ರೀ ಪರಿಕರಗಳ ಮೂಲಕ ಸಾಮ್ರಾಜ್ಯಷಾಹಿಯನ್ನೆ ಗಾಂಧೀಜಿ ಅಲುಗಾಡಿಸಿದರು.
• ಕ್ರಿಕೆಟ್ ಮ್ಯಾಚ್’ಗೆ ಕಾಯುವಂತೆ ಯುದ್ಧಕ್ಕೆ ಕಾದು ಕೂತಿರುವವರು ನಮ್ಮಲ್ಲಿ ಇದ್ದಾರೆ. ಆದರೆ ಒಬ್ಬೇ ಒಬ್ಬ ಮಹಿಳೆ ಇಂಥ ಯುದ್ಧದ ಹಿಂಸೆಯನ್ನು ಬಯಸಲು ಸಾಧ್ಯವಿಲ್ಲ.
~ ತಾರಿಣಿ ಶುಭದಾಯಿನಿ
-----------------------------------------
ಗೋವಿನ ಹಾಡಿನ ಅನೇಕ ಪಠ್ಯಗಳಿವೆ. ಅವುಗಳಲ್ಲಿ ಇಂದು ಹೆಚ್ಚಾಗಿ ಬಳಸೋದು ಕೃಷ್ಣಭಟ್ಟರ ಪಠ್ಯ. ನಾನು ಇನ್ನೊಂದು ಪಠ್ಯ ಕೇಳಿದ್ದೇನೆ. ಸೋಲಿಗರ ಮಹಿಳೆಯರು ಹಾಡುತ್ತಾರೆ ಇದನ್ನು.
ಈ ಹಾಡಿನಲ್ಲಿ ಹುಲಿ ‘ಕ್ರೂರವ್ಯಾಘ್ರ’ನಲ್ಲ. ಆದರೆ ಗೋವಿನ ಮಮತೆಗೆ ಮರುಗಿ ಪ್ರಾಣ ತೊರೆಯುತ್ತದೆ. ಆದರೆ ನಂತರದಲ್ಲಿ ಸೋಲಿಗರ ಹಾಡು ಮತ್ತೊಂದು ಬಗೆಯಲ್ಲಿ ಸಾಗುತ್ತದೆ. ಹಸು ತನ್ನ ಕರುವಿಗೆ ಹಾಲು ಕುಡಿಸಲು ಹೋದಾಗ ಅದು ಹುಲಿಯ ಮರಿ ಜೊತೆ ಆಟವಾಡ್ತಿರುತ್ತದೆ. ಅಮ್ಮ ಕರೆದಾಗ ಕರು, ‘ಗೆಳೆಯನ ತಾಯಿ ಹುಲಿಯೂ ಬರಲಿ’ ಅನ್ನುತ್ತದೆ. ಎಷ್ಟು ಹೊತ್ತಾದರೂ ಅಮ್ಮ ಹುಲಿ ಬರೋದಿಲ್ಲ. (ಅದು ಅದೇ ಪ್ರಾಣತೊರೆದ ಹುಲಿ).
ಇದರಿಂದ ದುಃಖಗೊಳ್ಳುವ ಕರು, ತನ್ನ ತಾಯಿಗೆ ನಿನ್ನ ದೆಸೆಯಿಂದ ಸತ್ತುಹೋಗಿದ್ದು ನನ್ನ ಗೆಳೆಯನ ತಾಯಿ ಎಂದು ಮುನಿಯುತ್ತದೆ. ಕೋಪದಿಂದ ಕೆಚ್ಚಲು ಕಚ್ಚುತ್ತದೆ.
ನಮಗೆ ಬೇಕಿರೋದು ಅಸಹಿಷ್ಣುತೆಯನ್ನು ಪ್ರಚೋದಿಸುವ ಕೃಷ್ಣಭಟ್ಟರ ಪಠ್ಯವಲ್ಲ. ಬೆಸುಗೆಯ ಸೋಲಿಗರ ಪಠ್ಯ.
~ ಡಾ.ಸುನಂದಮ್ಮ ಆರ್.
-----------------------------------------
• ಸಮಾನತೆ ಮನುಷ್ಯ – ಮನುಷ್ಯರ ನಡುವೆ ಮಾತ್ರವಲ್ಲ, ಗಂಡು - ಹೆಣ್ಣಿನ ನಡುವೆಯೂ ಇರಬೇಕು. ಇದು ಸಾಧ್ಯವಾಗಬೇಕೆಂದರೆ ಕಾರುಣ್ಯ ಇರಬೇಕಾಗುತ್ತದೆ. ಬುದ್ಧ – ಬಸವರಲ್ಲಿದ್ದಂಥಹ ಕಾರುಣ್ಯ.
• ಮಹಿಳೆಯನ್ನು ಸದಾ ಪರಾವಲಂಬಿಯಾಗಿರಿಸಲು ಮನುವಾದ ಯತ್ನಿಸುತ್ತಿದೆ. ಪರಾವಲಂಬಿ ಜೀವಿಯ ಮಾತುಗಳು ಹಕ್ಕಾಗುವುದು ಹೇಗೆ?
~ ಡಾ.ಅನಸೂಯಾ ಕಾಂಬ್ಳೆ @ #ಸಹಿಷ್ಣುತೆಎಂಬುದುಗೆಲುವು : ನಮ್ಮ ಮಾತು ನಮ್ಮ ಹಕ್ಕು
---------------------------------------
• ಇಂದು ಮಹಿಳಾ ಚಳವಳಿಯೂ ಸೇರಿದಂತೆ ಚಳವಳಿಗಳೇ ಇಲ್ಲ ಅಂತ ಮತ್ತೆ ಮತ್ತೆ ಹೇಳುವ ಮೂಲಕ ಚಳವಳಿಗಳನ್ನೇ ಇಲ್ಲವಾಗಿಸುವ ಕುತಂತ್ರ ನಡೆಯುತ್ತಿದೆ. ಇದು ಅಮೆರಿಕಾ ಹುಟ್ಟುಹಾಕಿದ ಕುತಂತ್ರ. ಆ ಸುಳ್ಳನ್ನು ಹೇಳುವ ಮೂಲಕ ಅದು ಖಾಲಿತನದ ಭ್ರಮೆಯನ್ನೂ ಚಳವಳಿಯೊಳಗೆ ಬಿಕ್ಕಟ್ಟನ್ನೂ ಹುಟ್ಟುಹಾಕುತ್ತಿದೆ.
• ಹೆಣ್ಣೊಳಗಿನ ತಾಯ್ತನ, ಜೀವ ಕಾರುಣ್ಯ ಜಾಗತಿಕ ಮಟ್ಟದ ದೊಡ್ಡ ಶಕ್ತಿಯಾಗಿ ನಮ್ಮೆದುರು ನಿಂತಿದೆ. ಪರಿವರ್ತನೆ ಉಂಟುಮಾಡುವ ನಿಟ್ಟಿನಲ್ಲಿ ಮಹಿಳೆ ವೈಯಕ್ತಿಕ ತಾಯ್ತನದಿಂದ ಜಾಗತಿಕ ತಾಯ್ತನದತ್ತ ಮುನ್ನಡೆಯಬೇಕಾಗುತ್ತದೆ. “ಕೇಸರಿ, ಅತಿರೇಕದ ಹಸಿರುಗಳಿಗೆ ಒಳಗಾಗಲು ನಮ್ಮ ಮನೆಯ ಗಂಡಸರನ್ನ ಬಿಡಲ್ಲ” ಅಂತ ನಮ್ಮ ಹೆಣ್ಣುಮಕ್ಕಳು ಪಣ ತೊಟ್ಟರೆ ಖಂಡಿತ ಬದಲಾವಣೆ ಸಾಧ್ಯ.
-  ಕೆ. ನೀಲಾ
----------------------------------------
ಸಿನೆಮಾಗಳಲ್ಲಿ ಧೂಮಪಾನ, ಮದ್ಯಪಾನದ ಸನ್ನಿವೇಶಗಳಲ್ಲಿ 'ಶಾಸನ ವಿಧಿಸಿದ ಎಚ್ಚರಿಕೆ' ನೋಟ್ ಹಾಕಲಾಗುತ್ತೆ. ರೇಪ್, ಈವ್ ಟೀಸ್ ಸನ್ನಿವೇಶಗಳಲ್ಲಿ ಯಾಕಿಲ್ಲ? ಅಂಥ ಸನ್ನಿವೇಶಗಳಲ್ಲೂ ಎಚ್ಚರಿಕೆ ನೋಟ್ ಹಾಕಲು ಆರಂಭಿಸಬೇಕು.
~ ಭಾರತಿ ಹೆಗಡೆ

---------------------------------------------------

 





No comments:

Post a Comment