Tuesday, 14 March 2017

ಸಮುದಾಯ ರೆಪರ್ಟರಿಯ ಕಾವ್ಯರಂಗ-ಸಾಹಿತ್ಯದ ರಂಗ ಓದು

ಸಮುದಾಯ ರೆಪರ್ಟರಿಯ ಕಾವ್ಯರಂಗ-ಸಾಹಿತ್ಯದ ರಂಗ ಓದು


ಯುವಕರ ದನಿ ಕರ್ಕಶವಾಗುತ್ತಿರುವ ಈ ಹೊತ್ತಲ್ಲಿ ಅವರ ದೇಹಭಾಷೆಗೆ ಕಾವ್ಯದ ಸಾಹಚರ್ಯವನ್ನು ಒದಗಿಸುವ ಸಾಮಾಜಿಕ ಉದ್ಧೇಶದಿಂದ ಕಾವ್ಯರಂಗ ಎಂಬ ರಂಗಪ್ರಯೋಗವನ್ನು ಸಮುದಾಯ ರೆಪರ್ಟರಿ ತನ್ನ ತಿರುಗಾಟದಲ್ಲಿ ಆಡುತ್ತಿದೆ. ಶಾಸನ ಪದ್ಯಗಳಿಂದ ಹಿಡಿದು ಇದುವರೆಗಿನ ಕಾವ್ಯ ಕಥನಗಳ ಆಯ್ದ ತುಣುಕಗಳನ್ನು ಸಂಬಂಧ ಪರಿಕಲ್ಪನೆಯಾಧಾರದಲ್ಲಿ ಇಲ್ಲಿ ಹೆಣೆಯಲಾಗಿದೆ. ರಂಗಭೂಮಿಯ ಈ ಸುಂದರ ಕೋಲಾಜ್‍ನಲ್ಲಿ ಕನ್ನಡದ ಲೋಕಗ್ರಹಿಕೆ , ಕನ್ನಡದ ವಿವೇಕವನ್ನು ರಂಗಾಭಿವ್ಯಕ್ತಿಯ ಮೂಲಕ ಮರುನಿರೂಪಿಸಲಾಗಿದೆ. ಈ ರಂಗಾಭಿವ್ಯಕ್ತಿ ಅಥವಾ ಕಾವ್ಯದ ರಂಗ ಓದಿನಲ್ಲಿ ಸಮುದಾಯ ರೆಪರ್ಟರಿಯ ನಟ-ನಟಿಯರು ಕಾವ್ಯ, ಕಥನಗಳನ್ನು ಆಡುತ್ತಾರೆ, ಹಾಡುತ್ತಾರೆ ಕೆಲವನ್ನು ಅಭಿನಯಿಸುತ್ತಾರೆ. ಎಪ್ಪತ್ತೈದು ನಿಮಿಷಗಳ ಈ ಪ್ರಸ್ತುತಿಯಲ್ಲಿ ಮೂವತ್ತೊಂದು ಸಾಹಿತ್ಯಿಕ ಬರೆಹಗಳನ್ನು ರಂಗದ ಮೇಲೆ ತರಲಾಗಿದೆ. ಸಾಹಿತ್ಯ ಓದಿಗೆ ಹೊಸದಾಗಿ ಪ್ರವೇಶಿಸುತ್ತಿರುವವರಿಗೂ, ಗಂಭೀರ ಓದಿನ ವಿದ್ಯಾರ್ಥಿಗಳಿಗೂ ಸಾಹಿತ್ಯ ಕೃತಿಯೊಂದರ ಆಶಯಗಳನ್ನು ಗ್ರಹಿಸಲು ಸೂಕ್ತ ಒಳನೋಟಗಳನ್ನು ಒದಗಿಸುವ ಶೈಕ್ಷಣಿಕ ಉದ್ಧೇಶವನ್ನೂ ಈ ಪ್ರಸ್ತುತಿ ಹೊಂದಿದೆ.

  ಕವಿ ಶಿವರುದ್ರಪ್ಪನವರ ಹಣತೆ ಹಚ್ಚುತ್ತೇವೆ ನಾವು… ಎಂಬ ಪದ್ಯದಿಂದ ಆರಂಭವಾಗುವ ಈ ಕಾವ್ಯರಂಗ ಪ್ರಯೋಗವು ಕನ್ನಡ ನಾಡು-ನುಡಿ ರೂಪಿಸಿಕೊಂಡು ಬಂದ ಸಂಬಂಧಗಳನ್ನು ಹೆಣೆಯುವ ಕವಿರಾಜ ಮಾರ್ಗದಿಂದ ಮತ್ತೂ ದೂರದ ಬನವಾಸಿಯ ಕುರಿತು ಆದಿ ಕವಿ ಪಂಪ ಹೇಳುವ `ಚಾಗದ ಭೋಗದಕ್ಕರದ.. “ ಸಾಲುಗಳವರೆಗೆ ಹರಡಿಕೊಳ್ಳುತ್ತದೆ. ಮನುಷ್ಯರ ನಡುವಿನ ಜಾತಿಸೂತಕ, ಕರ್ಮಸೂತಕಗಳನ್ನು ತನ್ನ ಅನನ್ಯ ನುಡಿವೈಭವದಲ್ಲಿ ವಿಲೀನಗೊಳಿಸುವ ಶರಣಪರಂಪರೆಯನ್ನು ನೆನೆಯುತ್ತದೆ. ಹೀಗೆ, ಕುವೆಂಪುವವರ ರಾಮಾಯಣ ದರ್ಶನಂ ನ ವೈಚಾರಿಕ ನೆಲೆಗಟ್ಟು, ಕಾರಂತರ ಚೋಮ ಪ್ರತಿನಿಧಿಸುವ ಜಗತ್ತನ್ನು ನಮ್ಮೆದುರು ತಂದು ನಿಲ್ಲಿಸುತ್ತದೆ.ಬೇಂದ್ರೆಯವರ ``ಭ್ರ0ಗದ ಬೆನ್ನೇರಿ ಬಂತು.. “ ಕವಿತೆಯ ಮೂಲಕ ಪೃಕೃತಿಯ ಸೌಂದರ್ಯಶಾಸ್ತ್ರವನ್ನು ಓದಿಗಿಂತಲೂ ಮಿಗಿಲಾದ ಅನುಭವಗಳ ಮೂಲಕ ತಲುಪಿಸುತ್ತದೆ. ವರ್ಗ ಅಸಮಾನತೆ, ಧರ್ಮದ ಹೆಸರಲ್ಲಿ ನಡೆಯುವ ಢೋಂಗಿ ರಾಜಕಾರಣಗಳನ್ನು ತತ್ವ ಪದಗಳು ಮತ್ತು ಜನಪದ ಕಥನಗಳ ಮೂಲಕ ಬೆತ್ತಲುಗೊಳಿಸುತ್ತದೆ.  ಪ್ರತಿಭಾ ನಂದಕುಮಾರ್ ಮತ್ತು ವೈದೇಹಿಯವರ ಕವಿತೆಗಳು ಹೆಣ್ಣಿನ ಘನವಾದ ಬದುಕು ಮತ್ತು ಆ ಬದುಕನ್ನು ಕಾಡುವ ಗಂಡಸು ರೂಪಿಸಿದ ಮೌಲ್ಯಗಳ ಇನ್ನೊಂದು ಮುಖವನ್ನು ಅನಾವರಣಗೊಳಿಸುತ್ತದೆ. ದೇವನೂರರ ಒಡಲಾಳ,  ಸಿದ್ದಲಿಂಗಯ್ಯನವರ ನೆನ್ನೆ ದಿನ ನನ್ನ ಜನ ಕವಿತೆಗಳು ಇಂದಿಗೂ ಮುಂದುವರೆದಿರುವ ಜಾತಿ ಅಸಮಾನತೆಗಳನ್ನು ಹೇಳುತ್ತವೆ. ಕೊನೆಗೆ ಕವಿ ಎಕ್ಕುಂಡಿಯವರ ಮೂಡಲ ದೀಪದೊಂದಿಗೆ ಕಾವ್ಯರಂಗ ಮುಕ್ತಾಯಗೊಳ್ಳುತ್ತದೆ.

   ಕನ್ನಡ ಸಾಹಿತ್ಯದ ಅನಘ್ರ್ಯ ರತ್ನಗಳನ್ನು ಪೋಣಿಸಿ ರಂಗಪಠ್ಯವನ್ನು ಸಜ್ಜುಗೊಳಿಸಿದವರು ವಿಮರ್ಶಕ ಡಾ. ಎಂ. ಈ. ಹೆಗಡೆಯವರು. ಡಾ. ಶ್ರೀಪಾದ ಭಟ್ ಅವರು ತಮ್ಮದೇ ಪರಿಕಲ್ಪನೆಯ ಈ ಪ್ರಯೋಗವನ್ನು ಸಮುದಾಯ ರೆಪರ್ಟರಿಗಾಗಿ ನಿಒರ್ದೇಶಿಸಿದ್ದಾರೆ. ಸಹನಿರ್ದೇಶನ ಸೂರಜ್ ಬಿ. ಆರ್ ಅವರದು. ಸುಂದರ ರಂಗ ಸಜ್ಜಿಕೆಯನ್ನು ರೂಪಿಸಿದವರು ಚಿಂತನದ ದಾಮೋದರ ನಾಯ್ಕ. ರಂಗದ ಮೇಲೆ ರಂಜಿತಾ ಜಾದವ, ಶರತಿ ತಿಪಟೂರು, ಧೀರಜ್, ಯಲ್ಲಪ್ಪ ಗಾಣಗೇರ, ಚಿದಂಬರ ಕುಲಕರ್ಣಿ, ವಿನಾಯಕ ಈಲಗೇರ, ಬಸವರಾಜ ಕಮ್ಮಾರ, ಕುಮಾರ ಬದಾಮಿ, ಚಂದ್ರಶೇಖರ ಕಿಲ್ಲೇಹಾರ, ಪ್ರಮೋದ, ಶಿವಕುಮಾರ ಅಭಿನಯಿಸಿದ್ದಾರೆ.
   ನಿಮ್ಮ ಊರಿಗೂ ಸಮುದಾಯ ರೆಪರ್ಟರಿಯ ಬಿಡುಗಡೆಯ ರಂಗಸಂಚಾರ ಬರಲಿದೆ. ಕಾವ್ಯದ ರಂಗ ಓದಿಗೆ ಸಜ್ಜಾಗಿ.

ನಟರಾಜ ಹುಳಿಯಾರ್ ಕಾವ್ಯರಂಗದ ಕುರಿತು… ಕ್ಲಿಕ್ ಮಾಡಿ

No comments:

Post a Comment