Thursday 24 August 2017

ಮಾಣಿಕ್ ಸರ್ಕಾರ್ ಭಾಷಣಕ್ಕೆ ಮೋದಿ ಹೆದರಿದ್ದೇಕೆ?

ಮಾಣಿಕ್ ಸರ್ಕಾರ್ ಭಾಷಣಕ್ಕೆ ಮೋದಿ ಸರ್ಕಾರ ಹೆದರಿದ್ಯಾಕೆ? : ಪ್ರಸಾರವಾಗದ ತ್ರಿಪುರಾ ಮುಖ್ಯಮಂತ್ರಿ ಭಾಷಣ ಕನ್ನಡದಲ್ಲಿ ಓದಿ

2017-08-17
ಸುಳ್ಳು ಹಾಗೂ ಪೊಳ್ಳು ಜನರ ಪಾಲಿಗೆ ಯಾವತ್ತೂ ಸತ್ಯ ಕಹಿಯಾಗಿಯೇ ಇರುತ್ತದೆ. ಅದು ಸತ್ಯದ ತಪ್ಪಾ? ಸಾಮರ್ಥ್ಯ ಇಲ್ಲದ ಜನರದ್ದಾ? ಇಷ್ಟಕ್ಕೂ ಮಾಣಿಕ್ ಸರ್ಕಾರ್ ಭಾಷಣದಲ್ಲಿ ಹೇಳಿದ್ದೇನು? ಕೇಂದ್ರದ ಅಧಿನದಲ್ಲಿರುವ ಆಕಾಶವಾಣಿಗೆ ಭಾವನೆಗಳಿಗೆ ಧಕ್ಕೆಯಾಗುವ ಅಂಶ ಕಂಡಿದ್ದೆಲ್ಲಿ?
ಮಾಣಿಕ್ ಸರ್ಕಾರ್ ಭಾಷಣದ ಕನ್ನಡಾನುವಾದವನ್ನು ಮಾಧ್ಯಮnet ನೀಡುತ್ತಿದೆ. ಓದಿ, ನೀವೇ ನಿರ್ಧರಿಸಿ.
 ವಿವಿಧ ರಾಜ್ಯಗಳ ಒಕ್ಕೂಟವಾಗಿರುವ ಈ ದೇಶದಲ್ಲಿ ಇದೀಗ ರಾಜ್ಯಗಳ ಸ್ವಾಯತ್ತತೆಯನ್ನು, ಸ್ವಾವಲಂಬನೆಯನ್ನು ಕಸಿದುಕೊಂಡು ಕೇಂದ್ರದ ಅಡಿಯಾಳನ್ನಾಗಿ ಮಾಡುವ ಹುನ್ನಾರ ನಡೆದಿದೆಯೇ? ಕೇಂದ್ರದ ಜನವಿರೋಧಿ ನೀತಿಗಳನ್ನು ಪ್ರಶ್ನಿಸುವ ರಾಜ್ಯಗಳನ್ನು ಮಟ್ಟಹಾಕಲು ನಡೆಯುತ್ತಿರುವ ಕುತಂತ್ರ ಈ ಅನುಮಾನವನ್ನು ಬಲಪಡಿಸುತ್ತಿದೆ. ಮೊನ್ನೆ ಸ್ವಾತಂತ್ರ್ಯ ದಿನಾಚರಣೆಯಂದು ತ್ರಿಪುರಾದ ಮುಖ್ಯಮಂತ್ರಿ ಕಾಮ್ರೇಡ್ ಮಾಣಿಕ್ ಸರ್ಕಾರ್ ಭಾಷಣವನ್ನು ಯಥಾವತ್ ಪ್ರಸಾರ ಮಾಡಲು ಆಕಾಶವಾಣಿಯು ನಿರಾಕರಿಸಿದ್ದು ಈ ನಿಟ್ಟಿನಲ್ಲಿ ಮತ್ತೊಂದು ಉದಾಹರಣೆ.

ಆಗಸ್ಟ್ 12ರಂದು ಅಗರ್ತಲಾದ ಆಲ್ ಇಂಡಿಯಾ ರೇಡಿಯೋ, ತ್ರಿಪುರಾದ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್ ಅವರ ಸ್ವಾತಂತ್ರ್ಯ ದಿನಾಚರಣೆ ಭಾಷಣವನ್ನು ರೆಕಾರ್ಡ್ ಮಾಡಿಕೊಂಡಿತ್ತು. ಆದರೆ 14ರಂದು ಆಕಾಶವಾಣಿ ಉನ್ನತಾಧಿಕಾರಿಗಳು, “ಸರ್ಕಾರ್ ಅವರ ಭಾಷಣ ಜನಸಾಮಾನ್ಯರ ಭಾವನೆಗೆ ಧಕ್ಕೆ ತರುವಂತಿದೆಯಾದ್ದರಿಂದ ಅದನ್ನು 15ರಂದು ಪ್ರಸಾರ ಮಾಡಲಾಗುವುದಿಲ್ಲ” ಎಂದು ಇ ಮೇಲ್ ಕಳುಹಿಸಿದರು.
ಸುಳ್ಳು ಹಾಗೂ ಪೊಳ್ಳು ಜನರ ಪಾಲಿಗೆ ಯಾವತ್ತೂ ಸತ್ಯ ಕಹಿಯಾಗಿಯೇ ಇರುತ್ತದೆ. ಅದು ಸತ್ಯದ ತಪ್ಪಾ? ಸಾಮರ್ಥ್ಯ ಇಲ್ಲದ ಜನರದ್ದಾ? ಇಷ್ಟಕ್ಕೂ ಮಾಣಿಕ್ ಸರ್ಕಾರ್ ಭಾಷಣದಲ್ಲಿ ಹೇಳಿದ್ದೇನು? ಕೇಂದ್ರದ ಅಧಿನದಲ್ಲಿರುವ ಆಕಾಶವಾಣಿಗೆ ಭಾವನೆಗಳಿಗೆ ಧಕ್ಕೆಯಾಗುವ ಅಂಶ ಕಂಡಿದ್ದೆಲ್ಲಿ?
ಮಾಣಿಕ್ ಸರ್ಕಾರ್ ಭಾಷಣದ ಕನ್ನಡಾನುವಾದವನ್ನು ಮಾಧ್ಯಮnet ನೀಡುತ್ತಿದೆ. ಓದಿ, ನೀವೇ ನಿರ್ಧರಿಸಿ.

ಪ್ರೀತಿಯ ತ್ರಿಪುರಾದ ಜನರೇ,
ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ನಿಮ್ಮೆಲ್ಲರಿಗೂ ನಾನು ಶುಭ ಹಾರೈಸುತ್ತೇನೆ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರಾಣ ತೆತ್ತ ಹುತಾತ್ಮರನ್ನು ಈ ಹೊತ್ತು ನಾನು ಕೃತಜ್ಞಾಪೂರ್ವಕವಾಗಿ ಸ್ಮರಿಸುತ್ತೇನೆ. ಹಾಗೂ ನಮ್ಮೊಡನಿರುವ ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವಪೂರ್ವಕ ನಮನಗಳನ್ನು ಸಲ್ಲಿಸುತ್ತೇನೆ.

ಸ್ವಾತಂತ್ರ್ಯ ದಿನಾಚರಣೆ ಕೇವಲ ಸಂಬಭ್ರಮಾಚರಣೆಗೆ ಸೀಮಿತವಾದುದಲ್ಲ. ಈ ದಿನದ ಐತಿಹಾಸಿಕ ಮಹತ್ವ ಹಾಗೂ ಭಾರತೀಯರ ಭಾವನಾತ್ಮಕ ಬೆಸುಗೆಗಳನ್ನು ಗಮನದಲ್ಲಿಟ್ಟುಕೊಂಡು, ಈ ದಿನವನ್ನು ರಾಷ್ಟ್ರೀಯ ಆತ್ಮಾವಲೋಕನದ ಸುಸಂದರ್ಭವನ್ನಾಗಿ ಪರಿಭಾವಿಸಬೇಕಾಗಿದೆ.
ಈ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಚರ್ಚಿಸಲು ನಮ್ಮೆದುರು ಕೆಲವು ಪ್ರಸಕ್ತ, ಪ್ರಮುಖ ಹಾಗೂ ಸಮಕಾಲೀನ ಸಂಗತಿಗಳಿವೆ.
ವೈವಿಧ್ಯದಲ್ಲಿ ಐಕ್ಯತೆ ಎನ್ನುವುದು ನಮ್ಮ ಭಾರತದ ಸಾಂಪ್ರದಾಯಿಕ ಪರಂಪರೆ. ಜಾತ್ಯತೀತತೆಯ ಉನ್ನತ ಮೌಲ್ಯಗಳು ಭಾರತೀಯರನ್ನು ಒಗ್ಗೂಡಿಸಿ ಒಂದು ರಾಷ್ಟ್ರವನ್ನಾಗಿಸಿದೆ. ಆದರೆ ಇಂದು ಜಾತ್ಯತೀತ ಮೌಲ್ಯಗಳು ಅಪಾಯವನ್ನು ಎದುರಿಸುತ್ತಿವೆ. ಕೆಲವರ ಪಿತೂರಿಯಿಂದಾಗಿ ನಮ್ಮ ಸಮಾಜದಲ್ಲಿ ಅನಪೇಕ್ಷಿತ ಗೋಜಲುಗಳು ಉದ್ಭವಿಸುತ್ತಿದ್ದು, ಜನರನ್ನು ಒಡೆಯುವ ಕೆಲಸ ನಡೆಯುತ್ತಿದೆ. ಧರ್ಮ, ಜಾತಿ ಹಾಗೂ ಸಮುದಾಯಗಳ ಹೆಸರಲ್ಲಿ ನಮ್ಮ ರಾಷ್ಟ್ರೀಯ ಪ್ರಜ್ಞೆಯ ಮೇಲೆ ದಾಳಿ ನಡೆಸಲಾಗುತ್ತಿದೆ. ದೇಶಕ್ಕೆ ಒಂದು ನಿರ್ದಿಷ್ಟ ಧರ್ಮದ ಗುರುತನ್ನು ಅಂಟಿಸುವ ಸಲುವಾಗಿ ಇದನ್ನು ಮಾಡಲಾಗುತ್ತಿದೆ. ಅಷ್ಟೇ ಅಲ್ಲ, ಗೋರಕ್ಷಣೆಯ ಹೆಸರಲ್ಲಿ ಸಮಾಜವನ್ನು ಒಡೆಯುವ ಸಂಚು ನಡೆಯುತ್ತಿದೆ. ಅದರಿಂದಾಗಿ ಈ ದೇಶದ ಅಲ್ಪಸಂಖ್ಯಾತ ಹಾಗೂ ದಲಿತ ಸಮುದಾಯಗಳು ವಿಪರೀತ ಆತಂಕವನ್ನು ಎದುರಿಸುತ್ತಿವೆ. ಈ ಸಮುದಾಯಗಳಿಂದು ಅಸುರಕ್ಷತೆಯ ಭಾವದಿಂದ ಆತಂಕಕ್ಕೆ ಒಳಗಾಗಿವೆ. ಅವರ ಬದುಕು ಅನಿಶ್ಚಿತತೆಗೆ ದೂಡಲ್ಪಟ್ಟಿದೆ. ಈ ಅಪವಿತ್ರ ಪ್ರಚೋದನೆಗಳನ್ನು ಸಹಿಸಲಾಗದು. ಈ ವಿಧ್ವಂಸಕ ಪ್ರಯತ್ನಗಳು ನಮ್ಮ ಗುರಿಯ ದಿಕ್ಕೆಡಿಸುತ್ತವೆ. ನಮ್ಮ ಸ್ವಾತಂತ್ರ್ಯ ಸಂಘರ್ಷದ ಕನಸು, ಆದರ್ಶಗಳನ್ನು ಕಂಗೆಡಿಸುತ್ತವೆ.

ಯಾರು ನಮ್ಮ ದೇಶದ ಸ್ವಾತಂತ್ರ್ಯ ಸಂಗ್ರಾಮದ ಭಾಗವಾಗಿರಲಿಲ್ಲವೋ; ಅದಕ್ಕಿಂತ ಹೆಚ್ಚಾಗಿ, ಯಾರು ಕ್ರೂರಿ, ನಿಷ್ಕರುಣಿ, ದಬ್ಬಾಳಿಕೆ ನಡೆಸುತ್ತಿದ್ದ ಬ್ರಿಟಿಷರಿಗೆ ಪೂರಕವಾಗಿ ವರ್ತಿಸಿದ್ದರೋ, ಯಾರು ಸ್ವತಃ ದೇಶದ್ರೋಹಿ ಶಕ್ತಿಗಳ ಜೊತೆಗಿದ್ದರೋ ಅವರ ಅನುಯಾಯಿಗಳೇ ಇಂದು ತಮ್ಮನ್ನು ತಾವು ವಿವಿಧ ಬಣ್ಣಗಳಿಂದ ಅಲಂಕರಿಸಿಕೊಂಡು ಭಾರತದ ಐಕ್ಯತೆ ಹಾಗೂ ಸಮಗ್ರತೆಗಳ ಬೇರನ್ನು ಬಗೆಯುತ್ತಿದ್ದಾರೆ. ಇಂಥಾ ವಿಧ್ವಂಸಕ ಪಿತೂರಿ ಹಾಗೂ ದಾಳಿಗಳನ್ನು  ಎದುರಿಸಿ ನಿಂತು, ಐಕ್ಯರಾಷ್ಟ್ರದ ಆದರ್ಶವನ್ನು ಎತ್ತಿ ಹಿಡಿಯಲು ಪಣತೊಡುವುದು ಪ್ರತಿಯೊಬ್ಬ ನಿಷ್ಠಾವಂತ ಹಾಗೂ ದೇಶಪ್ರೇಮಿ ಭಾರತೀಯನ ಕರ್ತವ್ಯವಾಗಿದೆ. ಈ ಆತಂಕಿತ ದಿನಗಳಲ್ಲಿ ಅಲ್ಪಸಂಖ್ಯಾತರು ಹಾಗೂ ದಲಿತರ ಭದ್ರತೆನ್ನು ಖಾತ್ರಿಪಡಿಸಿ, ದೇಶದ ಐಕ್ಯತೆ ಹಾಗೂ ಸಮಗ್ರತೆಯನ್ನು ರಕ್ಷಿಸುವುದು ನಮ್ಮೆಲ್ಲರ ಹೊಣೆಯಾಗಿದೆ.

ದೇಶದಲ್ಲಿ ಇಂದು ಇರುವ ಮತ್ತು ಇಲ್ಲದವರ ನಡುವಿನ ಅಂತರ ವಿಪರೀತ ಹೆಚ್ಚುತ್ತಿದೆ. ಬಹುದೊಡ್ಡ ಪ್ರಮಾಣದ ಸಂಪತ್ತು ಇಂದು ಕೆಲವೇ ಒಂದಷ್ಟು ಜನರ ಕೈಯಲ್ಲಿದೆ. ದೇಶದ ಬಹುಸಂಖ್ಯಾತ ಜನರು ಹಸಿವು ಮತ್ತು ಬಡತನಗಳಿಂದ ನರಳುತ್ತಿದ್ದಾರೆ. ಈ ಜನರು ಆಹಾರ, ಆಶ್ರಯ, ಉಡುಗೆ, ಶಿಕ್ಷಣ, ಆರೋಗ್ಯ ಸುರಕ್ಷೆ ಹಾಗೂ ಆದಾಯ ಖಾತ್ರಿ ಇರುವ ಉದ್ಯೋಗ ಭದ್ರತೆಗಳಿಂದ ವಂಚಿತರಾಗಿದ್ದಾರೆ. ಇದು ನಮ್ಮ ದೇಶದ ಸ್ವಾತಂತ್ರ್ಯ ಸಂಗ್ರಾಮದ ಆಶಯಗಳಿಗೆ ವಿರುದ್ಧವಾದದ್ದು. ನಮ್ಮ ದೇಶದ ಸದ್ಯದ ರಾಷ್ಟ್ರೀಯ ನೀತಿಗಳೇ ಸದ್ಯದ ಈ ದುರವಸ್ಥೆಗಳಿಗೆ ಕಾರಣವಾಗಿದೆ. ಈ ಜನವಿರೋಧಿ ನೀತಿಗಳನ್ನು ತಿದ್ದಿ, ಜನಪರವಾಗಿ ರೂಪಿಸುವ ಅಗತ್ಯವಿದೆ. ಆದರೆ ಇದು ಕೇವಲ ಮಾತಿನಿಂದ ಸಾಧಿಸಬಹುದಾದ ಕೆಲಸವಲ್ಲ. ಇದಕ್ಕಾಗಿ ದೇಶದ ಶೋಷಿತ, ವಂಚಿತ ಸಮುದಾಯದ ಜನರು ಒಗ್ಗಟ್ಟಿನ ದನಿ ಎತ್ತಿ ನಿರ್ಭೀತವಾಗಿ ಪ್ರತಿಭಟನೆ ದಾಖಲಿಸುವ ಅಗತ್ಯವಿದೆ. ಈ ದೇಶದ ಬಹುದೊಡ್ಡ ಪ್ರಮಾಣದ ಶೋಷಿತ ಜನಸಮುದಾಯದ ಏಳಿಗೆಗಾಗಿ ಪರ್ಯಾಯ ನೀತಿಗಳನ್ನು ರೂಪಿಸಲೇಬೇಕಿರುವುದು ಅನಿವಾರ್ಯ. ಇದನ್ನು ಜನಸಾಮಾನ್ಯರೇ ಸೇರಿ ರೂಪಿಸಬೇಕು. ಹಾಗೂ ಸ್ವಾತಂತ್ರ್ಯ ದಿನಾಚರಣೆಯಂದು ಆರ್ಥಿಕ, ರಾಜಕೀಯ ಹಾಗೂ ಸಾಮಾಜಿಕ ಐಕ್ಯಚಳವಳಿಯನ್ನು ದೊಡ್ಡ ವಿಸ್ತಾರದಲ್ಲಿ ಘೋಷಿಸಬೇಕು.

ದೇಶದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ ಸಮಸ್ಯೆ ಜನರನ್ನು ನಿರಾಶೆಯ ಕಗ್ಗತ್ತಲಿಗೆ ದೂಡುತ್ತಿದೆ. ಒಂದೆಡೆ ಲಕ್ಷಾಂತರ ಜನರು ತಮ್ಮ ಕೆಲಸ ಕಳೆದುಕೊಳ್ಳುತ್ತಿದ್ದಾರೆ. ಇನ್ನೊಂದು ಕಡೆ ಕೋಟಿಗಟ್ಟಲೆ ನಿರುದ್ಯೋಗಿ ಯುವಕರು ಕೆಲಸಕ್ಕೆ ಕಾಯುತ್ತಿದ್ದಾರೆ. ಈ ಬೃಹದಾಕಾರದ ಸಮಸ್ಯೆಗೆ ಪರಿಹಾರ ಹುಡುಕುವುದು ಸುಲಭದ ಕೆಲಸವೇನಲ್ಲ. ಇದನ್ನು ಸಾಧಿಸಲು ಸಣ್ಣಪ್ರಮಾಣದ ಉದ್ದಿಮೆಗಳನ್ನು ಬಲಪಡಿಸುವ ಅವಶ್ಯಕತೆಯಿದೆ. ಜನಸಾಮಾನ್ಯರ ಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸುವುದು ಕೂಡ ಈ ನಿಟ್ಟಿನಲ್ಲಿ ಅತ್ಯಗತ್ಯ. ಆದ್ದರಿಂದ, ವಿದ್ಯಾರ್ಥಿಗಳು, ಯುವಜನರು ಹಾಗೂ ದುಡಿಯುವ ವರ್ಗಗಳು ಒಗ್ಗೂಡಿ ಈ ಸ್ವಾತಂತ್ರ್ಯ ದಿನದಂದು ವಿಧ್ವಂಸಕ ನೀತಿಗಳ ವಿರುದ್ಧ ಸಾಮೂಹಿಕ ಮತ್ತು ನಿರಂತರ ಚಳವಳಿಯೊಂದನ್ನು ಹುಟ್ಟುಹಾಕುವ ಪ್ರತಿಜ್ಞೆ ಕೈಗೊಳ್ಳಿ.

ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳಿಗೆ ಪ್ರತಿಯಾಗಿ ತ್ರಿಪುರಾದ ರಾಜ್ಯ ಸರ್ಕಾರವು ತನ್ನ ಮಿತಿಗಳ ಹೊರತಾಗಿಯೂ ಜನರ ಸಮಗ್ರ ಅಭಿವೃದ್ಧಿಗಾಗಿ ಕೆಲವು ಯೋಜನೆಗಳನ್ನು ರೂಪಿಸಿದೆ. ವಿಶೇಷವಾಗಿ ಶೋಷಿತ ತಳಸಮುದಾಯಗಳ ಅಭಿವೃದ್ಧಿಗಾಗಿ ಕೆಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಇದು ಸಂಪೂರ್ಣ ವಿಭಿನ್ನವಾದ ಪರ್ಯಾಯ ಮಾರ್ಗ. ಈ ಯೋಜನೆಗಳು ಕೇವಲ ತ್ರಿಪುರಾದ ತಳಸಮುದಾಯಗಳನ್ನು ಮಾತ್ರವಲ್ಲ, ದೇಶದ ಇತರ ಭಾಗಗಳ ಶೋಷಿತ ವರ್ಗಗಳ ಗಮನವನ್ನೂ ಸೆಳೆದಿವೆ. ಇದು ಇಲ್ಲಿರುವ ಕೆಲವು ವಿಚ್ಛಿದ್ರಕಾರಿ ಶಕ್ತಿಗಳಿಗೆ ಸಹನೆಯಾಗುತ್ತಿಲ್ಲ. ಆದ್ದರಿಂದಲೇ ಅವರು  ಪಿತೂರಿ ನಡೆಸಿ ರಾಜ್ಯದ ಸಮಗ್ರತೆಯನ್ನು ಒಡೆದು ಶಾಂತಿ ಕದಡಲು ಹವಣಿಸುತ್ತಿದ್ದಾರೆ. ರಾಜ್ಯದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳಿಗೂ ತಡೆ ಒಡ್ಡುತ್ತಿದ್ದಾರೆ. ನಾವು ಈ ಎಲ್ಲ ಅಪವಿತ್ರ ಹುನ್ನಾರಗಳ ವಿರುದ್ಧ ಒಗ್ಗೂಡಿ ನಿಂತು, ವಿಚ್ಛಿದ್ರಕಾರಿ ಶಕ್ತಿಗಳನ್ನು ಮಟ್ಟಹಾಕಬೇಕಿದೆ.

ಈ ಹಿನ್ನೆಲೆಯಲ್ಲಿ, ಈ ಸ್ವಾತಂತ್ರ್ಯ ದಿನದಂದು ತ್ರಿಪುರಾದ ಎಲ್ಲ ಸದ್ಭಾವನೆಯ, ಶಾಂತಿಪ್ರಿಯ ಹಾಗೂ ಪ್ರಗತಿಪರ ಜನರು ವಿಧ್ವಂಸಕ ಶಕ್ತಿಗಳ ವಿರುದ್ಧ ಐಕ್ಯ ಸಂಘರ್ಷದ ಪ್ರತಿಜ್ಞೆ ಕೈಗೊಳ್ಳೋಣ.

    

No comments:

Post a Comment