ಪತ್ರಿಕಾ ಪ್ರಕಟಣೆಗಾಗಿ
ನಾಗರಿಕ ಸಮಾಜ ತಲೆ ತಗ್ಗಿಸಬೇಕಾದ ಆಚರಣೆಗಳಲ್ಲಿ ಈ ದೇವದಾಸಿ ಪದ್ಧತಿ ಪ್ರಮುಖವಾದುದು. ಜಮೀನ್ದಾರಿ ವರ್ಗ ಮತ್ತು ಪುರೋಹಿತಶಾಹಿ ವರ್ಗ ಒಟ್ಟಾಗಿ ದೇವರ ಹೆಸರಿನಲ್ಲಿ ಕೆಳ ಮತ್ತು ದಲಿತ ಸಮುದಾಯವನ್ನು ಮೌಢ್ಯದ ಕೂಪಕ್ಕೆ ದೂಡಿ, ಅವರ ಬದುಕಿನ ಘನತೆಯನ್ನೇ ಕಿತ್ತುಕೊಂಡಿದೆ. ಇದು ಅನಕ್ಷರತೆ, ಬಡತನ ಮತ್ತು ಅಜ್ಞಾನದಿಂದ ಅಸಹಾಯಕರಾದ ಸಮುದಾಯವೊಂದರ ಹೆಣ್ಣು ಮಕ್ಕಳನ್ನು “ದೇವದಾಸಿ”ಯರನ್ನಾಗಿಸಿ, ತನ್ನ ಲೈಂಗಿಕ ತೃಷೆಗೆ ಬಳಸಿಕೊಳ್ಳುವ ‘ಪುರುಷ’ ಕೇಂದ್ರಿತ ಹೀನ ಮನಸ್ಸಿನ ಭಾಗವೇ ಆಗಿದೆ. ಹೀಗೆ ಹೆಣ್ಣನ್ನು ಕುದಿವ ಎಣ್ಣೆಯ ಕೊಪ್ಪರಿಗೆಗೆ ದೂಡುತ್ತಿರುವುದು ಆಧುನಿಕ ಎನ್ನಿಸಿಕೊಳ್ಳುವ ಸಮಾಜದೊಳಗೆ ಅಡಗಿ ಕೂತಿರುವ ಕ್ರೌರ್ಯ ಮತ್ತು ಹಿಂಸೆಯ ಭಾಗವೇ ಆಗಿದೆ. ಈ ಪದ್ಧತಿಯನ್ನು ನಾಶಮಾಡಲು ಪ್ರಗತಿಪರ ಸಂಘಟನೆಗಳು ವ್ಯಕ್ತಿಗಳು ಅವಿರತವಾಗಿ ಹೋರಾಟ ಮಾಡುತ್ತಲೇ ಬಂದರೂ ಪೂರ್ಣ ಪ್ರಮಾಣದಲ್ಲಿ ಕಿತ್ತೊಗೆಯಲು ಸಾಧ್ಯವಾಗಿಲ್ಲ ಎಂಬುದು ಇತ್ತೀಚೆಗೆ ಶಿರಸಿಯ ಬನವಾಸಿಯಲ್ಲಿ ಕಂಡುಬಂದ ‘ಮುತ್ತು ಕಟ್ಟಿಸಿಕೊಂಡವರ ಗೋಳಿನ ಕಥೆ’(ಪ್ರಜಾವಾಣಿ ಪತ್ರಿಕೆಯಲ್ಲಿ ಸಂಧ್ಯಾ ಹೆಗಡೆ ಸುದ್ದಿ ಮಾಡಿದ್ದಾರೆ) ಸಾರಿ ಹೇಳುತ್ತಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಈ ಹೀನ ಪದ್ಧತಿ ಇನ್ನೂ ಜೀವಂತ ಇರುವುದು ಮತ್ತು ಮುತ್ತು ಕಟ್ಟುವ ಪದ್ಧತಿ ಜಾರಿಯಲ್ಲಿರುವುದು ವಿಷಾದದ ಸಂಗತಿ ಮಾತ್ರವಲ್ಲ ಖಂಡನಾರ್ಹವಾದದ್ದು ಕೂಡ.
ಹಾಗೆಯೇ ಇಂತಹ ಅಮಾನವೀಯ ಪದ್ಧತಿಗೆ ದೂಡಲ್ಪಟ್ಟ ಈ ಮಹಿಳೆಯರು ದೇವಸ್ಥಾನದಲ್ಲಿ, ಊರಿನಲ್ಲಿ ಕೂಲಿನಾಲಿ ಮಾಡಿಕೊಂಡು ಬದುಕು ನಡೆಸುತ್ತಿದ್ದರೂ ಅವರಿಗೆ ನೀಡಬೇಕಾದ ಸೌಲಭ್ಯವನ್ನು ನೀಡದಿರುವುದು ಕೂಡ ಅಷ್ಟೇ ಖಂಡನಾರ್ಹವಾದುದು. ಹಲವು ದಶಕಗಳ ಹೋರಾಟದ ನಂತರ ದೇವದಾಸಿ ಪದ್ಧತಿಯ ನಿರ್ಮೂಲನೆಯ
ಉದ್ದೇಶದಿಂದ ಅವರ ಅಭಿವೃದ್ಧಿಗಾಗಿ ಸರ್ಕಾರ ಕೆಲವು ತಾತ್ಕಾಲಿಕ ಕಾರ್ಯಕ್ರಮಗಳನ್ನು ರೂಪಿಸಿದೆ. ಪುನರ್ವಸತಿ, ಮಕ್ಕಳಿಗೆ ವಿದ್ಯಾಭ್ಯಾಸ ಮತ್ತು ವಿದ್ಯಾರ್ಥಿ ವೇತನ, ಸ್ವಯಂ ಉದ್ಯೋಗ ಮುಂತಾದವುಗಳನ್ನು ಈ ಭಾಗದವರಿಗೆ ಒದಗಿಸದಿರುವ ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯವನ್ನು ನಮ್ಮ ಸಂಘಟನೆಗಳು ಖಂಡಿಸುತ್ತವೆ.
ಜಿಲ್ಲೆಯಲ್ಲಿ ದೇವದಾಸಿ ಪದ್ಧತಿ ಇಲ್ಲವೆಂದು ಜಿಲ್ಲಾಡಳಿತ ಹೇಳುತ್ತಿರುವಾಗಲೇ ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಮಿತಿಯ ಪದಾಧಿಕಾರಿಗಳಾದ ಮಾಳಮ್ಮನವರು ಮತ್ತು ಯು. ಬಸವರಾಜು ಅವರು ಜಿಲ್ಲೆಗೆ ಬಂದು ದೇವದಾಸಿ ಪದ್ಧತಿ ಇನ್ನೂ ಜೀವಂತ ಇರುವುದನ್ನು ಸಾಬೀತು ಮಾಡಿದ್ದಾರೆ. ದಯವಿಟ್ಟು ಇಡೀ ಜಿಲ್ಲೆಯಲ್ಲಿ ಜಿಲ್ಲಾಡಳಿತವು ಕರ್ನಾಟಕದಲ್ಲಿ ಹೋರಾಟದ ಮುಂಚೂಣಿಯಲ್ಲಿರುವ ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಮಿತಿಯ ಸಹಕಾರದೊಂದಿಗೆ ದೇವದಾಸಿಯರ ಕುಟುಂಬವನ್ನು ಗುರ್ತಿಸಲು ವ್ಯಾಪಕ ಮತ್ತು ತಳಮಟ್ಟದ ಸರ್ವೆಯನ್ನು ಮಾಡಲು ನಾವು ವಿನಂತಿಸುತ್ತಿದ್ದೇವೆ.
ಈಗಾಗಲೇ ಕಂಡು ಬಂದ ಕುಟುಂಬಕ್ಕೆ ಸೂಕ್ತ ಸೌಲಭ್ಯ, ಪುನರ್ವಸತಿ, ಉದ್ಯೋಗ, ಶಿಕ್ಷಣ ಮತ್ತು ಗೌರವಯುತ ಬದುಕು ಕಂಡುಕೊಳ್ಳಲು ಅವಕಾಶ ಮಾಡಿಕೊಡಬೇಕೆಂದು ಸಹಯಾನದ ಕಾರ್ಯಾಧ್ಯಕ್ಷರು ವಿಷ್ಣು ನಾಯ್ಕ, ಅಧ್ಯಕ್ಷರಾದ ಶಾಂತಾರಾಮ ನಾಯಕ ಹಿಚಕಡ, ಚಿಂತನ ಉತ್ತರ ಕನ್ನಡದ ಜಿಲ್ಲಾ ಸಂಚಾಲಕರಾದ ಡಾ. ಎಂ.ಜಿ ಹೆಗಡೆ, ಡಾ.ವಿಠ್ಠಲ ಭಂಡಾರಿ, ಜನವಾದಿ ಮಹಿಳಾ ಸಂಘಟನೆಯ ದೀಪಾ ಸ್ಯಾಮ್ಸನ್, ಭಾರತ ವಿದ್ಯಾರ್ಥಿ ಫೆಡರೇಶನ್(sಜಿi) ಜಿಲ್ಲಾ ಸಂಚಾಲಕ ಗಣೇಶ ರಾಥೋಡ, ಚಿಂತನ ರಂಗ ಅಧ್ಯಯನ ಕೇಂದ್ರದ ಅಧ್ಯಕ್ಷ ಕಿರಣ ಭಟ್, ಕಾರ್ಯದರ್ಶಿ ದಾಮೋದರ ನಾಯ್ಕ ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.
ವಿಠ್ಠಲ ಭಂಡಾರಿ
ಜಿಲ್ಲಾ ಸಂಚಾಲಕ
No comments:
Post a Comment