ಗುಲಾಬಿ ಕಂಪಿನ ರಸ್ತೆ
ಒಂದೇ ಸಮನೆ ಚರಚರನೆ ಹೊಲಿಗೆ ಯಂತ್ರವನ್ನುತುಳಿಯುತ್ತಿದ್ದಳು ಸಮೀರಾ. ಸಲ್ವಾರಿನ ಒಂದು ತುದಿಮುಗಿದು ತಿರುಗಿಸಿ ಇನ್ನೊಂದು ಹೊಲಿಗೆ ಹಾಕಲುಸೂಜಿಯಡಿ ಇಟ್ಟರೆ, ಅರೆ! ಹೊಲಿಗೆಯೇಬಿದ್ದಿಲ್ಲವೆನಿಸಿತು. ಸುಮ್ಮನೆ ಹೊಲಿಗೆಯಂತ್ರಓಡಿಸಿದೇನೆ? ಈಗಿತ್ತಲಾಗಿ ಕಣ್ಣನ್ನಪರೀಕ್ಷಿಸಿಕೊಳ್ಳಲಾಗಿರದ ಹಾಗೂ ಕನ್ನಡಕದಪಾಯಿಂಟ್ ಬದಲಾದ ಹಾಗೆ ಅನ್ನಿಸುತ್ತಲೇ ಇರುವಆಕೆ ಕೈಯಲ್ಲಿ ಹಿಡಿದು ನೋಡಿದಳು. ದಾರವಿಲ್ಲದಇಂತಹ ಎಷ್ಟು ಹೊಲಿಗೆಗಳು ತನ್ನ ಒಡಲ ತುಂಬೆಲ್ಲತುಂಬಿವೆ ಎಂದು ಕೊಂಡಾಗ ಅವಳಿಗೆ ಅರಿವಿಲ್ಲದೆನಿಟ್ಟುಸಿರೊಂದು ಹೊರ ಬಂತು.
ರೂಢಿ ಬಲದಿಂದ ಬಾಬಿನ್ ಕೇಸಿಗೆ ಕೈ ಓಡಿತು. ದಾರವೇ ಖಾಲಿ ಆಗಿದೆ. ಮತ್ತೆ ಚರಚರನೆ ದಾರತುಂಬಿಸಿದಳು. ಸೂಜಿಗೆ ದಾರ ಪೋಣಿಸಿ ಹೊಲಿಯತೊಡಗಿದರೆ ಮತ್ತೆ ದಾರ ತುಂಡರಿಸಿತು. ಇದುಹೊಲಿಗೆ ಯಂತ್ರದ ದೋಷವೋ ಅಥವಾಜೋರಾಗಿ ತುಳಿಯುತ್ತಿರುವಾಗ ಒಮ್ಮೆಲೇ ನಿಂತುಬಿಡುವ ತನ್ನ ತಲೆಯ ದೋಷವೋ ಒಂದೂತಿಳಿಯದಾದಳು. ನಿನ್ನೆ ಮೊನ್ನೆ ಹೂವಂತೆ ಅರಳಿದ್ದಚಂದೂ ಮುದುರಿ ಮೂಲೆಯಲ್ಲಿ ಕುಳಿತಿದ್ದುನೆನಪಾದಾಗಲೆಲ್ಲ ಕರುಳ ಸಂಕಟಕ್ಕೆ ಅವಳ ಕಾಲುಓಡುತ್ತಲೇ ಇರಲಿಲ್ಲ. ಮತ್ತೆ ದಾರ ಪೋಣಿಸಿ ಕಾಲುತುಳಿದರೆ ಓಡುವ ಹೊಲಿಗೆ ಯಂತ್ರದ ಜೊತೆಗೆನೆನಪಿನ ಸುರುಳಿಯೂ ಬಿಚ್ಚಿಕೊಂಡಿತು.
ಈಗ ಹೊತ್ತುರಿವ ನನ್ನ ಹೊನ್ನಾವರದ ಝಲಕ್ಒಂದು ಹತ್ತು ವರ್ಷದ ಹಿಂದೆಯೇ ನಮ್ಮ ಕೇರಿಯಅಂಗಳದಲ್ಲೇ ಕಾಣಿಸಿತ್ತು. ಅಪರೂಪಕ್ಕೆ ಗೆಳತಿಸಂಮ್ರೀನ್ ಬಂದಿದ್ದಳು. ಬಿಡುವಿಲ್ಲದ ಮಾತಿನನಡುವೆ ಒಲೆಯ ಮೇಲಿಟ್ಟ ಕುಕ್ಕರ್ ಕೂಗಿದಾಗಮಟನ್ ಬಿರಿಯಾನಿಯ ಕಂಪು ಮನೆಯ ತುಂಬೆಲ್ಲಓಡಾಡಿತು. ಸುಮಾರು ಹನ್ನೆರಡು ಗಂಟೆಯಸಮಯ ಇನ್ನೇನು ಮೂರನೇ ವಿಸಲ್‍ಗೆ ಬೆಂಕಿಆರಿಸಿದರಾಯಿತೆಂದುಕೊಳ್ಳುತ್ತಿರುವಾಗಲೇಅಚಾನಕ್ ದಂಡೊಂದು ದಾಳಿಯಿಟ್ಟಂತೆ ಓಣಿತತ್ತರಿಸಿತು. ‘ಜೈ ಶ್ರೀರಾಮ್, ಜೈ ಭಜರಂಗಿ ಎನ್ನುವಸಾಮೂಹಿಕ ಉದ್ಘೋಷಗಳು ಎಲ್ಲೆಡೆ ತುಂಬಿದವು. ಹಕ್ಕಿಗಳೆಲ್ಲ ಗುಳೆಯೆದ್ದಂತೆ ಪುರ ಪುರನೆ ಹಾರಿಹೋದವು. ಗರ್ನಾಲುಗಳ ಹೊಡೆತಕ್ಕೆ ತೊಟ್ಟಿಲಕಂದಮ್ಮಗಳೆಲ್ಲ ಬೆಚ್ಚಿ ಕಿಟಾರನೆ ಕಿರುಚಿದವು. ಗಂಟೆಜಾಗಟೆಗಳ ಅಬ್ಬರಕ್ಕೆ ಎಲ್ಲರ ಮನೆಯಬಾಗಿಲುಗಳೂ ಮುಚ್ಚಿಕೊಂಡವು. ಭೂಸ್ವಾಧೀನದಮಾತುಗಳು ಧ್ವನಿವರ್ಧಕದಲ್ಲಿ ತೇಲಿ ಬರುತ್ತಿತ್ತು. ಮಾತು ಮಾತಿಗೆ ಕರತಾಡನ, ಮಧ್ಯೆ ಮಧ್ಯೆಭಜನೆಯ ಠೇಂಕಾರ. ‘ಜೈ ಶ್ರೀರಾಮ್, ಜೈ ಭಜರಂಗಿ’ಘೋಷಣೆ ಮುಗಿಲು ಮುಟ್ಟುತ್ತಿದ್ದಂತೆವಿಜಯೋತ್ಸಾಹದ ದಾಂಧಲೆ ಕರಗಿದಾಗಲೇಹಿಡಿದಿಟ್ಟ ಜೀವ ಕೈಗೆ ಬಂದಂತಾಯಿತು. ಪರಿಮಳಿಸುತ್ತಿದ್ದ ಮನೆಯ ಮೂಲೆಯಲ್ಲಿಬಿರಿಯಾನಿ ಸೀದಿದ ಕಮರು ಕಠು ವಾಸನೆ ಮತ್ತೆಉಸಿರುಗಟ್ಟಿಸಿತು.
ಓಣಿಮಠಕೇರಿ ಹತ್ತಾರು ಮುಸ್ಲಿಂ ಕುಟುಂಬಗಳನೆಲೆ. ಎಲ್ಲ ಸಣ್ಣ ಪುಟ್ಟ ಕಸುಬುದಾರರ ಸೋರುವಮಾಡುಗಳ ಹಂಚಿನ ಮನೆ. ಮಧ್ಯದಲ್ಲೊಂದು ಜಾತಿಧರ್ಮದ ಹಂಗಿಲ್ಲದೆ ಬಯಸಿ ಬಂದವರಿಗೆಲ್ಲ ಆಸರೆನೀಡುವ ಅಪ್ಪಟ ಮಾನವೀಯ ಅರಳಿ ಮರ. ಎದುರು ಪರ್ಲಾಂಗು ಅಳತೆಯ ಮೈದಾನ. ಬೆಳಗೂಸಂಜೆ ಆಡುವ ಮಕ್ಕಳು, ಸುದ್ದಿ ಹೇಳುವ ಹೆಂಗಸರುಗಂಡಸರಿಂದ ಕಳೆಯೇರುತ್ತಿತ್ತು. ಅಲ್ಲಿ ಇದ್ದಕ್ಕಿದ್ದಂತೆವಿಷದ ಮಳೆ ಸುರಿಯಿತು. ದಂಡಾಗಿ ಬಂದ ಜನರಾಮ ಹನುಮರ ಮೂರ್ತಿಯನ್ನಿಟ್ಟು, ಊದಿನ ಕಡ್ಡಿದೀಪ ಬೆಳಗಿ, ಅರಿಶಿಣ ಕುಂಕುಮ ಬಳಿದದಾರಗಳನ್ನೆಲ್ಲ ಅರಳಿ ಮರಕ್ಕೆ ಸುತ್ತಿ ಹಕ್ಕಿನಮುದ್ರೆಯೊತ್ತಿ ನಡೆದರು. ಮಠದ ಕೇರಿ ಮುಲ್ಲಾಗಳಕೇರಿಯೂ ಆಗಿ ಸಾಮರಸ್ಯದ ಭಾರತ ದರ್ಶಿಸುತ್ತಿದ್ದಅಲ್ಲಿಗೀಗ ಕೋಮು ಸೂತಕದ ಅಪಾರದರ್ಶಕ ಬೇಲಿರೂಪುಗೊಂಡಿತು.
ಕಾಲ ಎಲ್ಲವನ್ನೂ ಮರೆಯಿಸಿತು ಎಂದುಕೊಂಡರೆಮೊನ್ನೆ ಮೊನ್ನೆ ಹೊನ್ನಾವರ ಹೊತ್ತುರಿದಾಗಲೇಅರಿವಾಗಿದ್ದು, ಇದು ಬೂದಿ ಮುಚ್ಚಿದ ಕೆಂಡವಾಗಿಹೊಗೆಯಾಡುತ್ತಲೇ ಇತ್ತ? ಜತನದಿಂದ ಕಟ್ಟಿದ ನನ್ನಮನೆಗೂ ಉರಿ ನಾಲಿಗೆಯನ್ನು ಚಾಚಿದಾಗಲೇ ಅದುಖಾತ್ರಿಯಾಯಿತು.
ಪಿ.ಯು.ಸಿ. ಓದುತ್ತಿರುವ ಚಾಂದನಿ ಎಲ್ಲರ ಚಂದೂಆಗಿ ಬೆಳೆದವಳು. ನಕ್ಕರೆ ಬೆಳದಿಂಗಳ ಸುರಿವವಳು.ಒಂದೇ ಮಾತಿನಲ್ಲಿ ಹೇಳುವುದಾದರೆ ಪಕ್ಕಾ ಚಾಂದ್ಕಾ ತುಕಡಾ ಅವಳು. ಆಡಿ, ಹಾಡಿ, ಓದಿಕೊಂಡಿದ್ದವಳು. ಸೌಹಾರ್ದದ ನೆಲೆಯನ್ನು ಕೆಡಿಸಿದಈ ಘಟನೆ ನಡೆದ ತಿಂಗಳೊಪ್ಪೊತ್ತಿನಲ್ಲಿಕಾಲೇಜಿನಿಂದ ಬಂದವಳೇ ಹೊಸ್ತಿಲಿಗೆಕಾಲಿಡುವಾಗಲೇ ಕಸೂತಿ ಬ್ಲೌಸಿಗೆ ಹೆಮ್ಮಿಂಗ್ಮಾಡುತ್ತಿದ್ದ ನನ್ನ ಕತ್ತಿಗೆ ತೆಕ್ಕೆ ಬಿದ್ದಳು. ಸದಾ ನನ್ನಮೈಹೊಸೆಯುತ್ತ, ತೆಕ್ಕೆ ಬೀಳುತ್ತ, ಸೆರಗುಹೊದೆಯುತ್ತಿರುವುದು ನಿತ್ಯದಸಂಗತಿಯಾದುದರಿಂದ ಜೋತುಬಿದ್ದ ಭಾರಕ್ಕೆಸಾವರಿಸಿಕೊಂಡೆ. ಅವಳಿಗಾಗಿಯೇ ಬಣ್ಣ ಬಣ್ಣದಪ್ರಿಲ್ ಫ್ರಾಕ್‍ಗಳನ್ನು ಹೊಲಿದುತೊಡಿಸುತ್ತಿದ್ದೆನಾದ್ದರಿಂದ ಅವಳಿಗೆ ನನ್ನಲ್ಲೂ, ನನಗೆಅವಳಲ್ಲೂ ತೀರದ ಅಕ್ಕರಾಸ್ಥೆ. ಪಟಪಟನೆಉದುರಿದ ನಾಲ್ಕು ಹನಿ ಕಸೂತಿಯನ್ನುತೋಯಿಸಿದಾಗಲೇ ಇದು ದಿನದತೆಕ್ಕೆಯಲ್ಲವೆನಿಸಿತು. ಬಿಕ್ಕುವಿಕೆಗೆ ಬೆಚ್ಚಿ ಗಲ್ಲದ ಮೇಲೆಕೈಯಾಡಿಸಿದೆ. ಕಣ್ಣೀರು ಮೆತ್ತಿಕೊಂಡಿತು.
‘ಕ್ಯಾ ಹುವಾ ಬೇಟೀ?’
‘ಮೈ ಕಾಲೇಜ್ ಕೊ ನಹೀ ಜಾವುಂಗೀ’
‘ಯಾಕೆ, ಏನಾಯ್ತು?
‘ಕಲ್ ಸೆ ಬಿಲ್‍ಕುಲ್ ನಹೀ ಜಾವುಂಗೀ’
‘ಆಯ್ತು, ಈಗ್ಹೇಳು.’ ‘ನನ್ಜೊತೆ ಫ್ರೆಂಡ್ಸ್ ಯಾರೂಮಾತಾಡೋದಿಲ್ಲ.
ನಮ್ ಜೊತೆ ಮಾತಾಡಿದ್ರೆ ಜನ ಬಹಿಷ್ಕಾರ್ಹಾಕ್ತಾರಂತೆ,
‘ಬಿಡು, ನೀನು ಓದೋದಕ್ಕೆ ತಾನೆ ಹೋಗ್ತಿರೋದು, ನೆಟ್ಟಗೆ ಕ್ಲಾಸಿಗೆ ಹೋಗು, ನೆಟ್ಟಗೆ ರಸ್ತೆ ಹಿಡಿದ್ಕೊಂಡುಬಾ.
‘ನನ್ಗೆ ಫಸ್ಟ್ ಬೆಂಚ್‍ನಲ್ಲಿ ಯಾರೂ ಜಾಗಾಕೋಡೋದಿಲ್ಲ ಬೇಕಂತಲೆ ವೇಲ್ ಇಷ್ಟಗಲ ಹಾಸಿಕೂತಿರ್ತಾರೆ’ ‘ಕಷ್ಟ ಏನು? ಮುಂದಿನವರಿಗೂಹಿಂದಿನವರಿಗೂ ಒಂದೇ ತರ ಕಲ್ಸೋದಲ್ವಾ?’
‘ಕಾಲೇಜಿನ ಗೇಟು ದಾಟ್ತಿದ್ದ ಹಾಗೆ ‘ಗುಮ್ಮಾ ಬಂತುಗುಮ್ಮಾ, ಸಾಬಿ ಗುಮ್ಮಾ ಬಂತು ಗುಮ್ಮಾ, ಗುಮ್ಮಾಬಂತು ಗುಮ್ಮಾ ಪಾಕಿ ಗುಮ್ಮಾ’ ಅಂತ ಎಲ್ಲರೂಕ್ಲಾಪ್ಸ್ ಹಾಕಿ ಹಾಡೋಕೆ ಶುರು ಮಾಡ್ತಾರೆ’
‘ಬೇಡಾ ಬಿಟ್ಬಿಡು, ಬುರ್ಖಾ ತೆಗೆದ್ಬಿಡು’
‘ನಮ್ದೇ ಹುಡುಗ್ರು ಗುರಾಯಿಸ್ತಾರೆ’
‘ನೀನು ಲಕ್ಷ್ಯ ಕೊಡ್ಬೇಡಾ, ನಮಗಿರೋದು ಒಂದೇಕಾಲೇಜು ಅಲ್ವಾ? ಮತ್ತೆ ಅಲ್ಲಿಗೆ ಹೋಗ್ಲೇಬೇಕಲ್ಲಾ. ನೀನು ಏನೆಲ್ಲ ಓದ್ಬೇಕು. ದೊಡ್ಡ ಸಾಹೇಬ್ ಆಗ್ಬೇಕು.ತಾಜ್‍ನಂತ ಮನೆ ಕಟ್ಬೇಕು. ನಾನು ಮಷಿನ್ ಮಾರಿಕಾಲ್ಮೇಲೆ ಕಾಲ್ಹಾಕಿ ಕುಂತ್ಕೊಬೇಕು. ಹ್ಞಾ, ನಿನ್ನ ನಿಖಾಸೀರೆ ನಾನೇ ಹೊಲ್ಯೋದು ಮತ್ತೆ’
ನಾನು ನಕ್ಕೆ, ಅವಳು ನಗಲಿಲ್ಲ. ಉಮ್ಮಳಿಕೆಏರುತ್ತಲೇ ಹೋಯಿತು, ತೆಕ್ಕೆ ಬಿಗಿಯಾಗುತ್ತಲೇಇತ್ತು. ಅಂದು ಪಠ್ಯದ ಚೀಲ ಎಸೆದವಳು ಮತ್ತೆಕಾಲೇಜಿನ ದಾರಿ ತುಳಿಯಲೇ ಇಲ್ಲ.
ಕಾಲೇಜಿನ ದಾರಿ ಗುಲಾಬಿ ನಗೆ ನಕ್ಕಿತು. ನಾನುಎಷ್ಟೊಂದು ಆಸೆ ಹೊತ್ತು ಆ ದಾರಿ ತುಳಿಸಿದ್ದೆ. ಬಣ್ಣಬಣ್ಣದ ಕನಸಿಗೆ ಬಣ್ಣ ಬಣ್ಣದ ಬಟ್ಟೆ ತೊಟ್ಟುಗೆಳತಿಯರೊಡನೊಂದಾಗಿ ಕಾಲೇಜಿನ ಅಂಗಳದತುಂಬೆಲ್ಲ ಮುಗಿಯದ ನಗೆ ಚೆಲ್ಲಿದ್ದೆ. ಈ ನಡುವೆ ಈಘೋಷಾ ಯಾಕೆ ಬಂದು ಸೇರಿತೋ, ಹೆಣ್ಣು ಮಕ್ಕಳಭಾವಗಳನ್ನೆಲ್ಲ ಇದ್ದಿಲ ಚೀಲದಲ್ಲಿ ತುಂಬಿದಂತೆ.
ಹಿಂದಿ ತರಗತಿಯಲ್ಲಿ ಉಪನ್ಯಾಸಕರು ಪ್ರೇಮ-ಚಂದಾರ ಕಾದಂಬರಿಯ ಪುಟಗಳನ್ನು ಕಲಿಸಿದರೆಅಲ್ಲಿಯ ಕಥಾನಾಯಕಿ ನಾನೇ ಆಗಿರುತ್ತಿದ್ದೆ. ರಸ್ತೆಯಗುಂಟ ಇದೇ ಗುಂಗಿನಲ್ಲಿ ಸಾಗಿ, ಮನೆಯಲ್ಲೂಅದನ್ನೇ ಉಸಿರಾಡುತ್ತಿದ್ದೆ. ನನ್ನ ಚೂಪಾದ ಮೂಗು,ಕೇದಿಗೆಯ ಬಣ್ಣ, ನಕ್ಕಾಗಿನ ನನ್ನ ಗುಳಿಗೆನ್ನೆ, ಮಲ್ಲಿಗೆಯ ದಂಡೆಯಂತಹ ಮಿಂಚು ದಂತ, ಲೋಕದ ಚಲುವೆಲ್ಲ ಒಟ್ಟಾಗಿ ಸುರಿದಂತ ಭಾವಸ್ಫೂರಣ ಕಣ್ಣು, ಗುಂಗರು ಗುಂಗರಾದ ರಾಶಿಕೂದಲು, ನೀಳ ತೆಳು ದೇಹವನ್ನು ಕಂಡು, ‘ಅಗಲವಾದ ನಿನ್ನ ಹಣೆಯಲ್ಲಿ ಕೆಂಪುತಿಲಕವೊಂದಿದ್ದರೆ’ ಎನ್ನುವಾಗ ನನ್ನ ಅಂದುಗೆಯಫೈಜಣದೊಂದಿಗೆ ಗಾಳಿಯೊಂದಿಗೆ ಗಂಧ ತೀಡುತ್ತಿದ್ದೆ. ಆ ಮೈಗಂಧ ಆಘ್ರಾಣಿಸುವ ಎರಡು ಕಣ್ಣುಗಳುನನ್ನನ್ನೇ ಅರಸುವುದನ್ನು ಕಂಡೂ ಕಾಣದಂತಿದ್ದೆನಾನು.
ಮನೆಯಿಂದ ಹೊರಟು, ಕ್ವಾಲಿಟಿ ಹೋಟೆಲ್ ದಾಟಿ, ಕಾಲೇಜು ಸರ್ಕಲ್‍ನಲ್ಲಿ ತಿರುಗಿ, ಕಾಲೇಜಿನ ದಾರಿಹಿಡಿದರೆ ಮೂಡ ಗಣಪತಿ ದೇವಸ್ಥಾನದಿಂದಹೊರಟು ಕಾಲೇಜು ಕ್ರಾಸಿಗೆ ಸೇರಿ ಕಾಯುವಸೂರಿಯ ಕಣ್ಣು ಕೂಡಿದರೆ ಅಸೀಮ ಆಕಾಶದಲ್ಲಿಢೀಢೀ ಡಿಕ್ಕಿ ಹೊಡೆಯುತ್ತಿದ್ದವು. ದಿನವೂಎದುರುಗೊಳ್ಳುವ ಆತನನ್ನು ಕಂಡಾಗ ನನ್ನೆದೆಯಲ್ಲಿಹುಚ್ಚೆದ್ದು ಹರಿವ ಶರಾವತಿ ಅವನ ಕಣ್ಣಿನಲ್ಲಿ ಉಕ್ಕಿಹರಿಯುತ್ತಿತ್ತು. ವಿದಾಯಿಸುವ ಅವನ ಬಾಡಿದನೋಟ ಪ್ರಭಾತ ನಗರವನ್ನು ಇಳಿಯುವಾಗಎದುರಾಗುವ ಅರಬ್ಬಿಯ ಸಂಧ್ಯಾನುರಾಗ ನನ್ನಕೆನ್ನೆಗಿಳಿಯುತ್ತಿತ್ತು. ಸದ್ದಿಲ್ಲದೆ ಹಿಂಬಾಲಿಸುವನಮ್ಮಿಬ್ಬರ ಮೂಕ ಮಿಲನಕ್ಕೆ ಹೆಜ್ಜೆ ಮಾತ್ರಸಾಕ್ಷಿಯಾಗಿತ್ತು.
ಪರೀಕ್ಷೆಗಳೆಲ್ಲವೂ ಮುಗಿದ ಒಂದು ದಿನಗ್ರಂಥಾಲಯದ ಪುಸ್ತಕಗಳನ್ನು ಹಿಂದಿರುಗಿಸಲುಏರು ರಸ್ತೆ ಹತ್ತುತ್ತಿದ್ದೆ. ಸುಳಿವಿಲ್ಲದ ಮಳೆಯಂತೆದೂರದಲ್ಲಿ ಕಾಣಿಸಿದ. ಸಾಗರದ ನೀಲಿಯನ್ನೇಹೊದ್ದಂತೆ ತುಂಬು ತೋಳಿನ ನೀಲ ಶರ್ಟ ಧರಿಸಿದಆತ ಸಮೀಪಿಸುತ್ತಿದ್ದಂತೆ ತಲೆತಗ್ಗಿಸಿದರೂ ಬೆಳಗಿನಮಂದ ಮಾರುತಕ್ಕೆ ಗರಿಗೆದರಿದ ಕ್ರಾಪ್ ಕೂದಲುನನ್ನನ್ನು ಕೆಣಕದೆ ಇರಲಿಲ್ಲ. ಇನ್ನೇನು ಒಂದರ್ಧಮಾರು ದೂರವಿದೆಯೆಂದುಕೊಂಡಾಗ ಕೆಂಪುಗುಲಾಬಿಯೊಂದನ್ನು ದಾರಿಯಲ್ಲಿರಿಸಿ ಮುನ್ನಡೆದ. ಬೇಡ ಬೇಡವೆಂದರೂ ಹೆಜ್ಜೆ ದಾಟಲಿಲ್ಲ. ಕಂಪಿಸುವಕೈಯಲ್ಲಿ ಗುಲಾಬಿಯನ್ನೆತ್ತಿದೆ. ಮುಳ್ಳಿಲ್ಲದ ಗುಲಾಬಿ! ಆಫ್ರಾಣಿಸಿದೆ, ಕೈಗಳಿಂದ ಎದೆಗೊತ್ತಿಕೊಂಡೆ. ಬೆಚ್ಚನೆಯ ಸ್ಪರ್ಶದ ಸುಖಾನುಭಾವದ ಹಿಗ್ಗುಸಂಧಿಸಿದ ಆತನ ಕಣ್ಣುಗಳಲ್ಲಿ ಹೊಮ್ಮಿ ಮತ್ತಾಗಿಮುತ್ತಿಕೊಂಡಿತು.
ಅನಿರೀಕ್ಷಿತ ಘಟನೆಗಳು ಮನೆಯ ಆರ್ಥಿಕಸ್ಥಿತಿಯನ್ನು ಅಲ್ಲಾಡಿಸಿದವು. ಕಲಾಯಿ ಸಾಬಿಯಾಗಿಧರ್ಮಾತೀತವಾಗಿ ಜನರ ಪ್ರೀತಿ ಪಾತ್ರನಾದ ಅಪ್ಪಸ್ಟೀಲ್ ಪಾತ್ರೆಗಳ ದಾಳಿಯಿಂದಾಗಿ ಕುಸಿದಿದ್ದರು. ಅಷ್ಟೂ ಸಾಲದೆಂಬಂತೆ ಪಾಶ್ರ್ವವಾಯು ಹಠಾತ್ತನೆಎರಗಿ ಏಳಗೊಡಲೇ ಇಲ್ಲ. ಅಮ್ಮನ ಸಂಧಿವಾತಮನೆಯ ಮೂಲೆ ಹಿಡಿಸಿತು. ಸಣ್ಣ ಪುಟ್ಟ ವ್ಯಾಪಾರವಹಿವಾಟು ಅಷ್ಟಾಗಿ ಅಣ್ಣಂದಿರ ಕೈಗೆ ಹತ್ತಲೇ ಇಲ್ಲ. ದುಡಿಯುವ ಕೈಗಿಂತ ಉಣ್ಣುವ ಕೈಯೇಮೇಲಾದಾಗ ಕಾಲೇಜಿನ ಹಾದಿಯ ಕಡೆ ತಿರುಗಿಯೂನೋಡಲಾಗಲಿಲ್ಲ.
ಈ ಗುಲಾಬಿ ಕಂಪಿನ ರಸ್ತೆಗೆ ರಕ್ತದ ವಾಸನೆಮೆತ್ತಿದವರಾರು? ನಡೆದದ್ದು ಸಣ್ಣ ಸಂಗತಿ, ತಾರೀಬಾಗಿಲ ರಸ್ತೆಯಲ್ಲಿ ಒಂದು ಬೈಕ್ ಮತ್ತುರಿಕ್ಷಾದ ಆಕ್ಸಿಡೆಂಟ್ ಜಮಾಯಿಸಿದ ಜನರಲ್ಲಿಮಾತಿಗೆ ಮಾತು ಬೆಳೆದು, ಕಾವು ಇಳಿದುರಾಜಿಯಾಗಿ ರಸ್ತೆ ಹಿಡಿವ ಸಂದರ್ಭದಲ್ಲಿ ಕಲ್ಲೊಂದುತೂರಿ ಬಂದು ರಿಕ್ಷಾವಾಲಾನ ಹಣೆಗೆ ತಾಗಿ ರಕ್ತಸುರಿಯಿತು. ದೂರದಲ್ಲೊಂದು ಸದ್ದು ಮಾಡುತ್ತಾಗಡ್ಡಧಾರಿಯಲ್ಲದವನ ಸವಾರಿ ಹೊತ್ತ ಬೈಕೊಂದುಶರವೇಗದಲ್ಲಿ ಮರೆಯಾಯಿತು.
ಅದೇ ಸಂಜೆ ಬಸ್‍ಸ್ಟಾಂಡ್ ಪಕ್ಕದಲ್ಲಿರುವ, ಬಿರ್ಯಾನಿಗೆ ಹೆಸರುವಾಸಿಯಾದ ಖಾನ್ಕುಟುಂಬದವರು ನಡೆಸುತ್ತ ಬಂದ, ನಿಜಹೇಳಬೇಕೆಂದರೆ ಒಳಗಡೆ ಬಿರ್ಯಾನಿ ಮಾಡಲುಬಾರದ ಬಹುಸಂಖ್ಯಾತರದೇ ಬಾಯಿರುಚಿಯಮೇಲಾಟವಾಗಿರುವ ‘ವೆಲ್‍ಕಮ್’ ಹೋಟೆಲ್ಮೇಲೆ ದೀಪ ಆರುತ್ತಿದ್ದಂತೆ ಉದ್ರಿಕ್ತ ಗುಂಡಿನಿಂದಕಲ್ಲು ತೂರಾಟ. ತಾವೇನು ಕಡಿಮೆಯಿಲ್ಲವೆನ್ನುವಂತೆಮುಸ್ಲೀಮರ ಪ್ರತಿ ತೂರಾಟ ಪರಿಸ್ಥಿತಿಕೈಗೆತ್ತಿಕೊಳ್ಳಲು ನಾಪತ್ತೆಯಾದವನ ಸುಳಿವಾಗಲೇಇಲ್ಲ.
ಮೂರನೇಯ ದಿನ ಹೊನ್ನಾವರ ಪಟ್ಟಣದ ಹೈದಯಭಾಗದಲ್ಲಿರುವ ಅಸಾಮಿ ಕೆರೆಯಲ್ಲಿ ವ್ಯಕ್ತಿಯ ಹೆಣತೇಲಿತು. ಮೂರು ದಿನಗಳಿಂದ ಕಣ್ಮರೆಯಾದಗಾಯಗೊಂಡ ಸುರೇಶನ ಹೆಣವಾದ್ದರಿಂದ ಇದುದಾಡಿವಾಲಾರುಗಳದೇ ಕೆಲಸವೆಂದುತೀರ್ಮಾನಿಸಲು ಕಷ್ಟವೇನೂ ಆಗಲಿಲ್ಲ. ಕಾಳ್ಗಿಚ್ಚಿನಂತೆ ಹಬ್ಬಿದ ಸುದ್ದಿ ನಗರದ ಶಾಂತಿಯನ್ನೇನಾಶಮಾಡಿತು. ಒಂದಿಷ್ಟು ಮನೆಯ ಬಾಗಿಲುಮುಚ್ಚಿತ್ತು. ಒಂದಿಷ್ಟು ಜನ ಪ್ರಾಣಭಯದಿಂದಊರನ್ನೇ ಬಿಟ್ಟು ಹೋದವರ ನೆಲೆ ಇನ್ನೂಪತ್ತೆಯಾಗಿಲ್ಲ. ಪುಟ್ಟ ಪುಟ್ಟ ಹೆಜ್ಜೆಯಿಟ್ಟುಕಿಲಕಿಲಿಸುತ್ತ ಸಾಗಬೇಕಾದ ಮಕ್ಕಳು ಸಾಗುವದಾರಿಯಲ್ಲೆಲ್ಲ ಖಾಕಿ ಪಡೆಗಳ ಕಣ್ಗಾವಲ್ಲಿತ್ತು. ಘೋಷಿತ ರಾಜಕೀಯ ಚದುರಂಗದಾಟದರಂಗಿನಲ್ಲಿ, ಘೋಷಿತ ಬಂದ್‍ಗಳ ಕಾರಸ್ತಾನದಲ್ಲಿಮನುಷ್ಯರ ಸುಳಿವಿಲ್ಲದೆ ಪೋಲೀಸರ ಆವಾಸಸ್ಥಾನವೆಂಬಂತೆ ಭಾಸವಾಗತೊಡಗಿತು.
ದಿನಕ್ಕೊಂದರಂತೆ ತೂರಿ ಬರುವ ಸುದ್ದಿ ಜನರನ್ನುತತ್ತರಿಸಿತು. ಬಸ್‍ಸ್ಟಾಂಡಿನಲ್ಲಿ ಬಸ್ಸಿನ ಗ್ಲಾಸಗಳೆಲ್ಲಪುಡಿ ಪುಡಿಯಾದವೆಂದೂ, ಕುಮಟಾದಲ್ಲಿಪೊಲೀಸ್ ಜೀಪೇ ಹೊತ್ತುರಿಯಿತೆಂದೂ, ಹೆರಂಗಡಿಯಲ್ಲಿ ಗುಡ್ಡ ಗಾಡು ದಾರಿಯಲ್ಲಿ ಮನೆಗೆಸಾಗುತ್ತಿರುವ ಹಿಂದೂ ವಿದ್ಯಾರ್ಥಿನಿಯ ಮೇಲೆರೇಪ್ ಆಯಿತೆಂದೂ, ಸಿದ್ದಾಪುರದಲ್ಲಿಹಣ್ಣಿನಂಗಡಿಯನ್ನು ಕಿತ್ತೆಸೆದರೆಂದೂ, ಯಲ್ಲಾಪುರದಲ್ಲಿ ಮರಳು ಲಾರಿ ಯುವಕರನ್ನುಥಳಿಸಿದರೆಂದೂ, ಭಟ್ಕಳದಲ್ಲಿ ಗುಡಿಸಲೊಂದುಹೊತ್ತುರಿಯಿತೆಂದೂ, ಅಂಕೋಲಾದಲ್ಲಿ ಟಾಯರ್ಶಾಪ್ ಧ್ವಂಸವಾಯಿತೆಂದೂ, ಶಿರಸಿಯ ಬಂದ್ವೇಳೆ ಕಲ್ಲು ತೂರಾಟ, ಲಾಠಿ ಚಾರ್ಜ್‍ಗೆಬಲಿಯಾದರೆಂದೂ ಹುತ್ತದಿಂದೆದ್ದು ಬರುವ ಒರಲೆಹುಳುಗಳಂತೆ ಸುದ್ದಿ ಹಬ್ಬುತ್ತಲೇ ಇತ್ತು. ರಸ್ತೆ ಜನಸಂಚಾರವನ್ನು ಕಳೆದುಕೊಂಡುಬಣಗುಡತೊಡಗಿತು.
ಗಾಳಿ ದಿಕ್ಕಿಗೆಲ್ಲ ಈ ಕೋಮು ಜ್ವಾಲೆ ಹಬ್ಬುತ್ತಲೇಹೋಯಿತು. ಎಷ್ಟು ವರ್ಷಗಳಿಂದ ಕಿರಿಯ ಅಣ್ಣಆಸೀಫ್ ಮನೆ ಮಗನೇ ಆಗಿ ಬಾಳಿದ ಅರೇಅಂಗಡಿಯಲ್ಲಿ ಸೈಕಲ್ ರಿಪೇರಿ ಶಾಪ್ ರಾತ್ರಿಬೆಳಗಾಗುವುದರಲ್ಲಿ ಹೊತ್ತುರಿದ ಊರಿಗೆ ಅಂದುಮನೆ ಸೇರಿದವನು ಇಂದಿಗೂ ಹೊರಗಡಿಯಿಟ್ಟಿಲ್ಲ. ಬೆಳಗಾಗುತ್ತಲೇ ಸೈಕಲ್ ಏರಿ ಕಡ್ಲೆ, ಕಡತೋಕ್,ಕೆಕ್ಕಾರಿಗೆ ಹೋಗಿ ಮೀನು ಮಾರಿ ನಗು ಮುಖದಿಂದಮಕ್ಕಳಿಗೆ ಚಾಕಲೇಟು ಹಿಡಿದು ಬರುವ ಹಿರಿಯಣ್ಣರಫಿಯ ಮೇಲೆ ಏಕಾಏಕಿ ಎರಗಿ ಪೆಟ್ಟಿಗೆ ಮುರಿದುಸೈಕಲ್ ಜಜ್ಜಿದ ಹೊಡೆತಕ್ಕೆ ಪ್ರಾಣಉಳಿಸಿಕೊಳ್ಳುವುದೇ ಕಷ್ಟವಾಯಿತು. ಸಿಕ್ಕಿ ಬಿದ್ದಮೀನುಗಳೇ ಕಣ್ಮುಂದೆ ಸುಳಿದು ಮುರಿದ ಕಾಲಿನನೋವೂ ನಗಣ್ಯವಾಗಿ ಮೂಲೆ ಹಿಡಿದಿದ್ದ. ರಮೇಶ್ಕಾಮತ್ ಅವರ ಬಟ್ಟೆ ಅಂಗಡಿಯಲ್ಲಿ ಸೇಲ್ಸ್‍ಮ್ಯಾನ್ಆಗಿ ಅಂಗಡಿಯ ಕೀಲಿಕೈಗೂ ಒಡೆಯನಾದ ಮಧ್ಯದಅಣ್ಣ ರಜಾಕ್‍ನನ್ನು ಹಾಡೇ ಹಗಲು ಎಳೆದು ಮಧ್ಯರಸ್ತೆಯಲ್ಲಿ ಥಳಿಸಿದ ಹೊಡೆತಕ್ಕೆ ಅರೆವಿವಸ್ತ್ರನಾಗಿಕಣ್ಣೀರಿಡುತ್ತ ಬಂದು ಆತ ಬೆಳಗಾಗುವುದರಲ್ಲಿನಾಪತ್ತೆಯೇ ಆದವನ ಸುಳಿವು ಹೆಂಡತಿಗೂತಿಳಿದಿಲ್ಲ.
ಲೋಕದ ವ್ಯವಹಾರಕ್ಕೆ ಮನೆಯ ಬಾಗಿಲುಮುಚ್ಚಿಕೊಂಡಿತು. ಮನೆಯೊಳಗಿನ ಮನಸ್ಸುಮುಗ್ಗುತ್ತಲೇ ಹೋಯಿತು. ಚಾಂದನಿ ದಿನದಿಂದದಿನಕ್ಕೆ ಮಂಕಾಗತೊಡಗಿದಳು. ಮಗ್ಗುಲಲ್ಲಿಭಯಭೀತಳಂತೆ ಮುದುಡಿ ಮುದ್ದೆಯಾಗಿಮೈಗೊತ್ತೊತ್ತಿ ಮಲಗುತ್ತಿದ್ದಳು. ಆಗಾಗ ತೆಕ್ಕೆಬೀಳುತ್ತಿದ್ದಳು. ನಿದ್ದೆಯಲ್ಲೇ ಕನವರಿಸುತ್ತಿದ್ದಳು. ‘ಛೋಡ್ ದೋ ಮುಜೆ, ಪ್ಲೀಸ್ ಬಿಟ್ಬಿಡು, ನನ್ನಎಂದು ಒಂದು ದಿನ ಹೇಳಿದರೆ, ಹಾಲ್ ಜೋಡಲ್ಲೇಹ್ಞೂ...... ಪ್ಲೀಸ್ ಅಣ್ಣಾ ಕೈ ಮುಗಿತೀನಿ ಬಿಡು’ಎಂದು ಇನ್ನೊಂದು ದಿನ, ‘ನಹೀ ಬೊಲತೀ ಹ್ಞೂ, ಬಿಲ್‍ಕುಲ್, ಯಾರಿಗೂ ಹೇಳೋದಿಲ್ಲ ಭಯ್ಯಾ, ಯಾರ ಹೆಸರನ್ನೂ ಹೇಳೋದಿಲ್ಲ ಅಣ್ಣಾ’ ಎಂದುಮಗುದೊಂದು ದಿನ. ನಿದ್ದೆಯಲ್ಲೇ ನನ್ನ ಸೊಂಟಬಿಗಿಯಾಗಿ ಬಳಸಿ ಗಳಗಳನೆ ಅಳುತ್ತ ಏದುಸಿರುಬಿಡುವ ಅವಳ ವರ್ತನೆ ರಹಸ್ಯ ಗರ್ಭದಂತಾಯಿತು.
ಥಟ್ಟನೆ ನೆನಪಾಗಿದ್ದು, ಕೂದಲ ಸುಂದರಿಯ ತಲೆಮೀಯಿಸುತ್ತಿದ್ದಾಗ ಬೆನ್ನಿನ ಮೇಲಿನ ಗೀರುವಿಕೆ, ಎದೆಯ ಮೇಲಿನ ಕನ್ನೆತ್ತರ ಗುರುತು. ಗೆಳತಿಯರೊಂದಿಗೆ ಚಾಂದ್ರಾಣಿ ಗುಡ್ಡಕ್ಕೆ ಮುಳ್ಳೆಹಣ್ಣು ಕೊಯ್ಯಲು ಹೋಗಿದ್ದುದಾಗಿಯೂ, ಮೈತುಂಬ ಮುಳ್ಳು ತರಚಿದೆಯೆಂದೂ ಹೇಳಿದುದನ್ನುಮಳ್ಳಿಯ ಹಾಗೆ ನಂಬಿದ್ದ ನನಗೆ ಈಗಿತ್ತಲಾಗಿ ಅವಳಉತ್ತರ ಅಷ್ಟು ಸರಳವಾದದ್ದಾಗಿ ಕಾಣಲಿಲ್ಲ.
ಇಡೀ ಕುಟುಂಬ ನನ್ನ ಹೊಲಿಗೆ ಯಂತ್ರದ ಮೇಲೆನಡೆಯತೊಡಗಿತು. ನಾನಾದರೂ ಅಂತಿಂಥಹೊಲಿಗೆಯವಳಾಗಿರಲಿಲ್ಲ. ಒಮ್ಮೆ ನನ್ನ ಮನೆಯದಾರಿ ತುಳಿದವರು ಮತ್ತೆ ಮರೆಯುತ್ತಿರಲಿಲ್ಲ. ದೂರದೂರುಗಳಿಗೆ ನೌಕರಿಗಾಗಿ ಹೋದವರೂಮದುವೆಯಾಗಿ ಹೋದ ಹೆಣ್ಣು ಮಕ್ಕಳೂತವರುಮನೆಗೆ ಬರುವಾಗ ಬಟ್ಟೆಯ ಗಂಟನ್ನೇತರುತ್ತಿದ್ದರು. ಹೆಣ್ಣು ಮಕ್ಕಳ ತಾಯಂದಿರಿಗೋ ‘ನನ್ನಕೈ ಗುಣ ಭಾಳ ಚಲೋದು’. ನಾನು ಹೊಲಿದಬ್ಲೌಸಿನಲ್ಲೇ ಗಂಡು ಮೆಚ್ಚಿ ನಿಶ್ಚಿತಾರ್ಥವಾದದ್ದು, ಮಧುರ ದಾಂಪತ್ಯ ಸಿಕ್ಕಿದ್ದು, ಸೀಮಂತಕ್ಕೆ ಉಡಿಸಿದಹಸಿರು ಸೀರೆ ಕುಪ್ಪುಸದಿಂದಲೇ ಸುಖಪ್ರಸವವಾಗಿದ್ದು, ಎಲ್ಲದಕ್ಕೂ ನಾನೇ ನಿಮಿತ್ತವಾಗಿದ್ದೆ. ನಾನೇ ಹೊಲಿದ ಬಟ್ಟೆ ತೊಟ್ಟು ಕಡೆದ ಗೊಂಬೆಯಹಾಗೆ ಓಡಾಡುವ ಮಕ್ಕಳನ್ನು ಕಂಡಾಗ ನನ್ನಕೈಚಳಕಕ್ಕೆ ನಾನೇ ಮೆಚ್ಚಿದ್ದೆ. ಒಮ್ಮೆ ಭಾವೀಪತಿಯೊಂದಿಗೆ ಶರಾವತಿ ದಡದಲ್ಲಿ ಕುಳಿತು ಸೂರ್ಯಮುಳುಗುವುದನ್ನು ನೋಡುತ್ತಿರುವಾಗ ಎಡಪಕ್ಕದಲ್ಲಿದ್ದ ಆತ ಕದ್ದು ಕದ್ದು ನೋಡಿ ‘ಒಳಗೆ ಪ್ಯಾಡ್ಹಾಕಿದ್ದೀಯಾ’ ಎಂದು ಹುಳ್ಳಹುಳ್ಳಗೆ ನಕ್ಕಿದ್ದು ನಿಮ್ಮಕಠೋರಿ ಬ್ಲೌಸಿನ ಮಹಿಮೆಯಿಂದಾಗಿಯೇ ಎಂದುಶಿಲ್ಪಾ ಹೇಳಿದಾಗ ಬಿದ್ದೂ ಬಿದ್ದೂ ನಕ್ಕು ಹೊಟ್ಟೆಹುಣ್ಣಾಗಿತ್ತು.
ರಂಜಾನ್, ಗಣೇಶ್ ಚತುರ್ಥಿ, ಮೊಹರಂ, ದಸರಾ, ದೀಪಾವಳಿ, ಬಕ್ರಿದ್, ಕ್ರಿಸ್‍ಮಸ್, ಮದುವೆ ಮುಂಜಿ,ಜಾತ್ರೆ, ಪೇಸ್ತು ಹೀಗೆ ಒಂದರ ಹಿಂದೆ ಒಂದರಂತೆಬರುವ ಹಬ್ಬ ಹರಿದಿನಗಳಿಗೆ ನನ್ನ ಮನೆ ಬಣ್ಣಬಣ್ಣದ ಬಟ್ಟೆಗಳ ಜವಳಿ ಅಂಗಡಿಯೇ ಆಗಿರುತ್ತಿತ್ತು. ಹಗಲೂ ರಾತ್ರಿ ದುಡಿದರೂ ಬಟ್ಟೆಯ ರಾಶಿಕರಗುತ್ತಿರಲಿಲ್ಲ.
ಮಂಜಿನಂತೆ ಕರಗಿದ್ದು, ನನ್ನ ಆಯುಷ್ಯ, ನನ್ನ ಕನಸು, ತಮ್ಮ ಪ್ರಾಯಕ್ಕೆ ತಕ್ಕಂತೆ ಮದುವೆಯಾದಅಣ್ಣಂದಿರು ಮಕ್ಕಳನ್ನು ನನ್ನ ಮಡಿಲಿಗೆಸೆದರೇಹೊರತು ತಂಗಿಯ ಕನಸಿನ ಹಂದರವನ್ನುಪ್ರವೇಶಿಸಲೇ ಇಲ್ಲ. ಮನೆ ತುಂಬುತ್ತಲೇ ಹೋಯಿತು,ಮನ ಖಾಲಿಯಾಗುತ್ತಲೇ ಹೋಯಿತು. ಕಣ್ಣಿಗೆಕನ್ನಡಕ ಬಂತು, ಕೂದಲಿಗೆ ಬಣ್ಣ ಹಚ್ಚಿದೆ, ಆದರೆನೆರಿಗೆಗಳ ಮುಚ್ಚಲಾಗಲಿಲ್ಲ. ಕಾಲು ಸೋತರೂಯಂತ್ರ ನಿಲ್ಲಲಿಲ್ಲ. ಎಲ್ಲರ ಹೊಟ್ಟೆ ನನ್ನ ಕಾಲಮೇಲಿತ್ತು. ಈ ಧರ್ಮದ ಗೋಡೆ ಮನುಷ್ಯರನ್ನುಒಡೆದಿದ್ದರೆ ನಾನೂ.......
ಈಗ ಹಗಲೂ ರಾತ್ರಿ ಚಂದುವನ್ನು ಕಾಯುವುದೇದೊಡ್ಡ ಕೆಲಸವಾಯಿತು. ಒಂದು ಸಂಜೆ ಚಹದಜೊತೆ ಮಂಡಕ್ಕಿ ವಗ್ಗರಿಸಿ ಎಲ್ಲರಿಗೂ ನೀಡಿಇವಳನ್ನೂ ಕೂಗಿದರೆ ಸುಳಿವೇ ಇಲ್ಲ. ಕರೆದೂಕರೆದೂ ಅರಸುತ್ತ ಅರಳಿ ಮರದ ಹತ್ತಿರ ಬಂದೆ. ಅರಳಿಮರದ ಕಟ್ಟೆಯ ಮೇಲೆ ಮೊಳಪೊಂಡಿಮಡಚಿ, ತಲೆ ಇಟ್ಟು ಕುಳಿತ ಚಂದುವ ಕಂಡೆ. ಭುಜದಮೇಲೆ ಕೈಯಿಟ್ಟರೆ ಬೆಚ್ಚಿ ಬಿದ್ದವಳೆ ‘ಮುಟ್ಟಬೇಡಾ,ಮುಟ್ಬೇಡಾ, ಡೋಂಟ್ ಟಚ್,’ ಎಂದು ಕಿರುಚುತ್ತ, ಅಲ್ಲೇ ಕಲ್ಲಿನ ಮೂರ್ತಿಗೆ ಹಚ್ಚಿದ ಅರಿಶಿಣಕುಂಕುಮವನ್ನು ಬರಗಿ ಬರಗಿ ಮುಖಕ್ಕೆಬಳಿದುಕೊಂಡಳು. ರೋಷದಿಂದ ಎದ್ದು ನಿಂತು ‘ಜೈಶ್ರೀರಾಮ್, ಜೈ ಭಜರಂಗಿ, ಜೈ ಜೈ ಭಜರಂಗಿ ಎಂದುಕೈ ಎತ್ತಿ ಕೂಗಿದಳು. ಕೂದಲು ಬಿಚ್ಚಿ, ಕಣ್ಣಲ್ಲಿಕೆಂಡವುಗುಳುತ್ತ ನಿಂತ ಆಕೆ ಯಾರನ್ನೋ ಸಾಯಿಸಹೊರಟ ಅವತಾರಿಯಂತೆ ಕಂಡಳು. ನನ್ನ ಕಣ್ಣೀರುಧರೆಗುರುಳುತ್ತಿತ್ತು. ಕಣ್ಣಲ್ಲಿ ಕಣ್ಣಿಟ್ಟು ನೋಡಿದಅವಳೂ ಗಳಗಳನೆ ಒಂದಿಷ್ಟು ಹೊತ್ತು ಅತ್ತೂ ಅತ್ತೂಎದೆಗೊರಗಿದಳು. ಪಾದರಸದಂತ ಮಗು ಲೋಕದಭಾವಗಳಿಗೆ ಜಡವಾಗಿ ಕುಳಿತಳು.
ಫೋನ್ ರಿಂಗುಣಿಸಿತು. ತೋಳ ತೊಟ್ಟಿಲ ಕೂಸಾದಚಂದೂವನ್ನು ಹಾಸಿಗೆಗೆ ಒರಗಿಸಿ ಮೇಲೆ ಸರಿದಸಲ್ವಾರ್ ಸರಿಪಡಿಸುವಾಗ ಹೊಟ್ಟೆಉಬ್ಬಿದಂತೆನಿಸಿತು. ಬೇಗ ಬೇಗ ಮುಚ್ಚಿ ಫೋನ್‍ಗೆಕಿವಿ ಹಚ್ಚಿದೆ.
‘ಹಲೋ’
‘ನಾನು....... ಪಲ್ಲವಿ’
‘ಹ್ಞಾ, ಗೊತ್ತಾಯ್ತು, ಹೇಳು ಪಲ್ಲವಿ’
‘ಅದು..... ಬಟ್ಟೆ ಬೇಕಿತ್ತು.
“ಮೂರು ತಿಂಗಳ ಮೇಲಾಯ್ತಲ್ಲ ಹೊಲಿದಿಟ್ಟು, ಅರ್ಜೆಂಟ್ ಇದೆ, ಮದ್ವೆ ಅಂದೆ’
‘ಹೌದಾಗಿತ್ತು, ಈಗ ಸಮಯ ಸರಿ ಇಲ್ಲಾ ಅಲ್ಲ. ಅದಕ್ಕೇ ಮದ್ವೆ ಪೋಸ್ಟ್ ಪೋನ್ ಆಯ್ತು.’
‘ಓ, ತಯಾರಿಗೆ ಇನ್ನೂ ಸಮಯ ಸಿಗ್ತು, ಬಾ’
‘ಅದು..... ನಿಮ್ಮ ಕೇರಿಗೆ ಬರಲಿಕ್ಕೆ...... ಭಯ’
‘ನಾನೇನೂ ಹುಲಿ ಕಟ್ಟಿಲ್ಲ ಅಲ್ಲಾ’
‘ಹಾಗಲ್ಲ, ನಿಮ್ಮ ಜನ...... ಸರಿಯಿಲ್ಲವಂತೆ’
‘ಓ, ನಾನಿದ್ದೇನಲ್ಲಾ, ಧೈರ್ಯವಾಗಿ ಬಾ’
‘ಅದು ಸರೀನೇ, ಅಲ್ಲಿಗೆ ಬಂದರೆ..... ನಮ್ಮ ಜನಬಹಿಷ್ಕಾರ ಹಾಕ್ತಾರಂತೆ, ಮತ್ತೆ..... ಹುಡುಗನಿಗೆಗೊತ್ತಾದ್ರೆ..... ಮದ್ವೆ......’
‘ಉಶ್ ssssssss’
‘ಮತ್ತೆ ನೀವೇ..... ಮೇನ್ರೋಡಿಗೆ.......ತಂದುಕೊಟ್ರೆ’ ಉಗುಳು ನುಂಗಿದೆ, ಮಾತಾಡಲಾಗಲಿಲ್ಲ. ಎದೆಯ ದನಿಯೇ ಇಂಗಿಹೋದಂತೆನಿಸಿತು. ಮನಸ್ಸು ಚೀತ್ಕರಿಸಿತು. ಸಂಬಂಧಇಷ್ಟು ಬೇಗ ಹಳಸುತ್ತದೆಯೇ? ಎಷ್ಟು ಸಾರಿಕಾಲೇಜಿನಿಂದ ಹಸಿದು ಬರುವ ಇವಳಿಗೆ ಕಷಾಯಬಿಸ್ಕತ್ತು ನೀಡಿಲ್ಲ? ಮನೆಗೆ ಬಂದವರೆಲ್ಲ ಸುಖದುಃಖಹಂಚಿಕೊಳ್ಳುತ್ತ, ಗೇಟನ್ನೂ ದಾಟಿ ಅವಳೆಯಂಚಿನತೆಂಗಿನಮರದ ತನಕವೂ ಸಾಗಿ ವಿದಾಯಿಸುತ್ತದ್ದನಾನು ಎಷ್ಟು ಬೇಗ ಅನ್ಯಳಾಗಿ ಬಿಟ್ಟೆ! ನವಿಲಿನನಡಿಗೆಯ ರಸ್ತೆ ಬಿಕ್ಕಿಬಿಕ್ಕಿ ಬಿಕ್ಕಿತು.
ಮನೆಯ ಹಿಂದಿನ ಸಣ್ಣ ನೀರು ಅವಳೆಯಆಚೆಯಿಂದ ‘ಬೂಬಮ್ಮಾ’ ಎನ್ನುವ ಲಲಿತಮ್ಮರದನಿ ಬಂತೆಂದರೆ ನಮ್ಮ ಮನೆಯಲ್ಲೂ ಹಬ್ಬ. ನಾಗರಪಂಚಮಿಯ ಪಾತೋಳಿಯನ್ನು ಬೊಗಸೆಯಲ್ಲಿಹಿಡಿದ ಉಮ್ಮಾ ‘ಕೈಯೆಲ್ಲಾ ಘಮ ಘಮಿಸಿತು’ಎಂದರೆ, ರಂಜಾನಿನ ಸುರಕುಂಬಾ ಸವಿದ ಲಲಿತಮ್ಮ‘ಹೊಟ್ಟೆಯೆಲ್ಲಾ ಸಿಹಿಯಾಯಿತು’ ಎಂದರೆ ಅವರಮನೆಯಲ್ಲೂ ಹಬ್ಬ. ಇದೇ ಚಂದೂ ಎಳೆ ಬಾಲೆ ಆಗ. ಅಮ್ಮನ ಅನಾರೋಗ್ಯದಿಂದ ಎದೆ ಹಾಲು ಬತ್ತಿತು. ಒಂದೇ ಸಮನೆ ಅಳುವ ಕೂಸಿನ ಬಾಯಿ ಮುಚ್ಚಿದ್ದೇಲಲಿತಮ್ಮರ ಮನೆಯ ಆಕಳು ಕರೆದ ಕೌಳಿಗೆ ಹಾಲು. ಹಾಲಿನಿಂದಲೇ ಬದುಕು ಸಾಗಬೇಕಾದ ಅವರ ಕಿರಿಮಗಳ ಗಂಡು ನೋಡಲು ಬಂದಾಗ ಕೆನೆ ಬಣ್ಣದನನ್ನ ಬುಟ್ಟಾ ಸೀರೆಯನ್ನು ಉಡಿಸಿದವಳೂ ನಾನೇ. ಕ್ಷಣದಲ್ಲಿ ಹಾಲು ಹಾಲಾಹಲವಾದುದೇಕೆ?
ನಿದ್ದೆಯೋ ಎಚ್ಚರವೋ ತಿಳಿಯದ ಮನಸ್ಥಿತಿಯಲ್ಲಿಮಧ್ಯರಾತ್ರಿ ಮೀರಿತು. ಮಗ್ಗುಲಾಗಿ ಚಂದೂವನ್ನುಬಳಸಿದೆ. ಖಾಲಿ ಹಾಸಿಗೆ, ಎದ್ದು ಮನೆಯೆಲ್ಲಹುಡುಕಿದೆ ಸುಳಿವಿಲ್ಲ. ಎದೆ ಧಸಕ್ಕೆಂದಿತು. ಏನೋನೆನಪಾಗಿ ಕತ್ತಲಲ್ಲೇ ಮೊಬೈಲಿನ ಕ್ಷೀಣ ಬೆಳಕಲ್ಲಿಅರಳಿ ಮರ ಸುತ್ತಿ ಬಂದೆ. ಬಾವಿ ಕಟ್ಟೆಯ ಮೇಲೆಕುಳಿತು ‘ನೀಲೆ ಗಗನ ಕಿ............ ಎಂದು ಆಕಾಶದಿಟ್ಟಿಸುತ್ತ ಕಾಲು ಕುಣಿಸುತ್ತ ಸುಶ್ರಾವ್ಯವಾಗಿಹಾಡುತ್ತ ಏನಾದರೂ ಪರಾಮಶಿಯಾದರೆ ನನ್ನಿಂದಬಯ್ಸಿಕೊಳ್ಳುವ ಚಂದೂ ನೆನಪಾದಳು. ಕರುಳಿಂದಮೀಟಿದ ಕಂಪನದಲ್ಲಿ ಮೊಬೈಲ್ ಕೈತಪ್ಪಿತು. ಕತ್ತಲಲ್ಲೆ ಓಡಿ ಓಡಿ ಓಡಿದೆ. ನೀಲ ಗಗನದಲ್ಲಿಬೆಳ್ಳಿಮೋಡಗಳ ಹಿಂದಿಕ್ಕಿ ಓಡುತ್ತಿದ್ದ ಚಂದಿರನ ಹೆಣಹಿತ್ತಲ ಬಾವಿಯಲ್ಲಿ ತೇಲುತ್ತಿತ್ತು.
ಲೋಕಕ್ಕೆ ಬಣ್ಣ ಬಣ್ಣದ ಬಟ್ಟೆ ತೊಡಿಸುವ ಮುಖವಿವರ್ಣವಾಯಿತು. ಮನೆಯ ತುಂಬ ಪೇರಿಸಿಟ್ಟಬಟ್ಟೆ ಬಿಕ್ಕಿತು. ಮಾನಕ್ಕೆ ವಿವಿಧ ಆಕಾರ ನೀಡಿದಹೊಲಿಗೆ ಯಂತ್ರ ಮೌನವಾಯಿತು. ಎದೆಯಲ್ಲಿಮುಳ್ಳೊಂದು ಮುರಿಯಿತು.
ಚೆಲ್ಲಿದ ರಕ್ತದ ಪ್ರತಿ ಹನಿಗೂ ನ್ಯಾಯಕೊಡುವುದೆಂದರೆ ಇದೇ ಇರಬಹುದೆ? ಮುರಿದಮುಳ್ಳು ಕೀವುಗಟ್ಟುತ್ತಲೇ ಇತ್ತು. ರಸ್ತೆಗೆ ರಕ್ತತೊಟ್ಟಿಕ್ಕುತ್ತಲೇ ಇತ್ತು. ನಾ ನಡೆವ ಹಾದಿಯಲ್ಲಿಮುಳ್ಳಿಲ್ಲದ ಗುಲಾಬಿ ಚೆಲ್ಲಿದ ಸೂರಿ,ಸೂರ್ಯಕಾಂತ್ ಮತ್ತೆ ಮತ್ತೆ ಮತ್ತೆ ನೆನಪಾಗಿಕಾಡಿದ.
ಮಾಧವಿ ಭಂಡಾರಿ ಕೆರೆಕೋಣ