ಒಬ್ಬ ತಂದೆ ಇದಕ್ಕಿಂತ ಒಳ್ಳೆಯ ಪತ್ರವನ್ನು ಮಗಳಿಗೆ ಬರೆಯಲು ಸಾಧ್ಯವಿಲ್ಲ. ಈ ಪತ್ರವನ್ನು ಎಂಟನೇಯ ತರಗತಿಯ ಕನ್ನಡ ಪಠ್ಯದಲ್ಲಿಯೂ ಸೇರಿಸಿದೆ.
" ಪ್ರಿಯ ಮಗಳೇ, ನಿನ್ನ ಹುಟ್ಟಿದ ಹಬ್ಬದ ದಿನ ಉಡುಗೊರೆ ಆಶೀರ್ವಾದಗಳನ್ನು ಪಡೆಯುವುದು ನಿನ್ನ ಅಭ್ಯಾಸ. ಆಶೀರ್ವಾದಗಳಿಗೇನು ಕಡಿಮೆ ಬೇಕಾದ್ದಷ್ಟು ಕಳುಹಿಸುತ್ತೇನೆ. ಆದರೆ ಈ ನೈನಿ ಸೆರಮನೆಯಿಂದ ನಾನು ನಿನಗೆ ಯಾವ ಉಡುಗೊರೆ ಕಳುಹಿಸಲಿ ಹೇಳು?
ಪ್ರಿಯ ಮಗಳೆ, ನೀನು ಚೆನ್ನಾಗಿ ಬಲ್ಲೆ, ಬುದ್ಧಿವಾದ, ಉಪದೇಶ ಮಾಡುವುದು ನನಗೆ ಇಷ್ಟವಿಲ್ಲ. ಬುದ್ಧಿವಾದ ಹೇಳುವುದೆಂದರೆ ನನಗೆ ಬೇಸರ. ಅಪಾರ ಜ್ಞಾನ ನನ್ನೊಳಗಿಲ್ಲ. ಆದರೆ ನನ್ನಲ್ಲಿ ಮತ್ತಷ್ಟು ಜ್ಞಾನ ಸಂಪಾದನೆಗೆ ಸ್ಥಳವಿದೆ. ಸ್ಥಳದ ಅಭಾವವಿದೆ ಎಂಬ ಮಾತೇ ಇಲ್ಲ. ನಾನು ಸರ್ವವನ್ನೂ ಬಲ್ಲವನಲ್ಲವಾದ್ದರಿಂದ ಹೇಗೆ ಉಪದೇಶ ಮಾಡಲಿ? ಉಪದೇಶ ಮಾಡುವುದರಿಂದ ಸರಿ ತಪ್ಪು ತಿಳಿಯುವುದಿಲ್ಲ ತರ್ಕ, ಸಂಭಾಷಣೆಗಳಿಂದ ಜ್ಞಾನ ಉಂಟಾಗುತ್ತದೆ. ನಾವಿಬ್ಬರು ಪರಸ್ಪರ ಚರ್ಚೆ ಮಾಡಿದ್ದೇವೆ. ಆದರೆ ಈ ಜಗತ್ತು ತುಂಬಾ ವಿಸ್ತಾರವಾದ್ದು. ನಾವು ಅಹಂಕಾರಿಗಳಾಗಬಾರದು. ನಾವು ಮಹಾಜ್ಞಾನಿಗಳಲ್ಲ. ನಮಗೆ ತಿಳಿಯದ ಎಷ್ಟೋ ವಿಷಯಗಳು ಜಗತ್ತಿನಲ್ಲೂ ಮತ್ತು ಜಗತ್ತಿನಾಚೆಗೂ ಇವೆ.
ಆದ್ದರಿಂದ ನನ್ನ ಮಾತುಗಳೇನಾದುರೂ ನಿನಗೆ ಉಪದೇಶದಂತೆ ಕಂಡುಬಂದರೆ ಅದೊಂದು ವಿಷಗುಳಿಗೆ ಎಂದು ಬಲವಂತವಾಗಿ ನುಂಗಬೇಡ. ನೀನು ವಿಚಾರ ಮಾಡಿ ಅದನ್ನು ಸ್ವೀಕರಿಸು.
ಜಗತ್ತಿನ ರಾಷ್ಟ್ರಗಳ ಇತಿಹಾಸದಲ್ಲಿ ಜನಾಂಗಗಳ ಬದುಕಿನ ಮಹಾಘಟ್ಟಗಳ ಕುರಿತು ಓದುತ್ತೇವೆ. ಮಹಾನ್ ಸ್ತ್ರೀ ಪುರುಷರು ಸಾಧಿಸಿದ ಮಹಾತ್ಕಾರ್ಯಗಳ ಕುರಿತು ತಿಳಿಯುತ್ತೇವೆ. ನಾವು ಹಾಗೆಯೇ ಪರಾಕ್ರಮ ಕಾರ್ಯಗಳನ್ನು ಮಾಡಿದಂತೆ ಕನಸು ಕಾಣುತ್ತಾ ಮೈ ಮರೆಯುತ್ತೇವೆ. ಜೋನ್ ಆಫ್ ಆರ್ಕ್ ಕಥೆಯನ್ನು ನೀನು ಓದಿದಾಗ ಅದು ನಿನ್ನ ಮನಸ್ಸನ್ನು ಆಕರ್ಷಿಸಿದ ಬಗೆ ಮತ್ತು ಅವಳಂತಾಗಲು ನೀನುಎಂಥಾ ಪ್ರಬಲ ಆಕಾಂಕ್ಷೆ ಹೊಂದಿದ್ದೆ ಎಂಬುದರ ಬಗ್ಗೆ ನೆನಪಿದೆಯೇ ನಿನಗೆ? ಸಾಮಾನ್ಯ ಸ್ತ್ರೀ ಪುರುಷರಲ್ಲಿ ಅಂತಹ ಆಕಾಂಕ್ಷೆಗಳಿರುವುದು ಅಪರೂಪ. ಅವರು ತಮ್ಮ ನಿತ್ಯದ ಅಗತ್ಯತೆಗಳಾದ ಅನ್ನ, ಬಟ್ಟೆ, ಮಕ್ಕಳು, ಕುಟುಂಬ ಇತ್ಯಾದಿಗಳಿಗಾಗಿ ಮಾತ್ರ ಯೋಚಿಸುತ್ತಾರೆ. ಆದರೆ ಒಂದು ಕಾಲಘಟ್ಟ ಒದಗುತ್ತದೆ. ಆಗ ಎಲ್ಲ ಸಾಮಾನ್ಯ ಸ್ತ್ರೀ ಪುರುಷರು ಕೂಡ ಮಹಾತ್ಕಾರ್ಯಕ್ಕಾಗಿ ಸಿದ್ಧವಾಗಿ ನಿಂತು ಬಿಡುತ್ತಾರೆ.
ನೀನು ಹುಟ್ಟಿದ ವರ್ಷ ೧೯೧೭ ಚರಿತ್ರೆಯಲ್ಲಿ ಒಂದು ಮಹಾವರ್ಷ. ಆ ವರ್ಷ ದೀನ ದಲಿತರ ಬಗ್ಗೆ ಅಪಾರ ಮಮತೆಯುಳ್ಳ, ಕರುಣೆಯುಳ್ಳ, ಓರ್ವ ಹೃದಯವಂತ ಮಹಾಪುರುಷ ಕಾಣಿಸಿಕೊಂಡ. ತನ್ನ ಜನಾಂಗದ ಇತಿಹಾಸದಲ್ಲಿ ಎಂದೆಂದಿಗೂ ಮರೆಯಲಾಗದ ಒಂದು ಮಹಾಧ್ಯಾಯ ಬರೆಯಿಸಿದ. ನೀನು ಹುಟ್ಟಿದ ವರ್ಷವೇ ಲೆನಿನ್ ಮಹಾಕ್ರಾಂತಿ ಪ್ರಾರಂಭಿಸಿ ರಷ್ಯ ಮತ್ತು ಸೈಬಿರಿಯಾಗಳ ಸ್ವರೂಪವನ್ನೇ ಬದಲಾಯಿಸಿದ. ಇಂದು ಭಾರತದಲ್ಲಿ ಮತ್ತೋರ್ವ ಮಹಾನಾಯಕ ಆಗಮಿಸಿದ್ದಾನೆ. ನಮ್ಮ ಜನ ಸ್ವತಂತ್ರರಾಗಲು ಹಸಿವು, ಬಡತನ, ಶೋಷಣೆಯಿಂದ ಮುಕ್ತರಾಗಲು ಕಾರ್ಯೋನ್ಮುಖರಾಗುವಂತೆ ತ್ಯಾಗ, ಬಲಿದಾನಗಳಿಗೆ ಸಿದ್ಧವಾಗುವಂತೆ ಅವರಿಗೆ ಸ್ಪೂರ್ತಿ ನೀಡುತ್ತಿದ್ದಾನೆ.
ಆತನ ಹೃದಯದಲ್ಲಿ ದುಃಖಿತರಿಗಾಗಿ ಅಪಾರ ಪ್ರೇಮವಿದೆ. ಅವರ ನೋವನ್ನು ಶಮನಗೊಳಿಸಲು ಕಾತುರನಾಗಿದ್ದಾನೆ. ಬಾಪೂಜಿ ಈಗ ಸೆರೆಮನೆಯಲ್ಲಿದ್ದರೂ ಅವರ ಸಂದೇಶ ಕೋಟಿ ಕೋಟಿ ಭಾರತೀಯರ ಹೃದಯಗಳನ್ನು ಸೂರೆಗೊಂಡಿದೆ. ಸ್ತ್ರೀಯರು, ಪುರುಷರು, ಮಕ್ಕಳು ತಮ್ಮ ಮನೆ ಬಿಟ್ಟು ಸ್ವಾತಂತ್ರ್ಯ ಸಂಗ್ರಾಮದ ಸೈನಿಕರಾಗಿದ್ದಾರೆ. ನಮ್ಮ ಕಣ್ಣೆದುರಿಗೆ ನಡೆಯುತ್ತಿರುವ ಈ ಮಹಾನ್ ಘಟನೆಗಳಲ್ಲಿ ನಮ್ಮದೊಂದು ಪಾತ್ರವಹಿಸುವ ಭಾಗ್ಯ ನಿನ್ನದು ಮತ್ತು ನನ್ನದಾಗಿದೆ.
ಈ ಮಹೋನ್ನತ ಕಾರ್ಯದಲ್ಲಿ ನನ್ನ ಮತ್ತು ನಿನ್ನ ಪಾಲಿಗೆ ಬರುವ ಕೆಲಸ ಯಾವುದೆಂದು ನಾನು ಹೇಳಲಾರೆ. ಕೆಲಸ ಯಾವುದೇ ಬರಲಿ ನಮ್ಮ ಆದರ್ಶಗಳಿಗೆ ಕೆಟ್ಟ ಹೆಸರು ಬರುವ ಯಾವುದೇ ಕೆಲಸವನ್ನು ನಾವು ಮಾಡುವಂತಿಲ್ಲ. ಇದನ್ನು ನಾವು ನೆನಪಿನಲ್ಲಿಟ್ಟುಕೊಳ್ಳಬೇಕು. ನಾವು ವೀರ ಸೈನಿಕರಾಗಿ ಭಾರತದ ಘನತೆ, ಗೌರವ, ಮಾನ, ಮರ್ಯಾದೆಗಳನ್ನು ಎತ್ತಿ ಹಿಡಿಯಬೇಕಿದೆ.
ಅನೇಕ ಸಲ ನಾವು ಏನು ಮಾಡಬೇಕು ಎಂಬ ಸಂದೇಹ ನಮಗೆ ಬರಬಹುದು. ಸರಿ ತಪ್ಪುಗಳನ್ನು ನಿರ್ಧರಿಸುವುದು ಕಷ್ಟವಾಗಬಹುದು. ನಿನ್ನಲ್ಲಿ ಇಂತಹ ಸಂದೇಹಗಳು ಕಾಣಿಸಿಕೊಂಡಾಗ ಒಂದು ಸಣ್ಣ ಪರೀಕ್ಷೆಯನ್ನು ನಡೆಸಬೇಕೆಂದು ನಿನಗೆ ಸೂಚಿಸುತ್ತೇನೆ. ಇದು ನಿನಗೆ ಸಹಕಾರಿಯಾಗಬಹುದು. ರಹಸ್ಯದಲ್ಲಿ ಯಾವ ಕೆಲಸವನ್ನೂ ಮಾಡಬೇಡ. ತೆರೆಯ ಮರೆಯಲ್ಲಿ ಕೆಲಸ ಮಾಡಬೇಕೆಂದು ನಿನಗೆ ಅನ್ನಿಸಿದರೆ ನೀನು ಭಯಗೊಂಡಿರುವೆ ಎಂದು ಅರ್ಥ. ಭಯ ಎಂಬುದು ಕೆಟ್ಟದ್ದು ಅದು ನಿನ್ನಂತವಳಿಗೆ ಅರ್ಹವಾದುದಲ್ಲ. ಧೈರ್ಯವನ್ನು ಬೆಳೆಸಿಕೊ. ಉಳಿದೆಲ್ಲವೂ ತಾವಾಗಿಯೇ ಬರುವವು. ನೀನು ಧೈರ್ಯವಂತಳಾದರೆ ಯಾವುದಕ್ಕೂ ನೀನು ಹೆದರುವುದಿಲ್ಲ. ನಿನಗೆ ನಾಚಿಕೆ ಎನಿಸುವ ಯಾವ ಕೆಲಸವನ್ನೂ ನೀನು ಮಾಡುವುದಿಲ್ಲ. ಬಾಪೂಜಿಯ ನಾಯಕತ್ವದಲ್ಲಿ ನಡೆಯುತ್ತಿರುವ ಚಳುವಳಿಯಲ್ಲಿ ರಹಸ್ಯಕ್ಕೆ ಸ್ಥಾನವಿಲ್ಲ. ಮುಚ್ಚಿಟ್ಟುಕೊಳ್ಳುವುದಕ್ಕೆ ಅವಕಾಶವೇ ಇಲ್ಲ. ನಾವು ರಹಸ್ಯದಲ್ಲಿ ಯಾವ ಕೆಲಸವನ್ನೂ ಮಾಡದಿರೋಣ. ಏಕಾಂತವನ್ನು ನಾವು ಅಪೇಕ್ಷಿಸೋಣ. ಏಕಾಂತಕ್ಕೂ ರಹಸ್ಯಕ್ಕೂ ವ್ಯತ್ಯಾಸವಿದೆ. ಈ ಮಾರ್ಗವನ್ನು ಅನುಸರಿಸಿದರೆ ಏನೇ ಬಂದರೂ ನೀನು ಜ್ಯೋತಿಯ ಮಗಳಾಗಿಯೇ ಬೆಳೆಯುವೆ. ನಿನಗೆ ಭಯವೆನ್ನುವುದೇ ಇರುವುದಿಲ್ಲ. ನೀನು ನಿರ್ಭಯಳೂ, ಶಾಂತಚಿತ್ತಳೂ, ನಿರ್ಮಲೆಯೂ ಆಗಿರುವೆ. ನಿನ್ನ ಮನಸ್ಸು ಕದಡದೆ ಶಾಂತವಾಗಿರುವೆ.
ಪುಟ್ಟ ಮಗಳೇ, ನಿನಗೆ ಶುಭವಾಗಲಿ. ನೀನು ದೊಡ್ಡವಳಾಗಿ ವೀರರಮಣಿ ಎನಿಸಿ ಭಾರತದ ಸೇವೆ ಮಾಡು. ಇದೇ ನನ್ನ ಪ್ರೀತಿ ತುಂಬಿದ ಹರಕೆ".
*ಜವಾಹರ್ ಲಾಲ್ ನೆಹರೂ
(ನೈನಿ ಜೈಲಿನಿಂದ ಇಂಧಿರಾ ಪ್ರಿಯದರ್ಶಿನಿಯ ಜನ್ಮದಿನಕ್ಕೆ ಬರೆದ ಪತ್ರ. ಕೃತಿ :ಗ್ಲಿಂಪ್ಸಸ್ ಆಫ್ ವರ್ಲ್ಡ್ ಹಿಸ್ಟರಿಯ ಕನ್ನಡ ಅನುವಾದ ಕೃತಿ)
No comments:
Post a Comment