ನಾನು ನನ್ನ ಬಾಲ್ಯ-ತಾರುಣ್ಯಗಳನ್ನು ಹಲವು ಜಾತಿ ಧರ್ಮ ಭಾಷೆಗೆ ಸೇರಿದ ಮಂದಿ, ಹೊಟ್ಟೆಪಾಡಿಗಾಗಿ ನಿತ್ಯ ಹೋರಾಡುವ ಗಲ್ಲಿಗಳಲ್ಲಿ ಕಳೆದೆ. ಅದುವೇ ಸಮಾಜವನ್ನು ನೋಡಲು ನನಗೊಂದು ತಾತ್ವಿಕ ದೃಷ್ಟಿಕೋನ ಒದಗಿಸಿತು. ಮುಂದೆ ನಾನು ಓದಿದ ಮತ್ತು ಕಲಿಸಿದ ಸಾಹಿತ್ಯವು, ಈ ಸಾಮಾಜಿಕ ವಾಸ್ತವಿಕತೆಯ ಮುಂದುವರಿಕೆಯಾಗಿತ್ತು. ಬಳಿಕ ಭಾರತದ ಜನಸಮುದಾಯಗಳು ತಮ್ಮ ಧರ್ಮ ಜಾತಿ ಭಾಷೆಗಳ ಗಡಿಗಳಾಚೆ ಬಂದು ಕಟ್ಟಿದ ಕೂಡು ಸಂಸ್ಕೃತಿಯ ಶೋಧ ಮಾಡಿದೆ. ಅದಕ್ಕಾಗಿ ಭಾರತವನ್ನು ನಿರಾಳವಾಗಿ ಅಲೆದಾಡಿದೆ. ನನ್ನ ಹುಡುಕಾಟವು ಭಾರತದ ಮತೀಯ ಹಿಂಸೆಗಳು ಮೂಡಿಸಿದ ನಿರಾಶೆಯಲ್ಲಿ ಮಾಡಿದ ಭರವಸೆಯ ಬೇಸಾಯವಾಗಿತ್ತು. ಆದರೆ ನಿನ್ನೆ ಪಾರ್ಲಿಮೆಂಟು ಪಾಸುಮಾಡಿದ ಪೌರತ್ವ ಕಾಯಿದೆ, ನನ್ನೀ ಬಾಲ್ಯಾನುಭವದ ಬುನಾದಿ, ಸಾಹಿತ್ಯಾಭ್ಯಾಸ, ಸಾಂಸ್ಕೃತಿಕ ಶೋಧಗಳ ಅಂತಸ್ಥವನ್ನೇ ಅಲುಗಿಸುತ್ತ ವಿಚಿತ್ರ ಕಂಪನ ಹುಟ್ಟಿಸಿದೆ. ಪಾರ್ಲಿಮೆಂಟು ಮುಂದೆ ಪಾಸು ಮಾಡಲಿರುವ ಪೌರತ್ವ ಕಾಯಿದೆ ಇನ್ಯಾವ ಸನ್ನಿವೇಶ ಹುಟ್ಟಿಸಲಿದೆಯೋ ತಿಳಿಯದು. ಈತನಕ ದೇಶದ ಕಾಯಿದೆಗಳು ಸಮಸ್ತ ಪ್ರಜೆಗಳನ್ನು ಉದ್ದೇಶಿಸಿ ರೂಪಿತವಾಗುತ್ತಿದ್ದವು. ಈಗವು ಧರ್ಮದ ಹೆಸರಲ್ಲಿ ಕೆಲವರನ್ನು ಹೊರಗಿಟ್ಟು ರೂಪಿತವಾಗುತ್ತಿವೆ. ಗ್ರೂಪ್ ಫೋಟೊದಿಂದ ಕೆಲವರ ಚಿತ್ರವನ್ನಷ್ಟೇ ಹೀಗೆ ಕತ್ತರಿಸಿ ಹೊರತೆಗೆಯಬಹುದೇ? ವಿವೇಕಾನಂದ ಕಬೀರ ಕುವೆಂಪು ಟಾಗೂರ ಗಾಂಧಿ ಅಂಬೇಡ್ಕರ್ ಲೋಹಿಯಾ ಮುಂತಾದ ಹಿರೀಕರು ಕಂಡರಿಸಿದ ಕೂಡುಭಾರತದ ಕಲ್ಪನೆಯನ್ನು, ನಾಡಿನ ವಿಶಾಲ ಸಮುದಾಯಗಳ ಒಳಗೆ ಇನ್ನೂ ಬತ್ತಿರದ ವಿವೇಕ-ಮನುಷ್ಯತ್ವ, ಅಷ್ಟು ಸುಲಭಕ್ಕೆ ಬಿಟ್ಟುಗೊಡದು ಎಂದು ನನ್ನ ನಂಬಿಕೆ.
ಜನಾಂಗದ್ವೇಷದಿಂದ ಜಗತ್ತಿನಲ್ಲಿ ಯಾವ ದೇಶವೂ ಘನತೆವೆತ್ತ ಸಮಾಜವನ್ನು ಕಟ್ಟಲು ಸಾಧ್ಯವಾಗಿಲ್ಲ. ಭಾರತದ ಅಸ್ತಿತ್ವ ಇರುವುದು ಅದರ ಬಹುತ್ವದ ಅರ್ಥಪೂರ್ಣ ನಿಭಾವಣೆಯಲ್ಲಿ. ಇದರ ಖಬರಿಲ್ಲದವರು, ನಾಡಿಗೆ ಕೇಡನ್ನೇ ಎಸಗುವರು.