Thursday 12 December 2019

ಕೋಣೆಯಲ್ಲಿ ಬೆಂಕಿ ಬಿದ್ದಿದ್ದರೆ: ಸರ್ವೇಶ್ವರ ದಯಾಳ ಸಕ್ಸೇನ.

ನಿನ್ನ ಮನೆಯ
ಒಂದು ಕೋಣೆಯಲ್ಲಿ ಬೆಂಕಿ ಬಿದ್ದಿದ್ದರೆ
ನೀನು ಮತ್ತೊಂದು
ಕೋಣೆಯಲ್ಲಿ ನಿದ್ರಿಸ ಬಲ್ಲೆಯಾ?

ನಿನ್ನ ಮನೆಯ
ಒಂದು ಕೋಣೆಯಲ್ಲಿ ಹೆಣಗಳು ಕೊಳೆಯುತ್ತಿದ್ದರೆ
ನೀನು ಮತ್ತೊಂದು ಕೋಣೆಯಲ್ಲಿ
ಪ್ರಾರ್ಥನೆ ಮಾಡ ಬಲ್ಲೆಯಾ?

ಹೌದು! ಎನ್ನುವುದಾದರೆ
ನಿನ್ನೊಂದಿಗೆ ನನಗೆ ಮಾತನಾಡುವುದು ಏನೂ ಉಳಿದಿಲ್ಲ.

ದೇಶ ಕಾಗದದಿಂದಾದ ನಕ್ಷೆಯಲ್ಲ
ಒಂದು ಭಾಗ ಹರಿದ ಮೇಲೂ
ಉಳಿದ ಭಾಗ ಮೊದಲಿನಂತೆ ಸ್ವಸ್ಥವಾಗಿರಲು
ಹಾಗು ನದಿ, ಪರ್ವತ, ನಗರ, ಹಳ್ಳಿಗಳೆಲ್ಲ
ಹಾಗೆಯೇ ತಂತಮ್ಮ ಜಾಗದಲ್ಲಿ ಒಟ್ಟಾಗಿ ಕಾಣಲು

ಇದನ್ನು ನೀನು
ಒಪ್ಪುವುದಿಲ್ಲವಾದರೆ
ನನಗೆ ನಿನ್ನೊಂದಿಗಿರಲು ಸಾಧ್ಯವಿಲ್ಲ.

ಈ ಜಗತ್ತಿನಲ್ಲಿ
ಮಾನವ ಜೀವಕ್ಕಿಂತ
ದೊಡ್ಡದು ಯಾವುದೂ ಇಲ್ಲ
ದೇವರು, ಜ್ಞಾನ, ಚುನಾವಣೆ
ಯಾವುದೂ ಅಲ್ಲ
ಕಾಗದದಲ್ಲಿ ಬರೆದ
ಯಾವುದೇ ಒಡಂಬಡಿಕೆಯನ್ನು
ಹರಿದು ಹಾಕಬಹುದು
ಭೂಮಿಯ ಏಳು ಪದರಗಳಡಿ
ಹೂತು ಹಾಕಲೂಬಹುದು

ಆತ್ಮಸಾಕ್ಷಿಯೇ
ಹೆಣಗಳ ರಾಶಿಯ ಮೇಲೆ ನಿಂತಿದ್ದರೆ
ಅಲ್ಲಿ ಅಂಧಕಾರವಿದೆ
ಬಂದೂಕಿನ ನಳಿಕೆಯಲ್ಲಿ
ಅಧಿಕಾರ ನಡೆಯುತ್ತಿದ್ದರೆ
ಅದು ಆಯುಧಗಳ ದಂಧೆಯಾಗಿದೆ

ನೀನಿದನ್ನು ಒಪ್ಪದಿದ್ದಲ್ಲಿ
ನಿನ್ನನ್ನು ಒಂದೂ ಕ್ಷಣವೂ ಸಹಿಸಲಾರೆ.

ನೆನಪಿಡು
ಒಂದು ಮಗುವಿನ ಹತ್ಯೆ
ಒಂದು ಹೆಂಗಸಿನ ಸಾವು
ಗುಂಡಿನಿಂದ ಛಿದ್ರಗೊಂಡ 
ಒಬ್ಬ ಮನುಷ್ಯನ ದೇಹ
ಅದು ಯಾವುದೇ ಸರ್ಕಾರದ ಪತನ ಮಾತ್ರವಲ್ಲ
ಅದು ಇಡೀ ರಾಷ್ಟ್ರದ ಪತನ.

ಹೀಗೇ ರಕ್ತ ಹರಿದು
ಭೂಮಿಯಲ್ಲಿ ಇಂಗುವುದಿಲ್ಲ
ಆಕಾಶದಲ್ಲಿ ಹಾರುವ
ಬಾವುಟವನ್ನೂ ಕಪ್ಪಾಗಿಸುತ್ತದೆ.

ಯಾವ ನೆಲದಲ್ಲಿ
ಸೈನಿಕರ ಬೂಟುಕಾಲುಗಳ ಗುರುತಿರುವುದೋ
ಅಲ್ಲಿ ಅವುಗಳ ಮೇಲೆ
ಹೆಣಗಳು ಬೀಳುತ್ತಿರುತ್ತವೋ
ಆ ನೆಲ ನಿನ್ನ ರಕ್ತದಲ್ಲಿ ಬೆಂಕಿಯಾಗಿ ಹರಿಯದಿದ್ದಲ್ಲಿ
ನೀನು ಬರಡಾಗಿರುವೆ ಎಂದು ತಿಳಿದುಕೋ
ನಿನಗಲ್ಲಿ ಉಸಿರಾಡಲೂ ಹಕ್ಕಿಲ್ಲ
ನಿನಗಾಗಿ ಈ ಜಗತ್ತೂ ಸಹ
ಇಲ್ಲವೆಂದೇ ತಿಳಿ.

ಕೊನೆಗೊಂದು ಮಾತು
ಸ್ಪಟಿಕದಷ್ಟೇ ಸ್ಪಷ್ಟ
ಯವುದೇ ಕೊಲೆಗಡುಕನನ್ನು ಎಂದಿಗೂ ಕ್ಷಮಿಸಬೇಡ
ಅವನು ನಿನ್ನ ಗೆಳೆಯನೆ ಆಗಿರಲಿ
ಧರ್ಮದ ಗುತ್ತಿಗೆ ಪಡೆದವನಿರಲಿ
ಅಥವಾ ಪ್ರಜಾತಂತ್ರದ ಸ್ವಯಂಘೋಷಿತ
ಕಾವಲುಗಾರನೇ ಆಗಿರಲಿ.

ಕವಿ: ಸರ್ವೇಶ್ವರ ದಯಾಳ ಸಕ್ಸೇನ.
ಕನ್ನಡಕ್ಕೆ: ಪಿ. ಸುನೀತ ಹೆಬ್ಬಾರ್

No comments:

Post a Comment