ಸರ್ವವ್ಯಾಪಿ ಬೇನೆಗಳೂ ಮಾನವನ ಪೂರ್ವಗ್ರಹಗಳೂ- ಅಮಿತಾಂಗ್ಷು ಆಚಾರ್ಯಅನುವಾದ : ನಾ ದಿವಾಕರ
ಕ್ರಿಸ್ತಶಕ 1900ರ ಆಸುಪಾಸಿನ ಸನ್ನಿವೇಶ. ನ್ಯೂಯಾರ್ಕಿನ ಐಷಾರಾಮಿ ವಸತಿ ಸಮುಚ್ಚಯದಲ್ಲಿ ಒಂದು ವಿಚಿತ್ರ ಘಟನೆ ಸಂಭವಿಸಿತು. ಇಲ್ಲಿ ನೆಲೆಸಿದ್ದ ವಿದೇಶಿ ಮೂಲದ ನೆಲಸಿಗರಿಗೆ ನಿಗೂಢ ರೀತಿಯಲ್ಲಿ ಟೈಫಾಯ್ಡ್ ರೋಗ ಕಾಡಲಾರಂಭಿಸಿತು. ಸಾಮಾನ್ಯವಾಗಿ ಕಡುಬಡತನ ಮತ್ತು ಅನೈರ್ಮಲ್ಯ ಹೆಚ್ಚಾಗಿರುವ ಪ್ರದೇಶಗಳಲ್ಲಿ ಕಾಣಿಸಿಕೊಳ್ಳುವ ಈ ಕಾಯಿಲೆ ಇಷ್ಟೊಂದು ಶ್ರೀಮಂತ, ಐಷಾರಾಮಿ ಬಡಾವಣೆಯಲ್ಲಿರುವ ಜನರಿಗೆ ಹೇಗೆ ತಗುಲಿದೆ ಎಂಬ ಪ್ರಶ್ನೆ ನ್ಯೂಯಾರ್ಕ್ ನಗರದ ವೈದ್ಯ ಲೋಕವನ್ನು ಕಾಡಲಾರಂಭಿಸಿತು.
ಇದನ್ನು ಕಂಡುಹಿಡಿಯಲು ಜಾರ್ಜ್ ಸೋಪರ್ ಎಂಬ ಹೆಸರಿನ ಸ್ಯಾನಿಟರಿ ಇಂಜಿನಿಯರ್ ಒಬ್ಬರಿಂದ ತನಿಖೆ ನಡೆಸಲಾಯಿತು. ಈ ತನಿಖೆಯಿಂದ, ಈ ವಸತಿ ಸಮುಚ್ಚಯದಲ್ಲಿ ಟೈಫಾಯ್ಡ್ ತಗುಲಿದ್ದ ಕನಿಷ್ಟ ಎಂಟು ಮನೆಗಳಲ್ಲಿ ಮೇರಿ ಮಲ್ಲೋನ್ ಹೆಸರಿನ ಐರಿಷ್ ವಲಸಿಗ ಮಹಿಳೆ ಅಡುಗೆ ಕೆಲಸ ಮಾಡುತ್ತಿದ್ದಳೆಂದು ತಿಳಿದುಬಂದಿತ್ತು. ಆದರೆ ಮಲ್ಲೋನ್ ಸ್ವತಃ ಆರೋಗ್ಯವಂತಳಾಗಿದ್ದಳು. ಆದಾಗ್ಯೂ ಪ್ರತಿಯೊಂದು ಮನೆಯವರಿಗೆ ಟೈಫಾಯ್ಡ್ ಸೋಂಕು ತಗುಲಿದಾಗಲೂ ಮಲ್ಲೋನ್ ಅಲ್ಲಿ ಕೆಲಸ ಬಿಟ್ಟು ಮತ್ತೊಂದು ಮನೆಯಲ್ಲಿ ನೌಕರಿ ಪಡೆಯಬೇಕಾಯಿತು. ಇದನ್ನು ಗಮನಿಸಿದ ಸೋಪರ್, ಮಲ್ಲೋನ್ ಕುರಿತು ಮಾಹಿತಿ ಸಂಗ್ರಹಿಸಲಾರಂಭಿಸಿದ. ಆಕೆ ಎಲ್ಲಿ ವಾಸಿಸುತ್ತಾಳೆ ಎಂದು ಒತ್ತಾಯ ಮಾಡಿ ತಿಳಿದುಕೊಂಡ. ಅಂತಿಮವಾಗಿ ಆಕೆಯಿಂದಲೇ ಟೈಫಾಯ್ಡ್ ಹರಡಿದೆ ಎಂದು ತೀರ್ಮಾನಕ್ಕೂ ಬಂದ. ಆದರೆ ಮಲ್ಲೋನ್ ತನ್ನ ತಪಾಸಣೆಗೆ ಒಪ್ಪದೆ ಪ್ರತಿಭಟಿಸಿದಾಗ ಸೋಪರ್, ಪೊಲೀಸರ ಮನವೊಲಿಸಿ ಆಕೆಯನ್ನು ಬಂಧಿಸುವಂತೆ ಮಾಡಿದ್ದ.
ಕೇವಲ ಊಹೆಗಳನ್ನೇ ಆಧರಿಸಿ ಬಂಧಿಸಲಾಗಿದ್ದ ಮಲ್ಲೋನ್ ಅವರ ರಕ್ತ, ಮೂತ್ರ ಮತ್ತು ಮಲ ಪರೀಕ್ಷೆಯನ್ನು ಒತ್ತಾಯಪೂರ್ವಕವಾಗಿ ಮಾಡಲಾಯಿತು. ಇದರ ಫಲಿತಾಂಶ ಬಂದ ನಂತರ ಆಕೆಯ ರಕ್ತ, ಮಲ ಮೂತ್ರದಲ್ಲಿ ಟೈಫಾಯ್ಡ್ ಉಂಟುಮಾಡುವ ಸಲ್ಮೋನೆಲಾ ಟೈಫಿ ಬ್ಯಾಕ್ಟೀರಿಯಾ ಕಂಡುಬಂದಿತ್ತು. ಕೂಡಲೇ ಮಲ್ಲೋನ್ ಸಾರ್ವಜನಿಕರ ದೃಷ್ಟಿಯಲ್ಲಿ ಅಪರಾಧಿಯಾಗಿದ್ದಳು. ಆಕೆಯನ್ನು ಶಿಕ್ಷಿಸಲು ಆಗ್ರಹ ತೀವ್ರವಾಗತೊಡಗಿತು. ತಾವು ಆರೋಗ್ಯವಾಗಿದ್ದರೂ ಮತ್ತೊಬ್ಬರಿಗೆ ರೋಗ ಹರಡುವ ರೋಗೋತ್ಪಾದಕ ಬ್ಯಾಕ್ಟೀರಿಯಾಗಳನ್ನು ಮನುಷ್ಯರು ಹೊಂದಿರಲು ಸಾಧ್ಯ ಎಂದು ಸೋಪರ್ ಕಂಡುಹಿಡಿದಿದ್ದ. ಆರೋಗ್ಯಕರ ರೋಗವಾಹಕರನ್ನು ಕಂಡುಹಿಡಿದ ಖ್ಯಾತಿ ಸೋಪರ್ ಗೆ ಲಭಿಸಿತ್ತು. ಮತ್ತೊಂದೆಡೆ ಮಲ್ಲೋನ್ ಅಪಖ್ಯಾತಿಗೆ ಒಳಗಾಗಿದ್ದೇ ಅಲ್ಲದೆ ಟೈಫಾಯ್ಡ್ ಮೇರಿ ಎಂದೇ ಕುಖ್ಯಾತಿ ಪಡೆದುಬಿಟ್ಟಳು.
ದಶಕಗಳ ಕಾಲ ಟೈಫಾಯ್ಡ್ ಮೇರಿ ಎನ್ನುವ ಅಡ್ಡ ಹೆಸರನ್ನೇ ಬಳಸಿ ಆಕೆಯನ್ನು ಸತತವಾಗಿ ಅಪಮಾನಿಸಿದ್ದೇ ಅಲ್ಲದೆ , ರುಚಿಕರ ಅಡುಗೆ ಮಾಡುತ್ತಿದ್ದ , ಐರ್ಲೆಂಡಿನಿಂದ ವಲಸೆ ಬಂದಿದ್ದ, ಬಡತನದ ಬೇಗೆ ಅನುಭವಿಸಿದ್ದ, ಅನಕ್ಷರಸ್ಥೆ, ಮಲ್ಲೋನ್ ಸಾಕಷ್ಟು ಹಿಂಸೆ ಅನುಭವಿಸಬೇಕಾಯಿತು. ವೈದ್ಯಕೀಯ ಜಗತ್ತು ಮತ್ತು ಮಾಧ್ಯಮಗಳು ಮಲ್ಲೋನ್ ಅವರನ್ನು ರೋಗ ಹರಡುವ ಮಹಿಳೆ ಎಂದೇ ಕರೆಯುವ ಮೂಲಕ ಆಕೆಯನ್ನು ಸಾಮೂಹಿಕ ಹಂತಕಿಯಂತೆ ಚಿತ್ರಿಸಿದವು. ಮಲ್ಲೋನ್ ಜನಸಾಮಾನ್ಯರ ದೃಷ್ಟಿಯಲ್ಲಿ ರಕ್ಕಸಿಯಾಗಿಬಿಟ್ಟಳು. ಆಕೆಯಿಂದ ಒಟ್ಟು 51 ಜನರಿಗೆ ಟೈಫಾಯ್ಡ್ ತಗುಲಿದೆ ಎಂದು ಹೇಳಲಾಗಿತ್ತು. ಆದರೆ ನಿಖರವಾದ ಮಾಹಿತಿ ಎಲ್ಲಿಯೂ ಇರಲಿಲ್ಲ.
ಶತ್ರುವಿನ ಬೆನ್ನಟ್ಟಿ :
ನಾರ್ತ್ ಬ್ರದರ್ ದ್ವೀಪದಲ್ಲಿ ನದಿ ತೀರದಲ್ಲಿದ್ದ ಆಸ್ಪತ್ರೆಯೊಂದರಲ್ಲಿ 26 ವರ್ಷಗಳ ಕಾಲ ಪ್ರತ್ಯೇಕತೆಯನ್ನು ಅನುಭವಿಸಿದ ಮಲ್ಲೋನ್ ಏಕಾಂಗಿಯಾಗಿಯೇ ಬದುಕು ಸವೆಸಿ 1938ರಲ್ಲಿ ಮೃತಪಟ್ಟಿದ್ದಳು. 63 ವರ್ಷಗಳ ನಂತರ ಆಕೆಯನ್ನು ನಿರಪರಾಧಿ ಎಂದು ಘೋಷಿಸಿದ್ದು ಯಾವುದೇ ನ್ಯಾಯಾಲಯವಲ್ಲ, ಒಬ್ಬ ಲೇಖಕ ಮತ್ತು ಬಾಣಸಿಗ. ಮಲ್ಲೋನ್ ಜೊತೆಯಲ್ಲಿ ಅಡುಗೆ ಮಾಡುತ್ತಿದ್ದ ಆಂಟೊನಿ ಬೋರ್ಡೇನ್ 2001ರಲ್ಲಿ ಬರೆದ ಟೈಫಾಯ್ಡ್ ಮೇರಿ ; ಅನ್ ಅರ್ಬನ್ ಹಿಸ್ಟಾರಿಕಲ್ ಎಂಬ ಕೃತಿಯಲ್ಲಿ ಆಕೆಯನ್ನು ಕುರಿತು ಬಹಳ ಸಂವೇದನಾಶೀಲತೆಯಿಂದ ಹೀಗೆ ಹೇಳಿದ್ದರು : “ ಅಡುಗೆ ಕೆಲಸದವರು ಅಸ್ವಸ್ಥರಾಗಿದ್ದರೂ ಕೆಲಸ ಮಾಡುತ್ತಾರೆ. ಅವರು ಸದಾ ಹೀಗೆಯೇ ಮಾಡಿದ್ದಾರೆ. ಅನೇಕ ವೇಳೆ ನಿಮಗೆ ಕೆಲಸ ಮಾಡದಿದ್ದರೆ ಸಂಬಳ ದೊರೆಯುವುದಿಲ್ಲ. ನೀವು ಬೆಳಿಗ್ಗೆ ಏಳುತ್ತಲೇ ಸೀನುತ್ತಾ, ಮೂಗು ಸೋರುತ್ತಲೇ ಇದ್ದಂತೆ , ಗಂಟಲು ಕಿರಿಕಿರಿ ಇದ್ದಂತೆ ಏಳುತ್ತೀರಿ. ಆದರೂ ನೀವು ಕೆಲಸಕ್ಕೆ ಹಾಜರಾಗುತ್ತೀರಿ. ನಿಮ್ಮ ಇಡೀ ದಿನವನ್ನು ಕೆಲಸದಲ್ಲೇ ಕಳೆಯುತ್ತೀರಿ. ನಿಮ್ಮ ಕುತ್ತಿಗೆಗೆ ಒಂದು ಬಟ್ಟೆ ಸುತ್ತಿಕೊಂಡಿರುತ್ತೀರಿ. ನಿಮ್ಮ ಕೈಲಾದಷ್ಟು ಮಟ್ಟಿಗೆ ದಕ್ಷತೆಯಿಂದ ಕೆಲಸ ಮಾಡುತ್ತೀರಿ. ಅಸ್ವಸ್ಥತೆ ಮತ್ತು ನೋವು ಹೊತ್ತುಕೊಂಡೇ ಕೆಲಸ ಮಾಡುವುದು ನಿಮಗೆ ಹೆಮ್ಮೆಯ ವಿಚಾರ ”.
ನ್ಯೂಯಾರ್ಕ್ ನಗರಕ್ಕೆ ಟೈಫಾಯ್ಡ್ ಹೊಸತೇನೂ ಆಗಿರಲಿಲ್ಲ. ಅಪರೂಪವೂ ಆಗಿರಲಿಲ್ಲ. ಆದರೆ ಮಲ್ಲೋನ್ ಅವರನ್ನು ಸಾರ್ವಜನಿಕರ ಶತ್ರು ಎನ್ನುವಂತೆ ಚಿತ್ರಿಸಲಾಯಿತು. ಟೈಫಾಯ್ಡ್ ರೋಗಕ್ಕಿಂತಲೂ ಮಲ್ಲೋನ್ ಭೀಕರವಾಗಿ ಕಂಡುಬಿಟ್ಟಳು. ಆಕೆ ಮಾಡಿದ ಮಹಾಪರಾಧ ಎಂದರೆ, ಲಾಂಗ್ ಐಲ್ಯಾಂಡ್ ಮತ್ತು ಬ್ರಾಂಕ್ಸ್ ಪ್ರಾಂತ್ಯವನ್ನು ಪ್ರತ್ಯೇಕಿಸಿದ ವರ್ಗ ವಿಭಜನೆಯನ್ನು ಟೈಫಾಯ್ಡ್ ಹರಡುವ ರೋಗವಾಹಕ ಬ್ಯಾಕ್ಟೀರಿಯಾ ಲೆಕ್ಕಿಸುವುದಿಲ್ಲ ಎಂದು ನ್ಯೂಯಾರ್ಕ್ ನಗರದ ಶ್ರೀಮಂತ ಮತ್ತು ಪ್ರಬಲ ವರ್ಗಗಳಿಗೆ ನೆನಪಿಸಿದ್ದಳು.
ಮಾನವ ಮತ್ತು ರೋಗವಾಹಕ ಬ್ಯಾಕ್ಟೀರಿಯಾ ಮತ್ತಿತರ ವೈರಾಣುಗಳ ನಡುವೆ ವಿಶಿಷ್ಟವಾದ ಸಂಬಂಧವಿದೆ. ರೋಗವಾಹಕಗಳು ಜೀವಿಸಿ, ವೃದ್ಧಿಸಲು ಬಯಸುತ್ತವೆ. ಹಾಗಾಗಿ ಮನುಷ್ಯರನ್ನು ಕೊಲ್ಲುವುದು ಅವುಗಳ ದೃಷ್ಟಿಯಲ್ಲಿ ತಮ್ಮ ಅಸ್ತಿತ್ವಕ್ಕೇ ಧಕ್ಕೆ ಉಂಟುಮಾಡಿದಂತಾಗುತ್ತದೆ. ಹಾಗಾಗಿ ಮಾನವರು ಮತ್ತು ರೋಗವಾಹಕಗಳು ಪರಸ್ಪರ ಪೂರಕವಾಗಿ ಬದುಕಲಿಚ್ಚಿಸುವುದನ್ನು ಕಾಣಬಹುದು. ಕೆಲ ಕಾಲದ ನಂತರ ಎರಡೂ ಜೀವಿಗಳ ನಡುವೆ ಒಪ್ಪಂದ ಏರ್ಪಟ್ಟು ಮನುಷ್ಯ ಈ ರೋಗವಾಹಕಗಳ ಜೊತೆಯಲ್ಲೇ ಬದುಕುವುದನ್ನು ಕಲಿಯುತ್ತಾನೆ. ನಾವು ಹಿಂದೆಯೂ ಹೀಗೆ ಮಾಡಿದ್ದೇವೆ, ಈಗ ನೋವೆಲ್ ಕೊರೋನಾ ವೈರಾಣುವಿನೊಡನೆಯೂ ಹೀಗೆಯೇ ಬದುಕುತ್ತೇವೆ.
ಕೊರೋನಾದಂತಹ ಸರ್ವವ್ಯಾಪಿ ರೋಗ ಹರಡಿದಾಗ ನಾವು ಕಾಣುವ ಮನುಷ್ಯ ಮತ್ತು ರೋಗವಾಹಕದ ಸಹಜೀವನ, ಇದರಿಂದ ಉಂಟಾಗುವ ಸಾಮಾಜಿಕ ಪರಿಣಾಮಗಳಿಗೆ ವ್ಯತಿರಿಕ್ತವಾಗಿರುತ್ತದೆ. ರೋಗಗಳಿಗೆ ಸಾಮಾಜಿಕ ಆದ್ಯತೆಗಳಿರುವುದಿಲ್ಲ. ಹಾಗೆಯೇ ರೋಗವಾಹಕಗಳು ಜನಾಂಗ, ವರ್ಗ, ಮತಧರ್ಮ, ಲಿಂಗ ಅಥವಾ ಮತ್ತಾವುದೇ ಅಸ್ಮಿತೆಗಳನ್ನು ಪರಿಗಣಿಸುವುದಿಲ್ಲ. ಆದರೆ ಇತಿಹಾಸದೊಳಗೆ ಒಮ್ಮೆ ಇಣುಕಿ ನೋಡಿದಾಗ, ಪ್ರತಿಯೊಂದು ಬಾರಿ ಸರ್ವವ್ಯಾಪಿ ಸಾಂಕ್ರಾಮಿಕ ರೋಗಗಳು ಕಂಡುಬಂದಾಗಲೂ ಮಾನವ ಸಮಾಜದಲ್ಲಿ ಆಳವಾಗಿ ಬೇರೂರಿರುವ ಸಾಮಾಜಿಕ ಪೂರ್ವಗ್ರಹಗಳು ಮರುಕಳಿಸಿರುವುದನ್ನು ಗಮನಿಸಬಹುದು. ಇದರ ಪರಿಣಾಮಗಳೂ ಭೀಕರವಾಗಿರುವುದನ್ನೂ ಗಮನಿಸಬಹುದು.
1348ರಲ್ಲಿ ಯೂರೋಪ್ ಖಂಡವನ್ನು ಅಲುಗಾಡಿಸಿದ ಬಬೋನಿಕ್ ಪ್ಲೇಗ್ ಸಂದರ್ಭದಲ್ಲಿ, ಕ್ಯಾಥೊಲಿಕ್ ಚರ್ಚ್ ಇದನ್ನು ಕ್ರೈಸ್ತ ಧರ್ಮದ ವಿರುದ್ಧ ಯಹೂದಿಗಳ ಪಿತೂರಿ ಎಂದೇ ಬಣ್ಣಿಸಿತ್ತು. ಯಹೂದಿಗಳು ಈ ರೋಗವನ್ನು ಹರಡಲು ಬಾವಿಗಳಿಗೆ ವಿಷ ಬೆರೆಸಿದ್ದಾರೆ ಎಂದು ಆರೋಪಿಸಿದ ಕ್ಯಾಥೊಲಿಕ್ ಕ್ರೈಸ್ತರು, ಯಹೂದಿಯರ ಮೇಲೆ ತೀವ್ರ ದೌರ್ಜನ್ಯ ನಡೆಸಿ ಚಿತ್ರಹಿಂಸೆ ನೀಡಿದ್ದೇ ಅಲ್ಲದೆ, ಯಹೂದ್ಯರಿಂದ ಒತ್ತಾಯಪೂರ್ವಕವಾಗಿ ತಪ್ಪೊಪ್ಪಿಗೆಯನ್ನೂ ಪಡೆದಿದ್ದರು. ಇದಾದ ಕೆಲವೇ ದಿನಗಳಲ್ಲಿ ಸಾವಿರಾರು ಯಹೂದ್ಯರ ಸುಟ್ಟ ಮೃತದೇಹಗಳಿಂದ ವಿಷವಾಯು ಹರಡಲಾರಂಭಿಸಿ, ಯೂರೋಪಿನ ಸ್ಟ್ರಾಸ್‍ಬೋರ್ಗ್, ಕೊಲೋನ್, ಬೇಸಲ್ ಮತ್ತು ಮೈನ್ಜ್ ಪ್ರಾಂತ್ಯಗಳ ವಾತಾವರಣದಲ್ಲಿ ವ್ಯಾಪಿಸಿತ್ತು.
ಯೂರೋಪ್‍ನ ರೋಮಾ ಸಮುದಾಯ ಇದೇ ರೀತಿಯ ದೌರ್ಜನ್ಯ ಎದುರಿಸಿತ್ತು. 1997ರಲ್ಲಿ ಪ್ರಕಟವಾದ ತಮ್ಮ “ ಸ್ಟೋರಿಯಾ ಡೆಗ್ಲಿ ಜಿಂಗಾರಿ ಇಟಾಲಿಯಾ” ಎಂಬ ಕೃತಿಯಲ್ಲಿ ಲೇಖಕ ಜಾರ್ಜಿಯೋ ವ್ಯಾಗಿಯೋ ದಾಖಲಿಸಿರುವಂತೆ, 1493 ರಿಂದ 1785ರ ಅವಧಿಯಲ್ಲಿ ಇಟಲಿಯ ಪ್ರಭುತ್ವ 121 ಶಾಸನಗಳನ್ನು ಜಾರಿಗೊಳಿಸಿದ್ದು, ಈ ಶಾಸನಗಳ ಮೂಲಕ ಜಿಂಗಾರಿಗಳ (ರೋಮಾ ಸಮುದಾಯವನ್ನು ಅಪಮಾನಗೊಳಿಸಲೆಂದೇ ಬಳಸಲಾಗುತ್ತಿದ್ದ ಪದ) ಚಲನೆಯನ್ನೇ ನಿರ್ಬಂಧಿಸಿತ್ತು. ರೋಮಾ ಸಮುದಾಯದ ಜನರೇ ಸಾಂಕ್ರಾಮಿಕ ಅಥವಾ ಸರ್ವವ್ಯಾಪಿ ರೋಗಗಳಿಗೆ ಕಾರಣ ಎನ್ನುವ ಪೂರ್ವಗ್ರಹವೇ ಇಂತಹ ಪ್ರಭುತ್ವ ಶಾಸನಗಳಿಗೆ ಕಾರಣವಾಗಿತ್ತು.
ಮಧ್ಯ ಪ್ರಾಚೀನ ಯೂರೋಪ್‍ನಲ್ಲಿ ಪ್ಲೇಗ್ ರೋಗ ಕಾಡಿದಾಗಲೆಲ್ಲಾ, ಸಾಂಪ್ರದಾಯಿಕ ಔಷಧಿ ಬಳಸುವವರಿಂದಲೇ ಹರಡುತ್ತದೆ ಎಂದು ಆರೋಪಿಸಲಾಗುತ್ತಿತ್ತು. ಈ ಜನಸಮುದಾಯಗಳನ್ನು ಮಂತ್ರವಾದಿಗಳು ಎಂದು ಜರೆದು ದೌರ್ಜನ್ಯ ನಡೆಸಲಾಗುತ್ತಿತ್ತು. ಇತಿಹಾಸಕಾರ ಬ್ರಿಯಾನ್ ಲೇವಾಕ್ (2006) ಅವರ ಪ್ರಕಾರ ಯೂರೋಪ್‍ನಲ್ಲಿ 90000 ಸಾವಿರ ಜನರನ್ನು ಮಾಟಮಂತ್ರ ಮಾಡುವ ಆರೋಪದ ಮೇಲೆ ಶಿಕ್ಷೆಗೊಳಪಡಿಸಲಾಗಿತ್ತು. ನಿಖರವಾದ ಮಾಹಿತಿ ಇಲ್ಲವಾದರೂ, ಇವರ ಪೈಕಿ ಬಹುಪಾಲು ಮಹಿಳೆಯರೇ ಇದ್ದುದು ಸತ್ಯ.
ಜೀವಾಣು ಸೂತ್ರಗಳನ್ನು ಕಂಡುಹಿಡಿದ ನಂತರದಲ್ಲಿ ಮಧ್ಯಪ್ರಾಚೀನ ಯುಗದಲ್ಲಿ ಕಂಡುಬಂದಿದ್ದ ಪ್ಲೇಗ್ ಕುರಿತ ನಂಬಿಕೆಗಳು ಅಳಿಸಿಹೋಗಿದ್ದವು. ರೋಗಗಳನ್ನು ಹರಡುವುದು ಮನುಷ್ಯರಲ್ಲ, ಸೂಕ್ಷ್ಮ ಜೀವಾಣುಗಳು ಅಥವಾ ರೋಗವಾಹಕಗಳು ಎಂದು ಜನರಿಗೆ ಅರಿವಾಗಿತ್ತು. ಈ ರೋಗವಾಹಕಗಳು, ಜೀವಾಣುಗಳು ಮನುಷ್ಯ ಮನುಷ್ಯನ ನಡುವೆ, ಮನುಷ್ಯ ಮತ್ತು ಪ್ರಾಣಿಗಳ ನಡುವೆ ನೀರಿನ ಮೂಲಕ, ಆಹಾರದ ಮೂಲಕ, ದೈಹಿಕ ಸ್ಪರ್ಶದ ಮೂಲಕ ಹರಡುತ್ತವೆ ಎಂದು ಜನರಿಗೆ ಅರ್ಥವಾಗತೊಡಗಿತ್ತು. ಈ ಜೀವಾಣುಗಳಿಗೆ ಸಾಮಾಜಿಕ ವರ್ಗೀಕರಣದ ಪರಿವೆ ಇರುವುದಿಲ್ಲ ಎನ್ನುವುದನ್ನೂ ನಾವು ಅರ್ಥಮಾಡಿಕೊಂಡೆವು. ರಾಜಕೀಯ ಸ್ಪರ್ಶವಿಲ್ಲದ, ಅನೈತಿಕತೆ ಇಲ್ಲದ ಈ ಜೀವಾಣುಗಳು ಸಾಂಕ್ರಾಮಿಕ ರೋಗಗಳಿಗೆ ಕಾರಣವಾಗುತ್ತವೆ, ಇವುಗಳನ್ನು ಸೂಕ್ಷ್ಮ ದರ್ಶಕ ಯಂತ್ರಗಳ ಮೂಲಕ ನೋಡಬಹುದೇ ಹೊರತು, ಪೂರ್ವಗ್ರಹಪೀಡಿತ ಮಸೂರಗಳ ಮೂಲಕ ನೋಡಲಾಗುವುದಿಲ್ಲ ಎಂದು ಮಾನವ ಸಮಾಜ ಅರ್ಥಮಾಡಿಕೊಂಡಿತ್ತು.
ಆದರೆ ಸೂಕ್ಷ್ಮ ದರ್ಶಕ ಆ ಕಾಲಘಟ್ಟದ ಸಂಶೋಧನೆಯ ಉಪಕರಣ ಮಾತ್ರ ಆಗಿರಲಿಲ್ಲ. ಅದು ಸಾಮ್ರಾಜ್ಯದ ಅಸ್ತ್ರವಾಗಿತ್ತು. ಉಷ್ಣ ವಲಯದ ಪ್ರದೇಶಗಳಲ್ಲಿ ರೋಗಗಳು ತಾಂಡವಾಡುತ್ತಿದ್ದವು. ಆಂಗ್ಲೋ ಯೂರೋಪಿಯನ್ ಆಡಳಿತಗಾರರ ಸ್ವಾಸ್ಥ್ಯ ಇದರಿಂದ ಹದಗೆಟ್ಟು ಹೋಗಿತ್ತು. ವಸಾಹತು ಪ್ರಜೆಗಳಿಗಿಂತಲೂ ಸೊಳ್ಳೆಗಳು ಇವರ ಪಾಲಿಗೆ ದಂಗೆಕೋರರಂತೆ ಕಂಡುಬಂದವು. ಈ ಸಂದರ್ಭದಲ್ಲಿ ವಸಾಹತುಶಾಹಿ ಸಾಮ್ರಾಜ್ಯಗಳು ಉಷ್ಣವಲಯದ ರೋಗಗಳು ಎಂಬ ವರ್ಗೀಕರಣಕ್ಕೆ ನಾಂದಿ ಹಾಡಲು ಸೂಕ್ಷ್ಮ ದರ್ಶಕ ಯಂತ್ರ ನೆರವಾಗಿತ್ತು. 1817ರಲ್ಲಿ ಕಾಲರಾ ಸ್ಫೋಟಿಸಿದಾಗ, ಇದನ್ನು ಏಷಿಯಾಟಿಕ್ ಕಾಲರಾ ಎಂದು ಹೆಸರಿಸಲಾಯಿತು. ಇದಕ್ಕೆ ಕಾರಣ ಎಂದರೆ ಇದು ಭಾರತದ ಗಂಗಾನದಿಯ ಪ್ರದೇಶದಲ್ಲಿ ಸ್ಥಳೀಯವಾಗಿ ಕಂಡುಬರುವ ವ್ಯಾಧಿ ಎಂದು ನಂಬಲಾಗಿತ್ತು. ಶೀಘ್ರಗತಿಯಲ್ಲಿ ಇದು ಯೂರೋಪ್‍ಗೆ ಹರಡಿತ್ತು. ವಸಾಹತುಗಳಲ್ಲಿ ಸೃಷ್ಟಿಯಾಗುವ ರೋಗಗಳು ವಸಾಹತುಶಾಹಿ ಸಾಮ್ರಾಜ್ಯಗಳನ್ನು ಆಕ್ರಮಿಸುತ್ತವೆ ಎಂಬ ಭೀತಿ ಸೃಷ್ಟಿಸಲಾಯಿತು.
ಇದು ತೀವ್ರತೆರನಾದ, ಗಂಭೀರ ವೈಜ್ಞಾನಿಕ ಅಧ್ಯಯನ ಮತ್ತು ಸಂಶೋಧನೆಗೆ ನಾಂದಿ ಹಾಡಿತ್ತು. 19ನೆಯ ಶತಮಾನದ ವೈದ್ಯಕೀಯ ವಿಜ್ಞಾನ, ಎಲ್ಲ ರೋಗಗಳನ್ನೂ ಸ್ಥಳೀಯ ಸ್ಪರ್ಶದೊಂದಿಗೇ ನೋಡುವ ಪರಿಪಾಠ ಇದ್ದುದನ್ನು ಗಮನಿಸಿ ಈ ಕುರಿತು ವಿಸ್ತೃತವಾಗಿ ಬರೆದ ಇತಿಹಾಸಕಾರ ಪ್ರತೀಕ್ ಚಕ್ರವರ್ತಿ 2010ರ ತಮ್ಮ ಪ್ರಬಂಧವೊಂದರಲ್ಲಿ, ರಾಬರ್ಟ್ ಕೊಚ್ ಕಂಡುಹಿಡಿದ ಕಾಲರಾ ರೋಗವಾಹಕವನ್ನು, ‘ವಿಬ್ರಿಯೋ ಕಾಲರೇ’- ಅಲ್ಪ ವಿರಾಮ ಚಿಹ್ನೆಯಂತಿರುವ ರೋಗವಾಹಕ- ಹೇಗೆ ಉಷ್ಣವಲಯದ ವಾತಾವರಣಗಳಿಗೆ ಮತ್ತು ದೇಹಗಳಿಗೆ ಆರೋಪಿಸಲಾಯಿತು ಎಂದು ವಿವರಿಸಿದ್ದಾರೆ. ವಿಶೇಷವಾಗಿ ವಸಾಹತುಗಳಲ್ಲಿ ನೆಲೆಸುವ ಜನರ ಕರುಳು ಮತ್ತು ಪಿತ್ತರಸ ನಾಳ ರೋಗವಾಹಕಗಳ ಮೂಲ ಎಂದು ಅಭಿಪ್ರಾಯ ಸೃಷ್ಟಿಸಲಾಯಿತು.
ನಂತರದಲ್ಲಿ ಜಗತ್ತನ್ನು ಕಾಡಿದ ಮಹಾ ಬೇನೆ ಎಂದರೆ ಕುಷ್ಟರೋಗ. ಕುಷ್ಟರೋಗಿಗಳು ಸಾಮಾಜಿಕವಾಗಿ ಬಹಿಷ್ಕೃತರಾಗಿಬಿಟ್ಟರು. ಮನುಸ್ಮೃತಿಯಲ್ಲೂ ಸಹ ಕುಷ್ಟರೋಗಿಗಳನ್ನು ಪಾಪಿಷ್ಟರು ಎಂದು ಪರಿಗಣಿಸಿ ಬಹಿಷ್ಕರಿಸುವಂತೆ ಹೇಳಲಾಗಿದೆ. 1891ರಲ್ಲಿ ಪ್ರಕಟವಾದ ಕುಷ್ಟರೋಗ ಆಯೋಗ ತನ್ನ ವರದಿಯಲ್ಲಿ “ ಈ ರೋಗದಿಂದ ಉಂಟಾಗುವ ಸೋಂಕಿನ ಪ್ರಮಾಣ ಅತ್ಯಂತ ಕನಿಷ್ಟವಾಗಿದ್ದು ಅದನ್ನು ನಿರ್ಲಕ್ಷಿಸಬಹುದು ” ಎಂದು ಹೇಳಿದ್ದರೂ ಸಹ ಭಾರತ ಮತ್ತು ಯೂರೋಪ್‍ನಲ್ಲಿನ ಮೇಲ್ವರ್ಗದ ಜನರು ಕುಷ್ಟರೋಗಿಗಳನ್ನು ಸಾರ್ವಜನಿಕವಾಗಿ ನೋಡಕೂಡದು ಎಂದು ನಿರ್ಬಂಧ ವಿಧಿಸಿದರು. ಕುಷ್ಟರೋಗಿಗಳನ್ನು ನೋಡುವುದರಿಂದಲೇ ಹೇಸಿಗೆ ಹುಟ್ಟುತ್ತದೆ, ಜಿಗುಪ್ಸೆಯಾಗುತ್ತದೆ ಎಂದು ಪ್ರಚಾರ ಮಾಡಲಾರಂಭಿಸಿದರು. ಇದರ ಪರಿಣಾಮ 1898ರ ಕುಷ್ಟರೋಗ ಕಾಯ್ದೆ ಜಾರಿಗೆ ಬಂದಿತ್ತು. ಇದು ಕುಷ್ಟರೋಗಿಗಳನ್ನು ಸಾಂಸ್ಥೀಕರಣಗೊಳಿಸಿತ್ತು. ಸಂತಾನ ಪ್ರಕ್ರಿಯೆಯನ್ನು ತಡೆಗಟ್ಟಲು ಕುಷ್ಟರೋಗಿಗಳನ್ನೂ ಪ್ರತ್ಯೇಕಿಸಿ, ಪುರುಷ ಮಹಿಳೆಯರನ್ನು ಪ್ರತ್ಯೇಕವಾಗಿ ಇರಿಸಲಾಗುತ್ತಿತ್ತು. ಈ ಎಲ್ಲ ಕ್ರಮಗಳನ್ನೂ ಕೈಗೊಂಡಿದ್ದು ವಸಾಹತುಶಾಹಿ ಸಾಮ್ರಾಜ್ಯದ ಗಣ್ಯ ಸಮಾಜದವರನ್ನು ಓಲೈಸುವ ಉದ್ದೇಶದಿಂದ.
ವಸಾಹತುಶಾಹಿ ವಿಜ್ಞಾನ ಸಾಂಕ್ರಾಮಿಕ ರೋಗಗಳನ್ನು ಉಷ್ಣವಲಯಗಳಿಗೆ ಸಮೀಕರಿಸುವುದರಲ್ಲಿ ಯಶಸ್ವಿಯಾಗಿದ್ದರೆ , ಸಾಹಿತ್ಯ ಲೋಕ ಇದನ್ನು ಮತ್ತಷ್ಟು ಮೂರ್ತೀಕರಿಸಿತ್ತು. ಥಾಮಸ್ ಮ್ಯಾನ್ ಅವರ ‘ಡೆತ್ ಇನ್ ವೆನಿಸ್’ ಕಾದಂಬರಿಯಲ್ಲಿ, ಕಾಲರಾ ಸಾಂಕ್ರಾಮಿಕ ರೋಗ ನಗರದಲ್ಲಿ ಹರಡುವ ಕಥನವಿದ್ದು, ಇದರಲ್ಲಿ ಈ ರೋಗವನ್ನು ಭಾರತೀಯ ಕಾಲರಾ ಎಂದು ಬಣ್ಣಿಸಲಾಗಿದೆ. “ ಈ ಭಾರತೀಯ ಕಾಲರಾ ಗಂಗಾ ತೀರದ ಕೊಳೆಗೇರಿಗಳಲ್ಲಿ ಸೃಷ್ಟಿಯಾಗಿ, ಜನರು ಹತ್ತಿರ ಸುಳಿಯಲೂ ನಿರಾಕರಿಸುವ, ನಿರುಪಯುಕ್ತ ಭೂಮಿಯಿಂದ ಹೆಣಸುಟ್ಟ ಕಮಟು ವಾಸನೆಯೊಂದಿಗೆ ಹರಡುತ್ತದೆ,,, ” ಎಂದು ಕಾದಂಬರಿಕಾರ ಹೇಳುತ್ತಾನೆ.
ಸಾಂಕ್ರಾಮಿಕ ಪೌರಸ್ತ್ಯ:
ಈ ರೀತಿಯ ವಸಾಹತುಶಾಹಿ ರಾಚನಿಕತೆಯನ್ನು ಸಂಶೋಧಕ ಅಲೆಕ್ಸಾಂಡರ್ ವೈಟ್ ತನ್ನ 2018ರ ಪ್ರಬಂಧವೊಂದರಲ್ಲಿ “ ಸಾಂಕ್ರಾಮಿಕ ಪೌರಸ್ತ್ಯ ” ಎಂದು ಗುರುತಿಸುತ್ತಾನೆ. ಈ ರಾಚನಿಕತೆಯ ಚೌಕಟ್ಟಿನಲ್ಲೇ ರೋಗಗಳನ್ನು ಗುರುತಿಸುವುದನ್ನೂ ಉಲ್ಲೇಖಿಸುತ್ತಾನೆ. ಉದಾಹರಣೆಗೆ, 1826ರ ಏಷಿಯಾಟಿಕ್ ಕಾಲರಾ, 1846ರ ಏಷಿಯಾಟಿಕ್ ಪ್ಲೇಗ್, 1956ರ ಏಷಿಯಾಟಿಕ್ ಫ್ಲೂ, 1900ರ ರಿಫ್ಟ್ ವ್ಯಾಲಿ ಜ್ವರ, 2012ರ ಮದ್ಯ ಪ್ರಾಚ್ಯ ಉಸಿರಾಟದ ತೊಂದರೆ, 1968ರ ಹಾಂಕಾಂಗ್ ಫ್ಲೂ, ಇತ್ಯಾದಿ. ಈಗ ವಿಶ್ವ ಆರೋಗ್ಯ ಸಂಸ್ಥೆ ಹೊಸ ಸಂಹಿತೆಯನ್ನು ರೂಪಿಸಿದ್ದು, ಇದರ ಅನ್ವಯ ಸಾಂಕ್ರಾಮಿಕ ರೋಗಗಳನ್ನು ವೈದ್ಯಕೀಯ ಭಾಷೆಯಲ್ಲಿ ತಟಸ್ಥ ರೀತಿಯಲ್ಲಿ ಹೆಸರಿಸುವುದು ಕಡ್ಡಾಯವಾಗಿದೆ.
ಆದಾಗ್ಯೂ ಸಾಂಕ್ರಾಮಿಕ ಬೇನೆಗಳನ್ನು ಮತ್ತು ರೋಗಗಳನ್ನು ಸಾಮಾಜಿಕ ನೆಲೆಯಲ್ಲಿ ಜನಾಂಗೀಯ, ಲಿಂಗಾಧಾರಿತ, ಲೈಂಗಿಕ ಆದ್ಯತೆಯ ಮತ್ತು ಭೌಗೋಳಿಕ ಭೂಮಿಕೆಯ ಮೇಲೆ ಗುರುತಿಸುವುದು ಇಂದಿಗೂ ಮುಂದುವರೆದಿದೆ. ಅಮೆರಿಕದ ಟ್ರಂಪ್ ಸರ್ಕಾರ ಕೋವಿದ್ 19ನನ್ನು ಚೀನಾ ವೈರಾಣು ಎಂದೇ ಉಲ್ಲೇಖಿಸುತ್ತಿದೆ. ಕೆಲವರು ಇದನ್ನು ‘ಕುಂಗ್ ಫ್ಲೂ’ ಎಂದೂ ಕರೆಯುತ್ತಿದ್ದಾರೆ. ಈ ನಾಮಕರಣ ಪ್ರಕ್ರಿಯೆಯಲ್ಲೇ ಪೂರ್ವಗ್ರಹ ಎದ್ದು ಕಾಣುತ್ತದೆ. ಹೆಚ್‍ಐವಿ/ಏಡ್ಸ್ ಕಾಯಿಲೆ ಕಾಣಿಸಿಕೊಂಡ ಸಂದರ್ಭದಲ್ಲಿ ಅದನ್ನು “ Gay Related Immuno Deficiency ” (GRID)ಎಂದೇ ಹೆಸರಿಸಲಾಗಿತ್ತು. ಈ ಹೆಸರು ಅಲ್ಪ ಕಾಲವೇ ಪ್ರಚಲಿತವಾಗಿದ್ದರೂ, ಅಮೆರಿಕದಲ್ಲಿ ವಿದ್ಯುನ್ಮಾನ ಧರ್ಮ ಪ್ರಚಾರಕರು 1980ರ ದಶಕದಿಂದಲೇ ಈ ಕಾಯಿಲೆಯನ್ನು “ಗೇ ಪ್ಲೇಗ್” ಎಂದು ಹೇಳುತ್ತಿದ್ದುದನ್ನು ಇದು ಪುಷ್ಟೀಕರಿಸಿತ್ತು. ಇದು ದ್ವಿಲಿಂಗಿಗಳಿಗೆ ಲೈಂಗಿಕವಾಗಿ ಅಡ್ಡಹಾದಿ ಅನುಸರಿಸಿದ್ದಕ್ಕೆ ದೇವರು ನೀಡಿದ ಶಿಕ್ಷೆ ಎಂದೇ ಧರ್ಮ ಪ್ರಚಾರಕರು ದೂಷಿಸುತ್ತಿದ್ದರು. ಇಂದಿಗೂ ಸಹ ಹಲವು ದೇಶಗಳ ಶಾಸನಗಳಲ್ಲಿ ಹೆಚ್‍ಐವಿ/ಏಡ್ಸ್ ಕಾಯಿಲೆ ದ್ವಿಲಿಂಗಿಗಳಿಗೇ ಹೆಚ್ಚು ತಗುಲುತ್ತದೆ ಎಂದು ಉಲ್ಲೇಖಿಸಿರುವುದನ್ನು ಗಮನಿಸಬಹುದು. ಈ ದೇಶಗಳಲ್ಲಿ ದ್ವಿಲಿಂಗಿಗಳು ರಕ್ತದಾನ ಮಾಡುವ ಅವಕಾಶವನ್ನೂ ಹೊಂದಿರುವುದಿಲ್ಲ.
ಇತಿಹಾಸವನ್ನು ಗಮನಿಸಿದಾಗ ನಮಗೆ ಅರ್ಥವಾಗುವ ಒಂದು ಸಂಗತಿ ಎಂದರೆ, ಮಾನವ ಸಮಾಜ ರೋಗ ಉಂಟುಮಾಡುವ ರೋಗವಾಹಕಗಳನ್ನು ಉತ್ತಮವಾಗಿ ನಿರ್ವಹಿಸಿ ಎದುರಿಸಿದೆ, ಆದರೆ ಮಾನವ ಸಮಾಜದಲ್ಲಿನ ಪೂರ್ವಗ್ರಹಗಳನ್ನು ಸಮರ್ಥವಾಗಿ ಎದುರಿಸಲಾಗಿಲ್ಲ. ಸರ್ವವ್ಯಾಪಿ ಬೇನೆಗಳು ದ್ವೇಷ ಹುಟ್ಟಿಸುವುದಿಲ್ಲ ಆದರೆ ದ್ವೇಷ ಹೆಚ್ಚಿಸಲು ನೆರವಾಗುತ್ತವೆ. ಚೀನಾ ಸರ್ಕಾರ ಕೋವಿದ್ 19 ಬೇನೆಯನ್ನು ಸಮರ್ಥವಾಗಿ ನಿಯಂತ್ರಿಸದೆ, ಎಲ್ಲೆಡೆ ವ್ಯಾಪಿಸುವಂತೆ ಮಾಡಿರುವುದರ ಹಿಂದೆ ಅಮೆರಿಕವನ್ನು ದುರ್ಬಲಗೊಳಿಸುವ ಪಿತೂರಿ ಅಡಗಿದೆ ಎಂದು ಟ್ರಂಪ್ ಆಡಳಿತ ಆರೋಪಿಸುತ್ತಿದೆ. ಕ್ರೈಸ್ತ ಧರ್ಮವನ್ನು ನಾಶಪಡಿಸಲು ಯಹೂದಿಗಳು ಪೈಶಾಚಿಕವಾಗಿ ರೋಗವನ್ನು ಸೃಷ್ಟಿಸಿದ್ದರು ಎಂದು ಕ್ಯಾಥೊಲಿಕ್ ಚರ್ಚ್ ಇದೇ ರೀತಿ ಆರೋಪಿಸಿದ್ದುದನ್ನು ಟ್ರಂಪ್ ನಿಲುವು ನೆನಪಿಸುತ್ತದೆ. ಹಾಗೆಯೇ ಯೂರೋಪಿನ ಲಿ ಪೆನ್ ಮತ್ತು ಸಾಲ್ವಿನಿ ಮುಂತಾದ ರಾಜಕಾರಣಿಗಳು ವಲಸೆ ಕಾರ್ಮಿಕರು ಮತ್ತು ನಿರಾಶ್ರಿತರೇ ಕೊರೋನಾ ವೈರಾಣುವನ್ನು ಹರಡುತ್ತಿದ್ದಾರೆ ಎಂಬ ಜನಾಂಗೀಯ ಆರೋಪ ಮಾಡಿರುವುದು ಟ್ರಂಪ್ ನಿಲುವನ್ನು ಸಮರ್ಥಿಸುವಂತೆ ಕಾಣುತ್ತದೆ.
ಮಧ್ಯಪ್ರಾಚೀನ ಯುಗದ ಯೂರೋಪ್‍ನ ನಾಯಕರು “ಪ್ಲೇಗ್ ಹರಡುವವರು” ಎಂದು ಕೆಲವು ಸಮುದಾಯಗಳನ್ನು ದೂಷಿಸುತ್ತಿದ್ದಂತೆಯೇ, ನಾಲ್ಕು ವರ್ಷಗಳ ಹಿಂದೆ ಅಮೆರಿಕದ ಅಧ್ಯಕ್ಷ ಚುನಾವಣೆಯ ಪ್ರಚಾರದಲ್ಲಿ ತೊಡಗಿದ್ದಾಗ ಟ್ರಂಪ್ “ ಗಡಿಯಾಚೆಗಿನ ದೇಶಗಳಿಂದ ಸೋಂಕು ರೋಗಗಳನ್ನು ಅಮೆರಿಕದಲ್ಲಿ ಹರಡುವ ಲಕ್ಷಣಗಳು ಕಾಣುತ್ತಿವೆ ” ಎಂದು ಹೇಳಿದ್ದನ್ನು ಸ್ಮರಿಸಬಹುದು. ಟ್ರಂಪ್ ಅವರ ಈ ಆರೋಪ ಮೆಕ್ಸಿಕೋದಿಂದ ಅಮೆರಿಕಕ್ಕೆ ಬರುತ್ತಿರುವ ವಲಸೆ ಕಾರ್ಮಿಕರನ್ನು ಕುರಿತಾಗಿತ್ತು. ವಿಡಂಬನೆ ಎಂದರೆ ಈಗ ಮೆಕ್ಸಿಕೋ ಸರ್ಕಾರ ಅಮೆರಿಕದಿಂದ ವಲಸೆ ಬರುತ್ತಿರುವರನ್ನು ತಡೆಗಟ್ಟುವ ಮೂಲಕ ಕೊರೋನಾ ವಿರುದ್ಧ ಹೋರಾಡುತ್ತಿದೆ.
ಕೋವಿದ್ 19 ಹಿನ್ನೆಲೆಯಲ್ಲಿ ಭಾರತದಲ್ಲೂ ಸುಪ್ತವಾಗಿದ್ದ ಪೂರ್ವಗ್ರಹಗಳು ಮೇಲೇಳುತ್ತಿವೆ. ಕಟ್ಟಡಗಳ ಮಾಲಿಕರು ವೈದ್ಯಕೀಯ ಸಿಬ್ಬಂದಿಗೆ ಕಟ್ಟಡದೊಳಗೆ ಪ್ರವೇಶ ನಿರಾಕರಿಸುತ್ತಿದ್ದಾರೆ. ಜನರು ಜಾತಿ ಮತ್ತು ಅಸ್ಪøಶ್ಯತೆಯನ್ನು ಜೀವಂತವಾಗಿಡಲು ಸಾಮಾಜಿಕ ಅಂತರ ಎಂಬ ಪದವನ್ನು ಬಳಸುತ್ತಿದ್ದಾರೆ. ಈಶಾನ್ಯ ಭಾರತದ ಪ್ರಜೆಗಳು ಜನಾಂಗೀಯ ನಿಂದನೆ ಎದುರಿಸುತ್ತಿದ್ದು ಉಚ್ಚಾಟನೆಯ ಭೀತಿ ಎದುರಿಸುತ್ತಿದ್ದಾರೆ. ವಿದೇಶಗಳಲ್ಲಿದ್ದ ಭಾರತೀಯರನ್ನು ಕರೆತರಲು ವಿಮಾನಗಳನ್ನು ಕಳುಹಿಸಿದ ಸರ್ಕಾರವೇ ಇಂದು ತನ್ನ ನೆಲದಲ್ಲಿರುವ ವಲಸೆ ಕಾರ್ಮಿಕರಿಗೆ ನೆಲೆ ಒದಗಿಸಲು ವಿಫಲವಾಗಿದೆ. ಅವರನ್ನು ಸುರಕ್ಷಿತವಾಗಿ ತವರಿಗೆ ಕಳುಹಿಸಲೂ ವಿಫಲವಾಗುತ್ತಿದೆ.
ಕೇಂದ್ರ ಸರ್ಕಾರ ಘೋಷಿಸಿರುವ ಲಾಕ್ ಡೌನ್ ಹಿನ್ನೆಲೆಯಲ್ಲಿ ವಲಸೆ ಕಾರ್ಮಿಕರು ನೂರಾರು ಕಿಲೋಮೀಟರ್ ನಡಿಗೆಯ ಮೂಲಕ ತಮ್ಮ ಊರು ತಲುಪುತ್ತಿದ್ದಾರೆ. ರಸ್ತೆಯಲ್ಲೇ ಮಲಗಿ, ಊಟವಿಲ್ಲದೆ, ಕುಡಿಯಲು ನೀರಿಲ್ಲದೆ ಬಳಲುತ್ತಿದ್ದಾರೆ. 20 ಕಾರ್ಮಿಕರು ಈಗಾಗಲೇ ಮೃತಪಟ್ಟಿದ್ದಾರೆ. ಈ ವೇಳೆಗಾಗಲೇ ಸರ್ಕಾರಗಳು ವಲಸೆ ಕಾರ್ಮಿಕರಿಗೆ ನಿರಾಶ್ರಿತ ಶಿಬಿರಗಳನ್ನು ನಿರ್ಮಿಸಲು ಕ್ರಮ ಕೈಗೊಂಡಿದ್ದು , ಊರಿಗೆ ಹೋಗುವವರಿಗೆ ಸಾರಿಗೆ ವ್ಯವಸ್ಥೆಯನ್ನೂ ಒದಗಿಸುತ್ತಿದೆ. ಉತ್ತರಪ್ರದೇಶದಲ್ಲಿ ವಲಸೆ ಕಾರ್ಮಿಕರ ಮೇಲೆ ಸಾಮೂಹಿಕವಾಗಿ ರಾಸಾಯನಿಕ ಔಷಧಿಯನ್ನು ಸಿಂಪಡಿಸಲಾಗುತ್ತಿದ್ದು ಅವರನ್ನು ರೋಗವಾಹಕರಂತೆ ಕಾಣಲಾಗಿದೆ. ಇದು ಸಾಲದೆಂಬಂತೆ ಕೋಮುವಾದಿ ಪೂರ್ವಗ್ರಹಗಳು ಮುನ್ನೆಲೆಗೆ ಬಂದಿದ್ದು ವ್ಯಾಪಕವಾಗಿ ಹರಡುತ್ತಿದೆ. ನವದೆಹಲಿಯ ನಿಜಾಮುದ್ದಿನ್‍ನಲ್ಲಿ ನಡೆದ ತಬ್ಲೀಗಿ ಜಮಾತ್ ಸಮ್ಮೇಳನ ಈ ಪೂರ್ವಗ್ರಹ ಪೀಡಿತರಿಗೆ ಮತ್ತಷ್ಟು ಪುಷ್ಟಿ ನೀಡಿದೆ.
ಯಾವುದೇ ರೋಗವಾಹಕಗಳು ಜನಾಂಗ ಅಥವಾ ಪ್ರದೇಶವನ್ನು ಆಯ್ಕೆ ಮಾಡಿಕೊಳ್ಳುವುದಿಲ್ಲ, ಅವುಗಳಿಗೆ ಬೆಚ್ಚಗಿರುವ ಮಾನವನ ದೇಹವೇ ಆಶ್ರಯತಾಣವಾಗುತ್ತದೆ, ಪೌಷ್ಟಿಕತೆ ಹೆಚ್ಚಾಗಿರುವ ದೇಹವೇ ಉತ್ತಮ ಆಶ್ರಯವಾಗುತ್ತದೆ ಎನ್ನುವ ವಾಸ್ತವಗಳನ್ನು ನಿರೂಪಿಸುವ ಮೂಲಕ ವಿಜ್ಞಾನ ಜನರನ್ನು ಅವೈಚಾರಿಕ, ಅವೈಜ್ಞಾನಿಕ ಮೌಢ್ಯಗಳಿಂದ ಪಾರು ಮಾಡುತ್ತದೆ ಎಂದು ನಂಬಲಾಗಿತ್ತು. ದುರದೃಷ್ಟವಶಾತ್ ಈ ರೋಗವಾಹಕಗಳ ವೈಜ್ಞಾನಿಕ ಗ್ರಹಿಕೆಯನ್ನೇ ದುರುಪಯೋಗಪಡಿಸಿಕೊಂಡು ಸಾಮಾಜಿಕ ಪೂರ್ವಗ್ರಹಗಳಿಗೆ ಪುಷ್ಟಿ ನೀಡಲಾಗುತ್ತಿದೆ.
ಯಾವುದೇ ಸರ್ವವ್ಯಾಪಿ ಬೇನೆಯ ಸಂದರ್ಭದಲ್ಲಿ ಅಂಟಿಕೊಳ್ಳುವ ಕಳಂಕ ದೀರ್ಘ ಕಾಲ ಇರುತ್ತದೆ. ಇದನ್ನು ಮೇರಿ ಮಲ್ಲೋನ್ ಅವರ ಕಹಿ ಅನುಭವದಲ್ಲಿ ಕಾಣಬಹುದು. ತನ್ನ ಜೀವನದ ಕಾಲು ಭಾಗವನ್ನು ಏಕಾಂತತೆಯಲ್ಲಿ ಪ್ರತ್ಯೇಕತೆಗೊಳಗಾಗಿಯೇ ಸವೆಸಿದ ಮೇರಿ ಮಲ್ಲೋನ್ ಇಂದಿಗೂ ಆ ರೋಗದ ಸಂವಾದಿಯಾಗಿಯೇ ಉಳಿದಿದ್ದಾಳೆ. ಇಂದಿಗೂ ಸಹ ಸೋಂಕಿತರ ಮೇಲೆ ಇದೇ ರೀತಿಯ ಆಕ್ರಮಣ ನಡೆಯುತ್ತಿದೆ. ಕೊರೋನಾ ಹಿನ್ನೆಲೆಯಲ್ಲಿ ಸೋಂಕಿತರನ್ನು ಪ್ರತ್ಯೇಕವಾಗಿರಿಸುವ ಅನಿವಾರ್ಯತೆಯನ್ನು ಎದುರಿಸುತ್ತಿರುವ ಸರ್ಕಾರಗಳು, ಅವರ ಹೆಸರು ಮತ್ತು ವಿಳಾಸ ಪ್ರಕಟಿಸುವುದು, ಮನೆ ಬಾಗಿಲ ಮೇಲೆ ಚೀಟಿ ಅಂಟಿಸುವುದು, ಅವರ ಚರ್ಮದ ಮೇಲೆ ನಮೂದಿಸುವುದು, ಅಳಿಸಲಾಗದ ಶಾಯಿ ಹಚ್ಚುವುದು ಇವೇ ಮುಂತಾದ ಕ್ರಮಗಳನ್ನು ಅನುಸರಿಸುತ್ತಿದ್ದು ಇದು ವೈದ್ಯಕೀಯ ನೈತಿಕ ಸಂಹಿತೆಯ ಉಲ್ಲಂಘನೆಯಾಗಿದೆ. ಇದರಿಂದ ಕೊರೋನಾ ಸೋಂಕಿತರು ಸಾಮಾಜಿಕ ಬಹಿಷ್ಕಾರ ಎದುರಿಸುವ ಸಾಧ್ಯತೆಗಳೂ ಹೆಚ್ಚಾಗುತ್ತವೆ.
20ನೆಯ ಶತಮಾನದ ಆರಂಭದಲ್ಲಿ ಓರ್ವ ವಲಸಿಗ ಮಹಿಳೆ ಸಮಾಜದ ಮುಂದೆ ಇಟ್ಟಿದ್ದ ಪ್ರಶ್ನೆಯನ್ನೇ ನಾವು 21ನೆಯ ಶತಮಾನದ ಮೂರನೆಯ ದಶಕದ ಹೊಸ್ತಿಲಲ್ಲಿ ಎದುರಿಸುತ್ತಿದ್ದೇವೆ. ಮಾನವನ ಜೀವ ಉಳಿಸುವ ಯತ್ನದಲ್ಲಿ ಮಾನವತೆಯನ್ನು ಕೊಲ್ಲುವ ಅವಶ್ಯಕತೆ ಇದೆಯೇ ?
******
*ಟಿಪ್ಪಣಿ* : ಯುನೈಟೆಡ್ ಕಿಂಗ್‍ಡಮ್ ನಲ್ಲಿರುವ ಎಡಿನ್ ಬರ್ಗ್ ವಿಶ್ವವಿದ್ಯಾಲಯದಲ್ಲಿ ಲಿವರ್ ಹ್ಯೂಮ್ ಟ್ರಸ್ಟ್ ಪಿಹೆಚ್‍ಡಿ ವಿದ್ವಾಂಸರಾಗಿರುವ ಲೇಖಕರು ಆಸ್ಟ್ರಿಯಾದ ಕೊನ್ರಾಡ್ ಲಾರೆನ್ಸ್ ಸಂಸ್ಥೆಯ ಸದಸ್ಯರಾಗಿದ್ದಾರೆ. ಈ ಲೇಖನ ದ ಹಿಂದೂ ಪತ್ರಿಕೆಯ 05-04-20ರ ಭಾನುವಾರದ ಪುರವಣಿಯಲ್ಲಿ ಪ್ರಕಟವಾಗಿದೆ.
**
( ವಿಸೂ: ಕೊರೋನಾ ಮತ್ತು ಸಾಮಾಜಿಕ ಪೂರ್ವಗ್ರಹಗಳನ್ನು ಕುರಿತ ಒಂದು ಲೇಖನದಲ್ಲಿ ವಿದ್ಯುನ್-ಮಾನ ಸನ್ನಿಯೂ ಮಾಧ್ಯಮಗಳ ವ್ಯಸನವೂ)ನಾನು- ಜಗತ್ತಿನಲ್ಲಿ ಈ ಹಿಂದೆ ಸಂಭವಿಸಿದ ಇಂತಹ ಸಾಂಕ್ರಾಮಿಕ ರೋಗಗಳ ಸಂದರ್ಭದಲ್ಲಿ ರೋಗಗ್ರಸ್ತರನ್ನು ಮನುಷ್ಯರನ್ನಾಗಿ ನೋಡಲಾಗಿತ್ತು, ಯಾವುದೇ ಜನಾಂಗೀಯ-ಮತಧಾರ್ಮಿಕ ಅಸ್ಮಿತೆಗಳ ನೆಲೆಯಲ್ಲಿ ನೋಡಲಾಗಿರಲಿಲ್ಲ, ಭಾರತದಲ್ಲಿ ಈ ವಿದ್ಯಮಾನವನ್ನು ಕಾಣುತ್ತಿದ್ದೇವೆ ಎಂದು ಹೇಳಿದ್ದೆ. ಈ ಲೇಖನ ಓದಿದ ನಂತರ ನನ್ನ ಗ್ರಹಿಕೆ ತಪ್ಪು ಎಂದು ಅರಿವಾಯಿತು. ಗ್ರಹಿಕೆಯ ದೋಷ, ಅಧ್ಯಯನದ ಕೊರತೆ ಎರಡೂ ಈ ಲೋಪಕ್ಕೆ ಕಾರಣ ಎಂದು ಭಾವಿಸುತ್ತಲೇ ಓದುಗರ ಕ್ಷಮೆ ಕೋರುತ್ತೇನೆ.
-ನಾ ದಿವಾಕರ)