ಬೇರೆಲ್ಲೂ ಸಿಗದ ನ್ಯಾಯ, ಇನ್ನೆಲ್ಲೂ ಸಿಗದ ಸಾಂತ್ವನ, ಮತ್ತೆಲ್ಲೂ ಸಿಗದ ಸಮಾಧಾನ, ನ್ಯಾಯಾಲಯದಲ್ಲಿ ಸಿಗುತ್ತದೆ ಎಂಬ ದೃಢ ನಂಬಿಕೆಯೇ ಪ್ರಜಾಪ್ರಭುತ್ವದ ಸ್ತಂಭಗಳಲ್ಲಿ ಒಂದೆನಿಸಿದೆ. `ನೀನು ಅತ್ಯಾಚಾರ ಮಾಡಿದ್ದೀಯ ಅಲ್ಲವಾ? ನೀನು ಶಿಕ್ಷೆಯಿಂದ ತಪ್ಪಿಸಿಕೊಳ್ಳಬೇಕಾದರೆ ನಿನ್ನ ದೌರ್ಜನ್ಯಕ್ಕೆ ಪಕ್ಕಾದ ಆ ಹುಡುಗಿಯನ್ನೇ ಮದುವೆಯಾಗಿಬಿಡು. ಆಗ ನಿನಗೆ ಜೈಲುವಾಸದಿಂದ ಬಿಡುಗಡೆ ಸಿಕ್ಕಿಬಿಡುತ್ತದೆ’ ಎನ್ನುವ ಅದ್ಭುತ ಆಘಾತಕಾರಿ ಸಲಹೆಯನ್ನು ನೀಡಿದವರು ಮತ್ತಾರೂ ಅಲ್ಲ, ಸ್ವತಃ ಮುಖ್ಯ ನ್ಯಾಯಾಧೀಶರೇ! ಬದುಕಿನಲ್ಲಿ ಇರುವ ನಂಬಿಕೆಯನ್ನೇ ಅಲುಗಾಡಿಸುವ ಇಂಥ ಮಾತು ದೇಶದ ಪ್ರಜ್ಞಾವಂತರನ್ನು ಬೆಚ್ಚಿಬೀಳಿಸಿದೆ.
ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದೂ ಅಲ್ಲದೇ ಆಕೆಯ ಪೋಷಕರಿಂದ ‘ತಮ್ಮದು’ ಒಪ್ಪಿತ ಲೈಂಗಿಕ ಸಂಪರ್ಕವೆಂದು 500 ರೂ. ಗಳ ಬಾಂಡ್ ಪೇಪರ್ ಮೇಲೆ ಸಹಿ ಮಾಡಿಸಿಕೊಳ್ಳುತ್ತಾನೆ ಆರೋಪಿ. ಪ್ರಕರಣ ದಾಖಲಾಗಿ ಬಂಧನ ತಪ್ಪಿಸಿಕೊಳ್ಳಲು ಸರ್ವೋಚ್ಛ ನ್ಯಾಯಾಲಯದ ಕಟ್ಟೆ ಏರುತ್ತಾನೆ. ಪೋಕ್ಸೋ ಕಾಯ್ದೆ –(ಅಪ್ರಾಪ್ತ ಮಕ್ಕಳ ಮೇಲೆಸಗುವ ಲೈಂಗಿಕ ಅಪರಾಧಗಳಿಂದ ರಕ್ಷಣೆ ಕಾನೂನು) ಯಡಿ ಕಠಿಣ ಶಿಕ್ಷೆಗ ಒಳಪಡಿಸಿ ಜೈಲಿಗೆ ತಳ್ಳುವ ಬದಲು ಸುಪ್ರೀಂ ನ್ಯಾಯಾಧೀಶರು `ಯುವತಿಯನ್ನು ಮದುವೆಯಾಗುತ್ತೀಯಾ, ಕೆಲಸ ಕಳೆದುಕೊಂಡು ಜೈಲಿಗೆ ಹೋಗುತ್ತೀಯಾ’ ಕೇಳುತ್ತಾರೆ. ಇದು ನೋಡಿ ನ್ಯಾಯದ ಪರಿಕಲ್ಪನೆ ಎಂದರೆ. . . .
ಅತ್ಯಾಚಾರದಂಥಹ ಹೀನ ಕೃತ್ಯವನ್ನು ಈ ಸಮಾಜ ಹೀಗೂ ಅರ್ಥೈಸುತ್ತದೆ ಎಂದರೆ… ಹೆಣ್ಣೊಬ್ಬಳ ದೇಹ ಗಂಡಿನ ಅತಿಕ್ರಮಕ್ಕಾಗಿಯೇ ಇರುವುದು. ಹಾಗಾಗಿ ಆಕೆಯ ಮೇಲೆ ಮೊದಲು ನಿಯಮ ಬಾಹಿರವಾಗಿ ಆಕ್ರಮಣ ನಡೆಸಿ ನಂತರ ಸಮಾಜದ ಬಹಿರಂಗ ಒಪ್ಪಿಗೆಯ ಮೂಲಕ ಅತಿಕ್ರಮಣಕ್ಕೆ ಅಂಗೀಕಾರ ಪಡೆಯುವುದು.
ಪ್ರಕರಣ: ಮಹರಾಷ್ಟ್ರದಲ್ಲಿ ಅಪ್ರಾಪ್ತ ಬಾಲಕಿಯೊಬ್ಬಳ ಮೇಲೆ ಯುವಕನೊಬ್ಬ ಹಲವಾರು ಬಾರಿ ಅತ್ಯಾಚಾರ ನಡೆಸುತ್ತಾನೆ. 9ನೇ ತರಗತಿಯಲ್ಲಿ ಓದುತ್ತಿದ್ದ ಬಾಲಕಿಯ ದೂರದ ಸಂಬಂಧಿಯಾದ ಯುವಕ ಆ ಕಾರಣದಿಂದ ಮನೆಗೇ ಬಂದೂ ಆಕೆಯ ಮೇಲೆ ಬಲಾತ್ಕಾರ ಮಾಡುತ್ತಾನೆ. ಆಕೆ ಅದನ್ನು ಯಾರಿಗೂ ತಿಳಿಸದಿರಲು ಮುಖದ ಮೇಲೆ ಆಸಿಡ್ ಎರಚುವುದಾಗಿ, ಪೆಟ್ರೋಲ್ ಸುರಿದು ಜೀವಂತ ಸುಡುವುದಾಗಿ, ಅವಳ ಸಹೋದರರನ್ನು ಕೊಲ್ಲುವುದಾಗಿ, ಹೆದರಿಸಲಾಗಿದೆ. ಆಕೆಯನ್ನು ಹಿಂಬಾಲಿಸುವ, ಮೂದಲಿಸುವ ಕೆಲಸಗಳೂ ನಡೆಯುತ್ತವೆ. ಬೆದರಿದ ಬಾಲಕಿಯ ಮೇಲಿನ ಅತ್ಯಾಚಾರದ ಪ್ರಕರಣ ಬೆಳಕಿಗೆ ಬಂದಿದ್ದೇ ಅಪ್ರಾಪ್ತ ಶಾಲೆಗೆ ಹೋಗುತ್ತಿದ್ದ ಮಗು ಆತ್ಮಹತ್ಯೆಗೆ ಪ್ರಯತ್ನಿಸಿದಾಗ. ಪ್ರಕರಣ ಹೊರಗೆ ಬಂತೆಂಬ ಕಾರಣಕ್ಕೆ ಯುವಕನ ಪೋಷಕರು ಬಾಲಕಿ ಪ್ರಾಪ್ತಳಾಗುವಾಗ ಅವಳನ್ನು ತಮ್ಮ ಮಗನಿಗೆ ಮದುವೆ ಮಾಡಿಕೊಳ್ಳುವುದಾಗಿ ಹೇಳಿದ್ದರು ಎಂದೂ ಮಾಧ್ಯಮಗಳು ವರದಿ ಮಾಡಿವೆ. ಎಷ್ಟು ಸುಲಭದ ದಾರಿ. ಮಗ ಮಾಡಿದ ಘನ ಕಾರ್ಯಕ್ಕೆ ಪೋಷಕರು ಕೊಡುವ ಬಹುಮಾನ. ಮತ್ತು ತನ್ನದಲ್ಲದ ತಪ್ಪಿಗೆ ಬದುಕಿನ ಪ್ರತಿ ಕ್ಷಣವೂ ನರಳುತ್ತಲೇ, ಸಾಯುತ್ತಲೇ ಆಕೆ ಬದುಕಬೇಕು. ಹೆಣ್ಣೆಂದರೆದೆಷ್ಟು ಕೇವಲ…ಛೀ. ಆದರೆ ಅದಕ್ಕೆ ಆಕೆ ಒಪ್ಪಿಗೆ ಕೊಡಲಿಲ್ಲ. ದೂರು ದಾಖಲಾಯಿತು.
ಇಂಥ ಪ್ರಕರಣದಲ್ಲಿ ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು ಸಮಾಜದ ಅಸ್ವಸ್ಥ ಮನೋಭಾವದ ಪ್ರತಿರೂಪವೆಂಬಂತೆ ಆರೋಪಿಗೆ ಸಂತ್ರಸ್ಥೆಯನ್ನು ಮದುವೆಯಾಗಲು ಸಿದ್ಧನಿದ್ದೀಯಾ ಎಂದು ಕೇಳುವುದೆಂದರೆ !? ಕಾನೂನುಬದ್ಧವಾಗಿ ಪ್ರತಿ ದಿನಾ, ಬೇಕೆಂದಾಗೆಲ್ಲ ಅವಳ ದೇಹದ ಮೇಲೆ ಮತ್ತು ಮನಸ್ಸಿನ ಮೇಲೆ ಅತಿಕ್ರಮಣ ಮಾಡುವ ಸುಪ್ರೀಂ ಲೈಸೆನ್ಸ್ ಕೊಟ್ಟ ಹಾಗಲ್ಲವೇ?
ದಾಖಲಾದ ದೂರಿಗೆ ಪ್ರತಿಯಾಗಿ ತನ್ನನ್ನು ಬಂಧಿಸಬಾರದೆಂದು ನ್ಯಾಯಾಲಯದ ಮೊರೆ ಹೋದ ಆರೋಪಿಗೆ ಕೆಳ ನ್ಯಾಯಾಲಯ ಕಣ್ಣು ಮುಚ್ಚಿ ಜಾಮೀನು ನೀಡಿದ ಈ ಪ್ರಕರಣದಲ್ಲಿ ಮುಂಬೈ ಹೈಕೋರ್ಟ್ ನ ಔರಂಗಾಬಾದ್ ಪೀಠ ಕೆಳ ನ್ಯಾಯಾಲಯದ ಆದೇಶವನ್ನು ‘ಅಟ್ರಾಷಿಯಸ್’-ಕ್ರೌರ್ಯದ ಪರಮಾವಧಿ ಎಂದು ಬಣ್ಣಿಸಿ ತಡೆ ನೀಡಿತ್ತು. ಆಗ ಉಚ್ಛ ನ್ಯಾಯಾಲಯ ಹೇಳಿದ ಮಾತು ‘ ಇಂಥ ಗಂಭೀರ ಪ್ರಕರಣಗಳಲ್ಲಿ ಘನತೆವೆತ್ತ ನ್ಯಾಯಾಧೀಶರ ಧೋರಣೆಯು, ಅವರ ಸಂವೇದನಾ ರಹಿತ ಮನೋಭಾವಕ್ಕೆ ಪುರಾವೆಯಾಗಿದೆ’ ಎಂದೂ ಹೇಳಿತ್ತು. ಮುಂಬೈ ಉಚ್ಛ ನ್ಯಾಯಾಲಯದ ಔರಂಗಾಬಾದ್ ಪೀಠವು ಆರೋಪಿ ಮತ್ತವನ ಕುಟುಂಬ ಪ್ರಭಾವಿಗಳಾಗಿದ್ದು ಸಂತ್ರಸ್ಥೆ ಮತ್ತು ಆಕೆಯ ಕುಟುಂಬದವರಿಂದ 500 ರೂ.ಗಳ ಛಾಪಾ ಕಾಗದದ ಮೇಲೆ ಅವರಿಬ್ಬರಿಗೂ ಸಮ್ಮತಿಯ ಲೈಂಗಿಕ ಸಂಬಂಧವಿತ್ತು ಎಂದು ಸಹಿ ಮಾಡಿಸಿಕೊಂಡಿದ್ದನಂತೆ ಎಂಬುದನ್ನು ಗುರುತಿಸಿದೆ. ಆದರೆ ಛಲ ಬಿಡದ ಆರೋಪಿ ಸರ್ವೋಚ್ಛ ನ್ಯಾಯಾಲಯದ ಮೊರೆ ಹೋದನಂತೆ!
ಹೆಣ್ಣಿನ ಕುರಿತು, ಮಹಿಳೆಯರ ಘನತೆಯ ಬದುಕಿನ ಕುರಿತು ಸಮಾಜವನ್ನು ಇಂದಿಗೂ ಗಾಢವಾಗಿ ಆವರಿಸಿರುವ ನೀಚ ಆಲೋಚನೆಯ ಬಿಂಬವೋ ಪ್ರತಿಬಿಂಬವೋ ಎಂಬಂತೆ ಈ ಪ್ರಕರಣದಲ್ಲಿ ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರ ಧೋರಣೆಯೂ ಅದಕ್ಕಿಂತ ಭಿನ್ನವಾಗಿ ತೋರ ದ ಕಾರಣ ಅದೇ ಮಾತ ಇಲ್ಲಿಗೂ ಅನ್ವಯವಾಗಬಹುದಲ್ಲವೇ?
ಹೆಣ್ಣಿನ ಮೇಲೆಸಗುವ ಕ್ರೌರ್ಯದ ಪರಮಾವಧಿಯ ಹೀನ ಕೃತ್ಯದ ನಿರ್ಮೂಲನೆಗಾಗಿ ತ್ವರಿತ ಇತ್ಯರ್ಥ ಮತ್ತು ಕಠಿಣ ಶಿಕ್ಷೆಯನ್ನು ಕೇಳುತ್ತಿರುವಾಗ, ಪೋಕ್ಸೋ ಅಡಿಯಲ್ಲಿ ದಾಖಲಾಗುವುದನ್ನು ಹೀನಾತಿಹೀನವೆಂದು ಪರಿಗಣಿಸುವ ಒತ್ತಾಯವಿರುವಾಗ ಅಂಥ ಕೆಲಸ ಮಾಡಿ ಅದನ್ನು ತಾನೇ 500 ರೂಪಾಯಿಗಳ ಬಾಂಡ್ ಕಾಗದದ ಮೇಲೆ ದೃಢೀಕರಿಸಿಕೊಂಡವನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಇನ್ನೂ ಬೇರೆ ಪುರಾವೆಗಳ ಅಗತ್ಯವಿತ್ತೇ ಸುಪ್ರೀಂ ನ್ಯಾಯದಂಡಕ್ಕೆ?
ಮುಚ್ಚಿದೆ ನ್ಯಾಯದ ಬಾಗಿಲು : ಅತ್ಯಾಚಾರಕ್ಕೆ ಮದುವೆಯೊಂದು ಪರಿಹಾರವೆಂದು ಸೂಚನೆ ನೀಡುವುದು ಎಂದರೆ ಸಂತ್ರಸ್ಥರಿಗೆ ನ್ಯಾಯದ ಬಾಗಿಲು ಮುಚ್ಚಿದೆ ಎಂದೇ ಅರ್ಥ. ಬಹಳ ನಾಜೂಕಾಗಿ ಸಂತ್ರಸ್ಥರು ತಮ್ಮ ಮೇಲಿನ ದುರಾಕ್ರಮಣಗಳನ್ನು ಬಾಯಿ ಮುಚ್ಚಿಕೊಂಡು ಸಹಿಸಿಕೊಳ್ಳಬೇಕು ಅಥವಾ ನ್ಯಾಯ ಕೇಳಿ ನ್ಯಾಯಾಲಯದ ಮಧ್ಯಸ್ಥಿಕೆಯಲ್ಲಿ ಅದೇ ದುರಾಕ್ರಮಿಯಿಂದ ಪ್ರತಿ ದಿನ ಅತ್ಯಾಚಾರಕ್ಕೆ ಒಳಗಾಗಬೇಕು ಎಂಬ ರಹದಾರಿ ಪತ್ರ ಕೊಡುವ ಹೇಳಿಕೆಗಳು ಅಸಹನೀಯ.
ಈ ಮೊದಲೂ ದೇಶದ ಹಲವಾರು ಕಡೆ ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ವಿಧಿಸಿ ನ್ಯಾಯದ ಕಾವಲು ಕಾಯುವ ಬದಲು ಸಂತ್ರಸ್ಥೆಯನ್ನು ಮದುವೆಯಾಗಲು ಕೇಳಿದ ಸಂದರ್ಭಗಳು ಹಲವು ಇವೆ. ಈ ನಿರ್ದಿಷ್ಟ ಪ್ರಕರಣದಲ್ಲಿ 10 ರಿಂದ 12 ಬಾರಿ ಅಪ್ರಾಪ್ತಳಾಗಿದ್ದ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದ ದುಷ್ಕರ್ಮಿ. ಇದನ್ನು ಯಾರಿಗೂ ಹೇಳದಂತೆ ಆಕೆಗೆ ಬೆದರಿಕೆ ಒಡ್ಡಿದ್ದ. ವರದಿಗಳ ಪ್ರಕಾರ ಅವಳನ್ನು ಕಟ್ಟಿ ಹಾಕಿ ಹೊಡೆದು ಬಡಿದು ಹೆದರಿಸಿದ್ದವನಿಗೆ ಮದುವೆಯಾಗು ಎಂಬ ಸಲಹೆ!! ಇಂಥ ಕಾರಣಗಳಿಗಾಗಿಯೇ ಔರಂಗಾಬಾದ್ ಪೀಠವು ಅತ್ಯಾಚಾರಿಯ ಕೃತ್ಯಗಳನ್ನು ಕ್ರೌರ್ಯದ ಪರಮಾವಧಿ ಎಂದು ಬಣ್ಣಿಸಿ ಆತನ ಜಾಮೀನು ಅರ್ಜಿಯನ್ನು ವಜಾಗೊಳಿಸಿತ್ತು. ಆದರೆ ಈ ಪ್ರಕರಣದಲ್ಲಿ ಸುಪ್ರಿಂ ಕೋರ್ಟ್ ಅತ್ಯಾಚಾರದ ಆರೋಪಿಗೆ ಸಂತ್ರಸ್ಥೆಯನ್ನು ವಿವಾಹವಾಗುತ್ತೀಯಾ, ಕೆಲಸ ಕಳೆದುಕೊಂಡು ಜೈಲಿಗೆ ಹೋಗುತ್ತೀಯಾ ಎಂಬ ಆಯ್ಕೆಯ ಅವಕಾಶ ನೀಡುತ್ತದೆ. ನಮ್ಮ ಸಂವಿಧಾನ ದೇಶದ ಜನರಿಗೆ ಆಯ್ಕೆ ಸ್ವಾತಂತ್ರವನ್ನು ನೀಡಿದೆ ಎಂದು ಸುಪ್ರೀಂ ಅದನ್ನು ಗೌರವಿಸಿರಬೇಕು!
ಆ ದುಷ್ಕರ್ಮಿ ಮಹಾರಾಷ್ಟ್ರ ಸರಕಾರದ ವಿದ್ಯುತ್ ಕಂಪನಿಯ ನೌಕರ ಈಗ. ತನಗೆ ಈಗಾಗಲೇ ಮದುವೆಯಾಗಿದೆ ಎಂದು ಉತ್ತರಿಸಿದನಂತೆ ಪಾಪ! ಮತ್ತು ಆತನ ಪರ ವಕೀಲರು ಜಾಮೀನು ನೀಡದಿದ್ದರೆ ಆತ ಕೆಲಸ ಕಳೆದುಕೊಳ್ಳುತ್ತಾನೆ, ಅವನ ಕುಟುಂಬ ನಿರಾಧಾರವಾಗುತ್ತದೆ ಎಂದು ವಾದಿಸಿದರಂತೆ. ಇದು ಪ್ರಚಲಿತ ನ್ಯಾಯದ ಪರಿಕಲ್ಪನೆ. ಸುಪ್ರಿಂ ಕೋರ್ಟ್ ಆತನ ಅರ್ಜಿಯನ್ನು ವಜಾಗೊಳಿಸಿ ನಿಯಮಿತ ಜಾಮಿನು ಕೋರಿ ಅರ್ಜಿ ನೀಡಲು ನಾಲ್ಕು ವಾರಗಳ ಕಾಲಾವಕಾಶ ನೀಡಿದೆ ಎಂಬ ವರದಿಗಳು ದೇಶದ ಪ್ರಗತಿಯ ಮಾದರಿಗಳನ್ನು ಕೇವಲ ಗಗನ ಚುಂಬಿ ಮಾಲ್, ಚತುಷ್ಪಥ, ಷಟ್ಪಥ ರಸ್ತೆಗಳಲ್ಲಿ, ಮತ್ತು ಭೀಕರ ಭಾಷಣಗಳಲ್ಲಿ, ಆಕರ್ಷಕ ಘೋಷಣೆಗಳಲ್ಲಿ ಮಾತ್ರ ಹುಡುಕಿ ಎಂದು ನಮಗೆ ಸೂಚನೆ ನೀಡುತ್ತಿವೆ ಎಂದು ಭಾವಿಸಿದರೆ ತಪ್ಪಾ? ನಿಜವೆಂದರೆ ಆತನೆಸಗಿದ ಹೀನ ಅತ್ಯಾಚಾರದ ಕೃತ್ಯಕ್ಕೆ, ಮತ್ತು ಔರಂಗಾಬಾದ್ ಪೀಠ ಯುವತಿಯ ಹೇಳಿಕೆಯ ಆಧಾರದಲ್ಲಿ ಗುರುತಿಸಿದಂತೆ ಆತ ಕೆಲವೊಮ್ಮೆ ಗರ್ಭ ನಿರೋಧಕಗಳನ್ನು ಬಳಸಿಯೂ ಅತ್ಯಾಚಾರವೆಸಗಿದ್ದವನು. ಹಾಗಾಗಿ ಆತನಿಗೆ ಕಾನೂನಾತ್ಮಕವಾಗಿ ಈ ದೇಶದಲ್ಲಿ ಆರೋಪಿಗಳಿಗಿರುವ ಸಮಯದ ಅವಕಾಶವನ್ನು ನಿರಾಕರಿಸಬೇಕಾಗಿತ್ತು. ನ್ಯಾಯದ ತಕ್ಕಡಿ ಅನ್ಯಾಯವಾದಾಗ ಸ್ಥಿರವಾಗಿರಬೇಕಲ್ಲವೇ?
ಮಾಧ್ಯಮಗಳಲ್ಲಿ ಕೆಲವೆಡೆ ಹುಡುಗಿಯ ಪೋಷಕರು, ಆತ ಮದುವೆಯಾಗುವುದಾಗಿ ಹೇಳಿದನೆಂಬ ಕಾರಣಕ್ಕೆ ಎಲ್ಲಿಯೂ ದೂರು ದಾಖಲಿಸಿರಲಿಲ್ಲ ಎಂದೂ ವರದಿ ಮಾಡಿವೆ. ಅತ್ಯಾಚಾರಿಗೆ ಸಂತ್ರಸ್ಥೆಯನ್ನು ಮದುವೆಯಾಗಲು ಅವಕಾಶ ಕೊಡುವುದು ಯಾವ ಕಾರಣಕ್ಕೂ ಸರಿಯಲ್ಲ. ಮದುವೆಯ ಮೂಲಕ ಆಕೆಯ ಮೇಲೆ ನಡೆದ ಹೀನ ಕೃತ್ಯವನ್ನು ಮರೆಮಾಚಲು ಸಾಧ್ಯವಿಲ್ಲ, ಅದು ಆಕೆಗೆ ಯಾವುದೇ ರೀತಿಯ ಸಾಂತ್ವನವನ್ನೂ ನೀಡಲಾರದು. ಈ ಸಮಾಜ ಅತ್ಯಾಚಾರವೆಂಬುದು ಹೆಣ್ಣಿಗೆ ಅವಮಾನದ ಸಂಗತಿ, ಆಕೆಯ ಘನತೆಗೆ ಕುಂದು ಆದ್ದರಿಂದ ಆತನನ್ನೇ ಮದುವೆಯಾಗಿ ಗೌರವವನ್ನು ಮರಳಿ ಪಡೆಯಲಿ ಎಂದು ಯೋಚಿಸುವ ಸಂದರ್ಭಗಳಿವೆ. ಇವು ಅತ್ಯಂತ ಕೀಳು ಅಭಿಪ್ರಾಯವೆಂದಷ್ಟೇ ಹೇಳಬಹುದು.
ಇನ್ನೂ ಒಂದು ಪ್ರಕರಣಕ್ಕೆ ಸಂಬಂಧಿಸಿ ಮುಖ್ಯ ನ್ಯಾಯಾಧೀಶರು ವೈವಾಹಿಕ ಸಂಬಂಧದಲ್ಲಿಯೂ ಅತ್ಯಾಚಾರ ನಡೆಯಲು ಸಾಧ್ಯವೇ ಎಂದು ಪ್ರಶ್ನಿಸಿದರೆಂದು ವರದಿಯಾಗಿದೆ. ಈ ದೇಶದ ನಿಜ ಪ್ರಗತಿಪರರು ದಶಕಗಳಿಂದ ಐ.ಪಿ.ಸಿ ಕಲಮಿನ 376ರ ಅಡಿಯಲ್ಲಿ ವಿವಾಹದೊಳಗಿನ ಅಸಮ್ಮತಿಯ ಲೈಂಗಿಕ ಸಂಬಂಧವನ್ನು ಅತ್ಯಾಚಾರವೆಂದು ಪರಿಗಣಿಸಲು ಕೇಳುತ್ತಲೇ ಇವೆ. ವಿವಾಹದೊಳಗಿನ ಅತ್ಯಾಚಾರಕ್ಕೆ ವಿನಾಯಿತಿ ನೀಡಬೇಕಿಲ್ಲ ಎಂಬ ದೊಡ್ಡ ಕೂಗೇ ಇದೆ. ಹೆಣ್ಣಿನ ದೇಹ ಗಂಡಿನ ಆಸ್ತಿ ಯಲ್ಲ, ಮತ್ತು ಅವಳ ಅನುಮತಿ ಇಲ್ಲದೇ ಅದನ್ನು ಬೇಕಾದ ಹಾಗೆ ಬಳಸುವುದು ಸಹಜವೆಂಬಂತೆ ಭಾವಿಸುವ ಕ್ರಮದಿಂದ ಸಮಾಜವೇ ಹೊರಬರಬೇಕು ಎನ್ನುವಾಗ ಕಾನೂನಿನ ಬೆಂಬಲವೂ ಬೇಕೆಂಬುದು ಈಗಿರುವ ಒತ್ತಾಯ. ವಿವಾಹ ಸಂಬಂಧದೊಳಗಿನ ಹಿಂಸೆ ಮತ್ತು ಲೈಂಗಿಕ ಅಪರಾಧಗಳನ್ನು ಒಪ್ಪಲಾಗದು. ನಮ್ಮ ಕಾನೂನಿನಲ್ಲಿ ಕೂಡ ಇದಕ್ಕೆ ಅರ್ಧ ಸಮ್ಮತಿ ದೊರೆತಿದೆ ಎಂಬುದಕ್ಕೆ 498 ಏ ಮತ್ತು ಕೌಟುಂಬಿಕ ದೌರ್ಜನ್ಯ ನಿಷೇಧ ಕಾನೂನುಗಳು ಜಾರಿಯಲ್ಲಿರುವುದೇ ಉದಾಹರಣೆಯಾಗಿದೆ.
ಹೆಣ್ಣೆಂದರೆ ರೋಬೋಟ್ ಎಂದು ಸುಪ್ರೀಂ ನ್ಯಾಯಾಲಯದ ಸುಪ್ರೀಂ ಸ್ಥಾನವನ್ನು ಅಲಂಕರಿಸಿದವರು ಭಾವಿಸಿದಂತಿದೆ. “ಯುವರ್ ಆನರ್… ನೋ … ನಾವು ನಮ್ಮ ಅಸ್ಮಿತೆ ಮತ್ತು ಅಸ್ತಿತ್ವದ ಘನತೆಯನ್ನು ಗೌರವಿಸುವವರು. ನೀವಂದಂತೆಲ್ಲ ಗೋಣುಹಾಕುವ ಯಂತ್ರಗಳಲ್ಲ. ಹಿಂತೆಗೆದುಕೊಳ್ಳಿ ನಿಮ್ಮ ಅಭಿಪ್ರಾಯವನ್ನು, ರದ್ದು ಮಾಡಿ ಆತನ ಜಾಮೀನು ಕೋರುವ ಹಕ್ಕನ್ನು” ಎಂಬ ಕೂಗು ಜೋರಾಗಿ ಕೇಳಿದರಷ್ಟೇ ಕಣ್ಣು ಕಟ್ಟಿಕೊಂಡಿರುವ ನ್ಯಾಯದ ತಕ್ಕಡಿಯ ಕಿವಿಯ ಮೇಲೆ ಶಬ್ದ ಬಿದ್ದೀತು.
ಪುರುಷಾಧಿಪತ್ಯದ ಅರಿವಳಿಕೆಯ ಚುಚ್ಚುಮದ್ದಿನ ಪ್ರಭಾವದಲ್ಲಿಯೇ ಇರುವವರಿಗೆ ಮಂಪರು ಹರಿದು ದೇಶದ ಸಂವಿಧಾನದ ಘನತೆ ಗೌರವ ಕೇವಲ ಪೀಠಿಕೆಯ ಅಥವಾ ಸಂವಿಧಾನದ ಪುಸ್ತಕದ ಒಳಗೆ ಮಾತ್ರವಲ್ಲ, ಮೆದುಳಿಗೆ ಇಳಿಯಬೇಕಾದ್ದು ಎಂಬುದನ್ನೂ ತಿಳಿಸಲೇ ಬೇಕು. ಲಿಂಗ ಸೂಕ್ಷ್ಮತೆಯ, ಮಾನವ ಸಂವೇದನೆಯ ಪಾಠಗಳು ಎಲ್ಲ ಹಂತಗಳಲ್ಲಿ ಜಾರಿಯಾಗಲೇ ಬೇಕು. ಯಾವ ಸ್ಥಳ ತನ್ನ ನಡೆ ನುಡಿ ಬದ್ಧತೆಗಳ ಮೂಲಕ ಸಂವಿಧಾನ ನೀಡಿರುವ ಘನತೆಯ ಬದುಕನ್ನು ಎತ್ತಿ ಹಿಡಿದು ಮಾದರಿಯಾಗಿ ನಿಲ್ಲಬೇಕೋ ಅಲ್ಲಿಯೇ ಸಂವಿಧಾನದ ಮೂಲ ತತ್ವಗಳಿಗೆ ತಿಲಾಂಜಲಿ ಇಟ್ಟಾಗ ಸಮಾಜ ಎದ್ದು ಪ್ರಶ್ನಿಸಬೇಕು. ನ್ಯಾಯದ ತಕ್ಕಡಿ ತುಕ್ಕು ಹಿಡಿಯದಂತೆ, ಅನ್ಯಾಯಕ್ಕೆ ಕುರುಡಾಗಿ ನ್ಯಾಯಕ್ಕೆ ಸಮಚಿತ್ತದ ದಾರಿದೀಪವಾಗಲು ಒತ್ತಾಯಿಸಬೇಕು. ಮಾತು ಅಲ್ಲ ಎಂದು
ವಿಮಲಾ.ಕೆ.ಎಸ್.