Tuesday 9 March 2021

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ-ಪುರುಷೋತ್ತಮ ಬಿಳಿಮಲೆ.

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಶುಭಾಶಯಗಳು: 
ನಾನೂ ಸೇರಿದಂತೆ ಹಲವರು ಇವತ್ತು ನಮ್ಮ ತಾಯಿ, ತಂಗಿ, ಪತ್ನಿ,  ಅಕ್ಕ ಮೊದಲಾದವರನ್ನು ನೆನಪಿಸಿಕೊಂಡು ಭಾವುಕರಾಗಿದ್ದೇವೆ. ಅವರು ನಮಗಾಗಿ ಪಟ್ಟ, ಪಡುತ್ತಿರುವ ಕಷ್ಟಗಳಿಗೆ ಕೊನೆಯೇ ಇಲ್ಲವೇನೋ? 
ಇಷ್ಟಿದ್ದರೂ ಜಗತ್ತಿನ ಜನಸಂಖ್ಯೆಯ ಅರ್ಧದಷ್ಟಿರುವ  ಮಹಿಳೆಯರ ಸ್ಥಾನಮಾನ ಇನ್ನೂ ಎತ್ತರಕ್ಕೆ ಹೋಗಲು ಬಹಳ ಕಾಲ ಕಾಯಬೇಕಾದೀತು. ವಿಶ್ವ ಆರ್ಥಿಕ ವೇದಿಕೆಯು ಪ್ರಕಾರ (The World Economic Forum) ಉತ್ಪಾದನಾ ಕ್ಷೇತ್ರದಲ್ಲಿ ( ಕೈಗಾರಿಕೆಗಳು) ಮಹಿಳೆಯರ ಭಾಗವಹಿಸುವಿಕೆಯು ಶೇಕಡಾ ೧೬ನ್ನೂ ಮೀರಿಲ್ಲ.  ಅದರಲ್ಲೂ ಅತ್ಯುನ್ನತ ಸ್ಥಾನವೇರಿದವರು ಕೇವಲ ೧೦%. ಕಂಪೆನಿಗಳ ಬೋರ್ಡ್‌ ಆಫ್‌ ಡೈರೆಕ್ಟರ್ಸ್‌ನಲ್ಲಿ ೪೦ ಕ್ಕೆ ಒಬ್ಬ ಮಹಿಳೆಯರಿದ್ದಾರಂತೆ. ವಿಶ್ವದಾದ್ಯಂತ ಶೇಕಡಾ ೬೦ಕ್ಕೂ ಹೆಚ್ಚು ಮಹಿಳೆಯರು ತಮ್ಮ ಕೆಲಸದ ಜಾಗದಲ್ಲಿ ಒಂದಲ್ಲ ಒಂದು ರೀತಿಯ ಲೈಂಗಿಕ ಕಿರುಕುಳಗಳಿಗೆ ಒಳಗಾಗುತ್ತಿದ್ದಾರೆ. 
ಭಾರತದ ಪರಿಸ್ಥಿತಿಯೂ ಆಶಾದಾಯಕವಾಗಿಲ್ಲ. ಭಾರತೀಯ ಮಹಿಳೆಯರ ರಾಜಕೀಯ ಪ್ರಾತಿನಿಧ್ಯ ಶೇಕಡಾ ೧೨ನ್ನು ಮೀರಿಲ್ಲ. ಅಕ್ಕ ಮಹಾದೇವಿಯ ರಾಜ್ಯವಾದ ಕರ್ನಾಟಕವು ಇನ್ನೂ ಒಬ್ಬ ಮಹಿಳಾ ಮುಖ್ಯಮಂತ್ರಿಯನ್ನು ಕಂಡಿಲ್ಲ.  ೨೦೧೧ರ ಜನಗಣತಿಯ ಪ್ರಕಾರ ನಮ್ಮ ದೇಶದಲ್ಲಿ ಆರು  ವರ್ಷದೊಳಗಿನ ೧೦೦೦ ಗಂಡು ಮಕ್ಕಳಿಗೆ ೯೧೪ ಹೆಣ್ಣುಮಕ್ಕಳಿದ್ದಾರೆ. ಹುಟ್ಟುವ ಒಂದು ಕೋಟಿಯ ೨೦ ಲಕ್ಷ ಹೆಣ್ಣು ಮಕ್ಕಳಲ್ಲಿ ೩೦ ಲಕ್ಷ ಹೆಣ್ಣು ಮಕ್ಕಳು ತಮ್ಮ ೧೫ನೆಯ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ.  ೧೦ಲಕ್ಷ ಹೆಣ್ಣು ಮಕ್ಕಳು ಹುಟ್ಟಿದ ಮೊದಲ ವರ್ಷದೊಳಗೇ ಕಾಣೆಯಾಗುತ್ತಾರೆ. ಪ್ರತಿ ಆರನೇ ಹೆಣ್ಣು , ಅವಳು ಹೆಣ್ಣೆಂಬ ಕಾರಣಕ್ಕೆ ಕೊಲ್ಲಲ್ಪಡುತ್ತಾಳೆ. 
ವ್ಯವಸ್ಥಿತ ಭ್ರೂಣ ಹತ್ಯೆ, ಅನಕ್ಷರತೆ, ಕಿರುಕುಳ, ಲಿಂಗ ತಾರತಮ್ಯ, ಅವಮಾನ, ಅಗೌರವ, ಅತ್ಯಾಚಾರ ಮೊದಲಾದವುಗಳು ಇನ್ನೂ ಹತೋಟಿಗೆ ಬಂದಿಲ್ಲ.  ಅತ್ಯಾಚಾರಕ್ಕೀಡಾಗಿ ಕೊಲೆಯಾದ ಮಹಿಳೆಯರಿಗೆ  ನ್ಯಾಯ ದೊರಕುತ್ತಿಲ್ಲ. ಹೆಣ್ಮಕ್ಕಳು ನಿಗೂಢವಾಗಿ ಕಾಣೆಯಾದಾಗ, ಅಪಹರಣಕ್ಕೀಡಾದಾಗ,  ‘ಅವಳು ಯಾರೊಂದಿಗಾದರು ಹೋಗಿರಬಹುದು, ಎರಡು ದಿನ ಹುಡುಕಿʼ ಎಂದು ಬುದ್ದಿ ಹೇಳುವವರೇ ಜಾಸ್ತಿ. 
ಶೇ ೧೦ರಷ್ಟು ಅತ್ಯಾಚಾರ ಪ್ರಕರಣಗಳು ೧೪ಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣು ಮಕ್ಕಳ ಮೇಲೆ, ಶೇ ೧೬ರಷ್ಟು ಪ್ರಕರಣಗಳು  ೧೬ರಿಂದ  ೧೮ ವಯಸ್ಸಿನ ಬಾಲಕಿಯರ ಮೇಲೆ ಮತ್ತು ಶೇ ೫೭ರಷ್ಟು ಪ್ರಕರಣಗಳು ೧೮ರಿಂದ ೩೦ ವಯಸ್ಸಿನವರ ಮೇಲೆ ನಡೆದಿರುತ್ತವೆ ಎಂದು ಸರಕಾರದ ವರದಿಗಳೇ ತಿಳಿಸುತ್ತಿವೆ. ಯೂನಿಸೆಫ್ ಸಮೀಕ್ಷೆಯ ಪ್ರಕಾರ, ೧೯ರ ವಯಸ್ಸಿನ ಶೇ ೫೭ರಷ್ಟು ಯುವಕರು ಮತ್ತು ಶೇ ೫೫ರಷ್ಟು ಮಹಿಳೆಯರು ಹೆಂಡತಿಗೆ ಹೊಡೆಯುವುದು ಸಹಜ ಎನ್ನುತ್ತಾರೆ. ಜೊತೆಗೆ ಹೆಣ್ಣಿಗೆ ದತ್ತವಾಗಬೇಕಿರುವ ಹಕ್ಕುಗಳನ್ನು ಮೊಟಕುಗೊಳಿಸುವ ಪ್ರಯತ್ನ ನಡೆಯುತ್ತಲೇ ಇದೆ. ವಿಶ್ವಸಂಸ್ಥೆಯ ಸಮೀಕ್ಷಾ ವರದಿಯೊಂದರ ಪ್ರಕಾರ, ಭಾರತದಲ್ಲಿ ಚುನಾವಣೆ ಎದುರಿಸುವ ಶೇ 49ರಷ್ಟು ಮಹಿಳಾ ಅಭ್ಯರ್ಥಿಗಳು ಒಂದಲ್ಲ ಒಂದು ವಿಧದಲ್ಲಿ ಬೈಗುಳ, ನಿಂದನೆಗಳನ್ನು ಎದುರಿಸಿದ್ದಾರೆ. ದೆಹಲಿಯಲ್ಲಿ ಚುನಾವಣೆಗೆ ನಿಂತಿದ್ದ ಅತಿಶಿಯ ಬಗ್ಗೆ ಅಶ್ಲೀಲ ಕರಪತ್ರಗಳನ್ನು ಹಂಚಿ ಚಾರಿತ್ರ್ಯಹರಣ ಮಾಡಲಾಯಿತು.  
ಮಹಿಳೆಯರು ಈಗ ಎಚ್ಚೆತ್ತುಕೊಳ್ಳುತ್ತಿರುವಾಗಲೇ,  ಭಾರತೀಯ ಸಮಾಜವು ತನ್ನ  ಪಿತೃಪ್ರಧಾನ ಚಿಂತಾಕ್ರಮಗಳಿಂದ ಮತ್ತೆ ಹಿಂದಿರುಗುತ್ತಿದೆ. ಇದನ್ನು ಗಮನಿಸುತ್ತಿರುವ ಹೆಣ್ಣು ಮಕ್ಕಳು ಮದುವೆಯಾಗದಿರುವ ನಿರ್ಣಯಗಳಿಗೆ ತಲುಪುತ್ತಿದ್ದಾರೆ.  
ಸಾಗಬೇಕಾದ ಹಾದಿ ಬಹಳ ದೂರವಿದೆ.

No comments:

Post a Comment