Saturday, 21 June 2014

ವಿಷ್ಣು ನಾಯ್ಕ ಅವರ ಬತ್ತದ ತೆನೆ : ತೆನೆಗಟ್ಟಿದ ವೈಚಾರಿಕತೆ - ವಿಠ್ಠಲ ಭಂಡಾರಿ, ಕೆರೆಕೋಣ

ವಿಷ್ಣು ನಾಯ್ಕ ಅವರ ಬತ್ತದ ತೆನೆ : ತೆನೆಗಟ್ಟಿದ ವೈಚಾರಿಕತೆ


          ಮೂಲತಃ ಕವಿ ಮನಸ್ಸಿನ ವಿಷ್ಣು ನಾಯ್ಕ ಅವರು ಗದ್ಯವನ್ನೂ ಕಾವ್ಯದಷ್ಟೇ ಸಲೀಸಾಗಿ, ಆಪ್ತವಾಗಿ ಬರೆಯಬಲ್ಲರು ಎನ್ನುವುದಕ್ಕೆ 'ಬತ್ತದ ತೆನೆ' ಇನ್ನೊಂದು ಸಾಕ್ಷಿ. ಕಳೆದ ಐದು ದಶಕಗಳಲ್ಲಿ ವಿಷ್ಣು ನಾಯ್ಕ ಈ ಜಿಲ್ಲೆಯಲ್ಲಿ ಕಂಡುಬಂದ ವೈಚಾರಿಕ-ಸಾಂಸ್ಕೃತಿಕ ಸ್ಥಿತ್ಯಂತರದಲ್ಲಿ ತನ್ನದೇ ಆದ ವಿಶಿಷ್ಟ ನಡೆಯ ಮೂಲಕ ಪಾಲ್ಗೊಂಡವರು. ಸಂಘಟಕರಾಗಿ, ಪ್ರಕಾಶಕರಾಗಿ, ಕವಿಯಾಗಿ, ನಾಟಕಕಾರರಾಗಿ, ನಟರಾಗಿ, ಹೋರಾಟಗಾರರಾಗಿ ಅವರು ಪಡೆದ ಅನುಭವಗಳು ಅವರ ಒಟ್ಟು ವೈಚಾರಿಕತೆಯ ಬೆನ್ನಿಗಿದೆ. ಈ ಅನುಭವಗಳು ತೆನೆಗಟ್ಟಿ, ಗಟ್ಟಿಕಾಳುಗಳಾಗಿ ಈ ಪುಸ್ತಕದಲ್ಲಿ ನೆಲೆನಿಂತಿವೆ. 
ಸಾಂಕೇತಿಕವಾಗಿಯೂ ಇದು ಬತ್ತದ (ಒಣಗದ) ತೆನೆ. ಎಂದೂ ಬತ್ತದ ತೆನೆ: ಬತ್ತ ಬಾರದ ವೈಚಾರಿಕತೆಯ ತೆನೆ. ಸ್ವಲ್ಪ ಗಟ್ಟಿಯಾಗಿ ಹೇಳಿದರೆ ಭತ್ತದ ತೆನೆ ಕೂಡ. ಭತ್ತ ಅನ್ನ ಕೊಡುತ್ತದೆ; ಅನ್ನ ಜೀವ ಕೊಡುತ್ತದೆ; ಬದಲಾವಣೆಗೆ ಶಕ್ತಿ ಕೊಡುತ್ತದೆ. 
ತಟ್ಟನೆ ಈ ಸಂಕಲನ ಓದಿ ಮುಗಿಸಿದಾಗ ಆಗುವ ಅನುಭವ ಇದು. 

1. ಸಂಶೋಧನೆಯ ಶಿಸ್ತು, ಒಳನೋಟ ಒಂದೆಡೆಯಾದರೆ ಅಪರೂಪದ ಮಾಹಿತಿಗಳ, ದಾಖಲೆಗಳ ಕೋಶ ಇನ್ನೊಂದೆಡೆ.
2. ಪ್ರತಿ ಆಲೋಚನೆಯೂ ಪ್ರಾಯೋಗಿಕ ನೆಲೆಯಲ್ಲಿಯೇ ರೂಪುಗೊಂಡಿದೆ. 
3. ಇಲ್ಲಿಯ ಬಹುತೇಕ ಲೇಖನಗಳು ವರ್ತಮಾನದೊಂದಿಗೆ ಕವಿ ಹೃದಯದ ಅರ್ಥಪೂರ್ಣ ಮುಖಾಮುಖಿಯೇ ಆಗಿದೆ. ಸಂಭವಿಸಿದ ಎಲ್ಲಾ ಬಿಕ್ಕಟ್ಟಿನ ಸಂದರ್ಭದಲ್ಲಿಯೂ ಅದನ್ನು ಮೀರಿ ಹೊಸ ವ್ಯವಸ್ಥೆಯೆಡೆಗೆ ಹೆಜ್ಜೆ ಇಡುವ ಸ್ಪಷ್ಟ ಆಶಾವಾದ ಲೇಖನದ ವೈಚಾರಿಕತೆಯನ್ನು ರೂಪಿಸಿದೆ. 

         ಶಿಕ್ಷಣ, ಕೋಮುವಾದ, ಅಭಿವೃದ್ಧಿ, ರಾಜಕಾರಣ, ಸಾಹಿತ್ಯ, ಚರಿತ್ರೆಗಳಿಗೆ ಸಂಬಂಧಿಸಿದ 22 ವೈವಿಧ್ಯಮಯ ಚಚರ್ೆಯನ್ನು 3 ತೆನೆಗಳಲ್ಲಿ ಜೋಡಿಸಿಟ್ಟಿದ್ದಾರೆ. ಮೊದಲ ತೆನೆ ಸಾಹಿತ್ಯ-ಚಳುವಳಿ-ಚರಿತ್ರೆಗೆ ಸಂಬಂಧಿಸಿದ್ದಾದರೆ, ಎರಡನೆ ತೆನೆ ಶಿಕ್ಷಣ ವ್ಯವಸ್ಥೆಗೆ ಸಂಬಂಧಿಸಿದ್ದು. ಮೂರನೆ ತೆನೆ ಪ್ರಚಲಿತ ವಿದ್ಯಮಾನಗಳಿಗೆ, ಬಿಕ್ಕಟ್ಟಿಗೆ  ಸಂಬಂಧಿಸಿದ್ದು. 
                                                                  -1-
     ಸಂಶೋಧನಾತ್ಮಕ ಲೇಖನಗಳಲ್ಲಿ 'ಕನ್ನಡ ಚಳುವಳಿ: ನಿನ್ನೆ, ಇಂದು ಮತ್ತು ನಾಳೆ'ಎನ್ನುವ ಲೇಖನವನ್ನು ಹೊರತು ಪಡಿಸಿದರೆ ಉಳಿದ 5 ಲೇಖನಗಳು ಉತ್ತರ ಕನ್ನಡಕ್ಕೆ ಸಂಬಂಧಿಸಿದ್ದು. 

     "ಒಂದು ಭಾಷೆ ಒಂದು ಸಂಸ್ಕೃತಿಯ ವಾಹಕವಾಗಿರುತ್ತದೆ" ಎನ್ನವು ನಿಲುವಿನಿಂದ ಹೊರಡುವ ಚಳುವಳಿಯ ಕುರಿತ ಲೇಖನ ಸ್ವಾತಂತ್ರ್ಯ ಪೂರ್ವದಿಂದ ಈವರೆಗೆ ವಿವಿಧ ಕಾಲ ಸಂದರ್ಭದಲ್ಲಿ ಕನ್ನಡ ಎದುರಿಸಿದ ಬಿಕ್ಕಟ್ಟನ್ನು ಮತ್ತು ಅವನ್ನು ಚಳುವಳಿಯ ಮೂಲಕವೇ ಪರಿಹರಿಸಿಕೊಂಡ ಒಂದು ಹೋರಾಟದ ಕಥನವನ್ನು ನಮ್ಮ ಮುಂದಿಡುತ್ತದೆ. ಸೋಕಾಲ್ಡ ಕನ್ನಡ ಸಂಘಟನೆಯಂತೆ ಎಲ್ಲೂ ಭಾವಾವೇಶಕ್ಕೆ ಒಳಗಾಗದೇ ಕನ್ನಡ ನೆಲ-ಜಲ-ಶಿಕ್ಷಣದ ಕುರಿತ ಪ್ರೀತಿಯನ್ನು ಸದಾ ಪೋಷಿಸಿಕೊಳ್ಳುತ್ತಲೇ ವಸ್ತುನಿಷ್ಟವಾಗಿ ವಿಸ್ತರಿಸಿಕೊಳ್ಳುವ ಲೇಖನವಿದು. ಅಂತಿಮವಾಗಿ  'ಕನ್ನಡ ಚಳುವಳಿ' ಎನ್ನುವುದು ನಿರಂತರ ಇರುವಂಥದ್ದು. ಇರಬೇಕಾದುದು. ಇವನ್ನೆಲ್ಲಾ ಆಗುಮಾಡುವುದಕ್ಕೆ ನಾಳೆಯೂ ಕನ್ನಡ ಚಳುವಳಿ ಬೇಕೆ ಬೇಕು. ಹೊಸ ಸಮಸ್ಯೆಗಳು ಹುಟ್ಟಿಕೊಂಡಂತೆ ಪರಿಹಾರಕ್ಕಾಗಿ ಹೋರಾಟವು ಇರಬೇಕಾಗುತ್ತದೆ. (ಪು.33) ಎನ್ನುವ ಅರ್ಥಪೂರ್ಣ ನಿಲುವನ್ನು ಮಂಡಿಸುತ್ತಾರೆ. ಇದೊಂದೇ ಲೇಖನವಲ್ಲ, ಹಲವು ಲೇಖನಗಳಲ್ಲಿ ಚಳುವಳಿಯ ಅರ್ಥಪೂರ್ಣತೆಯ ಬಗ್ಗೆ, ಹೊಸನಾಡು ಕಟ್ಟುವಲ್ಲಿ ಚಳುವಳಿಯು ವಹಿಸುವ ಪಾತ್ರದ ಬಗ್ಗೆ ಲೇಖಕರು ಪ್ರಸ್ತಾಪಿಸುತ್ತಾರೆ. 

           1800 ರಲ್ಲಿ ಮನ್ರೋ ಏಕೀಕರಣದ ಕುರಿತು ಆಡಿದ ಮಾತಿನಿಂದ ಪ್ರಾರಂಭಿಸಿ ಕನರ್ಾಟಕದಲ್ಲಿ ನಡೆದ ಏಕೀಕರಣ ಚಳುವಳಿ, 1890 ರಲ್ಲಿ ವಿದ್ಯಾವರ್ಧಕ ಸಂಘದ ಉದಯ, 1915ರಲ್ಲಿ ಸಾಹಿತ್ಯ ಪರಿಷತ್ತಿನ ಹುಟ್ಟು, 1924ರಲ್ಲಿ ಕನರ್ಾಟಕ ಸಭಾದ ಉದಯವನ್ನೂ ಒಳಗೊಂಡಂತೆ ಇಡೀ ಏಖೀಕರಣ ಚಳುಳಿಯನ್ನು ಸಮೀಕ್ಷಿಸುತ್ತಾರೆ. ಏಖೀಕರಣಕಾರರ ಆಶಯದ ಹಿನ್ನೆಲೆಯಲ್ಲಿ ಮುಂದೆ ಸಕಾರ ರೂಪಿಸಿದ ಹಲವು ವರದಿಗಳು, ಅದರ ವಿರುದ್ದ ನಡೆದ ಚಳುವಳಿಗಳ ಪೂರ್ಣ ಮಾಹಿತಿ ಇಲ್ಲಿ ಸಿಗುತ್ತದೆ. ಕನರ್ಾಟಕದ ಪರವಾಗಿ ದೋಷರಹಿತವಾದ ಮನವಿಯೊಂದನ್ನು ಸಲ್ಲಿಸುವುದಕ್ಕಾಗಿ ಏಕೀಕರಣ ಪರಿಷತ್ತು ಕರಡು ಸಮಿತಿಯೊಂದನ್ನು ರಚಿಸಿತ್ತು. ಆ ಕರಡು ಸಮೀತಿಯ ಕಾರ್ಯದಶರ್ಿಯಾಗಿ ನಿಯುಕ್ತರಾದವರು ಕವಿ ದಿನಕರದೇಸಾಯಿ(ಪು.12) ಎನ್ನುವ ಅಪರೂಪದ ಮಾಹಿತಿ ಗಮನ ಸೆಳೆಯುತ್ತದೆ.

               ಹಲವು ಅಪರೂಪದ ದಾಖಲೆಗಳನ್ನು, ಮಾಹಿತಿಗಳನ್ನು ಒದಗಿಸುವ ಲೇಖನ 'ಉ.ಕ ಅಂದು, ಇಂದು, ನಾಳೆ.' ಕ್ರಿ.ಪೂ. 3ನೇ ಶತಮಾನದಿಂದ ಪ್ರಾರಂಭಿಸಿ ಸ್ವಾತಂತ್ರ್ಯ ಹೋರಾಟ, ರೈತ ಹೋರಾಟ ಸಮಾಜವಾದಿ ಜನಾಂದೋಲನ, ಸಾಂಸ್ಕೃತಿಕ ರಂಗ, ಜಿಲ್ಲೆಯ ವಿಭಜನೆ, ಜಿಲ್ಲೆಯ ಭವಿಷ್ಯ- ಹೀಗೆ ಜಿಲ್ಲೆಯ ಹತ್ತು ಹಲವು ಮುಖಗಳನ್ನು ಇವು ಚಚರ್ೆಗೆ ಎತ್ತಿಕೊಂಡಿವೆ. ಇಲ್ಲಿಯ ದಲಿತ ಚಳುವಳಿ ಮತ್ತು ಮಹಿಳಾ ಚಳುವಳಿಯನ್ನು ಎತ್ತಿಕೊಂಡಿದ್ದರೆ ಬಹುಶ: ಲೇಖನ ಇನ್ನಷ್ಟು ಪರಿಪೂರ್ಣವಾಗುತ್ತಿತ್ತು. 
          ಹಲವು ದೃಷ್ಟಿಯಿಂದ ಸಾಂಸ್ಕೃತಿಕ ರಂಗದ ಕುರಿತ ಭಾಗ ಮುಖವಾದದ್ದು. ಲೇಖನದ ಒತ್ತು ಕೂಡ ಇದಕ್ಕೇ ಇದೆ. ಡೇಂಗಾ ನಾಯ್ಕ, ಲಕ್ಷಣ ಬಾಬಣಿ ಪೈ, ಗಜಾನನ ಭಟ್ನಾಗರಾಜ ಶಂಭು ಹನುಮಂತರಾವ್ ಮಾಂಜ್ರೇಕರ್, ಮಗ ಶೆಟ್ಟಿ, ನಾಜಗಾರ ಮೊದಲಾದ ಅಪರೂಪದ ಮತ್ತು ಚರಿತ್ರೆಯಲ್ಲಿ ಮರೆಯಾದವರ ಹೆಸರು ಮತ್ತು ಅವರ ಕೃತಿಯ ವಿವರಗಳು (ಪು.39ರಿಂದ43) ಉಕ ಜಿಲ್ಲೆಯ ಸಾಹಿತ್ಯ ಚರಿತ್ರೆಯ ರಚನಾಕಾರರಿಗೆ ಒಂದು ಆಕರದಂತಿದೆ.

                  'ನಿರುದ್ಯೋಗ ಬೆಳೆಯುತ್ತಿದೆ, ರೈತದ ಭೂಮಿ ರೈತರಿಗಿಲ್ಲ. ಶಿಕ್ಷಣ ಖಾಸಗಿಕರಣದಿಂದ ದುಬಾರಿ ಆಗುತ್ತಿದೆ. ಹಾಗಾದರೆ ಮುಂದೇನು?' ಎನ್ನುವ ಉ.ಕ ದ ನಾಳೆಯ  ಪರ್ಯಾಯದ ಕುರಿತ ಚಚರ್ೆಯನ್ನು ತೀರಾ ಸಂಕ್ಷಿಪ್ತವಾಗಿ ಮಾಡಿ ಬಿಡುತ್ತಾರೆ. ಇನ್ನಷ್ಟು ವಿಸ್ತರಣೆಯ ಅಗತ್ಯವಿತ್ತು ಎನ್ನಿಸುತ್ತದೆ. 

            ಪರಸ್ಪರರು ದ್ವೀಪವಾಗಿ ಬದುಕುವುದಕ್ಕಿಂತ ಕೂಡಿಬಾಳುವ ಮನೋಭಾವ ಬೆಳೆಸಿಕೊಳ್ಳಬೇಕು; ದ್ವೀಪ ಸಂಸ್ಕೃತಿ ಪ್ರಗತಿಗೆ ತಡೆಯಾಗುತ್ತದೆ ಎಂದು ಹೇಳುತ್ತಾ ಜಿಲ್ಲೆಯಲ್ಲಿಯೇ ನೆಲೆನಿಂತಿರುವ ಬೌದ್ಧಿಕ ದಾರಿದ್ರ್ಯವನ್ನು ಕಳೆದು ಕೊಂಡಾಗ ಮಾತ್ರ ಈ ಜಿಲ್ಲೆಗೆ ಭವಿಷ್ಯವಿದೆ ಎನ್ನುತ್ತಾರೆ. ಆದರೆ ಹೀಗೆ ಕೂಡಿಬಾಳುವ, ದಾರಿದ್ರ್ಯ ಕಳೆದುಕೊಳ್ಳುವ ಮಾರ್ಗ ಯಾವುದು? ಎನ್ನವುದೇ ನಮ್ಮ ಮುಂದಿನ ಪ್ರಶ್ನೆ. ಈ ಪ್ರಶ್ನೆಗೆ ಇಲ್ಲಿ ಉತ್ತರ ಸ್ಪಷ್ಟವಾಗಿ ಕಾಣದಾಗಿದೆ. 

               ಇನ್ನೊಂದು ಅವರನ್ನು ಕಾಡಿದ್ದು ಜಿಲ್ಲೆಯ ವಿಭಜನೆ ಮಾಡುತ್ತಾರೆ ಎಂಬ ಹೇಳಿಕೆ. ಸ್ವಾತಂತ್ರ್ಯ ಚಳುವಳಿ, ಶಿಕ್ಷಣ ಚಳುವಳಿ, ರೈತ ಚಳುವಳಿ, ಸಾಮಾಜಿಕ ಚಳುವಳಿಗಳಲ್ಲಿ ಒಟ್ಟಾಗಿಯೇ ತೊಡಗಿಸಿಕೊಂಡ ಜಿಲ್ಲೆ ದೇಶದಲ್ಲಿಯೇ ವೈವಿಧ್ಯತೆಯ ಆಗರ. ಇದನ್ನು ಇಬ್ಭಾಗಿಸುವ ಹಿಂದಿನ ಪಟ್ಟಭದ್ರ ರಾಜಕೀಯ ಕಾರಣಗಳನ್ನು ಸೂಕ್ಷ್ಮವಾಗಿ ಗ್ರಹಿಸುವ ಲೇಖಕರು ಉತ್ತರ    (48) ತಲಾವಾರು ಅನುದಾನವೇ ಅತ್ಯಂತ ಕಡಿಮೆ ಇರುವ ಗುಡ್ಡಗಾಡು ಜಿಲ್ಲೆಯಾದ ಉ.ಕ ಕ್ಕೆ ಇದು ಅನ್ವಯಿಸದು. ಒಂದುವೇಳೆ ಇಬ್ಭಾಗವಾದಲ್ಲಿ ಅಲ್ಲಿ ಬರುವ ಅನುದಾನ ನಮ್ಮ ಗ್ರಾಮೀಣ ಜನ ಆಡಿಕೊಳ್ಳುವಂತೆ ಅವಲಕ್ಕಿಗೂ ಸಾಲದು ಎನ್ನುತ್ತಾರೆ. ಇದು ಸತ್ಯವಾದರೂ ಚಿಕ್ಕ ರಾಜ್ಯ, ಜಿಲ್ಲೆ ಎನ್ನುವ ರಾಜಕಾರಣದಿಂದ ಅಭಿವೃದ್ಧಿ ಸಾಧ್ಯ ಎನ್ನುವ ಭಾವವೂ ಸರಿಯಾದುದಲ್ಲ. ಹೀಗೆ ಜಿಲ್ಲೆ ಹಿಂದುಳಿದಿರುವಿಕೆಗೆ ಅದರ ಭೌಗೋಲಿಕ ವ್ಯಾಪ್ತಿಗಿಂತ ಆಳುವ ವರ್ಗ ರೂಪಿಸಿಕೊಂಡಿರುವ ಭ್ರಷ್ಟತೆ ಮತ್ತು ಅಭಿವೃದ್ಧಿಯ ಪ್ರಾಥಮಿಕ ತಿಳುವಳಿಕೆಯಾಗಲೀ, ಅಭಿವೃದ್ಧಿ ಮಾಡುವ ಇಚ್ಛೆಯಾಗಲೀ ಹೊಂದಿರದ ಬಂಡವಾಳಶಾಹಿ ರಾಜಕಾರಣದ ವೈಫಲ್ಯ ಎನ್ನುವುದು ಇನ್ನಷ್ಟು ಬಲವಾಗಿ ನಾವು ಜನರ ಮುಂದಿಡಬೇಕಾಗಿದೆ. ಜನರೆದುರು ತಮ್ಮ ವೈಫಲ್ಯವನ್ನು ಮರೆಮಾಚಲು ಇಂದು ಶೈಕ್ಷಣಿಕವಾಗಿ ಜಿಲ್ಲೆ ಬೇರೆಮಾಡಿದರು, ನಾಳೆ ರೆವಿನ್ಯು ಜಿಲ್ಲೆ ಬೇರಾಗುತ್ತದೆ. ವಿಭಜನೆಯ ರಾಜಕೀಯದಲ್ಲಿ ದನಿ ಇಲ್ಲದ ಜೋಯ್ಡಾದಂತವು ಬಲಿ ಆಗಬೇಕಾಗುತ್ತದೆ. ಜಿಲ್ಲೆಯ ಅಭಿವೃದ್ದಿಗೆ(ಪು. 47)'ಅಂಕೋಲೆಯ ಕನರ್ಾಟಕ ಸಂಘ : 50 ವಸಂತ' ಲೇಖಕರ ಆತ್ಮಕಥೆಯ ಭಾಗದಂತಿದೆ. ಒಂದರ್ಥದಲ್ಲಿ ಇದು ಅಂಕೋಲೆಯ ಸಾಂಸ್ಕೃತಿಕ ಇತಿಹಾಸ. 'ಉಕ ಜಿಲ್ಲೆಯ ಸಾಹಿತ್ಯದ ಸಮೃದ್ಧಿ ಮತ್ತು ಬೀದಿ ನಾಟಕ ಮತ್ತು ಉತ್ತರ ಕನ್ನಡ' ಲೇಖನಗಳು ಅಪರೂಪದ ಮಾಹಿತಿ ಒದಗಿಸುವಲ್ಲಿ ಮಾತ್ರ ನಿಲ್ಲುತ್ತವೆ. ಹಾಗಾಗಿ ಇಲ್ಲಿ ಸೇರಬೇಕಾದ ಹೆಸರುಗಳ ಪಟ್ಟಿ ಇನ್ನಷ್ಟು ದಾಖಲಾಗದೇ ಉಳಿದುಬಿಡುವ ಸಾಧ್ಯತೆ ಹೆಚ್ಚಿದೆ. 

            ಒಂದೆರಡು ಲೇಖನ ಹೊರತುಪಡಿಸಿದರೆ ತೀರಾ ತಾತ್ವಿಕ ಚಚರ್ೆಗೆ ಮುಂದಾಗದ ಲೇಖಕರು ತಾವು ರಚಿಸಿದ ಚರಿತ್ರೆಯ ಸಹಪ್ರಯಾಣಿಕರು ಎನ್ನುವುದನ್ನು ಅಲ್ಲಗಳೆಯಲಾಗದು. ಹಾಗಾಗಿ ಈ 'ತೆನೆ'ಗೆ ಜಿಲ್ಲೆಯ ಸಾಂಸ್ಕೃತಿಕ ಚರಿತ್ರೆಯ ಏಳು-ಬೀಳುಗಳನ್ನು ಹೇಳುವ ಒಂದು ಅಧಿಕೃತತೆ ಪ್ರಾಪ್ತವಾಗಿದೆ. 
                                                              -2-
                 ಬದುಕಿಗೂ ಶಿಕ್ಷಣಕ್ಕೂ ಇರುವ ಅಂತಸ್ಸಂಬಂಧವನ್ನು ಲೇಖಕರು ಪ್ರಾಯೋಗಿಕವಾದ ನೆಲೆಗಟ್ಟಿನ ಮೇಲೆ  ವಿಶ್ಲೇಷಿಸಿದ್ದಾರೆ. ಇದು ಶಿಕ್ಷಣದ ಸುಖದುಃಖದ ಕಥನವಾಗಿದೆ. ಪ್ರಚಲಿತ ಶಿಕ್ಷಣ ವ್ಯವಸ್ಥೆಯ ಸಾಧಕ-ಬಾಧಕಗಳನ್ನು ಚಿತ್ರಿಸುವ ಲೇಖಕರು ಸ್ವತ: ಶಿಕ್ಷಕರಾಗಿ, ಉಪನ್ಯಾಸಕರಾಗಿ, ಶಿಕ್ಷಣ ತಜ್ಞರಾಗಿ ಸುಮಾರು 4 ದಶಕಗಳ ಕಾಲ ಪಟ್ಟ ಪಾಡು, ಉಂಡ ನೋವು, ಆವರಿಸಿದ ನಿರಾಶೆಗಳ ನಡುವೆ ಒಂದಿಷ್ಟಾದರೂ ಬದಲಾವಣೆ ತರಲೇಬೇಕೆಂಬ ಆಶಾವಾದಿ ಚಿಂತನೆಯ ಫಲವಾಗಿ ಈ ತೆನೆ ರೂಪುಗೊಂಡಿದೆ. ಶಿಕ್ಷಕರಾಗಿದ್ದು ಕೊಂಡು ಅವರೂ ಕೂಡ ಹಲವು ಪ್ರಯೋಗವನ್ನು ಮಾಡುತ್ತಲೆ ಇಡೀ ಶಿಕ್ಷಣರಂಗದ ದೋಷಗಳನ್ನು ತೆರೆದಿಡುತ್ತಾರೆ.

1. ಅನ್ನಕ್ಕೂ ಅಕ್ಷರಕ್ಕೂ ಸಂಬಂಧವೇ ಇಲ್ಲದಂತೆ ತರಗತಿ ಪಾಠಗಳು ಓಡುತ್ತಿವೆ.(ಪು.115)

2.  ನಮ್ಮ ತಾಯ್ತಂದೆಯರಿಗೆ ಮಕ್ಕಳ ಮನಸ್ಸನ್ನು ಓದುವ ಕಲೆ ಇನ್ನೂ ಕರಗತವಾಗದಿರುವುದೇ ಈ ಅನಾಹುತಕ್ಕೆ ಕಾರಣ(ಪು.120) 

3.  ವಾಷರ್ಿಕ ಪರೀಕ್ಷೆ ಎಂಬ ಪದವನ್ನು ಮೊದಲು ಅಳಿಸಿ ಹಾಕಬೇಕು.(ಪು. 101)

4. ಒಬ್ಬ ವಿದ್ಯಾಥರ್ಿಯ ಬಳಿ ಇರುವ ಕರ ಕೌಶಲಕ್ಕೆ ಅಂಕಗಳಿಲ್ಲ, ವಕ್ತೃತ್ವ ಶಕ್ತಿಗೆ ಅಂಕಗಳಿಲ್ಲ, ಇಂಪಾದ ಕಂಠಕ್ಕೆ ಅಂಕಗಳಿಲ್ಲ, ಮಿಂಚಿನ ಓಟಕ್ಕೆ ಅಂಕಗಳಿಲ್ಲ, ನಾಯಕತ್ವದ ಗುಣಕ್ಕೆ ಅಂಕಗಳಿಲ್ಲ, ಸಾಹಸಕ್ಕೆ ಅಂಕಗಳಿಲ್ಲ, ಲಲಿತ ಕಲೆಗಳ ಸೃಜನಶೀಲ ಅಭಿವ್ಯಕ್ತಿಗೆ ಅಂಕಗಳಿಲ್ಲ.(ಪು. 115)

- ಹೀಗೆ ಅವರು ಶಿಕ್ಷಣ ವ್ಯವಸ್ಥೆ ಪಡೆದ ದುರಂತಕ್ಕೆ ಪಾಲಕರು, ಪಠ್ಯಪುಸ್ತಕ ಮತ್ತು ಪ್ರಚಲಿತವಿದ್ದ ಶಿಕ್ಷಣ ನೀತಿ ಕಾರಣ ಎನ್ನುತ್ತಾರೆ. ಹಾಗಾಗಿಯೇ ಅವರು ಜಾಗತಿಕರಣ ಸೃಷ್ಠಿಸಿದ ಕೊಳ್ಳುಬಾಕ ಮನಸ್ಸಿನ ಹಿಂದೆ ಕುದುರೆ ಓಡಿಸಿಬಿಡುವ ಪಾಲಕರಿಗೆ ಶಿಕ್ಷಣವೆಂದರೆ ಕೇವಲ ವಿಜ್ಞಾನ ತಂತ್ರಜ್ಞಾನ ಮಾತ್ರವಲ್ಲ. ಅಲ್ಲಿ ಕಲೆಯಿದೆ, ಸಂಸ್ಕೃತಿ ಇದೆ, ಆಟೋಟಗಳಿವೆ,  ಅವು ಯಾವುದೂ ನಮ್ಮ ಹೆಚ್ಚಿನ ಪಾಲಕರಿಗೆ ಶಿಕ್ಷಣ ಅನಿಸುವುದೇ ಇಲ್ಲ ಯಾಕೆ? (ಪುಟ 99) ಎಂದು ಪ್ರಶ್ನಿಸುತ್ತಲೇ ಮನೆಪಾಠ, ಟ್ಯೂಶನ್,ಅಂಕಗಳ ಭೇಟೆಯ ಮೂಲಕ ಮಕ್ಕಳನ್ನು ಹಿಂಸೆಗೆ ದೂಡುತ್ತಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಾರೆ.

          ಈ ನೌಕರಿಗಾಗಿ ಓದು ಎಂಬ ಪರಿಕಲ್ಪನಾತ್ಮಕ ದೋಷವೇ ಇಂದಿನ ನಮ್ಮ ಶಿಕ್ಷಣ ರಂಗದ ಉಳಿದೆಲ್ಲ ಸಮಸ್ಯೆಗಳ ಮೂಲ ಎಂಬುದು ನನ್ನ ನಿಲುವು. (ಪು. 121) ಎಂದು ಹೇಳುವಾಗ ಕೂಡ ಕಲಿತವರಿಗೆ ನೌಕರಿಯ ಅಗತ್ಯವಿಲ್ಲ ಎಂಬ ಭಾವವೇನೂ ಇಲ್ಲ. ಬದಲಾಗಿ ಇತ್ತೀಚೆಗೆ ಪಾಲಕರು ಶಿಕ್ಷಕರು ಒಟ್ಟಾಗಿಯೇ ಮಕ್ಕಳನ್ನು ನಡೆಸಿಕೊಳ್ಳುತ್ತಿರುವ ಅಮಾನವೀಯ ರೀತಿ ಒಂದಾದರೆ ಶಿಕ್ಷಕರೆಲ್ಲಾ ಹೀಗೆ  ಎಂಬ ನಿಲುವು ಲೇಖಕರದಲ್ಲ. 'ಆರದ ಕೈದೀಪ' ಲೇಖನದಲ್ಲಿ ಮಾದರಿ ಶಿಕ್ಷಕ ಜಿ. ಜೆ. ನಾಯಕ ಕುರಿತು ಪೀತಿಯಿಂದ ಬರೆದಿದ್ದಾರೆ.ಪು.127-139 ನೋಡಿ) ದೇಶದ ಕೆಲವು ವಿದ್ವಾಂಸರು ಶಿಕ್ಷಣರಂಗದ ಕ್ರಾಂತಿಕಾರಕ ಬದಲಾವಣೆ ಎಂದು ಕರೆಯಲ್ಪಡುವ ರಾಜಾರಾಮಣ್ಣ ವರದಿಯ ಅವೈಜ್ಞಾನಿಕ ಸಲಹೆಗಳನ್ನು ತಿರಸ್ಕರಿಸುವ ಭಾವವಿದೆ. ಶಿಕ್ಷಣ ಸುಧಾರಣೆಯ ಹೆಸರಿನಲ್ಲಿ ಈ ನೆಲದ ಸಾಂಸ್ಕೃತಿಕ-ಸಾಮಾಜಿಕ ವಿಶಿಷ್ಟತೆಯ ಅರಿವಿಲ್ಲದ ವರದಿಯನ್ನು  ಆಧಾರ ಸಹಿತವಾಗಿ ವಿಶ್ಲೇಷಿಸಿದ್ದಾರೆ. ನಮಗನಿಸುವ ಮಟ್ಟಿಗೆ ಭಾಷಾ ಮಾಧ್ಯಮದ ವಿಷಯವಾಗಿಯಾದರೂ ಗಣಿತ ವಿಜ್ಞಾನಗಳಂಥ ಎಲ್ಲೆಡೆ ಏಕರೂಪವಾಗಿ ಸಲ್ಲಬಹುದಾದ ವಿಷಯಗಳಲ್ಲಿ ಯಾರಾದರೂ ಇಡೀ ದೇಶಕ್ಕೆ ಏಕರೂಪದ ಶಿಕ್ಷಣ ನೀತಿಯನ್ನು ಯಾಕೆ ಅಳವಡಿಸಬಾರದು? ಯಾಕೆ ರಾಷ್ಟ್ರೀಯ ನೀತಿ ಎಂದಿರಬಾರದು? (ಪು. 125) ಎನ್ನುವಾಗಲೂ ಅಧಿಕಾರಕ್ಕೆ ಬಂದ ಪ್ರತಿ ಸರಕಾರ ತಮ್ಮ ಅಜೆಂಡಾಕ್ಕೆ ಅನುಗುಣವಾಗಿ ಶಿಕ್ಷಣ ನೀತಿಯಲ್ಲಿ ಮಾಡುವ ಅವೈಜ್ಞಾನಿಕ-ಅವೈಚಾರಿಕ ಬದಲಾವಣೆಯ ಕುರಿತ ವಿರೋಧ ಎದ್ದು ಕಾಣುತ್ತದೆ.

        ಹೊಸ ನಾಡುಕಟ್ಟುವ ಹೊಸ ಸಮಾಜಕ್ಕಾಗಿ ಎದುರುನೋಡುವ ಲೇಖಕರು ತಾವೇ ಹೇಳಿಕೊಂಡಂತೆ 'ಶಿಕ್ಷಣದ ಕುರಿತ ಪ್ರೀತಿ   ಮತ್ತು ಒತ್ತಾಸೆ'ಯನ್ನು ಶಿಕ್ಷಣದ ಕುರಿತ 8 ಲೇಖನದಲ್ಲೂ ಕಾಣಬಹುದು.
                                                              -3-
                   'ಬಿಡಿ ಬಿಕ್ಕಟ್ಟುಗಳು' ಮೂರನೇ ತೆನೆ. ಒಟ್ಟು 8 ಲೇಖನಗಳು ಇಲ್ಲಿವೆ. ನಾಡು ಎದುರಿಸುತ್ತಿರುವ ಹಲವು ಬಿಕ್ಕಟ್ಟುಗಳು ಇಲ್ಲಿ ಚಚರ್ೆಗೆ ಒಳಗಾಗಿವೆ. ಇದರೊಂದಿಗೆ ಮೊದಲೆರಡು ತೆನೆಗಳಲ್ಲಿಯೂ ಇರುವ ಲೇಖ
ಜಿಲ್ಲೆಯ ಬಹುದಿನಗಳ ಯಾಕೆ ಬಹುದಶಕಗಳ ಬೇಡಿಕೆ ಅಂಕೋಲೆ ಹುಬ್ಬಳ್ಳಿ ರೈಲು ಮಾರ್ಗದ್ದು. ಇದರ ಮಹತ್ವದ ಕುರಿತು ದಿನಕರ ದೇಸಾಯಿ ಮೊಟ್ಟ ಮೊದಲ ಬಾರಿಗೆ ಲೋಕ ಸಭೆಯ ಗಮನಕ್ಕೆ ತಂದಿದ್ದನ್ನು ನೆನಪಿಸುವ ಲೇಖಕರು ಈ ಮಾರ್ಗದ ಅಗತ್ಯತೆ ಮತ್ತು ಸಾಧ್ಯತೆಗಳ ಕುರಿತು ಅರ್ಥಪೂರ್ಣವಾಗಿ ಬರೆದಿದ್ದಾರೆ. ಹೆಸರನ್ನು ಮತ್ತು ದುಡ್ಡನ್ನು ಮಾಡಿಕೊಂಡಿರುವ ಕೆಲವು ಪರಿಸರವಾದಿಗಳ ಟೊಳ್ಳುತನದ ಬಗ್ಗೆ ಗಮನಸೆಳೆದಿದ್ದಾರೆ. ಮುಂದುವರಿದು ಈ ಜಿಲ್ಲೆಯ ಜನಪ್ರತಿನಿಧಿಗಳ ನಿಷ್ಕ್ರಿಯತೆ ಮತ್ತು ನಿರಾಸಕ್ತಿಯನ್ನು ಖಂಡಿಸಲು ಮರೆತಿಲ್ಲ. 

            ಸುಗ್ರಿವಾಜ್ಞೆಯೊಂದರ ಮೂಲಕ ರಾಜಧನ ರದ್ದು ಮಾಡಿದ, ಹೆಚ್ಚು ಆದಾಯ ತರುತ್ತಿರುವ ಖಾಸಗಿ ಬ್ಯಾಂಕುಗಳನ್ನೆಲ್ಲ ರಾಷ್ಟ್ರೀಕರಣ ಮಾಡಿದ ಸಕರ್ಾರಕ್ಕೆ ಕಪ್ಪುಹಣದ ಕೊಳವಾಗಿರುವ ದೇಗುಲಗಳನ್ನು ತನ್ನ ಸುಪದರ್ಿಗೆ ತಂದುಕೊಳ್ಳುವ ಇಚ್ಛಾಶಕ್ತಿ ಯಾಕಿಲ್ಲ? (ಪುಟ 192) ಎಂಬ ಪ್ರಶ್ನೆ ಕೇಳುವ ಲೇಖಕರು ಮಠ ಮಂದಿರಗಳಲ್ಲಿ ಸಂಗ್ರಹವಾದ ಸಂಪತ್ತು ಪ್ರಾಮಾಣಿಕ ದುಡಿಮೆಯದ್ದಲ್ಲ; ಜನಸಾಮಾನ್ಯರ ಬೆವರನ್ನು ಕದ್ದಿದ್ದು (ಪುಟ 193) ಹಾಗಾಗಿ ಸಂವಿಧಾನಕ್ಕೆ ಸೂಕ್ತತಿದ್ದುಪಡಿಯನ್ನಾದರೂ ತಂದು ಈ ಆಸ್ತಿಯನ್ನು ವಶಪಡಿಸಿಕೊಳ್ಳಲು ಒತ್ತಾಯಿಸುತ್ತಾರೆ. 

                  ಭ್ರಷ್ಟಾಚಾರ ವ್ಯವಸ್ಥೆ ನೆನಪಾದಾಗೆಲ್ಲ ಕೆಂಡಾಮಂಡಲವಾಗುವ ಲೇಖಕರು ಭ್ರಷ್ಟಾಚಾರ ನಿಮರ್ೂಲನೆಯ ಪ್ರಕ್ರಿಯೆ ನಮ್ಮ ಮನೆಯಿಂದಲೇ ಮೊದಲಾಗಬೇಕು ಎಂದು ಹೇಳಿ ಲೋಕಪಾಲ ಮಸೂದೆಯ ಕುರಿತು ಚಚರ್ಿಸುತ್ತಾರೆ. ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡಲು ಅಣ್ಣ ಹಜಾರೆ ಅವತಾರ ಎತ್ತು ಬಂದಿದ್ದಾನೆ ಎಂದು ಮಾಧ್ಯಗಳು ಬರೆಯುತ್ತಿರುವಾಗ ಲೇಖಕರು ಅಣ್ಣಾ ಹಜಾರೆಯನ್ನು ಒಪ್ಪಿಕೊಳ್ಳುತ್ತಲೇ ಅವರ ಬೇಡಿಕೆಯನ್ನು ಖಾರವಾಗಿಯೇ ವಿಮಶರ್ಿಸುವದು ಗಮನಿಸಬೇಕಾದ ಸಂಗತಿ. ಈ ಎಲ್ಲಾ ಬದಲಾವಣೆಗೆ ಮನಸ್ಸು ಮಾಡಬೇಕಾದ್ದು ಯುವಕರೇ ಆಗಿರುವುದರಿಂದ 'ಯುವ ಮನಸುಗಳೇ . . . ಲೇಖನದಲ್ಲಿ ಯುವ ಜನರ ಋಣಾತ್ಮಕ ಅಂಶಗಳನ್ನು ಹೇಳುತ್ತಲೇ ನಾನು ನಿಮ್ಮ ಕುರಿತು ಆಶಾವಾದಿಯಾಗಿದ್ದೇನೆ ಎಂದು ವ್ಯವಸ್ಥೆಯ ಕೊರತೆ ನೀಗಿಸುವ ಹೊಣೆ ಹೊರಲು ಕರೆಕೊಡುತ್ತಾರೆ. 

                  ದೇಶದ ತುತರ್ು ಹಸಿವು ಸಾಮಾಜಿಕ ನ್ಯಾಯದ್ದು. ಸಾಮಾಜಿಕ ನ್ಯಾಯದ ಪ್ರಶ್ನೆ ಕೇವಲ ಉಳ್ಳವರು ಮತ್ತು ಇಲ್ಲದಿರುವವರು ಮಾತ್ರವಲ್ಲ ನಮ್ಮ ಹೆಣ್ಣು ಮಕ್ಕಳಿಗೆ ನಾವು ಎಷ್ಟು ಸ್ವಾತಂತ್ರ್ಯ ನೀಡಿದೇವೆ ಎಂಬ ಬಗ್ಗೆ ಕೂಡ ನಾವು ಪ್ರಶ್ನಿಸಿಕೊಳ್ಳಬೇಕಾಗಿದೆ. (ಪುಟ 170) ಆದರೆ ಇದರ ಬದಲಾವಣೆ ಹೇಗೆ ಎನ್ನುವ ಪ್ರಶ್ನೆಗೆ ಅವರು ವರ್ಗ ಸಂಘರ್ಷದ ಕಡೆಗೆ ಕೈತೋರಿಸುತ್ತಾರೆ. ವರ್ಗ ಸಂಘರ್ಷಕ್ಕೆ ಹತ್ತಾರು ಮುಖಗಳಿವೆ. ಆಥರ್ಿಕ ಕಾರಣ, ಸಾಮಾಜಿಕ ಕಾರಣ, ಲಿಂಗ ತಾರತಮ್ಯದ ಕಾರಣ, ರಾಜಕೀಯ ಮೇಲಾಟಗಳು, ಇಂಗ್ಲೀಷ ಭಾಷೆಯ ವ್ಯಾಮೋಹ ನಿಮರ್ಿಸಿದ ವರ್ಗ, ವರ್ಣ ವ್ಯವಸ್ಥೆ, ನಿರುದ್ಯೋಗ ಸಮಸ್ಯೆ- ಹೀಗೆ ಹತ್ತು ಹಲವು ಕಾರಣಗಳಿಗಾಗಿ ಇಂದು ಸಮಾಜದಲ್ಲೊ ಮೇಲು-ಕೀಳು ಭಾವ ಹೆಚ್ಚುತ್ತಿದೆ, ವರ್ಗರಹಿತ ಸಮಾಜವೇ ನಮ್ಮೆಲ್ಲರ ಪರಮ ಗುರಿಯಾಗಬೇಕಾಗಿದೆ. (ಪುಟ170) ಎನ್ನುವ ಅವರ ಬರವಣಿಗೆ ತಲುಪುವ ಕೊನೆ ಇದು. ಬಡವರ ಬಗ್ಗೆ, ರೈತ ಬಗ್ಗೆ, ಶಿಕ್ಷಣದ ಬಗ್ಗೆ, ಹಿಂದುಳಿದವರ ಬಗ್ಗೆ ಬರೆಯುವಾಗಲೂ ಅದರ ಹಿನ್ನೆಲೆಯಲ್ಲಿರುವ ವರ್ಗ ಗುಣದ ವಿವಿಧ ರೂಪಗಳ ಕುರಿತೇ ಹೆಚ್ಚು ಆಸಕ್ತಿ ವಹಿಸುತ್ತಾರೆ. 'ಉ.ಕ ಅಂದು, ಇಂದು, ನಾಳೆ' ಎನ್ನುವ ಮೊದಲಭಾಗದ ಲೇಖನದಲ್ಲಿ  ಜಿಲ್ಲೆಯ ಸ್ಥಿತಿಗತಿಯ ಕುರಿತು ಚಚರ್ಿಸುವ ವಿಷ್ಣುನಾಯ್ಕ ಅವರು ಜಿಲ್ಲೆಯ ನಿರಾಶ್ರಿತರ ಸಮಸ್ಯೆ (ಪು.45) ಬುಡಕಟ್ಟುಗಳ ಸಮಸ್ಯೆ (ಪು.44) ರೈಲು ಮಾರ್ಗದ ಸಮಸ್ಯೆ (ಪು.46) ಭೂಮಿಯ ಸಮಸ್ಯೆ (ಪು 44) ಕೈಗಾರಿಕೆಯ ಸಮಸ್ಯೆ (ಪು.47)ಗಳ ಬಗ್ಗೆ ವಿವರವಾಗಿ ಬರೆಯುತ್ತಾ ಜಿಲ್ಲೆಯ ಯಾವೊಂದು ಸಮಸ್ಯೆಯನ್ನೂ ಜೀವಂತವಾಗಿಯೇ ಉಳಿಸಿರುವುದಕ್ಕೆ ಕೇಂದ್ರ ಸಕರ್ಾರದ ಕಣ್ಣು ತೆರೆಸುವಲ್ಲಿ ಮುಂದೆ ಆಯ್ಕೆಯಾಗಿ ಹೋಗಿರುವ ನಮ್ಮ ಜನಪ್ರತಿನಿಧಿಗಳು ಸೋತಿದ್ದಾರೆಂದೇ ಹೇಳಬೇಕಾಗುತ್ತದೆ. ತಮ್ಮನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಕೇಳುತ್ತಲೇ ಈ ಜನ ಎರಡು ತಲೆಮಾರನ್ನು ಕಳೆದುಕೊಂಡಿರುವುದು ನೋವಿನ ಸಂಗತಿ (ಪು.45) ಎಂದು ಸರಿಯಾಗಿಯೇ ಗುರುತಿಸಿದ್ದಾರೆ. ದೇಸಾಯಿಯಂಥ ಓರ್ವ ಹೋರಾಟಗಾರ ಇಲ್ಲದಿರುವ ನೋವು ಅವರದು. 
              ಖಂಡಿತವಾಗಿಯೂ 3-4 ದಶಕಗಳಿಂದಲೂ ಹಾಲಕ್ಕಿ, ಕುಣಬಿಗಳನ್ನು ಬುಡಕಟ್ಟು ಎಂದು ಘೋಷಿಸುವ ಚಚರ್ೆ ಮಾತ್ರ ನಡೆಯುತ್ತಿದೆ. ರಾಜ್ಯ, ಕೇಂದ್ರದಲ್ಲಿ ಎಲ್ಲಾ ರಿತಯ ಸಕರ್ಾರಗಳು ಬಂದು ಹೋದರೂ ಅವರು ಭರವಸೆಯಲ್ಲಯೇ ಬದುಕುವಂತಾಗಿದೆ. ಸಾವಕಾಶವಾಗಿ ಅವರು ಬುಕಟ್ಟಿನ ಚೆಹರೆ ಕಳಕೊಳ್ಳುತ್ತಿದ್ದಾರೆ. ಇನ್ನೊಂದು ದಶಕದಲ್ಲಿ ಅವರನ್ನು ಬುಡಕಟ್ಟು ಎಂದು ಗುರುತಿಸಿದರೂ ಆ ಸಮುದಾಯಕ್ಕೆ ಯಾವ ಪ್ರಯೋಜನವೂ ಆಗದ ಸ್ಥಿತಿ ಇದೆ. ಈ ಬೇಜವಾಬ್ದಾರಿ ತನಕ್ಕೆ ನಮ್ಮ ಜನಪ್ರತಿನಿಧಿಗಳಲ್ಲಿ ಮನುಷ್ಯತ್ವದ ಕೊರತೆ ಎನ್ನುವುದುದರಲ್ಲಿ ಯಾವ ಅನುಮಾನಗಳೂ ಇಲ್ಲ. ಇನ್ನು ಕೆಲವೇ ವರ್ಷಗಳಲ್ಲಿ ಉಕ ಜಿಲ್ಲೆ ನಿರಾಶ್ರಿತರ ಜಿಲ್ಲೆ ಎಂದು ಹೆಸರು ಪಡೆದರೆ ಆಶ್ಚರ್ಯವಿಲ್ಲ. 

ಆದರೂ ಹಾಗೆಯೇ ನಮ್ಮ ಜಿಲ್ಲೆಯಲ್ಲಿ ಚಳುವಳಿ ಪ್ರಾರಂಭವಾಗಿದ್ದೇ ಅಂಕೋಲೆಯಲ್ಲಿ. (ಪು.37) ಎನ್ನುವುದಾಗಲೀ, ದೇಸಾಯಿಯವರೇ ಜಿಲ್ಲೆಯ ಮೊದಲ ರೈತ ಹೋರಾಟಗಾರ ಎನ್ನುವ ಕೆಲವು ಭಾವನಾತ್ಮಕ ವಾಕ್ಯಗಳೂ ಆಗಾಗ ಬರುವುದೂ ಉಂಟು.  ಭಾವವಾಗಲೀ ಪೂರ್ಣಸತ್ಯವಲ್ಲ ಎನ್ನುವುದು ಇತ್ತೀಚಿನ ಅಧ್ಯಯನದಿಂದ ಸ್ಪಷ್ಟವಾಗಿದೆ. ಅದಕ್ಕಿಂತ ಮೊದಲೇ ಕಾರವಾರದ ಕಾಳಿನದಿಯ ಇಕ್ಕೆಲಗಳಲ್ಲಿ ಕಮ್ಯುನಿಷ್ಟರು ಸಂಘಟಿಸಿದ ರೈತ ಹೋರಾಟವೇ ಮೊದಲ ಸಂಘಟಿತ ಚಳುವಳಿ ಎನ್ನುವುದನ್ನು ದಾಖಲಿಸದೇ ಬಿಟ್ಟಿದೆ. 

ಕತೆ, ನಾಟಕ, ಕಾವ್ಯ,ವಿಮಶರ್ೆಹೀಗೆ ಜಗತ್ತಿಗೆ ಪಾಠ ಹೇಳಲು ಯಾವೆಲ್ಲಾ ದಾರಿಗಳಿವೆಯೋ ಅದನ್ನೆಲ್ಲಾ ಬಳಸಿಕೊಳ್ಳುತ್ತಿರುವ ಉತ್ತರ ಕನ್ನಡ ಜಿಲ್ಲೆಯ ಶಿಕ್ಷಕ ಪರಂಪರೆಯ ಮುಂದುವರಿಕೆಯಾಗಿರುವ ವಿಷ್ಣು ನಾಯ್ಕ ಅವರ ಗದ್ದೆಯಿಂದ ಇನ್ನಷ್ಟು ಬ(ಭ)ತ್ತದ ತೆನೆಗಳನ್ನು ಎದುರು ನೋಡುತ್ತೇವೆ.

ವಿಠ್ಠಲ ಭಂಡಾರಿ, ಕೆರೆಕೋಣ

No comments:

Post a Comment