Wednesday, 9 July 2014

ನಮಗಿರುವುದು ಅವಧಾನಿಯವರ 'ನಮು-ನಮೂನೆ'ಯ ನೆನಪುಗಳು ಮಾತ್ರ. - ಮಾಧವಿ ಭಂಡಾರಿ, ಕೆರೆಕೋಣ


 ನಮಗಿರುವುದು ಅವಧಾನಿಯವರ 'ನಮು-ನಮೂನೆ'ಯ ನೆನಪುಗಳು ಮಾತ್ರ. 

ಹೊತ್ತು ಮುಳುಗುವ ಮುನ್ನ ಹೊತ್ತು ನಡೆಯುವ ಬನ್ನಿ
ಜಿಗಿದು ಅಡಿಗೆ ದೇವರ ಕೋಣೆಯ ತುಳಿದು
ಉಪ್ಪರಿಗೆಯನ್ನೇರಿ ಅಗಳಿ ಮುರಿದು
ಕುದಿವ ಸಹಸ್ರ ಕಿರಣಗಳ
ಎಸಳು ಎಸಳಿಗೆ ಉಜ್ಜಿ ಪ್ರೀತಿ ಮುಕ್ಕುವುದಕ್ಕೆ
ಹೆಪ್ಪು ಕರಗಲೇ ಬೇಕು, ದ್ರವಿಸಿ ಪಾರಜವಾಗಿ
ಜುಟ್ಟ-ಜನಿವಾರಗಳ, ಗೋಸುಂಬೆ ಬಾಯಿಗಳ
ಕಚ ಕಚ ಕೊಚ್ಚಿ ಬೇಲಿ ಬಿಚ್ಚುವುದಕ್ಕೆ
ಮತ್ತೆ ಮತ್ತೆ ಕಾಯುವುದಿಲ್ಲ...

ಎಂದು ಭಾರತ ದೇಶದಲ್ಲಿ ಇರುವ ಜಾತಿ ವ್ಯವಸ್ಥೆಯನ್ನು ಕಂಡು ಮೈ ಉರಿದವರು ಕವಿ ಜಿ.ಎಸ್.ಅವಧಾನಿಯವರು. ಇದು ಅವರ 'ಗಂಗೋತ್ರಿಯ ಹಕ್ಕಿಗಳು' ಕವನ ಸಂಕಲನದ 'ಕಾಯುವುದಿಲ್ಲ' ಕವಿತೆಯ ಸಾಲುಗಳು. ಜಾತಿಯ ಹೆಸರಿನಲ್ಲಿ ಅಮಾನವೀಯವಾಗಿ ವತರ್ಿಸುವ, ಮನುಷ್ಯ ಮನುಷ್ಯರ ನಡುವೆ ಗೊಡೆ ಕಟ್ಟುವ ಗೋಸುಂಬೆಗಳ ಕಂಡರಾಗದ  ಕಟು ವಿಮರ್ಶಕರಿವರು. ಈ ಜಾತಿಯ ಕಟ್ಟಳೆಗಳನ್ನು ಕೊಚ್ಚಿ ಬೇಲಿ ಬಿಚ್ಚುವುದಕ್ಕೆ ಹೊರಟ ಇವರು ಮನುಷ್ಯ ಮನುಷ್ಯರನ್ನು ಬೆಸೆಯುವ ಮಾನವೀಯ ಭಾವದ ಕವಿ ಅವಧಾನಿಯವರಾಗಿದ್ದಾರೆ.

  ಜಿ.ಎಸ್.ಅವಧಾನಿಯವರು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಮಾಡಗೇರಿಯಲ್ಲಿ 11ನೇ ಅಗಸ್ಟ 1948 ರಂದು ಶಿವರಾಮ ಹಾಗೂ ಸಾವಿತ್ರಿ ದಂಪತಿಗಳ ಮಗನಾಗಿ ಹುಟ್ಟಿದರು. ಗಣಪತಿ ಶಿವರಾಮ ಅವಧಾನಿ ಎನ್ನುವುದು ಅವರ ಪೂರ್ಣ ಹೆಸರು. ಅವರು ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಅದೇ ತಾಲೂಕಿನ ಸ.ಹಿ.ಪ್ರಾ.ಶಾಲೆ ಹೆಬ್ಬಾರ್ನಕೆರೆಯಲ್ಲಿ ಪೂರೈಸಿ ಮುಂದೆ ಕೊಲ್ಲಾಪುರ ವಿಶ್ವವಿದ್ಯಾನಿಲಯದಿಂದ ಸ್ನಾತಕೋತ್ತರ ಪದವಿ(ಕನ್ನಡ)ಯನ್ನು ಪಡೆದರು. 

ಅವರ ವೃತ್ತಿ ಜೀವನ ಕುಮಟಾ ತಾಲೂಕಿನ ಕತಗಾಲದ ಜನತಾ ವಿದ್ಯಾಲಯ ಪ್ರೌಢ ಶಾಲೆಯ ಮೂಲಕ ಪ್ರಾರಂಭವಾಯಿತು. ಅಲ್ಲಿ 1969 ರಲ್ಲಿ ಶಿಕ್ಷಕರಾಗಿ ಸೇವೆ ಪ್ರಾರಂಭಿಸಿದ ಅವರು ಮುಂದೆ 1972 ರಲ್ಲಿ ದಾಂಡೇಲಿಯ ಜನತಾ ವಿದ್ಯಾಲಯದಲ್ಲಿಯೂ, 1973 ರಲ್ಲಿ ಧರ್ಮಸ್ಥಳದ ನೆಲ್ಯಾಡಿ ಶಾಲೆಯಲ್ಲಿಯೂ ಸೇವೆ ಸಲ್ಲಿಸಿ, 1974 ರಲ್ಲಿ ತಾವು ಕಾಲೇಜು ವ್ಯಾಸಾಂಗ ಮಾಡಿದ ಎಸ್.ಡಿ.ಎಮ್ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆಯನ್ನು ಮುಂದುವರಿಸಿದರು. 

1971 ರಲ್ಲಿ ಕವಿ ಮೆಚ್ಚಿ ಕೈ ಹಿಡಿದ ಕನ್ನೆ ಅನಸೂಯ. ಹೆಸರಿಗೆ ತಕ್ಕಂತೆ ಅಸೂಯೆ ಇಲ್ಲದವರೇ. ಅವಧಾನಿಯವರ ಶಿಷ್ಯಂದಿರನೇಕರಿಗೆ ಕೈಅಡಿಗೆ ಉಣ್ಣಿಸಿದ ಇವರದು ಅವಧಾನಿಯವರ ಶಿಷ್ಯಪ್ರಿಯತೆಯಲ್ಲಿ ಬಹುದೊಡ್ಡ ಪಾತ್ರ. ಮಗಳು ಸಂಗೀತಾ ತಂದೆಯಂತೆ ಶಿಕ್ಷಕ ವೃತ್ತಿಯನ್ನು ಸ್ವೀಕರಿಸಿದರೆ, ಮಗ ಸಂತೋಷ ಎಂಜಿನೀಯರ್. ಅವರೇ ಪ್ರೀತಿಯಿಂದ ಹೆಸರಿಸಿದ 'ಇಳಾ' ಮುದ್ದಿನ ಮೊಮ್ಮಗಳು. ಕಥೆ ಹಾಗೂ ಕಾವ್ಯ ಕ್ಷೇತ್ರಗಳಲ್ಲಿ ಕೃಷಿ ಗೈಯುತ್ತಿರುವ ಉಪನ್ಯಾಸಕರಾದ ರಾಜು ಹೆಗಡೆ ಅವರ ಅಳಿಯ. ಈಗ ಎಲ್ಲರು ಅವರ ನೆನಪಿನಲ್ಲಿ.

ಜಿ.ಎಸ್.ಅವಧಾನಿಯವರು ಶಿಕ್ಷಕರೆಂದರೆ ಬರೀ ಶಿಕ್ಷಕರಲ್ಲ. ಶಿಕ್ಷಕ ವೃತ್ತಿಗೆ ಹೊಸ ವ್ಯಾಖ್ಯಾನವನ್ನು ಕೊಟ್ಟವರು. ಈಗಲೂ ಉಪನ್ಯಾಸ-ಉಪನ್ಯಾಸಕರೆಂದರೆ ನಮ್ಮಂಥ ಶಿಷ್ಯಂದಿರಿಗೆ ನೆನಪಾಗುವದು ಅವಧಾನಿಯವರೆ. ಅವರು ಉಪನ್ಯಾಸಕ್ಕೆ ನಿಂತರೆ ಹೊತ್ತು ಹೋದುದರ ಪರಿವೇ ಮಕ್ಕಳಿಗಿರುತ್ತಿರಲ್ಲಿಲ್ಲ. ಮಕ್ಕಳನ್ನು ತಲ್ಲೀನರಾಗಿಸುವ, ಕೇಳಿದಂತೆಲ್ಲಾ ಮತ್ತೆ ಕೇಳ ಬಯಸುವ ಅಧ್ಯಾಪನ ಶೈಲಿ ಅವರದು. ಅದಕ್ಕಾಗೆ ಮಕ್ಕಳಾರು ಅವರ ತರಗತಿಗೆ ಚಕ್ಕರ್ ಹೊಡೆಯುತ್ತಿರಲಿಲ್ಲ. ಅವರೆ ಬಂದಿಲ್ಲವೆಂದರೆ 'ಕಾಲೇಜಿಗೆ ಬರುವುದಕ್ಕೆ ಕೊಟ್ಟ ಬಸ್ಚಾರ್ಜ ಎಲ್ಲಾ ವೇಸ್ಟ್' ಎಂದು ಗೊಣಗುವಷ್ಟರ ಮಟ್ಟಿಗೆ ಮಕ್ಕಳನ್ನು ಮೋಹಿಸಿದ ಅಧ್ಯಾಪಕರಿವರು.

ಅವರು ಕಲಿಸುವದೆಂದರೆ ಗದ್ಯಕ್ಕೆ ಭಾವ ಉಕ್ಕಿದಂತೆ, ಕವಿತೆ ಸಾಕ್ಷಾತ್ಕರಿಸಿದಂತೆ, ನಾಟಕಕ್ಕೆ ಜೀವ ಬಂದಂತೆ. ಹೀಗಾಗಿ ಮಕ್ಕಳಿಗೆಲ್ಲ ಅವರು ಪದ್ಯದ ಹುಚ್ಚು ಹಿಡಿಸಿದರು, ನಟನೆಯ ಗೀಳು ಹಚ್ಚಿದರು, ಸುತ್ತ ಬಂದವರಿಗೆಲ್ಲ ಸಾಹಿತ್ಯದ ನೆಚ್ಚ ಬಿತ್ತಿದರು. ಇಂದು ಅವರಿಂದ ಸ್ಪೂತರ್ಿ ಪಡೆದ ಅವರ ಅನೇಕ ಶಿಷ್ಯಂದಿರು ಕವಿ-ಸಾಹಿತಿಗಳಾಗಿ, ನಟ-ನಿದರ್ೇಶಕರಾಗಿ ತಮ್ಮ ಗುರುವಿನ ನೆನಪಿನೊಂದಿಗೆ ನಾಡಿನಾದ್ಯಂತ ನಾಮಾಂಕಿತರಾಗಿದ್ದಾರೆ. 

ಅವರ ಅಧ್ಯಾಪನ ಕೇವಲ ಪಠ್ಯಕ್ಕಷ್ಟೇ ಸೀಮಿತವಾಗಿರುತ್ತಿರಲಿಲ್ಲ. ಆ ಪಠ್ಯದ ಮೂಲಕವಾಗಿ ಇಡೀ ಸಾಮಾಜಿಕ ವ್ಯವಸ್ಥೆಯನ್ನೇ ಕೈಗೆತ್ತಿಕೊಳ್ಳುತ್ತಿದ್ದರು. ಮೇಲು-ಕೀಳು, ಬಡವ-ಬಲ್ಲಿದ, ಗಂಡು-ಹೆಣ್ಣು ಎನ್ನುವ ಅಸಮಾನತೆಯಿಂದ ಕೂಡಿದ ಸಮಾಜ ಜೀವನ ಅವರನ್ನು ಕೆರಳಿಸುತ್ತಿತ್ತು. ಇದನ್ನೇ ಪೋಷಿಸುವ ಧರ್ಮ, ಮಠಮಾನ್ಯರುಗಳನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದರು. ಬಸವಣ್ಣ ಬಯಸಿದಂತಹ ವರ್ಗ-ವರ್ಣ-ಲಿಂಗ ಅಸಮಾನತೆಗಳಿಲ್ಲದ ಸುಖೀ ಸಮಾಜದ ಕನಸು ಕಂಡವರು ಅವರು. ಅವರ ಸಿಟ್ಟು, ಆಕ್ರೋಶ, ವ್ಯಂಗ್ಯ ಎಲ್ಲವೂ ಸಮಾಜದ ಶೋಷಣೆಯ ವಿರುದ್ಧವೇ. ಮಾನವೀಯತೆಗಿಂತ ಮಿಗಿಲಾದ ಧರ್ಮವಿಲ್ಲವೆಂದು ನಂಬಿದ ಅವರು ಈ ಜಡ್ಡುಗಟ್ಟಿದ ತರತಮ ನೀತಿಯ ಸಮಾಜದಲ್ಲಿ ಕಳೆದುಹೋಗದಂತೆ ವಿದ್ಯಾಥರ್ಿಗಳ ಕಣ್ಣು ತೆರೆಸಿ, ಮಾನವೀಯ ಸೆಲೆ ತುಂಬಿದ ಅವಧಾನಿಯವರು ಮಕ್ಕಳ ಅಚ್ಚುಮೆಚ್ಚಿನ ಪ್ರಾಧ್ಯಾಪರರಾಗಿದ್ದರು. 

ಪಾಠದಂತೆ ಅವರ ಭಾಷಣವೂ ಕೂಡಾ ವೈಶಿಷ್ಟ್ಯಪೂರ್ಣ. ನೆರೆದ ಜನರನ್ನೆಲ್ಲ ಮೋಡಿ ಮಾಡುವ ಧ್ವನಿ, ಭಾಷೆ, ಲಯ, ಗತ್ತು ಎಲ್ಲವೂ ಅವರಿಗಿತ್ತು. ಯಾರೇ ಇರಲಿ, ಎಲ್ಲೇ ಇರಲಿ ಅವರು ಸಮಾಜದ ಕಟು ವಿಮರ್ಶಕರೆ, ಪಟ್ಟಭದ್ರ ಹಿತಾಸಕ್ತರ ವಿರೋಧಿಗಳೇ. ಯಾರಿಗೂ ಹೆದರಿ ತಮ್ಮ ಅಂತರಂಗದ ಧ್ವನಿಯ ಕಳಕೊಂಡವರೂ ಅಲ್ಲ; ಅನುಕೂಲಸಿಂಧುರಾಜಕೀಯಕ್ಕೆ ತಮ್ಮ ತಾತ್ವಿಕ ಬದ್ಧತೆಯನ್ನು ಮಾರಿಕೊಂಡವರು ಅಲ್ಲ. ಬದುಕಿನುದ್ದಕ್ಕೂ ತಮ್ಮ ಪಾಠ-ಪ್ರವಚನ, ಸಾಹಿತ್ಯ- ಸಂವಾದದ ಮೂಲಕ ಹೊಸ ಸಮಾಜ ನಿಮರ್ಾಣಕ್ಕೆ ಹೊಸ ಮನಸ್ಸುಗಳನ್ನು ಸೃಷ್ಟಿಸುವ ಕಾರ್ಯವನ್ನು ಮಾಡಿದರು. 'ಕೊಡುವುದೇನು ಕೊಂಬುದೇನು ಒಲವು ಸ್ನೇಹ ಪ್ರೇಮ' ಎಂಬ ಬೇಂದ್ರೆಯವರ ಕವಿ ವಾಣಿಯನ್ನು ಮತ್ತೆ ಮತ್ತೆ ಗುನುಗುತ್ತಿದ್ದ ಅವಧಾನಿಯವರು ಸುತ್ತಮುತ್ತಲಿನವರಲ್ಲಿ ಸ್ನೇಹ ಪ್ರೀತಿಯನ್ನೆ ಸುರಿಸಿದ್ದ ಅಗಾಧ ಜೀವನ ಪ್ರೀತಿಯುಳ್ಳ ಮನುಷ್ಯರಾಗಿದ್ದರು. 

ಇಂಥ ಸಮಾಜಮುಖೀ ಧೋರಣೆಯುಳ್ಳ ಆದ್ರ್ರ ಹೃದಯದ ವ್ಯಕ್ತಿ ಸಾಹಿತಿಯಾಗದೆ ಇರಲು ಸಾದ್ಯವೆ? ಅವಧಾನಿಯವರು ಸಾಹಿತ್ಯ ಕ್ಷೇತ್ರಕ್ಕೆ ಅಮೂಲ್ಯ ಕೊಡುಗೆಯನ್ನು ನೀಡಿದ್ದಾರೆ. ನವ್ಯದ ಧಾಟಿಯಲ್ಲಿ ಕಾವ್ಯ ಪ್ರಾರಂಭವಾದರೂ ಇವರನ್ನು ಗುರುತಿಸುವುದು ಖ್ಯಾತ ಬಂಡಾಯ ಸಾಹಿತಿ ಎಂದೇ. ಕವಿ ಹಾಗೂ ವಿಮರ್ಶಕರಾದ ಜಿ.ಎಸ್. ಅವಧಾನಿಯವರು ಈಗ ನಮ್ಮ ಮುಂದೆ ಇರುವುದು ಅವರ ಕೃತಿ ಕೊಡುಗೆಗಳಿಂದ. 

'ಬೆಂಕಿಬಳ್ಳಿ' ಕವನ ಸಂಕಲನ 1969ರಲ್ಲಿಯೂ 'ಹೊಕ್ಕಳು' ಕವನ ಸಂಕಲನ 1971ರಲ್ಲಿಯೂ 'ಕ್ವಾಸಾರ' ಕಾದಂಬರಿ 1979 ರಲ್ಲಿಯೂ 'ಹೊತ್ತು ಮುಳುಗುವ ಮುನ್ನ' ಕವನ ಸಂಕಲನ 1984ರಲ್ಲಿಯೂ 'ಪರಸ್ಪರ' ವಿಮಶರ್ಾ ಸಂಕಲನ 1990ರಲ್ಲಿಯೂ 'ಗಂಗೋತ್ರಿಯ ಹಕ್ಕಿಗಳು' ಕವನ ಸಂಕಲನ 1996ರಲ್ಲಿಯೂ 'ಎಲ್ಲಾ ಕವಿತೆಗಳು' ಎಂಬ ಅವರ ಸಮಗ್ರ ಕವನ ಸಂಕಲನ 2007 ರಲ್ಲಿಯೂ 'ಕಣಗಿಲ' ಕಾದಂಬರಿ 2007ರಲ್ಲಿಯೂ ಪ್ರಕಟವಾಯಿತು. ಅವರ 'ಗಂಗೋತ್ರಿಯ ಹಕ್ಕಿಗಳು' ಕವನ ಸಂಕಲನ 'ದಿನಕರ ಪ್ರತಿಷ್ಠಾನ ಪ್ರಶಸ್ತಿ'ಗೆ ಭಾಜನವಾದುದು ಅವರ ಕಾವ್ಯ ಕಸುವಿಗೆ ಸಾಕ್ಷಿಯಾಗಿದೆ. 

ಜೊತೆಗೆ ಸಂಪಾದಿತ ಕೃತಿಗಳೂ ಹಲವಿವೆ. 'ವಿ.ಸೀ.71' ಸಂಭಾವನಾ ಗ್ರಂಥ, 'ನೀಲಾಂಜನ' ಸಂಭಾವನಾ ಗ್ರಂಥ, 'ದೀಪಾರಾಧನೆ' ಸಂಭಾವನಾ ಗ್ರಂಥ, 'ರಸರಾಜ' ಸಂಭಾವನಾ ಗ್ರಂಥಗಳೂ ಸಾಹಿತ್ಯ ಅಕಾಡೆಮಿಯಿಂದ ಪ್ರಕಟವಾದ 'ಸಾಹಿತ್ಯ ವಿಮಶರ್ೆ 1991' ಹಾಗೂ 'ಕಾವ್ಯ ಸೃಷ್ಠಿಯ ಸ್ವರೂಪ' ಗ್ರಂಥಗಳು ಸೇರಿವೆ.

ನಾಡಿನಾದ್ಯಂತ ನಡೆದ ಅನೇಕ ಸಾಹಿತ್ಯಿಕ-ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ವಿಚಾರ ಸಂಕೀರ್ಣಗಳಲ್ಲಿ ಅವರು ಭಾಗವಹಿಸಿದ್ದರು. ಅಖಿಲ ಭಾರತ ಸಾಹಿತ್ಯ ಸಮ್ಮೇಳನ, ದಸರಾ ಕವಿ ಸಮ್ಮೇಳನ, ಆಕಾಶವಾಣಿ ಕವಿಗೋಷ್ಠಿ, ಕದಂಬೋತ್ಸವ, ಬಂಡಾಯ ಸಾಹಿತ್ಯ ಸಮ್ಮೇಳನ ಹೀಗೆ ರಾಜ್ಯ-ರಾಷ್ಟ್ರ ಮಟ್ಟದ ವಿಚಾರ ಸಂಕೀರ್ಣಗಳಲ್ಲಿ ತಮ್ಮ ಕಾವ್ಯ ಹಾಗೂ ವಿಚಾರ ಧಾರೆಗಳನ್ನು ಹರಿಯಬಿಟ್ಟಿದ್ದಾರೆ. ಪ್ರಜಾವಾಣಿ, ಕನ್ನಡಪ್ರಭ, ಸಂಯುಕ್ತ ಕನರ್ಾಟಕ, ಉದಯವಾಣಿ, ಜನಾಂತರಂಗ, ಮುಂಗಾರು, ಸುಧಾ, ತರಂಗ, ತುಷಾರ, ಕನರ್ಾಟಕ ಭಾರತಿ, ಸಂಕ್ರಮಣ, ಸಾಕ್ಷಿ, ಮೊದಲಾದ ನಾಡಿನ ಎಲ್ಲಾ ಪ್ರಮುಖ ಪತ್ರಿಕೆಗಳಲ್ಲಿ ಅವರ ಲೇಖನ ಕವಿತೆಗಳು ಪ್ರಕಟವಾಗಿವೆ. 

ಸದಾ ಜನಪರ ಚಟುವಟಿಕೆಗಳಲ್ಲಿ ಆಸಕ್ತರಾಗಿದ್ದ ಅವರು ಗೋಕಾಕ್ ಚಳುವಳಿಯಲ್ಲಿ ಭಾಗವಹಿಸಿದ್ದು, ಸಂಪೂರ್ಣ ಸಾಕ್ಷರತಾ ಆಂದೋಲನದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ, ಪಠ್ಯ ರಚನಾ ಸಮಿತಿಯ ಸದಸ್ಯರಾಗಿ, ಸಂಯೋಜಕರಾಗಿ ಕಾರ್ಯ ನಿರ್ವಹಿಸಿದ್ದರು. ಉತ್ತರ ಕನ್ನಡ ಜಿಲ್ಲೆಯ ಎಲ್ಲ ಸಾಂಸ್ಕೃತಿಕ ಮತ್ತು ಪ್ರಗತಿಪರ ಕಾರ್ಯದಲ್ಲಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದ ಜಿ.ಎಸ್.ಅವಧಾನಿಯವರು ನಾಡಿನಲ್ಲಿ ಉತ್ತರ ಕನ್ನಡಕ್ಕೊಂದು ಕಳೆಯನ್ನು ಕೊಟ್ಟವರು. 

ಇದಲ್ಲದೇ ಅವರ ಆಸಕ್ತಿಯ ಕ್ಷೇತ್ರಗಳೂ ಹಲವಾರು. ಶಾಸ್ತ್ರೀಯ ಸಂಗೀತಾಸಕ್ತರಾಗಿದ್ದರು. ಅಪ್ಪಟ ಯಕ್ಷಾಭಿಮಾನಿಯಾಗಿದ್ದರು. ಶಿಕ್ಷಕನೊಬ್ಬ ನಾಟಕಾಸಕ್ತನೂ, ಉತ್ತಮ ನಟನೂ ಆದರೆ ವಿದ್ಯಾಥರ್ಿಗಳ ಭಾಗ್ಯಕ್ಕೆ ಎಡೆಯೆಲ್ಲಿ! ರಂಗ ಭೂಮಿಯಲ್ಲಿ ಆಸಕ್ತರಾದ ಅವರು ಕಲಿಕೆಯ ಜೊತೆ ಜೊತೆಗೆ ವಿದ್ಯಾಥರ್ಿಗಳಿಗೆ ರಂಗ ಭೂಮಿಕೆಯನ್ನು ನಿಮರ್ಿಸಿ ತಮ್ಮ ನಟನಾ ಕೌಶಲ್ಯವನ್ನು ಗುರುತಿಸಿಕೊಳ್ಳಲು, ಬೆಳೆಸಿಕೊಳ್ಳಲು ಅನುವು ಮಾಡಿಕೊಟ್ಟರು. ರಾಜ್ಯ-ರಾಷ್ಟ್ರ ಮಟ್ಟದ ಉತ್ತಮ ನಿದರ್ೇಶಕರನ್ನು ಕಾಲೇಜಿಗೆ ಆಹ್ವಾನಿಸಿ ಮಕ್ಕಳನ್ನು ತರಬೇತುಗೊಳಿಸಿದರು. ತಿಂಗಳಾನುಗಟ್ಟಲೆ ಆ ಎಲ್ಲ ಮಕ್ಕಳನ್ನು ತಮ್ಮ ಮನೆಯಲ್ಲೇ ಹಗಲು ರಾತ್ರಿ ಉಳಿಸಿಕೊಂಡು ಗುರು ಶಿಷ್ಯ ಪರಂಪರೆಯನ್ನು ಮರೆದರು. ಸ್ವತಃ ತಾವೂ 'ಅಂಧಯುಗ', 'ಸಂಕ್ರಾಂತಿ', 'ಜೋಕುಮಾರಸ್ವಾಮಿ' ಮುಂತಾದ ನಾಟಕಗಳಲ್ಲಿ ನಟನಾಗಿ ಅಭಿನಯಿಸಿ ಪ್ರೇಕ್ಷಕರಿಂದ ಸೈಎನಿಸಿಕೊಂಡರು. ಹೀಗೆ ತಾವೂ ಕುಣಿದು ಮಕ್ಕಳನ್ನು ಕುಣಿಸಿದ ಅಪರೂಪದ ಶಿಕ್ಷಕರು. 

ಅವಧಾನಿಯವರ ಮನಸ್ಸು ಹಾಗೂ ಆಶಯಗಳು ಹೇಗೆ ಸುಂದರವೊ ಹಾಗೇ ಇಂದಿಗೂ ಅತ್ಯಂತ ಪ್ರಸ್ತುತವಾದದ್ದು. ನಾನು ಆಗಲೇ ಅವರೊಬ್ಬ ಬಂಡಾಯ ಸಾಹಿತಿಯೆಂದೆನಲ್ಲ, ಬಂಡಾಯದ ವ್ಯಾಖ್ಯಾನವನ್ನು ಅವರದೇ ಮಾತುಗಳಲ್ಲಿ ನೋಡೋಣ. 
"ನಾನು ಮುಖ್ಯವಾಗಿ ಒಬ್ಬ ಬರಹಗಾರ. ನನ್ನ ಸಾಹಿತ್ಯದ ಮುಖ್ಯ ಆಶಯ ಹಾಗೂ ಕಾಳಜಿ ಬಂಡಾಯ. ಬಂಡಾಯ ಅದೊಂದು ಮನೋಧರ್ಮ. ವ್ಯವಸ್ಥೆಯ ಅನ್ಯಾಯ, ಕ್ರೌರ್ಯ ,ಹಿಂಸೆಗಳ ವಿರುದ್ಥ ಪ್ರತಿಕ್ರಿಯಿಸುವ, ಪ್ರತಿಸ್ಪಂದಿಸುವ ಹಾಗೂ ಅಖಂಡ ಮಾನವೀಯತೆಯನ್ನು ಎತ್ತಿ ಹಿಡಿಯುವುದೆ ಬಂಡಾಯದ ಮೂಲ ದ್ರವ್ಯ" ಎಂದು ಬರಹಗಾರರೆಲ್ಲರ ಕಾಳಜಿಯನ್ನು ನೆನಪಿಸಿದವರು ಅವರು.

ಹೀಗಾಗಿ "ಜೀವನ ಎಲ್ಲರಿಗೂ ಸಮಾನವಾಗಿರಬೇಕು, ಸಹ್ಯವಾಗಿರಬೇಕು. ವಿಶ್ರಾಂತ ಹಾಗೂ ವಿಶ್ರಾಂತರಹಿತ ಜನ ವರ್ಗಗಳಿರಬಾರದು. ಹಗಲು-ಬೆಳದಿಂಗಳಿನ ಹಾಗೆ ಬದುಕಿನ ಸಮಸ್ತ ವಸ್ತುಗಳನ್ನು ಎಲ್ಲರೂ ಸಮಾನವಾಗಿ ಪಡೆಯುವಂತಿರಬೆಕು" ಎಂದು ಸದಾ ತುಡಿದವರು, ದುಡಿದವರು ಅವರು.

ಸಮಾಜವಾದಿ ಆಶಯ ಅವರದು. "ಕಮ್ಯೂನಿಷ್ಟ ಪಕ್ಷವೊಂದೆ ಸದ್ಯ ಇದ್ದುದರಲ್ಲಿ ಅರ್ಹ ಅನ್ನಿಸಿಕೊಂಡಿದೆ. ಎಷ್ಟೇ ಅರೆಕೊರೆಗಳಿದ್ದರೂ ಅದು ಒಟ್ಟು ಸಮುದಾಯದ; ಬಡವರ-ಕೃಷಿ ಕೂಲಿಕಾರರ ಅಂದರೆ ಜನಪರವಾದ ಪಕ್ಷವಾಗಿದೆ. ದುಡಿಯುವ ವರ್ಗಗಳ ಧ್ವನಿಗೆ ಧ್ವನಿ ಕೂಡಿಸುವ ಆರೋಗ್ಯಕರ ತಾತ್ವಿಕತೆ ಅದರದು. ಸಮಾನತೆ, ಸ್ವಾತಂತ್ರ್ಯ, ಸಹಬಾಳ್ವೆಗೆ ಅದು ಒತ್ತು ಕೊಡುತ್ತದೆ. ಅಸಮಾನತೆ, ಸವರ್ಾಧಿಕಾರ, ಕೇಂದ್ರೀಕರಣ, ಬಂಡವಾಳಶಾಹಿಯ ವಿರುಧ್ಧ ನಿಂತಿದೆ. ಅಂದರೆ ಸಮಾಜವಾದಿ ವಾಸ್ತವ ಸಮಾಜ ವ್ಯವಸ್ಥೆಯೇ ಅದರ ಆಶಯವಾಗಿದೆ" ಎಂದು ಅಪ್ಪಿ ನಡೆದ ಅವರು "ಮಾಕ್ರ್ಸವಾದ ನಿರಂತರ ಚಲನಶೀಲವಾದದ್ದು; ಜಡವಾದುದ್ದಲ್ಲ. ಅದೆಂದು ಸತ್ತಿಲ್ಲ. ಮಾಕ್ರ್ಷವಾದಿ ಅಂತಂದುಕೊಂಡವರ ವೈಯಕ್ತಿಕ ವೈಫಲ್ಯ ಕಂಡು ಮಾಕ್ರ್ಸವಾದವೆ ಸತ್ತು ಹೋಯಿತು ಎನ್ನುವುದು ಮೂರ್ಖತನವಾಗುತ್ತದೆ" ಎಂದು ಮಾಕ್ರ್ಸವಾದದ ನಿರಂತರತೆಯನ್ನು ಬಯಸಿದ ಅವಧಾನಿಯವರು ಎಡಪಂಥೀಯ ಒಲವುಳ್ಳ ಲೇಖಕರು. 

ಅಂತಹ ಮನಸ್ಸು ಮಾತ್ರ "ರಾಜಕೀಯದಲ್ಲಿ ಧರ್ಮವನ್ನು ಬೆರೆಸಬಾರದು. ಧರ್ಮ ವ್ಯಕ್ತಿಯ ವೈಯಕ್ತಿಕ ಬದುಕಿನ ವಿಕಾಸದ ಮೌಲ್ಯ; ರಾಜಕೀಯ ಸಮಷ್ಠಿ ಬದುಕಿಗೆ ಸಂಬಂಧಿಸಿದ್ದು. ಆದ್ದರಿಂದ ಧರ್ಮರಹಿತ ರಾಜಕೀಯವೇ ಅನಿವಾರ್ಯ" ಎಂದು ಬಯಸಲು ಸಾಧ್ಯ. ಧರ್ಮ ರಾಜಕೀಯದ ಮೇಲೆ ಸವಾರಿ ನಡೆಸುತ್ತ ರಾಡಿಯೆಬ್ಬಿಸಿದ ಇಂದಿನ ರಾಜಕಾರಣದಲ್ಲಿ ಇವರ ವೈಚಾರಿಕತೆ ಎಷ್ಟೊಂದು ಪ್ರಸ್ತುತ! "ಇವೆರಡೂ ಮೂಲಭೂತವಾದೀ ಸ್ವಾರ್ಥ ಸಾಧಕರ ಹುನ್ನಾರ. ದೇಶಪ್ರೇಮ, ದೇವರು-ಧರ್ಮಗಳೆಲ್ಲ ಕೇವಲ ಈ ಜನಕ್ಕೆ ನೆಪ ಮಾತ್ರ ಆಗಿದೆ. ಇವೆಲ್ಲ ಕೇವಲ ಸ್ಯೂಡೊ ಭಾವನೆಗಳು. ಸಮೂಹ ಸನ್ನಿಗಳಾದವರಿಗೆ ವಿವೇಕ, ನೈತಿಕತೆ, ಮೌನ ಮಾನವೀಯತೆಗಳಾವವೂ ಇರುವುದಿಲ್ಲ" ಎಂದ ವಿವೇಕಿಗಳು. ಆದ್ದರಿಂದಲೇ "'ಹಿಂದೂ' ಒಂದು ಮತವೇ ವಿನಾ 'ಧರ್ಮ' ಅಲ್ಲ. ಅಂದರೆ ಅದೊಂದು ಮೌಲ್ಯ ಅಲ್ಲ. ಆದ್ದರಿಂದ ಮಾನವಧರ್ಮವೇ ನಮಗೆ ಕೊನೆಯ ಧರ್ಮ. ಈ ಮೌಲ್ಯವನ್ನೇ ಭಾರತೀಯ ಸಂಸ್ಕೃತಿ ತನ್ನ ಗರ್ಭದಲ್ಲಿರಿಸಿಕೊಂಡಿದೆ. ಅದನ್ನು ಅರಿಯಬೇಕಾದದ್ದು ನಮ್ಮ ಹೊಣೆ" ಎನ್ನುತ್ತ ಕೋಮುವಾದಿಗಳನ್ನು ಎಚ್ಚರಿಸುವ ಹೊಣೆಗಾರಿಕೆ ಹೊತ್ತ ಬರಹಗಾರರು ನಮ್ಮಲ್ಲಿ ಎಷ್ಟಿದ್ದಾರೆ? ಅವರೂ ಸಮೂಹ ಸನ್ನಿಗೆ ಒಳಗಾಗುತ್ತಿರುವುದು ಆಘಾತಕರ ಸಂಗತಿಯಾಗಿದೆ. 

ನಮ್ಮ ರಾಜಕೀಯದ ಅಧೋಗತಿಗೆ ಕೇವಲ ರಾಜಕಾರಣಿಗಳಷ್ಟೇ ಕಾರಣರಲ್ಲ. ಆಳುವವರು, ಧಾಮರ್ಿಕ ನೇತಾರರು, ಬುದ್ಧಿಜೀವಿಗಳು ಹಾಗೂ ಜನಸಮುದಾಯದ ಪಾಲುಂಟೆಂದು ಹೇಳಿದ ಇವರು ಅದಕ್ಕೆ ಎಲ್ಲರನ್ನೂ ಸಜ್ಜು ಮಾಡುವ ಶಿಕ್ಷಣ ವ್ಯವಸ್ಥೆ ಇರಬೇಕೆನ್ನುತ್ತಾರೆ. ಅವರು "ವ್ಯಕ್ತಿಯ ಸಮಗ್ರ ವ್ಯಕ್ತಿತ್ವವನ್ನು ರೂಪಿಸುವಂತ ಶಿಕ್ಷಣ ಪದ್ಧತಿ ಇರಬೇಕು. ವ್ಯಕ್ತಿಯಲ್ಲಿ ಮನುಷ್ಯತ್ವ ಸೃಷ್ಟಿಸುವುದು ಶಿಕ್ಷಣದ ಗುರಿಯಾಗಬೇಕು" ಎಂದು ನಮ್ಮ ಶೈಕ್ಷಣಿಕ ವ್ಯವಸ್ಥೆಗೆ ಮಾರ್ಗದಶರ್ಿಯನ್ನು ಸೂಚಿಸಿದವರಿವರು.

"ಇಂದಿನ ವಿದ್ಯಾಥರ್ಿ ಹೀಗೇ ಇರಬೇಕೆಂದು ಸೂತ್ರ ರೂಪದಲ್ಲಿ ಶರಾ ಬರೆಯುವ ಹಾಗಿಲ್ಲ. ಆತನಿಗೆ ತನ್ನ ಕರ್ತವ್ಯ, ಮಿತಿ ಹಾಗೂ ಉದ್ದೇಶವೇನೆಂಬುದರ ಪರಿಜ್ಞಾನದ ಅರಿವಿರಬೇಕು. ವಿದ್ಯಾಥರ್ಿ ವಿದ್ಯಾಥರ್ಿಯೇ ಆಗಿದ್ದು ಸದಾ ಜ್ಞಾನದ ಹಸಿವು ಇರಬೇಕಾದ್ದು ನ್ಯಾಯ" ಎಂದ ಇವರು ತಾವೂ ಕೂಡಾ "ಅಧ್ಯಾಪನದ ಮುಖಾಂತರವಾಗಿ ನನ್ನ ಅನುಭವ ಹಾಗೂ ಅರಿವನ್ನು ವಿಸ್ತರಿಸಿಕೊಳ್ಳುವುದಕ್ಕಾಗುತ್ತದೆ ಎಂಬ ಕಾರಣಕ್ಕಾಗಿಯೆ ಶಿಕ್ಷಕನಾದವನು. ಯಾಕೆಂದರೆ ನಿಜವಾದ ಅಧ್ಯಾಪಕ ಆಗುವುದೆಂದರೆ ಆತ ನಿಜವಾದ ವಿದ್ಯಾಥರ್ಿಯಾಗುವುದು ಎಂತಲೇ ಅರ್ಥ" ಎನ್ನುತ್ತ ಸದಾ ಜ್ಞಾನದಾಹಿಯಾದ ಇವರು ತಾನೂ ಓದುತ್ತ ಇತರರ ದಾಹವನ್ನೂ ತಣಿಸುತ್ತ ನಡೆದ ಆದರ್ಶ ಅಧ್ಯಾಪಕರು. "ವಿದ್ಯಾಥರ್ಿ ಹಾಗೂ ಶಿಕ್ಷಣ(ಕ) ಸಂಬಂಧ ನೀರು ಸಕ್ಕರೆಯಂತೆ. ಒಂದರೊಳಗೊಂದು ಎರಕವಾಗಿರಬೇಕು" ಎಂದು ತನ್ನ ಅಧ್ಯಾಪನ ವೃತ್ತಿಯುದ್ದಕ್ಕೂ ಮಕ್ಕಳಲ್ಲಿ ಪ್ರೀತಿ-ಸ್ನೇಹದ ಎರಕ ಹೊಯ್ದ ಗುರು ಶ್ರೇಷ್ಠ ಜಿ.ಎಸ್.ಅವಧಾನಿಯವರು.
"ಹೊತ್ತು ಮುಳುಗುವ ಮುನ್ನ ಹೊತ್ತು ನಡೆಯುವ ಬನ್ನಿ
ನಮ್ಮ ಸೃಷ್ಟಿಯ ಹದದ ಹೊಸತು ಬಿತ್ತುಗಳನ್ನ
ಭೂಮಿಯೊಡಲಿನ ತುಂಬ ಹಸಿರು ಕದಿರುಗಳನ್ನು"
ಎಂದು ಕಾವ್ಯದ ಕರೆಕೊಟ್ಟ ನೀವು ಹೊತ್ತು ಮುಳುಗುವ ಮುನ್ನ ಬಿಟ್ಟು ಹೋದಿರಿ ಎಲ್ಲಿಗೆ? ಕಾಯುವದಿಲ್ಲವೆಂದು ಹೇಳಿದ ನೀವು ಹೀಗೆ ಒಂದು ಸೂಚನೆಯನ್ನೂ ನೀಡದೆ ಜಿಗಿದು ಬಿಡುವುದೆ? 'ಅಲ್ಲ ಸ್ವಾಮಿ' ನೀವು ಹೊಸ ಬಿತ್ತುಗಳನ್ನ ಬಿತ್ತುವುದಕ್ಕಾದರೂ ಹಸಿರೊಡೆವ ಕದಿರುಗಳನ್ನು ನೋಡುವುದಕ್ಕಾದರೂ ಕಾಯಲೇ ಬೇಕಾಗಿತ್ತು. 

ಜಿ.ಎಸ್.ಅವಧಾನಿಯವರು 20 ಅಗಸ್ಟ 2000 ರಂದು ತಮ್ಮ 52ನೇ ವಯಸ್ಸಿನಲ್ಲಿ ವೃತ್ತಿಯಲ್ಲಿರುವಾಗಲೇ ಹೃದಯಾಘಾತದಿಂದ ತೀರಿಕೊಂಡರು. ಈಗ ನಮಗಿರುವುದು ಅವಧಾನಿಯವರ 'ನಮು-ನಮೂನೆ'ಯ ನೆನಪುಗಳು ಮಾತ್ರ.

                                                                                                            - ಮಾಧವಿ ಭಂಡಾರಿ, ಕೆರೆಕೋಣ

No comments:

Post a Comment