Friday 11 July 2014

ವಿಡಂಬಾರಿ ಅವರ ಕವಳ -- ಡಾ. ಪುರುಷೋತ್ತಮ ಬಿಳಿಮಲೆ


ವಿಡಂಬಾರಿ ಅವರ ಕವಳ
ಡಾ. ಪುರುಷೋತ್ತಮ ಬಿಳಿಮಲೆ

ದಿನಕರ ದೇಸಾಯಿಯವರ ಅನಂತರ ಚೌಪದಿಗಳ ಕಾಲ ಮುಗಿದು ಹೋಯಿತು ಎನ್ನಲಾಗುತ್ತಿತ್ತು. ಆದರೆ ಇದೀಗ ವಿಡಂಬಾರಿಯವರು ಕವಳದ ಮೂಲಕ ಆ ಮಾತನ್ನು ಸುಳ್ಳಾಗಿಸಿದ್ದಾರೆ. ಚೌಪದಿಗಳಿಗೆ ಉತ್ತರ ಕನ್ನಡ ಇನ್ನೂ ಫಲವತ್ತಾದ ಭೂಮಿಯಾಗಿದೆ ಎಂಬುದಕ್ಕೆ ಇದೊಂದು ದೃಷ್ಟಾಂತ. 
ಚೌಪದಿಗಳ ಪ್ರಧಾನ ಗುಣ ಎರಡು. ಮೊದಲನೆಯದಾಗಿ ಮಿತವಾದ ಮಾತುಗಳಲ್ಲಿ ಗಂಭೀರವಾದ ಅರ್ಥವನ್ನು ಹಿಡಿದಿಡುವುದು ಮತ್ತು ಎರಡನೆಯದಾಗಿ ಚೌಪದಿಯ ಕೊನೆ ಸಾಲಿನಲ್ಲಿ ಮಾಮರ್ಿಕವಾದ ತಿರುವೊಂದನ್ನು ತುಂದಿರುವುದು. ಈ ಕೊನೆಯ ಸಾಲು ಅನೇಕ ಬಾರಿ ವಿಡಂಬನಾ ಪ್ರಧಾನವಾಗಿದ್ದು, ಅದಕ್ಕಿಂತ ಮೊದಲಿನ ಮೂರು ಸಾಲುಗಳಿಗೆ ಹೊಸ ಅರ್ಥವನ್ನು ಕೊಡುವಷ್ಟು ಸಶಕ್ತವಾಗಿರುವುದು. ದೇಸಾಯಿಯವರು ಈ ಎರಡನೆಯ ಗುಣವನ್ನು ಅದ್ಭುತವಾಗಿ ಮೈಗೂಡಿಸಿಕೊಂಡಿದ್ದರು. ಕನ್ನಡದ ತ್ರಿಪದಿಗಳ ಸಾರ್ವಭೌಮನಾದ ಸರ್ವಜ್ಞನು ಮೊದಲನೇ ಗುಣಕ್ಕೆ ಹೆಸರಾದವನು.
ವಿಡಂಬಾರಿಯವರು, ಅವರ ಕಾವ್ಯನಾಮದಂತೆ, ವಿಡಂಬನೆಯಲ್ಲಿ ಪ್ರಸಿದ್ಧರು. ಇದು ಚೌಪದಿಯ ಕೊನೆ ಸಾಲಿನಲ್ಲಿ ಬರುತ್ತಿದ್ದದ್ದು, ಇವರಲ್ಲಿ ಆರಂಭದಲ್ಲಿ ಬಂದು ಬಿಡುತ್ತದೆ.
ಉದಾ : ಕನರ್ಾಟಕ ರಾಜ್ಯ ಸೋರಿಗೆಯ ಗಾಡಿ
ಗುರಿಯ ಮುಟ್ಟುವುದುಂಟೆ ಒಂದು ಕಡೆ ಓಡಿ
ಪ್ರಯಾಣಿಕರ ಮಾತ್ರ ಬೋಳಿಸುವ ದಾರಿ
ಚೆನ್ನಾಗಿ ಗೊತ್ತುಂಟು ಮಿತಿಯನ್ನು ಮೀರಿ. (337)
ಇಲ್ಲೂ ಮೊದಲ ಸಾಲಿನಲ್ಲಿ ಬರುವ ರಾಜ್ಯ ಸೋರಿಗೆ ಎಂಬುದು ವಿಡಂಬನೆಗಾಗಿಯೇ ಬಂದಿದೆ. ಚೌಪದಿಯ ಮುಂದಿನ ಸಾಲುಗಳು ಇದನ್ನು ಮೀರಿ ಬೆಳೆಯುವುದಿಲ್ಲದ ಕಾರಣ ಈ ವಿಡಂಬನೆ ಹೆಚ್ಚು ಯಶಸ್ವಿಯಾಗುವುದಿಲ್ಲ. ಆದರೆ ಸಾಮಾಜಿಕ ಕಳಕಳಿ ಹೆಚ್ಚು ಇರುವ ಚೌಪದಿಗಳಲ್ಲಿ ಈ ವಿಡಂಬನಾ ಗುಣ ಅತ್ಯಂತ ಸಲೀಸಾಗಿ ಬಂದು ಬಿಟ್ಟಿದೆ. 
ತೋಡಿರುವ ಪ್ರತಿಯೊಂದು ಬಾವಿಯಲಿ ನೀರು
ಬಂದೇ ಬರುವುದೆಂದು ಕಂಡವರು ಯಾರು
ಹೀಗಾಗಿ ಹಲವಾರು ಬಾವಿಗಳು ಇಲ್ಲಿ
ತುಂಬುವುವು ಸಂಪೂರ್ಣ ಮಳೆಗಾಲದಲ್ಲಿ.
ಇಲ್ಲಿಯ ಕೊನೆ ಸಾಲು ಚೌಪದಿಯನ್ನು ಅತ್ಯಂತ ಅರ್ಥವಾತ್ತಾಗಿಸಿದೆ. ಇಂಥ ಅನೇಕ ಚೌಪದಿಗಳು ವಿಡಂಬಾರಿಯವರ ಕಾವ್ಯಶಕ್ತಿಯನ್ನು ಪ್ರಕಟಪಡಿಸುತ್ತವೆ. 76, 82, 88, 104, 137, 210, 47, 259, 265, 309, 385, 416, 513, 568, 603, 614, 813, 782, 831, 814 ಈ ಚೌಪದಿಗಳು ವಿಡಂಬನಾ ಗುಣಕ್ಕಾಗಿ ಹಾತೊರೆಯುತ್ತಿರುವುದರಿಂದ ಮುಖ್ಯವಾಗುತ್ತವೆ.
ಕವನ ಸಂಕಲನವನ್ನು ಐದು ಭಾಗಗಳಲ್ಲಿ ಹಂಚಿದ್ದಾರೆ. ಈ ವಿಭಾಗ ಅಭ್ಯಾಸದ ಸೌಕರ್ಯಕ್ಕೆ ಹೇಗೋ ಹಾಗೇ ವಸ್ತುವಿನ ದೃಷ್ಟಿಯಿಂದಲೂ ಹೌದು. ಮೊದಲ ಭಾಗ ಆತ್ಮ ನಿವೇದನೆಯಲ್ಲಿ 55 ಚೌಪದಿಗಳಿದ್ದು, ಎಲ್ಲವೂ ತೀರಾ ಸಾಮಾನ್ಯ ರಚನೆಗಳಾಗಿವೆ. ಕವಿಯನ್ನು ಅರ್ಥಮಾಡಿಕೊಳ್ಳುವ ದೃಷ್ಟಿಯಿಂದ ಇವು ಮುಖ್ಯ ಅಷ್ಟೇ. ಒಂಥರಾ ಆತ್ಮ ಚರಿತ್ರೆಯ ಲೇಪ ಇದರಲ್ಲಿದೆ. ಎರಡನೆಯದಾದ ಸಾಮಾಜಿಕದಲ್ಲಿ 400 ಚೌಪದಿಗಳಿದ್ದು ಹೆಚ್ಚಿನವು ವ್ಯಂಗ್ಯ ಇಲ್ಲವೇ ಕಟಕಿಯಿಂದ ಯಶಸ್ವಿಯಾಗಿವೆ. ಮೂರನೇ ಭಾಗ ನೀತಿಪರವಾದದ್ದು. ಅದರಲ್ಲಿ ಒಟ್ಟು 92 ಚೌಪದಿಗಳಿದ್ದು ಕವಿಯ ನೈತಿಕ ದೃಷ್ಟಿಕೋನವನ್ನು ವಿವರಿಸಿ ಹೇಳುತ್ತದೆ. ಇಂಥ ಕಡೆ ಚೌಪದಿಗಳು ಬರೇ ಹೇಳಿಕೆಗಳಾದದ್ದೂ ಇದೆ. ಆದರೂ ಕವಿಯ ಮಾನವೀಯ ಕಳಕಳಿಯನ್ನು ಆಕ್ಷೇಪಿಸುವಂತಿಲ್ಲ. ನಾಲ್ಕನೆಯದಾದ ರಾಜಕೀಯ ಎಂಬ ಭಾಗದಲ್ಲಿ 113 ಚೌಪದಿಗಳಿದ್ದು, ಅವೆಲ್ಲವೂ ರಾಜಕೀಯ ವಿಡಂಬನೆಯಲ್ಲಿ ಯಶಸ್ವಿಯಾಗಿದೆ. ಅಧಿಕಾರ ಲಾಲಸೆ, ಮತಬೇಡಿಕೆಯ ಹಿಂದಿನ ಧೂರ್ತತನ, ಬಡವರುದ್ಧಾರದ ಸೋಗು ಇವನ್ನೆಲ್ಲ ಬಯಲಿಗೆಳೆಯಲಾಗಿದೆ.
ವಿಡಂಬಾರಿಯವರಿಗೆ ಚೌಪದಿಯ ಗುಣಗಳು ಗೊತ್ತಿವೆ. ಸಹಜವಾದ ಪ್ರಾಸ ಮತ್ತು ಲಯ ವಿನ್ಯಾಸ ಅವರಿಗೆ ಸಿದ್ಧಿಸಿದೆ. ಸಮಾಜವನ್ನು ಅವರು ಸೂಕ್ಷ್ಮವಾಗಿ ಗಮನಿಸುತ್ತಾರೆ. ಹಾಗಾಗಿ ಚೌಪದಿಗಳಲ್ಲಿ ಅವರು ಇನ್ನೂ ಕೆಲವು ಪ್ರಯೋಗಗಳನ್ನು ಮಾಡಬಲ್ಲರು. ಕವಳ ಅವರ ಸಾಧನೆಯ ಮೈಲಿಗಳಲ್ಲು.
                     (ಸೌಜನ್ಯ : ಮಂಗಾರು ದೈನಿಕ)

No comments:

Post a Comment