Wednesday, 9 July 2014

ನನ್ನ ಕವಿತೆ R. V Bhandari


1. ನನ್ನ ಕವಿತೆ


ನನಗೆ ಮಾತಾಡ ಬೇಕಿದೆ
ನನ್ನ ಜನಗಳ ಬಗ್ಗೆ
ತಮ್ಮ ಕಣ್ಣೀರಿಗೆ ಕಾರಣ ಹೇಳಲಾರದ
ಭೀತರ ಬಗ್ಗೆ
ಸುಗ್ಗಿ ಕುಣಿತಕ್ಕೆ ಕೆಂಪು ತುರಾಯ ಕಟ್ಟಿ
ಕುಣಿದು ಕುಪ್ಪಳಿಸಿ
ರಾಪು ತೋರಿದ ಚಣಕಾಲದ ಸುಖದ ಬಗ್ಗೂ
ದಾರಿಯುದ್ದಕ್ಕೂ ತಲೆ ತಗ್ಗಿಸಿಯೇ
ಗೇಟು ದಾಟಿ ಹೋದ
ನನ್ನ ದಲಿತ ಬಂಧುಗಳ ಬಗ್ಗೆ.

ನೀನು ಕವಿಯಲ್ಲ
ಮಾತುರಸಾತ್ಮಕವಲ್ಲ
ಸಂಕೀರ್ಣ, ಸಮಗ್ರತೆಯಿಲ್ಲ
ಎಂದೆನ್ನಬಹುದು ಪ್ರಭುಗಳೇ
ದೇವರಾಣೆ ನನಗೆ ಸೌಡಿಯಿಲ್ಲ
ನಿಮ್ಮ ಪಠಣದ ಕೊಠಡಿಯಲ್ಲಿ
ಗಾಳಿ ಪಂಖದ ಎದುರು ಕುಳಿತು
`ಸ್ವಾಂತ ಸುಖಾಯಕ್ಕೆ ಸೌಡಿಯಿಲ್ಲ.

ನೋಡಿ ಹೊನ್ನ ಕುಳಿತಿದ್ದಾನೆ
ದಿನವಿಡೀ ದುಡಿದುಡಿದು
ಜೀವವಕೆ ದಣಿದಣಿದು
ಕೊನೆಗೊಮ್ಮೆ ಕರೆಂಟಿಗೆ ಕೈ ಒಡ್ಡಿ
ಸತ್ತವನು
ಚಳಿ ಮಳೆಯ ಲೆಕ್ಕಿಸದೆ
ಒಡೆಯರ ಅಡಿಕೆ ಕೊಳೆ
ತೊಳೆಯುತ್ತಲೇ ಸತ್ತ ಪುಟ್ಟಣ್ಣ.
ಮದುವೆ ಸಂಭ್ರಮದಲ್ಲಿ ಸುದ್ದಿಯಾಗದೇ
ಉಂಡಿಟ್ಟ ತಪ್ಪಲೆ ಚರಗಿ ತಿಕ್ಕಲು ಹೋಗಿ
ಕಾಲ್ಜಾರಿ ಕೆರೆಗೆ ಹಾರ ಚೊಬ್ಬಕ್ಕ.
ನಮ್ಮ ವಿದ್ಯಾಲಯದ ಮೊದಲ ಕಟ್ಟಡ ಕಟ್ಟಿ
ಜನತಾ ಮನೆಯಲ್ಲಿ ಬಿದ್ದಿರುವದು ಮಗ್ಯಾ.
ಕಂಡಿರಾ ಕಳೆಸತ್ತ ಕಣ್ಣುಗಳ
ಸುಕ್ಕೆಟ್ಟ ದೇಹಗಳ
ಬೆಂದುರಿದ ಆತ್ಮಗಳೆ?

ಯಾರ ಕಡಿಯಲು ಕೊಡಲಿ ಎತ್ತಿದವರು
ಮರಕಡಿದು ಮನೆ ಕಟ್ಟಿದರು,
ಅವರು ವಾಸಿಸಲಿಲ್ಲ.
ಹೊಲ ಉತ್ತಿ ಬೆಳೆ ಎತ್ತಿದರು,
ಅದರ ಫಲ ಉಣ್ಣಲಿಲ್ಲ.
ಅಡ್ಡ ಪಲ್ಲಕ್ಕಿಗೆ ಹೆಗಲು ಕೊಟ್ಟರು
ಧರ್ಮದ ಬಗ್ಗೆ ವ್ಯಾಖ್ಯಾನ ಬರೆಯಲಿಲ್ಲ.

ಅವರ ಎದೆಯಲ್ಲಿ ಸಿಟ್ಟಿತ್ತು
ಆದರೆ ಕೆಂಡ ಕಾರಲಿಲ್ಲ.
ಅವರ ಎದೆಯಲ್ಲಿ ಕವಿತೆ ಇತ್ತು
ಗಂಟಲಿನ ಹೊರ ಬರಲಿಲ್ಲ.

ಅವರು ನಡೆದ ನೆಲ ಪಿಸುಗುಡುತ್ತಿದೆ
ಕತ್ತಲಿನ ಲೋಕಕ್ಕೆ ದನಿ ಕೊಡುತ್ತಲಿದೆ
ಆದ್ದರಿಂದ ಕವಿತೆಗಳ ಬಗ್ಗೆ ನನ್ನಲ್ಲಿ ಮಾತುಗಳಿಲ್ಲ
ಯಾಕೆಂದರೆ ಅವರೇ ಮಾತಾಡುತ್ತಾರೆ
ಅವರ ಶತ್ರುಗಳ ಬಗ್ಗೆ
ಮತ್ತು ಕೆಟ್ಟ ವೆವಸ್ತೆಯ ಬಗ್ಗೆ.


31-1-1982

No comments:

Post a Comment