ಜಾನಪದ ಲೇಖನ ಕುಂಜ
ಶಾಂತಿ ನಾಯಕರು ಎಂದೊಡನೆ ನನ್ನ ಸುತ್ತ ಸುತ್ತಿಕೊಳ್ಳುವುದು ಔಷಧೀಯ ಕಂಪು; ಜಾನಪದೀಯ ಇಂಪು. ಅವರ ಮನೆಯ ಅಂಗಳಕ್ಕೆ ಕಾಲಿಟ್ಟರೆ ನಮ್ಮ ಕಣ್ಸೆಳೆಯುವುದು ಅವರ ಪ್ರೀತಿಯ ಆರೈಕೆಯಲ್ಲಿ ಬೆಳೆದ ನೂರಾರು ಔಷಧೀಯ ಗಿಡಗಳು ಮನೆಯೊಳಗೆ ಕಾಲಿಟ್ಟರೆ ಕೊಡುವ ಪಾನಕ, ನೀಡುವ ಕಷಾಯ, ಬಡಿಸುವ ತಂಬಳಿ ಎಲ್ಲವೂ ಸಸ್ಯ ಜನ್ಯವೆ. ಆಧುನಿಕರೆಲ್ಲ ಫಾಸ್ಟ್ಫುಡ್ನ ಬೆನ್ನತ್ತಿ ಓಡುತ್ತಿರುವಂತಹ ಸಂದರ್ಭದಲ್ಲಿ ಜಾನಪದೀಯ ಅಡುಗೆಗಳ ಶುಚಿ-ರುಚಿಯ ಗುಟ್ಟನ್ನು ತಮ್ಮ ಮನೆಯ ಅತಿಥಿಗಳ ಆತಿಥ್ಯದಿಂದಲೇ ತಿಳಿಸುತ್ತ ಬಂದವರು ಅವರು. ಅವರು ತಲೆಗೆ ಹಚ್ಚುವ ಎಣ್ಣೆಯೂ ಯಾವುದೋ ಸೊಪ್ಪು-ಬೇರಿನಿಂದಲೇ ತಯಾರಿಸಿದ್ದು. ಹೀಗಾಗಿ ನಮ್ಮನ್ನು ನಾಚಿಸುವ ಕಪ್ಪು ಮಿರಿ ಮಿರಿ ಕೂದಲು ಶಾಂತಿನಾಯಕರದು.
ಜಾನಪದ ಕಥೆ, ಜಾನಪದ ಅಡುಗೆ, ಜಾನಪದ ಆಟ, ಜಾನಪದ ಒಗಟು, ಜಾನಪದ ಹಾಡು, ಹಸೆ ಎಲ್ಲವೂ ಇವರ ಆಸಕ್ತಿಯ ಕ್ಷೇತ್ರ. ಕೇವಲ ಸಂಗ್ರಹ ಕಾರ್ಯವನ್ನಷ್ಟೇ ಮಾಡದೆ ಆ ಎಲ್ಲ ಸಂಗತಿಗಳಲ್ಲಿ ಸ್ತ್ರೀಯ ಪ್ರಾಧಾನ್ಯತೆ, ಸಂಪ್ರದಾಯ ಆಚರಣೆಯ ಹೆಸರಲ್ಲಿ ಇರುವಂತಹ ಸ್ತ್ರೀ ವಿರೋಧಿ ನಿಲುವು, ಸಾಹಿತ್ಯದೊಳಗೆ ಅಡಗಿರುವ ಹೆಣ್ಣಿನ ಕಲಾತ್ಮಕ ಪ್ರತಿಭಟನೆ ಎಲ್ಲವನ್ನು ಅದರ ಜೊತೆ ಜೊತೆಗೇ ಮಾಡಿದ್ದಾರೆ. ಮಾತೃ ಪ್ರಾಧಾನ್ಯತೆ ಹೇಗೆ ಪುರುಷ ಪ್ರಧಾನ್ಯತೆಯತ್ತ ತಿರುಗಿತೆನ್ನುವ ಹೊಳಹನ್ನು ನೀಡುವ ಅವರು ಸದಾ ನನಗೆ ಮಾತೆಯಂತೆ ಕಂಡವರು.
ಜಾನಪದ ಪ್ರಕಾಶನದ ಬೆಳ್ಳಿಹಬ್ಬದ ಪ್ರಕಟಣೆಯಡಿ ಮೂಡಿ ಬಂದ ಶ್ರೀಮತಿ ಶಾಂತಿ ನಾಯಕರ 'ಜಾನಪದ ಲೇಖನ ಕುಂಜ' ಕೂಡ ಅವರ ಸಹಜ ಸೂಪಶಾಸ್ತ್ರ, ರಂಗೋಲಿ, ಕ್ರೀಡೆ, ಚವತಿಹಬ್ಬ, ಜಲ ಸಂಸ್ಕೃತಿಯ ಲೇಖನಗಳನ್ನು ಒಳಗೊಂಡಿದೆ.
1) 'ಮಂಗರಸನ ಸೂಪಶಾಸ್ತ್ರ' ಓದುತ್ತಿದ್ದಂತೆ ಚಿಕ್ಕವರಾಗಿದ್ದಾಗ ಕೇಳಿ ಕುಪ್ಪಳಿಸಿದ, ಈಗಲೂ ಅದೇ ಪ್ರೀತಿಯಿಂದ ಕೇಳಿ ಜೊಲ್ಲು ಸುರಿಸುವ ಹೊನ್ನಪ್ಪ ಭಾಗವತರು ಹಾಡಿದ ಒಂದು ಹಾಡು ನೆನಪಿಗೆ ಬಂತು. 'ವಿವಾಹ ಭೋಜನವಿದು ವಿಚಿತ್ರ ಭಕ್ಷ್ಯಗಳಿವು ಬೀಗರಿಗೆ ಔತಣವಿದು....... ಎಂದು ಹಾಡುತ್ತ ಹತ್ತಾರು ತಿನಿಸುಗಳನ್ನು ಪರಿಚಯಿಸಿದಂತೆ ಇಲ್ಲಿಯ ಅನೇಕ ಹೊಸ ಹೊಸ ಕಜ್ಜಾಯಗಳು ನಮ್ಮ ವರದಿಯಲ್ಲಿ ಸೇರುವಂತೆ ಮಾಡಿತು.
ಈಗಿನ ಯಾಂತ್ರಿಕ ಬದುಕಿನಲ್ಲಿ ಮಾಡಿದ್ದೇ ಮಾಡಿ ಮಾರು ದೂರ ಸರಿಯುವಂತೆ ಮಾಡುವ ಜಿಲೇಬಿ, ಜಾಮೂನು, ಶ್ಯಾವಿಗೆ ಖೀರು, ಮೈಸೂರಪಾಕುಗಳಿಗಿಂತ ಆ ಹಳೆಯ ಕಜ್ಜಾಯಗಳ ಹೆಸರೇ ಎಷ್ಟು ಆಪ್ಯಾಯಮಾನ! ನೋಡಿ ಅಮೃತ ಪಿಂಡರೊಟ್ಟಿ, ಜಿವ್ವಾಮೃತ ರೊಟ್ಟಿ, ಹಾಲುಗಾರಿಗೆ, ತುಪ್ಪ ಗಾರಿಗೆ, ಮೊಸರೊಡೆ, ಸಿತಪಾಕದೊಡೆ, ಸ್ವಲ್ಪ ಕಷ್ಟವಾದರೂ ಇಷ್ಟವಾಗುವ ಭುಕ್ತಿಕಾಂಚಿಕತಕ್ರೋದನ, ಮಂಡಕ್ ಮಿಶ್ರ ರಂಭಾ ಕುಸುಮ ಕೂಷ್ಮಾಂಡ ಖಂಡ ಶೂಲ್ಯಕ ಇತ್ಯಾದಿಗಳು. ಇಡ್ಡಲಿಗೆ, ಉಂಡಲಿಗೆ, ಕಡಬು, ಕಡಿವಡೆ, ಕರಜಿಗೆ, ಕಳತಿ, ಕೊಣಬು, ಗಾರಿಗೆ, ಲಡ್ಡುಗೆ ಈ ಎಲ್ಲ ಹಳೆಯ ತಿನಿಸುಗಳು ಈಗಲೂ ಅಲ್ಪಸಲ್ಪ ಬದಲಾವಣೆಯೊಂದಿಗೆ ನಮ್ಮ ಜೊತೆ ಇರುವುದು ಖುಷಿಯೆನಿಸುತ್ತದೆ. ಮೊಸರು ಮಾಡುವ ವಿವಿಧ ವಿಧಾನಗಳಂತೂ ಆಶ್ಚರ್ಯದಾಯಕವೆನಿಸುತ್ತದೆ. ಅಡಿಗೆಯ ಕುರಿತಾಗಿ ಎಂತಹ ಕಲಾತ್ಮಕ ವಿವರಣೆ ಮಂಗರಸನದು. ಉದಾಹರಣೆಗೆ ಕಳಿತ ಬಾಳೆಯ ಹಣ್ಣು ಖಜರ್ೂರದ ತನಿವಣ್ಣು
ಬಿಳಿಯ ಸಕ್ಕರೆ ಮಾವಿನಿನಿವಣ್ಣು ಪಲಸುವ
ಣ್ತೊಳಪ ದೀಪದ್ರಾಕ್ಷೆಗಳ ಹಣ್ಣಿನೊಂದಾಗಿ ಕೂಡಿ ತುಪ್ಪದೊಳು ಕಲಸಿ....
ಓದುತ್ತಿದ್ದಂತೆ ಕಜ್ಜಾಯದ ಪರಿಮಳ ಮುತ್ತಿಕೊಂಡು ಬಾಯಲ್ಲಿ ನೀರೂರುವಂತೆ ಮಾಡುತ್ತದೆ.
ಧಾರಾಳವಾದ ಹಾಲು, ಮೊಸರು, ತುಪ್ಪ, ಹಣ್ಣುಗಳಿಂದ ಕೂಡಿದ ಇವು ಬಡವರಿಗೆ ಕೈಗೆಟುಕದ ರಾಜಭೋಜ್ಯಗಳು ಎನ್ನುವುದನ್ನು ಲೇಖಕರು ಹೇಳಲು ಮರೆತಿಲ್ಲ. 'ಹೆಂಗಸರದೇನು ಅಡಿಗೆ? ಇಂದಿಗೂ ಹೆಸರಿಸುವುದು ನಳಭೀಮರೇ.....' ಎಂದು ಹೆಂಗಸರ ಅಡುಗೆಯನ್ನು ಸಸಾರ ಮಾಡುವ ಜನರಿಗೆ ಮಂಗರಸ 'ಗೌರಿ ಪಾರ್ವತಿ'ಯರನ್ನೂ ಹೆಸರಿಸಿದ್ದಾನೆ ಎಂದು ಹೇಳಿ ಬಾಯ್ಮುಚ್ಚಿಸಿದ್ದಾರೆ ಲೇಖಕರು.
ಅನ್ನ ಕಲಸಿ ಬಾಯ್ಗಿಡಲು ಪುರುಸೊತ್ತಿಲ್ಲದ ಈ ಸಂದರ್ಭದಲ್ಲಿ ಪ್ರಾಚೀನ ಪಾಕ ಸಂಸ್ಕೃತಿಯ ದೊಡ್ಡ ಗ್ರಂಥ ಪರಿಚಯಿಸಿ, ಪ್ರಚಲಿತ ಅಡುಗೆಗೆ ಪ್ರಾಚೀನತೆಯ ಟಚ್ ಕೊಡಲು ಲೇಖಕರು ಅವಕಾಶ ಮಾಡಿ ಕೊಟ್ಟಿದ್ದಾರೆ.
2) ಹಳೆಯ ಜನ ಸಂಸ್ಕೃತಿಯ ಪ್ರತಿನಿಧಿಯಂತೆ ಕೆಲಸ ಮಾಡಿದ ರಂಗೋಲಿ ಕಲೆ ಇಂದು ನೀಟಾಗಿ ಅಲಂಕಾರಗೊಂಡು ಪೇಂಟು ಅಥವಾ ರಂಗೋಲಿ ಜಾಲರಿಗಳಿಂದ ಕೆಳಗಿಳಿದು ಏನನ್ನು ಮಾತಾಡದೆ ಸಿಂಗಾರಗೊಂಡ ಮೌನಗೌರಿಯಾಗದೆ ಎಂದು ಹೇಳುವ ಲೇಖಕರು ನಿಜವಾಗಿಯೂ ನಮ್ಮನ್ನು ಮಾತಿಗೆ ಹಚ್ಚುವದು ಜನಪದ ರಂಗೋಲಿಯೇ ಎಂದು 'ರಂಗೋಲಿಗಳು ಮಾತನಾಡುತ್ತವೆ' ಲೇಖನದಲ್ಲಿ ಹೇಳಿದ್ದಾರೆ.
ಜನಪದ ರಾಮಾಯಣದ ರಾಮನ ರಕ್ಷಣೆಗೆ ಹೊರಟ ಲಕ್ಷ್ಮಣ ಸೀತೆಯ ರಕ್ಷಣೆಗಾಗಿ ಎಳೆವ ಏಳು ಗೆರೆಗಳನ್ನು ಹೆಸರಿಸುತ್ತ ಈ ಶೇಡಿಯ ರಂಗೋಲಿ ಅನಿಷ್ಟ ನಿವಾರಕಗಳಾಗಿದ್ದವೆಂದು ಹೇಳಿದ್ದಾರೆ.
ಬೂರೆ ಹಬ್ಬ (ದೀಪಾವಳಿ)ದಂದು ಬೋರಜ್ಜಿ ಬಲಿಯಂದರರ ಆರಾಧನಾ ಸ್ಥಳದಲ್ಲಿ ಬಿಡಿಸುವ ಹಲಿ, ಸಿಂಗಾರೆಳೆಯ ರಂಗೋಲಿ, ಅರಳಿ ಮರದ ಚಿತ್ರ, ಗೋವಿನ ಹಬ್ಬದಲ್ಲಿ ಬರೆಯುವ ಕೊಳಚಿನ ಚಿತ್ರ ಇವೆಲ್ಲವೂ ಜನಪದದ ಕೃಷಿ ಸಂಸ್ಕೃತಿ ಹಾಗೂ ಪಶುಪಾಲನಾ ಸಂಸ್ಕೃತಿಯ ಕುರುಹುಗಳಾಗಿವೆ ಎನ್ನುತ್ತಾ ಸಸ್ಯಕೊಟಿಗಳನ್ನು ತನ್ನೊಡಲಲ್ಲಿ ತುಂಬಿಕೊಂಡ ಭೂದೇವಿಯಂತೆ ಔಷಧೀಯ ಸಸ್ಯಗಳಾದ ನಾರು ಬೇರುಗಳಿಂದ ತುಂಬಿದ ಕರಗೇ (ಬೂರಜ್ಜಿ)ಯ ಪೂಜೆ ಮಾತೃಮೂಲೀಯ ಸಂಸ್ಕೃತಿಯ ಆರಾಧನೆ ಎಂದ ಲೇಖಕರು ಈ ಲೇಖನದ ಮೂಲಕ ಅಧ್ಯಯನ ಶೀಲರಿಗೆ ಆಮಂತ್ರಣ ನೀಡಿದ್ದಾರೆ.
3) ಇಂದಿಗೂ ಮಹಾ ವೈಭವಪೂರ್ಣವಾಗಿ ನಡೆಯುವ ಗಣೇಶ ಚತುಥರ್ಿ ಅಂದಿನ ಚವತಿಯಾಗಿದ್ದು, ಗಣೇಶ ಜಾನಪದದ ಆರಾಧ್ಯ ದೈವವಾಗಿದ್ದಾನೆ. ದೈತ್ಯ ಪ್ರಾಣಿಯಾದ ಆನೆಯಲ್ಲಿ ಕೃಷಿಯನ್ನು ನಾಶಮಾಡಬಾರದೆಂಬ ಪೂರ್ವಜರ ಕೋರಿಕೆಯೇ ಬೆನುಮಣ್ಣನ ಪೂಜೆಯಾಗಿದ್ದು ಪುರಾಣ ಸೇರಿದ ಬಳಿಕ ಕೃಷಿಕರ ಆರಾಧನಾ ದೇವರ ಸ್ಥಾನ ದ್ವಿತೀಯ ದಜರ್ೆಗಿಳಿದು, ಆರಾಧನಾ ಪ್ರಾಣಿಗಳು ಪುರಾಣದೇವರ ವಾಹನಗಳಾಗಿದ್ದು ಗಣೇಶನಿಗೆ ಇಲಿ ವಾಹನವಾದುದು ಕುತೂಹಲಕಾರಿಯಾಗಿದೆ. ಮಣ್ಣಿನ ಹೆಜ್ಜೆಯಾಗಿ ಹಾದಿ ಬೀದಿ ಗಣಪನಾಗಿದ್ದವನು ಈಗ ಮನೆ ಮಠವನ್ನು ಪ್ರವೇಶಿಸಿ ಮತೀಯ ಸಂಘರ್ಷಕ್ಕೂ ಕಾರಣನಾಗಿರುವುದು ಆಧುನಿಕ ಆರಾಧನೆಯ ಉಪನ್ಯಾಸವೇ ಆಗಿದೆ.
ಗಣೇಶನಿಗೆ ಅಪರ್ಿಸುವ ದಭರ್ೆ, ಕಟ್ಟುವ ಫಲಾವಳಿ ಎಲ್ಲವೂ ಪ್ರಕೃತಿಯ ಆರಾಧನೆಯಾಗಿದ್ದು, ಅಂದು ಮಾಡುವ ಪಂಚಕಜ್ಜಾಯ, ಮೋದಕ, ಸುಟ್ಟೇವು, ಸುಖಿನುಂಡೆ, ಕಡಬು, ಎಳ್ಚಿಗಳಿ, ಉಂಡೆ, ವಡೆ, ಅತ್ರಾಸ, ಚಕ್ಕಲಿ, ಸೀವ್ರಿ, ಪತ್ರೊಡೆ, ಉಂಡ್ಲೆಕಾಳು, ಪನ್ನೀರ ಕಾಳು ಮುಂತಾದ ಇಪ್ಪತ್ತೊಂದು ಬಗೆಯ ನೈವೇದ್ಯಗಳೆಲ್ಲ ಶುದ್ಧ ಜಾನಪದೀಯ ಕಜ್ಜಾಯಗಳೇ ಆಗಿವೆ.
ಈ ಎಲ್ಲಾ ಸಂಭ್ರಮಾಚರಣೆಯ ಜೊತೆಗೆ ವೈಧ್ಯವ್ಯಾಚರಣೆಯ ಕಡೆಗೂ ಗಮನ ಸೆಳೆದಿದ್ದಾರೆ ಲೇಖಕರು. ಚವತಿಯ ದಿನ ಹಸಿದಿರಬಾರದು ಎಂದು ಒತ್ತಾಯಪೂರ್ವಕವಾಗಿ ಬಾಳೆ ತುಂಬ ಬಡಿಸುವ, ತಿಂದು ತೇಗುವ ಜನಕ್ಕೆ ಹವ್ಯಕ ವಿಧವೆಯರಿಗೆ ಉಪವಾಸ ವ್ರತವನ್ನು ವಿಧಿಸುವ ಮನಸ್ಸಾದರೂ ಹೇಗೆ ಬಂತು? ಚರಿತ್ರೆಯುದ್ದಕ್ಕೂ ಹೆಣ್ಣಿನ ಹಸಿವು ಯಾರನ್ನೂ ಕಾಡಲಿಲ್ಲ ಎನ್ನುವುದು ಸ್ತ್ರೀಸಂವೇದನೆ ಉಳ್ಳ ಎಲ್ಲರನ್ನೂ ಕಾಡುವ ಅಂಶವಾಗಿದೆ.
ಒಟ್ಟಿನಲ್ಲಿ ಪರಿಸರ ಸ್ನೇಹ ಆಚರಣೆಗೆ ಮಣ್ಣಿನ ಗಣಪತಿ ಆರಾಧಕರಿಗೆ ಲೇಖಕಿ ಕರೆ ನೀಡಿದ್ದಾರೆ.
4) ಆಟವೆಂದರೆ ಹೆಣ್ಣು ಗಂಡೆನ್ನದೆ ಎಲ್ಲರಿಗೂ ಪ್ರಿಯವಾದ ಕ್ರಿಯೆ. ಕುಂಟಾಟ, ಗಜ್ಜುಗದಾಟ, ಜಿಬ್ಲಿ, ಚೆನ್ನೆಮಣೆ, ಚೌಕಾಬಾರಾ, ಪಗಡೆ, ಹುತುತು, ಹಾಣೆ, ಸೋಡಿ ಆಟಗಳೆಲ್ಲ ಪ್ರಾರಂಭದಲ್ಲಿ ಲಿಂಗಭೇದವಿಲ್ಲದೆ ಆಡುವ ಆಟವಾದರೂ ಬೆಳೆಯುತ್ತ ಹೆಣ್ಣಿಗೆ ವಿಧಿಸುವ ಸಾಮಾಜಿಕ ಕಟ್ಟುಪಾಡುಗಳಿಂದ ಲಿಂಗ ಪ್ರತ್ಯೇಕತೆಯನ್ನು ಕಲ್ಪಿಸಿವೆ. ಹೆಣ್ಣು ಕೂಸು ಸಹಜವಾಗಿ ಅಮ್ಮನ ಅಡುಗೆ ಆಟ, ಮಕ್ಕಳ ಆಟ ಆಡುತ್ತದೆಯಾದರೂ ಸಹಜವಾಗಿ ಸ್ತ್ರಿಯರು ಶಿಕ್ಷಕರು, ವೈದ್ಯಕೀಯ ವೃತ್ತಿಯಲ್ಲಿ ತೊಡಗಿಕೊಂಡಾಗ ಆ ಆಟವನ್ನೇ ಆಕೆ ಆಡುತ್ತಾಳೆ. ಹೆಣ್ಣು ಮಕ್ಕಳ ಮೃದುವಾದ ಸೂಕ್ಷ್ಮ ಆಟವನ್ನು ಗಂಡು ಮಕ್ಕಳು ಕಠಿಣವಾದ ಬಲಪ್ರದರ್ಶನದ ಆಟಗಳನ್ನು ಆರಿಸಿಕೊಳ್ಳುತ್ತಾರೆಂಬ ಶರೀರವಾದಿಗಳ ವಾದವನ್ನು ಅಲ್ಲಗಳೆಯುತ್ತ ಎಲ್ಲ ಜನಪದೀಯ ಆಟಗಳೂ ಬಯಲಿಗೆ ಬಂದು ಲಿಂಗ ಭೇದವಿಲ್ಲದೆ ಆಡುವಂತಾಗಬೇಕು. ಕ್ರಿಕೆಟ್ನಂತಹ ಸಮಯ ವ್ಯರ್ಥದ ಆಟಕ್ಕಿಂತ ಅತ್ಯಲ್ಪ ವೇಳೆಯಲ್ಲಿ ಸಾಕಷ್ಟು ವ್ಯಾಯಾಮ ನೀಡುವ ಜಾನಪದ ಆಟಗಳನ್ನು ಉಳಿಸಿಕೊಳ್ಳುವ ಆಶಯವನ್ನು 'ಮಹಿಳೆಯರ ಜನಪದ ಕ್ರೀಡೆಗಳು' ಲೇಖನದಲ್ಲಿ ಲೇಖಕರು ವ್ಯಕ್ತಪಡಿಸಿದ್ದಾರೆ.
5) ಕಪ್ಪೆ ಅರೆಭಟ್ಟನ ಶಾಸನದಲ್ಲಿ ಬರುವ ತಾಯಿ ಮಗುವಿಗೆ ಹಾಲನ್ನೂಡುವಾಗ ಕಿವಿಯಲ್ಲಿ 'ಕೆರೆಯಂಕಟ್ಟಿಸು ಬಾವಿಯಂ ಸವೆಸು........ ಎನ್ನುವ ಮಾತು ನಮ್ಮ ಪೂವರ್ಿಕರ ಜಲ ಪ್ರೀತಿಯನ್ನು ತಿಳಿಸುವಂತೆ ಶಾಂತಿ ನಾಯಕರ 'ಜಲ ಸಂಸ್ಕೃತಿ ಮತ್ತು ನಂಬಿಕೆ' ಲೇಖನ ಜಲಸಂಸ್ಕೃತಿಗೂ, ಜನ ಸಂಸ್ಕೃತಿಗೂ ಇರುವ ಅವಿನಾಭಾವ ಸಂಬಂಧವನ್ನು ತಿಳಿಸುತ್ತದೆ. ಮಳೆಯ ನಕ್ಷತ್ರದ ಕುರಿತಾದ ವಿವಿಧ ಪ್ರದೇಶದಲ್ಲಿರುವ ನಂಬಿಕೆ, ಮಾತು, ಮಳೆಯ ಮುನ್ಸೂಚನೆ ನೀಡುವ ಸಂಗತಿಗಳು, ಜಲ ಮೂಲದ ಆರಾಧನೆ ಎಲ್ಲವನ್ನು ಶಿವಗಂಗೆಯ ಕಲೆಯ ಮೂಲಕ ಕತೆಯಂತೆ ಹೇಳಿದ್ದಾರೆ. 'ಹುಬ್ಬೆ ಹೊಯ್ದರೆ ಅಬ್ಬೆ ಹಾಲು', 'ಚಿತ್ತ ಚಿತ್ತ ತಿರುಗಿದತ್ತ ಬೀಳುತ್ತದೆ', 'ಮಘಾ ಮಳೆಯಲ್ಲಿ ಮೊಗೆಯಲ್ಲಿ ನೀರು ಕುಡಿಯಬೇಕು', 'ವಿಶಾಖಾ ಮಳೆ ವಿಷದ ಮಳೆ' ಅನುರಾಧಾ ಮಳೆ 'ಅನುರಾಜ'ನೆಂಬ ಗೌರವಕ್ಕೆ ಪಾತ್ರವಾದ ರೀತಿ ಕುತೂಹಲ ಕೆರಳಿಸುತ್ತದೆ.
ಅಜ್ಜಿ ಗಿಡಗಳಿಗೆ ನೀರನ್ನು ಹನಿಸುತ್ತಾಳೆ (ಮಳೆ), ಅಜ್ಜ ಕವಳ ಜಪ್ಪುತ್ತಾನೆ (ಗುಡುಗು) ಮೊಮ್ಮಗ ದೀಪ ಹಚ್ಚುತ್ತಾನೆ (ಮಿಂಚು) ಎಂಬ ಮಳೆಯ ವರ್ಣನೆ ಖುಷಿ ನೀಡುತ್ತದೆ.
'ಹರಿಯುವ ನದಿಗೆ ಶಾಸ್ತ್ರವಿಲ್ಲ'ವೆಂಬ ನಂಬಿಕೆಯಿದ್ದ ನಾಡಿನಲ್ಲಿ ನದಿಗಳು ಗಟಾರವಾದುದರ ಕುರಿತು ಖೇದ ವ್ಯಕ್ತ ಪಡಿಸುವ ಲೇಖಕಿ ಕೆರೆ, ಬಾವಿ, ತೀರ್ಥ, ಕಲ್ಯಾಣಿಗಳೆಲ್ಲ ನಾಶವಾಗುತ್ತಿರುವುದಕ್ಕೆ ವಿಷಾದ ವ್ಯಕ್ತಪಡಿಸುತ್ತಾರೆ. ಮಘಾ ಮಳೆಯ ಮೊಗೆ ನೀರ ಕುಡಿತ ಕಣ್ಮರೆಯಾದುದಕ್ಕೆ ಖೇದ ವ್ಯಕ್ತಪಡಿಸುವ ಇವರು ತೀರ್ಥ ಸ್ನಾನದ ಹೆಸರಿನಲ್ಲಿ ಕಲುಷಿತ ನೀರ ಸ್ನಾನದ ನಿಷೇಧದ ಅಗತ್ಯವನ್ನು ಸಾರಿ ಹೇಳಿದ್ದಾರೆ. ಜಲಮೂಲ ಕಾಪಾಡಲು ಮಳೆಯ ನೀರನ್ನು ಸಂಗ್ರಹಿಸಲು ತಿಳಿಸುವ ಅವರ ಕೋರಿಕೆ ಅನುಕರಣೀಯವಾಗಿದೆ. ಇಲ್ಲಿಯೂ ಅವರು ಭಾಗೀರಥಿಯ ಬಲಿ ಕತೆಯನ್ನೂ ಹೇಳದೆ ಬಿಟ್ಟಿಲ್ಲ.
6) 'ತಾರ್ಕಣೆ'ಯ ತಾರ್ಕಣೆ ತಾಬನದಲ್ಲಿ ವಿ.ಗ ನಾಯಕರ ವಿಮಶರ್ಾ ಗ್ರಂಥದ ಕುರಿತು ಮಾತನಾಡಿದ್ದಾರೆ. ಜನಪದ ಸಾಹಿತ್ಯದಲ್ಲಿ ಜನಪರ ಕಾಳಜಿಗಳನ್ನು 'ರಾಜನ ಸಂತರ್ಪಣೆ' ಕತೆಯಲ್ಲಿ ಬರುವ ಚಮಗಾರನೊಂದಿಗೆ ರಾಜ ಕುಳಿತು ಊಟಮಾಡುವ, ಬಡಬ್ರಾಹ್ಮಣ ಬಾಳೆ ಎತ್ತುವ ಕಲ್ಪನೆಯ ಕತೆಗಳ ಮೂಲಕ' ದಲಿತರು ತೃಪ್ತಿ ಹೊಂದುವ ಆದರೆ ಇದು ಸಾಧ್ಯವಾಗಬೇಕಾದ ಜನಪದರ ಆಶಯವು ವಿ. ಗ. ನಾಯಕರ ಆಶಯವಾದುದನ್ನೂ ಯಾರ್ಹೆಚ್ಚು ಒಂದು ವಿಶ್ಲೇಷಣೆ' 'ಜಾನಪದದಲ್ಲಿ ಮದುವೆ' ಲೇಖನದಲ್ಲಿ ವಿ. ಗ. ನಾಯಕರು ಒಬ್ಬ ಮಹಿಳಾವಾದಿ ಚಿಂತಕರಾಗಿ ನಿಂತಿದ್ದನ್ನು ಶಾಂತಿ ನಾಯಕರು ಮೆಚ್ಚುತ್ತ ಪುರಷ ಪ್ರಧಾನ ವ್ಯವಸ್ಥೆಯ ವಿರುದ್ಧ ಪುರುಷನೇ ಪ್ರಶ್ನೆ ಎತ್ತುವುದು ಹೆಚ್ಚು ಸೂಕ್ತ ಮತ್ತು ಪರಿಣಾಮಕಾರಿ ಎಂಬ ಅಭಿಪ್ರಯವನ್ನು ವ್ಯಕ್ತ ಪಡಿಸಿದ್ದಾರೆ.
ಹೀಗೆ 'ಜಾನಪದ ಲೇಖನ ಕುಂಜ' ಜನಪದದ ಬದುಕನ್ನು ತೆರೆದಿಡುತ್ತ ಹೆಚ್ಚಿನ ಸಂಶೋಧನೆಗೆ ನಮ್ಮನ್ನು ಆಹ್ವಾನಿಸುತ್ತದೆ. ಈ ಎಲ್ಲ ಲೇಖನಗಳನ್ನು, ವಸ್ತು ವೈವಿಧ್ಯ, ವಿಷಯ ಸಂಗ್ರಹವನ್ನು ಓದಿದಾಗ ಲೇಖಕರಾದ ಶಾಂತಿ ನಾಯಕರಿಗೆ ಜಾನಪದ ಅಧ್ಯಯನ ಕೇವಲ ಒಂದು ಪ್ಯಾಶನ್ ಆಗದೆ ಅಂತರಂಗದ ತುಡಿತವೇ ಆಗಿರುವುದು ಪ್ರಿಯವೆನಿಸುತ್ತದೆ. ಅವರ ತುಡಿತ ನಮ್ಮ ಮಿಡಿತವೂ ಆಗಲೆಂಬುದೇ ಇಲ್ಲಿಯ ಆಶಯ.
07.04.2010
No comments:
Post a Comment