Thursday, 30 October 2014

ಅಮಾಸೆ ಹುಡುಗನ ಬಾಯೊಳಗೆ ಕವಳ -ಯಮುನಾ ಗಾಂವ್ಕರ್

ಅಮಾಸೆ ಹುಡುಗನ ಬಾಯೊಳಗೆ ಕವಳ
ಮನದಲಿ ತಳಮಳ-ಕಳವಳ
ಮನಸ್ಸು ನಿಗಿನಿಗಿ ಕೆಂಡ
ಮುಖಚರ್ಯೆಯಲಿ ಕುದಿಬಿಂದು
ಹೃದಯದಲಿ ಮಾನವತೆ
ಇದು ವಿಡಂಬಾರಿ ಕವಿತೆ !
DSCN0560

ಆಂತರ್ಯದಲಿ ಗುನುಗುನಿಸಿದ, ಹಂಬಲಿಸಿದ, ಬಯಸಿದ
ಮನುಷ್ಯತ್ವ. . .ಮಾನವತೆ. . .ಬಂಧುತ್ವ
ಜನಮನದಾಳ ದ್ವೇಷದ ಸಿಕ್ಕು ಬಿಡಿಸುತ
ಬೋಧಿಸಿದನೀತ, ಪ್ರೀತಿಯ ಹೂಗಳ ಅರಳಿಸಿದನೀತ
 ಅಕ್ಷರದ ಸಾಂಗತ್ಯ ಇವಗೇಕೆ ಬೇಕು?
ಹೀಗಳೆವರೆನ್ನ ಎನ್ನದೇ, ಬಾಯ್ಬಿಡದೇ
ಬರಸೆಳೆದ ಚಾವಟಿಗೆಯ
ಪಟಾರ್ ಎಂದು ಬಿರುಸಿನಲಿ ಬೀಸಿದ
ಪ್ರಶ್ನಿಸಿದವಗೆ ಬಾಯುತ್ತರ ತಪ್ಪಿ
ಚುಟುಕಿನ ಬಾರೇಟು ಕನ್ನೆತ್ತರು ಗಟ್ಟಿತು
ಅವಮಾನ . . ಅಪಮಾನಗಳ ಮೊಗೆಮೊಗೆದು
ಸೈರಿಸಿದ ಸಂಚಯಿಸಿದ ಜೋಳಿಗೆಯಲಿ, ಕಂಕುಳ ಪುಸ್ತಕದಲಿ
ಲೇಖನಿಯ ತುದಿ ಮಾತ್ರ ಸವೆಯಲಿಲ್ಲ
ಕಣ್ಣತೇವ ಮಸಿಕುಡಿಕೆ
ಅಕ್ಷಯ ಅಕ್ಷರಕೆ ಸದಾ
ಮುನ್ನುಡಿ ಬರೆಯುತ್ತಲೇ ಹೋದನೀತ!
                                                   -ಯಮುನಾ ಗಾಂವ್ಕರ್

ವಿಡಂಬಾರಿ ಅವರ ಪ್ರಕಟಿತ ಪುಸ್ತಕದ ಕುರಿತು………


Standard
vidambari
ವಿಡಂಬಾರಿ
ಒಗ್ಗರಣೆ ಕುರಿತು ಡಾ. ಶಾಲಿನಿ ರಘುನಾಥ
ವ್ಯಾಪಕವಾದ ರೀತಿಯಲ್ಲಿ ಚುಟುಕು ಸಾಹಿತ್ಯ ಪ್ರಕಾರವನ್ನು ತಮ್ಮ ಅಭಿವ್ಯಕ್ತಿಯ ಮಾಧ್ಯಮವನ್ನಾಗಿ ಮಾಡಿಕೊಂಡ ಜನಪ್ರಿಯ ಕವಿಗಳಲ್ಲಿ ದಿನಕರ ದೇಸಾಯಿಯವರನ್ನು ಬಿಟ್ಟರೆ, ವಿಡಂಬಾರಿಯವರ ಹೆಸರು ವಿಶೇಷವಾಗಿ ಕೇಳಿ ಬರುತ್ತಿದೆ. ಅವರು ಈಗಾಗಲೇ 2000 ಕ್ಕೂ ಹೆಚ್ಚು ಚುಟುಕುಗಳನ್ನು ರಚಿಸಿದ್ದಾರೆ. ಅವುಗಳಲ್ಲಿ ಮೊದಲ ಕಂತಾಗಿ 500 ಚುಟುಕುಗಳ ಒಗ್ಗರಣೆ ಸಂಕಲನ ಹೊರಬಂದಿದೆ. ಈ ಕವಿ ಶಾಲೆಗೆ ಹೋಗಿ ಕಲಿತದ್ದು ವಿಶೇಷವಲ್ಲದಿದ್ದರೂ ಬದುಕಿನಿಂದ ಕಲಿತದ್ದು ಅಪಾರ. ಇದನ್ನು ನಾವು ಅವರ ಚುಟುಕುಗಳಿಂದಲೇ ಅರಿಯಬಹುದು. ಶೋಷಣೆಗೆ ಒಳಗಾದ ನಿಮ್ಮ ವರ್ಗದ ಕವಿಯ ಆಕ್ರಂದನವನ್ನೂ ಆಂತಕವನ್ನೂ ಅವರ ಚೌಪದಿಗಳಲ್ಲಿ ನಾವು ಕಾಣುತ್ತೇವೆ.
ಇದ್ದವರು ಬರೆಬರೆದು ಮುದ್ರಣವ ಮಾಡಿ
ಸದ್ದು ಗದ್ದಲದಿಂದ ಹಂಚುವರು ನೋಡಿ
ನಾನೇನ ಮಾಡುವೆನು ಬಡ ಬೋರೆಗೌಡ
ಮೂಲೆಯಲಿ ಕುಳಿತಲ್ಲೆ ಹಾಡುವೆನು ಹಾಡ (ಬೋರೆಗೌಡ)
– ಎಂದು ಪ್ರಾರಂಭದಲ್ಲಿಯೇ ನಿವೇದಿಸಿಕೊಳ್ಳುತ್ತಾರೆ.
ಚುಟುಕಗಳನ್ನು ಬರೆಯಲಿಕ್ಕೆ ಸ್ಫೂತರ್ಿ ದಿನಕರ ದೇಸಾಯಿಯವರೇ ಆದರೂ ತಮ್ಮತನವನ್ನು ಉಳಿಸಿಕೊಂಡಿರುವೆನೆಂಬ ಆತ್ಮ ವಿಶ್ವಾಸವು ಅವರಿಗಿದೆ.
ಚೌಪದಿಗೆ ಜನಕನೇ ದಿನಕರನು ನೋಡಿ
ಬರೆಯುವೆನು ದಿನಕರನ ಸ್ಮರಣೆಯನು ಮಾಡಿ
ಆದರೂ ಇನ್ನೊಂದು ಮಾತುಂಟು ಕೇಳಿ
ತುಂಬಿಹೆನು ಇದರೊಳಗೆ ನನ್ನದೇ ಗಾಳಿ (ಸ್ಮರಣೆ)
ಆತ್ಮೀಯತೆ, ತಿಳಿಯಾದ ಆತ್ಮ ವಿಮಶರ್ೆ, ಹರಿತವಾದ ವಿಡಂಬನೆ ಇವೆಲ್ಲ ಒಗ್ಗರಣೆಯ ಚುಟುಕುಗಳಲ್ಲಿವೆ. ಈ ವಿಷಯದಲ್ಲಿ ಕವಿಯ ಪ್ರಾಮಾಣಿಕತೆ ಧೈರ್ಯ ಮೆಚ್ಚುವಂತಹದೇ. ತಮ್ಮ ಹೆಸರನ್ನೇ ವಿಡಂಬಿಸಿಕೊಂಡವರು ಅವರು! ಸಾಮಾಜಿಕ ವಿಷಮತೆ ಅನ್ಯಾಯಗಳನ್ನು ಕಂಡಾಗ ಮನ ಕುದಿ ಕುದಿದು ಸಿಡಿದುಕ್ಕಿ ಹೊರಚೆಲ್ಲಿದ ಪರಿಣಾಮ, ಕೆಲವು ಚುಟುಕುಗಳು; ಮತ್ತೆ ಕೆಲವಂತೂ ಯಾವ ಮುಲಾಜಿಲ್ಲದೆ ಕೆತ್ತುರುಳಿಸುವ ಬುಲ್ಡೋಜರ್ ಗಾಡಿಗಳು. ಒಟ್ಟಿನಲ್ಲಿ ನಮ್ಮ ಸಮಾಜದಲ್ಲಿ ತಾವು ಕಂಡುದನ್ನು ಅವರು ಬರೆದಿದ್ದಾರೆ; ಬರೆದು ತೊಡಕಿನಲ್ಲಿ ಸಿಲುಕಿಸಿಕೊಂಡಿದ್ದಾರೆ; ಆದರೆ ತೊಡಕು ಹೆಚ್ಚಾಯಿತೆಂದು ಬರೆಯುವ ಹುಚ್ಚನ್ನು ಮಾತ್ರ ಬಿಟ್ಟಿಲ್ಲವಾದ್ದರಿಂದಲೇ ಅವರು ಮಹತ್ವದ ಕವಿಯೆನಿಸುತ್ತಾರೆ.
ಒಗ್ಗರಣೆಯಲ್ಲಿ ಪ್ರಸ್ತಾವನೆ, ವ್ಯಕ್ತಿಗತ, ಜಾತಿ, ರಾಜಕೀಯ, ಕಾಳ ಸಂತೆ, ಸಂಕೀರ್ಣ ಎಂಬ ಆರು ವಿಭಾಗಗಳನ್ನು ಮಾಡಿದ್ದರೂ ಕೊನೆಯ ಸಂಕೀರ್ಣದಲ್ಲಿ ಉಳಿದ ಐದುಬಗೆಯ ವಿಭಾಗಗಳಿಗೆ ಸೇರಬಹುದಾದ ಚುಟುಕುಗಳಿವೆ. ಸಂಪಾದನಾಕಾರ್ಯದಲ್ಲಿ ಇನ್ನೂ ಹೆಚ್ಚಿನ ಎಚ್ಚರಿಕೆ ವಹಿಸಿದ್ದರೆ, ಸಮರ್ಪಕತೆಯ ಪ್ರಮಾಣವನ್ನು ಏರಿಸಲು ಸಾಧ್ಯವಾಗುತ್ತಿತ್ತು. ಜೊತೆಗೆ ಕೆಲವು ಚುಟುಕುಗಳ ಹಾಗೂ ಚುಟುಕುಗಳ ತಲೆಬರಹಗಳ ಪುನರುಕ್ತಿಗಳನ್ನೂ ತಪ್ಪಿಸಬಹುದಿತ್ತು. ಇದರಿಂದ ಒಗ್ಗರಣೆ ಹೆಚ್ಚು ವ್ಯವಸ್ಥಿತವಾಗುತ್ತಿತ್ತು. ಇಷ್ಟಾದರೂ ತಮ್ಮ ಸುತ್ತಲಿನ ಸಮಾಜದ ನಿತ್ಯದ ಆಗುಹೋಗುಗಳಿಗೆ ಜೀವಂತವಾಗಿ ಹಾಗೂ ಸತ್ವಯುತವಾಗಿ ಪ್ರತಿಕ್ರಿಯಿಸುತ್ತಿರುವ ವಿಡಂಬಾರಿಯವರು ತಮ್ಮ ಒಗ್ಗರಣೆಯ ಕಂಪಿನಿಂದ ಸಹೃದಯರನ್ನು ದೂರದಿಂದಲೇ ಆಕರ್ಷಿಸುತ್ತಾರೆ.
(ಸೌಜನ್ಯ : ಗ್ರಂಥಲೋಕ)
@@@@@@@@@@@@
???????????????????????????????
ವಿಡಂಬಾರಿ
ವಿಡಂಬಾರಿ ಅವರ “ಕವಳ” 
ಡಾ. ಪುರುಷೋತ್ತಮ ಬಿಳಿಮಲೆ
ದಿನಕರ ದೇಸಾಯಿಯವರ ಅನಂತರ ಚೌಪದಿಗಳ ಕಾಲ ಮುಗಿದು ಹೋಯಿತು ಎನ್ನಲಾಗುತ್ತಿತ್ತು. ಆದರೆ ಇದೀಗ ವಿಡಂಬಾರಿಯವರು ಕವಳದ ಮೂಲಕ ಆ ಮಾತನ್ನು ಸುಳ್ಳಾಗಿಸಿದ್ದಾರೆ. ಚೌಪದಿಗಳಿಗೆ ಉತ್ತರ ಕನ್ನಡ ಇನ್ನೂ ಫಲವತ್ತಾದ ಭೂಮಿಯಾಗಿದೆ ಎಂಬುದಕ್ಕೆ ಇದೊಂದು ದೃಷ್ಟಾಂತ.
ಚೌಪದಿಗಳ ಪ್ರಧಾನ ಗುಣ ಎರಡು. ಮೊದಲನೆಯದಾಗಿ ಮಿತವಾದ ಮಾತುಗಳಲ್ಲಿ ಗಂಭೀರವಾದ ಅರ್ಥವನ್ನು ಹಿಡಿದಿಡುವುದು ಮತ್ತು ಎರಡನೆಯದಾಗಿ ಚೌಪದಿಯ ಕೊನೆ ಸಾಲಿನಲ್ಲಿ ಮಾಮರ್ಿಕವಾದ ತಿರುವೊಂದನ್ನು ತುಂದಿರುವುದು. ಈ ಕೊನೆಯ ಸಾಲು ಅನೇಕ ಬಾರಿ ವಿಡಂಬನಾ ಪ್ರಧಾನವಾಗಿದ್ದು, ಅದಕ್ಕಿಂತ ಮೊದಲಿನ ಮೂರು ಸಾಲುಗಳಿಗೆ ಹೊಸ ಅರ್ಥವನ್ನು ಕೊಡುವಷ್ಟು ಸಶಕ್ತವಾಗಿರುವುದು. ದೇಸಾಯಿಯವರು ಈ ಎರಡನೆಯ ಗುಣವನ್ನು ಅದ್ಭುತವಾಗಿ ಮೈಗೂಡಿಸಿಕೊಂಡಿದ್ದರು. ಕನ್ನಡದ ತ್ರಿಪದಿಗಳ ಸಾರ್ವಭೌಮನಾದ ಸರ್ವಜ್ಞನು ಮೊದಲನೇ ಗುಣಕ್ಕೆ ಹೆಸರಾದವನು.
ವಿಡಂಬಾರಿಯವರು, ಅವರ ಕಾವ್ಯನಾಮದಂತೆ, ವಿಡಂಬನೆಯಲ್ಲಿ ಪ್ರಸಿದ್ಧರು. ಇದು ಚೌಪದಿಯ ಕೊನೆ ಸಾಲಿನಲ್ಲಿ ಬರುತ್ತಿದ್ದದ್ದು, ಇವರಲ್ಲಿ ಆರಂಭದಲ್ಲಿ ಬಂದು ಬಿಡುತ್ತದೆ.
ಉದಾ : ಕನರ್ಾಟಕ ರಾಜ್ಯ ಸೋರಿಗೆಯ ಗಾಡಿ
ಗುರಿಯ ಮುಟ್ಟುವುದುಂಟೆ ಒಂದು ಕಡೆ ಓಡಿ
ಪ್ರಯಾಣಿಕರ ಮಾತ್ರ ಬೋಳಿಸುವ ದಾರಿ
ಚೆನ್ನಾಗಿ ಗೊತ್ತುಂಟು ಮಿತಿಯನ್ನು ಮೀರಿ. (337)
ಇಲ್ಲೂ ಮೊದಲ ಸಾಲಿನಲ್ಲಿ ಬರುವ ರಾಜ್ಯ ಸೋರಿಗೆ ಎಂಬುದು ವಿಡಂಬನೆಗಾಗಿಯೇ ಬಂದಿದೆ. ಚೌಪದಿಯ ಮುಂದಿನ ಸಾಲುಗಳು ಇದನ್ನು ಮೀರಿ ಬೆಳೆಯುವುದಿಲ್ಲದ ಕಾರಣ ಈ ವಿಡಂಬನೆ ಹೆಚ್ಚು ಯಶಸ್ವಿಯಾಗುವುದಿಲ್ಲ. ಆದರೆ ಸಾಮಾಜಿಕ ಕಳಕಳಿ ಹೆಚ್ಚು ಇರುವ ಚೌಪದಿಗಳಲ್ಲಿ ಈ ವಿಡಂಬನಾ ಗುಣ ಅತ್ಯಂತ ಸಲೀಸಾಗಿ ಬಂದು ಬಿಟ್ಟಿದೆ.
ತೋಡಿರುವ ಪ್ರತಿಯೊಂದು ಬಾವಿಯಲಿ ನೀರು
ಬಂದೇ ಬರುವುದೆಂದು ಕಂಡವರು ಯಾರು
ಹೀಗಾಗಿ ಹಲವಾರು ಬಾವಿಗಳು ಇಲ್ಲಿ
ತುಂಬುವುವು ಸಂಪೂರ್ಣ ಮಳೆಗಾಲದಲ್ಲಿ.
ಇಲ್ಲಿಯ ಕೊನೆ ಸಾಲು ಚೌಪದಿಯನ್ನು ಅತ್ಯಂತ ಅರ್ಥವಾತ್ತಾಗಿಸಿದೆ. ಇಂಥ ಅನೇಕ ಚೌಪದಿಗಳು ವಿಡಂಬಾರಿಯವರ ಕಾವ್ಯಶಕ್ತಿಯನ್ನು ಪ್ರಕಟಪಡಿಸುತ್ತವೆ. 76, 82, 88, 104, 137, 210, 47, 259, 265, 309, 385, 416, 513, 568, 603, 614, 813, 782, 831, 814 ಈ ಚೌಪದಿಗಳು ವಿಡಂಬನಾ ಗುಣಕ್ಕಾಗಿ ಹಾತೊರೆಯುತ್ತಿರುವುದರಿಂದ ಮುಖ್ಯವಾಗುತ್ತವೆ.
ಕವನ ಸಂಕಲನವನ್ನು ಐದು ಭಾಗಗಳಲ್ಲಿ ಹಂಚಿದ್ದಾರೆ. ಈ ವಿಭಾಗ ಅಭ್ಯಾಸದ ಸೌಕರ್ಯಕ್ಕೆ ಹೇಗೋ ಹಾಗೇ ವಸ್ತುವಿನ ದೃಷ್ಟಿಯಿಂದಲೂ ಹೌದು. ಮೊದಲ ಭಾಗ ಆತ್ಮ ನಿವೇದನೆಯಲ್ಲಿ 55 ಚೌಪದಿಗಳಿದ್ದು, ಎಲ್ಲವೂ ತೀರಾ ಸಾಮಾನ್ಯ ರಚನೆಗಳಾಗಿವೆ. ಕವಿಯನ್ನು ಅರ್ಥಮಾಡಿಕೊಳ್ಳುವ ದೃಷ್ಟಿಯಿಂದ ಇವು ಮುಖ್ಯ ಅಷ್ಟೇ. ಒಂಥರಾ ಆತ್ಮ ಚರಿತ್ರೆಯ ಲೇಪ ಇದರಲ್ಲಿದೆ. ಎರಡನೆಯದಾದ ಸಾಮಾಜಿಕದಲ್ಲಿ 400 ಚೌಪದಿಗಳಿದ್ದು ಹೆಚ್ಚಿನವು ವ್ಯಂಗ್ಯ ಇಲ್ಲವೇ ಕಟಕಿಯಿಂದ ಯಶಸ್ವಿಯಾಗಿವೆ. ಮೂರನೇ ಭಾಗ ನೀತಿಪರವಾದದ್ದು. ಅದರಲ್ಲಿ ಒಟ್ಟು 92 ಚೌಪದಿಗಳಿದ್ದು ಕವಿಯ ನೈತಿಕ ದೃಷ್ಟಿಕೋನವನ್ನು ವಿವರಿಸಿ ಹೇಳುತ್ತದೆ. ಇಂಥ ಕಡೆ ಚೌಪದಿಗಳು ಬರೇ ಹೇಳಿಕೆಗಳಾದದ್ದೂ ಇದೆ. ಆದರೂ ಕವಿಯ ಮಾನವೀಯ ಕಳಕಳಿಯನ್ನು ಆಕ್ಷೇಪಿಸುವಂತಿಲ್ಲ. ನಾಲ್ಕನೆಯದಾದ ರಾಜಕೀಯ ಎಂಬ ಭಾಗದಲ್ಲಿ 113 ಚೌಪದಿಗಳಿದ್ದು, ಅವೆಲ್ಲವೂ ರಾಜಕೀಯ ವಿಡಂಬನೆಯಲ್ಲಿ ಯಶಸ್ವಿಯಾಗಿದೆ. ಅಧಿಕಾರ ಲಾಲಸೆ, ಮತಬೇಡಿಕೆಯ ಹಿಂದಿನ ಧೂರ್ತತನ, ಬಡವರುದ್ಧಾರದ ಸೋಗು ಇವನ್ನೆಲ್ಲ ಬಯಲಿಗೆಳೆಯಲಾಗಿದೆ.
ವಿಡಂಬಾರಿಯವರಿಗೆ ಚೌಪದಿಯ ಗುಣಗಳು ಗೊತ್ತಿವೆ. ಸಹಜವಾದ ಪ್ರಾಸ ಮತ್ತು ಲಯ ವಿನ್ಯಾಸ ಅವರಿಗೆ ಸಿದ್ಧಿಸಿದೆ. ಸಮಾಜವನ್ನು ಅವರು ಸೂಕ್ಷ್ಮವಾಗಿ ಗಮನಿಸುತ್ತಾರೆ. ಹಾಗಾಗಿ ಚೌಪದಿಗಳಲ್ಲಿ ಅವರು ಇನ್ನೂ ಕೆಲವು ಪ್ರಯೋಗಗಳನ್ನು ಮಾಡಬಲ್ಲರು. ಕವಳ ಅವರ ಸಾಧನೆಯ ಮೈಲಿಗಳಲ್ಲು.
(ಸೌಜನ್ಯ : ಮಂಗಾರು ದೈನಿಕ)
@@@@@@@@@
DSCN5638
ವಿಡಂಬಾರಿ
 ಅಂಚೆಪೇದೆಯ ಆತ್ಮಕಥನ -       ಪ್ರಕಾಶ ಕಡಮೆ
ಈ ಕೃತಿ ಶ್ರೀ ರಾಘವೇಂದ್ರ ಪ್ರಕಾಶನದ 1995ರ ಬೆಳ್ಳಿ ಸ್ಮರಣೆಮಾಲೆಯಿಂದ ಹೊರಬಂದಿದೆ. ಶ್ರೀಯುತ ವಿ.ಜಿ. ಭಂಡಾರಿಯವರು ವಿಡಂಬಾರಿಯಾದ ಕಥೆ ಈ ಕೃತಿಯಲ್ಲಿದೆ. ಇವರ ಪ್ರಥಮ ಚುಟುಕು ಸಂಕಲನ ಒಗ್ಗರಣೆಗೆ ಮುನ್ನುಡಿ ಬರೆಯುತ್ತ ಹಿರಿಯ ಸಾಹಿತಿಗಳಾದ ಶ್ರೀ ಯಶವಂತ ಚಿತ್ತಾಲರು, ಮಹಾರಾಷ್ಟ್ರದ ದಲಿತ ಲೇಖಕ ದಯಾ ಪವಾರ್ ಬರೆದ ಆತ್ಮಕಥೆ ಬಲೂತಕ್ಕೆ ಹಿಂದೆ ಬೀಲದ ಸಾಹಿತ್ಯ ಕೃತಿಯೊಂದು ನಿಮ್ಮ ಆತ್ಮಕಥೆಯಲ್ಲಿ ಸಿಗುವಂತಾಗಲಿ ಎಂದು ಈ ಕೃತಿ ರಚಿಸಲು ಪ್ರೋತ್ಸಾಹಿಸಿದ್ದರಂತೆ. ಅದರಿಂದ ಸ್ಫೂತರ್ಿ ಹೊಂದಿ ಈ ಬರವೆಣಿಗೆಗೆ ತೊಡಗಿಕೊಂಡಿರುವದಾಗಿ ವಿಡಂಬಾರಿಯವರೇ ಹೇಳಿಕೊಂಡಿದ್ದಾರೆ.
ಆತ್ಮ ಕಥೆಯುದ್ದಕ್ಕೂ ಅವರು ಹೆಸರಿಸಿದ ಕೃತಜ್ಞತೆಯ ಪಟ್ಟಿ ತುಂಬ ದೊಡ್ಡದಿದೆ. ಅದು ವಿಡಂಬಾರಿಯವರ ದೊಡ್ಡತನ. ತಾನು ಚಿಕ್ಕವನಿದ್ದಾಗ ಎಲ್ಲದಕ್ಕೂ ಹೌದ್ರಾ ಒಡೆಯಾ ಎನ್ನುವ ಕಾಲವಿತ್ತು. ಇಲ್ರಾ ಒಡೆಯಾ ಎನ್ನುವುದಕ್ಕೆ ಅವಕಾಶವಿದ್ದದ್ದು ಯಾವಾಗೆಂದರೆ ಅದು ನನ್ನ ಅಜ್ಜನನ್ನು ಒಡೆಯರು, ಊಟ ಆಯ್ತಾ ವೆಂಕಪ್ಪಾ? ಅಂತ ಕೇಳಿದಾಗ ಮಾತ್ರ ಎಂದು ಬಡತನದ ರೂಪಕದಿಂದ ಪ್ರಾರಂಭವಾಗುವ ಈ ಆತ್ಮಕಥೆಯನ್ನು ಓದುತ್ತಿದ್ದಂತೆ ಸಹಜವಾಗಿ ಮನದುಂಬಿ ಬರುತ್ತದೆ. ವೆಂಕಪ್ಪಜ್ಜನ ಮುಗ್ಧತನದಿಂದ ಹಾಗೂ ದೇವಸ್ಥಾನಕ್ಕೆ ಸಂಬಂಧಪಟ್ಟವರ ಸ್ವಾರ್ಥದಿಂದ ಲೇಖಕರ ತಾಯಿ ಗಣಪಿ ದೇವರ ಹೆಸರಿನಲ್ಲಿ ದೇವದಾಸಿಯಾದ ಪ್ರಕರಣವಂತೂ ಮೈಯಲ್ಲಿ ಮುಳ್ಳೇಳಿಸುವಂಥದು.
1938 ರಲ್ಲಿ ಅಮವಾಸ್ಯೆಯ ದಿನ ಹುಟ್ಟಿದ ಲೇಖಕರು ಚಿಕ್ಕಮ್ಮನಿಗೆ ದತ್ತಕ ಹೋದದ್ದು, ಆ ಚಿಕ್ಕಮ್ಮ ತೀರಿಕೊಂಡ ನಂತರ ಮಲತಾಯಿಯ ಕಾರುಬಾರಿನಲ್ಲಿ ಕಂಡ-ಉಂಡ ದುಃಖ, ನೋವು-ಸಂಕಟ ವಿಡಂಬಾರಿಯವರ ಬಾಲ್ಯದ ದಾರುಣತೆ.
ಅಂದು ಮೂರನೇ ಇಯತ್ತೆವರೆಗೆ ಓದಿದವರಾದ ಲೇಖಕರು ಇಂಗ್ಲಿಷ್ ವಿಳಾಸ ಓದಲು-ಬರೆಯಲು ಬರುತ್ತದೆಂಬ ಸಟರ್ಿಫಿಕೇಟಿನೊಂದಿಗೆ ಅಂಚೆಪೇದೆಯ ಜಾಗೆಗೆ ಅಜರ್ಿ ಹಾಕಿದರು. ಕೆಲವು ದಿನ ವಾದ್ಯ ಬಾರಿಸುವ ಕೆಲಸವನ್ನೂ ಸಹ ಕೈಕೊಂಡರು. ನಂತರ ಶಿರಾಲಿ-ಅಂಕೋಲೆಗಳಲ್ಲಿ ಅಂಚೆಪೇದೆಯಾಗಿ ಪ್ರಾಮಾಣಿಕ ಕಾರ್ಯನಿರ್ವಹಿಸುತ್ತಲೇ ದಿನಕರ ದೇಸಾಯರ ಗರಡಿಯಲ್ಲಿ ಚುಟುಕು ರಚಿಸಲು ಪಳಗಿದ ವಿಡಂಬಾರಿವರು ನಮಗೆಲ್ಲ ಗೊತ್ತಿರುವಂತೆ ಅತ್ಯಂತ ಸನ್ನಡತೆಯ, ವಿನಯಶೀಲ, ನಿಸ್ವಾಥರ್ಿ ಹಾಗೂ ಪ್ರೇಮಮಯಿಯಾದ ವ್ಯಕ್ತಿಯಾಗಿದ್ದಾಎ. ಇವರು ಮೂಢನಂಬಿಕೆ ಡಂಬಾಚಾರಗಳ ವಿರುದ್ಧ ನಡೆಸಿದ ಪ್ರಾಮಾಣಿಕ ಅಭಿವ್ಯಕ್ತಿ ಇಲ್ಲಿದೆ. ಇವರ ಬಾಳಿನ ಸಂಕಷ್ಟಗಳು, ಹೆಂಡತಿಯ ಅನಾರೋಗ್ಯ, ತನ್ನದಲ್ಲದ ತಪ್ಪಿಗೆ ಪಡಬೇಕಾದ ಮಾನಸಿಕ ಯಾತನೆಯನನು ಈ ಬರವಣಿಗೆಯ ಮೂಲಕ ತಮ್ಮದೇ ಆದ ಸರಳ ಭಾಷೆಯಲ್ಲಿ ಕಟ್ಟಿಕೊಟ್ಟಿದ್ದಾರೆ. ಎಂಥ ಪರಿಸ್ಥಿತಿಯಲ್ಲೂ ಧೃತಿಗೆಡದೇ ಬದುಕುವ ಛಲ ಹೊತ್ತ ಅವರ ಆತ್ಮ ಬಲ ಇನ್ನು ಮುಂದೆಯೂ ಅವರಿಗೆ ರಕ್ಷೆಯಾಗಿರಲಿ.

Thursday, 2 October 2014

ಯುಮುನಾ, ಸೊಲಬಕ್ಕನವರ್ ನೆನಪಿಸಿದ ವಿಶ್ವ ಶಾಂತಿ ದಿನ

ಯುಮುನಾ, ಸೊಲಬಕ್ಕನವರ್ ನೆನಪಿಸಿದ ವಿಶ್ವ ಶಾಂತಿ ದಿನ

Standard
ಈ ವರ್ಷ ಮತ್ತೆ ವಿಶ್ವದಾದ್ಯಂತ ಯುದ್ಧದ ಕಾರ್ಮೋಡಗಳು ಕವಿದಿವೆ. ಸಿರಿಯಾ, ಗಾಜಾ, ಉಕ್ರೇನ್ ಗಳಲ್ಲಿ ಭೀಕರ ಯುದ್ಧ ನಡೆದಿವೆ. ಈ ವರ್ಷ ಮೊದಲ ಮಹಾಯುದ್ಧದ ಆರಂಭದ ಶತವಾರ್ಷಿಕ ಸಹ. ಹಿರೊಶಿಮಾ-ನಾಗಸಾಕಿ (ಅಗಸ್ಟ್ 6 ಮತ್ತು 9) ದಿನದಂದು ಪ್ರತಿ ವರ್ಷ ಆ ನಗರಗಳಲ್ಲಿ ‘ಗೆನುಸುಕಿಯೊ’ ಎಂಬ ಜಪಾನಿ ಸಂಘಟನೆ ಸಂಘಟಿಸುವ “ಅಣು ಬಾಂಬುಗಳ ವಿರುದ್ಧ ಅಂತರ್ರಾಷ್ಟ್ರೀಯ ಸಮ್ಮೇಳನ” ನಡೆಯುತ್ತದೆ. ಈ ಸಮ್ಮೇಳನ 1955ರಿಂದ ಪ್ರತಿ ವರ್ಷ ಸತತವಾಗಿ ನಡೆಯುತ್ತಾ ಬಂದಿದೆ. ಈ ಸಮ್ಮೇಳನಕ್ಕೆ ಈ ಬಾರಿ ಸಿ.ಐ.ಟಿ.ಯು. ಪ್ರತಿನಿಧಿಯಾಗಿ ಕರ್ನಾಟಕದಿಂದ ಪ್ರಗತಿಪರ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮತ್ತು ಕವಯಿತ್ರಿ ಕೂಡಾ ಆಗಿರುವ ಯುಮುನಾ ಗಾಂವ್ಕರ್ ಆಯ್ಕೆಯಾಗಿದ್ದು ವಿಶೇಷವಾಗಿತ್ತು.
ನೂರಡಿ ಬಣ್ಣದ ನಡೆ ಜಪಾನಿನತ್ತ
ಯಮುನಾ ಅಣುಬಾಂಬು-ವಿರೋಧಿ ಸಮ್ಮೇಳನಕ್ಕೆ ಕರ್ನಾಟಕದಿಂದ ಏನು ಒಯ್ಯಲಿ ಎಂದು ಸಮುದಾಯವನ್ನು ಕೇಳಿದಾಗ ನಮಗೆ ನೆನಪಾದದ್ದು ಸೊಲಬಕ್ಕನವರ 1986ರ ನೂರಡಿ ಬಣ್ಣದ ಅಣು-ಬಾಂಬು ವಿರೋಧಿ ಚಿತ್ರ. ಅದು ಆ ವರ್ಷ ಸಮುದಾಯದ ವಿಶ್ವಶಾಂತಿ ಜಾಥಾದಲ್ಲಿ ರಾಜ್ಯದ (ಮಾತ್ರವಲ್ಲ, ದೇಶದ ಹಲವು ಕಡೆ ಸೇರಿದಂತೆ) ಉದ್ದಗಲ ಸುತ್ತಿತ್ತು. ಆ ಚಿತ್ರದ ಜತೆ ‘ನೂರಡಿ ಬಣ್ಣದ ನಡೆಯಣ್ಣ, ಅಣು ಸಮರಕ್ಕೆ ತಡೆಯಣ್ಣ’ ಹಾಡು ಸಹ ರಾಜ್ಯದ ಮೂಲೆಮೂಲೆಯಲ್ಲೂ ಮಾರ್ದನಿಸಿತ್ತು. ಈಗ ಹಾವೇರಿಯಲ್ಲಿ ಸೊಲಬಕ್ಕನವರು ಸ್ಥಾಪಿಸಿರುವ ‘ರಾಕ್ ಗಾರ್ಡನ್’ನಲ್ಲಿ ಪ್ರದರ್ಶಿಸಿರುವ ಅದನ್ನು ಒಯ್ಯುವುದು ಶಕ್ಯವಿರಲಿಲ್ಲ. ಅದಕ್ಕಾಗಿ ಅದರ ಡಿಜಿಟಲ್ ಅವತಾರವನ್ನು ಡಿವಿಡಿ ರೂಪದಲ್ಲಿ ತಯಾರಿಸಿ ಯಮುನಾ ಅವರಿಗೆ ಕೊಡಲಾಯಿತು. ಯಮುನಾ ಗಾಂವ್ಕರ್ ಅವರು ಅಗಸ್ಟ್ ಮೊದಲ ವಾರದಲ್ಲಿ ಹಿರೊಶಿಮಾ-ನಾಗಸಾಕಿಗೆ ಹೋಗಿ ಅಲ್ಲಿ ಮನೆ-ಮನೆಗೂ ಮನ-ಮನಕ್ಕೂ ಹಬ್ಬಿದ ಶಾಂತಿ ಸಂದೇಶ ಹೊತ್ತು ತಂದರು.
ಅಷ್ಟು ಹೊತ್ತಿಗೆ ವಿಶ್ವ ಸಂಸ್ಥೆ 1986ರಲ್ಲಿ ಘೋಷಿಸಿದ (ಇತ್ತೀಚೆಗೆ ನಾವು ಮರೆತು ಬಿಟ್ಟಿರುವ) ವಿಶ್ವ ಶಾಂತಿ ದಿನ (ಸೆಪ್ಟೆಂಬರ್ 21) ಹತ್ತಿರ ಬರಲಾರಂಭಿಸಿತ್ತು. ಇವೆಲ್ಲದರ ಹಿನ್ನೆಲೆಯಲ್ಲಿ ಸಮುದಾಯ ಈ ಬಾರಿಯ ವಿಶ್ವ ಶಾಂತಿ ದಿನವನ್ನು ಸೆಪ್ಟೆಂಬರ್ 20ರಂದು ಬೆಂಗಳೂರಿನ ಜೈ ಭೀಮ್ ಭವನದಲ್ಲಿ ವಿಶಿಷ್ಟವಾಗಿ ಆಚರಿಸಿತು. ಅದೊಂದು ವಿಶಿಷ್ಟ ಸಾಂಸ್ಕೃತಿಕ ಅನುಭವವಾಗಿತ್ತು. ಮಹಾಂತೇಶ್ ಲಿಂಗರಾಜು ಮತ್ತು ಸಂಗಡಿಗರು ಅವರು ಪ್ರಸ್ತುತಪಡಿಸಿದ 1986ರ ಜಾಥಾದ ಮತ್ತು ಇತರ ಶಾಂತಿ ಹಾಡುಗಳಿಂದಲೇ ಅದು ಆರಂಭವಾಯಿತು. ಯುದ್ಧ-ವಿರೋಧಿ ಕವನಗಳನ್ನು ರವಿಕುಮಾರ್ ಬಾಗಿ, ಹುಲಿಕುಂಟೆ ಮೂರ್ತಿ ಮತ್ತು ಮಂಜುನಾಥ್ ಅವರು ಓದಿದರು.
shanti dvd bidugade (2)
ಸಂಗ್ರಹಯೋಗ್ಯ ಡಿವಿಡಿ
ಅಂದು ಸೊಲಬಕ್ಕನವರ ವಿಶ್ವಶಾಂತಿ ಮತ್ತು ಅಣುಯುದ್ಧದ ಅಪಾಯವನ್ನು ಸಮರ್ಥವಾಗಿ ಬಿಂಬಿಸುವ ‘ನೂರಡಿ ಬಣ್ನದ ಚಿತ್ರದ ಬಗೆಗಿನ ಡಿವಿಡಿ ಬಿಡುಗಡೆ ಮತ್ತು ಪ್ರದರ್ಶನ ಮುಖ್ಯ ಆಕರ್ಷಣೆಯಾಗಿತ್ತು. ಡಿವಿಡಿಯನ್ನು ಕಲಾವಿದ ಕೃಷ್ಣ ರಾಯಚೂರು ಅವರು ಕರ್ನಾಟಕದ ಹೈಕೋರ್ಟಿನ ನಿವೃತ್ತ ನ್ಯಾಯಾಧೀಶ ನಾಗಮೋಹನ ದಾಸ್ ಅವರ ಉಪಸ್ಥಿತಿಯಲ್ಲಿ ಬಿಡುಗಡೆ ಮಾಡಿದರು. 25 ಮಿನಿಟಿನ ಈ ಡಿವಿಡಿಯನ್ನು ಪ್ರದರ್ಶಿಸಲಾಯಿತು. ನೂರಡಿ ಬಣ್ನದ ಚಿತ್ರವನ್ನು ಅದರ ಬಗೆಗಿನ ನಿರೂಪಣೆ ಜತೆ ತೋರಿಸುವುದಲ್ಲದೆ, – ಜಾಥಾದ ಹಾಡುಗಳು, ಚಿತ್ರದ ರಚನೆಯ ಹಿನ್ನೆಲೆ ಪ್ರಕ್ರಿಯೆಗಳ ಆಸಕ್ತಿಕಾರಕ ವಿವರಗಳು, ಯುದ್ಧ-ವಿರೋಧಿ ನಾಟವೊಂದರ ದೃಶ್ಯಗಳು, ಆ ಜಾಥಾದಲ್ಲಿ ಭಾಗವಹಿಸಿದ ಗಣ್ಯರ ನುಡಿಗಳಿಂದ – ಕೂಡಿದ್ದು ಸಂಗ್ರಹ ಯೋಗ್ಯ ದಾಖಲೆಯಾಗಿದೆ. ಮನುಕುಲದ ಚರಿತ್ರೆಯಲ್ಲಿ ಯುದ್ಧ ಹುಟ್ಟಿದ ಬಗೆ ಮತ್ತು ಸಮಾಜದ ಬೆಳವಣಿಗೆಯೊಂದಿಗೆ ಭೂತಾಕಾರದಲ್ಲಿ ಬೆಳೆದಿರುವ ಅದರ ಭೀಕರತೆ ಅಪಾಯಗಳನ್ನು ಅದು ಸಮರ್ಥವಾಗಿಯೂ ಮನೋಜ್ಞವಾಗಿಯೂ ಸೆರೆಹಿಡಿಯುತ್ತದೆ. ಇದು ಹಿಂದಿನಷ್ಟೇ, ಅಥವಾ ಹಿಂದೆಂದಿಗಿಂತಲೂ ಹೆಚ್ಚು ಅವಶ್ಯವಾಗಿರುವ ವಿಶ್ವಶಾಂತಿ ಚಳುವಳಿಯ ಪ್ರಮುಖ ಆಶಯದ ಅತ್ಯಂತ ಸಮರ್ಥ ಸಾಂಸ್ಕೃತಿಕ ಅಭಿವ್ಯಕ್ತಿಯಾಗಿದೆ. ಕೃಷ್ಣ ರಾಯಚೂರು ಅವರು ನೂರಡಿ ಬಣ್ನದ ಚಿತ್ರದ ಮಹತ್ವ ಮತ್ತು ಇಂದೂ ಅದರ ಪ್ರಸ್ತುತತೆ ಬಗ್ಗೆ ಮಾತನಾಡಿದರು.
ಇದಕ್ಕಿಂತ ಮೊದಲು ನ್ಯಾಯಮೂರ್ತಿ ನಾಗ್ ಮೋಹನದಾಸ್ ಅವರು ಮೊದಲ ಮಹಾಯುದ್ಧದ ಆರಂಭದಿಂದ ಈ ವರೆಗಿನ ಯುದ್ಧದ ಅಪಾಯದ ಬೆಳವಣಿಗೆಯ ಹಾದಿಯನ್ನು ಗುರುತಿಸಿದರು. ಮೊದಲ ಮಹಾಯುದ್ಧದ ಮೊದಲಿನ ಮತ್ತು ನಂತರದ ಯುದ್ಧಗಳ ನಡುವಿನ ವ್ಯತ್ಯಾಸವಾದ ಭಾರೀ ಪ್ರಮಾಣದಲ್ಲಿ ನಾಗರಿಕರ ಸಾವು-ನೋವು ಬಗ್ಗೆ ಗಮನ ಸೆಳೆದರು. ಎರಡನೇ ಮಹಾಯುದ್ಧದ ನಂತರ ಇನ್ನೊಂದು ಮಹಾಯುದ್ಧ ನಡೆದಿರದಿದ್ದರೂ, ಸುಮಾರು 250 ಯುದ್ಧಗಳು ನಡೆದಿವೆ ಈಗ ಇಡೀ ಜಗತ್ತನ್ನು ನೂರಾರು ಬಾರಿ ನಾಶ ಮಾಡುವಷ್ಟು ಶಸ್ತ್ರಾಸ್ತ್ರ ಪೇರಿಸಲಾಗಿದೆ ಎಂದು ಎಚ್ಚರಿಸಿದರು. 1986ರ ಸಮುದಾಯದ ಶಾಂತಿ ಜಾಥಾ ನಡೆದ ಅವಧಿಯಿಂದ ಈ ವರೆಗೆ ಆಗಿರುವ ಯುದ್ಧದ ಸ್ವರೂಪದಲ್ಲಿ ಆಗಿರುವ ಬದಲಾವಣೆಗಳನ್ನು ಅವರು ಗುರುತಿಸಿ, ಇಂದಿನ ಸಂದರ್ಭದಲ್ಲಿ ಯುದ್ಧದ ಅದರಲ್ಲೂ ಅಣು ಬಾಂಬುಗಳ ಬಳಕೆಯ ಅಪಾಯ ಮತ್ತು ಅವುಗಳ ನಾಶಕ್ಕಾಗಿಯೂ ವಿಶ್ವಶಾಂತಿಗಾಗಿಯೂ ನಡೆಯಬೇಕಾದ ಚಳುವಳಿಯ ಮಹತ್ವದ ಬಗ್ಗೆ ವಿವರಿಸಿದರು.
das at shanti dina (2)
ಯುದ್ಧ-ವಿರೋಧಿ ಗಾಢ ಮಲ್ಟಿಮೀಡಿಯಾ ಅನುಭವ
ಯುಮುನಾ ಗಾಂವ್ಕರ್ ತಮ್ಮ ಜಪಾನ್ ಪ್ರವಾಸದ ಮೊದಲು ಮತ್ತು ನಂತರ ಬರೆದ ಅತ್ಯಂತ ಅರ್ಥಪೂರ್ಣ ಕವನಗಳ ಓದಿನ ನಡುವೆ ತಮ್ಮ ಅನುಭವವನ್ನು ಹಂಚಿಕೊಂಡರು. ಹಿರೊಶಿಮಾ ನಾಗಾಸಾಕಿಗಳಲ್ಲಿ ನಡೆದ “ಅಣು ಬಾಂಬುಗಳ ವಿರುದ್ಧ ಅಂತರ್ರಾಷ್ಟ್ರೀಯ ಸಮ್ಮೇಳನ”ದ ಕಲಾಪಗಳು, ಅಲ್ಲಿ ನೆರೆದ ವಿವಿಧ ದೇಶಗಳ ಸರಕಾರಗಳ, ಶಾಂತಿ ಸಂಘಟನೆಗಳ ಪ್ರತಿನಿಧಿಗಳ ಪಾಲ್ಗೊಳ್ಳುವಿಕೆ, ಸಮ್ಮೇಳನದ ಘೋಷಣೆ, ಅಗಸ್ಟ್ 6 ರಂದು ಹಿರೊಶಿಮಾ ದಲ್ಲಿ ಮತ್ತು ಅಗಸ್ಟ್ 9 ರಂದು ನಾಗಾಸಾಕಿಯಲ್ಲಿ ಬೃಹತ್ ರ್ಯಾಲಿ, ಹಿರೊಶಿಮಾ ನಾಗಾಸಾಕಿ ಮ್ಯೂಸಿಯಂನ ಅನುಭವಗಳು, ಮನೆ-ಮನೆಗಳನ್ನೂ ಮುಟ್ಟುವ ಮತ್ತು ಮನ-ಮನಗಳನ್ನು ತಟ್ಟುವ ಅಲ್ಲಿನ ಶಾಂತಿ ಚಳುವಳಿಯ ವ್ಯಾಪಕತೆ – ಬಗ್ಗೆ ಅವರ ಅನುಭವಗಳು ವಿಶಿಷ್ಟ ಅನುಭವ ನಿಡಿದವು. ಅಲ್ಲಿ ಅವರು ತೆಗೆದ ಫೋಟೋಗಳು, ವಿಡಿಯೊಗಳ ಮತ್ತು ನೆನಪಿನ ಕಾಣಿಕೆಗಳ ಪ್ರದರ್ಶನದೊಂದಿಗೆ ಅವರು ಹಂಚಿಕೊಂಡ ‘ಮಲ್ಟಿಮೀಡಿಯಾ’ ಅನುಭವದಿಂದಾಗಿ, ನಾವೆಲ್ಲರೂ ಹಿರೊಶಿಮಾ, ನಾಗಾಸಾಕಿಗಳ ಪ್ರವಾಸ ಮಾಡಿ ಬಂದಂತಾಗಿತ್ತು.
yamuna @ shanti dina (2)
ಇತ್ತೀಚಿನ ಭೀಕರ ಗಾಜಾ ನರಮೇಧದ ಮೇಲೆ ಸುಮಾರು 10 ಪೋಸ್ಟರುಗಳ ಪೋಸ್ಟರ್ ಪ್ರದರ್ಶನ, ಮೊದಲ ಮಹಾಯುದ್ಧಕ್ಕೆ ಕಾರಣವಾದ ಬೆಳವಣಿಗೆಗಳ ಬಗೆಗಿನ ವಿಡಿಯೋ ಪ್ರದರ್ಶನ, ಇತ್ತೀಚಿನ ಗಾಜಾ ನರಮೇಧದ ಹಿನ್ನೆಲೆಯಲ್ಲಿ ಪ್ಯಾಲೆಸ್ಟೈನ್ ಸಮಸ್ಯೆ ಮತ್ತು ಅದರ ಬಗ್ಗೆ ಅಂತರ್ರಾಷ್ಟ್ರಿಯ ಧೋರಣೆ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸುತ್ತಾ ಪ್ಯಾಲೆಸ್ಟೈನ್ ಕವಯಿತ್ರಿ ರಫಿಫ್ ಜೈದಾ ಅವರ ಕವನವೋದುವುದರ ಪರಿಣಾಮಕಾರಿ ವಿಡಿಯೋ ಮತ್ತು ಪ್ರೊ, ಅರ್,ಕೆ.ಹುಡಗಿ ಅದರ ಕನ್ನಡ ಅನುವಾದವನ್ನು ಅಷ್ಟೇ ಪರಿಣಾಮಕಾರಿಯಾಗಿ ಓದುವುದರ ಜತೆ ಆಢಿದ ಸಮಾರೋಪದ ನುಡಿಗಳು ಮರೆಯಲಾಗದ ಯುದ್ಧ-ವಿರೋಧಿ ಗಾಢ ಮಲ್ಟಿಮೀಡಿಯಾ ಅನುಭವವನ್ನು ಇನ್ನಷ್ಟು ಗಟ್ಟಿಗೊಳಿಸಿದವು.

gaza poster set (2)