Monday 9 November 2015

ಬದುಕಿಗೆ ಬಣ್ಣ – ಸಹಯಾನ ಶಿಬಿರ

ಬದುಕಿಗೆ ಬಣ್ಣ – ಸಹಯಾನ ಶಿಬಿರ

Standard
    ಬಾಲ್ಯವೆಂದರೆ ಇಡೀ ಬದುಕಿಗೆ ಬಣ್ಣ ತುಂಬಬೇಕಾದ ಸುಮಧುರ ಕಾಲ. ಹಾಗಾಗಿ ಮಕ್ಕಳ ಬಾಲ್ಯವನ್ನು ವರ್ಣಮಯವಾಗಿಸಬೇಕಾದದ್ದು ದೊಡ್ಡವರ ಜವಾಬ್ದಾರಿಯಾಗಿದೆ. ಆದರೆ ಇಂದಿನ ಜಾಗತೀಕರಣ ಮತ್ತು ನಗರೀಕರಣ ತಂದೊಡ್ಡಿದ ಸ್ಪರ್ಧೆಯ ಭರಾಟೆಯಲ್ಲಿ ಮಕ್ಕಳ ಬಾಲ್ಯ ಬಣ್ಣಗೆಡುತ್ತಿದೆ. ಮಕ್ಕಳು ಮಣ್ಣ ಸಂಸ್ಕøತಿಯಿಂದ ದೂರ ಸರಿಯುತ್ತಿದ್ದಾರೆ. ತರಗತಿ ಕೋಣೆ ಮತ್ತು ಓದುವ ಕೋಣೆಯಲ್ಲಿ ಕಳೆದು ಹೋದ ಮಕ್ಕಳ ರಜೆಗೊಂದಿಷ್ಟು ರಂಗು ತುಂಬಬೇಕು ಮತ್ತು ಅವರ ಮನಸ್ಸಿನೊಳಗೊಂದು ಭಾವಲೋಕವನ್ನು ಸೃಷ್ಟಿಸಬೇಕೆಂಬುದು ‘ಸಹಯಾನ’ದ ಕನಸು. ಸಾಂಸ್ಕøತಿಕ ಮತ್ತು ಮಾನವೀಯ ಮನಸ್ಸುಗಳನ್ನು ಕಟ್ಟಬೇಕೆಂದೇ ರೂಪಿತವಾದ ಕೆರೆಕೋಣದ ಸಾಂಸ್ಕøತಿಕ ಸಂಘಟನೆ ಸಹಯಾನ, ಸುಬ್ಬಿ ಭಂಡಾರಿಯವರ ನೆನಪಿನಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಎಂಟು ದಿನಗಳ ‘ಬಣ್ಣ ಬಣ್ಣದ ರಜಾ’ ಮಕ್ಕಳ ಶಿಬಿರವನ್ನು ಆಯೋಜಿಸಿತ್ತು. 
                               
19
ಮಕ್ಕಳ ಶಿಬಿರವೆಂದರೆ ಒಂದೊಂದು ಅವಧಿಯಲ್ಲಿ ಬೇರೆ ಬೇರೆ ಸಂಪನ್ಮೂಲ ವ್ಯಕ್ತಿಗಳು ಬಂದು ಕತ್ತರಿಸುವ, ಅಂಟಿಸುವ, ಕುಣಿಯುವ, ಹಾಡುವ, ಆರೋಗ್ಯ ಸಲಹೆ ನೀಡುವ… ಒಂದರ್ಥದಲ್ಲಿ ಇನ್ನೊಂದು ಶಾಲೆಯೇ ಆಗಿ ಬಿಡುವ ಉದಾಹರಣೆಗಳೇ ಹೆಚ್ಚು. ಶಿಬಿರಕ್ಕೊಂದು ನಿರ್ದಿಷ್ಟವಾದ ಉದ್ದೇಶವಿಲ್ಲದೇ ಮನರಂಜನೆಯ ಮೂಲವಷ್ಟೇ ಆಗಿ ಬಿಡುವ ಇಂಥಹ ಶಿಬಿರಗಳಲ್ಲಿ ಮಕ್ಕಳ ಮನೋವಿಕಾಸಕ್ಕೆ ಮಿತಿಗಳಿರುತ್ತವೆ. ಆದರೆ ‘ಸಹಯಾನ’ದ ಶಿಬಿರ ಇವೆಲ್ಲವುಗಳಿಂದ ಬೇರೆಯೇ ಆಗಿತ್ತು. ಮಕ್ಕಳ ದೇಹ ಭಾಷೆಯನ್ನು ರಂಗಭಾಷೆಗೆ ಒಗ್ಗಿಸುವ, ಅವರ ಸಹಜ ಕ್ರಿಯೆಗಳನ್ನೇ ನಾಟಕವಾಗಿ ವಿನ್ಯಾಸಗೊಳಿಸುವ ರಂಗತರಬೇತಿ ಶಿಬಿರ ಇದಾಗಿತ್ತು. ಜೊತೆಯಲ್ಲಿ ರಾಜ್ಯದ ಬೇರೆ ಬೇರೆ ಭಾಗಗಳಿಂದ ಬಂದ ಮಕ್ಕಳು ಕೆರೆಕೋಣದ ಸುತ್ತಮುತ್ತಲಿನ ಹಳ್ಳಿಯ ಮಕ್ಕಳೊಂದಿಗೆ ಬೆರೆಯುವ ಕನ್ನಡ & ಆಂಗ್ಲಮಾಧ್ಯಮದ ವಿದ್ಯಾರ್ಥಿಗಳು ತಮ್ಮಲ್ಲಿರುವ ಭಿನ್ನಬೇಧವನ್ನು ಮರೆತು ಕಲೆಯುವ, ಕಲಿಯುವ ಅವಕಾಶವನ್ನೂ ಈ ಶಿಬಿರ ಒದಗಿಸಿತು.
21
ಶಿಬಿರದಲ್ಲಿ ಎಚ್.ಎಸ್.ವಿಯವರ ಧರಣಿ ಮಂಡಲ ಮಧ್ಯದೊಳಗೆ ನಾಟಕವನ್ನು ಮುಖ್ಯವಾಗಿ ಎತ್ತಿಕೊಳ್ಳಲಾಗಿತ್ತು. ನಾಡಿನ ಖ್ಯಾತ ರಂಗ ನಿರ್ದೇಶಕರಾದ ಡಾ|| ಶ್ರೀಪಾದ ಭಟ್ ಅವರ ನಿರ್ದೇಶನ, ವಿಶ್ವನಾಥ ಹಿರೇಮಠ ಅವರ ಸುಮಧುರ ಹಾಡುಗಾರಿಕೆ, ದಾಮೋದರ್ ನಾಯ್ಕರವರ ಅದ್ಭುತ ರಂಗಪರಿಕರ ಮತ್ತು ಚಿಣ್ಣರ ಲವಲವಿಕೆಯ ಅಭಿನಯ ರಂಗದ ಮೇಲೊಂದು ಸುಂದರ ದೃಶ್ಯಕಾವ್ಯವನ್ನೇ ಸೃಷ್ಟಿಸಿತು. ಎಂಟು ದಿನಗಳ ಕಾಲ ಈ ನಾಟಕದ ತಾಲೀಮಿನಲ್ಲಿ ಮುಳುಗಿ ಹೋದ ಮಕ್ಕಳು ‘ಹುಲಿಯ ಹೊಟ್ಯಾಗ ಹಸುವಿನ ಕರುಳು ಇದ್ದೇ ಇರ್ತೈತಿ, ಕಾಲ ಕೂಡಿ ಬಂದಾಗದು ಹೊರಗೆ ಬರತ್ತೈತಿ’ ಎಂದು ಮನಃ ಪೂರ್ವಕವಾಗಿ ಹಾಡುತ್ತಾ ತಿರುಗುವಾಗ ರಂಗಭೂಮಿ ಮನಸ್ಸಿಗೆ ನೀಡುವ ಸಂಸ್ಕಾರ ಸಾಕಾರಗೊಂಡಂತೆ ಅನಿಸುತ್ತಿತ್ತು. ಪ್ರಸ್ತುತದ ರಾಜಕೀಯ, ಆಹಾರ ಸಂಸ್ಕøತಿಗಳ ತೀಕ್ಷ್ಣ ವಿಡಂಬನೆಯನ್ನೊಳಗೊಂಡ ಈ ನಾಟಕದಷ್ಟು ಆಶಯಗಳನ್ನು ಪ್ರೇಕ್ಷಕರಿಗೆ ತಲುಪಿಸುವಲ್ಲಿ ಮಕ್ಕಳು ಯಶಸ್ವಿಯಾದರು.                                                    
ಮಕ್ಕಳು ಪ್ರಚಲಿತವಾದ ಕಥೆಯೊಂದನ್ನು ವಿಸ್ತರಿಸಿ, ತಮ್ಮದೇ ಭಾಷೆಯಲ್ಲಿ ನಾಟಕವಾಗಿ ಮಾರ್ಪಡಿಸಿದ್ದು ಈ ಸಲದ ವಿಶೇಷವಾಗಿತ್ತು. ಬಾಲ ಕಳೆದುಕೊಂಡ ಮಂಗನ ಕಥೆಯನ್ನು ಬೇರೆಯದೇ ಬಗೆಯಲ್ಲಿ ಯೋಚಿಸಿ, ತಾವೇ ಸಂಭಾಷಣೆಗಳನ್ನು ರಚಿಸಿಕೊಂಡು, ನಾಟಕವಾಗಿ ಅಭಿನಯಿಸಿದ್ದು ಮಕ್ಕಳ ಕ್ರಿಯಾಶಿಲತೆಗೆ ಸಾಕ್ಷಿಯಾಯಿತು. ಎಲ್ಲ ಸನ್ನಿವೇಶಗಳನ್ನೂ ತನ್ನ ಲಾಭಕ್ಕಾಗಿಯೇ ಬಳಸಿಕೊಳ್ಳುವ ಸ್ವಾರ್ಥ ಮಾನವನ ಕುಟಲತೆಯನ್ನು ಮಕ್ಕಳು ಮಂಗನ ಪಾತ್ರ ಮೂಲಕ ವಿಡಂಬನೆಗೊಳಪಡಿಸಿದರು. ಆ ಕಥೆಯ ನಡುವೆಯೇ ಸರ್ಕಸ್‍ನ ಸನ್ನಿವೇಶವನ್ನು ಸೃಷ್ಟಿಸಿಕೊಂಡು ಕುಣಿದು ಕುಪ್ಪಳಿಸಿದರು. ಮಕ್ಕಳು ಕಲಿತ ಮಾಧ್ಯಮದ ಪ್ರಭಾವವೋ ಎಂಬಂತೆ ಅರ್ಧ ಕನ್ನಡ, ಅರ್ಧ ಇಂಗ್ಲೀಷ್‍ನಲ್ಲಿ ಮಾತನಾಡುವ ಮಂಗಗಳು ಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೇಲಿಸಿದವು. ಮಕ್ಕಳಿಗೆ ಮುಕ್ತ ಅವಕಾಶವನ್ನು ನೀಡಿದರೆ ಅವರಿಂದ ಸೃಜನಶೀಲ ಸೃಷ್ಟಿ ಸಾಧ್ಯ ಎಂಬುದು ಇನ್ನೊಮ್ಮೆ ನಿರೂಪಿತವಾಯಿತು. ಚಿಂತನ ಬಳಗದ ಸದಸ್ಯರು ಈ ನಾಟಕವನ್ನುಕಟ್ಟಲು ಸಹಕರಿಸಿದರು.
                                                
ಇಡಿಯ ಶಿಬಿರದ ನಿರ್ದೇಶಕರಾಗಿ, ಮಕ್ಕಳೊಂದಿಗೆ ಮಕ್ಕಳಾಗಿ ಬೆರೆತು ಹೋದವರು. ಚಿಂತನದ ದಾಮೋದರ್ ನಾಯ್ಕ ಅವರು ಅವರ ರಂಗತಾಲೀಮಿಗೆ ಮಕ್ಕಳು ಯಾವಪರಿ ಸೋತಿದ್ದರೆಂದರೆ ಆಟಬೇಕೋ, ನಾಟಕವೋ ಎಂದರೆ ಹೆಚ್ಚಿನ ಮಕ್ಕಳು ‘ನಾಟಕವೇ ಇರಲಿ’ ಎನ್ನುತ್ತಿದ್ದರು. ನಾಟಕವೂ ಚೆಂದದ ಆಟವಾದ ಪರಿಯಿದು. ‘ಭಲಾರೆ ಮಂಗಣ್ಣ, ಮರದಿಂದ ಮರಕ್ಕೆ ಹಾರಣ್ಣ’ ಎನ್ನುತ್ತಾ ಚಿಣ್ಣರೆಲ್ಲಾ ಆರ್.ವಿ. ಯವರ ಮನೆಯ ಒಳ ಹೊರಗೆಲ್ಲಾ ಹಾರಾಡುವುದನ್ನು ನೋಡುವುದೇ ಕಣ್ಣಿಗೆ ಹಬ್ಬವಾಗಿತ್ತು. ನೆಲವನ್ನು ತಬ್ಬಿ, ಸ್ಪರ್ಧೆಯ ಚೌಕಟ್ಟನ್ನು ಮೀರಿ, ಅಂತಸ್ತಿನ ಅಹಂಅನ್ನು ತೊರೆದು, ನಿಯಮಗಳಾಚೆಗೆ ಜಿಗಿದು, ಮೈಮನಗಳನ್ನು ಹಸಿರಾಗಿಸಿಕೊಂಡ ಚಿಣ್ಣರು ಶಿಬಿರದ ರೂಪದಲ್ಲಿ ತೆರೆದಿಟ್ಟರು. ಇನ್ನು ಮುಂದಿನ ಶಿಬಿರಕ್ಕೆ ವರ್ಷವಿಡೀ ಕಾಯಬೇಕಲ್ಲ ಎನ್ನುವ ದುಗುಡ ಅವರ ಮಾತಿನಲ್ಲಿತ್ತು. ಎಲ್ಲವನ್ನೂ ಅಷ್ಟಿಷ್ಟು ಕಲಿಸಿ, ಕಲಸುಮೇಲೋಗರವಾಗಿಸುವುದಕ್ಕಿಂತ ರಂಗತಾಲೀಮನ್ನೇ ವಿಭಿನ್ನ ಬಗೆಯ ಆಟವಾಗಿಸಿದ ಈ ಶಿಬಿರ ವಿಶಿಷ್ಟ್ಯವಾಗಿತ್ತು. ಇಂಥದ್ದೊಂದು ಅಪರೂಪದ ಅವಕಾಶವನ್ನು ಹಳ್ಳಿ ಮತ್ತು ನಗರದ ಮಕ್ಕಳಿಗೆ ತೆರೆದಿಟ್ಟ ಆರ್.ವಿ. ಯವರ ಕುಟುಂಬ ಮತ್ತು ಶಿಬಿರದ ಯಶಸ್ಸಿಗಾಗಿ ಟೊಂಕಕಟ್ಟಿ ದುಡಿದ “ಚಿಂತನ ಬಳಗ” ನಿಜಕ್ಕೂ ಅಭಿನಂದನಾರ್ಹರು. ಪ್ರೀತಿಯ ತುಂತುರು ಮಳೆ ಸುರಿದಾಗ ಮಾತ್ರ ಮಕ್ಕಳ ಮನಸ್ಸಿನಲ್ಲಿ ಕಾಮನಬಿಲ್ಲು ಮೂಡಬಲ್ಲದು ಎಂಬ ಶಿಬಿರ ಗೀತೆಯ ಅರ್ಥ ನಿಜವಾದ ಅರ್ಥದಲ್ಲಿ ಸಾಕಾರಗೊಂಡಿತು.
ನನ್ನನ್ಯಾಕೆ ಒಂದನೇ ತರಗತಿಯಿಂದಲೇ ಶಿಬಿರಕ್ಕೆ ಸೇರಿಸಲಿಲ್ಲ ಅಂತ ನಾನು ಯಾವಾಗಲೂ ಅಮ್ಮನ ಹತ್ತಿರ ಜಗಳ ಮಾಡ್ತಿರ್ತೇನೆ. ಈ ಶಿಬಿರಕ್ಕೆ ಬರದಿದ್ರೆ ನಾನು ತುಂಬ ಕಳ್ಕೊತ್ತಿದ್ದೆ.
18
ಪ್ರೀತಂ, 6ನೇ ತರಗತಿ, ಉಡುಪಿ.
ಅಚಾನಕ್ ಆಗಿ ಈ ವರ್ಷ ಶಿಬಿರಕ್ಕೆ ಬಂದೆ. ಆದ್ರೆ ಮುಂದಿನ ವರ್ಷ ಗ್ಯಾರಂಟಿ ಗೆಳೆಯ ಗೆಳತಿಯರೆಲ್ಲರ ಜೊತೆ ಬರ್ತೇನೆ.
ಸಾನಿಯಾ ದಾವಣಗೆರೆ
ಶಿಬಿರಕ್ಕೆ ಬರೋ ಮೊದಲು ಇಲ್ಲಿ ಹೊಡೀತಾರೇನೋ ಅಂತ ಹೆದರಿಕೆಯಿತ್ತು. ಈಗ ಎಷ್ಟು ಖುಷಿಯಾಗ್ತಿದೆಯೆಂದ್ರೆ ನಾನು ಮುಂದಿನ ವರ್ಷ ಖಂಡಿತಾ ಬರೋನೆ.
ವಿಕಾಸ, ಶಿರಸಿ, 4ನೇ ತರಗತಿ.
ಎಂಟು ದಿನ ಎಂಟು ನಿಮಿಷಗಳ ಹಾಗೆ ಕಳೆದು ಹೋಗಿತ್ತು. ಮುಂದಿನ ವರ್ಷ 5ನೇ ಬಾರಿಗೆ ಶಿಬಿರಕ್ಕೆ ಬರ್ತಿದ್ದೇನೆ.
ಅನನ್ಯ, ಕೆರೆಕೋಣ.
ಈ ವರ್ಷ ಎಸ್.ಎಸ್.ಎಲ್.ಸಿ ಯಲ್ಲಿರುವುದರಿಂದ ವಿಶೇಷ ತರಗತಿಗಳಿಗಾಗಿ ಅರ್ಧ ದಿನ ಶಾಲೆಗೆ ಹೋಗಿದ್ದರಿಂದ ಅರ್ಧದಿಂದ ಮಾತ್ರ ಶಿಬಿರಕ್ಕೆ ಬರ್ತಿದ್ದೇನೆ. ನಾಟಕದ ಸಂಗೀತಕ್ಕೆ ದನಿಗೂಡಿಸುವ ಅವಕಾಶ ಸಿಕ್ಕಿದೆ ಇಷ್ಟಾದರೂ ಬರದಿದ್ದರೆ ಮನಸ್ಸಿಗೆ ಸಮಾಧಾನವಿಲ್ಲ.
ಪೂಜಾ, 10ನೇ ತರಗತಿ.
                                                                                                                                           ವರದಿ-ಸುಧಾ ಆಡುಕಳ

 222426

No comments:

Post a Comment