ಸೋನುವಿಗೆ ಹಸಿವಾಗಿತ್ತು. ಅಪ್ಪ ಎದ್ದು ಹೊರಗೆ ಹೊರಟಿದ್ದ. ಆ ಮುರುಕು ಗುಡಿಸಲಲ್ಲಿ ಮತ್ಯಾರೂ ಇಲ್ಲ. ಹಾಗಾದರೆ ಗುಡಿಸಲು ಖಾಲಿಯಾಗಿರಬೇಕು ಅಂದು ನಿಮಗನ್ನಿಸಿದರೆ ತಪ್ಪು. ಗುಡಿಸಲ ತುಂಬಾ ಸಾಮಾನುಗಳದೇ ರಾಶಿ. ಹರಿದ ಚಪ್ಪಲಿಗಳು, ಗಾಜಿನ ಬಾಟಲಿಗಳು, ರದ್ದಿ ಕಾಗದಗಳು, ಕಬ್ಬಿಣದ ಮುರುಕು ಡಬ್ಬ, ಒಡೆದ ಪ್ಲಾಷ್ಟಿಕ್ ಬಕೇಟು, ಹಾಳಾದ ಮಿಕ್ಸಿ, ಕ್ಯಾಸೆಟ್ ಪ್ಲೇಯರ್, ರೇಡಿಯೋ, ಮೊಬೈಲ ತುಣುಕು ಹೀಗೆ ಏನೇನೋ ತುಂಬಿದ್ದವು. ಸೋನು ಒಂದು ಬದಿಯಲ್ಲಿಟ್ಟಿದ್ದ ಕಬ್ಬಿಣದ ಒಡಕು ಡಬ್ಬದ ಮುಚ್ಚಳ ತೆಗೆದ. ಒಳಗೆ ಏನಾದರೂ ಇದೆಯೇ ಎಂದು ಇಣಕಿ ಡಬ್ಬದೊಳಗೆ ಕೈಯಾಡಿಸಿದ. ಒಂದೆರಡು ತುಣುಕು ಕಾರದ ಕಡ್ಡಿ ಕೈಗೆ ತಗಲಿದಂತೆ ಆಯಿತು. ಅದನ್ನು ಎರಡು ಬೆರಳ ತುದಿಯಿಂದ ಪ್ರಯತ್ನಪಟ್ಟು ಹೊರಗೆ ತೆಗೆದುಕೊಂಡು ಬಾಯಿಗೆ ಹಾಕಿಕೊಂಡ. ಈ ಕಾರಕಡ್ಡಿಯ ತುಣುಕುಗಳೊಂದಿಗೆ ಕಬ್ಬಿಣದ ಡಬ್ಬಿಯ ತುಣುಕೂ ಬಾಯಿಗೆ ಹೋಗಿರಬೇಕು. ಜಗಿದಾಗ ಚರಚರ ಸಪ್ಪಳವಾಯಿತು. ಥೂ........ ಥೂ...... ಎಂದು ಉಗಿದ. ಮತ್ತೆರಡು ಪಾತ್ರೆಯ ಮುಚ್ಚಳ ಸರಿಸಿ ಏನೂ ಸಿಗದೆ ಸುಮ್ಮನಾದ.
ಸೋನುಗೆ ಇದೆಲ್ಲ ಹೊಸತಲ್ಲ. ದಿನಾಲೂ ಅವನ ತಿಂಡಿ ಅವನೇ ಹುಡುಕಿಕೊಳ್ಳಬೇಕು. ಒಂದೊಂದು ದಿನ ಏನೂ ಸಿಗದೆ ಕಣ್ಣೀರು ಇಳಿಸುತ್ತಾ ಅವನ ಮನೆಯ ಹಿಂದೆ ಸುಮಾರು ದೂರದಲ್ಲಿರುವ ಕೊಳವೆ ಬಾವಿಯ ನಲ್ಲಿಯಿಂದ ನೀರು ಕುಡಿದು ಖುಶಿ ಪಟ್ಟಿದ್ದೂ ಇದೆ. ಆದರೆ ಮೊದಲು ಹಾಗಿರಲಿಲ್ಲ. ಅವನ ಅಮ್ಮ ದಿನಾಲೂ ಮುಂಜಾನೆ, ಮಧ್ಯಾಹ್ನ, ಸಂಜೆ ಊಟ ಕೊಟ್ಟೇ ಕೊಡುತ್ತಿದ್ದಳು. ಆದರೆ ಅಮ್ಮ ಈಗ ಬದುಕಿಲ್ಲವಲ್ಲ. ಅಮ್ಮ ಸತ್ತ ಮೇಲೆ ........ ಎಂದು ನೆನಪಾದಾಗೆಲ್ಲ ಸೋನು ತಾನಿರುವ ಜಾಗವನ್ನು ಮರೆತು ಅಳಲು ಶುರು ಮಾಡುತ್ತಾನೆ. ಯಾರಾದರೂ ನೋಡಿ 'ಏನಾಯಿತೋ, ಯಾಕೆ ಅಳ್ತೀಯಾ?' ಅಂದಾಗ ಹೌದಲ್ಲ ನಾನು ಅಳುತ್ತಿದ್ದೇನಲ್ಲ ಅಂದೆನಿಸಿ ಅಳು ನಿಲ್ಲಸಲು ಪ್ರಯತ್ನಿಸುತ್ತಾನೆ. ಆದರೂ ಅಳು ಒತ್ತಿ ಒತ್ತಿ ಬಂದು ಕಣ್ಣು ಕೆಂಪಾಗಿ, ಕಣ್ಣೀರನ್ನು ಕೈಯಿಂದ ತಿಕ್ಕಿ ತಿಕ್ಕಿ ಮುಖವೆಲ್ಲಾ ಕಲೆಯಾಗುತ್ತದೆ.
ಸೋನು ಮನೆಯ ಮೂಲೆಯಲ್ಲಿದ್ದ ಹರಕು ಜೋಳಿಗೆಯಂತಹ ಚೀಲ ಹೆಗಲಿಗೆ ಹಾಕಿಕೊಂಡ. ಆ ಚೀಲದ ಪಕ್ಕದಲ್ಲಿಯೇ ಅವನ ಪಾಟಿಯ ಚೀಲ ಬಿದ್ದಿದೆ. ಅವನು ಶಾಲೆಗೆ ಹೋಗದೆ ಬಹಳ ದಿನವಾಯಿತು. ಗುಡಿಸಲಿನಿಂದ ಹೊರಗೆ ಬಂದು ಮನೆಯ ಮುಂದಿರುವ ಹಲಸಿನ ಮರದ ಬದಿಯಿಂದ ಮುಂದೆ ನಡೆದು ಜಲ್ಲಿರಾಶಿಯನ್ನು ಹತ್ತಿ ಪಟ್ಟಣದ ಗಟಾರದಿಂದ ಬಂದ ಕೊಳಚೆ ನೀರಿನ ಕಾಲುವೆಯನ್ನು ಜಿಗಿದು ದಾಟಿ ಮುಂದೆ ಬಂದರೆ ಅಲ್ಲೇ ಒಂದು ಕಸ ಸಂಗ್ರಹಿಸಲು ಪುರಸಭೆಯವರು ಇಟ್ಟ ಕಸದ ತೊಟ್ಟಿ ಇದೆ. ಸೋನು ಆ ಕಸದ ರಾಶಿಯ ಕಸದಲ್ಲಿ ಒಂದಾಗಿ ಅದರಲ್ಲಿ ಬೆಲೆ ಉಳ್ಳದ್ದು ಏನಾದರು ಇದೆಯೇ ಎಂದು ಹುಡುಕಾಡ ತೊಡಗಿದ.
ಅಷ್ಟರಲ್ಲಿ ಅವನ ಮನೆಯ ಪಕ್ಕದವರೇ ಆದ ರಿತು, ಸುಮಿ, ಶಭಾನಾ ಕೂಡ ಅಲ್ಲಿಗೆ ಬಂದಾಗಿತ್ತು. ಅವರೂ ಕೂಡಾ ಸೋನುವಿನ ಹಾಗೆ ಕಸದ ಚಿಂದಿಯಲ್ಲಿಯೇ ಅನ್ನ ಹುಡುಕುವವರೇ ಆಗಿದ್ದರು. ಸೋನುವಿಗೆ ಒಂದೆರಡು ಹರಕು ಪ್ಲಾಸ್ಟಿಕ್ ಚಪ್ಪಲಿ ಸಿಕ್ಕಿತು. ಆಗಲೆ ಮಳೆಗಾಲ ಕಳೆದು ಚಳಿಗಾಲ ಪ್ರಾರಂಭವಾಗಿದೆ. ಮಳೆಗಾಲದಲ್ಲಿ ಎಲ್ಲರು ಸಾಮಾನ್ಯವಾಗಿ ಪ್ಲಾಸ್ಟಿಕ್ ಚಪ್ಪಲಿ ಧರಿಸುತ್ತಾರೆ. ಮಳೆಗಾಲ ಮುಗಿಯುವಷ್ಟರಲ್ಲಿ ಅವರ ಚಪ್ಪಲಿಗಳು ಹಳೆಯದಾಗಿ ಹರಿದಿರುತ್ತವೆ. ಚಳಿಗಾಲ ಬರುತ್ತಿದ್ದಂತೆ ಜನರು ಹೆಚ್ಚಾಗಿ ಚರ್ಮದ ಹೊಸ ಚಪ್ಪಲಿ ಖರೀದಿಸುತ್ತಾರೆ. ಇದರಿಂದಾಗಿ ಚಳಿಗಾಲ ಶುರುವಾದಾಗ ಹರಿದ ಪ್ಲಾಸ್ಟಿಕ್ ಚಪ್ಪಲಿಗಳು ಕಸದಬುಟ್ಟಿಯಲ್ಲಿ ಕಾಣಿಸುವುದು ಹೆಚ್ಚು. ಸೋನು ಇನ್ನೊಂದೆರಡು ಸಿಕ್ಕಿದರೆ ಅಬ್ದುಲ್ ಕಾಕಾನಿಗೆ ಕೊಡಬಹುದು. ಇವುಗಳನ್ನು ಕೊಟ್ಟು ಹಸಿವಾಗಿದೆ ಎಂದರೆ ಒಂದೆರಡು ಬನ್ನು ಸಿಗುವಷ್ಟು ಹಣ ಕಾಕಾ ಕೊಡುತ್ತಾನೆ ಎಂದು ಮನಸ್ಸಿನಲ್ಲಿ ಅಂದುಕೊಳ್ಳುತ್ತಾ ಗಡಿಬಿಡಿಯಿಂದ ಹುಡುಕ ತೊಡಗಿದ. ಏ ಸೋನು, ನಿನಗೆ ಎಷ್ಟು ಆಸೆನೋ, ಅಷ್ಟೂ ನಿನಗೇ ಸಿಗಬೇಕಾ? ನಮಗೆ ಸಿಗಲಿಕ್ಕೆ ಬಿಡೋದಿಲ್ವಾ? ಎಂದು ಶಬಾನಾ ಕೇಳಿದಾಗ ಸೋನು ಅವಳನ್ನೊಮ್ಮೆ ನೋಡಿ ಮುಗುಳು ನಕ್ಕು ಕೆಲಸದಲ್ಲಿ ತಲ್ಲೀನನಾದ.
ಶಬಾನಾ, ರಿತು, ಸುಮಿ ಎಲ್ಲರಿಗೂ ತಂದೆ-ತಾಯಿ ಇದ್ದಾರೆ. ಅವರಿಗೆ ಅವರ ಅಮ್ಮ ತಿಂಡಿ ಕೊಡುತ್ತಾಳೆ. ನನಗೆ ಅಮ್ಮ ಇಲ್ಲ. ಹಸಿವಾಗಿದೆ ಅದಕ್ಕೇ ಆಸೆ. ಇವರಿಗೆ ನನ್ನ ಕಷ್ಟ ತಿಳಿಯುವುದಿಲ್ಲ ಎಂದುಕೊಂಡು ಹುಡುಕುತ್ತಿದ್ದಾಗ ಮತ್ತೆರಡು ಚಪ್ಪಲಿಗಳು ಸಿಕ್ಕಿದವು. ಸೋನು ಬೇಗ ಬೇಗ ಅವುಗಳನ್ನು ಚೀಲದಲ್ಲಿ ಹಾಕಿಕೊಂಡು ಅಬ್ದುಲ್ಕಾಕಾನ ಅಂಗಡಿಯ ಕಡೆಗೆ ನಡೆದ.
ಕಾಕಾ ಇನ್ನು ಹೊರಗೆ ಬಂದಿಲ್ಲವಲ್ಲ ಎಂದು ಸೋನು ಅನುಮಾನಿಸಿದ. ಕಾಕಾ ಮನೆಯಲ್ಲಿಯೇ ಅಂಗಡಿ ಮಾಡಿಕೊಂಡಿದ್ದ. ಅವನ ಅಂಗಡಿ ಅಂದರೆ ದೊಡ್ಡ ಕಸದ ರಾಶಿ ಅಷ್ಟೇ. ಅವನೂ ಚಿಕ್ಕ ಗುಡಿಸಲಿನಲ್ಲಿಯೇ ಉಳಿಯೋದು. ಮುಂದೆ ಸ್ವಲ್ಪ ಜಾಗ ಇದೆ. ಅಲ್ಲೆಲ್ಲಾ ರದ್ದಿ ಕಾಗದ, ಮುರುಕು ಕಬ್ಬಿಣ, ಹಾಳಾದ ಪ್ಲಾಸ್ಟಿಕ್ ವಸ್ತುಗಳು ಇಂತವನ್ನು ಖರೀದಿಸಿ ರಾಶಿ ಹಾಕಿದ್ದಾನೆ. ಅಲ್ಲೇ ಒಂದೆರಡು ತೂಕದ ತಕ್ಕಡಿ ಇಟ್ಟುಕೊಂಡಿದ್ದಾನೆ. ಕಾಕಾ ಅಂಗಡಿಗೆ ಬಂದಿದ್ದ. ಕಸದ ರಾಶಿಯ ಹಿಂದೆ ಇದ್ದ ಕಾಕಾ ಕಾಣುತ್ತಿರಲಿಲ್ಲ. ಆದರೆ ಅವನು ಬೀಡಿ ಹೊತ್ತಿಸಿ ಹೊಗೆ ಬಿಟ್ಟಿದ್ದು ಗಾಳಿಯಲ್ಲಿ ಮೇಲಕ್ಕೆ ಏರಿ ಸೋನೂಗೆ ಕಾಣಿಸಿತು. ಜೊತೆಯಲ್ಲಿ ಕೆಮ್ಮಿನ ಧ್ವನಿ ಬೇರೆ. ಕಾಕ ಹೊರಗೆ ಬಂದಿದ್ದಾನೆ ಎಂದು ಸೋನುಗೆ ಗೊತ್ತಾಯಿತು. ಓಡೋಡಿ ಹೋಗಿ ಕಾಕಾನ ಮುಂದೆ ತಾನು ತಂದ ಚಪ್ಪಲಿಗಳನ್ನು ಇಟ್ಟ. ಏನು, ಏನು, ಇಷ್ಟು ಬೇಗ ಬಂದೆ? ಇನ್ನೂ ನನ್ನ ವ್ಯಾಪಾರ ಶುರು ಆಗಿಲ್ಲ. ಎಂದು ಕಾಕಾ ನಿರ್ಲಕ್ಷ ತೋರಿದ.
ಸೋನುವಿಗೆ ಹೊಟ್ಟೆ ಬರಿದಾದ ಸಂಕಟ. ಯಾಕೊ ಕಾಕನ ಮನಸ್ಸು ಸರಿ ಇಲ್ಲ. ಏನು ಮಾಡುವುದು...... ಎಂದು ಯೋಚಿಸಿದಾಗ ಅಳು ಬಂದೇ ಬಿಟ್ಟಿತು. ಪುಸ್, ಪುಸ್ ಎಂದು ಸೋನು ಅಳುವ ಧ್ವನಿ ಕೇಳಿದ ಕಾಕ ತಿರುಗಿದ. ಏನಾಗಿದೆ ನಿನಗೆ? ಹಸಿವಾಗಿದೆ ಅಲ್ವಾ.......? ನಿನ್ನ ಅಪ್ಪನಿಗಂತೂ ಮಗನ ಬಗ್ಗೆ ಕಾಳಜಿ ಇಲ್ಲ. ಅಮ್ಮ ಪಾಪ, ಅಲ್ಲಿ ದೇವರ ಬಳಿಯಲ್ಲಿ ಇದ್ದಾಳೆ....... ತಗೊ ತಗೊ ಎಂದು ಹೇಳಿ ಎರಡು ಬನ್ನಿಗಾಗಿ ನಾಲ್ಕು ರೂಪಾಯಿ ತೆಗೆದು ಕೊಟ್ಟ.
ಸೋನು ಶಿರಿಲ್ಲನ ಅಂಗಡಿಗೆ ಹೋಗಿ ಬನ್ನು ಖರೀದಿಸಿ ಗಡಿಬಿಡಿಯಿಂದ ಗಬಗಬನೆ ತಿನ್ನತೊಡಗಿದ. ಗಂಟಲಲ್ಲಿ ಹಿಡಿದ ಹಾಗೆ ಆಯಿತು. ನೀರು ಕೇಳಿ ಕುಡಿದ. ಅಷ್ಟು ಹೊತ್ತಿಗೆ ಶಾಲಾ ಮಕ್ಕಳೆಲ್ಲ ಶಾಲೆಗೆ ಹೊರಟಿದ್ದರು. ಸೋನು ಶಾಲೆಗೆ ಹೋಗದೆ ವರ್ಷವೇ ಆಗಿರಬೇಕು. ಅವನ ಅಮ್ಮ ಅವನನ್ನು ಸಕರ್ಾರಿ ಶಾಲೆಗೆ ಸೇರಿಸಿದ್ದಳು. ದಿನಾಲೂ ಶಾಲೆಗೆ ಹೋಗುತ್ತಿದ್ದ ಸೋನು ಕನ್ನಡ ಓದಲು, ಬರೆಯಲು ಚೆನ್ನಾಗಿಯೇ ಕಲಿತಿದ್ದ. ಇವನಿಗೆ ಪಾಠ ಹೇಳುತ್ತಿದ್ದ ಕಮಲಾ ಟೀಚರ್ ಸೋನುವನ್ನು ತುಂಬಾ ಪ್ರೀತಿಸುತ್ತಿದ್ದರು. ಒಂದೆರಡು ಹುಡುಗರು ಸೋನುವನ್ನು ಗುರುತು ಹಿಡಿದು 'ಸೋನು, ಸೋನು' ಎಂದು ಕರೆದರು. 'ಶಾಲೆಗೆ ಬಾರೋ' ಎಂದು ಕೂಗಿದರು. ಸೋನುಗೆ ನಾಚಿಕೆ, ಹೆದರಿಕೆ ಎಲ್ಲಾ ಆಯಿತು.
ಅಮ್ಮ ಸತ್ತು ನಾಲ್ಕೈದು ದಿನ ಆಗಿರಬೇಕು. ಸೋನುವಿನ ಅತ್ತೆ (ತಂದೆಯ ಅಕ್ಕ) ಬಂದು ಉಳಿದು ಕೊಂಡಿದ್ದಳು. ತಾಯಿ ಸತ್ತ ದಿನವೇ ಅವನ ಮನೆಗೆ ಬಂದಿದ್ದ ಅತ್ತೆ ನಾಲ್ಕೈದು ದಿನ ಸೋನುವನ್ನು ಬಹಳ ಪ್ರೀತಿಯಿಂದ ನೋಡಿಕೊಂಡಿದ್ದಳು. ಆ ದಿನ ಸೋನು ಶಾಲೆಗೆ ಹೊರಟಿದ್ದ. ಅತ್ತೆ ತಿಂಡಿ ಮಾಡಿಕೊಟ್ಟು ಶಾಲೆಗೆ ಕಳುಹಿಸಿದಳು. ಮಧ್ಯಾಹ್ನ ಶಾಲೆಯಲ್ಲಿ ಊಟ ಕೊಡುತ್ತಾರೆ. ಸಂಜೆ ಮನೆಗೆ ಬಂದ. ಮನೆಯಲ್ಲಿ ಯಾರೂ ಇರಲಿಲ್ಲ. ಅತ್ತೆ ಎಲ್ಲಿಗೆ ಹೋಗಿರಬಹುದು ಎಂದು ಯೋಚಿಸಿದ. ಕತ್ತಲಾಗುವ ಹೊತ್ತಿಗೆ ತಂದೆ ಸಾರಾಯಿ ಕುಡಿದು ತೂರಾಡುತ್ತ ಮನೆಗೆ ಬಂದ. ಸೋನು ಅಪ್ಪನ ಹತ್ತಿರ 'ಅತ್ತೆ ಎಲ್ಲಿ?' ಎಂದು ಕೇಳಿದ. 'ಅತ್ತೆನೂ ಇಲ್ಲ, ಕತ್ತೆನೂ ಇಲ್ಲ. ಇನ್ನು ನಾನು ನೀನು, ನೀನು ನಾನು ಇಷ್ಟೇ! ಗೊತ್ತಾಯ್ತಾ?' ಎಂದು ಕೂಗಾಡಿದ. ಹೀಗೆ ಹೇಳುತ್ತ ಮಲಗಿ ಗೊರಕೆ ಹೊಡೆಯಲು ತೊಡಗಿದ.
ನಂತರ ಅತ್ತೆ ತನ್ನ ಊರಾದ ಶಿರಸಿಗೆ ಹೊರಟು ಹೋದಳು ಎಂದು ಸೋನೂಗೆ ಗೊತ್ತಾಯಿತು. ಅಂದಿನಿಂದ ಸೋನು ತನ್ನ ಹಸಿವನ್ನು ತಾನೇ ದುಡಿದು ತಣಿಸಿಕೊಳ್ಳಬೇಕಾಯಿತು. ಹೀಗೆ ಸೋನು ಶಾಲೆ ಬಿಟ್ಟ ನಂತರ ಒಂದೆರಡು ಸಲ ಮುಂಜಾನೆ ಕಮಲಾ ಟೀಚರ್ ಅವನ ಗುಡಿಸಲಿಗೆ ಬಂದಿದ್ದರು. ಸೋನು ಶಾಲೆಗೆ ಬಾರೋ ಎಂದು ಕರೆದಿದ್ದರು. ಆಗೆಲ್ಲ ಅವನ ಅಪ್ಪ ನನ್ನ ಮಗ ಶಾಲೆ ಕಲಿತು ಆಗಬೇಕಾದದ್ದು ಏನೂ ಇಲ್ಲ. ನಾನು ಅವನನ್ನು ಶಾಲೆಗೆ ಕಳುಹಿಸುವುದಿಲ್ಲ. ಅವನಿಗೆ ಬಟ್ಟೆ, ಪುಸ್ತಕ, ಊಟ-ತಿಂಡಿ, ಸ್ನಾನ-ಗೀನ ಯಾವುದನ್ನು ಪೂರೈಸಲು ನನ್ನಿಂದ ಆಗುವುದಿಲ್ಲ. ನೀವು ಇಲ್ಲಿಗೆ ಬಂದು ಅವನನ್ನು ಕರೆಯುವುದೇ ಬೇಡ ಎಂದು ಹೇಳಿ ಟೀಚರನ್ನು ವಾಪಸ್ ಕಳುಹಿಸಿದ್ದ. ಕಮಲಾ ಟೀಚರ್ ಏನೇನೋ ಹೇಳ ಹೊರಟರು. ಅವರಿಗೆ ಮಾತಾಡಲು ಅಪ್ಪ ಬಿಡಲಿಲ್ಲ.
ಸೋನು ಬಾರೋ ಬಾರೋ ಎಂದು ಒಂದೆರಡು ಗೆಳೆಯರು ಅವನ ಸಮೀಪವೇ ಬಂದರು. ದೂರದಲ್ಲಿ ಕಮಲಾ ಟೀಚರ್ ಬರುವುದೂ ಕಾಣಿಸಿತು. ಸೋನು ಅಲ್ಲಿಂದ ತಿರುಗಿ ರಸ್ತೆಯಲ್ಲಿ ಓಡಿ ಮನೆಯ ಕಡೆ ಬಂದ. ಕಮಲಾ ಟೀಚರ್ ನನ್ನನ್ನು ಕರೆದರೆ ಅವರಿಗೆ ಏನು ಹೇಳುವುದು. ಅದಕ್ಕೇ ಓಡಿಬಂದೆ ಎಂದು ಮನಸ್ಸಿನಲ್ಲೇ ಸಮಾಧಾನ ಮಾಡಿಕೊಂಡ.
ಅಷ್ಟರಲ್ಲಿ ನಾಳೆ ಫಲ್ಸ ಪೋಲಿಯೋ ಕಾರ್ಯಕ್ರಮ. ಐದು ವರ್ಷದೊಳಗಿನ ಎಲ್ಲ ಮಕ್ಕಳಿಗೆ ಪೋಲಿಯೋ ಹನಿ ಹಾಕಲಾಗುವುದು ಎಂದು ಮೈಕಿನಲ್ಲಿ ಕೂಗುತ್ತಾ ಒಂದು ರಿಕ್ಷಾ ಮುಂದೆ ಸಾಗಿತು. ಪೋಲಿಯೋ ಹನಿ ಎಂದೊಡನೆ ಸೋನುವಿಗೆ ಅಮ್ಮ ಮತ್ತೆ ನೆನಪಾದಳು. ಆ ದಿನ ಸೋನು ಹಾಗೂ ಅವನ ಪುಟ್ಟ ತಂಗಿಯನ್ನು ಕರೆದುಕೊಂಡು ಅಮ್ಮ ಶಿರಸಿಯ ಅತ್ತೆ ಮನೆಗೆ ಹೋಗಲು ಬಸ್ಸ್ಟ್ಯಾಂಡಿಗೆ ಬಂದಿದ್ದಳು. ಅಷ್ಟರಲ್ಲಿ ಎರಡು ಜನ ಅಕ್ಕಂದಿರು ಅಮ್ಮನ ಹತ್ತಿರ ಬಂದರು. ಅವರು ಅಮ್ಮನ ಹತ್ತಿರ ಪುಟ್ಟ ತಂಗಿಗೆ ಪೋಲಿಯೋ ಹನಿ ಹಾಕಿಸಿಕೊಳ್ಳಿ ಎಂದು ಹೇಳಿದರು. ಇದನ್ನು ಹಾಕಿಸಿದರೆ ನಿಮ್ಮ ಮಗುವಿಗೆ ಪೋಲಿಯೋ ರೋಗ ಬರುವುದೇ ಇಲ್ಲ ಎಂದು ತಿಳಿಸಿದರು. ಅವರು ಹಾಗೆ ಹೇಳುತ್ತಿದ್ದಂತೆ ಎರಡು ಮೂರು ಕಾರು ಅಲ್ಲಿ ಬಂದು ನಿಂತಿತು. ಕಾರಿನಿಂದ ಹತ್ತಾರು ಜನ ಇಳಿದು ಬಂದರು. ಅಲ್ಲಿರುವವರು 'ಮಂತ್ರಿಗಳು, ಮಂತ್ರಿಗಳು' ಎಂದು ಹೇಳಿದ್ದು ಕೇಳಿಸಿತು. ಆ ಅಕ್ಕಂದಿರು ಅಮ್ಮನನ್ನು ಮುಂದೆ ಕರೆದೊಯ್ದರು. ಬಿಳೆ ಬಟ್ಟೆ ಧರಿಸಿದ್ದ ವ್ಯಕ್ತಿ ಅಮ್ಮನ ಹತ್ತಿರ ಬಂದು ನಗೆಯಾಡುತ್ತ ಪುಟ್ಟ ತಂಗಿಯ ಬಾಯಲ್ಲಿ ಒಂದೆರಡು ಹನಿ ಔಷಧಿ ಬಿಟ್ಟರು. ಎಲ್ಲರೂ ಚಪ್ಪಾಳೆ ತಟ್ಟಿದರು. ಕಾರು ಹೊರಟು ಹೋಯಿತು.
ಅಮ್ಮ ತಂಗಿಯನ್ನು ಎತ್ತಿಕೊಂಡು ಬಸ್ಸಿಗಾಗಿ ಕಾಯುತ್ತಾ ನಿಂತಿದ್ದಳು. ನಾನು ಅಲ್ಲೇ ಪಕ್ಕದಲ್ಲಿರುವ ಅಂಗಡಿಯ ಹತ್ತಿರ ಸರಿದು ಅಲ್ಲಿರುವ ತಿಂಡಿಗಳನ್ನೆಲ್ಲ ನೋಡುತ್ತಾ ನಿಂತಿದ್ದೆ. ಒಮ್ಮೆಲೆ ಅಯ್ಯೋ ಎಂದು ಕೂಗಿದ ಸದ್ದು. ಜನರೆಲ್ಲಾ ಆ ಕಡೆ ಈ ಕಡೆ ಓಡಿದರು. ಒಂದು ಬಸ್ಸು ಮುಂದೆ ನುಗ್ಗಿ ಬಂದು ನಿಂತದ್ದು ಎಲ್ಲಾ ಆಗಿತ್ತು. ಬಸ್ಸಿನ ಅಡಿಗೆ ನನ್ನ ಅಮ್ಮ ಮತ್ತು ತಂಗಿ........ ಅಯ್ಯೋ. ಈ ನೆನಪು ನನಗೇಕೆ ಬಂತು ಎಂದು ಅಳುತ್ತಾ ಸೋನು ಶಾಲೆಯ ಆಚೆ ಇರುವ ಕಸದ ತೊಟ್ಟಿಯ ಕಡೆ ಹೊರಟ.
ಶಾಲೆಯ ಸುತ್ತಲೂ ಕಲ್ಲಿನ ಗೋಡೆ ಇದೆ. ಪಲ್ಸಪೋಲಿಯೊ ಪ್ರಚಾರ ಮಾಡುವ ರಿಕ್ಷಾ ಅಲ್ಲಿ ನಿಂತಿತು. ರಿಕ್ಷಾದಿಂದ ಒಬ್ಬ ಕೆಳಕ್ಕೆ ಇಳಿದು ಬಂದು ಒಂದು ದೊಡ್ಡ ಚಿತ್ರವನ್ನು ಶಾಲಾ ಕಂಪೌಂಡ ಗೋಡೆಗೆ ಅಂಟಿಸಿ ಮತ್ತೆ ರಿಕ್ಷಾ ಹತ್ತಿದ. ರಿಕ್ಷಾ ಹೊರಟು ಹೋಯಿತು. ಸೋನುವಿಗೆ ಚಿತ್ರ ನೋಡುವ ಕುತೂಹಲ. ಪಲ್ಸ ಪೋಲಿಯೋ...... ಕಾರ್ಯಕ್ರಮ ಎಂದು ಓದುತ್ತಾ ನಿಂತ. ಅರೆ! ಅವನಿಗೆ ಆಶ್ಚರ್ಯ. ಅವನ ಅಮ್ಮನ ಫೋಟೋ. ಹೌದು, ಬಿಳಿ ಬಟ್ಟೆ ಹಾಕಿದವರು ಪುಟ್ಟ ತಂಗಿಗೆ ಔಷಧ ಹಾಕುತ್ತಿದ್ದಾರೆ. ಅಮ್ಮ ನಗುತ್ತಿದ್ದಾಳೆ. ಸೋನೂಗೆ ತುಂಬಾ ಖುಶಿ ಆಯಿತು. ಅಮ್ಮನನ್ನು ನೋಡುತ್ತಲೇ ಇದ್ದ. ಈ ಫೋಟೋ ನನಗೆ ಬೇಕಲ್ಲ.
ಸೋನು ಸುತ್ತಲೂ ನೋಡಿದ. ಹೇಗಾದರೂ ಮಾಡಿ ಅಮ್ಮನ ಚಿತ್ರ ಕಿತ್ತು ಒಯ್ಯಬೇಕು ಎಂದು ಯೋಚಿಸಿ ನಿಧಾನವಾಗಿ ಮುಂದೆ ಸರಿದು ಚಿತ್ರದ ಹಾಳೆಯ ಒಂದು ಬದಿಯನ್ನು ಎಬ್ಬಿಸಿ ಜಗ್ಗಿದ. ಅಂಟು ಇನ್ನೂ ಒಣಗಿರಲಿಲ್ಲ. ಹಾಳೆ ಪೂತರ್ಿಯಾಗಿ ಕಿತ್ತು ಸೋನು ಕೈಯಲ್ಲಿ ಬಂತು. ಇದನ್ನು ನೋಡಿದ ಪಕ್ಕದ ಜನ 'ಚಿಂದಿ ಹುಡುಗ ಪೋಸ್ಟರ್ ಕಿತ್ತ' ಎಂದು ಕೂಗಿದರು. ಎರಡು ಮೂರು ಜನ ಅವನನ್ನು ಹಿಡಿಯಲು ಬಂದಾಗ ಹೆದರಿದ ಸೋನು ಶಾಲೆಯ ಗೇಟ್ ಒಳಗೆ ಹೊಕ್ಕ. ಅವರು 'ಹಿಡೀರಿ, ಹಿಡೀರಿ' ಎಂದು ಬೆನ್ನ ಹಿಂದೆ ಬಂದಾಗ ಓಡಿ ಶಾಲೆಯ ಕೋಣೆಯೊಂದನ್ನು ಹೊಕ್ಕ. ಮಕ್ಕಳೆಲ್ಲ ಒಮ್ಮೆಗೇ 'ಸೋನು ಬಂದ, ಸೋನು ಬಂದ' ಎಂದು ಕೂಗಿದಾಗ ಕಮಲಾ ಟೀಚರ್ ಬಂದು ಅವನನ್ನು ಅಪ್ಪಿಕೊಂಡರು.
*******
No comments:
Post a Comment