Friday, 28 October 2016

ಸ್ವತಂತ್ರ ಕರ್ನಾಟಕದ ಹರಿಕಾರ, ಹುತಾತ್ಮ ಟಿಪ್ಪು ಸುಲ್ತಾನ್ :

 1
October 24, 2016
ಪರ ವಿರೋಧಗಳಿಂದ ಹೊರತಾದ  ಟಿಪ್ಪು ಸುಲ್ತಾನ್ ಕುರಿತ  ವಾಸ್ತವ ಸಂಗತಿಗಳನ್ನು ತಿಳಿಸುವ ಬರೆಹ ಇದಾಗಿದೆ. ಟಿಪ್ಪುಸುಲ್ತಾನ್ ಜಯಂತಿಯನ್ನು  ಮತೀಯ ನೆಲೆಯಲ್ಲಿ ವಿರೋಧಿಸಲಾಗುತ್ತಿರುವ ಸಂದರ್ಭದಲ್ಲಿ ಸತ್ಯವನ್ನು ಮುನ್ನೆಲೆಗೆ ತರಲು ಬಯಸುವ  ಚರ್ಚೆಯಲ್ಲಿ ನೆರವಾಗುವ ಉದ್ದೇಶ ಈ ಬರಹದ ಹಿಂದಿದೆ. ಈ ಅಂಶಗಳನ್ನು ನಿಮ್ಮ ಚರ್ಚೆಯಲ್ಲಿ ಉಲ್ಲೇಖಿಸುವ, ಬರೆಹಗಳಲ್ಲಿ ತರುವ ಪ್ರಯತ್ನಗಳಾಗುವುದು ಈ ಹೊತ್ತಿನ ಅಗತ್ಯ ಎಂಬ ಅಭಿಪ್ರಾಯ ನಮ್ಮದು. ನಾವು ಈ ಕುರಿತು ಮಾತಾಡೋಣ, ಬರೆಯೋಣ. ಚರಿತ್ರೆಯನ್ನು ತಿರುಚುವ, ಆ ಮೂಲಕ ದ್ವೇಷ ಹರಡುವ ಕೋಮುವಾದಿ ಹುನ್ನಾರವನ್ನು ವಿಫಲಗೊಳಿಸೋಣ.
~ ಬಿ.ಪೀರ್‌ಬಾಷ

ಅಧ್ಯಾಯ 1 ~ ಸ್ವಾತಂತ್ರ್ಯ ಸಮರದ ಮಹಾ ದಂಡನಾಯಕ

ಭಾರತದಿಂದ ಬ್ರಿಟಿಷರನ್ನು ಒದ್ದೋಡಿಸಲು ಪಣತೊಟ್ಟು ನಿಂತಿದ್ದ ದೇಶಪ್ರೇಮಿ ಹೈದರಾಲಿ ತೀವ್ರ ಅನಾರೋಗ್ಯದಿಂದ ತನ್ನ ಬದುಕಿನ ಕೊನೆಯ ಕ್ಷಣಗಳನ್ನು ಎಣಿಸುತ್ತಿದ್ದ. ಆ ಹೊತ್ತು ಆತನ ಪ್ರೀತಿಯ ಮಗ ಟಿಪ್ಪು ದೂರದ ಮಲಬಾರಿನಲ್ಲಿ ಬ್ರಿಟಿಷ್ ಕರ್ನಲ್ ಹಂಬರ್‌ಸ್ಟನ್‌ನೊಡನೆ ಕಾಳಗದಲ್ಲಿ ನಿರತನಾಗಿದ್ದ. ತನ್ನ ದೇಹದಿಂದ ಪ್ರಾಣ ಹೊರಡುವುದು ಖಚಿತವಾಗುತ್ತಲೇ ಆ ವೀರಯೋಧ ಹೈದರ್, ತಾನು ಅರ್ಧಕ್ಕೆ ಬಿಟ್ಟು ಹೊರಡುತ್ತಿರುವ ಕಾರ್ಯ ಪೂರ್ಣಗೊಳಿಸುವ ತನ್ನ ಅಂತಿಮ ಇಚ್ಛಾಪತ್ರವನ್ನು ತನ್ನ ವೀರಪುತ್ರನಿಗೆ ಬರೆದ. ಆ ಇಚ್ಛೆ ಸ್ವಾರ್ಥ ಸುಖದ ಕುರಿತಾಗಿರಲಿಲ್ಲ, ಬದಲಾಗಿ ನಾಡಿನ ಸ್ವಾತಂತ್ರ್ಯದ ಕುರಿತಾಗಿತ್ತು. ಬ್ರಿಟಿಷರ ವಿರುದ್ದ ಹೋರಾಡುತ್ತಾ ರಣರಂಗದಲ್ಲಿ ಪ್ರಾಣ ಬಿಡುತ್ತಿದ್ದ ಆ ವೀರಯೋಧ, ತನ್ನ ವೀರಪುತ್ರನೂ ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ಹೋರಾಟ ಮುಂದುವರೆಸುವಂತೆ ವೀರ ಸಂದೇಶವನ್ನೇ ನೀಡಿ, ಡಿಸೆಂಬರ್ ೭, ೧೭೮೨ರಂದು ಹುತಾತ್ಮನಾದ.

ಯುದ್ಧಭೂಮಿಯಿಂದ ಟಿಪ್ಪು ಮರಳಿದಾಗ ತನ್ನ ಪ್ರೀತಿಯ ತಂದೆಯ ಪ್ರಾಣ ಹೊರಟು ಹೋಗಿತ್ತು. ಅಂತೆಯೇ ತಂದೆ ತನಗಾಗಿ ಬರೆದಿಟ್ಟ ಪತ್ರ ತನ್ನ ಕೈ ಸೇರಿತ್ತು. ಅದು ಹೀಗಿತ್ತು; "
ಮಗನೇ, ಈ ಸಾಮ್ರಾಜ್ಯವನ್ನು ನಿನಗೊಪ್ಪಿಸುತ್ತಿದ್ದೇನೆ. ಇದನ್ನು ನಾನು ನನ್ನ ಪೂರ್ವಜರಿಂದ ಪಡೆದಿದ್ದಲ್ಲ. ಈ ಸಾಮ್ರಾಜ್ಯದ ಆಂತರಿಕ ವ್ಯವಹಾರಗಳ ಬಗ್ಗೆ ನೀನು ಹೆಚ್ಚಿನ ಆತಂಕ ಪಡಬೇಕಿಲ್ಲ. ಆದರೆ ನೀನು ದೂರದೃಷ್ಟಿ ಹೊಂದಿರಬೇಕು. ಔರಂಗಜೇಬನ ಪತನದ ನಂತರ ಏಷಿಯಾದ ಸಾಮ್ರಾಜ್ಯಗಳಲ್ಲಿ ಭಾರತದ ಸ್ಥಾನ ಕುಸಿದಿದೆ. ಈ ನಮ್ಮ ಪ್ರಿಯ ಭೂಮಿ ಹಲವು ಪ್ರಾಂತ್ಯಗಳಾಗಿ ವಿಭಜನೆಹೊಂದಿ ಅವು ಪರಸ್ಪರ ಕಚ್ಚಾಡುತ್ತಿವೆ. ಹಲವು ಗುಂಪುಗಳಾಗಿ ಒಡೆದು ಹೋಗಿರುವ ಜನ ದೇಶಪ್ರೇಮವನ್ನು ಕಳೆದುಕೊಂಡಿದ್ದಾರೆ. ಹಿಂದೂಗಳು ಶಾಂತಿ ಸಂಧಾನದ ಜಪ ಮಾಡುತ್ತಾ ಬ್ರಿಟಿಷರಿಗೆ ಬಲಿಯಾಗಿ ಈ ದೇಶವನ್ನು ಕಾಪಾಡುವ ಶಕ್ತಿ ಕಳೆದುಕೊಂಡಿದ್ದಾರೆ. ಮುಸ್ಲಿಮರು ಹಿಂದೂಗಳಿಗಿಂತ ಹೆಚ್ಚು ಐಕ್ಯತೆ ಹೊಂದಿದ್ದು ಈ ಹಿಂದೂಸ್ತಾನವನ್ನು ಉಳಿಸುವ ಜವಾಬ್ದಾರಿ ಅವರ ಮೇಲಿದೆ.
ಮಗನೇ, ಈ ದೇಶವನ್ನುಳಿಸಲು ಈ ಎಲ್ಲಾ ಶಕ್ತಿಗಳನ್ನು ಒಗ್ಗೂಡಿಸು. ಈ ನಿನ್ನ ಯೋಜನೆಯಲ್ಲಿ ನಿನಗೆ ದೊಡ್ಡ ಆತಂಕ ಉಂಟುಮಾಡುವವರು ಯುರೋಪಿಯನ್ನರೇ ಆಗಿದ್ದಾರೆ. ಭಾರತದ ಬಗ್ಗೆ ಅವರಿಗಿರುವ ಅಸೂಯೆಯನ್ನು ನೀನು ಸೋಲಿಸಬೇಕು. ಇಂದು ಭಾರತದಲ್ಲಿ ಇಂಗ್ಲಿಷರು ಪ್ರಬಲವಾಗಿದ್ದಾರೆ. ಅವರನ್ನು ಸತತ ಸಮರಗಳಿಂದ ಬಲಹೀನಗೊಳಿಸುವ ಅಗತ್ಯವಿದೆ. ಇದಕ್ಕೆ ಕೇವಲ ಭಾರತದ ಸಂಪನ್ಮೂಲಗಳು ಸಾಲುವುದಿಲ್ಲ. ಫ್ರೆಂಚರ ಸಹಾಯದಿಂದ ನೀನು ಬ್ರಿಟಿಷರ ವಿರುದ್ಧ ವಿಜಯ ಸಾಧಿಸಬಲ್ಲೆ. ನಿನ್ನ ಹಲವಾರು ಧೈರ್ಯ-ಸಾಹಸಗಳಿಗೆ ನಾನು ಸಾಕ್ಷಿಯಾಗಿದ್ದೇನೆ. ಆದರೆ ಒಂದನ್ನು ನೆನಪಿಟ್ಟುಕೋ. ನಮ್ಮ ಧೈರ್ಯ-ಸಾಹಸಗಳು ನಮಗೆ ಒಂದು ಸಾಮ್ರಾಜ್ಯವನ್ನು ಗಳಿಸಿಕೊಡಬಲ್ಲವಾದರೂ, ಅದನ್ನು ಉಳಿಸಿಕೊಳ್ಳಲು ಅವು ಸಾಲುವುದಿಲ್ಲ. ಜನರ ತಾಳ್ಮೆಯಿಂದ ನಾವು ಒಂದು ಗದ್ದುಗೆ ಪಡೆಯಬಹುದಾದರೂ, ಸಾಧ್ಯವಾದಷ್ಟು ಬೇಗ ನಾವವರ ಪ್ರೀತಿ ವಿಶ್ವಾಸಗಳನ್ನು ಗೆಲ್ಲದೇ ಹೋದರೆ ಅದನ್ನು ಉಳಿಸಿಕೊಳ್ಳಲು ಆಗುವುದಿಲ್ಲ."
ತಂದೆಯನ್ನು ಕಳೆದುಕೊಂಡ ಟಿಪ್ಪುವಿನಲ್ಲಿ ಬರೀ ದುಃಖವಿರಲಿಲ್ಲ. ತನ್ನ ತಂದೆ ಉಳಿಸಿಹೋದ ಸವಾಲನ್ನು ಪೂರ್ಣಗೊಳಿಸುವ ಛಲವಿತ್ತು. ಬ್ರಿಟಿಷ್ ಸಾಮ್ರಾಜ್ಯವನ್ನು ಕೊನೆಗೊಳಿಸಲೇಬೇಕೆಂಬ ಸಂಕಲ್ಪ ಬಹುಶಃ ಆಹೊತ್ತು ಧೃಡಗೊಂಡಿತು.
ಹೈದರಾಲಿ ಆಶಿಸಿದ್ದು ಕೇವಲ ಮೈಸೂರಿನ ಸ್ವಾತಂತ್ರ್ಯವನ್ನಲ್ಲ, ಬದಲಿಗೆ ಇಡೀ ಹಿಂದುಸ್ಥಾನದ ಸ್ವಾತಂತ್ರ್ಯವನ್ನು. ಹೀಗೆ ತಂದೆಯಿಂದ ಪಡೆದುಕೊಂಡಿದ್ದ, ವಸಾಹತುಶಾಹಿ ವಿರೋಧಿ ದೃಷ್ಟಿಕೋನ ಹಾಗೂ ಬಲಪ್ರಯೋಗದಿಂದಲೇ ಜನರ ವಿಶ್ವಾಸ ಹಾಗೂ ಪ್ರೀತಿಂದ ಸಾಮ್ರಾಜ್ಯ ಕಟ್ಟುವ ಜನಪರ ತಿಳುವಳಿಕೆ ಟಿಪ್ಪುವಿನಲ್ಲಿ ನಂತರ ಹೆಮ್ಮರವಾಗಿ ಬೆಳೆದವು. ೧೭೮೨ರ ನಂತರ ಮೈಸೂರು ಸಾಮ್ರಾಜ್ಯದ ಅಧಿಪತಿಯಾದ ಟಿಪ್ಪು ಸಾಯುವ ತನಕವೂ ಈ ಮೂಲ ಉದ್ದೇಶಗಳಿಂದ ಒಂದಿಷ್ಟೂ ವಿಚಲಿತನಾಗಲಿಲ್ಲ.
ಇದೀಗ ಟಿಪ್ಪು ಕೇವಲ ತಂದೆಯನ್ನು ಮಾತ್ರವಲ್ಲ, ದೇಶಪ್ರೇಮಿ, ಯುದ್ಧದ ಮಾರ್ಗದರ್ಶಕ, ಸೇನಾಧಿಪತಿ ಹಾಗೂ ಮುತ್ಸದ್ಧಿಯನ್ನೂ ಕಳೆದುಕೊಂಡು ಏಕಾಂಗಿಯಾಗಿದ್ದ. ಆದರೆ ಹೈದರ್ ಸಾಯುವ ಮುನ್ನ ಟಿಪ್ಪುವಿಗೆ ಭಾರತವನ್ನು ವಸಾಹತುಶಾಹಿ ಆಕ್ರಮಣದಿಂದ ಉಳಿಸಲು ಬೇಕಿದ್ದ ದೇಶಪ್ರೇಮಿ ಸಮರದ ಪ್ರಣಾಳಿಕೆಯನ್ನು ಸಿದ್ಧಗೊಳಿಸಿಕೊಟ್ಟಿದ್ದ.

ಹೈದರ್ ಅಲಿ ಅದಿಕಾರಕ್ಕೆ ಬರುವ ಮೊದಲು ೧೮ನೇ ಶತಮಾನದ ಭಾರತದ ರಾಜಕಾರಣ ಸಂಕ್ರಮಣ ಸ್ಥಿತಿಯಲ್ಲಿತ್ತು. ಮೊಗಲರ ಕೇಂದ್ರೀಯ ಆಳ್ವಿಕೆ ಕುಸಿದ ನಂತರ ಅಧೀನ ರಾಜಸಂಸ್ಥಾನಗಳು ಧಿಡೀರನೆ ಸ್ವಾತಂತ್ರ್ಯ ಘೋಸಿಕೊಂಡು ಪರಸ್ಪರ ಕಚ್ಚಾಡುತ್ತಿದ್ದವು. ದಕ್ಷಿಣದಲ್ಲೂ ಪ್ರಬಲಶಕ್ತಿಗಳಾದ ಮರಾಠರು, ಹೈದ್ರಾಬಾದಿನ ನಿಜಾಮ ಮೈಸೂರು ಸಂಸ್ಥಾನವನ್ನು ನುಂಗಲು ಕಾಯುತ್ತಿದ್ದರು.
ಈ ಪರಿಸ್ಥಿತಿಯ ಸಂಪೂರ್ಣ ಲಾಭ ಪಡೆದ ಬ್ರಿಟಿಷರು ತಮ್ಮ ಕುಖ್ಯಾತ "ಒಡೆದಾಳುವ ನೀತಿ"ಯಂತೆ ಒಂದು ರಾಜಸಂಸ್ಥಾನದ ವಿರುದ್ಧ ಮತ್ತೊಂದು ರಾಜಸಂಸ್ಥಾನಕ್ಕೆ ಸಹಾಯ ಮಾಡುತ್ತಾ ನಂತರ ಎರಡನ್ನೂ ಕಬಳಿಸುತ್ತಾ ತಮ್ಮ ಸಾಮ್ರಾಜ್ಯವನ್ನು ವಿಸ್ತರಣೆ ಮಾಡುತ್ತಾ ಮುಂದುವರಿದಿದ್ದರು. ಭಾರತದ ಮೇಲಿನ ಪರಮ ಸ್ವಾಮ್ಯಕ್ಕೆ ಬ್ರಿಟಿಷ್-ಫ್ರೆಂಚ್ ಈ ಎರಡು ಯೂರೋಪ್ ಶಕ್ತಿಗಳ ನಡುವೆ ಪೈಪೋಟಿ ನಡೆದಿತ್ತು. ಬ್ರಿಟಿಷರ ಕುಟಿಲ ರಾಜಕಾರಣ, ಉನ್ನತ ಸೈನಿಕ ಸಾಮರ್ಥ್ಯ ಹಾಗೂ ರಾಜಸಂಸ್ಥಾನಗಳ ಅನೈಕ್ಯಮತ್ಯ ಇವೆಲ್ಲವೂ ೧೮ನೇ ಶತಮಾನದಲ್ಲಿ ಬ್ರಿಟಿಷ್ ಸಾಮ್ರಾಜ್ಯದ ವಿಸ್ತರಣೆ ಹಾಗೂ ಈ ದೇಶದ ದಾಸ್ಯಕ್ಕೆ ದಾರಿ ಮಾಡಿಕೊಟ್ಟಿದ್ದವು.
ಇವುಗಳಷ್ಟೇ ಮುಖ್ಯವಾದ ಮತ್ತೊಂದು ಕಾರಣವೆಂದರೆ ಯಾವುದೇ ರಾಜಮನೆತನಗಳಿಗೆ ಜನಬೆಂಬಲ ಇಲ್ಲದಿದ್ದುದು. ಎಲ್ಲ ರಾಜಮನೆತನಗಳೂ ರೈತರ ರಕ್ತ ಹೀರುತ್ತಿದ್ದ ಅರಸೊತ್ತಿಗೆಗಳಾಗಿದ್ದವು. "ಯಾವ ಅರಸ ಬಂದರೂ ರಾಗಿ ಬೀಸೋದು ತಪ್ಪದ" ಜನ, ಈ ಯುದ್ಧಗಳಲ್ಲಿ ತಟಸ್ಥರಾಗಿ ಉಳಿದಿದ್ದು ಸಹ ಬ್ರಿಟಿಷ್  ವಿಜಯಕ್ಕೆ ಮತ್ತೊಂದು ಕಾರಣ ಒದಗಿಸಿತು.

ಇತ್ತ ಮೈಸೂರು ರಾಜ್ಯದಲ್ಲಿ; ಒಳಜಗಳ ಹಾಗೂ ಮಂತ್ರಿಗಳಾದ ನಂಜರಾಜ ಮತ್ತು ದೇವರಾಜರು ಅರಸನನ್ನು ಬದಿಗೊತ್ತಿ ಸಿಂಹಾಸನವನ್ನು ಆಕ್ರಮಿಸಲು ನಡೆಸುತ್ತಿದ್ದ ಕಿತ್ತಾಟದಿಂದ ಸಂಸ್ಥಾನ ಸತ್ವಹೀನವಾಗಿತ್ತು. ಸುತ್ತುವರೆದ ಶತ್ರುಗಳು ಮೈಸೂರನ್ನು ನುಂಗಲು ಹೊಂಚು ಹಾಕಿದ್ದರು. ಆಗ ಒಂದು ಸೇನಾ ತುಕಡಿಯ ಮುಖ್ಯಸ್ಥನಾಗಿದ್ದ ಹೈದರ್ ಅಂತಹ ಆಪತ್ತಿನಿಂದ ಸಂಸ್ಥಾನವನ್ನು ಉಳಿಸಿದ. ಇದಕ್ಕೆ ಮೆಚ್ಚುಗೆಯಾಗಿ ಹೈದರ್ ಬಡ್ತಿಗೊಂಡು ಸೇನಾ ದಂಡನಾಯಕನಾದ. ಕೊನೆಗೆ ತಾನೇ ಖುದ್ದು ದೇವರಾಜ, ಲಿಂಗರಾಜರ ನಡುವೆ ಮೈತ್ರಿ ಏರ್ಪಡಿಸಿದ. ಆದರೆ ಆನಂತರ ನಂಜರಾಜ ತೀರಿಕೊಂಡ. ದೇವರಾಜ ನಿವೃತ್ತಿಯಾದ. ಇಂತಹ ಸಂದರ್ಭದಲ್ಲಿ ಮೈಸೂರು ಅರಸುವಂಶದ ಒಳಜಗಳದಿಂದ ಉಂಟಾದ ಅರಾಜಕ ಪರಿಸ್ಥಿತಿಯನ್ನು ಬಳಸಿಕೊಂಡು ಮೈಸೂರನ್ನು ನುಂಗಲು ಬಂದ ಮರಾಠರಿಂದ ಮೈಸೂರು ರಾಜ್ಯವನ್ನು ರಕ್ಷಿಸುವ ಜವಾಬ್ದಾರಿ ಹೈದರನ ಪಾಲಿನದಾತು. ರಾಜಖಡ್ಗ ಹಿಡಿದ ಮರುಕ್ಷಣದಿಂದಲೇ ಹೈದರಾಲಿ ಆ ಖಡ್ಗವನ್ನು ಒಂದೆಡೆ ದೇಶವನ್ನೇ ಆಕ್ರಮಿಸುತ್ತಾ ಬರುತ್ತಿದ್ದ ಬ್ರಿಟಿಷರ ವಿರುದ್ಧವೂ, ಮತ್ತೊಂದೆಡೆ ಜನಕಂಟಕರಾಗಿದ್ದ ಪಾಳೆಗಾರರ ವಿರುದ್ಧವೂ ಬೀಸಲಾರಂಭಿಸಿದ. ಇದರಿಂದಾಗಿ ಒಂದೆಡೆ ಹಳ್ಳಿಯಲ್ಲಿ ರೈತರನ್ನು ಲೂಟಿ ಹೊಡೆದು ಸುಲಿಯುತ್ತಿದ್ದ ಪಾಳೆಗಾರರ ಕಾಟದಿಂದ ರೈತರು ಬಿಡುಗಡೆ ಪಡೆದರು. ಹೈದರಾಲಿ ರೈತ ಮಕ್ಕಳನ್ನು ಸೇರಿಸಿಕೊಂಡು ಸೈನ್ಯವನ್ನು ಬೃಹತ್ ಮಟ್ಟದಲ್ಲಿ ವಿಸ್ತರಿಸಿದ. ಬ್ರಿಟಿಷರನ್ನು ಈ ದೇಶದ ಪ್ರಥಮ ಶತ್ರುಗಳೆಂದು ಪರಿಗಣಿಸಿದ.

ಹೈದರ್, ಬ್ರಿಟಿಷರನ್ನು ಮೀರಿಸುವ ರಾಜತಾಂತ್ರಿಕ ನೈಪುಣ್ಯದಿಂದ ಅವರ ವಿರುದ್ಧ ಮರಾಠರು, ನಿಜಾಮ ಹಾಗೂ ಫ್ರೆಂಚರೊಡನೆ ಸೈನಿಕ ಒಕ್ಕೂಟ ಸ್ಥಾಪಿಸಿಕೊಂಡು ೧೭೬೭-೬೯ರ ಮೊದಲ ಆಂಗ್ಲ-ಮೈಸೂರು ಯುದ್ಧವನ್ನು ಎದುರಿಸಿದ. ಹೈದರನ ಈ ಎಲ್ಲ ರಾಜತಾಂತ್ರಿಕ ಹಾಗೂ ಸೈನಿಕ ಕ್ರಮಗಳಲ್ಲಿ ಸರಿಸಾಟಿಯಾಗಿ ಭಾಗವ"ಸಿದ ಹದಿಹರೆಯದ ಟಿಪ್ಪು ಈ ಯುದ್ಧದಲ್ಲೂ ಪ್ರಮುಖ ಪಾತ್ರ ವಹಿಸಿದ. ಪರಿಣಾಮವಾಗಿ ಮೈಸೂರಿನ ಸೈನ್ಯ ಬ್ರಿಟಿಷರ ಕೇಂದ್ರವಾಗಿದ್ದ ಮದ್ರಾಸಿಗೆ ಕೇವಲ ಹತ್ತು ಕಿ.ಮೀ. ದೂರದಲ್ಲಿ ಬಿಡಾರಹೂಡಿ ಸವಾಲೊಡ್ಡಿ ನಿಂತಿತು. ಕೇವಲ ಹನ್ನೆರಡು ವರ್ಷಗಳ ಹಿಂದೆ ೧೭೫೭ರ ಪ್ಲಾಸಿ ಕದನದಲ್ಲಿ ವಿಜಯಿಯಾಗಿ, ಭಾರತವನ್ನೇ ನುಂಗುವ ಯೋಜನೆ ರೂಪಿಸಿದ್ದ ಬ್ರಿಟಿಷ್ ವಸಾಹತುಶಾಹಿ, ೧೨ ವರ್ಷಗಳ ನಂತರ ೧೭೬೯ರಲ್ಲಿ ಹೈದರ್ ನೇತೃತ್ವದ ಮೈಸೂರು ಸೈನ್ಯದ ಮುಂದೆ ಶರಣಾಗಿ ನಿಂತಿತು.
ಸೆಂಟ್‌ಥೋಮ್, ಆರಣಿ, ಕಾವೇರಿಪಾಕ್, ಮಚಲಿಪಟ್ಟಣ, ಬಕ್ಸರ್ ಮುಂತಾದ ಕಡೆಗಳಲ್ಲಿ ಸರಣಿ "ಜಯ ಪಡೆದ ಬ್ರಿಟಿಷ್ ವಸಾಹತು ನೌಕೆ ಹೈದರನ ಮೈಸೂರು ಸೈನ್ಯದ ಮುಂದೆ ತಲೆಬಾಗಿ ನಿಂತು ೧೭೬೯ರ ಏಪ್ರಿಲ್ ೨ ರಂದು ಶಾಂತಿ ಒಪ್ಪಂದಕ್ಕೆ ಮುಂದಾತು.ಈ ಪ್ರಥಮ ವಸಾಹತುಶಾಹಿ ವಿರೋಧಿ ಯುದ್ಧದಲ್ಲಿ ಮೈಸೂರು ಪಡೆದ ವಿಜಯವು ಬ್ರಿಟಿಷರ ವಿರುದ್ಧ ಭಾರತೀಯ ಶಕ್ತಿಯೊಂದರ ಪ್ರಪ್ರಥಮ ವಿಜಯವೇ ಆಗಿತ್ತು.
ಈ ಯುದ್ಧದಲ್ಲಿ ಹೈದರ್ ಹಾಗೂ ಟಿಪ್ಪು ಸ್ಪಷ್ಟವಾಗಿ ಗ್ರಹಿಸಿದ್ದ ಸಮಕಾಲೀನ ಸತ್ಯವೊಂದಿತ್ತು. ಬ್ರಿಟಿಷ್ ವಸಾಹತುಶಾಹಿಗಳು ಭಾರತದ ಶಕ್ತಿಗಳ ನಡುವೆ ತೂರಿ ಇಡೀ ಭಾರತವನ್ನು ನುಂಗುತ್ತಿರುವುದನ್ನು ಅವರು ಮನಗಂಡರು. ಬ್ರಿಟಿಷ್ ವಸಾಹತುಶಾಹಿಗಳು ಎಲ್ಲಾ ಭಾರತೀಯ ಶಕ್ತಿಗಳ ಪ್ರಥಮ ಶತ್ರುಗಳು ಹಾಗೂ ಅವರ ವಿರುದ್ಧ ಭಾರತದ ಶಕ್ತಿಗಳು ತಮ್ಮ ನಡುವಿನ ಕಚ್ಚಾಟವನ್ನು ನಿಲ್ಲಿಸಿ ಒಗ್ಗಟ್ಟಿನ ಹೋರಾಟ ನಡೆಸಬೇಕು ಎಂಬ ಐತಿಹಾಸಿಕ ಅಗತ್ಯವನ್ನು ಅರಿತುಕೊಂಡಿದ್ದರು.
ಹೈದರ್-ಟಿಪ್ಪು ಕೂಡಲೇ ಈ ದಿಕ್ಕಿನಲ್ಲಿ ಕಾರ್ಯೋನ್ಮುಖರಾಗಿದ್ದರು. ಮೈಸೂರು ಸಂಸ್ಥಾನದ ಪಾರಂಪರಿಕ ಶತೃಗಳಾದ ಮರಾಠರೊಡನೆ, ಹೈದ್ರಾಬಾದಿನ ನಿಜಾಮನೊಡನೆ ಶಾಂತಿ ಸಂಧಾನ ಮಾಡಿಕೊಂಡು ಬಲವಾದ ಬ್ರಿಟಿಷ್ ವಿರೋಧಿ ಸೈನಿಕ ಒಕ್ಕೂಟ ಸ್ಥಾಪಿಸಿಕೊಂಡರು. ಬ್ರಿಟಿಷ್ ವಿರೋಧಿ ಸಂಗ್ರಾಮದಲ್ಲಿ ಅವರೊಡನೆ ವೈರುಧ್ಯ ಹೊಂದಿದ್ದ ಮತ್ತೊಂದು ಐರೋಪ್ಯ ಶಕ್ತಿಯಾದ ಫ್ರೆಂಚರ ಸಹಾಯವನ್ನೂ ಪಡೆದುಕೊಂಡರು. ಈ ಎಲ್ಲಾ ಸಮರ ಸಿದ್ಧತೆಗಳ ನಂತರ ಬ್ರಟಿಷರನ್ನು ಒದ್ದೋಡಿಸುವ ಉದ್ದೇಶದಿಂದ ಎರಡನೇ ಆಂಗ್ಲೋ-ಮೈಸೂರು ಯುದ್ಧ ೧೭೮೦ ರಲ್ಲಿ ಪ್ರಾರಂಭವಾಯಿತು.
ಇದಕ್ಕಾಗಿ ಹೈದರ್ ಮೈಸೂರು ಸಂಸ್ಥಾನ ಒಂದರಿಂದಲೇ ಒಂದು ಲಕ್ಷದಷ್ಟು ಸೈನ್ಯವನ್ನು ಜಮಾಯಿಸಿದ್ದ. ಈ ಯುದ್ಧದುದ್ದಕ್ಕೂ ಮೈಸೂರಿನ ಪಡೆಗಳು ಪ್ರದರ್ಶಿಸಿದ್ದ ಶೌರ್ಯ-ಸಾಮರ್ಥ್ಯಗಳನ್ನು ಬ್ರಿಟಿಷರು-ಫ್ರೆಂಚರು ಸಹ ಗುರುತಿಸಬೇಕಾಯಿತು. ಉದಾಹರಣೆಗೆ ಹೈದರನ ಸೈನ್ಯಗಳು ಪೂರ್ವ ಕರಾವಳಿಯ ಕಾಂಜೀವರಂ ಮುಂತಾದವುಗಳನ್ನೆಲ್ಲಾ ವಶಪಡಿಸಿಕೊಂಡು ಬ್ರಿಟಿಷ್ ಕೋಟೆಯಾದ ಫೋರ್ಟೋನೋವೋದ ತನಕ ಬಂದಿದ್ದವು. ಪೊಲಿಯೂರು ಎಂಬಲ್ಲಿ ಕರ್ನಲ್ ಬೈಲಿಯೊಡನೆ ಸಂಭವಿಸಿದ ಕಾಳಗದಲ್ಲಿ ಆತನನ್ನು ಸಂಪೂರ್ಣವಾಗಿ ಸೋಲಿಸಲಾಯಿತು. ಬಕ್ಸರ್ ಕದನದ ಬ್ರಿಟೀಷ್ ಹೀರೋ ಎಂಬ ಪದಕ ಧರಿಸಿ ಬಂದಿದ್ದ ಹೆಕ್ಟರ್ ಮನ್ರೋ ಹಾಡುಹಗಲೇ ಮದ್ರಾಸಿಗೆ ಪಲಾಯನ ಮಾಡುವಂತಾಯಿತು. ಇತಿಹಾಸ ತಜ್ಞರಪ್ರಕಾರ ಆ ಸಂದರ್ಭದಲ್ಲಿ ಹೈದರನ ಸೈನ್ಯ ಇನ್ನಷ್ಟು ಮುಂದುವರೆದಿದ್ದೇ ಆಗಿದ್ದಲ್ಲಿ ಮದ್ರಾಸ್ ಹೈದರನ ಕೈವಶವಾಗುತ್ತಿತ್ತು!
ನೇರ ಕಾಳಗ ಹಾಗೂ ಸಮರಗಳಿಂದ ಮೈಸೂರನ್ನು ಗೆಲ್ಲಲು ಅಸಾಧ್ಯವೆಂದು ಮನಗಂಡ ಬ್ರಿಟಿಷರು ತಮ್ಮ ವಸಾಹತುಶಾಹಿ ಆಯುಧಗಳಾದ ಕುತಂತ್ರ, ದ್ರೋಹ ಹಾಗೂ ಒಡೆದಾಳುವ ನೀತಿಗಳ ಮೊರೆಹೋದರು. ಬ್ರಿಟಿಷರ ವಿರುದ್ಧ ಹೈದರನ ನೇತೃತ್ವದಲ್ಲಿ ಸೈನಿಕ ಒಕ್ಕೂಟ ಸ್ಥಾಪನೆಯಾಗಿದ್ದರೂ, ಇವರಿಗಿದ್ದ ದೇಶಪ್ರೇಮ, ದೂರದೃಷ್ಟಿ ಉಳಿದ ರಾಜರಿಗಿರಲಿಲ್ಲ. ಮರಾಠರು, ನಿಜಾಮರು ತಮ್ಮ ತಮ್ಮ ಸಂಕುಚಿತ ಸ್ವಾರ್ಥ ಹಿತಾಸಕ್ತಿಗಳಿಗಾಗಿ ಈ ಒಕ್ಕೂಟ ಸೇರಿದ್ದರು. ಇದನ್ನು ಗ್ರಹಿಸಿದ ವಸಾಹತುಶಾಹಿಗಳು ನಿಜಾಮ ಹಾಗೂ ಮರಾಠರೊಡನೆ ಪ್ರತ್ಯೇಕವಾಗಿ "ಸಾಲ್‌ಬಾಯ್ " ಒಪ್ಪಂದವನ್ನು ಮಾಡಿಕೊಂಡು ಬ್ರಿಟಿಷ್ ವಿರೋಧಿ ಭಾರತೀಯ ಒಕ್ಕೂಟವನ್ನು ಮುರಿದರು. ಪರಿಣಾಮವಾಗಿ ಮರಾಠರು ಯುದ್ಧದಿಂದ ಹಿಂದೆ ಸರಿದರು. ನಿಜಾಮನ ಪಡೆ ಒಂದು ಗುಂಡನ್ನೂ ಹಾರಿಸಲಿಲ್ಲ. ಇದೇ ಹೊತ್ತಿನಲ್ಲಿ ಯುರೋಪಿನಲ್ಲಿ ಬ್ರಿಟಿಷ್-ಫ್ರೆಂಚರ ನಡುವೆ ಶಾತಿಸ್ಥಾಪನೆಯಾಗಿದ್ದರಿಂದ ಫ್ರೆಂಚರೂ ಈ ಒಕ್ಕೂಟಕ್ಕೆ ಬೆಂಬಲ ಹಿಂತೆಗೆದುಕೊಂಡರು.

ಬ್ರಿಟಿಷ್ ಸಾಮ್ರಾಜ್ಯವನ್ನು ಬಗ್ಗುಬಡಿಯಬೇಕೆಂಬ ಮಹಾ ಉದ್ದೇಶವನ್ನು ಮರಾಠರು, ನಿಜಾಮರು ಸ್ವಾರ್ಥಕ್ಕಾಗಿ ಭಗ್ನಗೊಳಿಸಿ ದ್ರೋಹಗೈದ ವಿಷಾದದ ಸಂದರ್ಭದಲ್ಲಿಯೇ ಹೈದರಾಲಿಯು ಕೊನೆಯುಸಿರೆಳೆದಿದ್ದು. ಆತ ರಣರಂಗದಲ್ಲಿ ಪ್ರಾಣಬಿಟ್ಟನೇ ಹೊರತು ಮೈಸೂರು ಸಂಸ್ಥಾನದ ಸ್ವಾತಂತ್ರ್ಯವನ್ನುಬಿಟ್ಟುಕೊಡಲಿಲ್ಲ. ಮಾತ್ರವಲ್ಲ, ತನ್ನ ಮಗನಾದ ಟಿಪ್ಪುವಿನಲ್ಲೂ ಬ್ರಿಟಿಷ್ ವಿರೋಧಿ ಯುದ್ಧವನ್ನು ಮುನ್ನಡೆಸುವ ಸಂಕಲ್ಪ ಮತ್ತು ಸಾಮರ್ಥ್ಯವನ್ನು ಸಿದ್ಧಗೊಳಿಸಿದ್ದ.
ಹೈದರಾಲಿ ಬಿಟ್ಟುಹೋದ ಪಟ್ಟವೇರಲು ಟಿಪ್ಪುವಿಗೆ ಕಷ್ಟವೇನಾಗಲಿಲ್ಲ. ಏಕೆಂದರೆ ಹೈದರಾಲಿಯಾಗಲಿ, ಟಿಪ್ಪುವಾಗಲಿ ದಂತಗೋಪುರದಲ್ಲಿ ಕುಳಿತು ಸುಖದ ಸುಪ್ಪತ್ತಿಗೆಯಲ್ಲಿ ಬದುಕುವ ಸುಖಲೋಲುಪ ದೊರೆಗಳಾಗಿರಲಿಲ್ಲ. ಬದಲಿಗೆ ಸಾಮಾನ್ಯ ಸೈನಿಕರೊಡನೆ ಸಾವು-ಬದುಕನ್ನೂ ಸರಿಸiವಾಗಿ ಹಂಚಿಕೊಂಡು ನಿಂತ ನಿಜವಾದ ನಾಯಕರಾಗಿದ್ದರು. ಅಷ್ಟುಮಾತ್ರವಲ್ಲ, ಇವರಿಬ್ಬರ ಆಳ್ವಿಕೆಯು ಜನತೆಯ ನಿತ್ಯ ಬದುಕಿನಲ್ಲಿ ತಂದ ಪ್ರಗತಿಶೀಲ ಬದಲಾವಣೆ ಅವರಿಗೆ ಅಪಾರ ಜನಾನುರಾಗವನ್ನು ಗಳಿಸಿಕೊಟ್ಟಿತ್ತು. ಹೈದರನ ಮರಣದ ನಂತರ ಮರಾಠರು, ಇಂಗ್ಲಿಷರು ಕೊನೆಗೆ ಮೈಸೂರಿನ ರಾಣಿಯೂ ಸಹ ಜೊತೆಗೂಡಿ ಟಿಪ್ಪುವನ್ನು ಪದಚ್ಯುತಗೊಳಿಸಲು ಸಂಚು ಹೂಡಿದರು. ಆದರೆ ಟಿಪ್ಪೂವಿನ ಅಪ್ರತಿಮ ಸಾಹಸ ಹಾಗೂ ಜನಪ್ರಿಯತೆ ಆತನನ್ನು ಈ ಸಂಚಿನಿಂದ ಕಾಪಾಡಿದವು. ಹೈದರನ ನಂತರ ಮುಂದುವರೆದ ಎರಡನೇ ಮೈಸೂರು ಯುದ್ಧದಲ್ಲಿ ಮೊದಲಿಗೆ ಬ್ರಿಟಿಷರು ಮೇಲುಗೈ ಪಡೆದರೂ ನಂತರ ಟಿಪ್ಪುವಿನ ನೇತೃತ್ವದಲ್ಲಿ ಮೈಸೂರಿನ ಸೈನ್ಯ ಬ್ರಿಟಿಷರನ್ನು ಮಂಡಿಯೂರಿ ಮಣಿಸಿತು. ೧೭೮೪ರ ಮಾರ್ಚ್ ೧೧ ರಂದು ಮಂಗಳೂರು ಒಪ್ಪಂದಕ್ಕೆ ಬ್ರಿಟಿಷರು ಸಹಿ ಹಾಕಲೇಬೇಕಾಯಿತು. ಹೈದರಾಲಿಯ ಸೈನ್ಯದಲ್ಲಿದ್ದ ಫ್ರೆಂಚ್ ಅಧಿಕಾರಿಯೊಬ್ಬ ಇದನ್ನು "ಭಾರತದ ಇತಿಹಾಸದಲ್ಲಿ ಬ್ರಿಟಿಷರ ಈ ಸೋಲಿಗೆ ಸಮವಾದ ಮತ್ತೊಂದು ಉದಾಹರಣೆಯಿಲ್ಲ" ಎಂದು ಬಣ್ಣಿಸಿದ್ದ. ಅಷ್ಟುಮಾತ್ರವಲ್ಲ, ಬ್ರಿಟಿಷ್ ಸೇನಾಪಡೆಗಳ ಶೇ. ೧೦ರಷ್ಟನ್ನು ಅಂದರೆ ೪೦೦೦ ಸೈನಿಕರನ್ನು ಮೈಸೂರು ಸೈನ್ಯ ಸೆರೆಹಿಡಿದಿತ್ತು. ಭಾರತದ ಇತಿಹಾಸದಲ್ಲಿಯೇ ಇಷ್ಟೊಂದು ಪ್ರಮಾಣದಲ್ಲಿ ಬ್ರಿಟಿಷ್ ಸೈನಿಕರನ್ನು ಸೆರೆಹಿಡಿದಿದ್ದ ಮತ್ತೊಂದು ಉದಾಹರಣೆಯೂ ಇರಲಿಲ್ಲ.

ಈ ಸೋಲಿನಿಂದ ಬ್ರಿಟಿಷರು ತಮ್ಮ ವಿರುದ್ಧದ ಭಾರತೀಯ ಶಕ್ತಿಗಳ ಒಗ್ಗಟ್ಟನ್ನು ಮುರಿಯಲು, ಅದರಲ್ಲೂ ವಿಶೇಷವಾಗಿ ಟಿಪ್ಪುವಿನ ವಿರುದ್ಧ ದಕ್ಷಿಣ ಭಾರತದ ರಾಜರನ್ನು ಒಗ್ಗೂಡಿಸಲು ಪ್ರಯತ್ನಿಸಿದರು. ಅದುವರೆಗೆ ಬ್ರಿಟಿಷರು ದಕ್ಷಿಣ ಭಾರತದಮಹಾಶಕ್ತಿಯಾದ ಮರಾಠರ ವಿರುದ್ಧ ಮೈಸೂರು ಸಂಸ್ಥಾನವನ್ನು ಬಳಸಿಕೊಳ್ಳಲು ಯತ್ನಿಸಿದ್ದರು. ಈ ಕುರಿತಂತೆ ಮದ್ರಾಸಿನ ಗವರ್ನರ್ ಆಗಿದ್ದ ಥಾಮಸ್‌ಮನ್ರೋ ಹೀಗೆ ಬರೆಯುತ್ತಾನೆ:
"ಬಹಳ ದಿನಗಳಿಂದಲೂ ನಮ್ಮ ದೇಶದಲೂ, ಇಲ್ಲೂ ಟಿಪ್ಪುವನ್ನು ನಮ್ಮ ಹಾಗೂ ಮರಾಠರ ನಡುವಿನ ಬೇಲಿಯನ್ನಾಗಿ ಬಳಸಿಕೊಳ್ಳಬೇಕೆನ್ನುವುದು ರಾಜಕೀಯ ತಂತ್ರವಾಗಿ ಮಾನ್ಯಮಾಡಲ್ಪಟ್ಟಿದೆ. ಸಾಕಷ್ಟು ಅರಿವಿಲ್ಲದೆ ಈ ಯೋಜನೆಯನ್ನು ರೂಪಿಸಲಾಗಿದ್ದು ಪುನರ್ ವಿಮರ್ಶೆಗೆ ಗುರಿಪಡಿಸದೆ ಮುಂದುವರೆಸಲಾಗುತ್ತಿದೆ. ಇದು ದುರ್ಬಲ ಶತೃವನ್ನು ಸೋಲಿಸಲು ಪ್ರಬಲಶತೃವಿನ ಆಸರೆ ಪಡೆದಂತೆ. ಒಂದೆಡೆ ವಿಶ್ವದಲ್ಲೇ ಅತ್ಯಂತ ಸಮರ್ಥ ಸರ್ವಾಧಿಕಾರಿ ಚಕ್ರಾಧಿಪತ್ಯ ಹೊಂದಿರುವ, ನಾಗರಿಕ ಹಾಗೂ ಸೈನಿಕ ವಿಭಾಗಗಳೆರಡೂ ಅತ್ಯಂತ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿರುವ, ಶಿಕ್ಷೆಗೆ ಗುರಿಪಡಿಸಿ ಸಾಮ್ರಾಜ್ಯದ ಪ್ರತಿಯೊಬ್ಬ ಪ್ರಜೆಗೂ ನಿಷ್ಪಕ್ಷಪಾತ ನ್ಯಾಯ ಒದಗಿಸುತ್ತಾ ಅವರೆಲ್ಲರ ಪ್ರೀತಿ ವಿಶ್ವಾಸ ಪಡೆದಂತಹ ಸೈನಿಕರಿಂದ, ಹೊಸ ಉತ್ಸಾಹ ಸ್ಪೂರ್ತಿಂದ ತುಂಬಿ ತುಳುಕುತ್ತಿರುವ ಮೈಸೂರು ಸೈನ್ಯ. ಮತ್ತೊಂದೆಡೆ ಪ್ರತ್ಯೇಕ ಪ್ರತ್ಯೇಕವಾದ ಸ್ವತಂತ್ರ ಪಾಳೆಪಟ್ಟುಗಳನ್ನು ಆಳುತ್ತಾ, ತಮ್ಮ ತಮ್ಮ ವ್ಯಕ್ತಿಗತ ಸ್ವಾರ್ಥ ಸಾಧನೆಗೆ ಕಚ್ಚಾಡುತ್ತಾ ತಾತ್ಕಾಲಿಕವಾಗಿ ಒಂದಾಗುತ್ತಾ ತಮ್ಮ ಸ್ವಾರ್ಥ ಹಿತಾಸಕ್ತಿಗೆ ಸಾರ್ವಜನಿಕ ಪ್ರಯೋಜನವನ್ನು ತೊರೆದುಬಿಡುವ ಮರಾಠ ಸಾಮ್ರಾಜ್ಯ! ಹೀಗಿರುವಾಗ ಮರಾಠ ಸಾಮ್ರಾಜ್ಯ ಇಂಗ್ಲಿಷರೆದುರು ಎಂದಿಗೂ ಸವಾಲಾಗುವುದಿಲ್ಲ. ನಮ್ಮ ನಿಜವಾದ ಶತ್ರು ಟಿಪ್ಪು."

No comments:

Post a Comment