Thursday 26 October 2017

ಬಡವರ ಪಡಿತರ ಬೇಳೆಕಾಳು; ಹುಳ ಹಿಡಿದು ಹಾಳಾದರೂ ವಿತರಿಸದ ಸರ್ಕಾರ- ಸಿಪಿಐ(ಎಂ) ತೀವ್ರ ಖಂಡನೆ

ಬಡವರ ಪಡಿತರ ಬೇಳೆಕಾಳು; ಹುಳ ಹಿಡಿದು ಹಾಳಾದರೂ ವಿತರಿಸದ ಸರ್ಕಾರ- ಸಿಪಿಐ(ಎಂ) ತೀವ್ರ ಖಂಡನೆ
ಮಾಧ್ಯಮಗಳ ಮೂಲಕ ವರದಿಯಾದಂತೆ ಜಿಲ್ಲೆಯಲ್ಲಿ ರೇಷನ್ ವ್ಯವಸ್ಥೆಗಾಗಿ ಬಂದಿರುವ ಸಾವಿರಾರು ಕ್ವಿಂಟಲ್ ಬೇಳೆ ಹಾಳಾಗುತ್ತಿರುವ ಬೆಳವಣಿಗೆ ಕುರಿತು ಭಾರತ ಕಮ್ಯುನಿಷ್ಟ ಪಕ್ಷ (ಮಾರ್ಕ್ಸವಾದಿ) ಉತ್ತರ ಕನ್ನಡ ಜಿಲ್ಲಾ ಸಮಿತಿ ತನ್ನ  ತೀವ್ರ ಆತಂಕ ವ್ಯಕ್ತಪಡಿಸುತ್ತದೆ. ಈ ಹಿಂದೆಯೂ ಕೆಲವು ಬಾರಿ ಪಡಿತರ ಧಾನ್ಯ ಹಾಳಾಗಿದ್ದುದು ಹೊರಬಂದಿದೆ. ಈಗಾಗಲೇ ರೇಷನ್ ಪಡೆಯಲು ಮತ್ತು ಬಿಸಿಯೂಟಕ್ಕೆ ಆಧಾರ್ ಕಡ್ಡಾಯ ಎಂದು ಕೇಂದ್ರ ಸರ್ಕಾರ ಆದೇಶಿಸಿರುವುದರಿಂದ ಬಡಜನತೆ ಆಹಾರದ ಕೊರತೆಯಿಂದ ಇನ್ನೂ ಹೆಚ್ಚು ಬಳಲುವಂತಾಗುತ್ತಿದೆ. ಈಗಾಗಲೇ ಜಿಲ್ಲೆಯ ಕೆಲವೆಡೆ ತೀವ್ರ ಹಸಿವಿನಿಂದ ಕೆಲವರು ಸಾವನ್ನಪ್ಪಿದ್ದಾರೆಂದು ಆಪಾದನೆ ಕೂಡ ಕೇಳಿ ಬರುತ್ತಿದೆ. ಜೊತೆಗೆ ಸರ್ಕಾರ ರೇಷನ್ ನೀಡುವಲ್ಲಿ ಅನುಸರಿಸುತ್ತಿರುವ ಮಾನದಂಡ ಕೂಡ ಸಮರ್ಪಕವಾಗಿಲ್ಲ. ಇದರಿಂದ ಒಂಟಿ ವ್ಯಕ್ತಿಗಳು, ವಯೋವೃದ್ಧರು ಹಾಗೂ ಮಹಿಳೆಯರು ಮತ್ತು ಅಂಗವಿಕಲರಿಗೆ ಹಲವು ಸಮಸ್ಯೆಗಳು ಎದುರಾಗಿವೆ. ಈಗ ಬಡ ಜನತೆಗೆ ವಿತರಿಸಬೇಕಾದ ಆಹಾರ ಹೀಗೆ ಹಾಳು ಮಾಡುವುದು ಹೊಟ್ಟೆ ತುಂಬಿದವರ ಅಹಂಕಾರವಾಗಿದೆ. ಈ ಕುರಿತು ಉಸ್ತುವಾರಿ ಸಚಿವರು ಮತ್ತು ಜಿಲ್ಲಾಡಳಿತವೇ ಹೊಣೆಗಾರವಾಗಿದೆ. ಕೂಡಲೇ ಸಂಬಂಧಪಟ್ಟವರು ಜಿಲ್ಲೆಯ ಎಲ್ಲಾ ದಾಸ್ತಾನು ಮಳಿಗೆ ಗಳನ್ನು ಪರಿಶೀಲಿಸಿ ಉತ್ತಮ ಆಹಾರ ಸರಬರಾಜು ಮಾಡುವಂತಾಗಬೇಕು. ಆಹಾರ ಹಾಳಾಗುವುದನ್ನು ತಡೆಯಲು, ರಾಜಕೀಯ ಮೇಲಾಟದಲ್ಲಿ ಮುಳುಗದೇ ಬಡ ಕಡು ಬಡ ಜನತೆಗೆ ಆಹಾರ ಧಾನ್ಯ ಹಾಳಾಗುವ ಮುನ್ನವೇ ಹಂಚಿಕೆ ಮಾಡುವಂತಾಗಬೇಕು ಎಂದು ಭಾರತ ಕಮ್ಯುನಿಷ್ಟ ಪಕ್ಷ (ಮಾರ್ಕ್ಸವಾದಿ) ಉತ್ತರ ಕನ್ನಡ ಜಿಲ್ಲಾ ಸಮಿತಿ ಆಗ್ರಹಿಸುತ್ತದೆ.

ಯಮುನಾ ಗಾಂವ್ಕರ್, ಜಿಲ್ಲಾ ಕಾರ್ಯದರ್ಶಿ, ಸಿಪಿಐ(ಎಂ) ಉತ್ತರ ಕನ್ನಡ ಜಿಲ್ಲಾ ಸಮಿತಿ

No comments:

Post a Comment