-------------------------------------------
'ತಕ್ಷಶಿಲೆ ಹೊತ್ತಿ ಉರಿಯುತ್ತಿದೆ'
ಪತ್ರಿಕೆಯ ಸುದ್ದಿ ನೋಡುತ್ತಿದ್ದಂತೆ ನನಗೆ ಹಮೀದ್ ಖಾನ್ ನೆನಪಾದ. "ಭಗವಂತಾ! ನನ್ನ ಹಮೀದ್ ಖಾನನ ಅಂಗಡಿಯನ್ನು ಆ ಅಗ್ನಿ ಜ್ವಾಲೆಯಿಂದ ರಕ್ಷಿಸು!" ಎಂದು ನಾನು ಪ್ರಾಮಾಣಿಕವಾಗಿ ಪ್ರಾರ್ಥಿಸಿದೆ.
ಈಗ್ಗೆ ಎರಡು ವರ್ಷಗಳೂ ಕಳೆದಿಲ್ಲ. ನಾನು ತಕ್ಷಶಿಲೆಯ ಗ್ರಾಮವೊಂದರಲ್ಲಿ ಪೌರಾಣಿಕ ಪಳೆಯುಳಿಕೆಗಳ ಹುಡುಕುತ್ತಾ ನಡೆಯುತ್ತಿದ್ದಾಗ, ಮಧ್ಯಾಹ್ನದ ಉಗ್ರ ಉರಿಬಿಸಿಲಿಗೆ ಬಳಲಿ, ಹಸಿವು ದಾಹ ತಡೆಯಲಾರದಷ್ಟು ವಿಪರೀತವಾದಾಗ ರೈಲಾಪೀಸಿನಿಂದ ಮುಕ್ಕಾಲು ಮೈಲು ದೂರ ಇರುವ ಆ ಪುಟ್ಟ ಬಜಾರಿನ ಕಡೆಗೆ ನಡೆಯತೊಡಗಿದೆ.
ಹಸ್ತರೇಖೆಗಳಂತಹ ರಸ್ತೆಗಳೇ ತುಂಬಿರುವ ಪುಟ್ಟದೊಂದು ಬಜಾರು. ಸುತ್ತಲೂ ಧೂಳು, ನೊಣಗಳು, ಧಗೆ, ಗಲೀಜು. ಒಣಗಲು ಹಾಕಿದ ತೊಗಲಿನ ವಾಸನೆ. ದೈತ್ಯ ದೇಹದ ಪಠಾಣಿಗಳು ಆಲಸ್ಯದಿಂದೆಂಬಂತೆ ಮೆಲ್ಲನೆ (ಅವರು ಎಂದೂ ಅವಸರದಿಂದ ನಡೆಯುವವರಲ್ಲ) ನಡೆಯುತ್ತಿದ್ದಾರೆ.
ಅಲ್ಲಿ ಅಷ್ಟು ನಡೆದರೂ ಒಂದು ಹೋಟೆಲ್ ಕೂಡ ಸಿಗಲಿಲ್ಲ. ಆ ಗ್ರಾಮದಲ್ಲಿ ಹೋಟೆಲೊಂದರ ಅನಗತ್ಯತೆಯ ಬಗ್ಗೆ ಆಮೇಲಷ್ಟೇ ನಾನು ಯೋಚಿಸಿದ್ದು.
ಒಂದು ಅಂಗಡಿಯ ಮುಂದೆ ಚಪಾತಿ ಸುಡುವ ವಾಸನೆ ನನ್ನನ್ನು ಸೆಳೆಯಿತು. ಮುಖದಲ್ಲಿ ಮುಗುಳ್ನಗೆ ಹೊತ್ತು ನಾನು ಆ ಅಂಗಡಿಯ ಒಳಗೆ ಹೋದೆ. ಪರದೇಸಿ ಯಾತ್ರಿಕನ ರಕ್ಷಣೆಗೆ ಅವನ ಮುಗುಳ್ನಗೆಯೇ ಸಾಕು ಎಂಬ ಪಾಠವನ್ನು ನಾನು ಎಂದೋ ಕಲಿತಿದ್ದೆ.
ಮಧ್ಯ ವಯಸ್ಸಿನ ಪಠಾಣಿ ಒಬ್ಬ ಒಲೆಯ ಮುಂದೆ ಬಗ್ಗಿ ಕೂತು ಚಪಾತಿ ತಟ್ಟುತ್ತಿದ್ದಾನೆ. ನಾನು ಒಳಗೆ ಹೋದಾಗ ಕೈಯಲ್ಲಿ ಅರ್ಧ ತಟ್ಟಿದ್ದ ಗೋಧಿ ಹಿಟ್ಟಿನ ಉಂಡೆಯನ್ನು ಹಾಗೇ ಒತ್ತಿ ಹಿಡಿದು ನನ್ನನ್ನು ತೀಕ್ಷ್ಣವಾಗಿ ನೋಡಿದ. ಪ್ರತಿಯಾಗಿ ನಾನು ಪುನಹ ಒಂದು ಮುಗುಳ್ನಗೆ ಬೀರಿದೆ.
ಆ ಮುಖದಲ್ಲಿ ಬದಲಾವಣೆಯಿಲ್ಲ. ತೀಕ್ಷ್ಣವಾಗಿ, ಸಣ್ಣದೊಂದು ಸಂಶಯದೊಂದಿಗೆ ಆತ ನನ್ನನ್ನೇ ನೋಡುತ್ತಿದ್ದಾನೆ.
"ತಿನ್ನೋದಕ್ಕೆ ಏನಾದರೂ ಉಂಟಾ?" ನಾನು ಶಾಂತ ಸ್ವರದಲ್ಲಿ ಕೇಳಿದೆ.
"ಅಲ್ಲಿ ಕುಳಿತುಕೊಳ್ಳಿ." ಬೆಂಚೊಂದನ್ನು ತೋರಿಸುತ್ತಾ ಆತ ಹೇಳಿದ. "ಚಪಾತಿ ಮತ್ತು ಕುರುಮ ಇದೆ."
ಬೆಂಚಿನಲ್ಲಿ ಕೂತು ಕರ್ಚೀಫ್ ತೆಗೆದು ಬೀಸುತ್ತಾ ನಾನು ಆ ಅಂಗಡಿಯ ಪರಿಶೋಧನೆಗಿಳಿದೆ. ಸರಿಯಾಗಿ ಸಾರಿಸದ ನೆಲದಲ್ಲಿ ಅಲ್ಲಲ್ಲಿ ಮರಳು ಮಣ್ಣು ಇಣುಕುತ್ತಿದೆ. ಒಂದು ಮೂಲೆಯಲ್ಲಿ ಹಗ್ಗದ ಮಂಚದ ಮೇಲೆ ಗಲೀಜಾಗಿರುವ ತಲೆದಿಂಬೊಂದಕ್ಕೆ ಕೈಯೂರಿ ಒಬ್ಬ ಗಡ್ಡದಾರಿ ಮುದುಕ ಹುಕ್ಕ ಸೇದುತ್ತಾ ಹೊಗೆ ಬಿಡುತ್ತಿದ್ದಾನೆ. ಆತ ಆ ಹೊಗೆಸೊಪ್ಪಿನ ಹೊಗೆಯಲ್ಲಿ ಲೋಕವನ್ನೇ ಮರೆತು ಬಿಟ್ಟಿರುವವನಂತೆ ಕಾಣುತ್ತಿದ್ದ.
"ನೀವು ಯಾವ ಊರಿನವರು?" ಕೆಂಡದ ಮೇಲೆ ಚಪಾತಿಯನ್ನು ಇಡುತ್ತಾ ಮಧ್ಯವಯಸ್ಕ ಕೇಳಿದ.
"ಮಲಬಾರ್." ನಾನು ಉತ್ತರಿಸಿದೆ. ಆದರೆ ಆತ ಅಂತಹ ಒಂದು ಊರಿನ ಬಗ್ಗೆ ಕೇಳಿಯೇ ಇರಲಿಲ್ಲ.
"ಅದು ಇಂಡಿಯಾದಲ್ಲೇ ಇರುವುದಾ?." ಹಿಟ್ಟನ್ನು ಉಂಡೆ ಮಾಡುತ್ತಾ ಆತ ಕೇಳಿದ.
"ಹೌದು. ಇಂಡಿಯಾದ ದಕ್ಷಿಣಕ್ಕೆ. ಮದರಾಸಿನಲ್ಲಿ."
"ನೀವು ಹಿಂದೂ ಅಲ್ಲವೇ?"
"ಹೌದು. ನಾನು ಜನಿಸಿದ್ದು ಒಂದು ಹಿಂದೂ ಕುಟುಂಬದಲ್ಲಿ."
ಬಲವಂತದ ಮಂದಹಾಸವನ್ನು ಮುಖದಲ್ಲಿ ತೋರಿಸುತ್ತಾ ಆತ ಕೇಳಿದ: "ನೀವು ಮುಸ್ಲಿಮನ ಆಹಾರ ತಿನ್ನುತ್ತೀರಾ?"
"ನಮ್ಮ ಊರಲ್ಲಿ ಒಳ್ಳೆಯ ಚಾ ಮತ್ತು ಬಿರಿಯಾಣಿ ತಿನ್ನಬೇಕು ಅಂದರೆ ನಾವು ಮುಸ್ಲಿಮರ ಹೋಟೆಲ್ಲಿಗೇ ಹೋಗೋದು." ನಾನು ಅಭಿಮಾನದಿಂದ ಹೇಳಿದೆ.
ಆತ ಅದನ್ನು ನಂಬಿದಂತೆ ಕಾಣಲಿಲ್ಲ.
"ಹಿಂದುಗಳು ಮಸ್ಲಿಮರು ಪರಸ್ಪರ ಸೌಹಾರ್ದತೆಯಿಂದ, ವಿಶ್ವಾಸದಿಂದ ಬದುಕುತ್ತಿರುವ ನಾಡು ನಮ್ಮದು." ನಾನು ಅಭಿಮಾನದಿಂದ ನನ್ನ ಮಾತು ಮುಂದುವರಿಸಿದೆ. "ಇಂಡಿಯಾದ ಮುಸ್ಲಿಮರು ಕಟ್ಟಿದ ಮೊಟ್ಟ ಮೊದಲ ಮಸೀದಿ ಇರುವುದು ನಮ್ಮ ನಾಡಿನ ಕೊಡುಂಗಲ್ಲೂರು ಎಂಬ ಊರಿನಲ್ಲಿ. ಹಿಂದೂ ಮುಸ್ಲಿಮರ ನಡುವಿನ ಜಗಳ, ದೊಂಬಿಗಳು ನಮ್ಮ ಊರಿನಲ್ಲಿ ನಡೆಯುವುದೇ ಇಲ್ಲ ಎನ್ನುವಷ್ಟು ಕಡಿಮೆ."
ಆತ ನಾನು ಹೇಳುವುದನ್ನು ಗಮನವಿಟ್ಟು ಕೇಳುತ್ತಿದ್ದ. ನಂತರ ಮುಗುಳ್ನಗುತ್ತಾ ಹೇಳಿದ:
"ನಿಮ್ಮ ಊರನ್ನು ನನಗೊಮ್ಮೆ ನೋಡುವಂತಿದ್ದರೆ.."
"ಯಾಕೆ? ನನ್ನ ಮಾತಗಳಲ್ಲಿ ನಿಮಗೆ ನಂಬಿಕೆ ಬರುತ್ತಿಲ್ಲವೇ?" ನಾನು ಕೇಳಿದೆ.
"ನಿಮ್ಮನ್ನು ನಾನು ನಂಬುತ್ತೇನೆ. ಆದರೆ ನೀವೊಬ್ಬ ಹಿಂದು ಎಂದು ನಂಬಲು ನನಗಿನ್ನೂ ಸಾಧ್ಯವಾಗುತ್ತಿಲ್ಲ. ಕಾರಣ, ಇಲ್ಲಿಯ ಒಬ್ಬನೇ ಒಬ್ಬ ಹಿಂದು ನೀವು ಹೇಳುತ್ತಿರುವ ವಾಸ್ತವವನ್ನು, ಅಭಿಮಾನದಿಂದ ಒಬ್ಬ ಮುಸ್ಲಿಮನೊಂದಿಗೆ ಹೇಳಿಕೊಳ್ಳುವುದಿಲ್ಲ. ಅವರ ಕಣ್ಣಲ್ಲಿ ನಾವು ಯಾವತ್ತೂ ಆಕ್ರಮಣಕಾರರ ಮಕ್ಕಳು. ಹಿಂದೂಸ್ತಾನದ ಪರಿಶುದ್ಧಿಯನ್ನು, ಆರ್ಯ ಸಂಸ್ಕೃತಿಯನ್ನು ಕಳಂಕಗೊಳಿಸಿ ಆಕ್ರಮಿಸಿಕೊಂಡವರು. ಇದು ನಮ್ಮ ಅವಸ್ಥೆ."
ಆತನ ಮಾತುಗಳಲ್ಲಿ ಪ್ರಾಮಾಣಿಕತೆ ಮತ್ತು ದಯನೀಯತೆ ತುಂಬಿತ್ತು.
"ನಿಮ್ಮ ಹೆಸರೇನು?" ನಾನು ಕೇಳಿದೆ.
"ಹಮೀದ್ ಖಾನ್. ಆ ಮಂಚದ ಮೇಲೆ ಕೂತಿರುವವರು ನನ್ನ ತಂದೆ. ನೀವೊಂದು ಹತ್ತು ನಿಮಿಷ ತಾಳಿ. ಆಡಿನ ಮಾಂಸ ಬೇಯುತ್ತಿದೆಯಷ್ಟೇ."
ಹಮೀದ್ ಖಾನ್ "ಅಬ್ದುಲ್" ಎಂದು ಜೋರಾಗಿ ಕೂಗಿ ಕರೆದ.
ಹೊರಗೆ ಚಾಪೆಯಲ್ಲಿ ಒಣಗಲು ಹಾಕಿದ್ದ ಮೆಣಸಿಗೆ ಕಾವಲು ನಿಂತಿದ್ದ ಹುಡುಗನೊಬ್ಬ ಓಡಿ ಬಂದ. ಹಮೀದ್ ಖಾನ್ ಪುಷ್ತು ಭಾಷೆಯಲ್ಲಿ ಏನೋ ಆಜ್ಞಾಪಿಸಿದ. ಹುಡುಗ ಅಂಗಡಿಯ ಹಿಂಭಾಗಕ್ಕೆ ಓಡಿ ಹೋದ.
"ಸಹೋದರಾ, ನಂಬಿಕೆಯಿಲ್ಲದ ಕಡೆ ಶೈತಾನ ಅಡಗಿರುತ್ತಾನೆ. ಸ್ನೇಹವನ್ನು ಒತ್ತಾಯದಿಂದ ಕೊಡುವುದಕ್ಕಾಗಲಿ, ಬೇಡಿ ಪಡೆಯುವುದಕ್ಕಾಗಲಿ ಸಾಧ್ಯವಿಲ್ಲ. ಅದಕ್ಕಾಗಿ ಕಾಯುವುದು ಕೂಡ ಸರಿಯಲ್ಲ. ನೀವು ನಂಬಿಕೆಯಿಟ್ಟು ಪ್ರೀತಿಯಿಂದ ಇಲ್ಲಿಗೆ ಬಂದಿದ್ದೀರಿ. ಆ ನಂಬಿಕೆ ಮತ್ತು ಸ್ನೇಹದ ಅನುಭೂತಿ ನನ್ನನ್ನು ತಟ್ಟದೆ ಇರುತ್ತದೆಯೇ? ಪ್ರತಿಯೊಬ್ಬ ಹಿಂದು ಪ್ರತಿಯೊಬ್ಬ ಮುಸಲ್ಮಾನನ್ನೂ ಪ್ರತಿಯೊಬ್ಬ ಮುಸಲ್ಮಾನ ಪ್ರತಿಯೊಬ್ಬ ಹಿಂದುವನ್ನೂ ಪರಸ್ಪರ ನಂಬಿಕೆಯಿಟ್ಟು ಸ್ನೇಹದಿಂದ ಕಾಣುತ್ತಿರುತ್ತಿದ್ದರೆ..!" ಎಂದು ಶಾಂತ ಸ್ವರದಲ್ಲಿ ಹೇಳುತ್ತಾ ಒಲೆಯಿಂದ ಕೊನೆಯ ಚಪಾತಿಯನ್ನೂ ತೆಗೆದಿಟ್ಟು ಹಮೀದ್ ಖಾನ್ ಎದ್ದು ನಿಂತ.
ಹಿಂಭಾಗಕ್ಕೆ ಓಡಿದ್ದ ಹುಡುಗ, ಒಂದು ಬಟ್ಟಲಲ್ಲಿ ಅನ್ನವನ್ನು ತಂದು ನನ್ನ ಬೆಂಚಿನಲ್ಲಿ ಇಟ್ಟ. ಹಮೀದ್ ಖಾನ್ ಮೂರು ನಾಲ್ಕು ಚಪಾತಿಯನ್ನು ಅದರ ಮೇಲೆ ಹಾಕಿ ಕಬ್ಬಿಣದ ಪಿಂಗಾಣಿಯೊಂದರಲ್ಲಿ ಮಾಂಸದ ಸಾರನ್ನು ಹಾಕಿ ಕೊಟ್ಟ. ಹುಡುಗ ಬಿಂದಿಗೆಯೊಂದರಲ್ಲಿ ಕುಡಿಯಲು ಶುದ್ಧ ನೀರನ್ನು ಸುರಿದಿಟ್ಟ.
ನಾನು ಹೊಟ್ಟೆ ತುಂಬುವಷ್ಟು ತಿಂದ ಮೇಲೆ "ದುಡ್ಡು ಎಷ್ಟಾಯಿತು?" ಎಂದು ಕಿಸೆಗೆ ಕೈ ಹಾಕುತ್ತಾ ಹಮೀದ್ ಖಾನ್ ಬಳಿ ಕೇಳಿದೆ.
ಆತ ಮುಗುಳ್ನಗುತ್ತಾ ನನ್ನ ಕೈಯನ್ನು ಹಿಡಿದು ಹೇಳಿದ:
"ಕ್ಷಮಿಸಿ ಸಹೋದರಾ. ನನಗೆ ದುಡ್ಡು ಬೇಡ. ನೀವು ನನ್ನ ಅತಿಥಿ."
"ಅದು ಬೇರೆ ವಿಷಯ. ನೀವೊಬ್ಬ ವ್ಯಾಪಾರಿ. ನೀವು ಮಾರುವ ವಸ್ತುವಿನ ಬೆಲೆಯನ್ನಷ್ಟೇ ನೀವು ಪಡೆಯಬೇಕೆಂದು ನಾನು ಒತ್ತಾಯಿಸುತ್ತಿರುವುದು." ನಾನು ಒಂದು ರೂಪಾಯಿಯ ನೋಟನ್ನು ಹಮೀದ್ ಖಾನನ ಮುಂದೆ ಚಾಚಿದೆ.
ಒಮ್ಮೆ ಏನೋ ಸಂಶಯದಂತೆ ನೋಡಿ ಅದನ್ನು ತೆಗೆದುಕೊಂಡ ಆತ, ಪುನಹ ಆ ನೋಟನ್ನು ನನ್ನ ಕೈಯಲ್ಲೇ ಕೊಟ್ಟ. "ಸಹೋದರಾ, ನಾನು ನಿಮ್ಮಿಂದ ದುಡ್ಡು ಪಡೆದೆ. ಆದರೆ ಇದು ನಿಮ್ಮ ಕೈಯಲ್ಲೇ ಇರಲಿ. ನೀವು ಮಲಬಾರಿಗೆ ಹೋದ ನಂತರ, ಮುಸ್ಲಿಂ ಹೋಟೇಲಲ್ಲಿ ಬಿರಿಯಾಣಿ ತಿನ್ನಲು ನಾನಿದನ್ನು ನಿಮಗೆ ಕೊಡುತ್ತಿದ್ದೇನೆ. ಆಗ ತಕ್ಷಶಿಲೆಯ ಸಹೋದರ ಹಮೀದ್ ಖಾನನನ್ನು ನೀವು ನೆನೆಯಬೇಕು."
ಹಮೀದ್ ಖಾನ್ ಸೆಟೆದು ನಿಂತು ಮಗುವಿನಂತೆ ನನ್ನನ್ನು ತಬ್ಬಿಕೊಂಡು ಜೋರಾಗಿ ನಕ್ಕ. ಆ ಅಪ್ಪುಗೆ ನನ್ನೊಳಗೆ ಪುಳಕ ಎಬ್ಬಿಸಿತು...
ನಾನು ಪುನಹ ತಕ್ಷಶಿಲೆಯ ಪಳೆಯುಳಿಕೆಗಳ ಕಡೆಗೆ ನಡೆದೆ.
ಹಮೀದ್ ಖಾನನನ್ನು ನಾನು ಇನ್ನೊಮ್ಮೆ ಕಾಣಲಾರೆ. ಆದರೆ "ತಕ್ಷಶಿಲೆಯ ಸಹೋದರ ಹಮೀದ್ ಖಾನನನ್ನು ನೀವು ನೆನೆಯಿರಿ" ಎಂಬ ಆತನ ಮಾತು ಮತ್ತು ಆ ನಗು ಇಂದಿಗೂ ನನ್ನೊಳಗೆ ಮಾರ್ದನಿಸುತ್ತಿದೆ. ತಕ್ಷಶಿಲೆಯ ಕೋಮು ಸಂಘರ್ಷದ ಜ್ವಾಲೆಯಿಂದ ನನಗೆ ಊಟ ಹಾಕಿದ ಹಮೀದ್ ಖಾನನ್ನು ಮತ್ತು ಉರಿ ಬಿಸಿಲಿಗೆ ನೆರಳು ಕೊಟ್ಟ ಆ ಅಂಗಡಿಯನ್ನು ರಕ್ಷಿಸು ಭಗವಂತಾ ಎಂದು ನಾನು ಇಂದಿಗೂ ಪ್ರಾಮಾಣಿಕವಾಗಿ ಪ್ರಾರ್ಥಿಸುತ್ತಲೇ ಇದ್ದೇನೆ.
ಕೃಪೆ : ಮಾಧ್ಯಮ ನೆಟ್
No comments:
Post a Comment