ಶುದ್ಧ ಯಕ್ಷಗಾನದ ಪ್ರತಿನಿಧಿ ಗಣೇಶ ನಾಯ್ಕ ಮುಗ್ವಾ-ರಾಮ ಹೆಗಡೆ ಕೆರೆಮನೆ
ಪ್ರತಿ ವರ್ಷದಂತೆ ಸಹಯಾನ (ಆg.ï ವಿ. ಭಂಡಾರಿ ನೆನಪಿನ ಸಂಸ್ಕøತಿ ಅಧ್ಯಯನ ಕೇಂದ್ರ) ಕೆರಕೋಣ ನೀಡುತ್ತಾ ಬಂದಿರುವ ಜಿ. ಎಸ್. ಭಟ್ಟ, ಧಾರೇಶ್ವರ ಅವರ ನೆನಪಿನ 2018 ನೆ ಸಾಲಿನ “ಸಹಯಾನ ಸಮ್ಮಾನ” ಗೌರವವನ್ನು ಇತ್ತಿಚೆಗೆ ಕೆರೆಕೋಣದಲ್ಲಿ ನಡೆದ ವಿಶ್ವರಂಗಭೂಮಿ ದಿನಾಚರಣೆಯ ಸಂದರ್ಭದಲ್ಲಿ ಯಕ್ಷಗಾನ ಸ್ತ್ರೀ ವೇಷಧಾರಿಗಳಾದ ಗಣೇಶ ನಾಯ್ಕ ಮುಗ್ವಾ ಇವರಿಗೆ ನೀಡಲಾಯಿತು. ಅತಿಥಿಗಳಾಗಿ ಭಾಗವಹಿಸಿದ ಕೆರೆಮನೆ ರಾಮ ಹೆಗಡೆ, ಅಧ್ಯಕ್ಷತೆ ವಹಿಸಿದ ಶ್ರೀ ವಿಷ್ಣು ನಾಯ್ಕ ಅಂಕೋಲಾ, ಉದಯ ಭಟ್ ಇವರು ಗಣೇಶ ನಾಯ್ಕ ಅವರಿಗೆ ಶಾಲು, ಸನ್ಮಾನ ಪತ್ರ, ನೆನಪಿನ ಕಾಣಿಕೆ ಮತ್ತು 5000-00 ರೂ ನಗದನ್ನು ನೀಡಿ ಗೌರವಿಸಿದರು.
ಸಹಯಾನ, ಚಿಂತನ ರಂಗ ಅಧ್ಯಯನ ಕೇಂದ್ರ ಉತ್ತರ ಕನ್ನಡವು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ನೆರವಿನೊಂದಿಗೆ ಸಂಘಟಿಸಿದ ವಿಶ್ವರಂಗಭೂಮಿ ದಿನಾಚರಣೆಯ ಸಂದರ್ಭದಲ್ಲಿ ಕಲಾವಿದರನ್ನು ಸನ್ಮಾನಿಸಿ ಮಾತನಾಡಿದ ರಾಮ ಹೆಗಡೆ ಕೆರೆಮನೆಯವರು “ಈಗಲೂ ಪಾರಂಪರಿಕ ಯಕ್ಷಗಾನದ ಭಾವಾಭಿನಯ, ಕುಣಿತವನ್ನು ಕಾಯ್ದುಕೊಂಡು ಬಂದ ಗಣೇಶ ನಾಯ್ಕ ಒಬ್ಬ ಶುದ್ಧ ಯಕ್ಷಗಾನದ ಪ್ರತಿ ನಿಧಿ. ಇಂದು ಸಾಂಸ್ಕøತಿಕ ರಾಜಕಾರಣ ಮಾಡುವವರೆ ಹೆಚ್ಚಾಗಿದ್ದಾರೆ. ಯಕ್ಷಗಾನ ಕ್ಷೇತ್ರ ಅದಕ್ಕೆ ಹೊರತಾಗಿಲ್ಲ. ಆದರೆ ಗಣೇಶ ನಾಯ್ಕ ಅವರು ಇದ್ಯಾವುದರ ಗೊಡವೆಗೂ ಹೋಗದೆ ತನ್ನಷ್ಟಕ್ಕೆ ತಾನು ಕೆಲಸವನ್ನು ಮಾಡುತ್ತಾ ಬಂದಿದ್ದಾರೆ. ಶಿವರಾಮ ಕಾರಂತರೊಟ್ಟಿಗೂ ಪಳಗಿದ್ದಾರೆ. ಹೀಗೆ ಅಪರೂಪದ ಕಲಾವಿದರಾದರಾಗಿಯೂ ನಿರ್ಲಕ್ಷಿಸಲ್ಪಟ್ಟವರನ್ನು ಗುರುತಿಸಿ ಪ್ರಶಸ್ತಿ ನೀಡುತ್ತಿರುವುದು ಶ್ಲಾಘನೀಯ.” ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಗಣೇಶ ನಾಯ್ಕ “ಇಂತಹ ಪ್ರಶಸ್ತಿಗಳು ಬಂದಾಗ ಖುಷಿಗೊಳ್ಳುವುದು ಸಹಜ. ಆದರೆ ಇದು ಕಲಾವಿದನ ಖ್ಯಾತಿಗೊಂದು ಗರಿ ಆಗುವುದಕ್ಕಿಂತ ಆತನ ಕರ್ತವ್ಯವನ್ನು ನೆನಪಿಸುವ ಸಂಗತಿ ಆಗಬೇಕು. ನನ್ನನ್ನು ಯಾವ ಕಾರಣಕ್ಕಾಗಿ ಗುರುತಿಸಲಾಗಿದೆಯೋ ಅದಕ್ಕೆ ಕಿಂಚಿತ್ತು ಊನ ಬರದಂತೆ ನಾವು ನಡೆದುಕೊಳ್ಳಬೇಕಾದ ಜವಾಬ್ದಾರಿ ಇದು ಅಂದುಕೊಂಡು ಈ ಕ್ಷೇತ್ರದಲ್ಲಿ ಮುಂದುವರಿಯುತ್ತೇನೆ. ನನ್ನ ಎಳೆವೆಯಲ್ಲಿ ನನ್ನನ್ನು ರಂಗದ ಮೇಲೂ, ಚೌಕಿಯಲ್ಲೂ ತಿದ್ದಿದ ಧಾರೇಶ್ವರ ಮಾಸ್ತರರ ಹೆಸರಿನಲ್ಲಿ ನೀಡುತ್ತಿರುವ ಪ್ರಶಸ್ತಿ ಇದೆನ್ನುವ ಖುಷಿ ಒಂದೆಡೆಯಾದರೆ ಆನಂತರದ ದಿನದಲ್ಲಿ ನನ್ನ ಅರ್ಥಧಾರಿಕೆಯನ್ನು ತಿದ್ದಿದ, ಹೊಸ ಮಾದರಿಯನ್ನು ಹೇಳಿಕೊಟ್ಟ ಡಾ. ಆರ್ ವಿ ಭಂಡಾರಿಯವರ ಸಂಸ್ಮರಣೆಯ ಸಂಸ್ಥೆಯಾದ ಸಹಯಾನ ಇದನ್ನು ನೀಡುತ್ತಿರುವುದು ಕೂಡ ಸಂತೋಷವನ್ನು ಇನ್ನಷ್ಟು ಹೆಚ್ಚಿಸಿದೆ. ಈಗಲೂ ನಾನು ಪ್ರತಿಯೊಬ್ಬರಿಂದಲೂ ಕಲಿಯ ಬಯಸುತ್ತೇನೆ. ಹಲವರಿಂದ ಕಲಿತಿದ್ದೇನೆ.” ಎಂದು ಹೇಳಿದರು.
ಡಾ.ಶ್ರೀಪಾದ ಭಟ್ ಅವರು ಅಭಿನಂದನಾ ಮಾತುಗಳನ್ನಾಡಿ ಯಕ್ಷಗಾನ ಕ್ಷೇತ್ರಕ್ಕೆ ಗಣೇಶ ನಾಯ್ಕ ಅವರ ಕೊಡುಗೆಯನ್ನು ವಿವರಿಸಿದರು. ವೇದಿಕೆಯಲ್ಲಿ ಉದಯ ಭಟ್ ಉಪಸ್ಥಿತರಿದ್ದು ಮಾತನಾಡಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಸಹಯಾನದ ಕಾರ್ಯಾಧ್ಯಕ್ಷರಾದ ವಿಷ್ಣು ನಾಯ್ಕ “ಮುಗ್ವಾದಂತಹ ಸಣ್ಣ ಹಳ್ಳಿಯಲ್ಲಿ ಜನಿಸಿದ ಗಣೇಶ ನಾಯ್ಕ ಅವರು ಇಂದು ನಾಡಿನ ಗಮನ ಸೆಳೆದÀ ಯಕ್ಷಗಾನ ಪ್ರತಿಭೆ. ಬಾಲ್ಯದಲ್ಲಯೇ ಯಕ್ಷಗಾನ ಕಲೆಯ ಕುರಿತು ಪ್ರೀತಿ ಬೆಳೆಸಿಕೊಂಡ ಇವರು ಸ್ತ್ರೀ ವೇಷಧಾರಿಯೆಂದು ಪ್ರಸಿದ್ಧರಾಗಿದ್ದಾರೆ. ಕರ್ನಾಟಕದ ಅದ್ಭುತಗಳಲ್ಲಿ ಒಂದಾದ ಡಾ. ಶಿವರಾಮ ಕಾರಂತರ ಮಾರ್ಗದರ್ಶನದಲ್ಲಿ ಅವಿಸ್ಮರಣೀಯ ಕಲಿಕೆ ಅವರದು. ಮುಂದೆ ಅವರ ಬ್ಯಾಲೆಯಲ್ಲಿ ಮತ್ತು ಉಡುಪಿ ಯಕ್ಷಗಾನ ಕೇಂದ್ರದ ಖಾಯಂ ಕಲಾವಿದರಾಗಿ ಸೇವೆ ಸಲ್ಲಿಸಿದ್ದಾರೆ. ಇಂತಹ ಗ್ರಾಮೀಣ ಪ್ರತಿಭೆಯನ್ನು ಗೌರವಿಸುವುದು ನಮ್ಮ ಕರ್ತವ್ಯ” ಎಂದರು. ಚಿಂತನ ರಂಗ ಅಧ್ಯಯನ ಕೇಂದ್ರದ ಕಿರಣ ಭಟ್ ಸ್ವಾಗತಿಸಿದರು. ವಿದ್ಯಾಧರ ನಾಯ್ಕ ವಂದಿಸಿದರು. ಗಣೇಶ ಭಂಡಾರಿ, ದಾಮೋದರ ನಾಯ್ಕ, ಮಾಸ್ತಿ ಗೌಡ ಅವರು ನೆನಪಿನ ಕಾಣಿಕೆ ವಿತರಿಸಿದರು. ಸಹಯಾನದ ಕಾರ್ಯದರ್ಶಿ ವಿಠ್ಠಲ ಭಂಡಾರಿ ಕಾರ್ಯಕ್ರಮ ನಿರ್ವಹಿಸಿದರು.
ಸನ್ಮಾನ ಕಾರ್ಯಕ್ರಮದ ನಂತರ ತೊಳಸಾಣಿಯ ಕುಂಬಿ ಮರಾಠಿ ಸಮುದಾಯದ ಮಕ್ಕಳಿಂದ ಕನಕದಾಸರು ರಚಿಸಿದ ಪ್ರಸಿದ್ದ ಕಾವ್ಯವಾದ “ರಾಮಧಾನ್ಯ ಚರಿತ್ರೆ” ಯನ್ನು ಆಧರಿಸಿದ ಯಕ್ಷಗಾನ ಪ್ರಸಂಗವನ್ನು ಗಣೇಶ ಭಂಡಾರಿಯವರ ನಿರ್ದೇಶನದಲ್ಲಿ ಅತ್ಯುತ್ತಮವಾಗಿ ಪ್ರಯೋಗಿಸಿದರು.ಕೃಷ್ಣ ಭಂಡಾರಿಯವರು ಭಾಗವತರಾಗಿ ಮಂಜುನಾಥ ಭಂಡಾರಿ ಕರ್ಕಿ ಮತ್ತು ಮಂಜುನಾಥ ಭಂಡಾರಿ ಕಡತೋಕ ಅವರು ಮದ್ದಲೆ ವಾದಕರಾಗಿ ಭಾಗವಹಿಸಿದರು. ಹೊನ್ನಾವರದ ಕ್ಷೇತ್ರ ಶಿಕ್ಷಣಾಧಿಕಾರಿಯರಾದ ಶ್ರೀ ಗಿರೀಶ ಪದಕಿಯವರ ಕಲಾವಿದರಿಗೆ ನೆನಪಿನ ಕಾಣಿಕೆ ವಿತರಿಸಿದರು.
No comments:
Post a Comment