Friday, 25 October 2019

ನಾದ ಲಯಗಳ ಸೂಕ್ಷ್ಮತೆಯನ್ನು ಕಳೆದುಕೊಳ್ಳುತ್ತಿದ್ದೇವೆ. ಗೋಪಾಲಕೃಷ್ಣ ಹೆಗಡೆ ಕಲ್ಬಾಗ*



ನಾದ ಲಯಗಳ ಸೂಕ್ಷ್ಮತೆಯನ್ನು ಕಳೆದುಕೊಳ್ಳುತ್ತಿದ್ದೇವೆ. ಗೋಪಾಲಕೃಷ್ಣ ಹೆಗಡೆ ಕಲ್ಬಾಗ

ನಾದ ಲಯದ ಸೂಕ್ಷ್ಮವನ್ನು ಇಂದಿನ ಮಕ್ಕಳು ಕಳೆದುಕೊಳ್ಳುತ್ತಿದ್ದಾರೆ. ಮಾತ್ರವಲ್ಲ ಪಾಲಕರಾದ ನಾವೂ ಇಂದು ಅದರಿಂದ ದೂರ ಆಗುತ್ತಿದ್ದೇವೆ. ಯಾವ ಸ್ವರಕ್ಕೆ ರಾಗವಿಲ್ಲವೋ ಅದನ್ನು ವಿಕೃತ ಸ್ವರ ಅನ್ನುತ್ತೇವೆ. ಅದು ಇಂದಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಒಳ್ಳೆಯದನ್ನು ಆಲಿಸುವ, ಗ್ರಹಿಸುವ, ಚಿಂತಿಸುವ ಮತ್ತು ಮನನ ಮಾಡುವವರ ಕೊರತೆ ನಮ್ಮಲ್ಲಿ ಇದೆ. ಒಬ್ಬ ಸಂಗೀತಗಾರ ವೇದಿಕೆಯಲ್ಲಿ ಪ್ರದರ್ಶನ ನೀಡುವುದಕ್ಕೆ ಮಾತ್ರ ಸೀಮಿತನಲ್ಲ. ಬದಲಾಗಿ ಸಮಾಜದೊಟ್ಟಿಗಿನ ಬದುಕಿನಲ್ಲಿ ಕೂಡ ಆತ ಹೆಚ್ಚು ಪ್ರಸ್ತುತ ಆಗಬೇಕು.” ಎಂದು ಎಸ್.ಡಿ.ಎಂ ಕಾಲೇಜಿನ ಸಂಗೀತ ಉಪನ್ಯಾಸಕ ಕಲ್ಬಾಗ ಗೋಪಾಲಕೃಷ್ಣ ಹೆಗಡೆ ಹೇಳಿದರು. ಅವರು ಚಿಂತನ ರಂಗ ಅಧ್ಯಯನ ಕೇಂದ್ರ ಮತ್ತು ಸಹಯಾನ ಹಮ್ಮಿಕೊಂಡ *ಬಣ್ಣಬಣ್ಣದ ಮಕ್ಕಳ ರಜಾ ಶಿಬಿರದ ಸಮಾರೋಪ ಸಮಾರಂಭದ* ಅತಿಥಿಯಾಗಿ ಮಾತನಾಡುತ್ತಿದ್ದರು.


ರಂಗ ಶಿಬಿರದ ಮೂಲಕ ಪ್ರಕೃತಿಯೆಡೆಗೆ ಕೊಂಡೊಯ್ಯುತ್ತಿದ್ದೇವೆ. ನಾವು ಮಕ್ಕಳಿಗೆ ಕಲಿಸುವುದಿಲ್ಲ. ನಾವೇ ಮಕ್ಕಳಿಂದ ಕಲಿಯುತ್ತೇವೆ. ಮಕ್ಕಳಲ್ಲಿ ಸಾಮಾಜಿಕ, ರಾಜಕೀಯ ಪ್ರಜ್ಞೆಯನ್ನು ಬೆಳೆಸುವಲ್ಲಿ ಈ ಶಿಬಿರಗಳು ಕ್ರಿಯಾಶೀಲವಾಗಿರುತ್ತವೆ.” ಎಂದು ಶಿಬಿರದ ನಿರ್ದೇಶಕಿ ಎಂ.ವಿ. ಪ್ರತಿಭಾ ಹೇಳಿದರು. ಚಿಂತನ ರಂಗ ಅಧ್ಯಯನ ಕೇಂದ್ರದ ಅಧ್ಯಕ್ಷರಾದ ಕಿರಣ ಭಟ್ ಸ್ವಾಗತಿಸಿದರು. ಗಣೇಶ ಭಂಡಾರಿ ವಂದಿಸಿದರು. ಪ್ರಮೋದ ನಾಯ್ಕ ಕಡತೋಕ ನಿರೂಪಿಸಿದರು.
ಮಕ್ಕಳಲ್ಲಿ ನಾಯಕತ್ವ ಬೆಳೆಸುವ ಪ್ರಾಮಾಣಿಕ ಜವಾಬ್ದಾರಿ ಹೆಚ್ಚಿಸುವ ನಿಟ್ಟಿನಲ್ಲಿ ‘ಮಕ್ಕಳ ಸಹಯಾನ’ ಎನ್ನುವ ಸಮಿತಿಯನ್ನು ರಚಿಸಲಾಯಿತು. ವಿಠ್ಠಲ ಭಂಡಾರಿಯವರು ಅದರ ಅವಶ್ಯಕತೆ ಮತ್ತು ಸ್ವರೂಪದ ಬಗ್ಗೆ ವಿವರಿಸಿದರು.
ನಂತರದಲ್ಲಿ ಎಂ.ವಿ. ಪ್ರತಿಭಾ ರವರು ನಿರ್ದೇಶಿಸಿದ *ಕೋಟಿಗಾನಳ್ಳಿ ರಾಮಯ್ಯ ಬರೆದ “ಹಕ್ಕಿ ಹಾಡು” ನಾಟಕವನ್ನು* ಮಕ್ಕಳು ಸುಂದರವಾಗಿ ಪ್ರದರ್ಶಿದರು. ಚಿಂತನ ರಂಗ ಅಧ್ಯಯನ ಕೇಂದ್ರದ ಯುವ ಕಲಾವಿದರು ದ.ರಾ ಬೇಂದ್ರೆಯವರು ಬರೆದ ‘ *ಸಾಯೋ ಆಟ’* ನಾಟಕ ಪ್ರದರ್ಶಿಸಿದರು.

Thursday, 24 October 2019

“ಅಣ್ಣನನ್ನು ಪರಿಚಯಿಸಲು ಆಗಲಿಲ್ಲ ಎನ್ನುವ ಕೊರಗು ಮತ್ತು ಅಣ್ಣ ಅಕ್ಷರದ ತೆಕ್ಕೆಗೆ ಸಿಗಲೇ ಇಲ್ಲ ಎನ್ನುವ ಸತ್ಯ ನನ್ನ ಎದುರಿಗಿದೆ.”


ಅಣ್ಣನನ್ನು ಪರಿಚಯಿಸಲು ಆಗಲಿಲ್ಲ ಎನ್ನುವ ಕೊರಗು ಮತ್ತು
 ಅಣ್ಣ ಅಕ್ಷರದ ತೆಕ್ಕೆಗೆ ಸಿಗಲೇ ಇಲ್ಲ ಎನ್ನುವ ಸತ್ಯ ನನ್ನ ಎದುರಿಗಿದೆ.”
                                                                                            - ವಿಠ್ಠಲ ಭಂಡಾರಿ

      ರಾತ್ರಿಯಿಂದಲೇ ಜನ ಬರಲಾರಂಭಿಸಿದರು. ಮಣಿಪಾಲದಿಂದ ಬಂದು ಸೇರಲು ರಾತ್ರಿಯಾಗಿತ್ತು. ಆಗಲೇ ಮನೆಯಂಗಳದ ತುಂಬ ಜನರ ಸಂತೆ. ಸಂಬಂಧಿಕರು, ಅಣ್ಣನ ಆಪ್ತೇಷ್ಟರು, ಊರವರು, ಎಲ್ಲರೂ ನೆರೆದಿದ್ದರು. ಆಶ್ಚರ್ಯವೆಂದರೆ ಸದಾ ಅಣ್ಣನನ್ನು ದ್ವೇಷಿಸುವವರು ಅಲ್ಲಿ ಸೇರಿ ನಾಲ್ಕು ಒಳ್ಳೆಯ ಮಾತನ್ನು ಆಡಿದರು.
     ಅಲ್ಲೇ ಅಂತ್ಯಕ್ರಿಯೆ ನಡೆದ ಸ್ವಲ್ಪ ಹೊತ್ತಿನಲ್ಲಿಯೇ ಒಂದು ಶ್ರದ್ಧಾಂಜಲಿ ಸಭೆ ನಡೆಯಿತು. ಹೊರಗಿನಿಂದ ಬಂದವರೊಂದಿಗೆ ಊರಜನರೂ, ಸಂಬಂಧಿಕರೂ ಸಭೆಗೆ ಕಿವಿ, ಮನಸ್ಸುಗಳಾಗಿದ್ದರು.





ಬೆಂಗಳೂರಿನಿಂದ ಬಂದ ಜಿ.ಎಸ್. ನಾಗರಾಜ (ಕಾರ್ಯದರ್ಶಿ ಸಿ.ಪಿ..ಎಮ್.) ಎಸ್.ವೈ. ಗುರುಶಾಂತ, ಎಸ್. ವರಲಕ್ಷ್ಮೀ, ಡಾ ಎನ್.ಆರ್. ನಾಯಕ, ಎಂ. ಜಿ. ಹೆಗಡೆ, ಮೋಹನ ಹಬ್ಬು, ಶಾಂತಾರಾಮ ನಾಯಕ ಹಿಚ್ಕಡ, ಕೃಷ್ಣಾನಾಯಕ ಹಿಚ್ಕಡ, ಶಾಂತಿ ನಾಯಕ ಮುಂತಾದ ಹಲವರು ಬಂದಿದ್ದರು. ಕೆಲವರು ಸಭೆಯಲ್ಲಿ ಮಾತನಾಡಿದರು. ಅಣ್ಣನ ಬದುಕಿನ ಹಲವು ಮಗ್ಗಲುಗಳನ್ನು ತೆರೆದಿಟ್ಟರು. ಹಲವರು ಅಣ್ಣನೊಂದಿಗಿನ ತಮ್ಮ ಸ್ನೇಹವನ್ನು ಬಿಚ್ಚಿಟ್ಟರು. ಅವರೆಲ್ಲರ ಮಾತುಗಳನ್ನು ರೆಕಾರ್ಡ್ ಮಾಡಿಕೊಳ್ಳುವ ವ್ಯವಸ್ಥೆಯಿದ್ದಿದ್ದರೆ ಎಷ್ಟು ಒಳ್ಳೆಯದಾಗಿರುತ್ತಿತ್ತು ಎಂದು ಈಗ ಅನ್ನಿಸುತ್ತದೆ. ಎಷೊಂದು ಒಳ್ಳೆಯ, ಅಪರೂಪದ ಸಂಗತಿಗಳು ದಾಖಲಾಗುತ್ತಿದ್ದವು! ಆದರೆ ದಿನ ಅದೇನೂ ನೆನಪಿನಲ್ಲಿ ಉಳಿದಿರಲಿಲ್ಲ.
ನಾನೂ ಖಾಲಿಯಾಗಿದ್ದೆ. ಗ್ರಹಿಸುವ ಸ್ಥಿತಿಯಲ್ಲಿ ಇರಲಿಲ್ಲ. ಅಕ್ಕ, ಮಾಧವಿ, ಇನ್ನಕ್ಕರನ್ನು ಸುಧಾರಿಸುವ ಜವಾಬ್ದಾರಿ ಕೂಡ ನನ್ನ ಮತ್ತು ಯಮುನಾಳ ಮೇಲೆಯೇ ಇತ್ತು.
        ಒಂದೆಡೆ ಬಂದವರೊಂದಿಗೆ ಮಾತನಾಡಬೇಕು. ವಿವಿಧ ಊರುಗಳಿಂದ ಸ್ಥಿರದೂರವಾಣಿ ಸಾಂತ್ವನದ ಫೋನುಗಳಿಗೆ ಉತ್ತರಿಸಬೇಕು. ಪತ್ರಿಕೆಗಳಿಗೆ ಅಣ್ಣನ ಕುರಿತ ವಿವರ, ಫೋಟೋ ಇತ್ಯಾದಿಗಳನ್ನು ಕಳುಹಿಸಲು ತೊಡಗಬೇಕು. ಊರಿನಲ್ಲಿ ಕಳುಹಿಸುವ ವ್ಯವಸ್ಥೆ ಇಲ್ಲ. ಹೊನ್ನಾವರಕ್ಕೆ ಹೋಗಬೇಕು. ಹೆಚ್ಚು ಕಡಿಮೆ ಇಡೀ ದಿನ ಒಂದೆಡೆ ಕುಳಿತು ಅಳಲೂ ಸಮಯವಿಲ್ಲದಷ್ಟು ಕೆಲಸ.
      ಬಂದವರೆಲ್ಲ ಒಬ್ಬೊಬ್ಬರೇ ಹೋಗುತ್ತಿದ್ದಂತೆ ಒಂಟಿ ಎನಿಸತೊಡಗಿತು. ನಾಳೆ ಮತ್ತೆ ಅಣ್ಣ ಸಿಗುವುದಿಲ್ಲ ಎನ್ನಿಸಿದಾಗ ತುಂಬಾ ಖೇದವೆನಿಸಿತು.
ನಂತರ ಹೊನ್ನಾವರ, ಅಂಕೋಲಾ, ದಾಂಡೇಲಿ, ಕುಮಟಾ, ಶಿರಸಿ ಹೀಗೆ.... ಜಿಲ್ಲೆಯ ತುಂಬಾ ಶ್ರದ್ಧಾಂಜಲಿ ಸಭೆಗಳು ನಡೆದವು. ಒಂದಿಷ್ಟು ದಿನ ಪತ್ರಿಕೆಯನ್ನು ನೋಡಿ ಖುಷಿ ಪಟ್ಟೆವು. ಬೇರೆ ಬೇರೆ ಕಡೆಯಿಂದ ಬಂದ ಸುದ್ದಿ, ಶ್ರದ್ಧಾಂಜಲಿ ಸುದ್ದಿ, ಬೇರೆ ಬೇರೆಯವರು ನೀಡಿದ ಹೇಳಿಕೆ, ಲೇಖನಗಳು.... ತಿಂಗಳವರೆಗೆ ಹಲವರ ನೆನಪಿನ ಬುತ್ತಿ ಬಿಚ್ಚಿ ನೀಡುವುದು.
ಆದರೂ ಮನೆ ಖಾಲಿ ಖಾಲಿ ಎನ್ನಿಸುತ್ತಿತ್ತು. ಆತ ಕೂಡ್ರುವ ಜಾಗ, ಆರಾಮ ಖುರ್ಚಿ, ಹೊರವರಾಂಡ, ಗೇಟಿನ ಪಕ್ಕದ ಕಟ್ಟೆ.........ಹೀಗೆ
ಆತನ ನಿಧನದ ವಾರ್ತೆಯನ್ನು ಜಿಲ್ಲೆಯಲ್ಲಿ ಪತ್ರಿಕೆಗಳು ಕೂಡಾ ತುಂಬಾ ಗೌರವಪೂರ್ಣವಾಗಿ, ಅರ್ಥಪೂರ್ಣವಾಗಿ, ಪ್ರೀತಿಪೂರ್ವಕವಾಗಿಯೇ ಸುದ್ದಿ ಪ್ರಕಟಿಸಿದವು. ಜಿಲ್ಲೆಯ ಪ್ರಧಾನ ದಿನಪತ್ರಿಕೆ ಕರಾವಳಿ ಮುಂಜಾವುಬಡವಾದ ಬಂಡಾಯದನಿ: ರವಿ ಅಸ್ತಂಗತ ಎಂದು ಅರ್ಥಪೂರ್ಣ ತಲೆಬರಹದೊಂದಿಗೆ ಮುಖಪುಟದಲ್ಲಿ ಪ್ರಕಟಿಸಿದರೆ ಒಳಪುಟದಲ್ಲಿಮೂಕವಾದ ವರ್ಣ ಮತ್ತು ವರ್ಗ ಸಂಘರ್ಷದ ಒಳದನಿ ಎಂದು ಅಣ್ಣನ ವೈಚಾರಿಕ ಕೊಡುಗೆಯನ್ನು ನೆನಪಿಸಿತು. ಗಂಗಾಧರ ಹಿರೇಗುತ್ತಿಯವರುಮರೆಯಾದ ರವಿ-ಆರ್.ವಿ.” ಎಂದು ಸಂಪಾದಕೀಯ ಬರೆದರು. ಲೋಕಧ್ವನಿ ಪತ್ರಿಕೆಯಲ್ಲಿ ಅಶೋಕ ಹಾಸ್ಯಗಾರ ಅವರುವೈಚಾರಿಕಭಂಡಾರ ಭಂಡಾರಿ ಎಂದು ಬರೆದರೆ ಜನಮಾಧ್ಯಮದಲ್ಲಿಬಂಡಾಯ ಸಾಹಿತಿ ಆರ್.ವಿ. ಭಂಡಾರಿ ಇನ್ನಿಲ್ಲ ಎಂದು ಸಂಪಾದಕೀಯ ಬರೆದರು. ಹಲವರು ಅಣ್ಣನ ಕುರಿತು ಲೇಖನ ಬರೆದರು. ಬರಗೂರು ರಾಮಚಂದ್ರಪ್ಪನವರುಪ್ರಗತಿಪರ ಚಳುವಳಿಯ ಗೆಳೆಯ ಆರ್.ವಿ. ಭಂಡಾರಿ ಎಂದು, ವಿಷ್ಣು ನಾಯ್ಕ ಅವರು್ವಿ ಭಂಡಾರಿ ಎಂಬ ಕೆಂಡದ ನಡಿಗೆ ಎಂದು, ಎಸ್.ಆರ್. ನಾರಾಯಣ ರಾವ್ ಅವರುಆರ್ವಿ ಲವಲವಿಕೆಯ ಚಿಂತಕ-ಸಾಹಿತಿ ಎಂದು ಬರೆದರು.
      ಬರೆದಂತೆ ಬದುಕಿದರು, ಬದುಕಿದಂತೆ ಬರೆದರು. ಶೋಷಿತರ ನೋವಿಗೆ ಸಮರ್ಥ ಧ್ವನಿ ನೀಡಿದ್ದ ಆರ್.ವಿ ಭಂಡಾರಿ ಎಂದು ವಿನಾಯಕ ಎಲ್. ಪಟಗಾರ, “ಅಂಗಾತ ಮಲಗಿದ ಅಂಚೆಕಾರ್ಡ್: ಆರ್ ವಿ ಎಂದು ಸಾಗರದ ಯೋಗೀಶ್ ಜಿ. ‘ಗಟ್ಟಿಯಾದ ನೈತಿಕ ಧ್ವನಿಯೊಂದು ಅಡಗಿತು ಎಂದು ಎಸ್.ಬಿ. ಜೋಗೂರ, ‘ಕಾಣದಿದ್ದರೂ ನಮ್ಮ ಜತೆಗಿರುವ ಭಂಡಾರಿ ಎಂದು ಸರ್ವಜಿತ್, ‘ಭಂಡಾರಿಯವರು ಅವ್ಯವಸ್ಥೆಯ ವಿರುದ್ಧದ ದನಿಯಾಗಿದ್ದರು ಎಂದು ಪ್ರಭಾಕರ ರಾಣೆ, ‘ಮಗುವಿನ ಮನಸ್ಸಿನ ಮಾರ್ಕ್ಸ್ವಾದಿ ಎಂದು ಜಿ.ಯು. ಭಟ್ಟ, ‘ಧೀಮಂತ ಕನಸುಗಾರ ಆರ್.ವಿ. ಭಂಡಾರಿ ಎಂದು ವಿ. ಜೆ. ನಾಯಕ, ‘ಕಾಡುತ್ತಿರುವ ನನ್ನ ಆರ್.ವಿ. ಸರ್ ಎಂದು ಅರವಿಂದ ಕರ್ಕಿಕೋಡಿ, ‘ಡಾ. ಆರ್.ವಿ. ಭಂಡಾರಿ ಎಂಬ ಬಂಡಾಯದ ಧ್ವನಿ ಅಡಗಿದಾಗ ಅನ್ನಿಸಿದಿಷ್ಟು ಎಂದು ಬಿ.ಎನ್. ವಾಸ್ರೆ ಹೀಗೆ ಹಲವರು ಪತ್ರಿಕೆಯಲ್ಲಿ, ಸುನಂದಾ ಕಡವೆ, ರಹಮತ್ ತರಿಕೆರೆ ಇವರು ವೆಬ್ನಲ್ಲಿ  ಲೇಖನ ಬರೆದು ತಮ್ಮ ಪ್ರೀತಿಯ ನಮನ ಅರ್ಪಿಸಿದರು.
ಹೊನ್ನಾವರ, ಕೆರೆಕೋಣ, ಕುಮಟಾ, ಶಿರಸಿ, ಕಾರವಾರ ಹೀಗೆ ಜಿಲ್ಲೆಯಾದ್ಯಂತ ಶ್ರದ್ಧಾಂಜಲಿ ಸಭೆಗಳು ಏರ್ಪಾಟಾದವು. ವಿಷ್ಣು ನಾಯಕ, ರೋಹಿದಾಸ ನಾಯಕ, ಜಯಂತ ಕಾಯ್ಕಿಣಿ, ಚಿಂತಾವiಣಿ ಕೊಡ್ಲಕೆರೆ, ವಿ.ಜಿ. ನಾಯಕ, ಶಾಂತಾರಾಮ ನಾಯಕ ಮುಂತಾದವರು ಭಾಗವಹಿಸಿ ಮಾತನಾಡಿದರು.
ಸಹಯಾನದಲ್ಲಿ ಈಗ ಆತನ ನಡಿಗೆ.
ಅಣ್ಣ ೨೦೦೮ರ ಅಕ್ಟೋಬರ್ ೨೫ ರಂದು ನಮ್ಮನ್ನು ಅಗಲಿದನು. ಅವನು ತನ್ನ ಬದುಕಿನುದ್ದಕ್ಕೂ ಕಂಡ ಸಮಾನತೆಯ ಕನಸನ್ನು ನನಸಾಗಿಸಲು ಅವರ ನೆನಪಿನಲ್ಲಿ 'ಸಹಯಾನ'(ಡಾ.ಆರ್.ವಿ ಭಂಡಾರಿ ನೆನಪಿನ ಸಂಸ್ಕೃತಿ ಅಧ್ಯಯನ ಕೇಂದ್ರ) ಹುಟ್ಟಿಕೊಂಡಿತು. ಆತನ ಸ್ನೇಹಿತರು, ವಿದ್ಯಾರ್ಥಿಗಳು, ಚಳುವಳಿಯ ಸಹಪಾಠಿಗಳು ಸೇರಿ ಸಂಸ್ಥೆಯನ್ನು ಕಟ್ಟುತ್ತಿದ್ದಾರೆ. ೨೦೦೯  ಅಕ್ಟೋಬರ್ ೨೫ ರಂದು ಗೌರವಾನ್ವಿತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್ರಿಂದ ಉದ್ಘಾಟನೆಗೊಂಡಿತು. ಹೊನ್ನಾವರ ತಾಲೂಕು ಕೇಂದ್ರದಿಂದ ೧೧ ಕಿ.ಮಿ ದೂರದ ಗ್ರಾಮೀಣ ಪ್ರದೇಶವಾದ ಕೆರೆಕೋಣದಲ್ಲಿರುವ ಮೂಲ ಮನೆ ಮತ್ತು ಮನೆಯ ಸುತ್ತಲಿರುವ ಕೈತೋಟವನ್ನು ಉಪಯೋಗಿಸಿಕೊಂಡು 'ಸಹಯಾನ' ಕೆಲಸ ಮಾಡುತ್ತಿದೆ. ಪ್ರಜಾಪ್ರಭುತ್ವ, ಜಾತ್ಯಾತೀತತೆ, ವೈಜ್ಞಾನಿಕ ಸಮಾಜವಾದದ ಆದರ್ಶಗಳನ್ನು ಜನತೆಯಲ್ಲಿ ಹರಡುವುದು ಮತ್ತು ಅಸ್ಪೃಶ್ಯತೆ, ಜಾತಿವಾದ, ಕೋಮುವಾದದ ಅಪಾಯಗಳನ್ನು ಸಂಘಟನಾತ್ಮಕವಾಗಿ ಎದುರಿಸುವುದು, ಮೌಢ್ಯತೆ, ಲಿಂಗ ಅಸಮಾನತೆ, ಸಾಮಾಜಿಕ-ಆರ್ಥಿಕ ಅಸಮಾನತೆಯ ಕುರಿತು ಜಾಗೃತಿ ಮೂಡಿಸುವುದು. ಜನಮುಖಿ ಕಲೆ, ಸಾಹಿತ್ಯ ಸಂಸ್ಕೃತಿಯನ್ನು ಪೋಷಿಸುವುದು, ಅಭಿವೃದ್ಧಿಗೊಳಿಸುವುದು, ಯುವ ಲೇಖಕರಿಗೆ, ಶಿಕ್ಷಕರಿಗೆ, ವಿದ್ಯಾರ್ಥಿ, ಯುವ ಜನರಿಗೆ ಓದು ಮತ್ತು ಬರವಣಿಗೆಯನ್ನು ಒಳಗೊಂಡಂತೆ ಸಂವಿಧಾನದ ಆಶಯ ಮತ್ತು ಜಾರಿಯ ಅಗತ್ಯದ ಕುರಿತು ತರಬೇತಿ ನೀಡುವುದು..... ಹೀಗೆ ಹಲವು ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
 ಇವೆಲ್ಲದರ ಮೂಲಕ ಪ್ರಬಲ ಜನತಾ ಸಾಂಸ್ಕೃತಿಕ ಚಳುವಳಿ ಕಟ್ಟುವುದು `ಸಹಯಾನ' ಮಹೋನ್ನತ ಗುರಿಯಾಗಿದೆ. ಉದ್ದೇಶಗಳ ಈಡೇರಿಕೆಗಾಗಿ `ಸಹಯಾನ'ವು ನಿರಂತರವಾಗಿ ಶ್ರಮಿಸುತ್ತಿದ್ದು ಅನೇಕ ಜನಪರ ಕಾರ್ಯಕ್ರಮಗಳನ್ನು ಕಳೆದ ರ್ಷಗಳಿಂದಲೂ ನಡೆಸಿಕೊಂಡು ಬರುತ್ತಿದೆ. ಸಹಯಾನ ಸಾಹಿತ್ಯೋತ್ಸವ-ಜಿಲ್ಲೆಯ ಹೆಮ್ಮೆ ೨೦೧೦ ರಿಂದ ಪ್ರತಿ ರ್ಷವೂ ಮೇ ತಿಂಗಳಿನಲ್ಲಿ  ಕೆರೆಕೋಣದ ಮನೆಯಂಗಳದಲ್ಲಿ ನಡೆಯುತ್ತಿರುವ `ಸಹಯಾನ ಸಾಹಿತ್ಯೋತ್ಸವವು ಸಮಾನ ಮನಸ್ಕ ಸಾಹಿತಿಗಳೆಲ್ಲಾ ಒಂದುಗೂಡಿ ಚರ್ಚಿಸುವ ಅರ್ಥ ಪೂರ್ಣ ಕಾರ್ಯಕ್ರಮವಾಗಿದೆ. ಅತ್ಯಂತ ಗ್ರಾಮೀಣ ಪ್ರದೇಶವಾದ ಕೆರೆಕೋಣದಂತಹ ಊರಿನಲ್ಲೂ ಸಾಹಿತ್ಯದ ಒಲವಿನಿಂದ ಬೇರೆ ಬೇರೆ ಜಿಲ್ಲೆಗಳಿಂದ ಸಾಹಿತಿಗಳು ಆಸಕ್ತರೂ ಆಗಮಿಸುತ್ತಾರೆಸಾಹಿತ್ಯೋತ್ಸವವೆಂದರೆ ಜಾತ್ರೆಯಾಗದಂತೆ ತಡೆಯಲು ಪ್ರತಿಬಾರಿಯೂ ಒಂದೊಂದು ಪ್ರಚಲಿತ ವಿಯವನ್ನು ಆಧಾರವಾಗಿಟ್ಟು ವಿಚಾರಸಂಕಿರಣ, ಸಂವಾದ, ಕವಿಗೋಷ್ಠಿ, ನಾಟಕ, ಜಾನಪದ ಕಲಾ ಪ್ರದರ್ಶನ, ಪುಸ್ತಕ ಮೇಳ ಇತ್ಯಾದಿಗಳು ನಡೆಯುತ್ತವೆ. ಸಾಹಿತ್ಯ, ಸಂಘಟನೆ, ಚಳುವಳಿ, ಪತ್ರಿಕೆ, ಯಕ್ಷಗಾನ, ಜಾನಪದ. ಬುಡಕಟ್ಟು ಅಧ್ಯಯನ, ಸಂಶೋಧನೆ, ಅಕ್ಷರ ಜಾತ್ರೆ....... ಹೀಗೆ ಬದುಕನ್ನು ಸುಂದರವಾಗಿಸಬಲ್ಲ ಅನೇಕ ವಿಭಾಗಗಳಲ್ಲಿ ದುಡಿದವರು ಆರ್.ವಿ. ಯವರು. ಅವರ ಆಶಯಗಳನ್ನೆ ಮುಖ್ಯ ಭೂಮಿಕೆಯಾಗಿಟ್ಟುಕೊಂಡು ಪ್ರತಿವರ್ಷವೂ ಸಾಹಿತ್ಯೋತ್ಸವವನ್ನು ಸಂಘಟಿಸಲಾಗುತ್ತದೆ. ಚಿಂತನದ ಜೊತೆ ಸೇರಿ ಮಕ್ಕಳ ಶಿಬಿರ ನಡೆಸಲಾಗುತ್ತಿದೆ. ಒಬ್ಬ ಕಲಾವಿದರಿಗೆ ಸಹಯಾನ ಸಮ್ಮಾನವನ್ನು ಪ್ರತಿ ವರ್ಷ ಕೊಡಲಾಗುತ್ತಿದೆ. ಕಳೆದ ಒಂದು ವರ್ಷದಿಂದ ಸಂವಿಧಾನ ಓದು ಆಭಿಯಾನವನ್ನು ಸಮುದಾಯದ ಜೊತೆ ಸೇರಿ ನಡೆಸುತ್ತಿದೆ....ಹೀಗೆ ಅಣ್ಣ ಮತ್ತೆ ಮತ್ತೆ ಸಹಯಾನದ ಅಂಗಳಕ್ಕೆ ಬಂದು ಹೋಗುತ್ತಿದ್ದಾನೆ. ಸದಾ ಅವನು ಅಲ್ಲೇ ಇರುವಂತೆ ಮಾಡುವ ಸವಾಲು ನಮ್ಮೆದುರಿದೆ.

ಆತ ಬರೆದ ಕಾರ್ಡನ್ನು ಪೋಸ್ಟ ಮಾಡಲು ನನಗೇ ಹೇಳಬೇಕು! ಮತ್ಯಾರಿದ್ದಾರೆ ಅಲ್ಲಿ?


           
       ಹಾಗೆ ನೋಡಿದರೆ ಅಣ್ಣನದು ತೀರಿಕೊಳ್ಳುವ ವಯಸ್ಸೇನೂ ಆಗಿರಲಿಲ್ಲ. ಆಗ ಆತನಿಗೆ ಕೇವಲ ೭೨ ವರ್ಷ. ಆತನಿಗೆ ಶುಗರ್ ಇರಲಿಲ್ಲ. ಬಿ.ಪಿ. ಇರಲಿಲ್ಲ. ಕಿಟಿಕಿಟಿ ದೇಹ. ದಿನನಿತ್ಯ - ಮೈಲಿ ವಾಕಿಂಗ್ ಮಾಡುತ್ತಿದ್ದ. ಆತನ ಬಟ್ಟೆ ಆತನೇ ತೊಳೆದುಕೊಳ್ಳುತ್ತಿದ್ದ. ತೆಂಗಿನ ಮರಕ್ಕೆ ನೀರು ಬಿಡುತ್ತಿದ್ದ.  ಸದಾ ಓಡಾಟ ಮಾಡುತ್ತಿದ್ದ. ರಾತ್ರಿ ೧೨ ಗಂಟೆಯವರೆಗೆ ಕೂತು ಓದಿ ಬರೆಯುವುದು ಮಾಡುತ್ತಿದ್ದ. ಬೆಳಿಗ್ಗೆ .೩೦ ಕ್ಕೆ ಎದ್ದು ರೇಡಿಯೋ ಹಾಕಿದರೆ ವಾರ್ತೆ ಮುಗಿಯುವವರೆಗೆ ಅದು ಮಾತಾಡುತ್ತಿರುತ್ತಿತ್ತು. ಊಟವೂ ದೊಡ್ಡದಲ್ಲ. ಬೆಳಿಗ್ಗೆ ತಿಂಡಿ ತಿಂದರೆ ಮಧ್ಯಾಹ್ನ ಊಟ, ಸಂಜೆ ಚಹಾ, ಮತ್ತೆ ರಾತ್ರಿ ಊಟ ಅಷ್ಟೇ. ಕರಿದ ಪದಾರ್ಥ, ಸಿಹಿ ಇತ್ಯಾದಿ ಅತಿಯಾಗಿ ಏನೂ ತಿನ್ನುತ್ತಿರಲಿಲ್ಲ..... ಆದರೂ ಆತನಿಗೆ ಬಂದ ನ್ಯುಮೋನಿಯಾ, ಉಸಿರಾಟದ ತೊಂದರೆ, ಒಂದೆರಡು ಸಲ ಆದ ಸರ್ಪಸುತ್ತು, ಕುರು(ಕೀವು ತುಂಬಿದ ಒಂದು ಬಗೆಯ ಸಣ್ಣ ಗಡ್ಡೆ) ಸದಾ ಇರುವ ನೆಗಡಿ..... ಅವನ ಕೊನೆಯ ದಿನಗಳನ್ನು ಕಷ್ಟವಾಗಿಸಿತು. ಆತನಿಗೆ ಆದ ಸರ್ಪಸುತ್ತಿನ ಮೇಲಿನ ಗಾಯ ಆರಿದರೂ ಒಳಗಾಯ ಹಾಗೇ ಉಳಿಯಿತು. ಅಂಗಿ ಬನಿಯನ್ ಹಾಕಿದರೆ ಹಸಿಗಾಯದ ಮೇಲೆ ಬಟ್ಟೆ ಹಾಕಿದಂತಾಗುತ್ತದೆಂದು ಹೇಳುತ್ತಿದ್ದ. ಬಸ್ಅಲ್ಲಿ, ಕಾರ್ಯಕ್ರಮದಲ್ಲಿ ಹಾಕಿಕೊಂಡ ಜುಬ್ಬಾವನ್ನು ಹಲವು ಬಾರಿ ಕೈಯಲ್ಲಿ ಎತ್ತಿ ಹಿಡಿದುಕೊಂಡಿರುತ್ತಿದ್ದ. ಅಷ್ಟು ಅವನನ್ನು ಅದು ಕಾಡಿತ್ತು. ಮತ್ತು ಆಗಾಗ ಅವನಿಗೆ ಏಳುವ ಕುರು ದೊಡ್ಡ ಹಿಂಸೆ ಕೊಡುತ್ತಿತ್ತು. ಆದರೆ ಅದೆಲ್ಲಾ ಸಹಿಸಿಕೊಂಡೇ ಅವನು ಓದು, ಬರೆಹದಲ್ಲಿ ತಲ್ಲೀನನಾಗಿರುತ್ತಿದ್ದ.
     ಒಮ್ಮೆ ವಾಕಿಂಗ್ ಮುಗಿಸಿ ಬರುವಾಗ ಯಾರೋ ಒಬ್ಬ ಎಲೆಚೂಳಿ ಹಾಕಿಕೊಂಡು ಹೋಗುವ ಬೈಕ್ ಈತನಿಗೆ ಹೊಡೆದು ಗಟಾರಕ್ಕೆ ಕೆಡವಿ ಹೋಗಿತ್ತು. ಅಲ್ಲಿಂದ ಪ್ರಾರಂಭವಾದ ಆತನ ಆಸ್ಪತ್ರೆ ಪಯಣ ಅವನ ಜೀವನದ ಕೊನೆಯವರೆಗೂ ಮುಂದುವರಿಯಿತು.
      ಮೊದಮೊದಲು ವರ್ಷಕ್ಕೆ - ಬಾರಿ ಆಸ್ಪತ್ರೆಗೆ ಹೋಗುವುದಿತ್ತು. ನಂತರ ತಿಂಗಳಿಗೆ ಬಾರಿ ಬಾರಿ ಹೋಗಬೇಕಾಯಿತು. ಆಗಾಗ ಕಾಡುವ ಯೂರಿನ್ ಇನ್ಫೆಕ್ಷನ್ಗೆ ಸಾವಿರಾರು ರೂ.ಗಳನ್ನು ದೊಡ್ಡಾಸ್ಪತ್ರೆಯಲ್ಲಿ ಖರ್ಚು ಮಾಡಿದರು. ಆದರೆ ಒಮ್ಮೆ ಶಿರಸಿಯಲ್ಲಿ ಡಾ|| ಪಟವರ್ಧನ ಅವರು ನೋಡಿ ೨೫೦ ರೂ. ಔಷಧ ಕೊಟ್ಟು ಅದನ್ನು ಪೂರ್ತಿಯಾಗಿ ವಾಸಿ ಮಾಡಿಕೊಟ್ಟರು. ಅಲ್ಲಿಂದ ಆತ ಅದೊಂದು ಖಾಯಿಲೆಯಿಂದ ಬಚಾವಾದ. ಸಾವಕಾಶ ಡಿಮೆನ್ಶಿಯಾ ಕಾಡಲು ಪ್ರಾರಂಭಿಸಿತು. ಆಗಲೇ ಆತನನ್ನು ನಾನು ಕೆರೆಕೋಣಿನಿಂದ ಸಿದ್ದಾಪುರಕ್ಕೆ ಕರೆದುಕೊಂಡು ಹೋದೆ. ಸುಮಾರು ಒಂದು ಒಂದುವರೆ ವರ್ಷ ಇನ್ನಕ್ಕ, ಯಮುನಾ, ಮಾಧವಿಯರ ಆರೈಕೆಯಲ್ಲಿ ಉಳಿದ. ಅವನ ಅನಾರೋಗ್ಯದಲ್ಲಿಯೇ ಸಿದ್ದಾಪುರದ ಸಾಹಿತ್ಯಾಸಕ್ತರು -ಜಿ.ಜಿ. ಹೆಗಡೆ, ಸಿ.ಎಸ್. ಗೌಡರ್, ಹೊನ್ನೆಗುಂಡಿ- ಮುಂತಾದವರು ಮನೆಗೆ ಬಂದು ಸನ್ಮಾನಿಸಿ ಹೋದರು. ನನಗ್ಯಾಕೆ ಸನ್ಮಾನ? ಅನಾರೋಗ್ಯದಲ್ಲಿದ್ದಾನೆ ಎಂದೆ? ಎಂದು ಸಣ್ಣಗೆ ತಮಾಷೆ ಮಾಡಿದ್ದ.
          ಅಣ್ಣನ ಅನಾರೋಗ್ಯ ಇನ್ನಷ್ಟು ಉಲ್ಬಣವಾಗುತ್ತಿರುವಾಗ ಒಂದಿಷ್ಟು ದಿನ ಮಾಧವಿ ತನ್ನ ಮನೆಗೆ ಕರೆದುಕೊಂಡು ಹೋಗಿದ್ದಳು. ಅಲ್ಲಿಯೇ ಅಣ್ಣನಮೀನ್ಪಳ್ದಿ ಕಥಾಸಂಕಲನ ಬಿಡುಗಡೆಯಾಗಿದ್ದು. ಅಣ್ಣನ ಸ್ನೇಹಿತರೆಲ್ಲಾ ಚಿಂತನದ ಆಹ್ವಾನದ ಮೇರೆಗೆ ಮಾಧವಿ ಮನೆಗೆ ಬಂದು ಪುಸ್ತಕ ಬಿಡುಗಡೆಯಲ್ಲಿ ಪಾಲ್ಗೊಂಡಿದ್ದರು. ಡಾ. ಎಂ.ಜಿ. ಹೆಗಡೆಯವರು ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ನೆನಪು.
         ಕೊನೆಯ ದಿನಗಳು ಹೆಚ್ಚು ಕಡಿಮೆ ಮಣಿಪಾಲ ಆಸ್ಪತ್ರೆಯಲ್ಲಿಯೇ ಕಳೆದ. ಆಸ್ಪತ್ರೆಯಲ್ಲಿ ಇರುವಾಗಲೂ ಆತನ ತಲೆಯ ಹತ್ತಿರ ಒಂದು ಪುಸ್ತಕ, ಒಂದು ಡೈರಿ, ಇನ್ನೊಂದು ಪೆನ್ನು ಇರಲೇಬೇಕು. ಆತ ನಮ್ಮನ್ನಗಲಿದ್ದು ೨೦೦೮ ಅಕ್ಟೊಬರ್ನಲ್ಲಿ. ಆತ ನವೆಂಬರ್ ಡಿಸೆಂಬರ್ ೨೦೦೭ ವರೆಗೂ ಕವಿತೆ, ಕತೆ ಬರೆಯುತ್ತಿದ್ದ. ಅದರೆ ಅದು ಒಮ್ಮೊಮ್ಮೆ ಏನು ಎಂದು ಗೊತ್ತಾಗುತ್ತಿರಲಿಲ್ಲ. ಕಾಟು ಹಾಕುತ್ತಿದ್ದ. ಕೆಲವನ್ನು ಬರೆದು ಯಮುನಾಳ ಹತ್ತಿರ copy ಮಾಡಲು ನೀಡುತ್ತಿದ್ದ. ಸಾಮಾನ್ಯವಾಗಿ ಕೊನೆಯ ದಿನಗಳಲ್ಲಿ ಅಣ್ಣನ ಜೊತೆ ಹೆಚ್ಚು ಕಳೆದದ್ದು ಇನ್ನಕ್ಕ, ಯಮುನಾ ಮತ್ತು ಗಣಪತಿ. ಹಾಗೆಯೆ ಅತ್ತಿಗೆ(ಗಣಪತಿಯ ತಾಯಿ)-ಅಂತ್ಯಂತ ಕಾಳಜಿ ಮತ್ತು ಪ್ರೀತಿಯಿಂದ ಅಣ್ಣನ ಊಟ ಸಿದ್ಧತೆ ಮಾಡಿಕೊಡುತ್ತಿದ್ದಳು. ರೋಹಿದಾಸ ಭಾವನ ಸೇವೆ ಮಾಡುವ ಪುಣ್ಯದ ಕೆಲಸವೆಂದು ಹೇಳುತ್ತಿದ್ದಳು. ಅಷ್ಟೊಂದು ಪ್ರೀತಿ ಮತ್ತು ಭಕ್ತಿ ಅವಳಿಗೆ. ಅಕ್ಕ ಎಂದರೂ ಅವಳಿಗೆ ಇಷ್ಟವೆ. ಅಣ್ಣನಿಗೂ ಹಾಗೆ. ಸಾವಿತ್ರೀ ಅಂತ ಬಾಯಿ ತುಂಬಾ ಕರೆಯುತ್ತಿದ್ದ. ಅತ್ತಿಗೆ ತುಂಬಾ ಚೆಂದ ಹಾಡುತ್ತಿದ್ದಳು. ಎಂತಾ ಕಿತ್ತು ತಿನ್ನುವ ಬಡತನದಲ್ಲೂ ಎದೆಗುಂದದೆ ದೊಡ್ಡ ಸಂಸಾರ ನಡೆಸಿದ ಅವಳೆಂದರೆ ಅಷ್ಟೊಂದು ಪ್ರೀತಿ ಅವನಿಗೂ- ಸುನಿತಕ್ಕ.  ನಾನು ಮತ್ತು ಮಾಧವಿ ಇಬ್ಬರೂ ಕಾಲೇಜಿನ ಕೆಲಸಕ್ಕೆ ಹೋಗುತ್ತಿರುವುದರಿಂದ ರಜೆ ಇದ್ದಾಗ ಹೆಚ್ಚು ಭೇಟಿ ಕೊಡುತ್ತಿದ್ದೆವು. ಯಮುನಾ ಇದ್ದಷ್ಟು ಹೊತ್ತು ಅವನಿಗೆ ಏನಾದರೂ ಬರೆಯಲು ಹೇಳುತ್ತಿದ್ದಳು.ಅಲ್ಲಿಯ ನರ್ಸರನ್ನು ಪಾರಿವಾಳಗಳಿಗೆ ಹೋಲಿಸಿ ಪದ್ಯ ಬರೆದಿದ್ದ. ಅದನ್ನ ನೋಡಿ ಅವರು ತುಂಬಾ ಖಿಷಿಗೊಂಡಿದ್ದರು.
ಆತ ಕೊನೆಯಲ್ಲಿ ಬರೆದ ಕವಿತೆಯ ತುಣುಕುಗಳಿವು:
ಕಟ್ಕಟ್ ಎಂಬ ಶಬ್ದ ಕೇಳುತ್ತಲೇ ಇದೆ
ಹಗಲು ರಾತ್ರಿ ಎಂಬ ಭೇದವೇ ಇಲ್ಲ.
ಒಂದೊಂದು ಹೊಡೆತಕ್ಕ ಬಂಡೆ ಬದಲುಗೊಳ್ಳುತ್ತದೆ.
ಇದೇ ಸರಿಯಾದುದು ಇದರ ಹೊರತು
ಯಂತ್ರಗಾರಿಕೆ ಬೆಳೆಯಲಾರದು
ದೇಶದ ಉನ್ನತಿ ಆಗಲಾರದು೧೫-೦೮-೨೦೦೭
ಎಂದು ಬರೆಯಲು ಹೋದ ಸಾಲುಗಳು ಅಲ್ಲಲ್ಲೆ ನಿಂತು ಬಿಡುತ್ತಿದ್ದವು. ಇಡೀ ದಿನ ಮಕ್ಕಳದೇ ನೆನಪು ಮಾಡುವುದು. ಮಾಧವಿಯ ಹತ್ತಿರ ಆಸ್ಪತ್ರೆ ಮಂಚದ ಮೇಲೆ ಕುಳಿತು ಅಲ್ಲಿ ಮಕ್ಕಳು ಓಡಾಡುತ್ತಾರೆ, ಅವರನ್ನು ಒಳಗೆ ಕರೆ, ಅವರಿಗೆ ತಿಂಡಿ ಕೊಡು, ಅವರನ್ನು ಮಾತನಾಡಿಸು...... ಹೀಗೆ ಮಕ್ಕಳ ಕುರಿತೇ ಮಾತನಾಡುತ್ತಿದ್ದ.
ಬನ್ನಿ ಮಕ್ಕಳೆ ಇದು ನಿಮ್ಮದೇ ಉದ್ಯಾನ
ನೂರಾರು ಬಣ್ಣ ಹೂವುಗಳ ಪಕಳೆ
ಹೇಗೆ ತೂಗುತ್ತವೆ ನೋಡಿ
..........”
ಹೀಗೆ ಮಕ್ಕಳ ಕುರಿತೇ ಒಂದು ಪದ್ಯ ಬರೆದು ದಿನಾಂಕ & ಮಣಿಪಾಲ ಆಸ್ಪತ್ರೆಯಿಂದ ಎಂದು ಬರೆಯುತ್ತಿದ್ದ.
ತುಳಿಯದಿರಿ, ಮಕ್ಕಳೇ ಚಿನ್ನ, ಜಡ, ಮೋಡ, ಮುಂತಾದ ಕವಿತೆಗಳನ್ನು ಆತ ಬರೆದಿಟ್ಟಿದ್ದ. ಕೊನೆಯ ದಿನಗಳಲ್ಲಿ ಆತ ಬರೆದ ಕವಿತೆ
ನಾನು ಸಣ್ಣವನಿದ್ದಾಗ
ಕಣ್ ಕಂಗಲ ಹಿಡಿದು
ಸೂರ್ಯನ ನೋಡುತ್ತಿದ್ದೆ
ಆಡುತ್ತಿದ್ದೆ
ಈಗ
ನಾನು ಸೂರ್ಯನಿಲ್ಲದ ಲೋಕಕ್ಕೆ
ಹೊರಟಿದ್ದೆÃನೆ.”
 ಓದಿ ಯಾರ ಕಣ್ಣನ್ನೂ ಆರ್ದ್ರಗೊಳಿಸುವಂತಿತ್ತು. ಕೊನೆಯ ದಿನಗಳಲ್ಲಿ ಬರೆದ ಕವಿತೆಗಳು ಅಸ್ಪಷ್ಟವಾಗಿದ್ದವು. ಅಕ್ಷರಗಳು ಅಸ್ತವ್ಯಸ್ತ ಇರುತ್ತಿತ್ತು. ಕೆಲವು ಸಾಲುಗಳು ಸಂಬಂಧ ಕಳೆದುಕೊಂಡಿದ್ದವು. ಆದರೂ ಆತ ಬರೆಯುವುದನ್ನು ಮಾತ್ರ ಬಿಡಲಿಲ್ಲ. ಕೊನೆಕೊನೆಗೆ ಕೈ ಎತ್ತಲು ಆಗದಿದ್ದರೂ ತಲೆಯ ಪಕ್ಕದಲ್ಲಿ ಪಟ್ಟಿ, ಪೆನ್ನು ಇದೆಯಾ ಎಂದು ನೋಡಿಕೊಳ್ಳುತ್ತಿದ್ದ.
                ಅಣ್ಣ ಕೊನೆಯ ಒಂದು ವಾರ ಕೃತಕ ಉಸಿರಾಟದಲ್ಲಿಯೇ ಇದ್ದದ್ದು. ಐಸಿಯು ದಲ್ಲಿ ಮಲಗಿದ್ದ. ಮೂಗು, ಬಾಯಿ, ಎದೆ, ಕೈಬೆರಳು, ಕಾಲು ಬೆರಳು ಇವಕ್ಕೆಲ್ಲ ಏನೇನೋ ಯಂತ್ರವನ್ನು ಅಳವಡಿಸಿದ್ದರು. ಆತನನ್ನು ಉಳಿಸಿಕೊಳ್ಳಲು ಮಾಡಿದ ಎಲ್ಲಾ ಪ್ರಯತ್ನವೂ ವಿಫಲವಾಗುತ್ತಿತ್ತು. ಬೆಳಿಗ್ಗೆ ಅರ್ಧ ಗಂಟೆ ಮತ್ತು ಸಂಜೆ ಅರ್ಧ ಗಂಟೆ ಅಣ್ಣನನ್ನು ನೋಡಲು ಐಸಿಯು ಒಳಗೆ ಬಿಡುತ್ತಿದ್ದರು. ಬೆಳಿಗ್ಗೆ ರಿಂದ ಸಂಜೆ ಗಂಟೆ ಆಗುವ ತನಕ ಹೊರಗೆ ಕಾದು ಕುಳಿತಿರುತ್ತಿದ್ದೆವು. ಗಡಿಯಾರವು ತೀರಾ ಸಾವಕಾಶ ಓಡಿದಂತೆ ಅನಿಸುತ್ತಿತ್ತು. ಒಳಗೆ ಹೋದಾಗ ಮಾತ್ರ ೩೦ ನಿಮಿಷಗಳ ಕಾಲ ಗಡಿಯಾರ ವೇಗವಾಗಿ ಓಡುವ ನೋವು. ಅಣ್ಣನ ನೋಡುವ ತವಕ. ಆತ ಒಮ್ಮೆ ಕಣ್ಣು ಬಿಟ್ಟು ನೋಡಿದರೆ ಅಂದೇ ನಮಗೆ ಹಬ್ಬ. ನಾನು ಇನ್ನಕ್ಕ, ಮಾಧವಿ ಯಮುನಾ ಎಲ್ಲರೂ ಅಣ್ಣ ನನ್ನನ್ನು ನೋಡಿದ ನನ್ನನ್ನು ನೋಡಿದ ಎಂದು ಸಂಭ್ರಮ ಪಡುತ್ತಿದ್ದೆವು. ಅವನು ಅಸಹಾಯಕತೆಯಿಂದ ಕೈಕಾಲು ಸ್ವಲ್ಪ ಎತ್ತುವುದಕ್ಕೆ, ತುಟಿಯನ್ನು ಅಗಲಿಸುವುದಕ್ಕೆ, ಕಣ್ಣನ್ನು ತೆರೆಯುವುದಕ್ಕೆ ನಾವು ನಮ್ಮದೇ ಆದ ವಿಶೇಷ ಅರ್ಥ ಕಲ್ಪಿಸಿಕೊಂಡು ಮತ್ತೆ ಸಂಜೆ ವರೆಗೆ ಚರ್ಚಿಸುತ್ತಾ ಕೂತಿರುತ್ತಿದ್ದೆವು. ಮೊದಲು ಅಣ್ಣನನ್ನು ನೋಡುವವರು ಯಾರು ಎಂದು ನಮ್ಮ ನಮ್ಮಲ್ಲೇ ಒಂದು ಸ್ಪರ್ಧೆ ಇರುತ್ತಿತ್ತು. ನಮ್ಮಂತೆ ಐಸಿಯುದ ಬಾಗಿಲಲ್ಲಿ ಇಂಥ ಹತ್ತಾರು ಕುಟುಂಬಗಳು ಕಾದು ಕುಳಿತಿರುತ್ತಿದ್ದವು. ಏನಾದರೂ ಸುಳ್ಳು ಹೇಳಿ ಒಳಗೆ ಹೋಗು ಪ್ರಯತ್ನ ನಡೆದೇ ಇರುತ್ತಿತ್ತು.
                ಕೊನೆಗೂ ವೈದ್ಯರು ಮತ್ತು ನಮ್ಮ ನಡುವಿನ ಸಂಘರ್ಷದ ದಿನ ಹತ್ತಿರ ಬಂತು. ಅಣ್ಣನ ಕೈಕಾಲುಗಳು ಬಾತುಕೊಳ್ಳಲು (ಸ್ವೆಲ್ಲಿಂಗ್) ಪ್ರಾರಂಭಿಸಿತು. ಕೃತಕ ಉಸಿರಾಟಕ್ಕೂ ದೇಹ ಒಗ್ಗಿಕೊಳ್ಳಲು ನಿರಾಕರಿಸುತ್ತಿತ್ತು. ಕೃತಕ ಉಸಿರಾಟ ತಪ್ಪಿಸಿದರೆ ಅಣ್ಣ ನಮ್ಮನ್ನಗಲುತ್ತಾನೆ. ತಪ್ಪಿಸದಿದ್ದರೆ ದೇಹ ಮತ್ತಿಷ್ಟು ಹದಗೆಡುತ್ತಾ ಹೋಗುತ್ತದೆ. ಹಾಗಾಗಿ ವೈದ್ಯರು ನನ್ನನ್ನು ಕರೆದು ನಿಮ್ಮ ಆಯ್ಕೆ ಯಾವುದೆಂದು ಕೇಳುತ್ತಿದ್ದರು. “ಅವನನ್ನು ನೋಡಿಕೊಳ್ಳುತ್ತಿರುವ ವೈದ್ಯರು ನೀವು, ತೀರ್ಮಾನ ನೀವೇ ತೆಗೆದುಕೊಳ್ಳಬೇಕು ಎನ್ನುತ್ತಿದ್ದೆ. ಇದು ಒಂದರ್ಥದಲ್ಲಿ ಅಣ್ಣನ ಸಾವಿನ ದಿನವನ್ನು ನಿರ್ಧರಿಸುವವರು ಯಾರು ಎಂಬ ನಮ್ಮಿಬ್ಬರ ನಡುವಿನ ಒಂದು ಸಂಕಷ್ಟದ ವಾದ ವಿವಾದ. ನಾನು ದಿನವನ್ನು ಮುಂದೂಡತ್ತಲೇ ಇದ್ದೆ. ಆದರೆ ವೈದ್ಯರೇ ಸಲಹೆ ನೀಡುವ ದಿನ ಹತ್ತಿರ ಬಂತು. ೨೫ ನೇ ತಾರೀಖು ಅಣ್ಣನ ದೇಹ ಎಲ್ಲಾ ರೀತಿಯ ಚಿಕಿತ್ಸೆಗೂ ಕಿಂಚಿತ್ತೂ ಸ್ಪಂದಿಸದ ದಿನ ಅದು. ಬಹುಶಃ ಮಧ್ಯಾಹ್ನ ಗಂಟೆ ಹೊತ್ತಿಗೆ ಆಸ್ಪತ್ರೆಯನ್ನು ಬಿಟ್ಟು ಮನೆಯ ಕಡೆಗೆ ಹೊರಟೆವು.
ಯಾವ ದೀಪಾವಳಿ ಅವನಿಗೆ ತೀರಾ ಇಷ್ಟದ ಬೆಳಕಿನ ದಿನವಾಗಿತ್ತೋ  ದೀಪಾವಳಿಯ ಮುನ್ನಾದಿನವೇ ಆತನ ಜೀವದೀಪ ಆರಿಹೋಯಿತು. ಯಾವಾಗಲೂ ಅಣ್ಣ ಪ್ರೀತಿಯಿಂದ ದೀಪ ಹಚ್ಚುತ್ತಿದ್ದ. ಬಡತನದಲ್ಲಿ ಮೇಣದ ಬತ್ತಿ ತರಲಾಗದಿದ್ದರೂ ಸಂಬಂಧಿಕರ ಮನೆಯಿಂದಾದರೂ ತಂದು ಹಚ್ಚಿದ ಮೇಣದ ಬತ್ತಿ ಇಂದು ನಂದಿ ಹೋಯಿತು. ಸದಾ ಬೆಳಕಿನ ಬಗ್ಗೆ ಮಾತನಾಡುವ ಮನೆಯಲ್ಲಿ ಬೆಳಕು ಆರಿ ಕತ್ತಲಾವರಿಸಿತು. ಇಂದು ಇಂಥ ಸಾವಿರಾರು ಮೇಣದ ಬತ್ತಿಯನ್ನು ತಂದು ಹಚ್ಚುವ ಸ್ಥಿತಿ ಇದೆ. ಆದರೆ ಅಣ್ಣ ಇಲ್ಲ. ಅಣ್ಣನ ನೆನಪು ಮಾತ್ರ ಸಹಯಾನದ ರೂಪ ಪಡೆದಿದೆ.
       ಕೆರೆಕೋಣದ ಮನೆಯಲ್ಲಿ ರಾತ್ರಿಯಿಡೀ ದೊಡ್ಡ ಮಂಜುಗಡ್ಡೆಯ ಮೇಲೆ ಮಲಗಿದ್ದು ನೋಡಿದರೆ ಹೊಟ್ಟೆಯಲ್ಲಿ ಚುರ್ ಅನ್ನಿಸುತ್ತಿತ್ತು. ರಾತ್ರಿಯಿಡಿ ಮಂಜುಗಡ್ಡೆಯ ಮೇಲೆ ಮಲಗಿದರೆ ಚಳಿಯಾಗದೆ? ಆತ ಯಾವಾಗಲೂ ಇಷ್ಟಪಡುವ ಕರಿಕಂಬಳಿಯನ್ನು (ಕಂಬಳಿಯನ್ನು ಆತ ಸಿದ್ದಾಪುರದಿಂದ ಭಾವನಿಗೆ ಹೇಳಿ ತರಿಸಿಕೊಳ್ಳುತ್ತಿದ್ದ.) ಹೊದೆಸಿ ಬಿಡೋಣವೇ ಅನ್ನಿಸುತ್ತಿತ್ತು.
          ಅಂತ್ಯಕ್ರಿಯೆಯಲ್ಲಿ ಯಾವ ಧಾರ್ಮಿಕ ವಿಧಿ ವಿಧಾನವೂ ಇರಲಿಲ್ಲ. ಏಕೆಂದರೆ, ಅದು ಅವನ ಆಸೆಗೆ ವಿರುದ್ಧವಾದದ್ದು. ನಾನೂ ಹೆಗಲು ಕೊಟ್ಟೆ. ನಾನು, ಇನ್ನಕ್ಕ, ಮಾಧವಿ, ಯಮುನಾ ನಾಲ್ವರು ಸೇರಿ ಅಗ್ನಿ ಸ್ಪರ್ಷ ಮಾಡಿದೆವು.
       ಅಕ್ಕ ನಮ್ಮನ್ನಗಲಿದಾಗ ಕೂಡ ಅದೇ ಸ್ಥಳದಲ್ಲಿಯೇ ಅಂತ್ಯಕ್ರಿಯೆ ಮಾಡಿದ್ದು. ಹಿಂದೆ ಆಯಿಯನ್ನೂ(ಅಣ್ಣನ ತಾಯಿ) ಅದೇ ಜಾಗದಲ್ಲಿಯೇ ಅಂತ್ಯಕ್ರಿಯೆ ಮಾಡಿದ್ದು. ಮೂವರೂ ಒಟ್ಟಿಗೆ ಇದ್ದಾರೆ. ಅಡಿಗೆ ಮಾಡಿಕೊಡಲು, ಖರ್ಚು-ವೆಚ್ಚ ತೂಗಿಸಲು ಅಕ್ಕ, ಕವಳ ಜಪ್ಪಿ ಹದ ಮಾಡಿಕೊಡಲು ಆಯಿ ಅಲ್ಲೇ ಇದ್ದಾರೆ. ಆದರೆ ಅಣ್ಣನ ಬಗಲ ಚೀಲದಲ್ಲಿರುವ ಕವಿತೆ ಕೇಳುವವರು ಯಾರು? ಬಹುಶಃ ಆಯಿ ಹುಡ್ಗ ಸುಮ್ಮನೆ ಮಲಿಕಾ ನೋಡ್ವಾ ಎಂದು ಹುಸಿಕೋಪ ತೋರುತ್ತಿರಬಹುದೆ? ಅಥವಾ ಅಕ್ಕ, ಆಯಿ ಇಬ್ಬರಿಗೂ ಅಣ್ಣ ಕವಿತೆ ಕೇಳುವ ರೂಢಿಯನ್ನು ಮಾಡಿಸಿರಬಹುದೆ? ಆತ ಬರೆದ ಕಾರ್ಡನ್ನು ಪೋಸ್ಟ ಮಾಡಲು ಅಲ್ಲಿ ನಾನಿಲ್ಲ. ಮತ್ಯಾರಿದ್ದಾರೆ?

      ಅನಿವಾರ್ಯವಾಗಿ ಅತ ನನ್ನಲ್ಲಿಯೇ ಬರಬೇಕು. ‘ಮರಿ ಇದನ್ನು ಸರಿಯಾಗಿ ತೂಕ ಮಾಡಿ ಸ್ಟಾಂಪ್ ಅಂಟಿಸಿ ಹಾಕು. ಇಲ್ಲದಿದ್ದರೆ ಡ್ಯೂ ಆಗುತ್ತದೆ. ಪಾಪ, ಅವರಿಗೆ ಅನವಶ್ಯಕ ಖರ್ಚು ಎಂದು ನನ್ನಲ್ಲಿ ಹೇಳದೆ ಆತ ಮತ್ಯಾರಲ್ಲಿ ಹೇಳುತ್ತಾನೆ?
                                                                                                                                ವಿಠ್ಠಲ ಭಂಡಾರಿ