“ಅಣ್ಣನನ್ನು
ಪರಿಚಯಿಸಲು ಆಗಲಿಲ್ಲ ಎನ್ನುವ ಕೊರಗು
ಮತ್ತು
ಅಣ್ಣ ಅಕ್ಷರದ ತೆಕ್ಕೆಗೆ
ಸಿಗಲೇ ಇಲ್ಲ ಎನ್ನುವ ಸತ್ಯ
ನನ್ನ ಎದುರಿಗಿದೆ.”
- ವಿಠ್ಠಲ ಭಂಡಾರಿ
ರಾತ್ರಿಯಿಂದಲೇ
ಜನ ಬರಲಾರಂಭಿಸಿದರು. ಮಣಿಪಾಲದಿಂದ ಬಂದು ಸೇರಲು ರಾತ್ರಿಯಾಗಿತ್ತು.
ಆಗಲೇ ಮನೆಯಂಗಳದ ತುಂಬ ಜನರ ಸಂತೆ.
ಸಂಬಂಧಿಕರು, ಅಣ್ಣನ ಆಪ್ತೇಷ್ಟರು,
ಊರವರು, ಎಲ್ಲರೂ ನೆರೆದಿದ್ದರು. ಆಶ್ಚರ್ಯವೆಂದರೆ
ಸದಾ ಅಣ್ಣನನ್ನು ದ್ವೇಷಿಸುವವರು ಅಲ್ಲಿ
ಸೇರಿ ನಾಲ್ಕು ಒಳ್ಳೆಯ ಮಾತನ್ನು
ಆಡಿದರು.
ಅಲ್ಲೇ ಅಂತ್ಯಕ್ರಿಯೆ ನಡೆದ ಸ್ವಲ್ಪ ಹೊತ್ತಿನಲ್ಲಿಯೇ
ಒಂದು ಶ್ರದ್ಧಾಂಜಲಿ ಸಭೆ ನಡೆಯಿತು. ಹೊರಗಿನಿಂದ
ಬಂದವರೊಂದಿಗೆ ಊರಜನರೂ, ಸಂಬಂಧಿಕರೂ ಈ
ಸಭೆಗೆ ಕಿವಿ, ಮನಸ್ಸುಗಳಾಗಿದ್ದರು.
ಬೆಂಗಳೂರಿನಿಂದ
ಬಂದ ಜಿ.ಎಸ್. ನಾಗರಾಜ
(ಕಾರ್ಯದರ್ಶಿ ಸಿ.ಪಿ.ಐ.ಎಮ್.) ಎಸ್.ವೈ.
ಗುರುಶಾಂತ, ಎಸ್. ವರಲಕ್ಷ್ಮೀ, ಡಾ ಎನ್.ಆರ್. ನಾಯಕ,
ಎಂ. ಜಿ. ಹೆಗಡೆ, ಮೋಹನ
ಹಬ್ಬು, ಶಾಂತಾರಾಮ ನಾಯಕ ಹಿಚ್ಕಡ, ಕೃಷ್ಣಾನಾಯಕ
ಹಿಚ್ಕಡ, ಶಾಂತಿ ನಾಯಕ ಮುಂತಾದ
ಹಲವರು ಬಂದಿದ್ದರು. ಕೆಲವರು ಸಭೆಯಲ್ಲಿ ಮಾತನಾಡಿದರು.
ಅಣ್ಣನ ಬದುಕಿನ ಹಲವು ಮಗ್ಗಲುಗಳನ್ನು
ತೆರೆದಿಟ್ಟರು. ಹಲವರು ಅಣ್ಣನೊಂದಿಗಿನ ತಮ್ಮ ಸ್ನೇಹವನ್ನು ಬಿಚ್ಚಿಟ್ಟರು. ಅವರೆಲ್ಲರ
ಮಾತುಗಳನ್ನು ರೆಕಾರ್ಡ್ ಮಾಡಿಕೊಳ್ಳುವ ವ್ಯವಸ್ಥೆಯಿದ್ದಿದ್ದರೆ ಎಷ್ಟು ಒಳ್ಳೆಯದಾಗಿರುತ್ತಿತ್ತು ಎಂದು ಈಗ
ಅನ್ನಿಸುತ್ತದೆ. ಎಷೊಂದು ಒಳ್ಳೆಯ, ಅಪರೂಪದ
ಸಂಗತಿಗಳು ದಾಖಲಾಗುತ್ತಿದ್ದವು! ಆದರೆ ಆ ದಿನ
ಅದೇನೂ ನೆನಪಿನಲ್ಲಿ ಉಳಿದಿರಲಿಲ್ಲ.
ನಾನೂ ಖಾಲಿಯಾಗಿದ್ದೆ. ಗ್ರಹಿಸುವ ಸ್ಥಿತಿಯಲ್ಲಿ ಇರಲಿಲ್ಲ. ಅಕ್ಕ, ಮಾಧವಿ, ಇನ್ನಕ್ಕರನ್ನು
ಸುಧಾರಿಸುವ ಜವಾಬ್ದಾರಿ ಕೂಡ ನನ್ನ ಮತ್ತು
ಯಮುನಾಳ ಮೇಲೆಯೇ ಇತ್ತು.
ಒಂದೆಡೆ
ಬಂದವರೊಂದಿಗೆ ಮಾತನಾಡಬೇಕು. ವಿವಿಧ ಊರುಗಳಿಂದ ಸ್ಥಿರದೂರವಾಣಿ
ಸಾಂತ್ವನದ ಫೋನುಗಳಿಗೆ ಉತ್ತರಿಸಬೇಕು. ಪತ್ರಿಕೆಗಳಿಗೆ ಅಣ್ಣನ ಕುರಿತ ವಿವರ,
ಫೋಟೋ ಇತ್ಯಾದಿಗಳನ್ನು ಕಳುಹಿಸಲು ತೊಡಗಬೇಕು. ಊರಿನಲ್ಲಿ ಕಳುಹಿಸುವ ವ್ಯವಸ್ಥೆ ಇಲ್ಲ. ಹೊನ್ನಾವರಕ್ಕೆ ಹೋಗಬೇಕು.
ಹೆಚ್ಚು ಕಡಿಮೆ ಇಡೀ ದಿನ
ಒಂದೆಡೆ ಕುಳಿತು ಅಳಲೂ ಸಮಯವಿಲ್ಲದಷ್ಟು
ಕೆಲಸ.
ಬಂದವರೆಲ್ಲ
ಒಬ್ಬೊಬ್ಬರೇ ಹೋಗುತ್ತಿದ್ದಂತೆ ಒಂಟಿ ಎನಿಸತೊಡಗಿತು. ನಾಳೆ
ಮತ್ತೆ ಅಣ್ಣ ಸಿಗುವುದಿಲ್ಲ ಎನ್ನಿಸಿದಾಗ
ತುಂಬಾ ಖೇದವೆನಿಸಿತು.
ನಂತರ ಹೊನ್ನಾವರ, ಅಂಕೋಲಾ, ದಾಂಡೇಲಿ, ಕುಮಟಾ,
ಶಿರಸಿ ಹೀಗೆ.... ಜಿಲ್ಲೆಯ ತುಂಬಾ ಶ್ರದ್ಧಾಂಜಲಿ
ಸಭೆಗಳು ನಡೆದವು. ಒಂದಿಷ್ಟು ದಿನ
ಪತ್ರಿಕೆಯನ್ನು ನೋಡಿ ಖುಷಿ ಪಟ್ಟೆವು.
ಬೇರೆ ಬೇರೆ ಕಡೆಯಿಂದ ಬಂದ
ಸುದ್ದಿ, ಶ್ರದ್ಧಾಂಜಲಿ ಸುದ್ದಿ, ಬೇರೆ ಬೇರೆಯವರು
ನೀಡಿದ ಹೇಳಿಕೆ, ಲೇಖನಗಳು.... ತಿಂಗಳವರೆಗೆ
ಹಲವರ ನೆನಪಿನ ಬುತ್ತಿ ಬಿಚ್ಚಿ
ನೀಡುವುದು.
ಆದರೂ ಮನೆ ಖಾಲಿ ಖಾಲಿ
ಎನ್ನಿಸುತ್ತಿತ್ತು. ಆತ ಕೂಡ್ರುವ ಜಾಗ,
ಆರಾಮ ಖುರ್ಚಿ, ಹೊರವರಾಂಡ, ಗೇಟಿನ
ಪಕ್ಕದ ಕಟ್ಟೆ.........ಹೀಗೆ
ಆತನ ನಿಧನದ ವಾರ್ತೆಯನ್ನು ಜಿಲ್ಲೆಯಲ್ಲಿ
ಪತ್ರಿಕೆಗಳು ಕೂಡಾ ತುಂಬಾ ಗೌರವಪೂರ್ಣವಾಗಿ,
ಅರ್ಥಪೂರ್ಣವಾಗಿ, ಪ್ರೀತಿಪೂರ್ವಕವಾಗಿಯೇ ಸುದ್ದಿ
ಪ್ರಕಟಿಸಿದವು. ಜಿಲ್ಲೆಯ ಪ್ರಧಾನ ದಿನಪತ್ರಿಕೆ
ಕರಾವಳಿ ಮುಂಜಾವು ‘ಬಡವಾದ ಬಂಡಾಯದನಿ:ಆ
ರವಿ ಅಸ್ತಂಗತ’
ಎಂದು ಅರ್ಥಪೂರ್ಣ ತಲೆಬರಹದೊಂದಿಗೆ ಮುಖಪುಟದಲ್ಲಿ ಪ್ರಕಟಿಸಿದರೆ ಒಳಪುಟದಲ್ಲಿ “ಮೂಕವಾದ ವರ್ಣ ಮತ್ತು
ವರ್ಗ ಸಂಘರ್ಷದ ಒಳದನಿ’ ಎಂದು
ಅಣ್ಣನ ವೈಚಾರಿಕ ಕೊಡುಗೆಯನ್ನು ನೆನಪಿಸಿತು.
ಗಂಗಾಧರ ಹಿರೇಗುತ್ತಿಯವರು “ಮರೆಯಾದ ರವಿ-ಆರ್.ವಿ.” ಎಂದು ಸಂಪಾದಕೀಯ
ಬರೆದರು. ಲೋಕಧ್ವನಿ ಪತ್ರಿಕೆಯಲ್ಲಿ ಅಶೋಕ ಹಾಸ್ಯಗಾರ ಅವರು
“ವೈಚಾರಿಕ ‘ಭಂಡಾರ’ದ ಭಂಡಾರಿ” ಎಂದು
ಬರೆದರೆ ಜನಮಾಧ್ಯಮದಲ್ಲಿ “ಬಂಡಾಯ ಸಾಹಿತಿ ಆರ್.ವಿ. ಭಂಡಾರಿ ಇನ್ನಿಲ್ಲ”
ಎಂದು ಸಂಪಾದಕೀಯ ಬರೆದರು. ಹಲವರು ಅಣ್ಣನ
ಕುರಿತು ಲೇಖನ ಬರೆದರು. ಬರಗೂರು
ರಾಮಚಂದ್ರಪ್ಪನವರು “ಪ್ರಗತಿಪರ ಚಳುವಳಿಯ ಗೆಳೆಯ ಆರ್.ವಿ. ಭಂಡಾರಿ’ ಎಂದು,
ವಿಷ್ಣು ನಾಯ್ಕ ಅವರು ‘ರ‍್ವಿ ಭಂಡಾರಿ’ ಎಂಬ
ಕೆಂಡದ ನಡಿಗೆ’
ಎಂದು, ಎಸ್.ಆರ್. ನಾರಾಯಣ
ರಾವ್ ಅವರು “ಆರ್ವಿ ಲವಲವಿಕೆಯ ಚಿಂತಕ-ಸಾಹಿತಿ’ ಎಂದು
ಬರೆದರು.
ಬರೆದಂತೆ
ಬದುಕಿದರು, ಬದುಕಿದಂತೆ ಬರೆದರು. ಶೋಷಿತರ ನೋವಿಗೆ
ಸಮರ್ಥ ಧ್ವನಿ ನೀಡಿದ್ದ ಆರ್.ವಿ ಭಂಡಾರಿ” ಎಂದು
ವಿನಾಯಕ ಎಲ್. ಪಟಗಾರ, “ಅಂಗಾತ
ಮಲಗಿದ ಅಂಚೆಕಾರ್ಡ್: ಆರ್ ವಿ” ಎಂದು
ಸಾಗರದ ಯೋಗೀಶ್ ಜಿ. ‘ಗಟ್ಟಿಯಾದ
ನೈತಿಕ ಧ್ವನಿಯೊಂದು ಅಡಗಿತು’
ಎಂದು ಎಸ್.ಬಿ. ಜೋಗೂರ,
‘ಕಾಣದಿದ್ದರೂ ನಮ್ಮ ಜತೆಗಿರುವ ಭಂಡಾರಿ’
ಎಂದು ಸರ್ವಜಿತ್, ‘ಭಂಡಾರಿಯವರು ಅವ್ಯವಸ್ಥೆಯ ವಿರುದ್ಧದ ದನಿಯಾಗಿದ್ದರು’ ಎಂದು
ಪ್ರಭಾಕರ ರಾಣೆ, ‘ಮಗುವಿನ ಮನಸ್ಸಿನ
ಮಾರ್ಕ್ಸ್ವಾದಿ’
ಎಂದು ಜಿ.ಯು. ಭಟ್ಟ,
‘ಧೀಮಂತ ಕನಸುಗಾರ ಆರ್.ವಿ.
ಭಂಡಾರಿ’
ಎಂದು ವಿ. ಜೆ. ನಾಯಕ,
‘ಕಾಡುತ್ತಿರುವ ನನ್ನ ಆರ್.ವಿ.
ಸರ್’
ಎಂದು ಅರವಿಂದ ಕರ್ಕಿಕೋಡಿ, ‘ಡಾ.
ಆರ್.ವಿ. ಭಂಡಾರಿ ಎಂಬ
ಬಂಡಾಯದ ಧ್ವನಿ ಅಡಗಿದಾಗ ಅನ್ನಿಸಿದಿಷ್ಟು’
ಎಂದು ಬಿ.ಎನ್. ವಾಸ್ರೆ
ಹೀಗೆ ಹಲವರು ಪತ್ರಿಕೆಯಲ್ಲಿ, ಸುನಂದಾ
ಕಡವೆ, ರಹಮತ್ ತರಿಕೆರೆ ಇವರು
ವೆಬ್ನಲ್ಲಿ ಲೇಖನ
ಬರೆದು ತಮ್ಮ ಪ್ರೀತಿಯ
ನಮನ ಅರ್ಪಿಸಿದರು.
ಹೊನ್ನಾವರ,
ಕೆರೆಕೋಣ, ಕುಮಟಾ, ಶಿರಸಿ, ಕಾರವಾರ
ಹೀಗೆ ಜಿಲ್ಲೆಯಾದ್ಯಂತ ಶ್ರದ್ಧಾಂಜಲಿ ಸಭೆಗಳು ಏರ್ಪಾಟಾದವು. ವಿಷ್ಣು
ನಾಯಕ, ರೋಹಿದಾಸ ನಾಯಕ, ಜಯಂತ
ಕಾಯ್ಕಿಣಿ, ಚಿಂತಾವiಣಿ ಕೊಡ್ಲಕೆರೆ,
ವಿ.ಜಿ. ನಾಯಕ, ಶಾಂತಾರಾಮ
ನಾಯಕ ಮುಂತಾದವರು ಭಾಗವಹಿಸಿ ಮಾತನಾಡಿದರು.
ಸಹಯಾನದಲ್ಲಿ
ಈಗ ಆತನ ನಡಿಗೆ.
ಅಣ್ಣ ೨೦೦೮ರ ಅಕ್ಟೋಬರ್
೨೫ ರಂದು ನಮ್ಮನ್ನು ಅಗಲಿದನು.
ಅವನು ತನ್ನ ಬದುಕಿನುದ್ದಕ್ಕೂ ಕಂಡ
ಸಮಾನತೆಯ ಕನಸನ್ನು ನನಸಾಗಿಸಲು ಅವರ
ನೆನಪಿನಲ್ಲಿ 'ಸಹಯಾನ'(ಡಾ.ಆರ್.ವಿ ಭಂಡಾರಿ ನೆನಪಿನ
ಸಂಸ್ಕೃತಿ ಅಧ್ಯಯನ ಕೇಂದ್ರ) ಹುಟ್ಟಿಕೊಂಡಿತು.
ಆತನ ಸ್ನೇಹಿತರು, ವಿದ್ಯಾರ್ಥಿಗಳು,
ಚಳುವಳಿಯ ಸಹಪಾಠಿಗಳು ಸೇರಿ ಈ ಸಂಸ್ಥೆಯನ್ನು
ಕಟ್ಟುತ್ತಿದ್ದಾರೆ. ೨೦೦೯ ರ ಅಕ್ಟೋಬರ್ ೨೫ ರಂದು
ಗೌರವಾನ್ವಿತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್ರಿಂದ ಉದ್ಘಾಟನೆಗೊಂಡಿತು. ಹೊನ್ನಾವರ
ತಾಲೂಕು ಕೇಂದ್ರದಿಂದ ೧೧ ಕಿ.ಮಿ
ದೂರದ ಗ್ರಾಮೀಣ ಪ್ರದೇಶವಾದ ಕೆರೆಕೋಣದಲ್ಲಿರುವ
ಮೂಲ ಮನೆ ಮತ್ತು ಮನೆಯ
ಸುತ್ತಲಿರುವ ಕೈತೋಟವನ್ನು ಉಪಯೋಗಿಸಿಕೊಂಡು 'ಸಹಯಾನ' ಕೆಲಸ ಮಾಡುತ್ತಿದೆ.
ಪ್ರಜಾಪ್ರಭುತ್ವ, ಜಾತ್ಯಾತೀತತೆ, ವೈಜ್ಞಾನಿಕ ಸಮಾಜವಾದದ ಆದರ್ಶಗಳನ್ನು ಜನತೆಯಲ್ಲಿ ಹರಡುವುದು ಮತ್ತು ಅಸ್ಪೃಶ್ಯತೆ, ಜಾತಿವಾದ,
ಕೋಮುವಾದದ ಅಪಾಯಗಳನ್ನು ಸಂಘಟನಾತ್ಮಕವಾಗಿ ಎದುರಿಸುವುದು, ಮೌಢ್ಯತೆ, ಲಿಂಗ ಅಸಮಾನತೆ, ಸಾಮಾಜಿಕ-ಆರ್ಥಿಕ ಅಸಮಾನತೆಯ ಕುರಿತು
ಜಾಗೃತಿ ಮೂಡಿಸುವುದು. ಜನಮುಖಿ ಕಲೆ, ಸಾಹಿತ್ಯ
ಸಂಸ್ಕೃತಿಯನ್ನು ಪೋಷಿಸುವುದು, ಅಭಿವೃದ್ಧಿಗೊಳಿಸುವುದು, ಯುವ ಲೇಖಕರಿಗೆ, ಶಿಕ್ಷಕರಿಗೆ,
ವಿದ್ಯಾರ್ಥಿ, ಯುವ ಜನರಿಗೆ ಓದು
ಮತ್ತು ಬರವಣಿಗೆಯನ್ನು ಒಳಗೊಂಡಂತೆ ಸಂವಿಧಾನದ ಆಶಯ ಮತ್ತು ಜಾರಿಯ
ಅಗತ್ಯದ ಕುರಿತು ತರಬೇತಿ ನೀಡುವುದು.....
ಹೀಗೆ ಹಲವು ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಇವೆಲ್ಲದರ ಮೂಲಕ ಪ್ರಬಲ ಜನತಾ
ಸಾಂಸ್ಕೃತಿಕ ಚಳುವಳಿ ಕಟ್ಟುವುದು `ಸಹಯಾನ'ದ ಮಹೋನ್ನತ ಗುರಿಯಾಗಿದೆ.
ಈ ಉದ್ದೇಶಗಳ
ಈಡೇರಿಕೆಗಾಗಿ `ಸಹಯಾನ'ವು ನಿರಂತರವಾಗಿ
ಶ್ರಮಿಸುತ್ತಿದ್ದು ಅನೇಕ ಜನಪರ ಕಾರ್ಯಕ್ರಮಗಳನ್ನು
ಕಳೆದ ೯ ವರ್ಷಗಳಿಂದಲೂ
ನಡೆಸಿಕೊಂಡು ಬರುತ್ತಿದೆ. ಸಹಯಾನ ಸಾಹಿತ್ಯೋತ್ಸವ-ಜಿಲ್ಲೆಯ ಹೆಮ್ಮೆ ೨೦೧೦
ರಿಂದ ಪ್ರತಿ ವರ್ಷವೂ
ಮೇ ತಿಂಗಳಿನಲ್ಲಿ ಕೆರೆಕೋಣದ ಮನೆಯಂಗಳದಲ್ಲಿ ನಡೆಯುತ್ತಿರುವ `ಸಹಯಾನ ಸಾಹಿತ್ಯೋತ್ಸವವು ಸಮಾನ ಮನಸ್ಕ
ಸಾಹಿತಿಗಳೆಲ್ಲಾ ಒಂದುಗೂಡಿ ಚರ್ಚಿಸುವ ಅರ್ಥ ಪೂರ್ಣ ಕಾರ್ಯಕ್ರಮವಾಗಿದೆ.
ಅತ್ಯಂತ ಗ್ರಾಮೀಣ ಪ್ರದೇಶವಾದ ಕೆರೆಕೋಣದಂತಹ
ಊರಿನಲ್ಲೂ ಸಾಹಿತ್ಯದ ಒಲವಿನಿಂದ ಬೇರೆ ಬೇರೆ ಜಿಲ್ಲೆಗಳಿಂದ
ಸಾಹಿತಿಗಳು ಆಸಕ್ತರೂ ಆಗಮಿಸುತ್ತಾರೆ. ಸಾಹಿತ್ಯೋತ್ಸವವೆಂದರೆ ಜಾತ್ರೆಯಾಗದಂತೆ ತಡೆಯಲು ಪ್ರತಿಬಾರಿಯೂ ಒಂದೊಂದು ಪ್ರಚಲಿತ ವಿಷಯವನ್ನು
ಆಧಾರವಾಗಿಟ್ಟು ವಿಚಾರಸಂಕಿರಣ, ಸಂವಾದ, ಕವಿಗೋಷ್ಠಿ, ನಾಟಕ,
ಜಾನಪದ ಕಲಾ ಪ್ರದರ್ಶನ, ಪುಸ್ತಕ
ಮೇಳ ಇತ್ಯಾದಿಗಳು ನಡೆಯುತ್ತವೆ. ಸಾಹಿತ್ಯ, ಸಂಘಟನೆ, ಚಳುವಳಿ, ಪತ್ರಿಕೆ,
ಯಕ್ಷಗಾನ, ಜಾನಪದ. ಬುಡಕಟ್ಟು ಅಧ್ಯಯನ,
ಸಂಶೋಧನೆ, ಅಕ್ಷರ ಜಾತ್ರೆ....... ಹೀಗೆ
ಬದುಕನ್ನು ಸುಂದರವಾಗಿಸಬಲ್ಲ ಅನೇಕ ವಿಭಾಗಗಳಲ್ಲಿ ದುಡಿದವರು
ಆರ್.ವಿ. ಯವರು. ಅವರ
ಆಶಯಗಳನ್ನೆ ಮುಖ್ಯ ಭೂಮಿಕೆಯಾಗಿಟ್ಟುಕೊಂಡು ಪ್ರತಿವರ್ಷವೂ ಸಾಹಿತ್ಯೋತ್ಸವವನ್ನು
ಸಂಘಟಿಸಲಾಗುತ್ತದೆ. ಚಿಂತನದ ಜೊತೆ ಸೇರಿ
ಮಕ್ಕಳ ಶಿಬಿರ ನಡೆಸಲಾಗುತ್ತಿದೆ. ಒಬ್ಬ
ಕಲಾವಿದರಿಗೆ ಸಹಯಾನ ಸಮ್ಮಾನವನ್ನು ಪ್ರತಿ
ವರ್ಷ ಕೊಡಲಾಗುತ್ತಿದೆ. ಕಳೆದ ಒಂದು ವರ್ಷದಿಂದ
ಸಂವಿಧಾನ ಓದು ಆಭಿಯಾನವನ್ನು ಸಮುದಾಯದ
ಜೊತೆ ಸೇರಿ ನಡೆಸುತ್ತಿದೆ....ಹೀಗೆ
ಅಣ್ಣ ಮತ್ತೆ ಮತ್ತೆ ಸಹಯಾನದ
ಅಂಗಳಕ್ಕೆ ಬಂದು ಹೋಗುತ್ತಿದ್ದಾನೆ. ಸದಾ
ಅವನು ಅಲ್ಲೇ ಇರುವಂತೆ ಮಾಡುವ
ಸವಾಲು ನಮ್ಮೆದುರಿದೆ.
No comments:
Post a Comment