Tuesday, 9 February 2021

ʼಆಂದೋಲನ ಜೀವಿ....ವಾಟ್ಸೆಪ್ ನಿಂದ

ಸನ್ಮಾನ್ಯ ಪ್ರಧಾನಿಗಳು ತಮ್ಮ ಭಾಷಣದಲ್ಲಿ ʼಆಂದೋಲನ ಜೀವಿʼ ಎಂಬ ಪದವನ್ನು ವ್ಯಂಗ್ಯವಾಗಿ ಬಳಸಿದ್ದಾರೆ. ಭಾಷಣದ ಸಂದರ್ಭದಲ್ಲಿ ತುಂಬ ಹತಾಶರಾಗಿದ್ದಂತೆ ಕಾಣುತ್ತಿದ್ದ ಅವರಿಗೆ ತಾನು ಬೃಹತ್‌ ದೇಶವೊಂದನ್ನು ಪ್ರತಿನಿಧಿಸುತ್ತಿದ್ದೇನೆ ಎಂಬ ಬಗ್ಗೆ ತಿಳಿವಳಿಕೆ ಇದ್ದಂತೆ ಕಾಣಲಿಲ್ಲ. ಭಾರತದ ಸುದೀರ್ಘ ಚರಿತ್ರೆಯನ್ನೂ ಅವರು ಗಂಭೀರವಾಗಿ ಓದಿದಂತಿಲ್ಲ.  ಹೋಗಲಿ, ರಾಮಮಂದಿರಕ್ಕೆ ಜನಾಂದೋಲನ ನಡೆಯದೇ ಹೋಗಿದ್ದರೆ ಅವರಿಗೆ ಅಯೋಧ್ಯೆಯಲ್ಲಿ ರಾಮಮಂದಿರಕ್ಕೆ  ಶಿಲಾನ್ಯಾಸ ಮಾಡಲು ಸಾಧ್ಯವಾಗುತ್ತಿರಲಿಲ್ಲ ಎಂಬ ಪ್ರಜ್ಞೆಯಾದರೂ ಇರಬೇಕಿತ್ತು. 

ಭಾರತ ಮಾತ್ರವಲ್ಲ ವಿಶ್ವದಾದ್ಯಂತ ಕಾಲ ಕಾಲಕ್ಕೆ ಜನಾಂದೋಲನಗಳು ನಡೆಯುತ್ತಲೇ ಬಂದಿವೆ. ಅವು ಸರ್ವಾಧಿಕಾರಿಗಳನ್ನು ಅಧಿಕಾರದಿಂದ ಕಿತ್ತೊಗೆದಿವೆ. ಜನರಿಗೆ ವಿಮೋಚನೆಯ ಹಾದಿಗಳನ್ನು ತೋರಿಸಿವೆ. ಸರಕಾರದ ಕ್ರೂರ ಕಾನೂನುಗಳನ್ನು ಪ್ರಶ್ನಿಸಿವೆ. ಎಷ್ಟೋ ಬಾರಿ ಜನಾಂದೋಲನಗಳು ದೇಶದ ಜನರನ್ನು ಹತ್ತಿರ ತಂದು ಶಿಥಿಲವಾಗುತ್ತಿದ್ದ ರಾಷ್ಟ್ರೀಯ ಪ್ರಜ್ಞೆಯನ್ನು ಗಟ್ಟಿಗೊಳಿಸಿವೆ.  
ಮಧ್ಯಕಾಲೀನ ಭಾರತದ ಬಹುದೊಡ್ಡ ಆಂದೋಲನವೆಂದರೆ ಭಕ್ತಿ ಚಳುವಳಿ. ಕಲ್ಯಾಣದಲ್ಲಿ ನಡೆದ ವಚನ ಚಳುವಳಿಯು ಸಾವಿರ ವರ್ಷಗಳಾನಂತರವೂ ಜಾತಿ, ಧರ್ಮ, ಮಹಿಳೆ, ಮತ್ತು ಭಾಷೆಯ ಕುರಿತು ನಮ್ಮ ಅರಿವನ್ನು ವಿಸ್ತರಿಸುತ್ತಿದೆ. ಜನಾಂದೋಲನ ಕಟ್ಟಿದ ಆವತ್ತಿನ ಅನುಭವ ಮಂಟಪ ಇವತ್ತಿನ ಸಂಸತ್‌ ಭವನಕ್ಕಿಂತ ಹೆಚ್ಚು ಪ್ರೌಢವೂ ದಿಟ್ಟವೂ ಅಗಿತ್ತು. ದಾಸರು, ಸೂಫಿಗಳು ಮತ್ತು ಸಿಕ್ಖರು  ನಡೆಸಿದ ಆಂದೋಲನಗಳು ಭಾರತದ ಹಿಂದುಳಿದ ಜನವರ್ಗಕ್ಕೆ ವಿಮೋಚನೆಯ ಹಾದಿ ತೋರಿಸಿದುವು. ಸಂತ ಕಬೀರರು, ಚೈತನ್ಯ ಮಹಾಪ್ರಭುಗಳು, ನಾಮದೇವರು, ಸಂತ ತುಕಾರಾಮ ಮೊದಲಾದವರು ನಡೆಸಿದ ಭಕ್ತಿ ಆಂದೋಲನಗಳು ಭಾರತದ ಭವಿಷ್ಯವನ್ನು ರೂಪಿಸಿದ ಮಹಾ ಚಳುವಳಿಗಳು.  
ವಸಾಹತು ಕಾಲಘಟ್ಟದಲ್ಲಿ ಇಂಗ್ಲಿಷ್‌ ಕಲಿತ ಉದೀಯಮಾನ ವಿದ್ಯಾವಂತ ವರ್ಗವು ಬಗೆ ಬಗೆಯ ಆಂದೋಲನಗಳ ಮೂಲಕ ಆಧುನಿಕ ಭಾರತಕ್ಕೆ ಭದ್ರವಾದ ಬುನಾದಿಯನ್ನು ಹಾಕಿಕೊಟ್ಟವು. ಆ ಕಾಲದಲ್ಲಿ ಹುಟ್ಟಿಕೊಂಡ ಆರ್ಯ ಸಮಾಜ, ಬ್ರಹ್ಮ ಸಮಾಜ, ರಾಮಕೃಷ್ಣ ಮಿಶನ್‌ ಮೊದಲಾದ ಸಂಘಟನೆಗಳು ಹೊಸ ಭಾರತದ ಉದಯಕ್ಕೆ ನಾಂದಿ ಹಾಡಿದುವು, 
೧೯೦೫ರಲ್ಲಿ ಆರಂಭವಾದ ಸ್ವದೇಶೀ ಚಳುವಳಿಯು ( ಪ್ರಧಾನಿಗಳು ಹೇಳುವ ಆತ್ಮ ನಿರ್ಭರ ಅಲ್ಲ) ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಭದ್ರವಾದ ಬುನಾದಿಯನ್ನು ಒದಗಿಸಿತು. ಗಾಂಧೀಜಿಯ ನೇತೃತ್ವದಲ್ಲಿ ನಡೆದ ಅಹಿಂಸಾತ್ಮಕ  ಸತ್ಯಾಗ್ರಹ ಚಳುವಳಿಯು ಬಹುಶ: ಭಾರತ ದೇಶ ಕಂಡ ಬಹು ದೊಡ್ಡ ಜನಾಂದೋಲನ. ಇದು ʼಸೂರ್ಯಮುಳುಗದ ದೇಶʼ ಎಂಬ ಖ್ಯಾತಿಗೆ ಒಳಗಾಗಿದ್ದ ಬ್ರಿಟಿಷರನ್ನೇ ಮನೆಗೆ ಕಳಿಸಿತು. 
ಸ್ವಾತಂತ್ರ್ಯೋತ್ತರ ಕಾಲಘಟ್ಟದಲ್ಲಿ ನಡೆದ ಅನೇಕ ಆಂದೋಲನಗಳಿಗೆ ನಾನೇ ಸಾಕ್ಷಿಯಾಗಿದ್ದೇನೆ. ೧೯೭೩ರಲ್ಲಿ ಕೇರಳದಲ್ಲಿ ಆರಂಭವಾದ ಸೈಲೆಂಟ್‌ ವ್ಯಾಲೀ ಆಂದೋಲನ, ೧೯೭೦ರ ದಶಕದುದ್ದಕ್ಕೂ ನಡೆದ ಚಿಪ್ಕೋ ಚಳುವಳಿ, ೧೯೭೮ರಿಂದ ೧೯೯೪ರ ವರೆಗೆ ಮರಾಟ್ವಾಡಾ ವಿವಿಗೆ ಅಂಬೇಡ್ಕರ್‌ ಹೆಸರಿಡಲು ದಲಿತರ ನೇತೃತ್ವದಲ್ಲಿ ನಡೆದ ನಾಮಂತರಣ್‌ ಆಂದೋಲನ, ೧೯೮೦ರಲ್ಲಿ ಬಿಹಾರದಲ್ಲಿ ಅರಂಭವಾದ ಜಂಗಲ್‌ ಬಚಾವೋ ಆಂದೋಲನ, ೧೯೮೫ರಿಂದ ಆರಂಭವಾದ ನರ್ಮದಾ ಬಚಾವೋ ಆಂದೋಲನ, ೨೦೦೬ರ ಮೀಸಲಾತೀ ವಿರೋಧೀ ಚಳುವಳಿ, ೨೦೧೧ರಲ್ಲಿ ಅಣ್ಣಾ ಹಜಾರೆ ಅರಂಭಿಸಿದ ಜನ ಲೋಕ ಪಾಲ್‌ ಬಿಲ್‌ ( ಬ್ರಷ್ಟಾಚಾರ ವಿರೋಧಿ ಆಂದೋಲನ), ೨೦೧೨ರ ನಿರ್ಭಯಾ ಜನಾಂದೋಲನ, ೨೦೧೭ರ ಜಲ್ಲಿಕಟ್ಟು ಆಂದೋಲನ, ಮೀಟೂ ಚಳುವಳಿ ಮೊದಲಾದುವು ಭಾರತೀಯರ ಬದುಕಲ್ಲಿ ಹೊಸ ಭರವಸೆ ಮೂಡಿಸಿವೆ. ಪರಿಸರ ಚಳುವಳಿಗಳು, ಮತ್ತು ಮಹಿಳಾ ಚಳುವಳಿಗಳು ಇಲ್ಲದೇ ಹೋಗಿದ್ದರೆ ಇಂದಿನ ಭಾರತ ಇಂದಿನ ಹಾಗೆ ಇರುತ್ತಿರಲಿಲ್ಲ. 
ಈ ಜನಾಂದೋಲನಗಳಲ್ಲಿ ಭಾಗವಹಿಸಿದವರು ಕಾರ್ಪೊರೇಟ್‌ ಕಂಪೆನಿಯವರಲ್ಲ, ಬದಲು ಲಂಗೋಟಿ ತೊಟ್ಟ ಫಕೀರರು, ಬಡವರು. ಆಗಲೂ ಹಾಗೆ, ಈಗಲೂ ಹಾಗೆ. ಪ್ರಸ್ತುತ ರೈತರು ಚಳುವಳಿ ನಡೆಸುತ್ತಾ ಇಷ್ಟು ದಿನಗಳ ಕಾಲ ಬಲಿಷ್ಠ ಸರಕಾರದ ವಿರುದ್ಧ ಉಳಿದಿದ್ದಾರೆ. ಇದು ಆಂದೋಲನದ ಶಕ್ತಿ. 
ಆಂದೋಲನಕಾರರನ್ನು ಅಪಹಾಸ್ಯ ಮಾಡುವುದು ಅಪೇಕ್ಷಣೀಯವಲ್ಲ.

1 comment:

  1. Las Vegas Casino | DrmCD
    Experience 태백 출장안마 the best 포항 출장안마 gambling experience on our floor in Las Vegas, NV. 경주 출장안마 The world-class Casino has 당진 출장샵 over 2000 slots, over 100 table games, and a variety 전라북도 출장샵

    ReplyDelete