Friday, 15 May 2020

‘ಆತ್ಮ ನಿರ್ಭರ್ ಅಭಿಯಾನ್’* *ಮತ್ತು ಭಾಷೆ, ಅಧಿಕಾರ, ಹೆಜಮನಿ*

*‘ಆತ್ಮ ನಿರ್ಭರ್ ಅಭಿಯಾನ್’* *ಮತ್ತು  ಭಾಷೆ, ಅಧಿಕಾರ, ಹೆಜಮನಿ*
 
ದೇಶದಲ್ಲಿ ಕಳೆದೊಂದು ದಿನದಲ್ಲಿ, ಮಾಧ್ಯಮಗಳಲ್ಲಿ ಮತ್ತು ಜನರ ನಡುವೆ ಮುಂಚೂಣಿಗೆ ಬಂದ ಪದಗುಚ್ಚವೆಂದರೆ ‘ಆತ್ಮ ನಿರ್ಭರ ಅಭಿಯಾನ್’. ಪ್ರಧಾನ ಮಂತ್ರಿಗಳು ದೇಶವನ್ನು ಉದ್ದೇಶಿಸಿ ಮಾತನಾಡುತ್ತ ಬಳಸಿದ ಈ ಪದಗುಚ್ಚ ಕೇಳುಗರಲ್ಲಿ ಅಚ್ಚರಿ ಹುಟ್ಟಿಸಿತು. ಮಾಧ್ಯಮಗಳೂ ಕೂಡ ನಿಧಾನವಾಗಿ ಇದಕ್ಕೆ ಅರ್ಥ ಹೇಳತೊಡಗಿದವು. ಇನ್ನು ಪ್ರಧಾನಿಗಳ ನಡೆನುಡಿಗಳನ್ನು ನಿತ್ಯ ಹಿಂಬಾಲಿಸುವ ಜನರಲ್ಲಿಯೂ ಅದು ಗೊಂದಲು ಮೂಡಿಸಿತು. ಅವರನ್ನು ವಿರೋಧಿಸುವ ಮತ್ತು ಟೀಕಿಸುವವರಲ್ಲಿಯೂ ಗೊಂದಲ ಮೂಡಿಸಿತು. ಇದು ತಮಾಶೆಗಳಿಗೆ, ವ್ಯಂಗ್ಯಚಿತ್ರಗಳಿಗೆ ಅವಕಾಶ ಒದಗಿಸಿತು. 

ಇದು ಸಾಮಾಜಿಕ ಮಾಧ್ಯಮಗಳಲ್ಲಿ ವಿಪರೀತ ಚರ್ಚೆಯಾಗಿ ದೊಡ್ಡ ಸಂಚಲನ ಸೃಷ್ಟಿಸಿತು. ಇದು ದೇಶದ ಹಣಕಾಸು ಸಚಿವರಿಗೂ ತಲುಪಿ ಅವರೂ ಕೂಡ ಆರ್ಥಿಕ ನೆರವಿನ ಯೋಜನೆಗಳನ್ನು ಘೋಷಿಸಲು ನಡೆಸಿದ ಪತ್ರಿಕಾ ಗೋಷ್ಟಿಯಲ್ಲಿ ವಿವರಣೆ  ಕೊಟ್ಟರು. ತಾವು ದಕ್ಷಿಣ ಭಾರತದಿಂದ ಬಂದಿದ್ದು ದಕ್ಷಿಣ ಭಾರತದ ಭಾಷೆಗಳಾದ ಕನ್ನಡ ತೆಲುಗು ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಅದಕ್ಕಿರುವ ‘ಅರ್ಥ’ಗಳನ್ನು ವಿವರಿಸಿದರು. ಅಷ್ಟರಮಟ್ಟಿಗೆ ಅಪರಿಚಿತವಾದ ಪದಗುಚ್ಚ ಗೊಂದಲ ಹುಟ್ಟಿಸಿದ್ದು ನಿಜ ಎಂಬುದು ಸಾಬೀತಾಯಿತು. ಪ್ರಧಾನಿಗಳು ಏನು ಹೇಳಿದರೂ ಎಂಬುದಕ್ಕಿಂತ ಹೇಳಿದ್ದಕ್ಕೆ ಬಳಸಿದ ಪದಗಳ ಬಗೆಗೆ ಹೆಚ್ಚು ಚರ್ಚಿಸಿದ್ದು ವಿಚಿತ್ರ ಸಂಗತಿ.

ಈ ಪದಗುಚ್ಚದ ವಿಷಯದಲ್ಲಿ ಗೊಂದಲ ಮೂಡಲು ಕಾರಣವೇನು? ಇದಕ್ಕೆ ಕಾರಣವಿದೆ. ಅದೇನೆಂದರೆ, ಈ ಪದಗುಚ್ಚವು ಮೂಲತಃ ಸಂಸ್ಕøತದ್ದು. ಇದನ್ನು ಯಾವುದೇ ಭಾರತೀಯ ಭಾಷೆಗಳಲ್ಲಿ ಜನಸಾಮಾನ್ಯರು ಬಳಸುವಂತೆ ಕಾಣುತ್ತಿಲ್ಲ. ಸಂಸ್ಕøತ ಪದಕೋಶದಲ್ಲಿರುವ ಗ್ರಂಥಸ್ತವಾದ ಪದಗುಚ್ಚ ಇದು. ಪಂಡಿತರು ವೈಯಾಕರಣಿಗಳು ಬಳಸಬಹುದಾದ ಪದ. ಹಾಗಾಗಿ ಈ ಪದವನ್ನು ಪ್ರಧಾನಿಗಳು ಬಳಸಿದಾಗ ಜನರು ತಬ್ಬಿಬ್ಬಾದರು. ಸಂಸ್ಕøತ ಪದವಾದುದರಿಂದ ಕನ್ನಡ ನಿಘಂಟಿನಲ್ಲಿ ‘ಆತ್ಮ’ ‘ನಿರ್ಭರ’ ಪದಗಳಿಗೆ ಅರ್ಥ ಹುಡುಕಿದಾಗ ಅಲ್ಲಿ ನಿರ್ಭರ ಪದಕ್ಕೆ ‘ವೇಗ, ರಭಸ, ಕ್ರೌರ್ಯ, ಹೆಚ್ಚಾದ, ಪೂರ್ಣವಾದ, ತುಂಬಿದ, ಅಧಿಕ’ ಎಂಬ ಅರ್ಥಗಳು ಕಾಣಿಸಿದವು! ಇನ್ನು ಆತ್ಮ ಪದಕ್ಕೆ ನಾನಾರ್ಥಗಳಿದ್ದು ಅವು ಕೂಡ ಸರಿಹೊಂದಲಿಲ್ಲ. ಯಾವ ಅರ್ಥಗಳೂ ಪ್ರಧಾನಿಗಳು ಬಳಸಿದ ಅರ್ಥಕ್ಕೆ ಸಮವಾಗಿ ಕಾಣಿಸಲಿಲ್ಲ. ಕೊನೆಗೆ ಮಾಧ್ಯಮಗಳು ಸೆಲ್ಪ್ ರಿಲಯನ್ಸ್, ಸ್ವಾವಲಂಬಿ ಎಂದು ಬಳಸಲು ತೊಡಗಿದ ನಂತರವಷ್ಟೇ ‘ಆತ್ಮ ನಿರ್ಭರ್’ ಪದಗುಚ್ಚಕ್ಕೆ ಒಂದು ಅರ್ಥ ‘ಪ್ರಾಪ್ತ’ವಾಗತೊಡಗಿತು.

ಅಂದರೆ ಜನಸಾಮಾನ್ಯರಲ್ಲಿ ಜನಪ್ರಿಯವಾಗಿ ಬಳಕೆಯಲ್ಲಿ ಇಲ್ಲದ ಪದಗಳನ್ನು ಹುಡುಕಿ ಏಕಾಏಕಿ ಬಳಸಿದಾಗ ಆಗಬಹುದಾದ ಸಂವಹನದ ತೊಡಕುಗಳೇನು? ಎಂಬುದು ಇದರಿಂದ ತಿಳಿಯುತ್ತದೆ. ಹಾಗೆಯೇ ಇದೇ ಪದಗುಚ್ಚವನ್ನು ಪ್ರಧಾನಿಗಳಲ್ಲದೆ ಬೇರೆ ಯಾರೇ ಆಗಿದ್ದರೂ ಆ ಪದವನ್ನು ಬಳಸಿದ್ದರೆ ಇದರ ಬಗೆಗೆ ಇಷ್ಟೊಂದು ಚರ್ಚೆ ನಡೆಯುತ್ತಿತ್ತೇ? ಖಂಡಿತವಾಗಯೂ ಇಲ್ಲ. ಅಂದರೆ ಅಧಿಕಾರದಲ್ಲಿರುವವರು ಬಳಸುವ ಭಾಷೆ, ಅದರ ನುಡಿಗಟ್ಟುಗಳು ಹೇಗೆ ಜನರನ್ನು ಪ್ರಭಾವಿಸುತ್ತವೆ; ಅವರ ಮಾನಸಕ್ಕೆ ಇಳಿಯುತ್ತವೆ; ಅಲ್ಲಿ ಅವು ಸ್ಥಾನಪಡೆದು ಮನಸ್ಸನ್ನು ಆಳುತ್ತವೆ ಎಂಬುದು ಮುಖ್ಯ. ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ, ಇದು ಪ್ರಧಾನಿಗಳು ಪ್ರಾಸಂಗಿಕವಾಗಿ ಬಳಸಿದ ಪರಿಭಾಷೆಯಲ್ಲ. ಬದಲಿಗೆ ಬಹಳ ಉದ್ದೇಶಪೂರಕವಾಗಿ, ಪೂರ್ಣ ಸಿದ್ದತೆಯೊಂದಿಗೆ ಅದಕ್ಕೆ ರಾಜಕೀಯಾರ್ಥಿಕ ಅರ್ಥದ ಲೇಪನಗಳನ್ನು ಕೊಟ್ಟು ಖಚಿತ ಉದ್ದೇಶದೊಂದಿಗೆ ಬಳಸಿದ ಪದಗುಚ್ಚ. 

ಇಲ್ಲಿ ಅಧಿಕಾರಸ್ಥರು ತಾವು ಜನರಿಗೆ ಅರ್ಥವಾಗುವ ಭಾಷೆಯನ್ನು ಬಳಸಬೇಕು ಎಂಬುದಕ್ಕಿಂತ ತಾವೂ ಏನು ಹೇಳಬೇಕು ಎಂದು ಬಯಸುತ್ತಾರೆಯೋ ಅದನ್ನು ಮಾತ್ರವೇ ಬಳಸುತ್ತಾರೆ. ಅಧಿಕಾರದಲ್ಲಿರುವವರು ಹಾಗೆ ಬಳಸಿದ ಮತ್ತು ಚಿಂತಿಸಿದ ವಿಚಾರಗಳೇ ಜನರ ಮನದಲ್ಲಿ ಬಲವಾಗಿ ಬೇರೂರುತ್ತವೆ. ಜನರಿಗೆ ಅರ್ಥವಾಗಬೇಕು ಎಂಬುದಕ್ಕಿಂತ ತಾವು ಏನನ್ನು ಅರ್ಥಪಡಿಸಲು ಬಯಸುತ್ತಾರೆಯೋ ಅದನ್ನು ಹೇರುತ್ತಾರೆ ಎಂಬುದು ನಿಜ.

ಹಾಗೆ ಬೇರೂರುವ ಹೊತ್ತಿನಲ್ಲಿ ಅದು ಕೇವಲ ಪದವಾಗಿ ಬೇರೂರುವುದಿಲ್ಲ. ಬದಲಿಗೆ ಅದು ತಿಳುವಳಿಕೆಯಾಗಿ, ವಿಚಾರಧಾರೆಯಾಗಿ, ತತ್ವವಾಗಿ ಬೇರೂತ್ತದೆ. ಮತ್ತು ನಂತರ ಜನರ ಮನಸ್ಸನ್ನು ಆಳುತ್ತದೆ ಮತ್ತು ನಿಯಂತ್ರಿಸುತ್ತದೆ. ಜನರ ಭಾಷೆ ಅಧಿಕಾರಸ್ಥರ ಟಂಕಸಾಲೆಯಲ್ಲಿ ಹೇಗೆ ಟಂಕೀಕರಣಗೊಳ್ಳುತ್ತದೆ ಎಂಬುದಕ್ಕೆ ಕೂಡ ಇದು ಒಳ್ಳೆಯ ಎತ್ತುಗೆ. ಅಧಿಕಾರಸ್ಥರನ್ನು ನಂಬುವ ಮತ್ತು ಅನುಸರಿಸುವ ಜನರು ಇಂತಹ ಟಂಕಿತ ಪದಗುಚ್ಚಗಳನ್ನು ಉರುಹೊಡೆದು ಉಚ್ಚರಿಸುವುದೂ ಉಂಟು. ಆದರೆ ಈ ಬಗೆಗೆ ಅಧಿಕಾರಸ್ಥರನ್ನು ಅನುಸರಿಸುವ ಜನರಿಗೆ ಎಚ್ಚರವಿರುವುದಿಲ್ಲ. ಅವರನ್ನು ಕುರುಡಾಗಿ ನಂಬುತ್ತಿರುತ್ತಾರೆ. ಇಂತಹ ನಂಬಿಕೆಗಳನ್ನು ಹುಟ್ಟಿಸಲೆಂದೇ ಅಪರಿಚಿತವಾದ ಯಾರಿಗೂ ಸುಲಭಕ್ಕೆ ಅರ್ಥವಾಗದಂತಹ ಭಾಷೆಯನ್ನು ಪ್ರಭುತ್ವ ಬಳಸುತ್ತಲೇ ಇರುತ್ತದೆ. ಈಚೆಗೆ ಭಾರತೀಯ ಸಮಾಜದಲ್ಲಿ ಇಂತಹ ಪದಗುಚ್ಚಗಳನ್ನು ಒಂದರ ಮೇಲೆ ಒಂದು ಬಂಡೆಗಳನ್ನು ಮತ್ತೆ ಮತ್ತೆ ಎಸೆಯಲಾಗುತ್ತದೆ. ಹಾಗೆ ಎಸೆದ ಮೇಲೆ ಅವುಗಳಿಗೆ ಅರ್ಥದ ಬಣ್ಣ ಕಟ್ಟಲಾಗುತ್ತಿದೆ. ಇಂತಹ ಉರು ಹೊಡೆದ ಪಾಠಗಳು ಸಮಾಜವನ್ನು ನಿಡುಗಾಲದಲ್ಲಿ ಅಪಾಯಕ್ಕೆ ತಳ್ಳುತ್ತವೆ. 
 
ಮೇಲೆ ಹೇಳಿದಂತೆ ಇದೇ ರೀತಿಯಲ್ಲಿ ಒಬ್ಬ ಸಾಮಾನ್ಯ ವ್ಯಕ್ತಿ ಯಾವುದೇ ಒಂದು ಹೊಸ ಭಾಷೆ, ಪದ ಇಲ್ಲವೆ ಪದಗುಚ್ಚವನ್ನು ಬಳಸಿದರೆ ಅದು ವೇಗವಾಗಿ ಮುಂಚೂಣಿಗೆ ಬರಲು ಸಾಧ್ಯವೇ? ಅದಕ್ಕೆ ಜನಮಾನ್ಯತೆ ದೊರೆಯುವುದೇ? ಸಾಧ್ಯವೇ ಇಲ್ಲ. ಒಂದು ವೇಳೆ ಅಂತಹ ಪದಗುಚ್ಚವನ್ನು ಜನರು ಬಳಸಿದರೂ ಕೂಡ ಅದು ಚಲಾವಣೆಯಲ್ಲಿ ಉಳಿಯಲು ಸುದೀರ್ಘ ಕಾಲಬೇಕಾಗುತ್ತದೆ. ಅದು ಬೇಗ ಜನರಿಗೆ ಪರಿಚಯವಾಗಲು ಸಾಧ್ಯವಿಲ್ಲ. ಕೆಲವು ಬಾರಿ ಹೊಸಕಲ್ಪನೆಗಳನ್ನು ಪರಿಚಯಿಸಿದಾಗ ಜನರಿಗೆ ಅರ್ಥವಾಗದು ಎಂದು ವಾದಿಸಿ ಅದರ ಬಳಕೆಯನ್ನೇ ನಿಷೇಧಿಸಲಾಗುತ್ತದೆ. ಅಂದರೆ ಪ್ರಬಲರು, ಅಧಿಕಾರಸ್ಥರ ಭಾಷೆ ಬಹುಬೇಗ ಜನರನ್ನು ಪ್ರಭಾವಿಸಿದಂತೆ ದುರ್ಬಲರು, ಜನಸಾಮಾನ್ಯರು ಯಾವುದೇ ಹೊಸ ಪದ ಇಲ್ಲವೇ ಹೊಸ ವಿಚಾರವನ್ನು ಮಂಡಿಸಿದರೂ ಅದು ಜನರನ್ನು ಪ್ರಭಾವಿಸದು. ಅಂದರೆ ‘ಅಧಿಕಾರ, ಹೆಜಮನಿಗಳು’ ಇತರೆ ಹಲವು ಸಂಗತಿಗಳನ್ನು ನಿಯಂತ್ರಿಸಿದಂತೆ ಭಾಷೆಯನ್ನು ನಿಯಂತ್ರಿಸುವ ಪ್ರಭಾವಿಸುವ ಕೆಲಸ ಮಾಡುವುದನ್ನು ಈ ಸಂದರ್ಭದಲ್ಲಿ ಗಮನಿಸಬಹುದಾಗಿದೆ. ‘ಪ್ರಜಾಪ್ರಭುತ್ವ’ ವ್ಯವಸ್ಥೆ’ಯಿರುವ ದೇಶದಲ್ಲಿಯೇ ಈ ಬಗೆಯಾದರೆ ಇನ್ನು ಸರ್ವಾಧಿಕಾರ ವ್ಯವಸ್ಥೆಯಿರುವ ದೇಶಗಳಲ್ಲಿ ಭಾಷೆ ಹೇಗೆ ಟಂಕೀಕರಣಗೊಳ್ಳುತ್ತದೆ ಮತ್ತು ಅದು ಸಮುದಾಯಗಳ ಮೇಲೆ ಪ್ರಭಾವ ಬೀರಲಿದೆ ಎಂಬುದನ್ನು ಊಹಿಸುವುದು ಅಸಾಧ್ಯವೇನಲ್ಲ. ಅಂದರೆ ಭಾಷೆ ಕೂಡ ಯಾವುದೇ ಸಮಾಜದಲ್ಲಿ ಸ್ವಾಯತ್ತವಾಗಿ ಉಳಿದಿರದೆ ಅದು ಅಧಿಕಾರಸ್ಥರ ನಿಯಂತ್ರಣಕ್ಕೆ ಒಳಪಟ್ಟಿರುತ್ತದೆ ಎಂಬುದನ್ನು ಇಲ್ಲಿ ನೆನಪಿಡಬೇಕಾಗುತ್ತದೆ.  

ಹಾಗೆಯೇ ಪ್ರಭುತ್ವ ಹೊಸ ರಾಜಕೀಯ ಸಂಕಥನಗಳನ್ನು ಹುಟ್ಟಿಸಿ ಅಪರಿಚಿತ ಪರಿಭಾಷೆಗಳ ಮೂಲಕ ಜನರನ್ನು ತಬ್ಬಿಬ್ಬುಗೊಳಿಸಿ ಮೂಕರನ್ನಾಗಿಸುತ್ತದೆ. ಇಂತಹ ಹೊತ್ತಿನಲ್ಲಿ ಮಾರುಕಟ್ಟೆಯಲ್ಲಿ ಇತರ ಸರಕುಗಳು ಮಾರಾಟವಾದಂತೆ ಭಾಷೆ ಕೂಡ ಅತ್ಯಂತ ವೇಗವಾಗಿ ಮಾರಾಟವಾಗಿ ಜನರನ್ನು ತಲುಪುತ್ತದೆ. ಆದರೆ ಅದೇ ವೇಳೆ ದುರ್ಬಲ ಜನರ ವಿಚಾರಗಳು, ದುಃಖದುಮ್ಮಾನಗಳು ಮಾತ್ರ ಎಲ್ಲ ಕಾಲದಲ್ಲಿದ್ದಂತೆ ಈಗಲೂ ಅವು ಅಧಿಕಾರಸ್ಥರನ್ನು ತಲುಪಲಾರವು. ಇದು ಬಲವಿದ್ದವರ ಭಾಷೆ ಮೇಲುಗೈ ಸಾಧಿಸುವ ಮತ್ತು ಬಲವಿಲ್ಲದವರು ಶರಣಾಗುವ ಬಗೆಯನ್ನು ತಿಳಿಸುತ್ತದೆ. ಅಂದರೆ ಬಲವಿದ್ದವರು ಅಧಿಕಾರ ಬಲದಿಂದ ‘ಆತ್ಮ ನಿರ್ಭರ್ ಅರ್ಥಾತ್ ಸ್ವಾವಲಂಬನೆ’ ಸಾಧಿಸಿದರೆ, ದುರ್ಬಲರು ಯಾವತ್ತೂ ಪರಾವಲಂಬಿಗಳಾಗಿಯೇ ಉಳಿಯುತ್ತಾರೆ. ಆಗ ಇಂತಹ ಅಭಿಯಾನಗಳು ಸಬಲರನ್ನು ಇನ್ನಷ್ಟು ಸಬಲಗೊಳಿಸುತ್ತವೆ ಮತ್ತು ಅವರ ಆತ್ಮವನ್ನು ಮತ್ತಷ್ಟು ಬರ್ಬರಗೊಳಿಸುತ್ತವೆ ಎಂಬುದನ್ನು ಬೇರೆ ಹೇಳಬೇಕಿಲ್ಲ. ಈಗ ನಿಜವಾಗಿಯೂ ಸ್ವಾವಲಂಬನೆ ಸಾಧಿಸಬೇಕಿರುವುದು ಯಾರು?

*ರಂಗನಾಥ ಕಂಟನಕುಂಟೆ*

Sunday, 3 May 2020

ತಳಮಟ್ಟದಲ್ಲಿ ಅಪನಂಬಿಕೆಗಳಿಲ್ಲ....ಸೌಹಾರ್ದ ಪರಂಪರೆ ನಮ್ಮದು- ವಿಠ್ಠಲ ಭಂಡಾರಿ


ಕಾಕತಾಳೀಯವಾಗಿ ಸಂಭವಿಸುವ ಹಲವು ಸಂಗತಿಗಳನ್ನು ಧರ್ಮ ಜಾತಿಗೆ ಒತ್ತಾಯಪೂರ್ವಕವಾಗಿ ತಳಕುಹಾಕುವ ಹುನ್ನಾರ ಒಂದೆಡೆ ನಡೆಯುತ್ತಿದ್ದರೆ ಇನ್ನೊಂದೆಡೆ ಸಾಮಾನ್ಯ ಜನರ ದಿನನಿತ್ಯದ ನಡವಳಿಕೆಗಳು ರೋಗಗ್ರಸ್ಥ ಮನಸ್ಥಿತಿಯನ್ನು ಹಿಮ್ಮೆಟ್ಟಿಸುವ ನಿಟ್ಟಿನಲ್ಲಿ ಅಪ್ರಜ್ಞಾಪೂರ್ವಕವಾದ ಕೆಲಸ ಮಾಡುತ್ತಿದೆ ಎನ್ನುವುದು ಸಂತೋಷದ ಸಂಗತಿ. ಪೂರಕವಾದ ಒಂದೆರಡು ಭಿನ್ನ ಘಟನೆಗಳನ್ನು ನೆನಪಿಸುತ್ತಿದ್ದೇನೆ.
ಘಟನೆ:1- ಕೋವಿಡ್ 19 ವ್ಯಾಪಕ ಪ್ರಸರಣದ ಸಂದರ್ಭ, ಇಂದು ಒಂದು ರೀತಿಯ ಭೀತಿಯ ವಾತಾವರಣ ಸೃಷ್ಟಿಸಿದೆ. ರೋಗದ ಕುರಿತ ಮಾಹಿತಿಯ ಕೊರತೆ, ಹಲವು ಮಾಧ್ಯಮದ ಟಿಆರ್ಪಿ ಸಮರ, ಆಡಳಿತದ ನಿರ್ಲಕ್ಷ್ಯ, ಅಸಮರ್ಪಕ ನಿರ್ವಹಣೆ ಮತ್ತು ಮುಂದಾಲೋಚನೆಯ ಕೊರತೆಯಿಂದಾಗಿ ಸಾಮಾನ್ಯರ ಬದುಕು ಮೂರಾಬಟ್ಟೆ ಆಗುವ ಸಂದರ್ಭದಲ್ಲಿ ಹಲವು ಸಂಘಸಂಸ್ಥೆಗಳು, ವ್ಯಕ್ತಿಗಳು ಬಡ, ಸಂತ್ರಸ್ಥ ಕುಟುಂಬಗಳಿಗೆ ಸಹಾಯ ಹಸ್ತ(ಸಹಾಯ ನೀಡುವಲ್ಲಿ ಕೆಲವರಿಗೆ ಪ್ರತ್ಯೇಕ ಒಳ ಅಜೆಂಡಾ ಇದೆ ಅನ್ನುವುದು ಬೇರೆ ಸಂಗತಿ)ನೀಡುತ್ತಿವೆ.  ಒಂದೆರಡು ದಿನಗಳ ಹಿಂದೆ ನಮ್ಮ ಕಾಲೇಜಿನ ಅಧ್ಯಾಪಕರು ಸೇರಿ ಜನಗಳಿಗೆ ಒಂದಿಷ್ಟು ದಿನಸಿ ಕೊಡೋಣವೆಂದು ತೀರ್ಮಾನಿಸಿದೆವು; ಅದು ಸಣ್ಣ ಪ್ರಮಾಣದಲ್ಲಿ. ಲಾಕ್ ಡೌನ್ ಇರುವುದರಿಂದ ನಾವೇ ಹೋಗಿ ಫಲಾನುಭವಿಗಳನ್ನು ಆರಿಸುವಂತಿರಲಿಲ್ಲ. ಸಹಾಯದ ಅಗತ್ಯ ಇರುವ ಕುಟುಂಬಗಳ ಒಂದು ಯಾದಿ ತಯಾರಿಸಿ ಕೊಡಲು ಒಂದಿಬ್ಬರು ಪರಿಚಿತ ಅಂಗನವಾಡಿ ಕಾರ್ಯಕರ್ತೆಯರಿಗೆ ವಿನಂತಿಸಿದೆವು. ಅವರಿಬ್ಬರೂಹಿಂದೂಸಮುದಾಯದ ಅನುಯಾಯಿಗಳು.  ಎರಡು ದಿನದಲ್ಲಿ ಯಾದಿ ಬಂದು ತಲುಪಿತು. ಇನ್ನೊಬ್ಬ ಮುಸ್ಲಿಂ ಸಮುದಾಯದ ಅನುಯಾಯಿ ವ್ಯಕ್ತಿಗೆ ಹೇಳಲಾಗಿತ್ತು. ಅವರೂ ಒಂದು ಯಾದಿ ನೀಡಿದರು. ‘ತಮ್ಮತಮ್ಮ ಯಾದಿಯಲ್ಲಿ ಎಲ್ಲಾ ಜಾತಿ ಧರ್ಮದವರ ಹೆಸರೂ ಇರಬೇಕು, ನಿಮ್ಮ ನಿಮ್ಮ ಸಮುದಾಯದ ಹೆಸರು ಮಾತ್ರ ಇರದಿರಲಿಎಂದು ಹೇಳಬೇಕೆನ್ನಿಸಿದರೂ ಅವರಿಗೆ ಹಾಗೆ ಹೇಳಿರಲಿಲ್ಲ.
ಆದರೆ ಇಬ್ಬರೂ ಸಿದ್ಧಪಡಿಸಿದ ಯಾದಿಯಲ್ಲಿ ಮುಕ್ಕಾಲು ಪಾಲಿಗಿಂತÀ ಹೆಚ್ಚು ಜನ ಅವರು ಆಚರಿಸುವ ಧರ್ಮ ಮತ್ತು ಜಾತಿಯ ಆಚೆಯ ಕುಟುಂಬದ ಬಡವರ ಹೆಸರಿತ್ತು. ದಿನನಿತ್ಯ ಪತ್ರಿಕೆ, ಟಿವಿಗಳಲ್ಲಿ ಕರೋನಾದ ಆವಾಂತರಕ್ಕಿಂತ ಧರ್ಮವಾರು ಲೆಕ್ಕ, ಪರಸ್ಪರ ಅಪನಂಬಿಕೆ ಹುಟ್ಟಿಸುವ ಕೆಲಸ ಮತ್ತು ಸ್ಥಳೀಯವಾಗಿ ಪರಸ್ಪರರಲ್ಲಿ ಅಪನಂಬಿಕೆ ಹುಟ್ಟಿಸುವ ಕೆಲಸ ಗುಪ್ತವಾಗಿ ಇನ್ನೊಂದೆಡೆ ನಡೆಯುತ್ತಿರುವಾಗ ಕೆಳಹಂತದಲ್ಲಿ ಬಡವರು ಮತ್ತು ದುರ್ಬಲರನ್ನು ಗುರುತಿಸುವಾಗ ಕಿಂಚಿತ್ತೂ ದ್ವೇಷದ ಭಾವನೆ ಇರಲಿಲ್ಲ. ಪರಸ್ಪರ ಗೌರವ, ಪ್ರೀತಿ, ಸೌಹಾರ್ದತೆಯ ಭಾವಗಳು ತುಂಬಿದ್ದವು. ನೋವುಂಡವರಿಗೆ ಧರ್ಮದ ಬೇಲಿ ತೊಡಿಸಲು ಇವರ ಮನಸ್ಸು ಒಪ್ಪುತ್ತಿರಲಿಲ್ಲ. ಒಂದಿಷ್ಟು ದಿನಸಿ ಹಂಚಿ ಬರುವಾಗ ಒಬ್ಬ ಶಿಕ್ಷಣೋದ್ಯಮಿಗಳು ಸಿಕ್ಕರು. ‘ದಿನಸಿ ಹಂಚುತ್ತಿದ್ದೇವೆಅಂದೆ. ಒಳ್ಳೆಯದು, ‘ಇದು ಸಕಾಲ ಸಹಾಯ ಮಾಡುವುದಕ್ಕೆಅನ್ನುತ್ತಲೇಅವರಿಗೆ ಎಲ್ಲಿಂದಲೋ ತುಂಬಾ ಸಹಾಯ ಬರುತ್ತದೆ. ನೋಡಿಕೊಡಿಎಂದರು. ‘ಸರ್ಕಾರವೂ ತುಂಬಾ ಸಹಾಯ ಮಾಡುತ್ತಿದೆಎಂದು ಒಂದೆರಡು ನಂಜಿನ ಮಾತನ್ನಾಡಿದರು. ಆದರೆ ಒಂದು ಮನೆಗೆ ದಿನಸಿ ಕೊಟ್ಟಾಗತಮ್ಮ ಹಿಂಬದಿಯ ಮನೆಯ (ಬೇರೊಂದು ಧರ್ಮದ) ಬಡ ಕುಟುಂಬಕ್ಕೂ ಕೊಡಿ, ಅವರೂ ಬಡವರು. ಕಡಿಮೆ ಇದ್ದರೆ ಇದೇ ಹಂಚಿಕೊಳ್ಳುತ್ತೇವೆ ಬಿಡಿಎಂದು ಹೇಳುವ ಗುಣ ಭಾರತದ ನಿಜವಾದ ಅಂತಃಸ್ಸತ್ವ. ಭಾರತ ತನ್ನೊಳಗೆ ಪ್ರೀತಿಯ ಬೀಜವನ್ನೇ ಇಟ್ಟುಕೊಂಡಿದೆ. ಹೊರಗಿನ ಸುಡುಬೆಂಕಿ ಆರಿದ ಮೇಲೆ ಚಿಗುರುವುದು ಇದೇ ಬೀಜವೇ ಅಲ್ಲವೇ?
ಘಟನೆ:2 ನಮ್ಮಲ್ಲಿ ಅಂಬೇಡ್ಕರ್ ದಿನಾಚರಣೆ ಕಾರ್ಯಕ್ರಮವನ್ನು ಮೊದಲೇ ಹೇಳಿದಂತೆ ಸಂತ್ರಸ್ಥರಿಗೆ ದಿನಸಿ ಹಂಚುವ ಮೂಲಕ ಆಚರಿಸಲಾಯಿತು. ಇದರ ಭಾಗವಾಗಿ ದಿನೇಶ್ ಎನ್ನುವ ವ್ಯಕ್ತಿಗೆ ದಿನಸಿಗಳ ಪೊಟ್ಟಣ ನೀಡುವ ಮೂಲಕ ಉದ್ಘಾಟಿಸಲಾಯಿತು. ಆತ ಅಟೆಂಡರ್ ನೌಕರಿ ಮಾಡುವವನಾದರೂ ಬಡವನೆ. ಕಾರ್ಯಕ್ರಮ ಮುಗಿಸಿ ಹೊರಡುವಾಗ ಆತ ನನ್ನ ಬಳಿ ಬಂದ. ‘ನನಗೆ ಏನಿಲ್ಲವೆಂದರೂ ತಿಂಗಳ ಸಂಬಳ ಬರುತ್ತಿದೆ. ಹಾಗಾಗಿ ನೀವು ಕೊಟ್ಟ ದಿನಸಿಗಳನ್ನು ನಿಮಗೆ ವಾಪಸ್ ಮಾಡುತ್ತಿದ್ದೇನೆ. ನನಗಿಂತ ಬಡವರಿಗೆ ಕೊಡಿಎಂದು ಹೇಳಿದ. ‘ಇರಲಿ ಬಿಡು, ತೆಗೆದುಕೊಂಡು ಹೋಗು ಎಂದೆ- ಆತನ ಗುಣಕ್ಕೆ ಹೆಮ್ಮೆ ಪಟ್ಟು. ಆತ ಒಪ್ಪಿಕೊಂಡ. ‘ಇದನ್ನು ನಮ್ಮ ಸುತ್ತಲಿದ್ದವರಿಗೆ ಹಂಚಲು ಒಪ್ಪಿಗೆ ನೀಡಿದರೆ ಮಾತ್ರಎಂದ. ಹ್ಞೂಂ ಎಂದೆ. ಆತ ತನ್ನ ಓಣಿಗೆ ಹೋಗಿ ಅದನ್ನು ಹಂಚಿದ್ದು ಮಾತ್ರವಲ್ಲ ಆತನ ಮನೆಯಿರುವ ಪ್ರದೇಶವನ್ನು ಸುತ್ತಿ, ಊಟಕ್ಕೂ ತೊಂದರೆ ಇರುವ ತೀರಾ ಬಡ 10-15 ಕುಟುಂಬಗಳ ಹೆಸರು ಪಟ್ಟಿ ತಯಾರಿ ಮಾಡಿ ಕಳುಹಿಸಿದ. ‘ಸರ್, ಇವರಿಗೂ ನೀವು ಸಹಾಯ ಮಾಡಿದರೆ ಒಳ್ಳೆಯದು ಎಂದ.’ ಅಷ್ಟು ಮಾತ್ರವಲ್ಲ ನಮ್ಮ ಅಧ್ಯಾಪಕರ ವಾಟ್ಸ ಎಪ್ ಗುಂಪಿಗೆ ಹೋಗಿ ನೋಡಿದರೆಸರ್ ನೀವು ಬಡವರಿಗೆ ದಿನಸಿ ಹಂಚುತ್ತಿರುವುದು ಖುಷಿಯ ಸಂಗತಿ. ಕಾರ್ಯಕ್ಕೆ ನನ್ನ ದೇಣಿಗೆಯಾಗಿ 1000 ರೂ. ಕೊಡುತ್ತೇವೆ ಎಂದ; ನಂತರ ಭೇಟಿಯಾದಾಗ ಹಣವನ್ನು ನೀಡಿದ ಕೂಡ. ಆತ ಲಕ್ಷ ರೂಪಾಯಿ ಸಂಬಳ ಬರುವವನಲ್ಲ. ಸಿದ್ದಾಪುರದಲ್ಲಿ ಸ್ವಂತ ಮನೆ ಹೊಂದಿದವನೂ ಅಲ್ಲ. ಆದರೆ ಇನ್ನೊಬ್ಬರ ನೋವಿಗೆ ಮಣಿಯುವ ಮನಃಸ್ಥಿತಿ ಎಂತವರ ಕಣ್ಣನ್ನೂ ತೇವಗೊಳಿಸದೇ ಇರದು. ಹೃದಯದ ಕಣ್ಣಿದ್ದವರಿಗೆ ಇಂಥ ಸಾವಿರ ಘಟನೆಗಳು ನಮ್ಮ ಸುತ್ತಲೇ ಕಾಣುತ್ತವೆ.
ಆಗ ನೆನಪಾದದ್ದು ಭಾರತದೊಳಗಿನ ಸೌಹಾರ್ದ ಪರಂಪರೆ ಎಂದರೆ ಭೂಮಿಯೊಳಗೆ ಹುಗಿದು ಹೋದ ಬೀಜದಂತೆ. ಸಣ್ಣ ಮಳೆ ಹನಿಯ ಸಿಂಚನವಾದರೂ ಸಾಕು. ಅದು ಮೊಳಕೆಯೊಡೆದು ಮರುಭೂಮಿಯನ್ನೂ ಹಸಿರು ಮಾಡುವ ಶಕ್ತಿ ಹೊಂದಿದೆ. ನಮಗೆ ಮಳೆ ಆಗಲು ಸಾಧ್ಯವಿಲ್ಲದಿದ್ದರೂ ಸಣ್ಣ ಹನಿಯಾದರೂ ಆಗೋಣ.
-ವಿಠ್ಠಲ ಭಂಡಾರಿ








"ದಮನದ ಕೇಡಿನೆದುರು ಬುದ್ದನ ಕರುಣೆಯ ಬೆಳಕು"



ದೇಶವೆಂದರೆ ಮನುಷ್ಯರು. ಈ ದೇಶದ ಪ್ರಜ್ನೆಯಂತಿರುವ ಪ್ರಜೆಗಳ ಮೇಲೆ ಮತ್ತೆ ಮತ್ತೆ ಹಲ್ಲೆ, ದೌರ್ಜನ್ಯ ನಡೆದಾಗ ಅವರ ಪರವಾಗಿ ಅನೇಕ ಬುದ್ದಿಜೀವಿಗಳು, ಚಿಂತಕರು, ಲೇಖಕರು, ಮಾನವ ಹಕ್ಕುಗಳ ಹೋರಾಟಗಾರರು ದನಿಯೆತ್ತಿದ್ದಾರೆ. ಶೋಷಿತರ ಬೆಂಬಲಕ್ಕೆ ನಿಂತಿದ್ದಾರೆ.  ಆದರೆ ದಮನಿತರ ಹಕ್ಕುಗಳಿಗೆ ಹೋರಾಡಿದವರನ್ನೆ ದೇಶದ್ರೋಹಿಗಳೆಂದು ಕರೆದು ಅವರನ್ನು "ಯುಎಪಿಎ" (ಕಾನೂನುಬಾಹಿರ ಚಟುವಟಿಕೆಗಳ ನಿಗ್ರಹ ಕಾಯ್ದೆ) ಎನ್ನುವ ಕರಾಳ ಶಾಸನವನ್ನು ಬಳಸಿಕೊಂಡು ಬಂದಿಸಿರುವುದು ನಮಗೆಲ್ಲಾ ಅಘಾತ ತಂದಿದೆ. ಇದು ಕಟುಕನ ಕತ್ತಿ ದೇಶದ ಮನಸ್ಸಿನ ಮೇಲೆ ನಡೆಸಿದ ಹಲ್ಲೆಯಾಗಿದೆ.  ಕಟ್ಟಡದ ಹೊರಗಿನ ಮೇಲ್ಮೈಯನ್ನು ಬದ್ರವಾಗಿದೆ ಎಂದು ವಂಚಿಸುವುದರ ಮೂಲಕ ಒಳಗಿನ ರಚನೆಯನ್ನು ಸಂಪೂರ್ಣ  ಟೊಳ್ಳುಗೊಳಿಸಿ ದೇಶವೆನ್ನುವ ಇಡೀ ಕಟ್ಟಡವನ್ನು ಅಭದ್ರಗೊಳಿಸುವುದು ಇವರ ಹುನ್ನಾರವಾಗಿದೆ. ಈ ಮೇಲು ರಚನೆಯ ಅಗಾಧವಾದ ಕೊಂಬೆಗಳು ಪ್ರಜೆಗಳ ಮೇಲಿನ ಹಿಡಿತವನ್ನು ಮತ್ತಷ್ಟು ಗಟ್ಟಿಗೊಳಿಸಿ ಅವರ ಉಸಿರುಗಟ್ಟಿಸಿ ಪ್ರಭುತ್ವದ ಮುಂದೆ ಮಂಡಿಯೂರುವಂತೆ ಮಾಡಿವೆ. ಇಂತಹ ಸಂದರ್ಭದಲ್ಲಿ ದೇಶದ ಆತ್ಮಸಾಕ್ಷಿಯಂತೆ ವರ್ತಿಸಬೇಕಾದ ಸಾರ್ವಜನಿಕ ಸಂಸ್ಥೆಗಳು ಪ್ರಭುತ್ವದೊಂದಿಗೆ ಹೊಂದಾಣಿಕೆ ಮಾಡಿಕೊಂಡಿವೆ, ಪುರಾವೆಗಳಿಲ್ಲದ ಆರೋಪಗಳಿಗೆ ಬಲಿಯಾದ ಮಾನವ ಹಕ್ಕುಗಳ ಹೋರಾಟಗಾರರಿಗೆ ಜಾಮೀನು ಕೊಡಲು ಸಹ ನ್ಯಾಯಾಲಯಗಳು ನಿರಾಕರಿಸಿವೆ. ಎಲ್ಲ ಆಧಾರಸ್ತಂಬಗಳು ಕೈಕೊಟ್ಟಾಗ ಈ ದೇಶ ಪ್ರಜಾಪ್ರಭುತ್ವವನ್ನು ರಕ್ಷಿಸುವುದು ಅಲ್ಲಿನ ನಾಗರಿಕ ಜವಬ್ದಾರಿಯಾಗಿದೆ
ಕ್ರೂನಿ ಬಂಡವಾಳಶಾಹಿಗಳ ಈ ಕಾಲದಲ್ಲಿ ಜಾಗತಿಕವಾಗಿ ಅನೇಕ ದೇಶಗಳಲ್ಲಿ ನಿರಂಕುಶ ಪ್ರಬುತ್ವದ ಆಡಳಿತ ಕಂಡುಬರುತ್ತದೆ. ಕರೋನ ವೈರಾಣು ಈ ಸಂದರ್ಬವನ್ನು ಮತ್ತಷ್ಟು ಜಟಿಲಗೊಳಿಸಿದೆ. ಈ ಬಿಕ್ಕಟ್ಟಿನಲ್ಲಿ ಬಡಜನರು ಬೀದಿ ಪಾಲಾಗಿದ್ದಾರೆ ಮತ್ತು ಹಸಿವಿನಿಂದ ಬಳಲುತ್ತಿದ್ದಾರೆ, ಇವರ ಪರವಾಗಿ ದನಿ ಎತ್ತಿದವರು ಜೈಲು ಪಾಲಾಗಿದ್ದಾರೆ. ಈ ದೇಶವನ್ನು ಕಟ್ಟಿದ ಈ  ಜನರು ತುತ್ತು ಕೂಳಿಗೆ ಪರದಾಡುವಂತಹ ವಾತಾವರಣ ಸೃಷ್ಟಿಸಲಾಯಿತು. ಯಾವುದೇ ಪೂರ್ವ ತಯಾರಿ ಇಲ್ಲದೆ ದಿಗ್ಭಂದನ ಹೇರಿದ್ದರ ಪರಿಣಾಮವಾಗಿ ಲಕ್ಷಾಂತರ ವಲಸೆ ಕಾರ್ಮಿಕರು ಬೀದಿಗೆ ಬಂದರು ಮತ್ತು ಮಹಿಳೆಯರು, ಸಣ್ಣ ಸಣ್ಣ ಮಕ್ಕಳು ಸಾವಿರಾರು ಕಿ.ಮೀ. ತಮ್ಮ ಊರಿನ ಕಡೆಗೆ ಬರಿಗಾಲಿನಲ್ಲಿ ನಡೆಯುತ್ತಿರುವ ದೃಶ್ಯ ನೋಡಿದಾಗ ನಮ್ಮೆಲ್ಲರ ಎದೆ ಒಡೆಯುತ್ತದೆ. ಅನೇಕ ಕಡೆಗಳಲ್ಲಿ ಅವರನ್ನು ಪ್ರಾಣಿಗಳಂತೆ ಬಂದಿಸಿಡಲಾಗಿದೆ
ಈ ಎಲ್ಲಾ ಯಾತನಾಮಯ ದಿನಗಳ ನಡುವೆ ಅಂಬೇಡ್ಕರ್ ಜಯಂತಿಯಾದ ಎಪ್ರಿಲ್  14ರಂದು ಆನಂದ ತೇಲ್ತುಂಬ್ಡೆ ಮತ್ತು ಗೌತಮ್ ನವಲ್ಕ ಅವರನ್ನು ಸುಳ್ಳು ಆರೋಪಗಳನ್ನು ಹೊರೆಸಿ ’ಯುಎಪಿಎ’ ಅಡಿಯಲ್ಲಿ ಬಂದಿಸಿದ್ದಾರೆ. ಈ ಬಂದನದ ಇಡೀ ಪ್ರತಿಕ್ರಿಯೆ ಸೇಡಿನಿಂದ ಮತ್ತು ಕ್ರೌರ್ಯದಿಂದ ಕೂಡಿದೆ. ಎರಡು ವರ್ಷಗಳ ಹಿಂದೆ ಬಡಜನರ ಸಬಲೀಕರಣಕ್ಕಾಗಿ ತಮ್ಮ ಬದುಕನ್ನು ಮುಡಿಪಾಗಿಟ್ಟಿದ್ದ ಒಂಬತ್ತು ಮಾನವ ಹಕ್ಕುಗಳ ಹೋರಾಟಗಾರರು, ನ್ಯಾಯವಾದಿಗಳನ್ನು ಇದೇ ರೀತಿಯ ಸುಳ್ಳು ಆರೋಪಗಳ ಅಡಿಯಲ್ಲಿ ಅಕ್ರಮವಾಗಿ ಬಂದಿಸಿದ್ದರು. ಈಗ ತೇಲ್ತುಂಬ್ಡೆ ಮತ್ತು ನವಲ್ಕ ಅವರನ್ನು ಬಂದಿಸಿದ್ದಾರೆ. ಮೌನವಾಗಿದ್ದರೆ ಮುಂದಿನ ದಿನಗಳಲ್ಲಿ ಬಂದನಕ್ಕೊಳಗಾಗುವ ಸರದಿ ನಮ್ಮದಾಗುತ್ತದೆ. ಈ ಎಲ್ಲಾ ಬಂದನದ ಹಿಂದೆ ಬಡಜನರನ್ನು ಶೋಷಿಸುವುದು ಮತ್ತು ಅವರ ಪರವಾಗಿ ಹೋರಾಡುವವರನ್ನು ಬಂದಿಸುವ ಕಾರ್ಯಸೂಚಿ ಇದೆ
ಇಂತಹ ದುರಿತ, ಆತಂಕದ ದಿನಗಳಲ್ಲಿ ಬಂದಿಸಲ್ಪಟ್ಟ ಒಡನಾಡಿಗಳ ಪರವಾಗಿ ನಾವೆಲ್ಲಾ ಒಗ್ಗಟ್ಟಾಗಿ ಬೆಂಬಲಿಸಬೇಕಾಗಿದೆ.ಈ ಒಡನಾಡಿಗಳು ಏಕಾಂಗಿಗಳಲ್ಲ ಎಂದು ತೋರಿಸಿಕೊಡಬೇಕಾಗಿದೆ. ಅವರ ಪರವಾಗಿ ನಿಲ್ಲುವುದು ಈ ಕ್ಷಣದ ಅಗತ್ಯವಾಗಿದೆ. ಈ ಮೂಲಕ ಮಾನವ ಹಕ್ಕುಗಳನ್ನು ಮತ್ತು ಪ್ರಜಾಪ್ರಭುತ್ವವನ್ನು ಕಾಪಾಡಬೇಕಾಗಿದೆ. ಇದು ನಮ್ಮ ಕರ್ತವ್ಯ.
ನಾವೆಲ್ಲಾ ಭಾರತದ ಆತ್ಮವನ್ನು ರಕ್ಷಿಸಬೇಕಾಗಿದೆ
ಜೊತೆಯಾಗಿ ನಿಲ್ಲೋಣ, ಅಕ್ರಮ ಬಂದನವನ್ನು ವಿರೋದಿಸೋಣ
ಎಪ್ರಿಲ್ ೭ ಬುದ್ದ ಪೂರ್ಣಿಮೆ
ಅಂದು ಪ್ರಗತಿಪರ ಸಂಘಟನೆಗಳು, ಚಿಂತಕರು ಮುಮ್ತಾದವರು  ದಿಗ್ಬಂದನ ಸಡಿಲಗೊಳಿಸಿದ ಜಿಲ್ಲೆ, ತಾಲೂಕುಗಳಲ್ಲಿ ದೈಹಿಕ ಅಂತರ ಕಾಯ್ದುಕೊಂಡು ಸಾರ್ವಜನಿಕವಾಗಿ ಪ್ರತಿಭಟಿಸಬೇಕು. ಇದು ಸಾದ್ಯವಿಲ್ಲದವರು ತಮ್ಮ ತಮ್ಮ ಮನೆಗಳಲ್ಲಿ ಸಾಂಕೇತಿಕವಾಗಿ ಪ್ರತಿಭಟಿಸಬೇಕು
ನಮ್ಮ ಘೋಷಣೆಗಳು
ಬುದ್ದನ ಕರುಣೆಯ ಬೆಳಕನ್ನು ಹಿಡಿದುಕೊಂಡು ನಾವು ನ್ಯಾಯದ ಪರವಾಗಿ ನಿಂತಿದ್ದೇವೆ
ಸುಳ್ಳು ಆರೋಪದಡಿಯಲ್ಲಿ ಬಂದಿಸಲ್ಪಟ್ಟ ಎಲ್ಲಾ ಮಾನವ ಹಕ್ಕುಗಳ ಹೋರಾಟಗಾರರು, ನ್ಯಾಯವಾದಿಗಳು, ಲೇಖಕರನ್ನು ಕೂಡಲೆ ಬಿಡುಗಡೆಗೊಳಿಸಿ
ಕರಾಳ ಶಾಸನ "ಯುಎಪಿಎ" ಯನ್ನು ಹಿಂತೆಗೆದುಕೊಳ್ಳಿ
ಜೈಲಿನಲ್ಲಿರಬೇಕಾದ ಮತಾಂದರು, ಭ್ರಷ್ಟರು ಸಾರ್ವಜನಿಕವಾಗಿ ಅಡ್ಡಾಡಿಕೊಂಡಿದ್ದಾರೆ, ಜನರ ನಡುವೆ ಇರಬೇಕಾದ ಮಾನವೀಯ, ಜೀವಪರ ವ್ಯಕ್ತಿಗಳು ಬಂದನಕ್ಕೊಳಗಾಗಿದ್ದಾರೆ ಇದು ನಾಚಿಕೆಗೇಡು
ವಿ.ಸೂ. : ಈ ಮೇಲ್  ಜೊತೆ ಇಂಗ್ಲೀಷ್ ನಲ್ಲಿ ಬರೆದ ಒಂದು ಪತ್ರವನ್ನು ಲಗತ್ತಿಸಲಾಗಿದೆ. ಅದನ್ನು ಪ್ರತಿಯೊಬ್ಬರೂ ರಾಷ್ಟ್ರಪತಿ, ಪ್ರದಾನ ಮಂತ್ರಿ ಕಾರ್ಯಾಲಯ, ಗೃಹ ಇಲಾಖೆಗೆ ಕಳುಹಿಸಬೇಕು

presidentofindia@rb.nic.in ,  PMO, Home ministry 
--
"ಕರ್ನಾಟಕ ಪ್ರಗತಿಪರ ಸಂಘಟನೆಗಳ ಒಕ್ಕೂಟ"ದ ಪರವಾಗಿ