Sunday, 3 May 2020

"ದಮನದ ಕೇಡಿನೆದುರು ಬುದ್ದನ ಕರುಣೆಯ ಬೆಳಕು"



ದೇಶವೆಂದರೆ ಮನುಷ್ಯರು. ಈ ದೇಶದ ಪ್ರಜ್ನೆಯಂತಿರುವ ಪ್ರಜೆಗಳ ಮೇಲೆ ಮತ್ತೆ ಮತ್ತೆ ಹಲ್ಲೆ, ದೌರ್ಜನ್ಯ ನಡೆದಾಗ ಅವರ ಪರವಾಗಿ ಅನೇಕ ಬುದ್ದಿಜೀವಿಗಳು, ಚಿಂತಕರು, ಲೇಖಕರು, ಮಾನವ ಹಕ್ಕುಗಳ ಹೋರಾಟಗಾರರು ದನಿಯೆತ್ತಿದ್ದಾರೆ. ಶೋಷಿತರ ಬೆಂಬಲಕ್ಕೆ ನಿಂತಿದ್ದಾರೆ.  ಆದರೆ ದಮನಿತರ ಹಕ್ಕುಗಳಿಗೆ ಹೋರಾಡಿದವರನ್ನೆ ದೇಶದ್ರೋಹಿಗಳೆಂದು ಕರೆದು ಅವರನ್ನು "ಯುಎಪಿಎ" (ಕಾನೂನುಬಾಹಿರ ಚಟುವಟಿಕೆಗಳ ನಿಗ್ರಹ ಕಾಯ್ದೆ) ಎನ್ನುವ ಕರಾಳ ಶಾಸನವನ್ನು ಬಳಸಿಕೊಂಡು ಬಂದಿಸಿರುವುದು ನಮಗೆಲ್ಲಾ ಅಘಾತ ತಂದಿದೆ. ಇದು ಕಟುಕನ ಕತ್ತಿ ದೇಶದ ಮನಸ್ಸಿನ ಮೇಲೆ ನಡೆಸಿದ ಹಲ್ಲೆಯಾಗಿದೆ.  ಕಟ್ಟಡದ ಹೊರಗಿನ ಮೇಲ್ಮೈಯನ್ನು ಬದ್ರವಾಗಿದೆ ಎಂದು ವಂಚಿಸುವುದರ ಮೂಲಕ ಒಳಗಿನ ರಚನೆಯನ್ನು ಸಂಪೂರ್ಣ  ಟೊಳ್ಳುಗೊಳಿಸಿ ದೇಶವೆನ್ನುವ ಇಡೀ ಕಟ್ಟಡವನ್ನು ಅಭದ್ರಗೊಳಿಸುವುದು ಇವರ ಹುನ್ನಾರವಾಗಿದೆ. ಈ ಮೇಲು ರಚನೆಯ ಅಗಾಧವಾದ ಕೊಂಬೆಗಳು ಪ್ರಜೆಗಳ ಮೇಲಿನ ಹಿಡಿತವನ್ನು ಮತ್ತಷ್ಟು ಗಟ್ಟಿಗೊಳಿಸಿ ಅವರ ಉಸಿರುಗಟ್ಟಿಸಿ ಪ್ರಭುತ್ವದ ಮುಂದೆ ಮಂಡಿಯೂರುವಂತೆ ಮಾಡಿವೆ. ಇಂತಹ ಸಂದರ್ಭದಲ್ಲಿ ದೇಶದ ಆತ್ಮಸಾಕ್ಷಿಯಂತೆ ವರ್ತಿಸಬೇಕಾದ ಸಾರ್ವಜನಿಕ ಸಂಸ್ಥೆಗಳು ಪ್ರಭುತ್ವದೊಂದಿಗೆ ಹೊಂದಾಣಿಕೆ ಮಾಡಿಕೊಂಡಿವೆ, ಪುರಾವೆಗಳಿಲ್ಲದ ಆರೋಪಗಳಿಗೆ ಬಲಿಯಾದ ಮಾನವ ಹಕ್ಕುಗಳ ಹೋರಾಟಗಾರರಿಗೆ ಜಾಮೀನು ಕೊಡಲು ಸಹ ನ್ಯಾಯಾಲಯಗಳು ನಿರಾಕರಿಸಿವೆ. ಎಲ್ಲ ಆಧಾರಸ್ತಂಬಗಳು ಕೈಕೊಟ್ಟಾಗ ಈ ದೇಶ ಪ್ರಜಾಪ್ರಭುತ್ವವನ್ನು ರಕ್ಷಿಸುವುದು ಅಲ್ಲಿನ ನಾಗರಿಕ ಜವಬ್ದಾರಿಯಾಗಿದೆ
ಕ್ರೂನಿ ಬಂಡವಾಳಶಾಹಿಗಳ ಈ ಕಾಲದಲ್ಲಿ ಜಾಗತಿಕವಾಗಿ ಅನೇಕ ದೇಶಗಳಲ್ಲಿ ನಿರಂಕುಶ ಪ್ರಬುತ್ವದ ಆಡಳಿತ ಕಂಡುಬರುತ್ತದೆ. ಕರೋನ ವೈರಾಣು ಈ ಸಂದರ್ಬವನ್ನು ಮತ್ತಷ್ಟು ಜಟಿಲಗೊಳಿಸಿದೆ. ಈ ಬಿಕ್ಕಟ್ಟಿನಲ್ಲಿ ಬಡಜನರು ಬೀದಿ ಪಾಲಾಗಿದ್ದಾರೆ ಮತ್ತು ಹಸಿವಿನಿಂದ ಬಳಲುತ್ತಿದ್ದಾರೆ, ಇವರ ಪರವಾಗಿ ದನಿ ಎತ್ತಿದವರು ಜೈಲು ಪಾಲಾಗಿದ್ದಾರೆ. ಈ ದೇಶವನ್ನು ಕಟ್ಟಿದ ಈ  ಜನರು ತುತ್ತು ಕೂಳಿಗೆ ಪರದಾಡುವಂತಹ ವಾತಾವರಣ ಸೃಷ್ಟಿಸಲಾಯಿತು. ಯಾವುದೇ ಪೂರ್ವ ತಯಾರಿ ಇಲ್ಲದೆ ದಿಗ್ಭಂದನ ಹೇರಿದ್ದರ ಪರಿಣಾಮವಾಗಿ ಲಕ್ಷಾಂತರ ವಲಸೆ ಕಾರ್ಮಿಕರು ಬೀದಿಗೆ ಬಂದರು ಮತ್ತು ಮಹಿಳೆಯರು, ಸಣ್ಣ ಸಣ್ಣ ಮಕ್ಕಳು ಸಾವಿರಾರು ಕಿ.ಮೀ. ತಮ್ಮ ಊರಿನ ಕಡೆಗೆ ಬರಿಗಾಲಿನಲ್ಲಿ ನಡೆಯುತ್ತಿರುವ ದೃಶ್ಯ ನೋಡಿದಾಗ ನಮ್ಮೆಲ್ಲರ ಎದೆ ಒಡೆಯುತ್ತದೆ. ಅನೇಕ ಕಡೆಗಳಲ್ಲಿ ಅವರನ್ನು ಪ್ರಾಣಿಗಳಂತೆ ಬಂದಿಸಿಡಲಾಗಿದೆ
ಈ ಎಲ್ಲಾ ಯಾತನಾಮಯ ದಿನಗಳ ನಡುವೆ ಅಂಬೇಡ್ಕರ್ ಜಯಂತಿಯಾದ ಎಪ್ರಿಲ್  14ರಂದು ಆನಂದ ತೇಲ್ತುಂಬ್ಡೆ ಮತ್ತು ಗೌತಮ್ ನವಲ್ಕ ಅವರನ್ನು ಸುಳ್ಳು ಆರೋಪಗಳನ್ನು ಹೊರೆಸಿ ’ಯುಎಪಿಎ’ ಅಡಿಯಲ್ಲಿ ಬಂದಿಸಿದ್ದಾರೆ. ಈ ಬಂದನದ ಇಡೀ ಪ್ರತಿಕ್ರಿಯೆ ಸೇಡಿನಿಂದ ಮತ್ತು ಕ್ರೌರ್ಯದಿಂದ ಕೂಡಿದೆ. ಎರಡು ವರ್ಷಗಳ ಹಿಂದೆ ಬಡಜನರ ಸಬಲೀಕರಣಕ್ಕಾಗಿ ತಮ್ಮ ಬದುಕನ್ನು ಮುಡಿಪಾಗಿಟ್ಟಿದ್ದ ಒಂಬತ್ತು ಮಾನವ ಹಕ್ಕುಗಳ ಹೋರಾಟಗಾರರು, ನ್ಯಾಯವಾದಿಗಳನ್ನು ಇದೇ ರೀತಿಯ ಸುಳ್ಳು ಆರೋಪಗಳ ಅಡಿಯಲ್ಲಿ ಅಕ್ರಮವಾಗಿ ಬಂದಿಸಿದ್ದರು. ಈಗ ತೇಲ್ತುಂಬ್ಡೆ ಮತ್ತು ನವಲ್ಕ ಅವರನ್ನು ಬಂದಿಸಿದ್ದಾರೆ. ಮೌನವಾಗಿದ್ದರೆ ಮುಂದಿನ ದಿನಗಳಲ್ಲಿ ಬಂದನಕ್ಕೊಳಗಾಗುವ ಸರದಿ ನಮ್ಮದಾಗುತ್ತದೆ. ಈ ಎಲ್ಲಾ ಬಂದನದ ಹಿಂದೆ ಬಡಜನರನ್ನು ಶೋಷಿಸುವುದು ಮತ್ತು ಅವರ ಪರವಾಗಿ ಹೋರಾಡುವವರನ್ನು ಬಂದಿಸುವ ಕಾರ್ಯಸೂಚಿ ಇದೆ
ಇಂತಹ ದುರಿತ, ಆತಂಕದ ದಿನಗಳಲ್ಲಿ ಬಂದಿಸಲ್ಪಟ್ಟ ಒಡನಾಡಿಗಳ ಪರವಾಗಿ ನಾವೆಲ್ಲಾ ಒಗ್ಗಟ್ಟಾಗಿ ಬೆಂಬಲಿಸಬೇಕಾಗಿದೆ.ಈ ಒಡನಾಡಿಗಳು ಏಕಾಂಗಿಗಳಲ್ಲ ಎಂದು ತೋರಿಸಿಕೊಡಬೇಕಾಗಿದೆ. ಅವರ ಪರವಾಗಿ ನಿಲ್ಲುವುದು ಈ ಕ್ಷಣದ ಅಗತ್ಯವಾಗಿದೆ. ಈ ಮೂಲಕ ಮಾನವ ಹಕ್ಕುಗಳನ್ನು ಮತ್ತು ಪ್ರಜಾಪ್ರಭುತ್ವವನ್ನು ಕಾಪಾಡಬೇಕಾಗಿದೆ. ಇದು ನಮ್ಮ ಕರ್ತವ್ಯ.
ನಾವೆಲ್ಲಾ ಭಾರತದ ಆತ್ಮವನ್ನು ರಕ್ಷಿಸಬೇಕಾಗಿದೆ
ಜೊತೆಯಾಗಿ ನಿಲ್ಲೋಣ, ಅಕ್ರಮ ಬಂದನವನ್ನು ವಿರೋದಿಸೋಣ
ಎಪ್ರಿಲ್ ೭ ಬುದ್ದ ಪೂರ್ಣಿಮೆ
ಅಂದು ಪ್ರಗತಿಪರ ಸಂಘಟನೆಗಳು, ಚಿಂತಕರು ಮುಮ್ತಾದವರು  ದಿಗ್ಬಂದನ ಸಡಿಲಗೊಳಿಸಿದ ಜಿಲ್ಲೆ, ತಾಲೂಕುಗಳಲ್ಲಿ ದೈಹಿಕ ಅಂತರ ಕಾಯ್ದುಕೊಂಡು ಸಾರ್ವಜನಿಕವಾಗಿ ಪ್ರತಿಭಟಿಸಬೇಕು. ಇದು ಸಾದ್ಯವಿಲ್ಲದವರು ತಮ್ಮ ತಮ್ಮ ಮನೆಗಳಲ್ಲಿ ಸಾಂಕೇತಿಕವಾಗಿ ಪ್ರತಿಭಟಿಸಬೇಕು
ನಮ್ಮ ಘೋಷಣೆಗಳು
ಬುದ್ದನ ಕರುಣೆಯ ಬೆಳಕನ್ನು ಹಿಡಿದುಕೊಂಡು ನಾವು ನ್ಯಾಯದ ಪರವಾಗಿ ನಿಂತಿದ್ದೇವೆ
ಸುಳ್ಳು ಆರೋಪದಡಿಯಲ್ಲಿ ಬಂದಿಸಲ್ಪಟ್ಟ ಎಲ್ಲಾ ಮಾನವ ಹಕ್ಕುಗಳ ಹೋರಾಟಗಾರರು, ನ್ಯಾಯವಾದಿಗಳು, ಲೇಖಕರನ್ನು ಕೂಡಲೆ ಬಿಡುಗಡೆಗೊಳಿಸಿ
ಕರಾಳ ಶಾಸನ "ಯುಎಪಿಎ" ಯನ್ನು ಹಿಂತೆಗೆದುಕೊಳ್ಳಿ
ಜೈಲಿನಲ್ಲಿರಬೇಕಾದ ಮತಾಂದರು, ಭ್ರಷ್ಟರು ಸಾರ್ವಜನಿಕವಾಗಿ ಅಡ್ಡಾಡಿಕೊಂಡಿದ್ದಾರೆ, ಜನರ ನಡುವೆ ಇರಬೇಕಾದ ಮಾನವೀಯ, ಜೀವಪರ ವ್ಯಕ್ತಿಗಳು ಬಂದನಕ್ಕೊಳಗಾಗಿದ್ದಾರೆ ಇದು ನಾಚಿಕೆಗೇಡು
ವಿ.ಸೂ. : ಈ ಮೇಲ್  ಜೊತೆ ಇಂಗ್ಲೀಷ್ ನಲ್ಲಿ ಬರೆದ ಒಂದು ಪತ್ರವನ್ನು ಲಗತ್ತಿಸಲಾಗಿದೆ. ಅದನ್ನು ಪ್ರತಿಯೊಬ್ಬರೂ ರಾಷ್ಟ್ರಪತಿ, ಪ್ರದಾನ ಮಂತ್ರಿ ಕಾರ್ಯಾಲಯ, ಗೃಹ ಇಲಾಖೆಗೆ ಕಳುಹಿಸಬೇಕು

presidentofindia@rb.nic.in ,  PMO, Home ministry 
--
"ಕರ್ನಾಟಕ ಪ್ರಗತಿಪರ ಸಂಘಟನೆಗಳ ಒಕ್ಕೂಟ"ದ ಪರವಾಗಿ

No comments:

Post a Comment