ಕಾಕತಾಳೀಯವಾಗಿ ಸಂಭವಿಸುವ ಹಲವು ಸಂಗತಿಗಳನ್ನು ಧರ್ಮ
ಜಾತಿಗೆ ಒತ್ತಾಯಪೂರ್ವಕವಾಗಿ ತಳಕುಹಾಕುವ ಹುನ್ನಾರ ಒಂದೆಡೆ ನಡೆಯುತ್ತಿದ್ದರೆ
ಇನ್ನೊಂದೆಡೆ ಸಾಮಾನ್ಯ ಜನರ ದಿನನಿತ್ಯದ
ನಡವಳಿಕೆಗಳು ಈ ರೋಗಗ್ರಸ್ಥ ಮನಸ್ಥಿತಿಯನ್ನು
ಹಿಮ್ಮೆಟ್ಟಿಸುವ ನಿಟ್ಟಿನಲ್ಲಿ ಅಪ್ರಜ್ಞಾಪೂರ್ವಕವಾದ ಕೆಲಸ ಮಾಡುತ್ತಿದೆ ಎನ್ನುವುದು
ಸಂತೋಷದ ಸಂಗತಿ. ಪೂರಕವಾದ ಒಂದೆರಡು
ಭಿನ್ನ ಘಟನೆಗಳನ್ನು ನೆನಪಿಸುತ್ತಿದ್ದೇನೆ.
ಘಟನೆ:1-
ಕೋವಿಡ್ 19 ರ ವ್ಯಾಪಕ ಪ್ರಸರಣದ
ಸಂದರ್ಭ, ಇಂದು ಒಂದು ರೀತಿಯ
ಭೀತಿಯ ವಾತಾವರಣ ಸೃಷ್ಟಿಸಿದೆ. ರೋಗದ
ಕುರಿತ ಮಾಹಿತಿಯ ಕೊರತೆ, ಹಲವು
ಮಾಧ್ಯಮದ ಟಿಆರ್ಪಿ ಸಮರ,
ಆಡಳಿತದ ನಿರ್ಲಕ್ಷ್ಯ, ಅಸಮರ್ಪಕ ನಿರ್ವಹಣೆ ಮತ್ತು
ಮುಂದಾಲೋಚನೆಯ ಕೊರತೆಯಿಂದಾಗಿ ಸಾಮಾನ್ಯರ ಬದುಕು ಮೂರಾಬಟ್ಟೆ ಆಗುವ
ಸಂದರ್ಭದಲ್ಲಿ ಹಲವು ಸಂಘಸಂಸ್ಥೆಗಳು, ವ್ಯಕ್ತಿಗಳು
ಬಡ, ಸಂತ್ರಸ್ಥ ಕುಟುಂಬಗಳಿಗೆ ಸಹಾಯ ಹಸ್ತ(ಸಹಾಯ
ನೀಡುವಲ್ಲಿ ಕೆಲವರಿಗೆ ಪ್ರತ್ಯೇಕ ಒಳ ಅಜೆಂಡಾ ಇದೆ
ಅನ್ನುವುದು ಬೇರೆ ಸಂಗತಿ)ನೀಡುತ್ತಿವೆ. ಒಂದೆರಡು
ದಿನಗಳ ಹಿಂದೆ ನಮ್ಮ ಕಾಲೇಜಿನ
ಅಧ್ಯಾಪಕರು ಸೇರಿ ಜನಗಳಿಗೆ ಒಂದಿಷ್ಟು
ದಿನಸಿ ಕೊಡೋಣವೆಂದು ತೀರ್ಮಾನಿಸಿದೆವು; ಅದು ಸಣ್ಣ ಪ್ರಮಾಣದಲ್ಲಿ.
ಲಾಕ್ ಡೌನ್ ಇರುವುದರಿಂದ ನಾವೇ
ಹೋಗಿ ಫಲಾನುಭವಿಗಳನ್ನು ಆರಿಸುವಂತಿರಲಿಲ್ಲ. ಸಹಾಯದ ಅಗತ್ಯ ಇರುವ
ಕುಟುಂಬಗಳ ಒಂದು ಯಾದಿ ತಯಾರಿಸಿ
ಕೊಡಲು ಒಂದಿಬ್ಬರು ಪರಿಚಿತ ಅಂಗನವಾಡಿ ಕಾರ್ಯಕರ್ತೆಯರಿಗೆ
ವಿನಂತಿಸಿದೆವು. ಅವರಿಬ್ಬರೂ ‘ಹಿಂದೂ’ ಸಮುದಾಯದ ಅನುಯಾಯಿಗಳು.
ಎರಡು ದಿನದಲ್ಲಿ ಯಾದಿ ಬಂದು ತಲುಪಿತು.
ಇನ್ನೊಬ್ಬ ಮುಸ್ಲಿಂ ಸಮುದಾಯದ ಅನುಯಾಯಿ
ವ್ಯಕ್ತಿಗೆ ಹೇಳಲಾಗಿತ್ತು. ಅವರೂ ಒಂದು ಯಾದಿ
ನೀಡಿದರು. ‘ತಮ್ಮತಮ್ಮ ಯಾದಿಯಲ್ಲಿ ಎಲ್ಲಾ ಜಾತಿ ಧರ್ಮದವರ
ಹೆಸರೂ ಇರಬೇಕು, ನಿಮ್ಮ ನಿಮ್ಮ
ಸಮುದಾಯದ ಹೆಸರು ಮಾತ್ರ ಇರದಿರಲಿ’ ಎಂದು ಹೇಳಬೇಕೆನ್ನಿಸಿದರೂ ಅವರಿಗೆ ಹಾಗೆ ಹೇಳಿರಲಿಲ್ಲ.
ಆದರೆ ಇಬ್ಬರೂ ಸಿದ್ಧಪಡಿಸಿದ ಯಾದಿಯಲ್ಲಿ
ಮುಕ್ಕಾಲು ಪಾಲಿಗಿಂತÀ ಹೆಚ್ಚು ಜನ ಅವರು
ಆಚರಿಸುವ ಧರ್ಮ ಮತ್ತು ಜಾತಿಯ
ಆಚೆಯ ಕುಟುಂಬದ ಬಡವರ ಹೆಸರಿತ್ತು.
ದಿನನಿತ್ಯ ಪತ್ರಿಕೆ, ಟಿವಿಗಳಲ್ಲಿ ಕರೋನಾದ ಆವಾಂತರಕ್ಕಿಂತ ಧರ್ಮವಾರು
ಲೆಕ್ಕ, ಪರಸ್ಪರ ಅಪನಂಬಿಕೆ ಹುಟ್ಟಿಸುವ
ಕೆಲಸ ಮತ್ತು ಸ್ಥಳೀಯವಾಗಿ ಪರಸ್ಪರರಲ್ಲಿ
ಅಪನಂಬಿಕೆ ಹುಟ್ಟಿಸುವ ಕೆಲಸ ಗುಪ್ತವಾಗಿ ಇನ್ನೊಂದೆಡೆ
ನಡೆಯುತ್ತಿರುವಾಗ ಈ ಕೆಳಹಂತದಲ್ಲಿ ಬಡವರು
ಮತ್ತು ದುರ್ಬಲರನ್ನು ಗುರುತಿಸುವಾಗ ಕಿಂಚಿತ್ತೂ ದ್ವೇಷದ ಭಾವನೆ ಇರಲಿಲ್ಲ.
ಪರಸ್ಪರ ಗೌರವ, ಪ್ರೀತಿ, ಸೌಹಾರ್ದತೆಯ
ಭಾವಗಳು ತುಂಬಿದ್ದವು. ನೋವುಂಡವರಿಗೆ ಧರ್ಮದ ಬೇಲಿ ತೊಡಿಸಲು
ಇವರ ಮನಸ್ಸು ಒಪ್ಪುತ್ತಿರಲಿಲ್ಲ. ಒಂದಿಷ್ಟು
ದಿನಸಿ ಹಂಚಿ ಬರುವಾಗ ಒಬ್ಬ
ಶಿಕ್ಷಣೋದ್ಯಮಿಗಳು ಸಿಕ್ಕರು. ‘ದಿನಸಿ ಹಂಚುತ್ತಿದ್ದೇವೆ’ ಅಂದೆ. ಒಳ್ಳೆಯದು, ‘ಇದು
ಸಕಾಲ ಸಹಾಯ ಮಾಡುವುದಕ್ಕೆ’ ಅನ್ನುತ್ತಲೇ ‘ಅವರಿಗೆ ಎಲ್ಲಿಂದಲೋ ತುಂಬಾ
ಸಹಾಯ ಬರುತ್ತದೆ. ನೋಡಿಕೊಡಿ’ ಎಂದರು. ‘ಸರ್ಕಾರವೂ ತುಂಬಾ
ಸಹಾಯ ಮಾಡುತ್ತಿದೆ’ ಎಂದು ಒಂದೆರಡು ನಂಜಿನ
ಮಾತನ್ನಾಡಿದರು. ಆದರೆ ಒಂದು ಮನೆಗೆ
ದಿನಸಿ ಕೊಟ್ಟಾಗ ‘ತಮ್ಮ ಹಿಂಬದಿಯ ಮನೆಯ
(ಬೇರೊಂದು ಧರ್ಮದ) ಬಡ ಕುಟುಂಬಕ್ಕೂ
ಕೊಡಿ, ಅವರೂ ಬಡವರು. ಕಡಿಮೆ
ಇದ್ದರೆ ಇದೇ ಹಂಚಿಕೊಳ್ಳುತ್ತೇವೆ ಬಿಡಿ’ ಎಂದು ಹೇಳುವ ಗುಣ ಭಾರತದ
ನಿಜವಾದ ಅಂತಃಸ್ಸತ್ವ. ಭಾರತ ತನ್ನೊಳಗೆ ಪ್ರೀತಿಯ
ಬೀಜವನ್ನೇ ಇಟ್ಟುಕೊಂಡಿದೆ. ಹೊರಗಿನ ಸುಡುಬೆಂಕಿ ಆರಿದ
ಮೇಲೆ ಚಿಗುರುವುದು ಇದೇ ಬೀಜವೇ ಅಲ್ಲವೇ?
ಘಟನೆ:2
ನಮ್ಮಲ್ಲಿ ಅಂಬೇಡ್ಕರ್ ದಿನಾಚರಣೆ ಕಾರ್ಯಕ್ರಮವನ್ನು ಮೊದಲೇ ಹೇಳಿದಂತೆ ಸಂತ್ರಸ್ಥರಿಗೆ
ದಿನಸಿ ಹಂಚುವ ಮೂಲಕ ಆಚರಿಸಲಾಯಿತು.
ಇದರ ಭಾಗವಾಗಿ ದಿನೇಶ್ ಎನ್ನುವ
ವ್ಯಕ್ತಿಗೆ ದಿನಸಿಗಳ ಪೊಟ್ಟಣ ನೀಡುವ
ಮೂಲಕ ಉದ್ಘಾಟಿಸಲಾಯಿತು. ಆತ ಅಟೆಂಡರ್ ನೌಕರಿ
ಮಾಡುವವನಾದರೂ ಬಡವನೆ. ಕಾರ್ಯಕ್ರಮ ಮುಗಿಸಿ
ಹೊರಡುವಾಗ ಆತ ನನ್ನ ಬಳಿ
ಬಂದ. ‘ನನಗೆ ಏನಿಲ್ಲವೆಂದರೂ ತಿಂಗಳ
ಸಂಬಳ ಬರುತ್ತಿದೆ. ಹಾಗಾಗಿ ನೀವು ಕೊಟ್ಟ
ದಿನಸಿಗಳನ್ನು ನಿಮಗೆ ವಾಪಸ್ ಮಾಡುತ್ತಿದ್ದೇನೆ.
ನನಗಿಂತ ಬಡವರಿಗೆ ಕೊಡಿ’ ಎಂದು ಹೇಳಿದ. ‘ಇರಲಿ
ಬಿಡು, ತೆಗೆದುಕೊಂಡು ಹೋಗು ಎಂದೆ’- ಆತನ ಗುಣಕ್ಕೆ ಹೆಮ್ಮೆ
ಪಟ್ಟು. ಆತ ಒಪ್ಪಿಕೊಂಡ. ‘ಇದನ್ನು
ನಮ್ಮ ಸುತ್ತಲಿದ್ದವರಿಗೆ ಹಂಚಲು ಒಪ್ಪಿಗೆ ನೀಡಿದರೆ
ಮಾತ್ರ’ ಎಂದ. ಹ್ಞೂಂ ಎಂದೆ.
ಆತ ತನ್ನ ಓಣಿಗೆ ಹೋಗಿ
ಅದನ್ನು ಹಂಚಿದ್ದು ಮಾತ್ರವಲ್ಲ ಆತನ ಮನೆಯಿರುವ ಪ್ರದೇಶವನ್ನು
ಸುತ್ತಿ, ಊಟಕ್ಕೂ ತೊಂದರೆ ಇರುವ
ತೀರಾ ಬಡ 10-15 ಕುಟುಂಬಗಳ ಹೆಸರು ಪಟ್ಟಿ ತಯಾರಿ
ಮಾಡಿ ಕಳುಹಿಸಿದ. ‘ಸರ್, ಇವರಿಗೂ ನೀವು
ಸಹಾಯ ಮಾಡಿದರೆ ಒಳ್ಳೆಯದು ಎಂದ.’
ಅಷ್ಟು ಮಾತ್ರವಲ್ಲ ನಮ್ಮ ಅಧ್ಯಾಪಕರ ವಾಟ್ಸ
ಎಪ್ ಗುಂಪಿಗೆ ಹೋಗಿ ನೋಡಿದರೆ
“ಸರ್ ನೀವು ಬಡವರಿಗೆ ದಿನಸಿ
ಹಂಚುತ್ತಿರುವುದು ಖುಷಿಯ ಸಂಗತಿ. ಈ
ಕಾರ್ಯಕ್ಕೆ ನನ್ನ ದೇಣಿಗೆಯಾಗಿ 1000 ರೂ.
ಕೊಡುತ್ತೇವೆ ಎಂದ; ನಂತರ ಭೇಟಿಯಾದಾಗ
ಹಣವನ್ನು ನೀಡಿದ ಕೂಡ. ಆತ
ಲಕ್ಷ ರೂಪಾಯಿ ಸಂಬಳ ಬರುವವನಲ್ಲ.
ಸಿದ್ದಾಪುರದಲ್ಲಿ ಸ್ವಂತ ಮನೆ ಹೊಂದಿದವನೂ
ಅಲ್ಲ. ಆದರೆ ಇನ್ನೊಬ್ಬರ ನೋವಿಗೆ
ಮಣಿಯುವ ಮನಃಸ್ಥಿತಿ ಎಂತವರ ಕಣ್ಣನ್ನೂ ತೇವಗೊಳಿಸದೇ
ಇರದು. ಹೃದಯದ ಕಣ್ಣಿದ್ದವರಿಗೆ ಇಂಥ
ಸಾವಿರ ಘಟನೆಗಳು ನಮ್ಮ ಸುತ್ತಲೇ
ಕಾಣುತ್ತವೆ.
ಆಗ ನೆನಪಾದದ್ದು ಭಾರತದೊಳಗಿನ ಸೌಹಾರ್ದ ಪರಂಪರೆ ಎಂದರೆ
ಭೂಮಿಯೊಳಗೆ ಹುಗಿದು ಹೋದ ಬೀಜದಂತೆ.
ಸಣ್ಣ ಮಳೆ ಹನಿಯ ಸಿಂಚನವಾದರೂ
ಸಾಕು. ಅದು ಮೊಳಕೆಯೊಡೆದು ಮರುಭೂಮಿಯನ್ನೂ
ಹಸಿರು ಮಾಡುವ ಶಕ್ತಿ ಹೊಂದಿದೆ.
ನಮಗೆ ಮಳೆ ಆಗಲು ಸಾಧ್ಯವಿಲ್ಲದಿದ್ದರೂ
ಸಣ್ಣ ಹನಿಯಾದರೂ ಆಗೋಣ.
-ವಿಠ್ಠಲ
ಭಂಡಾರಿ
No comments:
Post a Comment