Friday 15 May 2020

‘ಆತ್ಮ ನಿರ್ಭರ್ ಅಭಿಯಾನ್’* *ಮತ್ತು ಭಾಷೆ, ಅಧಿಕಾರ, ಹೆಜಮನಿ*

*‘ಆತ್ಮ ನಿರ್ಭರ್ ಅಭಿಯಾನ್’* *ಮತ್ತು  ಭಾಷೆ, ಅಧಿಕಾರ, ಹೆಜಮನಿ*
 
ದೇಶದಲ್ಲಿ ಕಳೆದೊಂದು ದಿನದಲ್ಲಿ, ಮಾಧ್ಯಮಗಳಲ್ಲಿ ಮತ್ತು ಜನರ ನಡುವೆ ಮುಂಚೂಣಿಗೆ ಬಂದ ಪದಗುಚ್ಚವೆಂದರೆ ‘ಆತ್ಮ ನಿರ್ಭರ ಅಭಿಯಾನ್’. ಪ್ರಧಾನ ಮಂತ್ರಿಗಳು ದೇಶವನ್ನು ಉದ್ದೇಶಿಸಿ ಮಾತನಾಡುತ್ತ ಬಳಸಿದ ಈ ಪದಗುಚ್ಚ ಕೇಳುಗರಲ್ಲಿ ಅಚ್ಚರಿ ಹುಟ್ಟಿಸಿತು. ಮಾಧ್ಯಮಗಳೂ ಕೂಡ ನಿಧಾನವಾಗಿ ಇದಕ್ಕೆ ಅರ್ಥ ಹೇಳತೊಡಗಿದವು. ಇನ್ನು ಪ್ರಧಾನಿಗಳ ನಡೆನುಡಿಗಳನ್ನು ನಿತ್ಯ ಹಿಂಬಾಲಿಸುವ ಜನರಲ್ಲಿಯೂ ಅದು ಗೊಂದಲು ಮೂಡಿಸಿತು. ಅವರನ್ನು ವಿರೋಧಿಸುವ ಮತ್ತು ಟೀಕಿಸುವವರಲ್ಲಿಯೂ ಗೊಂದಲ ಮೂಡಿಸಿತು. ಇದು ತಮಾಶೆಗಳಿಗೆ, ವ್ಯಂಗ್ಯಚಿತ್ರಗಳಿಗೆ ಅವಕಾಶ ಒದಗಿಸಿತು. 

ಇದು ಸಾಮಾಜಿಕ ಮಾಧ್ಯಮಗಳಲ್ಲಿ ವಿಪರೀತ ಚರ್ಚೆಯಾಗಿ ದೊಡ್ಡ ಸಂಚಲನ ಸೃಷ್ಟಿಸಿತು. ಇದು ದೇಶದ ಹಣಕಾಸು ಸಚಿವರಿಗೂ ತಲುಪಿ ಅವರೂ ಕೂಡ ಆರ್ಥಿಕ ನೆರವಿನ ಯೋಜನೆಗಳನ್ನು ಘೋಷಿಸಲು ನಡೆಸಿದ ಪತ್ರಿಕಾ ಗೋಷ್ಟಿಯಲ್ಲಿ ವಿವರಣೆ  ಕೊಟ್ಟರು. ತಾವು ದಕ್ಷಿಣ ಭಾರತದಿಂದ ಬಂದಿದ್ದು ದಕ್ಷಿಣ ಭಾರತದ ಭಾಷೆಗಳಾದ ಕನ್ನಡ ತೆಲುಗು ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಅದಕ್ಕಿರುವ ‘ಅರ್ಥ’ಗಳನ್ನು ವಿವರಿಸಿದರು. ಅಷ್ಟರಮಟ್ಟಿಗೆ ಅಪರಿಚಿತವಾದ ಪದಗುಚ್ಚ ಗೊಂದಲ ಹುಟ್ಟಿಸಿದ್ದು ನಿಜ ಎಂಬುದು ಸಾಬೀತಾಯಿತು. ಪ್ರಧಾನಿಗಳು ಏನು ಹೇಳಿದರೂ ಎಂಬುದಕ್ಕಿಂತ ಹೇಳಿದ್ದಕ್ಕೆ ಬಳಸಿದ ಪದಗಳ ಬಗೆಗೆ ಹೆಚ್ಚು ಚರ್ಚಿಸಿದ್ದು ವಿಚಿತ್ರ ಸಂಗತಿ.

ಈ ಪದಗುಚ್ಚದ ವಿಷಯದಲ್ಲಿ ಗೊಂದಲ ಮೂಡಲು ಕಾರಣವೇನು? ಇದಕ್ಕೆ ಕಾರಣವಿದೆ. ಅದೇನೆಂದರೆ, ಈ ಪದಗುಚ್ಚವು ಮೂಲತಃ ಸಂಸ್ಕøತದ್ದು. ಇದನ್ನು ಯಾವುದೇ ಭಾರತೀಯ ಭಾಷೆಗಳಲ್ಲಿ ಜನಸಾಮಾನ್ಯರು ಬಳಸುವಂತೆ ಕಾಣುತ್ತಿಲ್ಲ. ಸಂಸ್ಕøತ ಪದಕೋಶದಲ್ಲಿರುವ ಗ್ರಂಥಸ್ತವಾದ ಪದಗುಚ್ಚ ಇದು. ಪಂಡಿತರು ವೈಯಾಕರಣಿಗಳು ಬಳಸಬಹುದಾದ ಪದ. ಹಾಗಾಗಿ ಈ ಪದವನ್ನು ಪ್ರಧಾನಿಗಳು ಬಳಸಿದಾಗ ಜನರು ತಬ್ಬಿಬ್ಬಾದರು. ಸಂಸ್ಕøತ ಪದವಾದುದರಿಂದ ಕನ್ನಡ ನಿಘಂಟಿನಲ್ಲಿ ‘ಆತ್ಮ’ ‘ನಿರ್ಭರ’ ಪದಗಳಿಗೆ ಅರ್ಥ ಹುಡುಕಿದಾಗ ಅಲ್ಲಿ ನಿರ್ಭರ ಪದಕ್ಕೆ ‘ವೇಗ, ರಭಸ, ಕ್ರೌರ್ಯ, ಹೆಚ್ಚಾದ, ಪೂರ್ಣವಾದ, ತುಂಬಿದ, ಅಧಿಕ’ ಎಂಬ ಅರ್ಥಗಳು ಕಾಣಿಸಿದವು! ಇನ್ನು ಆತ್ಮ ಪದಕ್ಕೆ ನಾನಾರ್ಥಗಳಿದ್ದು ಅವು ಕೂಡ ಸರಿಹೊಂದಲಿಲ್ಲ. ಯಾವ ಅರ್ಥಗಳೂ ಪ್ರಧಾನಿಗಳು ಬಳಸಿದ ಅರ್ಥಕ್ಕೆ ಸಮವಾಗಿ ಕಾಣಿಸಲಿಲ್ಲ. ಕೊನೆಗೆ ಮಾಧ್ಯಮಗಳು ಸೆಲ್ಪ್ ರಿಲಯನ್ಸ್, ಸ್ವಾವಲಂಬಿ ಎಂದು ಬಳಸಲು ತೊಡಗಿದ ನಂತರವಷ್ಟೇ ‘ಆತ್ಮ ನಿರ್ಭರ್’ ಪದಗುಚ್ಚಕ್ಕೆ ಒಂದು ಅರ್ಥ ‘ಪ್ರಾಪ್ತ’ವಾಗತೊಡಗಿತು.

ಅಂದರೆ ಜನಸಾಮಾನ್ಯರಲ್ಲಿ ಜನಪ್ರಿಯವಾಗಿ ಬಳಕೆಯಲ್ಲಿ ಇಲ್ಲದ ಪದಗಳನ್ನು ಹುಡುಕಿ ಏಕಾಏಕಿ ಬಳಸಿದಾಗ ಆಗಬಹುದಾದ ಸಂವಹನದ ತೊಡಕುಗಳೇನು? ಎಂಬುದು ಇದರಿಂದ ತಿಳಿಯುತ್ತದೆ. ಹಾಗೆಯೇ ಇದೇ ಪದಗುಚ್ಚವನ್ನು ಪ್ರಧಾನಿಗಳಲ್ಲದೆ ಬೇರೆ ಯಾರೇ ಆಗಿದ್ದರೂ ಆ ಪದವನ್ನು ಬಳಸಿದ್ದರೆ ಇದರ ಬಗೆಗೆ ಇಷ್ಟೊಂದು ಚರ್ಚೆ ನಡೆಯುತ್ತಿತ್ತೇ? ಖಂಡಿತವಾಗಯೂ ಇಲ್ಲ. ಅಂದರೆ ಅಧಿಕಾರದಲ್ಲಿರುವವರು ಬಳಸುವ ಭಾಷೆ, ಅದರ ನುಡಿಗಟ್ಟುಗಳು ಹೇಗೆ ಜನರನ್ನು ಪ್ರಭಾವಿಸುತ್ತವೆ; ಅವರ ಮಾನಸಕ್ಕೆ ಇಳಿಯುತ್ತವೆ; ಅಲ್ಲಿ ಅವು ಸ್ಥಾನಪಡೆದು ಮನಸ್ಸನ್ನು ಆಳುತ್ತವೆ ಎಂಬುದು ಮುಖ್ಯ. ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ, ಇದು ಪ್ರಧಾನಿಗಳು ಪ್ರಾಸಂಗಿಕವಾಗಿ ಬಳಸಿದ ಪರಿಭಾಷೆಯಲ್ಲ. ಬದಲಿಗೆ ಬಹಳ ಉದ್ದೇಶಪೂರಕವಾಗಿ, ಪೂರ್ಣ ಸಿದ್ದತೆಯೊಂದಿಗೆ ಅದಕ್ಕೆ ರಾಜಕೀಯಾರ್ಥಿಕ ಅರ್ಥದ ಲೇಪನಗಳನ್ನು ಕೊಟ್ಟು ಖಚಿತ ಉದ್ದೇಶದೊಂದಿಗೆ ಬಳಸಿದ ಪದಗುಚ್ಚ. 

ಇಲ್ಲಿ ಅಧಿಕಾರಸ್ಥರು ತಾವು ಜನರಿಗೆ ಅರ್ಥವಾಗುವ ಭಾಷೆಯನ್ನು ಬಳಸಬೇಕು ಎಂಬುದಕ್ಕಿಂತ ತಾವೂ ಏನು ಹೇಳಬೇಕು ಎಂದು ಬಯಸುತ್ತಾರೆಯೋ ಅದನ್ನು ಮಾತ್ರವೇ ಬಳಸುತ್ತಾರೆ. ಅಧಿಕಾರದಲ್ಲಿರುವವರು ಹಾಗೆ ಬಳಸಿದ ಮತ್ತು ಚಿಂತಿಸಿದ ವಿಚಾರಗಳೇ ಜನರ ಮನದಲ್ಲಿ ಬಲವಾಗಿ ಬೇರೂರುತ್ತವೆ. ಜನರಿಗೆ ಅರ್ಥವಾಗಬೇಕು ಎಂಬುದಕ್ಕಿಂತ ತಾವು ಏನನ್ನು ಅರ್ಥಪಡಿಸಲು ಬಯಸುತ್ತಾರೆಯೋ ಅದನ್ನು ಹೇರುತ್ತಾರೆ ಎಂಬುದು ನಿಜ.

ಹಾಗೆ ಬೇರೂರುವ ಹೊತ್ತಿನಲ್ಲಿ ಅದು ಕೇವಲ ಪದವಾಗಿ ಬೇರೂರುವುದಿಲ್ಲ. ಬದಲಿಗೆ ಅದು ತಿಳುವಳಿಕೆಯಾಗಿ, ವಿಚಾರಧಾರೆಯಾಗಿ, ತತ್ವವಾಗಿ ಬೇರೂತ್ತದೆ. ಮತ್ತು ನಂತರ ಜನರ ಮನಸ್ಸನ್ನು ಆಳುತ್ತದೆ ಮತ್ತು ನಿಯಂತ್ರಿಸುತ್ತದೆ. ಜನರ ಭಾಷೆ ಅಧಿಕಾರಸ್ಥರ ಟಂಕಸಾಲೆಯಲ್ಲಿ ಹೇಗೆ ಟಂಕೀಕರಣಗೊಳ್ಳುತ್ತದೆ ಎಂಬುದಕ್ಕೆ ಕೂಡ ಇದು ಒಳ್ಳೆಯ ಎತ್ತುಗೆ. ಅಧಿಕಾರಸ್ಥರನ್ನು ನಂಬುವ ಮತ್ತು ಅನುಸರಿಸುವ ಜನರು ಇಂತಹ ಟಂಕಿತ ಪದಗುಚ್ಚಗಳನ್ನು ಉರುಹೊಡೆದು ಉಚ್ಚರಿಸುವುದೂ ಉಂಟು. ಆದರೆ ಈ ಬಗೆಗೆ ಅಧಿಕಾರಸ್ಥರನ್ನು ಅನುಸರಿಸುವ ಜನರಿಗೆ ಎಚ್ಚರವಿರುವುದಿಲ್ಲ. ಅವರನ್ನು ಕುರುಡಾಗಿ ನಂಬುತ್ತಿರುತ್ತಾರೆ. ಇಂತಹ ನಂಬಿಕೆಗಳನ್ನು ಹುಟ್ಟಿಸಲೆಂದೇ ಅಪರಿಚಿತವಾದ ಯಾರಿಗೂ ಸುಲಭಕ್ಕೆ ಅರ್ಥವಾಗದಂತಹ ಭಾಷೆಯನ್ನು ಪ್ರಭುತ್ವ ಬಳಸುತ್ತಲೇ ಇರುತ್ತದೆ. ಈಚೆಗೆ ಭಾರತೀಯ ಸಮಾಜದಲ್ಲಿ ಇಂತಹ ಪದಗುಚ್ಚಗಳನ್ನು ಒಂದರ ಮೇಲೆ ಒಂದು ಬಂಡೆಗಳನ್ನು ಮತ್ತೆ ಮತ್ತೆ ಎಸೆಯಲಾಗುತ್ತದೆ. ಹಾಗೆ ಎಸೆದ ಮೇಲೆ ಅವುಗಳಿಗೆ ಅರ್ಥದ ಬಣ್ಣ ಕಟ್ಟಲಾಗುತ್ತಿದೆ. ಇಂತಹ ಉರು ಹೊಡೆದ ಪಾಠಗಳು ಸಮಾಜವನ್ನು ನಿಡುಗಾಲದಲ್ಲಿ ಅಪಾಯಕ್ಕೆ ತಳ್ಳುತ್ತವೆ. 
 
ಮೇಲೆ ಹೇಳಿದಂತೆ ಇದೇ ರೀತಿಯಲ್ಲಿ ಒಬ್ಬ ಸಾಮಾನ್ಯ ವ್ಯಕ್ತಿ ಯಾವುದೇ ಒಂದು ಹೊಸ ಭಾಷೆ, ಪದ ಇಲ್ಲವೆ ಪದಗುಚ್ಚವನ್ನು ಬಳಸಿದರೆ ಅದು ವೇಗವಾಗಿ ಮುಂಚೂಣಿಗೆ ಬರಲು ಸಾಧ್ಯವೇ? ಅದಕ್ಕೆ ಜನಮಾನ್ಯತೆ ದೊರೆಯುವುದೇ? ಸಾಧ್ಯವೇ ಇಲ್ಲ. ಒಂದು ವೇಳೆ ಅಂತಹ ಪದಗುಚ್ಚವನ್ನು ಜನರು ಬಳಸಿದರೂ ಕೂಡ ಅದು ಚಲಾವಣೆಯಲ್ಲಿ ಉಳಿಯಲು ಸುದೀರ್ಘ ಕಾಲಬೇಕಾಗುತ್ತದೆ. ಅದು ಬೇಗ ಜನರಿಗೆ ಪರಿಚಯವಾಗಲು ಸಾಧ್ಯವಿಲ್ಲ. ಕೆಲವು ಬಾರಿ ಹೊಸಕಲ್ಪನೆಗಳನ್ನು ಪರಿಚಯಿಸಿದಾಗ ಜನರಿಗೆ ಅರ್ಥವಾಗದು ಎಂದು ವಾದಿಸಿ ಅದರ ಬಳಕೆಯನ್ನೇ ನಿಷೇಧಿಸಲಾಗುತ್ತದೆ. ಅಂದರೆ ಪ್ರಬಲರು, ಅಧಿಕಾರಸ್ಥರ ಭಾಷೆ ಬಹುಬೇಗ ಜನರನ್ನು ಪ್ರಭಾವಿಸಿದಂತೆ ದುರ್ಬಲರು, ಜನಸಾಮಾನ್ಯರು ಯಾವುದೇ ಹೊಸ ಪದ ಇಲ್ಲವೇ ಹೊಸ ವಿಚಾರವನ್ನು ಮಂಡಿಸಿದರೂ ಅದು ಜನರನ್ನು ಪ್ರಭಾವಿಸದು. ಅಂದರೆ ‘ಅಧಿಕಾರ, ಹೆಜಮನಿಗಳು’ ಇತರೆ ಹಲವು ಸಂಗತಿಗಳನ್ನು ನಿಯಂತ್ರಿಸಿದಂತೆ ಭಾಷೆಯನ್ನು ನಿಯಂತ್ರಿಸುವ ಪ್ರಭಾವಿಸುವ ಕೆಲಸ ಮಾಡುವುದನ್ನು ಈ ಸಂದರ್ಭದಲ್ಲಿ ಗಮನಿಸಬಹುದಾಗಿದೆ. ‘ಪ್ರಜಾಪ್ರಭುತ್ವ’ ವ್ಯವಸ್ಥೆ’ಯಿರುವ ದೇಶದಲ್ಲಿಯೇ ಈ ಬಗೆಯಾದರೆ ಇನ್ನು ಸರ್ವಾಧಿಕಾರ ವ್ಯವಸ್ಥೆಯಿರುವ ದೇಶಗಳಲ್ಲಿ ಭಾಷೆ ಹೇಗೆ ಟಂಕೀಕರಣಗೊಳ್ಳುತ್ತದೆ ಮತ್ತು ಅದು ಸಮುದಾಯಗಳ ಮೇಲೆ ಪ್ರಭಾವ ಬೀರಲಿದೆ ಎಂಬುದನ್ನು ಊಹಿಸುವುದು ಅಸಾಧ್ಯವೇನಲ್ಲ. ಅಂದರೆ ಭಾಷೆ ಕೂಡ ಯಾವುದೇ ಸಮಾಜದಲ್ಲಿ ಸ್ವಾಯತ್ತವಾಗಿ ಉಳಿದಿರದೆ ಅದು ಅಧಿಕಾರಸ್ಥರ ನಿಯಂತ್ರಣಕ್ಕೆ ಒಳಪಟ್ಟಿರುತ್ತದೆ ಎಂಬುದನ್ನು ಇಲ್ಲಿ ನೆನಪಿಡಬೇಕಾಗುತ್ತದೆ.  

ಹಾಗೆಯೇ ಪ್ರಭುತ್ವ ಹೊಸ ರಾಜಕೀಯ ಸಂಕಥನಗಳನ್ನು ಹುಟ್ಟಿಸಿ ಅಪರಿಚಿತ ಪರಿಭಾಷೆಗಳ ಮೂಲಕ ಜನರನ್ನು ತಬ್ಬಿಬ್ಬುಗೊಳಿಸಿ ಮೂಕರನ್ನಾಗಿಸುತ್ತದೆ. ಇಂತಹ ಹೊತ್ತಿನಲ್ಲಿ ಮಾರುಕಟ್ಟೆಯಲ್ಲಿ ಇತರ ಸರಕುಗಳು ಮಾರಾಟವಾದಂತೆ ಭಾಷೆ ಕೂಡ ಅತ್ಯಂತ ವೇಗವಾಗಿ ಮಾರಾಟವಾಗಿ ಜನರನ್ನು ತಲುಪುತ್ತದೆ. ಆದರೆ ಅದೇ ವೇಳೆ ದುರ್ಬಲ ಜನರ ವಿಚಾರಗಳು, ದುಃಖದುಮ್ಮಾನಗಳು ಮಾತ್ರ ಎಲ್ಲ ಕಾಲದಲ್ಲಿದ್ದಂತೆ ಈಗಲೂ ಅವು ಅಧಿಕಾರಸ್ಥರನ್ನು ತಲುಪಲಾರವು. ಇದು ಬಲವಿದ್ದವರ ಭಾಷೆ ಮೇಲುಗೈ ಸಾಧಿಸುವ ಮತ್ತು ಬಲವಿಲ್ಲದವರು ಶರಣಾಗುವ ಬಗೆಯನ್ನು ತಿಳಿಸುತ್ತದೆ. ಅಂದರೆ ಬಲವಿದ್ದವರು ಅಧಿಕಾರ ಬಲದಿಂದ ‘ಆತ್ಮ ನಿರ್ಭರ್ ಅರ್ಥಾತ್ ಸ್ವಾವಲಂಬನೆ’ ಸಾಧಿಸಿದರೆ, ದುರ್ಬಲರು ಯಾವತ್ತೂ ಪರಾವಲಂಬಿಗಳಾಗಿಯೇ ಉಳಿಯುತ್ತಾರೆ. ಆಗ ಇಂತಹ ಅಭಿಯಾನಗಳು ಸಬಲರನ್ನು ಇನ್ನಷ್ಟು ಸಬಲಗೊಳಿಸುತ್ತವೆ ಮತ್ತು ಅವರ ಆತ್ಮವನ್ನು ಮತ್ತಷ್ಟು ಬರ್ಬರಗೊಳಿಸುತ್ತವೆ ಎಂಬುದನ್ನು ಬೇರೆ ಹೇಳಬೇಕಿಲ್ಲ. ಈಗ ನಿಜವಾಗಿಯೂ ಸ್ವಾವಲಂಬನೆ ಸಾಧಿಸಬೇಕಿರುವುದು ಯಾರು?

*ರಂಗನಾಥ ಕಂಟನಕುಂಟೆ*

No comments:

Post a Comment