Saturday 4 July 2020

ಏಕವಚನದ ಬೆರಗು- ವಿಠ್ಠಲ ಭಂಡಾರಿ, ಕೆರೆಕೋಣ


  ಒಂದು ದಿನ ಹೀಗಾಯ್ತು. ನಮ್ಮ ಮನೆಹೊಳ್ಳಿಯ ಆರಾಮಖುರ್ಚಿಯಲ್ಲಿ ಕುಳಿತು ಅಣ್ಣ (ಆರ್.ವಿ.ಭಂಡಾರಿ) ಯಾರೊಂದಿಗೋ ಮಾತನಾಡುತ್ತಿದ್ದ. ಒಳಗಿನಿಂದ ಅವರ ಮಾತು ಆಲಿಸುತ್ತಿದ್ದ ನನಗೆ ಆಶ್ಚರ್ಯ ಕಾದಿತ್ತು. ಅಣ್ಣನೆದುರು ಕುಳಿತವರು ಯಾರು? ಎಲ್ಲಿಯವರು?. ಯಾಕೆಂದರೆ ಇಬ್ಬರೂ ಏಕವಚನದಲ್ಲಿ ಮಾತನಾಡಿಕೊಳ್ಳುತ್ತಿದ್ದರು. ಸಾಮಾನ್ಯವಾಗಿ ತೀರಾ ಹತ್ತಿರದ ನೆಂಟರನ್ನು ಬಿಟ್ಟರೆ ಅಣ್ಣ ಯಾರಿಗೂ ಏಕವಚನ ಬಳಸುತ್ತಿರಲಿಲ್ಲ. ಶಾಲೆಕಾಲೇಜಿಗೆ ಹೋಗುವ ವಿದ್ಯಾರ್ಥಿಗಳಿಗೂ ಆತ ಏಕವಚನ ಬಳಸುತ್ತಿರಲಿಲ್ಲ. ಈಕಡೆಯಿಂದಲೂ ಹಾಗೆ, ತೀರಾ ಹತ್ತಿರದವರನ್ನು, ಬಾಲ್ಯದ ಒಡನಾಡಿಗಳನ್ನು ಬಿಟ್ಟರೆ ಸಾಮಾನ್ಯವಾಗಿ ಆತನಿಗೆ ಏಕವಚನ ಯಾರು ಬಳಸುತ್ತಿರಲಿಲ್ಲ. ಯಾಕೆಂದರೆ ಊರಲ್ಲಿ ಆತ ಮಾಸ್ತರ್. ಹೊರಗಡೆ ಹೋರಾಟಗಾರ, ಸಾಹಿತಿ ಎನ್ನುವ ಗೌರವ. ಆದರೆ ಹೊರಗಡೆ ಏಕವಚನದ ಲೋಕಾಭಿರಾಮದ ಮಾತುಗಳನ್ನು ಆಲಿಸುತ್ತಾ ಹೊರಬಂದು ನೋಡಿದರೆ ಅಪರಿಚಿತ ಮುಖ. “ಈತ ಜೈರಾಮ್ ಹೆಗಡೆ, ನನ್ನ ಸ್ನೇಹಿತ. ಒಳ್ಳೆಯ ಕವಿ ಮತ್ತು ಪತ್ರಕರ್ತ” ಎಂದು ಪರಿಚಯಿಸಿದ. ಅವರ ಸ್ನೇಹಶೀಲ ಮಾತು, ನಗು, ಸಣ್ಣ ತಮಾಷೆ ಖುಷಿಕೊಟ್ಟಿತು.  ಬಹುಬೇಗ ಅವರು ನನಗೂ ಆತ್ಮೀಯರಾದರು. ಅಣ್ಣ ಮತ್ತು ಜೈರಾಮ ಹೆಗಡೆಯವರು ಭೇಟಿಯಾಗಿ ಏಕವಚನದಲ್ಲಿ ಮಾತನಾಡಿಕೊಳ್ಳುವುದನ್ನು ನಾನು ಎಂದೂ ತಪ್ಪಿಸಿಕೊಳ್ಳುತ್ತಿರಲಿಲ್ಲ. ಅಣ್ಣನಿಗೆ ಏಕವಚನದಲ್ಲಿ ಮಾತನಾಡುವುದನ್ನು ಕೇಳಿಸಿಕೊಳ್ಳುವುದು ನನಗೆ ಯಾಕೋ ಯಾವತ್ತೂ ಖುಷಿಯ ಸಂಗತಿಯಾಗಿತ್ತು. -ಅಲ್ಲೊಂದು ಹುದ್ದೆ, ಅಂತಸ್ತಿನ ಯಾವ ಕಂದಕವೂ ಇಲ್ಲದ ಆತ್ಮೀಯ ವಾತಾವರಣ ನಿರ್ಮಾಣವಾಗುತ್ತದೆ ಎನ್ನುವ ಕಾರಣಕ್ಕಿರಬೇಕು. ಅವನಿಗೆ ಏಕವಚನದಲ್ಲಿ ಮಾತನಾಡುವ ಸಾಹಿತಿಗಳೆಂದರೆ ಜಯರಾಮ ಹೆಗಡೆಯವರೊಬ್ಬರೇ ಇರಬೇಕು ಎನ್ನುವುದು ನನ್ನ ನೆನಪು.
  ಜಯರಾಮ ಹೆಗಡೆಯವರು ಬಹುಶಃ ಒಂದೆರಡು ವರ್ಷ ನಾವೆಲ್ಲಾ  ಕಲಿತ ನಮ್ಮೂರಿನ ಎಸ್.ಕೆ.ಪಿ ಜೂನಿಯರ್ ಕಾಲೇಜಿನಲ್ಲಿ ಇಂಗ್ಲೀಷ್ ಅಧ್ಯಾಪಕರಾಗಿದ್ದರು. ಅದೊಂದು ಅನುದಾನಿತ ಖಾಸಗಿ ಕಾಲೇಜು. ‘ಸ್ವಲ್ಪ ಹೊಂದಾಣಿಕೆ ಮಾಡಿಕೊಂಡಿದ್ದರೆ ಆತ ಅಲ್ಲೇ ಇರಬಹುದಾಗಿತ್ತು’ ಎಂದು ಅಣ್ಣ ಹೇಳುತ್ತಿದ್ದ. ಅರೇಅಂಗಡಿ ಸಣ್ಣ ಊರಾಗಿರುವುದರಿಂದ ಅಲ್ಲಿರುವ ಬೆರಳೆಣಿಕೆಯಷ್ಟು ಸಾಹಿತ್ಯಾಸಕ್ತರು ಒಟ್ಟಾಗುವುದು ಸಹಜ. ಶಾಲೆ ಬಿಟ್ಟೊಡನೆ ಆ ಕಾಲದ ಪ್ರಸಿದ್ಧ ಅಧ್ಯಾಪಕ ಜಿ.ಆರ್ ಭಟ್ ಅವರ ರೂಮಿನಲ್ಲಿ ದಿನನಿತ್ಯ ಸಾಹಿತ್ಯ ಚರ್ಚೆ ಮತ್ತು ಕರ್ನಾಟಕ ಸಂಘದ ಕಾರ್ಯಕ್ರಮ, ತಾಳಮದ್ದಲೆ..ಇತ್ಯಾದಿÀ ರೂಪುರೇಷೆ ಸಿದ್ಧಗೊಳ್ಳುತ್ತಿತ್ತು. ಇದೂ ಒಂದು ರೀತಿಯಲ್ಲಿ ಧಾರವಾಡದಲ್ಲಿದ್ದಂತೆ ಸಣ್ಣ ಗೆಳೆಯರ ಬಳಗ. ಆ ಕಾಲದಿಂದಲೂ ಅವರು ನಮ್ಮ ಕುಟುಂಬದೊAದಿಗೆ ಆತ್ಮೀಯ ಸಂಬAಧ ಉಳಿಸಿಕೊಂಡು ಬಂದಿದ್ದರು.
  ನಾನು ಸಂಘಟನಾ ಕೆಲಸಕ್ಕೆ ಹಾಸನದ ಕಡೆ ಹೋದಾಗ ‘ಶಿರಸಿ’ ಅಥವಾ ‘ಉತ್ತರ ಕನ್ನಡ’ದ ಸುದ್ದಿ ಬರುತ್ತಿದ್ದಂತೆ ಹಲವು ಲೇಖಕರು, ಸಂಘಟನೆಯ ಮುಖಂಡರು ಜಯರಾವi ಹೆಗಡೆಯವರನ್ನು ವಿಚಾರಿಸುತ್ತಿದ್ದರು. ಅಲ್ಲಿ ಅವರು ರೈತ ಹೋರಾಟಗಾರರಾಗಿ, ಪತ್ರಿಕೆಯ ಸಂಪಾದಕರಾಗಿ ಒಳ್ಳೆಯ ಹೆಸರು ಸಂಪಾದಿಸಿದ್ದರು. ಇತ್ತೀಚೆಗೆ ಸಿರ್ಸಿಗೆ ಬಂದಾಗ ಭಾನು ಮುಷ್ತಾಕ್ ಅವರು ಹೆಗಡೆಯವರನ್ನು ಖುದ್ದಾಗಿ ಭೇಟಿಯಾಗಿ ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದನ್ನು ನೋಡಿದ್ದೇನೆ. ಅವರ ಪತ್ರಿಕಾ ವ್ಯವಸಾಯ ಅರ್ಥಪೂರ್ಣವಾಗಿ ಪ್ರಾರಂಭವಾಗಿದ್ದು ಅಲ್ಲೇ ಎಂದುಕೊಂಡಿದ್ದೇನೆ. ಅಲ್ಲಿಂದ ನಮ್ಮ ಜಿಲ್ಲೆಗೆ ಬಂದು ಅವರು ಜನಮಾಧ್ಯಮ ಪ್ರಾರಂಭಿಸಿ ಕಾಲು ಶತಮಾನಗಳು ಕಳೆದವು ಎನ್ನುವುದು ನಮಗೂ ಸಂಭ್ರಮದ ಸಂಗತಿ. ಮಾಧ್ಯಮ ಲೋಕದಲ್ಲಿ ಇದ್ದೆ ಅವರು ಅದರ ಮಿತಿಯನ್ನೂ ಅರಿತವರು ಮಾಧ್ಯಮಗಳು ವ್ಯಾಪಾರೀಕರಣಕ್ಕೆ ತೆರೆದುಕೊಂಡು ಕೆಟ್ಟ ಉದ್ಯಮದ ಸ್ವರೂಪ ಪಡೆದುಕೊಂಡಿರುವ (ಉದ್ಯಮ ಮತ್ತು ವ್ಯಾಪಾರೀಕರಣದಿಂದ ಬರುವ ಎಲ್ಲಾ ಅಪಮೌಲ್ಯಗಳಿಗೆ, ಅನೈತಿಕತೆಗೆ ಪಾಲುದಾರರಾಗುತ್ತಿರುವ) ಹೊತ್ತಿನಲ್ಲಿ ನಿಜವಾದ ಅರ್ಥದಲ್ಲಿ ಒಂದು ಜನಪರ, ಅಭಿವೃದ್ಧಿಶೀಲ ಪತ್ರಿಕಾ ವ್ಯವಸಾಯ ನಡೆಸಿದ ಜೈರಾಮ ಹೆಗಡೆಯವರನ್ನು ಅಭಿನಂದಿಸುವುದು ನನಗಂತೂ ಖುಷಿಯ ಸಂಗತಿ. ಆ ಮೂಲಕ ಪತ್ರಿಕಾ ವ್ಯವಸಾಯವನ್ನು ‘ಸೇವೆ’ ಅಂದುಕೊAಡಿರುವ ಕಾಲಘಟ್ಟದಿಂದ ‘ಉದ್ಯಮ’ ಎಂದುಕೊಳ್ಳುವ ಈವರೆಗಿನ ಒಟ್ಟೂ ಬೆಳವಣಿಗೆಯನ್ನು ಕಣ್ಮುಂದೆ ತಂದುಕೊಳ್ಳಲು ಸಾಧ್ಯ. ಜೈರಾಮ ಹೆಗಡೆಯವರ ‘ಆತ್ಮಕತೆ’ ಆಕಾಲ ಎದುರಿಸಿದ ಬಿಕ್ಕಟ್ಟುಗಳನ್ನು, ರೂಢಿಸಿಕೊಂಡ ರ‍್ಯಾಯಗಳನ್ನು ದಾಖಲಿಸುವ ಒಂದು ಚಾರಿತ್ರಿಕ ಬರಹ ಆಗಿರಬಹುದು.(ನಾನು ಬೇಗ ಓದಬೇಕು.) ಅವರ ಸಂಪಾದಕೀಯವನ್ನು ಒಟ್ಟಾಗಿ ನೋಡಿದರೂ ಈ ಹೊಳಹುಗಳನ್ನು ನೋಡಬಹುದು.
ತಾನೊಬ್ಬ ಪತ್ರಿಕೆಯ ಸಂಪಾದಕನೆನ್ನುವ ಯಾವ ಹಮ್ಮೂ ಇಲ್ಲದೆ ಹೆಗಡೆಯವರು ಶಿರಸಿಯಲ್ಲಿ ನಮ್ಮೆಲ್ಲ ಜನಪರ ಚಳುವಳಿಗಳ ಜೊತೆ ನಿಂತವರು. ಉತ್ತರ ಕನ್ನಡ ಜಿಲ್ಲೆಯಲ್ಲಿ ಕೋಮು ಸಂಘರ್ಷ, ಗಲಭೆ ಪ್ರಾರಂಭವಾದ ದಿನದಲ್ಲಿ ಒಂದು ಸೌಹಾರ್ದ ವಾತಾವರಣ ಸೃಷ್ಟಿಸುವ ಪ್ರಧಾನ ಕಾರಣಕ್ಕೆ ಹುಟ್ಟಿಕೊಂಡ ಲೇಖಕರು, ಪತ್ರಕರ್ತರು, ವಿವಿಧ ವಲಯದ ಚಿಂತಕರನ್ನು ಒಳಗೊಂಡ ಒದು ಸಾಂಸ್ಕೃತಿಕ ಸಂಘಟನೆಯಾದ  ‘ಚಿಂತನ ಉತ್ತರ ಕನ್ನಡ’ದ ಮೊದಲ ಸಮಾವೇಶದಲ್ಲಿ ಅವರು ಸಕ್ರಿಯವಾಗಿ ಪಾಲ್ಗೊಂಡಿದ್ದರು. ಚಿಂತನ ಕನ್ನಡ ಪುಸ್ತಕ ಮಳಿಗೆಯನ್ನು ಪಂಡಿತ್ ಗ್ರಂಥಾಲಯದ ಒಂದು ಭಾಗದಲ್ಲಿ ಪ್ರಾರಂಭಿಸಿದಾಗ, ಕಿರು ಪುಸ್ತಕ ಮಾಲೆಯನ್ನು ಪ್ರಾರಂಭಿಸಿದಾಗ  ಅವರು ಕಾರ್ಯಕರ್ತರಂತೆ ನಮ್ಮೊಂದಿಗೆ ಇದ್ದರು. ಸ್ವತಃ ಬಂದು ವರದಿ ಮಾಡಿದ್ದಿದೆ. ಜಯರಾವi ಹೆಗಡೆಯವರು ಸಂಘಟನೆ ಮುನ್ನೆಲೆಗೆ ತಂದ ವೈಚಾರಿಕತೆಯ ಜೊತೆಗೆ ಈವರೆಗೂ ನಿಂತರು. ಅವರೇ ಸಂಪಾದಕರಾಗಿರುವ ‘ಜನ ಮಾಧ್ಯಮ’ದಲ್ಲಿ ಪ್ರತಿ ಕಾರ್ಯಕ್ರಮಕ್ಕೂ ಅಂತಹ ದೊಡ್ಡ ಸ್ಥಳ ನೀಡಿದರು. ಜಿಲ್ಲೆಯಲ್ಲಿ ‘ಚಿಂತನ’ದ ಬೆಳವಣಿಗೆಯಲ್ಲಿ ಅವರ ಕೊಡುಗೆ ಕೂಡ ಮಹತ್ವದ್ದು. ಹಮ್ಮಿಕೊಂಡ ಕಾರ್ಯಕ್ರಮ ಮತ್ತು ಅದರ ಮಹತ್ವದ ಬಗ್ಗೆ ಸಂಪಾದಕೀಯ ಬರೆದು ಪ್ರೋತ್ಸಾಹಿಸಿದವರು. ಚಿಂತನದ ಮೊದಲ ಸಮಾವೇಶದಿಂದ ಮೊದಲ್ಗೊಂಡು ಮೊನ್ನೆ ಮೊನ್ನೆ ಶಿರಸಿಯಲ್ಲಿ ಸಂಘಟಿಸಿದ ‘ಸಂವಿಧಾನ ನಡೆ’ ಜಾಥಾ ಮತ್ತು ಸಮಾವೇಶದವರೆಗೆ ನಮ್ಮೊಂದಿಗಿದ್ದು ಅಗತ್ಯ ಸಲಹೆ ಸೂಚನೆ ನೀಡಿದವರು.
ಅಣ್ಣನೊಂದಿಗೆ ಅವರ ಪಯಣ ಅರೇಅಂಗಡಿಯ ಜೂನಿಯರ್ ಕಾಲೇಜಿನಿಂದ ಪ್ರಾರಂಭವಾಗಿ, ಅದು ಬಂಡಾಯ ಸಾಹಿತ್ಯ ಸಂಘಟನೆಯನ್ನು ಹಾಯ್ದು, ‘ಜನಮಾಧ್ಯಮ’ ಪತ್ರಿಕೆಯವರೆಗೂ ಪರಸ್ಪರ ಹೆಗಲ ಮೇಲೆ ಕೈ ಹಾಕಿಕೊಂಡೇ ಸಾಗಿತು. ಉತ್ತರ ಕನ್ನಡದಲ್ಲಿ ಬಂಡಾಯ ಸಾಹಿತ್ಯ ಸಂಘಟನೆಯನ್ನು ಕಟ್ಟುವಾಗ ಆರ್.ವಿ. ಭಂಡಾರಿ, ಜಿ.ಎಸ್. ಅವಧಾನಿ, ವಿ. ಜೆ. ನಾಯಕ, ಶಾಂತಾರಾಮ ನಾಯಕ, ವಿಷ್ಣು ನಾಯಕ, ವಿ. ಮುನಿವೆಂಕಟಪ್ಪ,  ಮಾಸ್ತಿ ಗೌಡ, ನಜೀರ್ ಚಂದಾವರ, ಕಶ್ಯಪ ಪರ್ಣಕುಟಿ, ಶಶಿಧರ್ ಭಟ್, ವಿಠ್ಠಲ ಪೇರುಮನೆ, ಬಿ.ಟಿ.ಶ್ರೀಪಾದ, ಸುಬ್ರಾಯ ಮತ್ತೀಹಳ್ಳಿ, ಪ್ರಕಾಶ ಕಡಮೆ, ಕೃಷ್ಣ ಹಿಚ್ಕಡ, ಮೋಹನ ಕುರುಡಗಿ, ಶಂಕರ..... ಮುಂತಾದವರೊಂದಿಗೆ ಜಯರಾಮ ಹೆಗಡೆಯವರೂ ಸಕ್ರಿಯರಾಗಿದ್ದರು. ಬಂಡಾಯ ಅನ್ನುವುದನ್ನು ಹೊಸತಲೆಮಾರಿನ ಬರಹಗಾರರ ಮನೋಧರ್ಮವಾಗಿಸಿದ ಶೇಯಸ್ಸು ಇವರೆಲ್ಲರಿಗೆ ಸೇರಬೇಕು. ಬೇರೆಬೇರೆ ಕಾರಣಕ್ಕೆ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುವ ಯಾವುದೇ ಸಂದರ್ಭವನ್ನು ಇವರು ಈಗಲೂ ಬಿಟ್ಟುಕೊಡುವವರಲ್ಲ. ಆಗ ಬಂಡಾಯ ಸಾಹಿತ್ಯ ಸಂಘಟಿಸುವ ಬಹುತೇಕ ಕವಿಗೋಷ್ಠಿಯಲ್ಲಿ (ಜಿಲ್ಲೆಯಲ್ಲಾದರೂ ಹಲವು ಬಾರಿ ಹೊರಜಿಲ್ಲೆಯಲ್ಲಾದರೂ) ಜಯರಾವi ಹೆಗಡೆಯವರ ಕವಿತೆ ಇರಲೇಬೇಕು. ಹಾಗಂತ ಹೆಸರಿಗಾಗಿ ಅವರೆಂದೂ ಹಪಹಪಿಸಿದವರಲ್ಲ. ಕರೆಯೋಲೆಯಲ್ಲಿ ಹೆಸರಿಲ್ಲದಿದ್ದರೂ ಕಾರ್ಯಕ್ರಮದಲ್ಲಿ ಇಡೀ ದಿನ ಹಾಜರಿದ್ದು ಎಲ್ಲರ ಮಾತು ಕೇಳುವ ಅಪರೂಪದ ಸಹೃದಯತೆ ಅವರದು. ಬಂಡಾಯ ಸಾಹಿತ್ಯ ಇಂದು ಸಂಘಟನಾ ರೂಪದಲ್ಲಿ ಶಿಥಿಲವಾಗಿದ್ದರೂ ಅದು ರೂಪಿಸಿದ ಆಲೋಚನಾ ಕ್ರಮ, ಜೀವಪರ ಕಾಳಜಿ ಈಎಲ್ಲಾ ಲೇಖಕರಲ್ಲಿ ಈಗಲೂ ಇರುವುದನ್ನು ಕಾಣುತ್ತೇವೆ. ಹಾಸನದಲ್ಲಿ ಪತ್ರಕರ್ತರಾಗಿ ರೂಢಿಸಿಕೊಂಡು ಬಂದ ಸಮಾಜವಾದಿ ಆಲೋಚನಾಕ್ರಮ ಬಂಡಾಯ ಚಳುವಳಿಯ ಜೊತೆ ಹೆಚ್ಚು ಗಟ್ಟಿಗೊಂಡಿತು. ಇದನ್ನು ಅವರ ಎಲ್ಲಾ ಕೃತಿಗಳಲ್ಲಿ, ಬರೆದ ಸಂಪಾದಕೀಯದಲ್ಲಿ ಸ್ಪಷ್ಟವಾಗಿಯೇ ಗುರುತಿಸಬಹುದು.
ನಾನು ವಿದ್ಯಾರ್ಥಿ ಸಂಘಟನೆಯಲ್ಲಿ (SFI) ಮತ್ತು ಯುವಜನ ಸಂಘಟನೆಯಲ್ಲಿ (DYFI) ಕೆಲಸ ಮಾಡುತ್ತಿದ್ದ ಕಾಲ. ಶಿರಸಿ ನಮ್ಮ ಕೇಂದ್ರಸ್ಥಾನ ಕೂಡ ಆಗಿತ್ತು. ಸಂಘಟನೆ ಹೆಚ್ಚು ಕ್ರಿಯಾಶೀಲವಾಗಿದ್ದು ಕೂಡ ಇಲ್ಲಿಯೇ. ಎಂಎಸ್ ಧಾರೇಶ್ವರ, ಮಂಜುನಾಥ ಪುಲ್ಕರ್, ಪಿ.ಜಿ. ಮಶಾಲ್ದಿ, ಬಂಗಾರೇಶ್ವರ ಗೌಡ......ಮುಂತಾದವರು ನಡೆಸಿದ ಹೋರಾಟಗಳಿಂದ ಈ ನೆಲ  ಎಡಪಂಥೀಯ ಆಲೋಚನೆಯ ಸಂಘಟನೆ ಕಟ್ಟಲು ಉಳಿದ ಪ್ರದೇಶಕ್ಕಿಂತ ಹೆಚ್ಚು ಪೂರಕವಾಗಿತ್ತು. ನಮ್ಮ ಜಿಲ್ಲಾ ಕೇಂದ್ರ ಕಾರವಾರವಾದರೂ ಒಂದು ರೀತಿಯಿಂದ ಶಿರಸಿಯೇ ಕೇಂದ್ರವಾಗಿತ್ತು. ಹಾಗಾಗಿಯೇ ಜಿಲ್ಲೆಯ ಅತಿ ಹೆಚ್ಚು ಪತ್ರಿಕೆಗಳು ನಡೆಯುತ್ತಿದ್ದುದು ಶಿರಸಿಯಲ್ಲಿಯೆ. ಆಗ ಜಯರಾಮ ಹೆಗಡೆಯವರೊಂದಿಗೆ ಹೆಚ್ಚು ಸಂಪರ್ಕ ಬಂತು. ಯಾವುದೇ ಕಾರ್ಯಕ್ರಮದ ಸುದ್ದಿ ನೀಡಲು, ಹೇಳಿಕೆ ನೀಡಲು ಜನಮಾಧ್ಯಮ ಮತ್ತು ಮುನ್ನಡೆ ಪತ್ರಿಕಾ ಕಚೇರಿಗೆ ಹೋಗುತ್ತಿದ್ದೆವು. ಕೆಲವು ಬಾರಿ ಪತ್ರಿಕಾ ಹೇಳಿಕೆಯನ್ನು ಬರೆಯುವುದು ಹೇಗೆ ಎಂದು ನಮಗೆ ಪಾಠ ಮಾಡಿದ ನೆನಪು ಇದೆ. ಹಾಗೆ ಸುದ್ದಿ ಬಂದ ಪತ್ರಿಕೆಯ ಒಂದೆರಡು ಪ್ರತಿ ಕೊಡುತ್ತಿದ್ದರು. ನಮಗೆ ಪತ್ರಿಕೆ ಮುದ್ರಣ ಗೊಳ್ಳುವ ಖಾಲಿ ಪೇಪರ್ ಮೇಲೆ ಕಣ್ಣು. ಪೋಸ್ಟರ್ ಬರೆಯಲು ಇದು ಉಪಯೋಗ.  ಅಂಗಡಿಯಿAದ ಹಣ ಕೊಟ್ಟು ಖರೀದಿ ಮಾಡುವಷ್ಟು ಸಾಮರ್ಥ್ಯ ಆಗ ಇರಲಿಲ್ಲ. ಸಂಜೆ ಬಂದಾಗ ಅವರೊಂದಿಗೆ ಮಾತನಾಡಿದ್ದು, ಅವರು ನನ್ನ ಅಪ್ಪನ ಬಗ್ಗೆ ವಿಚಾರಿಸಿದ್ದನ್ನು ನೋಡಿ ಈತ ಸಂಪಾದಕರಿಗೆ ಹತ್ತಿರದವನೆಂದುಕೊAಡು ಅಲ್ಲಿಯ ಕೆಲಸಗಾರರು ಪೇಪರ ಕೊಡುತ್ತಿದ್ದರು. ಹಾಗಾಗಿ ಸಂಪಾದಕರಿದ್ದರೆ ಸುದ್ದಿ ಕೊಡುತ್ತಿದ್ದೆವು. ಇಲ್ಲದಿದ್ದರೆ ಖಾಲಿ ಪೇಪರ್ ಎತ್ತಿಕೊಂಡು ಬರುತ್ತಿದ್ದೆವು. ಶಿರಸಿಯ ಉಳಿದೆರಡು ಪತ್ರಿಕೆಗಳು ಪ್ರತಿಗಾಮಿ ಆಲೋಚನೆಯನ್ನು ಹಾಸಿ ಹೊದೆದುಕೊಂಡಿರುವುದರಿAದ ನಾವು ಜನ ಮಾಧ್ಯಮದ ಕಟ್ಟಾ ಬೆಂಬಲಿಗರಾಗಿದ್ದೆವು. ನಮ್ಮ ಸುದ್ದಿ ಸರಿಯಾಗಿ ಬರದಿದ್ದಾಗ ಜಗಳವಾಡಿದ್ದೂ ಇದೆ. ಈ ಜಗಳ ನಮ್ಮ ನಡುವಿನ ವಿಶ್ವಾಸಕ್ಕೆ, ಪ್ರೀತಿಗೆ ಯಾವ ತಡೆಯನ್ನು ಒಡ್ಡಿಲ್ಲ. ಈ ಜಗಳ ತಾತ್ಕಾಲಿಕವಾಗಿತ್ತು.  ಅವರ ಆಲೋಚನೆ  ಪೂರ್ತಿ ಕೆಂಪಲ್ಲದಿದ್ದರೂ ಆಗಾಗ ಅವರು ಹಾಕುವ ಕೆಂಪಂಗಿ ಕೂಡ ಅವರನ್ನು ಹೆಚ್ಚು ಪ್ರೀತಿಸುವಂತೆ ಮಾಡಿರಬೇಕು.
  ಆಮೇಲೆ ನಾನು ಸಿದ್ದಾಪುರ ಕಾಲೇಜಿಗೆ ಉಪನ್ಯಾಸಕನಾಗಿ ಬಂದಮೇಲೆ ಸಂಘಟನೆಯ ಕೆಲಸಕ್ಕಾಗಿ ಹೆಚ್ಚೆಚ್ಚು ಶಿರಸಿ ಕಡೆಗೆ ಇರುತ್ತಿದ್ದೆ. ಅವರ ಕಚೇರಿಯಲ್ಲಿ ಭೇಟಿಯಾಗಿ ಮಾತುಕತೆ ನಡೆಸುತ್ತಿದ್ದೆ. ಸಾಮಾನ್ಯವಾಗಿ ಚರ್ಚೆ ರಾಜಕಾರಣದ ಸುತ್ತಲೇ ಇರುತ್ತಿತ್ತು. ‘ನಿಮ್ಮ ಪತ್ರಿಕೆಯನ್ನು ಸ್ವಲ್ಪ ಆಕರ್ಷಕವಾಗಿ ಮಾಡಿ, ಅದರ ಪ್ರಸರಣವೂ ಹೆಚ್ಚಿಸಬಾರದೇ?’ ಎಂದು ಹಲವು ಬಾರಿ ಕೇಳಿದ್ದೆ. ಮುಗುಳ್ನಕ್ಕಿದ್ದರು. “ಪತ್ರಿಕೆಗಳು ಈಗ ಬದುಕಿಕೊಳ್ಳಲು ಪತ್ರಿಕಾ ಧರ್ಮವನ್ನೂ ಅಲಕ್ಷಿಸಿ ತಮ,ಗೆ ಬದುಕಲು ಬೇಕಾದ ಮಾರ್ಗ ಹಿಡಿದಿವೆ; ಜಾಹಿರಾತಿಗಾಗಿ ಸತ್ಯ ಮರೆಮಾಚುವುದು, ರಾಜಕೀಯ ಪಕ್ಷಗಳಿಗೆ ತಮ್ಮ ಪತ್ರಿಕೆಯನ್ನು ಮುಖವಾಣಿಯನ್ನಾಗಿಸುವುದು ಅಥವಾ ರಾಜಕಾರಣಿಗಳಿಗೆ ಪತ್ರಿಕೆ ಮಾರಿ ತಾವು ಹೆಸರಿಗೆ ಮಾತ್ರ ಸಂಪಾದಕರಾಗಿ ರಾಜಕಾರಣಿಗಳ ಬಾಲಬಡುಕರಾಗುವುದು; ಹಣ ಮಾಡುವುದೇ ಪತ್ರಿಕೋದ್ಯಮದ ಮುಖ್ಯಗುರಿಯೇ ಹೊರತು ಸಮಾಜಸುಧಾರಣೆಯಲ್ಲವೆಂದು ಬಲವಾಗಿ ನಂಬಿರುವುದು; ಈ ವಿಷವೃತ್ತದಲ್ಲಿ ಪತ್ರಿಕೆಗಳಿರುವಾಗ ಯಾರಾದರೂ ಸಮಾಜದ ಓರೆಕೋರೆ ಸರಿಪಡಿಸುವ ಉದ್ದೇಶದ ಪತ್ರಕರ್ತನಿದ್ದರೆ ಆತ ಪತ್ರಿಕೆ ಮುಚ್ಚಬೇಕು ಅಥವಾ ಆತ್ಮ ಹತ್ಯೆ ಮಾಡಿಕೊಳ್ಳಬೇಕು ಇಂಥ ಪರಿಸ್ಥಿತಿ ಇದೆ.(೧೭-೨-೨೦೦೩ರಂದು ಬರೆದ ಸಂಪಾದಕೀಯದಿಂದ) ಆ ಮುಗುಳ್ನಗುವಿನಲ್ಲೂ ಹಣಕಾಸಿನ ಬಿಕ್ಕಟ್ಟಿನಿಂದ ಪತ್ರಿಕೆಯನ್ನು ಅಂದುಕೊಂಡಂತೆ ಬೆಳೆಸಲಾರದ ಅಸಹಾಯಕತೆಯೂ ತ್ತು ನೈತಿಕತೆಯನ್ನು ಕಳೆದುಕೊಳ್ಳುತ್ತಿರುವ ಈ ವೃತ್ತಿಯ ಜೊತೆ ಬಹುದಿನ ಏಗಲಾರದ ಮನೋಸ್ಥಿತಿಗೆ ಸವರು ಬಂದಿದ್ದರು ಎನ್ನುವುದು ಈ ಮೇಲಿನ ಅವರ ಮಾತು ಧ್ವನಿಸುತ್ತದೆ. ಹಲವು ಕನಸುಗಳೊಂದಿಗೆ ತಾನೇ ಆಯ್ಕೆ ಮಾಡಿಕೊಂಡು ಮುನ್ನಡೆಸಿದ, ಬದುಕಾಗಿಸಿಕೊಂಡ ಪತ್ರಿಕೆಯೊಂದರ ಮಾಲಿಕತ್ವವನ್ನು ಇಳಿ ವಯಸ್ಸಿನಲ್ಲಿ  ಬೇರೆಯವರಿಗೆ ಕೊಟ್ಟಾಗಲಂತೂ ನನಗೆ ತುಂಬಾ ಬೇಸರವಾಗಿತ್ತು. ಅದನ್ನು ಹಲವುಬಾರಿ ಅವರಲ್ಲಿ ತೋಡಿಕೊಂಡಿದ್ದೆ ಕೂಡ. ಆದರೆ ಅವರ ನೋವನ್ನು ಕೆದಕುವ ಮನಸ್ಸಾಗಿರಲಿಲ್ಲ.
  ಇತ್ತೀಚಿಗಂತೂ ಶಿರಸಿಯನ್ನು ಕೋಮುವಾದ ಮತ್ತು ಮೂಲಭೂತವಾದದ ಪ್ರಯೋಗಶಾಲೆಯನ್ನಾಗಿಸುವ ಕೆಲಸ ವ್ಯವಸ್ಥಿತವಾಗಿ ನಡೆಸುತ್ತಿರುವುದು ಪ್ರಜ್ಙಾವಂತರ ಗಮನಕ್ಕೆ ಬಂದಿರುತ್ತದೆ. ಇದರ ಹಿಂದೆ ಸಂಸ್ಕೃತಿಯ ಕುರಿತ ಪ್ರೀತಿ, ಅಭಿಮಾನಕ್ಕಿಂತ ಚುನಾವಣಾ ರಾಜಕೀಯದ ಹುನ್ನಾರವೇ ಹೆಚ್ಚಿರುವುದು. ಇಂದಿನ ಈ ಬೆಳವಣಿಗೆಗೆ ಹತ್ತಾರು ವರ್ಷದ ಇತಿಹಾಸವಿದೆ. ಇದಕ್ಕೆ ಶಿರಸಿಯ ಕೆಲವು ಪತ್ರಿಕೆಯ ಕೊಡುಗೆಯೂ ಇದೆ. ಜಿಲ್ಲೆಯ ಸೌಹಾರ್ದ ನೆಲೆಗೆ ಭಂಗ ತರುವ ಕೆಲಸ ನಡೆದಾಗಲೆಲ್ಲ ಜೈರಾಮ ಹೆಗಡೆಯವರು ಎಚ್ಚರಿಸುವ ಕೆಲಸ ಮಾಡುತ್ತಲೇ ಬಂದಿದ್ದಾರೆ. “ಕಾಲಕಾಲಕ್ಕೆ ಧರ್ಮಗ್ರಂಥಗಳ ಪುನರ್ ಮೌಲ್ಯೀಕರಣ ಕೂಡ ಆಗುತ್ತಲೇ ಹೋಗಬೇಕಾಗುತ್ತದೆ.......ವೈಜ್ಞಾನಿಕ ಬೆಳವಣಿಗೆಯ ಬೆಳಕಿನಲ್ಲಿ ಧರ್ಮಗ್ರಂಥಗಳ ಪುನರ್ ಮೌಲ್ಯೀಕರಣಕ್ಕೆ ತೊಡಗಬೇಕಾಗಿದೆ. ಯಾಕೆಂದರೆ ವಿಜ್ಞಾನ ಮನುಷ್ಯನಿಗೆ ವರವಾಗುವ ಜೊತೆಗೆ ಅನೇಕ ಹಾನಿ ಮಾಡಲು ಕಾರಣವಾಗಿದ್ದರೂ ಅದು ಸತ್ಯವಾಗಿದೆ....ಎಲ್ಲಾ ಧರ್ಮಗ್ರಂಥಗಳನ್ನು ರಚಿಸಿದವನು ಮನುಷ್ಯನೇ ವಿನಃ ದೇವರಲ್ಲ.”(ಆಯ್ದ ಸಂಪಾದಕೀಯಗಳು; ೨೦೧೬;ಪು.೨೦೭-೮) ಎನ್ನುವ ನಿಲುವಾಗಲೀ, “ಹಿಂದೂ ಧರ್ಮದ ಪ್ರತಿಪಾದಕರು ಬೇರೆ ಧರ್ಮಗಳ ಬಗ್ಗೆ ಅಸಹನೆ ತೋರುವ ಮೊದಲು ಹಿಂದೂ ಧರ್ಮದಲ್ಲಿರುವ ಜಾತಿಗಳಲ್ಲಿನ ಮೇಲು ಅಸಮಾನತೆ ಹೋಗಲಾಡಿಸಲು ಏನು ಕೆಲಸ ಮಾಡುತ್ತಿದ್ದಾರೆ? ಎಂಬ ಸಮಯದಲ್ಲಿ ಸಹಜವಾಗಿ ಏಳುತ್ತದೆ.”(ಅದೇ:೨೦೬) ಎನ್ನುವ ಮೂಲಭೂತ ಪ್ರಶ್ನೆ ಎತ್ತುವ ಅವರ ಸ್ವಭಾವವಾಗಲೀ “ ಹಿಂದೂ ಧರ್ಮದೊಳಗಿನ ದೋಷವನ್ನು ಮೊದಲು ಸರಿಪಡಿಸಿಕೊಳ್ಳುವ ಪ್ರಯತ್ನಕ್ಕಿಳಿಯಬೇಕು. ಮತಾಂತರ ವಿರುದ್ಧ ವೀರಾವೇಶ ಮಾತಾಡುವುದರ ಬದಲು ಹಿಂದೂ ಧರ್ಮದಲ್ಲಿ ಶತಶತಮಾನಗಳಿಂದ ನಡೆದುಕೊಂಡು ಬಂದಿರುವ ಜಾತಿಯ, ಮೇಲು, ಕೀಳು, ಅಸಮಾನತೆ, ಶೋಷಣೆ, ಬಡತನ ನಿವಾರಣೆಗೆ ಸಕ್ರಿಯವಾಗಿ ಕೆಲಸ ಮಾಡುವುದು ಅಪೇಕ್ಷಣೀಯ.ಮುಖ್ಯವಾಗಿ ಹಿಂದೂ ಧರ್ಮದಲ್ಲಿ ಪಂಚಮರ ಎಂದು ಕರೆಸಿಕೊಳ್ಳುವ ದಲಿತರ ಶೋಷಣೆ ಅವರ ಮೇಲಿನ ಹಲ್ಲೆ, ಕೀಳು ಭಾವನೆ ನಿಲ್ಲಿಸುವಂತೆ ನೋಡಿಕೊಳ್ಳಬೇಕಾಗಿದೆ.” (ಅದೇ:೧೮೩) ಎಂದು ಕೋಮುವಾದಿ ಶಕ್ತಿಗಳಿಗೆ ಹಾಕುವ ಎದುರೇಟಾಗಲೀ ಇದು ಜೈರಾಮ ಹೆಗಡೆಯವರು ಅನುದಿನ ಕಾಪಿಟ್ಟುಕೊಂಡ ಬಂದ ಸಾಮಾಜಿಕ ಎಚ್ಚರ. ಕೋಮುವಾದವನ್ನು ಮಾತ್ರವಲ್ಲ ಜಾತಿವಾದ, ಕಂದಾಚಾರ, ಭ್ರಷ್ಟಾಚಾರ, ಪ್ರಜಾಪ್ರಭುತ್ವ ವಿರೋಧಿ ನಡವಳಿಕೆ, ಸಂವಿಧಾನ ವಿರೋಧಿ ನಡವಳಿಕೆ, ಜಾಗತೀಕರಣ... ಹೀಗೆ ಅರ್ಥಪೂರ್ಣವಾಗಿ  ವಿರೋಧಿಸುತ್ತಲೇ ಬಂದವರು. ಸಾಮಾನ್ಯವಾಗಿ ಪತ್ರಿಕೆಯ ಸಂಪಾದಕರಾದ ಸಂದರ್ಭದಲ್ಲಿ ಕೆಲವರು ಹಣದ ಆಮಿಷಕ್ಕೆ, ಸ್ಥಾನದ ಮತ್ತು ಆಸ್ತಿಯ ಆಮಿಷಕ್ಕೆ ಬಲಿಯಾಗುತ್ತಾರೆ. ಆದರೆ ಜಯರಾಮ ಹೆಗಡೆಯವರ ಪತ್ರಿಕಾ ಕಛೇರಿ ಪ್ರಾರಂಭದಿಂದ ಕೊನೆಯವರೆಗೂ ಯಾವ ವೈಭವವಿಲ್ಲದೆ - ಹಣ ಮಾಡಿದ ಒಂದೇ ಒಂದು ಕುರುಹೂ ಇರದಂತೆ- ಹಾಗೇ ಇತ್ತು. ಬಡತನವೇ ರೂಪುತಳೆದಂತೆ. ಶ್ರೀಮಂತಿಕೆಗೆ ಸಡ್ಡು ಹೊಡೆದಂತೆ.
ವಿಠ್ಠಲ ಭಂಡಾರಿ, ಕೆರೆಕೋಣ

No comments:

Post a Comment