ಹಿರಿಯ ಪತ್ರಕರ್ತರಾದ ರಂಜಾನ್ ದರ್ಗಾ ರವರು ಯಮುನಾ ಗಾಂವ್ಕರ್ ರವರ ಕವನ ಸಂಕಲನ ಕುರಿತು ತಮ್ಮ ಮುನ್ನುಡಿಯಲ್ಲಿ ಹೇಳಿದ್ದು
"ಹನ್ನೆರಡನೆಯ ಶತಮಾನದ ಶರಣ ಚೆನ್ನಬಸವಣ್ಣನವರು ತಮ್ಮ ಒಂದು ವಚನದಲ್ಲಿ ‘ಕವಿತ್ವ ಸಾಧಕರೆಲ್ಲ ಕಳವಳಿಸಿ ಹೋದರು’ ಎಂದು ತಿಳಿಸಿದ್ದಾರೆ. ಕವಿಗಳು ಕರುಣಾರಸವನ್ನೇ ಹರಿಸುತ್ತಾರೆ. ಆದರೆ ದುಃಖಾರ್ಥರ ಬದುಕನ್ನು ಬದಲಿಸುವಲ್ಲಿ ಅವರು ತಮ್ಮ ಜ್ಞಾನವನ್ನು ಕ್ರಿಯೆಗೆ ಇಳಿಸುವುದಿಲ್ಲ ಎಂದು ಸೂಚಿಸಿದ್ದಾರೆ. ಆದರೆ ಇಪ್ಪತ್ತೊಂದನೆಯ ಶತಮಾನದ ಯಮುನಾರಂಥವರು ಇದಕ್ಕೆ ಅಪವಾದವಾಗಿದ್ದಾರೆ.
ತಮ್ಮ ಕಾವ್ಯಶಕ್ತಿಯನ್ನು ಜನಶಕ್ತಿಯಲ್ಲಿ ಒಂದಾಗಿಸುತ್ತ ಹೋರಾಟದ ಹಾದಿಯಲ್ಲಿ ಮುನ್ನಡೆದಿದ್ದಾರೆ. ‘ಒಳಗಣ್ಣ ಹೊರದಾರಿ ತೋರಿಸಿದೆ ಈ ಕವನ’ ಎಂದು ಹೇಳುವ ಮೂಲಕ ಯಮುನಾ ಕಾವ್ಯದ ಮೂಲ ಉದ್ದೇಶವನ್ನು ಸೂಚಿಸುತ್ತಾಳೆ.
ಖುದ್ದು ಕುದಿದು ಬರೆಯುವೆ.
ಒಂದು ದಿನ
ಬರುವೆ
ನಿನ್ನೊಳಗಿನ ಜ್ವಾಲೆ ಉದ್ದೀಪಿಸಲು
ಅಲ್ಲಿಯ ತನಕ ಆರಬೇಡ.
-ಆರಬೇಡ
ಕೆಚ್ಚನ್ನು ತುಂಬಿಕೊಂಡಿರುವ ಈ ಕಾಮ್ರೇಡ್ ಕವಯಿತ್ರಿಗೆ ಶೋಷಣೆಯ ವಿರುದ್ಧದ ಹೋರಾಟವೇ ಒಂದು ಮಹಾಕಾವ್ಯವಾಗಿ ಕಾಣುತ್ತಿದೆ. ಅನ್ಯಾಯ, ಅಪಮಾನ, ಶೋಷಣೆ, ಕ್ರೌರ್ಯ ಮತ್ತು ದುಡಿಯುವ ವರ್ಗದ ಜೀವಹಿಂಡುವ ಅವಸ್ಥೆಯನ್ನು ಬುಡಮೇಲು ಮಾಡಬಯಸುವ ಸಂಗಾತಿ ಯಮುನಾ ಮಾನವೀಯ ಸ್ಪಂದನದ ಜ್ವಾಲೆಯನ್ನು ನಿರಂತರವಾಗಿ ಉದ್ದೀಪನಗೊಳಿಸುವ ಕ್ರಿಯೆಯಲ್ಲಿ ಮಗ್ನಳಾಗಿದ್ದಾಳೆ.
ಕಮ್ಯೂನಿಜಂ ಶಕ್ತಿಯೆ ಅಂಥದ್ದು. ಅದು ಅನ್ಯಾಯವನ್ನು ಎದುರಿಸುವ ಧೈರ್ಯ ತುಂಬುತ್ತದೆ. ಆತ್ಮಗೌರವದ ಅರಿವು ಮೂಡಿಸುತ್ತದೆ. ಪ್ರಶ್ನಿಸುವ ಎದೆಗಾರಿಕೆಯನ್ನು ಹೆಚ್ಚಿಸುತ್ತದೆ. ಸಮೂಹ ಪ್ರಜ್ಞೆಯ ಮಹತ್ವವನ್ನು ಸಾರುತ್ತದೆ. ಇಂಥ ಎಲ್ಲ ಗುಣಗಳನ್ನು ಯಮುನೆಯ ಕಾವ್ಯನದಿ ಒಳಗೊಂಡಿದೆ.
ಜಗತ್ತಿನ ನೋವಿಗೆ ಸ್ಪಂದಿಸಿ, ಹೋರಾಡಿ ಸಾಮ್ರಾಜ್ಯಶಾಹಿಗಳ ಕ್ರೌರ್ಯದ ವಿರುದ್ಧ ಗೆಲವು ಸಾಧಿಸಿದ ಸಂಗಾತಿಗಳ ಹೋರಾಟದ ಬದುಕಿನಿಂದ ಈಕೆ ಸ್ಫೂರ್ತಿಗೊಂಡಿದ್ದಾಳೆ. ಇಂಥ ವಿಶ್ವಚೈತನ್ಯವನ್ನು ಹೃದಯದೊಳಗೆ ತುಂಬಿಕೊಂಡು ಅದನ್ನೇ ಕಾವ್ಯ ಮತ್ತು ಹೋರಾಟದ ಮೂಲಕ ತನ್ನ ಗ್ರಾಮಾಂತರದ ಜನಸಮುದಾಯಕ್ಕೆ ಹಂಚುತ್ತಿದ್ದಾಳೆ. ಅವಳು ಪಾದರಸದಂತೆ ಚಲನಶೀಲ ಗುಣವುಳ್ಳವಳು. ಜೀವದ್ರವ್ಯದಿಂದ ಕೂಡಿ ಕ್ರಿಯಾಶೀಲತೆ ಅವಳದು. ತನ್ನ ಜೀವನ ಸಂಗಾತಿ ವಿಠ್ಠಲನಿಗೆ ಸರಿಸಾಟಿಯಾಗಿ ಹೋರಾಟದ ಹಾದಿ ತುಳಿದಿದ್ದಾಳೆ. ಅವಳಿಗೆ ಹೋರಾಟ ಎಂಬುದು ತಾಯ್ತನದ ಪ್ರತೀಕವಾಗಿದೆ. ಈ ಪರಿಕಲ್ಪನೆ ಅವಳು ಕನ್ನಡ ಕಾವ್ಯಲೋಕಕ್ಕೆ ಕೊಟ್ಟ ಕಾಣಿಕೆ ಎಂದು ಹೇಳುವೆ.
ತಾಯ್ತನದ ಸಮುದ್ರವನ್ನೇ ಹೃದಯದಲಿ
ಇಳಿಬಿಟ್ಟವ ನೀನು
ಮಗ್ಗುಲ ಮುಳ್ಳು ಬಡವರ ಬರಿಗಾಲಿಗೆರಗಲು
ಬಿಡದವ ನೀನು.
_ಫಿಡೆಲ್ ಕ್ಯಾಸ್ಟ್ರೋ
ಅಂತಃಕರಣವು ಕ್ರಾಂತಿಯ ಜೀವಾಳವಾಗಿದೆ. ಜ್ಞಾನಿಗಳು, ವಿಜ್ಞಾನಿಗಳು, ಕಲಾವಿದರು, ಕುಲೀನರು ಎಂದು ಕರೆಯಿಸಿಕೊಳ್ಳುವವರು ಮತ್ತು ಆಗರ್ಭ ಶ್ರೀಮಂತರು ಕೂಡ ತಮ್ಮೊಳಗೆ ಕಾಡುವ ಅಂತಃಕರಣದಿಂದಾಗಿಯೆ ಕಮ್ಯೂನಿಜಂನ ತೆಕ್ಕೆಗೆ ಬಂದಿದ್ದಾರೆ. ಫಿಡೆಲ್ ಕ್ಯಾಸ್ಟ್ರೋ, ಚೇ ಗುವೆರಾ, ಹೊ ಚಿ ಮಿನ್, ಭಗತ್ ಸಿಂಗ್, ಮಾಕ್ರ್ಸ್, ಎಂಗೆಲ್ಸ್, ಲೆನಿನ್, ರೋಸಾó ಲಗ್ಸಂಬರ್ಗ್, ಪಾಬ್ಲೊ ನೆರೂದಾ ನಂಬೂದಿರಿಪಾಡ್, ಭೂಪೇಶ ಗುಪ್ತಾ, ಕಯ್ಯೂರಿನ ವೀರರು ಮುಂತಾದವರ ಹೃದಯಗಳಲ್ಲಿ ತಾಯ್ತನದ ಸಮುದ್ರವಿದ್ದದ್ದರಿಂದಲೇ ಹೊಸ ಜಗತ್ತಿನ ಉದಯದತ್ತ ಮಾನವಕುಲವನ್ನು ಸಾಗಿಸಲು ಅವರಿಂದ ಸಾಧ್ಯವಾಗಿದೆ.
ಬಂಡವಾಳಶಾಹಿಗಳು ಜಗತ್ತನ್ನು ವಸ್ತುಮೋಹಿಗಳನ್ನಾಗಿಸುವಲ್ಲಿ ತಲ್ಲೀನರಾಗಿದ್ದಾರೆ. ಕೊಳ್ಳುಬಾಕ ಸಂಸ್ಕøತಿಯನ್ನು ಹಬ್ಬಿಸುವುದರ ಮೂಲಕ ಅವರು ಜಗತ್ತಿನ ಎಲ್ಲ ಸಂಸ್ಕøತಿಗಳ ಮೇಲೆ ವಿಜಯವನ್ನು ಸಾಧಿಸುತ್ತಿದ್ದಾರೆ. ಆ ಮೂಲಕ ವಸ್ತುಗಳ ಬೆಲೆಯ ಮುಂದೆ ಮನುಷ್ಯನ ಬೆಲೆ ನಿರರ್ಥಕವಾದುದು ಎಂಬುದನ್ನು ಸಾಧಿಸುವ ನಿಟ್ಟಿನಲ್ಲಿ ಸತತವಾಗಿ ಕ್ರಿಯಾಶೀಲವಾಗಿದ್ದಾರೆ. ಇಂಥ ವಿಷಮಸ್ಥಿತಿಯಲ್ಲಿ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವಲ್ಲಿ ಯಮುನಾಳ ಕಾವ್ಯ ತಲ್ಲೀನವಾಗಿದೆ.
ಫಳಫಳ ಹೊಳೆಯುವ ಚತುಷ್ಪಥದಲಿ
ಬೊಕ್ಕೆಗಳೆದ್ದು ಸೋತ ಬರಿಗಾಲುಗಳು
ನನ್ನವರದೇ... ನನ್ನವರದೇ.
-ನನ್ನವರದೇ ನನ್ನವರದೇ
ದೇಶದಲ್ಲಿ ಅಭಿವೃದ್ಧಿಯಾಗಿದೆ ಎಂಬುದನ್ನು ಚತುಷ್ಪಥ ಹೇಳುತ್ತಿದೆ. ಆದರೆ ಸರ್ವತೋಮುಖ ಅಭಿವೃದ್ಧಿಯಾಗಿಲ್ಲ ಎಂಬುದನ್ನು ಬರಿಗಾಲುಗಳು ಸಾರುತ್ತಿವೆ. ಈ ರೀತಿಯಲ್ಲಿ ‘ಸೋತ ಬರಿಗಾಲುಗಳು ನನ್ನವರದೇ’ ಎನ್ನುವುದು ಬದುಕಿನಲ್ಲಿ ವಿಶಿಷ್ಟ ಅರ್ಥವನ್ನು ಸೃಷ್ಟಿಸುತ್ತದೆ. ಜಾತಿ, ಮತ, ಪಂಥ, ಧರ್ಮ, ದೇಶ, ಭಾಷೆಯನ್ನು ಮೀರಿದ ಸಂಬಂಧವನ್ನು ಇದು ಸೃಷ್ಟಿಸುತ್ತದೆ. ವಿಶ್ವಮಾನವ ಪ್ರಜ್ಞೆಯನ್ನು ಮೂಡಿಸುತ್ತದೆ.
ಇಂದು ನಮ್ಮ ದೇಶದಲ್ಲಿ ಬಂಡವಾಳಶಾಹಿಗಳು ಬಹುರಾಷ್ಟ್ರೀಯ ಬಂಡವಾಳಶಾಹಿಗಳಾಗಿ ಬೆಳೆಯುವುದನ್ನೇ ಅಭಿವೃದ್ಧಿ ಎಂದು ಸಾಧಿಸಲಾಗುತ್ತಿದೆ. ಹೀಗೆ ಸಾಮ್ರಾಜ್ಯಶಾಹಿ ವ್ಯವಸ್ಥೆ ನಮ್ಮ ದೇಶದಲ್ಲಿ ಕಾಲಿಡುತ್ತಿದೆ. ಅದಕ್ಕಾಗಿ ಎಂಥ ಹಿಂಸಾಯಂತ್ರವನ್ನು ಕೂಡ ಬಳಸಲು ಆಳುವ ವರ್ಗ ಹೇಸುತ್ತಿಲ್ಲ. ಎರಡನೇ ಮಹಾಯುದ್ಧಕ್ಕೆ ಮೊದಲು ಹಿಟ್ಲರ್ ಜರ್ಮನಿಯಲ್ಲಿ ಬಳಸಿದ ತಂತ್ರಗಳನ್ನೇ ಇಲ್ಲಿಯೂ ಬಳಸಲಾಗುತ್ತಿದೆ. ಜರ್ಮನಿಯಲ್ಲಿ ಹಿಟ್ಲರ್ ಬೆಳೆದದ್ದು ಅಲ್ಲಿನ ಯಹೂದಿ ಜನಾಂಗವನ್ನು ಮತ್ತು ಕಮ್ಯೂನಿಸ್ಟರನ್ನು ದ್ವೇಷಿಸುತ್ತ ಎಂಬುದು ಜಗತ್ತಿಗೇ ಗೊತ್ತಿದೆ. ಜರ್ಮನಿಯಲ್ಲಿ ಜನಾಂಗವಾದವನ್ನು ಮುಂದೆ ಮಾಡಿ ದ್ವೇಷ ಸಂಸ್ಕøತಿಯ ಬೆಳೆಸಲಾಯಿತು. ಭಾರತದಲ್ಲಿ ಧರ್ಮದ ಹೆಸರಿನಲ್ಲಿ ದ್ವೇಷಸಂಸ್ಕøತಿ ಹಬ್ಬುತ್ತಿದೆ. ಅಲ್ಪಸಂಖ್ಯಾತರು, ದಲಿತರು ಮತ್ತು ಕಮ್ಯೂನಿಸ್ಟರು ಈ ದ್ವೇಷಸಂಸ್ಕøತಿಗೆ ಗುರಿಯಾಗುವ ಎಲ್ಲ ಲಕ್ಷಣಗಳು ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ವಾತಾವರಣದಲ್ಲಿ ಹೊರಹೊಮ್ಮುತ್ತಿವೆ.
ಆಗಲೇ ಹೆಗಲ ಮೇಲೆ ಹೆಣ ಬಂದು ಕೂತಿದೆ
ದ್ವೇಷದ ಗಡಿಯೊಳಗೆ ಮನುಷ್ಯನ ಹುಡುಕುತ್ತ.....
-ಕಾಲ - ಸಮಕಾಲೀನ
ಸಾವಿನ ವಾರಸುದಾರರು ಮಾನವತೆಯ ಬೇಟೆಯಲ್ಲಿ ತೊಡಗಿದ್ದಾರೆ. ಲಫಂಗರು ಹಾಡಹಗಲೇ ರಸ್ತೆಯ ಮೇಲೆ, ಪೊಲೀಸರ ಮುಂದೆಯೆ, ಗೋರಕ್ಷಕರ ಸೋಗಿನಲ್ಲಿ ಅಮಾಯಕ ದಲಿತರ ಮತ್ತು ಅಲ್ಪಸಂಖ್ಯಾತರ ಮೇಲೆ ಹಲ್ಲೆ ಮಾಡುತ್ತಿದ್ದಾರೆ. ಅವರ ಕ್ರೂರ ಕೃತ್ಯಕ್ಕೆ ಅನೇಕರು ಜೀವ ಕಳೆದುಕೊಂಡಿದ್ದಾರೆ. ವ್ಯವಸ್ಥೆಯು ತಳಸ್ತರದಲ್ಲಿ ಕ್ರೌರ್ಯವನ್ನು ಮತ್ತು ಮೇಲ್ ಸ್ತರದಲ್ಲಿ ಧರ್ಮದ ಹೆಸರಿನಲ್ಲಿ ಸುಂದರ ಭವಿಷ್ಯದ ಭ್ರಮೆಗಳನ್ನು ಸೃಷ್ಟಿಸುತ್ತಿದೆ. ಕ್ರೌರ್ಯವೇ ಧರ್ಮವಾದಾಗ ಕೋಮುವಾದಿಗಳು ಮತ್ತು ಉಗ್ರಗಾಮಿಗಳು ವಿಜೃಂಭಿಸುತ್ತಾರೆ.
ಅದು ಬಿದ್ದಿದ್ದಲ್ಲ ಬೀಳಿಸಿದ್ದು
ಸದ್ದು ಕೇಳದ ಕಿವುಡುತನದಲ್ಲಿ...
ಅದು ನಿಂತೇ ಇತ್ತು ದೃಢವಾಗಿ
ಸುಂದರವಿತ್ತು ಸೌಹಾರ್ದ ನೋಟ
ಪಕ್ಷಿ ಸಾಕ್ಷಿಗಳೇ ಚಿಲಿಪಿಲಿ
ಉಲಿದು ತಂಗಿ ಗೂಡು ಕಟ್ಟಿ
ಮರಿ ಸಂಸಾರ ಹೂಡಿ ಮುಂದೆ ಹಾರುತ್ತಿದ್ದವು
ಆದರೀಗ ಅದಿಲ್ಲ.
ಕೆಡವಿದಲ್ಲಿ ಗಾಯವಿದೆ
ಕಟ್ಟಡ ಗೋಡೆ ಮೇಲೇಳುತ್ತಿದೆ
ಹಕ್ಕಿ ಕೂರದ ಹಾಗೆ.
-ಗರಿ ಮುರಿದು ಬಿದ್ದಲ್ಲೆಲ್ಲ
ಈ ತೆರನಾದ ಅಭಿವೃದ್ಧಿಯನ್ನು ನಾವು ಕಾಣುತ್ತಿದ್ದೇವೆ. ನಮ್ಮ ಸಹಜ ಬದುಕು ಕಳೆದುಹೋಗುತ್ತಿದೆ. ಎಲ್ಲೆಲ್ಲೂ ಕೃತ್ರಿಮತೆ ಎದ್ದು ಕಾಣುತ್ತಿದೆ. ಶಾಂತಿ ಮತ್ತು ಸೌಹಾರ್ದದ ಬದುಕಿಗೆ ಬೆಂಕಿ ಇಟ್ಟು ತಮ್ಮ ಸುಲಿಗೆ ಸಾಮ್ರಾಜ್ಯದ ಕನಸುಗಳನ್ನು ಸಾಕಾರಗೊಳಿಸುವಂಥ ನವಭಾರತದ ನಿರ್ಮಾಣ ಮಾಡುವಲ್ಲಿ ಪಟ್ಟಭದ್ರ ಹಿತಾಸಕ್ತಿಗಳು ತಲ್ಲೀನವಾಗಿವೆ. ಇಂಥ ಭಯಾನಕ ಸ್ಥಿತಿಯನ್ನು ಮರ, ಪಕ್ಷಿ ಮತ್ತು ಗೂಡಿನಿಂದ ಕೂಡಿದ ರೂಪಕದೊಂದಿಗೆ ಕವಯಿತ್ರಿ ತಣ್ಣನೆಯ ಶಬ್ದಗಳಲ್ಲಿ ವರ್ಣಿಸುತ್ತ ಓದುಗರ ಹೃದಯದಲ್ಲಿ ತಾಪದ ಜ್ವಾಲೆಗಳನ್ನು ಸೃಷ್ಟಿಸುತ್ತಾಳೆ. ಹಕ್ಕಿಗಳು ಕೂರದ ಹಾಗೆ ಕಟ್ಟಡದ ಗೋಡೆಗಳು ಮೇಲೇಳುವ ಸ್ಥಿತಿ ಭಾರತಕ್ಕೆ ಬಂದೊದಗಿದೆ. ಜನ ಜಾಗೃತವಾಗುವ ವರೆಗೆ ಎಲ್ಲವನ್ನೂ ಕಳೆದುಕೊಳ್ಳುತ್ತಲೇ ಇರುತ್ತಾರೆ. ಹೋರಾಟ ತೀವ್ರವಾಗುವ ವರೆಗೂ ಇದು ಹೀಗೇ ಮುಂದುವರಿಯುತ್ತದೆ.
ಮೈ ಮನಕೆ
ಅಂಟಿದೆ ಅನಾದಿಯ ಸುಟ್ಟ ಗಾಯದ ಕಲೆ
ಮುಚ್ಚಿಟ್ಟ ಅಬ್ಬೆಯ ವಸ್ತ್ರಕ್ಕೆ ಮತ್ತೆ ತಗುಲಿದೆ...
ಬೆಂಕಿ
ಗೀರುವ ಕಡ್ಡಿ ಮಾತ್ರ ಸುಟ್ಟು ಹೋಗುತ್ತಿಲ್ಲ.
ಮತ್ತೆ ಮತ್ತೆ ಹಸಿನಾಥ
ಅರೆ ಕೊಳೆತ ಹೆಣಗಳವು.
ಮಠದ ವಠಾರಗಳಲ್ಲಿ
ಮಸೀದಿಯ ಸಂಧಿಗಳಲ್ಲಿ
ಇಗರ್ಜಿಯ ವಾಡೆಗಳಲ್ಲಿ
ಸೌಧದ ಪ್ರಾಂಗಣದಲ್ಲಿ
ಪಿಶಾಚಗ್ರಸ್ಥ ಸ್ಮಾರಕಗಳಲ್ಲಿ.
-ಬೆಂಕಿಯನ್ನೇ ದೀಪವಾಗಿಸುವ
ಎಲ್ಲೆಡೆ ಕ್ರೌರ್ಯ ಮತ್ತು ಅಶಾಂತಿಯೆ ಎದ್ದು ಕಾಣುತ್ತಿದೆ. ದೇಶಕ್ಕೆ ಬೆಂಕಿ ಹಚ್ಚಲು ಗೀರಿದ ಕಡ್ಡಿ ಮಾತ್ರ ಸುಟ್ಟುಹೋಗುತ್ತಿಲ್ಲ. ಆದರೆ ಅದಕ್ಕೆ ತಾಗುವುದೆಲ್ಲವೂ ಸುಟ್ಟು ಹೋಗುತ್ತಿವೆ. ಮಠ, ಮಂದಿರ, ಮಸೀದಿ, ಚರ್ಚುಗಳು ಅಸಹಾಯಕರಂತೆ ಮೌನವಾಗಿವೆ. ಅವುಗಳನ್ನು ನಂಬಿದವರು ಹೆಣವಾಗುವಂಥ ವಿಕೃತ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಫ್ಯಾಸಿಸಂ ತಲೆ ಎತ್ತುವ ಸಂದರ್ಭದಲ್ಲಿನ ಲಕ್ಷಣಗಳಿವು.
ಸ್ಥಿತಪ್ರಜ್ಞ ಗೀತೆಯ ಬೋಧೆ
ನನ್ನೊಳಗಿನ ಕ್ರೌರ್ಯ
-ಕ್ರೌರ್ಯ
ಬೀದಿಯ ಮೇಲೆ ರಕ್ತ ಹರಿಯುವಾಗ ಸ್ಥಿತಪ್ರಜ್ಞನಾಗಿರುವುದು ಕ್ರೌರ್ಯ ಎಂಬುದನ್ನು ಸಂವೇದಾನಶೀಲ ಕಾಮ್ರೇಡ್ ಯಮುನಾ ಬಹಳ ಮಾರ್ಮಿಕವಾಗಿ ನುಡಿದಿದ್ದಾಳೆ. ಕಳೆದ ಐದು ಸಾವಿರ ವರ್ಷಗಳ ಇತಿಹಾಸದಲ್ಲಿ ಈ ಸ್ಥಿತಪ್ರಜ್ಞೆಯ ಟೆಕ್ನಿಕ್ ಬಳಸಿಯೆ ದೇಶದ ಪ್ರತಿಶತ 90 ರಷ್ಟು ಜನರ ಸುಲಿಗೆಯನ್ನು ಅವ್ಯಾಹತವಾಗಿ ಮಾಡುತ್ತ ಬರಲಾಗುತ್ತಿದೆ. ದೇವರು ಮತ್ತು ಧರ್ಮದ ಹೆಸರಿನಲ್ಲಿ ಪಟ್ಟಭದ್ರರು ಜನಸಮುದಾಯವನ್ನು ಮಾನಸಿಕ ಗುಲಾಮಗಿರಿಗೆ ತಳ್ಳುತ್ತಲೇ ಇದ್ದಾರೆ. ಇಂದು ವಿದ್ಯನ್ಮಾನ ಮಾಧ್ಯಮಗಳ ಮೂಲಕ ಈ ದಂಧೆ ಇನ್ನೂ ವಿಕಾರ ಸ್ವರೂಪದಲ್ಲಿ ಪಸರಿಸುತ್ತಿದೆ.
ಕವನ ಬರೆಯುವ ಸಮಯವಲ್ಲವಿದು
ಹೊರಗೆ ಗದ್ದಲವಿದೆ
ಜಗಳವಿದೆ; ರಕ್ತಪಾತವಿದೆ
ಮತ್ತೆ ಮನದೊಳಗೆ
ಜಂಝಾವಾತವಿದೆ.
ಇದು ಕವನ ಬರೆಯುವ ಸ್ಥಳವೂ ಅಲ್ಲ
ಇಲ್ಲಿ ಈಗಷ್ಟೇ ಅತ್ಯಾಚಾರ ಆಗಿದೆ
ದೇವಗುಡಿಯ ಹಿಂಭಾಗದ ಗೋಡೆಗೊರಗಿದೆ
ಆ ಹೆಣ.
ಬೆಳಗಿನ ಅಜಾó ಆಗುವಾಗಲೇ
ಪ್ರಾಣಿಯ ತಲೆ
ಮಸೀದಿಯ ಮೆಟ್ಟಿಲ ಮೇಲೆ ಅಂಗಾತ ಬಿದ್ದಿದೆ.
ಇಗರ್ಜಿಯ ಕ್ರಾಸಿಗೆ ಯಾರೋ ರಕ್ತ ಲೇಪಿಸಿದ್ದಾರೆ.
ಇಲ್ಲಿ ಕವನ ಬರೆಯಲು ಸ್ಥಳವಿಲ್ಲ.
-ಸಮಯವಲ್ಲವಿದು
ಹೀಗೆ ನಮ್ಮ ದೈನಂದಿನ ಬದುಕಿನ ದುರಂತವನ್ನು ಪಾಬ್ಲೊ ನೆರೂದಾ ಹಾಗೆ ಕಣ್ಣಿಗೆ ಕಟ್ಟುವಂತೆ ಶಬ್ದಗಳಲ್ಲಿ ಹಿಡಿದಿಡುತ್ತಾಳೆ. ವಾಸ್ತವದ ಕುರಿತು ನಮ್ಮನ್ನು ಎಚ್ಚರಿಸುತ್ತಾಳೆ. ಇದು ಯಾವುದರ ಮುನ್ಸೂಚನೆ ಎಂಬುದನ್ನು ಸೂಚಿಸುತ್ತಾಳೆ. ಮತ್ತೆ ಮತ್ತೆ ನಮ್ಮ ಮನದಲ್ಲಿ ಹಿಟ್ಲರನ ಜರ್ಮನಿ ಸುಳಿಯುವಂತೆ ಮಾಡುತ್ತಾಳೆ.
ಬೀದಿಗೆ ಬಂದು ಮಾತನಾಡಬೇಕಿದೆ.
ಕಲ್ಲು ಹೊಡೆಯ ಬಹುದು, ಬೂಟು ತೂರಬಹುದು
ದೊಣ್ಣೆರಾಶಿ ಬೀಳಬಹುದು ನಡುಬೀದಿಯಲ್ಲಿ
ಆದರೂ ಮಾತಾಡಬೇಕಿದೆ.
ಹಾಡೇ ಹಗಲು ಹೆಣ ಬೀಳಬಹುದು
ಕತ್ತಿ ಚಾಕು ಕೆಲಸ ತ್ರಿಶೂಲ ಮಾಡಬಹುದು
ನಾಡಿ ಬದಲು ಲಾಡಿ ಬಿಚ್ಚಿ ನೋಡಬಹುದು
ಆದರೂ ಮಾತಾಡಬೇಕಿದೆ...
ಕೊಲೆಗಾರನ ಪತ್ತೆಯಾಗುವ ತನಕ
ಶಿಕ್ಷೆಯಾಗುವ ತನಕ
ಮತ್ತೆ ಮತ್ತೆ ಮಾತಾಡಬೇಕಿದೆ
ಮುರುಟಿದ ಕನಸನ್ನು
ಮರಗೆಟ್ಟ ಮನಸನ್ನು
ಕೂಡಿಸಬೇಕಿದೆ ತೇವದಿಂದ...
-ಮಾತಾಡಬೇಕಿದೆ
ಕವಯಿತ್ರಿಯ ಅದಮ್ಯ ಶಕ್ತಿಯ ದ್ಯೋತಕವಾಗಿ ಈ ಕವನ ಓದುಗರ ಮನದಾಳಕ್ಕಿಳಿಯುತ್ತದೆ. ಇಲ್ಲಿ ಮಾತೆಂಬುದು ಕ್ರಿಯೆಯ ಪ್ರತೀಕವಾಗಿದೆ. ಫ್ಯಾಸಿಸ್ಟರು ಮಾತನ್ನು ಅಪರಾಧ ಎಂದು ವ್ಯಾಖ್ಯಾನಿಸುತ್ತಾರೆ. ಅವರು ಹೇಳಿದಂತೆ ಕೇಳಿಕೊಂಡು ಮೌನವಾಗಿ ಬದುಕುವುದೊಂದೇ ಮಾರ್ಗವಾಗಿರುತ್ತದೆ. ಮಾತೇ ಕ್ರಾಂತಿಯಾದಾಗ ತ್ರಿಶೂಲಗಳು ಕತ್ತಿ ಚಾಕುಗಳ ಅವತಾರ ತಾಳುತ್ತವೆ. ಹಾಡೇ ಹಗಲು ಹೆಣ ಬೀಳುತ್ತವೆ. ಅದರೂ ಮಾತಾಡಲೇಬೇಕು ಎಂಬುದು ಈ ಕಾವ್ಯದ ಆಶಯವಾಗಿದೆ. ವಿಧ್ವಂಸಕ ಕೃತ್ಯಗಳ ಮಧ್ಯದಲ್ಲಿ ಕೂಡ ಕನಸುಗಳನ್ನು ಹೆಣೆಯುವಲ್ಲಿ ಮತ್ತು ಮನಸ್ಸುಗಳನ್ನು ಕೂಡಿಸುವಲ್ಲಿ ಕವಯಿತ್ರಿ ತಲ್ಲೀನಳಾಗಿದ್ದಾಳೆ.
ಕಾವ್ಯವೇ ನೀ ಜೋಗಿಯಾಗಿ ಬಿಡು
ಹಂಗಿನ ಭಯ ಬಿಟ್ಟು
ಅಡಿಯಾಳ್ತನದ ಸಂಕಲೆ ಎಸೆದು
ಬೀದಿ ಬೀದಿಯಲಿ ಸಂಚರಿಸು.
ಹಸಿದವರ ರಟ್ಟೆಯಲಿ
ಮಕ್ಕಳ ಭಾವದಲಿ
ಹೆಂಗಳೆಯರ ಕಣ್ಣಗೂಡಿನಲಿ
ದರಿದ್ರರ ಗುಡಿಸಲಲಿ
ಶಕ್ತಿಯ ಕೊಡು.
-ಜೋಗಿಯಾಗು
ಬಂಡವಾಳಶಾಹಿ ವ್ಯವಸ್ಥೆ ಕವಿಗಳನ್ನೂ ಖರೀದಿಸುತ್ತದೆ. ಅಂತೆಯೆ ಜೋಗಿಯಾಗೆಂದು ಕಾವ್ಯಕ್ಕೆ ಯಮುನಾ ಕರೆ ಕೊಡುತ್ತಾಳೆ. ಹಂಗಿಲ್ಲದ ಕಾವ್ಯ ಮಾತ್ರ ಬೀದಿಯಲ್ಲಿ ಜನರ ಮಧ್ಯೆ ಬಂದು ನಿಲ್ಲುವ ಶಕ್ತಿಯನ್ನು ಹೊಂದಿರುತ್ತದೆ. ಜನಸಮುದಾಯಕ್ಕೆ ಹೋರಾಡುವ ಶಕ್ತಿಯನ್ನು ಕೊಡುತ್ತದೆ. ನೊಬೆಲ್ ಪ್ರಶಸ್ತಿ ವಿಜೇತ ಚಿಲಿಯ ಕವಿ ಪಾಬ್ಲೊ ನೆರೂದಾ ನಿಗೂಢವಾಗಿ ನಿಧನರಾದಾಗ 50 ಸಾವಿರ ಜನ ಮೈದಾನದಲ್ಲಿ ಕೈ ಕೈ ಹಿಡಿದು ‘ಎಲ್ ಪ್ಯಾಬ್ಲೊ ವುನಿದೊ ಹಮಾಸ್ಸಿರಾ ವೆನ್ಸಿದೊ’ (ಒಗ್ಗಟ್ಟಾದ ಜನರನ್ನು ಸೋಲಿಸಲು ಸಾಧ್ಯವಿಲ್ಲ) ಎಂಬ ಒಂದು ಸಾಲಿನ ಹಾಡನ್ನು ಹಾಡುವುದರ ಮೂಲಕ ಒಗ್ಗಟ್ಟನ್ನು ಪ್ರದರ್ಶಿಸಿದರು. ಆ ಹಾಡು ವಿಶ್ವದ ಕ್ರಾಂತಿಕಾರಿಗಳಲ್ಲಿ ಹೊಸ ಚೈತನ್ಯ ಮೂಡಿಸಿತು.
ಸಂಗಾತಿ... ಕವನ ಹುಟ್ಟುವಾಗ ಜೀವ ಹಿಂಡಲಿಲ್ಲ
ಅದು ನನ್ನ ಪ್ರೇಮಿಸಿತು ಶಬ್ದಾರ್ಥದಲ್ಲಿ
ನಿನಗಿಂತ ಮೊದಲೇ
ಬಯಲಲ್ಲಿ ಗುಹೆಯಲ್ಲಿ ಕತ್ತಲಲ್ಲಿ
ಕಾಡಿದ್ದು ನಿಜ
ಬೇಗ ಮನಸ್ಸು ಬಿಚ್ಚು ಎಂದು.
ಒಪ್ಪುವೆ
ಅದು ಬಳಿ ಸುಳಿವ ಸುಳಿವಿದ್ದಾಗ
ನಿನ್ನ ಆಲಿಂಗನದಲ್ಲಿ
ನನ್ನ ಬೆಸುಗೆ ಇರಲಿಲ್ಲ
ಮೋಸವೂ ಇರಲಿಲ್ಲ ನಿನಗೆ
ನಾನೇ
ಕವನವಾಗಿದ್ದೆ.
-ನಿನ್ನ ಜೊತೆ ನನ್ನ ಕವನ
ಈ ಕವಯಿತ್ರಿಯದು ಪ್ರಗಲ್ಭ ಪ್ರೇಮ. ವೈಯಕ್ತಿಕ ಬದುಕನ್ನೂ ಕಾವ್ಯವಾಗಿಸುವ ಪ್ರತಿಭೆ ಇದು. ಹೀಗೆ ಬಡತನ, ಬಾಲ್ಯ, ಹೆಣ್ತನ, ಪರಿಸರ ಮತ್ತು ಯುದ್ಧದ ಕ್ರೌರ್ಯದಿಂದಾಗಿ ಬಳಲಿದ ಜಪಾನ್, ಪ್ಯಾಲೆಸ್ಟೀನ್ ಮುಂತಾದ ದೇಶಗಳು ಅವಳ ಕಾವ್ಯದ ವಸ್ತುಗಳಾಗಿವೆ.
ಅವಳು ಹೆಣ್ಣಾಗಿದ್ದಕ್ಕೆ
ಮೌನಕ್ಕೂ ಮಾತಿನ ಶಕ್ತಿ.
-ಅವಳು ಮಾತ್ರ
ಪುರಷ ಪ್ರಧಾನ ವ್ಯವಸ್ಥೆಯಲ್ಲಿ ಹೆಣ್ಣು ಮೌನದ ಮೂಲಕವೂ ಮಾತನಾಡ ಬಲ್ಲಳು ಎಂಬುದು ಆಕೆಯ ಅದಮ್ಯಶಕ್ತಿಗೆ ಹಿಡಿದ ಕನ್ನಡಿಯಾಗಿದೆ. ಕಾಲಕಸವಾಗಿ ಕಾಣುವಂಥ ಸಂದರ್ಭದಲ್ಲಿ ಕೂಡ ಗಾಂಭೀರ್ಯ ಮತ್ತು ಘನತೆಯೊಂದಿಗೆ ಹೆಣ್ಣು ತನ್ನತನವನ್ನು ಕಾಪಾಡಿಕೊಂಡು ಬಂದದ್ದು ಅವಳ ಇಂಥ ಶಕ್ತಿಯಿಂದಲೇ ಇರಬೇಕು.
ಹೀಗೆ ಕಾವ್ಯದ ಮೂಲಕ ಹೋರಾಟಕ್ಕೆ ಸ್ಫೂರ್ತಿ ನೀಡುತ್ತ ಮತ್ತು ಹೋರಾಟದಲ್ಲೂ ಕಾವ್ಯವನ್ನು ಕಾಣುತ್ತ ಬದುಕನ್ನು ಸಹ್ಯಗೊಳಿಸುವಲ್ಲಿ ತಲ್ಲೀನಳಾಗಿರುವ ಕಾಮ್ರೇಡ್ ಯಮುನಾ ಗಾಂವ್ಕರ್ ಹೆಚ್ಚು ಹೆಚ್ಚು ಕಾವ್ಯಕೃಷಿ ಮಾಡುತ್ತ ಹೋರಾಟದ ಹಾದಿಯಲ್ಲಿ ಜನಸಾಗರ ಸೃಷ್ಟಿಯಾಗುವಂತೆ ಮಾಡಲಿ.
ರಂಜಾನ್ ದರ್ಗಾ
01.05.2017
No comments:
Post a Comment