Sunday 19 July 2020

ಡಿ.ಎನ್. ಶಂಕರ ಭಟ್: ಕನ್ನಡ ಸ್ವರಾಜ್ಯದ ಹರಿಕಾರ. ಲೇಖಕ: ಮೇಟಿ ಮಲ್ಲಿಕಾರ್ಜುನ

ಭಾಷೆ ಕುರಿತ ಚರ್ಚೆ – 07 

ಕನ್ನಡ ನುಡಿ ಬಗೆಗಿನ ಸಾಂಪ್ರದಾಯಿಕ ತಿಳುವಳಿಕೆಯಲ್ಲಿ ಒಂದು ದೊಡ್ಡ ಪಲ್ಲಟವನ್ನು ಡಿ.ಎನ್.ಶಂಕರ ಭಟ್ ಅವರು ಉಂಟುಮಾಡಿರುತ್ತಾರೆ. ಕರ್ನಾಟಕದ ಬಹುಜನರ ಬದುಕಿನ ದಾರಿಗಳಲ್ಲಿಯೇ ಈ ಪಲ್ಲಟವು ಅತ್ಯಂತ ಮಹತ್ವದ ನಡೆಯಾಗಿದೆ. ಶಂಕರಭಟ್ ಅವರು ಕನ್ನಡದ ಮಾತಿನ ಸ್ವರೂಪ, ಉಚ್ಚಾರಣೆಯನ್ನು ಕುರಿತು ಮಾತ್ನಾಡುವುದಿಲ್ಲ. ಬದಲಾಗಿ ಬರಹ ಕನ್ನಡ ಎದುರಿಸುತ್ತಿರುವ ಸವಾಲುಗಳು, ತೊಡಕುಗಳು ಹಾಗೂ ಈ ಬರಹ ಕನ್ನಡದ ವ್ಯಾಕರಣವನ್ನು ಕುರಿತು ಇವರು ತಮ್ಮ ವಿಚಾರಗಳನ್ನು ಕಳೆದ ಎರಡು ದಶಕಗಳಿಂದ ಅತ್ಯಂತ ಗಟ್ಟಿ ದನಿಯಲ್ಲಿ ಮಂಡಿಸುತ್ತಲೇ ಬಂದಿರುತ್ತಾರೆ. ಕನ್ನಡದ ರಚನೆ ಮತ್ತು ಬಳಕೆಯು ಸಂಸ್ಕೃತದ ಹೇರಿಕೆಯಿಂದ ತುಂಬಿ ಹೋಗಿರುವುದನ್ನು ಗುರುತಿಸಿ, ಈ ಭಾರದಿಂದ ಕನ್ನಡವನ್ನು ಬಿಡುಗಡೆಗೊಳಿಸುವ ಹಾಗೂ ಕನ್ನಡಕ್ಕೆ ಕನ್ನಡದ್ದೇ ವ್ಯಾಕರಣವನ್ನು ಕಟ್ಟುವ ಕಾಯಕದಲ್ಲಿ ಭಟ್ ಅವರು ತೊಡಗಿಕೊಂಡಿದ್ದಾರೆ. ಈ ನಡೆಯನ್ನು ಸಂಸ್ಕೃತ ವಿರೋಧಿ ನಿಲುವನ್ನಾಗಿ ಗುರುತಿಸುವ ಹುನ್ನಾರವು ಇವತ್ತು ಕರ್ನಾಟಕದಲ್ಲಿ ನಡೆಯುತ್ತಿದೆ. ಆದರೆ ಶಂಕರಭಟ್ಟರು  ಕನ್ನಡದ ಪರವಾಗಿ ಮಾತ್ರ ತಿಳುವಳಿಕೆಯನ್ನು ಬೆಳೆಸುವ ಹಾಗೂ ಈ ತಿಳಿವನ್ನೇ ಕನ್ನಡದ ಅರಿಮೆಯ ತಿಳಿವನ್ನಾಗಿ ರೂಪಿಸಿ, ಕನ್ನಡದ ಸ್ವರಾಜ್ಯವನ್ನು ನೆಲೆಗೊಳಿಸುವ ಇರಾದೆಯನ್ನು ಹೊಂದಿರುತ್ತಾರೆ. ಕೇವಲ ಸಂಸ್ಕೃತದ ವ್ಯಾಕರಣದಿಂದ ಕನ್ನಡವನ್ನು ಬಿಡುಗಡೆಗೊಳಿಸುವ ಸೀಮಿತ ಗುರಿಗೆ ಭಟ್ಟರು ಬದ್ಧರಾಗದೇ, ಕನ್ನಡದ ಮೂಲಕವೇ ಎಲ್ಲ ಬಗೆಯ ತಿಳಿವನ್ನು ಪ್ರಕಟಿಸಲು ಸಾಧ್ಯವಾಗಬೇಕು ಎಂಬ ನಂಬಿಕೆಯನ್ನು ಇವರು ಹೊಂದಿರುತ್ತಾರೆ. 
ಈ ನಂಬಿಕೆಯನ್ನು ಸಾಕಾರಗೊಳಿಸಲು ಕನ್ನಡವು ಹೇಗೆ ಸಜ್ಜಾಗಬೇಕು ಎಂಬ ನಿಟ್ಟಿನಲ್ಲಿ, ಕನ್ನಡ ಬರಹದ ಸೊಲ್ಲರಿಮೆ, ಪದಕೋಶ, ಕನ್ನಡದಲ್ಲಿ ಹೊಸ ಪದಗಳನ್ನು ಕಟ್ಟುವ ಬಗೆಗಳು, ಇಂಗ್ಲಿಶಿನ ಪದಗಳಿಗೆ ಕನ್ನಡದ್ದೇ ಪದಗಳು, ಲಿಪಿಕ್ರಾಂತಿ ಹಾಗೂ ಪದಕ್ರಾಂತಿಗಳಂತಹ ಅತ್ಯಂತ ಮಹತ್ವದ ನಿಲುವುಗಳನ್ನು ಶಂಕರ್ ಭಟ್ಟರು ತೆಗೆದುಕೊಂಡಿದ್ದಾರೆ. ಕನ್ನಡ ಸಮುದಾಯಗಳ ಬೆಳವಣಿಗೆ ಎಂಬುದು, ಅದು ಕನ್ನಡ ನುಡಿ ಬೆಳವಣಿಗೆಯನ್ನು ನೆಮ್ಮಿಕೊಂಡಿರುವ ಸಂಗತಿಯಾಗಿದೆ. ವಿಜ್ಞಾನದಂತಹ ಬರಹಗಳಲ್ಲಿ ಸಂಸ್ಕೃತ ಪದಗಳ ಬಳಕೆಯ ಪ್ರಮಾಣ ಶೇಕಡಾ 80%ಕ್ಕಿಂತ ಹೆಚ್ಚಾಗಿರುವುದನ್ನು ನೋಡಬಹುದು. ಹಾಗಂತ ನುಡಿ ಎರವಲು ಬಗೆಗೆ ಶಂಕರಭಟ್ಟರು ಯಾವುದೇ ನಿರಾಕರಣೆಯನ್ನು ತೋರಿಸುವುದಿಲ. ಬದಲಾಗಿ ಕನ್ನಡದ ತಿಳಿವು, ಸಂವಹನ ಹಾಗೂ ಹೊಸಗಾಲದ ಅಗತ್ಯಗಳನ್ನು ಪೋರೈಸುವುದಕ್ಕೆ ಕನ್ನಡ ಹೇಗೆಲ್ಲ ಸಜ್ಜುಗೊಳ್ಳಬೇಕು ಎಂಬ ನಿಲುವೂ ಇವರ ಇಡೀ ಬರಹಗಳಲ್ಲಿ ಕಾಣುತ್ತದೆ. ಬರಹ ಕನ್ನಡದ ಬಹುತೇಕ ಪದಕೋಶವು ಕೇವಲ ಸಂಸ್ಕೃತದಿಂದ  ತುಂಬಿಹೋಗಿದೆ. ಆದರೆ ಕನ್ನಡ ನುಡಿಯು ಬೇರೆ ನುಡಿಗಳಿಂದ ಎರವಲು ಪಡೆದುಕೊಂಡು, ತನ್ನ ಕಸುವನ್ನು ಹೆಚ್ಚಿಸಿಕೊಳ್ಳಲು ಸಾಧ್ಯವಾಗಬಹುದು. ಆದರೆ ಕೇವಲ ಸಂಸ್ಕೃತದಿಂದ ಮಾತ್ರ ಹೇರಳವಾಗಿ ಪದಗಳನ್ನು ಎರವಲು ಪಡೆಯುವುದರಿಂದ, ಕನ್ನಡದ ಸ್ವರಾಜ್ಯಕ್ಕೆ ಧಕ್ಕೆಯಾಗುತ್ತದೆ. ಶುದ್ಧತೆ ಎನ್ನುವುದು ಜನಬಳಕೆಯ ಯಾವುದೇ ನುಡಿಯ ಮೂಲ ಗುಣವೆಂದು ಹೇಳಲು ಸಾಧ್ಯವಿಲ್ಲ. ಹಾಗಾಗಿ ಶುದ್ಧತೆಯ ನೆಲೆಯಿಂದ ಶಂಕರಭಟ್ಟರ ಕನ್ನಡದ ಬಗೆಗಿನ ಚಿಂತನೆಗಳನ್ನು ಬಿಡಿಸಿ ನೋಡುವ ಅಗತ್ಯವಿಲ್ಲ.      
ಡಿ.ಎನ್. ಶಂಕರಭಟ್ಟರು ಕಟ್ಟುತ್ತಿರುವ ತಿಳಿವಿನ ಮಾದರಿಗಳು ನಮಗೆ ಯಾಕೆ ಬೇಕು? ಅವುಗಳಿಂದ ಕನ್ನಡದ ಸಮುದಾಯಗಳ ಬದುಕಿನ ಮೇಲೆ ಏನೆಲ್ಲ ಪರಿಣಾಮಗಳು ಉಂಟಾಗುತ್ತವೆ? ಈ ಪರಿಣಾಮಗಳು ಈ ನಾಡಿನ ಸಮುದಾಯಗಳ ಬದುಕಿಗೆ ಹೇಗೆ ಒತ್ತಾಸೆಯಾಗುತ್ತವೆ? ಕನ್ನಡದ ಮೂಲಕವೇ ಚಿಂತನೆಯನ್ನು ಕಟ್ಟಿ ಬೆಳೆಸಲು ಇವುಗಳು ಹೇಗೆ ದಾರಿಯಾಗಬಲ್ಲವು? ಎಂಬಿತ್ಯಾದಿ ವಿಷಯಗಳನ್ನು ಮಾತ್ರ ಇಲ್ಲಿ ಚರ್ಚಿಸಲು ಬಯಸುತ್ತೇನೆ. ಏಕೆಂದರೆ ಭಟ್ರ ಇಡೀ ತಾತ್ವಿಕತೆಯು ನೆಲೆಗೊಂಡಿರುವುದು ಕೂಡ ಈ ನಿಲುವುಗಳಲ್ಲಿಯೇ. 
ಕನ್ನಡವನ್ನು ಕುರಿತಾಗಿ ಚಿಂತಿಸುವುದೆಂದರೆ, ಅದು ಕೇವಲ ಲಿಪಿ ಮತ್ತು ಕಾಗುಣಿತಗಳ ಸ್ವರೂಪವನ್ನು ಯಾವ ಕಾಲಕ್ಕೂ ಬದಲಿಸದೆ ಹಾಗೇ ಮುಂದುವರಿಸಿಕೊಂಡು ನಡೆಯುವುದಲ್ಲ. ಆಯಾ ಕಾಲದ ಬದುಕಿನ ದಾರಿಗಳನ್ನು ಹೇಗೆ ರೂಪಿಸಿಕೊಳ್ಳಬೇಕು? ಇದಕ್ಕೆ ಒತ್ತಾಸೆಯಾಗಿ ಆ ಸಮೂಹಗಳ ನುಡಿಯನ್ನು ಹೇಗೆ ಸಜ್ಜುಗೊಳಿಸಬೇಕು? ನುಡಿಯೆಂಬುದು ಕೇವಲ ಮಾತಲ್ಲ, ಅದು ಬದುಕೂ ಆಗಿರುತ್ತೆ. ಈ ಬದುಕಿಗೆ ಬೇಕಾದ ಮೂಲತತ್ವಗಳು ಆಯಾ ನುಡಿಗಳಲ್ಲಿಯೆ ಹೇಗೆ ಹುದುಗಿರುತ್ತವೆ. ಎಂಬ ದಿಟವನ್ನು ಅರಿಯದೇ, ನುಡಿಯೊಂದನ್ನು ಕುರಿತು ಚಿಂತಿಸುವುದು ಅಗತ್ಯವಿಲ್ಲವೆಂದು ತೋರುತ್ತದೆ. ಆದರೆ ಡಿ.ಎನ್.ಎಸ್. ಭಟ್ ಮತ್ತು ಈ ಆಲೋಚನೆಯ ಕ್ರಮವನ್ನು ನಂಬಿದವರ ಮೊದಲ ಗುರಿಯೇ, ಸಮೂಹಗಳ ಬದುಕಿನ ವಿನ್ಯಾಸಗಳನ್ನು ಅರಿಯುವ ಮತ್ತು ಆಯಾ ಬದುಕಿಗೆ ತಕ್ಕುದಾದ ದಾರಿಗಳನ್ನು ಅವರವರ ನುಡಿಗಳ ಮೂಲಕವೇ ಕಾಣುವುದಾಗಿದೆ. ಎತ್ತುಗೆಗಾಗಿ ಕರ್ನಾಟಕದಲ್ಲಿ ಆಡಳಿತ ನುಡಿಯಾಗಿ ಕನ್ನಡವೇ ಇರಬೇಕು ಎಂದು ಅರೆ ಶತಮಾನಕ್ಕಿಂತಲೂ ಹೆಚ್ಚುಕಾಲ, ನಮ್ಮ ಸರಕಾರಗಳು ಒತ್ತಾಯಿಸುತ್ತಲೇ ಬಂದಿವೆ. ಆದರೆ ಪರಿಣಾಮ ಏನಾಗಿದೆಯೆಂದರೆ ಸೊನ್ನೆ. ಆಡಳಿತ ಇಲ್ಲವೇ ಸರಕಾರ ಎಂಬುದು ಜನರ ಬದುಕಿಗೆ ಹೊಣೆಯಾಗದೇ, ಕೇವಲ ಬದುಕಿನ ಸನ್ನಿವೇಶಗಳಲ್ಲಿ ಕನ್ನಡನುಡಿಯನ್ನು ಬಳಕೆಗೆ ಒತ್ತಾಯಿಸುವ ಮೂಲಕ ಏನನ್ನೂ ಗೆಲ್ಲಲು ಆಗುವುದಿಲ್ಲ. ಆಡಳಿತವು ಜನರಿಗೆ ಉತ್ತರದಾಯಿತ್ವವಾಗದೇ, ಕನ್ನಡ ಯಾವತ್ತಿಗೂ ನೆಲೆಗೊಳ್ಳಲಾರದು. ಹಾಗೊಂದು ಕನ್ನಡ ನೆಲೆಗೊಂಡರೆ, ಅದೊಂದು ಸಮೂಹಗಳ ಚಹರೆಯನ್ನು ಕಳೆದುಕೊಂಡ ಕನ್ನಡವಾಗುತ್ತದೆ. ಕನ್ನಡದ ಚಹರೆಗಳಿರುವುದು, ಈ ನುಡಿಯನ್ನೇ ನೆಮ್ಮಿಕೊಂಡು ಬದುಕುವ ಸಮುದಾಯಗಳಲ್ಲಿಯೇ ಹೊರತು ಕೇವಲ ನುಡಿಯಲ್ಲಿ ಅಲ್ಲ. ಗುರುತುಗಳು ಬದುಕಿನ ವಿನ್ಯಾಸಗಳಲ್ಲಿ ಹುದುಗಿರುತ್ತವೆ ಎಂಬ ವಾಸ್ತವನ್ನು ಈ ಮಾತುಗಳು ಹೇಳುತ್ತವೆ. ಆದರೆ ಇಂತಹ ಗುರುತುಗಳನ್ನು ಕಡೆಗಣಿಸುವ ಇಲ್ಲವೇ ಅಮಾನ್ಯಮಾಡುವ ಹುನ್ನಾರಗಳು ಚರಿತ್ರೆಯುದ್ದಕ್ಕೂ ನಡೆದುಕೊಂಡು ಬಂದಿವೆ. ಕನ್ನಡ ನುಡಿಯು ಕೀಳರಿಮೆಯಿಂದ ಬಳಲುತ್ತಿರಲೂ ಕಾರಣವೇ ಈ ಚಾರಿತ್ರಿಕ ನಡೆಗಳು. ಹಾಗಾಗಿ ಕನ್ನಡಕ್ಕೆ ಅಂಟಿರುವ ಇಂತಹ ಕೀಳರಿಮೆಯ ಸೋಂಕನ್ನು ತೊಲಗಿಸುವ ಕ್ರಮಗಳನ್ನು ಶಂಕರಭಟ್ಟರು ಆಲೋಚನೆಯ ಕ್ರಮದಲ್ಲಿ ಕಾಣುತ್ತೇವೆ.
ಬೇರೆ ನುಡಿಗಳಿಂದ ಮಾತ್ರ ತಿಳಿವು ತೆಗೆದುಕೊಳ್ಳುವ ನುಡಿಯನ್ನಾಗಿ ಕನ್ನಡವನ್ನು ರೂಪಿಸಲಾಗಿದೆ. ಅಂದರೆ ಕನ್ನಡವೂ ಕೂಡ ಕೊಡುವ ನುಡಿಯಾಗಿ ಬೆಳೆದು ನಿಲ್ಲಬೇಕಿದೆ. ಯಾರಿಗೆ? ಏನನ್ನು? ಕನ್ನಡ ಕೊಡಬೇಕಿದೆ ಎಂದು ಕೇಳಿದರೆ, ಕರ್ನಾಟಕದ ಸಮೂಹಗಳಿಗೆ ಬದುಕಲು ಬೇಕಿರುವ ತಿಳಿವು, ವಿಚಾರ, ಕಲಿಕೆ, ಅನ್ನ, ಕೆಲಸವನ್ನು ಕನ್ನಡದ ಮೂಲಕವೇ ಪಡೆಯಬೇಕು ಎಂಬುದೇ ಈ ಮಾತಿನ ತಿರುಳು. ಏಕೆಂದರೆ ತಿಳುವಳಿಕೆ ಇರುವುದು ಕೇವಲ ತಿಳುವಳಿಕೆಗಾಗಿ ಮಾತ್ರವಲ್ಲ, ಅದು ಬದುಕಿಗಾಗಿ ಮತ್ತು ಬದುಕಿನ ಏಳ್ಗೆ ಹಾಗೂ ಬದಲಾಣೆಗಾಗಿ ನೆಲೆಗೊಳ್ಳಬೇಕು. ಯಾವುದೇ ನುಡಿ ತಿಳುವಳಿಕೆ ಸಮೂಹಗಳ ತಿಳುವಳಿಕೆಯಾಗದೇ ಅದರಿಂದ ಯಾರಿಗೂ ಏನು ಪ್ರಯೋಜವಿರುವುದಿಲ್ಲ. ಈ ದಿಟವನ್ನು ಸರಿಯಾಗಿ ಅರಿತುಕೊಂಡ ಶಂಕರಭಟ್ಟರು ಕನ್ನಡ ಮತ್ತು ಕನ್ನಡಿಗರಪರವಾಗಿ ಚಿಂತಿಸುತ್ತಿದ್ದಾರೆ. 
ಶಂಕರಭಟ್ಟರು ಈಗಾಗಲೇ ಕೈಗೊಂಡಿರುವ ನುಡಿ ಮತ್ತು ನುಡಿಯರಿಮೆ ಕುರಿತಾದ ಎಲ್ಲ ಬಗೆಯ ಬರಹಗಳಲ್ಲಿಯೂ, ಕರ್ನಾಟಕ ಸಮೂಹಗಳ ಬದುಕಿಗೆ ಬೇಕಾಗಿರುವ ತಿಳಿವಿನ ಮಾದರಿಗಳು ಅಡಕವಾಗಿವೆ. ಎತ್ತುಗೆಗಾಗಿ ಈ ಮಾತುಗಳನ್ನು ನೋಡಿ; “ಕನ್ನಡ ಬರಹ ಮೇಲ್ವರ್ಗದದವರ ಸೊತ್ತಾಗಿ ಮಾತ್ರವೇ ಉಳಿಯದೆ ಎಲ್ಲರ ಸೊತ್ತಾಗಬೇಕು ಮತ್ತು ಕನ್ನಡ ಬರಹದ ಮೂಲಕ ಇವತ್ತು ಮೇಲ್ವರ್ಗದವರು ಮಾತ್ರವೇ ಪಡೆಯುತ್ತಿರುವ ಹಲವು ರೀತಿಯ ಪ್ರಯೋಜನಗಳನ್ನು ಎಲ್ಲಾ ವರ್ಗದ ಕನ್ನಡಿಗರಿಗೂ ಸಮಾನವಾಗಿ ಪಡೆಯುವ ಹಾಗಾಗಬೇಕು” - ಕನ್ನಡ ಬರಹವನ್ನು ಸರಿಪಡಿಸೋಣ! ಎಂಬೀ ಹೊತ್ತಿಗೆಯ ಮಾತುಗಳನ್ನು ನಿಗಾಯಿಟ್ಟು ನೋಡಿದರೆ, ಶಂಕರಭಟ್ಟರ ಕನ್ನಡ ಪರವಾದ ಕಾಳಜಿಗಳು ಎಂತಹವು ಅನ್ನುವುದು ನಮ್ಮರಿವಿಗೆ ಬರುತ್ತವೆ. ದಲಿತ ಮತ್ತು ತಳಸಮುದಯಗಳ ಪರವಾಗಿ ಹೋರಾಟ ನಡೆಸುವವರು ಭಟ್ಟರ ಈ ಚಿಂತನೆಗಳನ್ನು ಲೆಕ್ಕಿಸದೆ ಇರುವುದು ಕೇವಲ ಅಚ್ಚರಿಯ ಸಂಗತಿ ಮಾತ್ರವಲ್ಲ. ಅದೊಂದು ಚಾರಿತ್ರಿಕ ವ್ಯಂಗ್ಯವೂ ಹೌದು. ಈ ಹೊತ್ತಿನ ಸಾಮಾಜಿಕ ಮತ್ತು ರಾಜಕೀಯ ಚಳುವಳಿಗಳಿಗೆ ಬೇಕಾಗಿರುವ ಪ್ರಣಾಳಿಕೆಯೊಂದನ್ನು ಶಂಕರಭಟ್ಟರು ತಮ್ಮೀ ಬರಹಗಳ ಮೂಲಕ ರೂಪಿಸಿ ಕೊಟ್ಟಿದ್ದಾರೆ. ಭಟ್ಟರು ಬೀದಿಗಿಳಿಯದೆ ಸಾಮಾಜಿಕ ನ್ಯಾಯದ ಪರವಾಗಿ ಹೋರಾಡುತ್ತಿದ್ದಾರೆ. ಇದು ಕೂಡ ಹೋರಾಟದ ಒಂದು ಮಾದರಿ. ಇದುವೇ ಕನ್ನಡದ್ದೇ ಮಾದರಿಯೂ ಆಗಿರುತ್ತದೆ.  
ದಲಿತ ಮತ್ತು ತಳಸಮುದಾಯಗಳನ್ನೇ ನೆಲೆಯಾಗಿಸಿಕೊಂಡು ಇಡೀ ಭಾರತದಲ್ಲಿಯೇ ನುಡಿಯರಿಮೆಯ ಚಿಂತನೆಗಳು ಬೆಳೆದು ಬಂದಿರುವುದು ಅತ್ಯಂತ ಕಡಿಮೆಯೆಂದೇ ಹೇಳಬೇಕು. ಇಂತಹವೊಂದು ಆಲೋಚನೆಯ ಕ್ರಮವನ್ನು ಕನ್ನಡದಲ್ಲಿ ಶಂಕರಭಟ್ಟರು  ಮೊದಲಾದವರು ಹುಟ್ಟು ಹಾಕಿರುತ್ತಾರೆ. ಕರ್ನಾಟಕ ಇಲ್ಲವೇ ಭಾರತದಲ್ಲಿ ನುಡಿ ಬಗೆಗಿನ ಯಾವುದೇ ತೀರ್ಮಾನವು ಇಡೀ ಸಮುದಾಯವನ್ನೇ ನೆಚ್ಚಿಕೊಂಡು ರೂಪುಗೊಳ್ಳುವದಿಲ್ಲ. ಬದಲಾಗಿ ಮೇಲು ಜಾತಿಯ ಇಲ್ಲವೇ ಅಧಿಕಾರ ನಂಟು ಹೊಂದಿರುವ ಜನ ಸಮೂಹಗಳ ನುಡಿ ಬಗೆಗಳು ಮಾತ್ರ ಶಿಕ್ಷಣ, ಸಾಹಿತ್ಯ, ಮಾಧ್ಯಮ ಹಾಗೂ ಇತರೆ ತಿಳಿವಿನ ವಲಯಗಳಲ್ಲಿ ಮುಂಚೂಣೆಗೆ ಬರುತ್ತವೆ. ಈ ಬೆಳವಣಿಗೆಗಳು ದಲಿತ. ಹಿಂದೂಳಿದ, ತಳಸಮುದಾಯಗಳ ನುಡಿ ಚಹರೆಗಳ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತವೆ. ಮೇಲುಜಾತಿಗಳು ನುಡಿಯುವ ಮಾತಿನ ಪ್ರಕಾರಗಳು ಮೇಲುಹಿರಿಮೆಯನ್ನು ಪಡೆದರೆ, ದಲಿತ ಮುಂತಾದವರ ಮಾತುಗಳು ಕೀಳುಹಿರಿಮೆಗೆ ಒಳಗಾಗುತ್ತವೆ. ಈ ಸಾಂಕೇತಿಕ ಹಿಂಸೆಯನ್ನು ಹೋಗಲಾಡಿಸುವ ದಾರಿಗಳು ನುಡಿಯೊಳಗೇ ಹುದುಗಿರುತ್ತವೆ ಎಂಬ ದಿಟವನ್ನು ಕೂಡ ಶಂಕರಭಟ್ಟರು ತಮ್ಮ ಬರಹಗಳ ಮೂಲಕ ನಮ್ಮುಂದೆ ಮಂಡಿಸುಡುತ್ತಿದ್ದಾರೆ. ಹಾಗಾಗಿ ಮಾತು ಮತ್ತು ಬರಹದ ನುಡುವಣ ಅಂತರಗಳನ್ನು ಯಾಕೆ ಇಲ್ಲವಾಗಿಸಬೇಕು ಎಂಬಿವರ ಚಿಂತನೆಗಳು ಇಲ್ಲಿ ಮಹತ್ವವನ್ನು ಪಡೆಯುತ್ತವೆ. 
ಯಾಕೆ ಕಲಿಕೆಯ ವಲಯದಿಂದ ಕೆಲವೇ ಸಮೂಹಗಳ ಮಕ್ಕಳು ಹೊರಗುಳಿಯುತ್ತಾರೆ ಎಂಬ ಅನುಮಾನಕ್ಕೂ ಭಟ್ಟರ ಚಿಂತನೆಗಳಲ್ಲಿ ಸುಳಿವುಗಳು ಸಿಗುತ್ತವೆ. ಅಂದರೆ ಯಾವುದೇ ಸಾಮಾಜಿಕ ಮುಂಚಲನೆಗೂ ಮತ್ತು ಆಯಾ ಸಮೂಹಗಳು ನೆಚ್ಚಿಕೊಂಡಿರುವ ಒಳನುಡಿಗಳಿಗೂ ನೇರವಾದ ನಂಟಿರುತ್ತದೆ. ಒಳನುಡಿಯ ಸ್ವರೂಪ, ಕನ್ನಡ ನುಡಿಯ ಸ್ವರೂಪ ಮತ್ತು ಕಲಿಕೆಯ ಸಮಸ್ಯೆಗಳ ನಡುವಿನ ತೊಡಕುಗಳೆಂತಹವು, ಈ ತೊಡಕುಗಳೇ ತಳಸಮುದಾಯಗಳ ಮಕ್ಕಳ ನುಡಿ ಕಲಿಕೆಯ ಮೇಲೆ ಹೇಗೆಲ್ಲ ಸವಾರಿ ನಡೆಸುತ್ತಿವೆ ಅನ್ನುವ ಇಕ್ಕಟ್ಟುಗಳನ್ನು ಇವರ ನುಡಿಯರಿಮೆಯ ಚಿಂತನೆಗಳು ತೋರಿಸುತ್ತವೆ. ಯಾವ ನುಡಿಯನ್ನು ಕಲಿಯಬೇಕು ಮತ್ತು ಯಾವ ನುಡಿಯ ಮೂಲಕ ಕಲಿಯಬೇಕು ಎಂಬ ನಿಲುವಿಗೆ ಈ ಚಿಂತನೆಗಳಲ್ಲಿ ದಾರಿಗಳಿವೆ. ಏಕೆಂದರೆ ನುಡಿಯೆಂಬ ವಿದ್ಯಮಾನವು ವ್ಯಕ್ತಿ, ಸಮೂಹ ಮತ್ತು ಪರಂಪರೆ ಎಂಬ ಮೂರು ಬಗೆಯಲ್ಲಿ ಸಂಪನ್ಮೂಲವಾಗಿ ನೆಲೆಗೊಂಡಿರುತ್ತದೆ. ಈ ಮೂರು ನುಡಿ ಬಗೆಗಳ ನಡುವೆ ಸಮಾನ ಚಹರೆಗಳನ್ನು ರೂಪಿಸಿಕೊಳ್ಳುವ ಮೂಲಕ ನುಡಿಯೊಳಗೆಯೇ ಹುದಿಗಿರುವ ಸಾಮಾಜಿಕ ಅಸಮಾನತೆಯ ನೆಲೆಗಳನ್ನು ಹೋಗಲಾಡಿಸಲು ಅನುವಾಗುತ್ತದೆ. ಒಳನುಡಿಗಳ ನಡುವಣ ವ್ಯತ್ಯಾಸಗಳನ್ನು ಅಳಿಸಿ ಇಲ್ಲವೇ ಒರಸಿ ಹಾಕುವ ಹುನ್ನಾರಕ್ಕೆ ಕಡಿವಾಣ ಹಾಕಲೂ ಈ ಚಿಂತನೆಗಳಿಂದ ಬೆಂಬಲ ಸಿಗುತ್ತದೆ. ನುಡಿ ವ್ಯತ್ಯಾಸಗಳನ್ನು ಕುರಿತಾಗಿ ತಾಳಿಕೆಯ ಗುಣವನ್ನು ಬೆಳೆಸಿಕೊಳ್ಳುವ ದಾರಿಗಳು ಕೂಡ ಈ ಮೂಲಕ ನಮಗೆ ದೊರೆಯುತ್ತವೆ. 
ಕನ್ನಡ, ಸಂಸ್ಕೃತ ಮತ್ತು ಇಂಗ್ಲಿಶು ನುಡಿಗಳ ನಡುವಣ ನಂಟು ಯಾವ ಬಗೆಯದು? ಆ ನಂಟಸ್ತಿಕೆಯ ಮರುಹೊಂದಾಣಿಕೆಯ ಸ್ವರೂಪ ಹೇಗಿರಬೇಕು? ಕನ್ನಡನುಡಿ ಓದನ್ನು ಬೆಳಸುವವರಿಗೆ ಕನ್ನಡ ನುಡಿ ರಚನೆಯೇ ಯಾಕೆ ಮಹತ್ವದ ಸಂಗತಿಯಾಗುತ್ತದೆ? ಎಂಬಿತ್ಯಾದಿ ಕೇಳ್ವಿಗಳಿಗೆ ತಕ್ಕುದಾದ ಬದಲುಗಳು ಶಂಕರಭಟ್ಟ ಅವರ ಚಿಂತನೆಗಳಲ್ಲಿ ಸಿಗುತ್ತವೆ. ಕನ್ನಡ ಪರವಾಗಿ ಮತ್ತು ಕನ್ನಡದ್ದೇ ತಿಳಿವಿನ ಮಾದರಿಗಳನ್ನು ರೂಪಿಸುವವರಿಗೆ, ಸಂಸ್ಕೃತ, ಇಂಗ್ಲಿಶು ಇಲ್ಲವೇ ಕನ್ನಡದ ವಿರೋಧಿಗಳೆಂದು ಹಣೆಪಟ್ಟಿಯನ್ನು ಲಗತ್ತಿಸುವುದು ಎಷ್ಟರಮಟ್ಟಿಗೆ ತಕ್ಕುದಾದ ನಿಲುವು? ಇಲ್ಲಿ ಶಂಕರಭಟ್ಟರು ಯಾವುದೇ ನುಡಿಯನ್ನು ವಿರೋಧಿಸುವ ಮತ್ತು ಕಡೆಗಣಿಸುವ ರಾಜಕಾರಣವನ್ನು ಮಾಡುತ್ತಿಲ್ಲ. ಬದಲಾಗಿ ನಮ್ಮ ಸಮೂಹಗಳಿಗೆ ಈ ಹೊತ್ತು ಜರೂರು ಅನ್ನಿಸಿರುವ ತಿಳಿವಿನ ದಾರಿಗಳನ್ನು ಹುಡುಕುತ್ತಿರುವರು. ಹಾಗಾಗಿ ಕನ್ನಡ ನುಡಿಯರಿಮೆ ಇಲ್ಲವೇ ಕನ್ನಡ ಭಾಷಾಶಾಸ್ತ್ರವೆಂದರೆ, ಅದು ಕೇವಲ ಕನ್ನಡದಲ್ಲಿ ನುಡಿಗಳ ಕುರಿತಾಗಿ ತಿಳುವಳಿಕೆಯನ್ನು ಬೆಳೆಸುವ ಕ್ರಮವಲ್ಲ. ಬದಲಾಗಿ ಕನ್ನಡದ್ದೇ ಮತ್ತು ಕನ್ನಡವನ್ನೇ ಕುರಿತಾದ ಅರಿಮೆ ಇಲ್ಲವೇ ಶಾಸ್ತ್ರವನ್ನು ರೂಪಿಸುವ ಬಗೆಯಾಗಿರುತ್ತದೆ. ಕನ್ನಡ ನುಡಿಯರಿಮೆಯ ಸರಿಯಾದ ಮತ್ತು ಹೊಸದಾದ ಚೌಕಟ್ಟನ್ನು ಕಟ್ಟಿಕೊಳ್ಳುವ ದಾರಿಯಾಗಿ ಡಿ.ಎನ್. ಶಂಕರಭಟ್ಟ ಅವರು ನಮ್ಮ ನುಡಿ ಸಮುದಾಯಕ್ಕೆ ಈಗ ಸಿಕ್ಕಿರುತ್ತಾರೆ. ಕನ್ನಡ ನುಡಿಯ ಜಾಯಮಾನಕ್ಕೆ ಒಗ್ಗುವ ಹಾಗೂ ಕನ್ನಡದ್ದೇ ಅರಿವಿನ ವಿನ್ಯಾಸಗಳನ್ನು ನೆಲೆಗೊಳಿಸುವ ಹೊಣೆಗಾರಿಕೆಯನ್ನು ಇವರು ಅತ್ಯಂತ ಇರಾದೆಯಿಂದ ನೆರವೇರಿಸುತ್ತಿದ್ದಾರೆ.  

*ಹಿಂದೆ ಪ್ರಜಾವಾಣಿಯಲ್ಲಿ ಪ್ರಕಟವಾದ ಲೇಖನ

No comments:

Post a Comment