Friday, 21 August 2020

ಆಟ ರೂಪುಗೊಂಡ ಮಾಟದ ಕುರಿತು- ಡಾ.ಶ್ರೀಪಾದ ಭಟ್

  ಆಟ ರೂಪುಗೊಂಡ ಮಾಟದ ಕುರಿತು

ತಾನು ಆಡುವ ಮಾತುಗಳನ್ನು ಮಂತ್ರದ0ತೇ ಪೋಣಿಸುವ, ಕೆತ್ತಿಡುವ ಪ್ರತಿ ಅಕ್ಷರದಲ್ಲಿಯೂ ಕಾವ್ಯವನ್ನು ಉಸಿರಾಡಿಸುವ, ವ್ಯಕ್ತಿ ಮತ್ತು ಸಮಾಜದ ಸ್ವಾಯತ್ತತೆ ಮತ್ತು ಸ್ವಾತಂತ್ರö್ಯದ ಸಮಾನ ಕಾಳಜಿಯನ್ನು ತನ್ನೆಲ್ಲ ಬರಹಗಳಲ್ಲಿ ಉಳಿಸಿಕೊಳ್ಳುತ್ತಿರುವ ಕಾವ್ಯಾ ಕಡಮೆ ನಾಗರಕಟ್ಟೆ ಇವಳ ನಾಟಕಗಳ ಸಂಕಲನಕ್ಕೆ ಸ್ವಾಗತ ಭಾಷಣ ಬರೆಯುತ್ತಿರುವದಕ್ಕೆ ಸಂತೋಷವಿದೆ ನನಗೆ. ಇಂದಿನ ಯುವತಲೆಮಾರು, ಮಾರುಕಟ್ಟೆಯ ಧಾವಂತದಲ್ಲಿ ತಲೆ ಮಾರಿಕೊಳ್ಳುತ್ತಿರುವ ಈ ಹೊತ್ತಿನಲ್ಲಿ ಕಾವ್ಯಳಂತಹ ಯುವ ಮನಸ್ಸು ಸೃಷ್ಟಿಸುವ ರೂಪಕಗಳ ಕುರಿತು ಖುಷಿಯಿದೆ ನನಗೆ. ಹೀಗಾಗಿ ತುಸು ಹೆಚ್ಚು ಉತ್ಸಾಹದಿಂದಲೇ ಮಾತನಾಡುತ್ತಿರುವೆ.

ಕಾವ್ಯಾಳ ಪ್ರಕಟವಾಗುತ್ತಿರುವ ಮೊದಲ ನಾಟಕಗಳ ಸಂಕಲನ ಇದು.  ಈ ಸಂಕಲನದಲ್ಲಿ ಕರ್ನಾಟಕ ನಾಟಕ ಅಕಾಡೆಮಿಯ ಪ್ರಥಮ ಪುರಸ್ಕಾರವನ್ನು ಪಡೆದ ‘ಆಟದೊಳಗೊಂದಾಟ’ ಮತ್ತು ದ್ವಿಪಾತ್ರಾಭಿನಯದ ‘ಡೋರ್ ನಂ ೮’ ಎಂಬ ಎರಡು ನಾಟಕಗಳಿವೆ.

ವಸ್ತು ಮತ್ತು ಅದರ ನಿರ್ವಹಣೆಯಲ್ಲಿ ರೂಢಿಗತವಾದ ಸಾಂಸ್ಥಿಕ ಜಡತೆಯನ್ನು ಮೀರುವ, ಕನ್ ವೆನ್ಷನಲ್ ಅಲ್ಲದ ಮಾರ್ಗವೊಂದರ ಪ್ರಾಮಾಣಿಕ ಹುಡುಕಾಟ ಇಲ್ಲಿದೆ. ಆಶಯ ಮತ್ತು ಆಕೃತಿಗಳೆರಡರಲ್ಲೂ ಹೊಸತನ್ನು ಕಾಣಿಸುವ, ಹೊಸ ಆಟ ಕಟ್ಟುವ ಧೈರ್ಯವನ್ನು ಮೈಮೇಲೆಳೆದುಕೊಂಡಿದೆ ಇದು.

‘ಆಟದೊಳಗೊಂದಾಟ’ದಲ್ಲಿ ಮನೆಮನೆಯ ಕತೆಯೇ ಇದೆ. ಕತೆ ತೋರುವ ಬಗೆ ಹೊಸದು. ಕುಟುಂಬ ವ್ಯವಸ್ಥೆಯ ಬಿರುಕುಗಳನ್ನು ಕಾಣಿಸುತ್ತಲೇ ಘಾಸಿಗೊಳ್ಳದಿರುವ ಸಂಬ0ಧಗಳ ಮಾದರಿಯ ಹುಡುಕಾಟ ಇದೆ ಇಲ್ಲಿ. ಬರಹಗಾರ್ತಿಯೊಬ್ಬಳು ರಚಿಸುತ್ತಿರುವ ನಾಟಕವೊಂದರಲ್ಲಿ ಅವಳದೇ ಕುಟುಂಬದ ಪ್ರತಿಬಿಂಬ ರೂಪು ಪಡೆಯಲು ಹವಣಿಸುತ್ತದೆ. ಆದರೆ ಅದನ್ನು ಹಾಗೆಯೇ ಆಗಗೊಡದೇ ಅದನ್ನು ಗತಿಬಿಂಬವಾಗಿಸಲು ಆಕೆ ಯತ್ನಿಸುತ್ತಾಳೆ ಮತ್ತು ರಚನೆ ಮುಂದುವರಿಯುತ್ತಲೇ ಇರುತ್ತದೆ.

ನಾಟಕಕಾರಳ ಕುಟುಂಬ ಮತ್ತು ಅವಳು ಚಿತ್ರಿಸುತ್ತಿರುವ ಕುಟುಂಬದ ಆಚೆಗೆ ಇನ್ನೊಂದು ನೋಟವಿದೆಯಲ್ಲಾ ಅದು ತುಂಬ ಸಹಾನುಭೂತಿಯದು ಇಲ್ಲಿ. ಬರಹಗಾರಳ ಕಣ್ಣಿನಿಂದ ಕುಟುಂಬವೊAದನ್ನು ನೋಡುತ್ತ, ಹಾಗೆ ನೋಡುತ್ತಿರುವ ಬರಹಗಾರ್ತಿಯ ಕುಟುಂಬವನ್ನೂ ಹೊರನಿಂತು ನೋಡುವ ಸಂಯಮ ಕಾವ್ಯಾಳಿಗಿದೆ. ಹೀಗಾಗಿಯೇ ನಾಟಕದ ಬಂಧಕ್ಕೊAದು ಸಂಕೀರ್ಣತೆಯೂ ಒದಗಿದೆ. ಇಲ್ಲಿಯ ಪ್ರತಿ (ಮಹಿಳಾ) ಪಾತ್ರಕ್ಕೂ ತನ್ನ ಬದುಕು, ವ್ಯಕ್ತಿತ್ವ, ಸಮಾಜ ಪಲ್ಲಟಗಳ ಅರಿವಿದೆ; ತಮ್ಮನ್ನು ತಾವು ನಿಂತು ನೋಡಿಕೊಳ್ಳುವ ಗುಣ ಇದೆ. ಸ್ವಾಭಿಮುಖಿ ನೋಟದ ಈ ಗುಣ ಪಾತ್ರಕ್ಕೆ ಮಾತ್ರವಲ್ಲ ಇಡೀ ನಾಟಕದ ಸಂವಿಧಾನಕ್ಕೇ ಇದೆ. ಲೇಖಕಿ ಪಾತ್ರಗಳ ಒಳಹೊಕ್ಕು ಅವನ್ನು ತನ್ನ ರಚನೆಗೆ ಒಗ್ಗಿಸಿಕೊಳ್ಳುತ್ತಿರುವ ಹೊತ್ತಿಗೇನೇ ಆ ಪಾತ್ರಗಳೂ ಅವಳ ಒಳಹೊಕ್ಕು ಆಟ ಕಟ್ಟುವ ವಿಧಾನವೇ ಘೋಷಣೆಯ ಮಟ್ಟದಿಂದ ನಾಟಕವನ್ನು ಎತ್ತಿವೆ. ಸಂಬAಧಗಳ ಸರಿ ತಪ್ಪುಗಳ ನಿರ್ಣಯಗಳ ನಡುವಿನ ಸತ್ಯದ ಹುಡುಕಾಟ ಮನೆಮನೆಯ ಕತೆಯ ಕಪ್ಪುಬಿಳುಪಿನ ಹಾದಿಯಿಂದ ಇವಳನ್ನು ತಪ್ಪಿಸಿವೆ.

ಕನ್ನಡ ನಾಟಕ ಪರಂಪರೆಯೊAದಿಗೆ ಕಾವ್ಯ ಸಂವಾದಿಸಿದ ಕ್ರಮದಲ್ಲಿಯೂ ವೈಶಿಷ್ಟö್ಯವಿದೆ. ಕಾರ್ನಾಡರ ‘ಮದುವೆ ಆಲ್ಬಂ’ ಮುಂತಾದ ಕುಟುಂಬ ನಾಟಕಗಳಿಗಿಂತಲೂ ಈ ನಾಟಕಗಳು ಸೂಕ್ಷö್ಮವಾಗಿವೆ. ಲಂಕೇಶರು ಕುಟುಂಬ ವ್ಯವಸ್ಥೆಯನ್ನು ಮನುಷ್ಯನ ಎಲ್ಲ ಕ್ಷÄದ್ರತೆಗಳ ಜತೆಗಿಟ್ಟು ನೋಡುತ್ತಾರೆ. ಅವರು ಕಟ್ಟಿದ ‘ಮನೆ ಮನೆ ಕತೆ’ ಹೊಸ ಮಾದರಿಯದೇ ಆಗಿದೆಯಾದರೂ ಅವರ ಸ್ವಭಾವವೇ ಆಗಿಹೋದ ಸಿನಿಕತೆಯ ನೋಟದಾಚೆ ಅವು ಬೆಳೆಯುವದಿಲ್ಲ. ಕಾವ್ಯಳ ರಚನೆ ಇದನ್ನೂ ಮೀರಿದೆ. ನಾಟಕವು ನಾಟಕದ ಕುರಿತು, ಪ್ರಕಾರವು ತನ್ನ ಪ್ರಕಾರದ ಕುರಿತು ಮಾಡಿಕೊಳ್ಳುವ ವಿಶ್ಲೇಷಣೆಯೂ ಪ್ರತಿಮಾತ್ಮಕವಾಗಿವೆ. ನಾಟಕಕಾರ, ಕವಿ, ಚಿತ್ರಕಾರ ಹೀಗೇ ಬೇರೆಬೇರೆ ‘ಏಸ್ಥೆಟಿಕ್' ನ ಪಾತ್ರಗಳÀನ್ನು ಬಳಸಿಕೊಂಡಿರುವದರಿAದ ಆಯಾ ಕ್ಷೇತ್ರದ ಸಾಮರ್ಥ್ಯ ಮೂಲವನ್ನೂ ಒಳಗೊಳ್ಳಲು ಇದು ಪ್ರಯತ್ನಿಸಿದೆ. ಬಹುತೇಕ ವಾಸ್ತವವಾದಿ ನಾಟಕಗಳು ಕಾಲ ದೇಶಗಳ ಹಂಗನ್ನು ದಾಟುವದಿಲ್ಲ. ಆದರೆ ಕಾವ್ಯ, ವಾಸ್ತವವನ್ನು ಹಿಡಿಯುವ ಕ್ರಮವೇ ಕವಿತೆಯದಾಗಿರುವದರಿಂದ ಇದಕ್ಕೊಂದು ಜಿಗಿತವಿದೆ. ಈ ಮಾತನ್ನು ಇಲ್ಲಿಯ ಎರಡೂ ನಾಟಕಗಳಿಗೂ ಅನ್ವಯಿಸಿ ಹೇಳಬಹುದು.

ಆಟದ ಒಳ ಹೊಕ್ಕು ಆಟವನ್ನು ಕಾಣುತ್ತ ಅದನ್ನು ಕಟ್ಟ ಹೊರಡುವ ಒಂದು ಧ್ಯಾನಸ್ಥ ದಾರಿಯತ್ತ ಕಾವ್ಯಾ ಚಲಿಸುತ್ತಿದ್ದಾಳೆ. ಇಲ್ಲಿ ಅದು ಸಿದ್ಧಿಸಿದೆ ಅಂತಲ್ಲ. ಹಾದಿ ಸರಿಯಾಗಿದೆ ಅಂತ. ಈ ಪಯಣದ ಹಾದಿಯಲ್ಲಿ ತಿದ್ದಿಕೊಳ್ಳುವದಕ್ಕೆ ಅಗತ್ಯವಾದ ಕೆಲ ಸಂಗತಿಗಳೂ ಇವೆ. ನಾಟಕ ಇನ್ನಷ್ಟು ವಿಲಂಬಿತ ಗತಿಯನ್ನು ಬೇಡುತ್ತದೆ. ಆಟ ನಿಧಾನಕ್ಕೇ ಶುರುವಾಗುತ್ತದೆ ಆದರೆ ಬೆಳೆಯುವ ಸಂದರ್ಭದಲ್ಲಿ ತುಸು ಅವಸರ ಕಾಣಿಸುತ್ತದೆ. ಇನ್ನಷ್ಟು ಬೆಳವಣಿಗೆ ಪ್ರತಿ ಸನ್ನಿವೇಶಕ್ಕೂ ಅಗತ್ಯ ಅನಿಸುತ್ತದೆ. ಪಾತ್ರಗಳಿಗೆ ಅವು ಈಗಿನ ಮನಸ್ಥಿತಿ ತಲುಪಲು ತುಸು ಕಾಲಾವಕಾಶ ಬೇಕಿತ್ತೆನಿಸುತ್ತದೆ. ನಾವಿರುವುದೇ ಅವಸರದ ಕಾಲವಾದ್ದರಿಂದ, ಅವಸರ ಕಾಲದ ಉತ್ಪನ್ನಗಳೂ ಸಾವಧಾನ ಸಾಧಿಸಿಕೊಳ್ಳುವದು ಕಷ್ಟ ಎನ್ನುತ್ತಾವೇನೋ ಇವು ಗೊತ್ತಿಲ್ಲ. ಅಪ್ಪಟ ಆಧುನಿಕ ಕಾಲದ ಲಯವು ಇದೇ ಏನೋ? ಆದರೂ ಆಧುನಿಕ ಕಾಲದ ಅವಸರದ ಬದುಕಿನ ಪ್ರವೃತ್ತಿಗಳನ್ನು ಮನಗಾಣಿಸಲು ಸಂವಹನದ ಅಗತ್ಯಕ್ಕಾಗಿ ತುಸು ಸಾವಧಾನ ಬೇಕು. ಇಲ್ಲಿ ಕೆಲವೆಡೆ ರಂಗ ಸೂಚನೆಗಳು ತುಸು ಹೆಚ್ಚೇ ಇವೆ. ಕೆಲವೆಡೆ ಎಲ್ಲವನ್ನೂ ರೂಪಕವಾಗಿಸುವ ತಹತಹವೂ ಇದೆ. ಆದರೂ ರೇಷ್ಮೆ ಬಟ್ಟೆಯೊಳಗೆ ಸುತ್ತಿಟ್ಟ ಹೊಲಸನ್ನ ಸುಗಂಧ ಪೂಸಿ ಮರೆಮಾಚುವ ಸ್ಥಿತಿಯ ಸಂಬAಧಗಳ, ವಿವಾಹದಂತಹ ಸಾಂಸ್ಥಿಕ ವ್ಯವಸ್ಥೆಯ ಪ್ರತಿಮೆಯನ್ನ ಕ್ಲಾಸಿಕ್ ಐರನಿಯಾಗಿ ರೂಪಿಸಲು ಹಾಗೂ ಅವನ್ನು ಕಟ್ಟಿಕೊಡಲು ಬಳಸಿದ ಮಾದರಿ ‘ಸುಡುವ ದಿವ್ಯವ ಹಿಡಿವ' ಘನತೆಯ ಯತ್ನವೇ ಸರಿ. 'ಬದುಕಿನಲ್ಲಿಲ್ಲದ ಅಂತ್ಯವನ್ನು ಕತೆಯಲ್ಲಿ ಕಾಣಹೊರಡುವದರಿಂದಲೇ ಕೃತಿಗಳಿಗೆ ಅಂತ್ಯ ಹುಡುಕೋದು ಕಷ್ಟ, 'ಮನುಷ್ಯ ಸಹಜವಾದ ಯಾವ ಗುಣವೂ ಕೆಟ್ಟದ್ದಲ್ಲ' ಎಂಬ ವಿವೇಕ ಕಾವ್ಯಳ ಬೆನ್ನಿಗಿದೆ ಅನ್ನೋದೇ ಸಂತೋಷ.

ದ್ವಿಪಾತ್ರಾಭಿನಯದ ‘ಡೋರ್ ನಂ ೮’ ಇನ್ನೂ ಸಂಕೀರ್ಣವಾದ ಹೊಸ ಕಾಲದ ಪಠ್ಯದ ಸಮರ್ಥ ಪ್ರತಿನಿಧಿ ಅನಿಸುತ್ತದೆ. ಪುರಾಣ ಕಾಲದಿಂದ ಇಂದಿನವರೆಗಿನ ಗಂಡು ಮನಸ್ಥಿತಿಯನ್ನು ಅದರೆಲ್ಲ ತ್ರಸ್ತ ಗುಣವನ್ನು ಇಲ್ಲಿಯೂ ಹೊಸದೊಂದು ಆಟದಲ್ಲಿ ಕಟ್ಟಲಾಗಿದೆ. ಹಲವು ಗೊಲ್ಲರ ತುಟಿ ತಾಗಬೇಕಾದ ಕೊಳಲಿನ ಅಗತ್ಯದ ಕುರಿತು ನಾಟಕ ಮಾತನಾಡುತ್ತದೆ. 

ನಗರವೊಂದರ ಚಾಳದಲ್ಲಿ ಆಕಸ್ಮಿಕವಾಗಿ ಭೇಟಿಯಾದ ಕೃಷ್ಣ ಅರ್ಜುನ ವೇಷಧಾರಿಗಳಿಬ್ಬರ ನಡುವಿನ ಮಾತು-ಕತೆಯೇ ಇದರ ಹಂದರ. ಈ ಮಾತುಕತೆಯಲ್ಲಿ ಸಿಗುವ ಕಥನ ಸಶಕ್ತವಾದದ್ದು. ಈ ವೇಷಧಾರಿ ಕೃಷ್ಣ ಪಾರ್ಥರ ನಡುವೆ ಬದುಕಿನ ಭಗವದ್ಗೀತೆಯೇ ನಡೆದುಹೋಗುತ್ತದೆ.

ನಿಜವಾಗಿಯೂ ಕಲೆಯನ್ನು ಆಸ್ವಾದಿಸೋದು, ಅಭಿವ್ಯಕ್ತಿಸೋದು ಅಂದರೆ ಅದನ್ನು ಜೀವಿಸೋದು ಅಂತಾನೇಅರ್ಥ. ಅದಕ್ಕಾಗಿಯೇ ಸಮಾಜಕ್ಕೆ ಕಲೆಯ ಸಂಗಾತಬೇಕು. ‘ನಾನು ಬೇರೆ ಬೇರೆಬೇರೆ ಪಾತ್ರಗಳನ್ನು ಜೀವಿಸಿದ್ದೀನಿ. ಹಾಗಾಗಿ ಅವರೆಲ್ಲರನ್ನೂ ರ‍್ಥಮಾಡಿಕೊಳ್ಳಬಲ್ಲೆ’. . . ಒಮ್ಮೆ ಸೀರೆಯುಟ್ಟು ನೋಡು. ಹೆಣ್ಣು ಅರ್ಥ ಆದರೂ ಆದಾಳು ಅಂತಾನೆ ಇಲ್ಲಿಯ ಕೃಷ್ಣ. ಹೆಣ್ಣು, ಗಂಡಿನ ಯಾವ ಡ್ರೆಸ್ ಬೇಕಾದರೂ ಹಾಕ್ತಾಳೆ. ಅದಕ್ಕೇ ಇರಬೇಕು ಗಂಡಿನ ಯಾವ ಪಾತ್ರವನ್ನೂ ಅವಳು ಜೀವನದಲ್ಲಿ ನಿರ್ವಹಿಸ್ತಾಳೆ. ಆದರೆ ಗಂಡು? ಸೀರೆ ಉಡೋದನ್ನೂ ನಿರಾಕರಿಸ್ತಾನೆ; ಹೆಣ್ಣಾಗೋಕೆ ಆಗ್ತಾನೇ ಇಲ್ಲ.

ಇಲ್ಲಿಯ ಪ್ರಧಾನ ಭೂಮಿಕೆಯಲ್ಲಿ ‘ಪರಿಮಳ’ ಎನ್ನುವ ಹೆಣ್ಣೊಬ್ಬಳಿದ್ದಾಳೆ. ಆಕೆ ರಂಗದ ಮೇಲೆ ಕಾಣಿಸಿಕೊಳ್ಳೋದೇ ಇಲ್ಲ. ಇಲ್ಲದೆಯೂ ಪಾತ್ರವಾಗುವ ಪರಿ ಅಚ್ಚರಿ. ಪ್ರೀತಿಸಿದ ಪಾರ್ಥ ಅದೆಷ್ಟು ಬೇಗ ಅವಳನ್ನು ಸಂಶಯಿಸುತ್ತಾನೆ. ಆದರೆ ಬ್ರಹ್ಮಚಾರಿ ಕೃಷ್ಣ ಅವಳನ್ನು ಅರ್ಥಮಾಡಿಕೊಂಡರ‍್ತಾನೆ. ಮನೆಯ ಕೀಲಿಕೈ ಅದು ಮನಸಿನ ಕೀಲಿಕೈ. ಪಾರ್ಥನಿಗೆ ಅರಿವು ಮೂಡಿದ ಮೇಲೆ ಸಿಗತ್ತೆ. ಇಲ್ಲಿಯ ಕೀಲಿಕೈ ಹೆಣ್ತನವನ್ನೂ ಸೀರೆ, ತಡೆಗಳನ್ನು  ಪ್ರತಿಬಿಂಬಿಸುತ್ತದೆ. ಭಗವದ್ಗೀತೇಲಿ ಕೃಷ್ಣ ಪಾರ್ಥನಿಗೆ ಪುರುಷಾರ್ಥವನ್ನು  ಬೋಧಿಸುತ್ತಾನೆ. ಈ ನಾಟಕದ ಕೃಷ್ಣ ಪಾರ್ಥವೇಷಧಾರಿಗೆ ಬದುಕಿನ ಪಾಠವನ್ನು ಹೇಳಿಕೊಡ್ತಾನೆ. ಕೊನೆಯಲ್ಲಿ ಪಾರ್ಥವೇಷಧಾರಿ ಕೃಷ್ಣನ ವೇಷ ತೊಟ್ಟು ಅವನಂತೆಯೇ ಕೊಳಲೂದುತ್ತಾನೆ. ನಾಟಕ  ಹೆಣ್ಣುಗಂಡಿನ ವಿಶ್ವರೂಪದರ್ಶನ ಮಾಡಿಸುತ್ತದೆ.

ಒಪ್ಪಿತವಾದ, ರೂಢಿಗತ ಕತೆ ಹೇಳುವ ಸಂಪ್ರದಾಯದ ಮಾರ್ಗವನ್ನು ಯಾವ ಅಬ್ಬರವೂ ಇಲ್ಲದಂತೆ ಸಹಜ ಅನಿಸುವಂತೆ ಕಳಚುತ್ತ ಹೋಗುತ್ತಾಳೆ ಕಾವ್ಯಾ. ಬದುಕನ್ನ,  ಸಮಾಜವನ್ನ, ವ್ಯವಸ್ಥೆಯನ್ನ ಅದÀರ ಜಡತೆಗಾಗಿ ಲೇವಡಿ ಮಾಡಿದವರ, ವ್ಯಂಗ್ಯವಾಗಿಸಿದವರ, ಸಾಕಷ್ಟು ಸಿನಿಕತೆಯಿಂದ ಬದುಕ ನೋಡಿದವರ ಪರಂಪರೆಯೇ ಇದೆ ನಮ್ಮಲ್ಲಿ. ಕಾವ್ಯಾ ಭಿನ್ನವಾಗುವದು ಇಲ್ಲಿಯೇ. ಬದುಕಿನ ಆಶಯದ ಕುರಿತು, ಭರವಸೆಗಳ ಕುರಿತು ಇವಳು ಸಿನಿಕಳಾಗುವದಿಲ್ಲ. ‘ಮೈಗೆ ಆತುಕೊಳ್ಳುವದು ಹೋಗಲಿ ಕೈಗೆ ಕೈ ತಾಗಿಸದೆಯೂ ನಾವು ಬಹುದೂರ ನಡೆಯಬಲ್ಲೆವು ಜತೆಗೆ’ ಎನ್ನುವಷ್ಟು ಧನಾತ್ಮಕ ಧೋರಣೆ ಇವಳÀಲ್ಲಿದೆ. ಸಂಪ್ರದಾಯದ ಒಜ್ಜೆಯ ನಡೆಯನ್ನು ಮುರಿಯುವದರಲ್ಲಿ ತೋರುವಷ್ಟೇ ಉತ್ಸಾಹವನ್ನು, ರ‍್ಯಾಯವನ್ನು ಕಟ್ಟುವ ಕಾಯಕದಲ್ಲಿಯೂ ತೋರಿಸುತ್ತಾಳೆ ಈಕೆ ಮತ್ತು ಈ ಕಾಲದ ರ‍್ಯಾಯಗಳನ್ನು ತೀಕ್ಷ÷್ಣವಾಗಿ ವಿಮರ್ಶಿಸಬೇಕಾದ ಅಗತ್ಯವನ್ನೂ ಮುಂದಿಡುತ್ತಾಳೆೆ. ‘ಜೀನ್ಸ್ ತೊಟ್ಟ ದೇವರನ್ನು ಚಿತ್ರಿಸಬಲ್ಲ ಮತ್ತು ಅದು ವ್ಯಂಗ್ಯೋಪಮೆಯಾಗದAತೆ ನೋಡಬಲ್ಲ ವಿವೇಕ,  ಕಾಲದ ಕರೆಗೆ ಕಂಪಿನ ಕರೆಯ ಸಾಂಗತ್ಯವನ್ನು ಯಾವತ್ತೂ ಮೈ ಒಡೆಯದ ಹಾಗೆ ಕಾಪಿಟ್ಟುಕೊಳ್ಳುವ ಗುಣ ಇವಳ ವಿಶೇಷ. 

ಇಲ್ಲಿಯ ನಾಟಕಗಳ ಆಕಾರಕ್ಕೆ ಒಂದು ಕಾವ್ಯದ ಗುಣ ಇದೆ. ರೂಢಿಯಾಗಿರೋ ಮನೆ ಸೆಟ್ಟು ಇತ್ಯಾದಿಗಳಿಂದ ತಪ್ಪಿಸಿ ಜಿಗಿಯುವ ಗುಣವಿದೆ. ರಿಯಲಿಸಂ ನಿಂದ ಎಕ್ಸ್ಪ್ರೆಷನಿಸಂಗೆ ಅಥವಾ ರ‍್ರಿಯಲಿಸಂಗೆ ಜಿಗಿತ ಇದೆ. ಈ ಹೊಸ ಮಾದರಿ ಪೂರ್ಣವಾಗಿದಕ್ಕಿಯೇ ಹೋಗಿದೆ ಅಂತಲ್ಲ ಆದರೆ ಆಟವಂತೂ ಶುರುವಾಗಿದೆ; ಮತ್ತು ಸರಿಯಾಗಿಯೇ ಶುರುವಾಗಿದೆ. ಧ್ಯಾನಕ್ಕೆ ತಾರೀಕಿನ ಹಂಗಿಲ್ಲ ಎನ್ನುವದನ್ನು ಯಾವತ್ತೋ ಅರ್ಥ ಮಾಡಿಕೊಂಡ ಕಾವ್ಯಾ ಇನ್ನೂ ಹೊಸ ಹೊಸ ಆಟಗಳನ್ನು ಸಶಕ್ತವಾಗಿಯೇ ಕಟ್ಟಬಲ್ಲಳು. ಶುಭಾಶಯಗಳು. ಕಾವ್ಯಾ

                                                              

No comments:

Post a Comment