ನ್ಯಾಯಮೂರ್ತಿ ಹೆಚ್.ಎನ್. ನಾಗಮೋಹನದಾಸ ಅವರ ಸಂವಿಧಾನದ ಓದು ಪುಸ್ತಕದ ಮೊದಲ ಮುದ್ರಣ ಬಿಡುಗಡೆ ಮತ್ತು
'ಸಂವಿಧಾನ ಓದು' ಅಭಿಯಾನದ ಉದ್ಘಾಟನೆ ಒಟ್ಟಿಗೆ ನಡೆದದ್ದು 2018ರ ಅಗಸ್ಟ 25, ಬೆಂಗಳೂರಿನಲ್ಲಿ. ಅದಕ್ಕಿಂತ ಕೆಲವು ದಿನ/ತಿಂಗಳ ಮೊದಲು ಅಥವಾ ಅದೇ ಸಂದರ್ಭದಲ್ಲಿ ಕೆಲವು ದುಷ್ಕರ್ಮಿಗಳು ಸಂವಿಧಾನವನ್ನು ಸುಟ್ಟು ಹಾಕುವ ಕಾರ್ಯಕ್ರಮ ನಡೆಸಿದರು. ಹಲವರ ಒತ್ತಾಯದ ನಂತರ ಅವರ ಮೇಲೆ ಒಂದು ಕೇಸ್ ಹಾಕಲಾಯಿತು. ಶಿರಸಿಯಲ್ಲಿ ಕೆಲವು ಧರ್ಮಾಂಧರು 'ಸಂವಿಧಾನ ನಡೆ' ಕಾರ್ಯಕ್ರಮದ ಮೆರವಣಿಗೆ ನಡೆಸಿದ ರಸ್ತೆ ಮತ್ತು ಸಾರ್ವಜನಿಕ ಸಭೆ ನಡೆದ ಸಭಾಭವನಕ್ಕೆ ಸಗಣಿ ನೀರು, ಗೋಮೂತ್ರ ಹಾಕಿ ಶುದ್ದೀಕರಿಸಿರುವುದಾಗಿ(!?) ಹೇಳಿದರು. 'ನಾವು ಅಧಿಕಾರಕ್ಕೆ ಬಂದಿದ್ದೆ ಸಂವಿಧಾನ ಬದಲಿಸಲಿಕ್ಕೆ' ಎಂದು ಜನಪ್ರತಿನಿಧಿಯೊಬ್ಬರು ಕೂಗಾಡಿದರು...... ಇವೆಲ್ಲವೂ ಒಂದೆಡೆ ಚರ್ಚೆಯಾಗುತ್ತಿರುವಾಗಲೇ 'ಸಂವಿಧಾನ ಓದು' ಅಭಿಯಾನವನ್ನು 'ಸಹಯಾನ (ಡಾ. ಆರ್.ವಿ.ಭಂಡಾರಿ ನೆನಪಿನ ಸಂಸ್ಕೃತಿ ಅಧ್ಯಯನ ಕೇಂದ್ರ, ಕೆರೆಕೋಣ) ಮತ್ತು 'ಸಮುದಾಯ ಕರ್ನಾಟಕ' ಜಂಟಿಯಾಗಿ ಕರ್ನಾಟಕದಾದ್ಯಂತ ಪ್ರಾರಂಭಿಸಿದವು.
ಪ್ರಜ್ಞಾವಂತ ಜನರು, ಸಂಘಟನೆಗಳು, ಶಿಕ್ಷಣ ಸಂಸ್ಥೆಗಳು ಸ್ವಯಂ ಪ್ರೇರಿತರಾಗಿ ಈ ಅಭಿಯಾನದ ಸಹಯಾನಿಗಳಾದರು. ಕರ್ನಾಟಕದ ತುಂಬಾ ಎಲ್ಲಾ ಜಿಲ್ಲೆಗಳಲ್ಲಿ ಈ ಅಭಿಯಾನದ ಕಾರ್ಯಾಗಾರ ನಡೆದವು. ಕೆಲವು ಜಿಲ್ಲೆಗಳಲ್ಲಂತೂ ಹಲವು ಬಾರಿ ನಡೆದವು. ಹಲವು ವಿಶ್ವವಿದ್ಯಾಲಯಗಳಲ್ಲಿ ಎನ್.ಎಸ್.ಎಸ್ ಅಡಿ “ಸಂವಿಧಾನ ಓದು' ಕಾರ್ಯಗಾರ ಹಮ್ಮಿಕೊಳ್ಳಲಾಯಿತು. ಕರ್ನಾಟಕದ ಕಾನೂನು ಸೇವೆಗಳ ಪ್ರಾಧಿಕಾರ ಎಲ್ಲಾ ಜಿಲ್ಲೆಗಳಲ್ಲಿ, ಎಲ್ಲಾ ತಾಲೂಕುಗಳಲ್ಲಿ ಈ ಕಾರ್ಯಕ್ರಮ ನಡೆಸುವ ಮಹತ್ವದ ತೀರ್ಮಾನ ಕೈಗೊಂಡಿತು. ಬಹುಶಃ ತಾವೂ ಈ ಅಭಿಯಾನದಲ್ಲಿ ಒಮ್ಮೆಯಾದರೂ ಪಾಲ್ಗೊಂಡಿದ್ದೀರಿ ಮತ್ತು ಅದರ ಯಶಸ್ಸಿನಲ್ಲಿ ಪಾಲುದಾರರಾಗಿದ್ದೀರಿ ಎಂದುಕೊಂಡಿದ್ದೇವೆ.
ಕರ್ನಾಟಕದ ಹೈಕೋರ್ಟಿನ ನ್ಯಾಯಾಧೀಶರಾಗಿ ನಿವೃತ್ತರಾದ ನಂತರ ಈ ಅಭಿಯಾನದ ನೇತೃತ್ವವಹಿಸಿದ್ದರಿಂದ ಅಭಿಯಾನಕ್ಕೆ ಆನೆಬಲ ಬಂದಂತಾಯಿತು. ಈವರೆಗೆ ಸರಿ ಸುಮಾರು400-450 ಕಾರ್ಯಕ್ರಮಗಳು ಕರ್ನಾಟಕದಲ್ಲಿ ನಡೆದವು. ಕನ್ನಡದ ಪ್ರಕಾಶನದ ಇತಿಹಾಸದಲ್ಲಿಯೇ ದಾಖಲೆ ಅನ್ನುವಷ್ಟರ ಮಟ್ಟಿಗೆ ಈ ಪುಸ್ತಕ 50 ಮುದ್ರಣ ಕಂಡಿದೆ.
No comments:
Post a Comment