Tuesday, 20 April 2021

ಹೊರ ರಾಜ್ಯದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಕಡಿತ ಸಲ್ಲದು- ಚಿಂತನ ಉತ್ತರ ಕನ್ನಡ, ಸಹಯಾನ

 ಹೊರ ರಾಜ್ಯದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಕಡಿತ ಸಲ್ಲದು- ಚಿಂತನ ಉತ್ತರ ಕನ್ನಡ, ಸಹಯಾನ 

ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಪ್ರತಿವರ್ಷ ಹೊರನಾಡಿನಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವ ಮತ್ತು ಕನ್ನಡ ಮಾಧ್ಯಮದಲ್ಲಿ ಹೆಚ್ಚು ಅಂಕ ಗಳಿಸಿದ ರಾಜ್ಯದ ವಿದ್ಯಾರ್ಥಿಗಳಿಗೆ ಪುರಸ್ಕಾರ ಮತ್ತು ಧನ ಸಹಾಯ ಮಾಡುವ, ಕನ್ನಡದಲ್ಲಿ ತೀರ್ಪು ನೀಡಿದ ನ್ಯಾಯಾಧೀಶರಿಗೆ ಗೌರವ ನೀಡುವ ... ಇತ್ಯಾದಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿತ್ತು. ಆದರೆ ಪ್ರಾಧಿಕಾರವು ಅನುದಾನದ ಕೊರತೆಯಿಂದ ಇಂತಹ ಎಲ್ಲಾ ಪ್ರೋತ್ಸಾಹಕ ಕಾರ್ಯಕ್ರಮಗಳನ್ನೂ ಕೈಬಿಡುವ ತೀರ್ಮಾನ ತೆಗೆದುಕೊಂಡಿರುವುದು ದುರಾದೃಷ್ಟಕರ. ಅದರಲ್ಲೂ ಕನ್ನಡ ಸಾಹಿತ್ಯ- ಸಂಸ್ಕೃತಿ- ಭಾಷೆಯ ಅಭಿವೃದ್ಧಿಗೆ ಅಗತ್ಯವಿರುವ ಧನ ಸಹಾಯವನ್ನು ಸರ್ಕಾರ ಕಡಿತ ಮಾಡಿದ್ದನ್ನೂ ಕೂಡ ಮರುಪರಿಶೀಲಿಸುವಂತೆ ಚಿಂತನ ಉತ್ತರ ಕನ್ನಡ ಮತ್ತು ಸಹಯಾನ ಕೆರೆಕೋಣ ಒತ್ತಾಯಿಸುತ್ತವೆ. 

ಕನ್ನಡ ಅಭಿವೃದ್ಧಿ ಪ್ರಾಧಿಕಾರ ರಚನೆಯಾಗಿದ್ದೇ ಕನ್ನಡ ಭಾಷೆ ಸಾಹಿತ್ಯ ಕಲೆ ಸಂಸ್ಕೃತಿಯನ್ನೂ ಒಳಗೊಂಡAತೆ ನಾಡು ನುಡಿಯ ಹಿತಾಸಕ್ತಿಯ ರಕ್ಷಣೆಗಾಗಿ. ಹಾಗೆಯೇ ಅಧಿಕಾರಕ್ಕೆ ಬರುವ ಎಲ್ಲಾ ಸರ್ಕಾರಗಳೂ ಕನ್ನಡ ಅಭಿವೃದ್ಧಿಯ ಕೆಲಸಕ್ಕೆ ಬದ್ಧವಾಗಿರುವುದಾಗಿಯೂ, ಕನ್ನಡದ ಕೆಲಸಕ್ಕೆ ಹಣಕಾಸಿನ ಕೊರತೆ ಎಂದೂ ಆಗದೆಂದು ಭರವಸೆ ನೀಡಿದ್ದನ್ನು ಮರೆತಿರುವುದು ಖಂಡನಾರ್ಹ. ಈಗಾಗಲೇ ದೇಶದ ಹಲವು ರಾಜ್ಯಗಳ ವಿಶ್ವವಿದ್ಯಾಲಯಗಳಲ್ಲಿ ಕನ್ನಡ ಪೀಠಗಳಿವೆ, ಅಧ್ಯಯನ ಕೇಂದ್ರಗಳಿವೆ, ಅಲ್ಲಿ ಕನ್ನಡ ಕಲಿಕೆ ಮತ್ತು ಸಂಶೋಧನೆಯ ಕೆಲಸ ನಡೆಯುತ್ತಿದೆ. ಇದು ಕನ್ನಡ ನುಡಿಯ ವಿಸ್ತರಣೆಯ ದೃಷ್ಟಿಯಿಂದ ತೀರಾ ಮಹತ್ವದ ಕೆಲಸ. ಹೊರ ರಾಜ್ಯದಲ್ಲಿ ಓದುವ ವಿದ್ಯಾರ್ಥಿಗಳಿಗೆ ಧನಸಹಾಯವಾಗಿ ವಿದ್ಯಾರ್ಥಿವೇತನ ನೀಡುವುದು ಕೂಡ ಕನ್ನಡದ ಅಭಿವೃದ್ಧಿಯ ಒಂದು ಭಾಗವೇ ಆಗಿದೆ. ಹೀಗೆ ಅಲ್ಪ ಮೊತ್ತದ ವಿದ್ಯಾರ್ಥಿವೇತನವನ್ನು ನಿಲ್ಲಿಸಿರುವುದರಿಂದ ಅವರ ಕಲಿಕೆ ಮೊಟಕಾಗುತ್ತದೆ. ಅಲ್ಲಿಯ ಕನ್ನಡ ವಿಭಾಗಗಳೇ ಮುಚ್ಚಿ ಹೋಗುವ ಅಪಾಯ ಎದುರಾಗುತ್ತದೆ. ಇದರ ಬದಲು ವಿದ್ಯಾರ್ಥಿ ವೇತನದ ಮೊತ್ತವನ್ನೂ ಈಗಿರುವ ಪ್ರಮಾಣಕ್ಕಿಂತ ಹೆಚ್ಚಿಸಲು ಹೆಚ್ಚಿನ ಅನುದಾನವನ್ನು ಬಿಡುಗಡೆ ಮಾಡಲು ಒತ್ತಾಯಿಸುತ್ತೇವೆ. 

ಹಾಗೆಯೇ ರಾಜ್ಯದಲ್ಲಿ ಕನ್ನಡ ಮಾಧ್ಯಮದಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ತಾಲೂಕಾವಾರು ನೀಡುತ್ತಿರುವ ಪ್ರೋತ್ಸಾಹ ಮತ್ತು ಧನ ಸಹಾಯವೂ ಕೂಡ ಹಲವು ಬಡ ವಿದ್ಯಾರ್ಥಿಗಳ ಕಲಿಕೆಗೆ ನೆರವಾಗಿದೆ. ಕನ್ನಡ ಕಲಿಕೆಯ ಕುರಿತು ಅವರಲ್ಲಿ ಆಸಕ್ತಿ ಬೆಳೆಸಿದೆ. ಈ ಪ್ರೋತ್ಸಾಹ ಧನವನ್ನು ಇನ್ನಷ್ಟು ವಿದ್ತರಿಸಬೇಕಾದ ಅಗತ್ಯವಿರುವ ಸಂದರ್ಭದಲ್ಲಿ ಕನ್ನಡ ಅಭಿವದ್ಧಿ ಪ್ರಾಧಿಕಾರವು ಹಣಕಾಸಿನ ಕೊರತೆಯ ನೆಪವೊಡ್ಡಿ ಈ ಕೆಲಸವನ್ನೇ ನಿಲ್ಲಿಸುತ್ತಿರುವುದು ಸರಿಯಾದ ಕ್ರಮವಲ್ಲ. ಪ್ರಾಧಿಕಾರವು ಕನ್ನಡದ ಮನಸ್ಸುಗಳನ್ನು ಒಟ್ಟು ಸೇರಿಸಿ ಸಮಾಲೋಚಿಸಿ ಸರ್ಕಾರಕ್ಕೆ ಮನವರಿಕೆ ಮಾಡಿ, ಒತ್ತಡ ತಂದು ಹಣ ಬಿಡುಗಡೆಯ ಕೆಲಸ ಮಾಡಿಸಬೇಕೇ ಹೊರತೂ ಹಣ ನೀಡಿಲ್ಲವೆಂದು ಕಾರ್ಯಕ್ರಮಗಳನ್ನೇ ಕೈಬಿಡುವುದಲ್ಲ. ಮತ್ತು ಪ್ರಾಧಿಕಾರಕ್ಕೆ ಈಗಿರುವ ಎರಡು ಕೋಟಿಯಿಂದ ಕನಿಷ್ಟ ಹತ್ತು ಕೋಟಿ ರೂಪಾಯಿ ಅನುದಾನವನ್ನು ಹೆಚ್ಚಿಸುವುದು ಸರ್ಕಾರಕ್ಕೆ ದೊಡ್ಡ ಹೊರೆಯೇನೂ ಆಗದು. ಈ ಹಣದಲ್ಲಿ ಪ್ರಾಧಿಕಾರವು ಕನ್ನಡದ ಚಿಂತಕರು ಸಂಘಟಕರು ಮತ್ತು ಕಲಾವಿದರೊಂದಿಗೆ ಸಮಾಲೋಚಿಸಿ ಕನ್ನಡ ಕಟ್ಟುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಮುಂದಾಗಬೇಕೆAದು ಒತ್ತಾಯಿಸುತ್ತೇವೆ. 


No comments:

Post a Comment