Thursday, 26 December 2013
Sunday, 22 December 2013
‘ನುಡಿಸಿರಿ’ಗೆ ಪರ್ಯಾಯವಾದ ‘ಜನನುಡಿ’ -ಹೊಮ್ಮುತ್ತಿರುವ ಜನಪರ ಪರ್ಯಾಯದ ಸಂಕೇತ - ವಸಂತ
‘ನುಡಿಸಿರಿ’ಗೆ ಪರ್ಯಾಯವಾದ ‘ಜನನುಡಿ’ -ಹೊಮ್ಮುತ್ತಿರುವ ಜನಪರ ಪರ್ಯಾಯದ ಸಂಕೇತ
*ವಸಂತ
‘ನುಡಿಯು ಸಿರಿಯಲ್ಲ, ಬದುಕು’ ಎಂಬ ಘೋಷವಾಕ್ಯದೊಂದಿಗೆ ಡಿಸೆಂಬರ್ 14, 15 ರಂದು ಮಂಗಳೂರಿನಲ್ಲಿ ನಡೆದ ‘ಜನನುಡಿ’, ಅದರಲ್ಲಿ ಭಾಗವಹಿಸಿದ ಕೆಲವರಿಗೆ 1980ರ ದಶಕದ ಬಂಡಾಯದ ಸ್ಥಾಪನಾ ಸಮ್ಮೇಳನವನ್ನು ನೆನಪಿಸಿದರೆ, ಇನ್ನೂ ಕೆಲವರಿಗೆ 12ನೇ ಶತಮಾನದ ಅನುಭವ ಮಂಟಪವನ್ನು ನೆನಪಿಸಿತಂತೆ. ಹಲವರಿಗೆ ಒಂದು ‘ಚಾರಿತ್ರಿಕ’ ಘಟನೆಯಲ್ಲಿ ಭಾಗವಹಿಸಿದ ರೋಮಾಂಚನವನ್ನು ಉಂಟು ಮಾಡಿತಂತೆ. ರಾಜ್ಯದ ನಾಲ್ಕೂ ಮೂಲೆಗಳಿಂದ ಬಂದ ಹಲವು ಪ್ರಗತಿಪರ ಲೇಖಕರು, ಕಲಾವಿದರು, ಚಿಂತಕರು ಮತ್ತು ಸಾಹಿತ್ಯ-ಕಲಾಸಕ್ತರು ಅಲ್ಲಿ ನೆರೆದಿದ್ದರು. ವೇದಿಕೆಯ ಮೇಲೂ ಕೆಳಗೂ ಮಹಿಳೆಯರೂ ಯುವಜನರೂ ಅರ್ಧಕ್ಕಿಂತಲೂ ಹೆಚ್ಚು ಇದ್ದರು. ದಲಿತ, ತಳಸಮುದಾಯದ ಲೇಖಕರೂ ಹೋರಾಟಗಾರರು, ಹಲವು ಜನವಿಭಾಗಗಳ ನಿಜವಾದ ಪ್ರತಿನಿಧಿಗಳು ದೊಡ್ಡ ಸಂಖ್ಯೆಯಲ್ಲಿ ಇದ್ದಿದ್ದು ಎದ್ದು ಕಾಣುತ್ತಿತ್ತು. ಮಾತ್ರವಲ್ಲ, ಸಮಾವೇಶದಲ್ಲಿ ನಡೆದ ಚರ್ಚೆಗಳು ಜನರನ್ನು ಬಾಧಿಸುವ ವಿಷಯಗಳ ಬಗ್ಗೆ ಇತ್ತು. ಸಾಮಾನ್ಯವಾಗಿ ಕೊನೆಗೆ ಇರುವ (ಅಥವಾ ಇಲ್ಲದೆನೇ ಹೋಗುವ) ಮಹಿಳೆಯ ಬಗೆಗಿನ ಗೋಷ್ಟಿ ಮೊದಲ ಗೋಷ್ಟಿಯಾಗಿತ್ತು. ‘ಸಮಕಾಲೀನ ಸವಾಲುಗಳು-ಸಾಧ್ಯತೆಗಳು’, ‘ಜನಸಂಸ್ಕತಿ ಮತ್ತು ಮಾರುಕಟ್ಟೆ’, ‘ಕರಾವಳಿಯ ತಲ್ಲಣಗಳು’ ಇವೆಲ್ಲ ವಿಷಯಗಳು ಸಾಹಿತ್ಯಕ-ಸಾಂಸ್ಕøತಿಕ ಸಮಾವೇಶದಲ್ಲಿ ಗೋಷ್ಟಿಗಳ ವಿಷಯವಾಗುವುದು ಅಪರೂಪ. ಇವೆಲ್ಲಾ ಇಂತಹ ನೆನಪುಗಳಿಗೆ, ಅನ್ನಿಸಿಕೆಗಳಿಗೆ ಕಾರಣವಾಗಿರಬಹುದು.
‘ನುಡಿಸಿರಿ’ ಒಂದು ‘ಸಾಂಸ್ಕತಿಕ ಮುಖವಾಡ’
ಡಾ. ಮೋಹನ್ ಆಳ್ವಾ ಅವರು ಕಳೆದ 10 ವರ್ಷಗಳಿಂದ ಅದ್ದೂರಿಯಾಗಿ ಸಂಘಟಿಸುತ್ತಿರುವ ‘ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್’ನ ನಿಜವಾದ ಉದ್ದೇಶ ಹಲವು ಲೇಖಕ-ಕಲಾವಿದರಾಗಿ ಅರಿವಾಗಲಾರಂಭಿಸಿದಂತೆ ಅದರ ವಿರುದ್ಧ ಭಾವನೆ ಹೊಗೆಯಾಡಲಾರಂಭಿಸಿತ್ತು. 10ನೇ ನುಡಿಸಿರಿಯನ್ನು ವೀರೇಂದ್ರ ಹೆಗಡೆಯವರು ಉದ್ಘಾಟಿಸುತ್ತಾರೆ ಎಂದು ತಿಳಿದಾಗ ಅದು ಭುಗಿಲೆದ್ದಿತು. ಧರ್ಮಸ್ಥಳದಲ್ಲಿ ಸೌಜನ್ಯ ಮತ್ತು ನೂರಾರು ಹೆಣ್ಣುಮಕ್ಕಳ ಕೊಲೆಗಳ ವಿರುದ್ಧ ಇತ್ತೀಚೆಗೆ ವ್ಯಕ್ತವಾದ ರೊಚ್ಚಿಗೆ ಮತ್ತು ಇತರ ಯಾವುದೇ ಜನತೆಯ ತಲ್ಲಣಗಳಿಗೆ ‘ನುಡಿಸಿರಿ’ ಸಕಾರಾತ್ಮಕವಾಗಿ ಸ್ಪಂದಿಸುವುದಿಲ್ಲ. ಮಾತ್ರವಲ್ಲ ಅವÀನ್ನು ಮರೆಮಾಚುವುದೇ ಇಂತಹ ಸಂಭ್ರಮಗಳ ಗುರಿ. ‘ನುಡಿಸಿರಿ’ ಪಾಳೆಯಗಾರಿ, ಬಂಡವಾಳಶಾಹಿ ಮತ್ತು ಕೋಮುವಾದಿ ಶಕ್ತಿಗಳ ‘ಸಾಂಸ್ಕøತಿಕ ಮುಖವಾಡ’ ಎಂಬುದು ಹೆಚ್ಚೆಚ್ಚು ಲೇಖಕ-ಕಲಾವಿದರಿಗೆ ಸ್ಪಷ್ಟವಾಗುತ್ತಿದ್ದಂತೆ ಅದಕ್ಕೆ ಪರ್ಯಾಯ ಕಟ್ಟಬೇಕು. ಬಂಡವಾಳಗಾರ, ಧರ್ಮಗುರು, ಒಡೆಯ ಇವರನ್ನೆಲ್ಲಾ ಸಾಹಿತ್ಯ-ಸಂಸ್ಕøತಿ ಪ್ರವೇಶಿಸಿ ಭ್ರಷ್ಟಗೊಳಿಸಲು ಬಿಡಬಾರದು ಎಂಬ ಭಾವನೆ ಗಟ್ಟಿಯಾಗತೊಡಗಿ ‘ಜನನುಡಿ’ ಮೂಡಿಬಂತು. ಸಮುದಾಯ, ಕರಾವಳಿ ಲೇಖಕಿಯರ ಸಂಘ, ಚಿಂತನ, ಜನಸಾಹಿತ್ಯ ಸಂಘಟನೆ, ಸಹಮತ್, ಇಪ್ಟಾ, ನಾವು-ನಮ್ಮಲ್ಲಿ, ಆದಿಮ ಮುಂತಾದ ಹಲವು ಸಮಾನ-ಮನಸ್ಕ ಪ್ರಗತಿಪರ ಸಾಂಸ್ಕೃತಿಕ ಸಂಘಟನೆಗಳು ಜನ-ಪರ ಸಂಘಟನೆಗಳ ಸಹಕಾರದಿಂದ ಕಟ್ಟಿಕೊಂಡ ‘ಅಭಿಮತ’ ಈ ಸಮಾವೇಶವನ್ನು ಸಂಘಟಿಸಿತ್ತು. ‘ನುಡಿಸಿರಿ’ಗೆ ಪರ್ಯಾಯವಾಗಿ ‘ಜನನುಡಿ’ ಮೂಡಿ ಬಂದಿದ್ದರೂ ಅದರ ಉದ್ದೇಶಗಳು ಇನ್ನೂ ವ್ಯಾಪಕವಾದದ್ದು ಅಂತಾರೆ ಅದರ ಸಂಘಟಕರು.
ಬಿಚ್ಚುಮನಸ್ಸಿನ ಪ್ರಬುದ್ಧ ಚರ್ಚೆ
ಉದ್ಘಾಟನೆ, ಸಮಾರೋಪಗಳಲ್ಲದೆ ಮೇಲೆ ಹೇಳಿದ ಹಲವು ಗೋಷ್ಟಿಗಳಲ್ಲಿ ಚಿಂತನ-ಮಂಥನ ನಡೆಯಿತು. ಧರ್ಮಸ್ಥಳದಲ್ಲಿ ಹೆಣ್ಣುಮಕ್ಕಳ ಅಸಹಜ ಸಾವು ಮತ್ತು ಅದರ ವಿರುದ್ಧ ಭುಗಿಲೆದ್ದ ಚಳುವಳಿ, ಕಾರ್ಮಿಕ ಚಳುವಳಿಯ ಕೋಟೆ ಮತ್ತು ಬಹುಸಂಸ್ಕøತಿಯ ಬೀಡಾಗಿದ್ದ ಕರಾವಳಿ ‘ಹಿಂದುತ್ವದ ಪ್ರಯೋಗಶಾಲೆ’ ಆಗಲು ಕಾರಣಗಳು, ಮೋದಿ ಪ್ರತಿನಿಧಿಸುವ ಶ್ರೀಮಂತ-ಪರ’ಕೋಮುವಾದಿ ಫ್ಯಾಸಿಸ್ಟ್ ನಾಯಕತ್ವಕ್ಕೆ ವಿರೋಧ, ಮಡೆಸ್ನಾನ-ಪಂಕ್ತಿಬೇಧ-ಪಲ್ಲಕಿ ಮೆರವಣಿಗೆಗಳ ಖಂಡನೆ, ಮೂಢನಂಬಿಕೆಗಳ ವಿರುದ್ಧ ಕಾನೂನಿಗೆ ಬೆಂಬಲ, ಮಹಿಳೆಯರ ಮೇಲೆ ದೌರ್ಜನ್ಯಗಳ ವಿವಿಧ ರೂಪಗಳು, ಮಹಿಳಾ ಚಳುವಳಿಯ ಸಮೀಕ್ಷೆ/ವಿಮರ್ಶೆ, ಜಾಗತೀಕರಣದ ಸಂದರ್ಭದಲ್ಲಿ ಕಾವ್ಯದ ಪಾತ್ರ, ಸಾಹಿತ್ಯದ ಕಾರ್ಪೋರೇಟಿಕರಣ, ಮಾಧ್ಯಮಗಳಲ್ಲಿ ಬುದ್ಧಿಜೀವಿ-ವಿರೋಧಿ ಧೋರಣೆಗಳು, ಉದ್ಯಮ ಮತ್ತು ಜಾಹೀರಾತು ಜನಸಂಸ್ಕøತಿಯನ್ನು ಬಳಸಿಕೊಂಡ ಬಗೆ, ಕನ್ನಡ ಕಾವ್ಯ ಮಹಿಳಾ ಸಮಸ್ಯೆಗೆ ಸ್ಪಂದಿಸಿದ ರೀತಿ, ಶ್ರಮದ ಮೇಲೆ ಬಂಡವಾಳದ ದಾಳಿ, ಜಾಗತೀಕರಣಕ್ಕೂ ಕೋಮುವಾದಕ್ಕೂ ಇರುವ ಸಂಬಂಧ, ಸರ್ಕಾರ ಮತ್ತು ಉದ್ಯಮಿಗಳು ಉತ್ಸವಗಳನ್ನು ಸಂಘಟಿಸುವ ಹಿಂದಿನ ಹುನ್ನಾರಗಳು; ಕೋಮುವಾದ, ಫ್ಯಾಸಿಸಂನಂತಹ ‘ರೋಗ ಲಕ್ಷಣ’ಗಳ ಬದಲು ಬಂಡವಾಳಶಾಹಿ, ಸಾಮ್ರಾಜ್ಯಶಾಹಿಯಂತಹ ‘ರೋಗ’ಗಳಿಗೆ ಔಷಧಿ ಹುಡುಕುವ ಅಗತ್ಯ; ಕೊರಗ, ಕುಡುಬಿ, ಮಲೆಕುಡಿಯ ಮುಂತಾದ ಮೂಲನಿವಾಸಿಗಳ ತಲ್ಲಣಗಳು, ಜನ ಚಳುವಳಿಗಳು ಬಿಡಿಬಿಡಿಯಾಗಿ ದ್ವೀಪಗಳಾಗದೆ ಐಕ್ಯತೆ ಸಾಧಿಸಿ ವ್ಯವಸ್ಥೆ ಬದಲಿಸುವತ್ತ ಸಾಗುವ ಬಗೆ, ಮೆಗಾ ಪ್ರಾಜೆಕ್ಟುಗಳಿಂದ ಒಕ್ಕಲೆಬ್ಬಿಸಿದ ಜನರ ಸಮಸ್ಯೆಗಳು, ಪ್ರಜಾಸತ್ತೆಯ ಅಂಗಗಳ ಪಾಳೆಯಗಾರೀಕರಣ, ಐಸಿಡಿಎಸ್ ಖಾಸಗೀಕರಣ, ಮೈಸೂರು ಒಡೆಯರ್ ನಿಧನದ ಸಂದರ್ಭದಲ್ಲಿ ಮಾಧ್ಯಮಗಳ ಪಾಳೆಯಗಾರಿಯ ಪೂಜೆ ; ಜನಸಂಸ್ಕøತಿಯಲ್ಲೂ ಯಜಮಾನ, ಪೂಜಾರಿ, ಪುರುಷ ಶಕ್ತಿಗಳ ಶಕ್ತಿ ರಾಜಕಾರಣದ ಪ್ರಭಾವ; ಕಾಂಗ್ರೆಸ್ ಮತ್ತು ಬಿಜೆಪಿ ಎರಡಕ್ಕೂ ರಾಜಕೀಯ ಪರ್ಯಾಯ – ಹೀಗೆ ಹತ್ತು ಹಲವು ವಿಷಯಗಳ ಬಗ್ಗೆ ಬಿಚ್ಚುಮನಸ್ಸಿನ ಪ್ರಬುದ್ಧವಾದ ಆಳವಾದ ಚರ್ಚೆ ನಡೆಯಿತು. ತಮ್ಮ ಮಾತುಗಳ ಮೂಲಕ ಚರ್ಚೆ ಆರಂಭಿಸಿದವರಲ್ಲಿ, ಪ್ರತಿಕ್ರಿಯಿಸಿದವರಲ್ಲಿ – ರಾಜೇಂದ್ರ ಚೆನ್ನಿ, ಎಸ್.ಜಿ. ಸಿದ್ದರಾಮಯ್ಯ, ರಹಮತ್ ತರಿಕೆರೆ, ದಿನೇಶ್ ಅಮಿನ್‍ಮಟ್ಟು, ಆರ್.ಪೂರ್ಣಿಮಾ, ಎಚ್.ಎಸ್.ಅನುಪಮ, ಕೆ.ನೀಲಾ, ವಿನಯಾ ಒಕ್ಕುಂದ, ಮಾವಳ್ಳಿ ಶಂಕರ್, ಎನ್. ಗಾಯತ್ರಿ, ಜಿ.ಪಿ.ಬಸವರಾಜು, ಕೆ.ಎಸ್.ವಿಮಲ, ಸಬಿಹಾ ಭೂಮಿಗೌಡ, ವಿಠ್ಠಲ ಭಂಡಾರಿ, ಎಂ.ಡಿ.ಒಕ್ಕುಂದ, ಸನತ್ ಕುಮಾರ ಬೆಳಗಲಿ, ರವಿಕೃಷ್ಣಾ ರೆಡ್ಡಿ, ವಸುಂಧರಾ ಭೂಪತಿ, ಮೀನಾಕ್ಷಿ ಬಾಳಿ, ಪಿಚ್ಚಳ್ಳಿ ಶ್ರೀನಿವಾಸ್ – ಸೇರಿದ್ದರು. ಒಟ್ಟು 48 ಜನ ವೇದಿಕೆಯಿಂದ ಮಾತನಾಡಿದರು. 16 ಕವಿಗಳು ತಮ್ಮ ಕವಿತೆ ಓದಿದರು.
ಇಂತಹ ವ್ಯಾಪಕವಾದ ಆಳವಾದ ಚರ್ಚೆಗಳ ಸಾರಾಂಶವನ್ನು ಸ್ವಲ್ಪದರಲ್ಲಿ ಹೇಳುವುದು ಕಷ್ಟ. ಈ ಚರ್ಚೆಗಳಲ್ಲಿ ಹೇಳಲ್ಪಟ್ಟು ಸಮಾವೇಶದ ಉದ್ದಕ್ಕೂ ಮಾರ್ದನಿಸಿದ ಕೆಲವು ನುಡಿಗಳನ್ನು ಜತೆಗೆ ನೀಡಿದ ಬಾಕ್ಸಿನಲ್ಲಿ ಸಂಗ್ರಹಿಸಲಾಗಿದೆ. ಅವು ಚರ್ಚೆಯ ‘ರುಚಿ’ ಕೊಡಬಹುದು. ಸಮಾವೇಶದ ನಿರ್ಣಯಗಳನ್ನೂ ಬಾಕ್ಸಿನಲ್ಲಿ ಕೊಡಲಾಗಿದೆ. ‘ಜನನುಡಿ’ಯಲ್ಲಿ ಕವಿಗೋಷ್ಟಿ, ಹೋರಾಟದ ಹಾಡುಗಳು, ಕೋಲಾಟ ಮತ್ತು ಕೆಲವರ ವಿಷಯ ಮಂಡನೆಯಲ್ಲಿ ಬಿಟ್ಟರೆ ಸಾಹಿತ್ಯಕ-ಸಾಂಸ್ಕøತಿಕ ಭಾಗ ಕಡಿಮೆ ಇತ್ತು ಎಂಬುದು ಒಂದು ಕೊರತೆ. ಇದು ಸಮಯ ಸಂಪನ್ಮೂಲಗಳ ಮಿತಿಯಿಂದ ಆಗಿರುವಂತಹದ್ದು. ಆದರೂ ‘ಜನನುಡಿ’ಯ ಮುಂದಿನ ಅವತರಣಿಕೆಗಳಲ್ಲಿ ಗಮನಿಸಬೇಕಾದ್ದು.
ಸಾಂಸ್ಕತಿಕ ರಾಜಕೀಯ ಮಹತ್ವ
ಆದರೆ ‘ಜನನುಡಿ’ಯ ಮಹತ್ವ ಇರುವುದು ಅಲ್ಲಿ ಏನು ಹೇಳಲಾಯಿತು, ಮಾಡಲಾಯಿತು ಎಂಬುದರಲ್ಲಿ ಅಲ್ಲ. ಇಂತಹ ಒಂದು ಜನ-ಪರ ಪರ್ಯಾಯ ಸಾಹಿತ್ಯಕ-ಸಾಂಸ್ಕøತಿಕ ಸಮಾವೇಶವನ್ನು ಸಂಘಟಿಸಲಾಯಿತು. ವೈವಿಧ್ಯಮಯ ಚಟುವಟಿಕೆಯಲ್ಲಿ ತೊಡಗಿದ ಹಲವು ಸಾಂಸ್ಕøತಿಕ ಸಂಘಟನೆಗಳು ಒಂದೇ ವೇದಿಕೆಯಲ್ಲಿ ಒಗ್ಗೂಡಿ ‘ನುಡಿಸಿರಿ’ ಪ್ರತಿನಿಧಿಸಿದ ಪಾಳೆಯಗಾರಿ, ಬಂಡವಾಳಶಾಹಿ ಮತ್ತು ಕೋಮುವಾದಿ ಶಕ್ತಿಗಳ ‘ಸಾಂಸ್ಕøತಿಕ ಮುಖವಾಡ’ವನ್ನು ಕಿತ್ತೊಗೆದು ಅವರನ್ನು ಬಯಲು ಮಾಡಿತು ಎಂಬುದೇ ‘ಜನನುಡಿ’ಯ ಮಹತ್ವ. ಮಹಿಳಾ ದೌರ್ಜನ್ಯ ವಿರೋಧಿ ವೇದಿಕೆ, ಮಡೆಸ್ನಾನ-ಪಂಕ್ತಿಬೇಧದ ವಿರುದ್ಧ ಹೋರಾಟ, ಬಿಜೆಪಿಯ ರಾಜಕೀಯ ಸೋಲು, ಸೌಜನ್ಯ ಚಳುವಳಿಗಳ ಬೆನ್ನಲ್ಲೇ ಇದು ಬಂದಿದ್ದು ಕರಾವಳಿಯಲ್ಲಿ ಬಲವಾದ ಬದಲಾವಣೆಯ ಗಾಳಿ ಬೀಸುತ್ತಿರುವುದರ ಸಂಕೇತ. ಇದು ಕರಾವಳಿಯ ತಲ್ಲಣಗಳ ನಿರ್ದಿಷ್ಟ ಸನ್ನಿವೇಶದಲ್ಲಿ ಮೂಡಿಬಂದರೂ, ಇಡೀ ರಾಜ್ಯದ ದೇಶದ ಮಟ್ಟಿಗೂ ಸಾಂಸ್ಕøತಿಕ ರಾಜಕೀಯ ಮಹತ್ವ ಹೊಂದಿದೆ. ಇದು ನಮ್ಮ ರಾಜ್ಯ ಮತ್ತು ದೇಶದಲ್ಲಿ ಕೆಳಗಿನಿಂದ ಮೇಲಕ್ಕೆ ಹೊಮ್ಮುತ್ತಿರುವ ಜನ-ಪರ ಪರ್ಯಾಯದ ಸಂಕೇತ. ಭಾರತದ ರಾಜಕೀಯದ ಮೇಲೆ ಕಾಂಗ್ರೆಸ್ ಮತ್ತು ಬಿಜೆಪಿಗಳ ದ್ವಿ-ಸ್ವಾಮ್ಯವನ್ನು ಒಡೆಯಲು ಬೇಕಾದ ಎಡ-ಪ್ರಜಾಸತ್ತಾತ್ಮಕ ಬದಲಿಗೆ ಸಾಂಸ್ಕøತಿಕ ಭೂಮಿಕೆ ಸಿದ್ಧವಾಗುತ್ತಿದೆ ಎಂಬ ಆಶಾಭಾವನೆ ಮೂಡಿಸುವಂತದ್ದು. ಇಂತಹ ಸಮಾವೇಶ ಸಂಘಟಿಸುವುದರಲ್ಲಿ ನಾಯಕತ್ವ ನೀಡಿದ ಎಚ್.ಎಸ್.ಅನುಪಮ, ಮುನೀರ್ ಕಾಟಿಪಳ್ಳ ಮತ್ತು ನವೀನ್ ಸೂರಿಂಜೆ ಅವರುಗಳನ್ನೂ; ‘ಅಭಿಮತ’ ಕಟ್ಟಲು ಸಹಯೋಗ ನೀಡಿದ ಎಲ್ಲಾ ಸಂಘಟನೆಗಳನ್ನೂ ತಮ್ಮ ಚಾರಿತ್ರಿಕ ಜವಾಬ್ದಾರಿ ನಿರ್ವಹಿಸಿದ್ದಕ್ಕೆ ಅಭಿನಂದಿಸಲೇಬೇಕು.
‘ಜನನುಡಿ’ಯಲ್ಲಿ ಮಾರ್ದನಿಸಿದ ನುಡಿಗಳು
“ನಾನು ಕೋಮುವಾದಿ ವ್ಯಕ್ತಿ, ಸಂಘಟನೆ ಮತ್ತು ಸರ್ಕಾರಗಳ ಕಾರ್ಯಕ್ರಮ ಮತ್ತು ಸಮ್ಮೇಳನಗಳಲ್ಲಿ ಭಾಗವಹಿಸುವುದಿಲ್ಲ. ಅವರ ಪ್ರಶಸ್ತಿ, ಪುರಸ್ಕಾರಗಳನ್ನು ಸ್ವೀಕರಿಸುವುದಿಲ್ಲ” (ಅನುಪಮ);
“ಸಾಹಿತ್ಯ ಇಂದು ಅನುಸರಿಸಬೇಕಾದ್ದು ಅವ್ಯಕ್ತ ಹಿಂಸೆÀಗಳನ್ನು ವ್ಯಕ್ತಪಡಿಸುವಂತಹ ಡಾ.ಅಂಬೇಡ್ಕರ್ ಮಾರ್ಗವನ್ನು.. ಇಂದಿನ ಪರಿಸ್ಥಿಯಲ್ಲೂ ಕಾವ್ಯ ಬುಡಮೇಲು (ಸಬ್ವರ್ಸಿವ್) ಗುಣವನ್ನು ಉಳಿಸಿಕೊಳ್ಳಬೇಕು.. ನಮ್ಮೆದುರು ನಡೆಯುವ ವಿದ್ಯಮಾನಗಳನ್ನು ಅದರ ನಿಜವಾದ ಹೆಸರಿನಲ್ಲಿ ಕರೆಯಬೇಕಾಗಿದೆ. ಗುಜರಾತ್‍ನಲ್ಲಿ ನಡೆದ 2002ರಲ್ಲಿ ನಡೆದ ನರಮೇಧವನ್ನು ನರಮೇಧ ಎಂದೇ ಕರೆಯಬೇಕು. ದಂಗೆಗಳು ಎಂದಲ್ಲ.” (ಚೆನ್ನಿ);
“ಬಿಡಿಬಿಡಿಯಾಗಿ ಚದುರಿ ಹೋಗಿರುವ ಜನರ ಹೋರಾಟಗಳೂ ಸಂಘಟನೆಗಳು ಸೌಜನ್ಯ ಪ್ರಕರಣದಲ್ಲಿ ಆದಂತೆ ಒಂದಾಗಿ ಹೋರಾಡಬೇಕಾಗಿದೆ. ಜನರ ಹೋರಾಟಗಳೂ ಸಂಘಟನೆಗಳೂ ಸಿಗಿದು ಚೂರು ಚೂರು ಮಾಡಿದರೂ ಮತ್ತೆ ಮತ್ತೆ ಒಂದಾಗುವ ಜರಾಸಂಧನಂತೆ ಆಗಬೇಕಾಗಿದೆ.” (ಸಬಿಹಾ);
‘ಸಾಹಿತ್ಯ ಕಲೆಯಲ್ಲಿ ನವರಸಗಳು ಇರಬೇಕು ಅಂತಾರೆ. ಆದರೆ ‘ಶ್ರಮ ರಸ’ ಇಲ್ಲದೆ ಒಂಬತ್ತು ರಸಗಳಲ್ಲಿ ಯಾವುವು ಇರಲಾರವು..ವಿರಾಸತ್ ಎನ್ನುವುದೇ ಪಾಳೆಯಗಾರಿಯ ವಾಸನೆ ಹೊಡೆಯುವ ಶಬ್ದ.”(ಮೀನಾಕ್ಷಿ);
“ಕರಾವಳಿ ಜಿಲ್ಲೆಗಳಲ್ಲಿ ಇತಿಹಾಸದ ಚಕ್ರವನ್ನು ಶಿಲಾಯುಗಕ್ಕೆ ಹಿಂದಕ್ಕೆ ತಿರುಗಿಸುವ ಪ್ರಯ್ರತ್ನ ನಡೆದಿದೆ. ಇಲ್ಲಿನ ಬಹುಸಂಸ್ಕøತಿಗಳ ಸಹಬಾಳ್ವೆ, ಮಾತೃಪ್ರಧಾನ ಕುಟುಂಬದಲ್ಲಿ ವ್ಯಕ್ತವಾದ ಮಹಿಳೆಯರ ಸ್ವಾತಂತ್ರ್ಯ ಮತ್ತು ಆತ್ಮಗೌರವ, ಭೂಸುಧಾರಣೆ, ಸಾಮಾಜಿಕ ನ್ಯಾಯ, ಮಾನವ ಕೇಂದ್ರಿತ ಅಭಿವೃದ್ಧಿ ಮಾದರಿ – ಇವೆಲ್ಲವನ್ನು ಅಗೋಚರ ಸರ್ಕಾರವೊಂದು ಅದರ ವಿರುದ್ಧ ದಿಕ್ಕಿನಲ್ಲಿ ಬದಲಾಯಿಸಲು ಪ್ರಯತ್ನಿಸುತ್ತಿದೆ.” (ಅಮಿನ್ ಮಟ್ಟು);
“ಇಲ್ಲಿನ ದೈವವಾದ ನಾಗಬ್ರಹ್ಮರಲ್ಲಿ ಹೆಣ್ಣು ಬೇಕೆಂದು ಕೇಳುವ ಏಕೈಕ ಪ್ರದೇಶ ಇದಾಗಿದೆ. ಇಲ್ಲಿನ ಇತಿಹಾಸದಲ್ಲಿ ಹೆಣ್ಣಿನ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಒಂದು ಉದಾಹರಣೆ ಇಲ್ಲಿ ಇಲ್ಲ. ಆದರೆ ಕಳೆದ ಕೆಲವು ದಶಕಗಳಿಂದ ನೇತ್ರಾವತಿ ಹೆಣ್ಣು ಮಕ್ಕಳ ರಕ್ತ ಮತ್ತು ಕಣ್ಣಿರಿನಿಂದ ಕೆಂಪಾಗಿದೆ. ಸೌಜನ್ಯ ಪ್ರಕರಣ ಇಡೀ ತುಳುನಾಡಿನ ಮನಸ್ಸಿನ ಮೇಲೆ ಎಸಗಿದ ಅತ್ಯಾಚಾರ. ನಮ್ಮ ಸಹನೆ ಕಟ್ಟೊಡೆದಿದೆ. ಇನ್ನೊಂದು ಇಂತಹ ಪ್ರಕರಣ ನಡೆಯಬಾರದು ಎಂದು ನಾವು ಹೋರಾಟ ನಡೆಸುತ್ತಿದ್ದೇವೆ. ಈ ಹೋರಾಟದಲ್ಲಿ ನಮ್ಮೊಂದಿಗೆ ಗಟ್ಟಿಯಾಗಿ ನಿಂತ ಏಕೈಕ ಪಕ್ಷ ಎಂದರೆ ಸಿಪಿಎಂ.” (ಅತ್ರಾಡಿ ಅಮೃತಾ ಶೆಟ್ಟಿ);
‘ಬಿಜೆಪಿಗೆ ಮೋದಿ ಎಂಬ ‘ಫಿಟ್ಸ್’ ಬಂದಿದೆ. ಅದಕ್ಕೆ ಕಬ್ಬಿಣ ಬೇಡುತ್ತಿದೆ. ಈ ‘ಫಿಟ್ಸ್’ನ್ನು ಬಿಡಿಸುವತ್ತ ನಾವು ಎಡ-ಪ್ರಜಾಸತ್ತಾತ್ಮಕ ಬದಲಿ ತರಬೇಕಾಗಿದೆ.” (ಮಾವಳ್ಳಿ ಶಂಕರ್);
“ಜನನುಡಿ ನುಡಿಸಿರಿಗೆ ಪರ್ಯಾಯವಾಗಿ ಮೂಡಿಬಂದಿದೆ. ನಮ್ಮ ಸಂಖ್ಯೆ ಇಲ್ಲಿ ಕಡಿಮೆ ಇರಬಹುದು. ಆದರೆ ಬುದ್ಧ, ಬಸವ ಮುಂತಾದವರು ಆರಂಭಿಸಿದ ಎಲ್ಲಾ ದೊಡ್ಡ ಬದಲಾವಣೆಗಳೂ ಆರಂಭವಾಗಿದ್ದು ಇಂತಹ ಸಣ್ಣ ಸಂಖ್ಯೆಯ ಜನರಿಂದಲೇ”( ನೀಲಾ);
“ಕರಾವಳಿಯಲ್ಲಿ ಹೆಂಚು, ಗೇರುಬೀಜ, ಬೀಡಿ ಮುಂತಾದ ಕೈಗಾರಿಕೆಗಳು ಜಾಗತೀಕರಣದ ದಾಳಿಗೆ ಸಿಕ್ಕು ಜರ್ಝರಿತವಾಗಿ ವ್ಯಾಪಕ ನಿರುದ್ಯೋಗ ಉಂಟಾದ ಪರಿಸರ ಕೋಮುವಾದ ಬೆಳೆಯಲು ಪ್ರಶಸ್ತವಾದ ಭೂಮಿಕೆ ನಿರ್ಮಿಸಿತು ಎಂಬುದನ್ನು ಮರೆಯಬಾರದು.” (ವಿಮಲಾ);
“ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಹಲವು ದಿನಗಳ ಕಾಲ ಚಳಿಗಾಳಿ ಲೆಕ್ಕಿಸದೆ ಧರಣಿ ಕೂತ ಸಾವಿರಾರು ಅಕ್ಷರ ದಾಸೋಹ ಮಹಿಳಾ ಕಾರ್ಮಿಕರನ್ನು ಎಷ್ಟು ಜನ ಲೇಖಕರು ಕಲಾವಿದರು ಚಿಂತಕರು ಹೋಗಿ ಮಾತನಾಡಿಸಿದರು ? ಅದಕ್ಕೆ ಅವರಿಗೆ ಆಹ್ವಾನ ಬೇಕೆ ? ಅದು ಅವರ ಜವಾಬ್ದಾರಿ ಅಲ್ಲವೆ ?”(ವಿಠ್ಠಲ)
“ಒಂದು ಕೋಮುವಾದ ಎದುರಿಸಲು ಪ್ರಗತಿಪರರೆನಿಸಿಕೊಂಡವರು ಇನ್ನೊಂದು ಕೋಮಿನ ಮೂಲಭೂತವಾದ ಬೆಂಬಲಿಸಿ ಕೋಮುವಾದದ ವಿರುದ್ಧ ಹೋರಾಟಕ್ಕೆ ಪೆಟ್ಟು ಕೊಟ್ಟಿದ್ದಾರೆ. ಬಡ ಮುಸ್ಲಿಂ ಮಹಿಳೆಗೆ ನೆರವು ನೀಡಿದನೆಂಬ ಕಾರಣಕ್ಕೆ ವಿಟ್ಲದ ಪತ್ರಕರ್ತನೊಬ್ಬನ ಮೇಲೆ ಕೋಮುವಾದಿ ಸಂಘಟನೆಯೊಂದು ದಾಳಿ ಮಾಡಿದೆ. ಅದನ್ನೂ ನಾವು ಖಂಡಿಸುತ್ತೇವೆ.” (ಜೀವನ್)
“ಆಳ್ವಾಸ್ ನುಡಿಸಿರಿಗೆ ಇಷೆಲ್ಲಾ ಖರ್ಚು ಮಾಡುವುದು ಹೇಗೆ ಸಾಧ್ಯವಾಗುತ್ತದೆ… ಆಳ್ವಾಸ್ ಶಿಕ್ಷಣ ಸಂಸ್ಥೆಗಳಲ್ಲಿ 16 ಸಾವಿರ ವಿದ್ಯಾರ್ಥಿಗಳಿದ್ದಾರೆ. ಪ್ರತಿಯೊಬ್ಬರಿಂದ ಒಂದುವರೆ ಲಕ್ಷ ಬರುತ್ತದೆ. ಅಂದರೆ ಸುಮಾರು 200ಕೋಟಿ.ರೂ. ಇದರ ಮಿಗುತೆ ಹಣದಲ್ಲೇ ಇಂತಹ ಅದ್ದೂರಿ ಸಮ್ಮೇಳನ ನಡೆಸಲಾಗುತ್ತಿದೆ.”(ಪ್ರಶಾಂತ್);
ಜೀವ ಎರಡು: ಆರ್.ವಿ.ಭಂಡಾರಿ- ರಹಮತ್ ತರಿಕೆರೆ
ಜೀವ ಎರಡು: ಆರ್.ವಿ.ಭಂಡಾರಿ ೮೦ರ ದಶಕ. ಬಂಡಾಯ ಸಾಹಿತ್ಯ ಚಳುವಳಿಯ ಸಮ್ಮೇಳನಗಳು ನಡೆಯುತ್ತಿದ್ದವು. ಯುವಕರಾಗಿದ್ದ ನಾವು ಹೆಗಲಿಗೊಂದು ಬ್ಯಾಗು ನೇತುಹಾಕಿಕೊಂಡು, ಅದರಲ್ಲಿ ಒಂದು ಜತೆ ಬಟ್ಟೆ ತುರುಕಿಕೊಂಡು, ಕರ್ನಾಟಕದ ಯಾವುದೊ ಒಂದು ಮೂಲೆಯ ಊರಿಗೆ ಹೋಗುತ್ತಿದ್ದೆವು. ಆಗ ತಪ್ಪದೆ ಕಾಣಿಸುತ್ತಿದ್ದ ಮುಖಗಳಲ್ಲಿ ಭಂಡಾರಿಯವರದೂ ಒಂದು. ಸಾಮಾನ್ಯವಾಗಿ ಛತ್ರಗಳಲ್ಲಿ ಸಮ್ಮೇಳನ ನಡೆಯುತ್ತಿತ್ತು. ಅಲ್ಲೇ ವಸತಿ. ಬೆಳಿಗ್ಗೆ ಎದ್ದು, ಕೈಲಿ ಬ್ರಶ್ಶು ಹಿಡಿದು ಟೂತ್‌ಪೇಸ್ಟಿಗಾಗಿ ಭಂಡಾರಿ ಇರುವ ರೂಮಿಗೆ ದಾಳಿ ಇಡುತ್ತಿದ್ದೆವು. ಹೆಸರಿಗೆ ತಕ್ಕಂತೆ ಅವರ ಚೀಲ ಅನೇಕ ವಸ್ತುಗಳ ಭಂಡಾರವೇ. ಸಣ್ಣಗಾತ್ರದ ಸೋಪುಗಳು, ಕರಪತ್ರ, ಪುಸ್ತಕ, ಚಾಕಲೇಟು, ಹೆಚ್ಚಿನ ಪೆನ್ನುಗಳು, ಅಡಕೆ ಇತ್ಯಾದಿ ಬಹೂಪಯೋಗಿ ವಸ್ತುಗಳು ಅದರಲ್ಲಿ ಇರುತ್ತಿದ್ದವು. ಅವರಲ್ಲಿಗೆ ಹೋದರೆ, ಹಿಡಿದವರ ಬ್ರಶ್ಶುಗಳಿಗೆ ತಮ್ಮಲ್ಲಿದ್ದ ಪೇಸ್ಟನ್ನು ಮಕ್ಕಳಿಗೆ ಬೆಲ್ಲಹಂಚುವಂತೆ ಹಂಚುವ ಭಂಡಾರಿಯವರು ಇರುತ್ತಿದ್ದರು. ಪೇಸ್ಟ್ ಕೊಟ್ಟಮೇಲೆ ಮೆಲ್ಲಗೆ ಕೇಳುತ್ತಿದ್ದರು-‘ನಿಮಗೆ ಪೌಡರು ಬೇಕಾದರೂ ಕೇಳಿ. ನನ್ನಲ್ಲಿದೆ’; ರಾತ್ರಿ ಮಲಗಿದಾಗ ಹಾಕಿಕೊಂಡ ಬಟ್ಟೆಯನ್ನು ಬದಲಿಸಿದೆ ಸೋಮಾರಿತನದಿಂದ ಓಡಾಡುವ ನಮ್ಮಲ್ಲಿ ನೀಟಾಗಿ ಶೇವ್ ಮಾಡಿ, ಜಳಕ ಮುಗಿಸಿ, ಶುಭ್ರವಸ್ತ್ರ ಧರಿಸಿ, ಗುಳಿಬಿದ್ದ ಕೆನ್ನೆಗಳಿಗೆ ಸ್ನೋ ಪೌಡರು ಹಚ್ಚಿಕೊಂಡು ಘಮಘಮಿಸುತ್ತ ಭಂಡಾರಿಯವರು ಕೀಳರಿಮೆ ಹುಟ್ಟಿಸುತ್ತಿದ್ದರು. ಅದೇನು ಶೋಕಿಯಲ್ಲ. ಶಾಲಾ ಮಾಸ್ತರರಾಗಿದ್ದ ಅವರ ಶಿಸ್ತೊ, ಚರ್ಮ ಸುಕ್ಕಾಗಿ ಬಿಗಿತ ಮಾಡುತ್ತಿದ್ದುದ್ದಕ್ಕೆ ಹಾಗೆ ಮಾಡುತ್ತಿದ್ದರೊ ಗೊತ್ತಿಲ್ಲ. ಹೊನ್ನಾವರದಿಂದ ಪೂರ್ವಕ್ಕೆ ಹತ್ತು ಹದಿನೈದು ಮೈಲಿ ಪಶ್ಚಿಮಘಟ್ಟಗಳಲ್ಲಿ ನುಸುಳಿ ಹೋದರೆ, ಅಲ್ಲಿ ಕರೆಕೋಣ ಎಂಬ ಊರು ಸಿಗುತ್ತದೆ. ಅದು ಭಂಡಾರಿಯವರಿದ್ದ ಜಾಗ. ಅಲ್ಲಿಂದ ನಾಲ್ಕಾರು ಬಸ್ಸು ಬದಲಿಸಿ, ಶಾಲೆಗೆ ರಜೆ ಹಾಕಿ ಭಂಡಾರಿಯವರು ಉತ್ತರಕರ್ನಾಟಕದ ಯಾವುದೊ ಪುಟ್ಟ ಊರಿಗೆ ಸಮ್ಮೇಳನಕ್ಕೆಂದು ಬರುತ್ತಿದ್ದರು. ಅವರದೂ ಹೊನ್ನಾವರದ ಅವಧಾನಿಯವರದೂ ಒಂದು ಜೋಡಿ. ಕೆಂಪಗೆ ಎತ್ತರಕ್ಕೆ ಮಿನುಗುವ ಮುಖದ ಕವಳ ಮೆದ್ದು ಬಾಯೆಲ್ಲ ಕೆಂಪುಮಾಡಿಕೊಂಡ ಅವಧಾನಿಯವರ ಜತೆ, ಒಣಮೀನಿನಂತೆ ಬಾಡಿದ ಬೆಳ್ಳಿಕೂದಲಿನ ಬೊಚ್ಚುಬಾಯಿಯ ಭಂಡಾರಿಯವರು. ಅವಧಾನಿಯವರು ತೀರಿಕೊಂಡ ಬಳಿಕ ಭಂಡಾರಿಯವರು ಒಬ್ಬರೇ ಬರುತ್ತಿದ್ದರು. ಉಬ್ಬಸದ ಸಮಸ್ಯೆಯಿದ್ದ ಭಂಡಾರಿಯವರಿಗೆ ನಮ್ಮ ಬಯಲುಸೀಮೆಯ ಧೂಳು ಬಿಸಿಲು ಸೆಖೆ ಆಗುತ್ತಿರಲಿಲ್ಲ. ಉಸಿರಾಡಲು ಕಷ್ಟಪಡುತ್ತ, ಸಭಾಂಗಣದ ಒಂದು ಮೂಲೆಯಲ್ಲಿ ಕುಳಿತು ವಿದ್ಯಾರ್ಥಿಯಂತೆ ಭಾಷಣಗಳ ನೋಟ್ಸ್ ಮಾಡುತ್ತಿದ್ದರು. ಕಿರಿಯರು ಭಾಷಣ ಮಾಡಿದರೆ, ಚೆಂದವಾಯ್ತು ಮಾತು ಎಂದು ಹೆಗಲಮೇಲೆ ಕೈಹಾಕಿ ಕಣ್ಣಲ್ಲಿ ಹೊಳಪನ್ನು ಹೊಳೆಸುತ್ತಿದ್ದರು. ನಮ್ಮಂತಹ ಚಿಕ್ಕವರು ಎಲ್ಲಿಯಾದರೂ ಒಂದು ಲೇಖನ ಪ್ರಕಟಿಸಿದರೆ, ಕೂಡಲೇ ತಿಳಿನೀಲಿ ಇಂಕಿನಲ್ಲಿ ಗೀಚುಬಾಚಾಗಿ ಬರೆದ ಅಕ್ಷರಗಳ ನಸುಹಳದಿ ಬಣ್ಣದ ಒಂದು ಪೋಸ್ಟ್ ಕಾರ್ಡು ತಪ್ಪದೆ ಬರುತ್ತಿತ್ತು. ಅದರಲ್ಲಿ ಅವರ ಮೆಚ್ಚಿಕೆಯೊ ಭಿನ್ನಮತವಿದ್ದರೆ ವಿಮರ್ಶೆಯೊ ಇರುತ್ತಿತ್ತು. ತಮ್ಮ ಕಾರ್ಡು ಪ್ರತಿಕ್ರಿಯೆಗಳಿಂದ ನಾಡಿನ ಬಹುತೇಕ ಲೇಖಕರ ಜತೆ ಕಾಡಮೂಲೆಯಲ್ಲಿದ್ದ ಭಂಡಾರಿಯವರು ಸಂಪರ್ಕ ಇರಿಸಿಕೊಂಡಿದ್ದರು. ಆ ಪುಟ್ಟಹಳ್ಳಿಯಲ್ಲಿದ್ದ ಭಂಡಾರಿಯವರು, ಜ್ಞಾನದಾಹಿ. ಎಲ್ಲೆಲ್ಲಿಂದಲೋ ಪುಸ್ತಕ ತರಿಸಿ ಓದುತ್ತಿದ್ದರು. ಅಲ್ಲಿದ್ದೇ ಪಿಎಚ್‌ಡಿ, ಮಾಡಿದರು. ನಿರಂಜನ ಅವರ ಪ್ರಿಯ ಲೇಖಕ. ವರ್ಗಸಂಘರ್ಷ ಅವರಿಗೆ ಪ್ರಿಯವಾದ ಪರಿಕಲ್ಪನೆ. ಕ್ಷೌರಿಕವೃತ್ತಿಯಿಂದ ಬಂದಿದ್ದ ಭಂಡಾರಿಯವರು, ಜಾತಿವ್ಯವಸ್ಥೆಯ ಅಪಮಾನ ಉಂಡವರು. ಹೀಗಾಗಿ ಯಾರಾದರೂ ಅಸಮಾನತೆ ಪ್ರತಿಪಾದಿಸುವ ಚಿಂತನೆಗಳನ್ನು ರೊಮ್ಯಾಂಟಿಸೈಜ್ ಮಾಡಿದರೆ, ಗತಕಾಲವನ್ನು ವೈಭವೀಕರಿಸಿದರೆ, ಅವರಿಗೆ ರುಮ್ಮನೆ ಕೋಪ ಬರುತ್ತಿತ್ತು. ‘ಹೌದು ಸ್ವಾಮಿ, ನಿಮ್ಮ ಭವ್ಯ ಸಂಸ್ಕೃತಿಯಲ್ಲಿ ನನ್ನಪ್ಪನೂ ನಾನೂ ಪೊಂಯ್ಞ್ ಎಂದು ವಾಲಗ ಊದಿಕೊಂಡು ಇದ್ದೆವು’ ಎಂದು ಜಗಳಕ್ಕೆ ಹೋಗುತ್ತಿದ್ದರು. ತಮಗೆ ಒಪ್ಪಿಗೆಯಾಗದ ವಿಚಾರವಿದ್ದರೆ ಅವರ ಭಿನ್ನಮತದ ಪ್ರತಿಕ್ರಿಯೆ ಪ್ರಕಟವಾಗುತ್ತಿತ್ತು. ಅಂಕೋಲೆಯ ವಿಷ್ಣುನಾಯಕರು ಕೆಲವು ವರ್ಷಗಳ ಹಿಂದೆ ‘ಸಕಾಲ’ ಎಂಬ ಪತ್ರಿಕೆ ಹೊರಡಿಸುತ್ತಿದ್ದರು. ಅದರಲ್ಲಿ ಭಂಡಾರಿಯವರು ಸ್ಥಳೀಯರ ಜತೆ ತಾತ್ವಿಕವಾಗಿ ಜಗಳ ಮಾಡುವ ಇಂತಹ ಪತ್ರಗಳು ಲೇಖನಗಳು ಇರುತ್ತಿದ್ದವು. ಎರಡು ಮೂರು ತಿಂಗಳ ಕದನ. ಒಮ್ಮೆ ಭಂಡಾರಿಯವರಿಗೆ ಕೇಳಿದೆ. ‘ನಿಮಗೆ ಸುಸ್ತಾಗೋಲ್ಲವೇ?’ ಎಂದು. ‘ಅಲ್ಲ, ಮಾರಾಯರೆ ಅಂವ್ಞ ಹೀಗೆ ಬರೆಯುವುದಾ? ಅವನು ನನ್ನ ಗೆಳೆಯನೇ. ಒಳ್ಳೆಯ ವ್ಯಕ್ತಿ. ಆದರೆ ಅವನ ಚಿಂತನೆ ಸರಿಯಿಲ್ಲ. ಅದಕ್ಕೆ ವಾದ ಮಾಡುವೆ’ ಎನ್ನುವರು. ತಾಳಮದ್ದಲೆಯ ಕಲಾವಿದರಾಗಿದ್ದ ಭಂಡಾರಿಯವರಲ್ಲಿ ವಿಚಿತ್ರ ಜಿಗುಟುತನವಿತ್ತು. ಯಾವುದನ್ನೂ ಸುಲಭಕ್ಕೆ ಬಿಟ್ಟುಕೊಡುವ ಜಾಯಮಾನವಿರಲಿಲ್ಲ. ಇಂತಹ ಭಂಡಾರಿಯವರ ಉಬ್ಬಸದ ದಾಳಿಗೆ ಸೋತುಹೋದರು. ಕಳೆದ ಒಂದು ವರ್ಷದಿಂದ ನೋವುಣ್ಣುತ್ತಿದ್ದ ಅವರು, ಜೀವ ಸಾಕಾಗಿ, ಕಳೆದ ತಿಂಗಳು ಕಣ್ಮುಚ್ಚಿದರು. ಸದಾ ವರ್ಗಸಂಘರ್ಷದ ಬಗ್ಗೆ ಮಾತಾಡುತ್ತಿದ್ದ ಅವರು ಮಣಿಪಾಲದ ಆಸ್ಪತ್ರೆಯಲ್ಲಿ ಕಣ್ಮುಚ್ಚಿದುದು ಒಂದು ವ್ಯಂಗ್ಯವೊ ಏನೊ? ಉತ್ತರಕನ್ನಡ ಜಿಲ್ಲೆಯ ಬಹುತೇಕ ಬರೆಹಗಾರರು-ಗೌರೀಶಕಾಯ್ಕಿಣಿ, ವಿಷ್ಣುನಾಯಕ, ಸು.ರಂ.ಎಕ್ಕುಂಡಿ ಮುಂತಾದವರು ಶಿಕ್ಷಕರು. ಇವರೆಲ್ಲ ಬರೆಹಗಾರರು ಮಾತ್ರವಲ್ಲ, ತಮ್ಮ ಭಾಗದ ವೈಚಾರಿಕ ಚಳುವಳಿಗಳಲ್ಲಿ ಭಾಗವಹಿಸಿದವರು. ದಿನಕರ ದೇಸಾಯಿಯವರ ಸಂಗಾತಿಯಾಗಿದ್ದ, ಅಂಕೋಲೆಯ ಪ್ರಸಿದ್ಧ ಭೂಹೋರಾಟಗಳ ಹೀರೋ ಆಗಿದ್ದ ಪಿಕಳೆಯವರೂ ಒಬ್ಬ ಮಾಸ್ತರರು. ಇಂತಹ ಪರಂಪರೆಯಲ್ಲಿ ಬಂದ ಭಂಡಾರಿಯವರು ಬರೆದಿದ್ದು ಬಹಳವಿಲ್ಲ. ಅದು ಕನ್ನಡದ ದೊಡ್ಡ ಬರೆಹ ಹೌದೊ ಅಲ್ಲವೊ ಬೇರೆ ಪ್ರಶ್ನೆ. ಆದರೆ ಅವುಗಳಲ್ಲಿ ಮಿಡಿದ ಮನಸ್ಸು ಮಾತ್ರ ಮಾನವೀಯತೆಯದು. ತಾಯ್ತನದ್ದು. ಕೆರೆಕೋಣಕ್ಕೆ ಹೋಗುತ್ತಿದ್ದ ಗೆಳೆಯರನ್ನು ಭಂಡಾರಿಯವರು, ಹತ್ತಿರದ ಕರಿಕಾಲಮ್ಮನ ಗುಡ್ಡಕ್ಕೆ ಕರೆದೊಯ್ಯುತ್ತಿದ್ದರು. ಅಲ್ಲಿಂದ ಸೂರ್ಯ ಕೆಂಪಗೆ ಕಡಲಲ್ಲಿ ಮುಳುಗುವುದು ಕಾಣುವುದು. ಸಮುದ್ರ ಕಾದಗಾಜಿನ ರಸದಂತೆ ಥಳಥಳ ಹೊಳೆಯುತ್ತಿರುವ ಅರಬ್ಬಿ ಕಡಲಿಗೆ, ಘಟ್ಟಗಳಲ್ಲಿ ಎಲ್ಲೋ ಹುಟ್ಟಿ ಯಕ್ಷಗಾನದ ಬಣ್ಣವೇಷದವರಂತೆ ಕುಣಿದು ಕುಪ್ಪಳಿಸಿದ ನದಿಯು ದಣಿದುಬಂದು ಅಸಹಾಯಕವಾಗಿ ಮಿಂಚಿನ ಬಾಲದಂತೆ ಸೇರುವುದು. ಅದನ್ನು ಭಂಡಾರಿಯವರು ‘ಕಾಣಿ, ನದಿ ಕಡಲನ್ನು ಸೇರುವದು’ ಎಂದು ಮಕ್ಕಳಂತೆ ಉತ್ಸಾಹದಿಂದ ತೋರುವರು. ನನಗೆ ಅವರು ಮಕ್ಕಳಿಗಾಗಿ ಬರೆದ ಸಾಹಿತ್ಯವೇ ಇಷ್ಟ. ಅದರಲ್ಲಿ ಅವರ ಮಗುವಿನಿಂತಹ ಮನಸ್ಸು ಇದೆ. ಸಮಾಜವನ್ನು ಬರೆಹದಿಂದಲೂ ನೈತಿಕವಾಗಿ ತಿದ್ದಬಹುದು ಎಂಬ ಕನಸು ಇದೆ. |
||||||||
ಪುಟದ ಮೊದಲಿಗೆ | ||||||||
| ||||||||
|
|
ಆರ್ ವಿ ಭಂಡಾರಿ ಹುಟ್ಟಿದ ದಿನ : ಸುನಂದಾ ಕಡಮೆ ನೆನಪುಗಳು
|
Saturday, 21 December 2013
ಜನನುಡಿ : ಪ್ರತಿಭಟನೆಯ ದಾರಿಯಾಗಿ ಪರ‍್ಯಾಯ
ಜನನುಡಿ : ಪ್ರತಿಭಟನೆಯ ದಾರಿಯಾಗಿ ಪರ‍್ಯಾಯ
ಜಿ.ಪಿ.ಬಸವರಾಜು
ಪರ‍್ಯಾಯ ಎನ್ನುವುದು ಒಂದು ವ್ಯವಸ್ಥೆಯಲ್ಲ; ಅದೊಂದು ಸಿದ್ಧ ಮಾದರಿಯೂ ಅಲ್ಲ. ಜಡಗಟ್ಟಿದ ವ್ಯವಸ್ಥೆಯ ವಿರುದ್ಧ ಪ್ರಕಟಗೊಳ್ಳುವ ಕೋಪ ಕಂಡುಕೊಂಡ ದಾರಿ. ಕಾಲ, ಸಂದರ್ಭ ಮತ್ತು ಸನ್ನಿವೇಶಗಳನ್ನು ಅವಲಂಬಿಸಿ ಈ ಪರ್ಯಾಯ ರೂಪ ಪಡೆದುಕೊಳ್ಳುತ್ತದೆ. ವ್ಯವಸ್ಥೆಯ ವಿರುದ್ಧ ಹುಟ್ಟುವ ಈ ಪರ್ಯಾಯ, ವ್ಯವಸ್ಥೆಯೊಳಗಿನ ಜಡತೆಯನ್ನು ತೊಡೆದುಹಾಕಲು ನೋಡುತ್ತದೆ. ವ್ಯವಸ್ಥೆಯೊಳಗೆ ಬೇರುಬಿಟ್ಟ ಶಕ್ತಿಗಳನ್ನು ಕೊನೆಗಾಣಿಸಲು ನೋಡುತ್ತದೆ. ಹೊಸ ವ್ಯವಸ್ಥೆಯೊಂದನ್ನು ಹುಟ್ಟುಹಾಕಿ, ಈ ವ್ಯವಸ್ಥೆಯ ಮೂಲಕ ಬದುಕಿನ ಅರ್ಥವನ್ನು ವಿಸ್ತರಿಸಲು, ಜನಹಿತಕ್ಕೆ ಪೂರಕವಾಗಲು ನೋಡುತ್ತದೆ. ಈ ಆಶಯವೇ ಪರ್ಯಾಯದ ಚೈತನ್ಯವಾಗಿರುತ್ತದೆ. ಈ ಚೈತನ್ಯ ಬರಿದಾಗುವವರೆಗೆ ಪರ್ಯಾಯ ಜೀವಂತವಾಗಿರುತ್ತದೆ. ನಂತರ ಅದೇ ಒಂದು ವ್ಯವಸ್ಥೆಯಾಗಿ ರೂಪಾಂತರ ಹೊಂದುತ್ತದೆ. ವ್ಯವಸ್ಥೆ ಎಂದಕೂಡಲೇ ಅದಕ್ಕೆ ಜಡತೆ ಅಂಟಿಕೊಂಡುಬಿಡುತ್ತದೆ. ಈ ಜಡತೆ ಎನ್ನವುದು ಅನೇಕ ಹಿತಾಸಕ್ತಿಗಳ ಶಕ್ತಿಕೇಂದ್ರವಾಗಿ ಆ ವ್ಯವಸ್ಥೆಯ ಚಲನೆಯನ್ನೇ ನಿಯಂತ್ರಿಸಿಬಿಡುತ್ತದೆ. ಇಂಥ ಚಲನೆಯಿಲ್ಲದ ವ್ಯವಸ್ಥೆ ಜನರ ಬದುಕಿಗೆ ಮಾರಕವಾಗಿರುತ್ತದೆ. ಅದು ಹೊಸ ಚಿಂತನೆಯನ್ನು, ಕ್ರಿಯಾಶೀಲತೆಯನ್ನು ಬೆಂಬಲಿಸುವುದಿಲ್ಲ. ಹೊಸ ಜೀವಚೈತನ್ಯ ಇಂಥ ವ್ಯವಸ್ಥೆಯ ಅಡಿಯಲ್ಲಿ ಪಲ್ಲವಿಸುವುದಿಲ್ಲ; ಮುರುಟಿಹೋಗುತ್ತವೆ. ಅಂಥ ಹೊತ್ತಲ್ಲಿ ಆ ವ್ಯವಸ್ಥೆಯ ವಿರುದ್ಧ ಕೋಪ ಸಿಡಿದೇಳುತ್ತದೆ. ಈ ಕೋಪವೇ ಹೊಸ ಪರ‍್ಯಾಯಕ್ಕೆ ದಾರಿಮಾಡಿಕೊಡುತ್ತದೆ. ಪರ್ಯಾಯವಾಗಿ ಹುಟ್ಟಿದ್ದು ಕೂಡಾ ಕಾಲಾಂತರದಲ್ಲಿ ಜಡವ್ಯವಸ್ಥೆಯಾಗುವುದು ಹೀಗೆ. ಕಾಲಚಕ್ರದಲ್ಲಿ ಪರ್ಯಾಯ, ವ್ಯವಸ್ಥೆ ಎನ್ನುವವು ಅದಲು ಬದಲಾಗುತ್ತಲೇ ಇರುತ್ತವೆ.
ಬಂಡಾಯ ಸಾಹಿತ್ಯ ಸಂಘಟನೆಯ ಹುಟ್ಟನ್ನೇ ನೋಡಿ. ಇದು ಕನ್ನಡ ಸಾಹಿತ್ಯ ಸಮ್ಮೇಳನ ಜಡಗೊಂಡಾಗ, ಅರ್ಥಕಳೆದುಕೊಂಡಾಗ ಹುಟ್ಟಿಕೊಂಡ ಸಿಟ್ಟಿಲ ಫಲ. ಸಾಹಿತ್ಯ ಎನ್ನುವುದು ಕೇವಲ ಪಠ್ಯಕ್ಕೆ ಸೀಮಿತವಾದ ಚರ್ಚೆಯಲ್ಲ; ಅದು ಸಮಾಜಕ್ಕೆ, ರಾಜಕೀಯಕ್ಕೆ, ಸಂಸ್ಕೃತಿಗೆ ವಿಸ್ತರಿಸಿಕೊಳ್ಳುವ ಚಿಂತನೆ. ಮನುಷ್ಯ ಕೇಂದ್ರದ ಸುತ್ತ ತಿರುಗುವ ಎಲ್ಲ ಸಂಗತಿಗಳನ್ನೂ ಸಾಹಿತ್ಯ ಒಳಗೊಳ್ಳುತ್ತದೆ. ಹಾಗೆಯೇ ಸಾಹಿತ್ಯ ಚಿಂತನೆ ಈ ಎಲ್ಲ ಸಂಗತಿಗಳಿಗೂ ವಿಸ್ತರಿಸಿಕೊಳ್ಳಬೇಕು; ಈ ಎಲ್ಲ ಸಂಗತಿಗಳೂ ಸಾಹಿತ್ಯ ಸಮ್ಮೇಳನಗಳಲ್ಲಿ ಅರ್ಥಪೂರ್ಣ ಚರ್ಚೆಯನ್ನು ಪಡೆದುಕೊಳ್ಳಬೇಕು. ಸಾಹಿತ್ಯ ಸಮ್ಮೇಳನ ಎನ್ನುವುದು ಕೇವಲ ವಾರ್ಷಿಕ ಆಚರಣೆಯಲ್ಲ; ಕನ್ನಡ ಸಾಹಿತ್ಯ ಪರಿಷತ್ತಿನ ಬಾಜಾಭಜಂತ್ರಿಯೂ ಅಲ್ಲ; ರಾಜಕಾರಣಿಗಳ ಮೆರವಣಿಗೆಯೂ ಅಲ್ಲ; ಅಥವಾ ಜಾನಪದ ಕಲೆಗಳ ಕುಣಿತ ಮಾತ್ರವೂ ಅಲ್ಲ. ಇದನ್ನೇ ಬಹಿರಂಗವಾಗಿ ಸಾರಿ, ಬಂಡಾಯ ಸಾಹಿತ್ಯ ಸಮ್ಮೇಳನ, ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪರ್ಯಾಯ ಸಮ್ಮೇಳನವಾಗಿ ಹುಟ್ಟಿಕೊಂಡಿತು. ಮುಂದೆ ಅದನ್ನೊಂದು ಚಳವಳಿಯಾಗಿ ರೂಪಿಸಲು ಬಂಡಾಯ ಸಾಹಿತ್ಯ ಸಂಘಟನೆಯೂ ರೂಪಿತವಾಯಿತು. ’ಜನರ ನೋವಿಗೆ ಮಿಡಿವ ಪ್ರಾಣಮಿತ್ರ’ ಎನ್ನುವ ಬಂಡಾಯದ ಘೋಷಣಾ ವಾಕ್ಯದಲ್ಲಿ ಅದರ ಆಶಯ ವ್ಯಕ್ತವಾಗುವಂತೆಯೇ, ಕನ್ನಡ ಸಾಹಿತ್ಯ ಪರಿಷತ್ತಿನ ವಿರುದ್ಧದ ಕೋಪವೂ ತಿಳಿಯುತ್ತದೆ. ಅಷ್ಟೇ ಅಲ್ಲ, ಆ ದಿನಗಳಲ್ಲಿ ಮೆರೆಯುತ್ತಿದ್ದ ಸಾಹಿತ್ಯ ಜನರ ನೋವಿಗೆ ಮಿಡಿಯುತ್ತಿಲ್ಲ ಎಂಬ ಸಿಟ್ಟೂ ಇದೆ. ಮುಂದೆ ಇದೇ ಬಂಡಾಯ ಜಡಗೊಂಡದ್ದನ್ನೂ ನಾವು ಕಾಣುತ್ತೇವೆ. ಆದರೆ ಬಂಡಾಯ ಎನ್ನುವುದು ಒಂದು ಮನೋಧರ್ಮವಾಗಿ, ಬದುಕನ್ನು ಬೇರೊಂದು ನಿಟ್ಟಿನಲ್ಲಿ ನೋಡುವುದಕ್ಕೆ ಒತ್ತಾಯಿಸಿದ್ದು ಸಾಹಿತ್ಯ ಕ್ಷೇತ್ರದಲ್ಲಿ ಹೊಸ ಸಂಚಲನಕ್ಕೆ ಕಾರಣವಾಯಿತು ಎಂಬುದನ್ನು ಮರೆಯಲಾಗದು.
ಮಡಿಕೇರಿಯಲ್ಲಿ ೮೦ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸದ್ಯದಲ್ಲಿಯೇ ನಡೆಯಲಿದೆ. ಅದಕ್ಕೂ ಮುನ್ನ ಮೂಡಬಿದಿರೆಯಲ್ಲಿ ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್ ಜಗಮಗಿಸಲಿದೆ. ಈ ಹೆಸರುಗಳನ್ನೇ ನೋಡಿ: ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಎಂದರೇನು ಅರ್ಥ? ಕನ್ನಡ ಇರುವುದು ಕರ್ನಾಟಕದಲ್ಲಿ ಮಾತ್ರ. ಕರ್ನಾಟಕದ ಚೌಕಟ್ಟಿನಲ್ಲಿ ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳನವೇ ಮುಖ್ಯವಾದದ್ದು. ಅಖಿಲ ಭಾರತ, ವಿಶ್ವ ಇವೆಲ್ಲ ಅರ್ಥವಿಲ್ಲದ ಮಾತುಗಳು. ಜಾಗತಿಕ ಮಟ್ಟದಲ್ಲಿ ಅಂದರೆ ಅನೇಕ ರಾಷ್ಟ್ರಗಳಲ್ಲಿ ಆಡುವ, ಓದುವ, ಬರೆಯುವ, ವ್ಯವಹರಿಸುವ ಭಾಷೆಗಳಾದರೆ ಅಂಥ ಭಾಷೆಗಳಿಗೆ ವಿಶ್ವ ಸಮ್ಮೇಳನ, ಜಾಗತಿಕ ಸಮ್ಮೇಳನ ಎಂದರೆ ಅರ್ಥ ಇರಬಹುದು. ಆದರೆ ಕನ್ನಡಕ್ಕೆ? ಅದು ನಮ್ಮಲ್ಲಿಯೇ ಅಂದರೆ ಕರ್ನಾಟಕದಲ್ಲಿಯೇ ಬೆಳಗಬೇಕು, ಮೆರೆಯಬೇಕು, ಎಲ್ಲ ಗೌರವ ಗಳಿಸಿಕೊಳ್ಳಬೇಕು. ಇದನ್ನು ಸಾಧ್ಯವಾಗಿಸದ ನಾವು ಅಖಿಲ ಭಾರತ ಎಂದು ಕರೆದು, ಇಲ್ಲವೇ ವಿಶ್ವ ಸಮ್ಮೇಳನ ಎಂದು ಕರೆದು ಹುಸಿ ಪ್ರತಿಷ್ಠೆಯನ್ನು ತಂದುಕೊಳ್ಳಲು ನೋಡುತ್ತೇವೆ; ಗಾಳಿಬುರುಡೆಯಂತೆ ಉಬ್ಬಲು ನೋಡುತ್ತೇವೆ. ವಿಶ್ವಕನ್ನಡ ಎಂದ ಕೂಡಲೇ ಸರ್ಕಾರ ಹೆಚ್ಚು ಹಣವನ್ನು ಕೊಡಬಹುದು; ಹೆಚ್ಚಿನ ಪ್ರಚಾರ ಸಿಕ್ಕಬಹುದು. ಆದರೆ ನಿಜಕ್ಕೂ ಅದರಿಂದ ಕನ್ನಡಕ್ಕೆ ಏನು ದೊರೆತಂತಾಗುತ್ತದೆ?
ನಮ್ಮ ಕಲೆ, ಸಾಹಿತ್ಯ, ಸಂಸ್ಕೃತಿಯ ಬಿಕ್ಕಟ್ಟುಗಳು, ರಾಜಕೀಯ ಪಲ್ಲಟಗಳು, ಭಾಷೆಗಳು ಎದುರಿಸುತ್ತಿರುವ ಗಂಡಾಂತರಗಳು, ಗಣಿಗಾರಿಕೆಯಿಂದ ಹದಗೆಡುತ್ತಿರುವ ನಮ್ಮ ಕೃಷಿಯ ಚಟುವಟಿಕೆಗಳು, ಮಾಧ್ಯಮಗಳ ಅಬ್ಬರದಲ್ಲಿ ನಲುಗುತ್ತಿರುವ ಅಭಿವ್ಯಕ್ತಿಯ ವಿವಿಧ ರೂಪಗಳು, ಕೋಮುಭಾವನೆಗಳ ಅಡಿಯಲ್ಲಿ ಸಿಕ್ಕವರ ನರಳಾಟಗಳು -ಇವೆಲ್ಲ ಇವತ್ತಿನ ತಲ್ಲಣಗಳು. ಜೊತೆಗೆ ನಮ್ಮ ಮೌಢ್ಯಗಳನ್ನು ತಡೆಯಲಾಗದ ಅಸಹಾಯಕತೆ, ಭ್ರಷ್ಟಾಚಾರದ ವಿಶ್ವರೂಪ ದರ್ಶನ, ದಿಕ್ಕೆಟ್ಟಿರುವ ಶಿಕ್ಷಣ ವ್ಯವಸ್ಥೆ, ಕುಡಿಯಲು ಸ್ವಚ್ಛ ನೀರನ್ನು, ವಾಹನಗಳು ಓಡಲು ಯೋಗ್ಯವಾದ ದಾರಿಗಳನ್ನು ಕೊಡದೆ ಜನರ ಕಣ್ಣಿಗೆ ಮಣ್ಣೆರಚುತ್ತಿರುವ ಸರ್ಕಾರಗಳು-ಇವೂ ಚರ್ಚೆಗೆ ಯೋಗ್ಯ ವಸ್ತುಗಳೇ. ಹೊಸ ತಲೆಮಾರಿನ ಬರಹಗಾರರು ಎದುರಿಸುತ್ತಿರುವ ಬಿಕ್ಕಟ್ಟುಗಳು, ನಮ್ಮ ಅಕಾಡೆಮಿಗಳು, ಪರಿಷತ್ತುಗಳು, ವಿಶ್ವವಿದ್ಯಾನಿಲಯಗಳ ಜಡಗೊಂಡ ಸ್ಥಿತಿ ಇವೆಲ್ಲವೂ ಸಾರ್ವಜನಿಕ ಸಂವಾದಕ್ಕೆ ಅಗತ್ಯ ನೆಲೆಗಟ್ಟನ್ನು ಒದಗಿಸಬಲ್ಲವು. ಅಖಿಲ ಭಾರತ ಸಮ್ಮೇಳನಗಳಾಗಲೇ, ವಿಶ್ವ ಸಮ್ಮೇಳನಗಳಾಗಲೀ ಇಂಥ ದಿಕ್ಕಿನಲ್ಲಿ ಬೆಳಕನ್ನು ಚೆಲ್ಲುವ ಕಾರ್ಯಕ್ರಮಗಳನ್ನು ಈವರೆಗೆ ಎಷ್ಟು ರೂಪಿಸಿವೆ, ಅವುಗಳಲ್ಲಿ ಎಷ್ಟು ಜನ ಪಾಲ್ಗೊಂಡಿದ್ದಾರೆ, ಇಂಥ ಸಾರ್ವಜನಿಕ ಸಂವಾದಗಳಿಗೆ ಎಷ್ಟು ವೇದಿಕೆಗಳು ನೆಲೆ ನೀಡಿವೆ?
ಸಮ್ಮೇಳನವೆಂದರೆ ಊಟ, ವಸತಿ, ಓಡಾಟ, ಅದ್ಧೂರಿಯ ಮೆರವಣಿಗೆ, ಅನೇಕರಿಗೆ ಸನ್ಮಾನ, ಜಾನಪದ ಕುಣಿತಗಳು, ಪುಸ್ತಕ ಪ್ರದರ್ಶನ ಇತ್ಯಾದಿಗೆ ಮಾತ್ರ ಸೀಮಿತವಾಗುವಂಥ ಪರಿಸ್ಥಿತಿಯೇ ಇವತ್ತಿಗೂ ಮುಂದುವರಿದಿದೆ. ಲಕ್ಷಾಂತರ ಜನರ ಜಮಾವಣೆ, ಅವ್ಯವಸ್ಥೆ ಇತ್ಯಾದಿಗಳಿಗೆ ಸಿಕ್ಕುವ ಭಾರೀ ಪ್ರಚಾರ, ಕೊಟ್ಯಂತರ ರೂಪಾಯಿ ಖರ್ಚು. ಇದಕ್ಕೆ ಪರ‍್ಯಾಯವೆಂಬಂತೆ ಕಾಣುವ ಆಳ್ವಾಸ್ ನುಡಿಸಿರಿಯಾಗಲಿ, ಧರ್ಮಸ್ಥಳದ ಸಾಹಿತ್ಯ ಸಮ್ಮೇಳನವಾಗಲೀ ಸ್ವರೂಪದಲ್ಲಿ ತುಂಬ ಭಿನ್ನವಾಗಿ ಕಾಣಿಸುವುದಿಲ್ಲ. ಊಟ, ವಸತಿ, ಓಡಾಟ, ಸಮ್ಮೇಳನದ ವ್ಯವಸ್ಥೆ, ಸನ್ಮಾನಗಳು, ಪಲ್ಲಕ್ಕಿ ಮೆರವಣಿಗೆ ಇತ್ಯಾದಿ ಎಲ್ಲವೂ ಅಚ್ಚುಕಟ್ಟು; ಬಂದ ಜನರಿಗೂ ತೃಪ್ತಿ. ಸರ್ಕಾರದ ಬೊಕ್ಕಸವನ್ನೂ ಇವರು ನೆಚ್ಚಿಕೊಂಡಿಲ್ಲ. ಆದರೆ ಇಲ್ಲಿನ ಸಂವಾದಗಳು, ಗೋಷ್ಠಿಗಳು, ಸಂಕಿರಣಗಳು ಎಷ್ಟು ಅರ್ಥಪೂರ್ಣವಾಗಿರುತ್ತವೆ? ಜ್ವಲಂತ ಸಮಸ್ಯೆಗಳಿಗೆ ಈ ಮೇಳಗಳು ಎಷ್ಟು ಸ್ಪಂದಿಸಿವೆ? ಈ ಮೇಳಗಳು ಯಾರನ್ನು ತೃಪ್ತಿಪಡಿಸಲು, ಯಾರ ಪ್ರತಿಷ್ಠೆಯನ್ನು ಹೆಚ್ಚಿಸಲು ನಡೆಯುತ್ತಿವೆ? ಯಾವ ಶಕ್ತಿಗಳು, ಯಾರ ಹಿತಾಸಕ್ತಿಗಳು ಇಂಥ ಮೇಳಗಳ ಹಿನ್ನೆಲೆಯಲ್ಲಿ ಕ್ರಿಯಾಶೀಲವಾಗಿರುತ್ತವೆ? ಇಂಥ ಪ್ರಶ್ನೆಗಳನ್ನು ನಾವು ಎದುರಿಸುವಂತಾದರೆ ಬೇರೆಯ ಸತ್ಯಗಳೇ ಹೊರಬರುತ್ತವೆ.
ಕನ್ನಡ ನಾಡಿನ ಮುಗ್ಧರ, ಬಡಜನತೆಯ ಧಾರ್ಮಿಕ ನಂಬಿಕೆಗಳನ್ನೇ ಬಂಡವಾಳ ಮಾಡಿಕೊಳ್ಳುವ ಮೌಢ್ಯಾಚರಣೆಗಳು, ಮಡೆಸ್ನಾನದಂಥ ಅಸಹ್ಯ ಆಚರಣೆಗಳು, ಅತ್ಯಂತ ಹೇಯ ರೀತಿಯಲ್ಲಿ ಕೆಳ ಜಾತಿಗಳನ್ನು ಶೋಷಿಸುವ ಅಜಲು ಪದ್ಧತಿ, ಮನುಷ್ಯರ ಸಮಾನತೆ ಮತ್ತು ಘನತೆಯನ್ನು ಅಣಕಿಸುವ ಪಂಕ್ತಿಭೇದದ ಊಟಗಳು, ಪ್ರವೇಶವನ್ನು ಜಾತಿ ಆಧಾರದ ಮೇಲೆ ನಿರಾಕರಿಸುವ ದೇವಾಲಯಗಳು, ಮಠಗಳು ಹೆಚ್ಚಾಗಿ ಇರುವುದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲೇ. ಕೋಮುವಾದ ಎಂಬುದು ಭೂತದಂತೆ ಬೆಳೆದಿರುವುದು ಈ ಜಿಲ್ಲೆಗಳಲ್ಲೇ. ಪದ್ಮಲತಾ, ವೇದವಲ್ಲಿ, ಸೌಜನ್ಯ ಹೀಗೆ ಯುವತಿಯರು ಸಾಲು ಸಾಲಾಗಿ ನಿಗೂಢವಾಗಿ ಅತ್ಯಾಚಾರ ಮತ್ತು ಕೊಲೆಗಳಿಗೆ ಬಲಿಯಾಗಿರುವುದು, ಈ ಕೃತ್ಯಗಳ ಹಿಂದಿನ ಶಕ್ತಿಗಳೇ ಎಲ್ಲವನ್ನೂ ನಿಯಂತ್ರಿಸುತ್ತಿರುವುದು ಈ ಜಿಲ್ಲೆಗಳಲ್ಲೇ. ಕಾಲೇಜು ತರುಣ ತರುಣಿಯರು ಪರಸ್ಪರ ಸ್ನೇಹದಿಂದ ಮಾತನಾಡಲಾಗದ ಬಿಕ್ಕಟ್ಟು ಉಂಟಾಗಿರುವುದೂ ಈ ಜಿಲ್ಲೆಯಲ್ಲಿಯೇ. ಆಳ್ವಾಸ್ ನುಡಿಸಿರಿ, ಧರ್ಮಸ್ಥಳದ ಸಾಹಿತ್ಯ ಸಮ್ಮೇಳನಗಳು ನಡೆಯುವುದೂ ಈ ಜಿಲ್ಲೆಗಳಲ್ಲೇ. ತಮ್ಮ ನೆಲದಲ್ಲಿಯೇ ನಡೆಯುವ ಈ ಘೋರ ತಲ್ಲಣಗಳ ಬಗ್ಗೆ ಈ ಸಮ್ಮೇಳನಗಳಲ್ಲಿ ಈವರೆಗೆ ಒಂದು ಸಂವಾದ ಅಥವಾ ಒಂದು ನಿರ್ಣಯ ಅಂಗೀಕಾರ ಯಾಕೆ ಸಾಧ್ಯವಾಗಿಲ್ಲ? ಸಾಹಿತ್ಯ ಎನ್ನುವುದು ’ಜನರ ನೋವಿಗೆ ಮಿಡಿವ ಪ್ರಾಣಮಿತ್ರ’ನಾಗುವುದು ಇಂಥ ಉರಿಯುವ ಸಮಸ್ಯೆಗಳಿಗೆ ಮುಖಾಮುಖಿಯಾದಾಗಲೇ.
ಅಖಿಲ ಭಾರತ ಅಥವಾ ವಿಶ್ವ ಸಮ್ಮೇಳನ ಎಂದು ಹೇಳಿಕೊಳ್ಳುವ ’ಸಾಹಿತ್ಯ ಸಮ್ಮೇಳನ’ದ ಉದ್ಘಾಟನೆಯ ಗೌರವವನ್ನು ಒಬ್ಬ ಸಾಹಿತಿಗೆ ನೀಡಲಾಗುತ್ತಿಲ್ಲ ಎಂದರೆ ಈ ಮೇಳಗಳ ಹಿಂದಿರುವ ಉದ್ದೇಶವೇನು? ಸಾಹಿತ್ಯ ಮತ್ತು ಕಲೆಗಳನ್ನು ಒಂದರೊಳಗೊಂದು ಬೆರಸಿ, ಯಾವುದಕ್ಕೂ ಫೋಕಸ್ ಇಲ್ಲದಂತೆ ಮಾಡಿ, ವೈಭವವನ್ನೇ ಪ್ರಧಾನಮಾಡಿರುವ ಆಳ್ವಾಸ್ ವಿಶ್ವ ನುಡಿಸಿರಿಯ ಉದ್ದೇಶವೇನು? ಇದಕ್ಕಾಗಿ ವೆಚ್ಚವಾಗುವ ಕೋಟಿಗಟ್ಟಲೆ ಹಣ ಎಲ್ಲಿಂದ ಬರುತ್ತದೆ? ಇವರನ್ನು ಪೋಷಿಸುವವರು ಯಾರು? ಇವರ ಮಾರ್ಗದರ್ಶಕರು ಯಾರು? ಸ್ವಾಗತ ಸಮಿತಿಯ ಉದ್ದೋಉದ್ದ ಪಟ್ಟಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಇಂಥ ಪ್ರಶ್ನೆಗಳಿಗೆ ಉತ್ತರ ಸಿಗುತ್ತದೆ.
ಇಂಥ ಹಿನ್ನೆಲೆಯಲ್ಲಿಯೇ ಅಭಿಮತ, ಕರ್ನಾಟಕ ಜನಸಾಹಿತ್ಯ ಸಂಘಟನೆ, ಸಹಮತ, ನಾವು ನಮ್ಮಲ್ಲಿ, ಚಿಂತನ, ಲಡಾಯಿ, ಆದಿಮ ಇತ್ಯಾದಿ ಪರ‍್ಯಾಯಗಳು ಹುಟ್ಟಿಕೊಳ್ಳುತ್ತವೆ. ಇವು ನಡೆಸುವ ಮೇಳಗಳಲ್ಲಿ ಲಕ್ಷಾಂತರ ಜನ ಸೇರುವುದಿಲ್ಲ; ಹಣದ ಹೊಳೆ ಹರಿಯುವುದಿಲ್ಲ. ಊಟ ವಸತಿಯ ರಾಜವೈಭವವೂ ಇರುವುದಿಲ್ಲ. ಆದರೂ ಅಂಥ ಪರ್ಯಾಯಗಳು ಸಮಾಜದ ಹಿತವನ್ನು, ಆರೋಗ್ಯವನ್ನು ಕಾಪಾಡುತ್ತವೆ.
Subscribe to:
Posts (Atom)