Sunday, 22 December 2013

ಜೀವ ಎರಡು: ಆರ್.ವಿ.ಭಂಡಾರಿ- ರಹಮತ್ ತರಿಕೆರೆ

ಜೀವ ಎರಡು: ಆರ್.ವಿ.ಭಂಡಾರಿ
೮೦ರ ದಶಕ. ಬಂಡಾಯ ಸಾಹಿತ್ಯ ಚಳುವಳಿಯ ಸಮ್ಮೇಳನಗಳು ನಡೆಯುತ್ತಿದ್ದವು. ಯುವಕರಾಗಿದ್ದ ನಾವು ಹೆಗಲಿಗೊಂದು ಬ್ಯಾಗು ನೇತುಹಾಕಿಕೊಂಡು, ಅದರಲ್ಲಿ ಒಂದು ಜತೆ ಬಟ್ಟೆ ತುರುಕಿಕೊಂಡು, ಕರ್ನಾಟಕದ ಯಾವುದೊ ಒಂದು ಮೂಲೆಯ ಊರಿಗೆ ಹೋಗುತ್ತಿದ್ದೆವು. ಆಗ ತಪ್ಪದೆ ಕಾಣಿಸುತ್ತಿದ್ದ ಮುಖಗಳಲ್ಲಿ ಭಂಡಾರಿಯವರದೂ ಒಂದು. ಸಾಮಾನ್ಯವಾಗಿ ಛತ್ರಗಳಲ್ಲಿ ಸಮ್ಮೇಳನ ನಡೆಯುತ್ತಿತ್ತು. ಅಲ್ಲೇ ವಸತಿ. ಬೆಳಿಗ್ಗೆ ಎದ್ದು, ಕೈಲಿ ಬ್ರಶ್ಶು ಹಿಡಿದು ಟೂತ್‌ಪೇಸ್ಟಿಗಾಗಿ ಭಂಡಾರಿ ಇರುವ ರೂಮಿಗೆ ದಾಳಿ ಇಡುತ್ತಿದ್ದೆವು. ಹೆಸರಿಗೆ ತಕ್ಕಂತೆ ಅವರ ಚೀಲ ಅನೇಕ ವಸ್ತುಗಳ ಭಂಡಾರವೇ. ಸಣ್ಣಗಾತ್ರದ ಸೋಪುಗಳು, ಕರಪತ್ರ, ಪುಸ್ತಕ, ಚಾಕಲೇಟು, ಹೆಚ್ಚಿನ ಪೆನ್ನುಗಳು, ಅಡಕೆ ಇತ್ಯಾದಿ ಬಹೂಪಯೋಗಿ ವಸ್ತುಗಳು ಅದರಲ್ಲಿ ಇರುತ್ತಿದ್ದವು. ಅವರಲ್ಲಿಗೆ ಹೋದರೆ, ಹಿಡಿದವರ ಬ್ರಶ್ಶುಗಳಿಗೆ ತಮ್ಮಲ್ಲಿದ್ದ ಪೇಸ್ಟನ್ನು ಮಕ್ಕಳಿಗೆ ಬೆಲ್ಲಹಂಚುವಂತೆ ಹಂಚುವ ಭಂಡಾರಿಯವರು ಇರುತ್ತಿದ್ದರು. ಪೇಸ್ಟ್ ಕೊಟ್ಟಮೇಲೆ ಮೆಲ್ಲಗೆ ಕೇಳುತ್ತಿದ್ದರು-‘ನಿಮಗೆ ಪೌಡರು ಬೇಕಾದರೂ ಕೇಳಿ. ನನ್ನಲ್ಲಿದೆ’; ರಾತ್ರಿ ಮಲಗಿದಾಗ ಹಾಕಿಕೊಂಡ ಬಟ್ಟೆಯನ್ನು ಬದಲಿಸಿದೆ ಸೋಮಾರಿತನದಿಂದ ಓಡಾಡುವ ನಮ್ಮಲ್ಲಿ ನೀಟಾಗಿ ಶೇವ್ ಮಾಡಿ, ಜಳಕ ಮುಗಿಸಿ, ಶುಭ್ರವಸ್ತ್ರ ಧರಿಸಿ, ಗುಳಿಬಿದ್ದ ಕೆನ್ನೆಗಳಿಗೆ ಸ್ನೋ ಪೌಡರು ಹಚ್ಚಿಕೊಂಡು ಘಮಘಮಿಸುತ್ತ ಭಂಡಾರಿಯವರು ಕೀಳರಿಮೆ ಹುಟ್ಟಿಸುತ್ತಿದ್ದರು. ಅದೇನು ಶೋಕಿಯಲ್ಲ. ಶಾಲಾ ಮಾಸ್ತರರಾಗಿದ್ದ ಅವರ ಶಿಸ್ತೊ, ಚರ್ಮ ಸುಕ್ಕಾಗಿ ಬಿಗಿತ ಮಾಡುತ್ತಿದ್ದುದ್ದಕ್ಕೆ ಹಾಗೆ ಮಾಡುತ್ತಿದ್ದರೊ ಗೊತ್ತಿಲ್ಲ.

ಹೊನ್ನಾವರದಿಂದ ಪೂರ್ವಕ್ಕೆ ಹತ್ತು ಹದಿನೈದು ಮೈಲಿ ಪಶ್ಚಿಮಘಟ್ಟಗಳಲ್ಲಿ ನುಸುಳಿ ಹೋದರೆ, ಅಲ್ಲಿ ಕರೆಕೋಣ ಎಂಬ ಊರು ಸಿಗುತ್ತದೆ. ಅದು ಭಂಡಾರಿಯವರಿದ್ದ ಜಾಗ. ಅಲ್ಲಿಂದ
ನಾಲ್ಕಾರು ಬಸ್ಸು ಬದಲಿಸಿ, ಶಾಲೆಗೆ ರಜೆ ಹಾಕಿ ಭಂಡಾರಿಯವರು ಉತ್ತರಕರ್ನಾಟಕದ ಯಾವುದೊ ಪುಟ್ಟ ಊರಿಗೆ ಸಮ್ಮೇಳನಕ್ಕೆಂದು ಬರುತ್ತಿದ್ದರು. ಅವರದೂ ಹೊನ್ನಾವರದ ಅವಧಾನಿಯವರದೂ ಒಂದು ಜೋಡಿ. ಕೆಂಪಗೆ ಎತ್ತರಕ್ಕೆ ಮಿನುಗುವ ಮುಖದ ಕವಳ ಮೆದ್ದು ಬಾಯೆಲ್ಲ ಕೆಂಪುಮಾಡಿಕೊಂಡ ಅವಧಾನಿಯವರ ಜತೆ, ಒಣಮೀನಿನಂತೆ ಬಾಡಿದ ಬೆಳ್ಳಿಕೂದಲಿನ ಬೊಚ್ಚುಬಾಯಿಯ ಭಂಡಾರಿಯವರು. ಅವಧಾನಿಯವರು ತೀರಿಕೊಂಡ ಬಳಿಕ ಭಂಡಾರಿಯವರು ಒಬ್ಬರೇ ಬರುತ್ತಿದ್ದರು. ಉಬ್ಬಸದ ಸಮಸ್ಯೆಯಿದ್ದ ಭಂಡಾರಿಯವರಿಗೆ ನಮ್ಮ ಬಯಲುಸೀಮೆಯ ಧೂಳು ಬಿಸಿಲು ಸೆಖೆ ಆಗುತ್ತಿರಲಿಲ್ಲ. ಉಸಿರಾಡಲು ಕಷ್ಟಪಡುತ್ತ, ಸಭಾಂಗಣದ ಒಂದು ಮೂಲೆಯಲ್ಲಿ ಕುಳಿತು ವಿದ್ಯಾರ್ಥಿಯಂತೆ ಭಾಷಣಗಳ ನೋಟ್ಸ್ ಮಾಡುತ್ತಿದ್ದರು. ಕಿರಿಯರು ಭಾಷಣ ಮಾಡಿದರೆ, ಚೆಂದವಾಯ್ತು ಮಾತು ಎಂದು ಹೆಗಲಮೇಲೆ ಕೈಹಾಕಿ ಕಣ್ಣಲ್ಲಿ ಹೊಳಪನ್ನು ಹೊಳೆಸುತ್ತಿದ್ದರು.

ನಮ್ಮಂತಹ ಚಿಕ್ಕವರು ಎಲ್ಲಿಯಾದರೂ ಒಂದು ಲೇಖನ ಪ್ರಕಟಿಸಿದರೆ, ಕೂಡಲೇ ತಿಳಿನೀಲಿ ಇಂಕಿನಲ್ಲಿ ಗೀಚುಬಾಚಾಗಿ ಬರೆದ ಅಕ್ಷರಗಳ ನಸುಹಳದಿ ಬಣ್ಣದ ಒಂದು ಪೋಸ್ಟ್ ಕಾರ್ಡು ತಪ್ಪದೆ ಬರುತ್ತಿತ್ತು. ಅದರಲ್ಲಿ ಅವರ ಮೆಚ್ಚಿಕೆಯೊ ಭಿನ್ನಮತವಿದ್ದರೆ ವಿಮರ್ಶೆಯೊ ಇರುತ್ತಿತ್ತು. ತಮ್ಮ ಕಾರ್ಡು ಪ್ರತಿಕ್ರಿಯೆಗಳಿಂದ ನಾಡಿನ ಬಹುತೇಕ ಲೇಖಕರ ಜತೆ ಕಾಡಮೂಲೆಯಲ್ಲಿದ್ದ ಭಂಡಾರಿಯವರು ಸಂಪರ್ಕ ಇರಿಸಿಕೊಂಡಿದ್ದರು.

ಆ ಪುಟ್ಟಹಳ್ಳಿಯಲ್ಲಿದ್ದ ಭಂಡಾರಿಯವರು, ಜ್ಞಾನದಾಹಿ. ಎಲ್ಲೆಲ್ಲಿಂದಲೋ ಪುಸ್ತಕ ತರಿಸಿ ಓದುತ್ತಿದ್ದರು. ಅಲ್ಲಿದ್ದೇ ಪಿಎಚ್‌ಡಿ, ಮಾಡಿದರು. ನಿರಂಜನ ಅವರ ಪ್ರಿಯ ಲೇಖಕ. ವರ್ಗಸಂಘರ್ಷ ಅವರಿಗೆ ಪ್ರಿಯವಾದ ಪರಿಕಲ್ಪನೆ. ಕ್ಷೌರಿಕವೃತ್ತಿಯಿಂದ ಬಂದಿದ್ದ ಭಂಡಾರಿಯವರು, ಜಾತಿವ್ಯವಸ್ಥೆಯ ಅಪಮಾನ ಉಂಡವರು. ಹೀಗಾಗಿ ಯಾರಾದರೂ ಅಸಮಾನತೆ ಪ್ರತಿಪಾದಿಸುವ ಚಿಂತನೆಗಳನ್ನು ರೊಮ್ಯಾಂಟಿಸೈಜ್ ಮಾಡಿದರೆ, ಗತಕಾಲವನ್ನು ವೈಭವೀಕರಿಸಿದರೆ, ಅವರಿಗೆ ರುಮ್ಮನೆ ಕೋಪ ಬರುತ್ತಿತ್ತು. ‘ಹೌದು ಸ್ವಾಮಿ, ನಿಮ್ಮ ಭವ್ಯ ಸಂಸ್ಕೃತಿಯಲ್ಲಿ ನನ್ನಪ್ಪನೂ ನಾನೂ ಪೊಂಯ್ಞ್ ಎಂದು ವಾಲಗ ಊದಿಕೊಂಡು ಇದ್ದೆವು’ ಎಂದು ಜಗಳಕ್ಕೆ ಹೋಗುತ್ತಿದ್ದರು. ತಮಗೆ ಒಪ್ಪಿಗೆಯಾಗದ ವಿಚಾರವಿದ್ದರೆ ಅವರ ಭಿನ್ನಮತದ ಪ್ರತಿಕ್ರಿಯೆ ಪ್ರಕಟವಾಗುತ್ತಿತ್ತು. ಅಂಕೋಲೆಯ ವಿಷ್ಣುನಾಯಕರು ಕೆಲವು ವರ್ಷಗಳ ಹಿಂದೆ ‘ಸಕಾಲ’ ಎಂಬ ಪತ್ರಿಕೆ ಹೊರಡಿಸುತ್ತಿದ್ದರು. ಅದರಲ್ಲಿ ಭಂಡಾರಿಯವರು ಸ್ಥಳೀಯರ ಜತೆ ತಾತ್ವಿಕವಾಗಿ ಜಗಳ ಮಾಡುವ ಇಂತಹ ಪತ್ರಗಳು ಲೇಖನಗಳು ಇರುತ್ತಿದ್ದವು. ಎರಡು ಮೂರು ತಿಂಗಳ ಕದನ. ಒಮ್ಮೆ ಭಂಡಾರಿಯವರಿಗೆ ಕೇಳಿದೆ. ‘ನಿಮಗೆ ಸುಸ್ತಾಗೋಲ್ಲವೇ?’ ಎಂದು. ‘ಅಲ್ಲ, ಮಾರಾಯರೆ ಅಂವ್ಞ ಹೀಗೆ ಬರೆಯುವುದಾ? ಅವನು ನನ್ನ ಗೆಳೆಯನೇ. ಒಳ್ಳೆಯ ವ್ಯಕ್ತಿ. ಆದರೆ ಅವನ ಚಿಂತನೆ ಸರಿಯಿಲ್ಲ. ಅದಕ್ಕೆ ವಾದ ಮಾಡುವೆ’ ಎನ್ನುವರು. ತಾಳಮದ್ದಲೆಯ ಕಲಾವಿದರಾಗಿದ್ದ ಭಂಡಾರಿಯವರಲ್ಲಿ ವಿಚಿತ್ರ ಜಿಗುಟುತನವಿತ್ತು. ಯಾವುದನ್ನೂ ಸುಲಭಕ್ಕೆ ಬಿಟ್ಟುಕೊಡುವ ಜಾಯಮಾನವಿರಲಿಲ್ಲ. ಇಂತಹ ಭಂಡಾರಿಯವರ ಉಬ್ಬಸದ ದಾಳಿಗೆ ಸೋತುಹೋದರು. ಕಳೆದ ಒಂದು ವರ್ಷದಿಂದ ನೋವುಣ್ಣುತ್ತಿದ್ದ ಅವರು, ಜೀವ ಸಾಕಾಗಿ, ಕಳೆದ ತಿಂಗಳು ಕಣ್ಮುಚ್ಚಿದರು. ಸದಾ ವರ್ಗಸಂಘರ್ಷದ ಬಗ್ಗೆ ಮಾತಾಡುತ್ತಿದ್ದ ಅವರು ಮಣಿಪಾಲದ ಆಸ್ಪತ್ರೆಯಲ್ಲಿ ಕಣ್ಮುಚ್ಚಿದುದು ಒಂದು ವ್ಯಂಗ್ಯವೊ ಏನೊ?

ಆರ್.ವಿ.ಭಂಡಾರಿ ಉತ್ತರಕನ್ನಡ ಜಿಲ್ಲೆಯ ಬಹುತೇಕ ಬರೆಹಗಾರರು-ಗೌರೀಶಕಾಯ್ಕಿಣಿ, ವಿಷ್ಣುನಾಯಕ, ಸು.ರಂ.ಎಕ್ಕುಂಡಿ ಮುಂತಾದವರು ಶಿಕ್ಷಕರು. ಇವರೆಲ್ಲ ಬರೆಹಗಾರರು ಮಾತ್ರವಲ್ಲ, ತಮ್ಮ ಭಾಗದ ವೈಚಾರಿಕ ಚಳುವಳಿಗಳಲ್ಲಿ ಭಾಗವಹಿಸಿದವರು. ದಿನಕರ ದೇಸಾಯಿಯವರ ಸಂಗಾತಿಯಾಗಿದ್ದ, ಅಂಕೋಲೆಯ ಪ್ರಸಿದ್ಧ ಭೂಹೋರಾಟಗಳ ಹೀರೋ ಆಗಿದ್ದ ಪಿಕಳೆಯವರೂ ಒಬ್ಬ ಮಾಸ್ತರರು. ಇಂತಹ ಪರಂಪರೆಯಲ್ಲಿ ಬಂದ ಭಂಡಾರಿಯವರು ಬರೆದಿದ್ದು ಬಹಳವಿಲ್ಲ. ಅದು ಕನ್ನಡದ ದೊಡ್ಡ ಬರೆಹ ಹೌದೊ ಅಲ್ಲವೊ ಬೇರೆ ಪ್ರಶ್ನೆ. ಆದರೆ ಅವುಗಳಲ್ಲಿ ಮಿಡಿದ ಮನಸ್ಸು ಮಾತ್ರ ಮಾನವೀಯತೆಯದು. ತಾಯ್ತನದ್ದು.

ಕೆರೆಕೋಣಕ್ಕೆ ಹೋಗುತ್ತಿದ್ದ ಗೆಳೆಯರನ್ನು ಭಂಡಾರಿಯವರು, ಹತ್ತಿರದ ಕರಿಕಾಲಮ್ಮನ ಗುಡ್ಡಕ್ಕೆ ಕರೆದೊಯ್ಯುತ್ತಿದ್ದರು. ಅಲ್ಲಿಂದ ಸೂರ್ಯ ಕೆಂಪಗೆ ಕಡಲಲ್ಲಿ ಮುಳುಗುವುದು ಕಾಣುವುದು. ಸಮುದ್ರ ಕಾದಗಾಜಿನ ರಸದಂತೆ ಥಳಥಳ ಹೊಳೆಯುತ್ತಿರುವ ಅರಬ್ಬಿ ಕಡಲಿಗೆ, ಘಟ್ಟಗಳಲ್ಲಿ ಎಲ್ಲೋ ಹುಟ್ಟಿ ಯಕ್ಷಗಾನದ ಬಣ್ಣವೇಷದವರಂತೆ ಕುಣಿದು ಕುಪ್ಪಳಿಸಿದ ನದಿಯು ದಣಿದುಬಂದು ಅಸಹಾಯಕವಾಗಿ ಮಿಂಚಿನ ಬಾಲದಂತೆ ಸೇರುವುದು. ಅದನ್ನು ಭಂಡಾರಿಯವರು ‘ಕಾಣಿ, ನದಿ ಕಡಲನ್ನು ಸೇರುವದು’ ಎಂದು ಮಕ್ಕಳಂತೆ ಉತ್ಸಾಹದಿಂದ ತೋರುವರು. ನನಗೆ ಅವರು ಮಕ್ಕಳಿಗಾಗಿ ಬರೆದ ಸಾಹಿತ್ಯವೇ ಇಷ್ಟ. ಅದರಲ್ಲಿ ಅವರ ಮಗುವಿನಿಂತಹ ಮನಸ್ಸು ಇದೆ. ಸಮಾಜವನ್ನು ಬರೆಹದಿಂದಲೂ ನೈತಿಕವಾಗಿ ತಿದ್ದಬಹುದು ಎಂಬ ಕನಸು ಇದೆ.
ಪುಟದ ಮೊದಲಿಗೆ
 
Votes:  3     Rating: 5    

 Sunanda Kadime Bhandariyavarannu kurithu tumbhaa bhavapoornavaagi barediddhare, Rahamath Tarikereyavara baraha aapthavagiddukondoo Bhandariyavara jeevana, siddhantha, avara jeevana shaili haagu avara hinneleyannu sundaravaagi niroopisutthadhe. Elli vyakthi chitragalu prakatavadharu avannu kuthoohaladindha odhuva nanage Ponnammal haagu Bhandari ibbaroo nanna smaraneya khajaneyolage hosadaagi serikondaru ennisidhe. Thanks Kendasampige....
 Moulyayutha baalannu baalida eradu hirijeevagala nenapu, parichaya sundaravaagithu. R,V.Bhandariyavarige karnataka Sahitya Academiya 2005 ra Gourava prashasthi praapthavadaga avrnnu kandu, avara pustakagalannu padeva bhagya odagithu.--Shyamala....
 Tumba Chennagi Baredidiri Nenapugala Nenapugalu,.,.,,.,.,.,.,., Ismail Mk Shivamogga(UAE)...
 ಸಾರ್, ನಮ್ಮಿಂದ ಕಣ್ಮರೆಯಾದ ಎರಡು ಜೀವಗಳ ಕುರಿತು ತುಂಬ ಸೂಕ್ಷ್ಮವಾಗಿ ಅವರ ವ್ಯಕ್ತಿತ್ವದ ವಿಶಿಷ್ಟತೆ ಮತ್ತು ಮಿತಿಗಳನ್ನು ವಿವೇಚಿಸಿದ ಬರೆಹ ತುಂಬ ಆಪ್ತವಾಗಿದೆ. ವದಂನೆಗಳು...
 'ಎರಡು ಜೀವ'ಗಳ ವ್ಯಕ್ತಿ ಚಿತ್ರವನ್ನು ಇಲ್ಲಿ ಜೀವ೦ತ ಇಟ್ಟಿದ್ದೀರಿ.ಪೊನ್ನಮ್ಮಾಳರನ್ನು ಹಲವು ವರ್ಷಗಳ ಹಿ೦ದೆ ನೀನಾಸ೦ ಶಿಬಿರದಲ್ಲಿ ಭೇಟಿಯಾಗುವ ಆಪ್ತ ಕ್ಷಣ ನನಗೆ ಒದಗಿಬ೦ದಿತ್ತು.ಬಹಳ ಹೊತ್ತು ಅವರ ಕೈ ಹಿಡಿದು ಜೊತೆಗೇ ಕುಳಿತಿದ್ದೆ.ತಾಯ್ತನದ ಸ್ಪರ್ಶ.....
 ರಹಮತ್ ತುಂಬಾ ಚೆನ್ನಾಗಿ ಬರೆದಿದೀರಿ. ಪೊನ್ನಮ್ಮಾಳ್ ಅವರನ್ನು ಒಂದೆರಡು ಸಲ ಭೇಟಿಯಾಗಿದ್ದು ನೆನಪಾಯಿತು. ಭಂಡಾರಿಯವರ ಕುರಿತು ಈ ವಿವರಗಳು ನನಗೆ ತಿಳಿದಿರಲಿಲ್ಲ.ಮನಕಲಕುವಂತಿದೆ. ಥ್ಯಾಂಕ್ಸ್ ಕೆಂಡಸಂಪಿಗೆ. -ಸುಮಿತ್ರಾ....
 ಎರಡು ಹಿರಿಯ ಜೀವಗಳ ಬಗ್ಗೆ ಎಷ್ಟು ಚೆನ್ನಾಗಿ ಬರೆದಿದ್ದೀರಿ. ಓದುತ್ತಾ ಕಣ್ಣಲ್ಲಿ ನೀರು ಬಂತು. -ಇಸ್ಮಾಯಿಲ್...

No comments:

Post a Comment