Saturday 21 December 2013

ಜನನುಡಿ : ಪ್ರತಿಭಟನೆಯ ದಾರಿಯಾಗಿ ಪರ‍್ಯಾಯ

ಜನನುಡಿ : ಪ್ರತಿಭಟನೆಯ ದಾರಿಯಾಗಿ ಪರ‍್ಯಾಯ





ಜಿ.ಪಿ.ಬಸವರಾಜು


ಪರ‍್ಯಾಯ ಎನ್ನುವುದು ಒಂದು ವ್ಯವಸ್ಥೆಯಲ್ಲ; ಅದೊಂದು ಸಿದ್ಧ ಮಾದರಿಯೂ ಅಲ್ಲ. ಜಡಗಟ್ಟಿದ ವ್ಯವಸ್ಥೆಯ ವಿರುದ್ಧ ಪ್ರಕಟಗೊಳ್ಳುವ ಕೋಪ ಕಂಡುಕೊಂಡ ದಾರಿ. ಕಾಲ, ಸಂದರ್ಭ ಮತ್ತು ಸನ್ನಿವೇಶಗಳನ್ನು ಅವಲಂಬಿಸಿ ಈ ಪರ್ಯಾಯ ರೂಪ ಪಡೆದುಕೊಳ್ಳುತ್ತದೆ. ವ್ಯವಸ್ಥೆಯ ವಿರುದ್ಧ ಹುಟ್ಟುವ ಈ ಪರ್ಯಾಯ, ವ್ಯವಸ್ಥೆಯೊಳಗಿನ ಜಡತೆಯನ್ನು ತೊಡೆದುಹಾಕಲು ನೋಡುತ್ತದೆ. ವ್ಯವಸ್ಥೆಯೊಳಗೆ ಬೇರುಬಿಟ್ಟ ಶಕ್ತಿಗಳನ್ನು ಕೊನೆಗಾಣಿಸಲು ನೋಡುತ್ತದೆ. ಹೊಸ ವ್ಯವಸ್ಥೆಯೊಂದನ್ನು ಹುಟ್ಟುಹಾಕಿ, ಈ ವ್ಯವಸ್ಥೆಯ ಮೂಲಕ ಬದುಕಿನ ಅರ್ಥವನ್ನು ವಿಸ್ತರಿಸಲು, ಜನಹಿತಕ್ಕೆ ಪೂರಕವಾಗಲು ನೋಡುತ್ತದೆ. ಈ ಆಶಯವೇ ಪರ್ಯಾಯದ ಚೈತನ್ಯವಾಗಿರುತ್ತದೆ. ಈ ಚೈತನ್ಯ ಬರಿದಾಗುವವರೆಗೆ ಪರ್ಯಾಯ ಜೀವಂತವಾಗಿರುತ್ತದೆ. ನಂತರ ಅದೇ ಒಂದು ವ್ಯವಸ್ಥೆಯಾಗಿ ರೂಪಾಂತರ ಹೊಂದುತ್ತದೆ. ವ್ಯವಸ್ಥೆ ಎಂದಕೂಡಲೇ ಅದಕ್ಕೆ ಜಡತೆ ಅಂಟಿಕೊಂಡುಬಿಡುತ್ತದೆ. ಈ ಜಡತೆ ಎನ್ನವುದು ಅನೇಕ ಹಿತಾಸಕ್ತಿಗಳ ಶಕ್ತಿಕೇಂದ್ರವಾಗಿ ಆ ವ್ಯವಸ್ಥೆಯ ಚಲನೆಯನ್ನೇ ನಿಯಂತ್ರಿಸಿಬಿಡುತ್ತದೆ. ಇಂಥ ಚಲನೆಯಿಲ್ಲದ ವ್ಯವಸ್ಥೆ ಜನರ ಬದುಕಿಗೆ ಮಾರಕವಾಗಿರುತ್ತದೆ. ಅದು ಹೊಸ ಚಿಂತನೆಯನ್ನು, ಕ್ರಿಯಾಶೀಲತೆಯನ್ನು ಬೆಂಬಲಿಸುವುದಿಲ್ಲ. ಹೊಸ ಜೀವಚೈತನ್ಯ ಇಂಥ ವ್ಯವಸ್ಥೆಯ ಅಡಿಯಲ್ಲಿ ಪಲ್ಲವಿಸುವುದಿಲ್ಲ; ಮುರುಟಿಹೋಗುತ್ತವೆ. ಅಂಥ ಹೊತ್ತಲ್ಲಿ ಆ ವ್ಯವಸ್ಥೆಯ ವಿರುದ್ಧ ಕೋಪ ಸಿಡಿದೇಳುತ್ತದೆ. ಈ ಕೋಪವೇ ಹೊಸ ಪರ‍್ಯಾಯಕ್ಕೆ ದಾರಿಮಾಡಿಕೊಡುತ್ತದೆ. ಪರ್ಯಾಯವಾಗಿ ಹುಟ್ಟಿದ್ದು ಕೂಡಾ ಕಾಲಾಂತರದಲ್ಲಿ ಜಡವ್ಯವಸ್ಥೆಯಾಗುವುದು ಹೀಗೆ. ಕಾಲಚಕ್ರದಲ್ಲಿ ಪರ್ಯಾಯ, ವ್ಯವಸ್ಥೆ ಎನ್ನುವವು ಅದಲು ಬದಲಾಗುತ್ತಲೇ ಇರುತ್ತವೆ. 

ಬಂಡಾಯ ಸಾಹಿತ್ಯ ಸಂಘಟನೆಯ ಹುಟ್ಟನ್ನೇ ನೋಡಿ. ಇದು ಕನ್ನಡ ಸಾಹಿತ್ಯ ಸಮ್ಮೇಳನ ಜಡಗೊಂಡಾಗ, ಅರ್ಥಕಳೆದುಕೊಂಡಾಗ ಹುಟ್ಟಿಕೊಂಡ ಸಿಟ್ಟಿಲ ಫಲ. ಸಾಹಿತ್ಯ ಎನ್ನುವುದು ಕೇವಲ ಪಠ್ಯಕ್ಕೆ ಸೀಮಿತವಾದ ಚರ್ಚೆಯಲ್ಲ; ಅದು ಸಮಾಜಕ್ಕೆ, ರಾಜಕೀಯಕ್ಕೆ, ಸಂಸ್ಕೃತಿಗೆ ವಿಸ್ತರಿಸಿಕೊಳ್ಳುವ ಚಿಂತನೆ. ಮನುಷ್ಯ ಕೇಂದ್ರದ ಸುತ್ತ ತಿರುಗುವ ಎಲ್ಲ ಸಂಗತಿಗಳನ್ನೂ ಸಾಹಿತ್ಯ ಒಳಗೊಳ್ಳುತ್ತದೆ. ಹಾಗೆಯೇ ಸಾಹಿತ್ಯ ಚಿಂತನೆ ಈ ಎಲ್ಲ ಸಂಗತಿಗಳಿಗೂ ವಿಸ್ತರಿಸಿಕೊಳ್ಳಬೇಕು; ಈ ಎಲ್ಲ ಸಂಗತಿಗಳೂ ಸಾಹಿತ್ಯ ಸಮ್ಮೇಳನಗಳಲ್ಲಿ ಅರ್ಥಪೂರ್ಣ ಚರ್ಚೆಯನ್ನು ಪಡೆದುಕೊಳ್ಳಬೇಕು. ಸಾಹಿತ್ಯ ಸಮ್ಮೇಳನ ಎನ್ನುವುದು ಕೇವಲ ವಾರ್ಷಿಕ ಆಚರಣೆಯಲ್ಲ; ಕನ್ನಡ ಸಾಹಿತ್ಯ ಪರಿಷತ್ತಿನ ಬಾಜಾಭಜಂತ್ರಿಯೂ ಅಲ್ಲ; ರಾಜಕಾರಣಿಗಳ ಮೆರವಣಿಗೆಯೂ ಅಲ್ಲ; ಅಥವಾ ಜಾನಪದ ಕಲೆಗಳ ಕುಣಿತ ಮಾತ್ರವೂ ಅಲ್ಲ. ಇದನ್ನೇ ಬಹಿರಂಗವಾಗಿ ಸಾರಿ, ಬಂಡಾಯ ಸಾಹಿತ್ಯ ಸಮ್ಮೇಳನ, ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪರ್ಯಾಯ ಸಮ್ಮೇಳನವಾಗಿ ಹುಟ್ಟಿಕೊಂಡಿತು. ಮುಂದೆ ಅದನ್ನೊಂದು ಚಳವಳಿಯಾಗಿ ರೂಪಿಸಲು ಬಂಡಾಯ ಸಾಹಿತ್ಯ ಸಂಘಟನೆಯೂ ರೂಪಿತವಾಯಿತು. ’ಜನರ ನೋವಿಗೆ ಮಿಡಿವ ಪ್ರಾಣಮಿತ್ರ’ ಎನ್ನುವ ಬಂಡಾಯದ ಘೋಷಣಾ ವಾಕ್ಯದಲ್ಲಿ ಅದರ ಆಶಯ ವ್ಯಕ್ತವಾಗುವಂತೆಯೇ, ಕನ್ನಡ ಸಾಹಿತ್ಯ ಪರಿಷತ್ತಿನ ವಿರುದ್ಧದ ಕೋಪವೂ ತಿಳಿಯುತ್ತದೆ. ಅಷ್ಟೇ ಅಲ್ಲ, ಆ ದಿನಗಳಲ್ಲಿ ಮೆರೆಯುತ್ತಿದ್ದ ಸಾಹಿತ್ಯ ಜನರ ನೋವಿಗೆ ಮಿಡಿಯುತ್ತಿಲ್ಲ ಎಂಬ ಸಿಟ್ಟೂ ಇದೆ. ಮುಂದೆ ಇದೇ ಬಂಡಾಯ ಜಡಗೊಂಡದ್ದನ್ನೂ ನಾವು ಕಾಣುತ್ತೇವೆ. ಆದರೆ ಬಂಡಾಯ ಎನ್ನುವುದು ಒಂದು ಮನೋಧರ್ಮವಾಗಿ, ಬದುಕನ್ನು ಬೇರೊಂದು ನಿಟ್ಟಿನಲ್ಲಿ ನೋಡುವುದಕ್ಕೆ ಒತ್ತಾಯಿಸಿದ್ದು ಸಾಹಿತ್ಯ ಕ್ಷೇತ್ರದಲ್ಲಿ ಹೊಸ ಸಂಚಲನಕ್ಕೆ ಕಾರಣವಾಯಿತು ಎಂಬುದನ್ನು ಮರೆಯಲಾಗದು.

ಮಡಿಕೇರಿಯಲ್ಲಿ ೮೦ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸದ್ಯದಲ್ಲಿಯೇ ನಡೆಯಲಿದೆ. ಅದಕ್ಕೂ ಮುನ್ನ ಮೂಡಬಿದಿರೆಯಲ್ಲಿ ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್ ಜಗಮಗಿಸಲಿದೆ. ಈ ಹೆಸರುಗಳನ್ನೇ ನೋಡಿ: ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಎಂದರೇನು ಅರ್ಥ? ಕನ್ನಡ ಇರುವುದು ಕರ್ನಾಟಕದಲ್ಲಿ ಮಾತ್ರ. ಕರ್ನಾಟಕದ ಚೌಕಟ್ಟಿನಲ್ಲಿ ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳನವೇ ಮುಖ್ಯವಾದದ್ದು. ಅಖಿಲ ಭಾರತ, ವಿಶ್ವ ಇವೆಲ್ಲ ಅರ್ಥವಿಲ್ಲದ ಮಾತುಗಳು. ಜಾಗತಿಕ ಮಟ್ಟದಲ್ಲಿ ಅಂದರೆ ಅನೇಕ ರಾಷ್ಟ್ರಗಳಲ್ಲಿ ಆಡುವ, ಓದುವ, ಬರೆಯುವ, ವ್ಯವಹರಿಸುವ ಭಾಷೆಗಳಾದರೆ ಅಂಥ ಭಾಷೆಗಳಿಗೆ ವಿಶ್ವ ಸಮ್ಮೇಳನ, ಜಾಗತಿಕ ಸಮ್ಮೇಳನ ಎಂದರೆ ಅರ್ಥ ಇರಬಹುದು. ಆದರೆ ಕನ್ನಡಕ್ಕೆ? ಅದು ನಮ್ಮಲ್ಲಿಯೇ ಅಂದರೆ ಕರ್ನಾಟಕದಲ್ಲಿಯೇ ಬೆಳಗಬೇಕು, ಮೆರೆಯಬೇಕು, ಎಲ್ಲ ಗೌರವ ಗಳಿಸಿಕೊಳ್ಳಬೇಕು. ಇದನ್ನು ಸಾಧ್ಯವಾಗಿಸದ ನಾವು ಅಖಿಲ ಭಾರತ ಎಂದು ಕರೆದು, ಇಲ್ಲವೇ ವಿಶ್ವ ಸಮ್ಮೇಳನ ಎಂದು ಕರೆದು ಹುಸಿ ಪ್ರತಿಷ್ಠೆಯನ್ನು ತಂದುಕೊಳ್ಳಲು ನೋಡುತ್ತೇವೆ; ಗಾಳಿಬುರುಡೆಯಂತೆ ಉಬ್ಬಲು ನೋಡುತ್ತೇವೆ. ವಿಶ್ವಕನ್ನಡ ಎಂದ ಕೂಡಲೇ ಸರ್ಕಾರ ಹೆಚ್ಚು ಹಣವನ್ನು ಕೊಡಬಹುದು; ಹೆಚ್ಚಿನ ಪ್ರಚಾರ ಸಿಕ್ಕಬಹುದು. ಆದರೆ ನಿಜಕ್ಕೂ ಅದರಿಂದ ಕನ್ನಡಕ್ಕೆ ಏನು ದೊರೆತಂತಾಗುತ್ತದೆ?

ನಮ್ಮ ಕಲೆ, ಸಾಹಿತ್ಯ, ಸಂಸ್ಕೃತಿಯ ಬಿಕ್ಕಟ್ಟುಗಳು, ರಾಜಕೀಯ ಪಲ್ಲಟಗಳು, ಭಾಷೆಗಳು ಎದುರಿಸುತ್ತಿರುವ ಗಂಡಾಂತರಗಳು, ಗಣಿಗಾರಿಕೆಯಿಂದ ಹದಗೆಡುತ್ತಿರುವ ನಮ್ಮ ಕೃಷಿಯ ಚಟುವಟಿಕೆಗಳು, ಮಾಧ್ಯಮಗಳ ಅಬ್ಬರದಲ್ಲಿ ನಲುಗುತ್ತಿರುವ ಅಭಿವ್ಯಕ್ತಿಯ ವಿವಿಧ ರೂಪಗಳು, ಕೋಮುಭಾವನೆಗಳ ಅಡಿಯಲ್ಲಿ ಸಿಕ್ಕವರ ನರಳಾಟಗಳು -ಇವೆಲ್ಲ ಇವತ್ತಿನ ತಲ್ಲಣಗಳು. ಜೊತೆಗೆ ನಮ್ಮ ಮೌಢ್ಯಗಳನ್ನು ತಡೆಯಲಾಗದ ಅಸಹಾಯಕತೆ, ಭ್ರಷ್ಟಾಚಾರದ ವಿಶ್ವರೂಪ ದರ್ಶನ, ದಿಕ್ಕೆಟ್ಟಿರುವ ಶಿಕ್ಷಣ ವ್ಯವಸ್ಥೆ, ಕುಡಿಯಲು ಸ್ವಚ್ಛ ನೀರನ್ನು, ವಾಹನಗಳು ಓಡಲು ಯೋಗ್ಯವಾದ ದಾರಿಗಳನ್ನು ಕೊಡದೆ ಜನರ ಕಣ್ಣಿಗೆ ಮಣ್ಣೆರಚುತ್ತಿರುವ ಸರ್ಕಾರಗಳು-ಇವೂ ಚರ್ಚೆಗೆ ಯೋಗ್ಯ ವಸ್ತುಗಳೇ. ಹೊಸ ತಲೆಮಾರಿನ ಬರಹಗಾರರು ಎದುರಿಸುತ್ತಿರುವ ಬಿಕ್ಕಟ್ಟುಗಳು, ನಮ್ಮ ಅಕಾಡೆಮಿಗಳು, ಪರಿಷತ್ತುಗಳು, ವಿಶ್ವವಿದ್ಯಾನಿಲಯಗಳ ಜಡಗೊಂಡ ಸ್ಥಿತಿ ಇವೆಲ್ಲವೂ ಸಾರ್ವಜನಿಕ ಸಂವಾದಕ್ಕೆ ಅಗತ್ಯ ನೆಲೆಗಟ್ಟನ್ನು ಒದಗಿಸಬಲ್ಲವು. ಅಖಿಲ ಭಾರತ ಸಮ್ಮೇಳನಗಳಾಗಲೇ, ವಿಶ್ವ ಸಮ್ಮೇಳನಗಳಾಗಲೀ ಇಂಥ ದಿಕ್ಕಿನಲ್ಲಿ ಬೆಳಕನ್ನು ಚೆಲ್ಲುವ ಕಾರ್ಯಕ್ರಮಗಳನ್ನು ಈವರೆಗೆ ಎಷ್ಟು ರೂಪಿಸಿವೆ, ಅವುಗಳಲ್ಲಿ ಎಷ್ಟು ಜನ ಪಾಲ್ಗೊಂಡಿದ್ದಾರೆ, ಇಂಥ ಸಾರ್ವಜನಿಕ ಸಂವಾದಗಳಿಗೆ ಎಷ್ಟು ವೇದಿಕೆಗಳು ನೆಲೆ ನೀಡಿವೆ?

ಸಮ್ಮೇಳನವೆಂದರೆ ಊಟ, ವಸತಿ, ಓಡಾಟ, ಅದ್ಧೂರಿಯ ಮೆರವಣಿಗೆ, ಅನೇಕರಿಗೆ ಸನ್ಮಾನ, ಜಾನಪದ ಕುಣಿತಗಳು, ಪುಸ್ತಕ ಪ್ರದರ್ಶನ ಇತ್ಯಾದಿಗೆ ಮಾತ್ರ ಸೀಮಿತವಾಗುವಂಥ ಪರಿಸ್ಥಿತಿಯೇ ಇವತ್ತಿಗೂ ಮುಂದುವರಿದಿದೆ. ಲಕ್ಷಾಂತರ ಜನರ ಜಮಾವಣೆ, ಅವ್ಯವಸ್ಥೆ ಇತ್ಯಾದಿಗಳಿಗೆ ಸಿಕ್ಕುವ ಭಾರೀ ಪ್ರಚಾರ, ಕೊಟ್ಯಂತರ ರೂಪಾಯಿ ಖರ್ಚು. ಇದಕ್ಕೆ ಪರ‍್ಯಾಯವೆಂಬಂತೆ ಕಾಣುವ ಆಳ್ವಾಸ್ ನುಡಿಸಿರಿಯಾಗಲಿ, ಧರ್ಮಸ್ಥಳದ ಸಾಹಿತ್ಯ ಸಮ್ಮೇಳನವಾಗಲೀ ಸ್ವರೂಪದಲ್ಲಿ ತುಂಬ ಭಿನ್ನವಾಗಿ ಕಾಣಿಸುವುದಿಲ್ಲ. ಊಟ, ವಸತಿ, ಓಡಾಟ, ಸಮ್ಮೇಳನದ ವ್ಯವಸ್ಥೆ, ಸನ್ಮಾನಗಳು, ಪಲ್ಲಕ್ಕಿ ಮೆರವಣಿಗೆ ಇತ್ಯಾದಿ ಎಲ್ಲವೂ ಅಚ್ಚುಕಟ್ಟು; ಬಂದ ಜನರಿಗೂ ತೃಪ್ತಿ. ಸರ್ಕಾರದ ಬೊಕ್ಕಸವನ್ನೂ ಇವರು ನೆಚ್ಚಿಕೊಂಡಿಲ್ಲ. ಆದರೆ ಇಲ್ಲಿನ ಸಂವಾದಗಳು, ಗೋಷ್ಠಿಗಳು, ಸಂಕಿರಣಗಳು ಎಷ್ಟು ಅರ್ಥಪೂರ್ಣವಾಗಿರುತ್ತವೆ? ಜ್ವಲಂತ ಸಮಸ್ಯೆಗಳಿಗೆ ಈ ಮೇಳಗಳು ಎಷ್ಟು ಸ್ಪಂದಿಸಿವೆ? ಈ ಮೇಳಗಳು ಯಾರನ್ನು ತೃಪ್ತಿಪಡಿಸಲು, ಯಾರ ಪ್ರತಿಷ್ಠೆಯನ್ನು ಹೆಚ್ಚಿಸಲು ನಡೆಯುತ್ತಿವೆ? ಯಾವ ಶಕ್ತಿಗಳು, ಯಾರ ಹಿತಾಸಕ್ತಿಗಳು ಇಂಥ ಮೇಳಗಳ ಹಿನ್ನೆಲೆಯಲ್ಲಿ ಕ್ರಿಯಾಶೀಲವಾಗಿರುತ್ತವೆ? ಇಂಥ ಪ್ರಶ್ನೆಗಳನ್ನು ನಾವು ಎದುರಿಸುವಂತಾದರೆ ಬೇರೆಯ ಸತ್ಯಗಳೇ ಹೊರಬರುತ್ತವೆ.

ಕನ್ನಡ ನಾಡಿನ ಮುಗ್ಧರ, ಬಡಜನತೆಯ ಧಾರ್ಮಿಕ ನಂಬಿಕೆಗಳನ್ನೇ ಬಂಡವಾಳ ಮಾಡಿಕೊಳ್ಳುವ ಮೌಢ್ಯಾಚರಣೆಗಳು, ಮಡೆಸ್ನಾನದಂಥ ಅಸಹ್ಯ ಆಚರಣೆಗಳು, ಅತ್ಯಂತ ಹೇಯ ರೀತಿಯಲ್ಲಿ ಕೆಳ ಜಾತಿಗಳನ್ನು ಶೋಷಿಸುವ ಅಜಲು ಪದ್ಧತಿ, ಮನುಷ್ಯರ ಸಮಾನತೆ ಮತ್ತು ಘನತೆಯನ್ನು ಅಣಕಿಸುವ ಪಂಕ್ತಿಭೇದದ ಊಟಗಳು, ಪ್ರವೇಶವನ್ನು ಜಾತಿ ಆಧಾರದ ಮೇಲೆ ನಿರಾಕರಿಸುವ ದೇವಾಲಯಗಳು, ಮಠಗಳು ಹೆಚ್ಚಾಗಿ ಇರುವುದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲೇ. ಕೋಮುವಾದ ಎಂಬುದು ಭೂತದಂತೆ ಬೆಳೆದಿರುವುದು ಈ ಜಿಲ್ಲೆಗಳಲ್ಲೇ. ಪದ್ಮಲತಾ, ವೇದವಲ್ಲಿ, ಸೌಜನ್ಯ ಹೀಗೆ ಯುವತಿಯರು ಸಾಲು ಸಾಲಾಗಿ ನಿಗೂಢವಾಗಿ ಅತ್ಯಾಚಾರ ಮತ್ತು ಕೊಲೆಗಳಿಗೆ ಬಲಿಯಾಗಿರುವುದು, ಈ ಕೃತ್ಯಗಳ ಹಿಂದಿನ ಶಕ್ತಿಗಳೇ ಎಲ್ಲವನ್ನೂ ನಿಯಂತ್ರಿಸುತ್ತಿರುವುದು ಈ ಜಿಲ್ಲೆಗಳಲ್ಲೇ. ಕಾಲೇಜು ತರುಣ ತರುಣಿಯರು ಪರಸ್ಪರ ಸ್ನೇಹದಿಂದ ಮಾತನಾಡಲಾಗದ ಬಿಕ್ಕಟ್ಟು ಉಂಟಾಗಿರುವುದೂ ಈ ಜಿಲ್ಲೆಯಲ್ಲಿಯೇ. ಆಳ್ವಾಸ್ ನುಡಿಸಿರಿ, ಧರ್ಮಸ್ಥಳದ ಸಾಹಿತ್ಯ ಸಮ್ಮೇಳನಗಳು ನಡೆಯುವುದೂ ಈ ಜಿಲ್ಲೆಗಳಲ್ಲೇ. ತಮ್ಮ ನೆಲದಲ್ಲಿಯೇ ನಡೆಯುವ ಈ ಘೋರ ತಲ್ಲಣಗಳ ಬಗ್ಗೆ ಈ ಸಮ್ಮೇಳನಗಳಲ್ಲಿ ಈವರೆಗೆ ಒಂದು ಸಂವಾದ ಅಥವಾ ಒಂದು ನಿರ್ಣಯ ಅಂಗೀಕಾರ ಯಾಕೆ ಸಾಧ್ಯವಾಗಿಲ್ಲ? ಸಾಹಿತ್ಯ ಎನ್ನುವುದು ’ಜನರ ನೋವಿಗೆ ಮಿಡಿವ ಪ್ರಾಣಮಿತ್ರ’ನಾಗುವುದು ಇಂಥ ಉರಿಯುವ ಸಮಸ್ಯೆಗಳಿಗೆ ಮುಖಾಮುಖಿಯಾದಾಗಲೇ. 
ಅಖಿಲ ಭಾರತ ಅಥವಾ ವಿಶ್ವ ಸಮ್ಮೇಳನ ಎಂದು ಹೇಳಿಕೊಳ್ಳುವ ’ಸಾಹಿತ್ಯ ಸಮ್ಮೇಳನ’ದ ಉದ್ಘಾಟನೆಯ ಗೌರವವನ್ನು ಒಬ್ಬ ಸಾಹಿತಿಗೆ ನೀಡಲಾಗುತ್ತಿಲ್ಲ ಎಂದರೆ ಈ ಮೇಳಗಳ ಹಿಂದಿರುವ ಉದ್ದೇಶವೇನು? ಸಾಹಿತ್ಯ ಮತ್ತು ಕಲೆಗಳನ್ನು ಒಂದರೊಳಗೊಂದು ಬೆರಸಿ, ಯಾವುದಕ್ಕೂ ಫೋಕಸ್ ಇಲ್ಲದಂತೆ ಮಾಡಿ, ವೈಭವವನ್ನೇ ಪ್ರಧಾನಮಾಡಿರುವ ಆಳ್ವಾಸ್ ವಿಶ್ವ ನುಡಿಸಿರಿಯ ಉದ್ದೇಶವೇನು? ಇದಕ್ಕಾಗಿ ವೆಚ್ಚವಾಗುವ ಕೋಟಿಗಟ್ಟಲೆ ಹಣ ಎಲ್ಲಿಂದ ಬರುತ್ತದೆ? ಇವರನ್ನು ಪೋಷಿಸುವವರು ಯಾರು? ಇವರ ಮಾರ್ಗದರ್ಶಕರು ಯಾರು? ಸ್ವಾಗತ ಸಮಿತಿಯ ಉದ್ದೋಉದ್ದ ಪಟ್ಟಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಇಂಥ ಪ್ರಶ್ನೆಗಳಿಗೆ ಉತ್ತರ ಸಿಗುತ್ತದೆ. 

ಇಂಥ ಹಿನ್ನೆಲೆಯಲ್ಲಿಯೇ ಅಭಿಮತ, ಕರ್ನಾಟಕ ಜನಸಾಹಿತ್ಯ  ಸಂಘಟನೆ, ಸಹಮತ, ನಾವು ನಮ್ಮಲ್ಲಿ, ಚಿಂತನ, ಲಡಾಯಿ, ಆದಿಮ ಇತ್ಯಾದಿ ಪರ‍್ಯಾಯಗಳು ಹುಟ್ಟಿಕೊಳ್ಳುತ್ತವೆ. ಇವು ನಡೆಸುವ ಮೇಳಗಳಲ್ಲಿ ಲಕ್ಷಾಂತರ ಜನ ಸೇರುವುದಿಲ್ಲ; ಹಣದ ಹೊಳೆ ಹರಿಯುವುದಿಲ್ಲ. ಊಟ ವಸತಿಯ ರಾಜವೈಭವವೂ ಇರುವುದಿಲ್ಲ. ಆದರೂ ಅಂಥ ಪರ್ಯಾಯಗಳು ಸಮಾಜದ ಹಿತವನ್ನು, ಆರೋಗ್ಯವನ್ನು ಕಾಪಾಡುತ್ತವೆ.

No comments:

Post a Comment